Tag: ಕೋಳಿ ಫಾರ್ಮ್

  • ಕೋಳಿ ಫಾರಂ ಶೆಡ್‌ನಲ್ಲಿ ನಾಲ್ವರು ಮಲಗಿದ್ದಲ್ಲೇ ಅನುಮಾನಾಸ್ಪದ ಸಾವು

    ಕೋಳಿ ಫಾರಂ ಶೆಡ್‌ನಲ್ಲಿ ನಾಲ್ವರು ಮಲಗಿದ್ದಲ್ಲೇ ಅನುಮಾನಾಸ್ಪದ ಸಾವು

    ಚಿಕ್ಕಬಳ್ಳಾಪುರ: ಕೋಳಿಫಾರಂ ಶೆಡ್‌ನಲ್ಲಿ ಕೆಲಸ ಮಾಡುತ್ತಿದ್ದ ನಾಲ್ವರು ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ (Doddaballapur) ತಾಲೂಕಿನ ದೊಡ್ಡಬೆಳವಂಗಲ (Doddabelavangal) ಬಳಿಯ ಹೊಲೆಯರಹಳ್ಳಿ ಬಳಿ ನಡೆದಿದೆ.

    ನೇಪಾಳ ಮೂಲದವರಾದ ಕಾಲೇ ಸರೇರಾ (60), ಲಕ್ಷ್ಮಿ ಸರೇರಾ (50), ಉಷಾ ಸರೇರಾ (40) ಹಾಗೂ ಪೂಲ್ ಸರೇರಾ (16) ಮೃತಪಟ್ಟವರು. ಸ್ಮಶಾನ ರಸ್ತೆಯಲ್ಲಿರುವ ಕೋಳಿ ಫಾರಂನಲ್ಲಿ 8 ದಿನಗಳ ಹಿಂದೆಯಷ್ಟೇ ಕೆಸಲ ಅರಸಿ ಕುಟುಂಬ ಸಮೇತ ಇವರು ಬಂದಿದ್ದರು.

    ರಾತ್ರಿ ಶೆಡ್ ಬಾಗಿಲು ಹಾಕಿಕೊಂಡು ಮಲಗಿದ್ದವರು ಭಾನುವಾರ ಬೆಳಗ್ಗೆ ನೋಡಿದಾಗ ಮಲಗಿದ್ದಂತೆಯೇ ಎಲ್ಲರೂ ಶವವಾಗಿ ಪತ್ತೆಯಾಗಿದ್ದಾರೆ. ಇಂದು ಬೆಳಗ್ಗೆ ಕೋಳಿ ಫಾರಂ ಮಾಲೀಕ ಕರೆ ಮಾಡಿದಾಗ ಕರೆ ಸ್ವೀಕರಿಸದ ಕಾರಣ, ಇದರಿಂದ ಅನುಮಾನಗೊಂಡು ಪಕ್ಕದ ಊರಿನ ಕೋಳಿ ಫಾರಂನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಮೃತರ ಸಂಬಂಧಿಕರಿಗೆ ಕರೆ ಮಾಡಿದ್ದಾರೆ. ಅವರು ಶೆಡ್ ಕಿಟಕಿ ಬಳಿ ಹೋಗಿ ನೋಡಿದಾಗ, ಮಲಗಿದ್ದವರು ಮಲಗಿದ್ದಂತೆಯೇ ಸಾವನ್ನಪ್ಪಿರುವುದು ಕಂಡುಬಂದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

    ಒಂದೇ ಕುಟುಂಬದ ನಾಲ್ವರ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸದ್ಯ ದೊಡ್ಡಬೆಳವಂಗಲ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಹರೀಶ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.‌ ಇದನ್ನೂ ಓದಿ: ನಡು ರಸ್ತೆಯಲ್ಲೇ ಪತ್ನಿಯನ್ನು ಕೊಂದು ಪೊಲೀಸರಿಗೆ ಶರಣಾದ ಪತಿ

    ಸೊಳ್ಳೆ ಕಾಟಕ್ಕೆ ಹಾಕಿದ್ದ ಹೊಗೆ ನಾಲ್ವರ ಪ್ರಾಣ ತೆಗೀತಾ?
    ಸೊಳ್ಳೆ ಕಾಟ ಎಂದು ಕುಟುಂಬಸ್ಥರು ಇದ್ದಿಲು ಮೂಲಕ‌ ಹೊಗೆ ಹಾಕಿದ್ದರು. ಶೆಡ್ನ ಕಿಟಕಿ ಬಾಗಿಲು ಸಂಪೂರ್ಣ ಮುಚ್ಚಿದ ಹಿನ್ನೆಲೆ ಹೊಗೆ ತುಂಬಿಕೊಂಡಿದೆ. ಕೋಣೆ ತುಂಬಾ ಹೊಗೆ ತುಂಬಿಕೊಂಡು ಆಮ್ಲಜನಕದ‌ ಕೊರತೆಯಿಂದ ನಾಲ್ವರು ಸಾವನ್ನಪ್ಪಿರುವ ಶಂಕೆ ಎದುರಾಗಿದೆ. ಇದನ್ನೂ ಓದಿ:  ಚಾಟಿಂಗ್ ವಿಚಾರದಲ್ಲಿ ಗಲಾಟೆ – ಯುವತಿ ಅನುಮಾನಾಸ್ಪದ ಸಾವು

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನೊಣಗಳ ಹಾವಳಿಗೆ ಜನ ಸುಸ್ತೋ ಸುಸ್ತು – ನೊಣಕ್ಕಂಜಿ ಊರು ತೊರೆಯಲಾರಂಭಿಸಿದ ಸಾರ್ವಜನಿಕರು

