Tag: ಕೋರ್ಟ್ ಆದೇಶ

  • ಕೋರ್ಟ್ ಸ್ಟೇ ನೀಡದೇ ಇದ್ರೆ ಬಿಎಸ್‍ವೈ ವಿರುದ್ಧ 30 ಎಫ್‍ಐಆರ್ ಆಗ್ತಿತ್ತು: ಗೋ ಮಧುಸೂದನ್

    ಕೋರ್ಟ್ ಸ್ಟೇ ನೀಡದೇ ಇದ್ರೆ ಬಿಎಸ್‍ವೈ ವಿರುದ್ಧ 30 ಎಫ್‍ಐಆರ್ ಆಗ್ತಿತ್ತು: ಗೋ ಮಧುಸೂದನ್

    ಬೆಂಗಳೂರು: ಬಿಎಸ್ ಯಡಿಯೂರಪ್ಪ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಹಾಕಿದ್ದ ಎಫ್‍ಐಆರ್‍ಗಳಿಗೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡುವ ಮೂಲಕ ಸರ್ಕಾರಕ್ಕೆ ತಪರಾಕಿ ಹಾಕಿದೆ ಎಂದು ಬಿಜೆಪಿ ವಕ್ತಾರ ಗೋ ಮಧುಸೂದನ್ ಹೇಳಿದ್ದಾರೆ.

    ಹೈಕೋರ್ಟ್ ಆದೇಶ ಪ್ರಕಟವಾದ ಬಳಿಕ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಯಡಿಯೂರಪ್ಪ ಅವರ ಮೇಲೆ ಒಂಂದೇ ಪ್ರಕರಣಕ್ಕೆ ಎರಡು ಎಫ್‍ಐಆರ್‍ಗಳನ್ನು ಎಸಿಬಿ ಹಾಕಿರುವುದು ಸರಿಯಲ್ಲ ಅಂತಾ ಕೋರ್ಟ್ ತಿಳಿಸಿದೆ. ಅಷ್ಟೇ ಅಲ್ಲದೇ ಇನ್ನೂ 25-30 ಎಫ್‍ಐಆರ್‍ಯನ್ನು ಬಿಎಸ್‍ವೈ ವಿರುದ್ಧ ಹಾಕುವುದು ಎಸಿಬಿನ ಉದ್ದೇಶವಾಗಿತ್ತು. ಆದರೆ ಅದಕ್ಕೆಲ್ಲಾ ಕೋರ್ಟ್ ತಡೆ ನೀಡಿದೆ ಎಂದು ಸಂತಸದಿಂದ ಹೇಳಿದರು.

    ಶಿವರಾಂ ಕಾರಂತ ಬಡಾವಣೆಗೆ ನೋಟಿಫಿಕೇಷನ್ ಆಗಿದ್ದ ಭೂಮಿಯಲ್ಲಿ ಒಂದಿಂಚೂ ಭೂಮಿಯನ್ನು ಬಿಡಿಎ ಬಿಟ್ಟುಕೊಟ್ಟಿಲ್ಲ. ಹಾಗಾಗಿ ನೊಟಿಫೈ ಆಗಿದ್ದ ಭೂಮಿ ಡಿನೊಟಿಫೈ ಆಗೇ ಇಲ್ಲ. ಆದ್ದರಿಂದ ಎಸಿಬಿ ಎಫ್‍ಐಆರ್ ಹಾಕಿರುವುದೇ ಕಾನೂನು ಬಾಹಿರವಾಗಿದೆ. ಇನ್ನೂ ಮುಂದೆ ಅವರ ವಿರುದ್ಧ ದೂರು ದಾಖಲಿಸಿಕೊಳ್ಳಲು ಎಸಿಬಿಗೆ ಅಧಿಕಾರವೇ ಇಲ್ಲ ಎಂದು ವ್ಯಂಗ್ಯವಾಗಿ ಹೇಳಿದ್ದಾರೆ.

    ಯಡಿಯೂರಪ್ಪ ಅವರು ರಾಜ್ಯಾದ್ಯಂತ ಪ್ರವಾಸ ಮಾಡಲು ನಿರ್ಧಾರ ಮಾಡಿದ್ದರು. ಆದರೆ ಅದನ್ನು ಸಿಎಂ ಸಿದ್ದರಾಮಯ್ಯ ತಡೆಯುವ ಉದ್ದೇಶವನ್ನು ಇಟ್ಟುಕೊಂಡಿದ್ದರು. ಆದರೆ ಇಂದು ಕೋರ್ಟ್ ನೀಡಿರುವ ತೀರ್ಪಿನಿಂದಾಗಿ ಸಿಎಂಗೆ ಮುಖಭಂಗವಾಗಿದೆ ಎಂದರು.

    ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಡಾ.ಶಿವರಾಮ ಖಾರಂತ ಬಡಾವಣೆ ನಿರ್ಮಾಣಕ್ಕಾಗಿ ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ (ಬಿಡಿಎ) ವಶಪಡಿಸಿಕೊಂಡಿದ್ದ ಜಮೀನಿನಲ್ಲಿ 257 ಎಕರೆ 20.5 ಗುಂಟೆ ಜಮೀನನ್ನು ಅಕ್ರಮವಾಗಿ ಡಿನೋಟಿಫಿಕೇಷನ್ ಮಾಡಲು ಆದೇಶಿಸಿದ್ದರು ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಎಸಿಬಿ ಎಫ್‍ಐಆರ್ ದಾಖಲಾಗಿತ್ತು.

    ಹೈಕೋರ್ಟ್ ತಡೆಯಾಜ್ಞೆ:
    ಎಫ್‍ಐಆರ್ ದಾಖಲಿಸಲು ವಿಳಂಬ ಮಾಡಲಾಗಿದ್ದು, ಪ್ರಾಥಮಿಕ ತನಿಖೆಯಲ್ಲಿ ಆರೋಪ ಸಾಬೀತು ಮಾಡುವ ದಾಖಲೆಗಳಿಲ್ಲ ಎಂದು ಹೇಳಿ ನ್ಯಾ. ಅರವಿಂದ್ ಕುಮಾರ್ ಅವರಿದ್ದ ಏಕಸದಸ್ಯ ಪೀಠ ಬಿಎಸ್‍ವೈ ವಿರುದ್ಧ ದಾಖಲಾಗಿದ್ದ ಎಫ್‍ಐಆರ್‍ಗೆ ತಡೆಯಾಜ್ಞೆ ನೀಡಿದೆ. ಡಿನೋಟಿಫೈ ಮಾಡಿ ಲಾಭ ಮಾಡಿಕೊಂಡಿರುವ ಬಗ್ಗೆ ಸೂಕ್ತ ಸಾಕ್ಷ್ಯಗಳಿಲ್ಲ. ಅಷ್ಟೇ ಅಲ್ಲದೇ ಒಂದೇ ದೂರಿನಲ್ಲಿ ಎರಡು ಎಫ್‍ಐಆರ್ ದಾಖಲಿಸುವುದು ಕಾನೂನು ಬಾಹಿರ ಎಂದು ನ್ಯಾ. ಅರವಿಂದ್ ಕುಮಾರ್ ಅಭಿಪ್ರಾಯಪಟ್ಟು ತಡೆಯಾಜ್ಞೆ ನೀಡಿದ್ದಾರೆ.