Tag: ಕೋಲಾರ

  • ಕೋಲಾರ: ವ್ಯಕ್ತಿಯ ದೇಹದ ಅರ್ಧ ಭಾಗವನ್ನೇ ತಿಂದು ಹಾಕಿದ ಚಿರತೆ!

    ಕೋಲಾರ: ವ್ಯಕ್ತಿಯ ದೇಹದ ಅರ್ಧ ಭಾಗವನ್ನೇ ತಿಂದು ಹಾಕಿದ ಚಿರತೆ!

    ಕೋಲಾರ: ಚಿರತೆ ದಾಳಿಗೆ ವ್ಯಕ್ತಿ ಬಲಿಯಾಗಿರುವ ಘಟನೆ ಕೋಲಾರ ಜಿಲ್ಲೆ ಬಂಗಾರಪೇಟೆ ತಾಲೂಕಿನ ವೀರಕಪುತ್ರ ಗ್ರಾಮದ ಬಳಿ ನಡೆದಿದೆ.

    ಬಂಡೂರು ಗ್ರಾಮದ ವೆಂಕಟೇಶಪ್(45) ಚಿರತೆ ದಾಳಿಗೆ ಬಲಿಯಾದ ವ್ಯಕ್ತಿಯಾಗಿದ್ದು, ಇವರು ಕಳೆದ ರಾತ್ರಿ ಹಳೆಪಾಳ್ಯದಿಂದ ತಮ್ಮ ಗ್ರಾಮಕ್ಕೆ ತೆರಳುವ ವೇಳೆ ಈ ದಾಳಿ ನಡೆದಿದೆ.

    ವ್ಯಕ್ತಿಯ ಅರ್ಧ ಭಾಗದಷ್ಟು ದೇಹವನ್ನ ಚಿರತೆ ತಿಂದುಹಾಕಿದೆ. ಘಟನೆಯಿಂದ ಸುತ್ತಮುತ್ತಲ ಗ್ರಾಮಸ್ಥರು ಆತಂಕಗೊಂಡಿದ್ದು, ಸ್ಥಳಕ್ಕೆ ಅರಣ್ಯಾಧಿಕಾರಿಗಳು ಆಗಮಿಸಿದ್ದಾರೆ.

  • ಬೈಕ್, ರಿಟ್ಜ್ ಕಾರ್ ಡಿಕ್ಕಿ- ಬೈಕ್‍ನಲ್ಲಿದ್ದ ಮೂವರ ದುರ್ಮರಣ

    ಬೈಕ್, ರಿಟ್ಜ್ ಕಾರ್ ಡಿಕ್ಕಿ- ಬೈಕ್‍ನಲ್ಲಿದ್ದ ಮೂವರ ದುರ್ಮರಣ

    ಕೋಲಾರ: ಬೈಕ್ ಹಾಗೂ ಕಾರ್ ನಡುವೆ ಅಪಘಾತವಾಗಿ ಬೈಕ್‍ನಲ್ಲಿದ್ದ ಮೂವರು ಸ್ಥಳದಲ್ಲೆ ಸಾವನ್ನಪ್ಪಿರುವ ಘಟನೆ ಕೋಲಾರದಲ್ಲಿ ಇಂದು ಮುಂಜಾನೆ ನಡೆದಿದೆ.

    ಬೈಕ್ ನಲ್ಲಿದ್ದ ಕೋಲಾರ ತಾಲೂಕಿನ ಚಾಕರಸನಹಳ್ಳಿ ನಿವಾಸಿಗಳಾದ 18 ವರ್ಷದ ಅರುಣ್, 20 ವರ್ಷದ ಮುನಿರಾಜು, 19 ವರ್ಷದ ಅರವಿಂದ್ ಮೃತ ದುರ್ದೈವಿಗಳು.

    ಕೋಲಾರ ತಾಲೂಕು ಬೆಳ್ಳೂರು ಬಳಿ ರಾಷ್ಟ್ರೀಯ ಹೆದ್ದಾರಿ 75 ರ ಸರ್ವೀಸ್ ರಸ್ತೆಯಲ್ಲಿ ಈ ಅಪಘಾತ ಸಂಭವಿಸಿದೆ. ಡಿಕ್ಕಿಯಾದ ರಭಸಕ್ಕೆ ಕೆಎ-03-ಎಸಿ-7874 ನಂಬರ್ ನ ಮಾರುತಿ ರಿಟ್ಜ್ ಕಾರು ಹಾಳು ಬಾವಿಗೆ ಬಿದ್ದಿದೆ. ಪರಿಣಾಮ ಕಾರ್ ಸೇರಿದಂತೆ ಬೈಕ್ ನಜ್ಜುಗುಜ್ಜಾಗಿದೆ. ಅಪಘಾತದ ನಂತರ ಚಾಲಕ ಕಾರನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾನೆ.

    ವೇಮಗಲ್ ಠಾಣಾ ಪೊಲೀಸರು ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕಾರ್ ಮೇಲೆತ್ತಲಾಗಿದೆ.

