Tag: ಕೋವಿಡ್ ಆಸ್ಪತ್ರೆ

  • ಕೋವಿಡ್ ಆಸ್ಪತ್ರೆಯಲ್ಲಿ ಅಗ್ನಿ ದುರಂತ – 10 ಮಂದಿ ಸಜೀವ ದಹನ

    ಕೋವಿಡ್ ಆಸ್ಪತ್ರೆಯಲ್ಲಿ ಅಗ್ನಿ ದುರಂತ – 10 ಮಂದಿ ಸಜೀವ ದಹನ

    ಮುಂಬೈ: ಕೋವಿಡ್ ಆಸ್ಪತ್ರೆಯಲ್ಲಿ ಅಗ್ನಿ ದುರಂತ ಸಂಭವಿಸಿದ್ದು, 10 ಮಂದಿ ಸಜೀವ ದಹನಗೊಂಡಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

    ಮಹಾರಾಷ್ಟ್ರದ ಅಹ್ಮದ್‍ನಗರದಲ್ಲಿರುವ ಜಿಲ್ಲಾ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಇಂದು ಬೆಳಗ್ಗೆ ಸುಮಾರು 11 ಗಂಟೆಗೆ ಬೆಂಕಿ ಕಾಣಿಸಿಕೊಂಡಿದ್ದು, ಕೋವಿಡ್-19 ಚಿಕಿತ್ಸೆ ಪಡೆಯುತ್ತಿದ್ದ ಸುಮಾರು ಹತ್ತು ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ ಮತ್ತು ಮತ್ತೋರ್ವ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದಾರೆ.  ಇದನ್ನೂ ಓದಿ: ಪುನೀತ್ ಸಾವಿನ ನಂತರ ಜಯದೇವ ಆಸ್ಪತ್ರೆ ರೋಗಿಗಳಲ್ಲಿ 30% ಹೆಚ್ಚಳ

    ಘಟನೆ ಕುರಿತಂತೆ ಜಿಲ್ಲಾಧಿಕಾರಿ ರಾಜೇಂದ್ರ ಭೋಸಲೆ, ಇದೀಗ ಉಳಿದಿರುವ ರೋಗಿಗಳನ್ನು ಮತ್ತೊಂದು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದೆ. ಒಟ್ಟು ಐಸಿಯು ವಾರ್ಡ್‍ನಲ್ಲಿ 17 ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದರು. ಈ ಪೈಕಿ 10 ಮಂದಿ ಬೆಂಕಿಗೆ ಆಹುತಿಯಾಗಿದ್ದಾರೆ. ಸತ್ತವರೆಲ್ಲರೂ ಕೋವಿಡ್-19ಗೆ ಚಿಕಿತ್ಸೆ ಪಡೆಯುತ್ತಿದ್ದರು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಅಪ್ಪು ಸಮಾಧಿ ಬಳಿಯೇ ಮದುವೆಯಾಗಲು ಆಗಮಿಸಿದ ಪ್ರೇಮಿಗಳು

    ಪ್ರಾಥಮಿಕ ತನಿಖೆಯ ಪ್ರಕಾರ ಶಾರ್ಟ್ ಸರ್ಕ್ಯೂಟ್‍ನಿಂದ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಹೇಳಿದ್ದಾರೆ. ಇದನ್ನೂ ಓದಿ: ಒಬ್ಬ ಡ್ಯಾನ್ಸರ್ ಬರಬಹುದು, ಫೈಟರ್ ಬರಬಹುದು, ಆದ್ರೆ ಅಪ್ಪು ಬರಲ್ಲ: ರಮೇಶ್ ಅರವಿಂದ್

  • ಯಲಹಂಕ ಕೋವಿಡ್ ಆಸ್ಪತ್ರೆಗೆ ನಿರ್ಮಲಾ ಸೀತಾರಾಮನ್ ಭೇಟಿ

    ಯಲಹಂಕ ಕೋವಿಡ್ ಆಸ್ಪತ್ರೆಗೆ ನಿರ್ಮಲಾ ಸೀತಾರಾಮನ್ ಭೇಟಿ

    ಬೆಂಗಳೂರು: ಬೋಯಿಂಗ್ ಸಂಸ್ಥೆಯು, ‘ಸೆಲ್ಕೋ’, ‘ಡಾಕ್ಟರ್ಸ್ ಫಾರ್ ಯು’ ಸಹಯೋಗದೊಂದಿಗೆ ಯಲಹಂಕದಲ್ಲಿ ನಿರ್ಮಿಸಿರುವ 100 ಹಾಸಿಗೆಗಳ ಅತ್ಯಾಧುನಿಕ ಕೋವಿಡ್-ಕೇರ್ ಸ್ಪೆಷಾಲಿಟಿ ಆಸ್ಪತ್ರೆಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಗುರುವಾರ ಭೇಟಿ ನೀಡಿದರು.

    ಯಲಹಂಕದಲ್ಲಿ ಬೋಯಿಂಗ್ ಸಂಸ್ಥೆಯು ಕೋವಿಡ್ ಕೇರ್ ಆಸ್ಪತ್ರೆ ನಿರ್ಮಿಸುತ್ತಿರುವ ವಿಷಯವನ್ನು ರಾಜ್ಯಕ್ಕೆ ಮೊದಲಿಗೆ ತಿಳಿಸಿದವರೇ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್. ಮೇ 7ರಂದು ಈ ವಿಷಯವನ್ನು ಟ್ವೀಟ್ ಮಾಡಿದ್ದ ವಿತ್ತ ಸಚಿವರಿಗೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಧನ್ಯವಾದ ಹೇಳಿದ್ದರು.

    ಬೋಯಿಂಗ್ ಸಂಸ್ಥೆಯು ‘ಸೆಲ್ಕೋ’ ಮತ್ತು ‘ಡಾಕ್ಟರ್ಸ್ ಫಾರ್ ಯು’ ಸಹಯೋಗದೊಂದಿಗೆ ಅತಿ ಕಡಿಮೆ ಅವಧಿಯಲ್ಲಿ ಕೋವಿಡ್-ಕೇರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಿರುವ ಬಗ್ಗೆ ಅವರು ಸಂತಸ ವ್ಯಕ್ತಪಡಿಸಿದರು. ಕಾರ್ಪೋರೇಟ್ ಕಂಪನಿಗಳು ತಮ್ಮ ಸಮುದಾಯಿಕ ಜವಾಬ್ದಾರಿ ಕಾರ್ಯಕ್ರಮದ ಭಾಗವಾಗಿ ಕೋವಿಡ್ ಅಲೆ ನಿಯಂತ್ರಣ, ಚಿಕಿತ್ಸೆಯಲ್ಲಿ ಭಾಗಿಯಾಗಿರುವುದು ಶ್ಲಾಘನೀಯ ಎಂದರು.

    ಕರ್ನಾಟಕ ವಿದ್ಯುತ್ ನಿಗಮ ಆಸ್ಪತ್ರೆ ನಿರ್ಮಾಣಕ್ಕೆ ಅರ್ಧ ಎಕರೆ ಜಾಗ ಅಗತ್ಯ ಜಾಗ ಒದಗಿಸಿದೆ. ಡಾಕ್ಟರ್ಸ್ ಫಾರ್ ಯು ಸರ್ಕಾರೇತರ ಸಂಸ್ಥೆಯು ಆಸ್ಪತ್ರೆ ನಿರ್ವಹಣೆ ಮತ್ತು ಆರೋಗ್ಯ ಸೇವೆ ಒದಗಿಸುವ ಜವಾಬ್ದಾರಿ ವಹಿಸಿಕೊಂಡಿದೆ. ಅತ್ಯಾಧುನಿಕ ವೈದ್ಯಕೀಯ ಸೌಲಭ್ಯ ಇರುವ ಆಸ್ಪತ್ರೆಯನ್ನು ಕೇವಲ 20 ದಿನದೊಳಗೆ ಪೂರ್ಣಗೊಳಿಸಿರುವುದು ವಿಶೇಷ.

    ಈ ಸಂದರ್ಭದಲ್ಲಿ ಆರೋಗ್ಯ ಸಚಿವ ಡಾ. ಕೆ. ಸುಧಾಕರ್, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಆಯುಕ್ತೆ ಗುಂಜನ್ ಕೃಷ್ಣಾ ಉಪಸ್ಥಿತರಿದ್ದರು.

     

  • 20 ದಿನಗಳಲ್ಲಿ ನಿರ್ಮಾಣವಾದ ಯಲಹಂಕ ಕೋವಿಡ್ ಆಸ್ಪತ್ರೆ ಲೋಕಾರ್ಪಣೆ- ವೈಶಿಷ್ಟ್ಯವೇನು..?

