Tag: ಕೋವಿಡ್-19 ಆಸ್ಪತ್ರೆ

  • ರಾಯಚೂರಿನ ಕೋವಿಡ್-19 ಆಸ್ಪತ್ರೆಯಲ್ಲಿ ನಿಲ್ಲದ ಗಲಾಟೆ- 378ಕ್ಕೇರಿದ ಸೋಂಕಿತರ ಸಂಖ್ಯೆ

    ರಾಯಚೂರಿನ ಕೋವಿಡ್-19 ಆಸ್ಪತ್ರೆಯಲ್ಲಿ ನಿಲ್ಲದ ಗಲಾಟೆ- 378ಕ್ಕೇರಿದ ಸೋಂಕಿತರ ಸಂಖ್ಯೆ

    ರಾಯಚೂರು: ಜಿಲ್ಲೆಯಲ್ಲಿ ಇಂದು 3 ಕೊರೊನಾ ಪಾಸಿಟಿವ್ ಪ್ರಕರಣಗಳು ಧೃಡವಾಗುವ ಮೂಲಕ ಜಿಲ್ಲೆಯ ಕೊರೊನಾ ಸೋಂಕಿತರ ಸಂಖ್ಯೆ 378ಕ್ಕೆ ಏರಿದೆ.

    ನಗರದ ಇಬ್ಬರು ವೈದ್ಯಕೀಯ ಸಿಬ್ಬಂದಿ ಹಾಗೂ ಓರ್ವ ಪೊಲೀಸ್ ಸಿಬ್ಬಂದಿಗೆ ಸೋಂಕು ತಗುಲಿದೆ. ಈ ಮೂಲಕ ಜಿಲ್ಲೆಯ ಒಟ್ಟು 8 ಜನ ವೈದ್ಯಕೀಯ ಸಿಬ್ಬಂದಿ, ನಾಲ್ಕು ಜನ ಪೊಲೀಸರಿಗೆ ಸೋಂಕು ತಗುಲಿದಂತಾಗಿದೆ. ಜಿಲ್ಲೆಯಲ್ಲಿ ಈ ವರೆಗೆ 82 ಜನ ಗುಣಮುಖರಾಗಿದ್ದು, ಡಿಸ್ಚಾರ್ಜ್ ಆಗಿದ್ದಾರೆ. ಜಿಲ್ಲೆಯಲ್ಲಿ ಸದ್ಯ 294 ಪ್ರಕರಣಗಳು ಸಕ್ರಿಯವಾಗಿವೆ.

    ರಾಯಚೂರಿನ ಕೋವಿಡ್ ಆಸ್ಪತ್ರೆ ಓಪೆಕ್‍ನಲ್ಲಿ ಸೋಂಕಿತರು ಮತ್ತು ವೈದ್ಯಕೀಯ ಸಿಬ್ಬಂದಿ ಮಧ್ಯೆ ವಾಗ್ವಾದ ಪದೇ ಪದೇ ನಡೆಯುತ್ತಲೇ ಇದೆ. ಸೂಕ್ತ ಚಿಕಿತ್ಸೆ ಸಿಗದ್ದಕ್ಕೆ ಕೊರೊನಾ ಸೋಂಕಿತರು ವಾಗ್ವಾದಕ್ಕೆ ಇಳಿದಿದ್ದಾರೆ. ಸೂಕ್ತ ವ್ಯವಸ್ಥೆ ಮಾಡುವಂತೆ ಗಲಾಟೆ ಮಾಡಿದ್ದಾರೆ. ಅಲ್ಲದೆ ಆಸ್ಪತ್ರೆಯಿಂದ ಬಿಡುಗಡೆ ಮಾಡುವಂತೆ ಒತ್ತಾಯಿಸಿದ್ದಾರೆ. ಆಸ್ಪತ್ರೆ ಗೇಟ್ ಬಂದ್ ಮಾಡಿ ಹೊರಗಡೆ ಪೊಲೀಸರು ಕಾವಲಿಗೆ ನಿಂತರೂ ಸೋಂಕಿತರು ಹೊರಬರುವ ಪ್ರಯತ್ನ ಮಾಡಿದ್ದಾರೆ.

