Tag: ಕೋಲ್ಕತ್ತ

  • ಟಿಎಂಸಿ ಮುಖಂಡನ ಹತ್ಯೆ – ಹಲವು ಮನೆಗಳಿಗೆ ಬೆಂಕಿ, 10 ಮಂದಿ ಸಜೀವ ದಹನ

    ಟಿಎಂಸಿ ಮುಖಂಡನ ಹತ್ಯೆ – ಹಲವು ಮನೆಗಳಿಗೆ ಬೆಂಕಿ, 10 ಮಂದಿ ಸಜೀವ ದಹನ

    ಕೋಲ್ಕತ್ತ: ಟಿಎಂಸಿ ಮುಖಂಡನ ಹತ್ಯೆ ಬೆನ್ನಲ್ಲೇ ಪಶ್ಚಿಮ ಬಂಗಾಳದ ಬಿರ್‌ಭುಮ್‌ನಲ್ಲಿ ಹಲವು ಮನೆಗಳಿಗೆ ಬೆಂಕಿ ಬಿದ್ದ ಪರಿಣಾಮ 10 ಮಂದಿ ಸಜೀವ ದಹನವಾಗಿದ್ದಾರೆ ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.

    ಇಲ್ಲಿನ ರಾಮಪುರಹಾಟ್‌ನ ಬಗುಟಿ ಗ್ರಾಮ ಪಂಚಾಯಿತಿ ಮುಖಂಡ ಭಾದು ಶೇಖ್ ಅವರ ಮೇಲೆ ಸೋಮವಾರ ರಾತ್ರಿ ದಾಳಿ ನಡೆದಿತ್ತು. ರಾಷ್ಟ್ರೀಯ ಹೆದ್ದಾರಿ-60ರ ಅಂಗಡಿಯೊಂದರಲ್ಲಿ ಇರುವಾಗ ಶೇಖ್ ಅವರ ಮೇಲೆ ಬಾಂಬ್ ದಾಳಿ ನಡೆಸಲಾಗಿತ್ತು. ಚಿಕಿತ್ಸೆಗಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸುವ ಮುನ್ನವೇ ಅವರು ಮೃತಪಟ್ಟಿದ್ದರು. ಮುಖಂಡನ ಸಾವಿನ ಸುದ್ದಿ ತಿಳಿದು ರೊಚ್ಚಿಗೆದ್ದ ಗುಂಪೊಂದು ಅವರ ಗ್ರಾಮದಲ್ಲಿನ ವಿರೋಧಿ ಗುಂಪಿನ ಕೆಲವು ಮನೆಗಳ ಮೇಲೆ ದಾಳಿ ನಡೆಸಲು ಮುಂದಾಗಿದೆ. ಇದನ್ನೂ ಓದಿ: ಭಗತ್ ಸಿಂಗ್ ಪುಣ್ಯಸ್ಮರಣೆಯಂದು ಪಂಜಾಬ್‌ನಲ್ಲಿ ಸಾರ್ವಜನಿಕ ರಜೆ

    ದಾಳಿ ಹಿನ್ನೆಲೆಯಲ್ಲಿ 10 ರಿಂದ 12 ಮಂದಿಗೆ ಬೆಂಕಿ ಬಿದ್ದಿದ್ದು, 10 ಮಂದಿ ಸಜೀವ ದಹನವಾಗಿದ್ದಾರೆ. ಸುಟ್ಟು ಕರಕಲಾದ 10 ಮೃತದೇಹವನ್ನು ಹೊರತೆಗೆಲಾಗಿದ್ದು, ಒಂದೇ ಮನೆಯಿಂದ 7 ಮೃತದೇಹಗಳನ್ನು ಹೊರತೆಗೆದಿರುವುದು ಇದೇ ವೇಳೆ ಬೆಳಕಿಗೆ ಬಂದಿದೆ. ದೇಹಗಳು ಸಂಪೂರ್ಣ ಸುಟ್ಟಿರುವುದರಿಂದ ವ್ಯಕ್ತಿಗಳ ಗುರುತು ಪತ್ತೆಯಾಗಿಲ್ಲ. ಎಲ್ಲ ದೇಹಗಳನ್ನು ಸಮೀಪದ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕಳುಹಿಸಲಾಗಿದೆ. ಇನ್ನೂ ಮೂವರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಗ್ನಿಶಾಮಕ ದಳದ ಅಧಿಕಾರಿಗಳು ಮಾಹಿತಿ ನೀಢಿದಿದ್ದಾರೆ. ಇದನ್ನೂ ಓದಿ: ಸಂಸದ ಸ್ಥಾನಕ್ಕೆ ಅಖಿಲೇಶ್ ಯಾದವ್ ರಾಜೀನಾಮೆ

    ಇನ್ನೂ ಮುಖಂಡ ಶೇಖ್ ಅವರ ಹತ್ಯೆಯ ಸಂಬಂಧ ಈವರೆಗೂ ಪೊಲೀಸರು ಒಬ್ಬ ಆರೋಪಿಯನ್ನು ಬಂಧಿಸಿದ್ದಾರೆ. ಮನೆಗೆ ಬೆಂಕಿಯಿಟ್ಟ ಗುಂಪಿನ ಬಗ್ಗೆ ರಾಜ್ಯ ಸರ್ಕಾರವು ಎಡಿಜಿ (ಸಿಐಡಿ) ಜ್ಞಾನವಂತ್ ಸಿಂಗ್ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಿದೆ ಎಂದು ಡಿಜಿಪಿ ಮಾಳವೀಯ ಹೇಳಿದ್ದಾರೆ.

  • ಕಚ್ಚಾ ಬದಾಮ್ ಎಂದು ಹಾಡಿದ್ದವನ ಆತಂಕವೇನು ಗೊತ್ತಾ?

    ಕಚ್ಚಾ ಬದಾಮ್ ಎಂದು ಹಾಡಿದ್ದವನ ಆತಂಕವೇನು ಗೊತ್ತಾ?

    ಕೋಲ್ಕತ್ತ: ರಾತ್ರೋರಾತ್ರಿ ಸ್ಟಾರ್ ಆಗಿರುವ ಎಷ್ಟೋ ಉದಾಹರಣೆಗಳು ನಮ್ಮ ಮುಂದೆ ಇವೆ. ಹೀಗೆ ಕಡಲೆಕಾಯಿ ಮಾರುತ್ತಾ ಜೀವನ ಸಾಗಿಸುತ್ತಿದ್ದ ಭುಬನ್ ಅವರು ಹಾಡಿದ್ದ ಒಂದು ಹಾಡು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಆದರೆ ಈ ಸ್ಟಾರ್ ಪಟ್ಟ ಭುಬನ್ ಅವರಿಗೆ ಒಂದು ಆತಂಕವನ್ನುಂಟು ಮಾಡಿದೆ.

