Tag: ಕೋಡಿ ಹಳ್ಳಿ ಚಂದ್ರಶೇಖರ್

  • ರೈತರು ಉಗ್ರಗಾಮಿ, ತೀವ್ರಗಾಮಿಗಳಲ್ಲ : ಕೋಡಿಹಳ್ಳಿ ಚಂದ್ರಶೇಖರ್

    ರೈತರು ಉಗ್ರಗಾಮಿ, ತೀವ್ರಗಾಮಿಗಳಲ್ಲ : ಕೋಡಿಹಳ್ಳಿ ಚಂದ್ರಶೇಖರ್

    ತುಮಕೂರು: ಹರಿಯಾಣದಲ್ಲಿ ಪ್ರತಿಭಟನಾ ನಿರತ ರೈತರ ಮೇಲೆ ಪೊಲೀಸರು ಲಾಠಿ ಚಾರ್ಜ್ ಮಾಡಿರುವುದನ್ನು ಖಂಡಿಸಿ ಹಾಗೂ ತುಮಕೂರಿನಲ್ಲಿ ನಡೆದ ಅತ್ಯಾಚಾರ ಪ್ರಕರಣದ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿ ರಾಜ್ಯ ರೈತ ಸಂಘದ ವತಿಯಿಂದ ತುಮಕೂರಿನಲ್ಲಿ ಪ್ರತಿಭಟನೆ ನಡೆಸಲಾಯಿತು.

    kodihalli chandrashekar

    ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗಿದ್ದು, ತುಮಕೂರು ನಗರದ ಟೌನ್ ಹಾಲ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೂ ಪ್ರತಿಭಟನೆ ನಡೆಸಿ ಡಿಸಿಯವರಿಗೆ ಮನವಿ ಸಲ್ಲಿಸಲಾಯಿತು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ಕೊಡುತ್ತಿದ್ದೇವೆ. ನೀವು ರೈತರ ಜೊತೆ ಮಾತುಕತೆ ನಡೆಸಿ ರೈತರು ಉಗ್ರಗಾಮಿಗಳಲ್ಲ. ತೀವ್ರಗಾಮಿಗಳು ಅಲ್ಲ. ಯಾವುದೇ ಪಕ್ಷದ ಏಜಂಟರುಗಳಲ್ಲ. ನಮಗೆಲ್ಲ ಸ್ವಂತಿಕೆ ಇದೆ. ನಮ್ಮ ಚಳವಳಿಗಳಿಗೆ ಚಾರಿತ್ರ್ಯ ಇದೆ. ಹಾಗಾಗಿ ರೈತರ ಸಮಸ್ತೆ ಕುರಿತು ಪರಿಹಾರ ನೀಡಿ ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ:ಪಾಲಿಕೆಯಲ್ಲಿ ಸ್ವಂತ ಶಕ್ತಿಯಿಂದ ಜೆಡಿಎಸ್ ಅಧಿಕಾರಕ್ಕೆ ಬರುತ್ತೆ: ಹೆಚ್.ಡಿ.ಕುಮಾರಸ್ವಾಮಿ

    kodihalli chandrashekar

    ಈಗಾಗಲೇ ಸುಪ್ರಿಂ ಕೋರ್ಟ್ ನಿರ್ದೇಶನ ಇದೆ. ಒಂದೂವರೆ ವರ್ಷ ಯಾವುದೇ ಕಾನೂನು ಅನುಷ್ಠಾನ ಮಾಡಬಾರದು ಎಂದು ಹೇಳಿದೆ. ಆದರೂ ಪದೇ ಪದೇ ಪರೋಕ್ಷವಾಗಿ ಕೃಷಿ ಕಾನೂನು ಜಾರಿ ಮಾಡಲು ಹೋಗುತ್ತಿದ್ದಾರೆ. ರೈತರ ಜೊತೆ ಸಂಯಮದಿಂದ ಮಾತುಕತೆ ನಡೆಸಬೇಕು. ಅದನ್ನು ಬಿಟ್ಟು ಪೊಲೀಸರನ್ನು ಬಳಸಿ ಹೋರಾಟ ಹತ್ತಿಕ್ಕುವ ಪ್ರಯತ್ನ ಮಾಡಬಾರದು ಎಂದು ಮನವಿ ಮಾಡಿದ್ದಾರೆ. ಇದನ್ನೂ ಓದಿ:ಗೋಹತ್ಯೆ ನಿಷೇಧ ಕಾಯ್ದೆಯಿಂದ ಪ್ರಾಣಿ ಸಂಗ್ರಹಾಲಯದಲ್ಲಿ ಆಹಾರದ ಕೊರತೆ ಇಲ್ಲ: ಪ್ರಭು ಚವ್ಹಾಣ್

