Tag: ಕೋಮುವಾದಿ

  • ವಿಧಾನಸಭೆ ಚುನಾವಣೆಯಲ್ಲಿ 30% ಯುವಕರಿಗೆ ಟಿಕೆಟ್: ನಿಖಿಲ್ ಕುಮಾರಸ್ವಾಮಿ

    ವಿಧಾನಸಭೆ ಚುನಾವಣೆಯಲ್ಲಿ 30% ಯುವಕರಿಗೆ ಟಿಕೆಟ್: ನಿಖಿಲ್ ಕುಮಾರಸ್ವಾಮಿ

    ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್‍ನಿಂದ ಯುವಕರಿಗೆ 30% ಸೀಟು ಮೀಸಲು ಇಡೋದಾಗಿ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಘೋಷಣೆ ಮಾಡಿದರು.

    ಜೆಡಿಎಸ್ ಪ್ರಧಾನ ಕಚೇರಿ ಜೆ.ಪಿ.ಭವನದಲ್ಲಿ ಇಂದು ಜೆಡಿಎಸ್ ರಾಜ್ಯಾಧ್ಯಕ್ಷರಾದ ಸಿ.ಎಂ.ಇಬ್ರಾಹಿಂ, ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ನಡೆದ ಜಿಲ್ಲಾ ಪದಾಧಿಕಾರಿಗಳ ಸಭೆ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸಂಘಟನೆ ಮಾಡೋ ಯುವಕರಿಗೆ ಟಿಕೆಟ್ ಕೊಡುವುದಾಗಿ ಕುಮಾರಸ್ವಾಮಿ ಅವರು ಘೋಷಣೆ ಮಾಡಿದ್ದಾರೆ. ಯುವಕರು ಅಧಿಕಾರದ ಆಸೆ ಬಿಟ್ಟು ಪಕ್ಷ ಸಂಘಟನೆ ಮಾಡಬೇಕು ಎಂದು ಕರೆ ಕೊಟ್ಟರು. ಇದನ್ನೂ ಓದಿ: ನಮ್ಮ ಪಕ್ಷದವರಲ್ಲದವರು ಅಡ್ಡ ಮತದಾನ ಮಾಡಿರುವುದಕ್ಕೆ ನಾನ್ಯಾಕೆ ಉತ್ತರ ಕೊಡಲಿ: ಪ್ರಜ್ವಲ್ ರೇವಣ್ಣ 

    ಯುವ ಜನತಾದಳದಲ್ಲಿ ಸಂಘಟನಾತ್ಮಕವಾಗಿ, ಸಾಂಸ್ಥಿಕವಾಗಿ ಆಮೂಲಾಗ್ರ ಬದಲಾವಣೆ ಮಾಡಲಾಗುವುದು. ಹಿರಿಯರು ಹಲವಾರು ಸಲಹೆ ಸೂಚನೆಗಳನ್ನು ಕೊಟ್ಟಿದ್ದಾರೆ. ಯುವ ಘಟಕವನ್ನು ಸಂಘಟನಾತ್ಮಕವಾಗಿ, ಸಾಂಸ್ಥಿಕವಾಗಿ ಬಲ ಪಡಿಸಲಾಗುವುದು. ರಾಜ್ಯ ಸರ್ಕಾರದ ವೈಫಲ್ಯ, ನಿರುದ್ಯೋಗ ಸಮಸ್ಯೆ ಸೇರಿದಂತೆ ಯುವಕರು ಎದುರಿಸುತ್ತಿರುವ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಯುವಜನತಾದಳ ಸಂಘಟನೆಗೆ ಸಜ್ಜಾಗುತ್ತಿದೆ. ಜನತಾ ಜಲಧಾರೆ ಕಾರ್ಯಕ್ರಮದಲ್ಲಿ ಲಕ್ಷಾಂತರ ಜನ ಭಾಗಿಯಾಗಿದ್ದರು. ಇದರಿಂದ ನಮ್ಮ ಪಕ್ಷದ ಅಡಿಪಾಯ ಭದ್ರವಾಗಿದೆ ಎಂಬುದು ಗೊತ್ತಾಗುತ್ತಿದೆ ಎಂದು ವಿವರಿಸಿದರು.