     

  • ವಿಡಿಯೋ: ಚಲಿಸುತ್ತಿದ್ದ ಬೈಕಿನಲ್ಲಿ ದಿಢೀರ್ ಬೆಂಕಿ- ಬೆಚ್ಚಿ ಬಿದ್ದ ಸಾರ್ವಜನಿಕರು

    ವಿಡಿಯೋ: ಚಲಿಸುತ್ತಿದ್ದ ಬೈಕಿನಲ್ಲಿ ದಿಢೀರ್ ಬೆಂಕಿ- ಬೆಚ್ಚಿ ಬಿದ್ದ ಸಾರ್ವಜನಿಕರು

    ಕೋಲಾರ: ಚಲಿಸುತ್ತಿದ್ದ ಬೈಕ್‍ನಲ್ಲಿ ದಿಢೀರನೆ ಬೆಂಕಿ ಕಾಣಿಸಿಕೊಂಡು ಬೈಕನ್ನ ನಡು ರಸ್ತೆಯಲ್ಲಿ ಬಿಟ್ಟಿದ್ದಕ್ಕೆ ಸಾರ್ವಜನಿಕರು ಭಯ ಬೀಳುವಂತಾದ ಘಟನೆ ಕೋಲಾರದಲ್ಲಿ ನಡೆದಿದೆ.

    ಬಂಗಾರಪೇಟೆ ಪಟ್ಟಣದ ಬೂದಿಕೋಟೆ ವೃತ್ತದ ಬಳಿ ಬೈಕ್ ಚಲಾಯಿಸಿಕೊಂಡು ಹೋಗ್ತಿದ್ದಾಗ ಪೆಟ್ರೋಲ್ ಸೋರಿಕೆ ಉಂಟಾಗಿ ಬೈಕ್ ಹೊತ್ತಿ ಉರಿದಿದೆ. ತುಂಬಾ ಹೊತ್ತು ಬೈಕ್ ಉರಿಯೋದನ್ನೇ ನೋಡ್ತಿದ್ದ ಜನ ಕಡೆಗೂ ಮಣ್ಣು, ನೀರು ಹಾಕಿ ಬೆಂಕಿ ನಂದಿಸಿ ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆದಿದ್ದಾರೆ.

    https://www.youtube.com/watch?v=hw9qcwdVotI

  • ಬರದ ನಾಡಲ್ಲಿ ಬಂಗಾರದ ಬೆಳೆ ಬೆಳೆದ ರೈತ ಚಂದ್ರಪ್ಪ- ಪ್ಲಾಸ್ಟಿಕ್ ಬದಲಿಗೆ ನ್ಯೂಸ್‍ಪೇಪರ್ ಹೊದಿಕೆ

    ಬರದ ನಾಡಲ್ಲಿ ಬಂಗಾರದ ಬೆಳೆ ಬೆಳೆದ ರೈತ ಚಂದ್ರಪ್ಪ- ಪ್ಲಾಸ್ಟಿಕ್ ಬದಲಿಗೆ ನ್ಯೂಸ್‍ಪೇಪರ್ ಹೊದಿಕೆ

    ಕೋಲಾರ: ಹನಿ ನೀರಿಗೂ ಪರದಾಡ್ತಿರೋ ಕೋಲಾರದಲ್ಲಿ ಪರಿಸರ ಸ್ನೇಹಿ ಕೃಷಿ ವಿಧಾನದಿಂದ ಅತ್ಯಧಿಕ ಇಳುವರಿ ಪಡೆದಿದ್ದಾರೆ. ಅದರಲ್ಲೂ ಪ್ಲಾಸ್ಟಿಕ್ ಬದಲಿಗೆ ನ್ಯೂಸ್‍ಪೇಪರ್ ಬಳಸಿ ಮಾದರಿ ರೈತನಾಗಿದ್ದಾರೆ. ಇವತ್ತಿನ ಪಬ್ಲಿಕ್ ಹೀರೋದಲ್ಲಿ ಚಂದ್ರಪ್ಪ ಅವರ ಯಶೋಗಥೆ ಇದು.

    ಹೌದು. ಕ್ಯಾಪ್ಸಿಕಂ ಬೆಳೆಗೆ ನ್ಯೂಸ್ ಪೇಪರ್ ಅಳವಡಿಸುತ್ತಿರುವ ರೈತ ಚಂದ್ರಪ್ಪ ಅವರೇ ಇವತ್ತಿನ ನಮ್ಮ ಪಬ್ಲಿಕ್ ಹೀರೋ. ಇವರು ಕೋಲಾರದ ಜನ್ನಘಟ್ಟ ಗ್ರಾಮದವರು. ಬಯಲುಸೀಮೆಯಲ್ಲಿ ನದಿನಾಲೆಗಳಿಲ್ಲ, ಅಂತರ್ಜಲವಂತೂ ಪಾತಾಳ ಸೇರಿದೆ. ಆದಾಗ್ಯೂ ರೈತ ಚಂದ್ರಪ್ಪ ಮಾತ್ರ ಬಂಗಾರದಂತ ಬೆಳೆ ಬೆಳೆದಿದ್ದಾರೆ.

