Tag: ಕೋವಿಡ್ ವಾರಿಯರ್ಸ್

  • ಪ್ರತಿಯೊಬ್ಬ ಕೋವಿಡ್ ವಾರಿಯರ್ಸ್‍ಗೆ ಕೃತಜ್ಞತೆ ಸಲ್ಲಿಸುವುದು ಎಲ್ಲರ ಜವಾಬ್ದಾರಿ: ರಮೇಶ್

    ಪ್ರತಿಯೊಬ್ಬ ಕೋವಿಡ್ ವಾರಿಯರ್ಸ್‍ಗೆ ಕೃತಜ್ಞತೆ ಸಲ್ಲಿಸುವುದು ಎಲ್ಲರ ಜವಾಬ್ದಾರಿ: ರಮೇಶ್

    – ಆರೋಗ್ಯ ಕಾರ್ಯಕರ್ತರನ್ನು ಗುರುತಿಸಿ ಸನ್ಮಾನಿಸಿ ಕೃತಜ್ಞ ವಾಹನಕ್ಕೆ ಚಾಲನೆ
    – ಹುತಾತ್ಮ ಆರೋಗ್ಯ ಕಾರ್ಯಕರ್ತರ ಮಕ್ಕಳಿಗೆ 2 ಲಕ್ಷ ರೂ. ವಿದ್ಯಾರ್ಥಿ ವೇತನ

    ಬೆಂಗಳೂರು: ಪ್ರತಿಯೊಬ್ಬ ಕೋವಿಡ್ ವಾರಿಯರ್ಸ್‍ಗಳಿಗೆ ಕೃತಜ್ಞತೆ ಸಲ್ಲಿಸುವುದು ಪ್ರತಿಯೊಬ್ಬರ ಜವಾಬ್ದಾರಿ, ಅವರ ಋಣ ಎಲ್ಲರ ಮೇಲೂ ಇದೆ ಎಂದು ನಟ ರಮೇಶ್ ಅರವಿಂದ್ ಹೇಳಿದ್ದಾರೆ.

    ಕಾವೇರಿ ಆಸ್ಪತ್ರೆ ವತಿಯಿಂದ ಟೆನ್ನಿಸ್ ಅಸೋಸಿಯೇಷನ್‍ನಲ್ಲಿ ಸೋಮವಾರ ಆಯೋಜಿಸಿದ್ದ ಪತ್ರಿಕಾಗೋಷ್ಠಿ ಹಾಗೂ ಕೃತಜ್ಞಾ ವಾಹನಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಕಳೆದ 2 ವರ್ಷದಿಂದ ವಿಶ್ವಾದ್ಯಂತ ಆರೋಗ್ಯ ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ. ಕೋವಿಡ್ ವಾರಿಯರ್ಸ್‍ಗಳಿಂದ ಇಂದು ನಾವೆಲ್ಲಾ ಜೀವಿಸುತ್ತಿದ್ದೇವೆ. ತಾಯಿಯ ಋಣದಂತೆ ಕೋವಿಡ್ ವಾರಿಯರ್ಸ್‍ಗಳ ಋಣ ತೀರಿಸುವುದು ಅಸಾಧ್ಯ. ಕಾವೇರಿ ಆಸ್ಪತ್ರೆ ವತಿಯಿಂದ ಕೃತಜ್ಞಾ ಕಾರ್ಯಕ್ರಮದ ಭಾಗವಾಗಿ ನಗರದಲ್ಲಿರುವ ಎಲ್ಲಾ ಕೋವಿಡ್ ವಾರಿಯರ್ಸ್‍ಗಳಿಗೆ ಕೃತಜ್ಞತೆ ಸಲ್ಲಿಸಿ ಪ್ರಶಸ್ತಿ ನೀಡುವ ಸಾರ್ಥಕ ಹೆಜ್ಜೆ ಇಟ್ಟಿರುವುದು ಶ್ಲಾಘನೀಯ ಎಂದಿದ್ದಾರೆ.

    ಕಾವೇರಿ ಆಸ್ಪತ್ರೆಯ ಕಾರ್ಯನಿರ್ವಾಹಕರ ನಿರ್ದೇಶಕ ವಿಜಯ ಭಾಸ್ಕರನ್ ಮಾತನಾಡಿ, ಕೋವಿಡ್ ವಾರಿಯರ್ಸ್‍ಗಳಿಗೆ ಕೃತಜ್ಞತೆ ಸಲ್ಲಿಸುವ ಉದ್ದೇಶದಿಂದ ಕೃತಜ್ಞಾ ಕಾರ್ಯಕ್ರಮವನ್ನು ಜುಲೈ 31ರಂದು ಹಮ್ಮಿಕೊಂಡಿದ್ದೇವೆ. ಇದರ ಭಾಗವಾಗಿ ಇಂದಿನಿಂದ 5 ವಾಹನಗಳಲ್ಲಿ ನಗರದಲ್ಲಿರುವ 300ಕ್ಕೂ ಹೆಚ್ಚು ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಿಗೆ ತೆರಳಲಿರುವ ನಮ್ಮ ತಂಡವು ಕೋವಿಡ್ ವಾರಿಯರ್ಸ್‍ಗಳನ್ನು ಅಲ್ಲಿಯೇ ಸನ್ಮಾನಿಸಿ ಪ್ರಶಸ್ತಿ ನೀಡಲಿದೆ. ಇದರ ಜೊತೆಗೆ ಕೋವಿಡ್ ಚಿಕಿತ್ಸೆಗಾಗಿ ಹೊಸ ಆವಿಷ್ಕಾರ ಮಾಡಿದ ಆಸ್ಪತ್ರೆಗಳಿಗೆ ವಿಶೇಷ ಕ್ಯಾಟಗರಿಯಲ್ಲಿ ಪಶಸ್ತಿ ನೀಡಲಿದ್ದೇವೆ ಎಂದು ಹೇಳಿದ್ದಾರೆ.

    ಶಿಕ್ಷಣ ಹಾಗೂ ಉದ್ಯೋಗದ ಭರವಸೆ:
    ಕೋವಿಡ್ ಸಂದರ್ಭದಲ್ಲಿ ಮೃತಪಟ್ಟ ವಾರಿಯರ್ಸ್ ಮಕ್ಕಳಿಗೆ ಶಿಕ್ಷಣ ನೀಡುವ ಉದ್ದೇಶ 2 ಲಕ್ಷದವರೆಗೆ ವಿದ್ಯಾರ್ಥಿ ವೇತನ ಹಾಗೂ ಪದವೀದರ ಮಕ್ಕಳಿಗೆ ಉದ್ಯೋಗ ಕೊಡಿಸಲು ಮುಂದಾಗಿದ್ದೇವೆ. ಸಂಬಂಧಪಟ್ಟ ಕುಟುಂಬಗಳು ನೋಂದಣಿ ಮಾಡಿಕೊಳ್ಳಬಹುದು ಎಂದು ಹೇಳಿದ್ದಾರೆ.

    5 ಕೃತಜ್ಞಾ ವಾಹನಗಳಿಗೆ ಚಾಲನೆ:
    ಇಂದಿನಿಂದ 12 ದಿನಗಳ ಕಾಲ 5 ಕೃತಜ್ಞಾ ವಾಹನಗಳಲ್ಲಿ ತೆರಳಲಿರುವ ಕಾವೇರಿ ಆಸ್ಪತ್ರೆಯ ತಂಡವರು, 300 ಆಸ್ಪತ್ರೆಗಳಿಗೆ ತೆರಳಿ ಅಲ್ಲಿನ ಆರೋಗ್ಯ ಕಾರ್ಯಕರ್ತರಿಗೆ ಸನ್ಮಾನ ಮಾಡಲಿದ್ದಾರೆ. ಮೊದಲ ದಿನದಂದು ವಿಕ್ಟೋರಿಯಾ ಆಸ್ಪತ್ರೆಗೆ ತೆರಳಿ ಅಲ್ಲಿನ ಸಿಬ್ಬಂದಿಗೆ ಸನ್ಮಾನ ಮಾಡಿದರು. ಇಂದು ಆ ವಾಹನಗಳಿಗೆ ನಟ ರಮೇಶ್ ಅರವಿಂದ್ ಅವರು ಚಾಲನೆ ನೀಡಿದರು. ಈ ವೇಳೆ ಕಾವೇರಿ ಆಸ್ಪತ್ರೆ ನಿರ್ದೇಶಕ ಡಾ. ವಿಲ್ಫೆಂಡ್ ಸ್ಯಾಮ್ಸನ್ ಉಪಸ್ಥಿತರಿದ್ದರು. ಇದನ್ನೂ ಓದಿ: ಪಡಿತರ ಅಕ್ಕಿ ಕಳ್ಳ ಸಾಗಾಣಿಕೆ – ವಾಹನ ಸಮೇತ ಓರ್ವನ ಬಂಧನ

     

  • ಮೇಣದ ಬತ್ತಿ ಹಿಡಿದು ಕೋವಿಡ್ ವಾರಿಯರ್ಸ್ ಪ್ರತಿಭಟನೆ

    ಮೇಣದ ಬತ್ತಿ ಹಿಡಿದು ಕೋವಿಡ್ ವಾರಿಯರ್ಸ್ ಪ್ರತಿಭಟನೆ

    ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ವಾರಿಯರ್ಸ್ ಸರ್ಕಾರದ ವಿರುದ್ಧ ಸಿಡಿದೆದ್ದು, ಮೌನ ಪ್ರತಿಭಟನೆಗೆ ಇಳಿದಿದ್ದಾರೆ.

    ಕಳೆದ ಹದಿನೈದು ದಿನದಿಂದ ಕೋವಿಡ್ ವಾರಿಯರ್ಸ್ ಪ್ರತಿಭಟನೆ ಮಾಡುತ್ತಿದ್ದಾರೆ. ಸೋಮವಾರ ರಾತ್ರಿ ನಗರದ ಬೆಂಗಳೂರು ಮೆಡಿಕಲ್ ಕಾಲೇಜ್ ವಿಕ್ಟೋರಿಯಾ ಆವರಣದಲ್ಲಿ ವೈದ್ಯಕೀಯ ಸಿಬ್ಬಂದಿ ಮೇಣದ ಬತ್ತಿ ಹಿಡಿದು ಆಸ್ಪತ್ರೆಯ ಹೊರಭಾಗದಲ್ಲಿ ಪ್ರತಿಭಟನೆ ನಡೆಸಿದರು. ಜೊತೆಗೆ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ಮಾಡಿದ್ದಾರೆ.

    ಖಾಯಂ ನೌಕರರಿಗೆ ವೇತನ ಹೆಚ್ಚಳ, ಮೂಲಭೂತ ಸೌಕರ್ಯ, ಪಿಂಚಣಿ ವ್ಯವಸ್ಥೆ ಸೇರಿದಂತೆ ಅನೇಕ ಬೇಡಿಕೆಯನ್ನು ಮುಂದಿಟ್ಟು ರಾತ್ರಿ ಆಸ್ಪತ್ರೆಯ ಹೊರಭಾಗದಲ್ಲಿ ಪ್ರತಿಭಟನೆ ನಡೆಸಿದರು.

    ಕಿಮ್ಸ್ ವೈದ್ಯಕೀಯ ಸಿಬ್ಬಂದಿ ಪ್ರತಿಭಟನೆ
    ಇತ್ತ ಹುಬ್ಬಳ್ಳಿಯಲ್ಲಿ ಎನ್‍ಪಿಎಸ್ ಸೌಲಭ್ಯ ಸೇರಿದಂತೆ ಜ್ಯೋತಿ ಸಂಜೀವಿನಿ ಒದಗಿಸುವಂತೆ ಆಗ್ರಹಿಸಿ ಕಿಮ್ಸ್ ಶುಶ್ರೂಷಾ ಸಿಬ್ಬಂದಿ ನಡೆಸುತ್ತಿರುವ ಪ್ರತಿಭಟನೆ ಎಂಟನೇ ದಿನಕ್ಕೆ ಕಾಲಿಟ್ಟಿದ್ದು, ಸಿಬ್ಬಂದಿ ಸೋಮವಾರ ಸಂಜೆ ಕೂಡ ಕಪ್ಪು ಪಟ್ಟಿ ಧರಿಸಿ, ಮೇಣದ ಬತ್ತಿ ಹಿಡಿದು ಪ್ರತಿಭಟನೆ ನಡೆಸಿದರು.

    ಸುಮಾರು 50ಕ್ಕೂ ಹೆಚ್ಚು ಸಿಬ್ಬಂದಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದು, ಹುಬ್ಬಳ್ಳಿಯ ಕಿಮ್ಸ್ ಆವರಣದ ಎದುರು ಕಪ್ಪು ಪಟ್ಟಿ ಧರಿಸಿ ಕೋವಿಡ್ ಸಂದರ್ಭದಲ್ಲಿ ಯಾವುದೇ ತೊಂದರೆಯಾಗದೆ ಕಾರ್ಯ ಮಾಡಿದ್ದೇವೆ. ಪಿಂಚಣಿ ಸೌಲಭ್ಯವನ್ನು ನಮಗೂ ನೀಡಿ ಎಂದು ಒತ್ತಾಯಿಸಿದರು. ಅಲ್ಲದೇ ವೈದ್ಯಕೀಯ ವಿದ್ಯಾಲಯದಲ್ಲಿ ಹಾಗೂ ಸಂಶೋಧನಾ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ ತಾರತಮ್ಯವನ್ನು ನಿಭಾಯಿಸುವಂತೆ ಸರ್ಕಾರಕ್ಕೆ ಒತ್ತಾಯಿಸಿದರು.