Tag: ಕೋಯಿಕ್ಕೋಡ್

  • 1 ವರ್ಷದ ಬಳಿಕ ಕೇರಳ ವಿಮಾನ ದುರಂತಕ್ಕೆ ಕಾರಣ ಸಿಕ್ತು- ತನಿಖಾ ವರದಿಯಲ್ಲಿ ಏನಿದೆ?

    1 ವರ್ಷದ ಬಳಿಕ ಕೇರಳ ವಿಮಾನ ದುರಂತಕ್ಕೆ ಕಾರಣ ಸಿಕ್ತು- ತನಿಖಾ ವರದಿಯಲ್ಲಿ ಏನಿದೆ?

    ನವದೆಹಲಿ: ಪೈಲಟ್ ಮಾರ್ಗಸೂಚಿಯನ್ನು ಸರಿಯಾಗಿ ಪಾಲನೆ ಮಾಡದ ಕಾರಣ ಕೇರಳದ ಕೋಯಿಕ್ಕೋಡ್‍ನಲ್ಲಿ ವಿಮಾನ ದುರಂತ ಸಂಭವಿಸಿದೆ ಎಂದು ವಿಮಾನ ಅಪಘಾತ ತನಿಖಾ ಬ್ಯೂರೋ(ಎಎಐಬಿ) ಹೇಳಿದೆ.

    ನಾಗರಿಕ ವಿಮಾನಯಾನ ಸಚಿವಾಲಯದ ವಿಭಾಗವಾದ ಎಎಐಬಿ 257 ಪುಟಗಳ ವರದಿಯನ್ನು ಶನಿವಾರ ಸರ್ಕಾರಕ್ಕೆ ಸಲ್ಲಿಸಿದೆ. ವರದಿಯಲ್ಲಿ ವಿಮಾನವನ್ನು ಚಲಾಯಿಸುತ್ತಿದ್ದ ಪೈಲಟ್ ಲ್ಯಾಂಡಿಂಗ್ ವೇಳೆ ಪಾಲಿಸ ಬೇಕಾದ ಮಾರ್ಗಸೂಚಿಯನ್ನು ಸರಿಯಾಗಿ ಪಾಲನೆ ಮಾಡಲಿಲ್ಲ ಎಂದು ಹೇಳಿದೆ.

    ಟೇಬಲ್ ಟಾಪ್ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಆಗುವ ಸಮಯದಲ್ಲಿ ಭಾರೀ ಮಳೆ ಬರುತ್ತಿತ್ತು. ಇದರಿಂದಾಗಿ ಪೈಲಟ್‍ಗೆ ರನ್‍ವೇ ಸರಿಯಾಗಿ ಗೋಚರಿಸಲಿಲ್ಲ. ಈ ವೇಳೆ ‘ಗೋ ಅರೌಂಡ್’ ಎಂಬ ಸಂದೇಶವನ್ನು ಏರ್ ಟ್ರಾಫಿಕ್ ಕಂಟ್ರೋಲ್(ಎಟಿಸಿ) ರೂಮಿಗೆ ಕಳುಹಿಸಿದ ಬಳಿಕವೂ ಪೈಲಟ್ ಟಚ್‍ಡೌನ್ ವಲಯವನ್ನು ದಾಟಿ ರನ್‍ವೇಯ ಅರ್ಧ ದೂರದಲ್ಲಿ ಲ್ಯಾಂಡ್ ಮಾಡಿದ್ದಾರೆ. ಇದರಿಂದಾಗಿ ಈ ದುರ್ಘಟನೆ ಸಂಭವಿಸಿದೆ ಎಂದು ಹೇಳಿದೆ. ಇದನ್ನೂ ಓದಿ: ವಿಮಾನದ ಬ್ಲ್ಯಾಕ್‌ ಬಾಕ್ಸ್‌ ಪತ್ತೆ – ಹೇಗೆ ಕೆಲಸ ಮಾಡುತ್ತೆ? ಬೆಂಕಿಯಲ್ಲಿ ಸುಟ್ಟು ಹೋಗಲ್ಲ ಯಾಕೆ?

    ವಿಮಾನವನ್ನು ಸುರಕ್ಷಿತವಾಗಿ ಲ್ಯಾಂಡ್ ಮಾಡಲು ಸಾಧ್ಯವಾಗುವುದಿಲ್ಲ ಎಂದು ಪೈಲಟ್‍ಗೆ ಅನಿಸಿದಾಗ ಗೋ ಅರೌಂಡ್ ಸಂದೇಶವನ್ನು ಕಳುಹಿಸುತ್ತಾರೆ. ಈ ಸಂದೇಶ ಬಂದ ಕೂಡಲೇ ವಿಮಾನ ಲ್ಯಾಂಡ್ ಮಾಡಲು ಪೈಲಟ್‍ಗೆ ಸಾಧ್ಯವಾಗುವುದಿಲ್ಲ ಎನ್ನುವುದು ಎಟಿಸಿಯಲ್ಲಿ ಕಾರ್ಯನಿರ್ವಹಣೆ ಮಾಡುವವರಿಗೆ ತಿಳಿಯುತ್ತದೆ. ಕೂಡಲೇ ಅವರು ಹತ್ತಿರದಲ್ಲೇ ಎಲ್ಲಿ ಲ್ಯಾಂಡಿಂಗ್ ಮಾಡಬಹುದು ಎಂಬುದರ ಬಗ್ಗೆ ಮಾಹಿತಿ ನೀಡುತ್ತಾರೆ.