    kodihalli chandrashekar

    ಇದೇ ವೇಳೆ ತುಮಕೂರಿನಲ್ಲಿ ನಡೆದ ಅತ್ಯಾಚಾರ ಪ್ರಕರಣ ಆರೋಪಿಗಳನ್ನು ಶೀಘ್ರವಾಗಿ ಬಂಧಿಸಬೇಕು. ಇಂಥಹ ಕೃತ್ಯಗಳು ನಡೆಯಬಾರದು. ತಪ್ಪಿತಸ್ಥ ಆರೋಪಿಗಳಿಗೆ ಸರಿಯಾದ ಶಿಕ್ಷೆ ಆಗಬೇಕು ಎಂದು ಒತ್ತಾಯಿಸಿದ್ದಾರೆ.

     

  • ದೆಹಲಿ ಚಲೋ ಆಂದೋಲನಕ್ಕೆ ರಾಜ್ಯದ ರೈತರು ಸಜ್ಜು

    ದೆಹಲಿ ಚಲೋ ಆಂದೋಲನಕ್ಕೆ ರಾಜ್ಯದ ರೈತರು ಸಜ್ಜು

    ಬೆಂಗಳೂರು: ಕೃಷಿ ಮಸೂದೆಗಳನ್ನು ವಿರೋಧಿಸಿ ಕಳೆದ ಎರಡು ತಿಂಗಳಿನಿಂದ ರೈತರು ದೆಹಲಿಯಲ್ಲಿ ಹೋರಾಟ ನಡೆಸುತ್ತಿದ್ದಾರೆ. ಈ ಹೋರಾಟಕ್ಕೆ ರಾಜ್ಯದ ರೈತರು ಕೂಡ ಸಾಥ್ ನೀಡಲಿದ್ದಾರೆ. ಇದೇ ಫೆ.4 ರಿಂದ ಹಂತ ಹಂತವಾಗಿ ರಾಜ್ಯದ ರೈತರು ದೆಹಲಿ ಚಲೋ ಆಂದೋಲನ ಮಾಡಲಿದ್ದಾರೆ.


    ರಾಜ್ಯದಿಂದ ಸುಮಾರು 6-8 ಸಾವಿರ ರೈತರು ದೆಹಲಿಯತ್ತ ರೈಲಿನಲ್ಲಿ ಹೋಗಲಿದ್ದಾರೆ. ದೆಹಲಿ ಚಲೋ ಆಂದೋಲನವನ್ನ ರಾಜ್ಯದಲ್ಲಿ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ನಡೆಯುತ್ತಿದ್ದು, ನಿರೀಕ್ಷೆಗೂ ಮೀರಿ ದೆಹಲಿಗೆ ಹೋಗಲು ಸಿದ್ದತೆ ನಡೆಯುತ್ತಿದೆ.

    ದೆಹಲಿ ಚಲೋ ಆಂದೋಲನ ಹೇಗಿರಲಿದೆ ಎಂಬುದರ ಬಗ್ಗೆ ಪಬ್ಲಿಕ್ ಟಿವಿ ಜೊತೆ ಕೊಡಿಹಳ್ಳಿ ಚಂದ್ರಶೇಖರ್ ಮಾತನಾಡಿ, ಈಗಾಗಲೇ ರೈತರ ಜೊತೆ ಮಾತನಾಡಿದ್ದೇವೆ. ದೆಹಲಿಯ ರೈತರಿಗೆ ಬೆಂಬಲವಾಗಿ ರಾಜ್ಯದ ಹಲವು ಜಿಲ್ಲೆಗಳಿಂದ ಈ ಆಂದೋಲನದಲ್ಲಿ ಭಾಗಿಯಾಗಲಿದ್ದಾರೆ ಎಂದು ಹೇಳಿದ್ದಾರೆ.