    ಪೊಲೀಸರು ಸೂಚನೆ ನೀಡಿದರೂ ಸೋಂಕಿತರು ಗುಂಪು ಗುಂಪಾಗಿ ಸೇರಿ ಗಲಾಟೆ ಮಾಡಿ ಅಧಿಕಾರಿಗಳು, ವೈದ್ಯರು, ವೈದ್ಯಕೀಯ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಮೂಲಕ ಆಸ್ಪತ್ರೆಯಲ್ಲಿ ರಾದ್ಧಾಂತ ಮಾಡಿದ್ದಾರೆ. ಇವರನ್ನು ನಿಭಾಯಿಸುವುದು ಪೊಲೀಸರಿಗೆ ಸವಾಲಿನ ಕೆಲಸವಾಗಿದೆ.

  • ರಾಯಚೂರಿನ ಕೋವಿಡ್-19 ಆಸ್ಪತ್ರೆಯಲ್ಲಿ ಅವ್ಯವಸ್ಥೆ: ಸೋಂಕಿತರಿಂದ ಪ್ರತಿಭಟನೆ

    ರಾಯಚೂರಿನ ಕೋವಿಡ್-19 ಆಸ್ಪತ್ರೆಯಲ್ಲಿ ಅವ್ಯವಸ್ಥೆ: ಸೋಂಕಿತರಿಂದ ಪ್ರತಿಭಟನೆ

    – ಗರ್ಭಿಣಿಗೆ ತೀವ್ರ ರಕ್ತಸ್ರಾವವಾದರೂ ಬಾರದ ವೈದ್ಯರು

    ರಾಯಚೂರು: ಜಿಲ್ಲೆಯ ಕೋವಿಡ್-19 ಆಸ್ಪತ್ರೆ ಓಪೆಕ್ ಕೊರೊನಾ ಸೋಂಕಿತರ ಪಾಲಿಗೆ ನರಕವಾಗಿದೆ ಎಂದು ಆರೋಪಿಸಿ ಆಸ್ಪತ್ರೆಯಲ್ಲಿನ ಸೋಂಕಿತರು ಊಟ ಬಿಟ್ಟು ಪ್ರತಿಭಟನೆ ಮಾಡಿದ್ದಾರೆ.

    ಕೊವಿಡ್ ಐಸೋಲೆಷನ್ ಆಸ್ಪತ್ರೆಯಲ್ಲಿ ಸರಿಯಾದ ಚಿಕಿತ್ಸೆ ನೀಡುತ್ತಿಲ್ಲ. ಆಸ್ಪತ್ರೆಯಲ್ಲಿನ ಗರ್ಭಿಣಿಯೊಬ್ಬರಿಗೆ ರಕ್ತಸ್ರಾವವಾಗುತ್ತಿದ್ದರೂ ವೈದ್ಯರು ಬರುತ್ತಿಲ್ಲ ಎಂದು ವೈದ್ಯರ ವಿರುದ್ಧ ಕಿಡಿ ಕಾರಿದ್ದಾರೆ. ಓಪೆಕ್ ಆಸ್ಪತ್ರೆಯಿಂದ ಮೊಬೈಲ್ ನಲ್ಲಿ ವಿಡಿಯೋ ಮಾಡಿ ಹರಿಬಿಟ್ಟಿದ್ದು, ಈ ಮೂಲಕ ಅಲ್ಲಿನ ಪರಸ್ಥಿತಿಯನ್ನು ತಿಳಿಸಿದ್ದಾರೆ.

