Tag: ಕೋಟಾ ಶ್ರೀನಿವಾಸ ಪೂಜಾರಿ

  • ಕೋಟಾ ಶ್ರೀನಿವಾಸ ಪೂಜಾರಿ ಕಾರು ಅಪಘಾತ

    ಕೋಟಾ ಶ್ರೀನಿವಾಸ ಪೂಜಾರಿ ಕಾರು ಅಪಘಾತ

    ಬೆಂಗಳೂರು: ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಸಂಚರಿಸುತ್ತಿದ್ದ ಕಾರು ಅಪಘಾತಕ್ಕೀಡಾದ ಘಟನೆ ಬೆಂಗಳೂರು ಹೊರವಲಯದ ನೈಸ್ ರಸ್ತೆಯಲ್ಲಿ ನಡೆದಿದೆ.

    ಸಚಿವರು ಕಾರಿಗೆ ಪೆಟ್ರೋಲ್ ಹಾಕಿಸಿಕೊಂಡು ಹಿಂದಿರುಗುತ್ತಿದ್ದ ಸಂದರ್ಭದಲ್ಲಿ ನೈಸ್ ರಸ್ತೆಯ ಕದಂಬ ಹೊಟೇಲ್ ಬಳಿ ಕೆಎಸ್‍ಆರ್‍ಟಿಸಿ ಬಸ್ ಕಾರಿಗೆ ಡಿಕ್ಕಿ ಹೊಡೆದಿದೆ. ಘಟನಯಿಂದ ಶ್ರೀನಿವಾಸ ಪೂಜಾರಿ ಹಾಗೂ ಕಾರು ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಪಾಯದಿಂದ ಪಾರಾಗಿದ್ದಾರೆ.

    ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಘಟನೆಯಿಂದ ಕಾರು ಕೂಡ ಹಾನಿಗೊಳಗಾಗಿದೆ. ಈ ಘಟನೆ ಕುಂಬಳಗೋಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದೆ.

  • ಗುರುವಾರದಿಂದ ಒಂದು ವಾರ ದಕ್ಷಿಣ ಕನ್ನಡ ಜಿಲ್ಲೆ ಲಾಕ್‍ಡೌನ್

    ಗುರುವಾರದಿಂದ ಒಂದು ವಾರ ದಕ್ಷಿಣ ಕನ್ನಡ ಜಿಲ್ಲೆ ಲಾಕ್‍ಡೌನ್

    ಮಂಗಳೂರು: ದಿನೇ ದಿನೇ ಕೊರೊನಾ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಒಂದು ವಾರ ಲಾಕ್‍ಡೌನ್ ಘೋಷಣೆ ಮಾಡಲಾಗಿದೆ.

    ಗುರುವಾರದಿಂದ ಒಂದು ವಾರಗಳ ಕಾಲ ಲಾಕ್‍ಡೌನ್ ಘೋಷಣೆ ಮಾಡಿ ದಕ್ಷಿಣ ಕನ್ನಡ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಆದೇಶ ಹೊರಡಿಸಿದ್ದಾರೆ. ಬುಧವಾರದ ತನಕ ಅಗತ್ಯ ವಸ್ತುಗಳ ಖರೀದಿಗೆ ಜನರಿಗೆ ಅವಕಾಶ ಮಾಡಿಕೊಡಲಾಗಿದೆ. ನಂತರ ಬುಧವಾರ ರಾತ್ರಿ 8 ಗಂಟೆಯಿಂದಲೇ ಲಾಕ್‍ಡೌನ್ ಆರಂಭವಾಗಲಿದೆ.

    ಇಂದು ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ 11 ಜಿಲ್ಲೆಗಳ ಡಿಸಿಗಳು, ಸಿಇಒಗಳು ಮತ್ತು ಎಸ್‍ಪಿಗಳ ಜೊತೆ ಸಭೆ ಮಾಡುತ್ತಿದ್ದಾರೆ. ಈ ಸಭೆಯ ನಂತರ ಯಾವ ಜಿಲ್ಲೆಯಲ್ಲಿ ಲಾಕ್‍ಡೌನ್ ಜಾರಿ ಮಾಡಬೇಕು ಎಂಬುದನ್ನು ಅಧಿಕೃತವಾಗಿ ಘೋಷಣೆ ಮಾಡಲಾಗುತ್ತದೆ. ಆದರೆ ಸಿಎಂ ಘೋಷಣೆ ಮಾಡುವ ಮೊದಲೇ ಶ್ರೀನಿವಾಸ ಪೂಜಾರಿ ಒಂದು ವಾರಗಳ ಕಾಲ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಲಾಕ್‍ಡೌನ್ ಘೋಷಣೆ ಮಾಡಿದ್ದಾರೆ.

    ಕೊರೊನಾ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಒಂದು ವಾರಗಳ ಕಾಲ ಲಾಕ್‍ಡೌನ್ ಮಾಡುವುದಕ್ಕೆ ಅವಕಾಶ ಕೊಡಿ ಎಂದು ಮುಖ್ಯಮಂತ್ರಿಗಳಿಗೆ ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಮನವಿ ಮಾಡಿದ್ದರು. ಮುಖ್ಯಮಂತ್ರಿಗಳ ಜೊತೆಗಿನ ವಿಡಿಯೋ ಕಾನ್ಫರೆನ್ಸ್‌ನಲ್ಲಿ ನಳಿನ್ ಮನವಿ ಮಾಡಿದ್ದರು. ಆಗ ಜಿಲ್ಲಾಡಳಿತವೇ ಸೂಕ್ತ ನಿರ್ಧಾರ ತೆಗೆದುಕೊಳ್ಳಲು ಯಡಿಯೂರಪ್ಪ ಸೂಚಿಸಿದ್ದರು. ಅದರಂತೆಯೇ ಒಂದು ವಾರಗಳ ಕಾಲ ಲಾಕ್‍ಡೌನ್ ಘೋಷಣೆ ಮಾಡಲಾಗಿದೆ.