  • ಸಿಎಂ ಮಾತಿನಿಂದ ಇಡೀ ಹೆಣ್ಣು ಕುಲಕ್ಕೆ ಅವಮಾನ: ರೈತ ಮಹಿಳೆ ಕಣ್ಣೀರು

    ಸಿಎಂ ಮಾತಿನಿಂದ ಇಡೀ ಹೆಣ್ಣು ಕುಲಕ್ಕೆ ಅವಮಾನ: ರೈತ ಮಹಿಳೆ ಕಣ್ಣೀರು

    – ಎಚ್‍ಡಿಕೆ ಮಾತು ಕೇಳಿ ನೊಂದು ನಿದ್ದೆ ಬಂದಿಲ್ಲ

    ಬೆಂಗಳೂರು: ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಮಾತು ಇಡೀ ಹೆಣ್ಣು ಕುಲಕ್ಕೆ ಅವಮಾನ ಮಾಡಿದಂಗೆ ಎಂದು ನೊಂದ ಮಹಿಳೆ ಕಣ್ಣೀರು ಹಾಕಿದ್ದಾರೆ.

    ಕಬ್ಬು ಬಾಕಿ ಪಾವತಿ, ಸೂಕ್ತ ಬೆಂಬಲ ಬೆಲೆ ನಿಗದಿಗಾಗಿ ಹೋರಾಡುತ್ತಿದ್ದ ರೈತ ಮಹಿಳೆಗೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಅವಮಾನ ಮಾಡಿದ್ದರು. ಇದರಿಂದ ರೈತರು ಕುಮಾರಸ್ವಾಮಿ ವಿರುದ್ಧ ಸಿಡಿದೆದ್ದಿದ್ದಾರೆ. ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ರೈತ ಮಹಿಳೆ, ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಮಾತಿನಿಂದ ನನಗೆ ಬಹಳ ನೋವು, ಬೇಸರವಾಗಿದೆ. ನನ್ನ ಸ್ವಾಭಿಮಾನಕ್ಕೆ ಚ್ಯುತಿ ತಂದಿದ್ದಾರೆ. ನಾಲ್ಕು ವರ್ಷದಿಂದ ಎಲ್ಲಿ ಮಲಗಿದ್ದೆ ಎಂದು ಕೇಳುವುದು ಮುಖ್ಯಮಂತ್ರಿಗೆ ಶೋಭೆ ತರುವಂತಹದಲ್ಲ. ನಾವು ರೈತರು ಆಕ್ರೋಶದಲ್ಲಿ ಏನೋ ಮಾತನಾಡಿರಬಹುದು. ಆದರೆ ಅವರು ಈ ರೀತಿ ಮಾತನಾಡಬಾರದು. ನನಗೆ ಎಷ್ಟು ನೋವಾಗಿದೆ ಎಂದು ನನಗೆ ಗೊತ್ತಿದೆ ಎಂದು ಗಳಗಳನೇ ಅಳುತ್ತಾ ತಮ್ಮ ನೋವನ್ನು ಹೇಳಿಕೊಂಡಿದ್ದಾರೆ.