    ನಾನು ಕಲಾವಿದನಾಗಿ ಉಳಿಯಲು ಬಯಸುತ್ತೇನೆ. ನಾನೀಗ ಸೆಲಬ್ರೆಟಿಯಾಗಿದ್ದೇನೆ. ನಾನೊಬ್ಬ ಸೆಲೆಬ್ರಿಟಿಯಾಗಿ ಕಡಲೆಕಾಯಿ ಮಾರಲು ಹೊರಟರೆ ಅವಮಾನ ಎದುರಿಸಬೇಕಾಗುತ್ತದೆ. ನಾನು ಕಡಲೆಕಾಯಿ ಮಾರಾಟ ಮಾಡುವುದಿಲ್ಲ ಎಂದು  ಭುಬನ್ ಅವರು ಆತಂಕವ್ಯಕ್ತ ಪಡಿಸಿದ್ದಾರೆ.

    ಹಳೆಯ ಚೈನ್, ಮೊಬೈಲ್‍ಗಳನ್ನು ತೆಗೆದುಕೊಂಡು ಅದಕ್ಕೆ ಪ್ರತಿಯಾಗಿ ಕಡಲೆಕಾಯಿ ನೀಡುತ್ತಿದ್ದರು ಭುಬನ್. ಈ ಹಾಡಿನ ಸಾಹಿತ್ಯ ಕೂಡ ಅದೇ ಅರ್ಥವನ್ನು ನೀಡುತ್ತದೆ. ಅವರಿಗೆ ಇಷ್ಟು ದೊಡ್ಡ ಮಟ್ಟಕ್ಕೆ ಬೆಳೆದಿರುವುದಕ್ಕೆ ಖುಷಿ ಇದೆ. ಇತ್ತೀಚೆಗೆ ಪಶ್ಚಿಮ ಬಂಗಾಳ ಪೊಲೀಸರು ಭುಬನ್ ಅವರನ್ನು ಸನ್ಮಾನಿಸಿದ್ದಾರೆ. ಇವರ ಒಂದು ಹಾಡು ಸೋಶಿಯಲ್ ಮೀಡಿಯಾದಲ್ಲಿ ಕಮಾಲ್ ಮಾಡಿದೆ. ಇದನ್ನೂ ಓದಿ:  ಹರ್ಷನ ಒಂದೊಂದು ರಕ್ತದ ಹನಿಯೂ ವ್ಯರ್ಥವಾಗದಂತೆ ಹಿಂದೂ ರಾಷ್ಟ್ರ ನಿರ್ಮಾಣಕ್ಕೆ ಶಪಥ ಮಾಡ್ತೇವೆ: ಪ್ರಮೋದ್ ಮುತಾಲಿಕ್

    ಹಾಡಿನ ಸಾಹಿತ್ಯ ಅರ್ಥವಾಗದಿದ್ದರೂ, ಭುಬನ್ ಹಾಡಿದ ರೀತಿ ಎಲ್ಲರಿಗೂ ಇಷ್ಟವಾಗಿತ್ತು. ಹೀಗಾಗಿ, ಸೋಶಿಯಲ್ ಮೀಡಿಯಾದಲ್ಲಿ ಈ ಹಾಡು ಸಖತ್ ಸೌಂಡ್ ಮಾಡುತ್ತಿದೆ. ಭುಬನ್ ಕರೆಸಿ ಕಚ್ಚಾ ಬಾದಾಮ್.. ಹಾಡನ್ನು ರೆಕಾರ್ಡ್ ಮಾಡಿ, ಸಾಂಗ್ ಒಂದನ್ನು ಬಿಡಲಾಗಿದೆ. ಹೀಗಾಗಿ ಅವರನ್ನು ನೋಡುವ ದೃಷ್ಟಿ ಈಗ ಬದಲಾಗಿದೆ. ಈಗ ಅವರು ಮತ್ತೆ ಕಡಲೆಕಾಯಿ ಮಾರಾಟ ಮಾಡಲು ಸಾಧ್ಯವಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ.

  • ವಿಶೇಷ ನ್ಯಾಯಾಲಯದಿಂದ ಅಮಿತ್ ಶಾಗೆ ಸಮನ್ಸ್ ಜಾರಿ

    ವಿಶೇಷ ನ್ಯಾಯಾಲಯದಿಂದ ಅಮಿತ್ ಶಾಗೆ ಸಮನ್ಸ್ ಜಾರಿ

    ಕೋಲ್ಕತಾ: ತೃಣಮೂಲ ಕಾಂಗ್ರೆಸ್ ಸಂಸದ ಅಭಿಷೇಕ್ ಬ್ಯಾನರ್ಜಿ ಅವರು ದಾಖಲಿಸಿದ್ದ ಮಾನಹಾನಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಸಮನ್ಸ್ ಜಾರಿ ಮಾಡಿದೆ.

    ಅಭಿಷೇಕ್ ಬ್ಯಾನರ್ಜಿ ಅವರು ದಾಖಲಿಸಿದ್ದ ಮಾನಹಾನಿ ಪ್ರಕರಣದ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ವಿಶೇಷ ಕೋರ್ಟ್, ಫೆಬ್ರವರಿ 22 ರಂದು ಖುದ್ದಾಗಿ ಅಥವಾ ವಕೀಲರ ಮೂಲಕ ವಿಚಾರಣೆಗೆ ಹಾಜರಾಗುವಂತೆ ಅಮಿತ್ ಶಾ ಅವರಿಗೆ ಸಮನ್ಸ್ ನಲ್ಲಿ ಸೂಚಿಸಿದೆ.

    2018 ರ ಆಗಸ್ಟ್ 11 ರಂದು ಕೋಲ್ಕತ್ತಾದ ಮಾಯೊ ರಸ್ತೆಯಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಅಮಿತ್ ಶಾ ಅವರು ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿ ಅವರಿಗೆ ಮಾನಹಾನಿಕರ ಹೇಳಿಕೆಗಳನ್ನು ನೀಡಿದ್ದರು ಎಂದು ದೂರು ದಾಖಲಿಸಲಾಗಿತ್ತು. ಅಭಿಷೇಕ್ ಬ್ಯಾನರ್ಜಿ ಪರ ವಕೀಲ ಸಂಜಯ್ ಬಸು ಅವರು ನ್ಯಾಯಾಲಯದಲ್ಲಿ ವಾದಮಂಡಿಸಿದ್ದರು. ವಾದವನ್ನು ಆಲಿಸಿರುವ ನ್ಯಾಯಾಧೀಶರು ಖುದ್ದು ಅಮಿತ್ ಶಾ ಹಾಜರಾಗುವಂತೆ ತಿಳಿಸಿದ್ದಾರೆ ಎಂದು ಸಂಜಯ್ ಬಸು ತಿಳಿಸಿದ್ದಾರೆ.

  • ನೇಣು ಬಿಗಿದ ಸ್ಥಿತಿಯಲ್ಲಿ ಬಿಜೆಪಿ, ಆರ್‌ಎಸ್‌ಎಸ್  ಕಾರ್ಯಕರ್ತರ ಮೃತದೇಹ ಪತ್ತೆ

    ನೇಣು ಬಿಗಿದ ಸ್ಥಿತಿಯಲ್ಲಿ ಬಿಜೆಪಿ, ಆರ್‌ಎಸ್‌ಎಸ್ ಕಾರ್ಯಕರ್ತರ ಮೃತದೇಹ ಪತ್ತೆ

    ಕೋಲ್ಕತ: ಟಿಎಂಸಿ ಹಾಗೂ ಬಿಜೆಪಿ ನಡುವೆ ದೀದಿ ನಾಡಲ್ಲಿ ರಾಜಕೀಯ ದ್ವೇಷ ಪ್ರಕರಣಗಳು ಹೆಚ್ಚಾಗುತ್ತಿದ್ದು, ಮತ್ತೊಂದು ಬಿಜೆಪಿ ಕಾರ್ಯಕರ್ತನ ಶವ ಮರಕ್ಕೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ.

    ಸೋಮವಾರ ನೇಣು ಬಿಗಿದ ಸ್ಥಿತಿಯಲ್ಲಿ ಬಿಜೆಪಿ ಕಾರ್ಯಕರ್ತನ ಶವ ಪತ್ತೆಯಾಗಿದೆ. ಈ ಹಿನ್ನೆಲೆ ಬಿಜೆಪಿ ಹಾಗೂ ಟಿಎಂಸಿ ಒಬ್ಬರ ಮೇಲೊಬ್ಬರು ಆರೋಪ ಪ್ರತ್ಯಾರೋಪ ಮಾಡುತ್ತಿದ್ದಾರೆ. ಪಶ್ಚಿಮ ಬಂಗಾಳದ ಹಲವೆಡೆ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆದ್ದ ಬಳಿಕವೂ ಟಿಎಂಸಿ ಕಾರ್ಯಕರ್ತರು ಹಾಗೂ ಬಿಜೆಪಿ ನಡುವೆ ಗಲಾಟೆಗಳು ನಡೆಯುತ್ತಲೇ ಇದ್ದು ಹಿಂಸಾಚಾರ ಭುಗಿಲೆದ್ದಿದೆ. ಈ ನಡುವೆ ಬಿಜೆಪಿ ಕಾರ್ಯಕರ್ತರು ಅನುಮಾನಾಸ್ಪದವಾಗಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗುತ್ತಿರುವುದು ಪಶ್ಚಿಮ ಬಂಗಾಳದ ಬಿಗುವಿನ ವಾತಾವರಣ ಸೃಷ್ಟಿಸಿದೆ.

    ಪಶ್ಚಿಮ ಬಂಗಾಳದ ಹೌರಾದ ಸರ್ಪೋಟಾ ಗ್ರಾಮದಲ್ಲಿ ಬಿಜೆಪಿ ಕಾರ್ಯಕರ್ತ ಸಮಟುಲ್ ದೊಲುಯಿ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ದೊಲುಯಿ ಸಾವಿಗೆ ಟಿಎಂಸಿ ಕಲಾರ್ಯಕರ್ತರೇ ಕಾರಣವೆಂದು ದೊಲುಯಿ ಕುಟುಂಬಸ್ಥರು ಹಾಗೂ ಹೌರಾದ ಬಿಜೆಪಿ ನಾಯಕರು ಟಿಎಂಸಿ ವಿರುದ್ಧ ಕೊಲೆ ಆರೋಪ ಮಾಡಿದ್ದಾರೆ. ಇತ್ತೀಚೆಗೆ ದೊಲುಯಿ ಅವರು ಸ್ಥಳೀಯ ಪ್ರದೇಶಗಳಲ್ಲಿ `ಜೈ ಶ್ರೀರಾಮ್’ ರ‍್ಯಾಲಿಗಳನ್ನು ಮಾಡುತ್ತಿದ್ದರು. ಆದ್ದರಿಂದ ಅವರಿಗೆ ಪ್ರಾಣ ಬೆದರಿಕೆ ಕೂಡ ಹಾಕಲಾಗಿತ್ತು ಎಂದು ಹೌರಾದ ಗ್ರಾಮೀಣ ಭಾಗದ ಬಿಜೆಪಿ ಅಧ್ಯಕ್ಷ ಅನುಪಮ್ ತಿಳಿಸಿದ್ದಾರೆ.

    ಅಲ್ಲದೆ, ದೊಲುಯಿ ಶವವನ್ನು ಮರಣೋತ್ತರ ಪರೀಕ್ಷೆಗೆ ತೆಗೆದುಕೊಂಡು ಹೋಗುತ್ತಿರುವ ವೇಳೆ ಕೆಲ ಕಿಡಿಗೇಡಿಗಳು ಶವವನ್ನು ಹೊತ್ತೊಯ್ಯಲು ಯತ್ನಿಸಿದ್ದು, ಗ್ರಾಮಸ್ಥರು ಈ ವಿಚಾರಕ್ಕೆ ಪ್ರತಿಭಟನೆ ಕೂಡ ನಡೆಸಿದ್ದಾರೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಆರ್‌ಎಎಫ್‌ (ರ‍್ಯಾಪಿಡ್  ಆಕ್ಷನ್ ಫೋರ್ಸ್) ಅನ್ನು ನಿಯೋಜಿಸಿದೆ.

    ಭಾನುವಾರದಂದು ಆರ್‍ಎಸ್‍ಎಸ್ ಹಿರಿಯ ಸ್ವದೇಶ್ ಮನ್ನಾ ಅವರ ಮೃತದೇಹವೂ ಕೂಡ ಅಟ್ಚಾಟಾ ಗ್ರಾಮದಲ್ಲಿ ನೇಣು ಬಿಗಿದ ಸ್ಥಿತಿಯಲ್ಲೇ ಪತ್ತೆಯಾಗಿತ್ತು. ಅಲ್ಲದೆ, ದೊಲುಯಿ ಹಾಗೂ ಸ್ವದೇಶ್ ಇಬ್ಬರು `ಜೈ ಶ್ರೀರಾಮ್’ ರ್ಯಾಲಿಗಳಲ್ಲಿ ಪಾಲ್ಗೊಂಡಿದ್ದರು ಎಂದು ಎನ್ನಲಾಗಿದೆ. ಈ ಹಿನ್ನೆಲೆ ಇಬ್ಬರನ್ನೂ ತೃಣಮೂಲ ಕಾಂಗ್ರೆಸ್ ಬೆಂಬಲಿಗರು ಹತ್ಯೆ ಮಾಡಿದ್ದಾರೆ ಎಂದು ಅನುಪಮ್ ಆರೋಪಿಸಿದ್ದಾರೆ.

    ಬಿಜೆಪಿ ಆರೋಪವನ್ನು ಟಿಎಂಸಿ ಎಂಎಲ್‍ಎ ಪುಲಕ್ ರಾಯ್ ತಳ್ಳಿಹಾಕಿದ್ದಾರೆ. ತಮ್ಮ ಪಕ್ಷದ ಈ ರೀತಿ ಮಾಡಿಲ್ಲ ಎಂದು ಕಾರ್ಯಕರ್ತರ ಪರವಹಿಸಿದ್ದಾರೆ. ಅಲ್ಲದೆ, ಬಿಜೆಪಿ ಅವರು ಉದ್ದೇಶಪೂರ್ವಕವಾಗಿ ತಮ್ಮ ವಿರುದ್ಧ ಆರೋಪ ಮಾಡುತ್ತಿದ್ದಾರೆ ಎಂದು ಪ್ರತಿಕ್ರಿಯಿಸಿದ್ದಾರೆ.