    ಸ್ವಲ್ಪ ನೀರನ್ನ ಉಪಯೋಗ ಮಾಡಿಕೊಂಡು ಪ್ಲಾಸ್ಟಿಕ್ ಪೇಪರ್ ಬದಲಿಗೆ ನ್ಯೂಸ್ ಪೇಪರ್ ಬಳಸಿ ನೀರಿನ ಆವಿ ತಡೆಗಟ್ಟಿದ್ದಾರೆ. ಪ್ಲಾಸ್ಟಿಕ್ ಪೇಪರ್ ಬಳಸಿದರೆ ಎಕರೆಗೆ 20 ಸಾವಿರ ಖರ್ಚಾಗುತ್ತೆ. ಆದ್ರೆ ನ್ಯೂಸ್‍ಪೇಪರ್ ಬಳಕೆಯಿಂದ ಕೇವಲ ಒಂದೂವರೆ ಸಾವಿರ ಮಾತ್ರ ಖರ್ಚಾಗಿದೆ ಎಂದು ರೈತ ಚಂದ್ರಪ್ಪ ಅವರು ಹೇಳಿದ್ದಾರೆ.

    ಪ್ಲಾಸ್ಟಿಕ್ ಪೇಪರ್ ಬಳಕೆಯಿಂದ ಪರಿಸರ ಮಾಲಿನ್ಯವಾಗುತ್ತೆ, ಮಣ್ಣು ಕಲುಶಿತವಾಗುತ್ತೆ. ಒಂದೊಮ್ಮೆ ಪ್ರಾಣಿಗಳು ತಿಂದರೆ ಪ್ರಾಣ ಹೋಗುತ್ತೆ. ಆದರೆ ನ್ಯೂಸ್ ಪೇಪರ್ ಬಳಕೆಯಿಂದ ಇದೆಲ್ಲಾ ತಪ್ಪುತ್ತದೆ ಎಂದು ಕೋಲಾರದ ತೋಟಗಾರಿಕಾ ಇಲಾಖೆಯ ಉಪನಿರ್ದೇಶಕರಾದ ರಾಜು ಅವರು ಹೇಳಿದ್ದಾರೆ.

    ಚಂದ್ರಪ್ಪ ಅವರು ಸದ್ಯಕ್ಕೆ ಎರಡು ಎಕರೆಗೂ ನ್ಯೂಸ್ ಪೇಪರನ್ನೇ ಬಳಸಿ ಅಧಿಕ ಇಳುವರಿ ಪಡೆದಿದ್ದಾರೆ. ಇದನ್ನೆಲ್ಲಾ ನೋಡಿದ ಗ್ರಾಮಸ್ಥರು ಮತ್ತು ನೆರೆ ಗ್ರಾಮದವರೂ ಸಹ ಇವರನ್ನೇ ಫಾಲೋ ಮಾಡ್ತಿದ್ದಾರೆ.

    https://youtu.be/IXV7J_dExjU

     

  • ಹಾವು ಕಚ್ಚಿ ರೈತ ಮೃತಪಟ್ಟಿದ್ದಕ್ಕೆ ನಾಗರಹಾವಿನ ಜೊತೆ 17 ಮರಿಹಾವುಗಳನ್ನು ಕೊಂದ್ರು!

    ಹಾವು ಕಚ್ಚಿ ರೈತ ಮೃತಪಟ್ಟಿದ್ದಕ್ಕೆ ನಾಗರಹಾವಿನ ಜೊತೆ 17 ಮರಿಹಾವುಗಳನ್ನು ಕೊಂದ್ರು!

    ಕೋಲಾರ: ನಾಗರಹಾವು ಕಚ್ಚಿ ರೈತ ಮೃತಪಟ್ಟಿದ್ದಕ್ಕೆ ರೊಚ್ಚಿಗೆದ್ದ ಗ್ರಾಮಸ್ಥರು ಹಾವು ಮತ್ತು ಅದರ ಜೊತೆಗಿದ್ದ 17 ಮರಿ ಹಾವುಗಳನ್ನ ಕೊಂದಿರುವ ಮನಕಲಕುವ ಘಟನೆ ಕೋಲಾರದ ಗಡಿ ಆಂಧ್ರಪ್ರದೇಶದಲ್ಲಿ ನಡೆದಿದೆ.

    ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ದಿನ್ನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಹಾವು ಕೊಂದ ಸ್ಥಳದಲ್ಲಿ 17 ಮರಿ ಹಾವುಗಳು ಪತ್ತೆಯಾಗಿದ್ದು, ಆ ಮರಿಗಳನ್ನು ಸಹ ಗ್ರಾಮಸ್ಥರು ಕೊಚ್ಚಿ ಕೊಂದಿದ್ದಾರೆ.

    ಆಗಿದ್ದೇನು? ಬುಧವಾರ ಹೊಲದಲ್ಲಿ ಕೆಲಸ ಮಾಡುವ ವೇಳೆ ರೈತ ಗೊವಿಂದಪ್ಪನನ್ನ ನಾಗರಾಹಾವು ಕಚ್ಚಿ ಮೃತಪಟ್ಟಿದ್ದರು. ಗೋವಿಂದಪ್ಪ ಸಾವಿನಿಂದ ಸಿಟ್ಟಿಗೆದ್ದ ಗ್ರಾಮಸ್ಥರು ಹಾವನ್ನ ಹುಡುಕಿ ಕೊಂದಿದ್ದಾರೆ. ಅದೇ ಸ್ಥಳದಲ್ಲಿ 17 ಮರಿ ಹಾವುಗಳು ಕಂಡುಬಂದ ಹಿನ್ನಲೆಯಲ್ಲಿ 17 ಮರಿ ಹಾವುಗಳನ್ನು ಸಹ ಕೊಂದಿದ್ದಾರೆ.

    ಇನ್ನೂ ಹಾವು ಹಾಗೂ ಮರಿಗಳನ್ನ ಕೊಂದಿರುವ ಗ್ರಾಮಸ್ಥರು ಮೊಬೈಲ್‍ಗಳಲ್ಲಿ ವಿಡಿಯೋ ಸೆರೆ ಹಿಡಿದಿದ್ದಾರೆ. ಸದ್ಯ ಗ್ರಾಮದಲ್ಲಿ ಹಾವು ಕೊಂದ ವಿಚಾರದಲ್ಲಿ ಆತಂಕ ಸೃಷ್ಟಿಯಾಗಿದ್ದು, ಭಯದ ವಾತಾವರಣ ನಿರ್ಮಾಣವಾಗಿದೆ. ಹಾವುಗಳನ್ನು ಕೊಂದಿದ್ದಕ್ಕೆ ನಾಗಹತ್ಯಾ ಶಾಪ ಬರಬಹುದು ಎಂದು ಗ್ರಾಮದ ಹಿರಿಯರು ಮಾತನಾಡಿಕೊಳ್ಳುತ್ತಿದ್ದಾರೆ.

     

  • ಶೋಭಾ ಕರಂದ್ಲಾಜೆಯವರು ಪ್ರಭಾಕರ್ ಭಟ್ ಭಾಷಣ ಕೇಳಲಿ: ಸಂಸದೆಗೆ ಖಾದರ್ ತಿರುಗೇಟು

    ಶೋಭಾ ಕರಂದ್ಲಾಜೆಯವರು ಪ್ರಭಾಕರ್ ಭಟ್ ಭಾಷಣ ಕೇಳಲಿ: ಸಂಸದೆಗೆ ಖಾದರ್ ತಿರುಗೇಟು

    ಕೋಲಾರ: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ನಮ್ಮಿಂದ ಯಾವುದೇ ಭಯಭೀತಿಯ ವಾತಾವರಣ ನಿರ್ಮಾಣವಾಗಿಲ್ಲ. ಪ್ರಭಾಕರ್ ಭಟ್ ಅವ್ರ ಭಾಷಣಗಳು ಪ್ರಚೋದನಾಕಾರಿಯಾಗಿದೆ. ಹೀಗಾಗಿ ಸಂಸದೆ ಶೋಭಾ ಕರಂದ್ಲಾಜೆ ಅವರು ಒಮ್ಮೆ ಅವರ ಭಾಷಣ ಕೇಳಲಿ ಎಂದು ಆಹಾರ ಸಚಿವ ಯು ಟಿ ಖಾದರ್ ಸಂಸದೆ ಹೇಳಿಕೆಗೆ ತಿರುಗೇಟು ನೀಡಿದ್ರು.

    ರಂಜಾನ್ ಪ್ರಯುಕ್ತ ಕೋಲಾರ ಜಿಲ್ಲೆಯ ಮಾಲೂರು ತಾಲೂಕು ಕಾಂಗ್ರೆಸ್ ಮುಖಂಡ ಕೆ ವೈ ನಂಜೇಗೌಡ ಹಮ್ಮಿಕೊಂಡಿದ್ದ ಇಫ್ತಿಯಾರ್ ಕೂಟದಲ್ಲಿ ಭಾಗಿಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ರಮಾನಾಥ ರೈ ರಾಜೀನಾಮೆ ನೀಡುವ ಪ್ರಸ್ತಾಪವಿಲ್ಲ. ಬಿಜೆಪಿ ಜನರ ಭಾವನೆಗಳೊಂದಿಗೆ ಚೆಲ್ಲಾಟ ಆಡುತ್ತಿದೆ ಎಂದು ಅವರು ಬಿಜೆಪಿ ಮುಖಂಡರ ಆರೋಪವನ್ನ ತಳ್ಳಿ ಹಾಕಿದ್ರು.

