Tag: ಕೋಡು

  • ತೋಟಕ್ಕೆ ವಿದ್ಯುತ್ ತಂತಿ ಬೇಲಿ – ಕೋಡಿನ ಆಸೆಗೆ ಕೋಣವನ್ನು ಹೂತಿಟ್ಟು ಜೈಲು ಪಾಲಾದ ರೈತರು

    ತೋಟಕ್ಕೆ ವಿದ್ಯುತ್ ತಂತಿ ಬೇಲಿ – ಕೋಡಿನ ಆಸೆಗೆ ಕೋಣವನ್ನು ಹೂತಿಟ್ಟು ಜೈಲು ಪಾಲಾದ ರೈತರು

    ಕಾರವಾರ: ತೋಟಕ್ಕೆ ಅಕ್ರಮವಾಗಿ ವಿದ್ಯುತ್ ತಂತಿ ಬೇಲಿ ಅಳವಡಿಸಿ ಕೋಣದ ಕೋಡಿಗೆ ಆಸೆಪಟ್ಟ ರೈತರು ಜೈಲುಪಾಲಾಗಿದ್ದಾರೆ.

    ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಹೆಗ್ಗರಣಿ ಸಮೀಪದ ಹೊಸ್ತೋಟದಲ್ಲಿ ತೋಟಕ್ಕೆ ಕಾಡು ಪ್ರಾಣಿಗಳು ಬರುತ್ತವೆ ಎಂದು ವಿದ್ಯುತ್ ಬೇಲಿಯನ್ನು ಅಕ್ರಮವಾಗಿ ಹಾಕಲಾಗಿತ್ತು. ಆದರೆ ನೀರು ಕುಡಿಯಲು ಬಂದ ಕಾಡುಕೋಣ ಅಕ್ರಮವಾಗಿ ಹಾಕಿರುವ ವಿದ್ಯುತ್ ಬೇಲಿಯ ಮೇಲೆ ಕಾಲಿಟ್ಟಿದ್ದು ವಿದ್ಯುತ್ ಶಾಕ್ ನಿಂದ್ ಸಾವು ಕಂಡಿತ್ತು. ಇದನ್ನು ನೋಡಿದ ಆರೋಪಿಗಳು ಯಾರಿಗೂ ತಿಳಿಯದಂತೆ ಅದನ್ನು ಹೂತು ಹಾಕಿದ್ದರು. ಕಾಡುಕೋಣದ ಕೋಡು ಬೆಲೆ ಬಾಳುತ್ತವೆ ಎನ್ನುವ ಕಾರಣಕ್ಕೆ ತನ್ನ ತೋಟದಲ್ಲಿ ಮಾಂಸ ಕೊಳೆಯಲು ಹುದುಗಿಸಿಟ್ಟಿದ್ದರು.

    ಇದರ ಜಾಡು ಹಿಡಿದ ಜಾನ್ಮನೆ ಅರಣ್ಯ ಇಲಾಖೆಯ ಪ್ರಾದೇಶಿಕ ಅರಣ್ಯ ಅಧಿಕಾರಿ ಪವಿತ್ರ ಹಾಗೂ ಸಿಬ್ಬಂದಿ ದಾಳಿ ನಡೆಸಿ ಕಾಡುಕೋಣವನ್ನು ಹೂತು ಹಾಕಿದ ಆರೋಪಿಗಳಾದ ಕೃಷ್ಣಮೂರ್ತಿ ಸುಬ್ರಾಯ ಜೋಶಿ ಹೊಸ್ತೋಟ, ಪುಟ್ಟಾ ಅಜ್ಜು ಗೌಡ, ತಳಗಾರ ಹರಿಗಾರ, ಮಹೇಶ ಪುಟ್ಟಾ ಗೌಡ, ತಳಗಾರ ಹರಿಗಾರ, ಗೋವಿಂದ ಗಣಪ ಗೌಡ, ಅತ್ತೀಸವಲು ಬಾಳೇಕೊಪ್ಪ, ಈಶ್ವರ ದುಗ್ಗಾ ಗೌಡ, ಅತ್ತೀಸವಲು ಬಾಳೇಕೊಪ್ಪ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.

