Tag: ಕೋಲ್ಕತಾ

  • ಜರೀನ್ ಖಾನ್ ಗೆ ಜಾಮೀನು: ನಿಟ್ಟುಸಿರಿಟ್ಟ ನಟಿ

    ಜರೀನ್ ಖಾನ್ ಗೆ ಜಾಮೀನು: ನಿಟ್ಟುಸಿರಿಟ್ಟ ನಟಿ

    ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನದ ಭೀತಿ ಎದುರಿಸುತ್ತಿದ್ದ ಬಾಲಿವುಡ್ ನಟಿ, ಹಾಗೂ ಡಾನ್ಸರ್ ಜರೀನ್ ಖಾನ್ ಅವರಿಗೆ ಷರತ್ತುಬದ್ಧ ಜಾಮೀನು (Bail) ಸಿಕ್ಕಿದೆ. ವಿದೇಶ ಪ್ರವಾಸ ಮಾಡದಂತೆ ನಿರ್ಬಂಧದ ಜೊತೆಗೆ ಮೂವತ್ತು ಸಾವಿರ ರೂಪಾಯಿಗಳ ಬಾಂಡ್ ಅನ್ನು ಭದ್ರತೆಗೆ ನೀಡುವಂತೆ ಆದೇಶಿಸಲಾಗಿದೆ.

    ನಟಿ ಜರೀನ್ ಖಾನ್‌ಗೆ (Zareen Khan) ಈ ಹಿಂದೆ ಸಂಕಷ್ಟ ಎದುರಾಗಿತ್ತು. ವಂಚನೆ ಪ್ರಕರಣದ ಸಂಬಂಧಿಸಿದಂತೆ ಜರೀನ್ ಖಾನ್‌ಗೆ ಕೋಲ್ಕತಾ ನ್ಯಾಯಾಲಯ ಅರೆಸ್ಟ್ ವಾರೆಂಟ್ ಜಾರಿ ಮಾಡಿತ್ತು. ವಂಚನೆ ಪ್ರಕರಣ ಸಂಬಂಧವಾಗಿ ಜರೀನ್ ಖಾನ್‌ಗೆ ಕೋಲ್ಕತಾ ನ್ಯಾಯಾಲಯ ನೋಟಿಸ್ ಜಾರಿ ಮಾಡಿತ್ತು..

    2018ರಲ್ಲಿ ಕೋಲ್ಕತಾದಲ್ಲಿ (Kolkata) ಆಯೋಜಿಸಿದ್ದ ದುರ್ಗಾ ಪೂಜೆ ಕಾರ್ಯಕ್ರಮದಲ್ಲಿ ಜರೀನ್‌ಗೆ ಆಹ್ವಾನ ನೀಡಲಾಗಿತ್ತು. ಈ ಸಮಾರಂಭಕ್ಕಾಗಿ ಸಂಭಾವನೆ ಕೂಡ ನೀಡಲಾಗಿತ್ತು. ಆದರೆ ಅಂದು ನಟಿ ಕಾರ್ಯಕ್ರಮಕ್ಕೆ ಗೈರಾಗಿದ್ದರು. ಈ ವಿಚಾರವಾಗಿ ನಟಿಯ ವಿರುದ್ದ ಆಯೋಜಕರು ಎಫ್‌ಐಆರ್ ದಾಖಲಿಸಿದ್ದರು. 2018ರಿಂದ ದಾಖಲಾದ ಪ್ರಕರಣದ ಕುರಿತು ನಟಿ ಕೋರ್ಟ್ ವಿಚಾರಣೆಗೆ ಹಾಜರಾಗಲಿಲ್ಲ.

     

    ಅರೆಸ್ಟ್ ವಾರೆಂಟ್ ಕುರಿತು ನಟಿ ಪ್ರತಿಕ್ರಿಯೆ ನೀಡಿ, ಈ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಇದರಲ್ಲಿ ಸತ್ಯವಿಲ್ಲ. ಈ ಬಗ್ಗೆ ನನ್ನ ವಕೀಲರ ಜೊತೆ ಮಾತನಾಡುತ್ತೇನೆ ಎಂದಿದ್ದರು. ವೀರ್, ಹೇಟ್ ಸ್ಟೋರಿ 3, ಹೌಸ್‌ಫುಲ್ 2 ಸೇರಿದಂತೆ ಬಾಲಿವುಡ್‌ನ ಹಲವು ಸಿನಿಮಾಗಳಲ್ಲಿ ನಟಿಸಿರುವ ನಟಿಗೆ ಬಂಧನದ ಭೀತಿ ಎದುರಾಗಿತ್ತು.

  • ಕೊರೊನಾಗೆ ತೃಣಮೂಲ ಕಾಂಗ್ರೆಸ್ ಶಾಸಕ ಬಲಿ

    ಕೊರೊನಾಗೆ ತೃಣಮೂಲ ಕಾಂಗ್ರೆಸ್ ಶಾಸಕ ಬಲಿ

    ಕೋಲ್ಕತಾ: ಕೊರೊನಾ ವೈರಸ್‍ನಿಂದಾಗಿ ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ ಶಾಸಕ ತಮೋನಾಶ್ ಘೋಷ್ (60) ನಿಧನರಾಗಿದ್ದಾರೆ.

    ತಮೋನಾಶ್ ಘೋಷ್ ಕಳೆದ ತಿಂಗಳು ಕೊರೊನಾ ವೈರಸ್ ಕಾಣಿಸಿಕೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ಕೊರೊನಾ ಟೆಸ್ಟ್ ಮಾಡಿದಾಗ ಪರೀಕ್ಷೆಯಲ್ಲಿ ಪಾಸಿಟಿವ್ ಬಂದಿತ್ತು. ಆದರೆ ಇತ್ತೀಚೆಗೆ ತಮೋನಾಶ್ ಘೋಷ್ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

    ತಮೋನಾಶ್ ಘೋಷ್ ಸಾವಿಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಂತಾಪ ಸೂಚಿಸಿದ್ದಾರೆ. ತುಂಬಾ ದುಃಖವಾಗಿದೆ. 1998 ರಿಂದ ತೃಣಮೂಲ ಕಾಂಗ್ರೆಸ್ ಪಕ್ಷದ ಖಜಾಂಚಿಯಾಗಿದ್ದು. ಮೂರು ಬಾರಿ ಶಾಸಕರಾಗಿದ್ದರು. 35 ವರ್ಷಗಳಿಂದ ನಮ್ಮೊಂದಿಗೆ ಇದ್ದರು. ಇವರು ಜನರ ಮತ್ತು ಪಕ್ಷಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಸಿದ್ದರು. ಅಲ್ಲದೇ ಸಾಮಾಜಿಕ ಕಾರ್ಯಗಳನ್ನು ಮಾಡುವ ಮೂಲಕ ಸಮಾಜಕ್ಕೆ ಅಪಾರ ಕೊಡುಗೆ ನೀಡಿದ್ದರು. ಆದರೆ ಇಂದು ತಮೋನಾಶ್ ಘೋಷ್ ನಮ್ಮೊಂದಿಗಿಲ್ಲ” ಎಂದು ಟ್ವೀಟ್ ಮಾಡುವ ಮೂಲಕ ಸಂತಾಪ ಸೂಚಿಸಿದ್ದಾರೆ.