    ಖಾಸಗಿ ಆಸ್ಪತ್ರೆಗಳ ವಿಧೇಯಕ ಮಂಡನೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಚಿವರು, ಖಾಸಗಿ ಆಸ್ಪತ್ರೆಗಳು ಮಾನವೀಯತೆಯಿಂದ ಚಿಂತಿಸಬೇಕು. ಸರ್ಕಾರದ ವಿಧೇಯಕಕ್ಕೆ ಎಲ್ಲರೂ ಬೆಂಬಲಿಸಬೇಕು ಎಂದು ಹೇಳಿದ ಅವರು, ಸಚಿವ ರಮೇಶ್ ಕುಮಾರ್ ಈ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇಟ್ಟಿದ್ದಾರೆ ಎಂದು ಪರೋಕ್ಷ ಬೆಂಬಲ ನೀಡಿದ್ರು.

    ವಿಧೇಯಕಕ್ಕೆ ಬಿಜೆಪಿ ಶಾಸಕರು ವಿರೋಧ ವ್ಯಕ್ತಪಡಿಸಿದ್ದಾರೆ, ಬಡವರ ಹಿತ ದೃಷ್ಟಿಯಿಂದ ಸರ್ಕಾರ ವಿಧೇಯಕ ಮಂಡನೆ ಮಾಡಿದೆ ಎಂದು ಸರ್ಕಾರದ ನಿರ್ಧಾರವನ್ನ ಸಮರ್ಥಿಸಿಕೊಂಡ್ರು.

     

  • ಮದುವೆ ಆರತಕ್ಷತೆ ಊಟ ಸೇವಿಸಿ 50 ಕ್ಕೂ ಹೆಚ್ಚು ಮಂದಿ ಅಸ್ವಸ್ಥ, ಆಸ್ಪತ್ರೆಗೆ ದಾಖಲು

    ಮದುವೆ ಆರತಕ್ಷತೆ ಊಟ ಸೇವಿಸಿ 50 ಕ್ಕೂ ಹೆಚ್ಚು ಮಂದಿ ಅಸ್ವಸ್ಥ, ಆಸ್ಪತ್ರೆಗೆ ದಾಖಲು

    ಕೋಲಾರ: ಮದುವೆ ಆರತಕ್ಷತೆ ಊಟ ಸೇವಿಸಿದ 50 ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿ ಜಿಲ್ಲಾಸ್ಪತ್ರೆ ಸೇರಿದಂತೆ ವಿವಿಧೆಡೆ ಚಿಕಿತ್ಸೆ ಪಡೆಯುತ್ತಿರುವ ಘಟನೆ ಕೋಲಾರದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

    ಕೋಲಾರದ ನುಕ್ಕನಹಳ್ಳಿ ಗ್ರಾಮದ ದಿವ್ಯ ಹಾಗೂ ಮುರಳಿ ಎಂಬವರ ಮದುವೆ ಇದೇ ಶನಿವಾರ-ಭಾನುವಾರ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ವೇಮಾರನಹಳ್ಳಿಯ ವರನ ಸ್ವಗ್ರಾಮದಲ್ಲಿ ನಡೆದಿತ್ತು. ಈ ಹಿನ್ನೆಲೆಯಲ್ಲಿ ದಿವ್ಯಾ ಅವರ ಸ್ವಗ್ರಾಮ ನುಕ್ಕನಹಳ್ಳಿಯಲ್ಲಿ ಭಾನುವಾರ ಆರತಕ್ಷತೆ ಆಯೋಜನೆ ಮಾಡಲಾಗಿತ್ತು. ಅರತಕ್ಷತೆ ಊಟ ತಿಂದ ನುಕ್ಕನಹಳ್ಳಿಯ 50 ಕ್ಕೂ ಹೆಚ್ಚು ಗ್ರಾಮಸ್ಥರಿಗೆ ವಾಂತಿ, ಬೇಧಿಯಾಗಿದ್ದು ಕಳೆದ ಎರಡು ದಿನಗಳಿಂದ ಅಸ್ವಸ್ಥರಾಗಿ ವಿವಿಧೆಡೆ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

    ಮೊದಲಿಗೆ ವಾಂತಿ, ಬೇಧಿಯಾಗಿ ಅಸ್ವಸ್ಥರಾಗಿರುವ 50ಕ್ಕೂ ಹೆಚ್ಚು ಜನರಲ್ಲಿ 10 ಕ್ಕೂ ಹೆಚ್ಚು  ಜನರ ಸ್ಥಿತಿ ಗಂಭೀರವಾಗಿದೆ. ಗಂಭೀರವಾಗಿರುವವರನ್ನ ಕೋಲಾರ ಜಿಲ್ಲಾಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಕೆಲ ಅಸ್ವಸ್ಥ ಗ್ರಾಮಸ್ಥರಿಗೆ ಗ್ರಾಮದ ಶಾಲೆಯೊಂದರಲ್ಲಿ ವೈದ್ಯರ ತಂಡ ಚಿಕಿತ್ಸೆ ನೀಡುತ್ತಿದ್ದು, ಜೀವಕ್ಕೆ ಯಾವುದೇ ತೊಂದರೆ ಇಲ್ಲ ಎಂದು ಸ್ಥಳದಲ್ಲೇ ಬೀಡುಬಿಟ್ಟಿರುವ ವೈದ್ಯರು ದೃಢಪಡಿಸಿದ್ದಾರೆ.

  • ರಾಜ್ಯದ ಹಲವೆಡೆ ಬೆಳ್ಳಂಬೆಳಗ್ಗೆ ಎಸಿಬಿ ದಾಳಿ- ಕೋಲಾರದಲ್ಲಿ ನರ್ಸಿಂಗ್ ಹೋಂ ಮೇಲೆ ರೇಡ್

    ರಾಜ್ಯದ ಹಲವೆಡೆ ಬೆಳ್ಳಂಬೆಳಗ್ಗೆ ಎಸಿಬಿ ದಾಳಿ- ಕೋಲಾರದಲ್ಲಿ ನರ್ಸಿಂಗ್ ಹೋಂ ಮೇಲೆ ರೇಡ್

    – ಕಲಬುರಗಿಯಲ್ಲಿ ಜೆಸ್ಕಾಂ ಎಂಜಿನಿಯರ್ ಮನೆ ಮೇಲೆ ದಾಳಿ

    ಬೆಂಗಳೂರು: ರಾಜ್ಯದ ವಿವಿಧ ಭಾಗಗಳಲ್ಲಿ ಬೆಳ್ಳಂಬೆಳಗ್ಗೆ ಎಸಿಬಿ ಅಧಿಕಾರಿಗಳು ಬೇಟೆ ಆರಂಭಿಸಿದ್ದಾರೆ.

    ರಾಜ್ಯ ಜಿಲ್ಲಾ ತರಬೇತಿ ಕೇಂದ್ರದ ಪ್ರಾಂಶುಪಾಲ ಡಾ.ಕುಮಾರ್‍ಗೌಡ ಮತ್ತವರ ಸ್ನೇಹಿತ ಪ್ರಕಾಶ್ ಅವರಿಗೆ ಸಂಬಂಧಿಸಿದ ನಾಲ್ಕು ಸ್ಥಳಗಳಲ್ಲಿ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಕೋಲಾರ ಜಿಲ್ಲೆಯ ಮುಳಬಾಗಿಲಿನಲ್ಲಿರುವ ಕುಮಾರ್ ಗೌಡ ಒಡೆತನದ ಸಾಯಿ ವಿಹಾರಿಕಾ ನರ್ಸಿಂಗ್ ಹೋಂ, ಮನೆ, ಕಚೇರಿ ಮತ್ತು ಬೆಂಗಳೂರಿನ ವಾಣಿಜ್ಯ ಮಳಿಗೆಗಳ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದು, ಕಡತಗಳ ಪರಿಶೀಲನೆ ನಡೆಸುತ್ತಿದ್ದಾರೆ.

    ಕಲಬುರಗಿಯಲ್ಲೂ ಎಸಿಬಿ ಅಧಿಕಾರಿಗಳು ಕಾರ್ಯಾಚರಣೆಗೆ ಇಳಿದಿದ್ದು, ಜೆಸ್ಕಾಂ ಎಇಇ ಸಹದೇವ ಮಾನಕೆರೆ ನಿವಾಸದ ಮೇಲೆ ದಾಳಿ ನಡೆಸಿದ್ದಾರೆ. ಆದಾಯಕ್ಕೂ ಮೀರಿ ಆಸ್ತಿ ಗಳಿಕೆ ಆರೋಪ ಹಿನ್ನೆಲೆಯಲ್ಲಿ ಜೇವರ್ಗಿ ಕಾಲೋನಿ ಮತ್ತು ಬೀದರ್ ನಗರದಲ್ಲಿ ಸಹದೇವಾ ಅವರಿಗೆ ಸೇರಿದ ಮನೆಗಳ ಮೇಲೆ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. ಹಾವೇರಿ ನಗರದ ಬಸವೇಶ್ವರ ನಗರದಲ್ಲಿರೋ ಕಂದಾಯ ನಿರೀಕ್ಷಕ ವಿಜಯಕುಮಾರ ಗುಡಿಗೇರಿ ಮನೆ ಮೇಲೆ ದಾಳಿ ನಡೆದಿದೆ.

