Tag: ಕೋಬ್ರಾ ಯೂನಿಟ್

  • ಐಇಡಿ ಸ್ಫೋಟ ಕಮಾಂಡರ್ ಹುತಾತ್ಮ, 10 ಯೋಧರಿಗೆ ಗಂಭೀರ ಗಾಯ

    ಐಇಡಿ ಸ್ಫೋಟ ಕಮಾಂಡರ್ ಹುತಾತ್ಮ, 10 ಯೋಧರಿಗೆ ಗಂಭೀರ ಗಾಯ

    ರಾಯ್‍ಪುರ: ಛತ್ತಿಸ್‍ಗಡದಲ್ಲಿ ನಕ್ಸಲ್ ಉಪಟಳ ಹೆಚ್ಚುತ್ತಿದ್ದು, ಇಂದು ನಕ್ಸಲರು ನಡೆಸಿದ ಐಇಡಿ(ಸುಧಾರಿತ ಸ್ಫೋಟಕ) ಸ್ಫೋಟದಲ್ಲಿ ಸಿಆರ್ ಪಿಎಫ್ ಕೋಬ್ರಾ ಯುನಿಟ್‍ನ ಅಧಿಕಾರಿ ಹುತಾತ್ಮರಾಗಿದ್ದು, 10 ಯೋಧರು ಗಂಭೀರವಾಗಿ ಗಾಯಗೊಂಡಿದ್ದಾರೆ.

    ಛತ್ತಿಸ್‍ಗಡದ ಸುಕ್ಮಾ ಜಿಲ್ಲೆಯಲ್ಲಿ ಘಟನೆ ನಡೆದಿದ್ದು, ರಾತ್ರಿ 8.30ರ ಸುಮಾರಿಗೆ ಅರವ್ರಾಜ್ ಮೆಟ್ಟಾ ಬೆಟ್ಟದಲ್ಲಿನ ಅರಣ್ಯ ಪ್ರದೇಶದಲ್ಲಿ ಐಇಡಿ ಸ್ಫೋಟವಾಗಿದೆ. ಕೋಬ್ರಾ(ಕಮಾಂಡೋ ಬೆಟಾಲಿಯನ್ ಫಾರ್ ರೆಸೊಲ್ಯೂಟ್ ಆ್ಯಕ್ಷನ್)ದ 206ನೇ ಬೆಟಾಲಿಯನ್ ತಂಡ ಹಾಗೂ ಪೊಲೀಸರು ನಕ್ಸಲ್ ವಿರೋಧಿ ಕಾರ್ಯಾಚರಣೆಗೆ ಹೊರಟಿದ್ದಾಗ ಸ್ಫೋಟ ಸಂಭವಿಸಿದೆ.

    ಚಿಂತಗುಫ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ರಾಜ್ಯ ರಾಜಧಾನಿ ರಾಯ್‍ಪುರದಿಂದ 450 ಕಿ.ಮೀ.ದೂರದಲ್ಲಿ ಸ್ಫೋಟ ಸಂಭವಿಸಿದೆ. ಈ ಪ್ರದೇಶದಲ್ಲಿ ಯಾವುದೇ ರೀತಿಯ ಗುಂಡಿನ ಚಕಮಕಿ ನಡೆದಿಲ್ಲ. ಸಿಆರ್ ಪಿಎಫ್‍ನ ಅಗ್ರ ಘಟಕದ 10 ಕಮಾಂಡೋಗಳು ಗಾಯಗೊಂಡಿದ್ದು, ಅವರನ್ನು ರಾಯ್‍ಪುರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ವೇಳೆ ಚಿಕಿತ್ಸೆ ಫಲಿಸದೆ ಸಹಾಯಕ ಕಮಾಂಡರ್ ನಿತಿನ್.ಪಿ.ಭಲೇರಾವ್ ಹುತಾತ್ಮರಾಗಿದ್ದಾರೆ ಎಂದು ಪೊಲೀಸ್ ಇನ್‍ಸ್ಪೆಕ್ಟರ್ ಜನರಲ್(ಬಸ್ತಾರ್ ರೇಂಜ್) ಪಿ.ಸುಂದರ್ ರಾಜ್ ಮಾಹಿತಿ ನೀಡಿದ್ದಾರೆ.

    ಹುತಾತ್ಮರಾದ ಯೋಧ ಕೋಬ್ರಾದ 206ನೇ ಬೆಟಾಲಿನ್‍ನವರಾಗಿದ್ದು, ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯವರಾಗಿದ್ದಾರೆ. ಗಾಯಗೊಂಡ ಇತರ ಯೋಧರು ರಾಯ್‍ಪುರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರಂಭದಲ್ಲಿ ಐವರಿಗೆ ತೀವ್ರ ಗಾಯಗಳಾಗಿವೆ ಎಂಬ ಮಾಹಿತಿ ಲಭ್ಯವಾಗಿತ್ತು  ಎಂದು ಅಧಿಕಾರಿಗಳು ತಿಳಿಸಿದ್ದಾರೆ.