    ಮತ್ತೊಂದು ಟ್ವೀಟ್ ಮಾಡಿ, ತಮೋನಾಶ್ ಘೋಷ್ ಅವರ ಪತ್ನಿ ಜರ್ನಾ, ಅವರ ಇಬ್ಬರು ಹೆಣ್ಣುಮಕ್ಕಳು, ಸ್ನೇಹಿತರು ಮತ್ತು ಹಿತೈಷಿಗಳಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ಅವರಿಗೆ ಕೊಡಲಿ ಎಂದು ಸಂತಾಪಗಳು ಸೂಚಿಸಿದ್ದಾರೆ.

  • ಮದ್ವೆಯಾದ್ರೂ ಪ್ರೀತ್ಸೆ ಪ್ರೀತ್ಸೆ ಎಂದು ಯುವತಿ ಹಿಂದೆ ಬಿದ್ದ- ಮನೆಗೆ ನುಗ್ಗಿ ಗುಂಡು ಹಾರಿಸ್ದ

    ಮದ್ವೆಯಾದ್ರೂ ಪ್ರೀತ್ಸೆ ಪ್ರೀತ್ಸೆ ಎಂದು ಯುವತಿ ಹಿಂದೆ ಬಿದ್ದ- ಮನೆಗೆ ನುಗ್ಗಿ ಗುಂಡು ಹಾರಿಸ್ದ

    – ಪರಸ್ಪರ ಪ್ರೀತಿಸ್ತಿದ್ದ ಪ್ರೇಮಿಗಳು

    ಕೋಲ್ಕತಾ: ಮಾಜಿ ಪ್ರಿಯಕರನೊಬ್ಬ ಹಾಡಹಗಲೇ ತನ್ನ ಪ್ರೇಯಿಸಿಗೆ ಗುಂಡು ಹಾರಿಸಿ ಕೊಲೆ ಮಾಡಿರುವ ಘಟನೆ ಕೋಲ್ಕತ್ತಾದ ರೀಜೆಂಟ್ ಪಾರ್ಕ್ ಪ್ರದೇಶದಲ್ಲಿ ನಡೆದಿದೆ.

    ಪ್ರಿಯಾಂಕಾ ಪುರ್‍ಕೈಟ್ (20) ಕೊಲೆಯಾದ ಯುವತಿ. ನಗರದ ಮಹಿಳಾ ಕ್ರಿಶ್ಚಿಯನ್ ಕಾಲೇಜಿನ ಮೂರನೇ ವರ್ಷದ ಪದವಿಯನ್ನು ವ್ಯಾಸಂಗ ಮಾಡುತ್ತಿದ್ದಳು. ದಕ್ಷಿಣ ಕೋಲ್ಕತ್ತಾದ ಆನಂದಪಲ್ಲಿ ಈ ಘಟನೆ ನಡೆದಿದ್ದು, ಪ್ರಿಯಾಂಕಾಳನ್ನು ಆಕೆಯ ಮನೆಯೊಳಗೆ ಆರೋಪಿ ಮಾಜಿ ಪ್ರಿಯಕರ ಜಯಂತಾ ಹಲ್ದಾರ್ ಕೊಲೆ ಮಾಡಿದ್ದಾನೆ ಎಂದು ಪ್ರಾಥಮಿಕ ಪೊಲೀಸ್ ವರದಿಯಲ್ಲಿ ತಿಳಿದುಬಂದಿದೆ.

    ಏನಿದು ಪ್ರಕರಣ?
    ಪ್ರಿಯಾಂಕಾ ಮತ್ತು ಜಯಂತಾ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಈಗಾಗಲೇ ಆರೋಪಿಗೆ ಮದುವೆಯಾಗಿದೆ. ಆದರೆ ಆರೋಪಿ ತನಗೆ ವಿವಾಹವಾಗಿರುವ ವಿಚಾರವನ್ನು ಪ್ರಿಯಾಂಕಾಳಿಂದ ಮುಚ್ಚಿಟ್ಟಿದ್ದನು. ಇತ್ತೀಚೆಗೆ ಜಯಂತಾಗೆ ಈಗಾಗಲೇ ಮದುವೆಯಾಗಿರುವ ವಿಚಾರ ಪ್ರಿಯಾಂಕಾಗೆ ಗೊತ್ತಾಗಿದೆ. ಇದರಿಂದ ಕೋಪಗೊಂಡ ಪ್ರಿಯಾಂಕಾ ಲವ್ ಬ್ರೇಕಪ್ ಮಾಡಿಕೊಂಡಿದ್ದಳು. ಜೊತೆಗೆ ಮತ್ತೆ ನನ್ನನ್ನು ಭೇಟಿಯಾಗಬಾರದೆಂದು ಎಚ್ಚರಿಕೆ ನೀಡಿದ್ದಳು.

    ಆರೋಪಿ ಜಯಂತಾ ತನ್ನ ಪ್ರೇಯಸಿಯ ಮನೆಯ ಸಮೀಪವೇ ವಾಸಿಸುತ್ತಿದ್ದನು. ಪ್ರಿಯಾಂಕಾ ದೂರ ಮಾಡಿದ್ದಕ್ಕೆ ಕೋಪಗೊಂಡ ಆರೋಪಿ ಶನಿವಾರ ಬೆಳಗ್ಗೆ 8 ಗಂಟೆ ಪ್ರಿಯಾಂಕಾಳ ಮನೆಗೆ ನುಗ್ಗಿ ಗುಂಡು ಹಾರಿಸಿ ಕೊಲೆ ಮಾಡಿದ್ದಾನೆ. ಕೊಲೆ ಮಾಡಿದ ನಂತರ ಆರೋಪಿ ಪರಾರಿಯಾಗಿದ್ದು, ಇದೀಗ ಆತನಿಗಾಗಿ ಪೊಲೀಸರು ಹುಡುಕಾಟ ಮಾಡುತ್ತಿದ್ದಾರೆ.

    ಪ್ರಿಯಾಂಕಾ ಮನೆಯ ಹೊರಗೆ ಸಾಕಷ್ಟು ಜನರು ನಿಂತಿರುವುದನ್ನು ನಾನು ನೋಡಿದೆ. ಆಗ ಯಾರೋ ಒಬ್ಬರು ಬೈಕಿನಲ್ಲಿ ಬಂದ ವ್ಯಕ್ತಿಯೊಬ್ಬ ಪ್ರಿಯಾಂಕಾಳನ್ನು ಕುತ್ತಿಗೆಗೆ ಗುಂಡು ಹಾರಿಸಿ ಕೊಲೆ ಮಾಡಿದ್ದಾನೆ ಎಂದು ಹೇಳಿದರು. ಜನರು ಪ್ರಿಯಾಂಕಾ ಮನೆಗೆ ಬರುವಷ್ಟರಲ್ಲಿ ಆರೋಪಿ ಪರಾರಿಯಾಗಿದ್ದನು. ತಕ್ಷಣ ಪ್ರಿಯಾಂಕಾಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು ಎಂದು ಪ್ರಿಯಾಂಕಾ ಪಕ್ಕದ ಮನೆಯವರು ಹೇಳಿದರು.

    ನಾನು ಬೆಳಗ್ಗೆ ಮಲಗಿದ್ದೆ, ಆಗ ಜೋರಾದ ಶಬ್ದ ಕೇಳಿತು. ನಾನು ಏನಾಯಿತು ಎಂದು ನೋಡಲು ಕಿಟಕಿಯತ್ತ ಓಡಿ ಬಂದೆ. ಆಗ ಯಾರೋ ಪ್ರಿಯಾಂಕಾಳಿಗೆ ಗುಂಡು ಹಾರಿಸಿದ್ದಾರೆ ಎಂದು ಕುಟುಂಬದವರು ಕಿರುಚುತ್ತಿದ್ದರು. ಗಾಬರಿಯಾದ ನಾನು ಕೆಳಗೆ ಓಡಿ ಹೋದೆ, ಅಷ್ಟರಲ್ಲಿ ಆರೋಪಿಗಳು ಓಡಿಹೋಗಿದ್ದರು ಎಂದು ಸ್ಥಳೀಯ ಮಹಿಳೆಯೊಬ್ಬರು ತಿಳಿಸಿದರು.

    ಸದ್ಯಕ್ಕೆ ರೀಜೆಂಟ್ ಪಾರ್ಕ್ ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿದ್ದು, ತನಿಖೆ ನಡೆಯುತ್ತಿರುವುದರಿಂದ ಹೆಚ್ಚಿನ ಮಾಹಿತಿ ಪಡೆಯಲು ಪೊಲೀಸರು ಕುಟುಂಬದವರನ್ನು ವಿಚಾರಣೆ ಮಾಡುತ್ತಿದ್ದಾರೆ.

  • 2 ತಿಂಗಳ ಹಸುಗೂಸನ್ನ 3 ಸಾವಿರಕ್ಕೆ ಪೋಷಕರು ಮಾರಾಟ

    2 ತಿಂಗಳ ಹಸುಗೂಸನ್ನ 3 ಸಾವಿರಕ್ಕೆ ಪೋಷಕರು ಮಾರಾಟ

    – ಹಾಲುಣಿಸಲು ಪರದಾಡ್ತಿದ್ದ ತಂದೆ-ತಾಯಿ
    – ಮೂರು ತಿಂಗಳಿಂದ ಮಾಡಲು ಕೆಲಸ ಇಲ್ಲ

    ಕೋಲ್ಕತಾ: ಪೋಷಕರೇ ತಮ್ಮ ಎರಡು ತಿಂಗಳ ಮಗುವನ್ನು ದೂರದ ಸಂಬಂಧಿಕರಿಗೆ ಮೂರು ಸಾವಿರ ರೂಪಾಯಿಗೆ ಮಾರಾಟ ಮಾಡಿರುವ ಘಟನೆ ಪಶ್ಚಿಮ ಬಂಗಾಳದ ಮಿಡ್ನಾಪೋರ್ ಜಿಲ್ಲೆಯಲ್ಲಿ ನಡೆದಿದೆ.

    ಮಗುವಿನ ತಂದೆ ಬಾಪನ್ ಧಾರಾ ಮತ್ತು ತಾಯಿ ತಾಪ್ಸಿ ಎಂದು ಗುರುತಿಸಲಾಗಿದೆ. ತಾಯಿ ಮನೆ ಕೆಲಸ ಮಾಡುತ್ತಿದ್ದಳು. ತಂದೆ ದೈನಂದಿನ ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದರು. ಆದರೆ ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಸುಮಾರು ಎರಡು ತಿಂಗಳಿಂದ ದೇಶವೇ ಲಾಕ್‍ಡೌನ್ ಆಗಿತ್ತು. ಹೀಗಾಗಿ ದಂಪತಿ ಕಳೆದ ಮೂರು ತಿಂಗಳಿನಿಂದ ನಿರುದ್ಯೋಗಿಗಳಾಗಿದ್ದರು ಎಂದು ತಿಳಿದು ಬಂದಿದೆ.

    ಹೌರಾದಲ್ಲಿರುವ ಮಗುವಿನ ಪೋಷಕರ ದೂರದ ಸಂಬಂಧಿಕರ ಮನೆಯಿಂದ ಪೊಲೀಸ್ ಅಧಿಕಾರಿಗಳ ತಂಡ ಮಗುವನ್ನು ವಶಪಡಿಸಿಕೊಂಡ ನಂತರ ಈ ಘಟನೆ ಬೆಳಕಿಗೆ ಬಂದಿದೆ. ಮಗುವನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಈ ವಿಚಾರ ಬೆಳಕಿಗೆ ಬಂದ ನಂತರ ಮಗುವಿನ ಪೋಷಕರು ಪರಾರಿಯಾಗಿದ್ದಾರೆ. ತನಿಖೆಯ ವೇಳೆ ದಂಪತಿ ತಮ್ಮ ಮಗುವನ್ನು 3,000 ರೂಗಳಿಗೆ ಮಾರಾಟ ಮಾಡಿದ್ದಾರೆ ಎಂದು ಪೊಲೀಸ್ ಅಧಿಕಾರಿ ಅಗ್ನಿಶ್ವರ್ ಚೌಧರಿ ತಿಳಿಸಿದರು.

    ತಾಪ್ಸಿ ಮನೆ ಕೆಲಸ ಮಾಡುತ್ತಿದ್ದಳು. ಆದರೆ ಕೊರೊನಾ ಸೋಂಕು ಹರಡುವ ಭಯದಿಂದ ಆಕೆಯನ್ನ ಮನೆ ಕೆಲಸಕ್ಕೆ ಬರಬಾರದೆಂದು ಹೇಳಲಾಗಿತ್ತು. ಪತಿ ಬಾಪನ್ ದೈನಂದಿನ ಕೂಲಿ ಕೆಲಸ ಮಾಡುತ್ತಿದ್ದನು. ಹೀಗಾಗಿ ದಂಪತಿ ಕಳೆದ ಮೂರು ತಿಂಗಳಿನಿಂದ ನಿರುದ್ಯೋಗಿಯಾಗಿದ್ದರು. ಹೀಗಾಗಿ ಊಟ ಮಾಡಲು ಆಹಾರವಿಲ್ಲದೆ, ಮಗುವಿಗೆ ಹಾಲುಣಿಸಲು ಕೂಡ ಸಾಧ್ಯವಾಗದೇ ಪರದಾಡುತ್ತಿದ್ದರು ಎಂದು ನೆರೆಹೊರೆಯವರು ಹೇಳಿದ್ದಾರೆ.

    ತಾಪ್ಸಿ ಮನೆಯಲ್ಲಿ ಮಗುವಿನ ಅಳುವಿನ ಶಬ್ದ ಕೇಳುತ್ತಿರಲಿಲ್ಲ. ಅಲ್ಲದೇ ಮಗು ಕೂಡ ಕಾಣುತ್ತಿರಲಿಲ್ಲ. ಇದರಿಂದ ಅನುಮಾನಗೊಂಡ ನೆರೆಯವರು ಪೊಲೀಸರಿಗೆ ಈ ಬಗ್ಗೆ ಮಾಹಿತಿ ತಿಳಿಸಿದ್ದಾರೆ. ಮಾಹಿತಿ ತಿಳಿದು ತನಿಖೆ ಮಾಡಿದಾಗ ದಂಪತಿಯ ದೂರದ ಸಂಬಂಧಿಕರ ಮನೆಯಲ್ಲಿ ಮಗುವಿರುವುದು ಪತ್ತೆಯಾಗಿದೆ. ಅವರಿಂದ ಮಗುವನ್ನು ವಶಪಡಿಸಿಕೊಂಡು ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯಕ್ಕೆ ಮಗುವಿನ ಪೋಷಕರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ ಸಂದೀಪ್ ಕುಮಾರ್ ಬೋಸ್ ತಿಳಿಸಿದ್ದಾರೆ.

  • ರಾಜ್ಯಕ್ಕೆ ಶ್ರಮಿಕ್ ರೈಲುಗಳನ್ನು ಕಳುಹಿಸಬೇಡಿ: ಮಮತಾ ಬ್ಯಾನರ್ಜಿ ಮನವಿ

    ರಾಜ್ಯಕ್ಕೆ ಶ್ರಮಿಕ್ ರೈಲುಗಳನ್ನು ಕಳುಹಿಸಬೇಡಿ: ಮಮತಾ ಬ್ಯಾನರ್ಜಿ ಮನವಿ

    ಕೋಲ್ಕತಾ: ಅಂಫಾನ್ ಚಂಡಮಾರುತದ ಪರಿಹಾರ ಕಾರ್ಯಗಳ ಹಿನ್ನೆಲೆ ಮೇ 26ವರೆಗೂ ರಾಜ್ಯಕ್ಕೆ ಶ್ರಮಿಕ್ ರೈಲುಗಳನ್ನು ಕಳುಹಿಸದಂತೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ರೈಲ್ವೆ ಸಚಿವಾಲಯಕ್ಕೆ ಮನವಿ ಮಾಡಿಕೊಂಡಿದ್ದಾರೆ.

    ಈ ಸಂಬಂಧ ಮುಖ್ಯ ಕಾರ್ಯದರ್ಶಿ ರಾಜೀವ್ ಸಿನ್ಹಾ ರೈಲ್ವೆ ಸಚಿವಾಲಯಕ್ಕೆ ಪತ್ರ ಬರೆದಿದ್ದು, ಅಂಫಾನ್ ಚಂಡಮಾರುತದಿಂದ ದೊಡ್ಡ ಪ್ರಮಾಣದ ಹಾನಿಯಾಗಿದೆ. ಜಿಲ್ಲಾಡಳಿತ ಪರಿಹಾರ ಮತ್ತು ಪುನರ್ವಸತಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು ಶ್ರಮಿಕ್ ರೈಲು ಕಾರ್ಯಾಚರಣೆಗಳ ಬಗ್ಗೆ ಗಮನ ಹರಿಸಲು ಸಾಧ್ಯವಾಗುವುದಿಲ್ಲ. ಈ ಹಿನ್ನೆಲೆ ಮೇ 26ರವರೆಗೆ ಪಶ್ಚಿಮ ಬಂಗಾಳಕ್ಕೆ ಯಾವುದೇ ರೈಲುಗಳನ್ನು ಕಳುಹಿಸದಂತೆ ಮನವಿ ಮಾಡಿದ್ದಾರೆ.

    ಅಂಫಾನ್ ಚಂಡಮಾರುತದಿಂದಾಗಿ ಕನಿಷ್ಠ 86 ಜನರು ಸಾವನ್ನಪ್ಪಿದ್ದಾರೆ. ಭೀಕರ ಹವಾಮಾನ ದುರಂತದಿಂದ ಸಾಮಾನ್ಯ ಜೀವನ ಪುನಃಸ್ಥಾಪಿಸಲು ಪರದಾಡುತ್ತಿದ್ದಾರೆ.

    ಕೊರೊನಾ ವೈರಸ್ ಲಾಕ್‍ಡೌನ್ ಮಧ್ಯೆ ವಲಸೆ ಕಾರ್ಮಿಕರನ್ನು ತವರು ರಾಜ್ಯಗಳಿಗೆ ಸ್ಥಳಾಂತರದ ವೇಳೆ ಶ್ರಮಿಕ್ ರೈಲುಗಳ ಆಗಮನಕ್ಕೆ ಸಿಎಂ ಮಮತಾ ಬ್ಯಾನರ್ಜಿ ವಿರೋಧಿಸಿದ್ದರು. ಇದು ಗೃಹ ಸಚಿವ ಅಮಿತ್ ಶಾ ಹಾಗೂ ಮಮತಾ ಬ್ಯಾನರ್ಜಿ ನಡುವೆ ರಾಜಕೀಯ ಗುದ್ದಾಟಕ್ಕೂ ಕಾರಣವಾಗಿತ್ತು. ಬಳಿಕ ರೈಲುಗಳು ರಾಜ್ಯ ತಲುಪಲು ರಾಜ್ಯ ಸರ್ಕಾರದ ಒಪ್ಪಿಗೆ ಅವಶ್ಯಕತೆ ಇಲ್ಲ ಎಂದು ಕೇಂದ್ರ ಸರ್ಕಾರ ಆದೇಶಿಸಿತ್ತು.

  • ಭಾರತ ತಂಡದ ಫುಟ್‍ಬಾಲ್ ಮಾಜಿ ಆಟಗಾರ ಚುನಿ ಗೋಸ್ವಾಮಿ ಇನ್ನಿಲ್ಲ

    ಭಾರತ ತಂಡದ ಫುಟ್‍ಬಾಲ್ ಮಾಜಿ ಆಟಗಾರ ಚುನಿ ಗೋಸ್ವಾಮಿ ಇನ್ನಿಲ್ಲ

    – 1962ರಲ್ಲಿ ಭಾರತ ತಂಡದ ಕ್ಯಾಪ್ಟನ್ ಆಗಿದ್ದ ಗೋಸ್ವಾಮಿ
    – ಏಷಿಯನ್ ಗೇಮ್ಸ್ ನಲ್ಲಿ ಚಿನ್ನದ ಪದಕ ತಂದುಕೊಟ್ಟಿದ್ದರು

    ಕೋಲ್ಕತಾ: ಭಾರತ ತಂಡದ ಫುಟ್ಬಾಲ್ ಮಾಜಿ ಆಟಗಾರ ಚುನಿ ಗೋಸ್ವಾಮಿ(82)ಯವರು ನಿಧನರಾಗಿದ್ದಾರೆ.

    ಧೀರ್ಘ ಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಚುನಿ ಗೋಸ್ವಾಮಿಯವರು ಗುರುವಾರ ಕೋಲ್ಕತಾದಲ್ಲಿ ನಿಧನರಾಗಿದ್ದಾರೆ. ಚುನಿ ಅವರು ಸಕ್ಕರೆ ಖಾಯಿಲೆ ಒಳಗೊಂಡಂತೆ ಪ್ರಾಸ್ಟೇಟ್, ನರಗಳ ಸಮಸ್ಯೆ ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು. ಬುಧವಾರ ಅವರನ್ನು ನಗರದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಾರ್ಡಿಯಾಕ್ ಅರೆಸ್ಟ್‍ನಿಂದಾಗಿ ಗುರುವಾರ ಸಂಜೆ 5 ಗಂಟೆಗೆ ಕೊನೆಯುಸಿರೆಳೆದಿದ್ದಾರೆ ಎಂದು ಅವರ ಕುಟುಂಬದ ಮೂಲಗಳು ಖಚಿತಪಡಿಸಿವೆ.

    ಗೋಸ್ವಾಮಿಯವರು 1962ರಲ್ಲಿ ನಡೆದ ಏಷಿಯನ್ ಗೇಮ್ಸ್‍ನಲ್ಲಿ ಚಿನ್ನದ ಪದಕ ಪಡೆದ ತಂಡದ ಕ್ಯಾಪ್ಟನ್ ಆಗಿದ್ದರು. ಅಲ್ಲದೆ ಗೋಸ್ವಾಮಿಯವರು ಫಸ್ಟ್ ಕ್ಲಾಸ್ ಕ್ರಿಕೆಟ್ ಪಂದ್ಯಾವಳಿಗಳಲ್ಲಿ ಬಂಗಾಳವನ್ನು ಪ್ರತಿನಿಧಿಸುತ್ತಿದ್ದರು. ಇವರ ನಾಯಕತ್ವದಲ್ಲಿ ಭಾರತದ ಫುಟ್‍ಬಾಲ್ ತಂಡ 1962ರಲ್ಲಿ ನಡೆದ ಏಷಿಯನ್ ಗೇಮ್ಸ್‍ನಲ್ಲಿ ಚಿನ್ನದ ಪದಕ ಪಡೆದಿತ್ತು. ಅಲ್ಲದೆ ರನ್ನರ್ ಅಪ್ ಹಂತ ತಲುಪುವ ಮೂಲಕ 1964ರಲ್ಲಿ ಏಷಿಯನ್ ಕಪ್ ಪೂರ್ಣಗೊಳಿಸಿತ್ತು. ಇದಾದ ಆರು ತಿಂಗಳ ನಂತರ ನಡೆದಿದ್ದ ಮರ್ಡೆಕಾ ಫುಟ್‍ಬಾಲ್ ನಲ್ಲಿ ಬರ್ಮಾ ವಿರುದ್ಧ ಭಾರತ ಸೋಲನುಭವಿಸಿತ್ತು.

    ಕ್ಲಬ್ ಫುಟ್‍ಬಾಲ್‍ನಲ್ಲಿ ಗೋಸ್ವಾಮಿಯವರು ಯಾವಾಗಲೂ ಮೋಹನ್ ಬಗಾನ್ ಪರ ಆಡುತ್ತಿದ್ದರು. ಅವರ ಕಾಲೇಜು ದಿನಗಳಲ್ಲಿ ಒಂದೇ ವರ್ಷದಲ್ಲಿ ಕೋಲ್ಕತಾ ವಿಶ್ವವಿದ್ಯಾಲಯದ ಫುಟ್‍ಬಾಲ್ ಹಾಗೂ ಕ್ರಿಕೆಟ್ ತಂಡ ಎರಡರ ಕ್ಯಾಪ್ಟನ್ ಆಗಿದ್ದರು.

    ಗೋಸ್ವಾಮಿಯವರು 1957ರಲ್ಲಿ ಅಂತರಾಷ್ಟ್ರೀಯ ಮಟ್ಟದ ಪಂದ್ಯಗಳನ್ನು ಆಡಲು ಪ್ರಾರಂಭಿಸಿದ್ದರು. ಅವರು 1964ರಲ್ಲಿ 27 ವರ್ಷದವರಾಗಿದ್ದಾಗ ಅಂತರಾಷ್ಟ್ರೀಯ ಫುಟ್‍ಬಾಲ್ ಪಂದ್ಯ ಆಡುವುದನ್ನು ನಿಲ್ಲಿಸಿದ ನಂತರ ರಾಷ್ಟ್ರೀಯ ತಂಡದ ದೊಡ್ಡ ಸ್ಟಾರ್ ಆಗಿದ್ದರು. ಗೋಸ್ವಾಮಿಯವರು ಫುಟ್‍ಬಾಲ್ ಮಾತ್ರವಲ್ಲ ಕ್ರಿಕೆಟ್‍ನಲ್ಲಿಯೂ ಯಶಸ್ವಿ ಆಟಗಾರರಾಗಿದ್ದರು.

  • ಕೊರೊನಾ ಎಫೆಕ್ಟ್ – ಮಾಜಿ ಐಪಿಎಲ್ ಆಟಗಾರನಿಂದ ಪಿಂಚಣಿ, ಸಂಬಳ ದಾನ

    ಕೊರೊನಾ ಎಫೆಕ್ಟ್ – ಮಾಜಿ ಐಪಿಎಲ್ ಆಟಗಾರನಿಂದ ಪಿಂಚಣಿ, ಸಂಬಳ ದಾನ

    ಕೋಲ್ಕತಾ: ಕೊರೊನಾ ವೈರಸ್ ವಿರುದ್ಧ ಹೋರಾಡಲು ರಾಜ್ಯ ಸರ್ಕಾರಕ್ಕೆ ನೆರವಾಗುವ ನಿಟ್ಟಿನಲ್ಲಿ ಪಶ್ಚಿಮ ಬಂಗಾಳದ ಕ್ರೀಡಾ ಸಚಿವ ಹಾಗೂ ಮಾಜಿ ಕ್ರಿಕೆಟಿಗ ಲಕ್ಷ್ಮಿ ರತನ್ ಶುಕ್ಲಾ ಅವರು ತಮ್ಮ ಮೂರು ತಿಂಗಳ ಸಂಬಳ ಮತ್ತು ಬಿಸಿಸಿಐ ಪಿಂಚಣಿಯನ್ನು ದಾನ ಮಾಡಿದ್ದಾರೆ.

    ಲಕ್ಷ್ಮಿ ರತನ್ ಶುಕ್ಲಾ ಅವರು ಭಾರತದ ಮಾಜಿ ಆಟಗಾನಾಗಿದ್ದು, ಈಗ ಪ್ರಸ್ತುತ ಪಶ್ಚಿಮ ಬಂಗಾಳದ ಕ್ರೀಡಾ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದರ ಜೊತೆಗೆ ಐಪಿಎಲ್‍ನಲ್ಲಿ ಕೋಲ್ಕತಾ ನೈಟ್ ರೈಡರ್ಸ್ ಪರವಾಗಿ ಆಟವಾಡಿದ್ದಾರೆ. ಹಾಗಾಗಿ ಈಗ ರಾಜ್ಯ ಕೊರೊನಾ ವೈರಸ್ ಭೀತಿಯನ್ನು ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಅವರು ಧನಸಹಾಯ ಮಾಡುವ ನಿರ್ಧಾರ ಮಾಡಿದ್ದಾರೆ.

    ಈ ವಿಚಾರವಾಗಿ ಮಾತನಾಡಿರುವ ಅವರು, ನಾವೆಲ್ಲರೂ ನಮ್ಮ ಸಾಮಥ್ರ್ಯಕ್ಕೆ ಅನುಗುಣವಾಗಿ ನಮ್ಮ ಕೊಡುಗೆ ನೀಡುವ ಸಮಯ ಬಂದಿದೆ. ನಾನು ಈಗಾಗಲೇ ನನ್ನ ಶಾಸಕ ಸ್ಥಾನದ ಮೂರು ತಿಂಗಳ ಸಂಬಳವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಿದ್ದೇನೆ. ಅಲ್ಲದೆ ನನಗೆ ಬಿಸಿಸಿಐನಿಂದ ಪಿಂಚಣಿ ಬರುತ್ತದೆ. ನಾನು ಬಿಸಿಸಿಐ ಪಿಂಚಣಿಯ ಮೂಲಕ ಬರುವ ಮೂರು ತಿಂಗಳ ಹಣವನ್ನು ಸಹ ದೇಣಿಗೆ ನೀಡಿದ್ದೇನೆ ಎಂದು ತಿಳಿಸಿದ್ದಾರೆ.

    ಶುಕ್ಲಾ ಅವರು 1999ರಲ್ಲಿ ಭಾರತಕ್ಕಾಗಿ ಮೂರು ಏಕದಿನ ಪಂದ್ಯಗಳನ್ನು ಆಡಿದ್ದರು. ಆದರೆ ನಂತರ ಪಾದದ ಗಾಯದಿಂದಾಗಿ ಅವರ ವೃತ್ತಿಜೀವನವನ್ನು ಮೊಟಕುಗೊಳಿಸಬೇಕಾಯಿತು. ಆದರೆ ಅವರು ದೇಶೀಯ ಕ್ರಿಕೆಟ್‍ನಲ್ಲಿ ಗೌರವಾನ್ವಿತ ಆಲ್‍ರೌಂಡರ್ ಆಗಿದ್ದರು. 100ಕ್ಕೂ ಹೆಚ್ಚು ಪ್ರಥಮ ದರ್ಜೆ ಪಂದ್ಯಗಳಲ್ಲಿ ಬಂಗಾಳ ಮತ್ತು ಪೂರ್ವ ವಲಯವನ್ನು ಪ್ರತಿನಿಧಿಸಿದ್ದರು. ಇದರ ಜೊತೆಗೆ ಐಪಿಎಲ್ ವಿಜೇತ ಕೋಲ್ಕತಾ ನೈಟ್ ರೈಡರ್ಸ್ ತಂಡದಲ್ಲಿ ಆಡಿದ್ದರು.

    ಕೊರೊನಾ ವೈರಸ್ ದೇಶದಲ್ಲಿ ಭಯದ ವಾತಾವರಣವನ್ನು ಸೃಷ್ಟಿ ಮಾಡಿದೆ. ಭಾರತದಲ್ಲಿ ಇಲ್ಲಿಯವರೆಗೆ ಸುಮಾರು 851 ಜನರು ಕೊರೊನಾ ವೈರಸ್ ಸೋಂಕಿಗೆ ತುತ್ತಾಗಿದ್ದಾರೆ. ಜೊತೆಗೆ 20 ಜನ ಸಾವನ್ನಪ್ಪಿದ್ದಾರೆ. ಹಾಗೇಯೆ ಪಶ್ಚಿಮ ಬಂಗಾಳದಲ್ಲಿ 10 ಕೊರೊನಾ ಪಾಸಿಟಿವ್ ಪ್ರಕರಣಗಳು ಕಂಡು ಬಂದರೆ, ಓರ್ವ ಇದರಿಂದ ಸಾವನ್ನಪ್ಪಿದ್ದಾನೆ. ವಿಶ್ವದಲ್ಲಿ 5 ಲಕ್ಷಕ್ಕೂ ಹೆಚ್ಚು ಕೊರೊನಾ ವೈರಸ್ ಸೋಂಕಿತರಿದ್ದು, ಸಾವನ್ನಪ್ಪಿದ್ದವರ ಸಂಖ್ಯೆ 24 ಸಾವಿರ ದಾಟಿದೆ.

  • ಬಿಟ್ಟು ಹೋದ ಪ್ರಿಯಕರನಿಗಾಗಿ ನಂದಿಬೆಟ್ಟದ ಬಳಿ 2-3 ತಿಂಗಳಿಂದ ಕಾಯ್ತಿರೋ ಯುವತಿ

    ಬಿಟ್ಟು ಹೋದ ಪ್ರಿಯಕರನಿಗಾಗಿ ನಂದಿಬೆಟ್ಟದ ಬಳಿ 2-3 ತಿಂಗಳಿಂದ ಕಾಯ್ತಿರೋ ಯುವತಿ

    ಚಿಕ್ಕಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ನಂದಿಬೆಟ್ಟದ ಅಂಚಿನಲ್ಲೇ ಇರುವ ಕಾರಹಳ್ಳಿ ಗ್ರಾಮದಲ್ಲಿ ಕಳೆದ 2-3 ತಿಂಗಳುಗಳಿಂದ ಅಪರಿಚಿತ ಯುವತಿಯೊಬ್ಬಳು ಮಾನಸಿಕ ಅಸ್ವಸ್ಥೆಯ ರೀತಿ ವರ್ತನೆ ಮಾಡುತ್ತಾ ನಂದಿಬೆಟ್ಟದ ರಸ್ತೆಯಲ್ಲಿ ಅಲೆದಾಡುತ್ತಿದ್ದಳು.

    ಗ್ರಾಮದ ಬಸ್ ನಿಲ್ದಾಣ, ಬೇಕರಿ, ಸೇರಿದಂತೆ ನಂದಿಬೆಟ್ಟದ ಕಡೆಯ ರಸ್ತೆಯುದ್ದಕ್ಕೂ ನಡೆದುಕೊಂಡು ಹೋಗುವುದು ಮರಳಿ ವಾಪಸ್ ಬಂದು ರಾತ್ರಿ ಬ್ಯಾಂಕಿನ ಸಿಸಿಟಿವಿ ಕೆಳಭಾಗದಲ್ಲಿ ಮಲಗುತ್ತಿದ್ದಳು. ಮತ್ತೆ ಬೆಳಾಗಾದರೆ ಇದೇ ಕಾಯಕ ಮಾಡುತ್ತಿದ್ದಳು. ಯಾರೋ ಮಾನಸಿಕ ಅಸ್ವಸ್ಥೆ ಹುಚ್ಚಿ ಎಂದು ಗ್ರಾಮಸ್ಥರು ಸುಮ್ಮನಾಗಿದ್ದರು. ಯಾರ ಜೊತೆಯೂ ಮಾತನಾಡುತ್ತಿರಲಿಲ್ಲ, ಯಾರಾದರೂ ತಿನ್ನಲೂ ಏನಾದರೂ ಕೊಟ್ಟರೂ ತಿನ್ನುತ್ತಿರಲಿಲ್ಲ.

    ಹೀಗಾಗಿ 2-3 ತಿಂಗಳು ಗಳಿಂದ ಯುವತಿಯ ಇದೇ ರೀತಿಯ ವರ್ತನೆ ಕಂಡು ಗ್ರಾಮಸ್ಥರು ಯುವತಿಯ ಏನಾದರೂ ಅನಾಹುತ ಆಗಬಹುದು ಅಂತ ಯುವತಿಯನ್ನ ವಿಚಾರಿಸಲು ಮುಂದಾಗಿದ್ದಾರೆ. ಆದರೆ ಆಕೆಗೆ ಕನ್ನಡ ಭಾಷೆ ಅರ್ಥ ಆಗುತ್ತಿರಲಿಲ್ಲ. ಗ್ರಾಮಸ್ಥರಿಗೆ ಹಿಂದಿ ಬರುತ್ತಿರಲಿಲ್ಲ. ಹೀಗಾಗಿ ಗ್ರಾಮದಲ್ಲಿ ಹಿಂದಿ ಮಾತನಾಡುತ್ತಿದ್ದ ಹಸಿನಾ ಎಂಬಾಕೆಯನ್ನ ಕರೆಸಿದ್ದು, ಆಗ ಆಸಲಿ ವಿಷಯ ಗೊತ್ತಾಗಿದೆ.

    ಅರ್ಧದಾರಿಯಲ್ಲೇ ಬಿಟ್ಟು ಹೋದ ಪ್ರಿಯಕರ
    ಕಾರಹಳ್ಳಿ ಗ್ರಾಮಕ್ಕೆ ತನ್ನ ಪ್ರಿಯಕರ ಜೊತೆ ಬಂದಿದ್ದ ಈ ಯುವತಿ, ಹಸೀನಾ ಮನೆ ಪಕ್ಕದಲ್ಲೇ ವಾಸವಾಗಿದ್ದರಂತೆ. ಪದೇ ಪದೇ ಸಣ್ಣ ಸಣ್ಣ ವಿಚಾರಗಳಿಗೂ ಗಲಾಟೆ ಮಾಡಿಕೊಳ್ಳುತ್ತಿದ್ದರು. ಆದರೆ ಒಂದು ದಿನ ಊರಿಗೆ ಹೋಗೋಣ ಎಂದು ಕರೆದುಕೊಂಡು ಹೋದ ಪ್ರಿಯಕರ ಅಜಯ್ ತನ್ನನ್ನ ಅರ್ಧದಾರಿಯಲ್ಲೇ ಬಿಟ್ಟು ಹೋಗಿದ್ದಾನೆ ಅಂತ ಈ ಯುವತಿ ಹೇಳುತ್ತಿದ್ದಾಳೆ.

    ಯುವತಿ ಹೇಳಿರುವ ಪ್ರಕಾರ ತಾನು ಕೋಲ್ಕತ್ತಾ ಮೂಲದವಳಾಗಿದ್ದು ತನ್ನನ್ನ ಪ್ರೀತಿಸಿದ ಅಜಯ್ ಎಂಬಾತ ಇಲ್ಲಿಗೆ ಕರೆದುಕೊಂಡು ಬಂದಿದ್ದ. ಆದರೆ ಊರಿಗೆ ವಾಪಸ್ ಹೋಗೋಣ ಎಂದು ಕರೆದುಕೊಂಡು ಹೋದವ ನನ್ನನ್ನ ಬಿಟ್ಟು ಹೋಗಿದ್ದಾನೆ. ಹೀಗಾಗಿ ಮರಳಿ ಅಜಯ್ ತನಗಾಗಿ ಇದೇ ಗ್ರಾಮಕ್ಕೆ ಬರುತ್ತಾನೆ ಎಂದು ತಾನು ಕಾಯುತ್ತಿರುವುದಾಗಿ ಹಿಂದಿ ಭಾಷೆಯಲ್ಲಿ ಹೇಳಿದ್ದಾಳೆ. ಯುವತಿಯ ಕಷ್ಟಕ್ಕೆ ಮನಸೋತ ಗ್ರಾಮಸ್ಥರು ಆಕೆಯನ್ನ ಸದ್ಯ ಮಹಿಳಾ ಸ್ವಾಂತಾನ ಕೇಂದ್ರಕ್ಕೆ ಕಳುಹಿಸಿದ್ದು, ಅಲ್ಲಿ ಆಶ್ರಯ ಕಲ್ಪಿಸಿದ್ದಾರೆ. ಸದ್ಯ ಮಾನಸಿಕವಾಗಿ ಜರ್ಜರಿತಳಾಗಿರುವ ಯುವತಿ ಸರಿಯಾಗಿ ಪ್ರತಿಕ್ರಿಯೆ ಕೊಡುತ್ತಿಲ್ಲ.

  • ಸಂಬಂಧ ಮುಂದುವರಿಸಲು ನಿರಾಕರಿಸಿದ್ದೇ ತಪ್ಪಾಯ್ತು

    ಸಂಬಂಧ ಮುಂದುವರಿಸಲು ನಿರಾಕರಿಸಿದ್ದೇ ತಪ್ಪಾಯ್ತು

    – ಇಬ್ಬರಿಂದ ಅರೆಬೆತ್ತಲೆ ಫೋಟೋ ಅಪ್ಲೋಡ್

    ಕೋಲ್ಕತಾ: ಸಂಬಂಧ ಮುಂದುವರಿಸಲು ನಿರಾಕರಿಸಿದ್ದಕ್ಕೆ ವ್ಯಕ್ತಿಗಳಿಬ್ಬರು ಮಹಿಳೆ ಅರೆಬೆತ್ತಲೆ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿರುವ ಘಟನೆ ಪಶ್ಚಿಮ ಬಂಗಾಳದ ಮಾಲ್ಡಾದಲ್ಲಿ ನಡೆದಿದೆ.

    ಇಬ್ಬರು ವ್ಯಕ್ತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ಅಪ್ಲೋಡ್ ಮಾಡುವ ಮೂಲಕ ನನಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಮಹಿಳೆ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿ ಅಲೋಕ್ ರಾಜೋರಿಯಾ ತಿಳಿಸಿದ್ದಾರೆ.

    ಮಹಿಳೆ ಸ್ಥಳೀಯ ವ್ಯಕ್ತಿ ಜೊತೆ ಸಂಬಂಧ ಇಟ್ಟುಕೊಂಡಿದ್ದರು. ಆದರೆ ಕೆಲವು ದಿನಗಳ ನಂತರ ಮಹಿಳೆ ವ್ಯಕ್ತಿಯೊಂದಿಗೆ ಸಂಬಂಧವನ್ನು ಮುಂದುವರಿಸಲು ನಿರಾಕರಿಸಿದ್ದಾರೆ. ಇದರಿಂದ ಆರೋಪಿ ಆಕೆಯ ಫೋನ್ ತೆಗೆದುಕೊಂಡು ಮಹಿಳೆಯ ಕೆಲವು ಅರೆಬೆತ್ತಲೆ, ಅಶ್ಲೀಲ ಫೋಟೋಗಳನ್ನು ತೆಗೆದುಕೊಂಡಿದ್ದಾನೆ. ನಂತರ ಸಂಬಂಧವನ್ನು ಮುಂದುವರಿಸದಿದ್ದರೆ ಸೋಶಿಯಲ್ ಮೀಡಿಯಾದಲ್ಲಿ ಫೋಟೋಗಳನ್ನು ಅಪ್ಲೋಡ್ ಮಾಡುವುದಾಗಿ ಬ್ಲ್ಯಾಕ್ ಮಾಡಿದ್ದಾನೆ.

    ಆರೋಪಿ ವ್ಯಕ್ತಿ ತನ್ನ ಸ್ನೇಹಿತನ ಸಹಾಯದಿಂದ ನನ್ನ ಬಳಿ ತೆಗೆದುಕೊಂಡ ಕೆಲವು ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದಾನೆ ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

    ಈ ಕುರಿತು ಪ್ರಕರಣ ದಾಖಲಿಸಿಕೊಂಡು ಇಬ್ಬರು ಆರೋಪಿಗಳಿಗಾಗಿ ಪೊಲೀಸರು ಶೋಧಕಾರ್ಯ ನಡೆಸುತ್ತಿದ್ದಾರೆ. ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಲಾಗಿದ್ದ ಫೋಟೋಗಳನ್ನು ಡಿಲೀಟ್ ಮಾಡಲಾಗಿದೆ ಎಂದು ಅಲೋಕ್ ರಾಜೋರಿಯಾ ಹೇಳಿದ್ದಾರೆ.

  • ಪಿಂಕ್ ಬಾಲ್ ಟೆಸ್ಟ್: 4, 5ನೇ ದಿನದ ಟಿಕೆಟ್ ಹಣ ವಾಪಸ್ ನೀಡಲು ಮುಂದಾದ ಸಿಎಬಿ

    ಪಿಂಕ್ ಬಾಲ್ ಟೆಸ್ಟ್: 4, 5ನೇ ದಿನದ ಟಿಕೆಟ್ ಹಣ ವಾಪಸ್ ನೀಡಲು ಮುಂದಾದ ಸಿಎಬಿ

    ಕೋಲ್ಕತಾ: ಮೂರೇ ದಿನದೊಳಗೆ ಭಾರತದ ಮೊದಲ ಪಿಂಕ್ ಬಾಲ್ ಟೆಸ್ಟ್ ಮುಗಿದ ನಂತರ ಉಳಿದ 4 ಮತ್ತು 5 ದಿನದ ಅಭಿಮಾನಿಗಳು ಖರೀದಿಸಿದ ಟಿಕೆಟ್ ಹಣವನ್ನು ಹಿಂದಿರುಗಿಸಲು ಕ್ರಿಕೆಟ್ ಅಸೋಸಿಯೇಷನ್ ಆಫ್ ಬಂಗಾಳ (ಸಿಎಬಿ) ನಿರ್ಧರಿಸಿದೆ.

    ಭಾನುವಾರ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಬಾಂಗ್ಲಾದೇಶ ವಿರುದ್ಧ ನಡೆದ ಮೊದಲ ಐತಿಹಾಸಿಕ ಹಗಲು-ರಾತ್ರಿ ಟೆಸ್ಟ್ ಪಂದ್ಯವನ್ನು ಭಾರತ ಗೆದ್ದು ಇತಿಹಾಸ ನಿರ್ಮಿಸಿದೆ. ಭಾರತದ ಮೊದಲ ಪಿಂಕ್ ಬಾಲ್ ಟೆಸ್ಟ್ ಪಂದ್ಯವನ್ನು ಒಂದು ಇನ್ನಿಂಗ್ಸ್ ಮತ್ತು 46 ರನ್ ಗಳಿಂದ ಗೆಲ್ಲುವ ಮೂಲಕ ಬಾಂಗ್ಲಾದೇಶದ ವಿರುದ್ಧದ 2 ಪಂದ್ಯಗಳ ಸರಣಿಯನ್ನು ಭಾರತ ಕ್ಲೀನ್‍ಸ್ವೀಪ್ ಮಾಡಿಕೊಂಡಿದೆ.

    ಭಾರತದ ಬೌಲರ್ ಗಳ ಮಾರಕ ದಾಳಿ ಮತ್ತು ನಾಯಕ ವಿರಾಟ್ ಕೊಹ್ಲಿ ಅವರ ಅಬ್ಬರದ ಶತಕಕ್ಕೆ ಹೆದರಿದ ಬಾಂಗ್ಲಾ ತನ್ನ ಮೊದಲ ಪಿಂಕ್ ಬಾಲ್ ಪಂದ್ಯದಲ್ಲಿ ಕೇವಲ ಮೂರೇ ದಿನಕ್ಕೆ ಭಾರತಕ್ಕೆ ಶರಣಾಗಿತು. ಇದರಿಂದ ಭಾರತದ ಮೊದಲ ಪಿಂಕ್ ಬಾಲ್ ಪಂದ್ಯವನ್ನು ನೋಡಲು ಐದು ದಿನಗಳವರೆಗೂ ಟಿಕೆಟ್ ಖರೀದಿಸಿದ್ದ ಅಭಿಮಾನಿಗಳು ನಿರಾಶೆಯಾದಂತೆ ಆಗಿತ್ತು. ಆದರೆ ಈ ಉಳಿದ ಎರಡು ದಿನಗಳ ಟಿಕೆಟ್ ಹಣವನ್ನು ಸಿಎಬಿ ವಾಪಸ್ ಮಾಡುತ್ತೇವೆ ಎಂದು ಹೇಳಿದೆ.

    ಮಳೆಯಿಂದ ಪಂದ್ಯ ರದ್ದಾದರೆ. ಬೇರೆ ಯಾವುದೋ ಕಾರಣಕ್ಕೆ ಪಂದ್ಯವನ್ನು ಆಡಿಸದೆ ಇದ್ದಾಗ ಮಾತ್ರ ವಿಶ್ವಾದಾದ್ಯಂತ ಅಭಿಮಾನಿಗಳು ಖರೀದಿಸಿದ್ದ ಟಿಕೆಟ್ ಹಣವನ್ನು ವಾಪಸ್ ನೀಡುವ ಅಭ್ಯಾಸವಿದೆ. ಆದರೆ ಇದೇ ಮೊದಲ ಬಾರಿಗೆ ಟೆಸ್ಟ್ ಪಂದ್ಯವು ಎರಡು ದಿನ ಬೇಗ ಮುಗಿದಿದೆ ಎಂದು ಕ್ರಿಕೆಟ್ ಅಸೋಸಿಯೇಷನ್ ಆಫ್ ಬಂಗಾಳ ಅಭಿಮಾನಿಗಳು ಖರೀದಿಸಿದ್ದ 4 ಮತ್ತು 5 ನೇ ದಿನದ ಟಿಕೆಟ್ ಹಣವನ್ನು ವಾಪಸ್ ನೀಡುತ್ತೇವೆ ಎಂದು ಹೇಳಿರುವುದು ವಿಶೇಷ.

    ಈ ವಿಚಾರದ ಬಗ್ಗೆ ಮಾಹಿತಿ ನೀಡಿರುವ ಸಿಎಬಿಯ ಅಡಳಿತ ಮಂಡಳಿ, ಈಗಾಗಲೇ ನಾಲ್ಕು ಮತ್ತು ಐದನೇ ದಿನದ ಟಿಕೆಟ್ ಹಣವನ್ನು ಮರುಪಾವತಿ ಮಾಡುವ ಪ್ರಕ್ರಿಯೆ ಪ್ರಾರಂಭವಾಗಿದೆ. ಈ ಎರಡು ದಿನದ ಟಿಕೆಟ್ ಅನ್ನು ಆನಲೈನ್ ಮೂಲಕ ಬುಕ್ ಮಾಡಿದವರಿಗೆ ನಾವು ಸಂದೇಶ ಕಳುಹಿಸುತ್ತೇವೆ ಎಂದು ಹೇಳಿದೆ. ಇದರ ಜೊತೆ ಐತಿಹಾಸಿಕ ಪಂದ್ಯದಲ್ಲಿ ಭಾಗವಹಿಸಿದ ಕ್ರೀಡಾಭಿಮಾನಿಗಳನ್ನು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಶ್ಲಾಘಿಸಿದ್ದಾರೆ.

    ವಿಶೇಷವೆಂದರೆ, ಇದು ಭಾರತದಲ್ಲಿ ಆಡಿದ ಅತ್ಯಂತ ಚಿಕ್ಕದಾದ ಟೆಸ್ಟ್ (ಎಸೆದ ಚೆಂಡುಗಳ ಸಂಖ್ಯೆಗೆ ಅನುಗುಣವಾಗಿ). ಯಾಕೆಂದರೆ ಈ ಪಂದ್ಯ ಕೇವಲ 968 ಎಸೆತಗಳಲ್ಲಿ ಪೂರ್ಣಗೊಂಡಿದೆ. ಇದನ್ನು ಬಿಟ್ಟರೆ ಅಫ್ಘಾನಿಸ್ತಾನದ ಚೊಚ್ಚಲ ಟೆಸ್ಟ್ ಅನ್ನು ಭಾರತ 2018 ರಲ್ಲಿ 1028 ಎಸೆತಗಳಲ್ಲಿ ಪೂರ್ಣಗೊಳಿಸಿತ್ತು. ಭಾರತದ ಬಾಂಗ್ಲಾ ವಿರುದ್ಧದ ಪಂದ್ಯಲ್ಲಿ ಒಟ್ಟು 161.2 ಓವರ್ ಆಟವಾಡಿದರೆ. ಅಫ್ಘಾನಿಸ್ತಾನದ ವಿರುದ್ಧದ ಪಂದ್ಯದಲ್ಲಿ 171.2 ಓವರ್ ಆಟವಾಡಿತ್ತು.