    20 ದಿನಗಳಲ್ಲಿ ನಿರ್ಮಾಣವಾದ ಯಲಹಂಕ ಕೋವಿಡ್ ಆಸ್ಪತ್ರೆ ಲೋಕಾರ್ಪಣೆ- ವೈಶಿಷ್ಟ್ಯವೇನು..?

    ಬೆಂಗಳೂರು: ಕೋವಿಡ್ ಅಲೆಗಳನ್ನು ಸಮರ್ಥವಾಗಿ ನಿಭಾಯಿಸುವ ನಿಟ್ಟಿನಲ್ಲಿ ಬೋಯಿಂಗ್ ಸಂಸ್ಥೆಯು, ‘ಸೆಲ್ಕೋ’, ‘ಡಾಕ್ಟರ್ಸ್ ಫಾರ್ ಯು’ ಸಹಯೋಗದೊಂದಿಗೆ ಯಲಹಂಕದಲ್ಲಿ ನಿರ್ಮಿಸಿರುವ 100 ಹಾಸಿಗೆಗಳ ಅತ್ಯಾಧುನಿಕ ಕೊವಿಡ್-ಕೇರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಮತ್ತು ಕೇಂದ್ರ ಸಚಿವ ಡಿ.ವಿ ಸದಾನಂದ ಗೌಡ ಇಂದು ಉದ್ಘಾಟಿಸಿದರು.

    ಆಸ್ಪತ್ರೆ ನಿರ್ಮಾಣಕ್ಕೆ ಕರ್ನಾಟಕ ವಿದ್ಯುತ್ ನಿಗಮ ತನ್ನ ಕ್ಯಾಂಪಸ್‍ನಲ್ಲಿ ಜಾಗ ನೀಡಿದ್ದು, ಸುಮಾರು ಅರ್ಧ ಎಕರೆ ಪ್ರದೇಶದಲ್ಲಿ ಅತ್ಯಾಧುನಿಕ ವೈದ್ಯಕೀಯ ಸೌಲಭ್ಯ ಇರುವ ಆಸ್ಪತ್ರೆಯನ್ನು ಕೇವಲ 20 ದಿನದೊಳಗೆ ಪೂರ್ಣಗೊಳಿಸಿರುವುದು ವಿಶೇಷ.

    ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಬಿಎಸ್‍ವೈ, ಕೋವಿಡ್ ಎರಡನೇ ಅಲೆ ನಿಯಂತ್ರಣ, ಚಿಕಿತ್ಸೆ ಹಾಗೂ ಲಸಿಕೆ ಕಾರ್ಯಕ್ರಮದಲ್ಲಿ ಸರ್ಕಾರದ ಜೊತೆಗೆ ಖಾಸಗಿ ಸಂಸ್ಥೆಗಳು ಹಾಗೂ ಎನ್‍ಜಿಓಗಳು ಕೈ ಜೋಡಿಸಿರುವುದು ಅತ್ಯಂತ ಶ್ಲಾಘನೀಯ. ಬೋಯಿಂಗ್ ಸಂಸ್ಥೆಯು ‘ಸೆಲ್ಕೋ’ ಮತ್ತು ‘ಡಾಕ್ಟರ್ಸ್ ಫಾರ್ ಯು’ ಸಹಯೋಗದೊಂದಿಗೆ ಅತ್ಯಂತ ಕಡಿಮೆ ಸಮಯದಲ್ಲಿ ಕೊವಿಡ್-ಕೇರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ನಿರ್ಮಿಸಿರುವುದು ಬಹಳ ಸಂತಸದ ವಿಷಯ. ಕಾರ್ಪೋರೇಟ್ ಕಂಪನಿಗಳು ತಮ್ಮ ಸಮುದಾಯಿಕ ಜವಾಬ್ದಾರಿ ಕಾರ್ಯಕ್ರಮದ ಭಾಗವಾಗಿ ಇಂಥ ಜನಪರ ಕಾರ್ಯಕ್ರಮಗಳನ್ನು ರೂಪಿಸುತ್ತಿರುವುದು ಅನುಕರಣೀಯ ಎಂದರು.

    ಕರ್ನಾಟಕ ವಿದ್ಯುತ್ ನಿಗಮದ ಯಲಹಂಕ ಕ್ಯಾಂಪಸ್‍ನಲ್ಲಿ ಅತ್ಯಂತ ಕಡಿಮೆ ಸಮಯದಲ್ಲಿ ಕೋವಿಡ್ ಕೇರ್ ಆಸ್ಪತ್ರೆ ತಲೆ ಎತ್ತಿದೆ. ಕೋವಿಡ್ ವಿರುದ್ಧದ ಹೋರಾಟದಲ್ಲಿ ಸರ್ಕಾರದ ಪ್ರಯತ್ನಗಳಿಗೆ ಕಾರ್ಪೋರೇಟ್ ಸಂಸ್ಥೆಗಳು ಎನ್‍ಜಿಓಗಳು ಕೈ ಜೋಡಿಸಿರುವುದು ಸಂತಸದ ವಿಷಯ. ರಾಜ್ಯದ ಆರೋಗ್ಯ ವ್ಯವಸ್ಥೆ ಬಲಪಡಿಸುವ ನಿಟ್ಟಿನಲ್ಲಿ ಕೈಗೊಳ್ಳುವ ಎಲ್ಲ ಕಾರ್ಯಕ್ರಮಗಳಲ್ಲಿ ಸರ್ಕಾರದ ಜೊತೆ ಇನ್ನಿತರ ಖಾಸಗಿ ಸಂಸ್ಥೆಗಳು ಕೈ ಜೋಡಿಸಲಿ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ ಸದಾನಂದ ಗೌಡ ಹೇಳಿದರು.

    ಕಾರ್ಯಕ್ರಮದಲ್ಲಿ ಬಿಡಿಎ ಅಧ್ಯಕ್ಷ, ಶಾಸಕ ಎಸ್. ಆರ್. ವಿಶ್ವನಾಥ್, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಮತ್ತು ಅಭಿವೃದ್ಧಿ ಆಯುಕ್ತೆ ವಂದಿತಾ ಶರ್ಮಾ, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ, ಸರಕಾರದ ಅಪರ ಮುಖ್ಯ ಕಾರ್ಯದರ್ಶಿ ಡಾ. ರಾಜ್ ಕುಮಾರ್ ಖತ್ರಿ, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಆಯುಕ್ತೆ ಗುಂಜನ್ ಕೃಷ್ಣಾ, ಕರ್ನಾಟಕ ಉದ್ಯೋಗ ಮಿತ್ರದ ವ್ಯವಸ್ಥಾಪಕ ನಿರ್ದೇಶಕ ಹೆಚ್. ಎಂ. ರೇವಣ್ಣಗೌಡ ಉಪಸ್ಥಿತರಿದ್ದರು. ಇದನ್ನೂ ಓದಿ: ಬಿಎಸ್‍ವೈ ಅನ್ನ ಹಾಕಿದ ದೇವರು – ಸಿದ್ದರಾಮಯ್ಯಗೆ ಕಾಟ ಕೊಟ್ಟ ಕುಡುಕ

    ಆಸ್ಪತ್ರೆ ವೈಶಿಷ್ಟ್ಯ:
    ಅತಿ ಕಡಿಮೆ ಅವಧಿ ಅಂದರೆ ಕೇವಲ 20 ದಿನಗಳಲ್ಲಿ ಅತ್ಯಾಧುನಿಕ ಸೌಲಭ್ಯ ಹೊಂದಿರುವ ಈ ಆಸ್ಪತ್ರೆ ನಿರ್ಮಾಣವಾಗಿದ್ದು, ಸೌರ ವ್ಯವಸ್ಥೆಯನ್ನು ಒಳಗೊಂಡಿದೆ. ತಾಪಮಾನ ನಿಯಂತ್ರಿಸಬಲ್ಲ ಮಾದರಿ ವ್ಯವಸ್ಥೆ ಇದೆ. ಔಷಧಾಲಯ, ಪ್ರಯೋಗಾಲಯ, ವಿಶ್ರಾಂತಿ ಕೊಠಡಿ, ದಾದಿಯರ ಕೇಂದ್ರ, ತಾಯಿಯರ ಆರೈಕೆ ಕೇಂದ್ರ ಹಾಗೂ ಸಭಾಂಗಣವನ್ನು ಒಳಗೊಂಡಿದೆ. 10 ಐಸಿಯು ಹಾಸಿಗೆ, 20 ಎಚ್‍ಡಿಯು ಹಾಸಿಗೆಗಳಿವೆ. ಉಳಿದ ಹಾಸಿಗೆಗಳು ವೈದ್ಯಕೀಯ ಆಮ್ಲಜನಕದ ಸಂಪರ್ಕ ಹೊಂದಿವೆ.