    ಈ ಬಗ್ಗೆ ಟಿಎಂಸಿಯ ಕಾರ್ಯದರ್ಶಿ ಪಾರ್ಥ ಚಟರ್ಜಿ ಅವರು ಮಾತನಾಡಿ, ಬಿಜೆಪಿಯವರು ಸುಮ್ಮನೆ ನಮ್ಮ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಪಶ್ಚಿಮ ಬಂಗಾಳದಲ್ಲಿರುವ ಟಿಎಂಸಿ ಸರ್ಕಾರವನ್ನು ಬೀಳಿಸಿ ಇಲ್ಲಿ ರಾಷ್ಟ್ರಪತಿ ಆಡಳಿತ ತರಲು ಅವರು ಪ್ರಯತ್ನಿಸುತ್ತಿದ್ದಾರೆ. ಟಿಎಂಸಿ ಕಾರ್ಯಕರ್ತರು ಕೂಡ ಸಾವನ್ನಪ್ಪಿದ್ದಾರೆ. ಅವರ ಮನೆಗಳ ಮೇಲೆ ಕೂಡ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. ಆದರೆ ಈ ಬಗ್ಗೆ ಯಾರು ಮಾತನಾಡುತ್ತಿಲ್ಲ ಎಂದು ಕಿಡಿಕಾರಿದ್ದಾರೆ.

  • ತಾಕತ್ತಿದ್ದರೆ ನನ್ನ ಜೊತೆ ಸಂಸ್ಕೃತ ಶ್ಲೋಕ ಪಠಣೆ ಮಾಡಿ: ಮೋದಿ, ಶಾಗೆ ದೀದಿ ಸವಾಲ್

    ತಾಕತ್ತಿದ್ದರೆ ನನ್ನ ಜೊತೆ ಸಂಸ್ಕೃತ ಶ್ಲೋಕ ಪಠಣೆ ಮಾಡಿ: ಮೋದಿ, ಶಾಗೆ ದೀದಿ ಸವಾಲ್

    ಕೋಲ್ಕತ್ತಾ: ತಾಕತ್ತಿದ್ದರೆ ನನ್ನ ಜತೆಗೆ ಸಂಸ್ಕೃತ ಶ್ಲೋಕಗಳನ್ನು ಪಠಣ ಮಾಡಿ ಎಂದು ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರಿಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಖಡಕ್ ಸವಾಲು ಹಾಕಿದ್ದಾರೆ.

    ಅಂತಾರಾಷ್ಟ್ರೀಯ ಮಾರ್ವಾಡಿ ಫೆಡರೇಶನ್ ಆಯೋಜಿಸಿದ್ದ ಹೋಳಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಮತಾ ಬ್ಯಾನರ್ಜಿ, ನಾವು ಹಲವಾರು ವರ್ಷಗಳಿಂದ ದುರ್ಗಾಪೂಜೆ ಮಾಡುತ್ತಿದ್ದೇವೆ. ನವರಾತ್ರಿ, ಛತ್ ಪೂಜಾ ಮತ್ತು ಗಣಪತಿ ವಂದನಾದಂತಹ ಧಾರ್ಮಿಕ ಆಚರಣೆಗಳನ್ನು ನಾವು ಎತ್ತಿ ಹಿಡಿದಿದ್ದೇವೆ. ಆದ್ರೆ ದಿಲ್ಲಿಯಲ್ಲಿ ಕುಳಿತ ಕೆಲವರು ನಮ್ಮತ್ತ ಕೈ ತೋರಿಸುತ್ತಿದ್ದಾರೆ. ರಾಜ್ಯದಲ್ಲಿ ಪೂಜೆ ಮಾಡುವುದು ಅಪರಾಧವೆನ್ನುವ ಪರಿಸ್ಥಿತಿ ಬಂದಿದೆ ಎಂದು ಪ್ರಧಾನಿ ಮೋದಿ ಆರೋಪಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

    ದುರ್ಗಾ ಮೂರ್ತಿಗಳ ವಿಸರ್ಜನೆ ಹಾಗೂ ಶಾಲೆಗಳಲ್ಲಿ ಸರಸ್ವತಿ ಪೂಜೆಗೆ ತೃಣಮೂಲ ಕಾಂಗ್ರೆಸ್ ಸರ್ಕಾರ ಅನುಮತಿ ನೀಡುತ್ತಿಲ್ಲ ಎಂದು ಬಿಜೆಪಿ ಆರೋಪಿಸಿತ್ತು. ಆದರಿಂದ ಈ ವಿಚಾರವಾಗಿ ಪ್ರತಿಕ್ರಿಯಿಸಿದ ಮಮತಾ ಬ್ಯಾನರ್ಜಿ ಬಿಜೆಪಿ ನಾಯಕರಿಗೆ ಈ ಸವಾಲು ಹಾಕಿದ್ದಾರೆ. ಬರೀ ಹಣೆಯ ಮೇಲೆ ತಿಲಕ ಇಡುವುದೇ ಧಾರ್ಮಿಕ ಶೃದ್ಧೆಯ ಸಂಕೇತವಲ್ಲ. ನನ್ನ ಜೊತೆ ಸಂಸ್ಕೃತ ಶ್ಲೋಕಗಳ ಪಠಣದ ಸ್ಪರ್ಧೆಗೆ ಬನ್ನಿ ಎಂದು ನಾನು ಅಮಿತ್‍ಬಾಬು ಮತ್ತು ನರೇಂದ್ರಬಾಬು ಅವರಿಗೆ ಆಹ್ವಾನ ನೀಡುತ್ತಿದ್ದೇನೆ. ಸಂಸ್ಕೃತ ಶ್ಲೋಕಗಳ ಬಗ್ಗೆ ಯಾರಿಗೆ ಆಳವಾದ ಜ್ಞಾನವಿದೆ ಅಂತ ನೋಡೇ ಬಿಡೋಣ ಎಂದು ದೀದಿ ಸವಾಲು ಎಸೆದಿದ್ದಾರೆ.

    ನಮ್ಮ ಆಡಳಿತದಲ್ಲಿ ಸರ್ಕಾರಿ ದೇವಾಲಯಗಳು ನವೀಕರಣವಾಗಿದೆ. ದಕ್ಷೀಣೇಶ್ವರದಲ್ಲಿ ಸ್ಕೈವಾಕ್ ನಿರ್ಮಾಣವಾಗಿದೆ. ಬಿಜೆಪಿ ಆಡಳಿತಕ್ಕೆ ಬಂದ ಮೇಲೆ ಎಷ್ಟು ದೇವಾಲಯಗಳು ನಿರ್ಮಾಣವಾಗಿದೆ? ಅವರಿಗೆ ಇಂದು ರಾಮ ಮಂದಿರವನ್ನು ಕಟ್ಟಿಸಲು ಆಗಲಿಲ್ಲ. ಕೇವಲ ಚುನಾವಣಾ ಭರವಸೆಗಳನ್ನು ಮಾತ್ರ ನೀಡುತ್ತಾರೆ ಎಂದರು.