    ಕಾಡುಪ್ರಾಣಿಗಳ ಉಪಟಳದಿಂದ ಬೆಳೆ ರಕ್ಷಿಸಿಕೊಳ್ಳಲು ಸಿದ್ದಾಪುರ ಭಾಗದ ಹಲವು ರೈತರು ಅಕ್ರಮವಾಗಿ ವಿದ್ಯುತ್ ಲೈನ್‍ನ ವಿದ್ಯುತ್ ಬಳಸಿ ಬೇಲಿ ನಿರ್ಮಿಸುತ್ತಾರೆ. ಈ ಬೇಲಿಯು ಹೈ ಪವರ್ ವಿದ್ಯುತ್ ಪ್ರವಹಿಸುತ್ತದೆ ಇದರಿಂದಾಗಿ ನೀರಿನ ದಾಹ ಹಾಗೂ ಆಹಾರದ ಆಸೆಗೆ ಬರುವ ಪ್ರಾಣಿಗಳು ಶಾಕ್ ಹೊಡೆದು ಸಾವನ್ನಪ್ಪುತ್ತವೆ. ಕಳೆದ ನಾಲ್ಕು ತಿಂಗಳಲ್ಲಿ ಈ ಅಕ್ರಮ ವಿದ್ಯುತ್ ಬೇಲಿಗೆ ಆರು ಕಾಡುಕೋಣ, ಎರಡು ಕಡವೆ, ಒಂದು ಚಿರತೆ ಸಾವು ಕಂಡರೆ ಸಿದ್ದಾಪುರ ಕಾನಸೂರಿನಲ್ಲಿ ಓರ್ವ ಯುವಕ ಶಾಕ್ ಹೊಡೆದು ಸಾವನ್ನಪ್ಪಿದ್ದ.

    ಈ ಬಗ್ಗೆ ಹೆಸ್ಕಾಂ ಅಧಿಕಾರಿಗಳಾಗಲಿ ಅರಣ್ಯ ಇಲಾಖೆ ಅಧಿಕಾರಿಗಳಾಗಲಿ ಹೆಚ್ಚು ಮುತುವರ್ಜಿ ವಹಿಸಿರಲಿಲ್ಲ. ಯಾವಾಗ ಕಾನಸೂರಿನಲ್ಲಿ ವಿದ್ಯುತ್ ತಂತಿಗೆ ಯುವಕ ಬಲಿಯಾಗುತ್ತಾನೋ ಆಗ ಎಚ್ಚೆತ್ತುಕೊಂಡ ಸಂಬಂಧ ಪಟ್ಟ ಇಲಾಖೆ ಕಠಿಣ ಕ್ರಮ ಕೈಗೊಂಡಿತ್ತು. ಈ ಘಟನೆ ನಂತರ 12 ಜನರನ್ನು ಬಂಧಿಸಿ ಸ್ಥಳೀಯ ರೈತರಿಗೆ ವಿದ್ಯುತನ್ನು ಬೇಲಿಗೆ ಹರಿಸದಂತೆ ಎಚ್ಚರಿಕೆ ನೀಡಲಾಗಿತ್ತು.

    ಕೆಲವರು ಪ್ರಾಣಿಗಳ ಮಾಂಸ, ಚರ್ಮಕ್ಕಾಗಿ ಸಹ ವಿದ್ಯುತ್ ತಂತಿಯನ್ನು ಕಾಡಿನ ಮಧ್ಯದಲ್ಲಿಟ್ಟು ಅದಕ್ಕೆ ವಿದ್ಯುತ್ ಹರಿಸಿ ಬೇಟೆ ಆಡುತ್ತಿದ್ದರು. ಆದರೆ ಅರಣ್ಯ ಇಲಾಖೆ ಗುಪ್ತ ಮಾಹಿತಿಗಳನ್ನು ಪಡೆದು ಇಂತವರನ್ನು ಬಂಧಿಸುವಲ್ಲಿ ಯಶಸ್ವಿಯಾಗುತ್ತಿದೆ. ಇಂದು ಕೂಡ ಇದೇ ರೀತಿಯ ಘಟನೆಯನ್ನು ಬೇದಿಸುವಲ್ಲಿ ಅರಣ್ಯ ಇಲಾಖೆ ಸಫಲವಾಗಿದ್ದು ತೋಟದ ಮಾಲೀಕ ಕಾಡುಕೋಣದ ಕೋಡಿನ ಆಸೆಗೆ ಈಗ ಜೈಲುಪಾಲಾಗುವಂತೆ ಆಗಿದ್ದು, ಈ ಮೂಲಕ ಅಕ್ರಮ ಎಸಗುವವರಿಗೆ ಕಠಿಣ ಸಂದೇಶ ರವಾನಿಸಿದಂತಾಗಿದೆ.

  • ಧಾರವಾಡದಲ್ಲೊಂದು ಅಚ್ಚರಿ: ಹಸುವಿನ ಮೂಗಿನಲ್ಲಿ ಬೆಳೆಯುತ್ತಿದೆ ಕೋಡು!

    ಧಾರವಾಡದಲ್ಲೊಂದು ಅಚ್ಚರಿ: ಹಸುವಿನ ಮೂಗಿನಲ್ಲಿ ಬೆಳೆಯುತ್ತಿದೆ ಕೋಡು!