    ವೆಚ್ಚ, ನಿರ್ವಹಣೆ:
    ಆಸ್ಪತ್ರೆ ನಿರ್ಮಾಣಕ್ಕೆ ಒಟ್ಟು 5.5 ಕೋಟಿ ರೂ. ವೆಚ್ಚವಾಗಿದ್ದು, ಬೊಯಿಂಗ್ ಡಿಫೆನ್ಸ್ ಇಂಡಿಯಾ ಪ್ರೈ. ಲಿ 3 ಕೋಟಿ ರೂ., ಸೆಲ್ಕೋ ಫೌಂಡೇಷನ್ 2.5 ಕೋಟಿ ರೂ. ನೀಡಿದೆ. ಕರ್ನಾಟಕ ವಿದ್ಯುತ್ ನಿಗಮ ಆಸ್ಪತ್ರೆ ನಿರ್ಮಾಣಕ್ಕೆ ಅಗತ್ಯ ಜಾಗ ಒದಗಿಸಿದೆ. ಡಾಕ್ಟರ್ಸ್ ಫಾರ್ ಯು ಸರ್ಕಾರೇತರ ಸಂಸ್ಥೆಯು ಆಸ್ಪತ್ರೆ ನಿರ್ವಹಣೆ ಮತ್ತು ಆರೋಗ್ಯ ಸೇವೆ ಒದಗಿಸುವ ಜವಾಬ್ದಾರಿ ವಹಿಸಿಕೊಂಡಿದೆ.

    ಅತಿ ಕಡಿಮೆ ಅವಧಿಯಲ್ಲಿ ಅತ್ಯಂತ ಶೀಘ್ರವಾಗಿ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟಡ ನಿರ್ಮಿಸಿ ಸಾರ್ವಜನಿಕರಿಗೆ ಸೌಲಭ್ಯ ಒದಗಿಸುತ್ತಿರುವ ಇಡೀ ತಂಡದ ಪರಿಶ್ರಮ ಶ್ಲಾಘನೀಯ ಎಂದು ಬೋಯಿಂಗ್ ಡಿಫೆನ್ಸ್ ಇಂಡಿಯಾದ ಅಧ್ಯಕ್ಷ ಸಲೀಲ್ ಗುಪ್ತೆ ಹೇಳಿದರು. ಈ ಆಸ್ಪತ್ರೆಯ ಸುಸ್ಥಿರತೆಯ ಎಲ್ಲ ಪರಿಕಲ್ಪನೆಗಳನ್ನು ಒಳಗೊಂಡಿದೆ. ಕೊವಿಡ್ ಬಿಕ್ಕಟ್ಟಿನ ಸಮಯದಲ್ಲಿ ಸೌರಶಕ್ತಿಯಂತಹ ಸುಸ್ಥಿರ ಶಕ್ತಿಯು ನಿರ್ಣಾಯಕ ಪಾತ್ರವಹಿಸಲಿದೆ ಎಂಬುದನ್ನು ಈ ಕಟ್ಟಡ ಸಾಬೀತುಪಡಿಸಲಿದೆ ಎಂದು ಸೆಲ್ಕೋ ಫೌಂಡೇಷನ್‍ನ ಸಂಸ್ಥಾಪಕ ಡಾ. ಹರೀಶ್ ಹಂದೆ ತಿಳಿಸಿದರು.

  • ರಾಯಚೂರಿನಲ್ಲಿ 20 ಕೆ.ಎಲ್ ಆಮ್ಲಜನಕ ಪ್ಲಾಂಟ್ ಆರಂಭ: ಡಿಸಿಎಂ ಚಾಲನೆ

    ರಾಯಚೂರಿನಲ್ಲಿ 20 ಕೆ.ಎಲ್ ಆಮ್ಲಜನಕ ಪ್ಲಾಂಟ್ ಆರಂಭ: ಡಿಸಿಎಂ ಚಾಲನೆ

    – ಸಂಚಾರಿ ಕೋವಿಡ್ ಆಸ್ಪತ್ರೆ ಬಸ್‍ಗಳು ಇಂದಿನಿಂದ ಕಾರ್ಯಾರಂಭ

    ರಾಯಚೂರು: ಜಿಲ್ಲೆಯಲ್ಲಿನ ಕೋವಿಡ್ ಸೋಂಕಿತರು ಹಾಗೂ ರಿಮ್ಸ್ ಆಸ್ಪತ್ರೆ ರೋಗಿಗಳ ಆಮ್ಲಜನಕ ಕೊರತೆ ನೀಗಿಸಲು ಸಿದ್ದಪಡಿಸಿದ್ದ 20 ಕೆ.ಎಲ್. ಆಮ್ಲಜನಕ ಪ್ಲಾಂಟ್ ಇಂದು ಲೋಕಾರ್ಪಣೆಯಾಗಿದೆ. ನಗರದ ರಿಮ್ಸ್ ಆಸ್ಪತ್ರೆ ಆವರಣದಲ್ಲಿ ಸ್ಥಾಪಿಸಲಾದ ಘಟಕವನ್ನು ಉಪಮುಖ್ಯಮಂತ್ರಿ, ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ ಉದ್ಘಾಟನೆ ಮಾಡಿದರು.

    ಸಾರಿಗೆ ಇಲಾಖೆಯ ಮೂರು ಬಸ್‍ಗಳನ್ನು ಸಂಚಾರಿ ಕೋವಿಡ್ ಚಿಕಿತ್ಸಾ ಕೇಂದ್ರಗಳನ್ನಾಗಿ ಪರಿವರ್ತಿಸಲಾಗಿದ್ದು, ಕೋವಿಡ್ ಮೊಬೈಲ್ ಆಸ್ಪತ್ರೆಗೆ ಸಾರಿಗೆ ಸಚಿವರಾಗಿರುವ ಲಕ್ಷ್ಮಣ ಸವದಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಇಂದು ಚಾಲನೆ ನೀಡಿದರು. ಇದನ್ನು ಓದಿ: ಮುಳಬಾಗಿಲು ಪಟ್ಟಣದಲ್ಲಿ ಸುಸಜ್ಜಿತ ಕೋವಿಡ್ ಕೇರ್ ಆಸ್ಪತ್ರೆ ಉದ್ಘಾಟಿಸಿದ ಡಿಸಿಎಂ

    ಪ್ರತಿ ಬಸ್‍ನಲ್ಲಿ 4 ಬೆಡ್ ಹಾಗೂ ಸೋಂಕಿತರು ಕುಳಿತುಕೊಂಡು ಆಕ್ಸಿಜನ್ ಪಡೆಯಲು 4 ಸೀಟ್ ವ್ಯವಸ್ಥೆ ಮಾಡಲಾಗಿದೆ. ಬಸ್‍ನಲ್ಲಿ 5 ಆಕ್ಸಿಜನ್ ಸಿಲಿಂಡರ್, ವೆಂಟಿಲೇಟರ್, ಆಕ್ಸಿಜನ್ ಕಾನ್ಸಂಟ್ರೇಟರ್ ವ್ಯವಸ್ಥೆಯಿದೆ. ಈ ಮೂರು ಬಸ್ ಗಳನ್ನ ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ, ತಾಲೂಕು ಆಸ್ಪತ್ರೆ ಮುಂದೆ ನಿಲ್ಲಿಸಲಾಗುತ್ತಿದೆ.

    ಜಿಲ್ಲಾ ಭೇಟಿಯಲ್ಲಿರುವ ಡಿಸಿಎಂ ಕೋವಿಡ್ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೋವಿಡ್ ನಿಯಂತ್ರಣ ಹಿನ್ನೆಲೆ ಜಿಲ್ಲಾಡಳಿತದ ಕ್ರಮಗಳ ಕುರಿತಾಗಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ. ಸಮಾರಂಭದಲ್ಲಿ ಸಂಸದ ರಾಜಾ ಅಮರೇಶ್ವರ ನಾಯಕ್, ರಾಯಚೂರು ನಗರ ಶಾಸಕ ಡಾ. ಶಿವರಾಜ್ ಪಾಟೀಲ್ ಡಿಸಿಎಂ ಲಕ್ಷ್ಮಣ ಸವದಿ ಜೊತೆ ಪಾಲ್ಗೊಂಡಿದ್ದರು. ಇದನ್ನು ಓದಿ:ಜಿಲ್ಲೆಗಳಲ್ಲಿ ಕೇಸ್ ಇಳಿಕೆಯಾದ್ರೂ, ಸಾವಿನ ಪ್ರಮಾಣ ಇಳಿಕೆ ಇಲ್ಲ – ವಾರ್ ರೂಮ್ ಡೆತ್ ರಿಪೋರ್ಟ್

  • ಮಡಿಕೇರಿ ಕೋವಿಡ್ ಆಸ್ಪತ್ರೆಯಲ್ಲಿ ಮತ್ತೊಂದು ಕರ್ಮಕಾಂಡ ಬಯಲಿಗೆ

    ಮಡಿಕೇರಿ ಕೋವಿಡ್ ಆಸ್ಪತ್ರೆಯಲ್ಲಿ ಮತ್ತೊಂದು ಕರ್ಮಕಾಂಡ ಬಯಲಿಗೆ

    ಮಡಿಕೇರಿ: ಕೋವಿಡ್ ಸೋಂಕಿನಿಂದ ಮೃತಪಟ್ಟ ಮಹಿಳೆಯ ಫೋನ್ ಕಳ್ಳತನವಾಗಿದ್ದ ಪ್ರಕರಣ ಕಣ್ಮುಂದೆ ಇರುವಾಗಲೇ, ಮೃತ ವೃದ್ಧೆಯ ಚಿನ್ನದ ತಾಳಿಯ ಸರವನ್ನೇ ಕಳವು ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಕೋವಿಡ್ ನಿಂದ ಮೃತಪಟ್ಟ ಕಮಲ ಎಂಬ ವೃದ್ಧೆಯ ಅಂದಾಜು ಒಂದುವರೆ ಲಕ್ಷ ಮೌಲ್ಯದ 25 ಗ್ರಾಂ ತೂಕದ ಚಿನ್ನದ ಸರವನ್ನೇ ದಾದಿಯರು ಕಳ್ಳತನ ಮಾಡಿರುವ ಆರೋಪ ಕೇಳಿ ಬಂದಿದೆ.

    ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ರಸೂಲ್ ಪುರ ಗ್ರಾಮದ ಕಮಲಾ ಅವರನ್ನ ಮೇ 1 ರಂದು ಮಡಿಕೇರಿಯ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಂದು ಸಾಮಾನ್ಯ ವಾರ್ಡಿನಲ್ಲೇ ದಾಖಲಾಗಿದ್ದ ಕಮಲ ಅವರ ಆರೋಗ್ಯದ ಸ್ಥಿತಿ ಗಂಭೀರವಾಗಿದ್ದರಿಂದ, ಮೇ 2 ರಂದು ಐಸಿಯು ವಾರ್ಡಿಗೆ ಶಿಫ್ಟ್ ಮಾಡಲಾಗಿತ್ತು. ಈ ವೇಳೆ ದಾದಿಯರು ಕಮಲ ಅವರ ಕೊರಳಿನಲ್ಲಿದ್ದ ಚಿನ್ನದ ತಾಳಿ ಸರವನ್ನು ತೆಗೆದುಕೊಂಡಿದ್ದರು. ಐಸಿಯು ವಾರ್ಡಿನಲ್ಲಿ ಸ್ವಲ್ಪ ಚೇತರಿಸಿಕೊಂಡಿದ್ದ ವೃದ್ಧೆ ಕಮಲ ತನ್ನ ಮಗ ಮೊಣ್ಣಪ್ಪ ಅವರಿಗೆ ಕರೆ ಮಾಡಿ ಈ ವಿಷಯವನ್ನು ತಿಳಿಸಿದ್ದರು.

    ಇದಾದ ಕೆಲವೇ ದಿನಗಳಲ್ಲಿ ಅಂದರೆ ಮೇ 19 ರಂದು ಕೋವಿಡ್ ಆಸ್ಪತ್ರೆಯಲ್ಲೇ ವೃದ್ಧೆ ಕಮಲ ಮೃತಪಟ್ಟಿದ್ದರು. 20 ರಂದು ಅಂತ್ಯಕ್ರಿಯೆ ನೆರವೇರಿಸಿದ ಮೊಣ್ಣಪ್ಪ 21 ರಂದು ಮಡಿಕೇರಿ ಆಸ್ಪತ್ರೆಗೆ ಬಂದು ತನ್ನ ತಾಯಿಯ ವಸ್ತುಗಳನ್ನು ಕೇಳಿದ್ದಾರೆ. ಈ ವೇಳೆ ಆಸ್ಪತ್ರೆ ಸಿಬ್ಬಂದಿ ಕೇವಲ ಬ್ಯಾಗನ್ನು ಮಾತ್ರ ನೀಡಿದರು. ತನ್ನ ತಾಯಿಯ ಚಿನ್ನದ ಸರವನ್ನು ಕೊಟ್ಟಿಲ್ಲ ಎಂದು ಮೊಣ್ಣಪ್ಪ ಕೋವಿಡ್ ಆಸ್ಪತ್ರೆ ಡೀನ್ ಮತ್ತು ಮಡಿಕೇರಿ ನಗರ ಪೊಲೀಸರಿಗೆ ದೂರು ನೀಡಿದ್ದಾರೆ.

    ನಮ್ಮ ಸಂಪ್ರದಾಯದ ಪ್ರಕಾರ ಗಂಡ ಇರುವಾಗಲೇ ಹೆಂಡತಿ ಕೊರಳಿನಿಂದ ತಾಳಿಯನ್ನು ತೆಗೆಯುವುದಿಲ್ಲ. ಹೀಗಾಗಿ ತಾಯಿಯನ್ನು ಆಸ್ಪತ್ರೆಗೆ ಕಳುಹಿಸುವಾಗ ಚೈನ್ ತೆಗೆಯದೆ ಆಸ್ಪತ್ರೆಗೆ ಕಳುಹಿಸಿದೆವು. ಆದರೆ ಈಗ ತಾಯಿಯ ಚಿನ್ನದ ತಾಳಿಯ ಸರವನ್ನೇ ಕೊಟ್ಟಿಲ್ಲ. ಈಗ ಧಾರ್ಮಿಕ ಕಾರ್ಯಗಳನ್ನು ಮಾಡಲು ತಾಳಿ ಬೇಕಾಗಿದೆ. ಅದನ್ನು ದಯಮಾಡಿ ಕೊಡಿಸಿ ಎಂದು ಅಂಗಲಾಚುತ್ತಿದ್ದಾರೆ. ಇದನ್ನೂ ಓದಿ: ತಾಯಿ ನೆನಪುಗಳು ಇರುವ ಮೊಬೈಲ್ ಫೋನ್ ಹಿಂದಿರುಗಿಸಿ-ಪುಟ್ಟ ಬಾಲಕಿಯ ಮನವಿ

    ಇನ್ನು ಈ ಕುರಿತು ಪ್ರತಿಕ್ರಿಯಿಸಿರುವ ಜಿಲ್ಲಾಧಿಕಾರಿ. ಆಸ್ಪತ್ರೆಯಲ್ಲಿ ಈ ರೀತಿ ಆಗಬಾರದಿತ್ತು. ಇದು ಅತ್ಯಂತ ಅಮಾನವೀಯ ಘಟನೆ. ಈ ಕುರಿತು ಈಗಾಗಲೇ ಆಸ್ಪತ್ರೆಯಲ್ಲಿ ತನಿಖೆ ನಡೆಯುತ್ತಿದೆ. ಎಲ್ಲಾ ವಾರ್ಡುಗಳಲ್ಲೂ ಸಿಸಿ ಕ್ಯಾಮೆರಾ ಅಳವಡಿಲಾಗುತ್ತಿದೆ. ಆದಷ್ಟು ಬೇಗ ಸಮಸ್ಯೆ ಬಗೆಹರಿಯಲಿದೆ ಎಂದಿದ್ದಾರೆ. ಒಟ್ಟಿನಲ್ಲಿ ಕೊವಿಡ್ ನಿಂದ ಮೃತಪಟ್ಟವರ ಬೆಲೆ ಬಾಳುವ ವಸ್ತುಗಳು ಕೊವಿಡ್ ಆಸ್ಪತ್ರೆಯಲ್ಲಿ ನಾಪತ್ತೆಯಾಗುತ್ತಿರುವುದು ಎಲ್ಲರೂ ತಲೆತಗ್ಗಿಸುವಂತೆ ಆಗಿದೆ.

    ಕೊಡಗಿನಲ್ಲಿ ನಿಯಂತ್ರಣಕ್ಕೆ ಬಾರದ ಸಾವಿನ ಪ್ರಮಾಣ
    ಕೊಡಗು ಜಿಲ್ಲೆಯಲ್ಲಿ ಲಾಕ್‍ಡೌನ್ ಕೊಂಚ ಪರಿಣಾಮ ಬೀರಿದ್ದು, ಕೋವಿಡ್ ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಿದೆ. ಆದರೆ ಸಾವಿನ ಪ್ರಮಾಣ ಮಾತ್ರ ನಿಯಂತ್ರಣಕ್ಕೆ ಬರುತ್ತಿಲ್ಲ. ಕಳೆದ 24 ಗಂಟೆಗಳ ಅವಧಿಯಲ್ಲಿ (ಇಂದು ಬೆಳಗ್ಗೆ 8 ಗಂಟೆಯವರೆಗೆ) 10 ಸಾವು ಸಂಭವಿಸಿದ್ದು, ಇಲ್ಲಿಯವರೆಗೆ ಒಟ್ಟು 295 ಮರಣ ಪ್ರಕರಣಗಳು ವರದಿಯಾಗಿದೆ.

    ಜಿಲ್ಲೆಯಲ್ಲಿ ಸೋಮವಾರ ಬೆಳಗ್ಗೆ 8 ಗಂಟೆ ವೇಳೆಗೆ 264 ಹೊಸ ಕೋವಿಡ್-19 ಪ್ರಕರಣಗಳು ದೃಢಪಟ್ಟಿದೆ. 246 ಆರ್.ಟಿ.ಪಿ.ಸಿ.ಆರ್ ಮತ್ತು 18 ಪ್ರಕರಣಗಳು ರಾಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ದೃಢಪಟ್ಟಿದೆ. ಮಡಿಕೇರಿ ತಾಲೂಕಿನಲ್ಲಿ 57, ಸೋಮವಾರಪೇಟೆ ತಾಲೂಕಿನಲ್ಲಿ 118 ಹಾಗೂ ವಿರಾಜಪೇಟೆ ತಾಲೂಕಿನಲ್ಲಿ 89 ಹೊಸ ಕೋವಿಡ್-19 ಪ್ರಕರಣಗಳು ಕಂಡು ಬಂದಿದೆ.

    ಜಿಲ್ಲೆಯಲ್ಲಿ ಇಲ್ಲಿಯವರೆಗೆ ಒಟ್ಟು ಪ್ರಕರಣಗಳ ಸಂಖ್ಯೆ 22,732 ಆಗಿದ್ದು, ಪ್ರಸ್ತುತ 2676 ಸಕ್ರಿಯ ಪ್ರಕರಣಗಳಿವೆ. ಕಳೆದ 24 ಗಂಟೆಗಳ ಅವಧಿಯಲ್ಲಿ 452 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, ಇಲ್ಲಿಯವರೆಗೆ ಒಟ್ಟು 19,761 ಮಂದಿ ಗುಣಮುಖರಾಗಿದ್ದಾರೆ. ಕಂಟೈನ್ ಮೆಂಟ್ ವಲಯಗಳ ಸಂಖ್ಯೆ 394 ಆಗಿದೆ ಎಂದು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ತಿಳಿಸಿದ್ದಾರೆ.

  • ವಿಜಯಪುರದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಕೋವಿಡ್ ಆಸ್ಪತ್ರೆಯಾಗಿ ಮಾರ್ಪಡಿಸಿ – ಸರ್ಕಾರಕ್ಕೆ ಮನವಿ

    ವಿಜಯಪುರದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಕೋವಿಡ್ ಆಸ್ಪತ್ರೆಯಾಗಿ ಮಾರ್ಪಡಿಸಿ – ಸರ್ಕಾರಕ್ಕೆ ಮನವಿ

    ಬೆಂಗಳೂರು: ವಿಜಯಪುರ ಜಿಲ್ಲೆಯ ಜನರಿಗಾಗಿ ಶೀಘ್ರವೇ ಅತ್ಯಾಧುನಿಕ ಸೌಲಭ್ಯವುಳ್ಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟಡವನ್ನು 100 ಬೆಡ್ ಗಳ ಕೋವಿಡ್ ಆಸ್ಪತ್ರೆಯಾಗಿ ಮಾರ್ಪಡಿಸಿ, ಶೀಘ್ರವಾಗಿ ಸಾರ್ವಜನಿಕರ ಉಪಯೋಗಕ್ಕೆ ನೀಡಬೇಕು ಎಂದು ಆರೋಗ್ಯ ಸಚಿವರಿಗೆ ಜಿಲ್ಲಾ ಉಸ್ತುವಾರಿ ಸಚಿವರು ಮನವಿ ಸಲ್ಲಿಸಿದ್ದಾರೆ.

    ಇಂದು ಬೆಂಗಳೂರಿನಲ್ಲಿ ಆರೋಗ್ಯ ಸಚಿವರಾದ ಡಾ. ಸುಧಾಕರ್ ಅವರನ್ನು ಭೇಟಿ ಮಾಡಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀಮತಿ ಶಶಿಕಲಾ ಜೊಲ್ಲೆ ನೇತೃತ್ವದ ಜಿಲ್ಲೆಯ ಶಾಸಕರ ನಿಯೋಗ ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿವೆ ಮತ್ತು ಹೊಸದಾಗಿ ಬ್ಲ್ಯಾಕ್ ಫಂಗಸ್  ಕಾಯಿಲೆ ಕಾಣಿಸಿಕೊಳ್ಳುತ್ತಿದೆ. ಇದರ ಚಿಕಿತ್ಸೆಗೆ ಸೂಕ್ತವಾದ ತಜ್ಞ ವೈದ್ಯರ ಅವಶ್ಯಕತೆ ಇದ್ದು ಕೂಡಲೇ ತಜ್ಞ ವೈದ್ಯರನ್ನು ನೇಮಕ ಮಾಡಬೇಕು ಎಂದು ಮನವಿ ಸಲ್ಲಿಸಿದರು.

    ಮುಖ್ಯಮಂತ್ರಿಯವರ ಆದೇಶದ ಹಿನ್ನೆಲೆಯಲ್ಲಿ ಉಸ್ತುವಾರಿ ಸಚಿವರು ಖುದ್ದಾಗಿ ಅಧಿಕಾರಿಗಳ ಜೊತೆಗೆ ಕೋವಿಡ್‍ಗೆ ಸಂಬಂಧಿಸಿದಂತೆ ಜಿಲ್ಲೆಯ ಎಲ್ಲ ತಾಲ್ಲೂಕು ಹಾಗೂ ಹಲವು ಹಳ್ಳಿಗಳಿಗೆ ಭೇಟಿ ನೀಡಿದ ವೇಳೆ ಪ್ರಮುಖವಾಗಿ ವೆಂಟಿಲೇಟರ್ ಬೆಡ್, ಆಕ್ಸಿಜನ್ ಬೆಡ್ ಸಮಸ್ಯೆ, ಅಗತ್ಯ ತಾಂತ್ರಿಕ ಸಿಬ್ಬಂದಿಯ ಅವಶ್ಯಕತೆ, ರೆಮಡಿಸಿವಿರ್ ಲಸಿಕೆಗೆ ಹೆಚ್ಚಿನ ಬೇಡಿಕೆ ಪ್ರಮುಖವಾಗಿ ಕಂಡುಬಂದಿದ್ದು ಅದರ ವಾಸ್ತವ ವರದಿಯನ್ನು ಮಾನ್ಯ ಸಚಿವರಿಗೆ ನೀಡಲಾಯಿತು.

    ಸಚಿವರಿಗೆ ಸಲ್ಲಿಸಿದ ಪ್ರಮುಖ ವಿಷಯಗಳು :
    1. ವಿಜಯಪುರ ಜಿಲ್ಲೆಯಲ್ಲಿ ನಿರ್ಮಿಸುತ್ತಿರುವ ಹೈಟೆಕ್ ಆಸ್ಪತ್ರೆಯನ್ನು ಅಗತ್ಯ ಸಿಬ್ಬಂದಿಯೊಂದಿಗೆ 100 ಬೆಡ್ ಗಳ ಕೋವಿಡ್ ಆಸ್ಪತ್ರೆಯಾಗಿ ಮಾರ್ಪಡಿಸಿ, ಕೆಲಸ ಪ್ರಾರಂಭಿಸುವುದು.
    2. ಜಿಲ್ಲೆಯ 13 ತಾಲೂಕುಗಳ ಪೈಕಿ 4 ತಾಲೂಕುಗಳಲ್ಲಿ ಮಾತ್ರ ತಾಲೂಕಾ ಆಸ್ಪತ್ರೆ ಇದ್ದು, ಉಳಿದ 9 ತಾಲೂಕಿನಲ್ಲಿ, ತಾಲೂಕಾ ಆಸ್ಪತ್ರೆ ಮಂಜೂರು ಮಾಡುವುದು ಹಾಗೂ ಶೀಘ್ರವೇ ಕಾಮಗಾರಿ ಪ್ರಾರಂಭಿಸುವುದು.
    3. ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ವೆಂಟಿಲೇಟರ್ ಬೆಡ್, ಆಕ್ಸಿಜನ್ ಬೆಡ್ ಹಾಗೂ ಸೂಕ್ತ ತಜ್ಞ ವೈದ್ಯರು ಹಾಗೂ ತಂತ್ರಜ್ಞರ ನೇಮಕ ಹಾಗೂ ಇವರಿಗೆ ಸೂಕ್ತವಾದ ತರಬೇತಿ ನೀಡುವುದು
    4. ಎನ್ ಟಿ ಪಿ ಸಿ ಘಟಕದಲ್ಲಿ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒಳಗೊಂಡ 100 ಬೆಡ್ ಗಳ ತಾತ್ಕಾಲಿಕ ಆಸ್ಪತ್ರೆ ನಿರ್ಮಿಸಲು
    ಎನ್ ಟಿ ಪಿ ಸಿ ಮುಖ್ಯಸ್ಥರಿಗೆ ಸೂಚನೆ ನೀಡುವುದು.
    5.ಜಿಲ್ಲೆಯಲ್ಲಿ 81 ವಿವಿಧ ವೃಂದದ ತಜ್ಞ ವೈದ್ಯರ ಅವಶ್ಯಕತೆ ಇದ್ದು ಕೂಡಲೇ ವೈದ್ಯರನ್ನು ನೇಮಕ ಮಾಡಿಕೊಳ್ಳುವುದು.
    6. ಸಿಂಧಗಿ ಹಾಗೂ ತಾಳಿಕೋಟೆ ತಾಲೂಕಾ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಘಟಕ ನಿರ್ಮಿಸುವುದು.
    7.ರೆಮಡಿಸಿವಿರ್ ಲಸಿಕೆಗೆ ಹೆಚ್ಚಿನ ಬೇಡಿಕೆಯಿದ್ದು, ಬೇಡಿಕೆ ನೀಗಿಸಲು ಅಗತ್ಯ ಲಸಿಕೆಗಳನ್ನು ಸರಬರಾಜು ಮಾಡುವುದರ ಕುರಿತು ಮನವಿ ಸಲ್ಲಿಸಲಾಯಿತು.

    ಉಸ್ತುವಾರಿ ಸಚಿವರ ನೇತೃತ್ವದ ನಿಯೋಗದಲ್ಲಿ ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್, ಅರುಣ್ ಶಹಾಪುರ, ಲಿಂಬೆ ಅಭಿವೃದ್ದಿ ಮಂಡಳಿ ಅಧ್ಯಕ್ಷ ಅಶೋಕ ಅಲ್ಲಾಪುರ್ ಹಾಜರಿದ್ದರು.

  • ಕೋವಿಡ್ ಆಸ್ಪತ್ರೆಗೆ 50 ಲಕ್ಷ ರೂ. ಮೌಲ್ಯದ ವೈದ್ಯಕೀಯ ಸಲಕರಣೆ ನೀಡಿದ ಡಾ.ಎಂ.ಸಿ.ಸುಧಾಕರ್

    ಕೋವಿಡ್ ಆಸ್ಪತ್ರೆಗೆ 50 ಲಕ್ಷ ರೂ. ಮೌಲ್ಯದ ವೈದ್ಯಕೀಯ ಸಲಕರಣೆ ನೀಡಿದ ಡಾ.ಎಂ.ಸಿ.ಸುಧಾಕರ್

    – ಐವತ್ತು ಆಕ್ಸಿಜನ್ ಬೆಡ್

    ಚಿಕ್ಕಬಳ್ಳಾಪುರ: ಜಿಲ್ಲೆಯ ಚಿಂತಾಮಣಿ ಕೋವಿಡ್ ಕೇರ್ ಸೆಂಟರ್‍ಗೆ ಮಾಜಿ ಶಾಸಕ ಡಾ ಎಂ.ಸಿ ಸುಧಾಕರ್ 50 ಲಕ್ಷ ಮೌಲ್ಯದ ವೈದ್ಯಕೀಯ ಸಲಕರಣೆಗಳ ನೆರವು ಕೊಡಿಸಿ ಹೃದಯ ವೈಶಾಲ್ಯತೆ ಮೆರೆದಿದ್ದಾರೆ.

    ಕೊರೊನಾ ಸಂಕಷ್ಟದಲ್ಲಿ ಬೆಡ್, ಆಕ್ಸಿಜನ್, ವೆಂಟಿಲೇಟರ್ ಸಿಗದೇ ಅದೆಷ್ಟೋ ಜನ ಸೋಂಕಿತರು ತಮ್ಮ ಜೀವವನ್ನು ಕಳೆದುಕೊಂಡಿದ್ದು, ಇನ್ನೂ ಕಳೆದುಕೊಳ್ಳುತ್ತಿದ್ದಾರೆ. ಇದನ್ನು ಮನಗಂಡ ಮಾಜಿ ಶಾಸಕ ಡಾ. ಎಂ.ಸಿ ಸುಧಾಕರ್ ತಮ್ಮ ವಿದ್ಯಾಗಣಪತಿ ಸೇವಾ ಟ್ರಸ್ಟ್ ಮೂಲಕ ಕೋವಿಡ್ ಸೆಂಟರ್‍ಗೆ ಸುಮಾರು ಐವತ್ತು ಲಕ್ಷ ರೂಪಾಯಿ ಬೆಲೆ ಬಾಳುವ ಸಲಕರಣೆಗಳನ್ನ ಒದಗಿಸಿದ್ದಾರೆ.

    ಐವತ್ತು ಹಾಸಿಗೆ ದಿಂಬು, ಐವತ್ತು ಜಂಬೋ ಆಕ್ಸಿಜನ್ ಸಿಲಿಂಡರ್, ಐವತ್ತು ಮಂಚ, ಮಾಸ್ಕ್, ಸ್ಯಾನಿಟೈಸರ್, ಪಿಪಿಇ ಕಿಟ್ ಸೇರಿದಂತೆ ಆಸ್ಪತ್ರೆಗೆ ಸಿಲಿಂಡರ್ ಪೈಪ್ ಲೈನ್ ಸಮೇತ ನಿರ್ಮಿಸಿ ಕೊಡುವುದಾಗಿ ತಿಳಿಸಿದ್ದು, ತಮ್ಮ ಸಾಮಾಜಿಕ ಕಳಕಳಿ ತೋರಿದ್ದಾರೆ. ಈ ಆಸ್ಪತ್ರೆಯಲ್ಲಿ ಇದ್ದಿದ್ದು ಐವತ್ತು ಆಕ್ಸಿಜನ್ ಬೆಡ್‍ಗಳು, ಇಲ್ಲಿನ ಕೋವಿಡ್ ಸೋಂಕಿತರಿಗೆ ಬೆಡ್ ಸಿಗದೇ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ಹೋಗುವಷ್ಟರಲ್ಲಿ ತಮ್ಮ ಪ್ರಾಣ ಕಳೆದುಕೊಂಡ ಉದಾಹರಣೆಗಳು ಇವೆ. ಆದ್ದರಿಂದ ಕೊರೊನಾ ಸಂಕಷ್ಟದ ಸಮಯದಲ್ಲಿ ಧನಿಕರೆಲ್ಲ ಮುಂದೆ ಬಂದು ಈ ರೀತಿ ಸಹಾಯ ಮಾಡಿ ಆಸ್ಪತ್ರೆಗಳಲ್ಲಿ ಮೂಲಭೂತ ಸೌಲಭ್ಯಗಳನ್ನ ಹೆಚ್ಚಿಸಿದರೆ ಕೊರೊನಾ ವಿರುದ್ಧ ಹೋರಾಡಲು ಸಹಕಾರಿಯಾಗಲಿದೆ.