    ವಿಮಾನದ ಗಾಜಿನ ವೈಪರ್ ದೋಷಪೂರಿತವಾಗಿತ್ತು. ಪ್ರತಿಕೂಲ ಹವಾಮಾನದಿಂದ ಲ್ಯಾಂಡಿಂಗ್ ಮಾಡುವುದು ಕಷ್ಟ ಎನ್ನುವುದು ಪೈಲಟ್‍ಗೆ ಗೊತ್ತಿತ್ತು. ಈ ವಿಚಾರಗಳು ಪೈಲಟ್‍ಗೆ ಮೊದಲೇ ಗೊತ್ತಿತ್ತು.  ಆದರೂ ಪೈಲಟ್ ಟಚ್‍ಡೌನ್ ವಲಯ(ವಿಮಾನದ ಚಕ್ರಗಳು ಮೊದಲು ರನ್‍ವೇಯನ್ನು ಸ್ಪರ್ಶಿಸುವ ಸ್ಥಳ) ದಾಟಿ ಅರ್ಧ ದೂರಲ್ಲಿ ಲ್ಯಾಂಡಿಂಗ್ ಮಾಡಿದ್ದಾರೆ. ಇದರಿಂದಾಗಿ ವಿಮಾನ ನಿಯಂತ್ರಣಕ್ಕೆ ಸಿಗದೇ ಟೇಬಲ್ ಟಾಪ್ ರನ್‍ವೇಯಿಂದ ಕೆಳಗೆ ಜಾರಿ ಬಿದ್ದಿದೆ ಎಂದು ವರದಿ ತಿಳಿಸಿದೆ. ಇದನ್ನೂ ಓದಿ: ಯುದ್ಧವಿಮಾನವನ್ನು ಹಾರಿಸಿದ್ದ ಪೈಲಟ್‌ ಸಾಠೆ 2 ಬಾರಿ ಲ್ಯಾಂಡಿಂಗ್‌ಗೆ ಪ್ರಯತ್ನಿಸಿದ್ರು

    ದುಬೈಯಿಂದ ವಂದೇ ಭಾರತ್ ಮಿಷನ್ ಅಡಿ 2020ರ ಆಗಸ್ಟ್ 7ರಂದು 184 ಪ್ರಯಾಣಿಕರನ್ನು ಹೊತ್ತುಕೊಂಡು ಏರ್ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನ ಕೋಯಿಕ್ಕೊಂಡಿಗೆ ಬಂದಿತ್ತು. ಈ ವೇಳೆ ರನ್‍ವೇ ಸರಿಯಾಗಿ ಕಾಣಿಸದ ಹಿನ್ನೆಲೆಯಲ್ಲಿ ವಿಮಾನ ಕೆಳಗೆ ಜಾರಿ ಬಿದ್ದ ಪರಿಣಾಮ ಇಬ್ಬರು ಪೈಲಟ್ ಸೇರಿದಂತೆ 21 ಮಂದಿ ಮೃತಪಟ್ಟಿದ್ದರು. ಇದನ್ನೂ ಓದಿ: ‘ಕೊರೊನಾ ಕುರಿತು ಹರಟೆ’- ಪಾಕ್ ವಿಮಾನ ದುರಂತಕ್ಕೆ ಪೈಲಟ್‍ಗಳ ನಿರ್ಲಕ್ಷ್ಯವೇ ಕಾರಣ

    ಏನಿದು ಟೇಬಲ್ ಟಾಪ್ ವಿಮಾನ ನಿಲ್ದಾಣ?
    ಸುತ್ತಲೂ ಆಳ ಕಣಿವೆಯಿಂದ ಕೂಡಿ, ಬೆಟ್ಟದ ತುದಿಯಲ್ಲಿ ರನ್ ವೇ ಇರುವ ನಿಲ್ದಾಣಗಳನ್ನು ಟೇಬಲ್ ಟಾಪ್ ವಿಮಾನ ನಿಲ್ದಾಣ ಎಂದು ಗುರುತಿಸಲಾಗಿದೆ. ಮಂಗಳೂರು ಹೊರತು ಪಡಿಸಿ ದೇಶದಲ್ಲಿ ಕೋಯಿಕ್ಕೋಡ್‍ ಮತ್ತು ಲೆಂಗ್‍ಪುಯಿನಲ್ಲಿ ಈ ರೀತಿಯ ವಿಮಾನ ನಿಲ್ದಾಣಗಳನ್ನು ಕಾಣಬಹುದು.

  • ರೆಡಿಯಾಗಿ ಮದ್ವೆ ಮಂಟಪಕ್ಕೆ ಬರ್ತಿದ್ದ ವರನ ಮೇಲೆ ವಧುವಿನ ಕಡೆಯವ್ರಿಂದ ದಾಳಿ!

    ರೆಡಿಯಾಗಿ ಮದ್ವೆ ಮಂಟಪಕ್ಕೆ ಬರ್ತಿದ್ದ ವರನ ಮೇಲೆ ವಧುವಿನ ಕಡೆಯವ್ರಿಂದ ದಾಳಿ!

    – ಮಾರ್ಗಮಧ್ಯೆಯೇ ಕಾರಿನ ಗಾಜು ಪುಡಿಗೈದ್ರು
    – ಮಾರಣಾಂತಿಕ ಹಲ್ಲೆಯಿಂದ ವರ ಪಾರು

    ತಿರುವನಂಪುರ: ಮದುವೆ ಮಂಟಪಕ್ಕೆ ಬರುತ್ತಿದ್ದ ವರನ ಮೇಲೆ ವಧುವಿನ ಸಂಬಂಧಿಕರೇ ಹಲ್ಲೆ ಮಾಡಿರುವ ಘಟನೆ ಕೋಯಿಕ್ಕೋಡ್ ನಲ್ಲಿ ನಡೆದಿದೆ.

