Tag: ಕೋಲ್ಕತ್ತಾ ನೈಟ್ ರೈಡರ್ಸ್

  • ಐಪಿಎಲ್ 2022: ಕೆಕೆಆರ್ ನಾಯಕನಾಗಿ ಶ್ರೇಯಸ್ ಅಯ್ಯರ್ ನೇಮಕ

    ಐಪಿಎಲ್ 2022: ಕೆಕೆಆರ್ ನಾಯಕನಾಗಿ ಶ್ರೇಯಸ್ ಅಯ್ಯರ್ ನೇಮಕ

    ಬೆಂಗಳೂರು: ಕೋಲ್ಕತ್ತಾ ನೈಟ್ ರೈಡರ್ಸ್ ಬುಧವಾರ ಫೆಬ್ರವರಿ 16ರಂದು ಇಂಡಿಯನ್ ಪ್ರೀಮಿಯರ್ ಲೀಗ್ 2022ರ ಮುಂಬರುವ ಆವೃತ್ತಿಗೆ ಶ್ರೇಯಸ್ ಅಯ್ಯರ್ ಅವರನ್ನು ನಾಯಕನನ್ನಾಗಿ ಆಯ್ಕೆ ಮಾಡಿದೆ.

    ಐಪಿಎಲ್ ಹರಾಜಿನಲ್ಲಿ ಶ್ರೇಯಸ್ ಅವರನ್ನು ಯಶಸ್ವಿಯಾಗಿ ಬಿಡ್ ಮಾಡಿದ್ದೇವೆ. ಕೆಕೆಆರ್ ತಂಡವನ್ನು ಮುನ್ನಡೆಸುವ ಅವಕಾಶವನ್ನು ಶ್ರೇಯಸ್ ಅವರಿಗೆ ನೀಡಲು ನಾವು ಸಂತೋಷಪಡುತ್ತೇವೆ. ಅವರು ಈಗಾಗಲೇ ಒಬ್ಬ ಒಳ್ಳೆಯ ಗುಣಮಟ್ಟದ ಬ್ಯಾಟ್ಸ್‌ಮನ್ ಆಗಿ ಎಲ್ಲರನ್ನೂ ಮೆಚ್ಚಿಸಿದ್ದಾರೆ. ಅವರು ತಂಡದ ನಾಯಕರಾಗಿ ಮಿಂಚುತ್ತಾರೆ ಅಂತ ನಮಗೆ ವಿಶ್ವಾಸವಿದೆ ಎಂದು ಕೆಕೆಆರ್ ತಂಡದ (ಸಿಇಒ) ಮತ್ತು ಎಂಡಿ ವೆಂಕಿ ಮೈಸೂರು ಅವರು ಟ್ವೀಟ್ ಮಾಡಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಆಸ್ಟ್ರೇಲಿಯಾದ ಮ್ಯಾಕ್ಸ್‌ವೆಲ್ ತಮಿಳುನಾಡಿನ ಅಳಿಯ – ಆಮಂತ್ರಣ ಪತ್ರಿಕೆ ವೈರಲ್

    ಶ್ರೇಯಸ್ ಅಯ್ಯರ್ ಅವರು ಭಾರತದ ಉಜ್ವಲ ಭವಿಷ್ಯದ ನಾಯಕರಲ್ಲಿ ಒಬ್ಬರಾಗಿದ್ದಾರೆ. ಅವರನ್ನು ಕೆಕೆಆರ್ ತಂಡದ ನಾಯಕರನ್ನಾಗಿ ನೋಡಲು ನಾನು ತುಂಬಾ ಉತ್ಸುಕನಾಗಿದ್ದೇನೆ. ನಾನು ಅವರ ಆಟವನ್ನು ಮತ್ತು ಅವರ ನಾಯಕತ್ವ ಕೌಶಲ್ಯಗಳನ್ನು ದೂರದಿಂದಲೇ ಆನಂದಿಸಿದ್ದೇನೆ. ಕೆಕೆಆರ್ ತಂಡದ ಯಶಸ್ಸು ಮತ್ತು ಅವರ ಆಟದ ಶೈಲಿಯನ್ನು ಮುನ್ನಡೆಸಲು ಅವರೊಂದಿಗೆ ಕೆಲಸ ಮಾಡಲು ಎದುರು ನೋಡುತ್ತಿದ್ದೇನೆ ಎಂದು ತಂಡದ ಮುಖ್ಯ ಕೋಚ್ ಬ್ರೆಂಡನ್ ಮೆಕಲಮ್ ಅವರು ಟ್ವೀಟ್ ಮಾಡಿ ಶುಭ ಹಾರೈಸಿದ್ದಾರೆ.

    ಕೆಕೆಆರ್‌ನ ನಾಯಕತ್ವವನ್ನು ಸ್ವೀಕರಿಸಿದ ಶ್ರೇಯಸ್ ಅಯ್ಯರ್ ಮಾತನಾಡಿ, ಕೆಕೆಆರ್‌ ನಂತಹ ಪ್ರತಿಷ್ಠಿತ ತಂಡವನ್ನು ಮುನ್ನಡೆಸುವ ಅವಕಾಶವನ್ನು ಪಡೆದಿರುವುದಕ್ಕೆ ನನಗೆ ಅತ್ಯಂತ ಗೌರವವಾಗಿದೆ. ಐಪಿಎಲ್ ಪಂದ್ಯಾವಳಿಯಾಗಿ ವಿವಿಧ ದೇಶಗಳು ಮತ್ತು ಸಂಸ್ಕೃತಿಗಳ ಅತ್ಯುತ್ತಮ ಆಟಗಾರರನ್ನು ಒಟ್ಟಿಗೆ ತರುತ್ತದೆ. ಪ್ರತಿಭಾವಂತ ವ್ಯಕ್ತಿಗಳ ಈ ಶ್ರೇಷ್ಠ ತಂಡವನ್ನು ಮುನ್ನಡೆಸಲು ನಾನು ಎದುರು ನೋಡುತ್ತಿದ್ದೇನೆ ಎಂದರು. ಇದನ್ನೂ ಓದಿ: ಶಕೀಬ್ ಐಪಿಎಲ್‍ನಲ್ಲಿ ಮಾರಾಟವಾಗಲಿಲ್ಲ ಯಾಕೆ – ರಿವಿಲ್ ಮಾಡಿದ ಪತ್ನಿ

    ಈ ತಂಡವನ್ನು ಮುನ್ನಡೆಸಲು ನನಗೆ ಅವಕಾಶ ನೀಡಿದ ಕೆಕೆಆರ್‌ನ ಮಾಲೀಕರು, ನಿರ್ವಹಣೆಗಾರರು ಮತ್ತು ಬೆಂಬಲ ಸಿಬ್ಬಂದಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ತಂಡದ ಗುರಿಗಳನ್ನು ಸಾಧಿಸಲು ನಾವು ಸರಿಯಾದ ಮಾರ್ಗಗಳನ್ನು ಕಂಡುಕೊಳ್ಳುತ್ತೇವೆ ಎಂದು ನನಗೆ ವಿಶ್ವಾಸವಿದೆ.

    ಭಾರತೀಯ ಕ್ರಿಕೆಟ್‍ಗೆ ಬಂದಾಗ ಕೋಲ್ಕತ್ತಾ ಮತ್ತು ಈಡನ್ ಗಾರ್ಡನ್‍ಗಳು ಬಹಳ ಶ್ರೀಮಂತ ಇತಿಹಾಸವನ್ನು ಹೊಂದಿವೆ. ಈ ಶ್ರೀಮಂತ ಇತಿಹಾಸಕ್ಕೆ ಕೊಡುಗೆ ನೀಡಲು ಮತ್ತು ನಮ್ಮ ಅಭಿಮಾನಿಗಳು ನಮ್ಮ ಬಗ್ಗೆ ಹೆಮ್ಮೆಪಡಲು ನಾನು ಎದುರು ನೋಡುತ್ತಿದ್ದೇನೆ. ಕೊರ್ಬೊ ಲೋರ್ಬೊ ಜೀಟ್ಬೊ! ಎಂಬ ತಂಡದ ಘೋಷ ವಾಕ್ಯವನ್ನು ಬರೆದು ಟ್ವೀಟ್ ಮಾಡಿದ್ದಾರೆ.