    ಭಾನುವಾರದಿಂದ ಗರ್ಭಿಣಿ ನೋವು ಅನುಭವಿಸುತ್ತಿದ್ದರೂ ಯಾವ ವೈದ್ಯರು ವಾರ್ಡ್‍ಗೆ ಬಂದಿಲ್ಲ. ಗರ್ಭಿಣಿಯ ಪರಿಸ್ಥಿತಿ ಇಂದು ಗಂಭೀರವಾಗಿದ್ದರಿಂದ ಸೋಂಕಿತರೆಲ್ಲ ಸೇರಿ ಮಧ್ಯಾಹ್ನದ ಊಟ ಬಿಟ್ಟು ಪ್ರತಿಭಟನೆ ಮಾಡಿದ್ದಾರೆ. ಕೋವಿಡ್ ಆಸ್ಪತ್ರೆ ಅವ್ಯವಸ್ಥೆಯಿಂದ ಕೂಡಿದ್ದು, ವೈದ್ಯರು ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದ್ದಾರೆ. ಕೆಲವರು ಬಂದು 20 ದಿನವಾದರೂ ಮರು ಪರೀಕ್ಷೆ ಮಾಡಿಲ್ಲ, ಇನ್ನೂ ಕೆಲವರ ವರದಿ ಬಂದಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ. ಪ್ರತಿಭಟನೆಯಿಂದ ಎಚ್ಚೆತ್ತ ವೈದ್ಯರು ಗರ್ಭಿಣಿಯನ್ನು ಓಪೆಕ್ ನಿಂದ ರಿಮ್ಸ್‍ಗೆ ರವಾನಿಸಿದ್ದು, ಚಿಕಿತ್ಸೆ ನೀಡುತ್ತಿದ್ದಾರೆ.

  • ಕೊರೊನಾ ಸೋಂಕು ಶಂಕಿತನ ಕಣ್ಣೀರು- ಕೋವಿಡ್ ಆಸ್ಪತ್ರೆಯ ಕರಾಳ ಮುಖ

    ಕೊರೊನಾ ಸೋಂಕು ಶಂಕಿತನ ಕಣ್ಣೀರು- ಕೋವಿಡ್ ಆಸ್ಪತ್ರೆಯ ಕರಾಳ ಮುಖ

    -ಖುದ್ದು ರೋಗಿಯಿಂದ ವಿಡಿಯೋ

    ಬೆಂಗಳೂರು: ರಾಜ್ಯದ ಪ್ರತಿಷ್ಠಿಯ ಕೋವಿಡ್-19 ಆಸ್ಪತ್ರೆಯ ಅವ್ಯವಸ್ಥೆಯ ವಿಡಿಯೋ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಆಸ್ಪತ್ರೆಯಲ್ಲಿ ದಾಖಲಾಗಿರುವ ಕೊರೊನಾ ಸೋಂಕು ಶಂಕಿತ ರೋಗಿ ವಿಡಿಯೋ ಮಾಡಿ ಅಲ್ಲಿಯ ಕರಾಳ ಮುಖವನ್ನು ಅನಾವರಣ ಮಾಡಿದ್ದಾರೆ.

    ಬೆಂಗಳೂರಿನ ರಾಜೀವ್ ಗಾಂಧಿ ಆಸ್ಪತ್ರೆಯನ್ನು ಕೊರೊನಾ ರೋಗಿಗಳ ಚಿಕಿತ್ಸೆಗಾಗಿ ಮೀಸಲಿರಿಸಲಾಗಿದೆ. ಆದ್ರೆ ಆಸ್ಪತ್ರೆಯಲ್ಲಿ ದಾಖಲಾಗಿರುವ ರೋಗಿ ದಿಲೀಪ್ ಕುಮಾರ್ ಎಂಬವರು ಇಲ್ಲಿ ಕೊರೊನಾದಿಂದ ಸಾಯಲ್ಲ. ಬದಲಾಗಿ ಹಸಿವಿನಿಂದ ಸಾಯುವಂತಾಗಿದೆ ಎಂದು ಕಣ್ಣೀರು ಹಾಕುತ್ತಾ ವಿಡಿಯೋ ಮಾಡಿದ್ದಾರೆ. ದಿಲೀಪ್ ಎರಡು ದಿನಗಳ ಹಿಂದೆ ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದರು. ವಿಡಿಯೋವನ್ನು ಪ್ರಧಾನಿ ಮೋದಿ ಮತ್ತು ಸಿಎಂ ಯಡಿಯೂರಪ್ಪನವರಿಗೂ ಟ್ಯಾಗ್ ಮಾಡಿದ್ದರು.

    ದಿಲೀಪ್ ಹೇಳಿದ್ದೇನು?
    ನನ್ನ ಹೆಸರು ದಿಲೀಪ್ ಕುಮಾರ್. ನಿನ್ನೆ ನಾನು ಉಸಿರಾಟದ ತೊಂದರೆಯಿಂದ ರಾಜೀವ್ ಗಾಂಧಿ ಆಸ್ಪತ್ರೆಗೆ ಚೆಕಪ್ ಮಾಡಿಸಿಕೊಳ್ಳಲು ಬಂದೆ. ಎಕ್ಸ್ ರೇ, ರಕ್ತ ಪರೀಕ್ಷೆ, ಇಸಿಜಿ ಮಾಡಿಸಿ, ಬಳಿಕ ಚಿಕಿತ್ಸೆ ನೀಡೋದಾಗಿ ಹೇಳಿದರು. ಎಲ್ಲವನ್ನೂ ಮಾಡಿಸಿದೆ. ನಿನ್ನ ಜೊತೆ ಯಾರಾದ್ರೂ ಇದ್ದಾರಾ ಅಂತಾ ಕೇಳಿದ್ರು. ನಾನು ಬೆಂಗಳೂರಲ್ಲಿ ಒಬ್ಬನೇ ಇದ್ದೀನಿ. ನನಗೆ ಇಲ್ಲಿ ಏನೂ ಗೊತ್ತಿಲ್ಲ ಎಂದೆ. 2ಸಾವಿರ ಡೆಪಾಸಿಟ್ ಮಾಡಲು ಹೇಳಿದರು. ಹಣ ಕಟ್ಟಿದೆ. ಕೊರೊನಾ ಟೆಸ್ಟ್ ಮಾಡಿಸಿ, ವಾರ್ಡ್‍ಗೆ ಶಿಫ್ಟ್ ಮಾಡಿದರು. ಉಸಿರಾಟಕ್ಕೆ ಆಕ್ಸಿಜನ್ ಹಾಕಿದ್ರು. ಬಳಿಕ 12.30 ಕ್ಕೆ ಊಟ ಕೊಟ್ಟರು. ಮತ್ತೆ ರಾತ್ರಿ ಊಟ ಸಿಗಲ್ಲ ಅಂದ್ರು. ರಾತ್ರಿ ಊಟ ಕೊಡ್ತಿದ್ದಾರೆ ಅಂತಾ ಎಲ್ಲರೂ ಹೋದ್ರು. ನಾನು ಹೋದೆ, ಪಾತ್ರೆ ಕೊಡಿ ಅಂದ್ರು ನನ್ನ ಬಳಿ ಇಲ್ಲ ಎಂದೆ. ತಟ್ಟೆ ಇಲ್ಲ ಅಂದ್ರೆ ಊಟ ಕೊಡಲ್ಲ ಅಂದ್ರು. ನಾನು ಆತ್ಮಹತ್ಯೆ ಮಾಡಿಕೊಳ್ಳುವುದೇ ಉತ್ತಮ ಅನಿಸ್ತು. ದಯಮಾಡಿ ಉಸಿರಾಟದ ತೊಂದರೆ ಸರಿಯಾದ ಮೇಲೆ ನನ್ನನ್ನು ಊರಿಗೆ ಕಳುಹಿಸಿ ಎಂದು ದಿಲೀಪ್ ವಿಡಿಯೋದಲ್ಲಿ ಮನವಿ ಮಾಡಿಕೊಂಡಿದ್ದಾರೆ.

    ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಅಧಿಕಾರಿಗಳು ಸದ್ಯ ಸರಿಯಾಗಿ ಸ್ಪಂದಿಸುತ್ತಿದ್ದಾರೆ. ರೋಗಿಯ ಆರೋಗ್ಯದ ಸ್ಥಿತಿಯ ಬಗ್ಗೆ ಗಮನ ನೀಡುವಂತೆ ಡಿಐಪಿಆರ್ ಸೂಚನೆ ನೀಡಿದೆ ಎಂಬ ಮಾಹಿತಿ ಲಭ್ಯವಾಗಿದೆ.

  • ಬಳ್ಳಾರಿಯಲ್ಲಿ ಕೊರೊನಾ ಗೆದ್ದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ 72ರ ವೃದ್ಧೆ

    ಬಳ್ಳಾರಿಯಲ್ಲಿ ಕೊರೊನಾ ಗೆದ್ದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ 72ರ ವೃದ್ಧೆ

    ಬಳ್ಳಾರಿ: ಕೊರೊನಾ ಸೋಂಕಿನಿಂದ ಜಿಲ್ಲೆಯ 72 ವರ್ಷದ ವೃದ್ಧೆಯೊಬ್ಬರು ಇಂದು ಗುಣಮುಖರಾದ ಹಿನ್ನೆಲೆ ಅವರನ್ನು ಕೋವಿಡ್-19 ಜಿಲ್ಲಾಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು. ಇದರಿಂದಾಗಿ ಗುಣಮುಖರಾಗಿ ಬಿಡುಗಡೆಯಾದವರ ಸಂಖ್ಯೆ 9ಕ್ಕೆ ಏರಿದ್ದು, ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆ 5ಕ್ಕೆ ಇಳಿದಿದೆ.

    ಜಿಲ್ಲೆಯಲ್ಲಿ ಇದುವರೆಗೆ 14 ಮಂದಿಗೆ ಸೋಂಕು ತಗುಲಿದ್ದು, ಅವರಲ್ಲಿ ಈ ಮೊದಲು ಗುಣಮುಖರಾದ ರೋಗಿ-89, ರೋಗಿ-91, ರೋಗಿ-141, ರೋಗಿ-90 ಮತ್ತು ರೋಗಿ-151 ಅವರನ್ನು ಬಿಡುಗಡೆ ಮಾಡಲಾಗಿತ್ತು. ಮತ್ತೆ ಇನ್ನಿಬ್ಬರನ್ನು 21 ವರ್ಷ ವರ್ಷದ ರೋಗಿ-333 ಮತ್ತು 24 ವರ್ಷದ ರೋಗಿ-337 ಅವರನ್ನು ಬಿಡುಗಡೆ ಮಾಡಲಾಗಿತ್ತು. ಹಾಗೆಯೇ ಗುಣಮುಖರಾದ ಹೊಸಪೇಟೆಯ ರೋಗಿ-336 ಅವರಿಗೆ ಮೂರು ದಿನಗಳ ಹಿಂದಷ್ಟೇ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿತ್ತು. ಇಂದು ಹೊಸಪೇಟೆಯ 72 ವರ್ಷದ ರೋಗಿ-332 ಅವರು ಗುಣಮುಖರಾದ ಹಿನ್ನೆಲೆ ಅವರನ್ನು ಸಹ ಬಿಡುಗಡೆ ಮಾಡಲಾಯಿತು.

    ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎನ್ ಬಸರೆಡ್ಡಿ ಅವರು ಗುಣಮುಖರಾಗಿ ಮನೆಯತ್ತ ತೆರಳಲು ಸಿದ್ಧರಾಗಿದ್ದ ವೃದ್ಧೆಗೆ ರೋಗಿ-332 ಅವರಿಗೆ ಹೂಗುಚ್ಛ, ಹಣ್ಣು-ಹಂಪಲು ನೀಡಿ ಚಪ್ಪಾಳೆ ತಟ್ಟಿ ಅಭಿನಂದಿಸಿದರು. ನಂತರ ಅವರಿಗೆ ಪಡಿತರ ಕಿಟ್ ಕಳುಹಿಸಿಕೊಡಲಾಯಿತು.

    ಈ ಸಂದರ್ಭದಲ್ಲಿ ಡಾ.ಎನ್ ಬಸರೆಡ್ಡಿ ಅವರು ಮಾತನಾಡಿ, ರೋಗಿ-332 ಬಗ್ಗೆಯೇ ಸಾಕಷ್ಟು ಚಿಂತಿತರಾಗಿದ್ದೇವು. ಅದಕ್ಕೆ ಅವರ ವಯಸ್ಸು ಕೂಡ ಕಾರಣವಾಗಿತ್ತು. ಈ ಮಹಿಳೆಯ ವಯಸ್ಸು 72 ಆಗಿರವುದರಿಂದ ವಿಶೇಷ ಕಾಳಜಿ ವಹಿಸಿ ಚಿಕಿತ್ಸೆ ನೀಡಲಾಯಿತು. ಅವರು ಗುಣಮುಖರಾಗಿ ಬಿಡುಗಡೆಯಾಗುತ್ತಿರುವುದು ಸಂತಸ ತಂದಿದೆ ಎಂದರು.