    ಈ ಘಟನೆ ಗುರುವಾರ ಸಂಜೆ ಕೀಜರಿಯೂರ್ ನ ಕಣ್ಣೋತ್ ನಲ್ಲಿ ನಡೆದಿದೆ. ನಾಡೆರಿ ಮಂಜಾಲಾದ್ ಮೂಲದ ಕುಞಮೊಹಮ್ಮದ್ ಪುತ್ರ ಮೊಹಮ್ಮದ್ ಸಾಲಿಹ್ (29) ಮೇಲೆ ಈ ಹಲ್ಲೆ ನಡೆದಿದೆ.

    ಕೀಝರಿಯೂರಿನ ನಿವಾಸಿ ಯುವತಿಯ ಜೊತೆ ಮೊಹಮ್ಮದ್ ಸಾಲಿಹ್ ಎರಡು ತಿಂಗಳ ಹಿಂದೆಯೇ ರಿಜಿಸ್ಟರ್ ಮದುವೆಯಾಗಿದ್ದನು. ಆ ಬಳಿಕ ಸಂಪ್ರದಾಯದಂತೆ ಮದುವೆ ಸಮಾರಂಭ ನಡೆಸಲು ಸಾಲಿಹ್ ಕುಟುಂಬ ನಿರ್ಧರಿಸಿತ್ತು. ಈ ಹಿನ್ನೆಲೆಯಲ್ಲಿ ಅದ್ಧೂರಿ ಮದುವೆಗಾಗಿ ಮಂಟಪ ಕೂಡ ಸಜ್ಜಾಗಿತ್ತು.

    ಇತ್ತ ಸಂಪ್ರದಾಯದಂತೆ ವರ ತನ್ನ ಗೆಳೆಯರ ಜೊತೆ ಕಾರಿನಲ್ಲಿ ಮಂಟಪಕ್ಕೆ ತೆರಳುತ್ತಿದ್ದನು. ಈ ವಿಚಾರ ತಿಳಿದ ವಧುವಿನ ಕುಟುಂಬಸ್ಥರು ಮಾರ್ಗಮಧ್ಯೆಯೇ ವರನನ್ನು ತಡೆದಿದ್ದಾರೆ. ವರ ಹಾಗೂ ಆತನ ಗೆಳೆಯರ ಮೇಲೂ ಹಲ್ಲೆ ಮಾಡಿದ್ದಾರೆ.

    ಮಚ್ಚಿನಿಂದ ಕಾರಿನ ಗಾಜಿನ ಕಿಟಕಿಯನ್ನು ಪುಡಿಗೈದಿದ್ದಾರೆ. ಅಲ್ಲದೆ ಸಾಲಿಹ್ ಮೇಲೆ ಮಾರಣಾಂತಿಕ ದಾಳಿ ಮಾಡಲು ಯತ್ನಿಸಿದ್ದಾರೆ. ಈ ವೇಳೆ ಕಾರನ್ನು ವೇಗವಾಗಿ ಚಲಾಯಿಸಲಾಗಿದ್ದು, ಭಾರೀ ಅನಾಹುತದಿಂದ ಪಾರಾಗಿದ್ದಾರೆ. ಘಟನೆಯಲ್ಲಿ ಸಾಲಿಹ್ ಗೆಳೆಯರಿಬ್ಬರಿಗೆ ಗಂಭೀರ ಗಾಯಗಳಾಗಿವೆ. ಕೂಡಲೇ ಅವರನ್ನು ಸ್ಥಳೀಯ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.

    ಇದಕ್ಕೂ ಮೊದಲು ಕೂಡ ಸಾಲಿಹ್ ಮೇಲೆ ವಧುವಿನ ಕಡೆಯವರು ಹಲ್ಲೆ ಮಾಡಿದ್ದರು. ತೀವ್ರ ವಿರೋಧದ ಮಧ್ಯೆಯೂ ಯುವತಿ ತಾನು ಆತನನ್ನೇ ಮದುವೆಯಾಗುವುದು ಎಂದು ಹೇಳಿ ಸಾಲಿಹ್ ಮನೆಗೆ ಓಡಿಹೋಗಿದ್ದಳು. ಈ ವಿಚಾರ ತಿಳಿದಿದ್ದ ಆಕೆಯ ಕುಟುಂಬಸ್ಥರು ನೇರವಾಗಿ ಸಾಲಿಹ್ ಮನೆಗೆ ದಾಳಿ ಮಾಡಿ ಯುವತಿಯನ್ನು ಅಲ್ಲಿಂದ ಅಪಹರಿಸಿದ್ದರು. ಆದರೆ ಯುವತಿ ಮತ್ತೆ ಸಾಲಿಹ್ ಬಳಿಯೇ ಹೋಗಿದ್ದಳು. ಹೀಗಾಗಿ ಆತನ ಕುಟುಂಬ ಸಂಪ್ರದಾಯದಂತೆ ಮಗನಿಗೆ ಯುವತಿಯನ್ನು ಮದುವೆ ಮಾಡಲು ನಿರ್ಧರಿಸಿತ್ತು.

    ಇತ್ತ ಸಂಪ್ರದಾಯದಂತೆ ಮದುವೆ ಮಾಡುತ್ತಿದ್ದಾರೆ ಎಂಬ ವಿಚಾರ ಯುವತಿಯ ಮನೆಯವರಿಗೆ ತಿಳಿಯಿತು. ಇದು ಯುವತಿಯ ಅಂಕಲ್ ಗೆ ಇಷ್ಟವಿರಲಿಲ್ಲ. ಹೀಗಾಗಿ ಮದುವೆಯನ್ನು ತಪ್ಪಿಸಲೇಬೇಕೆಂಬ ಹಠದಲ್ಲಿ ಸಾಲಿಹ್ ಮೇಲೆ ಹಲ್ಲೆ ನಡೆಸಿದ್ದಾರೆ.

    ಘಟನೆ ಸಂಬಂಧ ಕೊಯಿಲಾಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭಿಸಿದ್ದಾರೆ. ಪ್ರಾಥಮಿಕ ಮಾಹಿತಿ ಪ್ರಕಾರ, ಆರು ಮಂದಿಯಿಂದ ಈ ದಾಳಿ ನಡೆದಿದ್ದು, ಇಬ್ಬರನ್ನು ಬಂಧಿಸಲಾಗಿದೆ. ಉಳಿದವರು ತಲೆಮರೆಸಿಕೊಂಡಿದ್ದಾರೆ ಎಂದು ಇನ್ಸ್ ಪೆಕ್ಟರ್ ಕೆಸಿ ಸುಭಾಷ್ ಬಾಬು ತಿಳಿಸಿದ್ದಾರೆ.

  • ಅಜ್ಜಿ ಮನೆ ನೋಡುವ ಮುನ್ನವೇ ಕಣ್ಣು ಮುಚ್ಚಿದ 1 ವರ್ಷದ ಕಂದಮ್ಮ

    ಅಜ್ಜಿ ಮನೆ ನೋಡುವ ಮುನ್ನವೇ ಕಣ್ಣು ಮುಚ್ಚಿದ 1 ವರ್ಷದ ಕಂದಮ್ಮ

    – ಮೊಮ್ಮಗನಿಗಾಗಿ ಕಾದು ಕುಳಿತಿದ್ದ ಅಜ್ಜ-ಅಜ್ಜಿಗೆ ಶಾಕ್

    ತಿರುವನಂತಪುರಂ: ಕೇರಳದ ಕರಿಪುರ ವಿಮಾನ ನಿಲ್ದಾಣದಲ್ಲಿ ದುರಂತಕ್ಕೀಡಾದವರ ಒಂದೊಂದೇ ಮನಮಿಡಿಯುವ ಕಥೆಗಳು ಬೆಳಕಿಗೆ ಬರುತ್ತಿದೆ.

    ಹೌದು. 1 ವರ್ಷದ ಅಜಮ್ ಮೊಹಮ್ಮದ್ ತನ್ನ ಅಜ್ಜಿ ಮನೆಗೆ ಹೋಗುವ ಮುನ್ನವೇ ಕಣ್ಣುಮುಚ್ಚಿರುವ ಮನಕಲಕುವ ಘಟನೆಯೊಂದು ನಡೆದಿದೆ. ಕೋಯಿಕ್ಕೋಡ್ ವೆಲ್ಲಿಮಡುಕುನ್ನು ಮ್ದು ನಿಜಮ್ ಹಾಗೂ ಸಾಹಿರಾ ದಂಪತಿಗೆ ಒಂದು ವರ್ಷಗಳ ಹಿಂದೆ ಅಜಮ್ ಜನಿಸಿದ್ದಾನೆ.

    ಮಗುವಿಗೆ 1 ವರ್ಷವಾದ ಬಳಿಕ ಇದೀಗ ತಮ್ಮ ಮಗುವನ್ನು ತಾಯ್ನಾಡಿಗೆ ಪರಿಚಯಿಸಲು ತಾಯಿ ತನ್ನ ಮೂವರು ಮಕ್ಕಳೊಂದಿಗೆ ವಿಮಾನ ಹತ್ತಿದ್ದರು. ಆದರೆ ಅಜಮ್ ಮೊದಲ ಪ್ರಯಾಣವೇ ಅಂತಿಮ ಪ್ರಯಾಣವಾಗಿದ್ದು, ಇತ್ತ ಮೊಮ್ಮಗನನ್ನು ನೋಡಲು ಕಾತರದಿಂದ ಕಾಯುತ್ತಿದ್ದ ಅಜ್ಜ-ಅಜ್ಜಿಗೆ ದಿಗಿಲು ಬಡಿದಂತಾಗಿದೆ. ಇದನ್ನೂ ಓದಿ: ಏರ್ ಇಂಡಿಯಾ ವಿಮಾನ ಇಬ್ಭಾಗವಾದ್ರೂ ಬದುಕುಳಿದ ಪುಟ್ಟ ಕಂದಮ್ಮ

    ಅಜಮ್ ತಾಯಿ 29 ವರ್ಷದ ಸಾಹಿರಾ ಬಾನು ಕೂಡ ದುರ್ಘಟನೆಗೆ ಬಲಿಯಾಗಿದ್ದಾರೆ. ಅಜಮ್ ಸಹೋದರರಾದ 8 ವರ್ಷದ ಇಹಾನ್ ಮೊಹಮ್ಮದ್ ಹಾಗೂ 4 ವರ್ಷದ ಮರಿಯಮ್ ಮೊಹಮ್ಮದ್ ಗಾಯಗೊಂಡಿದ್ದು, ಬೇರೆ ಬೇರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ. ಪರಿಪುರದಲ್ಲಿ ವಿಮಾನ ಲ್ಯಾಂಡಿಂಗ್ ಆಗುತ್ತಿದ್ದ ಸಂದರ್ಭದಲ್ಲಿ ಪುಟ್ಟ ಕಂದಮ್ಮ ಅಜಮ್ ತನ್ನ ತಾಯಿಯ ತೊಡೆಯ ಮೇಲೆ ಕುಳಿತುಕೊಂಡಿದ್ದ ಎನ್ನಲಾಗಿದೆ.

    ನಿಜಮ್ ಹಾಗೂ ಅವರ ಕುಟುಂಬ ಕಳೆದ 10 ವರ್ಷಗಳಿಂದ ದುಬೈನಲ್ಲಿ ನೆಲೆಸಿದೆ. ನಿಜಮ್ ಅಲ್ಲೇ ಉಳಿದುಕೊಂಡಿದ್ದು, ಸಾಹಿರಾ ತಮ್ಮ ಮೂವರು ಮಕ್ಕಳೊಂದಿಗೆ ಶುಕ್ರವಾರ ದುಬೈನಿಂದ ತಾಯ್ನಾಡಿಗೆ ಬರಲು ವಿಮಾನ ಏರಿದ್ದಾರೆ. ಆದರೆ ತಾಯ್ನಾಡಿಗೆ ಕಾಲಿಡುವ ಮೊದಲೇ ದುರಂತಕ್ಕೀಡಾಗಿದ್ದಾರೆ. ಸಾಹಿರಾಗೆ ಹೆರಿಗೆ ಸಮಯದಲ್ಲಿ ಜೊತೆಗಿದಿದ್ದರಿಂದ ತಾಯಿ ಸಕೀನಾ ಮಾತ್ರ ಅಜಮ್ ನನ್ನು ನೋಡಿದ್ದರು. ಹೀಗಾಗಿ ಮಗನಿಗೆ 1 ವರ್ಷ ತುಂಬಿದ ಬಳಿಕ ಆತನನ್ನು ತಾಯ್ನಾಡು ಕಕ್ಕಡ್‍ಗೆ ಪರಿಚಯಿಸಲು ದಂಪತಿ ತುದಿಗಾಲಿನಲ್ಲಿದ್ದರು ಎಂದು ಸಾಹಿರಾ ಸಂಬಂಧಿಕರು ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಯುದ್ಧವಿಮಾನವನ್ನು ಹಾರಿಸಿದ್ದ ಪೈಲಟ್‌ ಸಾಠೆ 2 ಬಾರಿ ಲ್ಯಾಂಡಿಗ್‌ಗೆ ಪ್ರಯತ್ನಿಸಿದ್ರು

    ಕಳೆದ ರಾತ್ರಿ ಮಕ್ಕಳು ಎಲ್ಲಿದ್ದಾರೆ ಎಂದು ಹುಡುಕಾಡಿದೆವು. ಆದರೆ ಇಬ್ಬರು ಮಕ್ಕಳು ಪ್ರತ್ಯೇಕ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ನಿಟ್ಟುಸಿರು ಬಿಟ್ಟೆವು. ಇಬ್ಬರೂ ಕೂಡ ಅಪಾಯದಿಂದ ಪಾರಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಸಾಹಿರಾ ಸಂಬಂಧಿಕರು ತಿಳಿಸಿದ್ದಾರೆ. ಇದನ್ನೂ ಓದಿ: ಮರಳಿ ಮನೆಗೆ – ಟೇಕಾಫ್‌ ಮೊದಲು ಕುಟುಂಬದೊಂದಿಗೆ ಫೇಸ್‌ಶೀಲ್ಡ್‌ ಹಾಕಿ ಸೆಲ್ಫಿ, ಪ್ರಯಾಣಿಕ ಸಾವು
     

    ಶುಕ್ರವಾರ ರಾತ್ರಿ ವಿಮಾನ ದುರಂತ ಸಂಭವಿಸುತ್ತಿದ್ದಂತೆಯೇ ಗಂಭೀರ ಗಾಯಗೊಂಡಿದ್ದ ಸಾಹಿರಾರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಯಿಸಿತಾದರೂ ಚಿಕಿತ್ಸೆ ಫಲಕಾರಿಯಾಗೆ ಮೃತಪಟ್ಟಿದ್ದಾರೆ. ಇತ್ತ ಅಜಮ್ ಕೂಡ ಕೋಯಿಕ್ಕೋಡ್ ಮೆಡಿಕಲ್ ಕಾಲೇಜ್ ಅಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ. ಸಹೋದರ ಮರಿಯಮ್ ನನ್ನು ಮೊದಲು ಬೇಬಿ ಮೆಮೊರಿಯಲ್ ಆಸ್ಪತ್ರೆಗೆ ದಾಖಲಿಸಿದ್ದು, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮೈತ್ರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

    ಸಾಹಿರಾ ತಂದೆ ನಿವೃತ್ತ ಶಿಕ್ಷಕರಾಗಿದ್ದು, ಮೊಮ್ಮಗನ ಬರುವಿಕೆಗಾಗಿ ಕಾದು ಕುಳಿತಿದ್ದು, ಇದೀಗ ಮಗಳು, ಮೊಮ್ಮಗನನ್ನು ಕಳೆದುಕೊಂಡು ಕುಟುಂಬ ದುಃಖದ ಕಡಲಲ್ಲಿ ಮುಳುಗಿದೆ. ಇದನ್ನೂ ಓದಿ: ಮಂಗಳೂರು ದುರಂತದ ಬಳಿಕ ಎಚ್ಚರಿಸಿದ್ದೆ, ಆದ್ರೆ ನಿರ್ಲಕ್ಷಿಸಿದ್ರು – ವಾಯು ಸುರಕ್ಷಾ ತಜ್ಞ

  • ನಮ್ಮನ್ನು ಬದುಕಿಸಿ ಅವರು ಪ್ರಾಣ ತ್ಯಾಗ ಮಾಡಿದರು- ಪೈಲಟ್ ಶ್ಲಾಘಿಸಿದ ಪ್ರಯಾಣಿಕರು

    ನಮ್ಮನ್ನು ಬದುಕಿಸಿ ಅವರು ಪ್ರಾಣ ತ್ಯಾಗ ಮಾಡಿದರು- ಪೈಲಟ್ ಶ್ಲಾಘಿಸಿದ ಪ್ರಯಾಣಿಕರು

    ತಿರುವನಂತಪುರಂ: ಕೇರಳದ ಕೋಯಿಕ್ಕೋಡ್ ಕರಿಪುರ ವಿಮಾನ ನಿಲ್ದಾಣದಲ್ಲಿ ನಡೆದ ದುರಂತದಲ್ಲಿ ಬದುಕುಳಿದ ಪ್ರಯಾಣಿಕರು ಪೈಲಟ್ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ.

    ಶುಕ್ರವಾರ ರಾತ್ರಿ ನಡೆದ ಈ ದುರ್ಘಟನೆಯಲ್ಲಿ ಪೈಲಟ್ ಸಮಯ ಪ್ರಜ್ಞೆಯಿಂದ ನಮ್ಮ ಜೀವಗಳನ್ನು ಕಾಪಾಡಿದರು. ವಿಮಾನ ಅಪಘಾತಕ್ಕೀಡಾಗುತ್ತಿದ್ದಂತೆಯೇ ಆಗುವ ಅನಾಹುತ ತಪ್ಪಿಸಿ ನಮ್ಮನ್ನು ಉಳಿಸುವ ಮೂಲಕ ತಮ್ಮ ಪ್ರಾಣ ತ್ಯಾಗ ಮಾಡಿದರು ಎಂದು ಏರ್ ಇಂಡಿಯಾ ಪ್ರಯಾಣಿಕರು ಪೈಲಟ್ ಅನ್ನು ಶ್ಲಾಫಿಸಿದರು.

    ಧೈರ್ಯಶಾಲಿ ಪೈಲಟ್ ಹಾಗೂ ಸ್ಥಳೀಯ ನಿವಾಸಿಗಳು ನಡೆಯುತ್ತಿದ್ದ ಭಾರೀ ದುರಂತವನ್ನು ತಪ್ಪಿಸಿದ್ದಾರೆ. ವಿಮಾನ ಅಪಘಾತಕ್ಕೀಡಾದ ಕೂಡಲೇ ಜನರು ಸ್ಥಳಕ್ಕೆ ದೌಡಾಯಿಸಿ ರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ದುರಂತದಲ್ಲಿ ಬದುಕುಳಿದವರು ತಿಳಿಸಿದ್ದಾರೆ. ಇದನ್ನೂ ಓದಿ: ಏರ್ ಇಂಡಿಯಾ ವಿಮಾನ ಇಬ್ಭಾಗವಾದ್ರೂ ಬದುಕುಳಿದ ಪುಟ್ಟ ಕಂದಮ್ಮ

    ಭಾರೀ ಮಳೆಯಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಹವಾಮಾನ ಕೆಟ್ಟದಾಗಿದೆ ಎಂದು ಪೈಲಟ್ ವಿಮಾನವನ್ನು ಇಳಿಸುವ ಮೊದಲೇ ಎಚ್ಚರಿಕೆ ನೀಡಿದ್ದರು. ಅಲ್ಲದೆ ಎರಡು ಬಾರಿ ಸುರಕ್ಷಿತವಾಗಿ ವಿಮಾನವನ್ನು ಇಳಿಸಲು ಪ್ರಯತ್ನಿಸಿದರೂ ನಿಯಂತ್ರಣ ಕಳೆದುಕೊಂಡರು. ಪರಿಣಾಮ ರನ್ ವೇ ಯಿಂದ ಜಾರಿ 33 ಅಡಿ ಕಂದಕಕ್ಕೆ ಜಾರಿ ಎರಡು ಭಾಗವಾಯಿತು ಎಂದು ದುರಂತದಲ್ಲಿ ಸಣ್ಣಪುಟ್ಟ ಗಾಯಗೊಂಡವರು ತಿಳಿಸಿದರು.

    ಘಟನೆಯಲ್ಲಿ ಇಬ್ಬರು ಪೈಲಟ್ ಸೇರಿ ಕನಿಷ್ಠ 20 ಮಂದಿ ಸಾವನ್ನಪ್ಪಿದ್ದಾರೆ ಎನ್ನಲಾಗುತ್ತಿದೆ. 100ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಪ್ರಯಾಣಿಕರೆಲ್ಲರೂ ಕೊರೊನಾ ವೈರಸ್‍ನಿಂದಾಗಿ ದುಬೈನಲ್ಲಿ ಸಿಲುಕಿದವರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಯಾಣಿಕರನ್ನು ಹೊತ್ತು ಏರ್ ಇಂಡಿಯಾ ವಿಮಾನ ಕರಿಪುರ ವಿಮಾನ ನಿಲ್ದಾಣ ತಲುಪುತ್ತಿದ್ದಂತೆಯೇ ರನ್ ವೇಯಿಂದ ಜಾರಿ 33 ಅಡಿ ಕಂದಕಕ್ಕೆ ಬಿದ್ದು ಗೋಡೆಗೆ ಡಿಕ್ಕಿ ಹೊಡೆದು ಇಬ್ಭಾಗವಾಗಿದೆ.

    1981ರಲ್ಲಿ ವಾಯಪಡೆಗೆ ಸೇರಿದ್ದ ಪೈಲಟ್ ದೀಪಕ್ ವಸಂತ್ ಸಾಠೆ(59) 22 ವರ್ಷಗಳ ಕಾಲ ವಾಯುಸೇನೆಯಲ್ಲಿ ಸೇವೆ ಸಲ್ಲಿಸಿದ್ದರು. ಬೆಂಗಳೂರಿನ ಎಚ್‍ಎಎಲ್‍ನಲ್ಲಿ ಇರುವ ಏರ್ ಏರ್ ಫೋರ್ಸ್ ಟ್ರೈನಿಂಗ್ ಅಕಾಡೆಮಿಯಲ್ಲಿ ತರಬೇತಿ ನೀಡುತ್ತಿದ್ದರು. ಸ್ಕ್ವಾಡ್ರನ್ ಲೀಡರ್ ಆಗಿ ನಿವೃತ್ತಿ ಪಡೆದ ಬಳಿಕ ನಾಗರಿಕ ವಿಮಾನ ಸೇವೆಗೆ ಸೇರ್ಪಡೆಯಾಗಿದ್ದರು. ಇದನ್ನೂ ಓದಿ: ಯುದ್ಧವಿಮಾನವನ್ನು ಹಾರಿಸಿದ್ದ ಪೈಲಟ್‌ ಸಾಠೆ 2 ಬಾರಿ ಲ್ಯಾಂಡಿಗ್‌ಗೆ ಪ್ರಯತ್ನಿಸಿದ್ರು

    ಸುತ್ತಲೂ ಆಳ ಕಣಿವೆ ಇದ್ದು, ಬೆಟ್ಟದ ತುದಿಯಲ್ಲಿ ರನ್ ವೇ ಇರುವ ನಿಲ್ದಾಣಗಳನ್ನು ಟೇಬಲ್ ಟಾಪ್ ವಿಮಾನ ನಿಲ್ದಾಣ ಎಂದು ಗುರುತಿಸಲಾಗುತ್ತದೆ. 2010ರಲ್ಲಿ ಮಂಗಳೂರಿನಲ್ಲಿ ಕೂಡ ಇದೇ ರೀತಿ ವಿಮಾನ ದುರಂತ ಸಂಭವಿಸಿದ 158 ಮಂದಿ ಮೃತಪಟ್ಟಿದ್ದರು. ಈ ಮೂಲಕ ಇದೀಗ ಟೇಬಲ್ ಟಾಪ್ ವಿಮಾನ ನಿಲ್ದಾಣದಲ್ಲಿ ನಡೆದ ಎರಡನೇ ದುರಂತ ಇದಾಗಿದೆ.

  • ವಿಮಾನ ದುರಂತದಲ್ಲಿ ಕನ್ನಡಿಗರಿದ್ದರೆ ಸರ್ಕಾರ ಕೂಡಲೇ ನೆರವಿಗೆ ಧಾವಿಸ್ಬೇಕು: ಖಾದರ್

    ವಿಮಾನ ದುರಂತದಲ್ಲಿ ಕನ್ನಡಿಗರಿದ್ದರೆ ಸರ್ಕಾರ ಕೂಡಲೇ ನೆರವಿಗೆ ಧಾವಿಸ್ಬೇಕು: ಖಾದರ್

    ಬೆಂಗಳೂರು: ಕೇರಳದ ಕರಿಪುರ ವಿಮಾನ ನಿಲ್ದಾಣದಲ್ಲಿ ನಡೆದ ಭೀಕರ ದುರಂತದಲ್ಲಿ ಕನ್ನಡಿಗರು ಇದ್ದರೆ ರಾಜ್ಯ ಸರ್ಕಾರ ಕೂಡಲೇ ನೆರವಿಗೆ ಧಾವಿಸಬೇಕು ಎಂದು ಮಾಜಿ ಸಚಿವ ಯು.ಟಿ ಖಾದರ್ ಆಗ್ರಹಿಸಿದ್ದಾರೆ.

    ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಕೇರಳದ ಕಲ್ಲಿಕೋಟೆಯಲ್ಲಿ ಸಂಭವಿಸಿದ ವಂದೇ ಭಾರತ್ ವಿಮಾನ ದುರಂತ ನನ್ನನ್ನು ದಿಗ್ಭ್ರಮೆಗೊಳಿಸಿದೆ. ದೂರದ ದುಬೈನಿಂದ ತವರಿನ ಕನಸು ಹೊತ್ತು ಬಂದವರು ಕ್ಷಣಾರ್ಧದಲ್ಲೇ ಕಣ್ಮುಚ್ಚಿರುವುದು ನನಗೆ ನಂಬಲು ಸಾಧ್ಯವಾಗುತ್ತಿಲ್ಲ. ಮೃತರ ಆತ್ಮಕ್ಕೆ ಭಗವಂತ ಶಾಂತಿ ನೀಡಲಿ. ಗಾಯಾಳುಗಳು ಶೀಘ್ರಗುಣಮುಖರಾಗಲಿ ಎಂದಿದ್ದಾರೆ.

    ಇನ್ನೊಂದು ಟ್ವೀಟ್ ಮಾಡಿ, ವಿಮಾನದಲ್ಲಿ ಕನ್ನಡಿಗರು ಇರುವ ಬಗ್ಗೆ ನಾನು ಮಾಹಿತಿ ಕಲೆ ಹಾಕುತ್ತಿದ್ದೇನೆ. ಕನ್ನಡಿಗರು ಈ ವಿಮಾನದಲ್ಲಿ ಇದ್ದಿದ್ದೇ ಆದಲ್ಲಿ ರಾಜ್ಯ ಸರ್ಕಾರ ಕೂಡಲೇ ಅವರ ನೆರವಿಗೆ ಧಾವಿಸಬೇಕು ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಏರ್ ಇಂಡಿಯಾ ವಿಮಾನ ಇಬ್ಭಾಗವಾದ್ರೂ ಬದುಕುಳಿದ ಪುಟ್ಟ ಕಂದಮ್ಮ

    ಇಂದು ಸಂಜೆ 7.45ರ ಸುಮಾರಿಗೆ ದುಬೈನಿಂದ ಬಂದ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ ಕೋಯಿಕ್ಕೋಡ್‍ನ ಕರಿಪುರದಲ್ಲಿ ಲ್ಯಾಂಡಿಗೆ ವೇಳೆ ನಿಲ್ದಾಣದ ರನ್ ವೇಯಲ್ಲಿ ಜಾರಿ ದುರಂತಕ್ಕೀಡಾಗಿದೆ. ಲ್ಯಾಂಡಿಂಗ್ ವೇಳೆ ಬೆಂಕಿ ಹೊತ್ತಿಕೊಂಡಿಲ್ಲ. ವಿಮಾನದಲ್ಲಿ 174 ಮಂದಿ ಪ್ರಯಾಣಿಕರಿದ್ದರು. 10 ಮಂದಿ ಮಕ್ಕಳು, ಇಬ್ಬರು ಪೈಲಟ್‍ಗಳು ಹಾಗೂ ಐವರು ಕ್ಯಾಬಿನ್ ಸಿಬ್ಬಂದಿ ಇದ್ದರು. ಸದ್ಯ ಪ್ರಯಾಣಿಕರ ರಕ್ಷಣಾ ಕಾರ್ಯ ಭರದಿಂದ ಸಾಗಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗುತ್ತಿದೆ. ಇದನ್ನೂ ಓದಿ: ಕೋಯಿಕ್ಕೋಡ್ ವಿಮಾನ ದುರಂತ- 14 ಸಾವು, 15 ಮಂದಿ ಗಂಭೀರ

  • ಕೋಯಿಕ್ಕೋಡ್ ವಿಮಾನ ದುರಂತ- 16 ಸಾವು, 15 ಮಂದಿ ಗಂಭೀರ

    ಕೋಯಿಕ್ಕೋಡ್ ವಿಮಾನ ದುರಂತ- 16 ಸಾವು, 15 ಮಂದಿ ಗಂಭೀರ

    ತಿರುವನಂತಪುರಂ: ಕೇರಳದ ಕರಿಪುರ ವಿಮಾನ ನಿಲ್ದಾಣದಲ್ಲಿ ನಡೆದ ದುರಂತ ಘಟನೆಯಲ್ಲಿ 16 ಮಂದಿ ಸಾವನ್ನಪ್ಪಿದ್ದು, 15 ಮಂದಿಯ ಸ್ಥಿತಿ ಗಂಭೀರವಾಗಿದೆ. ಘಟನೆಯಲ್ಲಿ 123 ಮಂದಿ ಗಾಯಗೊಂಡಿದ್ದಾರೆ ಎಂದು ಮಲಪ್ಪುರಂ ಎಸ್‍ಪಿ ತಿಳಿಸಿದ್ದಾರೆ.

    ಇಂದು ಸಂಜೆ 7.45ರ ಸುಮಾರಿಗೆ ದುಬೈನಿಂದ ಬಂದ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ ಕೋಯಿಕ್ಕೋಡ್‍ನ ಕರಿಪುರದಲ್ಲಿ ಲ್ಯಾಂಡಿಗೆ ವೇಳೆ ನಿಲ್ದಾಣದ ರನ್ ವೇಯಲ್ಲಿ ಜಾರಿ ದುರಂತಕ್ಕೀಡಾಗಿದೆ. ಲ್ಯಾಂಡಿಂಗ್ ವೇಳೆ ಬೆಂಕಿ ಹೊತ್ತಿಕೊಂಡಿಲ್ಲ. ವಿಮಾನದಲ್ಲಿ 174 ಮಂದಿ ಪ್ರಯಾಣಿಕರಿದ್ದರು. 10 ಮಂದಿ ಮಕ್ಕಳು, ಇಬ್ಬರು ಪೈಲಟ್‍ಗಳು ಹಾಗೂ ಐವರು ಕ್ಯಾಬಿನ್ ಸಿಬ್ಬಂದಿ ಇದ್ದರು. ಸದ್ಯ ಪ್ರಯಾಣಿಕರ ರಕ್ಷಣಾ ಕಾರ್ಯ ಭರದಿಂದ ಸಾಗಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗುತ್ತಿದೆ.

    ಭೀಕರ ದುರಂತದಲ್ಲಿ ಪುಟ್ಟ ಕಂದಮ್ಮವೊಂದು ಬದುಕುಳಿದಿದೆ. ವಿಮಾನ ಭೀಕರ ದುರಂತಕ್ಕೀಡಾದ ವಿಚಾರ ತಿಳಿದು ಸ್ಥಳಕ್ಕೆ ಆಗಮಿಸಿದ ರಕ್ಷಣಾ ಸಿಬ್ಬಂದಿಗೆ ಪುಟ್ಟ ಮಗುವೊಂದು ಅಳುತ್ತಿರುವ ಶಬ್ದ ಕೇಳಿದೆ. ಕೂಡಲೇ ಎಚ್ಚೆತ್ತ ಸಿಬ್ಬಂದಿ ಮಗುವಿನ ಅಳು ಕೇಳುತ್ತಿರುವ ಕಡೆ ತೆರಳಿ ರಕ್ಷಿಸಿದ್ದಾರೆ. ಘಟನೆಯಿಂದ ಮಗುವಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಕೊಂಡ್ರೊಟ್ಟಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದೊಯ್ದಿದ್ದಾರೆ.