Tag: ಕೋವಿಡ್ ಕೇರ್ ಸೆಂಟರ್

  • ದೇಶದ ಅತಿದೊಡ್ಡ ಕೋವಿಡ್ ಕೇರ್ ಸೆಂಟರ್ ಬಿಐಇಸಿಯಲ್ಲಿ ಕುಡಿಯುವ ನೀರಿನ ಕೊರತೆ

    ದೇಶದ ಅತಿದೊಡ್ಡ ಕೋವಿಡ್ ಕೇರ್ ಸೆಂಟರ್ ಬಿಐಇಸಿಯಲ್ಲಿ ಕುಡಿಯುವ ನೀರಿನ ಕೊರತೆ

    ನೆಲಮಂಗಲ: ದೇಶದ ಅತಿದೊಡ್ಡ ಕೋವಿಡ್ ಕೇರ್ ಸೆಂಟರ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಬೆಂಗಳೂರು ಹೊರವಲಯ ನೆಲಮಂಗಲ ಸಮೀಪದ ಬೆಂಗಳೂರು ಅಂತರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ ಇದೀಗ ಶುದ್ಧ ಕುಡಿಯುವ ನೀರಿಗೂ ಹಾಹಾಕಾರ ಶುರುವಾಗಿದೆ.

    ಕೊರೋನಾ ಸೋಂಕಿತರಿಗೆ ನೀರು ಕೊಡುವಲ್ಲಿ ಬಿಬಿಎಂಪಿ ವಿಫಲವಾಯಿತಾ ಎಂಬ ಪ್ರಶ್ನೆ ಇದೀಗ ಮೂಡಿದೆ. ಕಂಟೇನರ್ ಕ್ಯಾನ್ ಗಳಿಂದ ಸೋಂಕಿತರಿಗೆ ನೀರಿನ ವ್ಯವಸ್ಥೆ ಮಾಡಿದ್ದು, ಅವ್ಯವಸ್ಥೆಯ ಬಗ್ಗೆ ಕೊರೊನಾ ಸೋಂಕಿತರು ವಿಡಿಯೋ ಮಾಡಿ ನೋವು ತೋಡಿಕೊಂಡಿದ್ದಾರೆ. ಶುದ್ಧ ಕುಡಿಯುವ ನೀರಿನ ಬದಲು ಟ್ಯಾಂಕರ್ ನೀರು ಸರಬರಾಜು ಮಾಡುತ್ತಿರುವ ಆರೋಪ ಕೇಳಿಬಂದಿದೆ. ಈ ಮೂಲಕ ದೇಶದ ಅತಿದೊಡ್ಡ ಕೋವಿಡ್ ಕೇರ್ ಕೇಂದ್ರದಲ್ಲಿ ನೀರಿನ ಅವ್ಯವಸ್ಥೆಯ ಉಂಟಾಗಿದೆ ಎನ್ನಲಾಗಿದೆ.

    ಕೇರ್ ಸೆಂಟರ್ ನಲ್ಲಿ ಕುಡಿಯುವ ನೀರಿನ ಅಭಾವ ಇರುವ ಬಗ್ಗೆ ಸೋಂಕಿತರೇ ವಿಡಿಯೋ ಮಾಡಿ ಹರಿಬಿಟ್ಟಿದ್ದಾರೆ. ಶೌಚಾಲಯದಲ್ಲೂ ನೀರಿನ ಅಭಾವ ಶುರುವಾಗಿದ್ದು, ಸೋಂಕಿತರು ಪರದಾಟ ನಡೆಸುತ್ತಿದ್ದಾರೆ. ಬಿಸಿ ನೀರಿನ ವ್ಯವಸ್ಥೆಯಲ್ಲಿ ಸಹ ಸಾಕಷ್ಟು ಸಮಸ್ಯೆಯಿದ್ದು, ಕೊರೊನಾ ಸೋಂಕಿತರು ಆತಂಕದಲ್ಲೇ ಜೀವನ ಸಾಗಿಸುತ್ತಿದ್ದಾರೆ. ಕೂಡಲೇ ಶುದ್ಧ ನೀರಿನ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿದ್ದಾರೆ.

  • ಪೊಲೀಸ್ ಸಿಬ್ಬಂದಿ ಚಿಕಿತ್ಸೆಗಾಗಿ 100 ಬೆಡ್‍ಗಳ ಕೋವಿಡ್ ಕೇರ್ ಸೆಂಟರ್ ನಿರ್ಮಾಣ

    ಪೊಲೀಸ್ ಸಿಬ್ಬಂದಿ ಚಿಕಿತ್ಸೆಗಾಗಿ 100 ಬೆಡ್‍ಗಳ ಕೋವಿಡ್ ಕೇರ್ ಸೆಂಟರ್ ನಿರ್ಮಾಣ

    ಬಳ್ಳಾರಿ: ಜಿಲ್ಲೆಯಲ್ಲಿ ಕೊರೊನಾ ಮಹಾಮಾರಿ ತನ್ನ ಅಟ್ಟಹಾಸ ಮುಂದುವರೆಸಿದ್ದು, ಈವರೆಗೂ 10,263 ಜನರಿಗೆ ಸೋಂಕು ತಗಲಿದೆ. ಅದರಲ್ಲಿ ಸುಮಾರು 296 ಜನ ಪೊಲೀಸ್ ಸಿಬ್ಬಂದಿಗೆ ಸೋಂಕು ದೃಢವಾಗಿದೆ. ಹೀಗಾಗಿ ಜಿಲ್ಲೆಯಲ್ಲಿ ಪೊಲೀಸ್ ಸಿಬ್ಬಂದಿ ಚಿಕಿತ್ಸೆಗಾಗಿ ನೂರು ಬೆಡ್‍ಗಳ ಕೋವಿಡ್ ಕೇರ್ ಸೆಂಟರ್ ತಲೆ ಎತ್ತಿದೆ.