    ನಾವು ಒಂದಿಷ್ಟು ಬದಲಾವಣೆ ಮಾಡಬೇಕಾಗುತ್ತದೆ. ಎಲ್ಲ ಜಾತಿ, ಸಮುದಾಯದವರು ಸೇರಿ ಪಕ್ಷ ಸಂಘಟನೆ ಮಾಡಬೇಕು. ಹಿರಿಯ ನಾಯಕರು ಸಲಹೆಗಳನ್ನು ನೀಡಿದ್ದಾರೆ. ಅವೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಯುವ ಜನತಾದಳ ಕಟ್ಟುವ ಕೆಲಸ ಮಾಡುತ್ತೇವೆ ಎಂದರು.

    ಪ್ರತಿ ಜಿಲ್ಲೆಗೆ ಭೇಟಿ ನೀಡಿ ಅಲ್ಲಿನ ಸ್ಥಳೀಯ ಸಮಸ್ಯೆಗಳನ್ನು ಬಗೆಹರಿಸಬೇಕಾಗುತ್ತದೆ. ಯುವ ಜನತಾದಳ ಸಂಘಟನೆ ವಿಚಾರವಾಗಿ ಸಜ್ಜಾಗುತ್ತಿದೆ. ಇಂದು 30 ಜಿಲ್ಲೆಗಳ ಪದಾಧಿಕಾರಿಗಳು ಸಭೆಯಲ್ಲಿ ಭಾಗಿಯಾಗಿದ್ದರು. ಹಲವಾರು ವಿಚಾರಗಳನ್ನು ಬಹಿರಂಗವಾಗಿ ಚರ್ಚೆ ಮಾಡಿದ್ದೇವೆ. ಯುವನಾಯಕ ಶರಣಗೌಡರು ಕೂಡ ಸಂಘಟನೆ ವಿಚಾರವಾಗಿ ಮಾತಾಡಿದ್ದಾರೆ. ನಾವು ಯುವಕರ ಧ್ವನಿಯಾಗಿ ಕೆಲಸ ಮಾಡುತ್ತೇವೆ. ಈಗಾಗಲೇ ಕುಮಾರಸ್ವಾಮಿ ಅವರು ಶೇಕಡಾ 30ರಷ್ಟು ಸೀಟುಗಳನ್ನು ಯುವಕರಿಗೆ ಕೊಡಬೇಕು ಎಂದು ಹೇಳಿದ್ದಾರೆ ಎಂದರು.

    ಕೋಮುವಾದಿಗಳಿಗೆ ಕಾಂಗ್ರೆಸ್ ಬೆಂಬಲ
    ರಾಜ್ಯಸಭೆ ಚುನಾವಣೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಜಾತ್ಯತೀತ ತತ್ವದ ಬಗ್ಗೆ ಮಾತನಾಡುವ ಕಾಂಗ್ರೆಸ್ ಕೋಮುವಾದಿಗಳಿಗೆ ಬೆಂಬಲ ನೀಡಿದೆ. ರಾಜ್ಯಸಭೆ ಚುನಾವಣೆ ವಿಚಾರವಾಗಿ ಮಾಜಿ ಪ್ರಧಾನಮಂತ್ರಿ ಹೆಚ್.ಡಿ.ದೇವೇಗೌಡರು ಕೇಂದ್ರದ ಕಾಂಗ್ರೆಸ್ ನಾಯಕರ ಜೊತೆ ಮಾತನಾಡಿದ್ದರು. ಆದರೆ, ರಾಜ್ಯ ನಾಯಕರ ಬಳಿ ಕೇಂದ್ರದ ನಾಯಕರಿಗೂ ಕಿಮ್ಮತ್ತು ಇಲ್ಲ ಎಂಬುದು ಗೊತ್ತಾಗಿದೆ. ಕಾಂಗ್ರೆಸ್ ಯಾರ ಟೀಂ ಎಂಬುದು ರಾಜ್ಯದ ಜನರಿಗೆ ಗೊತ್ತಾಗಿದೆ ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ:  ಈಕೆಯ ಸಾಧನೆಗೆ ಶ್ರವಣದೋಷವೂ ಅಡ್ಡಿಯಾಗಿಲ್ಲ – ಟೆಕ್ವಾಂಡೋದಲ್ಲಿ ಭಾರತಕ್ಕೆ 4ನೇ ಸ್ಥಾನ ತಂದುಕೊಟ್ಟ ಯುವತಿ 