    ಧಾರವಾಡ: ಆಕಳು, ಎಮ್ಮೆ ಇವುಗಳ ತಲೆ ಮೇಲೆ ಸಹಜವಾಗಿ ಕೋಡು ಬೆಳೆಯುತ್ತದೆ. ಆದ್ರೆ ಧಾರವಾಡ ತಾಲೂಕಿನ ಮರೇವಾಡ ಗ್ರಾಮದ ರಾಜಶೇಖರ ಚೌಡಿಮನಿ ಎಂಬುವವರ ಜರ್ಸಿ ಆಕಳ ಮೂಗಿನಲ್ಲಿ ಕೋಡು ಬೆಳೆಯುತ್ತಿದ್ದು, ಅಚ್ಚರಿಗೆ ಕಾರಣವಾಗಿದೆ.

    ಕಳೆದ ಎರಡು ವರ್ಷಗಳಿಂದ ಈ ಆಕಳಿನ ಮೂಗಿನಲ್ಲಿ ಕೋಡು ಬೆಳೆಯುತ್ತಿದೆ. ಆದರೆ ರಾಜಶೇಖರ ಕುಟುಂಬವರು ಮಾತ್ರ ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಇತ್ತೀಚೆಗೆ ಅವು ಸ್ವಲ್ಪ ದೊಡ್ಡದಾಗಿ ಬೆಳೆದಿದ್ದರಿಂದ ಜನರ ಕಣ್ಣಿಗೆ ಬಿದ್ದಿದೆ. ಇದೊಂದು ಪವಾಡ ಎಂದು ತಿಳಿದ ಚೌಡಿಮನಿ ಕುಟುಂಬದವರು, ಆಕಳಿಗೆ ಪೂಜೆ ಮಾಡಲು ಆರಂಭಿಸಿದ್ದಾರೆ. ಗ್ರಾಮದ ಜನರಲ್ಲಿ ಕೂಡಾ ಇದು ಅಚ್ಚರಿ ಮೂಡಿಸಿದೆ. ಕಳೆದ 6 ವರ್ಷಗಳ ಹಿಂದೆ ಖರೀದಿ ಮಾಡಿ ತಂದಿದ್ದ ರಾಜಶೇಖರ ಅವರ ಈ ಆಕಳು ಪ್ರತಿ ದಿನ 16 ಲಿಟರ್ ಹಾಲನ್ನ ಕೂಡಾ ಕೊಡುತ್ತಿದೆ.

    ಸದ್ಯ ಈ ಆಕಳನ್ನ ಪರೀಕ್ಷೆಗೆ ಒಳಪಡಿಸಲಾಗಿದೆ. ಪಶು ವೈದ್ಯ ಡಾ. ಸಂತಿ ಕೂಡಾ ಇದು ವಿಶೇಷ ಅಂತಾರೆ. ಅನುವಂಶಿಕವಾಗಿ ವಂಶವಾಹಿನಿಯಲ್ಲಿ ಇದು ಅಡಗಿರುತ್ತೆ. ಆದರೆ ಸದ್ಯ ಇದು ಬೆಳೆಯುತ್ತಿದ್ದು, ಈ ಹಸುವಿನ ರಕ್ತ ಮಾದರಿಯನ್ನ ಬೆಂಗಳೂರಿನ ಪಶು ವೈದ್ಯಕೀಯ ಮಹಾವಿದ್ಯಾಲಯಕ್ಕೆ ಕಳಿಸಿಕೊಡಲು ಮುಂದಾಗಿದ್ದಾರೆ. ಈ ಕೊಡುಗಳು ಮೂಗಿನಲ್ಲಿ ಬೆಳೆಯುವುದರಿಂದ ಹಸುಗೆ ಯಾವುದೇ ರೀತಿಯ ತೊಂದರೆಗಳಾಗಲ್ಲ ಅಂತಾ ವೈದ್ಯರು ಹೇಳಿದ್ದಾರೆ.

    ಒಟ್ಟಿನಲ್ಲಿ ವೈಜ್ಞಾನಿಕವಾಗಿ ಇದನ್ನ ನೋಡಬೇಕೋ ಅಥವಾ ಪವಾಡದ ರೀತಿಯಲ್ಲಿ ನೋಡಬೇಕೊ ಗೊತ್ತಿಲ್ಲ. ಸದ್ಯ ಆಕಳ ಮಾಲೀಕರು ಇದಕ್ಕೆ ಪವಾಡ ಅಂತಾರೆ, ಆದರೆ ವೈದ್ಯರು ಇದು ಸಹಜ ಅಂತಾರೆ. ಏನೇ ಇರಲಿ, ಇಂಥದೊಂದು ಅಚ್ಚರಿಯ ಆಕಳು ನೋಡೊಕೆ ಜನರಂತು ಮುಗಿ ಬೀಳುತ್ತಿದ್ದಾರೆ.