Tag: ಕೋವಿಡ್ ಆಸ್ಪತ್ರೆ

  • ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಪವರ್ ಕಟ್ – ಸೋಂಕಿತರು ನರಕಯಾತನೆ

    ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಪವರ್ ಕಟ್ – ಸೋಂಕಿತರು ನರಕಯಾತನೆ

    ಯಾದಗಿರಿ: ಇಲ್ಲಿನ ಜಿಲ್ಲಾ ಕೊವಿಡ್ ಆಸ್ಪತ್ರೆಯಲ್ಲಿ ವಿದ್ಯುತ್ ಕಟ್ ಆಗಿದ್ದು, ಸೋಂಕಿತರು ನರಕಯಾತನೆ ಅನುಭವಿಸುತ್ತಿದ್ದಾರೆ.

    ಯಾದಗಿರಿ ತಾಲೂಕಿನ ಮುದ್ನಾಳ್ ಬಳಿಯ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ಕಳೆದ ಎರಡು ಗಂಟೆಗಳಿಂದ ಕರೆಂಟ್ ಬರದಿದ್ದರಿಂದ ಆಕ್ಸಿಜನ್, ವೆಂಟಿಲೆಟರ್ ಬಂದ್ ಆಗಿ ಸೋಂಕಿತರು ಪರದಾಡುತ್ತಿದ್ದಾರೆ.

    ಏಕಾಏಕಿ ವಿದ್ಯುತ್ ಕಟ್ ಆಗಿದ್ದಕ್ಕೆ ಸೋಂಕಿತರ ಸ್ಥಿತಿ ಗಂಭೀರವಾಗಿದೆ. ಸೋಂಕಿತರ ಸಂಬಂಧಿಕರು ಕೈಯಲ್ಲಿ ಟವೆಲ್ ಹಿಡಿದು ಗಾಳಿ ಬೀಸುತ್ತಿದ್ದಾರೆ. ಇನ್ನು ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಕರೆಂಟ್ ಹೋದ್ರೆ ಜನರೆಟರ್ ವ್ಯವಸ್ಥೆ ಇದೆ, ಆದ್ರೆ ಡೀಸೆಲ್ ಇಲ್ಲ.

    ಜಿಲ್ಲಾಡಳಿತದ ದೊಡ್ಡ ಎಡವಟ್ಟಿಗೆ ಸೋಂಕಿತರ ಸಂಬಂಧಿಕರು ಆಕ್ರೋಶ ಹೊರಹಾಕುತ್ತಿದ್ದಾರೆ. ಒಟ್ಟಿನಲ್ಲಿ ಕರೆಂಟ್ ಇಲ್ಲದೆ ಸೋಂಕಿತರು ನರಕಯಾತನೆ ಅನುಭವಿಸುತ್ತಿದ್ದು, ಸ್ಥಳಕ್ಕೆ ಅಪರ ಜಿಲ್ಲಾಧಿಕಾರಿ ಪ್ರಕಾಶ್ ರಜಪೂತ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.

  • ಕೋವಿಡ್ ಆಸ್ಪತ್ರೆ ನುಗ್ಗಿ ಗಲಾಟೆ ಮಾಡಿದ್ದ ಯುವಕ ಅರೆಸ್ಟ್

    ಕೋವಿಡ್ ಆಸ್ಪತ್ರೆ ನುಗ್ಗಿ ಗಲಾಟೆ ಮಾಡಿದ್ದ ಯುವಕ ಅರೆಸ್ಟ್

    ಚಿಕ್ಕಬಳ್ಳಾಪುರ: ಕೋವಿಡ್ ಆಸ್ಪತ್ರೆಗೆ ನುಗ್ಗಿ ಗಲಾಟೆ ಮಾಡಿ ವೈದ್ಯರು-ಸಿಬ್ಬಂದಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಯುವಕ ಜೈಲುಪಾಲಾಗಿದ್ದಾನೆ. ಬುಧವಾರ ಚಿಕ್ಕಬಳ್ಳಾಪುರ ಜಿಲ್ಲಾ ಕೋವಿಡ್-19 ಆಸ್ಪತ್ರೆಯಲ್ಲಿ ತಪ್ಪು ಗ್ರಹಿಕೆ ಮಾಡಿಕೊಂಡ ಕೆಲ ಕೊರೊನಾ ಸೋಂಕಿತರು ಆಕ್ಸಿಜನ್ ಖಾಲಿ ಆಗಿದೆ. ನಮಗೆ ಆಕ್ಸಿಜನ್ ಸಿಗ್ತಿಲ್ಲ ನಾವ್ ಸತ್ತೋಗಬಹುದು ಅಂತ ಕೆಲ ಕೊರೊನಾ ಸೋಂಕಿತರು ತಮ್ಮ ಸಂಬಂಧಿಕರಿಗೆ ಕರೆ ಮಾಡಿ ತಿಳಿಸಿದ್ದರು.

    ಇದರಿಂದ ಆತಂಕದಿಂದ ಕೋವಿಡ್ ಆಸ್ಪತ್ರೆ ಬಳಿ ಬಂದಿದ್ದ ಜಾತವಾರದ ಜಗದೀಶ್ ಹಾಗೂ ಪವನ್ ಸೇರಿ ಇನ್ನಿತರರು ಆಸ್ಪತ್ರೆಯಲ್ಲಿನ ವೈದ್ಯರು ಹಾಗೂ ಸಿಬ್ಬಂದಿ ವಿರುದ್ಧ ಹರಿಹಾಯ್ದಿದ್ದರು. ಈ ವೇಳೆ ಇಬ್ಬರು ಯುವಕರಯ ಆಟೋದಲ್ಲಿ ತಾವೇ ಆಕ್ಸಿಜನ್ ಸಿಲಿಂಡರ್ ತೆಗೆದುಕೊಂಡು ಬಂದು ಆಸ್ಪತ್ರೆಯ ಗೇಟ್ ಒಡೆದು ಒಳನುಗ್ಗಿ ತಗೊಳ್ಳಿ ಆಕ್ಸಿಜನ್ ನಾವ್ ಕೊಡ್ತೀವಿ ಅಂತ ಬಹಳ ಜೋರಾಗಿ ಏರು ಧ್ವನಿಯಲ್ಲಿ ವೈದ್ಯರ ವಿರುದ್ಧ ಅವಾಚ್ಯ ಶಬ್ದಗಳನ್ನ ಬಳಸಿ ಹರಿಹಾಯ್ದಿದ್ದರು.

