Tag: ಕೋಲ್ಕತ್ತಾ ಹೈ ಕೋರ್ಟ್

  • ಸಿಎಎ ವಿರುದ್ಧದ ಎಲ್ಲ ಜಾಹೀರಾತು ತೆರವುಗೊಳಿಸಿ – ಮಮತಾಗೆ ಕೋರ್ಟ್ ಚಾಟಿ

    ಸಿಎಎ ವಿರುದ್ಧದ ಎಲ್ಲ ಜಾಹೀರಾತು ತೆರವುಗೊಳಿಸಿ – ಮಮತಾಗೆ ಕೋರ್ಟ್ ಚಾಟಿ

    ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ಎನ್‍ಆರ್ ಸಿಯನ್ನು ಜಾರಿಗೆ ತರುವುದಿಲ್ಲ ಎಂದು ಹಾಕಿರುವ ಎಲ್ಲ ಜಾಹೀರಾತುಗಳನ್ನು ತೆರವುಗೊಳಿಸುವಂತೆ ಮಮತಾ ಬ್ಯಾನರ್ಜಿ ನೇತೃತ್ವದ ರಾಜ್ಯ ಸರ್ಕಾರಕ್ಕೆ ಕೋಲ್ಕತ್ತಾ ಹೈ ಕೋರ್ಟ್ ಸೂಚಿಸಿದೆ.

    ಹೈಕೋರ್ಟ್ ಮುಖ್ಯ ನ್ಯಾಯಾಧೀಶ ಟಿಬಿಎನ್ ರಾಧಾಕೃಷ್ಣನ್ ಹಾಗೂ ರಾಧಾಕೃಷ್ಣನ್ ಅವರಿದ್ದ ವಿಭಾಗೀಯ ಪೀಠ ಈ ಕುರಿತು ಆದೇಶ ಹೊರಡಿಸಿದೆ. ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ಎನ್‍ಆರ್‍ಸಿಯನ್ನು ಪಶ್ಚಿಮ ಬಂಗಾಳದಲ್ಲಿ ಜಾರಿಗೆ ತರುವುದಿಲ್ಲ ಎಂದು ಜಾಹೀರಾತು ಹಾಕಿದ್ದ ಪಶ್ಚಿಮ ಬಂಗಾಳದ ಕ್ರಮವನ್ನು ಖಂಡಿಸಿ ಹಲವರು ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು. ಈ ಹಿನ್ನೆಲೆ ವಿಚಾರಣೆ ನಡೆಸಿದ ಹೈ ಕೋರ್ಟ್ ಇಂದು ಮಧ್ಯಂತರ ಆದೇಶ ನೀಡಿದೆ.

    ಜನವರಿ 9ರಂದು ಪ್ರಕರಣದ ಕುರಿತು ಕೋಲ್ಕತ್ತಾ ಕೋರ್ಟ್ ಮತ್ತೆ ವಿಚಾರಣೆ ನಡೆಸಲಿದೆ.

    ಅಡ್ವೊಕೇಟ್ ಜನರಲ್ ಕಿಶೋರ್ ದತ್ತಾ ಈ ಕುರಿತು ಪ್ರತಿಕ್ರಿಯಿಸಿ, ಎಲ್ಲ ಜಾಹೀರಾತುಗಳನ್ನು ತೆಗೆದು ಹಾಕುವುದಾಗಿ ಸರ್ಕಾರ ಹೇಳಿದೆ. ಆದರೆ ಪಶ್ಚಿಮ ಬಂಗಾಳದ ಪೊಲೀಸ್ ವೆಬ್ ಸೈಟಿನಲ್ಲಿ ಇನ್ನೂ ತೆಗೆದಿಲ್ಲ ಎಂದು ಕಕ್ಷಿದಾರರು ತಿಳಿಸಿದ್ದಾರೆ ಎಂದು ತಿಳಿಸಿದ್ದಾರೆ.

    ನಮ್ಮ ಸರ್ಕಾರವನ್ನು ವಜಾಗೊಳಿಸಿದರೂ ಪರವಾಗಿಲ್ಲ ಪಶ್ಚಿಮ ಬಂಗಾಳ ಸರ್ಕಾರ ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ಎನ್‍ಆರ್ ಸಿಯನ್ನು ಜಾರಿಗೊಳಿಸುವುದಿಲ್ಲ ಎಂದು ಸಿಎಂ ಮಮತಾ ಬ್ಯಾನರ್ಜಿ ಹೇಳಿದ್ದರು. ಅಸ್ಸಾಂ ನಂತರ ಎನ್‍ಆರ್ ಸಿಯನ್ನು ದೇಶಾದ್ಯಂತ ವಿಸ್ತರಿಸುವುದಾಗಿ ಅಮಿತ್ ಶಾ ಹೇಳಿದ್ದರು. ಅಲ್ಲದೆ ಅಕ್ರಮ ವಲಸಿಗರನ್ನು ದೇಶದಿಂದ ಗಡಿಪಾರು ಮಾಡಲೇಬೇಕಿದೆ ಎಂದು ತಿಳಿಸಿದ್ದರು. ಸಿಎಎ ಮೂಲಕ ಪಾಕಿಸ್ತಾನ, ಅಫ್ಘಾನಿಸ್ಥಾನ, ಬಾಂಗ್ಲಾದೇಶದ ಅಲ್ಪಸಂಖ್ಯಾತರಿಗೆ ಪೌರತ್ವ ನೀಡುವ ಪೌರತ್ವ ಕಾಯ್ದೆಯನ್ನು ಜಾರಿಗೊಳಿಸಿದ್ದು, ಈ ಮೂರು ದೇಶದ ಮುಸ್ಲೀಮೇತರರಿಗೆ ಭಾರತದ ಪೌರತ್ವ ನೀಡುವುದು ಸಿಎಎ ಉದ್ದೇಶವಾಗಿದೆ.

    ಈ ಕುರಿತು ಜಾಗೃತಿ ಮೂಡಿಸಲು ಬಿಜೆಪಿ ಕೋಲ್ಕತ್ತಾದಲ್ಲಿಯೇ ರ್ಯಾಲಿ ಹಮ್ಮಿಕೊಂಡಿದ್ದು, ಬಿಜೆಪಿ ಕಾರ್ಯಾಧ್ಯಕ್ಷ ಜೆ.ಪಿ.ನಡ್ಡಾ ಭಾಗವಹಿಸಿ ಸಿಎಎ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಿದ್ದಾರೆ. ಸಿಎಎಯಿಂದ ಭಾರತದಲ್ಲಿನ ಮುಸ್ಲಿಮರಿಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಹೇಳಿದ್ದಾರೆ.