ಕೋಲಾರ: ಏಕ ಕಾಲದಲ್ಲಿ ಕೋಟಿ ಶಿವಲಿಂಗಗಳ ದರ್ಶನ ನೀಡುವ ವಿಶ್ವದ ಏಕೈಕ ಸ್ಥಳವಾದ ಜಿಲ್ಲೆಯ ಕಮ್ಮಸಂದ್ರದ ಕೋಟಿಲಿಂಗೇಶ್ವರದಲ್ಲಿ ಶಿವರಾತ್ರಿ ವೈಬವ ಜೋರಾಗಿದ್ದು, ಇಂದು ಮುಂಜಾನೆಯಿಂದಲೇ ವಿವಿಧ ರಾಜ್ಯಗಳಿಂದ ಜನಸ್ತೋಮ ಈ ಪುಣ್ಯ ಕ್ಷೇತ್ರದತ್ತ ಹರಿದು ಬಂದಿದೆ.

ಒಂದೆಡೆ ಎಲ್ಲಿ ನೋಡಿದರು ಶಿವಲಿಂಗಗಳು, ಮತ್ತೊಂದೆಡೆ ಶಿವಲಿಂಗಕ್ಕೆ ಭಕ್ತಿಯಿಂದ ಪೂಜೆ ಸಲ್ಲಿಸುತ್ತಿರುವ ಮಹಿಳೆಯರು ಭಕ್ತರು. ಇದೆಲ್ಲಾ ದೃಷ್ಯಗಳು ಕಂಡು ಬಂದಿದ್ದು ಕೋಲಾರ ಜಿಲ್ಲೆ ಕೆಜಿಎಫ್ ತಾಲೂಕಿನ ಕಮ್ಮಸಂದ್ರದ ಕೋಟಿಲಿಂಗೇಶ್ವರ ಕ್ಷೇತ್ರದಲ್ಲಿ. ಹೌದು ಇಂದು ಮಹಾಶಿವರಾತ್ರಿ ಅಂಗವಾಗಿ ಕೋಟಿಲಿಂಗೇಶ್ವರದಲ್ಲಿ ವಿಶೇಷ ಪೂಜೆ, ಮುಂಜಾನೆಯಿಂದಲೇ ಅಲ್ಲಿನ 108 ಅಡಿಯ ಶಿವಲಿಂಗಕ್ಕೆ ಹಾಲಿನ ಅಭಿಷೇಕ ಹಾಗೂ ಅಲಂಕಾರವನ್ನು ಮಾಡಲಾಗಿದೆ.

ಜೊತೆಗೆ ಇಲ್ಲಿನ ಕೋಟಿ ಶಿವಲಿಂಗಗಳಿಗೂ ಅದ್ಧೂರಿ ಅಲಂಕಾರ ಮಾಡಲಾಗಿದೆ. ಮುಂಜಾನೆಯಿಂದಲೂ ಪೂಜಾ ಕೈಂಕರ್ಯಗಳು ನಡೆಯುತ್ತಿವೆ. ಜೊತೆಗೆ ಈ ವಿಶೇಷ ದಿನದಂದು ಲಕ್ಷಾಂತರ ಜನರು ಬಂದು ಕೋಟಿ ಶಿವಲಿಂಗಗಳ ದರ್ಶನ ಪಡೆದು ಪುನೀತರಾಗುತ್ತಿದ್ದಾರೆ. ಹಬ್ಬದ ಹಿನ್ನೆಲೆಯಲ್ಲಿ ಯಾವುದೇ ಗೊಂದಲಕ್ಕೆ ಅವಕಾಶ ಮಾಡಿಕೊಡದೆ ಪೂಜೆಗಳಲ್ಲಿ ಹಲವೆಡೆಗಳಿಂದ ಬಂದಿದ್ದ ಭಕ್ತಾದಿಗಳು ಭಾಗಿಯಾಗುತ್ತಿದ್ದಾರೆ.

ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಹಾಗೂ ಆಂಧ್ರ ಪ್ರದೇಶ, ತಮಿಳುನಾಡು, ಕೇರಳದಿಂದಲೂ ಸಾವಿರಾರು ಜನ ಭಕ್ತರು ಸಾಗರೋಪಾದಿಯಲ್ಲಿ ಕೋಟಿ ಲಿಂಗ ದರ್ಶನಕ್ಕೆ ಬರುತ್ತಿದ್ದಾರೆ. ಶಿವರಾತ್ರಿಯ ಈ ವಿಶೇಷ ದಿನದಂದು ಇಚ್ಚೆಯುಳ್ಳವರು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಇಲ್ಲಿ ಶಿವಲಿಂಗ ಪ್ರತಿಷ್ಠಾಪನೆ ಮಾಡಿದರು. ವಿಶೇಷವಾಗಿ ಕೋಟಿಲಿಂಗೇಶ್ವರ ಕ್ಷೇತ್ರದಲ್ಲಿ ಹಲವಾರು ಜನ ಶಿವಲಿಂಗ ಪ್ರತಿಷ್ಠಾಪನೆ ಮಾಡಿ, ಸ್ವತಃ ತಾವೆ ಪೂಜೆ ಸಲ್ಲಿಸಿದರು.

ಅಲ್ಲದೆ ಕೋಟಿಲಿಂಗೇಶ್ವರದಲ್ಲಿ ಶ್ರೀ ವೆಂಕಟೇಶ್ವರ ಸ್ವಾಮಿಯ ಭ್ರಹ್ಮರಥೋತ್ಸವ ಕೂಡಾ ನಡೆಯಿತು. ಇಷ್ಟೆಲ್ಲಾ ಕಾರ್ಯಕ್ರಮಗಳ ನಡುವೆ ಏಕ ಕಾಲದಲ್ಲಿ ಶಿವಲಿಂಗ ದರ್ಶನ ಮಾಡುವ ಜನರಿಗಂತೂ ಕೈಲಾಸವೇ ಧರೆಗಿಳಿದ ಅನುಭವವಾಗಿದೆ. ಹಾಗೆಯೇ ದರ್ಶನಕ್ಕೆ ಬರುತ್ತಿರುವ ಭಕ್ತರಿಗೆ ದೇವಾಲಯದಿಂದ ಸಾಕಷ್ಟು ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ.
ಇಂದು ಮಹಾಶಿವರಾತ್ರಿಯ ಪ್ರಯುಕ್ತ ಮುಂಜಾನೆಯಿಂದಲೇ ಸಾವಿರಾರು ಭಕ್ತರು ಕೋಟಿ ಶಿವಲಿಂಗಗಳ ದರ್ಶನ ಪಡೆಯಲು ಸಾಗರೋಪಾದಿಯಲ್ಲಿ ಕ್ಷೇತ್ರಕ್ಕೆ ಆಗಮಿಸುತ್ತಿದ್ದಾರೆ. ಶಿವಲಿಂಗಗಳ ದರ್ಶನ ಪಡೆದು ಶಿವನ ಕೃಪೆಗೆ ಪಾತ್ರರಾಗುತ್ತಿದ್ದಾರೆ.















