Tag: ಕೋಲ್ಕತ್ತಾ ಪೊಲೀಸ್ ಆಯುಕ್ತ

  • ಮೋದಿ ಮತ್ತೆ ಪ್ರಧಾನಿಯಾಗಲ್ಲ, ಸುಪ್ರೀಂನಿಂದ ನೈತಿಕ ಗೆಲುವು – ಮಮತಾ ಬ್ಯಾನರ್ಜಿ

    ಮೋದಿ ಮತ್ತೆ ಪ್ರಧಾನಿಯಾಗಲ್ಲ, ಸುಪ್ರೀಂನಿಂದ ನೈತಿಕ ಗೆಲುವು – ಮಮತಾ ಬ್ಯಾನರ್ಜಿ

    ಕೊಲ್ಕತ್ತಾ: ಕೋಲ್ಕತ್ತಾ ಪೊಲೀಸ್ ಆಯುಕ್ತರನ್ನು ಬಂಧಿಸುವಂತಿಲ್ಲ ಎಂದು ಸುಪ್ರೀಂಕೋರ್ಟ್ ಆದೇಶ ನೀಡುವ ಮೂಲಕ ನಮಗೆ ನೈತಿಕ ಗೆಲುವು ಸಿಕ್ಕಿದೆ. ಹಾಗೂ ಈ ಆದೇಶಕ್ಕೆ ನಾವು ಬದ್ಧರಾಗಿದ್ದೇವೆ ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

    ಕೋಲ್ಕತ್ತಾದಲ್ಲಿ ಮಾತನಾಡಿದ ಅವರು, ದೇಶದಲ್ಲಿ ಪ್ರಜೆಗಳಿಗಿಂತ ಯಾರೂ ದೊಡ್ಡವರಲ್ಲ. ಪ್ರಜಾಪ್ರಭುತ್ವವೇ ದೇಶದ ಒಡೆಯ. ನಾವು ಸಾಕ್ಷಿ ನಾಶ ಮಾಡುತ್ತಿದ್ದೇವೆ ಅಂತ ಆರೋಪಿಸಿದ್ದರು. ಅದು ಸುಳ್ಳಾಗಿದೆ. ರಾಜೀವ್ ಕುಮಾರ್ ಪ್ರಕರಣ ಗೆಲುವು ಕೇವಲ ನನ್ನದಲ್ಲ. ಬಂಗಾಳ ಜನತೆ, ಸೇವ್ ಇಂಡಿಯಾ ಕ್ಯಾಂಪೇನ್ ಹಾಗೂ ಸಂವಿಧಾನದ ಗೆಲುವು ಎಂದು ಬಿಜೆಪಿ ವಿರುದ್ಧ ಪರೋಕ್ಷವಾಗಿ ಮಮತಾ ಬ್ಯಾನರ್ಜಿ ಗುಡುಗಿದರು.  ಇದನ್ನು ಓದಿ: ಸಿಬಿಐ ವಿಚಾರಣೆಗೆ ರಾಜೀವ್ ಕುಮಾರ್ ಹಾಜರಾಗಬೇಕು: ಕೋರ್ಟ್ ಕಲಾಪ ಹೀಗಿತ್ತು