    ಜನತಾದಳ ಪಕ್ಷದಲ್ಲಿ ಅಸಮಾಧಾನಿತರು ಇದ್ದಾರೆ ಎನ್ನುತ್ತಿದ್ದರು. ಆದರೆ, ಶ್ರೀನಿವಾಸ್ ಗೌಡ ಅವರನ್ನು ಬಿಟ್ಟು ಉಳಿದ ಎಲ್ಲರೂ ಪಕ್ಷದ ಜೊತೆಗೆ ಇದ್ದಾರೆ. ಇದರ ಬಗ್ಗೆ ಸಂಜೆ ಆರು ಗಂಟೆ ನಂತರ ನಾನು ಪ್ರತಿಕ್ರಿಯೆ ನೀಡುವೆ. ಜಿ.ಟಿ.ದೇವೇಗೌಡರು, ರಾಮಸ್ವಾಮಿ, ಶಿವಲಿಂಗೇಗೌಡರು ಎಲ್ಲರೂ ನಮ್ಮ ಜೊತೆಯಲ್ಲೇ ಇದ್ದಾರೆ ಎಂದು ಸ್ಪಷ್ಟಪಡಿಸಿದರು.

  • ಸಿದ್ದರಾಮಯ್ಯನಂತ ಕೋಮುವಾದಿಯನ್ನು ಹುಡುಕಲಿಕ್ಕೆ ಸಾಧ್ಯನಾ: ಹೆಚ್‍ಡಿಕೆ ಪ್ರಶ್ನೆ

    ಸಿದ್ದರಾಮಯ್ಯನಂತ ಕೋಮುವಾದಿಯನ್ನು ಹುಡುಕಲಿಕ್ಕೆ ಸಾಧ್ಯನಾ: ಹೆಚ್‍ಡಿಕೆ ಪ್ರಶ್ನೆ

    – ಯಾರಾದ್ರೂ ಸಿಎಂ ಆಗಲಿ ನನಗೆ ಜನ ಮುಖ್ಯ
    – ಸರ್ಕಾರ ರಚನೆಗೆ ಮೋದಿ ಆಹ್ವಾನಿಸಿದ್ರು

    ಬೆಳಗಾವಿ: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನಂತ ಕೋಮುವಾದಿಯನ್ನು ಹುಡುಕಲಿಕ್ಕೆ ಸಾಧ್ಯನಾ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ.

    ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕು ಜುಗೂಳ ಗ್ರಾಮದಲ್ಲಿ ಮಾತನಾಡಿದ ಅವರು, ಕೋಮುವಾದಿಗಳಿಗೆ ಕುಮಾರಸ್ವಾಮಿ ಬೆಂಬಲ ನೀಡುತ್ತಾರೆ ಎಂಬ ಸಿದ್ದರಾಮಯ್ಯನವರ ಹೇಳಿಕೆಗೆ ತೀರುಗೇಟು ನೀಡಿ, ಸಿದ್ದರಾಮಯ್ಯನಂತ ಕೋಮುವಾದಿಯನ್ನು ಹುಡುಕಲಿಕ್ಕೆ ಸಾಧ್ಯನಾ ಎಂದು ಪ್ರಶ್ನೆ ಮಾಡಿದ್ದಾರೆ.

    ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಯಾವ ವರ್ಗದ ಜನರಿಗೆ ಸಮುದಾಯ ಭವನಗಳನ್ನು ಕಟ್ಟಲು ಸರ್ಕಾರಿ ಭೂಮಿ ನೀಡಿದರು. ಎಲ್ಲಾ ವರ್ಗದವರನ್ನು ಇವರು ಗೌರವಿಸಿದ್ದಾರಾ? ಯಾರಿಗೆ ಸಮುದಾಯ ಭವನ ನೀಡಿದರು. ಯಾರನ್ನು ಕಡೆಗಣಿಸಿದರು ಎಲ್ಲದರ ಅಂಕಿ ಅಂಶ ಇಡಲಿ. ಇದರ ಬಗ್ಗೆ ಚರ್ಚೆ ಮಾಡಲಿಕ್ಕೆ ಹೋದರೆ ಅವರ ಬಗ್ಗೆ ಬೇಕಾದಷ್ಟು ವಿಷಯಗಳಿವೆ ಎಂದು ಗುಡುಗಿದರು.