    ಕುಮಾರಸ್ವಾಮಿ ಮಾತನಾಡಿದ್ದು ಇಡೀ ಹೆಣ್ಣು ಕುಲಕ್ಕೆ ಅವಮಾನ ಮಾಡಿದಂಗೆ. ಅವರು ಅವಮಾನ ಮಾಡಿದ ಬಳಿಕ ರಾತ್ರಿಯೆಲ್ಲಾ ಫೋನ್ ಮಾಡಿ ಕೆಲ ಮಹಿಳೆಯರು ನಾವಿದ್ದೀವಿ ಚಿಂತೆ ಮಾಡಬೇಡ ಎಂದು ಸಮಾಧಾನ ಮಾಡಿದ್ದಾರೆ. ಆದರೂ ನನ್ನ ಆತ್ಮ ಗೌರವಕ್ಕೆ ಧಕ್ಕೆತರುವಂತಹ ಮಾತನ್ನು ಕೇಳಿ ರಾತ್ರಿಯೆಲ್ಲಾ ನಿದ್ದೆ ಬಂದಿಲ್ಲ ಎಂದು ಮಹಿಳೆ ಅಳಲು ತೋಡಿಕೊಂಡಿದ್ದಾರೆ.

    ಸಿಎಂ ಕ್ಷಮೆ ಕೇಳಲೇಬೇಕು:
    ನಿಮ್ಮ ಬಗ್ಗೆ ಬಹಳ ಗೌರವ ಇಟ್ಟಿದ್ದೆವು. ಆದ್ರೆ ನಿಮ್ಮ ಮಾತಿನಿಂದ ನನ್ನ ಆತ್ಮಗೌರವಕ್ಕೆ ಚ್ಯುತಿ ತಂದಿದ್ದೀರಿ. ಇದು ಸರಿನಾ ಹೇಳಿ ಎಂದು ಸಿಎಂಗೆ ಪ್ರಶ್ನೆ ಮಾಡಿದ್ದಾರೆ. ನೀವೇ ಬರುತ್ತೇನೆ ಎಂದು ಮಾತು ಕೊಟ್ರಿ, ಆದರೆ ನೀವೇ ಹಿಂದೆ ಸರಿದ್ರಿ. ನಮಗೆ ಕುತ್ತಿಗೆಗೆ ಬರುವ ತನಕ ತಡೆದುಕೊಳ್ಳುತ್ತೇವೆ. ಆದರೆ ಅಲ್ಲಿಗೆ ಬಂದ ಮೇಲೆ ನಮ್ಮ ಸಹನೆಯ ಕಟ್ಟೆ ಒಡೆಯುತ್ತದೆ. ಆದ್ದರಿಂದ ಆಕ್ರೋಶ ವ್ಯಕ್ತಪಡಿಸುತ್ತೇವೆ. ಇಂದು ನನ್ನ ಆತ್ಮ ಗೌರವಕ್ಕೆ ಧಕ್ಕೆ ತಂದಿದ್ದೀರಿ. ಆದ್ದರಿಂದ ನೀವು ಕ್ಷಮೆ ಕೇಳಲೇಬೇಕು ಎಂದು ನೊಂದ ಮಹಿಳೆ ಕಣ್ಣೀರಿಡುತ್ತಾ ಹೇಳಿದ್ದಾರೆ.

    ಸಿಎಂ ಕುಮಾರಸ್ವಾಮಿ ಅವರ ಮಾತಿಗೆ ಪ್ರತಿಕ್ರಿಯಿಸಿದ ಕೋಡಿಹಳ್ಳಿ ಚಂದ್ರಶೇಖರ್ ಅವರು, ಇದು ರೈತರ ವಾಸ್ತವವಾಗಿದೆ. ಯಾಕೆಂದರೆ ದುಡಿದ ರೈತನಿಗೆ ನ್ಯಾಯೋಚಿತವಾಗಿ ಕೊಡಬೇಕು ಎಂದು ರೈತರು ಒತ್ತಾಯ ಮಾಡುತ್ತಿದ್ದಾರೆ. ಗುಜರಾತಿನಲ್ಲಿ ಒಂದು ಟನ್ ಗೆ 4,500 ಸಾವಿರ ಕೊಡುತ್ತಾರೆ. ಮಹಾರಾಷ್ಟ್ರದಲ್ಲಿ 3500 ರೂ ಕೊಡಬೇಕು ಎಂದು ತೀರ್ಮಾನ ಮಾಡಿದ್ದಾರೆ. ಕರ್ನಾಟಕದೊಳಗೆ ಕಾರ್ಖಾನೆ ದರನೇ ನಿಗದಿಯಾಗಿಲ್ಲ. ಕಾರ್ಖಾನೆ ಪ್ರಾರಂಭವಾಗುತ್ತವೆ. ಮೂರು ವರ್ಷಗಳ ಬಾಕಿ ಇನ್ನೂ ಕೊಟ್ಟಿಲ್ಲ. ಇದನ್ನು ಕೇಳಿದರೆ ಸರ್ಕಾರ ಸಿಡಿಮಿಡಿಗೊಳ್ಳುತ್ತದೆ. ಇದಕ್ಕೂ ಒಂದು ಮಾರ್ಗ ಇರುತ್ತದೆ. ರೈತರಿಗೆ ಕಷ್ಟ ಇದೆ ಆದ್ದರಿಂದ ಅವರಿಗೆ ಕೊಡಬೇಕಾದ ದುಡ್ಡು ಕೊಡಬೇಕು. ಅದು ಬಿಟ್ಟು ಅವರ ದುಡ್ಡಿನಲ್ಲಿ ಮಜಾ ಮಾಡಬಾರದು ಎಂದು ಗರಂ ಆಗಿದ್ದಾರೆ.