    296 ಜನರಲ್ಲಿ ಬಹುತೇಕ ಸಿಬ್ಬಂದಿ ಎ ಸಿಮ್ಟಮ್ಯಾಟಿಕ್ ಹೊಂದಿರುವ ಕಾರಣ ಪೊಲೀಸ್ ಇಲಾಖೆ ತನ್ನ ಎಲ್ಲಾ ಸಿಬ್ಬಂದಿಯನ್ನು ಒಂದೇ ಕಡೆಯಲ್ಲಿ ಚಿಕಿತ್ಸೆ ನೀಡಲು ಮುಂದಾಗಿದೆ. ಹೀಗಾಗಿ ಬಳ್ಳಾರಿಯ ಕೌಲ್ ಬಜಾರ್ ಬಳಿ ಇರುವ ವಾಲ್ಮೀಕಿ ಭವನವನ್ನು ಕೋವಿಡ್ ಕೇರ್ ಸೆಂಟರ್ ಮಾಡಿಕೊಂಡಿದ್ದು, ಸುಮಾರು ನೂರು ಬೆಡ್ ಸಾಮರ್ಥ್ಯದ ಕೋವಿಡ್ ಕೇರ್ ಸೆಂಟರ್ ನಿರ್ಮಾಣ ಮಾಡಲಾಗಿದೆ. ಹೀಗಾಗಿ ಜಿಲ್ಲೆಯಲ್ಲಿ ಇರುವ ಸೋಂಕಿತ ಪೊಲೀಸರಿಗೆ ಇನ್ನು ಮುಂದೆ ವಾಲ್ಮೀಕಿ ಭವನದಲ್ಲಿ ಚಿಕಿತ್ಸೆ ನೀಡಲಾಗುವುದು.

    ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಹಾಗೂ ಎಸ್.ಪಿ. ಸಿಕೆ ಬಾಬಾ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದೇ ವೇಳೆಯಲ್ಲಿ ಮಾತನಾಡಿದ ಜಿಲ್ಲಾ ಎಸ್.ಪಿ., ದಿನೇ ದಿನೇ ಪೊಲೀಸರು ಹೆಚ್ಚು ಸೋಂಕಿತರಾಗುತ್ತಿದ್ದಾರೆ. ಅವರ ಆರೋಗ್ಯ ಕಾಪಾಡುವುದು ನಮ್ಮ ಜವಾಬ್ದಾರಿ. ಹೀಗಾಗಿ ಅವರಿಗೆ ಪ್ರತ್ಯೇಕವಾದ ಕೋವಿಡ್ ಕೇರ್ ಸೆಂಟರ್ ನಿರ್ಮಾಣ ಮಾಡಿ, ಬೇಗ ಚಿಕಿತ್ಸೆ ನೀಡಿ ಮತ್ತೆ ಅವರನ್ನು ಕೆಲಸಕ್ಕೆ ಹಾಜರಾಗುವಂತೆ ಮಾಡಲಾಗುವುದು ಎಂದಿದ್ದಾರೆ.

    ಜಿಲ್ಲೆಯಲ್ಲಿ ಇದುವರೆಗೂ ಕೊರೊನಾ ಸೋಂಕಿನಿಂದ ನಾಲ್ವರು ಪೊಲೀಸ್ ಇಲಾಖೆ ಸಿಬ್ಬಂದಿ ತಮ್ಮ ಪ್ರಾಣ ನೀಡಿದ್ದಾರೆ. ಅವರಿಗೆ ಸರ್ಕಾರ ಹಾಗೂ ಇಲಾಖೆಯಿಂದ ಸಿಗಬೇಕಾದ ಗೌರವ ನೀಡಲಾಗಿದೆ ಎಂದು ತಿಳಿಸಿದ್ದಾರೆ.

  • ಕಾರ್ಮಿಕ ಇಲಾಖೆಯ ಸಮುದಾಯ ಭವನ ಕೋವಿಡ್ ಕೇರ್ ಸೆಂಟರ್ ಆಗಿ ಪರಿವರ್ತನೆ

    ಕಾರ್ಮಿಕ ಇಲಾಖೆಯ ಸಮುದಾಯ ಭವನ ಕೋವಿಡ್ ಕೇರ್ ಸೆಂಟರ್ ಆಗಿ ಪರಿವರ್ತನೆ

    – 200 ಹಾಸಿಗೆಯ ಕೇರ್ ಸೆಂಟರ್ ಬಳಕೆಗೆ ಸಿದ್ಧ

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಹೀಗಾಗಿ ತಮ್ಮ ಕ್ಷೇತ್ರದ ಜನರ ರಕ್ಷಣೆ ಹಾಗೂ ಸುರಕ್ಷತೆಗಾಗಿ ಹಾಗೂ ಸೋಂಕಿತರ ಆರೈಕೆಗಾಗಿ ಶಾಸಕರು ರಾಜ್ಯ ಕಾರ್ಮಿಕ ಇಲಾಖೆಯ ಸಮುದಾಯ ಭವನವನ್ನು ಕೋವಿಡ್ ಕೇರ್ ಸೆಂಟರ್ ಆಗಿ ಪರಿವರ್ತನೆ ಮಾಡಿದ್ದಾರೆ.

    ಟಿ.ದಾಸರಹಳ್ಳಿಯ ಶಾಸಕ ಆರ್.ಮಂಜುನಾಥ್ ತಮ್ಮ ಕ್ಷೇತ್ರದ ಜನರ ರಕ್ಷಣೆಗಾಗಿ ಈ ಕೆಲಸ ಮಾಡಿದ್ದು, ಬೆಂಗಳೂರು ಹೊರವಲಯದ ಟಿ.ದಾಸರಹಳ್ಳಿಯ ಬಗಲಗುಂಟೆ ವಾರ್ಡ್ ನಲ್ಲಿರುವ ರಾಜ್ಯದ ಕಾರ್ಮಿಕ ಇಲಾಖೆಯ ಸಮುದಾಯ ಭವನದಲ್ಲಿ ಸುಮಾರು 200 ಹಾಸಿಗೆಯ ಕೇರ್ ಸೆಂಟರ್ ಸಜ್ಜಾಗಿದೆ. ಕೇರ್ ಸೆಂಟರ್ ಸಿದ್ಧತೆಯನ್ನು ಆರ್.ಮಂಜುನಾಥ್ ಇಂದು ವೀಕ್ಷಿಸಿದರು.

    ಆಹಾರ ಸಚಿವ ಗೋಪಾಲಯ್ಯ ಸಹಕಾರದಿಂದ ನಿರ್ಮಾಣವಾಗಿರುವ ಈ ಕೇರ್ ಸೆಂಟರ್ ನಲ್ಲಿ, ಕೊರೊನಾ ವಾರಿಯರ್ಸ್ ಹಾಗೂ ಜನರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಸುಸಜ್ಜಿತ ಬೆಡ್ ಗಳು, ಹೊದಿಕೆ, ಫ್ಯಾನ್, ಶೌಚಾಲಯ, ಬಿಸಿ ನೀರಿನ ವ್ಯವಸ್ಥೆ, ಮನರಂಜನಾ ಕೊಠಡಿ ಹಾಗೂ ಪ್ರತ್ಯೇಕ ಊಟದ ಹಾಲ್ ನಿರ್ಮಾಣ ಮಾಡಲಾಗಿದೆ. ಸೋಂಕಿತರಿಗೆ ಚಿಕಿತ್ಸೆ ನೀಡುವ ವೈದ್ಯರು, ನರ್ಸ್, ಡಿ ಗ್ರೋಪ್ ನೌಕರರಿಗೆ ಪ್ರತ್ಯೇಕವಾಗಿ ಎಲ್ಲ ರೀತಿಯಲ್ಲಿ ವ್ಯವಸ್ಥೆ ಮಾಡಲಾಗಿದೆ. ಕೋವಿಡ್ ಕೇರ್ ಸೆಂಟರ್ ನಲ್ಲಿ ಯಾವುದೇ ಸಮಸ್ಯೆ ಎದುರಾಗದಂತೆ ಎಚ್ಚರ ವಹಿಸಬೇಕು ಎಂದು ಅಧಿಕಾರಿಗಳಿಗೆ ಶಾಸಕರು ಸೂಚಿಸಿದ್ದಾರೆ.

  • ಕೊರೊನಾ ಕೇರ್ ಸೆಂಟರ್ ನಲ್ಲಿ ವಿದ್ಯುತ್ ಕೊರತೆ- ನೀರು ಇಲ್ಲ, ಸೊಳ್ಳೆ ಕಾಟ ತಪ್ಪಿಲ್ಲ

    ಕೊರೊನಾ ಕೇರ್ ಸೆಂಟರ್ ನಲ್ಲಿ ವಿದ್ಯುತ್ ಕೊರತೆ- ನೀರು ಇಲ್ಲ, ಸೊಳ್ಳೆ ಕಾಟ ತಪ್ಪಿಲ್ಲ

    ರಾಯಚೂರು: ನಗರದ ಹೊರವಲಯದ ಯರಮರಸ್ ಬಳಿಯ ಕೋವಿಡ್ ಕೇರ್ ಸೆಂಟರ್ ನಲ್ಲಿ ವಿದ್ಯುತ್ ಸಮಸ್ಯೆ ಉಂಟಾಗಿದ್ದು ಕೊರೊನಾ ಸೊಂಕಿತರು ಕತ್ತಲಲ್ಲೇ ಕಾಲ ಕಳೆಯಬೇಕಾಗಿದೆ.

    ವಿದ್ಯುತ್ ಇಲ್ಲದಿರುವುದರಿಂದ ನಾನಾ ಸಮಸ್ಯೆಗಳ ಕೊರೋನಾ ಸೋಂಕಿತರು ಎದುರಿಸುತ್ತಿದ್ದಾರೆ. ಮುಖ್ಯವಾಗಿ ನೀರಿನ ಸಮಸ್ಯೆ ಎದುರಾಗಿದ್ದು ಶೌಚಕ್ಕೂ ಹೋಗಲು ಆಗದೇ ಪರದಾಡುವಂತಾಗಿದೆ. ಸೊಳ್ಳೆ ಕಾಟದಿಂದ ನಿದ್ದೆ ಮಾಡಲು ಆಗದ ಪರಸ್ಥಿತಿಗೆ ಸೋಂಕಿತರು ಹೆದರಿದ್ದಾರೆ. ನಿನ್ನೆಯಿಂದಲೂ ವಿದ್ಯುತ್ ಸಮಸ್ಯೆಯಿದ್ದು ಜೆಸ್ಕಾಂ ಅಧಿಕಾರಿಗಳು ಸರಿಯಾಗಿ ಸ್ಪಂದಿಸಿಲ್ಲ. ಹೀಗಾಗಿ ಇಲ್ಲಿ ಇರಲು ಸಾಧ್ಯವಾಗುತ್ತಿಲ್ಲ ನಮ್ಮನ್ನ ಮನೆಗೆ ಬಿಡಿ ಅಂತ ಸೋಂಕಿತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಕೋವಿಡ್ ಕೇರ್ ಸೆಂಟರ್ ನಲ್ಲಿ ಬಹುತೇಕರು ರೋಗ ಲಕ್ಷಣಗಳು ಇಲ್ಲದೇ ಇರುವವರು ಇದ್ದಾರೆ. ಜೆಸ್ಕಾಂ ಸಿಬ್ಬಂದಿ ಕೇಂದ್ರದ ಕಾಂಪೌಂಡ್ ಹತ್ತಿರಕ್ಕೂ ಬರುತ್ತಿಲ್ಲ. ಇಲ್ಲಿನ ವಿದ್ಯುತ್ ಕಂಬವನ್ನೂ ಪರಿಶೀಲಿಸುತ್ತಿಲ್ಲ ಅಂತ ಆರೋಪಿಸಿದ್ದಾರೆ. ಇನ್ನೂ ಅಧಿಕಾರಿಗಳು ಕೇರ್ ಸೆಂಟರ್ ನಲ್ಲಿರುವವರಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುತ್ತಿದ್ದೇವೆ. ವಿದ್ಯುತ್ ಗಾಗಿ ಜನರೇಟರ್ ಕಳುಹಿಸುತ್ತೇವೆ ಅಂತಿದ್ದಾರೆ. ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದ್ದು ಶೀಘ್ರದಲ್ಲಿ ವಿದ್ಯುತ್ ಸಮಸ್ಯೆ ಬಗೆಹರಿಸುತ್ತೇವೆ ಅಂತ ಭರವಸೆ ನೀಡಿದ್ದಾರೆ. ಆದ್ರೆ ಯಾವ ರೋಗ ಲಕ್ಷಣಗಳು ಇಲ್ಲದೆ ಸೊಳ್ಳೆ ಕಡಿಸಿಕೊಂಡು ಇಲ್ಲಿ ಕಾಲ ಕಳೆಯಬೇಕಾಗಿದೆ ಅಂತ ಬಹುತೇಕ ಸೋಂಕಿತರು ಅಸಮಧಾನ ವ್ಯಕ್ತಪಡಿಸಿದ್ದಾರೆ.

  • ಪೀಣ್ಯ ಶ್ರೀ ಬಸವೇಶ್ವರ ಬಸ್ ನಿಲ್ದಾಣ ಈಗ ಕೋವಿಡ್ ಕೇರ್ ಸೆಂಟರ್

    ಪೀಣ್ಯ ಶ್ರೀ ಬಸವೇಶ್ವರ ಬಸ್ ನಿಲ್ದಾಣ ಈಗ ಕೋವಿಡ್ ಕೇರ್ ಸೆಂಟರ್

    ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ರೋಗದ ಲಕ್ಷಣವೇ ಇಲ್ಲದವಿರಗೆ ಕೊರೊನಾ ಪಾಸಿಟಿವ್ ಬರುತ್ತಿರುವ ಕಾರಣ, ಈ ರೋಗಿಗಳಿಗೆ ಚಿಕಿತ್ಸೆ ನೀಡಿಲು ಪೀಣ್ಯದ ಶ್ರೀ ಬಸವೇಶ್ವರ ಬಸ್ ನಿಲ್ದಾಣವನ್ನು ಕೋವಿಡ್ ಕೇರ್ ಸೆಂಟರ್ ಆಗಿ ಮಾರ್ಪಾಡು ಮಾಡಲಾಗಿದೆ.

    ಬೆಂಗಳೂರಿನಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಕೋವಿಡ್-19 ಲಕ್ಷಣಗಳಿಲ್ಲದ ರೋಗಿಗಳಿಗೆ ಆಸ್ಪತ್ರೆಗಳಲ್ಲಿ ಅವಕಾಶ ಕಲ್ಪಿಸುವುದು ಕಷ್ಟಕರವಾಗುತ್ತಿದೆ. ಸರ್ಕಾರದ ಸಲಹೆಯಂತೆ, ಕೋವಿಡ್ ಆರೈಕೆ ಕೇಂದ್ರಗಳಲ್ಲಿ ಲಕ್ಷಣ ರಹಿತ ಮತ್ತು ಸೌಮ್ಯ ಪ್ರಕರಣಗಳನ್ನು ನಿರ್ವಹಿಸಲು ಕೋವಿಡ್ ಆರೈಕೆ ಕೇಂದ್ರಗಳನ್ನು ಅಭಿವೃದ್ಧಿಪಡಿಸಲಾಗಿದೆ. ಕೋವಿಡ್ ಆರೈಕೆ ಕೇಂದ್ರದ ಸ್ಥಾಪನೆಗಾಗಿ ಶ್ರೀ ಬಸವೇಶ್ವರ ಬಸ್ ನಿಲ್ದಾಣ, ಪೀಣ್ಯ ಬೆಂಗಳೂರಿನಲ್ಲಿ ಸ್ಥಳಾವಕಾಶ ಒದಗಿಸಿದೆ ಎಂದು ಕೆ.ಎಸ್.ಆರ್.ಟಿ.ಸಿಯು ಮಾಹಿತಿ ನೀಡಿದೆ.

    ಕೇಂದ್ರವು ಆಗಸ್ಟ್ 6 ರಿಂದ ಕಾರ್ಯಾರಂಭ ಮಾಡಲಿದೆ. ರೋಟರಿ ಅಡ್ವಿಕಾ ಕೇರ್ ಫೌಂಡೇಶನ್ ಮತ್ತು ನಯೋನಿಕಾ ಐ ಟ್ರಸ್ಟ್ ಸಹಯೋಗದೊಂದಿಗೆ ಈ ಕೇಂದ್ರವನ್ನು ಸ್ಥಾಪಿಸಲು ಮುಂದಾಗಿರುತ್ತಾರೆ. ಈ ಕೇಂದ್ರವನ್ನು ನಿರ್ವಹಿಸಲು ವೈದ್ಯಕೀಯ ಪಾಲುದಾರರಾಗಿ ಪ್ರಕ್ರಿಯಾ ಆಸ್ವತ್ರೆ, ನಾಗಸಂದ್ರ, ಬೆಂಗಳೂರು ಮತ್ತು ಟೈಟಾನ್ ಸಂಸ್ಥೆ ಪ್ರಮುಖ ಹಣಕಾಸಿನ ಪಾಲುದಾರರಾಗಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಈ ಕೇಂದ್ರವನ್ನು ಇಂದು ಡಿಸಿಎಂ ಲಕ್ಷಣ ಸವದಿಯವರು ಉದ್ಘಾಟಿಸಿದರು.

    ಕೊವಿಡ್-19 ಗೆ ತುತ್ತಾಗಿ ಗುಣಮುಖರಾದ ಕೆ.ಎಸ್.ಆರ್.ಟಿ.ಸಿ ಚಾಲಕ, ನಿರ್ವಾಹಕ, ಸಿಬ್ಬಂದಿಗಳಿಗೆ ಮಾನ್ಯ ಉಪಮುಖ್ಯಮಂತ್ರಿಗಳು ಹೂ ನೀಡಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ರಸ್ತೆ ಸಾರಿಗೆಯ ನಾಲ್ಕು ನಿಗಮಗಳ ಸುಮಾರು ಒಂದು ಸಾವಿರ ಸಿಬ್ಬಂದಿ ಕೊವಿಡ್-19 ಗೆ ತುತ್ತಾಗಿದು 700 ಸಿಬ್ಬಂದಿಗಳು ಗುಣಮುಖರಾಗಿದ್ದಾರೆ. ಅವರುಗಳ ಯೋಗ ಕ್ಷೇಮ ನಮ್ಮ ಪ್ರತಮ ಆದ್ಯತೆಯಾಗಿದ್ದು, ಈ ಕೋವಿಡ್ ಕೇರ್ ಸೆಂಟರ್ ನಲ್ಲಿ ನಮ್ಮ ಸಿಬ್ಬಂದಿಗಳಿಗೆ ಉಚಿತ ಚಿಕಿತ್ಸೆ ನೀಡಲಾಗುವುದು. ಮುಂಜಾಗ್ರತೆ ವಹಿಸಿ ಕಾರ್ಯನಿರ್ವಹಿಸಬೇಕೆಂದು ತಿಳಿಸಿದರು.

    ಪೀಣ್ಯ ಬಸ್ ನಿಲ್ದಾಣದ ನೆಲಮಹಡಿ ಹಾಗೂ ಮೊದಲನೆ ಮಹಡಿಯಲ್ಲಿ, ಈ ಕೇಂದ್ರವು ಮೊದಲನೆ ಹಂತದಲ್ಲಿ 200 ಹಾಸಿಗೆಗಳನ್ನು ಹೊಂದಿರುತ್ತದೆ. ಪ್ರಕರಣಗಳ ಸಂಖ್ಯೆ ಹೆಚ್ಚಾದರೆ ಮತ್ತು ಬೇಡಿಕೆ ಹೆಚ್ಚಾದರೆ ಇನ್ನೂ 100 ಹಾಸಿಗೆಗಳನ್ನು ಸೇರಿಸುವ ವ್ಯವಸ್ಥೆ ಕಲ್ಪಿಸಲಾಗಿದೆ. ಈ ಕೇಂದ್ರದಲ್ಲಿ ಪೂರ್ಣ ಸಮಯದ ದಾದಿಯರು, ವೈದ್ಯರು, ರೋಗಿಗಳ ಆರೈಕೆ ಮಾಡುವವರು, ಸ್ವಚ್ಛತಾಕಾರರು, ವ್ಯವಸ್ಥಾಪಕರು, ಬಿಲ್ಲಿಂಗ್ ತಂಡ, ಸ್ವಾಗತಕಾರರು, ನಿರ್ವಹಣೆ ಮತ್ತು ಭದ್ರತಾ ತಂಡಗಳು ಇರಲಿವೆ. ರೋಗಿಗೆ ಆಸ್ವತ್ರೆಯ ಆರೈಕೆ ಅಗತ್ಯವಿದ್ದಲ್ಲಿ, ಪ್ರಕ್ರಿಯಾ ಆಸ್ವತ್ರೆ ತನ್ನ ಆಸ್ವತ್ರೆಗಳಲ್ಲಿ ಅವಕಾಶ ಕಲ್ಪಿಸುತ್ತದೆ. ಕೇಂದ್ರದಲ್ಲಿ ಅಂಬುಲೆನ್ಸ್ ಜೊತೆ ಆಕ್ಸಿಜನ್ ಸೌಲಭ್ಯ ಲಭ್ಯವಿರುತ್ತದೆ. ಸ್ವಾಬ್ ಸಂಗ್ರಹ ಕೇಂದ್ರವನ್ನು ಸಹ ಇಲ್ಲಿ ಸ್ಥಾಪಿಸಲಾಗಿದೆ.

    ಈ ಕೇಂದ್ರದಲ್ಲಿ ಕೆ.ಎಸ್.ಆರ್.ಟಿ.ಸಿ, ಬಿಎಂಟಿಸಿ, ಈಶಾನ್ಯ ಸಾರಿಗೆ ಮತ್ತು ವಾಯವ್ಯ ಸಾರಿಗೆ ಉದ್ಯೋಗಿಗಳು ಮತ್ತು ಅವರ ಕುಟುಂಬಗಳಿಗೆ 50% ಹಾಸಿಗೆಗಳನ್ನು ಒದಗಿಸಲಾಗಿದೆ. ಈ ರೋಗಿಗಳಿಗೆ ಉಚಿತವಾಗಿ ಚಿಕಿತ್ಸೆ ನೀಡಲಾಗುವುದು. ರೋಟರಿ ಮತ್ತು ಟೈಟಾನ್‍ನಿಂದ ಉಲ್ಲೇಖಿಸಲಾದ ರೋಗಿಗಳಿಗೆ 10% ಹಾಸಿಗೆಗಳನ್ನು ಕಾಯ್ದಿರಿಸಲಾಗಿದೆ. ಸರ್ಕಾರ ಸೂಚಿಸಿದ ದರಗಳ ಪ್ರಕಾರ ರೋಗಿಗಳಿಗೆ ಶುಲ್ಕ ವಿಧಿಸಲಾಗುತ್ತದೆ. ಬಡವರು ಮತ್ತು ನಿರ್ಗತಿಕರಿಗೆ ಈ ಕೇಂದ್ರದಿಂದ ಅನುಕೂಲವಾಗಲಿದೆ.

    ರೋಗಿಗಳಿಗೆ ಆಹಾರ ಮತ್ತು ಇತರ ಸೇವೆಗಳೊಂದಿಗೆ ಮೂಲ ವೈದ್ಯಕೀಯ ಸೇವೆಯನ್ನು ನೀಡಲಾಗುತ್ತದೆ. ಸದರಿ ಕೇಂದ್ರದಲ್ಲಿ ಶೌಚಾಲಯ, ಬಿಸಿ ನೀರಿನ ಸ್ನಾನದ ಸೌಲಭ್ಯ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇದೆ. ಎಲ್ಲಾ ರೋಗಿಗಳಿಗೆ ಪೌಷ್ಠಿಕ ಆಹಾರವನ್ನು ನೀಡಲಾಗುವುದು. ಈ ಕೇಂದ್ರದಲ್ಲಿ ಸಿಬ್ಬಂದಿ ಇರಲು ಅವಕಾಶ ಕಲ್ಪಿಸಲಾಗಿದೆ. ಸಿಬ್ಬಂದಿ ಮತ್ತು ವೈದ್ಯರುಗಳಿಗೆ ಸೋಂಕು ಹರಡದಂತೆ ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲಾಗಿದೆ. ಈ ಕೇಂದ್ರದಲ್ಲಿ ಕೆಲಸ ಮಾಡುವ ಎಲ್ಲರಿಗೂ ಸಂಪೂರ್ಣ ಪಿಪಿಇ ಕಿಟ್‍ಗಳನ್ನು ಒದಗಿಸಲಾಗಿದೆ.

    ಕೇಂದ್ರವು ತುರ್ತು ವಾರ್ಡ್ ಮತ್ತು 10 ಹಾಸಿಗೆಗಳ ಐಸಿಯು ಹೊಂದಿದ್ದು, ಇದರಲ್ಲಿ ರೋಗಿಗಳ ಹಾಸಿಗೆಗಳು, ಮಾನಿಟರ್ ಗಳು, ಆಮ್ಲಜನಕ ಪೂರೈಕೆ ಮತ್ತು ಆಮ್ಲಜನಿಕ ಸಾಂದ್ರತೆಗಳ ವ್ಯವಸ್ಥೆ ಕಲ್ಪಿಸಲಾಗಿದೆ. ಐಸಿಯು ಅನ್ನು ಟೈಟಾನ್ ಕಂಪನಿಯು ಪ್ರಾಯೋಜಿಸುತ್ತಿದೆ. ರೋಗಿಗಳು ಆಸ್ವತ್ರೆಯಲ್ಲಿ ಹಾಸಿಗೆ ಸಿಗುವವರೆಗೂ ಅವರನ್ನು ಇಲ್ಲಿ ತಾತ್ಕಲಿಕವಾಗಿ ನೋಡಿಕೊಳ್ಳಲಾಗುತ್ತದೆ. ಹೆಚ್ಚಿನ ವೈದ್ಯಕೀಯ ಅಗತ್ಯ ಕಂಡು ಬಂದಲ್ಲಿ ರೋಗಿಗಳನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗುವುದು.

  • ಕೋವಿಡ್ ಕೇರ್ ಸೆಂಟರ್ ಕರ್ಮಕಾಂಡ- ಶುಚಿತ್ವವೂ ಇಲ್ಲ, ವ್ಯವಸ್ಥೆಯೂ ಇಲ್ಲ!

    ಕೋವಿಡ್ ಕೇರ್ ಸೆಂಟರ್ ಕರ್ಮಕಾಂಡ- ಶುಚಿತ್ವವೂ ಇಲ್ಲ, ವ್ಯವಸ್ಥೆಯೂ ಇಲ್ಲ!

    ಬೆಂಗಳೂರು: ನಗರದ ಕೋವಿಡ್ ಕೇರ್ ಸೆಂಟರ್ ಗಳಲ್ಲಿ ಯಾವುದೇ ಶುಚಿತ್ವ, ವ್ಯವಸ್ಥೆ ಇಲ್ಲದೇ ರೋಗಿಗಳು ಪರದಾಟುತ್ತಿರುವ ಸ್ಥಿತಿ ಬೆಳಕಿಗೆ ಬಂದಿದೆ.

    ಸೆಂಟರ್ ಗಳಲ್ಲಿ ಎಲ್ಲೆಂದರಲ್ಲಿ ಊಟದ ತ್ಯಾಜ್ಯ ಬೀಸಾಡಿರುವುದು, ಶುಚಿತ್ವ ಇಲ್ಲದ ಬಾತ್ ರೂಂ ಹಾಗೂ ಬ್ಲಾಕ್ ಆಗಿ ನೀರಿನ ವ್ಯವಸ್ಥೆ ಇಲ್ಲದೇ ರೋಗಿಗಳಿಗೆ ನರಕದರ್ಶನವಾಗುತ್ತಿದೆ. ಕೋರಮಂಗಲದ ಇನ್‍ಡೋರ್ ಸ್ಟೇಡಿಯಂನಲ್ಲಿ ಇಂತಹ ಸ್ಥಿತಿ ಕಂಡು ಬಂದಿದ್ದು, ನಗರದ ಬಹುತೇಕ ಕೋವಿಡ್ ಕೇರ್ ಗಳ ವಿಭಿನ್ನವಾಗಿಲ್ಲ ಎಂದು ಹೇಳಬಹುದು. ಕೋವಿಡ್ ಕೇರ್ ಸೆಂಟರ್ ಗಳಲ್ಲಿ ಸಾಂಕ್ರಾಮಿಕ ರೋಗಗಳು ಹರಡುವ ಭೀತಿಯನ್ನು ರೋಗಿಗಳು ವ್ಯಕ್ತಪಡಿಸಿದ್ದಾರೆ.

    ಈ ಕುರಿತು ವಿಡಿಯೋ ಮಾಡಿರುವ ರೋಗಿಯೊಬ್ಬರು ಕೋವಿಡ್ ಕೇರ್ ಸೆಂಟರ್ ಅವ್ಯವಸ್ಥೆಯನ್ನು ಬಿಚ್ಚಿಟ್ಟಿದ್ದಾರೆ. ನನಗೆ ಪಾಸಿಟಿವ್ ಇದೆ. ಇಲ್ಲಿ ಮೂರು ಹೊತ್ತು ಊಟ ಕೊಡುವುದು ಬಿಟ್ಟರೆ ಬೇರೆ ಯಾವ ವ್ಯವಸ್ಥೆಯೂ ಇಲ್ಲ. ರೋಗಿಳಿಗೆ ಎನ್-95 ಮಾಸ್ಕ್ ಇಲ್ಲ. ಆಸ್ಪತ್ರೆಯಿಂದ ಮಾತ್ರೆ ಕೊಡುತ್ತಿಲ್ಲ. ನಮ್ಮ ದುಡ್ಡಲ್ಲೇ ಹೊರಗಿನಿಂದ ಖರೀದಿ ಮಾಡಬೇಕಿದೆ.

    ಇಲ್ಲಿ ಸರಿಯಾದ ನೀರಿನ ವ್ಯವಸ್ಥೆ ಸರಿ ಇಲ್ಲ. ಬಾತ್ ರೂಮ್ ಫುಲ್ ಕಟ್ಟಿಕೊಂಡಿದೆ. ಬಿಸಿನೀರು ಕೊಡಲ್ಲ. 30 ಜನ ಮೇಲೆ, 20 ಜನ ಕೆಳಗಿನ ಫ್ಲೋರ್ ನಲ್ಲಿ ಇದ್ದೀವಿ. 5 ಕ್ಯಾನ್ ನೀರು ತರ್ತಾರೆ. ಅದು ಯಾರಿಗೂ ಸಾಕಾಗಲ್ಲ. ಒಂದ್ ಟೈಮ್ ಕಷಾಯ, ಅರಿಶಿಣ ಹಾಲು ಕೊಡುತ್ತಿಲ್ಲ. ಆದರೆ ಊಟದ ಸಮಸ್ಯೆ ಇಲ್ಲ. ಬೆಳಗ್ಗೆ 8, ಮಧ್ಯಾಹ್ನ 1, ಸಾಯಂಕಾಲ 8 ಗಂಟೆಗೆ ಊಟ ಬರುತ್ತೆ. ಶುಚಿತ್ವ ಇಲ್ಲ, ಸರಿಯಾದ ಸಮಯಕ್ಕೆ ನೀರು ತರಿಸಲ್ಲ. ನಾವೇ ಹೊರಗಿನಿಂದ 2 ಲೀಟರ್ ತರಿಸಿಕೊಳ್ಳಬೇಕಿದೆ ಎಂದು ರೋಗಿ ವಿವರಿಸಿದ್ದಾರೆ.

  • ಕೋವಿಡ್ ಕೇರ್ ಸೆಂಟರ್‌ಗೆ ವೈದ್ಯರು ಬರ್ತಿಲ್ಲ, ಬಿಸಿ ನೀರು ಕೊಡ್ತಿಲ್ಲ: ಸೋಂಕಿತರು ಪ್ರತಿಭಟನೆ

    ಕೋವಿಡ್ ಕೇರ್ ಸೆಂಟರ್‌ಗೆ ವೈದ್ಯರು ಬರ್ತಿಲ್ಲ, ಬಿಸಿ ನೀರು ಕೊಡ್ತಿಲ್ಲ: ಸೋಂಕಿತರು ಪ್ರತಿಭಟನೆ

    ಚಾಮರಾಜನಗರ: ಕೋವಿಡ್ ಕೇರ್ ಸೆಂಟರ್‌ನಲ್ಲಿ ಅವ್ಯವಸ್ಥೆ ವಿರೋಧಿಸಿ ಕೊರೊನಾ ಸೋಂಕಿತರು ಪ್ರತಿಭಟನೆ ನಡೆಸಿ ಸಿಬ್ಬಂದಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

    ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಐದು ದಿನಗಳ ಕಾಲ ಚಿಕಿತ್ಸೆ ನಂತರ ಮೆಡಿಕಲ್ ಕಾಲೇಜಿನಲ್ಲಿರುವ ಕೋವಿಡ್ ಕೇರ್ ಸೆಂಟರ್‍ಗೆ ಸ್ಥಳಾಂತರಿಗೊಳಿಸಲಾಗಿದೆ. ಆದರೆ ಇಲ್ಲಿ ಇದೀಗ ಸೋಂಕಿತರು ಪ್ರತಿಭಟನೆ ನಡೆಸಿದ್ದಾರೆ.

    ನಾಲ್ಕೈದು ದಿನಗಳಿಂದ ಕೊರೊನಾ ಕೇರ್ ಸೆಂಟರ್‍ಗೆ ವೈದ್ಯರು ಬರುತ್ತಿಲ್ಲ, ಯಾವ ತಪಾಸಣೆಯನ್ನೂ ಮಾಡುತ್ತಿಲ್ಲ. ಬಿಸಿ ನೀರು ಕೊಡುತ್ತಿಲ್ಲ. ಅಲ್ಲದೆ ಕೇರ್ ಸೆಂಟರ್ ನಲ್ಲಿ ಅಶುಚಿತ್ವ ತಾಂಡವಾಡುತ್ತಿದೆ. ಸಿಬ್ಬಂದಿ ಒರಟಾಗಿ ವರ್ತಿಸುತ್ತಾರೆ ಎಂದು ಆರೋಪಿಸಿ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

    ಎರಡನೇ ಬಾರಿ ಸ್ವ್ಯಾಬ್ ಟೆಸ್ಟ್ ಮಾಡದೆ ಡಿಸ್ಚಾರ್ಜ್ ಮಾಡಲಾಗುತ್ತಿದೆ ಎಂದು ಕೂಡ ಸೋಂಕಿತರು ಆರೋಪಿಸಿದ್ದಾರೆ.