  • ಒಂದೇ ವರ್ಷದಲ್ಲಿ 4000% ಸಂಬಳ ಹೈಕ್ – ಇದು ಅಯ್ಯರ್ ಸಾಧನೆ

    ಒಂದೇ ವರ್ಷದಲ್ಲಿ 4000% ಸಂಬಳ ಹೈಕ್ – ಇದು ಅಯ್ಯರ್ ಸಾಧನೆ

    ಮುಂಬೈ: ಐಪಿಎಲ್‍ನಲ್ಲಿ ಅದೇಷ್ಟೋ ಮಂದಿ ಆಟಗಾರರು ರಾತ್ರೋ ರಾತ್ರಿ ಬೆಳಕಿಗೆ ಬಂದಿದ್ದಾರೆ. ಅದೇ ರೀತಿ ಮಿಂಚಿ ಮರೆಯಾದವರು ಕೂಡ ಇದ್ದಾರೆ. ಇದೀಗ ತಮ್ಮ ಆಟದ ಶ್ರಮ, ಶ್ರದ್ಧೆಗೆ ಐಪಿಎಲ್‍ನಲ್ಲಿ ವೇದಿಕೆ ಸಿಕ್ಕಾಗ ಅದನ್ನು ಸರಿಯಾಗಿ ಬಳಸಿಕೊಂಡಿರುವ ಮಧ್ಯಪ್ರದೇಶ ಮೂಲದ ಆಲ್‍ರೌಂಡರ್ ಆಟಗಾರ ವೆಂಕಟೇಶ್ ಅಯ್ಯರ್ ಕೇವಲ ಒಂದೇ ವರ್ಷದಲ್ಲಿ 20 ಲಕ್ಷವಿದ್ದ ತಮ್ಮ ಸಂಬಳವನ್ನು 8 ಕೋಟಿಗೆ ಏರಿಸಿಕೊಳ್ಳುವ ಮೂಲಕ ಎಲ್ಲರಿಗೂ ಸ್ಫೂರ್ತಿಯಾಗಿದ್ದಾರೆ.

    ದೇಶಿ ಕ್ರಿಕೆಟ್‍ನಲ್ಲಿ ಉತ್ತಮ ಪ್ರದರ್ಶನ ತೋರಿದ್ದರು ಕೂಡ ಅಷ್ಟು ಸದ್ದು ಮಾಡದಿದ್ದ ಅಯ್ಯರ್ ಎಲ್ಲರಿಗೂ ಪರಿಚಯವಾಗಿದ್ದು 14ನೇ ಆವೃತ್ತಿಯ ಐಪಿಎಲ್ ಮೂಲಕ. ದುಬೈನಲ್ಲಿ ನಡೆದ 14ನೇ ಆವೃತ್ತಿಯ ಸೆಕೆಂಡ್ ಇನ್ನಿಂಗ್ಸ್ ಐಪಿಎಲ್‍ನಲ್ಲಿ ಕೋಲ್ಕತ್ತಾ ಪರ ಅಬ್ಬರದ ಬ್ಯಾಟಿಂಗ್ ಮೂಲಕ ತಂಡಕ್ಕೆ ಶಕ್ತಿ ತುಂಬಿ ಫೈನಲ್‍ಗೆ ಹೋಗುವಂತೆ ಮಾಡಿದ ಕೀರ್ತಿಕೂಡ ವೆಂಕಟೇಶ್ ಅಯ್ಯರ್‌ಗೆ ಸಲ್ಲುತ್ತದೆ. 2021ರ ಐಪಿಎಲ್‍ನ ಹರಾಜಿನಲ್ಲಿ ಅಯ್ಯರ್‌ರನ್ನು ಕೇವಲ 20 ಲಕ್ಷ ರೂಪಾಯಿಗೆ ಕೋಲ್ಕತ್ತಾ ಫ್ರಾಂಚೈಸ್ ಖರೀದಿಸಿತು. ಬಳಿಕ ತಂಡದಲ್ಲಿ ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಂಡ ಅಯ್ಯರ್ ಇದೀಗ ಸ್ಟಾರ್ ಆಟಗಾರರಾಗಿ ಗುರುತಿಸಿಕೊಂಡು ತಂಡದಲ್ಲಿ ರಿಟೈನ್ ಆಗುವ ಮಟ್ಟಕ್ಕೆ ಬೆಳೆದಿದ್ದಾರೆ. ಇದನ್ನೂ ಓದಿ: ಕನಸು ನನಸಾಗಿಸಿಕೊಂಡ ಅಯ್ಯರ್ – ಟೀಂ ಇಂಡಿಯಾಗೆ ನೂತನ ಆಲ್‍ರೌಂಡರ್ ಎಂಟ್ರಿ

    ಈಗಾಗಲೇ 15ನೇ ಆವೃತ್ತಿಯ ಐಪಿಎಲ್‍ಗಾಗಿ 8 ತಂಡಗಳು ಕೆಲ ಆಟಗಾರರನ್ನು ರಿಟೈನ್ ಮಾಡಿಕೊಂಡಿದೆ. ಅದರಂತೆ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ 4 ಮಂದಿ ಆಟಗಾರರನ್ನು ರಿಟೈನ್ ಮಾಡಿಕೊಂಡಿದ್ದು, ಅದರಲ್ಲಿ ವೆಂಕಟೇಶ್ ಅಯ್ಯರ್ ಕೂಡ ಸೇರಿದ್ದಾರೆ. ಈ ಹಿಂದೆ 20 ಲಕ್ಷ ರೂಪಾಯಿಗೆ ತಂಡ ಸೇರಿದ್ದ ಅಯ್ಯರ್ ಇದೀಗ ರಿಟೈನ್‍ನಲ್ಲಿ ಬರೋಬ್ಬರಿ 8 ಕೋಟಿ ಪಡೆದಿದ್ದಾರೆ. ಈ ಮೂಲಕ ಒಂದೇ ವರ್ಷದಲ್ಲಿ 4000% ಸಂಬಳದಲ್ಲಿ ಏರಿಕೆ ಕಂಡು ಕೋಟ್ಯಧಿಪತಿ ಆಗಿ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ: ಲಕ್ನೋ ಫ್ರಾಂಚೈಸ್ ನೀಡಿದ ಆಫರ್‌ನಿಂದ ರಾಹುಲ್, ರಶೀದ್ ಖಾನ್‍ಗೆ ಐಪಿಎಲ್ ಬ್ಯಾನ್ ಭೀತಿ?

    ಅಯ್ಯರ್ ಐಪಿಎಲ್ ಪ್ರದರ್ಶನದಿಂದಾಗಿ ಟೀಂ ಇಂಡಿಯಾಗೆ ಕೂಡ ಆಯ್ಕೆಯಾಗಿ ಟಿ20 ಪಂದ್ಯನ್ನಾಡಿದ್ದಾರೆ. ಇದೀಗ ಭವಿಷ್ಯದ ಟೀಂ ಇಂಡಿಯಾದ ತಾರೆಯಾಗಿ ಗುರುತಿಸಿಕೊಂಡಿರುವ ಅಯ್ಯರ್ ಇನ್ನಷ್ಟೂ ಉತ್ತಮ ಪ್ರದರ್ಶನದ ಮೂಲಕ ಮಿಂಚಲಿ ಎಂಬುದು ಅಭಿಮಾನಿಗಳ ಆಶಯವಾಗಿದೆ.

  • ಐಸಿಸಿ ಟೆಸ್ಟ್ ಚಾಂಪಿಯನ್‍ಶಿಪ್ ಭಾರತ ತಂಡದಲ್ಲಿ ಸ್ಥಾನ ಪಡೆದ ಕನ್ನಡಿಗ ಪ್ರಸಿದ್ಧ್ ಕೃಷ್ಣಗೆ ಆಘಾತ

    ಐಸಿಸಿ ಟೆಸ್ಟ್ ಚಾಂಪಿಯನ್‍ಶಿಪ್ ಭಾರತ ತಂಡದಲ್ಲಿ ಸ್ಥಾನ ಪಡೆದ ಕನ್ನಡಿಗ ಪ್ರಸಿದ್ಧ್ ಕೃಷ್ಣಗೆ ಆಘಾತ

    ಬೆಂಗಳೂರು: ಇಂಗ್ಲೆಂಡ್‍ನಲ್ಲಿ ನಡೆಯುವ ಐಸಿಸಿ ಟೆಸ್ಟ್ ಚಾಂಪಿಯನ್‍ಶಿಪ್‍ಗೆ ಭಾರತ ತಂಡಕ್ಕೆ ಆಯ್ಕೆಯಾದ ಬೆನ್ನಲ್ಲೇ ಕನ್ನಡಿಗ ಪ್ರಸಿದ್ಧ ಕೃಷ್ಣ ಅವರಿಗೆ ಕೊರೊನಾ ಪಾಸಿಟಿವ್ ಆಗಿದೆ.

    ಐಪಿಎಲ್‍ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಪರ ಆಡುತ್ತಿದ್ದ ಪ್ರಸಿದ್ಧ್ ಕೃಷ್ಣ. ಐಪಿಎಲ್ ಮುಂದೂಡಲ್ಪಟ್ಟ ಮೇಲೆ ಬೆಂಗಳೂರಿನ ತಮ್ಮ ನಿವಾಸಕ್ಕೆ ಹಿಂದಿರುಗಿದರು. ಈ ಸಂದರ್ಭ ಕೊರೊನಾ ಟೆಸ್ಟ್‍ಗೆ ಒಳಗಾದ ಪ್ರಸಿದ್ಧ್ ಕೃಷ್ಣ ಅವರಿಗೆ ಕೊರೊನಾ ಪಾಸಿಟಿವ್ ಆಗಿದೆ. ಈ ಮೊದಲು ಕೋಲ್ಕತ್ತಾ ತಂಡದ ವರುಣ್ ಚಕ್ರವರ್ತಿ ಮತ್ತು ಸಂದೀಪ್ ವಾರಿರ್ಯರ್‍ ಗೆ ತಂಡದಲ್ಲಿದ್ದ ವೇಳೆಯ ಕೊರೊನಾ ಪಾಸಿಟಿವ್ ಆಗಿತ್ತು. ಆ ಬಳಿಕ ಬಿಸಿಸಿಐ ಐಪಿಎಲ್‍ನ್ನು ಮುಂದೂಡಿಕೆ ಮಾಡಿತ್ತು. ಹಾಗಾಗಿ ಎಲ್ಲಾ ಆಟಗಾರರು ತಮ್ಮ ತಮ್ಮ ಮನೆಗಳಿಗೆ ಹಿಂದಿರುಗಿದ್ದಾರೆ.