    ಇದೇ ವೇಳೆ ನಾನು ಯಾರ ಹಂಗಿನಲ್ಲಿಲ್ಲ. ಇಂಥವರಿಗೆ ಬೆಂಬಲ ಕೋಡುತ್ತೇನೆ ಎಂದು ನಾನು ಯಾರಿಗೂ ಬರೆದುಕೊಟ್ಟಿಲ್ಲ. 13 ಜಿಲ್ಲೆಯಲ್ಲಿ ಜನರು ಬೀದಿಗೆ ಬಿದ್ದಿದ್ದಾರೆ. ಪಕ್ಷ ಸಂಘಟನೆ ಮಾಡಿ ಅಧಿಕಾರದ ಬೆನ್ನು ಬಿದ್ದರೆ ಜನ ಏನು ಮಾಡಬೇಕು. ನಾನು ರಾಜಕಾರಣ ಮಾಡೋದು ನನ್ನ ವೈಯಕ್ತಿಕ ಕಾರಣಕ್ಕಾಗಿ ಅಲ್ಲ. ಸರ್ಕಾರ ಬಿದ್ದು ಹೋಗಿ ಗವರ್ನರ್ ಆಡಳಿತ ಬಂದರೆ ಜನರ ಗತಿ ಏನು. ಅದಕ್ಕಾಗಿ ನಾನು ಸರ್ಕಾರ ಇರಬೇಕೊ ಬೇಡವೋ ಎಂದು ವಿಚಾರ ಮಾಡಿದ್ದೇನೆ ಎಂದು ತಿಳಿಸಿದರು.

    ರಾಜ್ಯದಲ್ಲಿ ಯಾವ ಮುಖ್ಯಮಂತ್ರಿಯಾದರು ಇರಲಿ ಯಾವ ಪಕ್ಷ ಅಧಿಕಾರಕ್ಕಾದರೂ ಬರಲಿ ನನಗೆ ಅದು ಮುಖ್ಯವಲ್ಲ. ನನಗೆ ರಾಜ್ಯದ ಜನರ ಹಿತ ಮಾತ್ರ ಮುಖ್ಯ. ಚುನಾವಣೆಗೆ ಹೋಗೋಣ, ಅದಕ್ಕೇನೂ ಅರ್ಜೆಂಟಿದೆ. ಜನರ ಸಮಸ್ಯೆ ಬಗೆಹರಿಸಲಿ ನಂತರ ಚುನಾವಣೆಗೆ ಹೋಗೋಣ. ರಸ್ತೆಯಲ್ಲಿ ನಿಂತು ಹೇಳೊದು, ಬಾದಾಮಿ ಒಂದು ಕ್ಷೇತ್ರದಲ್ಲಿ ಹೋಗಿ ಬಂದರೆ ಆಗಲ್ಲ. ಬಾದಾಮಿ ಬಿಟ್ಟು ಎಲ್ಲಿಗೆ ಹೋಗಿದ್ದಾರೆ ಸಿದ್ದರಾಮಯ್ಯನವರು ಎಂದು ಹೆಚ್‍ಡಿಕೆ ಸಿದ್ದು ವಿರುದ್ಧ ಗುಡುಗಿದರು.

    ಇದೇ ವೇಳೆ ನಾನು ಬಿಜೆಪಿ ಜತೆ ಸರ್ಕಾರ ಮಾಡೋ ಹಾಗಿದ್ದರೆ ಲೋಕಸಭೆ ಚುನಾವಣೆಗೂ ಮುನ್ನವೇ ಸಪೋರ್ಟ್ ಮಾಡುತ್ತಿದ್ದೆ. ನನಗೆ ಸ್ವತಃ ಪ್ರಧಾನ ಮಂತ್ರಿಗಳಿಂದಲೇ ಆಹ್ವಾನವಿತ್ತು. ನೀವೇ ಮುಖ್ಯಮಂತ್ರಿ ಆಗುವರಂತೆ ಬನ್ನಿ ಎಂದಿದ್ದರು ಎಂದು ಹೊಸ ಬಾಂಬ್ ಸಿಡಿಸಿದರು.

  • ಬಿಎಸ್‍ವೈ ನಿವಾಸದಲ್ಲಿ ಮಾದಾರ ಚನ್ನಯ್ಯ ಸ್ವಾಮೀಜಿ ಊಟ ಮಾಡಿದ್ದಕ್ಕೆ ಪ್ರತಿಭಟನೆ

    ಬಿಎಸ್‍ವೈ ನಿವಾಸದಲ್ಲಿ ಮಾದಾರ ಚನ್ನಯ್ಯ ಸ್ವಾಮೀಜಿ ಊಟ ಮಾಡಿದ್ದಕ್ಕೆ ಪ್ರತಿಭಟನೆ

    ತುಮಕೂರು: ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ನಿವಾಸದಲ್ಲಿ ದಲಿತ ಸಮುದಾಯದ ಚಿತ್ರದುರ್ಗದ ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಊಟ ಮಾಡಿದನ್ನು ಖಂಡಿಸಿ ಮಾದಿಗ ಜನಾಂದೋಲನ ಸಮಿತಿ ಪ್ರತಿಭಟನೆ ನಡೆಸಿದೆ.