    ಪ್ರಕರಣದ ಕುರಿತು ವಿಚಾರಣೆ ನಡೆಯದೇ ಏಕಾಏಕಿ ಸಿಬಿಐ ಅಧಿಕಾರಿಗಳು ರಾಜೀವ್ ಕುಮಾರ್ ಅವರನ್ನು ಭಾನುವಾರ ಬಂಧಿಸಲು ಮುಂದಾಗಿದ್ದರು. ಆದರೆ ಈಗ ಕೋರ್ಟ್ ಆದೇಶದಿಂದ ರಾಜೀವ್ ಕುಮಾರ್ ಅವರನ್ನು ಬಂಧಿಸುವಂತಿಲ್ಲ. ಇಬ್ಬರಿಗೂ ಒಪ್ಪಿಗೆಯಾದ ಸ್ಥಳದಲ್ಲಿ ವಿಚಾರಣೆ ನಡೆಸಬೇಕು ಎನ್ನುವ ಆದೇಶ ನೀಡಿದೆ. ಇದು ನಮ್ಮ ಹೋರಾಟಕ್ಕೆ ಸಿಕ್ಕ ಗೆಲುವು ಎಂದು ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿ ಅವರು ಸಾಮಾನ್ಯ ಜನರಿಗೆ, ರೈತರು, ಕಲಾವಿದರು ಸೇರಿದಂತೆ ಅನೇಕರಿಗೆ ತೊಂದರೆ ಕೊಟ್ಟಿದ್ದಾರೆ. ಹೀಗಾಗಿ ಅವರು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸುವುದಿಲ್ಲ ಎಂದು ಕುಟುಕಿದರು. ಇದನ್ನು ಓದಿ:  ಮಮತಾ ಪರ ಬ್ಯಾಟಿಂಗ್ ಮಾಡಿದ ರಾಹುಲ್ ನಿಲುವಿಗೆ ಬಂಗಾಳ ಕಾಂಗ್ರೆಸ್ ವಿರೋಧ

    ಕೇಂದ್ರ ಸರ್ಕಾರವು ಎಲ್ಲರನ್ನೂ ಬಂಧಿಸಿ, ರೈಲಿಗೆ ಕಳುಹಿಸಲು ಮುಂದಾಗಿದೆ. ಈ ನೀತಿಯ ವಿರುದ್ಧ ನಾನು ಈ ಧರಣಿ ಮುಂದುವರಿಸಬೇಕಾದರೆ ಇತರ ನಾಯಕರನ್ನು ಭೇಟಿ ಮಾಡುವೆ. ನಾನು ಒಬ್ಬಳೇ ಹೋರಾಡುವುದಿಲ್ಲ. ಈ ನಿಟ್ಟಿನಲ್ಲಿ ಆಂಧ್ರಪ್ರದೇಶದ ಸಿಎಂ ಚಂದ್ರಬಾಬು ನಾಯ್ಡು, ಒಡಿಶಾ ಸಿಎಂ ನವೀನ್ ಪಾಟ್ನಾಯಕ್ ಸೇರಿದಂತೆ ಅನೇಕರ ಬೆಂಬಲ ಪಡೆಯುತ್ತೇನೆ ಎಂದು ಹೇಳಿದರು.

    ರಾಜೀವ್ ಕುಮಾರ್ ವಿರುದ್ಧ ಅವರು ಹಲವಾರು ಆರೋಪಗಳನ್ನು ಮಾಡಲಾಗಿತ್ತು. ಜೊತೆಗೆ ನಾವು ನ್ಯಾಯಾಂಗ ನಿಂದನೆ ಮಾಡಿದ್ದೇವೆ ಎಂದು ಅವರು ದೂರಿದ್ದರು. ಇದು ತಿರಸ್ಕೃತವಾಗಿದೆ ಎಂದು ಹೇಳಿದರು.

    ಚಿಟ್ ಫಂಡ್ ಬಹುಕೋಟಿ ಹಗರಣದಲ್ಲಿ ಅನೇಕರು ಭಾಗಿಯಾಗಿದ್ದಾರೆ. ಅಸ್ಸಾಂ ಉಪ ಮುಖ್ಯಮಂತ್ರಿಗಳು 3 ಕೋಟಿ ರೂ. ಪಡೆದಿದ್ದರು. ಅವರನ್ನು ಬಂಧಿಸಲಾಗಿದೆಯೇ? ರೋಸ್ ವ್ಯಾಲಿ ಗ್ರೂಪ್‍ನ ರೋಸ್ ಅಂತ ಕರೆದುಕೊಂಡಿದ್ದ ಬಾಬುಲ್ ಸುಪ್ರಿಯೋ ಅವರ ವಿರುದ್ಧ ಯಾವ ಕ್ರಮ ಕೈಗೊಂಡಿದ್ದೀರಿ ಎಂದು ಪ್ರಶ್ನಿಸಿ ವ್ಯಂಗ್ಯವಾಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಬಿಜೆಪಿಯಿಂದ ಸಿಬಿಐ ದುರ್ಬಳಕೆ, ಪೊಲೀಸ್ ಅಧಿಕಾರಿ ಪರ ಮಮತಾ ಬ್ಯಾನರ್ಜಿ ಬ್ಯಾಟಿಂಗ್

    ಬಿಜೆಪಿಯಿಂದ ಸಿಬಿಐ ದುರ್ಬಳಕೆ, ಪೊಲೀಸ್ ಅಧಿಕಾರಿ ಪರ ಮಮತಾ ಬ್ಯಾನರ್ಜಿ ಬ್ಯಾಟಿಂಗ್

    – ಕೋಲ್ಕತ್ತಾ ಪೊಲೀಸ್ ಆಯುಕ್ತ ವಿಶ್ವದಲ್ಲಿಯೇ ನಂಬರ್ ಒನ್ ಅಧಿಕಾರಿ

    ಕೋಲತ್ತಾ: ಬಿಜೆಪಿಯವರು ರಾಜಕೀಯ ಪ್ರಭಾವನ್ನು ಬಳಸಿ ನಿಷ್ಠಾವಂತ ಪೊಲೀಸ್ ಅಧಿಕಾರಿಗಳ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುಡುಗಿದ್ದಾರೆ.

    ಸಿಬಿಐ ಬಂಧನ ಭೀತಿಯಿಂದ ನಾಪತ್ತೆಯಾಗಿರುವ ಕೋಲ್ಕತ್ತಾ ಪೊಲೀಸ್ ಆಯುಕ್ತ ರಾಜೀವ್ ಕುಮಾರ್ ಅವರ ಪರವಾಗಿ ಪ್ರತಿಕ್ರಿಯೆ ನೀಡಿರುವ ಮಮತಾ ಬ್ಯಾನರ್ಜಿ, ಬಿಜೆಪಿಯವರು ಕೇವಲ ರಾಜಕೀಯ ಪಕ್ಷಗಳ ಮೇಲೆ ಅಷ್ಟೇ ಅಲ್ಲದೆ, ಪೊಲೀಸ್ ಇಲಾಖೆಯ ಮೇಲೆ ಹಿಡಿತ ಸಾಧಿಸುತ್ತಿದ್ದಾರೆ. ಈ ಮೂಲಕ ದೇಶದ ಎಲ್ಲಾ ಇಲಾಖೆಗಳನ್ನು ನಾಶ ಮಾಡಲು ಮುಂದಾಗುತ್ತಿದ್ದಾರೆ ಎಂದು ಟ್ವೀಟ್ ಮೂಲಕ ಕಿಡಿಕಾರಿದ್ದಾರೆ.

    ಕೋಲ್ಕತ್ತಾ ಪೊಲೀಸ್ ಆಯುಕ್ತರು ವಿಶ್ವದಲ್ಲಿಯೇ ಅತ್ಯುತ್ತಮ ಪೊಲೀಸ್ ಅಧಿಕಾರಿ. ಅವರ ಸಮಗ್ರತೆ, ಧೈರ್ಯ ಹಾಗೂ ಪ್ರಾಮಾಣಿಕತೆ ಪ್ರಶ್ನಾತೀತವಾಗಿದೆ. ರಾಜೀವ್ ಕುಮಾರ್ 24*7 ಕೆಲಸ ಮಾಡುತ್ತಿದ್ದು, ಇತ್ತೀಚೆಗೆ ಒಂದೇ ಒಂದು ದಿನ ರಜೆ ಪಡೆದಿದ್ದಾರೆ. ನೀವು ಸುಳ್ಳು ಹರಿಬಿಡುತ್ತಿರುವಿರಿ. ಅದು ಮತ್ತಷ್ಟು ಸುಳ್ಳುಗಳನ್ನು ಹುಟ್ಟುಹಾಕುತ್ತಿದೆ ಎಂದು ಬಿಜೆಪಿ ವಿರುದ್ಧ ಗುಡುಗಿದ್ದಾರೆ.

    ಆಯುಕ್ತರಿಗೆ ಬಂಧನ ಭೀತಿ ಯಾಕೆ?:
    ರಾಜೀವ್ ಕುಮಾರ್ ಅವರು ಪಶ್ಚಿಮ ಬಂಗಾಳದ 1989ರ ಬ್ಯಾಚ್‍ನ ಐಪಿಎಸ್ ಅಧಿಕಾರಿಯಾಗಿದ್ದು ಸದ್ಯ ಕೋಲ್ಕತ್ತಾ ಪೊಲೀಸ್ ಆಯುಕ್ತರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ರೋಸ್ ವ್ಯಾಲಿ ಹಾಗೂ ಶಾರದಾ ಚಿಟ್ ಫಂಡ್ ಹಗರಣದ ತನಿಖೆಗೆ ಕೋಲ್ಕತ್ತಾ ಪೊಲೀಸ್ ವಿಶೇಷ ತಂಡ ರಚಿಸಿದೆ. ಆದರೆ ತನಿಖೆಯಲ್ಲಿ ರಾಜೀವ್ ಕುಮಾರ್ ಅವರು ವಿಳಂಬ ನೀತಿ ಅನುಸರಿಸುತ್ತಿದ್ದಾರೆ ಎಂದು ಸಿಬಿಐ ನೋಟಿಸ್ ಜಾರಿ ಮಾಡಿತ್ತು.

    ರಾಜೀವ್ ಕುಮಾರ್ ಅವರು ಚುನಾವಣಾ ಆಯೋಗದ ಸಭೆಗೂ ಹಾಜರಾಗದೇ ತಪ್ಪಿಸಿಕೊಂಡಿದ್ದರು. ಈ ಸಂಬಂಧ ವರದಿ ನೀಡುವಂತೆ ಕೇಂದ್ರ ಚುನಾವಣಾ ಆಯೋಗ ಪಶ್ಚಿಮ ಬಂಗಾಳ ಸರ್ಕಾರಕ್ಕೆ ಕೇಳಿತ್ತು. ಆದರೆ ರಾಜೀವ್ ಅವರು ಯಾವುದೇ ಸ್ಪಷ್ಟನೆ ನೀಡಿಲ್ಲ. ಈ ನಡುವೆ ವಿಚಾರಣೆಗೆ ಹಾಜರಾಗುವಂತೆ ರಾಜೀವ್ ಕುಮಾರ್ ಅವರಿಗೆ ಸಿಬಿಐ ಸಮನ್ಸ್ ಮಾಡಿತ್ತು. ವಿಚಾರಣೆಗೆ ಹಾಜರಾಗದೇ ಇದ್ದರೆ ರಾಜೀವ್ ಕುಮಾರ್ ಅವರನ್ನು ಬಂಧಿಸುವ ಸಾಧ್ಯತೆಯಿದೆ ಎಂದು ಸಿಬಿಐ ಮೂಲಗಳು ಆಧಾರಿಸಿ ಮಾಧ್ಯಮಗಳು ವರದಿ ಮಾಡಿದ್ದವು.

    ಬಂಧನ ಭೀತಿಯಿಂದ ರಾಜೀವ್ ಕುಮಾರ್ ಅವರು ವಿಚಾರಣೆಗೆ ಹಾಜರಾಗದೆ ನಾಪತ್ತೆಯಾಗಿದ್ದಾರೆ. ಹೀಗಾಗಿ ಮಮತಾ ಬ್ಯಾನರ್ಜಿ ಅವರು ರಾಜೀವ್ ಕುಮಾರ್ ಅವರ ಬೆಂಬಲಕ್ಕೆ ನಿಂತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv