Tag: ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟ

  • ಒಂದು ವೋಟಿಗೆ ಲಕ್ಷ ಲಕ್ಷ -ಕೋಚಿಮುಲ್ ಚುನಾವಣೆಯಲ್ಲೂ ರೆಸಾರ್ಟ್ ರಾಜಕೀಯ ಬಲು ಜೋರು

    ಒಂದು ವೋಟಿಗೆ ಲಕ್ಷ ಲಕ್ಷ -ಕೋಚಿಮುಲ್ ಚುನಾವಣೆಯಲ್ಲೂ ರೆಸಾರ್ಟ್ ರಾಜಕೀಯ ಬಲು ಜೋರು

    ಚಿಕ್ಕಬಳ್ಳಾಪುರ: ಒಂದು ವೋಟಿಗೆ ಒಂದಲ್ಲ ಎರಡು ಲಕ್ಷ ಇದು ಲೋಕಸಭಾ ಚುನಾವಣೆಯನ್ನೇ ಮೀರಿಸುವ ಮಹಾ ಚುನಾವಣೆಯೊಂದು ರಾಜ್ಯದಲ್ಲಿ ನಡಿಯುತ್ತಿದೆ. ಹೌದು ಇಡೀ ದೇಶವೇ ಲೋಕಸಭಾ ಚುನಾವಣೆಯ ಗುಂಗಲ್ಲಿರುವಾಗ ರಾಜ್ಯದಲ್ಲಿ ಕೋಲಾರ-ಚಿಕ್ಕಬಳ್ಳಾಪುರ ಸಹಕಾರ ಸಂಘಗಳ ಹಾಲು ಒಕ್ಕೂಟದ ಚುನಾವಣೆ ಒಳಗೊಳಗೆ ಭಾರೀ ಸದ್ದು ಮಾಡುತ್ತಿದೆ.

    ಕೋಚಿಮುಲ್(ಕೋಲಾರ ಚಿಕ್ಕಬಳ್ಳಾಪುರ ಹಾಲು ಒಕ್ಕೂಟ) ಚುನಾವಣೆಯಲ್ಲಿ ರೆಸಾರ್ಟ್ ರಾಜಕೀಯ ಬಲು ಜೋರಾಗಿದ್ದು, ಕೋಟಿ ಕೋಟಿ ಕುರುಡು ಕಾಂಚಾಣ ಕುಣಿದಾಡುತ್ತಿದೆ. ಚಿಕ್ಕಬಳ್ಳಾಪುರ ಕ್ಷೇತ್ರದ ಕೋಚಿಮುಲ್ ನಿರ್ದೇಶಕರ ಆಯ್ಕೆಯಲ್ಲಿ ಕೋಟಿ ಕೋಟಿ ಕುರುಡು ಕಾಂಚಾಣ ಖರ್ಚಾಗುತ್ತಿದೆ. ಲೋಕಸಭಾ ಚುನಾವಣೆಯನ್ನೇ ಮೀರಿಸಿರುವ ಈ ಕೋಚಿಮುಲ್ ಚುನಾವಣೆಯಲ್ಲಿ ಒಂದು ವೋಟಿಗೆ ಒಂದರಿಂದ ಎರಡು ಲಕ್ಷ ರೂಪಾಯಿ ಖರ್ಚು ಮಾಡಲಾಗುತ್ತಿದೆ. ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಬೆಂಬಲಿತ ಹಾಗೂ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ನಡುವೆ ಭಾರೀ ಪೈಪೋಟಿ ಏರ್ಪಟ್ಟಿದೆ.

    ಮತಕ್ಕಾಗಿ ಪ್ರವಾಸ, ರೆಸಾರ್ಟ್ ವಾಸ್ತವ್ಯ:
    ಚಿಕ್ಕಬಳ್ಳಾಪುರ ಕ್ಷೇತ್ರದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಹಾಗೂ ಹಾಲಿ ನಿರ್ದೇಶಕರಾಗಿದ್ದ ಶಾಸಕ ಸುಧಾಕರ್ ಬೆಂಬಲಿಗ ಕೆ.ವಿ ನಾಗರಾಜ್ ಹಾಗೂ ಜೆಡಿಎಸ್ ಅಭ್ಯರ್ಥಿ ಭರಣಿ ವೆಂಕಟೇಶ್ ಶತಾಯಗತಾಯ ಗೆಲ್ಲಲೇಬೇಕೆಂಬ ಹಠಕ್ಕೆ ಬಿದ್ದಿದ್ದು, ಕೋಟಿ ಕೋಟಿ ಖರ್ಚು ಮಾಡುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

    ಈಗಾಗಲೇ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಕೆ.ವಿ ನಾಗರಾಜ್ 70ಕ್ಕೂ ಹೆಚ್ಚು ಮಂದಿ ಮತದಾರರನ್ನ ಗೋವಾ ಪ್ರವಾಸಕ್ಕೆ ಕರೆದೊಯ್ದು ಬೆಂಗಳೂರಿಗೆ ವಾಪಾಸ್ಸು ಕರೆತರುತ್ತಿದ್ದಾರೆ. ಕಳೆದ ಎರಡು ದಿನಗಳಿಂದ ಗೋವಾದಲ್ಲಿ ಮೋಜು ಮಸ್ತಿ ಮಾಡಿದ ಮತದಾರರು ಇಂದು ಗೋವಾದಿಂದ ನಿರ್ಗಮಿಸಿ ಕಾರವಾರದ ಮೂಲಕ ಬೆಂಗಳೂರಿನತ್ತ ಪಯಣ ಬೆಳೆಸಿದ್ದಾರೆ. ಈ ಗೋವಾ ಪ್ರವಾಸದಲ್ಲಿ ಚಿಕ್ಕಬಳ್ಳಾಪುರ ಶಾಸಕ ಸುಧಾಕರ್ ಬೆಂಬಲಿಗರು ಸಹ ಭಾಗವಹಿಸಿದ್ದಾರೆ. ತಡರಾತ್ರಿ ಮತದಾರರನ್ನ ಭೇಟಿ ಮಾಡಿ ಮಾತುಕತೆ ನಡೆಸಿ ಶಾಸಕ ಸುಧಾಕರ್ ಸಹ ಬೆಂಗಳೂರಿಗೆ ವಾಪಾಸ್ಸಾಗಿದ್ದಾರೆ ಎಂದು ತಿಳಿದುಬಂದಿದೆ. ಅಲ್ಲದೇ ತಲಾ ಮತದಾರರಿಗೆ ಒಂದು ಲಕ್ಷ ರೂ. ಹಣ ಕೊಡುವುದಾಗಿ ಅಮಿಷ ಹೊಡ್ಡಲಾಗಿದೆ ಎಂಬ ಮಾತುಗಳು ಕೂಡ ಕೇಳಿ ಬರುತ್ತಿದೆ.

    ಇತ್ತ ಜೆಡಿಎಸ್ ಅಭ್ಯರ್ಥಿ ಭರಣಿ ವೆಂಕಟೇಶ್ ಸಹ 60 ರಿಂದ 70 ಮಂದಿಯನ್ನ ಎರಡು ತಂಡಗಳಾಗಿ ಮೈಸೂರು, ಮಂಗಳೂರಿಗೆ ರೆಸಾರ್ಟ್ ವಾಸ್ತವ್ಯಕ್ಕೆ ಕರೆದುಕೊಂಡು ಹೋಗಿದ್ದಾರೆ. ಕಾಂಗ್ರೆಸ್‍ನವರು ತಲಾ ಒಂದು ವೋಟಿಗೆ ಒಂದು ಲಕ್ಷ ಕೊಡುತ್ತಿದ್ದರೇ, ನಾವೇನು ಕಡಿಮೆ ಇಲ್ಲವೆಂದು ಜೆಡಿಎಸ್ ಅಭ್ಯರ್ಥಿ ಸಹ ಒಂದಲ್ಲ ಒಂದೂವರೆ ತೆಗೆದುಕೊಳ್ಳಿ ಆದರೆ ಮಿಸ್ ಮಾಡದೇ ವೋಟ್ ನಮಗೆ ಹಾಕಿ ಅಂತಿದ್ದಾರೆ ಎನ್ನಲಾಗಿದೆ.

    ಈಗಾಗಲೇ ಗೋವಾ ರೆಸಾರ್ಟ್ ವಾಸ್ತವ್ಯ ಮುಗಿಸಿ ವಾಪಾಸ್ಸಾಗುತ್ತಿರುವ ಕಾಂಗ್ರೆಸ್ ಬೆಂಬಲಿತರು ದೇವನಹಳ್ಳಿ ಬಳಿಯ ಗೋಲ್ಡ್ ಫಿಂಚ್ ರೆಸಾರ್ಟ್ ನಲ್ಲಿ ವಾಸ್ತವ್ಯ ಹೂಡಲು ರೂಂ ಬುಕ್ ಮಾಡಲಾಗಿದೆ. ಮತ್ತೊಂದೆಡೆ ಜೆಡಿಎಸ್ ಬೆಂಬಲಿತರಿಗೆ ಕೋಲಾರದ ಎಸ್.ಎನ್ ರೆಸಾರ್ಟ್ ನಲ್ಲಿ ವಾಸ್ತವ್ಯಕ್ಕೆ ಸಿದ್ಧತೆಗಳು ನಡೆದಿವೆ ಎನ್ನಲಾಗಿದೆ.

    ಹೌದು ಪ್ರತಿಷ್ಠಿತ ಕೋಚಿಮುಲ್ ಚುನಾವಣೆ ನಾಳೆ ಕೋಲಾರದಲ್ಲಿ ನಡೆಯಲಿದ್ದು, ರೆಸಾರ್ಟ್ ಗಳಿಂದ ನೇರವಾಗಿ ಮತಕೇಂದ್ರಗಳತ್ತ ಮತದಾರರು ತೆರಳಲಿದ್ದಾರೆ. ಅಂದಹಾಗೆ ಚಿಕ್ಕಬಳ್ಳಾಪುರ ಕ್ಷೇತ್ರದಿಂದ 171 ಮತಗಳಿದ್ದು ಸೂಪರ್ ಸೀಡ್ ಅಗಿರುವ ಸಂಘಗಳು ಹೊರತುಪಡಿಸಿ 158 ಮಂದಿ ಮತದಾರರಿದ್ದಾರೆ. ಹೀಗಾಗಿ 80 ಮತಗಳನ್ನ ಪಡೆದವರು ಚಿಕ್ಕಬಳ್ಳಾಪುರ ಕ್ಷೇತ್ರದ ಕೋಚಿಮುಲ್ ನಿರ್ದೇಶಕರಾಗಿ ಆಯ್ಕೆಯಾಗಲಿದ್ದಾರೆ. ಹೀಗಾಗಿ ಇಬ್ಬರು ಅಭ್ಯರ್ಥಿಗಳು 80 ಮತಗಳನ್ನ ಪಡೆಯೋಕೆ ರೆಸಾರ್ಟ್ ರಾಜಕೀಯ, ಹಣದ ಅಮಿಷ ಸೇರಿ ನಾನಾ ತಂತ್ರಗಾರಿಕೆಗಳಲ್ಲಿ ತೊಡಗಿದ್ದಾರೆ.

    ಸಮ್ಮಿಶ್ರ ಸರ್ಕಾರದ ದೋಸ್ತಿಗಳೇ ಇಲ್ಲಿ ಪ್ರತಿಸ್ಪರ್ಧಿಗಳು:
    ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ದೋಸ್ತಿ ಸರ್ಕಾರ ನಡೆಯುತ್ತಿದ್ದರೆ ಇಲ್ಲಿ ಅದೇ ದೋಸ್ತಿ ಪಕ್ಷಗಳ ನಾಯಕರು ಮುಖಂಡರು ನಾನಾ ನೀನಾ ಅನ್ನೋ ಜಿದ್ದಾಜಿದ್ದಿಗೆ ಬಿದ್ದಿದ್ದಾರೆ. ಆಸಲಿಗೆ ಇದು ಕೋಲಾರ ಜಿಲ್ಲೆಯಲ್ಲಿ ಕೆ ಎಚ್ ಮುನಿಯಪ್ಪ ಬಣ ಹಾಗೂ ಸ್ಪೀಕರ್ ರಮೇಶ್ ಕುಮಾರ್ ಬಣಗಳ ನಡುವೆ ಶೀತಲಸಮರ ನಡೆಯುತ್ತಿದೆ ಎನ್ನಲಾಗಿದ್ದು, ತಮ್ಮ ತಮ್ಮ ಅಭ್ಯರ್ಥಿಗಳ ಗೆಲುವಿಗಾಗಿ ಒಳಗೊಳಗೆ ನಾಯಕರು ಮುಸುಕಿನ ಗುದ್ದಾಟ ತೆರೆಮರೆಯ ಕಸರತ್ತುಗಳನ್ನ ನಡೆಸುತ್ತಿದ್ದಾರೆ. ಮತ್ತೊಂದೆಡೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲೂ ಸಹ ಚಿಕ್ಕಬಳ್ಳಾಪುರ ಶಾಸಕ ಸುಧಾಕರ್ ಹಾಗೂ ಗೌರಿಬಿದನೂರು ಶಾಸಕ ಸಚಿವ ಎನ್.ಎಚ್ ಶಿವಶಂಕರರೆಡ್ಡಿ ಬಣದ ನಡುವೆ ಪೈಪೋಟಿ ಇದೆ ಎನ್ನಲಾಗಿದೆ.

    ಕೋಲಾರ-ಚಿಕ್ಕಬಳ್ಳಾಪುರ ಎರಡು ಜಿಲ್ಲೆಗಳಲ್ಲಿ ನೀರಿಗೆ ಬರ ಇದ್ದರೂ ಹಾಲಿಗೆ ಬರ ಇಲ್ಲ. ಹೈನುಗಾರಿಕೆಯನ್ನ ತಮ್ಮ ಬದುಕಿನ ಆಧಾರ ಅರ್ಥಿಕ ಮೂಲ ಮಾಡಿಕೊಂಡಿರುವ ಬಹುತೇಕ ರೈತರು ಕೃಷಿ ಕಾಯಕದ ಜೊತೆ ಹೈನೋದ್ಯಮವನ್ನೂ ನೆಚ್ಚಿಕೊಂಡಿದ್ದಾರೆ. ಆದರೆ ಇಂತಹ ರೈತರ ಮತ ಪಡೆದು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗುವ ನಾಯಕರು ಅವರ ಮತ ಭಿಕ್ಷೆಯಿಂದ ಅಧ್ಯಕ್ಷ ಸ್ಥಾನ ಅಲಂಕರಿಸಿ ಇಂದು ಕುರುಡು ಕಾಂಚಾಣಕ್ಕೆ ತಮ್ಮ ಮತ ಮಾರಿಕೊಳ್ಳುತ್ತಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    ನಿರ್ದೇಶಕರಾಗುವ ಹಠ ಯಾಕೆ?
    ಕೆಎಂಎಫ್ ಕರ್ನಾಟಕ ಮಿಲ್ಕ್ ಫೆಡರೇಷನ್‍ನ ಅಂಗ ಸಂಸ್ಥೆ ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ಇಡೀ ರಾಜ್ಯದಲ್ಲಿ ಅತಿ ಹೆಚ್ಚು ಹಾಲು ಉತ್ಪಾದನೆಯಾಗುವ ಎರಡನೇ ಒಕ್ಕೂಟ. ಹೀಗಾಗಿ ಒಕ್ಕೂಟದಲ್ಲಿ ಪ್ರತಿ ವರ್ಷ ಕೋಟಿ ಕೋಟಿ ವ್ಯಾಪಾರ, ವ್ಯವಹಾರ, ವಹಿವಾಟು ನಡೆಯುತ್ತೆ. ಪ್ರತಿಷ್ಠಿತ ಒಕ್ಕೂಟದ ನಿರ್ದೇಶಕರಾದರೆ ಸ್ಥಳೀಯವಾಗಿ ರಾಜಕೀಯ ಲಾಭ ಜೊತೆಗೆ ಹಣದ ಲಾಭವೂ ಒದಗಿಬರುತ್ತೆ. ಹೀಗಾಗಿ ರಾಜಕೀಯ ನಾಯಕರಿಗೆ ಚುನಾವಣೆಯಲ್ಲಿ ತಮ್ಮ ತಮ್ಮ ಬೆಂಬಲಿತರನನ್ನ ಗೆಲ್ಲಿಸಿಕೊಂಡು, ಪ್ರತಿಷ್ಠಿತ ಸಂಸ್ಥೆಯ ಅಧ್ಯಕ್ಷರಾಗಿ ಅಧಿಕಾರದ ಹಿಡಿತ ಸಾಧಿಸುವುದು ಅದರಿಂದ ರಾಜಕೀಯ ಲಾಭ ಪಡೆಯುವ ಲೆಕ್ಕಾಚಾರವಾಗಿದೆ.

  • ಕೋಲಾರ, ಚಿಕ್ಕಬಳ್ಳಾಪುರದ ಹಾಲು ಉತ್ಪಾದಕರಿಗೆ ರೇವಣ್ಣ ಶಾಕ್!

    ಕೋಲಾರ, ಚಿಕ್ಕಬಳ್ಳಾಪುರದ ಹಾಲು ಉತ್ಪಾದಕರಿಗೆ ರೇವಣ್ಣ ಶಾಕ್!

    ಕೋಲಾರ: ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ದಿಂದ ಸರಬರಾಜು ಆಗುತ್ತಿದ್ದ ಗುಡ್‍ಲೈಫ್ ಹಾಲನ್ನು ಖಡಿತಗೊಳಿಸುವ ನಿರ್ಧಾರವನ್ನು ಸಚಿವ ರೇವಣ್ಣ ಅವರು ನೀಡಿದ್ದಾರೆ ಎನ್ನಲಾಗಿದ್ದು, ಈ ನಿರ್ಧಾರವನ್ನು ಖಂಡಿಸಿ ಕೋಲಾರದಲ್ಲಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.

    ಸಮ್ಮಿಶ್ರ ಸರ್ಕಾರದ ಸೂಪರ್ ಸಿಎಂ ಎಂದೇ ಬಿಂಬಿತರಾಗುತ್ತಿರುವ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ, ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟದಿಂದ ಸೈನ್ಯಕ್ಕೆ ಕಳುಹಿಸಿಕೊಡುತ್ತಿದ್ದ ಕೋಚಿಮುಲ್ ಹಾಲಿನಲ್ಲಿ ಹಾಸನಕ್ಕೆ ಅರ್ಧದಷ್ಟು ಪಾಲು ನೀಡಲು ಮುಂದಾಗಿದ್ದು, ಅವರ ನಿಲುವನ್ನು ಬದಲಿಸುವಂತೆ ಕೋಲಾರ ನಗರದ ಜೂನಿಯರ್ ಕಾಲೇಜು ವೃತ್ತದಲ್ಲಿ ಪ್ರತಿಕೃತಿ ದಹಿಸುವುದರ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.

    ಕಳೆದ ಏಳೆಂಟು ವರ್ಷಗಳಿಂದ ಕೋಲಾರ ಹಾಲು ಒಕ್ಕೂಟದಲ್ಲಿ ತಯಾರಾಗುವ, ಟೆಟ್ರಾ ಪ್ಯಾಕ್‍ನ ಗುಡ್ ಲೈಫ್ (ಯು.ಹೆಚ್.ಟಿ) ಹಾಲನ್ನು ದೇಶ ಕಾಯುವ ಯೋಧರು, ತಿರುಪತಿ ಸೇರಿದಂತೆ ವಿವಿಧೆಡೆ ಪ್ರತಿ ವರ್ಷಕ್ಕೆ 80 ಲಕ್ಷ ಲೀಟರ್ ಹಾಲು ಕಳಿಸಿಕೊಡಲಾಗುತ್ತಿತ್ತು. ಆದರೆ ಸಚಿವ ರೇವಣ್ಣ ಅವರ ಕೈವಾಡದಿಂದಾಗಿ ಸುಮಾರು 40 ಲಕ್ಷ ಲೀಟರ್ ಹಾಲನ್ನ ಕಡಿತಗೊಳಿಸಿರುವುದರಿಂದ, ಈಗಾಗಲೇ ನಷ್ಟದಲ್ಲಿರುವ ಕೋಚಿಮಲ್‍ಗೆ ಹಾಗೂ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.

    ಯಾವುದೇ ಶಾಶ್ವತ ನೀರಾವರಿ ಆಧಾರವಿಲ್ಲದಿದ್ದರೂ ಹೈನೋದ್ಯಮವನ್ನೇ ನಂಬಿ ಬದುಕುತ್ತಿರುವ ಅವಳಿ ಜಿಲ್ಲೆಯ ರೈತರಿಗೆ ನಷ್ಟವಾಗುವ ಆತಂಕ ಎದುರಾಗಿದ್ದು, ಹಾಸನಕ್ಕೆ ಪಾಲು ಕೇಳಿರುವ ಸಚಿವರ ವಿರುದ್ಧ ಆಕ್ರೋಶವನ್ನ ವ್ಯಕ್ತಪಡಿಸಿದ್ದಾರೆ.

    ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟದಿಂದ ಸರಬರಾಜು ಮಾಡಲಾಗುತ್ತಿದ್ದ 40 ಲಕ್ಷ ಲೀಟರ್ ಹಾಲನ್ನು ಖಡಿತ ಮಾಡಲು ಮುಂದಾಗಿರುವ ಸಚಿವ ರೇವಣ್ಣ ಅವರು, ತಮ್ಮ ನಿರ್ಧಾರವನ್ನು ಈ ಕೂಡಲೇ ವಾಪಸ್ ಪಡೆಯಬೇಕು, ಇಲ್ಲವಾದಲ್ಲಿ ಜಿಲ್ಲೆಲ್ಲಿ ಬಂದ್ ಮಾಡಿ ಸರ್ಕಾರದ ವಿರುದ್ಧ ಉಗ್ರ ಹೋರಾಟ ನಡೆಸುವುದಾಗಿ ಪ್ರತಿಭಟನಾಕಾರರು ಎಚ್ಚರಿಕೆ ನೀಡಿದ್ದಾರೆ.