    ಪ್ರಸಿದ್ಧ್ ಕೃಷ್ಣ ಕೋಲ್ಕತ್ತಾ ತಂಡದ ಪರ 14ನೇ ಆವೃತ್ತಿಯ ಐಪಿಎಲ್‍ನಲ್ಲಿ 7 ಪಂದ್ಯಗಳಿಂದ 8 ವಿಕೆಟ್ ಕಬಳಿಸುವ ಮೂಲಕ ತಂಡದಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ಪ್ರಸಿದ್ಧ್ ಕೃಷ್ಣ ಅವರು ಐಪಿಎಲ್‍ನಲ್ಲಿ ನೀಡಿದ ಉತ್ತಮ ಪ್ರದರ್ಶನವನ್ನು ಕಂಡು ನಿನ್ನೆ ಬಿಸಿಸಿಐ ಟೆಸ್ಟ್ ಚಾಂಪಿಯನ್‍ಶಿಪ್ ಮತ್ತು ಇಂಗ್ಲೆಂಡ್ ಪ್ರವಾಸಕ್ಕೆ ಪ್ರಕಟಿಸಿದ ಭಾರತ ತಂಡದಲ್ಲಿ ಮೀಸಲು ಆಟಗಾರನಾಗಿ ಸ್ಥಾನ ಕಲ್ಪಿಸಿತ್ತು. ಆದರೆ ಇಂದು ಕೊರೊನಾ ದೃಢ ಪಟ್ಟಿದೆ. ಐಸಿಸಿ ಟೆಸ್ಟ್ ಚಾಂಪಿಯನ್‍ಶಿಪ್ ಇಂಗ್ಲೆಂಡ್‍ನಲ್ಲಿ ಜೂನ್ 18ರಂದು ಪ್ರಾರಂಭಗೊಳ್ಳಲಿದೆ.

  • ಕೋಲ್ಕತ್ತಾಗೆ 5 ವಿಕೆಟ್‍ಗಳ ಜಯ – 5ನೇ ಸ್ಥಾನಕ್ಕೆ ಜಿಗಿತ

    ಕೋಲ್ಕತ್ತಾಗೆ 5 ವಿಕೆಟ್‍ಗಳ ಜಯ – 5ನೇ ಸ್ಥಾನಕ್ಕೆ ಜಿಗಿತ

    ಅಹಮದಾಬಾದ್: ಪಂಜಾಬ್ ಕಿಂಗ್ಸ್ ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್ 5 ವಿಕೆಟ್ ಜಯ ಸಾಧಿಸಿದೆ.

    ಗೆಲ್ಲಲು 124 ರನ್‍ಗಳ ಸುಲಭ ಸವಾಲನ್ನು ಪಡೆದ ಕೋಲ್ಕತ್ತಾ 16.4 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 126 ರನ್ ಹೊಡೆದು ಜಯಗಳಿಸಿತು. ಈ ಮೂಲಕ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದ್ದ ಕೋಲ್ಕತ್ತಾ ಈಗ 4 ಅಂಕದೊಂದಿಗೆ 5ನೇ ಸ್ಥಾನಕ್ಕೆ ಜಾರಿದೆ. 5ನೇ ಸ್ಥಾನದಲ್ಲಿದ್ದ ಪಂಜಾಬ್ 6ನೇ ಸ್ಥಾನಕ್ಕೆ ಜಾರಿದೆ.

    17 ರನ್‍ಗಳಿಗೆ 3 ವಿಕೆಟ್ ಕಳೆದುಕೊಂಡಿದ್ದರು ನಾಯಕ ಇಯಾನ್ ಮಾರ್ಗನ್ ಮತ್ತು ರಾಹುಲ್ ತ್ರಿಪಾಠಿ ಅವರು 48 ಎಸೆತಗಳಲ್ಲಿ 66 ರನ್ ಜೊತೆಯಾಟವಾಡಿ ತಂಡದ ಚೇತರಿಕೆಗೆ ಕಾರಣವಾದರು.

    ಉತ್ತಮವಾಗಿ ಆಡುತ್ತಿದ್ದ ರಾಹುಲ್ ತ್ರಿಪಾಠಿ 41 ರನ್(32 ಎಸೆತ, 7 ಬೌಂಡರಿ) ಹೊಡೆದು ಔಟಾದರು. ನಾಯಕ ಇಯಾನ್ ಮಾರ್ಗನ್ ಔಟಾಗದೇ 47 ರನ್(40 ಎಸೆತ, 4 ಬೌಂಡರಿ, 2 ಸಿಕ್ಸರ್) ಅಂಡ್ರೆ ರಸಲ್ 10 ರನ್, ದಿನೇಶ್ ಕಾರ್ತಿಕ್ ಔಟಾಗದೇ 12 ರನ್(6 ಎಸೆತ, 2 ಬೌಂಡರಿ) ಹೊಡೆದು ತಂಡಕ್ಕೆ ಗೆಲುವು ತಂದುಕೊಟ್ಟರು.

    ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ತಂಡ ಉತ್ತಮ ಆರಂಭ ಪಡೆಯುವಲ್ಲಿ ಮತ್ತೆ ಎಡವಿತು. ಪಂಜಾಬ್ ಪರ ಕೆ.ಎಲ್ ರಾಹುಲ್ 19 ರನ್(20 ಎಸೆತ, 2 ಬೌಂಡರಿ, 1 ಸಿಕ್ಸರ್) ಸಿಡಿಸಿ ಔಟ್ ಆದರು. ಇವರೊಂದಿಗೆ ಮಾಯಾಂಕ್ ಅಗರ್‍ವಾಲ್ 31 ರನ್(34 ಎಸೆತ, 1 ಬೌಂಡರಿ, 2 ಸಿಕ್ಸ್) ಬಾರಿಸಿ ಪೆವಿಲಿಯನ್ ಸೇರಿಕೊಂಡರು.

    ಬಿಗ್‍ಹಿಟ್ಟರ್ ಕ್ರಿಸ್ ಗೇಲ್ ಶೂನ್ಯ ಸುತ್ತಿದರೆ, ದೀಪಕ್ ಹೂಡಾ 1 ರನ್‍ಗೆ ವಿಕೆಟ್ ಒಪ್ಪಿಸಿ ಹೊರನಡೆದರು. ಮಧ್ಯಮ ಕ್ರಮಾಂಕದಲ್ಲಿ  ಕುಸಿತ ಕಂಡ ಪಂಜಾಬ್‍ಗೆ ಕೊನೆಯಲ್ಲಿ ಕ್ರಿಸ್ ಜೋರ್ಡನ್ 30ರನ್(18 ಎಸೆತ, 1 ಬೌಂಡರಿ, 3 ಸಿಕ್ಸರ್) ಸಿಡಿಸುವ ಮೂಲಕ ಏಕಾಂಗಿ ಹೋರಾಟ ನಡೆಸಿ ಪಂಜಾಬ್ ಮೊತ್ತವನ್ನು 100ರ ಗಡಿದಾಟಿಸಿದರು. ಅಂತಿಮವಾಗಿ ಪಂಜಾಬ್ ತಂಡ ನಿಗದಿತ ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು 123 ರನ್ ಗಳಿಸಿತು.

    ಕೋಲ್ಕತ್ತಾ ಪರ ಕನ್ನಡಿಗ ಪ್ರಸಿದ್ಧ್ ಕೃಷ್ಣ 4 ಓವರ್ ಎಸೆದು 30 ರನ್ ನೀಡಿ 3 ವಿಕೆಟ್ ಕಿತ್ತು ಮಿಂಚಿದರು. ಪ್ಯಾಟ್ ಕಮ್ಮಿನ್ಸ್ ಮತ್ತು ಸುನೀಲ್ ನರೇನ್ ತಲಾ 2 ವಿಕೆಟ್ ಪಡೆದರು. ಶಿವಂ ಮಾವಿ ಮತ್ತು ರೆಸೆಲ್ ತಲಾ 1 ವಿಕೆಟ್ ಕಬಳಿಸಿ ಪಂಜಾಬ್ ತಂಡವನ್ನು ಅಲ್ಪ ಮೊತ್ತಕ್ಕೆ ಕಟ್ಟಿಹಾಕಿದರು.

