Tag: ಕೋಡಿಮಠದ ಶ್ರೀಗಳು

  • ರಾಜ್ಯ, ದೇಶದಲ್ಲಿ ರಾಜಕೀಯ ವಿಪ್ಲವ: ಕೋಡಿಮಠದ ಶ್ರೀಗಳ ಭವಿಷ್ಯ ವಾಣಿ

    ರಾಜ್ಯ, ದೇಶದಲ್ಲಿ ರಾಜಕೀಯ ವಿಪ್ಲವ: ಕೋಡಿಮಠದ ಶ್ರೀಗಳ ಭವಿಷ್ಯ ವಾಣಿ

    ದಾವಣಗೆರೆ: ರಾಜ್ಯ ಮತ್ತು ದೇಶದ ರಾಜಕೀಯದಲ್ಲಿ ವಿಪ್ಲವ ಆಗಲಿದೆ ಎಂದು ಹಾಸನ ಜಿಲ್ಲೆಯ ಕೋಡಿಮಠ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.

    ರಾಜಕೀಯ ವಿಪ್ಲವಕ್ಕೆ ಜನವರಿಯವರೆಗೂ ಸಮಯವಿದೆ. ಈಗಾಗಲೇ ಅಮೆರಿಕ ಸೇರಿದಂತೆ ಜಗತ್ತಿನ ಬಹುತೇಕ ಕಡೆ ರಾಜಕೀಯ ಬದಲಾವಣೆ ಆಗುತ್ತಿವೆ. ಅದೇ ರೀತಿ ನಮ್ಮಲ್ಲಿಯೂ ವಿಪ್ಲವ ಆಗಲಿದೆ ಎಂದು ಪರೋಕ್ಷವಾಗಿ ಹೇಳುವ ಮೂಲಕ ರಾಜಕಾರಣದಲ್ಲಿ ಬದಲಾವಣೆ ಆಗಲಿದೆ ಎಂಬುದರ ಬಗ್ಗೆ ಹೇಳಿದರು.

    ಕೆಲ ದಿನಗಳ ಹಿಂದೆ ಗ್ರಹಣ ಫಲ ರಾಜಕೀಯ ವರ್ಗದ ಬಗ್ಗೆ ವಿಪ್ಲವ ಅಂತ ಬಂದಿದೆ. ಇದೇ ವೇಳೆ ಸಿಎಂ ಬಿ.ಎಸ್.ಯಡಿಯೂರಪ್ಪನವರ ಕುರಿತು ಕೇಳಿದ ಪ್ರಶ್ನೆಗೆ, ಒಬ್ಬೊಬ್ಬರ ಬಗ್ಗೆ ಹೇಳಲ್ಲ ಎಂದು ಉತ್ತರಿಸಿದರು.

  • ಜೋಳಿಗೆ ಹಿಡಿದು ಕೋಡಿಶ್ರೀಗಳಿಂದ ಭಿಕ್ಷಾಟನೆ

    ಜೋಳಿಗೆ ಹಿಡಿದು ಕೋಡಿಶ್ರೀಗಳಿಂದ ಭಿಕ್ಷಾಟನೆ

    ಹಾಸನ: ಶ್ರೀ ಮಹದೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಸಂಪ್ರದಾಯದಂತೆ ಕೋಡಿಶ್ರೀಗಳು ಜೋಳಿಗೆ ಹಿಡಿದು ಭಿಕ್ಷಾಟನೆ ಮಾಡಿದ್ದಾರೆ.

    ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಸುಕ್ಷೇತ್ರ ಹಾರನಹಳ್ಳಿ ಕೋಡಿಮಠದಲ್ಲಿ ಶ್ರೀ ಮಹದೇಶ್ವರ ಜಾತ್ರಾ ಮಹೋತ್ಸವ ಆರಂಭಗೊಂಡಿದೆ. ಜಾತ್ರಾ ಮಹೋತ್ಸವದ ಅಂಗವಾಗಿ ಶ್ರೀಮಠದ ಸಂಪ್ರದಾಯದಂತೆ ಮಠದ ಉತ್ತರಾಧಿಕಾರಿ ಚೇತನ್ ಮರಿದೇವರೊಂದಿಗೆ ಹಾರನಹಳ್ಳಿ ಗ್ರಾಮ ಪ್ರವೇಶಿಸಿದ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿ, ಜಾತಿ ಮತ ಭೇದವೆನ್ನದೆ ಗ್ರಾಮದ ಪ್ರತಿ ಮನೆಗಳಿಗೆ ತೆರಳಿ ಭಿಕ್ಷಾಟನೆ ನಡೆಸಿ ಭಕ್ತರನ್ನು ಹರಸಿ ಆಶೀರ್ವದಿಸುವ ಮೂಲಕ ಮುಂದೆ ಸಾಗಿದರು.

    ಕೋಡಿಶ್ರೀಗಳು ಗ್ರಾಮಕ್ಕೆ ಭಿಕ್ಷಾಟನೆಗೆ ಬರುವ ಸಂಪ್ರದಾಯವನ್ನು ಅರಿತಿರುವ ಯುವಕರು, ಗ್ರಾಮದ ರಸ್ತೆಗಳನ್ನೆಲ್ಲ ತಳಿರು ತೋರಣಗಳಿಂದ ಶೃಂಗರಿಸಿದರೆ, ಮಹಿಳೆಯರು ತಮ್ಮ ಮನೆಯ ಅಂಗಳವನ್ನು ಸ್ವಚ್ಛಗೊಳಿ ರಂಗೋಲಿ ಬಿಡಿಸಿ ಗುರುವರ್ಯರನ್ನು ಸ್ವಾಗತಿಸಿದರು. ಶ್ರೀಗಳು ಸಾಗುವ ಮಾರ್ಗದುದ್ದಕ್ಕೂ ನಂದಿ ಧ್ವಜದೊಂದಿಗೆ ಮಂಗಳವಾದ್ಯ ನುಡಿಸುತ್ತಾ ಪಾಲ್ಗೊಂಡ ಜಾನಪದ ಕಲಾವಿದರನ್ನು ಕಂಡ ಭಕ್ತರು ಶಿವನೇ ಜೋಳಿಗೆ ಹಿಡಿದು ನಮ್ಮ ಮನೆಗೆ ಭಿಕ್ಷೆಗೆ ಬಂದಿದ್ದಾನೆ ಎಂಬಂತೆ ಭಕ್ತಿ ಭಾವದಿ ತಾವು ಬೆಳೆದ ದವಸ ಧಾನ್ಯಗಳನ್ನು ಜೋಳಿಗೆಗೆ ತುಂಬುವ ಮೂಲಕ ತಮ್ಮ ಭಕ್ತಿಯನ್ನು ಸಮರ್ಪಿಸಿದರು.

    ಭಿಕ್ಷಾಟನೆಗೆಂದು ಜೋಳಿಗೆ ಹಿಡಿದು ಮನೆ ಬಾಗಿಲಿಗೆ ಬಂದ ನೆಚ್ಚಿನ ಗುರುಗಳಾದ ಕೋಡಿಶ್ರೀಗಳನ್ನು ಕಂಡ ಭಕ್ತರು, ಶ್ರದ್ಧೆ ಭಕ್ತಿಯೊಂದಿಗೆ ಪಾದ ಪೂಜೆ ಮಾಡಿ ತಮ್ಮ ಮನೆಯೊಳಗೆ ಕರೆದು ದವಸ ಧಾನ್ಯಗಳನ್ನು ಜೋಳಿಗೆಗೆ ತುಂಬುವ ಮೂಲಕ ಗುರುವಿನ ಅನುಗ್ರಹಕ್ಕೆ ಪಾತ್ರರಾದರು.