    ನೊಣಗಳ ಹಾವಳಿಗೆ ಜನ ಸುಸ್ತೋ ಸುಸ್ತು – ನೊಣಕ್ಕಂಜಿ ಊರು ತೊರೆಯಲಾರಂಭಿಸಿದ ಸಾರ್ವಜನಿಕರು

    ಗದಗ: ತಾಲೂಕಿನ ಹರ್ತಿ ಗ್ರಾಮದ ಜನರ ಜೀವನ ದುಸ್ತರವಾಗಿದೆ. ಗ್ರಾಮೀಣ ಭಾಷೆಐಲ್ಲಿ ಹೇಳುವುದಾದರೆ, ದಂಡಿನ ಗುಂಡಿಗೆ ಹೆದರಲಿಲ್ಲಾ, ದಾಳಿಗೆ ಹೆದರಲಿಲ್ಲಾ, ಆದರೆ ನೊಣಗಳ ಹಿಂಡಿಗೆ ಹೆದರುವಂತಾಗಿದೆ.

    ಈ ಗ್ರಾಮದ ಜನ ಏನು ತಪ್ಪು ಮಾಡಿರುವರೋ ಗೊತ್ತಿಲ್ಲ. ಈ ಹಳ್ಳಿಗೆ ವೈರಿಗಳ ದಂಡೊಂದು ಲಗ್ಗೆ ಇಟ್ಟು ನಿತ್ಯ ಕಾಟ ಕೊಡುತ್ತಿವೆ. ಆ ವೈರಿಗಳ ಕಾಟಕ್ಕೆ ಇಲ್ಲಿನ ಜನ ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ. ಮನೆ ಒಳಗೆ, ಹೊರಗೆ ಎಲ್ಲಿ ಕೂತರು ಸಮಾಧಾನವೇ ಇಲ್ಲದಂತಾಗಿದೆ. ಊಟ, ನಿದ್ರೆ, ವಿಶ್ರಾಂತಿಗೂ ಬಿಡಲ್ಲಾ. ವೈರಿಗಳ ಆಟೋಟಪಕ್ಕೆ ಊರಿನ ಜನ ಬೇಸತ್ತು ಹೋಗಿದ್ದಾರೆ.

    ಹರ್ತಿ ಗ್ರಾಮದ ಜನರ ಪರಸ್ಥಿತಿ ನಾಲ್ಕೈದು ತಿಂಗಳು ಹೇಳ ತೀರದಾಗಿದೆ. ಕಾರಣ ಊರ ಪಕ್ಕದ ಕೋಳಿ ಫಾರ್ಮ್ ನಿಂದ ಲಗ್ಗೆ ಇಟ್ಟ ಈಗಗಳ ದಂಡುಪಾಳ್ಯ, ಈ ಜನರ ನೆಮ್ಮದಿ ಹಾಳು ಮಾಡಿದೆ. ಒಂದಡೆ ಕೊರೊನಾ ಹಾವಳಿ, ಮತ್ತೊಂದಡೆ ನೊಣಗಳ ಹಾವಳಿಯಿಂದ ಅನಾರೋಗ್ಯಕ್ಕೆ ಒಳಗಾಗಿ ಜೀವನದಲ್ಲಿ ಜಿಗುಪ್ಸೆಗೊಂಡಿದ್ದಾರೆ. ಮಾವು, ಬೇವು ಹಣ್ಣಿನ ಸೀಜನ್‍ನಲ್ಲಿ ನೊಣಗಳು ಹೆಚ್ಚು ಇರುತ್ತವೆ. ಆದರೆ ಮಳೆಗಾಲದಲ್ಲೂ ಎಲ್ಲಿ ಕುಂತರೂ ಸಮಾಧಾನ ಆಗುವುದಿಲ್ಲ. ಅಡಿಗೆ ಮಾಡಿ ಊಟ ಮಾಡಲಿಕ್ಕೂ ಆಗುತ್ತಿಲ್ಲಾ, ನೀರು ಕುಡಿಯಲು ಆಗುತ್ತಿಲ್ಲ. ಅಂಗಡಿ, ಹೋಟೆಲ್ ನವರ ಪರಸ್ಥಿತಿ ನೋಣ ಹೊಡೆಯುವುದೇ ಕಾಯಕವಾಗಿದೆ.

    ಮಕ್ಕಳು, ವೃದ್ಧರ ಪರಸ್ಥಿತಿ ಕೇಳತೀರದು. ಜಾನುವಾರುಗಳ ಮೇಲು ಜೇನು ಹುಳುವಿನಂತೆ ಕೂಡಿರುತ್ತವೆ. ಇದರಿಂದ ಗ್ರಾಮದಲ್ಲಿ ಅನೇಕರು ವಾಂತಿ, ಬೇಧಿ, ಜ್ವರ ಹೀಗೆ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಬೇಸಿಗೆಯಲ್ಲಿ ಗಾಳಿ ಬೀಸಿಕೊಂಡಂತೆ ಮಳೆಗಾಲದಲ್ಲೂ ನೊಣಗಳ ಕಾಟಕ್ಕೆ ಗಾಳಿ ಬೀಸಿಕೊಳ್ಳಬೇಕಾದ ಪರಿಸ್ಥಿತಿ ಇವರದ್ದಾಗಿದೆ. ಕೊರೊನಾ ಸಂದರ್ಭದಲ್ಲಿ ಮಕ್ಕಳನ್ನು ಕಟ್ಟಿಕೊಂಡು ವಾಸಿಸದೇ ಊರು ತೊರೆಯುವ ಸಂದರ್ಭ ಬಂದಿದೆ. ಅಧಿಕಾರಿಗಳು ಇತ್ತಕಡೆ ಗಮನ ಹರಿಸಿ, ಕೋಳಿ ಫಾರ್ಮ್‍ಗಳನ್ನು ಬಂದ್ ಮಾಡಿ, ಜನರ ಆರೋಗ್ಯದ ಮೇಲೆ ಬೀರುವ ದುಷ್ಪರಿಣಾಮ ಹಾಗೂ ತೊಂದರೆಗಳನ್ನು ತಪ್ಪಿಸಬೇಕು ಎಂದು ಸ್ಥಳೀಯರು ಹೇಳುತ್ತಿದ್ದಾರೆ.