    ಇತ್ತಿಚಿಗೆ ಜನರು ಭಯದಲ್ಲಿ ಬದುಕುತ್ತಿದ್ದಾರೆ. ಅವರು ತಮ್ಮ ನಾಯಕರನ್ನು ಪ್ರೀತಿಸುವ ಬದಲು, ಅವರನ್ನು ನೋಡಿ ಹೆದರುತ್ತಿದ್ದಾರೆ. ಕೇಂದ್ರೀಯ ಸಂಸ್ಥೆಗಳಾದ ಸಿಬಿಐ ಹಾಗೂ ಇಡಿ ಅಧಿಕಾರಿಗಳು ರೇಡ್ ಮಾಡುತ್ತಿದ್ದಾರೆ. ಇದರಿಂದ ಉದ್ಯಮಿಗಳು ಹೆದರುತ್ತಿದ್ದಾರೆ. ಕೆಲವು ನಾಯಕರು ತಾವು ಕೊಟ್ಟ ಭರವಸೆಯನ್ನು ಉಳಿಕೊಳ್ಳಲಿಲ್ಲ. ಆದರೇ ನಾವು ನಮ್ಮ ಮಾತನ್ನು ಉಳಿಸಿಕೊಳ್ಳುತ್ತೇವೆ ಎಂದು ಹೇಳಿದರು.

  • ಮಹಿಳೆಯನ್ನು ಅತ್ಯಾಚಾರಗೈದು ಜೀವಂತ ಸುಡಲು ಹೋಗಿ ತಾನೇ ಹೆಣವಾದ!

    ಮಹಿಳೆಯನ್ನು ಅತ್ಯಾಚಾರಗೈದು ಜೀವಂತ ಸುಡಲು ಹೋಗಿ ತಾನೇ ಹೆಣವಾದ!

    ಕೋಲ್ಕತ್ತ: ಮಹಿಳೆಯೊಬ್ಬರ ಮೇಲೆ ಅತ್ಯಾಚಾರವೆಸೆಗಿದ ವ್ಯಕ್ತಿಯೋರ್ವ ಆಕೆಯನ್ನು ಜೀವಂತ ಸುಡಲು ಹೋಗಿ ತಾನೇ ಸಜೀವ ದಹನವಾಗಿರುವ ಘಟನೆ ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯಲ್ಲಿ ನಡೆದಿದೆ.

    ಮಾಲ್ಡಾ ನಿವಾಸಿಯಾದ 35 ವರ್ಷದ ವ್ಯಕ್ತಿ ದುಷ್ಕೃತ್ಯ ಮೆರೆಯಲು ಹೋಗಿ ತಾನೇ ಬಲಿಯಾಗಿದ್ದಾನೆ. ಸಂತ್ರಸ್ತ ಮಹಿಳೆ ವಿಧವೆಯಾಗಿದ್ದು, ತನ್ನಿಬ್ಬರು ಮಕ್ಕಳ ಜೊತೆ ಮಾಲ್ಡಾದ ಸುಭಾಶ್ ನಗರದಲ್ಲಿ ವಾಸಿಸುತ್ತಿದ್ದರು. ಕೆಲದಿನಗಳಿಂದ ಆರೋಪಿ ಮಹಿಳೆಗೆ ತೊಂದರೆ ನೀಡುತ್ತಿದ್ದನು. ಆದ್ರೆ ಸೋಮವಾರ ರಾತ್ರಿ ವೇಳೆ ಆರೋಪಿ ಏಕಾಏಕಿ ಮಹಿಳೆಯ ಮನೆಗೆ ನುಗ್ಗಿ ಆಕೆಯ ಮೇಲೆ ಅತ್ಯಾಚಾರವೆಸೆಗಿದ್ದಾನೆ. ಬಳಿಕ ಸಾಕ್ಷಿ ನಾಶ ಮಾಡಲು ಆಕೆಯನ್ನು ಬೆಂಕಿ ಹಚ್ಚಿ ಸುಡಲು ಯತ್ನಿಸಿದ್ದಾನೆ. ಆದರೆ ಬೆಂಕಿಯಲ್ಲಿ ಮಹಿಳೆ ಸುಡುತ್ತಿರುವಾಗ ಆರೋಪಿಯನ್ನು ಕೂಡ ತನ್ನತ್ತ ಎಳೆದುಕೊಂಡು ಆತನಿಗೂ ಬೆಂಕಿ ತಗಲುವಂತೆ ಮಾಡಿ, ತನ್ನೊಡನೆ ಆರೋಪಿಯನ್ನು ಸುಟ್ಟಿದ್ದಾರೆ.

    ಮಹಿಳೆಯ ಮನೆಯಿಂದ ಹೊಗೆಬರುತ್ತಿದ್ದ ಕಾರಣಕ್ಕೆ ಸ್ಥಳಕ್ಕೆ ಸ್ಥಳೀಯರು ಬಂದಿದ್ದು, ಇಬ್ಬರಿಗೂ ಹೊತ್ತಿಕೊಂಡಿದ್ದ ಬೆಂಕಿಯನ್ನು ನೆಂದಿಸಿದ್ದಾರೆ. ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಘಟನೆಯಲ್ಲಿ ಮಹಿಳೆ ಮುಖ ಹಾಗೂ ಕೈಗಳಿಗೆ ತೀವ್ರವಾಗಿ ಸುಟ್ಟ ಗಾಯಗಳಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಆದ್ರೆ ಆರೋಪಿ ದೇಹವು ಸಂಪೂರ್ಣ ಸುಟ್ಟುಹೋಗಿದ್ದ ಕಾರಣಕ್ಕೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಬೆಳಗ್ಗೆ ಆತ ಮೃತ ಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

    ಸದ್ಯ ಘಟನೆ ಕುರಿತು ಪೊಲೀಸರು ಸಂತ್ರಸ್ತೆಯ ಹೇಳಿಕೆಯನ್ನು ಪಡೆದಿದ್ದು, ದೂರನ್ನು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಆದ್ರೆ ಆರೋಪಿ ಯಾರು? ಆತ ಯಾಕೆ ಮಹಿಳೆ ಹಿಂದೆ ಬಿದ್ದಿದ್ದ ಎಂಬ ಮಾಹಿತಿ ಪೊಲೀಸರಿಗೆ ಇನ್ನೂ ದೊರಕಿಲ್ಲ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕೋಲ್ಕತ್ತಾ ಹೈಕೋರ್ಟ್ ನಿಂದ ಬಿಜೆಪಿ ರಥಯಾತ್ರೆಗೆ ಗ್ರೀನ್ ಸಿಗ್ನಲ್

    ಕೋಲ್ಕತ್ತಾ ಹೈಕೋರ್ಟ್ ನಿಂದ ಬಿಜೆಪಿ ರಥಯಾತ್ರೆಗೆ ಗ್ರೀನ್ ಸಿಗ್ನಲ್

    -ಆಡಳಿತಾರೂಢ ದೀದಿ ಸರ್ಕಾರಕ್ಕೆ ಮುಖಭಂಗ

    ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ರಥಯಾತ್ರೆಗೆ ಕೋಲ್ಕತ್ತಾ ಹೈಕೋರ್ಟ್ ಅನುಮತಿ ನೀಡಿದ್ದು, ಅಲ್ಲದೇ ಕಾನುನೂ ಸುವ್ಯವಸ್ಥೆ ಕಾಪಾಡುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದೆ.

    ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ರಥಯಾತ್ರೆಗೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸರ್ಕಾರ ಅನುಮತಿಯನ್ನು ನಿರಾಕರಿಸಿದ ಬೆನ್ನಲ್ಲೇ ಹೈಕೋರ್ಟ್ ಏಕ ಸದಸ್ಯ ಪೀಠ ಸಹ ಯಾತ್ರೆಗೆ ತಡೆಹಿಡಿದಿತ್ತು. ಏಕ ಸದಸ್ಯ ಪೀಠದ ಆದೇಶವನ್ನು ಪ್ರಶ್ನಿಸಿ ಬಿಜೆಪಿ ಸೋಮವಾರ ಆದೇಶವನ್ನು ಮರುಪರಿಶೀಲಿಸುವಂತೆ ಮೇಲ್ಮನವಿ ಸಲ್ಲಿಸಿತ್ತು.

    ಇಂದು ಬಿಜೆಪಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಿಭಾಗೀಯ ಪೀಠ ವಿಚಾರಣೆ ನಡೆಸಿತ್ತು. ಈ ವೇಳೆ ಬಿಜೆಪಿಗೆ ಕೆಲ ಷರತ್ತುಗಳನ್ನು ವಿಧಿಸಿ, ಯಾತ್ರೆಗೆ ಅನುಮತಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ.

    ಈ ಹಿಂದೆ ಕೂಚ್ ಬಿಹಾರ್ ನಿಂದ ಆರಂಭವಾಗಬೇಕಿದ್ದ ಬಿಜೆಪಿಯ `ರಥ ಯಾತ್ರೆ’ಗೆ ಕೋಲ್ಕತಾ ಹೈಕೋರ್ಟ್ ನ ಏಕ ಸದಸ್ಯ ಪೀಠ ಅನುಮತಿ ನಿರಾಕರಿಸಿತ್ತು. ಏಕ ಸದಸ್ಯ ಪೀಠದ ತೀರ್ಪು ಪ್ರಶ್ನಿಸಿ ಬಿಜೆಪಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ ವಿಭಾಗೀಯ ಪೀಠ, ರಥ ಯಾತ್ರೆಗೆ ಅನುಮತಿ ನೀಡುವ ಕುರಿತು ಬಿಜೆಪಿಯ ಮೂವರು ಸದಸ್ಯರ ತಂಡದೊಂದಿಗೆ ಚರ್ಚಿಸಿ, ಡಿಸೆಂಬರ್ 14 ರೊಳಗೆ ಅಂತಿಮ ನಿರ್ಧಾರಕ್ಕೆ ಬನ್ನಿ ಎಂದು ಪಶ್ಚಿಮ ಬಂಗಾಳ ಸರ್ಕಾರದ ಮುಖ್ಯ ಕಾರ್ಯದರ್ಶಿ, ಪೊಲೀಸ್ ಮಹಾ ನಿರ್ದೇಶಕರಿಗೆ ಮತ್ತು ಗೃಹ ಕಾರ್ಯದರ್ಶಿಗೆ ಸೂಚಿಸಿತ್ತು. ಆದರೆ ರಥ ಯಾತ್ರೆಯಿಂದ ಕೋಮುಗಲಭೆ ಸೃಷ್ಟಿಯಾಗುವ ಸಾಧ್ಯತೆ ಇದೆ ಎಂದು ಪಶ್ಚಿಮ ಬಂಗಾಳ ಸರ್ಕಾರ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರ ರಥ ಯಾತ್ರೆಗೆ ಅನುಮತಿ ನೀಡಲು ನಿರಾಕರಿಸಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬಹುಮಹಡಿ ಕಟ್ಟಡದ ಬಳಿ ಬಾಂಬ್ ಸ್ಫೋಟ- ಬಾಲಕಿ ಸಾವು, ಐವರು ಗಂಭೀರ!

    ಬಹುಮಹಡಿ ಕಟ್ಟಡದ ಬಳಿ ಬಾಂಬ್ ಸ್ಫೋಟ- ಬಾಲಕಿ ಸಾವು, ಐವರು ಗಂಭೀರ!

    ಕೋಲ್ಕತ್ತ: ಪಶ್ಚಿಮ ಬಂಗಾಳದ ರಾಜಧಾನಿಯ ನಗರ್ ಬಜಾರ್ ಪ್ರದೇಶದ ಬಹುಮಹಡಿ ಕಟ್ಟಡದ ಬಳಿ ಬಾಂಬ್ ಸ್ಫೋಟಗೊಂಡಿದ್ದು, ಘಟನೆಯ ತೀವ್ರತೆಗೆ ಓರ್ವ ಬಾಲಕಿ ಮೃತಪಟ್ಟು, ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ.

    ಇಂದು ಮುಂಜಾನೆ 9 ಗಂಟೆಗೆ ನಗರ್ ಬಜಾರ್ ಪ್ರದೇಶದ ಹಣ್ಣಿನ ಅಂಗಡಿಯ ಬೃಹತ್ ಕಟ್ಟದ ಬಳಿ ಬಾಂಬ್ ಸ್ಫೋಟಗೊಂಡಿದೆ. ಪರಿಣಾಮ ಬಾಲಕಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಗಂಭೀರವಾಗಿ ಗಾಯಗೊಂಡ ಐವರನ್ನು ಕೂಡಲೇ ಸ್ಥಳೀಯರು ಹತ್ತಿರದ ಆರ್.ಜಿ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.

    ಸ್ಫೋಟ ಸಂಭವಿಸಿದಾಗ ಮೊದಲು ಸ್ಥಳೀಯರು ಸಿಲಿಂಡರ್ ಸ್ಫೋಟವಾಗಿರಬಹುದೆಂದು ಭಾವಿಸಿದ್ದರು. ಆದರೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಇದು ಸಿಲಿಂಡರ್ ಸ್ಫೋಟವಲ್ಲ, ಏನೋ ಬೇರೆ ಸ್ಫೋಟ ಸಂಭವಿಸಿರಬೇಕು ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.

    ಈ ಕುರಿತು ಪ್ರತಿಕ್ರಿಯಿಸಿದ ಹಿರಿಯ ಪೊಲೀಸ್ ಅಧಿಕಾರಿ, ಈ ಮೊದಲು ನಾವು ಸಿಲಿಂಡರ್ ಸ್ಫೋಟ ಎಂದು ಊಹಿಸಿದ್ದೆವು. ಆದರೆ ನಂತರ ಬೇರೆ ಏನೋ ಸ್ಫೋಟವಾಗಿರಬಹುದು ಎಂಬ ಅನುಮಾನ ಮೂಡಿತ್ತು. ಹೀಗಾಗಿ ಸ್ಥಳಕ್ಕೆ ಬಾಂಬ್ ನಿಷ್ಕ್ರೀಯ ದಳ ಹಾಗೂ ವಿಧಿವಿಜ್ಞಾನ ತಜ್ಞರಿಗೆ ಮಾಹಿತಿ ನೀಡಿದೆವು. ಸದ್ಯ ಅವರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ.

    ಸ್ಫೋಟದ ತೀವ್ರತೆಯಿಂದ ಗಾಜು, ಲೋಹ ಹಾಗೂ ಕಲ್ಲಿನ ಚೂರುಗಳು ಸಿಡಿದಿದ್ದು, ಹಲವರಿಗೆ ಗಾಯಗಳಾಗಿವೆ. ಸ್ಫೋಟ ಸಂಭವಿಸಿರುವ ಸ್ಥಳದ ಸಮೀಪವೇ ತೃಣಮೂಲ ಕಾಂಗ್ರೆಸ್ ಕಚೇರಿ ಇದೆ. ಡಂಡಂ ನಗರಸಭೆ ಅಧ್ಯಕ್ಷ ಮತ್ತು ಲೇಖಕ ಪಂಚು ರಾಯ್ ಇದೇ ಕಟ್ಟಡದಲ್ಲಿ ಕಚೇರಿ ಹೊಂದಿದ್ದರು. ಪಂಚು ರಾಯ್ ಪ್ರತಿ ಮಂಗಳವಾರ ಕಚೇರಿಗೆ ಬರುತ್ತಿರುತ್ತಾರೆ. ಹೀಗಾಗಿ ಅವರನ್ನೇ ಗುರಿಯಾಗಿಸಿ ಬಾಂಬ್ ಸ್ಫೋಟಿಸಲಾಗಿದೆ ಎಂದು ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರು ಆರೋಪಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ನಿನ್ನ ಕಾಲು ಮುರಿತೀನಿ ನೋಡು: ಕೇಂದ್ರ ಸಚಿವನ ಧಮ್ಕಿ ವಿಡಿಯೋ ವೈರಲ್!

    ನಿನ್ನ ಕಾಲು ಮುರಿತೀನಿ ನೋಡು: ಕೇಂದ್ರ ಸಚಿವನ ಧಮ್ಕಿ ವಿಡಿಯೋ ವೈರಲ್!

    ಕೋಲ್ಕತ್ತ: ಪಶ್ಚಿಮ ಬಂಗಾಳದ ಅಸನ್ಸೋಲ್ ಪ್ರದೇಶದಲ್ಲಿ ನಡೆದ ಅಂಗವಿಕಲರ ಸಮಾವೇಶದಲ್ಲಿ ಕೇಂದ್ರ ಸಚಿವ ಬಬುಲ್ ಸುಪ್ರಿಯೊ ವ್ಯಕ್ತಿಯೊಬ್ಬರಿಗೆ ನಿನ್ನ ಕಾಲನ್ನು ಮುರಿಯುತ್ತೇನೆ ಎಂದು ಧಮ್ಕಿ ಹಾಕಿರುವ ವಿಚಾರ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

    ಅಸನ್ಸೋಲ್ ಜಿಲ್ಲೆಯಲ್ಲಿ ಅಂಗವಿಕಲರಿಗಾಗಿ ಗಾಲಿಕುರ್ಚಿ ಮತ್ತು ಪರಿಕರಗಳನ್ನು ವಿತರಿಸುವ ‘ಸಾಮಾಜಿಕ ಅಧಿಕಾರಿತಾ ಶಿವಾರ್’ ಸಮಾರಂಭಕ್ಕೆ ಕೇಂದ್ರದ ಭಾರೀ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ಯಮಗಳ ಇಲಾಖೆ ರಾಜ್ಯ ಸಚಿವ ಬಬುಲ್ ಸುಪ್ರಿಯೋರನ್ನು ಆಹ್ವಾನಿಸಲಾಗಿತ್ತು. ಸಭೆಯಲ್ಲಿ ಸಚಿವರು ಭಾಷಣ ಮಾಡುತ್ತಿರುವಾಗ ಓರ್ವ ವ್ಯಕ್ತಿ ಅಡ್ಡಾ-ದಿಡ್ಡಿಯಾಗಿ ಓಡಾಡುತ್ತಿದ್ದನು. ಇದನ್ನು ಪ್ರಶ್ನಿಸಿದ ಅವರು ಏಕೆ ಓಡಾಡುತ್ತಿದ್ದೀಯಾ? ಸುಮ್ಮನೇ ಕುಳಿತುಕೋ ಎಂದು ಹೇಳಿದರು.

    ಸಚಿವರ ಮಾತಿಗೂ ಬೆಲೆಕೊಡದ ಆತ ಪುನಃ ಅದೇ ರೀತಿ ಮಾಡುತ್ತಿದ್ದ. ಇದರಿಂದ ಸಿಟ್ಟಿಗೆದ್ದ ಸಚಿವರು ನಿನಗೇನಾಗಿದೆ? ಏನಾದರೂ ಸಮಸ್ಯೆ ಇದೆಯಾ? ನೀನು ಸುಮ್ಮನೆ ಕುಳಿತುಕೊಳ್ಳದಿದ್ದರೆ, ನಿನ್ನ ಕಾಲನ್ನು ಮುರಿಯುತ್ತೇನೆ ನೋಡು ಎಂದು ಹೇಳಿದ್ದಲ್ಲದೇ, ಸ್ಥಳದಲ್ಲಿದ್ದ ಭದ್ರತಾ ಸಿಬ್ಬಂದಿಗಳಿಗೆ ಆ ವ್ಯಕ್ತಿ ಪುನಃ ಸಭೆಯಲ್ಲಿ ಓಡಾಡಿದರೆ ಅವನ ಕಾಲನ್ನು ಮುರಿದು ಊರುಗೋಲು ಕೊಡಿ ಎಂದು ಸೂಚಿಸಿದ್ದಾರೆ.

    ಬಹಿರಂಗ ಸಭೆಯಲ್ಲಿ ವ್ಯಕ್ತಿಯೊಬ್ಬರಿಗೆ ಕಾಲು ಮುರಿಯುತ್ತೇನೆ ನೋಡು ಎಂದ ಸಚಿವರ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾಕಷ್ಟು ಜನ ವಿರೋಧ ವ್ಯಕ್ತಪಡಿಸಿ ಕೇಂದ್ರ ಸಚಿವರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

    ಯಾವಾಗಲೂ ಸದಾ ವಿವಾದಾತ್ಮಕ ಹೇಳಿಕೆಗಳಿಂದ ಸುದ್ದಿಯಲ್ಲಿರುವ ಸಚಿವರು ಮತ್ತೊಮ್ಮೆ ತಮ್ಮ ನಾಲಿಗೆ ಹರಿಬಿಟ್ಟು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಈ ಮೊದಲು ಬಹಿರಂಗ ಸಭೆಯಲ್ಲಿ ವ್ಯಕ್ತಿಯೊಬ್ಬರ ಚರ್ಮ ಸುಲಿಯುತ್ತೇನೆ ನೋಡಿ ಎನ್ನುವ ಮೂಲಕ ವಿವಾದಕ್ಕೆ ಗುರಿಯಾಗಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕೋಲ್ಕತ್ತಾದಲ್ಲಿ ಸೇತುವೆ ಕುಸಿತ – 8 ಮಂದಿಗೆ ಗಾಯ

    ಕೋಲ್ಕತ್ತಾದಲ್ಲಿ ಸೇತುವೆ ಕುಸಿತ – 8 ಮಂದಿಗೆ ಗಾಯ

    ಕೋಲ್ಕತ್ತಾ: ದಕ್ಷಿಣ ಕೋಲ್ಕತ್ತಾದ ಡೈಮಂಡ್ ಹರ್ಬರ್ ರಸ್ತೆಯಲ್ಲಿರುವ ಮಜರತ್ ಸೇತುವೆ ಕುಸಿದು ಬಿದ್ದ ಪರಿಣಾಮ, ಓರ್ವ ಸಾವನ್ನಪ್ಪಿ, ಹಲವು ಜನ ಅವಶೇಷಗಳ ಅಡಿಯಲ್ಲಿ ಸಿಲುಕೊಂಡಿದ್ದಾರೆ.

    ರಾಜಧಾನಿಯ ಹಳೆಯ ನಗರ ಹಾಗೂ ಜನಜಂಗುಳಿ ಹೆಚ್ಚಿರುವ ಡೈಮಂಡ್ ಹರ್ಬರ್ ರಸ್ತೆಯಲ್ಲಿರುವ ಮಜರತ್ ಸೇತುವೆಯು ಸಂಜೆ 4.45ರ ಸುಮಾರಿಗೆ ಏಕಾಏಕಿ ಕುಸಿದು ಬಿದ್ದಿದ್ದು, ಪರಿಣಾಮವಾಗಿ ಅದರ ಮೇಲೆ ಸಂಚರಿಸುತ್ತಿದ್ದ ಹಲವು ವಾಹನಗಳು ಸೇರಿದಂತೆ 10 ಕ್ಕೂ ಹೆಚ್ಚು ಬೈಕುಗಳು ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿವೆ. ಅಲ್ಲದೇ ಸ್ಥಳದಲ್ಲೇ ಓರ್ವ ಸಾವನ್ನಪ್ಪಿ 8ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

    ಅವಶೇಷಗಳ ಅಡಿಯಲ್ಲಿ ಹಲವು ಮಂದಿ ಸಿಲುಕಿ ಹಾಕಿಕೊಂಡಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಕೂಡಲೇ ಸ್ಥಳಕ್ಕೆ ಆಗಮಿಸಿದ ರಕ್ಷಣಾ ತಂಡ ಹಾಗೂ ಅಗ್ನಿಶಾಮಕ ಸಿಬ್ಬಂದಿಗಳು, ಸಿಲುಕಿಕೊಂಡಿರುವ ಜನರನ್ನು ರಕ್ಷಿಸುತ್ತಿದ್ದು, ಗಾಯಗೊಂಡಿದ್ದ 8 ಮಂದಿಯನ್ನು ಎಸ್‍ಎಸ್‍ಕೆಎಂ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸೇತುವೆ ಬಿದ್ದ ಪರಿಣಾಮ ವಾಹನಗಳು ಸಂಪೂರ್ಣ ನಜ್ಜು-ಗುಜ್ಜಾಗಿವೆ ಎಂದು ರಕ್ಷಣಾ ಸಿಬ್ಬಂದಿ ತಿಳಿಸಿದ್ದಾರೆ.

    ಈ ಕುರಿತು ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಸೇತುವೆ ಕುಸಿದು ಬಿದ್ದು, ಹಲವರು ಅವಶೇಷಗಳಡಿಯಲ್ಲಿ ಸಿಲುಕಿಕೊಂಡಿರುವುದು ಮಾಹಿತಿ ಸಿಕ್ಕಿದೆ. ಈಗಾಗಲೇ ರಕ್ಷಣಾ ತಂಡ ಹಾಗೂ ಅಗ್ನಿಶಾಮಕದಳ ಸಿಬ್ಬಂದಿಯು ಕಾರ್ಯಾಚರಣೆ ನಡೆಸುತ್ತಿದ್ದಾರೆ. ನಾನು ತುರ್ತು ಭೇಟಿಗಾಗಿ ಡಾರ್ಜಿಲಿಂಗ್ ಗೆ ಭೇಟಿ ನೀಡಿದ್ದು, ಯಾವುದೇ ವಿಮಾನಗಳು ಇಲ್ಲದ ಕಾರಣ ಘಟನಾ ಸ್ಥಳಕ್ಕೆ ತೆರಳಲು ಸಾಧ್ಯವಾಗಿಲ್ಲ. ಶೀಘ್ರವೇ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತೇನೆ. ಅಲ್ಲದೇ ಈ ಕುರಿತು ಸಮಗ್ರ ತನಿಖೆ ನಡೆಸುವಂತೆ ಆದೇಶ ನೀಡಿದ್ದೇನೆ ಎಂದು ಹೇಳಿದ್ದಾರೆ.

    ಬಿಜೆಪಿಯ ಮುಖಂಡ ಮುಕುಲ್ ರಾಯ್ ಪ್ರತಿಕ್ರಿಯಿಸಿ, ಸೇತುವೆ ಕುಸಿತಕ್ಕೆ ಸಿಎಂ ಮಮತಾ ಬ್ಯಾನರ್ಜಿಯವರೇ ನೇರ ಹೊಣೆ. ಕೇವಲ ಅವರು ನಗರವನ್ನು ಸುಂದರವಾಗಿಸುವುದಾಗಿ ಆಶ್ವಾಸನೆ ನೀಡುತ್ತಿದ್ದಾರೆಯೇ ಹೊರತು, ಯಾವುದೇ ಹಳೆಯ ಕಾಮಗಾರಿಗಳನ್ನು ಸರಿಪಡಿಸುವಲ್ಲಿ ಗಮನಹರಿಸಿಲ್ಲ. ಇದರ ಹೊಣೆಯನ್ನು ರಾಜ್ಯ ಸರ್ಕಾರ ಹೊತ್ತುಕೊಳ್ಳಬೇಕೆಂದು ಆಗ್ರಹಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv