Tag: ಕೋವಿಡ್ ಕೇರ್ ಸೆಂಟರ್

  • ಮಹದೇವಪುರದ ವಿವಿಧೆಡೆ ವಾರ್ ರೂಮ್, ಕೋವಿಡ್ ಕೇರ್ ಸೆಂಟರ್ ಉದ್ಘಾಟಿಸಿದ ಅರವಿಂದ ಲಿಂಬಾವಳಿ

    ಮಹದೇವಪುರದ ವಿವಿಧೆಡೆ ವಾರ್ ರೂಮ್, ಕೋವಿಡ್ ಕೇರ್ ಸೆಂಟರ್ ಉದ್ಘಾಟಿಸಿದ ಅರವಿಂದ ಲಿಂಬಾವಳಿ

    ಬೆಂಗಳೂರು: ಮಹದೇವಪುರ ವಲಯದ ವಿವಿಧ ಭಾಗಗಳಲ್ಲಿ ಕೋವಿಡ್ ಕೇರ್ ಸೆಂಟರ್ ಮತ್ತು ಟ್ರಯಾಜಿಂಗ್ ಕೇಂದ್ರಗಳನ್ನು ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ಉದ್ಘಾಟಿಸಿದರು.

    ಈ ವೇಳೆ ಮಾತನಾಡಿದ ಅವರು, ಕೋವಿಡ್ ಸೋಂಕಿತರು ಪಾಸಿಟಿವ್ ಬಂದಿದ್ದರೂ ಹೊರಗೆ ತಿರುಗಾಡುತ್ತಿರುವುದು ಗಮನಕ್ಕೆ ಬಂದಿದೆ. ಸೋಂಕಿತರು ಮನೆಯೊಳಗೆ ಇರಬೇಕು, ಹೊರಗೆ ತಿರುಗುವುದರಿಂದ ಇತರರಿಗೂ ಸೋಂಕು ಹಬ್ಬುವ ಅಪಾಯವಿದೆ. ಇದನ್ನು ಅರ್ಥ ಮಾಡಿಕೊಳ್ಳಬೇಕು. ಹೊರಗೆ ಸುತ್ತುತ್ತಿರುವ ಸೋಂಕಿತರನ್ನು ಪತ್ತೆ ಮಾಡಲು ಪೊಲೀಸರ ನೆರವು ಪಡೆಯಲಾಗುವುದು ಎಂದು ತಿಳಿಸಿದರು.

    ಒಂದೇ ಶೌಚಾಲಯ ಇರುವ ಮನೆಗಳಲ್ಲಿ ಸೋಂಕಿತರು ಹೋಮ್ ಐಸೋಲೇಷನ್ ನಲ್ಲಿ ಇರುವುದು ಕಷ್ಟ, ಅಂತಹವರಿಗೆ ಕೋವಿಡ್ ಕೇರ್ ಸೆಂಟರ್ ನಲ್ಲಿ ಸೌಲಭ್ಯ ಕಲ್ಪಿಸಲಾಗಿದೆ. ಸೋಂಕಿತರು ಟ್ರೈಯಾಜಿಂಗ್ ಕೇಂದ್ರಕ್ಕೆ ಬಂದ ನಂತರ ಪರಿಶೀಲನೆ ಮಾಡಿ, ವೈದ್ಯಕೀಯ ಚಿಕಿತ್ಸೆಗೆ ಅನುಗುಣವಾಗಿ ಆಸ್ಪತ್ರೆ ಅಥವಾ ಕೋವಿಡ್ ಕೇರ್ ಸೆಂಟರ್ ಗೆ ಸೇರಿಸಲಾಗುವುದು ಎಂದರು.

    ಮೊದಲು ಹಾಲನಾಯಕನಹಳ್ಳಿ ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ ಕೋವಿಡ್ ವಾರ್ ರೂಮ್ ಉದ್ಘಾಟನೆ ಮಾಡಲಾಯಿತು, ನಂತರ ಹಾಡೋಸಿದ್ದಾಪುರದ ಐವಿರೋಜ್ ರೆಸಾರ್, ಟ್ರೈಯಾಜ್ ಸೆಂಟರ್ ಹಾಗೂ ಕೋವಿಡ್ ಕೇರ್ ಸೆಂಟರ್ ಉದ್ಘಾಟನೆ ಮಾಡಲಾಯಿತು. ಮಂಡೂರು ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ ಕೋವಿಡ್ ವಾರ್ ರೂಮ್, ಬಿದರಹಳ್ಳಿ ಈಸ್ಟ್ ಪಾಯಿಂಟ್ ಮೆಡಿಕಲ್ ಕಾಲೇಜು ಹತ್ತಿರ ಟ್ರೈಯಾಜ್ ಸೆಂಟರ್ ಹಾಗೂ ಕೋವಿಡ್ ಕೇರ್ ಸೆಂಟರ್ ಉದ್ಘಾಟನೆ ಮಾಡಲಾಯಿತು.

  • ಪ್ರತಿ ಜಿಲ್ಲೆಯಲ್ಲೂ ಚಿಕ್ಕ ಮಕ್ಕಳ ಕೋವಿಡ್ ಕೇರ್ ಸ್ಥಾಪನೆಗೆ ನಿರ್ಧಾರ: ಶಶಿಕಲಾ ಜೊಲ್ಲೆ

    ಪ್ರತಿ ಜಿಲ್ಲೆಯಲ್ಲೂ ಚಿಕ್ಕ ಮಕ್ಕಳ ಕೋವಿಡ್ ಕೇರ್ ಸ್ಥಾಪನೆಗೆ ನಿರ್ಧಾರ: ಶಶಿಕಲಾ ಜೊಲ್ಲೆ

    – ಇನ್ನೂ ಒಂದು ವಾರಗಳ ಕಾಲ ಕಠಿಣ ಲಾಕ್ ಡೌನ್ ಮಾಡಬೇಕು

    ಚಿಕ್ಕೋಡಿ: ಕೊರೊನಾ ಎರಡನೇ ಅಲೆಯ ನಡುವೆ ಚಿಕ್ಕ ಮಕ್ಕಳಿಗೂ ಮಹಾಮಾರಿ ಹಬ್ಬುವ ಭೀತಿ ಹಿನ್ನೆಲೆಯಲ್ಲಿ ರಾಜ್ಯದ 30 ಜಿಲ್ಲೆಗಳಲ್ಲೂ ಮಕ್ಕಳಿಗೆ ಕೋವಿಡ್ ಕೇರ್ ಸೆಂಟರ್ ತೆರೆಯಲು ನಿರ್ಧರಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಹೇಳಿದ್ದಾರೆ.

    ಚಿಕ್ಕೋಡಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೂರನೇ ಅಲೆಯಲ್ಲಿ ಮಕ್ಕಳಿಗೆ ಕೊರೊನಾ ಹರಡಬಹುದು ಎಂಬ ತಾಂತ್ರಿಕ ಸಲಹಾ ಸಮಿತಿ ವರದಿ ನೀಡಿದೆ. ಹೀಗಾಗಿ ಮಕ್ಕಳ ಕೊವಿಡ್ ಕೇರ್ ಸೆಂಟರ್ ನಿರ್ಮಾಣಕ್ಕಾಗಿ ಮೊರಾರ್ಜಿ ದೇಸಾಯಿ ಹಾಗೂ ಕಿತ್ತೂರು ಚೆನ್ನಮ್ಮ ಶಾಲೆಗಳನ್ನು ಗುರುತಿಸಲಾಗಿದೆ. ನಮ್ಮ ಇಲಾಖೆಯ ವಿಶೇಷ ಮಕ್ಕಳ ಶಾಲೆಯಲ್ಲಿ ಕೋವಿಡ್ ಕೇರ್ ಸೆಂಟರ್ ಮಾಡಲು ನಿರ್ಧರಿಸಲಾಗಿದೆ. ಸರ್ಕಾರದ ವತಿಯಿಂದ ಈಗಾಗಲೇ ಅಧಿಕಾರಿ ಮೋಹನರಾಜ್ ಅವರನ್ನು ನೋಡಲ್ ಅಧಿಕಾರಿಯಾಗಿ ಸಹ ಈ ಕಾರ್ಯಕ್ಕೆ ನೇಮಿಸಲಾಗಿದೆ ಎಂದರು.

    ಮಂಡ್ಯ ಮತ್ತು ಚಾಮರಾಜನಗರದಲ್ಲಿ ತಂದೆ ತಾಯಿಗೆ ಪಾಸಿಟಿವ್ ಬಂದು ತೀರಿ ಹೋಗಿದ್ದಾರೆ. ತಂದೆ ತಾಯಿಯನ್ನು ಕಳೆದುಕೊಂಡ ಮಕ್ಕಳು ಅನಾಥರಾಗಿದ್ದಾರೆ. ಈ ಇಬ್ಬರೂ ಮಕ್ಕಳ ಮುಂದಿನ ಭವಿಷ್ಯದ ಹಿತದೃಷ್ಟಿಯಿಂದ ಏನು ಮಾಡಬೇಕು ಎಂದು ಸರ್ಕಾರದ ಮಟ್ಟದಲ್ಲಿ ಚಿಂತನೆ ನಡೆದಿದೆ. ಆ ಮಕ್ಕಳ ಪಾಲನೆ ಪೋಷಣೆ ಮಾಡುವ ನಿಟ್ಟಿನಲ್ಲಿ ಸರ್ಕಾರದಿಂದ ಎಲ್ಲ ಸೌಕರ್ಯ ಮಾಡಲಾಗುವುದು. ಶಾಶ್ವತಗಾಗಿ ಆ ಮಕ್ಕಳಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ನಾನು ಸಹ ಮುಖ್ಯಮಂತ್ರಿಗಳ ಬಳಿ ಮಾತನಾಡಿದ್ದೇನೆ. ಇದಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದನೆಯನ್ನ ನೀಡಿದ್ದಾರೆ ಎಂದು ಹೇಳಿದರು.

    ಆ ಮಕ್ಕಳನ್ನ ನೋಡಲು ಯಾರಾದರೂ ಮುಂದೆ ಬಂದರೆ ಸರ್ಕಾರದ ವತಿಯಿಂದ ಅವರಿಗೆ ನಾವು ಎಲ್ಲ ನೆರವು ನೀಡುತ್ತೇವೆ ಎಂದ ಅವರು ಮಕ್ಕಳ ದತ್ತು ವಿಚಾರದಲ್ಲಿ ವಾಟ್ಸಪ್ ಮತ್ತು ಫೇಸ್ಬುಕ್ ನಲ್ಲಿ ಕೆಲವು ಫೇಕ್ ಸುದ್ದಿಗಳು ಹರಿದಾಡುತ್ತಿವೆ. ಮಕ್ಕಳ ದತ್ತು ವಿಚಾರವಾಗಿ ಕೆಲವು ಫೇಕ್ ನಂಬರ್ ಹರಿಬಿಡಲಾಗಿದೆ. ಅಂಥ ನಂಬರ್‍ಗಳಿಗೆ ಕರೆ ಮಾಡಿ ಯಾರೂ ಸಹ ಮೋಸ ಹೋಗಬಾರದು. ಇಲಾಖೆಯ ಅಧಿಕೃತ ಹೆಲ್ಪ್ ಲೈನ್ 1098 ಗೆ ಕರೆ ಮಾಡಿ ಹೇಳಿ ಎಂದು ಮನವಿ ಮಾಡಿಕೊಂಡಿದ್ದಾರೆ. ಅಲ್ಲದೇ ಇನ್ನೂ ಒಂದು ವಾರಗಳ ಕಾಲ ಕಠಿಣ ಲಾಕ್ ಡೌನ್ ಜಾರಿ ಮಾಡಬೇಕಿದೆ ಎಂದು ಸಚಿವೆ ಶಶಿಕಲಾ ಜೊಲ್ಲೆಯವರು ಒತ್ತಾಯಿಸಿದ್ದಾರೆ.

  • ಬೆಂಗಳೂರಿನ ಎಎಸ್‍ಸಿ ಕೇಂದ್ರದಲ್ಲಿ ಕೋವಿಡ್ ಕೇರ್ ಸೆಂಟರ್- ಸೇನಾಧಿಕಾರಿಗಳ ಜೊತೆ ಡಿಸಿಎಂ ಚರ್ಚೆ

    ಬೆಂಗಳೂರಿನ ಎಎಸ್‍ಸಿ ಕೇಂದ್ರದಲ್ಲಿ ಕೋವಿಡ್ ಕೇರ್ ಸೆಂಟರ್- ಸೇನಾಧಿಕಾರಿಗಳ ಜೊತೆ ಡಿಸಿಎಂ ಚರ್ಚೆ

    ಬೆಂಗಳೂರು: ನಗರದ ಹಳೆ ವಿಮಾನ ನಿಲ್ದಾಣ ರಸ್ತೆಯ ಕಮಾಂಡ್ ಆಸ್ಪತ್ರೆ ಬಳಿ ಇರುವ ಸೇನೆಗೆ ಸೇರಿದ ಎಎಸ್‍ಸಿ ಕೇಂದ್ರ ಮತ್ತು ಕಾಲೇಜಿನಲ್ಲಿ ಕೋವಿಡ್ ಕೇರ್ ಸೆಂಟರ್ ಸ್ಥಾಪನೆ ಬಗ್ಗೆ ರಾಜ್ಯ ಕೋವಿಡ್ ಕಾರ್ಯಪಡೆ ಅಧ್ಯಕ್ಷರೂ ಆದ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್ ನಾರಾಯಣ್ ಸೇನಾಧಿಕಾರಿಗಳ ಜೊತೆ ಮಾತುಕತೆ ನಡೆಸಿದರು.

    ಮಂಗಳವಾರ ಎಎಸ್‍ಸಿ ಕಮಾಂಡರ್ ಲೆಫ್ಟಿನೆಂಟ್ ಬಿ.ಕೆ.ರೆಸ್‍ಪಾಸ್ ವಾಲ್ ಅವರ ಜೊತೆ ಚರ್ಚಿಸಿದ ಡಿಸಿಎಂ, ಎಎಸ್‍ಸಿ ಸೆಂಟರ್‍ನಲ್ಲಿ ಕನಿಷ್ಠ 500 ಬೆಡ್‍ಗಳ ಕೋವಿಡ್ ಕೇಂದ್ರ ಸ್ಥಾಪನೆಯ ಪ್ರಸ್ತಾವನೆಯನ್ನು ಮುಂದಿಟ್ಟಿದ್ದಾರೆ. ಈ ಕೋವಿಡ್ ಕೇರ್‍ಗೆ ಅಗತ್ಯ ಮೂಲಸೌಕರ್ಯವನ್ನು ಸರ್ಕಾರ ಒದಗಿಸಲಿದೆ. ಸೇನೆ ವತಿಯಿಂದ ವೈದ್ಯರು, ಸಿಬ್ಬಂದಿ ಮತ್ತು ಅರೆವೈದ್ಯ ಸಿಬ್ಬಂದಿಯನ್ನು ಒದಗಿಸುವಂತೆ ಕೋರಿದರು.

    ಎರಡನೇ ಮತ್ತು ಮೂರನೇ ಅಲೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ಕೇಂದ್ರದಲ್ಲಿ ಕೋವಿಡ್ ಕೇರ್ ಸೆಂಟರ್ ಸ್ಥಾಪನೆಗೆ ಅವಕಾಶ ನೀಡಬೇಕು. ವಿವಿಧ ಹಂತಗಳಲ್ಲಿ ಇಲ್ಲಿ ಮೂಲಸೌಕರ್ಯವನ್ನು ಹೆಚ್ಚಿಸಬಹುದು ಎಂದರು.

    ಇದಕ್ಕೆ ಬಿ.ಕೆ.ರೆಸ್‍ಪಾಸ್ ವಾಲ್ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಕೋವಿಡ್ ವಿರುದ್ಧ ಸರ್ಕಾರ ನಡೆಸುತ್ತಿರುವ ಹೋರಾಟಕ್ಕೆ ಸೇನೆಯೂ ಹೆಗಲು ಕೊಡುವ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಎಎಸ್‍ಸಿ ಕೇಂದ್ರದಲ್ಲಿ ಕೋವಿಡ್ ಚಿಕಿತ್ಸೆಗೆ ಮಾಡಿಕೊಂಡಿರುವ ಸಿದ್ಧತೆಗಳ ಬಗ್ಗೆ ಲೆಫ್ಟಿನೆಂಟ್ ಬಿ.ಕೆ.ರೆಸ್‍ಪಾಸ್ ವಾಲ್ ಅವರು ಡಿಸಿಎಂ ಅವರಿಗೆ ಮಾಹಿತಿ ನೀಡಿ, ಸೌಲಭ್ಯಗಳನ್ನು ಸಹ ತೋರಿಸಿದರು.

    ಈ ಸಂದರ್ಭದಲ್ಲಿ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ, ಡಿಸಿಎಂ ಕಾರ್ಯದರ್ಶಿ ಪ್ರದೀಪ್ ಪ್ರಭಾಕರ್, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‍ನ ರಾಜ್ಯ ಸರ್ಕಾರದ ಸಲಹೆಗಾರ ಜಿ.ಎಂ.ಬಾಬು ಹಾಗೂ ಇತರರು ಇದ್ದರು.

  • ಸರ್ಕಾರಿ ಕೇರ್ ಸೆಂಟರ್‌ಗೆ 50 ಲಕ್ಷ ಸ್ವಂತ ಹಣದಿಂದ ಆಕ್ಸಿಜನ್ ಕಾನ್ಸಂಟ್ರೇಟ್ ಯಂತ್ರ ನೀಡಿದ ಸವದಿ

    ಸರ್ಕಾರಿ ಕೇರ್ ಸೆಂಟರ್‌ಗೆ 50 ಲಕ್ಷ ಸ್ವಂತ ಹಣದಿಂದ ಆಕ್ಸಿಜನ್ ಕಾನ್ಸಂಟ್ರೇಟ್ ಯಂತ್ರ ನೀಡಿದ ಸವದಿ

    ಚಿಕ್ಕೋಡಿ/ಬೆಳಗಾವಿ: ಸರ್ಕಾರಿ ಕೋವಿಡ್ ಕೇರ್ ಸೆಂಟರ್ ಗೆ 50 ಲಕ್ಷ ರೂ. ಮೌಲ್ಯದ 50 ಆಕ್ಸಿಜನ್ ಕಾನ್ಸಂಟ್ರೇಟ್ ಯಂತ್ರಗಳನ್ನು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ತಮ್ಮ ಸ್ವಂತ ಹಣದಿಂದ ನೀಡಿದ್ದಾರೆ.

    ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ಹೊರವಲಯದಲದಲ್ಲಿ ತಾಲೂಕಾಡಳಿತ ನಿರ್ಮಿಸಿರುವ ಕೊವಿಡ್ ಕೇರ್ ಸೆಂಟರ್ ಗೆ 50 ಲಕ್ಷ ರೂ. ಮೌಲ್ಯದ ಆಕ್ಸಿಜನ್ ಕಾನ್ಸಂಟ್ರೇಟ್ ಯಂತ್ರಗಳು ಹಾಗೂ ಸಲಕರಣೆಗಳನ್ನು ನೀಡಿದ್ದಾರೆ. ತಲಾ 85 ಸಾವಿರ ರೂ.ಗಳ 50 ಆಕ್ಸಿಜನ್ ಕಾನ್ಸಂಟ್ರೇಟ್ ಯಂತ್ರಗಳನ್ನು ಅಥಣಿ ತಾಲೂಕು ದಂಡಾಧಿಕಾರಿ ದುಂಡಪ್ಪ ಕೋಮಾರ ಮೂಲಕ ಹಸ್ತಾಂತರಿಸಿದ್ದಾರೆ.

    ಲಕ್ಷ್ಮಣ ಸವದಿ ಅವರು ತಂದೆ, ತಾಯಿ ಹೆಸರಿನಲ್ಲಿರುವ ಸತ್ಯ ಸಂಗಮ ಪ್ರತಿಷ್ಠಾನದ ಮೂಲಕ ಈ ಆಕ್ಸಿಜನ್ ಕಾನ್ಸಂಟ್ರೇಟ್ ಯಂತ್ರಗಳನ್ನು ನೀಡಿದ್ದಾರೆ. ಈ ಮೂಲಕ ಬಡ ಜನರ ಕಷ್ಟಕ್ಕೆ ಸ್ಪಂದಿಸಿದ್ದಾರೆ. ಕೋವಿಡ್ ಕೇರ್ ಆಸ್ಪತ್ರೆಗೆ ಡಿಸಿಎಂ ಲಕ್ಷ್ಮಣ ಸವದಿ ಚಾಲನೆ ನೀಡಿದರು. ಕೋವಿಡ್ ನಿಂದ ಸಾವನ್ನಪ್ಪಿದ ಅವರ ಸಹೋದರ ಹಾಗೂ ಸಹೋದರನ ಪುತ್ರನನ್ನು ನೆನೆದು ಭಾವುಕರಾದರು. ಕೋವಿಡ್ ಕೇರ್ ಉದ್ಘಾಟನಾ ಸಮಾರಂಭದಲ್ಲಿ ಡಿಸಿಎಂ ಪುತ್ರ ಚಿದಾನಂದ ಸವದಿ, ತಾಲೂಕು ಆರೋಗ್ಯಾಧಿಕಾರಿ ಬಸವರಾಜ್ ಕಾಗೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.

  • ಬಸವರಾಜ ಬೊಮ್ಮಾಯಿ ಮನೆಯ ಆವರಣದಲ್ಲಿ ಕೋವಿಡ್ ಕೇರ್ ಸೆಂಟರ್

    ಬಸವರಾಜ ಬೊಮ್ಮಾಯಿ ಮನೆಯ ಆವರಣದಲ್ಲಿ ಕೋವಿಡ್ ಕೇರ್ ಸೆಂಟರ್

    ಹಾವೇರಿ: ಜಿಲ್ಲೆಯಲ್ಲಿ ಕೊರೊನಾ ಅರ್ಭಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸೋಂಕಿತರ ಸಂಖ್ಯೆಯೂ ಸಹ ಹೆಚ್ಚಾಗುತ್ತಿವೆ. ಆದರೆ ಹಾವೇರಿ ಜಿಲ್ಲೆ ಶಿಗ್ಗಾಂವಿಯಲ್ಲಿ ಜಿಲ್ಲಾಉಸ್ತುವಾರಿ ಬಸವರಾಜ ಬೊಮ್ಮಾಯಿ ಮನೆಯ ಆವರಣದಲ್ಲಿ ಕೋವಿಡ್ ಕೇರ್ ಸೆಂಟರ್ ಸ್ಥಾಪಿಸಿ 50 ಹಾಸಿಗೆಗಳ ವ್ಯವಸ್ಥೆ ಮಾಡಿದ್ದಾರೆ.

    ಉಸಿರಾಟದ ಸಮಸ್ಯೆಯಿಂದ ಬಳಲುವ ಕೋವಿಡ್ ಸೋಂಕಿತರ ಪ್ರಾಣ ಕಾಪಾಡುವ 25 ಆಕ್ಸಿಜನ್ ಕನ್ಸೆಂಟ್ರೇಟರ್‌ಗಳನ್ನು ಶಿಗ್ಗಾಂವಿ ಸಾರ್ವಜನಿಕ ಆಸ್ಪತ್ರೆಗೆ ಬಸವರಾಜ್ ಬೊಮ್ಮಾಯಿ ಹಸ್ತಾಂತರಿಸಿದ್ದಾರೆ.

    ತಮ್ಮ ಕ್ಷೇತ್ರದಲ್ಲಿ ಕೋವಿಡ್ ಸ್ಥಿತಿಗತಿ ಮತ್ತು ತಾಲೂಕು ಆಸ್ಪತ್ರೆಯಲ್ಲಿ ಮಾಡಲಾದ ವ್ಯವಸ್ಥೆಗಳ ಕುರಿತು ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಅವರು ಆಕ್ಸಿಜನ್ ಕನ್ಸೆಂಟ್ರೇಟರ್‌ಗಳನ್ನು ಶಿಗ್ಗಾಂವಿ ತಾಲೂಕು ವೈದ್ಯಾಧಿಕಾರಿಗಳಿಗೆ ಹಸ್ತಾಂತರಿಸಿದ್ದಾರೆ. ಉಸಿರಾಟದ ಸಮಸ್ಯೆ ಆಗುತ್ತಿದ್ದಂತೆಯೇ ರೋಗಿಯ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಉಂಟಾಗಲು ಆರಂಭವಾಗುತ್ತದೆ. ಆದ್ದರಿಂದ ಅಂಥವರಿಗೆ ತಕ್ಷಣ ಆಕ್ಸಿಜನ್ ನೀಡಬೇಕಾದ ಅಗತ್ಯ ಎದುರಾಗುತ್ತದೆ. ಅಂಥವರಿಗಾಗಿಯೇ ಆಕ್ಸಿಜನ್ ಕನ್ಸೆಂಟ್ರೇಟರ್‌ಗಳನ್ನು ವಿತರಿಸಲಾಗುತ್ತಿದೆ. ವೈದ್ಯರು ಸಮಯೋಚಿತವಾಗಿ ಸೋಂಕಿತರಿಗೆ ಆಕ್ಸಿಜನ್ ನೀಡುವ ಮೂಲಕ ಅವರ ಜೀವ ರಕ್ಷಣೆ ಮಾಡುವಂತೆ ವೈದ್ಯಾಧಿಕಾರಿಗಳಿಗೆ ಸಚಿವ ಬಸವರಾಜ ಬೊಮ್ಮಾಯಿ ಸೂಚನೆ ನೀಡಿದ್ದಾರೆ.

    ಈ ಸಂದರ್ಭದಲ್ಲಿ ಸವಣೂರಿನ ವೈದ್ಯಾಧಿಕಾರಿಗಳಾದ ಹಿರೇಗೌಡರ, ರಾಜಶೇಖರ ಮೂಲಿಮನಿ ಉಪಸ್ಥಿತರಾಗಿದ್ದರು. ಜಿಲ್ಲಾ ಪಂಚಾಯತಿಯ ಸಿ.ಇ.ಓ ಮಹ್ಮದ್ ರೋಷನ್, ಉಪವಿಭಾಗಾಧಿಕಾರಿ ಅನ್ನಪೂರ್ಣ ಮುದುಕಮ್ಮನವರ, ಸೇರಿದಂತೆ ಶಿಗ್ಗಾಂವ- ಸವಣೂರಿನ ತಹಶೀಲ್ದಾರರು ಸಚಿವರ ಜೊತೆಗಿದ್ದರು.

  • ನಿರೀಕ್ಷೆಗೂ ಮೀರಿ ಕೇಸ್‍ಗಳು ಬರ್ತಿವೆ, ನಾವೇನು ಮಾಡೋಕೆ ಆಗುತ್ತೆ : ಈಶ್ವರಪ್ಪ

    ನಿರೀಕ್ಷೆಗೂ ಮೀರಿ ಕೇಸ್‍ಗಳು ಬರ್ತಿವೆ, ನಾವೇನು ಮಾಡೋಕೆ ಆಗುತ್ತೆ : ಈಶ್ವರಪ್ಪ

    ಶಿವಮೊಗ್ಗ: ದಿನದಿಂದ ದಿನಕ್ಕೆ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ನಿರೀಕ್ಷೆಗೂ ಮೀರಿ ಕೇಸುಗಳು ಬರುತ್ತಿವೆ. ನಾವೇನು ಮಾಡೋಕೆ ಆಗುತ್ತೆ? ಆದರೂ, ನಾವು ಎಲ್ಲಾ ಪ್ರಯತ್ನಗಳನ್ನು ನಡೆಸಿ, ಕೋವಿಡ್ ಸೋಂಕಿತರಿಗೆ ಸೌಕರ್ಯ ಒದಗಿಸುತ್ತಿದ್ದೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.

    ಶಿವಮೊಗ್ಗದಲ್ಲಿ ಇಂದು ಕೋವಿಡ್ ಸಂಬಂಧ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಶಿವಮೊಗ್ಗದಲ್ಲಿ ಅಗತ್ಯವಾಗಿರುವ ಆಕ್ಸಿಜನ್ ಲಭ್ಯವಿದ್ದು, ಖಾಸಗಿ ಆಸ್ಪತ್ರೆಗಳಲ್ಲಿ, 32 ಕೆ.ಎಲ್, ಸರ್ಕಾರಿ ಆಸ್ಪತ್ರೆಗಳಲ್ಲಿ 19 ಕೆ.ಎಲ್ ಒಟ್ಟು 51 ಕೆ.ಎಲ್ ನಷ್ಟು ಆಕ್ಸಿಜನ್ ಲಭ್ಯವಿದೆ. ಜೊತೆಗೆ 42 ಡ್ಯೂರಾ ಸಿಲಿಂಡರ್ ಗಳು ಮತ್ತು 582 ಜಂಬೋ ಸಿಲಿಂಡರ್ ಗಳು ಲಭ್ಯವಿದೆ ಎಂದು ತಿಳಿಸಿದ್ದಾರೆ. ಅದರಂತೆ, ಸರ್ಕಾರಿ ಆಸ್ಪತ್ರೆಗಳಲ್ಲಿ 552, ಖಾಸಗಿ ಆಸ್ಪತ್ರೆಗಳಲ್ಲಿ 383 ಸೇರಿದಂತೆ, ಒಟ್ಟು, 935 ರೆಮಿಡಿಸ್ವಿರ್ ಇಂಜೆಕ್ಷನ್ ಲಭ್ಯವಿದೆ ಎಂದು ಈಶ್ವರಪ್ಪ ಮಾಹಿತಿ ನೀಡಿದರು.

    ಅದರಂತೆ, ಕೊರೊನಾ ನಿರ್ವಹಣೆಗೆ ಜಿಲ್ಲಾಡಳಿತದ ವತಿಯಿಂದ ಗರಿಷ್ಟ ಪ್ರಯತ್ನಗಳನ್ನು ನಡೆಸಲಾಗುತ್ತಿದೆ. ಜಿಲ್ಲೆಯಲ್ಲಿ ಕೋವಿಡ್‍ಗಾಗಿ ಸರ್ಕಾರಿ ಆಸ್ಪತ್ರೆಗಳಲ್ಲಿ 776 ಬೆಡ್, ಖಾಸಗಿ ಆಸ್ಪತ್ರೆಗಳಲ್ಲಿ 999 ಬೆಡ್‍ಗಳನ್ನು ಕಾಯ್ದಿರಿಸಲಾಗಿದೆ. ಇದರಲ್ಲಿ 216 ಐಸಿಯು ಬೆಡ್ ಹಾಗೂ 944 ಆಕ್ಸಿಜನ್ ಬೆಡ್‍ಗಳಿವೆ. ಸರ್ಕಾರಿ ಆಸ್ಪತ್ರೆಯಲ್ಲಿ 78 ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ 32 ವೆಂಟಿಲೇಟರ್‍ಗಳಿವೆ. ಪ್ರಸ್ತುತ ಶಿವಮೊಗ್ಗ, ಶಿಕಾರಿಪುರ, ಸಾಗರದಲ್ಲಿ ಕೋವಿಡ್ ಕೇರ್ ಸೆಂಟರ್‍ಗಳು ಕಾರ್ಯನಿರ್ವಹಿಸುತ್ತಿವೆ ಎಂದರು.

    ಅದೇ ರೀತಿ, ಜಿಲ್ಲೆಯಲ್ಲಿ ಇದುವರೆಗೆ 2,67,060 ಡೋಸ್ ಕೋವಿಶೀಲ್ಡ್ ನೀಡಲಾಗಿದ್ದು, 2540 ಡೋಸ್ ಉಳಿಕೆ ಇದೆ. ಕೋವಾಕ್ಸಿನ್ 20,460 ಡೋಸ್ ನೀಡಲಾಗಿದ್ದು, ಉಳಿಕೆ ಇರುವುದಿಲ್ಲ. 2,41,578 ಮಂದಿಗೆ ಮೊದಲ ಡೋಸ್ ನೀಡಲಾಗಿದ್ದು, 54,358 ಮಂದಿಗೆ ಎರಡನೇ ಡೋಸ್ ಪೂರ್ಣಗೊಳಿಸಲಾಗಿದೆ. 88 ಸಕ್ರಿಯ ಕಂಟೈನ್‍ಮೆಂಟ್ ಜೋನ್‍ಗಳಿವೆ. ಮಾಸ್ಕ್ ಧರಿಸದ 9207 ಪ್ರಕರಣಗಳಲ್ಲಿ 12,76,850 ರೂ. ದಂಡ ವಿಧಿಸಲಾಗಿದೆ ಎಂದು ಸಚಿವ ಈಶ್ವರಪ್ಪ ಮಾಹಿತಿ ನೀಡಿದರು.

  • ಹಟ್ಟಿ ಚಿನ್ನದ ಗಣಿ ಆಸ್ಪತ್ರೆಯಲ್ಲಿ 40 ಆಮ್ಲಜನಕಯುಕ್ತ ಹಾಸಿಗೆಗಳು ಮೇಲ್ದರ್ಜೆಗೆ

    ಹಟ್ಟಿ ಚಿನ್ನದ ಗಣಿ ಆಸ್ಪತ್ರೆಯಲ್ಲಿ 40 ಆಮ್ಲಜನಕಯುಕ್ತ ಹಾಸಿಗೆಗಳು ಮೇಲ್ದರ್ಜೆಗೆ

    – ಹಟ್ಟಿ ಸಮುದಾಯ ಭವನ ಕೋವಿಡ್ ಕೇರ್ ಸೆಂಟರ್‌ಗೆ ಬಳಕೆ
    – ಹಟ್ಟಿ ಚಿನ್ನದ ಗಣಿ ಚಟುವಟಿಕೆ ತಾತ್ಕಾಲಿಕ ಸ್ಥಗಿತ

    ರಾಯಚೂರು: ಜಿಲ್ಲೆಯಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ, ಹಟ್ಟಿ ಚಿನ್ನದ ಗಣಿ ಪ್ರದೇಶದಲ್ಲಿರುವ ಸಮುದಾಯ ಭವನವನ್ನು ಕೋವಿಡ್ ಕೇರ್ ಸೆಂಟರ್‍ಗೆ ಬಳಕೆ ಮಾಡಿಕೊಳ್ಳಲು ನಿರ್ಧಾರಿಸಲಾಗಿದೆ.

    ಗಣಿ ಮತ್ತು ಭೂವಿಜ್ಞಾನ ಸಚಿವ ಮುರುಗೇಶ್ ಆರ್.ನಿರಾಣಿ ಅವರು ನೀಡಿದ ಸಲಹೆ ಮೇರೆಗೆ ಹಟ್ಟಿಯಲ್ಲಿರುವ ಸಮುದಾಯ ಭವನವನ್ನು ಕೋವಿಡ್ ಕೇರ್ ಸೆಂಟರ್‌ಗೆ ಬಳಕೆಮಾಡಿಕೊಳ್ಳಲು ಮುಂದಾಗಿದೆ.

    ಹಟ್ಟಿಯ ಕ್ಯಾಂಪಸ್‍ನಲ್ಲಿರುವ ಒಟ್ಟು 120 ಹಾಸಿಗೆ ಸಾಮಥ್ರ್ಯದ ಈ ಆಸ್ಪತ್ರೆಯಲ್ಲಿ 40 ಹಾಸಿಗೆಗಳನ್ನು ಆಮ್ಲಜನಕಯುಕ್ತ ಮಾಡಲು ನಿರ್ಧರಿಸಲಾಗಿದೆ. ಈಗಾಗಲೇ ಹಟ್ಟಿ ಚಿನ್ನದ ಗಣಿ ವ್ಯವಸ್ಥಾಪಕ ನಿದೇರ್ಶಕರು ಸೇರಿದಂತೆ ಮತ್ತಿತರರ ಜೊತೆ ಸಚಿವ ನಿರಾಣಿ ಮಾತುಕತೆ ನಡೆಸಿದ್ದಾರೆ. ಹಟ್ಟಿಯ ಚಿನ್ನದ ಗಣಿಯಲ್ಲಿ ಸಾವಿರಾರು ಕಾರ್ಮಿಕರು ಕೆಲಸ ನಿರ್ವಾಹಿಸುತ್ತಿದ್ದಾರೆ. ಅಲ್ಲದೆ ಗ್ರಾಮದಲ್ಲೂ ಸಾವಿರಾರು ಸಂಖ್ಯೆಯ ಜನರಿದ್ದು, ಯಾರಿಗಾದರೂ ಸೋಂಕು ಕಾಣಿಸಿಕೊಂಡರೆ ತಕ್ಷಣವೇ ಚಿಕಿತ್ಸೆ ನೀಡಲು ಅನುಕೂಲವಾಗುವಂತೆ ಸಮುದಾಯ ಭವನ ಬಳಕೆಮಾಡಿಕೊಳ್ಳುವುದು ಸರಿಯಾದ ಮಾರ್ಗವೆಂದು ಸಚಿವರು ಸಲಹೆ ಕೊಟ್ಟಿದ್ದರು.

     

    ಸಂಬಂಧಪಟ್ಟವರ ಜೊತೆ ಮಾತುಕತೆ:
    ಹಟ್ಟಿ ಚಿನ್ನದ ಗಣಿಯಲ್ಲಿ ಕೇಂದ್ರ ಸರಕಾರಿ ಒಡೆತನದ ಕೇಂದ್ರೀಯ ವಿದ್ಯಾಲಯವಿದ್ದು, ಇದನ್ನು ಸಹ ಕೋವಿಡ್ ಕೇರ್ ಸೆಂಟರ್‍ಗೆ ಬಳಸಲು ಆಲೋಚಿಸಲಾಗಿದೆ. ಈ ಜಾಗವು ಸಂಪೂರ್ಣವಾಗಿ ಕೇಂದ್ರ ಸರ್ಕಾರದ ಒಡೆತನಕ್ಕೆ ಸೇರಿರುವ ಹಿನ್ನಲೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಜೊತೆ ನಿರಾಣಿ ಅವರು ಮಾತುಕತೆಯ ನಡೆಸಿದ್ದು, ಇದು ಕೂಡ ಫಲಪ್ರದವಾಗಿದೆ ಸಂಭವವಿದೆ.

    ತಾತ್ಕಾಲಿಕ ಸ್ಥಗಿತ:
    ರಾಜ್ಯದಲ್ಲಿ ಈಗ ಚಿನ್ನ ಉತ್ಪಾದಿಸುವ ಏಕೈಕ ಗಣಿ ಇರುವ ರಾಯಚೂರು ಜಿಲ್ಲೆಯ ಹಟ್ಟಿ ಚಿನ್ನದ ಗಣಿಯು ಕೊರೊನಾ ಎರಡನೆಯ ಅಲೆಯ ಹಿನ್ನಲೆ ಈ ವರ್ಷವೂ ಬಂದ್ ಮಾಡಲಾಗಿದೆ. ರಾಜ್ಯ ಸರಕಾರವು 14 ದಿನ ಲಾಕ್ ಡೌನ್ ಘೋಷಣೆ ಮಾಡಿದ ಬೆನ್ನಲ್ಲಿಯೇ ಹಟ್ಟಿ ಚಿನ್ನದ ಗಣಿಯನ್ನು ಸಹ ಬಂದ್ ಮಾಡಲಾಗಿದೆ. ಮೇ 24ರವರೆಗೂ ಗಣಿ ಚುಟುವಟಿಕೆ ಬಂದ್ ಮಾಡಿ ಹಟ್ಟಿ ಚಿನ್ನದ ಗಣಿ ಕಂಪನಿಯೂ ಆದೇಶ ಹೊರಡಿಸಿದೆ.

    ಸಿಬ್ಬಂದಿ ಮನೆಯಲ್ಲಿ ಇರುವಂತೆ ಹಟ್ಟಿ ಕಂಪನಿ ಆಡಳಿತ ಮಂಡಳಿ ಆದೇಶ ಹೊರಡಿಸಿದ್ದು, ಹಟ್ಟಿ ಚಿನ್ನದ ಗಣಿ ಆಸ್ಪತ್ರೆ, ಸೇರಿದಂತೆ ಅವಶ್ಯಕ ವಿಭಾಗ ಎಂದಿನಂತೆ ಕಾರ್ಯ ನಿರ್ವಹಣೆ ಮಾಡಲಿದೆ. ಸಿಬ್ಬಂದಿ ಹಟ್ಟಿ ಕೇಂದ್ರ ಸ್ಥಾನ ಬಿಡುವಾಗ ಅನುಮತಿ ಪಡೆದು ಹೋಗಲು ಆದೇಶದಲ್ಲಿ ಸೂಚನೆ ನೀಡಲಾಗಿದೆ. ಸರ್ಕಾರದ ಮಾರ್ಗಸೂಚಿಯಂತೆ ಚಿನ್ನದ ಗಣಿ ಬಂದ್ ಮಾಡಿ ಆದೇಶ ಮಾಡಲಾಗಿದೆ.

  • ಕೋವಿಡ್ ಕೇರ್ ಸೆಂಟರ್ ಆರಂಭಿಸದೇ ನಿರ್ಲಕ್ಷ್ಯ – ಶಾಸಕ, ಡಿಎಚ್‍ಒಗೆ ತರಾಟೆ

    ಕೋವಿಡ್ ಕೇರ್ ಸೆಂಟರ್ ಆರಂಭಿಸದೇ ನಿರ್ಲಕ್ಷ್ಯ – ಶಾಸಕ, ಡಿಎಚ್‍ಒಗೆ ತರಾಟೆ

    ಧಾರವಾಡ: ಧಾರವಾಡ ಜಿಲ್ಲೆಯ ಅಳ್ನಾವರ ಪಟ್ಟಣದಲ್ಲಿ ಕೋವಿಡ್ ಕೇರ್ ಸೆಂಟರ್ ಆರಂಭಿಸದೇ ನಿರ್ಲಕ್ಷ್ಯ ತೊರಿದ ಶಾಸಕ ಹಾಗೂ ಡಿಎಚ್‍ಒ ಮೇಲೆ ಅಳ್ನಾವರ ಪಟ್ಟಣ ಪಂಚಾಯತಿ ಸದಸ್ಯರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

    ಧಾರವಾಡ ಕಲಘಟಗಿ ಕ್ಷೇತ್ರದ ಶಾಸಕ ಸಿ.ಎಂ. ನಿಂಬಣ್ಣವರ ಅಧ್ಯಕ್ಷತೆಯಲ್ಲಿ ಅಳ್ನಾವರದಲ್ಲಿ ನಡೆದಿದ್ದ ಸಭೆಯಲ್ಲಿ ಪಟ್ಟಣದಲ್ಲಿ ಹೆಚ್ಚಾಗಿರುವ ಕೊರೊನಾ ಬಗ್ಗೆ ಪ್ರಸ್ತಾಪಿಸಿದ ಪಟ್ಟಣ ಪಂಚಾಯತಿ ಸದಸ್ಯರು, ಈಗ ಬಂದು ಸಭೆ ಮಾಡುತ್ತಿದ್ದಿರಾ ಎಂದು ಪ್ರಶ್ನೆ ಮಾಡಿದ್ದಾರೆ.

    ತಾಲೂಕು ಕೇಂದ್ರವಾಗಿದ್ದರೂ ಆರೋಗ್ಯ ಸೌಲಭ್ಯ ಒದಗಿಸದ್ದಕ್ಕೆ ತರಾಟೆಗೆ ತೆಗೆದುಕೊಂಡ ಸದಸ್ಯರಿಗೆ ಶೀಘ್ರವೇ ಅಳ್ನಾವರದಲ್ಲಿ ಕೋವಿಡ್ ಕೇರ್ ಆರಂಭಿಸುವ ಭರವಸೆಯನ್ನು ಶಾಸಕರು ನೀಡಿದರು.

  • PPE ಕಿಟ್ ಧರಿಸಿ ಕೋವಿಡ್ ಕೇರ್ ಸೆಂಟರ್ ಗೆ ಅಪ್ಪಚ್ಚು ರಂಜನ್ ಭೇಟಿ

    PPE ಕಿಟ್ ಧರಿಸಿ ಕೋವಿಡ್ ಕೇರ್ ಸೆಂಟರ್ ಗೆ ಅಪ್ಪಚ್ಚು ರಂಜನ್ ಭೇಟಿ

    ಮಡಿಕೇರಿ: ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಪಿಪಿಇ ಕಿಟ್ ಧರಿಸಿ ಕೋವಿಡ್ ಕೇರ್ ಸೆಂಟರ್ ಗಳಿಗೆ ಭೇಟಿ ನೀಡಿ ಸೋಂಕಿತರ ಆರೋಗ್ಯ ವಿಚಾರಿಸಿ, ಮಾನಸಿಕ ಧೈರ್ಯ ತುಂಬಿದರು.

    ಕೊಡಗಿನ ಗಡಿ ಭಾಗಗಳಿಗೆ ಭೇಟಿ ನೀಡಿ ಅಧಿಕಾರಿಗಳ ಜೊತೆಯಲ್ಲಿ ಚರ್ಚೆ ನಡೆಸಿ ನಂತರ ಅಗತ್ಯ ಮುನ್ನಚರಿಕೆ ಕ್ರಮಗಳ ಕೈಗೊಳ್ಳುವಂತೆ ಸೂಚನೆ ನೀಡಿದರಿ. ಬಳಿಕ ಕುಶಾಲನಗರದ ಸಮೀಪದ ಕೂಡಿಗೆಯ ಮೊರಾರ್ಜಿ ವಸತಿ ಶಾಲೆಯಲ್ಲಿ ತೆರೆದಿರುವ ಕೋವಿಡ್ ಕೇಂದ್ರಕ್ಕೆ ಭೇಟಿ ನೀಡಿದರು.

    ಈ ಬಾರಿ ಕೊಡಗಿನಲ್ಲಿ ಕೋವಿಡ್ 19 ಅತಿಯಾಗಿದೆ. ಕೆಲಸದ ನಿಮಿತ್ತವಾಗಿ ನಗರದಲ್ಲಿ ವಾಸಿಸುತ್ತಿದ್ದ ಜನರು ಲಾಕ್‍ಡೌನ್ ಘೋಷಣೆ ಆದ ಕೂಡಲೇ ಬಹಳಷ್ಟು ಮಂದಿ ಆಗಮಿಸಿ ಕೊರೊನಾ ಹೆಚ್ಚಾಗಲು ಪ್ರಮುಖ ಕಾರಣವಾಗಿದೆ. ಕೊಡಗಿನಲ್ಲಿ ಬಹಳಷ್ಟು ಕೊರೋನ ಸೋಂಕಿತರು ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇಲ್ಲಿನ ವೈದ್ಯರು ಉತ್ತಮವಾದ ಚಿಕಿತ್ಸೆ ನೀಡುತ್ತಿದ್ದಾರೆ. ಆಹಾರ ಪದಾರ್ಥಗಳು ಗುಣಮಟ್ಟದಾಗಿದೆ. ಯಾರು ಭಯ ಪಡುವ ಅವಶ್ಯಕತೆ ಇಲ್ಲ. ಸೋಂಕಿತರು ತಮ್ಮ ಮನೆಗಳಲ್ಲಿರುವಂತೆ ಕೇಂದ್ರದಲ್ಲಿಯೂ ಖುಷಿಯಲ್ಲಿ ಇದ್ದಾರೆ. ಎಂದು ತಿಳಿಸಿದ್ರು.

    ಕೊಡಗು ಜಿಲ್ಲೆಯಲ್ಲಿ ಕೊರೊನ ಮಹಾಮಾರಿ ರುದ್ರ ನರ್ತನ ದಿನದಿಂದ ದಿನಕ್ಕೆ ತಾಂಡವವಾಡುತ್ತಿದೆ. ಸಾವು ನೋವಿನ ಸಂಖ್ಯೆ ದಿನ ಕಳೆದಂತೆ ಮಿತಿಮೀರುತ್ತಿದೆ ಇಂದು ಕೋಡ ಜಿಲ್ಲೆಯಲ್ಲಿ 681 ಪಾಸಿಟಿವ್ ಪ್ರಕರಣಗಳು ದಾಖಲಾಗಿದು 24 ಗಂಟೆಗಳಲ್ಲಿ 12 ಜನರು ಮೃತ ಪಟ್ಟಿದ್ದಾರೆ. ಹೀಗಾಗಿ ಕೊರೋನ ಸೋಂಕು ತಡೆಗಟ್ಟಲು ಕೊಡಗು ಜಿಲ್ಲಾಡಳಿತ ಬಿಗಿ ಕ್ರಮದ ಮೊರೆ ಹೋಗಿದೆ. ಮಂಗಳವಾರ ಮತ್ತು ಶುಕ್ರವಾರ ಬೆಳಗ್ಗೆ 6 ರಿಂದ 12 ರ ತನಕ ಮಾತ್ರ ಅಗತ್ಯ ವಸ್ತುಗಳ ಖರೀದಿಗೆ ಕಲ್ಪಿಸಲಾಗಿದ್ದು, ಬಾಕಿ ದಿನಗಳು ಕೊಡಗು ಜಿಲ್ಲೆ ಸಂಪೂರ್ಣ ಬಂದ್ ಆಗಿದೆ.

  • ಕೋವಿಡ್ ಕೇರ್ ಸೆಂಟರ್ ನಲ್ಲಿ ಸಕಲ ಸೌಲಭ್ಯ- ಆಟವಾಡಿ ಸಂಭ್ರಮಿಸಿದ ಸೋಂಕಿತರು

    ಕೋವಿಡ್ ಕೇರ್ ಸೆಂಟರ್ ನಲ್ಲಿ ಸಕಲ ಸೌಲಭ್ಯ- ಆಟವಾಡಿ ಸಂಭ್ರಮಿಸಿದ ಸೋಂಕಿತರು

    – ನೆಮ್ಮದಿ ಕೇಂದ್ರದಂತಾದ ಕೋವಿಡ್ ಕೇರ್ ಸೆಂಟರ್

    ಮಡಿಕೇರಿ: ಕೊವಿಡ್ ಸೋಂಕಿತರು ಹೆಚ್ಚೆಚ್ಚು ಆಸ್ಪತ್ರೆ, ಕೋವಿಡ್ ಕೇರ್ ಗಳಿಗೆ ಸೇರುತ್ತಿದ್ದಂತೆ ಸಮಸ್ಯೆಗಳೇ ಉದ್ಭವವಾಗುತ್ತವೆ. ಆದರೆ ಕೊಡಗು ಜಿಲ್ಲೆ ಕುಶಾಲನಗರ ಸಮೀಪದ ಕೂಡಿಗೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಆರಂಭಿಸಿರುವ ಕೋವಿಡ್ ಕೇರ್ ಸೆಂಟರ್ ಮಾತ್ರ ಸೋಂಕಿತರ ಪಾಲಿಗೆ ನೆಮ್ಮದಿ ಕೇಂದ್ರವಾಗಿದೆಯಂತೆ. ಸ್ವತಃ ಕೋವಿಡ್ ಸೋಂಕಿತರೇ ತಮ್ಮ ಅನುಭವಗಳನ್ನು ಹೇಳಿಕೊಂಡಿದ್ದಾರೆ.

    ವಿಶೇಷ ಚೇತನ ಸೋಂಕಿತರೊಬ್ಬರ ಹುಟ್ಟುಹಬ್ಬವನ್ನು ಸಾಮಾಜಿಕ ಅಂತರ ಕಾಪಾಡಿಕೊಂಡು ಕೋವಿಡ್ ಕೇರ್ ಸೆಂಟರ್ ನಲ್ಲಿ ಆಚರಿಸಲಾಗುತ್ತಿದೆ. ಇನ್ನು ಇಲ್ಲಿರುವ ಬಹುತೇಕ ಸೋಂಕಿತರು ಕೇರಮ್, ಚೆಸ್ ಸೇರಿದಂತೆ ವಿವಿಧ ಕ್ರೀಡೆಗಳನ್ನು ಆಡಿಕೊಂಡು ಸಂತಸದಿಂದ ಕಾಲ ಕಳೆಯುತ್ತಿದ್ದಾರೆ. ಸೋಂಕಿತರ ಬೇಡಿಕೆಯಂತೆ ಕೇರಮ್ ಬೋರ್ಡ್, ಹಾವು-ಏಣಿ, ಚೆಸ್ ಬೋರ್ಡ್ ಗಳನ್ನು ಕೋವಿಡ್ ಕೇರ್ ಸೆಂಟರ್ ನ ಸಿಬ್ಬಂದಿ ಒದಗಿಸಿದ್ದಾರೆ. ಉಳಿದ ಸಮಯದಲ್ಲೂ ಬೆಳಗ್ಗೆ ರೋಗಿಗಳಿಗೆ ಪ್ರಾಣಾಯಾಮ, ವ್ಯಾಯಾಮಗಳನ್ನು ಮಾಡಿಸಲಾಗುತ್ತಿದೆ.

    ಈ ಕೋವಿಡ್ ಕೇರ್ ಸೆಂಟರ್ ನಲ್ಲಿ ಸೋಂಕಿತರನ್ನು ತುಂಬಾ ಪ್ರೀತಿ ಮತ್ತು ಕಾಳಜಿಯಿಂದ ನೋಡಿಕೊಳ್ಳುತ್ತಿದ್ದಾರೆ. ಕೇಂದ್ರದ ವೈದ್ಯರು ಮತ್ತು ಸಿಬ್ಬಂದಿ ಸೋಂಕಿತರನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಿರುವುದರಿಂದ ಎಲ್ಲರೂ ಮನೆಯವರ ರೀತಿಯಲ್ಲಿದ್ದೇವೆ ಎಂದು ಸೋಂಕಿತರಾದ ಸುಪ್ರಿತಾ ತಮ್ಮ ಅನುಭವ ಹಂಚಿಕೊಂಡಿದ್ದಾರೆ.

    ಕೂಡಿಗೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿನ ಈ ಕೋವಿಡ್ ಕೇರ್ ಸೆಂಟರ್ ನಲ್ಲಿ 80 ಬೆಡ್ ಗಳಿದ್ದು, ದಾಖಲಾಗಿರುವ 57 ಸೋಂಕಿತರೆಲ್ಲೆರೂ ಖುಷಿಯಾಗಿ ಇದ್ದಾರೆ. ಓರ್ವ ವೈದ್ಯ, ಮೂವರು ಅರೋಗ್ಯ ಸಹಾಯಕಿಯರು, ಇಬ್ಬರು ಡಿ ಗ್ರೂಪ್ ಸಿಬ್ಬಂದಿ ಈ ಕೇಂದ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.