    ಈ ಕೋಳಿ ಫಾರ್ಮ್ ಆಗಿ ನಾಲ್ಕೈದು ವರ್ಷಗಳಿಂದ ಆಗಾಗ ಇದೇ ಸಮಸ್ಯೆ ಎದುರಿಸುತ್ತಿದೆ. ಆದರೆ ಇತ್ತೀಚಿಗೆ ನೊಣಗಳ ಹಾವಳಿ ತುಂಬಾನೆ ಆಗಿದ್ದು, ನೊಣಗಳ ಕಾಟಕ್ಕೆ ಜನ ಸುಸ್ತಾಗಿದ್ದಾರೆ. ಊರಾಚೆಯ ಆಂಧ್ರ ಪ್ರದೇಶ ಮೂಲದ ಪ್ರಭಾವಿ ಗುತ್ತಿಗೆದಾರ ಸುಬ್ಬಾರೆಡ್ಡಿ ಸಂಬಂಧಿಗಳ ಈ ಕೋಳಿ ಫಾರ್ಮ್ ನಲ್ಲಿ ಸ್ವಚ್ಛತೆ, ಔಷಧ ಸಿಂಪಡಣೆ, ತ್ಯಾಜ್ಯ ವಿಲೇವಾರಿ ಸರಿಯಾದ ನಿರ್ವಹಣೆ ಇಲ್ಲದ ಕಾರಣ ನೊಣಗಳು ಹೆಚ್ಚಾಗಿ ಹರ್ತಿ ಜನರನ್ನು ಕಾಡತೊಡಗಿವೆ. ಸತ್ತ ಕೋಳಿಗಳನ್ನು ಎಲ್ಲೆಂದರಲ್ಲಿ ಬಿಸಾಡುತ್ತಾರೆ ಎಂಬ ಆರೋಪಿಸಿದ್ದಾರೆ.

    ಇತ್ತೀಚಿಗೆ ಅತೀ ಹೆಚ್ಚು ನೊಣಗಳು ಉದ್ಭವಿಸಿ ಜನರ ನಿದ್ದೆಗೆಡಿಸಿದೆ. ಪಿಡಿಓ, ಅಧ್ಯಕ್ಷರು, ಆರೋಗ್ಯ ಇಲಾಖೆ, ಕಂದಾಯ ಇಲಾಖೆ ಎಲ್ಲರಿಗೂ ಹೇಳಿದರೂ ನೊಣಗಳು ಕಡಿಮೆ ಆಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಇದು ಪ್ರಭಾವಿಯೊಬ್ಬರ ಫಾರ್ಮ್ ಆಗಿದ್ದರಿಂದ ಯಾರು ಇವರ ಗೋಜಿಗೆ ಹೊಗುತ್ತಿಲ್ಲ. ಗ್ರಾಮ ಪಂಚಾಯತ ನಿಂದ ಕೋಳಿ ಫಾರ್ಮ್‍ಗೆ ಕೇವಲ ಸೂಚನೆ ನೀಡ್ತಾರೆ, ಆದ್ರೆ ಯಾವುದೆ ಕ್ರಮ ಕೈಗೊಂಡಿಲ್ಲ ಎಂಬ ಆರೋಪ ಕೇಳಿಬರುತ್ತಿದೆ. ಜನ್ರಿಗೆ ಮಾರಕವಾಗುವ ಈ ಕೋಳಿ ಫಾರ್ಮ್‍ಗಳನ್ನ ಬಂದ್ ಮಾಡಬೇಕು. ಕೊರೊನಾ ಸಂದರ್ಭದಲ್ಲಿ ಜನ-ಜಾನುವಾರಗಳ ಆರೋಗ್ಯದ ಬಗ್ಗೆ ಕಾಳಜಿ ವಹಿಸಲಿ ಎಂಬುದು ಎಲ್ಲರ ಬೇಡಿಕೆಯಾಗಿದೆ. ಇದನ್ನೂ ಓದಿ: ಸಿಎಂ ಖುರ್ಚಿಗಾಗಿ ಸಿದ್ದರಾಮಯ್ಯ, ಡಿಕೆಶಿ ಮಧ್ಯೆ ಈಗಲೇ ಕುಸ್ತಿ ಶುರುವಾಗಿದೆ: ಕಾರಜೋಳ

  • ಜನತಾ ಕರ್ಫ್ಯೂ ನಡುವೆ 100 ರೂ.ಗೊಂದು ಕೋಳಿ- ಫಾರ್ಮ್‍ಗೆ ನುಗ್ಗಿ ಕೋಳಿ ಖರೀದಿ

    ಜನತಾ ಕರ್ಫ್ಯೂ ನಡುವೆ 100 ರೂ.ಗೊಂದು ಕೋಳಿ- ಫಾರ್ಮ್‍ಗೆ ನುಗ್ಗಿ ಕೋಳಿ ಖರೀದಿ

    -ಪೊಲೀಸರನ್ನು ಕಂಡು ಜನರು ಪರಾರಿ

    ಚಿಕ್ಕಬಳ್ಳಾಪುರ: ಪ್ರಧಾನಿ ನರೇಂದ್ರ ಮೋದಿ ಮನವಿಯ ಜನತಾ ಕರ್ಫ್ಯೂವನ್ನೇ ಬಂಡವಾಳ ಮಾಡಿಕೊಂಡ ಕೋಳಿ ಫಾರಂ ಮಾಲೀಕನೊಬ್ಬ ಇತ್ತೀಚೆಗೆ ಕೊರೊನಾದಿಂದ ಬಿಕರಿಯಾಗದೆ ಉಳಿದ ಕೋಳಿಗಳ ಮಾರಾಟಕ್ಕೆ ಮುಂದಾಗಿದ್ದಾನೆ.

    ಒಂದು ಕೋಳಿಗೆ 100 ರೂ.ಯಂತೆ ಮಾರಾಟ ಮಾಡಿದ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ನಕ್ಕಲ ಬಚ್ಚಹಳ್ಳಿ ಬಳಿ ನಡೆಯಿತು. ಕೊರೊನಾದಿಂದಾಗಿ ಇತ್ತೀಚೆಗೆ ಬಾಯಲರ್ ಕೋಳಿಗಳನ್ನು ಯಾರೂ ಕೊಳ್ಳದೇ ನೂರಾರು ಕೋಳಿ ಫಾರ್ಮ್‍ಗಳಲ್ಲೇ ಕೋಳಿಗಳು ನರಳುವಂತಾಗಿತ್ತು. ಇದರಿಂದ ಬೇಸತ್ತ ಕೋಳಿ ಫಾರ್ಮ್ ಮಾಲೀಕರು 100 ರೂ.ಗೊಂದು ಕೋಳಿ ಎಂದು ಘೋಷಣೆ ಮಾಡಿದ್ದಾನೆ.

    ಮಾಲೀಕ ಘೋಷಣೆ ಮಾಡಿದ್ದೇ ತಡ ಜನ ಮರಳೋ ಜಾತ್ರೆ ಮರಳೋ ಎನ್ನುವ ಲೆಕ್ಕದಲ್ಲಿ ಕೋಳಿ ಫಾರ್ಮ್‍ಗೆ ನುಗ್ಗಿದ ಜನ 100ರೂ.ಗೊಂದರಂತೆ ತಮಗೆ ಬೇಕಾದಷ್ಟು ಕೋಳಿಗಳನ್ನ ಬಾಚಿಕೊಂಡು ಹೋದರು. ಆದರೆ ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಾಂತ 144 ಸೆಕ್ಷೆನ್ ಜಾರಿ ಮಾಡಲಾಗಿದ್ದು ಹಾಗೂ ಜನತಾ ಕರ್ಫ್ಯೂ ನಡುವೆ ಜನ ಜಮಾಯಿಸಿದ್ದರು.

    ಇದನ್ನು ತಿಳಿದ ನಂದಿಗಿರಿಧಾಮದ ಪೊಲೀಸರು ಕೋಳಿ ಫಾರ್ಮ್ ಬಳಿ ಬಂದು ಜಮಾಯಿಸಿದ್ದ ಜನರನ್ನು ಚದರಿಸಿದರು. ಕೋಳಿ ಫಾರ್ಮ್ ಮಾಲೀಕರಿಗೆ ಕೋಳಿ ಮಾರಾಟ ಮಾಡದಂತೆ ಎಚ್ಚರಿಸಿದರು. ಇದರಿಂದ ಪೊಲೀಸರನ್ನು ಕಂಡ ಜನ ಎದ್ನೋಬಿದ್ನೋ ಎಂದು ಬೈಕ್ ಏರಿ ಪರಾರಿಯಾದರು.

  • ಕೋಳಿ ಫಾರ್ಮ್‍ನಲ್ಲಿ ನಡೀತಿದೆ ವಸತಿ ಶಾಲೆ- ಒಂದೇ ಕೊಠಡಿಲಿ 150 ಮಕ್ಕಳಿಗೆ ಶಿಕ್ಷಣ!

    ಕೋಳಿ ಫಾರ್ಮ್‍ನಲ್ಲಿ ನಡೀತಿದೆ ವಸತಿ ಶಾಲೆ- ಒಂದೇ ಕೊಠಡಿಲಿ 150 ಮಕ್ಕಳಿಗೆ ಶಿಕ್ಷಣ!

    – 150 ಮಕ್ಕಳು ಎರಡೇ ಎರಡು ಶೌಚಾಲಯ
    – ಹಾದಿ ಬೀದಿಯಲ್ಲಿ ಮಕ್ಕಳು ಸ್ನಾನ

    ಬಳ್ಳಾರಿ: ಸರ್ಕಾರಿ ಶಾಲೆ ಶಿಕ್ಷಣಕ್ಕೆ ಸರ್ಕಾರ ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತಿದೆ. ಆದರೆ ಇಲ್ಲೊಂದು ಶಾಲೆ ಇದೆ. ಆ ಶಾಲೆಯ ಸ್ಥಿತಿಯನ್ನು ನೋಡಿದರೆ ಎಂಥವರಿಗೂ ಅಚ್ಚರಿ ಆಗದೇ ಇರದು. ಈ ಶಾಲೆಯಲ್ಲಿ ಕಲಿಯುವ ಮಕ್ಕಳ ಸ್ಥಿತಿಯನ್ನು ನೀವೂ ನೋಡಿದ್ರೆ ಈ ರೀತಿಯ ಪರಿಸ್ಥಿತಿಯಲ್ಲಿ ಮಕ್ಕಳಿಗೆ ಪಾಠ ಹೇಳಿಕೊಡಬೇಕಾ ಅನ್ನೋ ಪ್ರಶ್ನೆ ಮೂಡದೇ ಇರದು.

    ಹೌದು. ಕಳೆದ ನಾಲ್ಕೈದು ತಿಂಗಳ ಹಿಂದೆ ಇದು ಒಂದು ಕೋಳಿ ಫಾರ್ಮ್ ಆಗಿತ್ತು. ಈ ಕೋಳಿ ಫಾರ್ಮ್ ನಲ್ಲಿ ಸುಮಾರು 5 ಸಾವಿರ ಕೋಳಿಗಳನ್ನು ಸಾಕಲಾಗುತಿತ್ತು. ಆದರೆ ಈಗ ಅದೇ ಕೋಳಿ ಫಾರ್ಮ್ ಇಂದು ಮಕ್ಕಳ ವಸತಿ ಶಾಲೆಯಾಗಿ ಮಾರ್ಪಟ್ಟಿದೆ. ಕೋಳಿ ಫಾರ್ಮ್ ಈಗ ವಸತಿ ಶಾಲೆಯಾಗಿ ಬದಲಾಗಿದ್ದು, ಹಿಂದುಳಿದ ಮಕ್ಕಳಿಗೆ ಇಲ್ಲಿ ಶಿಕ್ಷಣ ನೀಡಲಾಗುತ್ತಿದೆ. ಇದು ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನಲ್ಲಿ ಇರುವ ಅಂಬೇಡ್ಕರ್ ವಸತಿ ಶಾಲೆಯಲ್ಲಿ ಕಲಿಯುತ್ತಿರುವ ಮಕ್ಕಳ ದಯನೀಯ ಸ್ಥಿತಿಯಾಗಿದೆ.

    ಈ ಮಕ್ಕಳ ಸ್ಥಿತಿಯನ್ನು ಒಂದು ಸಾರಿ ನೀವು ನೋಡಿದರೆ ಗೊತ್ತಾಗುತ್ತೆ. ಇಲ್ಲಿ ಸುಮಾರು 150 ಮಕ್ಕಳು ಕಲಿಯುತ್ತಿದ್ದು, ಈ ಎಲ್ಲಾ ಮಕ್ಕಳಿಗೆ ಕೇವಲ ಎರಡೇ ಎರಡು ಶೌಚಾಲಯ ನಿರ್ಮಿಸಿದ್ದಾರೆ. ಹೀಗಾಗಿ ಇಲ್ಲಿನ ಹೆಣ್ಣು ಮಕ್ಕಳು ಸ್ನಾನದ ಗೃಹದಲ್ಲಿ ಸ್ನಾನ ಮಾಡಿದ್ರೆ, ಗಂಡು ಮಕ್ಕಳು ಹಾದಿ ಬೀದಿಯಲ್ಲಿ ಸ್ನಾನ ಮಾಡುತ್ತಾರೆ. ಇಲ್ಲಿ ಕಲಿಯುವ ಮಕ್ಕಳು ಬಹುತೇಕರು ಗ್ರಾಮೀಣ ಪ್ರದೇಶದವರು. ತಮ್ಮ ತಂದೆ-ತಾಯಿಗಳು ಉದ್ಯೋಗ ಅರಸಿ ಬೇರೆ ಕಡೆಗೆ ದುಡಿಯಲು ಹೋಗುತ್ತಾರೆ. ಹೀಗಾಗಿ ಈ ಮಕ್ಕಳಿಗೆ ಇದೇ ಶಾಲೆ ಇದೇ ಮನೆ. ಇಲ್ಲಿ ಶಾಲೆಯೂ ಅದೇ ವಸತಿ ನಿಲಯವೂ ಇದೆ. ಇದೇ ಕೋಳಿ ಫಾರ್ಮ್ ನಲ್ಲಿ ಶಿಕ್ಷಣ ಇದೇ ಕೋಳಿ ಫಾರ್ಮ್ ವಸತಿ ಮಾಡಬೇಕಾದ ದಯನೀಯ ಸ್ಥಿತಿ ಈ ಮಕ್ಕಳದ್ದಾಗಿದೆ.

    ಶಾಲೆಯಲ್ಲಿ 6 ರಿಂದ 8 ನೇ ತರಗತಿಯವರೆಗೂ ಇದೆ. ಇಲ್ಲಿ ಕಲಿಯುವ ಮಕ್ಕಳಿಗೆ ಸೂಕ್ತ ಭದ್ರತೆಯೂ ಕೂಡ ಇಲ್ಲ. ಊರ ಹೊರಗಿನ ಶಾಲೆ ಇದಾಗಿದ್ದರಿಂದ ಮಕ್ಕಳು ಭಯದಲ್ಲಿ ಬದುಕುತ್ತಿದ್ದಾರೆ. ವಯಸ್ಸಿಗೆ ಬಂದ ಹೆಣ್ಣು ಮಕ್ಕಳು ಕೂಡ ಇಲ್ಲಿ ಕಲಿಯುತ್ತಿದ್ದು, ಒಂದೇ ಕೋಳಿ ಫಾರ್ಮ್ ನಲ್ಲಿ ಗಂಡು ಮಕ್ಕಳು ಮತ್ತು ಹೆಣ್ಣು ಮಕ್ಕಳು ಕಲಿಯುತ್ತಿದ್ದಾರೆ.

    ಈ ವಸತಿ ಶಾಲೆ ಮೊದಲು ಕೂಡ್ಲಿಗಿ ತಾಲೂಕಿನ ಖಾನಾಹೊಸಳ್ಳಿ ಇತ್ತು. ಅಲ್ಲಿ ಸರಿಯಾದ ಸ್ಥಳ ಸಿಗದ ಹಿನ್ನೆಲೆಯಲ್ಲಿ ಮತ್ತೆ ಈ ಶಾಲೆಯನ್ನು ಕೂಡ್ಲಿಗಿ ಪಟ್ಟಣದ ಬೇರೆ ವಸತಿ ಶಾಲೆಗೆ ಸ್ಥಳಾಂತರ ಮಾಡಲಾಯಿತು. ಆದರೆ ಅಲ್ಲಿಯೂ ಮಕ್ಕಳಿಗೆ ತೊಂದರೆ ಆದ ಹಿನ್ನೆಲೆಯಲ್ಲಿ ಈ ಶಾಲೆಯನ್ನು ಈ ಪಾಳು ಬಿದ್ದ ಕೋಳಿ ಫಾರ್ಮ್ ನಲ್ಲಿ ಸ್ಥಳಾಂತರ ಮಾಡಲಾಯಿತು. ಶಾಲೆಗೆ ಬಾಡಿಗೆ ಕೊಟ್ಟ ಕೋಳಿ ಫಾರ್ಮ್ ಮಾಲೀಕರು ಶೌಚಾಲಯ ಕಟ್ಟಿಸಿ ಕೊಡುವುದಾಗಿ ಹೇಳಿದ್ದಾರೆ. ಆದರೆ ಈಗ ಮಕ್ಕಳಿಗೆ ಕನಿಷ್ಠ ಸೌಲಭ್ಯಗಳು ಇಲ್ಲದೆ ಪ್ರತಿದಿನ ನರಕ ಯಾತನೆ ಅನುಭವಿಸುತ್ತಿರುವುದಾಗಿ ವಿದ್ಯಾರ್ಥಿನಿ ಶಕುಂತಲಾ ತನ್ನ ಅಳಲು ತೋಡಿಕೊಂಡಿದ್ದಾಳೆ.

    ಒಟ್ಟಿನಲ್ಲಿ ಸರ್ಕಾರ ಶಿಕ್ಷಣಕ್ಕೆ ಕೋಟಿ ಕೋಟಿ ಹಣ ನೀಡುತ್ತದೆ. ಆದರೆ ಇಲ್ಲಿನ ಸ್ಥಳೀಯ ನಾಯಕರು ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಮಕ್ಕಳು ಈ ರೀತಿಯ ನರಕದಲ್ಲಿ ಶಿಕ್ಷಣ ಕಲಿಯಬೇಕಾದ ಸ್ಥಿತಿ ನಿರ್ಮಾಣ ಆಗಿದ್ದು ಮಾತ್ರ ವಿಪರ್ಯಾಸವಾಗಿದೆ.

  • ಬೈಕ್ ಸವಾರನನ್ನು ಕೊಲೆಗೈದು 15 ಲಕ್ಷ ರೂ. ದೋಚಿದ್ದ ಆರೋಪಿಗಳು ಅಂದರ್

    ಬೈಕ್ ಸವಾರನನ್ನು ಕೊಲೆಗೈದು 15 ಲಕ್ಷ ರೂ. ದೋಚಿದ್ದ ಆರೋಪಿಗಳು ಅಂದರ್

    ಬೆಂಗಳೂರು: ಬೈಕ್ ಅಡ್ಡಗಟ್ಟಿ ಸವಾರನನ್ನು ಬರ್ಬರವಾಗಿ ಕೊಲೆ ಮಾಡಿ 15 ಲಕ್ಷ ರೂ. ದೋಚಿ ಪರಾರಿಯಾಗಿದ್ದ ಮೂವರು ಆರೋಪಿಗಳನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪೊಲೀಸರು ಬಂಧಿಸಿದ್ದಾರೆ.

    ಬೊಮ್ಮನಹಳ್ಳಿಯ ಮೊಹಮ್ಮದ್ ತೌಸಿಫ್, ಕಾಡುಗೋಡಿಯ ಮೊಹಮ್ಮದ್ ಅಕ್ಯೂಬ್ ಹಾಗೂ ಅಸ್ಮತ್ ಖಾನ್ ಬಂಧಿತ ಆರೋಪಿಗಳು. ಗೋದ್ರೆಜ್ ಚಿಕನ್ ಕಂಪನಿಯಲ್ಲಿ ಸೂಪರ್ ವೈಸರ್ ಆಗಿದ್ದ ಬೈರೇಗೌಡ ಕೊಲೆಯಾಗಿದ್ದ ವ್ಯಕ್ತಿ. ಘಟನೆಯು ಜೂನ್ 30ರಂದು ರಾತ್ರಿ ನಡೆದಿದ್ದು, ಸದ್ಯ ಆರೋಪಿಗಳನ್ನು ನಂದಗುಡಿ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

    ಏನಿದು ಪ್ರಕರಣ?
    ಗೋದ್ರೆಜ್ ಚಿಕನ್ ಕಂಪನಿಯಲ್ಲಿ ಸೂಪರ್ ವೈಸರ್ ಆಗಿದ್ದ ಬೈರೇಗೌಡ ಜೂನ್ 29ರಂದು ರಾತ್ರಿ ಬಾವಾಪುರ ಬಳಿಯ ಕೋಳಿ ಫಾರ್ಮ್ ಗೆ ಬಂದಿದ್ದರು. ವ್ಯವಹಾರಕ್ಕಾಗಿ ತನ್ನ ಬಳಿ 15 ಲಕ್ಷ ರೂ. ನಗದು ಇಟ್ಟುಕೊಂಡಿದ್ದರು. ಜೂನ್ 30ರಂದು 8 ಗಂಟೆ ಸುಮಾರಿಗೆ ಬೈಕ್ ನಲ್ಲಿ ಹೊಸಕೋಟೆಯ ಬ್ಯಾಂಕ್‍ಗೆ ಹಣ ಜಮಾ ಮಾಡಲು ಹೊರಟಿದ್ದರು. ಈ ವೇಳೆ ಬೈರೇಗೌಡರನ್ನು ಹಿಂಬಾಲಿಸಿ ಬಂದ ಆರೋಪಿಗಳು ಶಿವನಾಪುರ ಕ್ರಾಸ್ ಬಳಿಯ ನಿರ್ಜನ ಪ್ರದೇಶದಲ್ಲಿ ಅಡ್ಡ ಹಾಕಿ, ಹಣ ನೀಡುವಂತೆ ಕೇಳಿದ್ದರು.

    ಬೈರೇಗೌಡ ಹಣ ನೀಡಲು ಒಪ್ಪದಿದ್ದಾಗ ಚಾಕುವಿನಿಂದ ಇರಿದು ಹಣ ಕಸಿದುಕೊಂಡು ಪರಾರಿಯಾಗಿದ್ದರು. ಚಾಕು ಇರಿತದಿಂದ ರಸ್ತೆಯಲ್ಲಿ ರಕ್ತದ ಮಡುವಿನಲ್ಲಿ ಒದ್ದಾಡ್ತಿದ್ದ ಬೈರೇಗೌಡರನ್ನು ಕಂಡ ಸ್ಥಳೀಯರು ಆಸ್ವತ್ರೆಗೆ ಸಾಗಿಸಲು ಮುಂದಾಗಿದ್ದರು. ಆದರೆ ತೀವ್ರ ರಕ್ತಸ್ರಾವದಿಂದಾಗಿ ಮಾರ್ಗ ಮಧ್ಯೆಯೇ ಬೈರೇಗೌಡ ಅಸುನೀಗಿದ್ದರು.

  • ಕುಂತ್ರು ನಿಂತ್ರು ಬಿಡಂಗಿಲ್ಲ, ಊಟನೂ ತಿನ್ನಂಗಿಲ್ಲ- ಮುಳಬಾಗಿಲು ಜನತೆಗೆ ಮುಕ್ತಿ ಎಂದು?

    ಕುಂತ್ರು ನಿಂತ್ರು ಬಿಡಂಗಿಲ್ಲ, ಊಟನೂ ತಿನ್ನಂಗಿಲ್ಲ- ಮುಳಬಾಗಿಲು ಜನತೆಗೆ ಮುಕ್ತಿ ಎಂದು?

    ಕೋಲಾರ: `ಈಗ’ ಸಿನಿಮಾದಲ್ಲಿ ನೊಣದ ಕಾಟವನ್ನು ಸುದೀಪ್ ಎದುರಿಸಿದಂತೆ ಸದ್ಯ ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ಯಳಗೊಂಡಹಳ್ಳಿ ಜನರು ಎದುರಿಸುತ್ತಿದ್ದಾರೆ.

    ಕಳೆದ ಹದಿನೈದು ದಿನಗಳಿಂದ ಜನರು ರಾತ್ರಿ ನಿದ್ದೆ ಮಾಡುತ್ತಿಲ್ಲ, ಕೂತಲ್ಲಿ ಕೂರುತ್ತಿಲ್ಲ, ನಿಂತಲ್ಲಿ ನಿಲ್ಲುತ್ತಿಲ್ಲ. ಮನೆ ಬಾಗಿಲನ್ನು ತಗೆದು ಒಳಗೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ. ನೊಣಗಳ ದಾಳಿಯಿಂದ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ. ಒಂದು ಕಡೆ ಕುಳಿತು ಊಟ ಮಾಡುವಂತಿಲ್ಲಾ, ನೀರು ಕುಡಿಯುವಂತಿಲ್ಲ. ಮನೆಯಿಂದ ಹೊರಗೆ ಬಂದರೆ ಸಾಕು, ಲಕ್ಷಾಂತರ ನೊಣಗಳು ಜನರ ಮೇಲೆ ದಾಳಿ ಮಾಡುತ್ತವೆ. ಅಡುಗೆ ಮನೆಯಲ್ಲೂ ಸಹ ನೊಣಗಳ ಕಾಟ ಹೆಚ್ಚಾಗಿದೆ.

    ಸಮಯಕ್ಕೆ ಸರಿಯಾಗಿ ಊಟ ನಿದ್ದೆಯಿಲ್ಲದೆ ಗ್ರಾಮಸ್ಥರು ಅಸ್ವಸ್ಥಗೊಂಡಿದ್ದಾರೆ. ನೊಣಗಳ ದಾಳಿಯಿಂದ ಏನೆಲ್ಲಾ ರೋಗ ಬರುತ್ತದೋ ಎನ್ನುವ ಭೀತಿಯನ್ನು ಗ್ರಾಮಸ್ಥರು ಎದುರಿಸುತ್ತಿದ್ದಾರೆ. ಸದ್ಯ ಗ್ರಾಮದ ಕೆಲವರು ವಿವಿಧ ಕಾಯಿಗಳಿಗೆ ತುತ್ತಾಗಿದ್ದು, ಮತ್ತಷ್ಟು ಆತಂಕದ ವಾತಾವರಣ ನಿರ್ಮಾಣವಾಗಿದೆ.

    ನೋಣ ಹೆಚ್ಚಾಗಿದ್ದು ಏಕೆ:
    ನೊಣಗಳ ಕಾಟ ಹೆಚ್ಚಾಗಲು ಕಾರಣ ಗ್ರಾಮದ ಬಳಿಯ ಆರ್.ವಿ.ಬ್ರೀಡಿಂಗ್ ಕೋಳಿ ಫಾರ್ಮ್. ಈ ಕುರಿತು ಕೋಳಿ ಫಾರ್ಮ್ ಮಾಲೀಕರಿಗೆ ತಿಳಿಸಿದ್ದರೂ ಅವರು ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ತೋರುತ್ತಿದ್ದಾರೆ. ಇಷ್ಟೇ ಅಲ್ಲದೇ ಆರೋಗ್ಯ ಇಲಾಖೆ ಹಾಗೂ ಗ್ರಾಮ ಪಂಚಾಯ್ತಿಗೆ ದೂರು ಕೊಟ್ಟಿದ್ದೇವೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಒಂದು ವೇಳೆ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಕೋಳಿ ಫಾರ್ಮ್ ಮಾಲೀಕರು ಕ್ರಮ ಕೈಗೊಳ್ಳದಿದ್ದರೆ, ಬಲವಂತವಾಗಿ ಕೋಳಿ ಫಾರ್ಮ್ ಅನ್ನು ಖಾಲಿ ಮಾಡಿಸಬೇಕಾಗುತ್ತದೆ ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.

  • ಪೌಲ್ಟ್ರಿಗಳಲ್ಲಿ ಕೋಳಿಗಳನ್ನ ದಪ್ಪವಾಗಿಸೋಕೆ ಮದ್ಯ ಕುಡಿಸ್ತಾರಾ?

    ಪೌಲ್ಟ್ರಿಗಳಲ್ಲಿ ಕೋಳಿಗಳನ್ನ ದಪ್ಪವಾಗಿಸೋಕೆ ಮದ್ಯ ಕುಡಿಸ್ತಾರಾ?

    ಬೆಂಗಳೂರು: ಚಿಕನ್ ಪ್ರಿಯರಿಗೆ ಶಾಕ್ ನೀಡುವಂತಹ ಸುದ್ದಿಯೊಂದು ಹರಿದಾಡ್ತಿದೆ. ಈ ಬಗ್ಗೆ ಯಾವುದೇ ಅಧ್ಯಯನ ನಡೆದಿಲ್ಲ ಅಥವಾ ಪಶುಸಂಗೋಪನಾ ಇಲಾಖೆಗೆ ಇಂತಹ ಯಾವುದೇ ಪ್ರಕರಣ ಬಂದಿಲ್ಲ. ಆದ್ರೂ ಪೌಲ್ಟ್ರಿ ಫಾರ್ಮ್‍ಗಳಲ್ಲಿ ಕೋಳಿಗಳನ್ನ ದಪ್ಪ ಮಾಡೋಕೆ ಮದ್ಯಪಾನ ನೀಡ್ತಾರೆ ಅಂತ ಕುಣಿಗಲ್ ತಾಲೂಕಿನಲ್ಲಿ ಸುದ್ದಿ ಹರಿದಾಡ್ತಿದೆ.

    ಮೂಲಗಳ ಮಾಹಿತಿಯ ಪ್ರಕಾರ ಕುಣಿಗಲ್‍ನಲ್ಲಿ ಸುಮಾರು 50 ರಿಂದ 60 ಕೋಳಿ ಫಾರ್ಮ್‍ಗಳಿದ್ದು, ಇವುಗಳಲ್ಲಿ ಕೆಲವು ಫಾರ್ಮ್‍ಗಳು ಕಡಿಮೆ ಬೆಲೆಯ ಮದ್ಯವನ್ನ ಕೋಳಿಗಳ ಮೇವಿನಲ್ಲಿ ಬೆರೆಸಿ ಕೊಡ್ತಿದ್ದಾರೆ ಎನ್ನಲಾಗಿದೆ. ಮದ್ಯದ ಅಮಲಿನಲ್ಲಿ ಕೋಳಿಗಳು ಹೆಚ್ಚಿನ ಮೇವು ಹಾಗೂ ನೀರು ಸೇವಿಸುತ್ತವೆ. ಹೀಗಾಗಿ ಅವುಗಳ ತೂಕ ಹೆಚ್ಚಾಗಿ ಮಾಲೀಕನಿಗೆ ಲಾಭ ಸಿಗುತ್ತದೆ ಎಂದು ಹೇಳಲಾಗಿದೆ.

    ಆದ್ರೆ ಕುಣಿಗಲ್‍ನ ಪ್ರಭಾರಿ ಸಹಾಯಕ ನಿರ್ದೇಶಕರಾದ ಡಾ. ನವೀನ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಇಂತಹ ಯಾವುದೇ ದೂರುಗಳು ಬಂದಿಲ್ಲ. ಆದ್ರೆ ಕಡಿಮೆ ಬೆಲೆಯ ಮದ್ಯವನ್ನ ಪೌಲ್ಟ್ರಿಗಳಲ್ಲಿ ನೀಡಲಾಗ್ತಿದೆ ಅಂತ ಜನ ಹೇಳ್ತಿದ್ದಾರೆ. ಆದ್ರೆ ನಿರ್ದಿಷ್ಟವಾದ ಪ್ರಕರಣಗಳಿಲ್ಲ. ಅಲ್ಲದೆ ಮದ್ಯದ ಅಮಲಿನಲ್ಲಿ ಕೋಳಿಗಳು ಹೆಚ್ಚು ಮೇವು ಸೇವಿಸುತ್ತವೆ ಎಂಬ ಬಗ್ಗೆ ಯಾವುದೇ ಅಧ್ಯಯನ ನಡೆದಿಲ್ಲ ಎಂದಿದ್ದಾರೆ.

    ದೇಹದೊಳಗೆ ಮದ್ಯ ಹೋದ ನಂತರ ನಿರ್ಜಲೀಕರಣವಾಗುತ್ತದೆ. ಇದರಿಂದ ಕೋಳಿ ಹೆಚ್ಚು ನೀರು ಕುಡಿಯಬಹುದು ಮತ್ತು ಆಹಾರ ಸೇವಿಸಬಹುದು ಎಂದು ಊಹಿಸಬಹುದು. ಆದ್ರೆ ಕೇವಲ ಊಹೆ ಮೇಲೆ ಕೋಳಿಗಳ ತೂಕ ಹೆಚ್ಚಾಗುತ್ತದೆ ಎಂಬ ನಿರ್ಧಾರಕ್ಕೆ ಬಂದು ಮಾಲೀಕರು ಲಾಭ ಮಾಡಿಕೊಳ್ತಿದ್ದಾರೆ ಎಂದು ಹೇಳಲು ಸಾಧ್ಯವಿಲ್ಲ. ಇವೆಲ್ಲಾ ಅವೈಜ್ಞಾನಿಕ ವರದಿ ಎಂದಿದ್ದಾರೆ.