  • 6 ವಿಕೆಟ್‍ಗಳ ಭರ್ಜರಿ ಜಯ – 6ನೇ ಸ್ಥಾನಕ್ಕೆ ಜಿಗಿದ ರಾಜಸ್ಥಾನ

    6 ವಿಕೆಟ್‍ಗಳ ಭರ್ಜರಿ ಜಯ – 6ನೇ ಸ್ಥಾನಕ್ಕೆ ಜಿಗಿದ ರಾಜಸ್ಥಾನ

    – ಕ್ರೀಸ್ ಮೋರಿಸ್‍ಗೆ 4 ವಿಕೆಟ್
    – ಸಂಜು ಸ್ಯಾಮ್ಸನ್ ಔಟಾಗದೇ 42 ರನ್

    ಮುಂಬೈ: ಕ್ರೀಸ್ ಮೋರಿಸ್ ಬೌಲಿಂಗ್ ಮತ್ತು ಸಂಜು ಸ್ಯಾಮ್ಸನ್ ಅವರ ಉತ್ತಮ ಬ್ಯಾಟಿಂಗ್ ಪ್ರದರ್ಶನದಿಂದ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ರಾಜಸ್ಥಾನ ರಾಯಲ್ಸ್ 6 ವಿಕೆಟ್‍ಗಳ ಜಯ ಸಾಧಿಸಿದೆ.

    ಕೋಲ್ಕತ್ತಾ ನೀಡಿದ ಸುಲಭ ಸವಾಲನ್ನು ರಾಜಸ್ಥಾನ 18.5 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 134 ರನ್ ಹೊಡೆಯುವ ಮೂಲಕ ಜಯ ಸಾಧಿಸಿತು. ಈ ಗೆಲುವಿನೊಂದಿಗೆ ಕೊನೆಯ ಸ್ಥಾನದಲ್ಲಿದ್ದ ರಾಜಸ್ಥಾನ 4 ಅಂಕ ಸಂಪಾದಿಸಿ ಅಂಕಪಟ್ಟಿಯಲ್ಲಿ 6ನೇ ಸ್ಥಾನಕ್ಕೆ ಜಿಗಿದರೆ ಕೋಲ್ಕತ್ತಾ 8ನೇ ಸ್ಥಾನಕ್ಕೆ ಜಾರಿದೆ.

    ಯಶಸ್ವಿ ಜೈಸ್ವಾಲ್ 22 ರನ್(17 ಎಸೆತ, 5 ಬೌಂಡರಿ) ಶಿವಂ ದುಬೆ 22 ರನ್(18 ಎಸೆತ, 2 ಬೌಂಡರಿ, 1ಸಿಕ್ಸರ್) ಹೊಡೆದರು. ನಾಯಕ ಸಂಜು ಸ್ಯಾಮ್ಸನ್ ಔಟಾಗದೇ 42 ರನ್(41 ಎಸೆತ, 2 ಬೌಂಡರಿ, 1 ಸಿಕ್ಸರ್), ಡೇವಿಡ್ ಮಿಲ್ಲರ್ ಔಟಾಗದೇ 24 ರನ್(23 ಎಸೆತ, 3 ಬೌಂಡರಿ) ಹೊಡೆರು. ಕೋಲ್ಕತ್ತಾ ಪರವಾಗಿ ವರುಣ್ ಚಕ್ರವರ್ತಿ 2 ವಿಕೆಟ್ ಕಿತ್ತರೆ ಶಿವಂ ಮಾವಿ ಮತ್ತು ಪ್ರಸಿದ್ಧ್ ಕೃಷ್ಣ ತಲಾ ಒಂದು ವಿಕೆಟ್ ಪಡೆದರು.

    ಸಾಧಾರಣ ಮೊತ್ತ:  ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಕೋಲ್ಕತ್ತಾ ಆರಂಭದಿಂದಲೇ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿತು. ಮಧ್ಯಮ ಕ್ರಮಾಂಕದಲ್ಲೂ ಉತ್ತಮ ಆಟ ಬರಲಿಲ್ಲ.

    ನಿತೀಶ್ ರಾಣಾ 22 ರನ್(25 ಎಸೆತ, 1 ಬೌಂಡರಿ, 1 ಸಿಕ್ಸರ್) ರಾಹುಲ್ ತ್ರಿಪಾಠಿ 36 ರನ್(26 ಎಸೆತ, 1 ಸಿಕ್ಸರ್, 2 ಬೌಂಡರಿ) ದಿನೇಶ್ ಕಾರ್ತಿಕ್ 25 ರನ್(24 ಎಸೆತ, 4 ಬೌಂಡರಿ) ಹೊಡೆದು ಔಟಾದರು. ಸ್ಫೋಟಕ ಆಟ ಆಟಗಾರರದಿಂದ ಬರದೇ ಇದ್ದ ಕಾರಣ 9 ವಿಕೆಟ್ ನಷ್ಟಕ್ಕೆ 133 ರನ್ ಗಳಿಸಿತು.

    ಕ್ರೀಸ್ ಮೋರಿಸ್ 23 ರನ್ ನೀಡಿ 4 ವಿಕೆಟ್ ಕಿತ್ತರು. ಜಯದೇವ್ ಉನದ್ಕತ್, ಚೇತನ್ ಸಕಾರಿಯಾ, ಮುಸ್ತುಫಿಜುರ್ ರಹಮಾನ್ ತಲಾ ಒಂದೊಂದು ವಿಕೆಟ್ ಪಡೆದರು.

  • ಡು’ಪ್ಲೆಸಿಸ್, ಗಾಯಕ್ವಾಡ್ ಮಿಂಚಿನಾಟ- ಕೋಲ್ಕತ್ತಾ ವಿರುದ್ಧ ಚೆನ್ನೈಗೆ 18 ರನ್‍ಗಳ ಗೆಲುವು

    ಡು’ಪ್ಲೆಸಿಸ್, ಗಾಯಕ್ವಾಡ್ ಮಿಂಚಿನಾಟ- ಕೋಲ್ಕತ್ತಾ ವಿರುದ್ಧ ಚೆನ್ನೈಗೆ 18 ರನ್‍ಗಳ ಗೆಲುವು

    – ಅಂಕಪಟ್ಟಿಯಲ್ಲಿ ಆರ್ ಸಿಬಿ ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ ಚೆನ್ನೈ

    ಮುಂಬೈ: ಫಾಫ್ ಡು’ಪ್ಲೆಸಿಸ್ ಭರ್ಜರಿ 95 ರನ್ ಹಾಗೂ ಋತುರಾಜ್ ಗಾಯಕ್ವಾಡ್ ಅರ್ಧ ಶತಕದಿಂದಾಗಿ ಚೆನ್ನೈ ಸೂಪರ್ ಕಿಂಗ್ಸ್ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 18 ರನ್‍ಗಳಿಂದ ಜಯ ಸಾಧಿಸಿದೆ.

    ಗೆಲ್ಲಲು 221 ರನ್‍ಗಳ ಕಠಿಣ ಸವಾಲು ಪಡೆದ ಕೋಲ್ಕತ್ತಾ, 20 ಓವರ್ ಗಳಲ್ಲಿ ಎಲ್ಲ ವಿಕೆಟ್ ಕಳೆದುಕೊಂಡು 202 ರನ್ ಗಳಿಸಿತು. ಆರಂಭದಿಂದಲೂ ಮುಗ್ಗರಿಸಿದ್ದರಿಂದ ಕೋಲ್ಕತ್ತಾಗೆ ಕಠಿಣ ಸವಾಲನ್ನು ಸರಿಗಟ್ಟುವಲ್ಲಿ ಸಾಧ್ಯವಾಗಲಿಲ್ಲ. ಆಂಡ್ರೆ ರಸೆಲ್, ಪ್ಯಾಟ್ ಕಮ್ಮಿನ್ಸ್, ದಿನೇಶ್ ಕಾರ್ತಿಕ್ ಹೊರತುಪಡಿಸಿ ಉಳಿದ ಯಾರೂ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡದ ಕಾರಣ ಕೋಲ್ಕತ್ತಾ ಸೋಲನುಭವಿಸುವಂತಾಯಿತು. ಸತತವಾಗಿ ಪಂದ್ಯಗಳನ್ನು ಗೆಲ್ಲುವ ಮೂಲಕ ಅಂಕಪಟ್ಟಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮೇಲಕ್ಕೆ ಜಿಗಿದಿದ್ದು, ಆರ್ ಸಿಬಿ ಹಿಂದಿಕ್ಕಿ ಅಗ್ರ ಸ್ಥಾನಕ್ಕೇರಿದೆ.

     

    ಆಂಡ್ರೆ ರಸೆಲ್ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ್ದು, 54 ರನ್ (22 ಎಸೆತ, 3 ಬೌಂಡರಿ, 6 ಸಿಕ್ಸ್) ಸಿಡಿಸಿ ತಂಡಕ್ಕೆ ಉತ್ತಮ ರನ್‍ಗಳ ಕೊಡುಗೆ ನೀಡಿದರು. ಆದರೆ 11.2ನೇ ಓವರ್‍ನಲ್ಲಿ ಔಟಾದರು. ದಿನೇಶ್ ಕಾರ್ತಿಕ್ ಸಹ 40 ರನ್ (24 ಎಸೆತ, 4 ಬೌಂಡರಿ, 2 ಸಿಕ್ಸ್) ಬಾರಿಸಿ 14ನೇ ಓವರ್‍ನಲ್ಲಿ ವಿಕೆಟ್ ಒಪ್ಪಿಸಿದರು. ಸ್ಪೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ ಪ್ಯಾಟ್ ಕಮ್ಮಿನ್ಸ್ ಔಟಾಗದೇ 66 ರನ್(34 ಎಸೆತ, 4 ಬೌಂಡರಿ, 6 ಸಿಕ್ಸ್) ಹೊಡೆದರು. ದೀಪಕ್ ಚಹರ್ 4 ವಿಕೆಟ್ ಕಿತ್ತರೆ, ಲುಂಗಿ ಎನ್ಗಿಡಿ 3 ಹಾಗೂ ಸ್ಯಾಮ್ ಕರ್ರನ್ 1 ವಿಕೆಟ್ ಪಡೆದರು.

    ಕೋಲ್ಕತ್ತಾ ಪರವಾಗಿ ಶುಭಮನ್ ಗಿಲ್ ಮೊದಲ ಓವರ್‍ನಲ್ಲೇ ಕೇವಲ ಒಂದು ಬಾಲ್ ಎದುರಿಸಿ ಸೊನ್ನೆಗೆ ಔಟಾದರೆ, ನಿತೀಶ್ ರಾಣಾ 9 ರನ್(12 ಎಸೆತ, 2 ಬೌಂಡರಿ) ಹೊಡೆದು 2ನೇ ಓವರ್ ಕೊನೆಯಲ್ಲಿ ಪೆವಿಲಿಯನ್ ಸೇರಿದರು. ತಂಡದ ನಾಯಕ ಐಯಾನ್ ಮಾರ್ಗನ್ ಸಹ 7 ರನ್(7 ಎಸೆತ, 1 ಬೌಂಡರಿ) ಸಿಡಿಸಿ 4.3ನೇ ಓವರ್‍ನಲ್ಲಿ ವಿಕೆಟ್ ಒಪ್ಪಿಸಿದರು. ಸುನಿಲ್ ನರೇನ್ 4 ರನ್ (3 ಎಸೆತ, 1 ಬೌಂಡರಿ) ಹೊಡೆದು ಇದೇ ಓವರ್ ಕೊನೆಯಲ್ಲಿ ಔಟಾದರು. ಈ ಮೂಲಕ ಕೋಲ್ಕತ್ತಾ ಮುಗ್ಗರಿಸಿತು. ಇನ್ನು ರಾಹುಲ್ ತ್ರಿಪಾಠಿ 8 ರನ್, ಕಮಲೇಶ್ ನಾಗರಕೋಟಿ, ವರುಣ್ ಚಕ್ರವರ್ತಿ, ಪ್ರಸಿಧ್ ಕೃಷ್ಣ ಸೊನ್ನೆಗೆ ಔಟಾಗಿದ್ದಾರೆ.

    ಚೆನ್ನೈ ಸೂಪರ್ ಕಿಂಗ್ಸ್ ಮಿಂಚಿನಾಟ
    ಚೆನ್ನೈ ಕಟ್ಟಿ ಹಾಕಿ ಬಳಿಕ ಸುಲಭವಾಗಿ ಚೇಸ್ ಮಾಡಬಹುದೆಂದು ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಕೋಲ್ಕತ್ತಾ ನೈಟ್ ರೈಡರ್ಸ್ ನಿರೀಕ್ಷೆ ಹುಸಿಯಾಗಿದ್ದು, ಚೆನ್ನೈ ಸೂಪರ್ ಕಿಂಗ್ಸ್ ಬ್ಯಾಟ್ಸ್‍ಮ್ಯಾನ್‍ಗಳು ಕೋಲ್ಕತ್ತಾ ಬೌಲರ್‍ಗಳ ಬೆವರಿಳಿಸಿದ್ದಾರೆ. ಚೆನ್ನೈ ಪರ ಆರಂಭಿಕ ಆಟಗಾರರಾಗಿ ಕಣಕ್ಕಿಳಿದ ಋತುರಾಜ್ ಗಾಯಕ್ವಾಡ್ ಹಾಗೂ ಫಾಫ್ ಡು’ಪ್ಲೆಸಿಸ್ ಆರಂಭಿಕ ಹಂತದಿಂದಲೇ ಅತ್ಯದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಗಾಯಕ್ವಾಡ್ ಅರ್ಧ ಶತಕ ಬಾರಿಸಿದರೆ, ಡು’ಪ್ಲೆಸಿಸ್ ಔಟಾಗದೆ ಬರೋಬ್ಬರಿ 95 ರನ್ ಪೇರಿಸುವ ಮೂಲಕ ಶತಕ ವಂಚಿತರಾದರು.

    ಅದ್ಭುತ ಬ್ಯಾಟಿಂಗ್ ಮೂಲಕ ಮಿಂಚಿದ ಋತುರಾಜ್ ಗಾಯಕ್ವಾಡ್, 64 ರನ್ (42 ಎಸೆತ, 6 ಬೌಂಡರಿ, 4 ಸಿಕ್ಸರ್) ಪೇರಿಸುವ ಮೂಲಕ ತಂಡದ ರನ್‍ಗಳ ಮೊತ್ತ ಹೆಚ್ಚಲು ಕೊಡುಗೆ ನೀಡಿದರು. 2ನೇ ಓವರ್‍ನಿಂದಲೂ ಬೌಂಡರಿ ಸಿಕ್ಸ್ ಬಾರಿಸುತ್ತಲೇ ಆಟವಾಡಿದ್ದು, ಚೆನ್ನೈ ಅಭಿಮಾನಿಗಳನ್ನು ಖುಷಿಯಲ್ಲಿ ತೇಲಿಸಿದರು. ಆದರೆ 12.2ನೇ ಓವರ್‍ನಲ್ಲಿ ಕ್ಯಾಚ್ ನೀಡಿ ಬೇಸರ ಮೂಡಿಸಿದರು.

     

    ಶತಕ ವಂಚಿತ ಡು’ಪ್ಲೆಸಿಸ್
    ಫಾಫ್ ಡು’ಪ್ಲೆಸಿಸ್ ಕೋಲ್ಕತ್ತಾ ಬಾಲರ್‍ಗಳ ಬೆವರಿಳಿಸಿದ್ದು, ಅಮೋಘ 95 ರನ್ (60 ಎಸೆತ, 9 ಬೌಂಡರಿ, 4 ಸಿಕ್ಸ್) ಚಚ್ಚಿ ತಂಡಕ್ಕೆ ಬೃಹತ್ ರನ್‍ಗಳ ಮೊತ್ತವನ್ನು ಕೊಡುಗೆಯಾಗಿ ನೀಡಿದರು. ಸಿಕ್ಸ್ ಫೋರ್‍ಗಳ ಸುರಿಮಳೆಗೈದಿದ್ದು, ಚೆನ್ನೈ ತಂಡದ ಅಭಿಮಾನಿಗಳಲ್ಲಿ ರೋಮಾಂಚವನ್ನುಂಟುಮಾಡಿದರು. ಆದರೆ ಶತಕ ವಂಚಿತರಾಗುವ ಮೂಲಕ ಬೇಸರ ಮೂಡಿಸಿದರು.

    ಗಾಯಕ್ವಾಡ್ ಅರ್ಧ ಶತಕ
    ಋತುರಾಜ್ ಗಾಯಕ್ವಾಡ್ ಸಹ ಆರಂಭಿಕ ಆಟಗಾರರಾಗಿ ಡು’ಪ್ಲೆಸಿಸ್ ಗೆ ಉತ್ತಮ ಸಾಥ್ ನೀಡಿದ್ದು, ಇಬ್ಬರೂ ತಾಮುಂದು ನಾ ಮುಂದು ಎಂದು ರನ್ ಚಚ್ಚುವ ಮೂಲಕ ಕೋಲ್ಕತ್ತಾ ಬೌಲರ್‍ಗಳ ನೀರಿಳಿಸಿದರು. ಭರ್ಜರಿ 64 ರನ್ (42 ಎಸೆತ, 6 ಬೌಂಡರಿ, 4 ಸಿಕ್ಸ್) ಸಿಡಿಸಿ, 12.2ನೇ ಓವರ್‍ನಲ್ಲಿ ಕ್ಯಾಚ್ ನೀಡಿದರು.

     

    ನಾಯಕ ಮಹೇಂದ್ರ ಸಿಂಗ್ ಧೋನಿ ಮಿಂಚಿನಾಟಕ್ಕೆ ಮುಂದಾದರೂ ಹೆಚ್ಚು ಕಾಲ ನಿಲ್ಲಲಾಗಲಿಲ್ಲ. 17 ರನ್ (8 ಎಸೆತ, 2 ಬೌಂಡರಿ, 1 ಸಿಕ್ಸ್) ಪೇರಿಸಿ 18ನೇ ಓವರ್ ಕೊನೆಯಲ್ಲಿ ಕ್ಯಾಚ್ ನೀಡಿದರು. ಇದರಿಂದಾಗಿ ಅವರ ಅಭಿಮಾನಿಗಳಿಗೆ ಕೊಂಚ ಬೇಸರ ಮೂಡಿತು. ಮೊಯೀನ್ ಅಲಿ ಸಹ ಉತ್ತಮ ರನ್‍ಗಳ ಮೊತ್ತ ದಾಖಲಿಸಿದ್ದು, 25 ರನ್(12 ಎಸೆತ, 2 ಬೌಂಡರಿ, 2 ಸಿಕ್ಸ್) ಬಾರಿಸಿ 16.3 ನೇ ಓವರ್‍ನಲ್ಲಿ ಪೆವಿಲಿಯನ್ ಸೇರಿದರು. ಧೋನಿ ಔಟಾಗುತ್ತಿದ್ದಂತೆ ಆಗಮಿಸಿದ ರವೀಂದ್ರ ಜಡೇಜಾ ಒಂದೇ ಬಾಲ್ ಆಡಿ ಸಿಕ್ಸ್ ಚಚ್ಚಿ ಔಟಾಗದೆ ಉಳಿದರು.

  • ಮೋರ್ಗನ್ ವಿಲಕ್ಷಣ ನಾಯಕತ್ವ, ಭಾರತೀಯನಿಂದ ಈ ಬ್ಲಂಡರ್ ಆಗದ್ದಕ್ಕೆ ನನಗೆ ಸಂತೋಷವಿದೆ – ಗಂಭೀರ್

    ಮೋರ್ಗನ್ ವಿಲಕ್ಷಣ ನಾಯಕತ್ವ, ಭಾರತೀಯನಿಂದ ಈ ಬ್ಲಂಡರ್ ಆಗದ್ದಕ್ಕೆ ನನಗೆ ಸಂತೋಷವಿದೆ – ಗಂಭೀರ್

    ಚೆನ್ನೈ: ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕ ಇಯಾನ್ ಮೋರ್ಗನ್ ನಾಯಕತ್ವದ ಬಗ್ಗೆ ಮಾಜಿ ನಾಯಕ ಗೌತಮ್ ಗಂಭೀರ್ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಭಾನುವಾರ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ 38 ರನ್‌ಗಳ ಸೋಲು ಅನುಭವಿಸಿದ ಬಳಿಕ ವಾಹಿನಿಯ ಜೊತೆ ಗಂಭೀರ್ ಮಾತನಾಡುತ್ತಿದ್ದರು.

    ಈ ವೇಳೆ ಮಾತನಾಡಿದ ಅವರು, ವರುಣ್ ಚಕ್ರವರ್ತಿ ಅವರು ತಮ್ಮ ಮೊದಲ ಓವರಿನಲ್ಲೇ ವಿರಾಟ್ ಕೊಹ್ಲಿ ಮತ್ತು ರಜತ್ ಪಾಟಿದರ್ ಅವರನ್ನು ಔಟ್ ಮಾಡಿದ್ದರು. ಮೂರನೇ ಓವರಿನಲ್ಲಿ ಅವರಿಗೆ ಬೌಲ್ ನೀಡದೇ ಬಾಂಗ್ಲಾದೇಶ ಆಲ್ ರೌಂಡರ್ ಶಕೀಬ್ ಅಲ್ ಹಸನ್ ಅವರಿಗೆ ನೀಡಿದ್ದು ಯಾಕೆ ಎನ್ನುವುದನ್ನು ನಾನು ಅರ್ಥಮಾಡಿಕೊಳ್ಳಲು ವಿಫಲನಾಗಿದ್ದೇನೆ. ನನ್ನ ಜೀವನದಲ್ಲಿ ನಾನು ಕಂಡ ವಿಲಕ್ಷಣವಾದ ನಾಯಕತ್ವ ಇದೇ ಇರಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಒಬ್ಬ ಭಾರತೀಯ ನಾಯಕ ಈ ಪ್ರಮಾದವನ್ನು ಮಾಡದಿದ್ದಕ್ಕೆ ನನಗೆ ಸಂತೋಷವಾಗಿದೆ. ಇದೊಂದು ದೊಡ್ಡ ಬ್ಲಂಡರ್. ಒಂದು ವೇಳೆ ಭಾರತೀಯ ನಾಯಕ ಏನಾದರೆ ಈ ಪ್ರಮಾದ ಮಾಡಿದ್ದರೆ ಜನ ಭಾರೀ ಟೀಕೆ ಮಾಡುತ್ತಿದ್ದರು ಎಂದು ತಿಳಿಸಿದ್ದಾರೆ.

    ತಮ್ಮ ಮೊದಲ ಓವರ್‌ನಲ್ಲೇ ವರುಣ್ ಚಕ್ರವರ್ತಿ 2 ವಿಕೆಟ್ ಪಡೆದಿದ್ದರು. ನಂತರ ಅವರಿಗೆ ಇನ್ನಿಂಗ್ಸ್ ನ 8ನೇ ಓವರ್ ನೀಡಲಾಗಿತ್ತು. ವರುಣ್ ಚಕ್ರವರ್ತಿ 4 ಓವರ್ ಎಸೆದು 39 ರನ್ ನೀಡಿ 2 ವಿಕೆಟ್ ಪಡೆದಿದ್ದರು.

    ಎಬಿಡಿ ವಿಲಿಯರ್ಸ್ ಮತ್ತು ಗ್ಲೇನ್ ಮ್ಯಾಕ್ಸ್‌ವೆಲ್ ಅವರ ಸ್ಫೋಟಕ ಅರ್ಧಶತಕದಿಂದಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 38 ರನ್‌ಗಳಿಂದ ಜಯಗಳಿಸಿತ್ತು. ಗೆಲ್ಲಲು 205 ರನ್‌ಗಳ ಕಠಿಣ ಸವಾಲನ್ನು ಪಡೆದ ಕೋಲ್ಕತ್ತಾ 20 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 166 ರನ್ ಗಳಿಸಿತು.

    ಈ ಮೂಲಕ ಸತತ ಮೂರು ಪಂದ್ಯಗಳನ್ನು ಗೆಲ್ಲುವ ಮೂಲಕ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿ ಬೆಂಗಳೂರು ಮುಂದುವರಿದಿದೆ. ಐಪಿಎಲ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಆರ್ಸಿಬಿ ಮೊದಲ 3 ಪಂದ್ಯಗಳನ್ನು ಗೆದ್ದುಕೊಂಡಿದೆ.

  • ಮ್ಯಾಕ್ಸ್‌ವೆಲ್, ಎಬಿಡಿ ಸ್ಫೋಟಕ ಆಟ – ಆರ್‌ಸಿಬಿಗೆ 38 ರನ್‌ಗಳ ಭರ್ಜರಿ ಜಯ

    ಮ್ಯಾಕ್ಸ್‌ವೆಲ್, ಎಬಿಡಿ ಸ್ಫೋಟಕ ಆಟ – ಆರ್‌ಸಿಬಿಗೆ 38 ರನ್‌ಗಳ ಭರ್ಜರಿ ಜಯ

    ಚೆನ್ನೈ: ಎಬಿಡಿ ವಿಲಿಯರ್ಸ್ ಮತ್ತು ಗ್ಲೇನ್ ಮ್ಯಾಕ್ಸ್‌ವೆಲ್ ಅವರ ಸ್ಫೋಟಕ ಅರ್ಧಶತಕದಿಂದಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 38 ರನ್‌ಗಳಿಂದ ಜಯಗಳಿಸಿದೆ.

    ಗೆಲ್ಲಲು 205 ರನ್‌ಗಳ ಕಠಿಣ ಸವಾಲನ್ನು ಪಡೆದ ಕೋಲ್ಕತ್ತಾ 20 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 166 ರನ್ ಗಳಿಸಿತು. ಕೋಲ್ಕತ್ತಾ ಪರವಾಗಿ ಆಂಡ್ರೆ ರಸೆಲ್ ಒಬ್ಬರನ್ನು ಬಿಟ್ಟರೆ ಉಳಿದ ಬ್ಯಾಟ್ಸ್ಮನ್‌ಗಳು ಸ್ಫೋಟಕವಾಗಿ ಆಡದ ಕಾರಣ ಇಂದಿನ ಪಂದ್ಯವನ್ನು ಸೋತಿದೆ.ಈ ಮೂಲಕ ಸತತ ಮೂರು ಪಂದ್ಯಗಳನ್ನು ಗೆಲ್ಲುವ ಮೂಲಕ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿ ಬೆಂಗಳೂರು ಮುಂದುವರಿದಿದೆ. ಐಪಿಎಲ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಆರ್ಸಿಬಿ ಮೊದಲ 3 ಪಂದ್ಯಗಳನ್ನು ಗೆದ್ದುಕೊಂಡಿದೆ.

    ರಸೆಲ್ 31 ರನ್(20 ಎಸೆತ, 3 ಬೌಂಡರಿ, 2 ಸಿಕ್ಸರ್) ಹೊಡೆದು ಔಟಾದರು. ಕೈಲ್ ಜೆಮಿಸನ್ 3 ವಿಕೆಟ್ ಕಿತ್ತರೆ, ಹರ್ಷಲ್ ಪಟೇಲ್ ಮತ್ತು ಯಜುವೇಂದ್ರ ಚಹಲ್ ತಲಾ 2 ವಿಕೆಟ್ ಪಡೆದರು. ವಾಷಿಂಗ್ಟನ್ ಸುಂದರ್ 1 ವಿಕೆಟ್ ಕಿತ್ತರು. ಕೋಲ್ಕತ್ತಾ ಪರವಾಗಿ ನಿತೀಶ್ ರಾಣಾ 18 ರನ್, ಶುಭಮನ್ ಗಿಲ್ 21 ರನ್, ರಾಹುಲ್ ತ್ರಿಪಾಠಿ 25 ರನ್, ಇಯಾನ್ ಮೊರ್ಗನ್ 29 ರನ್, ಶಕಿಬ್ ಉಲ್ ಹಸನ್ 26 ರನ್ ಹೊಡೆದರು.

    ಆರಂಭದಲ್ಲಿ ಕುಸಿತ:
    ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಬೆಂಗಳೂರು 9 ರನ್‌ಗಳಿಸುವಷ್ಟರಲ್ಲಿ ವಿರಾಟ್ ಕೊಹ್ಲಿ ಮತ್ತು ರಜತ್ ಪಟೀದಾರ್ ಅವರ ವಿಕೆಟ್ ಕಳೆದುಕೊಂಡಿತ್ತು. ಮೂರನೇ ವಿಕೆಟಿಗೆ ದೇವದತ್ ಪಡಿಕ್ಕಲ್ ಮತ್ತು ಗ್ಲೇನ್ ಮ್ಯಾಕ್ಸ್‌ವೆಲ್ 58 ಎಸೆತಗಳಲ್ಲಿ 86 ರನ್ ಜೊತೆಯಾಟವಾಡಿ ತಂಡಕ್ಕೆ ಚೇತರಿಕೆ ನೀಡಿದರು.

    4ನೇ ವಿಕೆಟಿಗೆ ಮ್ಯಾಕ್ಸ್ವೆಲ್ ಮತ್ತು ಎಬಿ ಡಿವಿಲಿಯರ್ಸ್ 37 ಎಸೆತಗಳಿಗೆ 53 ರನ್ ಹೊಡೆದರೆ ಕೊನೆಯಲ್ಲಿ ಮುರಿಯದ 5ನೇ ವಿಕೆಟಿಗೆ ಎಬಿಡಿ ಮತ್ತು ಜೆಮಿಸನ್ 20 ಎಸೆತಗಳಲ್ಲಿ 56 ರನ್ ಸಿಡಿಸಿ ತಂಡದ ಮೊತ್ತವನ್ನು 200 ರನ್‌ಗಳ ಗಡಿ ದಾಟಿಸಿದರು.

    ದೇವದತ್ತ ಪಡಿಕ್ಕಲ್ 25 ರನ್(28 ಎಸೆತ, 2 ಬೌಂಡರಿ), ಗ್ಲೇನ್ ಮ್ಯಾಕ್ಸ್‌ವೆಲ್ 78 ರನ್(49 ಎಸೆತ, 9 ಬೌಂಡರಿ, 3 ಸಿಕ್ಸರ್) ಎಬಿಡಿ ವಿಲಿಯರ್ಸ್ 76 ರನ್(34 ಎಸೆತ, 9 ಬೌಂಡರಿ, 3 ಸಿಕ್ಸರ್) ಜೇಮಿಸನ್ 11 ರನ್( 4 ಎಸೆತ, 1 ಬೌಂಡರಿ, 1 ಸಿಕ್ಸರ್) ಹೊಡೆದರು.

    ರಸೆಲ್ ಎಸೆದ 18ನೇ ಓವರಿನಲ್ಲಿ 17 ರನ್, ಹರ್ಭಜನ್ ಎಸೆದ 19ನೇ ಓವರಿನಲ್ಲಿ 18 ರನ್, ರಸೆಲ್ ಎಸೆದ 20ನೇ ಓವರಿನಲ್ಲಿ 21 ರನ್ ಬಂದ ಕಾರಣ ಆರ್‌ಸಿಬಿ ಉತ್ತಮ ಮೊತ್ತ ಗಳಿಸಿತ್ತು.

    ರನ್ ಏರಿದ್ದು ಹೇಗೆ?
    50 ರನ್ – 41 ಎಸೆತ
    100 ರನ್ – 75 ಎಸೆತ
    150 ರನ್ – 104 ಎಸೆತ
    200 ರನ್ – 118 ಎಸೆತ
    204 ರನ್- 120 ಎಸೆತ

  • ಕ್ಯಾಚ್ ಕೈ ಚೆಲ್ಲಿದರೂ ಕೊನೆಯಲ್ಲಿ ಬೌಲರ್‌ಗಳ ಮ್ಯಾಜಿಕ್ – ಮುಂಬೈಗೆ 10 ರನ್‍ಗಳ ರೋಚಕ ಜಯ

    ಕ್ಯಾಚ್ ಕೈ ಚೆಲ್ಲಿದರೂ ಕೊನೆಯಲ್ಲಿ ಬೌಲರ್‌ಗಳ ಮ್ಯಾಜಿಕ್ – ಮುಂಬೈಗೆ 10 ರನ್‍ಗಳ ರೋಚಕ ಜಯ

    ಮುಂಬೈ: ಕ್ಯಾಚ್ ಕೈ ಚೆಲ್ಲಿದ್ದರೂ ಕೊನೆಯಲ್ಲಿ ಬೌಲರ್‌ಗಳು ಮ್ಯಾಜಿಕ್ ಮಾಡಿದ ಪರಿಣಾಮ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಮುಂಬೈ 10 ರನ್‍ಗಳಿಂದ ಪಂದ್ಯವನ್ನು ರೋಚಕವಾಗಿ ಗೆದ್ದುಕೊಂಡಿದೆ.

    ಮುಂಬೈ ನೀಡಿದ್ದ 153 ರನ್‍ಗಳ ಗುರಿಯನ್ನು ಬೆನ್ನಟ್ಟಿದ ಕೋಲ್ಕತ್ತಾ ಸುಲಭವಾಗಿ ಗೆಲ್ಲಬಹುದು ಎಂದು ಆರಂಭದಲ್ಲಿ ನಿರೀಕ್ಷಿಸಲಾಗಿತ್ತು. ಆದರೆ ರಾಹುಲ್ ಚಹರ್ ಸ್ಪಿನ್ ಮೋಡಿ ಜೊತೆಗೆ ಸ್ಲಾಗ್ ಓವರ್‌ಗಳಲ್ಲಿ ರನ್‍ಗಳಿಗೆ ಮುಂಬೈ ಬೌಲರ್‍ಗಳು ಕಡಿವಾಣ ಹಾಕಿದ್ದರಿಂದ ಕೋಲ್ಕತ್ತಾ ಅಂತಿಮವಾಗಿ 7 ವಿಕೆಟ್ ನಷ್ಟಕ್ಕೆ 142 ರನ್‍ಗಳಿಸಿ ಸೋಲನ್ನು ಒಪ್ಪಿಕೊಂಡಿತು.

    ಸೋತಿದ್ದು ಹೇಗೆ?
    ಕೊನೆಯ 18 ಎಸೆತದಲ್ಲಿ 22 ರನ್ ಬೇಕಿತ್ತು. ಪಂದ್ಯದ ಚಿತ್ರಣವನ್ನೇ ತಿರುಗಿಸಬಲ್ಲ ಆಟಗಾರರಾದ ದಿನೇಶ್ ಕಾರ್ತಿಕ್ ಮತ್ತು ಆಂಡ್ರೆ ರಸೆಲ್ ಕ್ರೀಸ್‍ನಲ್ಲಿದ್ದರು. ಕೃನಾಲ್ ಎಸೆದ 18ನೇ ಓವರಿನಲ್ಲಿ 3 ರನ್ ನೀಡಿದರೆ, 19ನೇ ಓವರ್ ಎಸೆದ ಬುಮ್ರಾ 4 ರನ್ ನೀಡಿ ನಿಯಂತ್ರಣ ಮಾಡಿದರು. ಕೊನೆಯ ಓವರ್‌ನಲ್ಲಿ 15 ರನ್ ಬೇಕಿತ್ತು. ಟ್ರೆಂಟ್ ಬೌಲ್ಟ್ ಎಸೆದ ಮೊದಲ 2 ಎಸೆತದಲ್ಲಿ ಎರಡು ಸಿಂಗಲ್ ರನ್ ಬಂದರೆ ಮೂರನೇ ಎಸೆತದಲ್ಲಿ ರಸೆಲ್ ಬೌಲ್ಟ್‌ಗೆ ಕ್ಯಾಚ್ ನೀಡಿ ಔಟಾದರು. ನಂತರ ಬಂದ ಪ್ಯಾಟ್ ಕಮ್ಮಿನ್ಸ್ ಬೌಲ್ಡ್ ಆದರೆ 5ನೇ ಎಸೆತದಲ್ಲಿ 2 ರನ್ ಬಂತು. ಕೊನೆಯ ಎಸೆತದಲ್ಲಿ ಯಾವುದೇ ರನ್ ಬರಲಿಲ್ಲ.

