Tag: ಕೋವಿಡ್ ರೋಗಿ

  • ಕೋವಿಡ್ ರೋಗಿಯ ಆಕ್ಸಿಜನ್ ತೆಗೆದು ಕೊಂದ ವಾರ್ಡ್‍ಬಾಯ್

    ಕೋವಿಡ್ ರೋಗಿಯ ಆಕ್ಸಿಜನ್ ತೆಗೆದು ಕೊಂದ ವಾರ್ಡ್‍ಬಾಯ್

    ಭೋಪಾಲ್: ವಾರ್ಡ್ ಬಾಯ್ ಆಕ್ಸಿಜನ್ ಮಾಸ್ಕ್ ತೆಗೆದ ನಂತರ ಕೊರೊನಾ ರೋಗಿ ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದ ಶಿರೋಪುರದಲ್ಲಿ ನಡೆದಿದೆ. ಈ ದೃಶ್ಯ ಸಿಸಿಟಿವಿ ಕ್ಯಾಮೆರಾದ ಮೂಲಕ ಬೆಳಕಿಗೆ ಬಂದಿದೆ.

    ಮೃತಪಟ್ಟ ವ್ಯಕ್ತಿಯನ್ನು ಸುರೇಂದ್ರ ಶರ್ಮಾ ಎಂದು ಗುರುತಿಸಲಾಗಿದ್ದು, ಕೊರೊನಾ ಚಿಕಿತ್ಸೆಗಾಗಿ ಶಿವಪುರಿಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ತಡರಾತ್ರಿ ವಾರ್ಡ್‍ಬಾಯ್ ಆಕ್ಸಿಜನ್ ಮಾಸ್ಕ್ ತೆರೆದ ಪರಿಣಾಮ ರೋಗಿ ಮೃತಪಟ್ಟಿದ್ದಾರೆ.

    ಆಸ್ಪತ್ರೆಯ ನಿರ್ವಹಣಾ ವ್ಯವಸ್ಥೆಯ ನಿರ್ಲಕ್ಷ್ಯದಿಂದ ಸುರೇಂದ್ರ ಶರ್ಮಾ ಮೃತಪಟ್ಟಿರುವುದಾಗಿ ಮೃತರ ಮಗ ದೀಪಕ್ ಶರ್ಮಾ ಹಾಗೂ ಅವರ ಕುಟುಂಬದವರು ಆರೋಪಿಸಿದ್ದಾರೆ. ವಾರ್ಡ್‍ಬಾಯ್ ಒಳಗೆ ಬರುವ ಮುನ್ನ ಸುರೇಂದ್ರ ಕುಮಾರ್ ಜೊತೆ ಅವರ ಮಗ ದೀಪಕ್ ಶರ್ಮಾ ಇದ್ದರು.

    ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ದೀಪಕ್ ಶರ್ಮಾ, ಹಲವು ದಿನಗಳಿಂದ ನನ್ನ ತಂದೆ ಆಸ್ಪತ್ರೆಗೆ ದಾಖಲಾಗಿದ್ದರು. ಅವರ ಆರೋಗ್ಯ ಸ್ಥಿರವಾಗಿತ್ತು ಹಾಗೂ ಸುಧಾರಿಸುತ್ತಿತ್ತು. ಆದರೆ ಬೆಳಗ್ಗೆ ಅವರ ಆಕ್ಸಿಜನ್ ಮಾಸ್ಕ್‍ನನ್ನು ವಾರ್ಡ್ ಬಾಯ್ ತೆಗೆದುಹಾಕಿದ್ದರಿಂದ ಉಸಿರಾಡಲು ಆಗದೇ ಒದ್ದಾಡಿ ಮೃತಪಟ್ಟಿದ್ದಾರೆ . ನಾನು ನರ್ಸ್ ಹಾಗೂ ವೈದ್ಯರಿಗೆ ಮತ್ತೆ ಆಕ್ಸಿಜನ್ ನೀಡುವಂತೆ ಕೇಳಿದೆ, ಆದರೆ ಅವರು ನಿರಾಕರಿಸಿದರು. ಆದಾದ ಸ್ವಲ್ಪ ಹೊತ್ತಿನಲ್ಲಿಯೇ ನನ್ನ ತಂದೆ ಕೊನೆಯುಸಿರೆಳೆದಿದ್ದಾರೆ ಎಂದು ಹೇಳಿದ್ದಾರೆ.

    ಈ ಕುರಿತಂತೆ ಇದೀಗ ಬಿಜೆಪಿ ರಾಜ್ಯ ಸಮಿತಿ ಸದಸ್ಯ ಧರ್ಯವರ್ದನ್ ಶರ್ಮಾ 48 ಗಂಟೆಗಳ ಒಳಗೆ ತನಿಖೆ ನಡಿಸಿ ವರದಿ ಸಲ್ಲಿಸಲು ಮೂರು ತಂಡಗಳನ್ನು ರಚಿಸಿದ್ದಾರೆ. ಅಲ್ಲದೇ ಮುಖ್ಯ ವೈದ್ಯಕೀಯ ಆರೋಗ್ಯ ಅಧಿಕಾರಿ ಅರ್ಜುನ್ ಲಾಲ್ ಶರ್ಮಾ ಆರೋಪಿಗಳ ವಿರುದ್ಧ ಕಠೀಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.