    ಮುಖ್ಯಮಂತ್ರಿ ಸ್ಥಾನಕ್ಕೆ ಗೌರವ ಅಂತ ಇರುತ್ತದೆ. ತಾನು ಖಾಸಗಿ ವ್ಯಕ್ತಿಯಾಗಿ ನಡೆದುಕೊಳ್ಳುವುದು ಬೇರೆ ವಿಚಾರ. ಸಿಎಂ ಸ್ಥಾನದ ಗೌರವವನ್ನು ಕಾಪಾಡಿಕೊಳ್ಳಬೇಕು ಎಂದು ನಡೆದುಕೊಳ್ಳುವುದು ಬೇರೆಯಾಗಿದೆ. ಹಾಗಾಗಿ ಹೆಣ್ಣು ಮಗಳು ಯಾರೇ ಆಗಿರಲಿ. ನಮ್ಮ ಸಮಾಜದಲ್ಲಿ ಯಾವ ರೀತಿ ಗೌರವಿಸುತ್ತೇವೆಯೋ ಅದೇ ರೀತಿ ಗೌರವ ಕೊಡಬೇಕು. ಓರ್ವ ಸಿಎಂ ಆಗಿ ಈ ರೀತಿ ಪದವನ್ನು ಬಳಸಬಾದರು. ಈ ರೀತಿ ಮಾತನಾಡಿದರೆ ಅವರ ಗೌರವಕ್ಕೆ ಧಕ್ಕೆ ತರುತ್ತದೆ ಇದರಿಂದ ಸರ್ಕಾರಕ್ಕೂ ಒಳ್ಳೆಯದಾಗಲ್ಲ ಎಂದು ಹೇಳಿದ್ದಾರೆ.

    ಮಹಿಳೆ ಇವತ್ತು ಚಳವಳಿಗೆ ಬಂದವಳಲ್ಲ. ಅನೇಕ ವರ್ಷಗಳ ಹಿಂದೆ ಚಳವಳಿ, ಹೋರಾಟದಲ್ಲಿ ಭಾಗವಹಿಸಿದ್ದಾಳೆ. ಆದ್ದರಿಂದ ಕನಿಷ್ಠ ಮಹಿಳೆಗೂ ಗೌರವ ಕೊಡಬೇಕು. ಸಿಎಂ ಮಾತನನ್ನು ಒಪ್ಪುವಂತದಲ್ಲ. ಇದನ್ನು ರೈತರು ಸಹಿಸಲ್ಲ, ಆದ್ದರಿಂದ ಅವರೇ ವಾಪಸ್ ಪಡೆಯಬೇಕು. ಮೊದಲು ರೈತರ ಬಾಕಿ ಕೊಡಿ. ಬಳಿಕ ಆ ಹೆಣ್ಣು ಮಗಳ ಬಳಿ ಕ್ಷಮೆ ಕೇಳಬೇಕು ಎಂದು ಅವರು ಆಕ್ರೋಶದಿಂದ ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews