Tag: ಕೋವಿಡ್ ಕೇರ್ ಸೆಂಟರ್

  • ಚಿಕ್ಕಬಳ್ಳಾಪುರದಲ್ಲಿ ಪೊಲೀಸರಿಗೆ ಪ್ರತ್ಯೇಕ ಕೋವಿಡ್ ಕೇರ್ ಸೆಂಟರ್

    ಚಿಕ್ಕಬಳ್ಳಾಪುರದಲ್ಲಿ ಪೊಲೀಸರಿಗೆ ಪ್ರತ್ಯೇಕ ಕೋವಿಡ್ ಕೇರ್ ಸೆಂಟರ್

    ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಪೊಲೀಸರಿಗೆ ಪ್ರತ್ಯೇಕ ಕೋವಿಡ್ ಕೇರ್ ಸೆಂಟರ್ ಆರಂಭಿಸಲಾಗಿದೆ. ಇಬ್ಬರು ಪೊಲೀಸರು ಕೊರೊನಾದಿಂದ ಮೃತಪಟ್ಟ ನಂತರ ಎಚ್ಚೆತ್ತ ಪೊಲೀಸ್ ಇಲಾಖೆ ಪ್ರತ್ಯೇಕ ಕೋವಿಡ್ ಕೇರ್ ಸೆಂಟರ್ ಆರಂಭಿಸಿದೆ.

    ನಗರ ಹೊರವಲಯದ ಜಡಲತಿಮ್ಮನಹಳ್ಳಿ ಬಳಿಯ ಸರ್ಕಾರಿ ವಸತಿ ನಿಲಯವನ್ನು ಕೋವಿಡ್ ಕೇರ್ ಸೆಂಟರ್ ಆಗಿ ಬದಲಾಯಿಸಿಲಾಗಿದೆ. ಸದ್ಯ 40 ಬೆಡ್ ಗಳ ವ್ಯವಸ್ಥೆ ಮಾಡಲಾಗಿದ್ದು, ಹೆಚ್ಚುವರಿ ಬೆಡ್ ವ್ಯವಸ್ಥೆ ಮಾಡಿಕೊಳ್ಳಬಹುದಾಗಿದೆ. ಸದ್ಯ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 25 ಕ್ಕೂ ಹೆಚ್ಚು ಮಂದಿ ಪೊಲೀಸರಿಗೆ ಕೊರೊನಾ ಸೋಂಕು ತಗುಲಿದೆ. ಪೊಲೀಸರ ಕುಟುಂಬಸ್ಥರು ಸಹ ಕೋವಿಡ್ ಕೇರ್ ಸೆಂಟರ್ ಗೆ ದಾಖಲಾಗಬಹುದಾಗಿದೆ.

    ಎಸ್‍ಪಿ ಮಿಥುನ್ ಕುಮಾರ್ ಅವರ ಕ್ರಮಕ್ಕೆ ಜಿಲ್ಲೆಯ ಪೊಲೀಸ್ ಸಿಬ್ಬಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹೋಮ್ ಐಸೋಲೇಷನ್ ನಲ್ಲಿರಲು ಸಾಧ್ಯವಿಲ್ಲದವರು ಕೊರೊನಾ ಸೋಂಕಿತ ಪೊಲೀಸರ ಕುಟುಂಬಸ್ಥರು ಈ ಸೌಲಭ್ಯ ಸದುಪಯೋಗಪಡಿಸಿಕೊಳ್ಳುವಂತೆ ಎಸ್‍ಪಿ ಮಿಥುನ್ ಕುಮಾರ್ ಮನವಿ ಮಾಡಿದ್ದಾರೆ. ಈ ಕೋವಿಡ್ ಕೇರ್ ಸೆಂಟರ್ ನಲ್ಲಿ ಪ್ರತಿದಿನ ಎರಡು ಬಾರಿ ವೈದ್ಯರು ಭೇಟಿ ನೀಡಿ ಪರಿಶೀಲನೆ ಮಾಡಲಿದ್ದಾರೆ. ದಿನದ 24 ಗಂಟೆಗಳ ಕಾಲ ಇಬ್ಬರು ದಾದಿಯರು ಸೋಂಕಿತರ ಆರೋಗ್ಯದ ಮೇಲೆ ನಿಗಾ ವಹಿಸಿಲಿದ್ದಾರೆ.

  • ಏರ್ ಫೋರ್ಸ್ ನಿಂದ 100 ಹಾಸಿಗೆಯ ಕೋವಿಡ್ ಕೇರ್ ಸೆಂಟರ್

    ಏರ್ ಫೋರ್ಸ್ ನಿಂದ 100 ಹಾಸಿಗೆಯ ಕೋವಿಡ್ ಕೇರ್ ಸೆಂಟರ್

    – ಜಾಲಹಳ್ಳಿ ವಾಯುಪಡೆ ಕೇಂದ್ರದಲ್ಲಿ ಆಸ್ಪತ್ರೆ

    ಬೆಂಗಳೂರು: ಸಾರ್ವಜನಿಕರಿಗಾಗಿ ಏರ್ ಫೋರ್ಸ್ 100 ಹಾಸಿಗೆ ಕೋವಿಡ್ ಕೇರ್ ಸೆಂಟರ್ ನಿರ್ಮಿಸಲು ನಿರ್ಧರಿಸಿದೆ.

    ಬೆಂಗಳೂರಿನ ಜಾಲಹಳ್ಳಿಯ ವಾಯುಪಡೆ ಕೇಂದ್ರದಲ್ಲಿ ಆಸ್ಪತ್ರೆ ನಿರ್ಮಿಸಲಾಗುತ್ತಿದು, ಮೇ 6ರಿಂದ ಆಕ್ಸಿಜನ್ ಸಹಿತ 20 ಬೆಡ್‍ಗಳು ಕಾರ್ಯರಂಭ ಆಗಲಿದೆ. ನಂತರ ಮೇ 20ರ ವೇಳಗೆ ಇನ್ನುಳಿದ 80 ಬೆಡ್ ಗಳನ್ನ ಸಿದ್ಧಪಡಿಸಲಾಗುವುದು ಎಂದು ವಾಯುಪಡೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ರಾಜ್ಯದಲ್ಲಿ ಕೊರೊನಾ ಸ್ಫೋಟವಾಗತ್ತಿದ್ದು, ಆಕ್ಸಿಜನ್, ಬೆಡ್ ಕೊರತೆಯಿಂದಾಗಿ ಸೋಂಕಿತರು ಆಸ್ಪತ್ರೆಗಳ ಹುಡುಕಾಟದಲ್ಲಿದ್ದಾರೆ. ಬೆಂಗಳೂರಿನಲ್ಲಿಯೂ ಆಕ್ಸಿಜನ್ ಕೊರತೆಯಿಂದ ಸೋಂಕಿತರು ಸಾವನ್ನಪ್ಪುತ್ತಿದ್ದಾರೆ. ಬೆಂಗಳೂರಿನಲ್ಲಿ ಹೆಲ್ತ್ ಎಮೆರ್ಜೆನ್ಸಿಯನ್ನ ಮನಗಂಡ ಏರ್‍ಫೋರ್ಸ್ ಸಾರ್ವಜನಿಕರ ಸಹಾಯಕ್ಕೆ ಮುಂದಾಗಿದೆ.

     

     

  • ಕೋವಿಡ್ ಕೇರ್ ಸೆಂಟರ್ ತೆರೆಯಲು ಆದಿವಾಸಿಗಳ ಅಕ್ರೋಶ

    ಕೋವಿಡ್ ಕೇರ್ ಸೆಂಟರ್ ತೆರೆಯಲು ಆದಿವಾಸಿಗಳ ಅಕ್ರೋಶ

    ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿದೆ. ಈ ನಿಟ್ಟಿನಲ್ಲಿ ಇದೀಗ ಜಿಲ್ಲೆಯ ಮೂರು ತಾಲೂಕುಗಳಲ್ಲಿ ಹೆಚ್ಚುವರಿಯಾಗಿ ಬೇಡ್ ಗಳ ವ್ಯವಸ್ಥೆ ಮಾಡಿಕೊಳ್ಳಲು ಜಿಲ್ಲಾಡಳಿತ ಮುಂದಾಗಿದೆ. ಕುಶಾಲನಗರ ಸಮೀಪದ ಬಸವನಹಳ್ಳಿಯಲ್ಲಿ ಕೊರೊನಾ ಕೇರ್ ಸೆಂಟರ್ ತೆರೆಯುವುದಕ್ಕೆ ಜಿಲ್ಲಾಡಳಿತ ಮುಂದಾಗಿದ್ದು, ಇದಕ್ಕೆ ಆದಿವಾಸಿಗಳು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

    ಜಿಲ್ಲಾಡಳಿತ ಬಸವನಹಳ್ಳಿ ಮೊರಾರ್ಜಿ ವಸತಿ ಶಾಲೆಯಲ್ಲಿ ಕೋವಿಡ್ ಸೆಂಟರ್ ತೆರೆಯಲು ಚಿಂತನೆ ನಡೆಸಿರುವ ಹಿನ್ನೆಲೆಯಲ್ಲಿ ದಿಡ್ಡಳ್ಳಿ ನಿರಾಶ್ರಿತರ ಪುನರ್ವಸತಿ ಕೇಂದ್ರದ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ಭಾಗದ ಮೊರಾರ್ಜಿ ಶಾಲೆಯ ಸುತ್ತ ಆದಿವಾಸಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಕೋವಿಡ್ ಸೆಂಟರ್ ಆರಂಭಿಸಿದರೆ ತೀವ್ರ ಅನಾನುಕೂಲ ಉಂಟಾಗಲಿದೆ ಎಂದು ರಸ್ತೆಗೆ ಕಲ್ಲುಗಳನ್ನು ಅಡ್ಡ ಹಾಕಿ ಪ್ರತಿಭಟನೆ ಮಾಡಿದ್ದಾರೆ.

    ಶಾಲೆಯ ಸುತ್ತ ಮುನ್ನೂರಕ್ಕೂ ಹೆಚ್ಚು ಕುಟುಂಬಗಳಿವೆ. ಕೋವಿಡ್ ಕೇರ್ ಸೆಂಟರ್ ತೆರೆದಲ್ಲಿ ನಮ್ಮೆಲ್ಲರಿಗೂ ಸೋಂಕು ಹರಡುವ ಸಾಧ್ಯತೆ ಇದೆ. ನಮ್ಮಲ್ಲಿ ಒಬ್ಬರಿಗೆ ಸೋಂಕು ಹರಡಿದರೆ ಎಲ್ಲರಿಗೂ ಹರಡುವುದು ಖಚಿತ. ಇಲ್ಲಿ ಕೋವಿಡ್ ಕೇರ್ ಸೆಂಟರ್ ತೆರೆಯುವ ಬದಲು ಸರ್ಕಾರವೇ ವಿಷ ಕೊಡಲಿ ಎಂದು ಆದಿವಾಸಿಗಳ ಮುಖಂಡ ಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ಸಂತೆಯಂತಾದ ಕೋವಿಡ್ ಕೇರ್ ಸೆಂಟರ್- ಒಂದೇ ಬೆಡ್‍ನಲ್ಲಿ 3, 4 ಜನ

    ಸಂತೆಯಂತಾದ ಕೋವಿಡ್ ಕೇರ್ ಸೆಂಟರ್- ಒಂದೇ ಬೆಡ್‍ನಲ್ಲಿ 3, 4 ಜನ

    ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇವೆ. ಕೋವಿಡ್ ಕೇರ್ ಸೆಂಟರ್‍ಗಳು ತುಂಬುತ್ತಿವೆ. ಜನರಲ್ಲಿ ಆತಂಕ ಸಹ ಹೆಚ್ಚುತ್ತಿದೆ. ಮಡಿಕೇರಿ ಜಿಲ್ಲಾಸ್ಪತ್ರೆಯ ಕೋವಿಡ್ ಕೇರ್ ಸೆಂಟರ್ ಸಂತೆಯಂತಾಗಿದ್ದು, ಒಂದು ಬೆಡ್‍ನಲ್ಲಿ 3, 4 ಜನ ಮಲಗುವ ಸ್ಥಿತಿ ಎದುರಾಗಿದೆ.

    ಮಡಿಕೇರಿ ಜಿಲ್ಲಾಸ್ಪತ್ರೆಯಲ್ಲಿ ವಾರ್ಡ್ ಒಂದರ ಕಥೆ ಇದಾಗಿದ್ದು, ಇದು ಒಂದು ಬೆಡ್‍ಗೆ ನಾಲ್ಕು ಸೋಂಕಿತರನ್ನು ಹಾಕಲಾಗಿದೆ. ನಾಲ್ಕು ಸೋಂಕಿತರು ಒಂದೇ ಬೆಡ್‍ನಲ್ಲಿ ಮಲಗೋದು ಹೇಗೆ ಎಂಬುವುದು ಸೋಂಕಿತರ ಪ್ರಶ್ನೆಯಾಗಿದೆ. ವೈಯಕ್ತಿಕ ಸ್ವಚ್ಛತೆ ಕಾಪಾಡಿಕೊಳ್ಳೋದು ಹೇಗೆ? ಪುಟ್ಟ ಮಕ್ಕಳಿಂದ ಹಿಡಿದು ವೃದ್ಧರು ಇದೇ ವಾರ್ಡ್ ನಲ್ಲಿ ಇದ್ದಾರೆ. ಜಿಲ್ಲಾ ಕೋವಿಡ್ ಆಸ್ಪತ್ರೆಗೆ ದಾಖಲಾದರೆ ನರಕವೇ ಫಿಕ್ಸ್ ಎನ್ನುವಂತಾಗಿದೆ ಎಂದು ಸೋಂಕಿರತರು ವೀಡಿಯೋ ಮೂಲಕ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

    ಜಿಲ್ಲೆಯಲ್ಲಿ ಇಂದು 271 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಇದೀಗ ಕೋವಿಡ್ ಅಸ್ಪತ್ರೆಯಲ್ಲೇ ಒಂದು ಬೇಡ್ ನಲ್ಲಿ ಮೂವರಿಂದ ನಾಲ್ಕು ಮಂದಿ ಮಲಗುತ್ತಿದ್ದಾರೆ. ಇನ್ನೂ ಹೆಚ್ಚು ಪ್ರಕರಣಗಳು ಪತ್ತೆಯಾದರೆ ಗತಿ ಏನು ಎಂಬ ಭಯ ಜನರಲ್ಲಿ ಕಾಡುತ್ತಿದೆ. ಸರ್ಕಾರ ಹಾಗೂ ಅರೋಗ್ಯ ಇಲಾಖೆಯ ಆಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

  • ಖಾಸಗಿ ಆಸ್ಪತ್ರೆಗಳು ಶೇ.50 ಹಾಸಿಗೆ ಸರ್ಕಾರಿ ಕೋಟಾ ಮೀಸಲಿಡಬೇಕು: ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್

    ಖಾಸಗಿ ಆಸ್ಪತ್ರೆಗಳು ಶೇ.50 ಹಾಸಿಗೆ ಸರ್ಕಾರಿ ಕೋಟಾ ಮೀಸಲಿಡಬೇಕು: ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್

    ಶಿವಮೊಗ್ಗ: ಸರ್ಕಾರದ ಆದೇಶದ ಪ್ರಕಾರ ಎಲ್ಲಾ ಖಾಸಗಿ ಆಸ್ಪತ್ರೆಗಳು ತಮ್ಮಲ್ಲಿರುವ ಶೇ.50 ರಷ್ಟು ಹಾಸಿಗೆಗಳನ್ನು ಸರ್ಕಾರಿ ಕೋಟಾದ ಅಡಿಯಲ್ಲಿ ಕಡ್ಡಾಯವಾಗಿ ಮೀಸಲಿರಿಸಬೇಕು ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಸೂಚನೆ ನೀಡಿದರು.

    ಜಿಲ್ಲಾಧಿಕಾರಿ ಕಚೇರಿಯಲ್ಲಿ ನಗರದ ಖಾಸಗಿ ಆಸ್ಪತ್ರೆಗಳ ಪ್ರತಿನಿಧಿಗಳ ಸಭೆ ನಡೆಸಿದ ಜಿಲ್ಲಾಧಿಕಾರಿ ಅವರು, ಕೋವಿಡ್ ಎರಡನೇ ಅಲೆಯನ್ನು ಎದುರಿಸಲು ಜಿಲ್ಲಾಡಳಿತ ಎಲ್ಲಾ ಸಿದ್ಧತೆಗಳನ್ನು ಮಾಡುತ್ತಿದೆ. ಕೋವಿಡ್ ಪಾಸಿಟಿವ್ ಸಂಖ್ಯೆ ಪ್ರತಿದಿನ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಖಾಸಗಿ ಆಸ್ಪತ್ರೆಗಳ ಸೌಲಭ್ಯವನ್ನು ಬಳಸಿಕೊಳ್ಳುವುದು ಅನಿವಾರ್ಯವಾಗಲಿದೆ. ಅಂತಹ ಪರಿಸ್ಥಿತಿಯನ್ನು ಎದುರಿಸಲು ಎಲ್ಲಾ ಆಸ್ಪತ್ರೆಗಳು ತಮ್ಮಲ್ಲಿನ ಜನರಲ್ ಹಾಸಿಗೆ, ಆಕ್ಸಿಜನ್ ಬೆಡ್, ಐಸಿಯು, ವೆಂಟಿಲೇಟರ್ ಸೌಲಭ್ಯ ಹೊಂದಿರುವ ಬೆಡ್‍ಗಳ ಪೈಕಿ ಶೇ.50ರಷ್ಟನ್ನು ಸರ್ಕಾರದ ಕೋಟಾದ ಅಡಿ ನೀಡಬೇಕು ಎಂದರು.

    ಒಂದು ವೇಳೆ ಈ ಬೆಡ್‍ಗಳನ್ನು ಬಳಸುವುದಿದ್ದರೆ ಜಿಲ್ಲಾಡಳಿತದಿಂದ ಕಡ್ಡಾಯವಾಗಿ ಅನುಮತಿಯನ್ನು ಪಡೆಯಬೇಕು. ಈ ನಿರ್ದೇಶನ ಉಲ್ಲಂಘಿಸುವ ಆಸ್ಪತ್ರೆಗಳ ವಿರುದ್ಧ ಈ ಬಾರಿ ಕ್ರಮ ಜರುಗಿಸುವುದು ಖಚಿತ ಎಂದು ಅವರು ಎಚ್ಚರಿಕೆ ನೀಡಿದರು. ಖಾಸಗಿ ಆಸ್ಪತ್ರೆಗಳಿಗೆ ಚಿಕಿತ್ಸಾ ವೆಚ್ಚವನ್ನು ಸರ್ಕಾರ ಈ ಹಿಂದೆಯೇ ನಿಗದಿಪಡಿಸಿದೆ. ಅದರಂತೆ ಶುಲ್ಕ ವಿಧಿಸಲು ಅವಕಾಶವಿದೆ. ಹೆಚ್ಚುವರಿ ಶುಲ್ಕ ವಿಧಿಸುವ ಕುರಿತು ದೂರುಗಳು ಬಂದರೆ ಕ್ರಮ ಕೈಗೊಳ್ಳಲಾಗುವುದು ಎಂದರು.

    ಇದಕ್ಕೂ ಮೊದಲು ಜಿಲ್ಲಾಧಿಕಾರಿ ಅವರು ಎಲ್ಲಾ ತಾಲೂಕು ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸಿ ಕೋವಿಡ್ ನಿರ್ವಹಣೆ ಕುರಿತು ಸೂಚನೆಗಳನ್ನು ನೀಡಿದರು.

    ಪ್ರಸ್ತುತ ಗಾಜನೂರಿನಲ್ಲಿ ಕೋವಿಡ್ ಕೇರ್ ಸೆಂಟರ್ ಸಜ್ಜುಗೊಳಿಸಲಾಗಿದೆ. ಎಲ್ಲಾ ತಾಲೂಕುಗಳಲ್ಲಿ ಸಹ ಕೇರ್ ಸೆಂಟರ್ ಸಿದ್ಧಪಡಿಸಿ ಇಟ್ಟುಕೊಳ್ಳಬೇಕು. ಮನೆ ಆರೈಕೆಯಲ್ಲಿ ಇರುವ ಕೋವಿಡ್ ಪಾಸಿಟಿವ್ ವ್ಯಕ್ತಿಗಳ ಮಾಹಿತಿಯನ್ನು ಪ್ರತಿದಿನ ಪಡೆಯಲು ತಾಲೂಕು ಮಟ್ಟದಲ್ಲಿ ತಂಡ ರಚಿಸಬೇಕು. ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಲು ತಾಲೂಕು ಕೇಂದ್ರಗಳಲ್ಲಿ ಕಂಟ್ರೋಲ್ ರೂಂ ಆರಂಭಿಸಬೇಕು. ಪ್ರತಿ ತಾಲೂಕಿನಲ್ಲಿ ಕನಿಷ್ಟ 50 ಆಕ್ಸಿಜನ್ ಬೆಡ್ ಸೌಲಭ್ಯ ಇರಬೇಕು. ವ್ಯಾಕ್ಸಿನೇಷನ್ ಲಭ್ಯತೆ ಬಗ್ಗೆ ಪ್ರತಿ ದಿನ ಮಾಹಿತಿ ನೀಡಬೇಕು. ಮಾಸ್ಕ್ ಧಾರಣೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಸೇರಿದಂತೆ ಮುಂಜಾಗ್ರತಾ ಕ್ರಮಗಳ ಮೇಲುಸ್ತುವಾರಿಗೆ ಪೊಲೀಸ್ ಇಲಾಖೆ ನೇತೃತ್ವದಲ್ಲಿ ನೋಡಲ್ ಅಧಿಕಾರಿ ನೇಮಕ ಮಾಡಲಾಗುವುದು. ಅಂಬುಲೆನ್ಸ್ ನಿರ್ವಹಣೆಗೆ ನೋಡಲ್ ಅಧಿಕಾರಿ ನೇಮಕ ಮಾಡಬೇಕು ಎಂದು ಹೇಳಿದರು.

    ರೂಪಾಂತರಿತ ಕರೋನಾ ಅತ್ಯಂತ ವೇಗವಾಗಿ ಹರಡುತ್ತಿದ್ದು, ಪ್ರಾಥಮಿಕ ಸೋಂಕಿತರಲ್ಲಿ ಶೇ.30ರಷ್ಟು ಮಂದಿಗೆ ಪಾಸಿಟಿವ್ ಕಂಡು ಬರುತ್ತಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಶ ಸುರಗಿಹಳ್ಳಿ ಹೇಳಿದರು.

    ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವೈಶಾಲಿ ಎಂ.ಎಲ್, ಅಪರ ಪೊಲೀಸ್ ವರಿಷ್ಟಾಧಿಕಾರಿ ಡಾ.ಶೇಖರ್ ಎಚ್.ಟಿ, ಅಪರ ಜಿಲ್ಲಾಧಿಕಾರಿ ಜಿ.ಅನುರಾಧ, ಶಿಮ್ಸ್ ನಿರ್ದೇಶಕ ಡಾ.ಸಿದ್ಧಪ್ಪ, ವಿವಿಧ ಖಾಸಗಿ ಆಸ್ಪತ್ರೆಗಳ ಪ್ರತಿನಿಧಿಗಳು, ಅಧಿಕಾರಿಗಳು ಉಪಸ್ಥಿತರಿದ್ದರು.

  • ಕೋವಿಡ್ ಸೆಂಟರ್‌ನಿಂದ ಗಾಂಜಾ ಆರೋಪಿ ಪರಾರಿ

    ಕೋವಿಡ್ ಸೆಂಟರ್‌ನಿಂದ ಗಾಂಜಾ ಆರೋಪಿ ಪರಾರಿ

    ಹುಬ್ಬಳ್ಳಿ: ಗಾಂಜಾ ಮಾರಾಟ ಪ್ರಕರಣದಲ್ಲಿ ಬಂಧಿತನಾಗಿ ಪೊಲೀಸರ ವಶದಲ್ಲಿದ್ದ ಕೊರೊನಾ ಸೊಂಕಿತ ಆರೋಪಿಯೊಬ್ಬ ಪರಾರಿಯಾದ ಘಟನೆ ನಡೆದಿದೆ.

    ನಗರದ ಗೋಪನಕೊಪ್ಪದ ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯದಲ್ಲಿದ್ದ ಆರೋಪಿ ನಂದೀಶ ಅಲಿಯಾಸ್ ಬೆಂಕಿ ಪರಾರಿಯಾಗಿದ್ದಾನೆ. ಹಳೇಹುಬ್ಬಳ್ಳಿ ಪೊಲೀಸ್ ಠಾಣೆಯ ಆರೋಪಿಗೆ ಕೋವಿಡ್ ಸೊಂಕು ದೃಡಪಟ್ಟ ಪರಿಣಾಮ ಹುಬ್ಬಳ್ಳಿಯ ಗೋಪನಕೊಪ್ಪದ ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯದಲ್ಲಿ ಇರಿಸಲಾಗಿತ್ತು. ಮೂತ್ರ ವಿಸರ್ಜನೆ ನೆಪದಲ್ಲಿ ಆರೋಪಿ ವಿದ್ಯಾರ್ಥಿ ನಿಲಯದಿಂದ ಪರಾರಿಯಾಗಿದ್ದಾನೆ ಎಂದು ಇದೀಗ ಪೊಲೀಸರೇ ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.

    ಆರೋಪಿ ನಂದೀಶ ಪರಾರಿಯಾದ ಬಗ್ಗೆ ಸಿವಿಲ್ ಪೊಲೀಸ್ ಕಾನ್‍ಸ್ಟೇಬಲ್ ರಾಮನಗೌಡ ಬಿರಾದಾರ ಅಶೋನಗರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ. ಅಲ್ಲದೆ ಪೊಲೀಸರಿಂದ ತಪ್ಪಿಸಿಕೊಂಡು ಹೋದ ಆರೋಪಿಯನ್ನು ಹುಡುಕುವ ಜವಾಬ್ದಾರಿ ಇದೀಗ ಅಶೋಕನಗರ ಠಾಣೆ ಪೊಲೀಸ್ ಸಿಬ್ಬಂದಿ ಮೇಲಿದೆ. ಪೊಲೀಸರ ಕಣ್ಣು ತಪ್ಪಿಸಿ ಪರಾರಿಯಾದ ಬಗ್ಗೆ ಅಶೋಕನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

  • ಕೋವಿಡ್ ಕೇರ್ ಸೆಂಟರಿನಲ್ಲಿ ಮದುವೆ ಸಮಾರಂಭ – ವಧುವಿಗೆ ಸರ್ಪ್ರೈಸ್

    ಕೋವಿಡ್ ಕೇರ್ ಸೆಂಟರಿನಲ್ಲಿ ಮದುವೆ ಸಮಾರಂಭ – ವಧುವಿಗೆ ಸರ್ಪ್ರೈಸ್

    – ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್
    – ಮದ್ವೆಗೆ ಒಂದು ಬಾಕಿ ಇರುವಾಗ ಕೊರೊನಾ ಪಾಸಿಟಿವ್

    ತಿರುವನಂತಪುರಂ: ಕೇರಳದ ಕೊಚ್ಚಿಯಲ್ಲಿರುವ ಕೋವಿಡ್ ಕೇರ್ ಸೆಂಟರಿನಲ್ಲಿ ಮದುವೆಯ ಸಮಾರಂಭವೊಂದು ನಡೆದಿದ್ದು, ಇದೀಗ ಆ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    19 ವರ್ಷದ ಫಾಜಿಯಾಗೆ ನಿಯಾಜ್ ಜೊತೆ ಮದುವೆ ನಿಗದಿಯಾಗಿತ್ತು. ಆದರೆ ಮದುವೆಗೆ ಒಂದು ದಿನ ಬಾಕಿ ಇರುವಾಗ ಫಾಜಿಯಾ ಕೋವಿಡ್ ಟೆಸ್ಟ್ ಮಾಡಿಸಿದ್ದು, ವರದಿಯಲ್ಲಿ ಪಾಸಿಟಿವ್ ಬಂದಿದೆ. ಹೀಗಾಗಿ ಫಾಜಿಯಾಳನ್ನು ಮಟ್ಟಂಚೇರಿಯ ಟೌನ್ ಹಾಲ್‍ನಲ್ಲಿ ಸ್ಥಾಪಿಸಲಾದ ಕೋವಿಡ್ ಕೇರ್ ಕೇಂದ್ರಕ್ಕೆ ಸೇರಿಸಲಾಗಿತ್ತು. ಇದರಿಂದ ಫಾಜಿಯಾ ಬೇಸರಗೊಂಡಿದ್ದಳು. ಆಕೆಯನ್ನು ಹುರಿದುಂಬಿಸಲು ಕೋವಿಡ್ ಆರೈಕೆ ಕೇಂದ್ರದ ಇತರೆ ಸಹವಾಸಿಗಳು ಮದುವೆ ಸಮಾರಂಭವನ್ನು ಏರ್ಪಡಿಸಿದ್ದರು.

    ಜ್ವರದಿಂದ ಬಳಲುತ್ತಿದ್ದ ಕಾರಣ ವಧು ಫಾಜಿಯಾ ಕೋವಿಡ್ ಟೆಸ್ಟ್ ಮಾಡಿಸಿದ್ದಳು. ಆದರೆ ವರದಿಯಲ್ಲಿ ಕೊರೊನಾ ಪಾಸಿಟಿವ್ ಬಂದಿತ್ತು. ನಾನು ಮದುವೆಗೆ ಉಡುಪುಗಳನ್ನು ಖರೀದಿಸಲು ಮನೆಯಿಂದ ಹೊರ ಹೋಗಿದ್ದೆ. ಆದರೆ ನನಗೆ ಕೊರೊನಾ ಪಾಸಿಟಿವ್ ಬಂದಿರುವುದು ತಿಳಿಯಿತು ಎಂದು ಫಾಜಿಯಾ ಹೇಳಿದ್ದಾಳೆ. ನಂತರ ಫಾಜಿಯಾಳನ್ನು ಕೋವಿಡ್ ಕೇರ್ ಸೆಂಟರ್‌ಗೆ ಸೇರಿಸಲಾಗಿತ್ತು. ಅವಳ ಮದುವೆಯನ್ನು ಮಸೀದಿಯಲ್ಲಿ ನಿರ್ಧರಿಸಲಾಗಿದ್ದರಿಂದ ವಧುವಿನ ಉಪಸ್ಥಿತಿಯು ಕಡ್ಡಾಯವಲ್ಲದ ಕಾರಣ ಅವರ ಕುಟುಂಬವು ಯೋಜಿಸಿದಂತೆ ಮದುವೆ ಸಮಾರಂಭವನ್ನು ಮುಂದುವರಿಸಲು ನಿರ್ಧರಿಸಿತ್ತು.

    ಇತ್ತ ಘಾಜಿಯಾ ಬೇಸರಗೊಂಡಿದ್ದಳು. ಈ ಬಗ್ಗೆ ಕೋವಿಡ್ ಸೆಂಟರಿನಲ್ಲಿದ್ದ ಸಹವಾಸಿಗಳು ತಿಳಿದುಕೊಂಡು ಆಕೆಯನ್ನು ಹುರಿದುಂಬಿಸುವ ಸಲುವಾಗಿ ಸರ್ಪ್ರೈಸ್ ಆಗಿ ಮದುವೆ ಸಮಾರಂಭವನ್ನು ಏರ್ಪಡಿಸಿದ್ದರು. ಅದರಂತೆಯೇ ಘಾಜಿಯಾ ತನ್ನ ವಿವಾಹದ ಉಡುಪನ್ನು ಧರಿಸಿ ಕೋವಿಡ್ ಆರೈಕೆ ಕೇಂದ್ರದ ಮಧ್ಯದಲ್ಲಿ ಕುಳಿತಿದ್ದಳು. ಇತರೆ ಸಹವಾಸಿಗಳು ಆಕೆಯ ಸುತ್ತಲೂ ಹಾಡಿ, ನಲಿಯುತ್ತ ಅವಳನ್ನು ಹುರಿದುಂಬಿಸಿದ್ದಾರೆ. ಇದೀಗ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ನಮ್ಮ ಆರೈಕೆ ಕೇಂದ್ರಕ್ಕೆ ಹಸ್ತಾಂತರಿಸುವಾಗ ಮರುದಿನ ಆಕೆಯ ಮದುವೆ ಇರುವ ನಗ್ಗೆ ಗೊತ್ತಾಯಿತು. ಈ ವಿಷಯವನ್ನು ಇತರ ರೋಗಿಗಳೊಂದಿಗೆ ಹಂಚಿಕೊಂಡಾಗ ಆಕೆಗೆ ಸಮಾರಂಭ ಏರ್ಪಡಿಸುವ ಬಗ್ಗೆ ಎಲ್ಲರೂ ಸಮ್ಮತಿಸಿದರು. ವಾರ್ಡ್ ಗಳಲ್ಲಿ ರೋಗಿಗಳ ಆತ್ಮಸ್ಥೈರ್ಯ ಹೆಚ್ಚಿಸುವ ಸಲುವಾಗಿ ಮನೋರಂಜನಾ ಕಾರ್ಯಕ್ರಮಗಳಿಗೆ ಅವಕಾಶ ನೀಡಲಾಗಿದೆ. ಹೀಗಾಗಿ ಎಲ್ಲ ರೋಗಿಗಳು ಸಮಾರಂಭದಲ್ಲಿ ಭಾಗವಹಿಸಿ ಸಂಭ್ರಮಿಸಿದ್ದಾರೆ ಎಂದು ಹೆಲ್ತ್ ಇನ್‍ಸ್ಪೆಕ್ಟರ್ ಕೆ. ಸುಧೀರ್ ತಿಳಿಸಿದ್ದಾರೆ.

    ಅವಳ ಮದುವೆಯನ್ನು ಮಸೀದಿಯಲ್ಲಿ ನಿರ್ಧರಿಸಲಾಗಿದ್ದರಿಂದ ವಧುವಿನ ಉಪಸ್ಥಿತಿ ಕಡ್ಡಾಯವಲ್ಲವೆಂದು ಆಕೆಯ ಸಂಬಂಧಿಕರು ತಿಳಿಸಿದ್ದರು. ಹೀಗಾಗಿ ಕೋವಿಡ್ ಸೆಂಟರಿನಲ್ಲಿ ಮದುವೆ ಸಮಾರಂಭವನ್ನು ಏರ್ಪಡಿಸಲಾಗಿತ್ತು. ಸಮಾರಂಭದ ಕೊನೆಯಲ್ಲಿ ಎಲ್ಲರೂ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಎಲ್ಲರಿಗೂ ಬಿರಿಯಾನಿ ಮತ್ತು ಸಿಹಿತಿಂಡಿಯ ವ್ಯವಸ್ಥೆಯನ್ನು ಆರೈಕೆ ಕೇಂದ್ರದ ರೋಗಿಗಳು ಏರ್ಪಡಿಸಿದ್ದರು.

    ಈ ದಿನವನ್ನು ನಾನು ನನ್ನ ಜೀವನದಲ್ಲಿ ಎಂದಿಗೂ ಮರೆಯುವುದಿಲ್ಲ. ನಾನು ದುಖಃದಲ್ಲಿದ್ದೆ. ನನ್ನನ್ನು ಖುಷಿಪಡಿಸಲು ಇವರು ಏರ್ಪಡಿಸಿದ ಸಮಾರಂಭವನ್ನು ನಾನೆಂದು ಮರೆಯಲಾರೆ ಎಂದು ಫಾಜಿಯಾ ಹೇಳಿದ್ದಾಳೆ.

  • ನೆಲಮಂಗಲ ಸಮೀಪವಿರೋ ದೇಶದ ಅತೀ ದೊಡ್ಡ ಕೋವಿಡ್ ಕೇರ್‌ಸೆಂಟರ್ ಕ್ಲೋಸ್

    ನೆಲಮಂಗಲ ಸಮೀಪವಿರೋ ದೇಶದ ಅತೀ ದೊಡ್ಡ ಕೋವಿಡ್ ಕೇರ್‌ಸೆಂಟರ್ ಕ್ಲೋಸ್

    ನೆಲಮಂಗಲ: ಕೋಟಿ ಕೋಟಿ ಖರ್ಚು ಮಾಡಿ ನಿರ್ಮಾಣ ಮಾಡಿದ್ದ ಕೋವಿಡ್ ಕೇರ್ ಸೆಂಟರ್ ಬಾಗಿಲು ಮುಚ್ಚಿದೆ. ಸುಮಾರು 10,100 ಹಾಸಿಗೆ ಎಂದು ಹೇಳಿ ಪ್ರಾರಂಭವಾಗಿದ್ದ ದೇಶದ ಅತಿದೊಡ್ಡ ಕೇರ್ ಸೆಂಟರ್ ಇದೀಗ ಖಾಲಿಯಾಗಿದೆ.

    ಬೆಂಗಳೂರು ಹೊರವಲಯ ನೆಲಮಂಗಲ ಸಮೀಪದ ಅಂತರರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ಇದೀಗ ಖಾಲಿ ಖಾಲಿ ವಾತಾವರಣ ಕಂಡಿದೆ. ದೇಶದ ಅತಿ ದೊಡ್ಡ ಕೋವಿಡ್ ಕೇರ್ ಸೆಂಟರ್ ಎಂದೇ ಬಿಂಬಿಸಿದ್ದ ಕೇರ್ ಸೆಂಟರ್ ಕೆಲವೇ ತಿಂಗಳಲ್ಲಿ ಕ್ಲೋಸ್ ಆಗಿದೆ. ಕೇರ್ ಸೆಂಟರ್ ನಲ್ಲಿ ರೋಗಿಗಳು ಇಲ್ಲ, ವೈದ್ಯರು ಇಲ್ಲ ದೇಶದ ಅತಿದೊಡ್ಡ ಕೇರ್ ಸೆಂಟರ್ ಖಾಲಿಯಾಗಿದೆ.

    ನೆಲಮಂಗಲ ಸಮೀಪದ ಮಾದವಾರದ ಬಿಐಇಸಿ ಕೋವಿಡ್ ಕೇರ್ ಸೆಂಟರ್ ಇನ್ನೂ ಕೇವಲ ಹೆಸರಿಗೆ ಮಾತ್ರವಾಗಿದೆ. ಎ ಸಿಂಪ್ಟಮ್ಸ್ ಇರೋ ಕೋವಿಡ್ ರೋಗಿಗಳ ಚಿಕಿತ್ಸೆಗೆ ತೆರೆಯಲಾಗಿದ್ದ ಅತಿದೊಡ್ಡ ಕೇರ್ ಸೆಂಟರ್ ಇದಾಗಿತ್ತು. ಇದೀಗ ಯಾರೂ ಸೆಂಟರ್‍ಗೆ ಸೋಂಕಿತರು ಬಾರದಿರೋ ಎಂಬ ನೆಪವೊಡ್ಡಿ ಕ್ಲೋಸ್ ಮಾಡಿದ್ದಾರೆ.

    ಕೋವಿಡ್ ಕೇರ್ ಸೆಂಟರ್‍ನಲ್ಲಿರೋ ವಸ್ತುಗಳನ್ನ ರಾಜ್ಯದ ವಿವಿಧ ಇಲಾಖೆಗೆ ಶಿಫ್ಟ್ ಆಗಿದ್ದು, ಈಗಾಗಲೇ ರಾಜ್ಯ ಸರ್ಕಾರದಿಂದ ಖರೀದಿ ಮಾಡಿದ್ದ ವಸ್ತುಗಳ ಸ್ಥಳಾಂತರವಾಗಿದೆ. ಇತ್ತ ಸಮಾಜಕಲ್ಯಾಣ ಇಲಾಖೆ ಹಾಸ್ಟೆಲ್, ತೋಟಗಾರಿಕೆ ವಿವಿ ಹಾಸ್ಟೆಲ್, ಜಿಕೆವಿಕೆ ಹಾಗೂ ಇತರೆ ಆಸ್ಪತ್ರೆಗೆ ಹಸ್ತಾಂತರ ಮಾಡಲಾಗಿದೆ ಎನ್ನಲಾಗಿದೆ. ಕೇರ್ ಸೆಂಟರ್ ನ ಜವಬ್ದಾರಿ ಹೊತ್ತಿದ್ದ ಬಿಬಿಎಂಪಿ ಇಂದು ಬಿಐಇಸಿಗೆ ಜಾಗ ಇಂದು ಅಧಿಕೃತವಾಗಿ ಜಾಗ ಖಾಲಿ ಮಾಡಕೊಡಲಿದೆ.

  • ಜೀವ ಹೋಗ್ತಿದೆ ಅಂದ್ರೂ ಡೋಂಟ್‍ಕೇರ್ – ಸೋಂಕಿತರಿಗೆ ಆಕ್ಸಿಜನ್ ನೀಡಲು ಆರ್ಡರ್ ಬರ್ಬೇಕಂತೆ

    ಜೀವ ಹೋಗ್ತಿದೆ ಅಂದ್ರೂ ಡೋಂಟ್‍ಕೇರ್ – ಸೋಂಕಿತರಿಗೆ ಆಕ್ಸಿಜನ್ ನೀಡಲು ಆರ್ಡರ್ ಬರ್ಬೇಕಂತೆ

    – ಕೋವಿಡ್ ಕೇರ್ ಸೆಂಟರ್ ಸಿಬ್ಬಂದಿ ಚೆಲ್ಲಾಟ

    ನೆಲಮಂಗಲ: ಬೆಂಗಳೂರಿನ ಕೋವಿಡ್ ಕೇರ್ ಸೆಂಟರ್‍ನಲ್ಲಿ ಅವ್ಯವಸ್ಥೆ ತಾಂಡವವಾಡುತ್ತಿದೆ. ಉಸಿರಾಟ ತೊಂದರೆ ಇದ್ದರೂ ಆಂಬುಲೆನ್ಸ್ ಗೆ ವಿಳಂಬ ಮಾಡಲಾಗುತ್ತಿದೆ ಎಂಬ ಆರೋಪವೊಂದು ಕೇಳಿಬಂದಿದೆ.

    ನೆಲಮಂಗಲದ ಮಾದವಾರದಲ್ಲಿರುವ ಬಿಐಇಸಿ ಕೋವಿಡ್ ಕೇರ್ ಸೆಂಟರ್‍ನಲ್ಲಿದ್ದ ಸೋಂಕಿತರಲ್ಲಿ ಉಸಿರಾಟ ತೊಂದರೆ ಕಾಣಿಸಿಕೊಂಡಿದೆ. ಆದರೆ ಸೋಂಕಿತರಿಗೆ ಕೋವಿಡ್ ಕೇರ್ ಸೆಂಟರ್‍ನಲ್ಲಿ ಆಕ್ಸಿಜನ್ ವ್ಯವಸ್ಥೆ ಇಲ್ಲ. ಗಂಟೆಗಟ್ಟಲೇ ಕಾದರೂ ಸ್ಥಳಕ್ಕೆ ಅಂಬುಲೆನ್ಸ್ ಬರಲಿಲ್ಲ. ಅಲ್ಲದೆ ಉಸಿರು ಹೋಗ್ತಿದೆ ಅಂದರೂ ಇಲ್ಲಿ ಡೋಂಟ್ ಕೇರ್ ಎಂದಿದ್ದಾರೆ. ಉಸಿರಾಡಲು ಆಗ್ತಿಲ್ಲ ಅಂತ ಗೋಗರೆದರೂ ಸಿಬ್ಬಂದಿ ಮಾತ್ರ ಫೋನ್‍ನಲ್ಲಿ ಫುಲ್ ಬ್ಯುಸಿಯಾಗಿದ್ದಾರೆ.

    ಇನ್ನು ಅಂಬುಲೆನ್ಸ್ ಬಂದರೂ ಬಿಬಿಎಂಪಿ ಅಧಿಕಾರಿಗಳು ಆಕ್ಸಿಜನ್ ವ್ಯವಸ್ಥೆ ನೀಡಿಲ್ಲ. ಈ ಮೂಲಕ ಕೊರೊನಾ ಸೋಂಕಿತರಿಗೆ ಇಲ್ಲ ಆಕ್ಸಿಜನ್ ವ್ಯವಸ್ಥೆ ಸಿಗುತ್ತಿಲ್ಲ. ಎಲ್ಲಾ ವ್ಯವಸ್ಥೆ ನೀಡುವ ಭರವಸೆಯನ್ನು ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿ ಅಧಿಕಾರಿಗಳು ನೀಡಿದ್ದರು. ಆದರೆ ಗಂಟೆಗಟ್ಟಲೆ ಕಾದರೂ ಆಕ್ಸಿಜನ್ ವ್ಯವಸ್ಥೆ ನೀಡಿಲ್ಲ.

    ಪಬ್ಲಿಕ್ ಟಿವಿಗೆ ವಿಡಿಯೋ ಮಾಡಿ ರಕ್ಷಣೆಗೆ ನಿಲ್ಲುವಂತೆ ರಾಜ್ಯ ಸರ್ಕಾರದ ವಿರುದ್ಧ ಸೋಂಕಿತರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಂಬುಲೆನ್ಸ್ ಇದ್ದರೂ ಆಸ್ಪತ್ರೆಗೆ ದಾಖಲಿಸುವಲ್ಲಿ ವಿಳಂಬ ಮಾಡುತ್ತಿದ್ದಾರೆ ಎಂದು ಸೋಂಕಿತರು ಆರೋಪಿಸಿದ್ದಾರೆ.

    ಆಕ್ಸಿಜನ್ ಸಮಸ್ಯೆ ಇದ್ರೆ ಅಧಿಕಾರಿಗಳು ಬರಬೇಕು. ಅವರು ಹೇಳಿದರೆ ಮಾತ್ರ ನಾವು ಸಿದ್ಧ ಎಂದು ಸಿಬ್ಬಂದಿ ಹೇಳಿದ್ದಾರೆ. ಹಾಗಾದರೆ ರೋಗಿಯ ಜೀವಕಿಂತ ಅಧಿಕಾರಿಗಳ ಆದೇಶ ಮುಖ್ಯನಾ?. ರೋಗಿಯ ಜೀವ ಉಳಿಸಲು ಅಧಿಕಾರಿಗಳ ಆದೇಶ ಮುಖ್ಯವಾಯಿತಾ ಎಂದು ಸಾರ್ವಜನಿಕರು ಕಿಡಿಕಾರುತ್ತಿದ್ದಾರೆ.

  • ಸೋಂಕಿತರ ಮಾನಸಿಕ, ದೈಹಿಕ ಸದೃಢತೆಗೆ ಯೋಗ ಕ್ಲಾಸ್: ಸಿಂಧನೂರಿನಲ್ಲಿ ಹೊಸ ಪ್ರಯತ್ನ

    ಸೋಂಕಿತರ ಮಾನಸಿಕ, ದೈಹಿಕ ಸದೃಢತೆಗೆ ಯೋಗ ಕ್ಲಾಸ್: ಸಿಂಧನೂರಿನಲ್ಲಿ ಹೊಸ ಪ್ರಯತ್ನ

    ರಾಯಚೂರು: ಕೋವಿಡ್ ಕೇರ್ ಸೆಂಟರ್ ಅಂದ್ರೆ ಅವ್ಯವಸ್ಥೆಗಳ ಆಗರ ಅನ್ನೋದಕ್ಕೆ ಸಾಕಷ್ಟು ಉದಾಹರಣೆಗಳು ಇವೆ. ಆದರೆ ರಾಯಚೂರಿನ ಸಿಂಧನೂರು ನಗರದ ಕೋವಿಡ್ ಕೇರ್ ಸೆಂಟರ್ ಇದಕ್ಕೆ ಅಪವಾದ ಎಂಬಂತೆ ಉತ್ತಮ ಸೇವೆ ನೀಡುತ್ತಿದೆ. ಕೇಂದ್ರದಲ್ಲಿರುವ ಸೋಂಕಿತರ ಮಾನಸಿಕ ಹಾಗೂ ದೈಹಿಕ ಆರೋಗ್ಯ ಸದೃಢತೆಗಾಗಿ ಪ್ರತೀ ದಿನ ಯೋಗ ತರಬೇತಿ ನೀಡಲಾಗುತ್ತಿದೆ.

    ಅಂತಾರಾಷ್ಟ್ರೀಯ ಮಟ್ಟದಲ್ಲಿ ಯೋಗ ತರಬೇತಿಗಳನ್ನ ನೀಡಿರುವ ಸಿಂಧನೂರು ಮೂಲದ ಯೋಗಗುರು ಮಲ್ಲಣ್ಣ ಸೋಂಕಿತರಿಗೆ ಯೋಗ ಕಲಿಸುತ್ತಿದ್ದಾರೆ. ಕೋವಿಡ್ ಕೇರ್ ಸೆಂಟರ್ ನಲ್ಲಿ 72 ಜನರಿದ್ದು ಎಲ್ಲಿರಗೂ ಬೆಳಗ್ಗೆ 6:30ಕ್ಕೆ ಯೋಗ ಹೇಳಿ ಕೊಡಲಾಗುತ್ತಿದೆ.

    ತರಬೇತಿ ಜೊತೆ ಊಟ, ಸ್ವಚ್ಛತೆಗೆ ಯಾವುದೇ ಕೊರತೆ ಉಂಟಾಗದಂತೆ ನೋಡಿಕೊಳ್ಳಲಾಗುತ್ತಿದೆ. ಇಲ್ಲಿರುವವರ ಮನೋರಂಜನೆಗೂ ವ್ಯವಸ್ಥೆ ಮಾಡಲಾಗಿದೆ. ಹೀಗಾಗಿ ಇಲ್ಲಿ ದಾಖಲಾಗಿರುವ ಸೋಂಕಿತರು ಯಾವುದೇ ಭೀತಿಯಿಲ್ಲದೆ ತಮ್ಮ ಕ್ವಾರಂಟೈನ್ ಅವಧಿ ಕಳೆಯುತ್ತಿದ್ದಾರೆ.