    ದಾವಣಗೆರೆಯಲ್ಲಿ ಕೂಡ ಎಸಿಬಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಬೆಂಗಳೂರು ಕೇಂದ್ರ ವಲಯದ ಸಾರಿಗೆ ಆಯುಕ್ತ ಕೆ.ಟಿ.ಹಾಲಸ್ವಾಮಿಯ ಮನೆ ಮೇಲೆ ದಾಳಿ ನಡೆದಿದೆ. ಬೆಂಗಳೂರಿನ ಡಾಲರ್ಸ್ ಕಾಲೋನಿಯ ಮನೆ ಹಾಗೂ ಚನ್ನಗಿರಿ ತಾಲೂಕಿನ ಎನ್ ಗಾಣದಗಟ್ಟೆ ಗ್ರಾಮದಲ್ಲಿರುವ ಮನೆಯಲ್ಲಿ ಎಸಿಬಿ ಅಧಿಕಾರಿಗಳಿಂದ ದಾಳಿ ನಡೆದಿದ್ದು, ಗ್ರಾಮದಲ್ಲಿ 20 ಎಕರೆ ಅಡಿಕೆ ತೋಟ, ಮನೆ, ಟ್ರಾಕ್ಟರ್ ಸೇರಿದಂತೆ ಹಲವು ಆಸ್ತಿ ಪತ್ತೆಯಾಗಿದೆ. ದಾವಣಗೆರೆಯ ಎಸಿಬಿ ಅಧಿಕಾರಿ ಪ್ರಕಾಶ್ ಗೌಡ ಪಾಟೀಲ್ ಹಾಗೂ ಬೆಂಗಳೂರಿನ ಎಸಿಬಿ ಇನ್ಸ್ ಪೆಕ್ಟರ್ ರಿಂದ ತನಿಖೆ ಮುಂದುವರೆದಿದೆ.

    ಆದಾಯ ಮೀರಿ ಆಸ್ತಿ ಗಳಿಕೆ ಮಾಡಿದ್ದಾರೆಂಬ ದೂರಿನ ಹಿನ್ನಲೆಯಲ್ಲಿ ಯಾದಗಿರಿ ನಗರದ ಚಿತ್ತಾಪೂರ ರಸ್ತೆಯಲ್ಲಿರುವ ಕೆಬಿಜೆಎನ್‍ಎಲ್ ಸಾಹಯಕ ಎಂಜಿನಿಯರ ಚನ್ನಪ್ಪ ಕಂದಾಯ ನಿವಾಸದ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಯಾದಗಿರಿ ಎಸಿಬಿ ಡಿವೈಎಸ್‍ಪಿ ವಿರೇಶ ಕರಡಿಗುಡ್ಡ, ಸಿಪಿಐ ಯಶವಂತ ಬಿಸನಳ್ಳಿ ನೇತೃತ್ವದಲ್ಲಿ ದಾಳಿ ನಡೆದಿದ್ದು, ಮಹತ್ವದ ದಾಖಲೆ ಪರಿಶೀಲನೆ ನಡೆಸಿದ್ದಾರೆ.

    ರಾಯಚೂರು ಜಿಲ್ಲಾ ಪಂಚಾಯ್ತಿ ಕಾರ್ಯನಿರ್ವಾಹಕ ಅಭಿಯಂತರ ಬಿ.ಆರ್.ಗೌಡೂರು ಮನೆ ಹಾಗೂ ಕಚೇರಿ ಮೇಲೆ ಎಸಿಬಿ ದಾಳಿ ನಡೆದಿದೆ.

  • ಕೋಲಾರ ಬಂದ್ ಬಿಸಿ: ಊಟಕ್ಕೆ ಮದುವೆ ಮನೆಗಳಿಗೆ ಎಂಟ್ರಿ ಕೊಟ್ಟ ಪ್ರತಿಭಟನಾಕಾರರು

    ಕೋಲಾರ ಬಂದ್ ಬಿಸಿ: ಊಟಕ್ಕೆ ಮದುವೆ ಮನೆಗಳಿಗೆ ಎಂಟ್ರಿ ಕೊಟ್ಟ ಪ್ರತಿಭಟನಾಕಾರರು

    ಕೋಲಾರ: ಇಂದು ಕನ್ನಡಪರ ಸಂಘಟನೆಗಳು ನೀಡಿದ್ದ `ಕರ್ನಾಟಕ ಬಂದ್’ಗೆ ನಗರದಲ್ಲಿ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ಆದರೆ ಬಹುತೇಕ ಮದುವೆಗೆ ಬರಬೇಕಾದ ಜನ ಬರದೇ ಮಂಟಪಗಳು ಬಿಕೋ ಎನ್ನುತ್ತಿದ್ದವು.

    ನಗರದ ವಕೀಲ ಕೋದಂಡಪ್ಪನವರ ಮಗ ವೀರೇಂದ್ರ ಹಾಗೂ ಚಿತ್ರಾ ಎಂಬವರ ಮದುವೆಗೂ ಬಂದ್ ಬಿಸಿ ತಟ್ಟಿತ್ತು. ಬಂದ್‍ನಿಂದಾಗಿ ಮದುವೆಗಳಿಗೆ ಬರಬೇಕಾದ ಬಂಧುಗಳು ಹಾಗು ಸ್ನೇಹಿತರು ಬರದೇ ಇದ್ದಿದರಿಂದ ಕಲ್ಯಾಣ ಮಂಟಪಗಳು ಜನರಿಲ್ಲದೇ ಖಾಲಿ ಖಾಲಿಯಾಗಿತ್ತು.

    ಬಂಧುಗಳು ಬರದೇ ಇದಿದ್ದರಿಂದ ಮಾಡಿದ್ದ ಅಡುಗೆ ಹಾಗೆಯೇ ಉಳಿದಿತ್ತು. ಮದುವೆ ಮನೆಯವರ ಆಹ್ವಾನದ ಮೇರೆಗೆ ಹೋರಾಟಗಾರರೆಲ್ಲರೂ ಬಂದು ಊಟ ಮಾಡಿದ್ದಾರೆ. ಪ್ರತಿಭಟನೆ ಮಾಡಿ ಸುಸ್ತಾಗಿದ್ದ ಪ್ರತಿಭಟನಾಕಾರರು ರುಚಿಯಾದ ಊಟ ಮಾಡಿ ತಮ್ಮ ಹಸಿವು ನೀಗಿಸಿಕೊಂಡರು.

    https://www.youtube.com/watch?v=8OR7M716AWI

     

     

  • ಕರ್ನಾಟಕ ಬಂದ್: ಎಲ್ಲೆಲ್ಲಿ ಶಾಲಾ, ಕಾಲೇಜುಗಳಿಗೆ ರಜೆ ಘೋಷಣೆ?

    ಕರ್ನಾಟಕ ಬಂದ್: ಎಲ್ಲೆಲ್ಲಿ ಶಾಲಾ, ಕಾಲೇಜುಗಳಿಗೆ ರಜೆ ಘೋಷಣೆ?

    ಬೆಂಗಳೂರು: ಸೋಮವಾರ ಕನ್ನಡ ಸಂಘಟನೆಗಳು ಕರ್ನಾಟಕ ಬಂದ್ ಕರೆ ನೀಡಿದ್ದರೂ ಕೆಲ ಜಿಲ್ಲೆಗಳ ಶಾಲೆ ಮತ್ತು ಕಾಲೇಜುಗಳಿಗೆ ರಜೆ ಘೋಷಣೆಯಾಗಿದೆ.

    ಪರಿಸ್ಥಿತಿಗೆ ಅನುಗುಣವಾಗಿ ಸರ್ಕಾರಿ ಶಾಲಾ ಕಾಲೇಜುಗಳಿಗೆ ರಜೆ ನೀಡಲು ಜಿಲ್ಲಾಧಿಕಾರಿಗಳಿಗೆ ಅಧಿಕಾರ ನೀಡಲಾಗಿದೆ. ಖಾಸಗಿ ಶಾಲೆಗಳು ಆಡಳಿತ ಮಂಡಳಿಗಳು ಪರಿಸ್ಥಿತಿಯನ್ನು ನೋಡಿಕೊಂಡು ರಜೆಯನ್ನು ನೀಡಲು ಮುಂದಾಗಿದೆ.

    ಕೋಲಾರ, ಚಿಕ್ಕಬಳ್ಳಾಪುರದಲ್ಲಿ ಶಾಲಾ ಕಾಲೇಜುಗಳಿಗೆ ಜಿಲ್ಲಾಧಿಕಾರಿಗಳು ರಜೆ ಘೋಷಣೆ ಮಾಡಿದ್ದಾರೆ. ರಾಮನಗರದಲ್ಲಿ ಖಾಸಗಿ ಶಾಲೆಗಳಿಗೆ ಮಾತ್ರ ರಜೆ ಘೋಷಣೆಯಾಗಿದೆ.

    ಬೆಂಗಳೂರಿನ ಸರ್ಕಾರಿ ಶಾಲಾ ಕಾಲೇಜುಗಳಿಗೂ ರಜೆ ಇದೆಯೋ ಇಲ್ಲವೋ ಎನ್ನುವುದು ತಿಳಿದು ಬಂದಿಲ್ಲ. ಪಬ್ಲಿಕ್ ಟಿವಿ ಬೆಂಗಳೂರು ಡಿಸಿ ಶಂಕರ್ ಅವರನ್ನು ಸಂಪರ್ಕಿಸುವ ಪ್ರಯತ್ನ ನಡೆಸಿತ್ತು. ಆದರೆ ಶಂಕರ್ ಅವರ ಮೊಬೈಲ್ ಸ್ವಿಚ್ ಆಫ್ ಆದ ಹಿನ್ನೆಲೆಯಲ್ಲಿ ಗೊಂದಲ ಮುಂದುವರಿದಿದೆ.

    ಇದನ್ನೂ ಓದಿ: ಕರ್ನಾಟಕ ಬಂದ್: ಸೋಮವಾರ ಏನಿರುತ್ತೆ? ಏನ್ ಇರಲ್ಲ ಇಲ್ಲಿದೆ ಪೂರ್ಣ ಮಾಹಿತಿ