    ಈ ಬಗ್ಗೆ ಮಾಹಿತಿ ನೀಡಿರುವ ಮಾಜಿ ಶಾಸಕರಾದ ಡಾ ಎಂ.ಸಿ ಸುಧಾಕರ್, ಕೊರೊನಾ ಎಂಬ ಮಹಾಮಾರಿ ಇಂದು ನಮ್ಮನ್ನು ಬೆಂಬಿಡದೆ ಕಾಡುತ್ತಿದ್ದು, ಮಾನವನ ಜೀವಕ್ಕೆ ಬೆಲೆ ಇಲ್ಲದಂತಾಗಿ, ಸಾಮಾಜಿಕ, ಆರ್ಥಿಕ ವ್ಯವಸ್ಥೆ ತೀರ ದುಸ್ತರವಾದ ಪರಿಸ್ಥಿತಿಗೆ ತಲುಪಿದೆ. ನಮ್ಮ ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಲ್ಲಿಯೂ ಸಹ ದಿನದಿಂದ ದಿನಕ್ಕೆ ಕೊರೊನಾ ಪೀಡಿತರ ಸಂಖ್ಯೆ ಹೆಚ್ಚುತ್ತಿದ್ದು, ಹಾಸಿಗೆಗಳ ಹಾಗು ವೈದ್ಯಕೀಯ ಸಲಕರಣೆಗಳ ಅತಿಯಾದ ಅಭಾವ ತಲೆದೋರಿದೆ. ಈ ಕೊರತೆಯನ್ನು ಮನಗಂಡು ನಮ್ಮ ತಂದೆಯವರಾದ ಮಾಜಿ ಗೃಹ ಸಚಿವ ಎಂ.ಎ.ಚೌಡರೆಡ್ಡಿಯವರೊಂದಿಗೆ ಚರ್ಚಿಸಿ, ಶ್ರೀ ವಿದ್ಯಾ ಗಣಪತಿ ದೇವಸ್ಥಾನ ಟ್ರಸ್ಟ್ ಚಿಂತಾಮಣಿರವರ ಸಹಕಾರದೊಂದಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಈಗಿರುವ 50 ಹಾಸಿಗೆಗಳ ಜೊತೆಗೆ ಸುಮಾರು 50 ಲಕ್ಷ ರೂಗಳ ವೆಚ್ಚದಲ್ಲಿ ಆಕ್ಸಿಜನ್ ಸಹಿತ ಎಲ್ಲಾ ಆಧುನಿಕ ವ್ಯವಸ್ಥೆಯಿಂದ ಕೂಡಿದ 50 ಹಾಸಿಗೆಗಳ ನೂತನ ಕೊವಿಡ್ ವಿಭಾಗವನ್ನು ತೆರೆದಿದ್ದೇವೆ. ಪ್ರತಿ ಹಾಸಿಗೆಗೆ ಒಂದರಂತೆ 50 ಹೊಸ ಆಕ್ಸಿಜನ್ ಸಿಲಿಂಡರ್‍ಗಳನ್ನು ನೀಡಿ, ಅವು ಎಷ್ಟು ಬಾರಿ ಖಾಲಿಯಾದರು ಪುನಃ ಭರ್ತಿಮಾಡಿಸುವ ವ್ಯವಸ್ಥೆಯನ್ನು ಸ್ವತಃ ನಾವೇ ಮಾಡಿರುತ್ತೇವೆ. ಆಸ್ಪತ್ರೆಗೆ ಅವಶ್ಯಕವಿರುವ ಪಿ.ಪಿ.ಇ ಕಿಟ್, ಮಾಸ್ಕ್ ಮತ್ತು ಸ್ಯಾನಿಟೈಸರ್, ಆಕ್ಸಿ ಮೀಟರ್ ಗಳು, ಕೈಗವಸುಗಳು ಇನ್ನಿತರ ವೈದ್ಯಕೀಯ ಸಲಕರಣೆಗಳನ್ನು ಕೊಟ್ಟಿದ್ದೇವೆ ಎಂದು ಹೇಳಿದರು.

    ಇದಲ್ಲದೆ ಚಿಂತಾಮಣಿ ಸರ್ಕಾರಿ ಆಸ್ಪತ್ರೆಯನ್ನು “ಸಂಪೂರ್ಣ ಸೆಂಟ್ರಲೈಸ್ಡ್ ಆಕ್ಸಿಜನ್ ಸಿಸ್ಟಮ್” ಇರುವ ಆಸ್ಪತ್ರೆಯಾಗಿ ಮಾರ್ಪಡಿಸಲು ತೀರ್ಮಾನಿಸಿ, ಈ ವಿಷಯಕ್ಕೆ ಸಂಬಂಧಿಸಿದಂತೆ ಸದರಿ ಕಂಪನಿಯೊಂದಿಗೆ ಚರ್ಚಿಸಿದ್ದು, ಆದಷ್ಟು ಬೇಗನೆ ಕಾರ್ಯರೂಪಕ್ಕೆ ತರುತ್ತೇವೆ. ಚಿಂತಾಮಣಿ ನಗರಾಡಳಿತ ಹಾಗು ಸರ್ಕಾರಿ ವೈದ್ಯಾಧಿಕಾರಿಗಳು ಇಚ್ಛಿಸಿದಲ್ಲಿ ಬೇಡಿಕೆಯ ಅನುಗುಣವಾಗಿ “ತಾಯಿ ಮಗು ಆಸ್ಪತ್ರೆಯನ್ನು” ಕೂಡ ಕೋವಿಡ್ ಆಸ್ಪತ್ರೆಯಾಗಿ ಪರಿವರ್ತಿಸಲು ಬೇಕಾದ ಎಲ್ಲಾ ಅನುಕೂಲಗಳನ್ನು ಮಾಡಲು ಯಾವುದೇ ಕ್ಷಣದಲ್ಲಿ ಸಿದ್ಧವಿದ್ದೇವೆ.

    ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಲ್ಲಿರುವ ಮೂರು ವೆಂಟಿಲೇಟರ್‍ಗಳು ಕಾರ್ಯನಿರ್ವಹಿಸದೆ. ಜಿಲ್ಲಾಡಳಿತ ಹಾಗು ಜಿಲ್ಲಾ ವೈದ್ಯಾಧಿಕಾರಿಗಳು ಸದರಿ ವೆಂಟಿಲೇಟರ್‍ಗಳನ್ನು ಆಪರೇಟ್ ಮಾಡುವ ವೈದ್ಯರು ಹಾಗೂ ತಂತ್ರಜ್ಞರನ್ನು ನೀಡಿದಲ್ಲಿ, ವೆಂಟಿಲೇಟರ್‍ಗಳು ಕಾರ್ಯನಿರ್ವಹಿಸುವಂತೆ ಮಾಡುವ ಪೂರಕ ಸಲಕರಣೆಗಳನ್ನು ಅಳವಡಿಸಿ ಸಾರ್ವಜನಿಕರ ಅನುಕೂಲಕ್ಕೆ ನೀಡುವ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತೇವೆ. ಈ ಕೊರೊನಾ ಕಾಯಿಲೆಯನ್ನು ಅಂತ್ಯಗೊಳಿಸಲು ನಾವೆಲ್ಲಾ ಪಕ್ಷಾತೀತವಾಗಿ ಒಗ್ಗೂಡಿ ಹೋರಾಡುವ ಅವಶ್ಯಕತೆ ಇದ್ದು, ಜನರ ಜೀವ ಉಳಿಸುವ ಮಹತ್ಕಾರ್ಯದಲ್ಲಿ ಎಲ್ಲಾ ಸಂಘ ಸಂಸ್ಥೆಗಳು, ಸಾರ್ವಜನಿಕರು ಕೈಜೋಡಿಸಿ ತಮ್ಮ ಕೈಲಾದ ಸಹಾಯವನ್ನು ಮಾಡಿ ಮನುಕುಲದ ಹಿತ ಕಾಪಾಡೋಣ ಎಂದಿದ್ದಾರೆ.

    ಕೊನೆಯದಾಗಿ ಸಾರ್ವಜನಿಕರಿಗೆ ಈ ಮೂಲಕ ಮನವಿ ಮಾಡಿಕೊಳ್ಳುವುದೇನೆಂದರೆ ನಾವು ಅತ್ಯಂತ ಕಷ್ಟದ ದಿನಗಳನ್ನು ಎದುರಿಸುತ್ತಿದ್ದು, ಎಲ್ಲರೂ ಅತ್ಯಂತ ಜಾಗರೂಕರಾಗಿ ಮುಂಜಾಗ್ರತಾ ಕ್ರಮಗಳನ್ನು ಪಾಲಿಸಿ. ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಸ್ಯಾನಿಟೈಸರ್ ಉಪಯೋಗಿಸಿ. ಸ್ವಚ್ಛತೆಯನ್ನು ಕಾಪಾಡಿ. ಮನೆ ಬಿಟ್ಟು ಹೊರಹೋಗದೆ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸಬೇಕೆಂದು ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ ಎಂದು ತಿಳಿಸಿದ್ದಾರೆ.

  • ಕೋವಿಡ್ ಆಸ್ಪತ್ರೆಯ ಊಟ ತಿಂದೇ ಆರೋಗ್ಯ ಸಮಸ್ಯೆಯಾಗ್ತಿದೆ – ಅಳಲು ತೋಡಿಕೊಂಡ ಸೋಂಕಿತ

    ಕೋವಿಡ್ ಆಸ್ಪತ್ರೆಯ ಊಟ ತಿಂದೇ ಆರೋಗ್ಯ ಸಮಸ್ಯೆಯಾಗ್ತಿದೆ – ಅಳಲು ತೋಡಿಕೊಂಡ ಸೋಂಕಿತ

    ಚಿಕ್ಕಮಗಳೂರು: ಕೋವಿಡ್ ಆಸ್ಪತ್ರೆಯಲ್ಲಿ ಎಲ್ಲವೂ ಸರಿ ಇದೆ. ಆದರೆ ಊಟ ಮಾತ್ರ ತಿನ್ನೋಕೆ ಆಗಲ್ಲ, ಈ ಊಟ ತಿಂದು ನಮಗೆ ಆರೋಗ್ಯ ಸಮಸ್ಯೆ ಎದುರಾಗಿದೆ ಎಂದು ಕೊರೊನಾ ಸೋಂಕಿತ ವ್ಯಕ್ತಿಯೋರ್ವ ಕೋವಿಡ್ ಆಸ್ಪತ್ರೆಯಿಂದ ಸೆಲ್ಫಿ ವಿಡಿಯೋ ಮಾಡಿ ತಮ್ಮ ಅಳಲನ್ನ ತೋಡಿಕೊಂಡಿದ್ದಾರೆ.

    ಜಿಲ್ಲೆಯ ಮೂಡಿಗೆರೆ ತಾಲೂಕಿನ ಗ್ರಾಮೀಣ ಭಾಗದ ವ್ಯಕ್ತಿ ಕೊರೊನಾ ಸೋಂಕಿನಿಂದಾಗಿ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಲ್ಲಿ ಕೊಡುವ ಊಟ ತಿಂದು ನಮಗೆ ಸ್ವಲ್ಪ ಆರೋಗ್ಯದ ಸಮಸ್ಯೆ ಉಂಟಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

    ನಿನ್ನೆ ಬೆಳಗ್ಗೆ ಟೊಮೊಟೋ ಬಾತ್ ತಿಂಡಿ ಕೊಟ್ಟಿದ್ದರು ತಿನ್ನುವಂತಿರಲಿಲ್ಲ. ಮಧ್ಯಾಹ್ನ ಕೋಸು-ಬೇಳೆ ಸಾರು ಕೊಟ್ಟಿದ್ದರು. ಈಗಲೂ ಅದನ್ನೇ ಕೊಟ್ಟಿದ್ದಾರೆ. ಸಾಂಬರ್ ಯಾವುದೇ ರುಚಿ ಇಲ್ಲ. ಇಲ್ಲಿ ಊಟವನ್ನೇ ಮಾಡಲು ಆಗುತ್ತಿಲ್ಲ. ವೈದ್ಯರು, ವೈದ್ಯಕೀಯ ಸಲಕರಣೆ ಯಾವುದೇ ತೊಂದರೆ ಇಲ್ಲ. ಊಟದ್ದು ಮಾತ್ರ ತುಂಬಾ ಸಮಸ್ಯೆ ಇದೆ. ಔಷಧಿಯನ್ನ ಸಮಯಕ್ಕೆ ಸರಿಯಾಗಿ ಕೊಡುತ್ತಿದ್ದಾರೆ. ಆಗಾಗ ಚೆಕ್ ಅಪ್ ಎಲ್ಲಾ ಮಾಡುತ್ತಾರೆ. ನರ್ಸ್‍ಗಳು ಆಗಾಗ ಬಂದು ಯೋಗಕ್ಷೇಮ ವಿಚಾರಿಸುತ್ತಾರೆ. ಕುಡಿಯೋಕೆ ಬಿಸಿ ನೀರು ಸೇರಿದಂತೆ ನೀರಿನ ವ್ಯವಸ್ಥೆ ಎಲ್ಲಾ ಚೆನ್ನಾಗಿದೆ. ಆದರೆ, ಊಟದ ವ್ಯವಸ್ಥೆ ಮಾತ್ರ ಸರಿ ಇಲ್ಲ ಎಂದು ವಿಡಿಯೋ ಮಾಡಿ ಹರಿಬಿಟ್ಟಿದ್ದಾರೆ.

  • ಕೋವಿಡ್ ಆಸ್ಪತ್ರೆಗೆ ಭೇಟಿ ವೇಳೆ ಚಿತ್ರದುರ್ಗ ಡಿಸಿಯಿಂದ ಎಡವಟ್ಟು

    ಕೋವಿಡ್ ಆಸ್ಪತ್ರೆಗೆ ಭೇಟಿ ವೇಳೆ ಚಿತ್ರದುರ್ಗ ಡಿಸಿಯಿಂದ ಎಡವಟ್ಟು

    ಚಿತ್ರದುರ್ಗ: ಕೋವಿಡ್ ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಎಡವಟ್ಟು ಮಾಡಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.

    ಡಿಸಿ ಕವಿತಾ ಮನ್ನಿಕೇರಿ ಅವರು ಚಿತ್ರದುರ್ಗ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ಭೇಟಿ ನೀಡಿದ್ದರು. ಈ ವೇಳೆ ಎಡವಟ್ಟೊಂದನ್ನು ಮಾಡಿದ್ದಾರೆ. ಅದೇನಂದರೆ ಆಸ್ಪತ್ರೆ ಭೇಟಿ ವೇಳೆ ಧರಿಸಿದ್ದ ಗೌನ್ ತೆಗೆದು ತನ್ನ ಗನ್ ಮ್ಯಾನ್ ಗೆ ನೀಡಿದ್ದಾರೆ.

    ಡಸ್ಟ್ ಬಿನ್ ಗೆ ಹಾಕುವ ಬದಲು ಕವಿತಾ, ಗನ್‍ಮ್ಯಾನ್ ಗೆ ನೀಡಿದ್ದಾರೆ. ಈ ವೇಳೆ ಗನ್ ಮ್ಯಾನ್ ಡಿಸಿ ಧರಿಸಿದ್ದ ಗೌನ್ ತನ್ನ ಕೈಯಿಂದ ಹಿಡಿದು ಡಸ್ಟ್ ಬಿನ್ ಗೆ ಹಾಕಿದ್ದಾರೆ.

  • ಕೋವಿಡ್ ಆಸ್ಪತ್ರೆಯಲ್ಲಿ ಅಗ್ನಿ ಅವಘಡ – 16 ಮಂದಿ ದಾರುಣ ಸಾವು

    ಕೋವಿಡ್ ಆಸ್ಪತ್ರೆಯಲ್ಲಿ ಅಗ್ನಿ ಅವಘಡ – 16 ಮಂದಿ ದಾರುಣ ಸಾವು

    ಗಾಂಧಿನಗರ: ಮಹಾಮಾರಿ ಕೊರೊನಾ ವೈರಸ್ ನಿಂದ ಒಂದೆಡೆ ಬೆಡ್, ಆಕ್ಸಿಜನ್ ಸಿಗದೆ ಜನ ಸಾವನ್ನಪ್ಪುತ್ತಿದ್ದರೆ, ಇತ್ತ ಕೋವಿಡ್ ಆಸ್ಪತ್ರೆಯಲ್ಲಿ ಅಗ್ನಿ ಅವಘಡ ಸಂಭವಿಸಿ 16 ಮಂದಿ ದಾರುಣವಾಗಿ ಮೃತಪಟ್ಟಿದ್ದಾರೆ.

    ಈ ಘಟನೆ ಗುಜರಾತ್ ನ ಭಾರುಚ್ ಆಸ್ಪತ್ರೆಯಲ್ಲಿ ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಸಂಭವಿಸಿದೆ. ಘಟನೆಯಿಂದ ಸುಮಾರು 16 ಮಂದಿ ಕೊರೊನಾ ಸೋಂಕಿತರು ಸಜೀವ ದಹನವಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ. ಮೋಧ್ಯ ಮಾಹಿತಿ ನೀಡಿದ್ದಾರೆ.

    ಅಗ್ನಿ ಅವಗಢ ಹಾಗೂ ಹೊಗೆ ತುಂಬಿಕೊಂಡಿದ್ದರಿಂದ ಸೋಂಕಿತರು ಆಸ್ಪತ್ರೆಯ ಒಳಗಡೆಯೇ ಮೃತಪಟ್ಟಿದ್ದಾರೆ ಎಂದು ಎಸ್‍ಪಿ ರಾಜೇಂದ್ರ ಸಿನ್ಹಾ ತಿಳಿಸಿದ್ದಾರೆ. ನಾಲ್ಕು ಮಹಡಿಯ ಆಸ್ಪತ್ರೆ ಇದಾಗಿದ್ದು, ಸುಮಾರು 70 ಮಂದಿ ಚಿಕಿತ್ಸೆ ಪಡೆಯುತ್ತಿದ್ದರು.

    ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಅಲ್ಲದೆ ಆಸ್ಪತ್ರೆಯ ಒಳಗಡೆ ಸಿಲುಕಿದ್ದ ರೋಗಿಗಳನ್ನು ರಕ್ಷಣೆ ಮಾಡಿದ್ದಾರೆ. ಬಳಿಕ ಸ್ಥಳೀಯ ಆಸ್ಪತ್ರೆಗೆ ಅವರನ್ನು ಶಿಫ್ಟ್ ಮಾಡಿ ಚಿಕಿತ್ಸೆ ಕೊಡಿಸಿದ್ದಾರೆ.

    ಅಗ್ನಿ ಅವಘಡ ಸಂಭವಿಸಿದ 1 ಗಂಟೆಯಲ್ಲೇ ಬೆಂಕಿ ನಂದಿಸುವ ಕಾರ್ಯದಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.