    ಮೊದಲ ವಿಕೆಟ್ 72 ರನ್ ಬಂದಿದ್ದರೆ ನಂತರ ಮಧ್ಯಮ ಕ್ರಮಾಂಕದಲ್ಲಿ ಕೋಲ್ಕತ್ತಾ ದಿಢೀರ್ ಕುಸಿತ ಕಂಡಿತು. ರಾಹುಲ್ ಚಹರ್ 4 ಓವರ್ ಮಾಡಿ 27 ರನ್ ನೀಡಿ 4 ವಿಕೆಟ್ ಕಿತ್ತಿದ್ದು ಮುಂಬೈಗೆ ನೆರವಾಯಿತು. ನಿತೀಶ್ ರಾಣಾ 57 ರನ್(47 ಎಸೆತ, 6 ಬೌಂಡರಿ, 2 ಸಿಕ್ಸರ್) ಶುಭಮನ್ ಗಿಲ್ 33 ರನ್(24 ಎಸೆತ, 5 ಬೌಂಡರಿ, 1 ಸಿಕ್ಸರ್) ಹೊಡೆದು ಔಟಾದರು.

    ಸೂರ್ಯಕುಮಾರ್ ಕಮಾಲ್:
    ಮುಂಬೈ ಪರ ಸೂರ್ಯಕುಮಾರ್ ಯಾದವ್ 56 ರನ್(36 ಎಸೆತ, 7 ಬೌಂಡರಿ, 2 ಸಿಕ್ಸರ್), ರೋಹಿತ್ ಶರ್ಮಾ 43 ರನ್(32 ಎಸೆತ 3 ಬೌಂಡರಿ, 1 ಸಿಕ್ಸರ್) ಹೊಡೆದು ಔಟಾದರು. ರಸೆಲ್ 5 ವಿಕೆಟ್ ಪಡೆದರೆ ಪ್ಯಾಟ್ ಕಮ್ಮಿನ್ಸ್ 2 ವಿಕೆಟ್, ವರುಣ್ ಚಕ್ರವರ್ತಿ, ಶಕಿಬ್ ಉಲ್ ಹಸನ್, ಪ್ರಸಿದ್ಧ್ ಕೃಷ್ಣ ತಲಾ ಒಂದು ವಿಕೆಟ್ ಪಡೆದರು.

    ಆಂಡ್ರೆ ರಸೆಲ್ 2 ಓವರ್ ಎಸೆದು 15 ರನ್ ನೀಡಿ 5 ವಿಕೆಟ್ ಕಿತ್ತು ಮುಂಬೈ ವಿರುದ್ಧ ದಾಖಲೆ ಬರೆದಿದ್ದಾರೆ. ಈ ಮೊದಲು ಆರ್‌ಸಿ ಹರ್ಷಲ್ ಪಟೇಲ್ ಮೊದಲ ಪಂದ್ಯದಲ್ಲಿ 4 ಓವರ್ ಎಸೆದು 27 ರನ್ ನೀಡಿ 5 ವಿಕೆಟ್ ಪಡೆದಿದ್ದರು.

  • ಪಾಂಡೆ, ಬೈರ್‌ಸ್ಟೋವ್ ಸ್ಫೋಟಕ ಬ್ಯಾಟಿಂಗ್ ವ್ಯರ್ಥ – ಕೆಕೆಆರ್‌ಗೆ 10 ರನ್‍ಗಳ ರೋಚಕ ಜಯ

    ಪಾಂಡೆ, ಬೈರ್‌ಸ್ಟೋವ್ ಸ್ಫೋಟಕ ಬ್ಯಾಟಿಂಗ್ ವ್ಯರ್ಥ – ಕೆಕೆಆರ್‌ಗೆ 10 ರನ್‍ಗಳ ರೋಚಕ ಜಯ

    ಚೆನ್ನೈ: ಅತ್ಯುತ್ತಮ ಬ್ಯಾಟಿಂಗ್ ಮತ್ತು ಬೌಲಿಂಗ್ ಪ್ರದರ್ಶನ ನೀಡಿದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಹೈದರಾಬಾದ್ ಸನ್ ರೈಸರ್ಸ್ ವಿರುದ್ಧ 10  ರನ್‍ಗಳಿಂದ ಗೆದ್ದು ಐಪಿಎಲ್‍ನಲ್ಲಿ ಶುಭಾರಂಭ ಮಾಡಿದೆ.

    ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕೋಲ್ಕತ್ತಾ 6 ವಿಕೆಟ್ ನಷ್ಟಕ್ಕೆ 187 ರನ್ ಗಳಿಸಿದರೆ ಹೈದರಾಬಾದ್ 5 ವಿಕೆಟ್ ನಷ್ಟಕ್ಕೆ 177 ರನ್ ಗಳಿಸಿತು. ಮಧ್ಯಮ ಕ್ರಮಾಂಕದಲ್ಲಿ ಕುಸಿತ ಕಂಡ ಪರಿಣಾಮ ಹೈದರಾಬಾದ್ ಸೋಲನ್ನು ಅನುಭವಿಸಿತು.

    ತಂಡದ ಮೊತ್ತ 10 ರನ್ ಗಳಿಸಿದ್ದಾಗ ನಾಯಕ ಡೇವಿಡ್ ವಾರ್ನರ್ ಔಟಾದರೆ ಅದೇ ಮೊತ್ತಕ್ಕೆ ವೃದ್ಧಿಮಾನ್ ಸಹಾ ಸಹ ಔಟಾದರು. ಮೂರನೇ ವಿಕೆಟಿಗೆ ಮನೀಶ್ ಪಾಂಡೆ ಮತ್ತು ಜಾನಿ ಬೈರ್‌ಸ್ಟೋವ್ 67 ಎಸೆತಕ್ಕೆ 92 ರನ್ ಜೊತೆಯಾಟವಾಡಿ ಶತಕದ ಗಡಿ ದಾಡಿಸಿದರು.

    ಉತ್ತಮವಾಗಿ ಆಡುತ್ತಿದ್ದ ಬೈರ್‌ಸ್ಟೋವ್ 55 ರನ್(40 ಎಸೆತ, 5 ಬೌಂಡರಿ, 3 ಸಿಕ್ಸರ್)ಹೊಡೆದು ಔಟಾದರು. ಕೊನೆಯಲ್ಲಿ ಅಬ್ದುಲ್ ಸಮಾದ್ ಔಟಾಗದೇ 8 ಎಸೆತ ಎದುರಿಸಿ 2 ಸಿಕ್ಸರ್ ಹೊಡೆದು 19 ರನ್ ಗಳಿಸಿದರೆ ಮನೀಷ್ ಪಾಂಡೆ ಔಟಾಗದೇ 61 ರನ್(44 ಎಸೆತ, 2 ಬೌಂಡರಿ, 3 ಸಿಕ್ಸರ್) ಹೊಡೆದರು. ಪ್ರಸಿದ್ ಕೃಷ್ಣ 2 ವಿಕೆಟ್, ಶಕೀಬ್ ಉಲ್ ಹಸನ್, ಪ್ಯಾಟ್ ಕಮ್ನಿಸ್, ಅಂಡ್ರೆ ರಸಲ್ ತಲಾ ಒಂದೊಂದು ವಿಕೆಟ್ ಪಡೆದರು.

    ಮೊದಲು ಬ್ಯಾಟಿಂಗ್ ಮಾಡಿದ ಕೋಲ್ಕತ್ತಾ ಪರವಾಗಿ ಆರಂಭಿಕ ಆಟಗಾರ ನಿತೀಶ್ ರಾಣಾ 80 ರನ್(56 ಎಸೆತ, 9 ಬೌಂಡರಿ, 4 ಸಿಕ್ಸರ್) ಹೊಡೆದರೆ ರಾಹುಲ್ ತ್ರಿಪಾಠಿ 53 ರನ್(29 ಎಸೆತ, 5 ಬೌಂಡರಿ, 2 ಸಿಕ್ಸರ್) ಹೊಡೆದು ಔಟಾದರು. ಕೊನೆಯಲ್ಲಿ ದಿನೇಶ್ ಕಾರ್ತಿಕ್ 22 ರನ್(9 ಎಸೆತ, 2 ಬೌಂಡರಿ, 1 ಸಿಕ್ಸರ್) ಹೊಡೆದು ತಂಡದ ಮೊತ್ತವನ್ನು ಹಿಗ್ಗಿಸಿ 180 ರನ್‍ಗಳ ಗಡಿಯನ್ನು ದಾಟಿಸಿದರು.

    ಮೊಹಮ್ಮದ್ ನಬಿ ಮತ್ತು ರಶೀದ್ ಖಾನ್ ತಲಾ 2 ವಿಕೆಟ್ ಕಿತ್ತರೆ ಭುವನೇಶ್ವರ್ ಕುಮಾರ್, ಟಿ ನಟರಾಜನ್ ತಲಾ 1 ವಿಕೆಟ್ ಪಡೆದರು.