    ಈ ವೇಳೆ ಜಿಲ್ಲಾಸ್ಪತ್ರೆಯ ಡಿ.ಎಸ್ ರಮೇಶ್ ಹಾಗೂ ಡಿ.ಎಚ್.ಓ ಗಲಾಟೆ ಮಾಡ್ತಿದ್ದವರಿಗೆ ಪಿಪಿಇ ಕಿಟ್ ಹಾಕಿ ಆಕ್ಸಿಜನ್ ಇದೆ ಅಂತ ತೋರಿಸಿದ ಮೇಲೆ ಆಕ್ರೋಶಿತರು ಸುಮ್ಮನಾಗಿದ್ದರು. ಈ ಸಂಬಂಧ ಡಿ.ಎಸ್ ರಮೇಶ್ ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಹೀಗಾಗಿ ಪವನ್ ಎಂಬಾತನನ್ನು ಬಂಧಿಸಿರುವ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಉಳಿದವರ ಬಂಧನಕ್ಕೆ ಬಲೆ ಬೀಸಿದ್ದಾರೆ.

  • ಬಡ ರೋಗಿಗಳಿಗಾಗಿ ನೂತನ ಕೋವಿಡ್ ಆಸ್ಪತ್ರೆ ನಿರ್ಮಿಸಿದ ಸಚಿವೆ ಶಶಿಕಲಾ ಜೊಲ್ಲೆ

    ಬಡ ರೋಗಿಗಳಿಗಾಗಿ ನೂತನ ಕೋವಿಡ್ ಆಸ್ಪತ್ರೆ ನಿರ್ಮಿಸಿದ ಸಚಿವೆ ಶಶಿಕಲಾ ಜೊಲ್ಲೆ

    ಚಿಕ್ಕೋಡಿ: ಗಡಿ ಜಿಲ್ಲೆಯ ಬೆಳಗಾವಿಯ ನಿಪ್ಪಾಣಿ ತಾಲೂಕಿನಲ್ಲಿ ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳಿಂದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಹಾಗೂ ಸಂಸದ ಅಣ್ಣಾ ಸಾಹೇಬ ಅವರ ಪರಿಶ್ರಮ ನೂತನ ಕೋವಿಡ್ ಆಸ್ಪತ್ರೆಯನ್ನು ಆರಂಭಿಸಲಾಗಿದೆ. ಆಯುಷ್ಮಾನ್ ಭಾರತ್, ಸುವರ್ಣ ಕರ್ನಾಟಕ, ಜೊಲ್ಲೆ ಉದ್ಯೋಹ ಸಮೂಹ ಸಹಯೋಗದಲ್ಲಿ ನೂತನ ಆಸ್ಪತ್ರೆಯನ್ನು ನಿರ್ಮಿಸಲಾಗಿದೆ.

    ಸಚಿವೆ ಶಶಿಕಲಾ ಜೊಲ್ಲೆ ಅವರ ಶಿಕ್ಷಣ ಸಂಸ್ಥೆಯ ಶಾಲಾ ಆವರಣದಲ್ಲಿ ಕೋವಿಡ್ ಕೇರ್ ಸೆಂಟರ್ ಆರಂಭ ಮಾಡಲಾಗಿದೆ. ದಿನದಿಂದ ದಿನಕ್ಕೆ ಕೊರೊನಾ ಪ್ರರಕಣಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ರೋಗಿಗಳಿಗೆ ಬೆಡ್ ಸಮಸ್ಯೆ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ 40 ಬೆಡ್‍ಗಳ ಸುಸಜ್ಜಿತ ಸೆಂಟರ್ ಆರಂಭ ಮಾಡಲಾಗಿದೆ.

    ಕೋವಿಡ್ ಕೇಂದ್ರದಲ್ಲಿರುವ 16 ಆಕ್ಸಿಜನ್ ಬೆಡ್ ಸೇರಿ 40 ಬೆಡ್ ವ್ಯವಸ್ಥೆ ಮಾಡಲಾಗಿದೆ. ನಿಪ್ಪಾಣಿಯ ಎಲ್ಲಾ ವೈದ್ಯರ ಸಹಯೋಗದಲ್ಲಿ ಪ್ರಾರಂಭವಾದ ಸೆಂಟರ್ ಇದಾಗಿದ್ದು, ಕೊವಿಡ್ ರೋಗಿಗಳಿಗಾಗಿ ಒಂದು ಪ್ರತ್ಯೇಕ ಅಂಬುಲೆನ್ಸ್ ವ್ಯವಸ್ಥೆ ಕೂಡ ಕಲ್ಪಿಸಲಾಗಿದೆ. ಇದರೊಂದಿಗೆ ಪೌಷ್ಠಿಕ ಆಹಾರದ ವ್ಯವಸ್ಥೆ ಕೂಡ ಸೆಂಟರ್ ನಲ್ಲಿ ಮಾಡಲಾಗಿದೆ. ಅತ್ಯಂತ ಕಡಿಮೆ ಖರ್ಚಿನಲ್ಲಿ ಚಿಕಿತ್ಸೆ ನೀಡಲು ವೈದ್ಯರು ಹಾಗೂ ಜೊಲ್ಲೆ ಉದ್ಯೋಗ ಸಮೂಹ ಮುಂದಾಗಿದ್ದು, ಬಡ ಜನರಿಗೆ ಆಸ್ಪತ್ರೆ ಸಾಕಷ್ಟು ಅನುಕೂಲವಾಗಲಿದೆ.

  • ಕೋವಿಡ್ ಆಸ್ಪತ್ರೆಯ ಹಂದಿಗಳನ್ನ ಕೊನೆಗೂ ಹಿಡಿದ ಅಧಿಕಾರಿಗಳು

    ಕೋವಿಡ್ ಆಸ್ಪತ್ರೆಯ ಹಂದಿಗಳನ್ನ ಕೊನೆಗೂ ಹಿಡಿದ ಅಧಿಕಾರಿಗಳು

    ರಾಯಚೂರು: ಜಿಲ್ಲೆಯ ಕೋವಿಡ್ ಆಸ್ಪತ್ರೆ ಓಪೆಕ್ ನಲ್ಲಿ ರಾಜಾರೋಷವಾಗಿ ಓಡಾಡುತ್ತಿದ್ದ ಹಂದಿಗಳನ್ನ ಕೊನೆಗೂ ಜಿಲ್ಲಾಡಳಿತ ಎಚ್ಚೆತ್ತು ಹಿಡಿದಿದೆ. ಆಸ್ಪತ್ರೆ ಅವ್ಯವಸ್ಥೆ ಬಗ್ಗೆ ಪಬ್ಲಿಕ್ ಟಿವಿ ವರದಿಯನ್ನ ಪ್ರಸಾರ ಮಾಡಿತ್ತು. ಕೋವಿಡ್ ಸೋಂಕಿತ ರೋಗಿಗಳಿರುವ ವಾರ್ಡ್ ಪಕ್ಕದಲ್ಲೇ ಹಂದಿಗಳು ಬಂದು ಹೋಗುತ್ತಿದ್ದರೂ ನೋಡುವವರಿರಲಿಲ್ಲ. ಇಡೀ ಆಸ್ಪತ್ರೆಯೇ ಹಂದಿಗಳ ಆವಾಸ ಸ್ಥಾನವಾಗಿ ಮಾರ್ಪಟ್ಟಿದ್ದರೂ ಆಸ್ಪತ್ರೆ ಹಿರಿಯ ಅಧಿಕಾರಿಗಳು ತಲೆಕೆಡಿಸಿಕೊಂಡಿರಲಿಲ್ಲ. ಈಗ ಕೊನೆಗೂ ಎಚ್ಚೆತ್ತು ಹಂದಿಗಳನ್ನ ಹಿಡಿಯಲಾಗಿದೆ.

    ಹಂದಿಗಳ ಮಾಲೀಕರ ವಿರುದ್ದ ಕ್ರಮಕ್ಕೆ ಅಧಿಕಾರಿಗಳು ಮುಂದಾಗಿದ್ದಾರೆ. ಅಗತ್ಯ ಸ್ಥಳಗಳಲ್ಲಿ ಭದ್ರತೆ ನಿಯೋಜಿಸಲು ಜಿಲ್ಲಾಡಳಿತ ರಿಮ್ಸ್ ನಿರ್ದೇಶಕರಿಗೆ ಸೂಚಿಸಿದೆ. ಇನ್ನೂ ಇಡೀ ಆಸ್ಪತ್ರೆಯಲ್ಲಿ ವಸ್ತುಗಳು ಎಲ್ಲೆಂದರಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದರು ನೋಡುವವರಿಲ್ಲ. ಕೆಟ್ಟ ವಾಸನೆ ಬಂದು ರೋಗಿಗಳು ನರಳಾಡುತ್ತಿದ್ದರೂ ಕೇಳುವವರಿಲ್ಲದಂತಾಗಿದೆ.

    ಕೋವಿಡ್ ವಾರ್ಡ್ ಗಳಿಗೆ ವೈದ್ಯರ ಭೇಟಿ ಅಪರೂಪವಾಗಿರುವುದರಿಂದ ರೋಗಿಗಳು ಚಿಕಿತ್ಸೆಯಿಲ್ಲದೆ ಪರದಾಡುತ್ತಿದ್ದಾರೆ. ಜೊತೆಗೆ ಮೆಡಿಕಲ್ ತ್ಯಾಜ್ಯವನ್ನ ಪಕ್ಕದಲಲ್ಲೇ ಇರಿಸಲಾಗಿದೆ. ಹಂದಿಗಳು ತ್ಯಾಜ್ಯವನ್ನ ಎಳೆದಾಡಿ ಎಲ್ಲೆಡೆ ಚಲ್ಲಾಪಿಲ್ಲಿ ಮಾಡಿವೆ. ಇಷ್ಟಾದರೂ ಯಾವೊಬ್ಬ ಅಧಿಕಾರಿಯೂ ಇಲ್ಲಿನ ಪರಿಸ್ಥಿತಿ ಸುಧಾರಿಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಕೋವಿಡ್ ವಾರ್ಡ್ ನಲ್ಲಿರುವ ರೋಗಿಗಳು ಕೊರೊನಾ ಭೀತಿಗಿಂತ ಇಲ್ಲಿನ ಅವ್ಯವಸ್ಥೆಗೆ ಹೆದರಿದ್ದಾರೆ. ಈಗ ಹಂದಿ ಹಿಡಿಯುವ ಕಾರ್ಯಾಚರಣೆ ನಡೆದಿದ್ದು ಇಡೀ ಆಸ್ಪತ್ರೆಯ ವ್ಯವಸ್ಥೆ ಸುಧಾರಿಸಬೇಕಿದೆ.

  • ಕೋವಿಡ್ ಆಸ್ಪತ್ರೆ ಎಡವಟ್ಟು – ಊಟದ ಸ್ಥಳದಲ್ಲೇ ಮೃತದೇಹದ ಆತಂಕ

    ಕೋವಿಡ್ ಆಸ್ಪತ್ರೆ ಎಡವಟ್ಟು – ಊಟದ ಸ್ಥಳದಲ್ಲೇ ಮೃತದೇಹದ ಆತಂಕ

    ರಾಯಚೂರು: ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ ವ್ಯಕ್ತಿಯ ಮೃತದೇಹವನ್ನ ಕೂಡಲೇ ಶವಾಗಾರಕ್ಕೆ ಸಾಗಿಸಬೇಕು. ಆದರೆ ರಾಯಚೂರಿನ ಕೋವಿಡ್ ಆಸ್ಪತ್ರೆಯಲ್ಲಿ ಸುಮಾರು ಗಂಟೆಗಳ ಕಾಲ ಸೋಂಕಿತರ ಪಕ್ಕದಲ್ಲೇ ಶವವನ್ನು ಇಡಲಾಗಿತ್ತು.

    ಸೋಂಕಿತರಿಗೆ ಊಟ ನೀಡುವ ಸ್ಥಳದಲ್ಲಿಯೇ ಮೃತದೇಹವನ್ನ ಪ್ಯಾಕ್ ಮಾಡಿ ಇಡಲಾಗಿತ್ತು. ಹೀಗಾಗಿ ಊಟ ತೆಗೆದುಕೊಂಡು ಹೋಗಲು, ಬರುವ ಪ್ರತಿಯೊಬ್ಬರು ಮೃತದೇಹದ ಪಕ್ಕದಲ್ಲೇ ನಿಂತುಕೊಂಡು ಊಟ ತೆಗೆದುಕೊಳ್ಳಬೇಕಾದ ಅವ್ಯವಸ್ಥೆಗೆ ಜನರನ್ನು ಹೈರಾಣಾಗಿಸಿದೆ.

    ಸಾಮಾಜಿಕ ಅಂತರ ಕಾಪಾಡಲು ಹೇಳುವ ವೈದ್ಯರೇ ಈ ರೀತಿಯ ಕೆಲಸ ಮಾಡುತ್ತಾರೆ. ರೋಗಿಗಳನ್ನ ನೋಡಲು ಸಹ ಪ್ರತಿದಿನ ಬರುವುದಿಲ್ಲ. ಮೃತದೇಹವನ್ನ ಮಾತ್ರ ಗಂಟೆಗಟ್ಟಲೇ ಆಸ್ಪತ್ರೆಯಲ್ಲಿ ಎಲ್ಲಂದರಲ್ಲಿ ಬಿಟ್ಟು ಹೋಗಿದ್ದಾರೆ ಎಂದು ಸೋಂಕಿತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಊಟಕ್ಕಾಗಿ ಕೊರೊನಾ ಸೋಂಕಿತರು ಗ್ರೌಂಡ್ ಫ್ಲೋರ್ ಗೆ ಬರಬೇಕು. ಒಂದೊಂದು ಸಾರಿ ಸಮಯಕ್ಕೆ ಊಟ ಸಿಗುತ್ತೆ. ಮತ್ತೆ ಒಂದೊಂದು ಬಾರಿ ಸರಿಯಾಗಿ ಸಿಗಲ್ಲ. ಕೋವಿಡ್ ವಾರ್ಡಿನ ಗೇಟ್ ಯಾವಾಗಲೂ ತೆರೆದಿರುತ್ತೆ. ರೋಗಿಗಳು, ಸೋಂಕು ಅಲ್ಲದೆ ಇರುವವರು ಸಹ ಹೊರಗೆ ಒಳಗೆ ಓಡಾಡುತ್ತಲೇ ಇರುತ್ತಾರೆ. ಕೊರೊನಾ ಸೋಂಕಿತರು ಬಂದು ಎರಡು ಗಂಟೆಗಳಾದರೂ ದಾಖಲಿಸಿಕೊಳ್ಳದೆ ನಿರ್ಲಕ್ಷ್ಯವಹಿಸುತ್ತದೆ ಎಂದು ಸೋಂಕಿತ ವ್ಯಕ್ತಿ ಹೇಳಿದ್ದಾರೆ.

    ಕೊರೊನಾ ಸೋಂಕಿತರಿಗೆ ಚಿಕಿತ್ಸೆ ಜೊತೆಗೆ ಧೈರ್ಯ ತುಂಬಿ ಗುಣಮುಖರನ್ನಾಗಿ ಮಾಡಬೇಕಾದ ಆಸ್ಪತ್ರೆ ಅವ್ಯವಸ್ಥೆಯ ಆಗರವಾಗಿದೆ. ಕನಿಷ್ಠ ಸೌಲಭ್ಯ ಒದಗಿಸುವುದರ ಜೊತೆ ಆಸ್ಪತ್ರೆಯ ಪರಿಸ್ಥಿತಿ ಸುಧಾರಿಸಬೇಕಿದೆ ಎಂದು ಸೋಂಕಿತರು ಹೇಳುತ್ತಿದ್ದಾರೆ.

  • ಕೊಡಗಿನಲ್ಲಿ ಕೋವಿಡ್-19 ಚೇತರಿಕೆ ಪ್ರಮಾಣ ಶೇ.76ಕ್ಕೆ ಏರಿಕೆ

    ಕೊಡಗಿನಲ್ಲಿ ಕೋವಿಡ್-19 ಚೇತರಿಕೆ ಪ್ರಮಾಣ ಶೇ.76ಕ್ಕೆ ಏರಿಕೆ

    ಮಡಿಕೇರಿ: ಕೋವಿಡ್ 19 ಸೋಂಕಿತ ಪ್ರಕರಣಗಳು ಎಲ್ಲಾ ಜಿಲ್ಲೆ ಮತ್ತು ರಾಜ್ಯಗಳಲ್ಲಿ ಹೆಚ್ಚುತ್ತಿವೆ. ಸೋಂಕಿತರ ಉತ್ತಮ ಆರೈಕೆ ಮತ್ತು ಸೂಕ್ತ ಚಿಕಿತ್ಸೆಯಿಂದಾಗಿ ಜಿಲ್ಲೆಯ ಕೋವಿಡ್ ಆಸ್ಪತ್ರೆಯ ಬಿಡುಗಡೆ ಪ್ರಮಾಣ ಶೇ.76 ರಷ್ಟು ಆಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.

    ಜಿಲ್ಲೆಯ ಕೋವಿಡ್ ಆಸ್ಪತ್ರೆಯಲ್ಲಿರುವ ಐಸಿಯು ವಿಭಾಗದ ಹಾಸಿಗೆ ಸಾಮರ್ಥ್ಯವನ್ನು 56 ಹಾಸಿಗೆಗೆ ಹೆಚ್ಚಿಸಲಾಗಿದೆ. ಕೋವಿಡ್ ಐಸಿಯು ವಿಭಾಗವನ್ನು ಅರವಳಿಕೆ (ಅನಸ್ತೇಶಿಯಾ) ವಿಭಾಗದಿಂದ ನಿಭಾಯಿಸಲಾಗುತ್ತಿದೆ. ಈ ವಿಭಾಗದಿಂದ ಕೋವಿಡ್ ಸಂಬಂಧಿತ ತುರ್ತು ಕ್ರಮಕ್ಕಾಗಿ ಹೆಚ್ಚುವರಿ ಸಿಬ್ಬಂದಿ, ದಾದಿ (ಸ್ಟಾಫ್ ನರ್ಸ್)ಗಳಿಗೆ ತರಬೇತಿ ನೀಡಲಾಗುತ್ತಿದೆ ಎಂದು ತಿಳಿಸಿದರು.

    ಜಿಲ್ಲೆಯಲ್ಲಿ ಈವರೆಗೆ ಒಟ್ಟು 356 ಕೋವಿಡ್ ಸೋಂಕಿತ ಪ್ರಕರಣಗಳು ದೃಢಪಟ್ಟಿದ್ದು, ಇದರಲ್ಲಿ ಕಳೆದ ತಿಂಗಳಿನಲ್ಲಿ 30 ಮಂದಿ ಕೋವಿಡ್ ಐಸಿಯುನಲ್ಲಿ ದಾಖಲಾಗಿದ್ದಾರೆ. ಇಬ್ಬರು ಮೃತಪಟ್ಟಿದ್ದು, ಹಾಲಿ 5 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, 23 ಮಂದಿ ಬಿಡುಗಡೆ ಹೊಂದಿದ್ದಾರೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಹೇಳಿದ್ದಾರೆ.

  • ಕೊಡಗಿನಲ್ಲಿ ವೈದ್ಯರು, ನರ್ಸ್ ಗಳು ಸೇರಿದಂತೆ 14 ಜನರಿಗೆ ಕೊರೊನಾ

    ಕೊಡಗಿನಲ್ಲಿ ವೈದ್ಯರು, ನರ್ಸ್ ಗಳು ಸೇರಿದಂತೆ 14 ಜನರಿಗೆ ಕೊರೊನಾ

    ಮಡಿಕೇರಿ : ಕೊರೊನಾ ಮಹಾಮಾರಿ ವಿರುದ್ಧ ಹೋರಾಡುತ್ತಾ, ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರು ಮತ್ತು ನರ್ಸ್ ಗಳು ಸೇರಿದಂತೆ ಒಂದೇ ದಿನ 14 ಜನರಿಗೆ ಸೋಂಕು ತಗುಲಿದೆ.

    ಮಡಿಕೇರಿಯಲ್ಲಿರುವ ಕೊಡಗು ಕೋವಿಡ್ ಆಸ್ಪತ್ರೆಯಲ್ಲಿ ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದ 7 ವೈದ್ಯರು ಮತ್ತು ನರ್ಸ್‍ಗಳಿಗೆ ಕೊರೊನಾ ಸೋಂಕು ತಗುಲಿದೆ. ಇನ್ನು ಕೊರೊನಾ ರೋಗಿ 9583 ನೇ ಸಂಪರ್ಕದಿಂದ ಮೂವರಿಗೆ ಪಾಸಿಟಿವ್ ಆಗಿದ್ದರೆ, 9215 ನೇ ರೋಗಿಯ ಸಂಪರ್ಕದಿಂದ ಇಬ್ಬರಿಗೆ ಮಹಾಮಾರಿ ವಕ್ಕರಿಸಿದೆ.

    ರೋಗ ಲಕ್ಷಣದಿಂದ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದ ಮತ್ತಿಬ್ಬರಿಗೆ ಕೊರೊನಾ ಹೆಗಲೇರಿದೆ. ಹೀಗಾಗಿ ಒಟ್ಟು ಒಂದೇ ದಿನ ಬರೋಬ್ಬರಿ 14 ಜನರಿಗೆ ಮಹಾಮಾರಿ ವಕ್ಕರಿಸಿದೆ. ಹೀಗಾಗಿ ಕೊಡಗಿನಲ್ಲಿ ಕೊರೊನಾ ಪಾಸಿಟಿವ್ ಪ್ರಕರಣ 22ಕ್ಕೆ ಏರಿದೆ.

    ಮಡಿಕೇರಿಯ ಜಿಲ್ಲಾಸ್ಪತ್ರೆ ಕೋವಿಡ್ ಆಸ್ಪತ್ರೆಯಾಗಿ ಬದಲಾಗಿದ್ದರಿಂದ ನಗರ ಅಶ್ವಿನಿ ಆಸ್ಪತ್ರೆಯನ್ನು ಜನರಲ್ ಆಸ್ಪತ್ರೆಯಾಗಿ ಬದಲಾಯಿಸಲಾಗಿತ್ತು. ಆದರೆ ಅಶ್ವಿನಿ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿತ್ತಿದ್ದ ವೈದ್ಯರಿಗೂ ಕೊರೊನಾ ಹೆಗಲೇರಿದೆ. ಹೀಗಾಗಿ ಅಶ್ವಿನಿ ಆಸ್ಪತ್ರೆಯನ್ನು ನಾಳೆ ಸೀಲ್ ಡೌನ್ ಮಾಡಿ ಸ್ಯಾನಿಟೈಸರ್ ಮಾಡಲು ಜಿಲ್ಲಾಡಳಿತ ನಿರ್ಧರಿಸಿದೆ.

    ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರು ಮತ್ತು ನರ್ಸ್ ಗಳಿಗೂ ಕೊರೊನಾ ಪಾಸಿಟಿವ್ ಪ್ರಕರಣ ಆಗಿರುವುದರಿಂದ ಜಿಲ್ಲೆಯಲ್ಲಿ ಸಾಕಷ್ಟು ಆತಂಕಕ್ಕೆ ಕಾರಣವಾಗಿದೆ. ಅಲ್ಲದೆ ಜನರಲ್ ಅಶ್ವಿನಿ ಆಸ್ಪತ್ರೆಯಲ್ಲಿ ಕರ್ತವ್ಯದಲ್ಲಿದ್ದ ವೈದ್ಯರು ನರ್ಸ್ ಗಳಿಗೂ ಕೊರೊನಾ ಪಾಸಿಟಿವ್ ಆಗಿರುವುದು, ಇಲ್ಲಿನ ಚಿಕಿತ್ಸೆ ಪಡೆದುಕೊಂಡ ಇತರೆ ರೋಗಿಗಳಿಗೂ ಇದು ಆತಂಕಕ್ಕೆ ಎಡೆಮಾಡಿದೆ. ಒಟ್ಟಿನಲ್ಲಿ ಕಳೆದ ಒಂದು ತಿಂಗಳಿನಿಂದ ಕೊಡಗಿನತ್ತ ಸುಳಿಯದ ಕೊರೊನಾ ಮಹಾಮಾರಿ ಮೂರು ದಿನಗಳಿಂದ ಎರಡಂಕಿಯ ಮೇಲೆ ಬರುತ್ತಿರುವುದು ಕೊಡಗಿನ ಜನರನ್ನು ಆತಂಕ್ಕೆ ದೂಡಿದೆ.

  • ಮದ್ವೆಯಂದೇ ಕೋವಿಡ್ ಆಸ್ಪತ್ರೆಗೆ 50 ಬೆಡ್, ಆಕ್ಸಿಜನ್ ಸಿಲಿಂಡರ್ ನೀಡಿದ ಜೋಡಿ

    ಮದ್ವೆಯಂದೇ ಕೋವಿಡ್ ಆಸ್ಪತ್ರೆಗೆ 50 ಬೆಡ್, ಆಕ್ಸಿಜನ್ ಸಿಲಿಂಡರ್ ನೀಡಿದ ಜೋಡಿ

    ಮುಂಬೈ: ಕೊರೊನಾ ವೈರಸ್ ಮಹಾಮಾರಿಗೆ ಬಲಿಯಾಗುವವರ ಹಾಗೂ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ನವಜೋಡಿಯೊಂದು ಸತ್ಪಾಲಾ ಗ್ರಾಮದಲ್ಲಿರುವ ಕೋವಿಡ್ ಆಸ್ಪತ್ರೆಗೆ 50 ಬೆಡ್ ಹಾಗೂ ಆಕ್ಸಿಜನ್ ಸಿಲಿಂಡರ್ ನೀಡಿ ಮಾನವೀಯತೆ ಮೆರೆಯುವ ಮೂಲಕ ಸುದ್ದಿಯಾಗಿದ್ದಾರೆ.

    ಈ ಘಟನೆ ಮಹಾರಾಷ್ಟ್ರದ ವಾಸೈನಲ್ಲಿರುವ ನಂದಕುಲ ಗ್ರಾಮದಲ್ಲಿ ನಡೆದಿದೆ. ಎರಿಕ್ ಆ್ಯಂಟನ್ ಲೊಬೊ(28) ಹಾಗೂ ಮೆರ್ಲಿಣ್(27) ಎಂಬ ಜೋಡಿ ಈ ರೀತಿ ಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

    ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದ ಇವರ ಮದುವೆಗೆ ಸಾಮಾನ್ಯವಾಗಿ ಸುಮಾರು 2 ಸಾವಿರ ಮಂದಿ ಸೇರುವವರಿದ್ದರು. ಅಲ್ಲದೆ ವೈನ್ ಹಾಗೂ ಒಳ್ಳೆಯ ಊಟ ಇಲ್ಲವೆಂದರೆ ಇವರ ಮದುವೆ ಅಪೂರ್ಣವೆಂದೇ ಅರ್ಥ. ಇದಕ್ಕಾಗಿ ಸಾಕಷ್ಟು ಹಣ ಖರ್ಚಾಗುತ್ತದೆ. ಹೀಗಾಗಿ ಈ ಹಣವನ್ನು ಬೇರೆ ರೀತಿಯಲ್ಲಿ ಬಳಕೆ ಮಾಡಲು ತೀರ್ಮಾನಿದೆವು ಎಂದು ಲೊಬೊ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.

    ಕೊರೊನಾ ವೈರಸ್ ಹಿನ್ನೆಲೆಯಿಂದಾಗಿ ಮದುವೆಗೆ ಕೇವಲ 22 ಮಂದಿಯಷ್ಟೇ ಭಾಗಿಯಾಗಿದ್ದು ಎಲ್ಲರೂ ಮಾಸ್ಕ್ ಧರಿಸಿದ್ದರು. ಅಲ್ಲದೆ ಸಾಮಾಜಿಕ ಅಂತರ ಕೂಡ ಕಾಯ್ದುಕೊಳ್ಳಲಾಗಿತ್ತು. ಪಲ್ಘಾರ್ ಜಿಲ್ಲೆಯಲ್ಲಿ ಸರಿಸುಮಾರು 90 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಸುಮಾರು 1, 500ಕ್ಕಿಂತಲೂ ಹೆಚ್ಚು ಮಂದಿಗೆ ಕೊರೊನಾ ಪಾಸಿಟಿವ್ ಎಂದು ವರದಿ ಬಂದಿದೆ. ಹೀಗಾಗಿ ನಾವು ಕೋವಿಡ್ ಆಸ್ಪತ್ರೆಗೆ ಬೆಡ್ ಹಾಗೂ ಆಕ್ಸಿಜನ್ ಸಿಲಿಂಡರ್ ನೀಡುವ ನಿರ್ಧಾರಕ್ಕೆ ಬಂದೆವು ಎಂದು ವಿವರಿಸಿದ್ದಾರೆ.

    ಲೊಬೊ ಮತ್ತು ಮರ್ಲಿನ್ ಕಳೆದ ಮಾರ್ಚ್ ತಿಂಗಳಿನಲ್ಲಿ ಈ ಬಗ್ಗೆ ಶಾಸಕ ಕ್ಷಿತಿಜಿ ಠಾಕೂರ್ ಬಳಿ ಈ ಬಗ್ಗೆ ಪ್ರಸ್ತಾಪ ಮಾಡಿದ್ದರು. ಈ ವೇಳೆ ಶಾಸಕರು, ಜಿಲ್ಲಾಧಿಕಾರಿ ಡಾ. ಕೈಲಾಸ್ ಶಿಂಧೆ ಅವರ ಗಮನಕ್ಕೆ ತಂದರು. ಜೋಡಿಯ ಐಡಿಯಾಕ್ಕೆ ಜಿಲ್ಲಾಧಿಕಾರಿ ಕೂಡ ಸಾಥ್ ನೀಡಿದ್ದು, ವಿಶೇಷ ಯೋಜನೆಗೆ ಜಿಲ್ಲಾಧಿಕಾರಿ ಗ್ರೀನ್ ಸಿಗ್ನಲ್ ನೀಡಿದರು.

    ಆ ನಂತರ ಜೋಡಿ ವಾಸೈನಲ್ಲಿರುವ ಆಸ್ಪತ್ರೆಯ ಬೆಡ್ ತಯಾರು ಮಾಡುವವರ ಬಳಿ ಹೋಗಿ ವಿವರಿಸಿದ್ದಾರೆ. ಅಲ್ಲದೆ ಉತ್ತಮವಾದ ಹಾಸಿಗೆ, ಹೊದಿಕೆ, ತಲೆದಿಂಬು, ಬೆಡ್‍ಶೀಟ್ ಹಾಗೂ ಇತರ ಅಗತ್ಯ ವಸ್ತುಗಳ ತಯಾರು ಮಾಡಿಕೊಡುವಂತೆ ಕೇಳಿಕೊಂಡಿದ್ದಾರೆ. ಜೊತೆಗೆ ಕೋವಿಡ್ 19 ರೋಗಿಗಳಿಗೆ ಚಿಕಿತ್ಸೆ ನೀಡಲು ಆರೋಗ್ಯ ಇಲಾಖೆಗೆ ಅಗತ್ಯವಾಗಿ ಬೇಕಾಗುವ ಆಕ್ಸಿಜನ್ ಸಿಲಿಂಡರ್ ಕೂಡ ನೀಡಲು ತೀರ್ಮಾನಿಸದೆವು ಎಂದು ಲೊಬೊ ಹೇಳಿದ್ದಾರೆ.

    ಸಮಾಜಕ್ಕೆ ಜೋಡಿ ನೀಡಿದ ಕೊಡುಗೆಗೆ ಶಾಸಕರು ಧನ್ಯವಾದ ಅರ್ಪಿಸಿದ್ದಾರೆ. ಸದ್ಯ ಜೋಡಿ ವಲಸೆ ಕಾರ್ಮಿಕರು ಸೇರಿದಂತೆ ಸಾಕಷ್ಟು ಮಂದಿಗೆ ಸಹಾಯ ಮಾಡುತ್ತಿದೆ.

  • ವಿಕ್ಟೋರಿಯಾದಲ್ಲಿ ಕೊರೊನಾ ರೋಗಿಗಳೇ ಕಸ ಗುಡಿಸಬೇಕು, ನೆಲ ಒರೆಸಬೇಕು!

    ವಿಕ್ಟೋರಿಯಾದಲ್ಲಿ ಕೊರೊನಾ ರೋಗಿಗಳೇ ಕಸ ಗುಡಿಸಬೇಕು, ನೆಲ ಒರೆಸಬೇಕು!

    ಬೆಂಗಳೂರು: ಮಹಾಮಾರಿ ಕೊರೊನಾ ವೈರಸ್ ರಾಜ್ಯಕ್ಕೆ ಒಕ್ಕರಿಸಿದ ಬಳಿಕ ಜನ-ಜೀವನ ಅಸ್ತವ್ಯಸ್ತವಾಗಿದೆ. ಈ ಮಧ್ಯೆ ಕೋವಿಡ್ ಆಸ್ಪತ್ರೆಯ ಕರ್ಮಕಾಂಡ ಬಗೆದಷ್ಟು ಬಯಲಾಗುತ್ತಿದೆ. ಕೋವಿಡ್ ಆಸ್ಪತ್ರೆಗಳಲ್ಲಿ ರೋಗಿಗಳು ಪರದಾಟ ಅನುಭವಿಸುತ್ತಿದ್ದಾರೆ.

    ಹೌದು. ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೊರೊನಾ ಪಾಸಿಟಿವ್ ವ್ಯಕ್ತಿಗಳು ನರಕಯಾತನೆ ಅನುಭವಿಸುತ್ತಿದ್ದಾರೆ. ಆಸ್ಪತ್ರೆಯ ಕೊಠಡಿಯಲ್ಲಿ ಶುಚಿತ್ವ ಅನ್ನೋದೇ ಇಲ್ಲ. ಸಮಯಕ್ಕೆ ಊಟ, ತಿಂಡಿ ಬರಲ್ಲ. ನೀರಂತೂ ಬರೋದೆ ಇಲ್ಲ.

    ಅವರವರ ಬೆಡ್‍ಗಳ ಶುಚಿತ್ವ ಕೂಡ ರೋಗಿಗಳೇ ಮಾಡಿಕೊಳ್ಳುವ ಸ್ಥಿತಿ ಎದುರಾಗಿದೆ. ಆಸ್ಪತ್ರೆಯಲ್ಲಿ ರೋಗಿಗಳ ನರಕಯಾತನೆಯ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ. ಸೂಕ್ತ ಚಿಕಿತ್ಸೆ ಹಾಗೂ ಸೌಕರ್ಯ ನೀಡುವಂತೆ ಕೊರೊನಾ ಸೋಂಕಿತರು ಮನವಿ ಮಾಡಿಕೊಳ್ಳುತ್ತಿದ್ದಾರೆ.

    ರೋಗಿಗಳೇ ವಾರ್ಡ್ ಕಸ ಗುಡಿಸಬೇಕು, ವಾರ್ಡಿನಲ್ಲಿ ಸ್ವಚ್ಛತೆ ಇಲ್ಲ. ವಾರ್ಡ್ ನೆಲ ಕ್ಲೀನ್ ಮಾಡಬೇಕು. ಬಾತ್‍ರೂಮ್ ಅಂತೂ ಪಾಚಿ ಕಟ್ಟಿದೆ. ಈ ಮಧ್ಯೆ ರೋಗಿಗಳು ಇರಬೇಕು. ಇದರಿಂದ ಬೇಸತ್ತ ರೋಗಿಗಳು ಈಗ ಸೂಕ್ತ ಸೌಲಭ್ಯ ಹಾಗೂ ಚಿಕಿತ್ಸೆಗಾಗಿ ಕಣ್ಣೀರು ಹಾಕುತ್ತಿದ್ದಾರೆ. ಒಟ್ಟಿನಲ್ಲಿ ಆರೋಗ್ಯ ಸಚಿವರೇ ಇದೆಂಥಾ ಅವಸ್ಥೆ, ಸೋಂಕಿನ ನರಳಾಟದ ಮಧ್ಯೆಯೂ ಇದೆಂಥಾ ಕೆಲಸ, ಚಿಕಿತ್ಸೆ ಕೊಡೋ ಬದಲು ಇದೇನು ಮಾಡಿಸ್ತಿದ್ದೀರಿ. ಹೀಗೆ ಮಾಡಿಸಿದ್ರೆ ಅವರು ಗುಣಮುಖರಾಗೋದು ಹೇಗೆ ಎಂಬ ಪ್ರಶ್ನೆಗಳು ಹುಟ್ಟಿವೆ.

  • ರಾತ್ರಿ ಕೋವಿಡ್ ಆಸ್ಪತ್ರೆಗೆ ನುಗ್ಗಿ ಸೋಂಕಿತೆ ಜೊತೆ ಅಸಭ್ಯ ವರ್ತನೆ

    ರಾತ್ರಿ ಕೋವಿಡ್ ಆಸ್ಪತ್ರೆಗೆ ನುಗ್ಗಿ ಸೋಂಕಿತೆ ಜೊತೆ ಅಸಭ್ಯ ವರ್ತನೆ

    -ಲೈಟ್ ಆಫ್ ಮಾಡಿ ಕೈ ಹಿಡಿದು ಎಳೆದಾಡಿದ ಕಾಮುಕ

    ಕೋಲಾರ: ಕೋವಿಡ್-19 ಆಸ್ಪತ್ರೆಗೆ ನುಗ್ಗಿದ ವ್ಯಕ್ತಿ ಕೊರೊನಾ ಸೋಂಕಿತ ಮಹಿಳೆ ಜೊತೆ ಅಸಭ್ಯವಾಗಿ ವರ್ತಿಸಿರುವ ಘಟನೆ ಕೋಲಾರದಲ್ಲಿ ನಡೆದಿದೆ. ಭಾನುವಾರ ಘಟನೆ ನಡೆದಿದ್ದು, ಈ ಸಂಬಂಧ ಆಸ್ಪತ್ರೆಯ ರಕ್ಷಣಾಧಿಕಾರಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    ವಿಶ್ವನಾಥಾಚಾರಿ ಅಸಭ್ಯವಾಗಿ ವರ್ತಿಸಿದ ವ್ಯಕ್ತಿ. ಈತ ನಗರದ ಬೆಸ್ತರ ಬೀದಿಯ ಗೆಲ್ಪೇಟ್ ನಿವಾಸಿ ಎಂದು ತಿಳಿದು ಬಂದಿದೆ. ಶ್ರೀನಿವಾಸಪುರ ತಾಲೂಕಿನ ಪ್ರಾಥಮಿಕ ಅರೋಗ್ಯ ಕೇಂದ್ರದಲ್ಲಿ ಅರೋಗ್ಯ ಸಹಾಯಕನಾಗಿದ್ದಾನೆ ಎಂದು ತಿಳಿದು ಬಂದಿದೆ.

    ರಾತ್ರಿ ನಡೆದಿದ್ದೇನು?
    ಜೂನ್ 21ರ ರಾತ್ರಿ ಸುಮಾರು 1.30ಕ್ಕೆ ಆಸ್ಪತ್ರೆಗೆ ಬಂದ ವಿಶ್ವನಾಥಾಚಾರಿ ನಿಷೇಧಿತ ಪ್ರದೇಶದೊಳಗೆ ಬಂದಿದ್ದಾನೆ. ಕೊಠಡಿಯ ಲೈಟ್ ಗಳು ಆಫ್ ಮಾಡಿ ಕೊರೊನಾ ಸೋಂಕಿತೆಯ ಕೈ ಹಿಡಿದು ಎಳೆದಾಡಿ ಅಸಭ್ಯವಾಗಿ ವರ್ತಿಸಿದ್ದಾನೆ. ಸೋಂಕಿತೆ ಕೂಗಿಕೊಳ್ಳುತ್ತಿದ್ದಂತೆ ಆಸ್ಪತ್ರೆಯ ಸಿಬ್ಬಂದಿ ತೆರಳಿದ್ದಾರೆ. ವಿಶ್ವನಾಥಾಚಾರಿ ಆಸ್ಪತ್ರೆಯ ಸಿಬ್ಬಂದಿಯನ್ನ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾನೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ವೈದ್ಯ ಬೈಯಪ್ಪ ರೆಡ್ಡಿಯವರನ್ನು ವಿಶ್ವನಾಥಾಚಾರಿ ನಿಂದಿಸಿದ್ದಾನೆ.

    ಈ ಸಂಬಂಧ ಆಸ್ಪತ್ರೆ ಸಿಬ್ಬಂದಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿಶ್ವನಾಥಾಚಾರಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.