    ಜಿಲ್ಲಾಧಿಕಾರಿ ಕಚೇರಿ ಎದುರು ಪ್ರಗತಿಪರ ಚಿಂತಕ ಸಾಹಿತಿ ಕೆಬಿ ಸಿದ್ದಯ್ಯ ನೇತೃತ್ವದಲ್ಲಿ ಮಾದಿಗ ಜನಾಂದೋಲನ ಸಮಿತಿ ಮಾದಾರ ಚನ್ನಯ್ಯ ಸ್ವಾಮೀಜಿ ಅವರ ನಡೆಯನ್ನು ಖಂಡಿಸಿ ಪ್ರತಿಭಟಿಸಿದೆ.

    ಈ ವೇಳೆ ಮಾತನಾಡಿದ ಎಂದು ಸಾಹಿತಿ ಕೆಬಿ ಸಿದ್ದಯ್ಯ, ಕೋಮುವಾದಿ ಹಾಗೂ ದಲಿತ ವಿರೋಧಿ ಪಕ್ಷವಾಗಿರುವ ಬಿಜೆಪಿಗೆ ಮಾದಾರ ಚನ್ನಯ್ಯ ಸ್ವಾಮೀಜಿ ಬೆಂಬಲ ನೀಡುತ್ತಿರುವುದು ಸರಿಯಲ್ಲ. ಅಂಬೇಡ್ಕರ್ ಅವರ ತತ್ತ್ವ ಸಿದ್ಧಾಂತಗಳನ್ನು ಬಿಜೆಪಿ ಮರೆತಿದೆ. ದಲಿತರಿಗೆ ಮೀಸಲಾತಿ ನೀಡುವುದನ್ನೂ ಬಿಜೆಪಿ ವಿರೋಧಿಸುತ್ತಿದೆ ಎಂದು ಹೇಳುವ ಮೂಲಕ ವಾಗ್ದಾಳಿ ನಡೆಸಿದರು.

    ಆಗಸ್ಟ್ 28ರಂದು ಬಿಎಸ್‍ವೈ ದಲಿತ ಸಮುದಾಯದವರಿಗೆ ತಮ್ಮ ಮನೆಯಲ್ಲಿ ಸೋಮವಾರ ಹಬ್ಬದೂಟ ಏರ್ಪಡಿಸಿದ್ದರು. ಈ ಸಂದರ್ಭದಲ್ಲಿ ಮಾದಾರ ಚನ್ನಯ್ಯ ಸ್ವಾಮೀಜಿ ಕೂಡ ಉಪಸ್ಥಿತರಿದ್ದರು. ಚನ್ನಯ್ಯ ಸ್ವಾಮೀಜಿ ಮುಂದಿನ ವಿಧಾನಸಭಾ ಅಥವಾ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಬಿಎಸ್‍ವೈ ಅವರು ಸ್ವಾಮೀಜಿ ಅವರಲ್ಲಿ ಕಣಕ್ಕೆ ಇಳಿಯುವಂತೆ ಕೇಳಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಒಂದು ವೇಳೆ ಈ ಆಹ್ವಾನವನ್ನು ಒಪ್ಪಿದರೆ ಮಾದಾರ ಸ್ವಾಮೀಜಿ 2018ರ ವಿಧಾನಸಭಾ ಚುನಾವಣೆಯಲ್ಲಿ ಸದ್ಯ ಸಮಾಜ ಕಲ್ಯಾಣ ಸಚಿವ ಎಚ್. ಆಂಜನೇಯ ಅವರು ಪ್ರತಿನಿಧಿಸುತ್ತಿರುವ ಹೊಳಲ್ಕೆರೆ ಕ್ಷೇತ್ರ ಅಥವಾ 2019ರಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಚಿತ್ರದುರ್ಗ ಮೀಸಲು ಕ್ಷೇತ್ರದಿಂದ ಕಣಕ್ಕೆ ಇಳಿಸಲು ಬಿಜೆಪಿ ನಾಯಕರು ಚಿಂತನೆ ನಡೆಸಿದ್ದರೆ ಎಂದು ಹೇಳಲಾಗುತ್ತಿದೆ.