    ವಿಡಿಯೋ ಕಾನ್ಫರೆನ್ಸ್‌ನಲ್ಲಿ ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್, ಜಿಲ್ಲಾ ಉಸ್ತುವಾರಿ ಸಚಿವ ಶ್ರೀನಿವಾಸ್ ಪೂಜಾರಿ, ಜಿ.ಪಂ ಸಿ.ಇ.ಓ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಸೇರಿದಂತೆ ಅಧಿಕಾರಿಗಳು ಭಾಗಿಯಾಗಿದ್ದರು.

  • ವೀರರಾಣಿ ಅಬ್ಬಕ್ಕ ಉತ್ಸವ ಸಮಾರೋಪ- ಪ್ರೇಕ್ಷಕರನ್ನು ರಂಜಿಸಿದ ಕಲಾವಿದರು

    ವೀರರಾಣಿ ಅಬ್ಬಕ್ಕ ಉತ್ಸವ ಸಮಾರೋಪ- ಪ್ರೇಕ್ಷಕರನ್ನು ರಂಜಿಸಿದ ಕಲಾವಿದರು

    – ಅಬ್ಬಕ್ಕ ಭವನಕ್ಕೆ ಶೀಘ್ರ ಚಾಲನೆ: ಸಚಿವ ಕೋಟ
    – ಅಬ್ಬಕ್ಕ ಉತ್ಸವ ರಾಜ್ಯದಾದ್ಯಂತ ನಡೆಯಲಿ: ಉಷಾ ಪಿ. ರೈ

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಆಶ್ರಯದಲ್ಲಿ ಅಸೈಗೋಳಿಯ ಕೇಂದ್ರ ಮೈದಾನದಲ್ಲಿ ಎರಡು ದಿನ ನಡೆದ ಉಳ್ಳಾಲದ ವೀರರಾಣಿ ಅಬ್ಬಕ್ಕ ಉತ್ಸವದ ಸಮಾರೋಪ ಸಮಾರಂಭ ಇಂದು ನಡೆಯಿತು. ಈ ವೇಳೆ ವಿವಿಧ ಕಲಾವಿದರು ಪ್ರೇಕ್ಷಕರನ್ನು ರಂಜಿಸಿದರು.

    ಕಾರ್ಯಕ್ರಮದಲ್ಲಿ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರು, ಅಬ್ಬಕ್ಕ ಭವನ ಕಾಮಗಾರಿ ಎಂಟು ಕೋಟಿ ರೂಪಾಯಿ ವೆಚ್ಚದಲ್ಲಿ ಶೀಘ್ರ ಆರಂಭಗೊಳ್ಳಲಿದೆ. ರಾಣಿ ಅಬ್ಬಕ್ಕ ತಾಯ್ನಾಡಿಗಾಗಿ ಮಾತ್ರವಲ್ಲದೆ ತನ್ನ ಬದುಕನ್ನೇ ತ್ಯಾಗ ಮಾಡಿದರು. ಇಂದು ರಾಷ್ಟ್ರ ಪ್ರೇಮಿಗಳಿಗೆ ಯಾರದ್ದಾದರೂ ಹೆಸರು ನೆನಪು ಬರುವುದಾದರೆ ಮೊದಲ ಹೆಸರು ಅಬ್ಬಕ್ಕಳದ್ದಾಗಿರಬೇಕು. ಅಬ್ಬಕ್ಕ ಉತ್ಸವ ಯಶಸ್ವಿಯಾಗಿ ನಡೆದಿದ್ದು ಜಿಲ್ಲಾಡಳಿತಕ್ಕೆ ಗೌರವ ತಂದಿದೆ ಎಂದು ತಿಳಿಸಿದರು.

    ಅಬ್ಬಕ್ಕ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಸಾಹಿತಿ, ಕಾದಂಬರಿಗಾರ್ತಿ ಉಷಾ ಪಿ.ರೈ, ಕುಟುಂಬ ಮತ್ತು ನಾಡಿನ ಜನರನ್ನು ಉಳಿಸಲು ಅಬ್ಬಕ್ಕ ಮಾಡಿದ ಹೋರಾಟ ಆಕೆಯ ಶೌರ್ಯಕ್ಕೆ ಸಾಕ್ಷಿ, ಆಕೆಯ ಸೈನ್ಯದಲ್ಲಿ ಎಲ್ಲಾ ಧರ್ಮದವರು ಇದ್ದರು. ಇದರಲ್ಲಿ ಪ್ರಮುಖವಾಗಿ ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿದ್ದರು. ಕೊನೆಗಾಲದಲ್ಲಿ ಅಬ್ಬಕ್ಕ ಮಸೀದಿಯಲ್ಲಿ ರಕ್ಷಣೆ ಪಡೆದಿದ್ದಳು ಎಂದು ಅಭಿಪ್ರಾಯಪಟ್ಟರು.

    ಚರಿತ್ರೆಗಾರರು ಅಬ್ಬಕ್ಕಳನ್ನು ಹಿಂದಿನ ಕಾಲದಲ್ಲಿ ಮರೆತ ಕಾರಣ ನಾವು ಶಾಲೆಯಲ್ಲಿ ಓದುತ್ತಿದ್ದಾಗ ಅಬ್ಬಕ್ಕಳ ಚರಿತ್ರೆ ಪುಸ್ತಕಗಳನ್ನು ಓದಲು ಸಾಧ್ಯವಾಗಲಿಲ್ಲ. ಆದರೆ ಹೊರ ಜಿಲ್ಲೆಯ ಚರಿತ್ರೆಗಾರರು ಹೆಚ್ಚಾಗಿ ನೆನಪಿಸಿಕೊಂಡಿದ್ದರು ಮಹತ್ವದ ವಿಷಯವಾಗಿದೆ. ನಾವು ಎಲ್ಲೇ ಇದ್ದರೂ ನಾವು ಜನಿಸಿದ ಬೆಳೆದ ಊರನ್ನು ಮರೆಯಬಾರದು. ಅಬ್ಬಕ್ಕ ಉತ್ಸವ ಕೇವಲ ದಕ್ಷಿಣ ಕನ್ನಡ ಜಿಲ್ಲೆಗೆ ಸೀಮಿತವಾಗದೆ ಮುಂದಿನ ದಿನಗಳಲ್ಲಿ ರಾಜ್ಯದಾದ್ಯಂತ ನಡೆಯಲಿ ಎಂದು ಹಾರೈಸಿದರು.

    ಹಿಂದಿನ ಕಾಲದಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತರ ನಡುವೆ ಘರ್ಷಣೆ ನಡೆದ ನೆನಪಿಲ್ಲ. ಈಗಿನ ಮಕ್ಕಳು ನಡೆದುಕೊಳ್ಳುವ ರೀತಿ ಭಯ ಹುಟ್ಟಿಸುತ್ತದೆ. ಜಾತಿ, ಮತಗಳ ಕಾರಣಕ್ಕೆ ಬೆಂಕಿ ಹೊತ್ತಿ ಉರಿದಾಗ ಬೇಸರವಾಗುತ್ತದೆ. ಹಿಂದೆಲ್ಲಾ ಇಲ್ಲದ ಎಡ, ಬಲ ಎನ್ನುವ ಪದ ಇಂದು ಹುಟ್ಟಿಕೊಂಡಿರುವುದರಿಂದ ಮಾತನಾಡಲು ಹಿಂಜರಿಕೆಯಾಗುತ್ತದೆ. ಆಳುವವರು ಯಾರೇ ಆದರೂ ದೇಶ ನಮ್ಮದು ಎಂದು ಭಾವಿಸಿದಾಗ ಯಾವುದೇ ಅಹಿತಕರ ಘಟನೆಗಳು ನಡೆಯದು. ಹೆತ್ತವರು ಮಕ್ಕಳಿಗೆ ಕೊಡುವ ದೊಡ್ಡ ಆಸ್ತಿ ವಿದ್ಯೆಯಾಗಿದೆ ಎಂದು ಹೇಳಿದರು.

    ಕಾರ್ಯಕ್ರಮದಲ್ಲಿ ಸಾಹಿತಿ, ಕಾಂದಬರಿಗಾರ್ತಿ ಉಷಾ ಪಿ.ರೈ ಹಾಗೂ ಅಂತರರಾಷ್ಟ್ರೀಯ ಕ್ರೀಡಾಪಟು ಶ್ರೀಮಾ ಪ್ರಿಯದರ್ಶಿನಿ ಅವರಿಗೆ ಅಬ್ಬಕ್ಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲ್‍ಸಾರ್, ಸಹಾಯಕ ಆಯುಕ್ತ ಮದನ್ ಮೋಹನ್, ಜಿಲ್ಲಾಧಿಕಾರಿ ಸಿಂಧು ಬಿ.ರೂಪೇಶ್, ಅಪರ ಜಿಲ್ಲಾಧಿಕಾರಿ ಎಂ.ಜೆ.ರೂಪಾ ಮೊದಲಾದವರು ಉಪಸ್ಥಿತರಿದ್ದರು.

  • ನಿಮ್ಮ ಬೆಂಕಿಗೆ ನಾವು ನೀರು ಹಾಕ್ತೇವೆ: ಕೋಟಾ ಶ್ರೀನಿವಾಸ ಪೂಜಾರಿ

    ನಿಮ್ಮ ಬೆಂಕಿಗೆ ನಾವು ನೀರು ಹಾಕ್ತೇವೆ: ಕೋಟಾ ಶ್ರೀನಿವಾಸ ಪೂಜಾರಿ

    ಧಾರವಾಡ: ಪೌರತ್ವ ಕಾಯ್ದೆ ವಿರೋಧಿಸಿ ಮಾಜಿ ಸಚಿವ ಯು.ಟಿ ಖಾದರ್ ಹೇಳಿಕೆ ವಿಚಾರವಾಗಿ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿರುಗೇಟು ನೀಡಿದ್ದು, ನೀವು ಹಾಕುವ ಬೆಂಕಿಗೆ ನೀರು ಹಾಕಿ ನಂದಿಸುವ ಸಾಮರ್ಥ್ಯ ನಮಗಿದೆ ಎಂದು ತಿರುಗೇಟು ನೀಡಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಾಷ್ಟ್ರೀಯತೆ ಗಮನ ಇಟ್ಟುಕೊಂಡು ಪ್ರಜಾಪ್ರಭುತ್ವದ ದೇಗುಲವಾದ ಸಂಸತ್‍ನಲ್ಲಿ ಪೌರತ್ವ ಕಾಯ್ದೆ ತಿದ್ದುಪಡಿಯಾಗಿ ರೂಪಗೊಂಡಿದೆ. ಬಹುಮತದಿಂದ ತಿದ್ದುಪಡಿ ಮಸೂದೆ ಕಾಯ್ದೆಯಾಗಿ ಜಾರಿಗೆ ಬಂದಿದೆ. ಈ ತಿದ್ದುಪಡಿ ಕಾಯ್ದೆಯನ್ನು ಇಡೀ ರಾಷ್ಟ್ರವೇ ಸ್ವಾಗತಿಸಿದೆ. ಆದರೆ ಅಧಿಕಾರ ಕಳೆದುಕೊಂಡ ಕೆಲವರು ರಾಜಕೀಯ ಪ್ರೇರಿತ ಚರ್ಚೆಗಳನ್ನು ಮುಂದಿಟ್ಟಿದ್ದಾರೆ. ಜನರಿಗೆ ತಪ್ಪು ಸಂದೇಶ ರವಾನಿಸುತ್ತಿದ್ದಾರೆ ಎಂದು ಕಿಡಿಕಾರಿದರು.

    ರಾಜ್ಯದಲ್ಲಿ ಬೆಂಕಿ ಬೀಳುತ್ತೆ ಅಂತಾ ಯು.ಟಿ ಖಾದರ್ ಹೇಳಿದ್ದಾರೆ. ಆದರೆ ವರುಣ ದೇವನ ಕೃಪೆಯಿಂದ ಕರ್ನಾಟಕದಲ್ಲಿ ಸಮೃದ್ಧವಾದ ಜಲವಿದೆ. ನದಿಗಳೆಲ್ಲಾ ಭರ್ತಿಯಾಗಿವೆ. ನೀವು ಹಾಕುವ ಬೆಂಕಿಗೆ ನೀರು ಹಾಕುವ ಸಾಮರ್ಥ್ಯ ನಮಗಿದೆ ಎಂದು ಸಚಿವರು ಕೈ ನಾಯಕನಿಗೆ ಟಾಂಗ್ ಕೊಟ್ಟರು.

    ಇದೇ ವೇಳೆ ಹಿಂದಿನ ಸರ್ಕಾರ ಮಠಗಳಿಗೆ ನೀಡಿದ ಅನುದಾನ ದೇವಸ್ಥಾನಗಳಿಗೆ ವರ್ಗಾಯಿಸುವ ವಿಚಾರವಾಗಿ ಮಾತನಾಡಿ, 60 ಕೋಟಿ ಹಣವನ್ನು ಮಠಗಳಿಗೆ ನೀಡುವ ಪ್ರಸ್ತಾಪ ಇದೆ. ಯಾವುದೇ ಮಠಗಳನ್ನು ನಿರ್ಲಕ್ಷ್ಯ ಮಾಡುವುದಿಲ್ಲ. ಯಾವುದೇ ಸರ್ಕಾರ ಹಣ ನೀಡಿದ್ದರೂ ಅದನ್ನು ನಾವು ನ್ಯಾಯಸಮ್ಮತವಾಗಿ ತಲುಪಿಸುತ್ತೇವೆ ಎಂದು ಹೇಳಿದರು. ಮಠಗಳಿಗೆ ನೀಡುವ ಹಣವನ್ನು ಯಾವ ದೇವಸ್ಥಾನಕ್ಕೂ ನೀಡುತ್ತಿಲ್ಲ. ಹಣಕಾಸಿನ ಹೊಂದಾಣಿಕೆ ವಿಷಯದಲ್ಲಿ ಮಾತ್ರ ಸ್ವಲ್ಪ ತಡವಾಗಿದೆ. ಪರಿಶೀಲನೆ ಮಾಡಿ ಬಿಡುಗಡೆ ಮಾಡುತ್ತೇವೆ ಎಂದು ತಿಳಿಸಿದರು.

  • ಬಿಎಸ್‍ವೈ ಸರ್ಕಾರದಿಂದ `ಬಡವರ ಕಲ್ಯಾಣ’ – ಸರ್ಕಾರಿ ಮದ್ವೆಗೆ ಷರತ್ತುಗಳು ಅನ್ವಯ

    ಬಿಎಸ್‍ವೈ ಸರ್ಕಾರದಿಂದ `ಬಡವರ ಕಲ್ಯಾಣ’ – ಸರ್ಕಾರಿ ಮದ್ವೆಗೆ ಷರತ್ತುಗಳು ಅನ್ವಯ

    – ಸರ್ಕಾರದಿಂದಲೇ ಉಚಿತ ಸಾಮೂಹಿಕ ಮದುವೆ
    – ಪ್ರತಿ ವರ್ಷ 10 ಸಾವಿರ ಜೋಡಿಗೆ ವಿವಾಹ
    – ಎ ದರ್ಜೆಯ 100 ದೇವಾಲಯದಲ್ಲಿ ಕಾರ್ಯಕ್ರಮ

    ಬೆಂಗಳೂರು: ಯಡಿಯೂರಪ್ಪ ಸರ್ಕಾರದಿಂದ ಜೋಡಿಗಳಿಗೆ ಮದುವೆ ಭಾಗ್ಯವನ್ನು ಕಲ್ಪಿಸಿದೆ. ಮುಜರಾಯಿ ಇಲಾಖೆಯ ಎ ದರ್ಜೆ 100 ದೇವಾಲಯಗಳಲ್ಲಿ ಸಾಮೂಹಿಕ ವಿವಾಹ ನಡೆಸುವುದಾಗಿ ಸರ್ಕಾರ ಪ್ರಕಟಿಸಿದೆ.

    ಒಂದೊಂದು ದೇವಾಲಯದಲ್ಲಿ 100 ಜೋಡಿಗೆ ಮದುವೆ ಮಾಡಿಸುವ ಗುರಿಯನ್ನು ಹಾಕಲಾಗಿದ್ದು, ಪ್ರತಿ ವರ್ಷ 10 ಸಾವಿರ ಜೋಡಿಗೆ ವಿವಾಹ ನಡೆಸಲು ಚಿಂತನೆ ನಡೆದಿದೆ. ಜಾತಿಭೇದವಿಲ್ಲದೇ ಎಲ್ಲಾ ವರ್ಗದ ಬಡವರಿಗಾಗಿ ಯೋಜನೆ ರೂಪಿಸಲಾಗಿದ್ದು ಹಿಂದೂ ಸಂಪ್ರದಾಯದಂತೆ ವಿವಾಹ ನಡೆಯಲಿದೆ.

    ಪ್ರತಿ ಜೋಡಿಗೆ ವಿವಾಹಕ್ಕೆ 55 ಸಾವಿರ ಖರ್ಚಿನ ಅಂದಾಜು ಮಾಡಲಾಗಿದ್ದು ಯೋಜನೆಗೆ ಪ್ರತಿ ವರ್ಷ 25-30 ಕೋಟಿ ವೆಚ್ಚ ಮಾಡಲಾಗುತ್ತದೆ. ವಧು-ವರರಿಗೆ ಸರ್ಕಾರದಿಂದಲೇ ವಸ್ತ್ರ, ಮಾಂಗಲ್ಯ ನೀಡಲಾಗುತ್ತದೆ.

    ಮುಜರಾಯಿ ಇಲಾಖೆ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಈ ಸಂಬಂಧ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಸರ್ಕಾರಿ ಮದುವೆಯ ವಿವರ ನೀಡಿದ್ದಾರೆ. ಮುಂದಿನ ವರ್ಷದಿಂದ ಸರ್ಕಾರದಿಂದಲೇ ಸಾಮೂಹಿಕ ಮದುವೆ ಮಾಡುತ್ತೇವೆ. ಎ ದರ್ಜೆಯ 90-100 ದೇವಾಲಯಗಳಲ್ಲಿ ಸಾಮೂಹಿಕ ಮದುವೆ ನಡೆಯಲಿದ್ದು, ಮೊದಲ ಸಾಮೂಹಿಕ ಮದುವೆ ಏಪ್ರಿಲ್ 26 ಮತ್ತು ಮೇ 24 ರಂದು ನಡೆಯಲಿದೆ ಎಂದು ತಿಳಿಸಿದರು.

    ಷರತ್ತುಗಳು ಏನು?
    30 ದಿನಗಳ ಮೊದಲು ನೋಂದಣಿ ಮಾಡಿಕೊಳ್ಳಬೇಕು ಮತ್ತು ವಧು-ವರರ ಪೋಷಕರು ಮದುವೆಯಲ್ಲಿ ಭಾಗವಹಿಸಬೇಕು. ಪೋಷಕರು ವಧು-ವರರ ದಾಖಲೆಯನ್ನು ನೀಡಬೇಕಾಗುತ್ತದೆ. ಪರೋಕ್ಷವಾಗಿ ಪ್ರೀತಿಸಿ ಮದುವೆ ಆಗುವ ಮಂದಿಗೆ ಅವಕಾಶವಿಲ್ಲ. ಎರಡನೇ ಮದುವೆಗೆ ಅವಕಾಶ ಇಲ್ಲ. ಕಡ್ಡಾಯವಾಗಿ ವರನಿಗೆ 21, ವಧುವಿಗೆ 18 ವರ್ಷ ಆಗಿರಲೇಬೇಕು. ಸ್ಥಳದಲ್ಲೇ ನೋಂದಣಿ ಪ್ರಕ್ರಿಯೆ ನಡೆಯುತ್ತದೆ.

    ಶಿಶು ಕಲ್ಯಾಣ ಇಲಾಖೆಯಿಂದ ಪ್ರೊತ್ಸಾಹ ಧನ ನೀಡಲಾಗುತ್ತದೆ. 40 ಸಾವಿರ ವೆಚ್ಚದಲ್ಲಿ 8 ಗ್ರಾಂ ಚಿನ್ನದ ತಾಳಿ ವರನಿಗೆ ವಸ್ತ್ರಕ್ಕಾಗಿ 5 ಸಾವಿರ ರೂ., ವಧುವಿಗೆ ಸೀರೆಗಾಗಿ 10 ಸಾವಿರ ರೂ. ನೀಡಲಾಗುತ್ತದೆ. ಹಣವನ್ನು ಮದುವೆಯ ನಂತರ ಬ್ಯಾಂಕ್ ಖಾತೆ ಜಮೆ ಮಾಡಲಾಗುತ್ತದೆ.

    ವರ್ಷಕ್ಕೆ ಒಂದು ಸಾವಿರ ಸಾಮೂಹಿಕ ವಿವಾಹ ಮಾಡುವ ಯೋಚನೆಯನ್ನು ಸರ್ಕಾರ ರೂಪಿಸಿದ್ದು ತಂದೆ ತಾಯಿ ಒಪ್ಪಿದರೆ ಅಂತರ್ಜಾತಿ ವಿವಾಹಕ್ಕೆ ಅನುಮತಿ ನೀಡಲಾಗುತ್ತದೆ. ವಿವಾಹಕ್ಕೆ ಸೂಕ್ತ ದಾಖಲೆಗಳು ಸಲ್ಲಿಕೆ ಕಡ್ಡಾಯವಾಗಿದ್ದು ಕೊಲ್ಲೂರು ಮೂಕಾಂಬಿಕೆ, ಬನಶಂಕರಿ ದೇವಾಲಯ, ಮೈಸೂರಿನ ಚಾಮುಂಡಿ, ಕುಕ್ಕೆ ಸುಬ್ರಮಣ್ಯ ಸೇರಿದಂತೆ ಎ ವಲಯದ ದೇವಾಲಯಗಳನ್ನು ಸಾಮೂಹಿಕ ವಿವಾಹಕ್ಕೆ ಆಯ್ಕೆ ಮಾಡಲಾಗಿದೆ ಎಂದು ಶ್ರೀನಿವಾಸ್ ಪ್ರಸಾದ್ ತಿಳಿಸಿದರು.

  • ಒಂದು ರಾಷ್ಟ್ರ ಒಂದು ಸಂವಿಧಾನ ಅಭಿಯಾನ – ಕಣವಿಯನ್ನು ಭೇಟಿ ಮಾಡಿದ ಕೋಟಾ

    ಒಂದು ರಾಷ್ಟ್ರ ಒಂದು ಸಂವಿಧಾನ ಅಭಿಯಾನ – ಕಣವಿಯನ್ನು ಭೇಟಿ ಮಾಡಿದ ಕೋಟಾ

    – ಸಿದ್ದರಾಮಯ್ಯ ಟೀಕೆ ಮಾಡುವುದು ಸಹಜ

    ಧಾರವಾಡ: ಒಂದು ರಾಷ್ಟ್ರ ಒಂದು ಸಂವಿಧಾನ ಅಭಿಯಾನ ಹಿನ್ನೆಲೆ ಮೀನುಗಾರಿಕೆ, ಬಂದರು ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹಿರಿಯ ಕವಿ ನಾಡೋಜ ಚನ್ನವೀರ ಕಣವಿ ಅವರ ನಿವಾಸಕ್ಕೆ ಭೇಟಿ ನೀಡಿ ಮಾತನಾಡಿದ್ದಾರೆ.

    ಸಾಹಿತಿಗಳ ಭೇಟಿಯಾಗಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಶ್ಮೀರದಲ್ಲಿ 370 ಕಾಯಿದೆ ರದ್ದು ಮಾಡಿದ ಹಿನ್ನೆಲೆ ನಾವೆಲ್ಲ ರಾಜ್ಯದಲ್ಲಿ ಪ್ರವಾಸ ಮಾಡುತ್ತಿದ್ದೇವೆ. ಕಾಯ್ದೆ ರದ್ಧತಿ ಹಾಗೂ ಒಂದು ರಾಷ್ಟ್ರ ಒಂದು ಧ್ವಜದ ಬಗ್ಗೆ ಜನರಿಗೆ ತಿಳಿವಳಿಕೆ ನೀಡಲಿದ್ದೇವೆ ಎಂದು ತಿಳಿಸಿದರು.

    ಈ ವೇಳೆ ಹಿಂದಿ ವಿಚಾರದಲ್ಲಿ ಅಮಿತ್ ಶಾ ಅವರ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಆ ವಿಚಾರದ ಬಗ್ಗೆ ಅಮಿತ್ ಶಾ ಅವರೇ ಸ್ಪಷ್ಟನೆ ಕೊಟ್ಟಿದ್ದಾರೆ. ಒಂದು ಭಾಷೆಯಾಗಿ ಹಿಂದೆ ಕಲಿಯಬೇಕು ಎಂದಿದ್ದಾರೆ ಹೀಗಾಗಿ ಆ ಬಗ್ಗೆ ಗೊಂದಲ ಬೇಡ. ನಮ್ಮ ನಿಲುವಿನಲ್ಲಿ ಕನ್ನಡಕ್ಕೆ ಪ್ರಥಮ ಆದ್ಯತೆ ಇರಲಿದೆ ಎಂದು ಸ್ಪಷ್ಟಪಡಿಸಿದರು.

    ಉಡುಪಿ ಉಸ್ತುವಾರಿ ಕೈ ತಪ್ಪಿದೆ ಎನ್ನುವ ವಿಚಾರದ ಬಗ್ಗೆ ಮಾತನಾಡಿದ ಕೋಟಾ, ಶಾಸಕರೆಲ್ಲ ಹೋಗಿ ಸಿಎಂ ಭೇಟಿ ಮಾಡಿದ್ದಾರೆ. ಸ್ವಾಭಾವಿಕವಾಗಿ ತಮ್ಮ ಕ್ಷೇತ್ರದ ಬಗ್ಗೆ ಮಾತನಾಡಲು ಭೇಟಿ ಮಾಡುವುದು ರೂಢಿ. ಉಸ್ತುವಾರಿ ವಿಚಾರದ ಬಗ್ಗೆ ಏನು ಮಾಡಿದ್ದಾರೆ ಎಂದು ನನಗೆ ಗೊತ್ತಿಲ್ಲ. ಇವತ್ತು ಹೋದ ನಂತರ ಎಲ್ಲವನ್ನು ನೋಡಿ ಸರಿ ಮಾಡುತ್ತೇವೆ. ದೊಡ್ಡ ಜಿಲ್ಲೆಯಾಗಿರುವ ಹಿನ್ನೆಲೆ ನನಗೆ ಒಂದೇ ಜಿಲ್ಲೆ ಕೊಟ್ಟಿರಬಹುದು. ಆ ಜಿಲ್ಲೆಯ ಶಾಸಕನಾದ ಕಾರಣ ದಕ್ಷಿಣ ಕನ್ನಡ ಕೊಟ್ಟಿದ್ದಾರೆ. ಕಾರ್ಯಕರ್ತನಾಗಿ ನನ್ನ ಕೆಲಸ ನಾನು ಮಾಡುವೆ ಎಂದು ಹೇಳಿದರು.

    ಸದ್ಯ 17 ಜನರ ಸಂಪುಟ ಆಗಿದೆ ಮುಂದೆ ವಿಸ್ತರಣೆಯಾದಾಗ ಮತ್ತೆ ಕೆಲವರಿಗೆ ಆದ್ಯತೆ ಕೊಡುತ್ತಾರೆ. ಸಿದ್ದರಾಮಯ್ಯ ಆಡಳಿತ ಪಕ್ಷದ ಲೋಪದೋಷ ನೋಡಿ ಟೀಕೆ ಮಾಡುವುದು ಸಹಜ. ಅವರೇನು ಹೊಗಳುತ್ತಾರೆ ಎಂದು ನಾವು ಭಾವಿಸಿಲ್ಲ. ಅವರ ಟೀಕೆಗಳಿಗೆ ತಕ್ಕ ಉತ್ತರ ಕೊಡುವ ನಿಟ್ಟಿನಲ್ಲಿ ನಾವು ಕೆಲಸ ಮಾಡಿ ತೋರಿಸುತ್ತೇವೆ. ಡಿಕೆಶಿ ಇಡಿ ವಿಚಾರ ಬಿಜೆಪಿಗೆ ಹಸ್ತಕ್ಷೇಪ ಮಾಡುವ ಅಗತ್ಯವಿಲ್ಲ ಎಂದು ತಿಳಿಸಿದರು.

  • ರಾಷ್ಟ್ರಪತಿ ಆಡಳಿತ ಬಂದ್ರೆ ಸರ್ಕಾರದ ಮೊಂಡುತನವೇ ಕಾರಣ – ಕೋಟ

    ರಾಷ್ಟ್ರಪತಿ ಆಡಳಿತ ಬಂದ್ರೆ ಸರ್ಕಾರದ ಮೊಂಡುತನವೇ ಕಾರಣ – ಕೋಟ

    ಬೆಂಗಳೂರು: ರಾಜ್ಯದಲ್ಲಿ ರಾಷ್ಟ್ರಪತಿ ಅವರ ಆಡಳಿತ ಬಂದರೆ ಅದಕ್ಕೆ ಈ ಜಂಟಿ ಪಕ್ಷಗಳೇ ಕಾರಣ ಆಗುತ್ತವೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಆರೋಪಿಸಿದ್ದಾರೆ.

    ಇಂದು ಬೆಳಗ್ಗೆ ಮಾಜಿ ಸಿಎಂ ಯಡಿಯೂರಪ್ಪ ಅವರ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಪಾಲರು ಕೇಂದ್ರಕ್ಕೆ ವರದಿ ಕೊಟ್ಟಿದ್ದಾರೆ. ಮೈತ್ರಿ ಪಕ್ಷಗಳು ಸುಪ್ರೀಂಕೋರ್ಟ್ ಗೆ ಹೋದರೂ ಪ್ರಯೋಜನ ಇಲ್ಲ ಎಂದು ಹೇಳಿದರು.

    ಈ ಹಿಂದೆ ರಾಜ್ಯಪಾಲರು ಯಡಿಯೂರಪ್ಪನವರಿಗೆ ಬಹುಮತ ಸಾಬೀತು ಮಾಡಲು ಸಮಯ ಕೊಟ್ಟಿದ್ದರು. ಅಂದು ಬಿಎಸ್‍ವೈ ರಾಜ್ಯಪಾಲರು ನಿಗದಿ ಮಾಡಿದ್ದ ಸಮಯದಲ್ಲೇ ನಿಯಮವನ್ನು ಪಾಲಿಸಿದ್ದರು. ಆದರೆ ಈ ಸರ್ಕಾರ ರಾಜ್ಯಪಾಲರ ಸಂದೇಶಗಳನ್ನು ಗೌರವಿಸಿಲ್ಲ. ಈ ಸರ್ಕಾರಕ್ಕೆ ಬಹುಮತ ಇಲ್ಲ ಅನ್ನೋದು ಸ್ಪಷ್ಟವಾಗಿದೆ ಎಂದು ಕಿಡಿಕಾರಿದರು.

    ಸೋಮವಾರ ಈ ಸರ್ಕಾರ ಬಹುಮತ ಕಳೆದುಕೊಳ್ಳುತ್ತದೆ. ಮತ್ತೊಮ್ಮೆ ಚುನಾವಣೆಗೆ ಹೋಗಲು ಯಾರಿಗೂ ಇಷ್ಟ ಇಲ್ಲ. ರಾಜ್ಯದ ರಾಜಕೀಯ ಬಿಕ್ಕಟ್ಟು ನೋಡಿ ರಾಷ್ಟ್ರಪತಿಯವರೇ ಮಧ್ಯ ಪ್ರವೇಶ ಮಾಡಬಹುದು. ರಾಷ್ಟ್ರಪತಿ ಆಡಳಿತ ಬಂದರೆ ಅದು ಈ ಸರ್ಕಾರದ ಮೊಂಡುತನದಿಂದಲೇ ಬರಬಹುದು ಎಂದು ಹೇಳಿದರು.

  • ಜಿಂದಾಲ್ ಹೋರಾಟಗಾರರಿಗೆ ನೋಟಿಸ್ – ಕೋಟಾ ಶ್ರೀನಿವಾಸ ಪೂಜಾರಿ ಖಂಡನೆ

    ಜಿಂದಾಲ್ ಹೋರಾಟಗಾರರಿಗೆ ನೋಟಿಸ್ – ಕೋಟಾ ಶ್ರೀನಿವಾಸ ಪೂಜಾರಿ ಖಂಡನೆ

    ದಾವಣಗೆರೆ: ಜಿಂದಾಲ್ ಹೋರಾಟಗಾರರಿಗೆ ನೋಟಿಸ್ ನೀಡಿದ ವಿಚಾರವನ್ನು ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟಾ ಶ್ರೀನಿವಾಸ್ ಖಂಡಿಸಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಮಾಜಿ ಸಿಎಂ ಸಿದ್ದರಾಮಯ್ಯ ಇದೇ ವಿಚಾರಕ್ಕೆ ಪಾದಯಾತ್ರೆ ಮಾಡಿದ್ದರು. ಅದಿರು ಕೊಳ್ಳೆ ಹೊಡೆಯುವುದನ್ನು ನಿಲ್ಲಿಸುತ್ತೇನೆ ಅಂದಿದ್ದರು. ಆದರೆ ಈಗ ಮೈತ್ರಿ ಸರ್ಕಾರ ಪುಡಿಗಾಸಿಗೆ ಭೂಮಿ ನೀಡಿದೆ. ಅದು ನಾಲ್ಕೈದು ಸಾವಿರ ಕೋಟಿ ಬೆಲೆ ಬಾಳುವ ಭೂಮಿಯಾಗಿದೆ. ಅದನ್ನ ನೂರಾರು ಕೋಟಿ ರೂ.ಗೆ ನೀಡಿದ್ದಾರೆ. ಆದರೂ ಸಿದ್ದರಾಮಯ್ಯ ಮೌನವಾಗಿದ್ದಾರೆ. ಇದಕ್ಕೆ ಸಿದ್ದರಾಮಯ್ಯ ಆಶೀರ್ವಾದ ಇದ್ದಂತಿದೆ. ಈ ಬಗ್ಗೆ ಕೂಡಲೇ ಸಿದ್ದರಾಮಯ್ಯ ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.

    ಸರ್ಕಾರ ಉಪಸಮಿತಿ ರಚಿಸಿ ನಾಟಕ ಮಾಡುತ್ತಿದೆ. ಜಿಂದಾಲ್ ಹೋರಾಟದಿಂದ ಬಿಜೆಪಿ ಹಿಂದೆ ಸರಿಯಲ್ಲ. ಇದನ್ನ ಅಧಿವೇಶನದಲ್ಲಿ ದೊಡ್ಡ ವಿಷಯವಾಗಿ ಚರ್ಚಿಸುತ್ತೇವೆ. ಒಂದಿಂಚು ಭೂಮಿಯನ್ನ ಜಿಂದಾಲ್ ಗೆ ನೀಡಲು ಬಿಡುವುದಿಲ್ಲ. ಇದರಲ್ಲಿ ಭಾರೀ ಪ್ರಮಾಣದ ಅಕ್ರಮ ಹಣದ ವ್ಯವಹಾರ ನಡೆದಿರುವ ಶಂಕೆ ಇದೆ. ಈ ಬಗ್ಗೆ ಸಮಗ್ರ ತನಿಖೆ ನಡೆಯಬೇಕು ಎಂದು ಪೂಜಾರಿ ಒತ್ತಾಯಿಸಿದ್ದಾರೆ.

    ಬಿಜೆಪಿ ಈಸ್ಟ್ ಇಂಡಿಯಾ ಕಂಪನಿ ಇದ್ದಂತೆ ಎಂದು ಮಾಜಿ ಎಂ ಸಿದ್ದರಾಮಯ್ಯ ಹೇಳಿಕೆಗೆ ಕಿಡಿಕಾರಿದ ಕೋಟಾ, ಸಿಎಂ ಗ್ರಾಮ ವಾಸ್ತವ್ಯದಿಂದ ಅಹಿಂದ ಕಾಣೆಯಾಗಿದೆ. ಅದನ್ನ ಸಿದ್ದರಾಮಯ್ಯ ಹುಡುಕುತ್ತಿದ್ದಾರೆ. ಸಿದ್ದರಾಮಯ್ಯಗೆ ತಮ್ಮ ತಪ್ಪಿನ ಅರಿವಾಗಿದೆ. ಹೀಗಾಗಿ ಈಸ್ಟ್ ಇಂಡಿಯಾ ಕಂಪನಿ ಅಂದಿದ್ದಾರೆ. ಈ ಬಗ್ಗೆ ಯೋಚನೆ ಮಾಡಿ. ನಿಮ್ಮ ತಪ್ಪು ನಿಮಗೆ ಅರಿವಾಗಲಿದೆ ಎಂದು ಹೇಳಿದ್ದಾರೆ.

    ಹೋರಾಟ ಮಾಡಿದವರಿಗೆ ನೋಟಿಸ್:
    ಜಿಂದಾಲ್ ಗೆ ಭೂಮಿ ಪರಭಾರೆ ವಿಚಾರಕ್ಕೆ ಸಂಬಂಧಿಸಿದಂತೆ ಜಿಂದಾಲ್ ವಿರುದ್ಧ ಹೋರಾಟ ಮಾಡಿದವರಿಗೆ ಕಾನೂನು ಸುವ್ಯವಸ್ಥೆ ಭಂಗ ಆರೋಪದಲ್ಲಿ ನೋಟಿಸ್ ನೀಡಲಾಗಿದೆ. ಜೂನ್ 15ರಂದು ವಾಟಾಳ್ ನಾಗರಾಜ್ ಜೊತೆ ಸೇರಿ, ಜಿಂದಾಲ್ ಮುಂದೆ ಪ್ರತಿಭಟನೆ ಮಾಡಲಾಗಿತ್ತು. ಹೀಗಾಗಿ ಸೆಕ್ಷನ್ 107 ಶಾಂತಿಭಂಗ ಆರೋಪದಡಿ ಸಂಡೂರು ತಹಶೀಲ್ದಾರರು 10 ಮಂದಿಗೆ ನೋಟಿಸ್ ನೀಡಿದ್ದಾರೆ.

    ತೋರಣಗಲ್ ಪೊಲೀಸರ ಶಿಫಾರಸು ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದ್ದು, ಯರಿಸ್ವಾಮಿ, ಯುಸೂಫ್, ವೆಂಕಟೇಶ, ಬಿ.ಸ್ವಾಮಿ. ಮಲ್ಲಿಕಾರ್ಜುನ, ಶಿವಕುಮಾರ್, ವೀರೇಶ್ ರಾಜ, ರವಿಕುಮಾರ್, ಬಿ.ಆರ್. ಕೃಷ್ಣ, ಸಂಡೂರು ಬಳ್ಳಾರಿ ಹೊಸಪೇಟೆ ಭಾಗದ ಹೋರಾಟಗಾರಿಗೆ ನೋಟಿಸ್ ನೀಡಲಾಗಿದೆ. 3 ಲಕ್ಷದ ಬಾಂಡ್ ನೀಡಬೇಕು, ಸಮಾವೇಶ ರಸ್ತೆ ತಡೆ ಮಾಡಲ್ಲವೆಂದು ಮುಚ್ಚಳಿಕೆ ಬರೆದು ಕೊಡಬೇಕು. ಒಂದು ವರ್ಷಕ್ಕೆ ಅನ್ವಯವಾಗುವಂತೆ ಮುಚ್ಚಳಿಕೆ ಕೊಡಬೇಕು ಎಂದು ನೋಟಿಸ್‍ನಲ್ಲಿ ತಿಳಿಸಲಾಗಿದೆ.

  • ಕುಮಾರಸ್ವಾಮಿಯ ಚಿಲ್ಲರೆ ಆಟ ನಡೆಯಲ್ಲ- ಕೋಟ ಶ್ರೀನಿವಾಸ ಪೂಜಾರಿ

    ಕುಮಾರಸ್ವಾಮಿಯ ಚಿಲ್ಲರೆ ಆಟ ನಡೆಯಲ್ಲ- ಕೋಟ ಶ್ರೀನಿವಾಸ ಪೂಜಾರಿ

    ಉಡುಪಿ: ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಚಿಲ್ಲರೆ ಆಟ ನಡೆಯಲ್ಲ. ತುರ್ತು ಪರಿಸ್ಥಿತಿ ಸಮಯದಲ್ಲೇ ಪತ್ರಿಕಾ ಸ್ವಾತಂತ್ರ್ಯದ ಮೇಲೆ ಕಡಿವಾಣ ಹಾಕಲು ಆಗಿರಲಿಲ್ಲ. ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಇಂತಹ ಚಿಲ್ಲರೆ ಆಟಗಳು ನಡೆಯವುದಿಲ್ಲ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ವಾಗ್ದಾಳಿ ನಡೆಸಿದ್ದಾರೆ.

    ಮಾಧ್ಯಮಗಳಿಗೆ ಕಡಿವಾಣ ಹಾಕುವುದಾಗಿ ಸಿಎಂ ಹೇಳಿಕೆ ವಿಚಾರ ಸಂಬಂಧ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೋತ್ತರ ಸಮೀಕ್ಷೆಯಿಂದ ರಾಷ್ಟ್ರಾದ್ಯಂತ ಸಂಚಲನ ಸೃಷ್ಟಿಯಾಗಿದೆ. 350ಕ್ಕೂ ಅಧಿಕ ಸ್ಥಾನ ಪಡೆಯುವ ನಮ್ಮ ನಿರೀಕ್ಷೆ ನಿಜವಾಗಿದೆ. ದೇಶದಲ್ಲಿ ಮಹಾಮೈತ್ರಿ ನುಚ್ಚುನೂರಾಗಲಿದೆ. ಕರ್ನಾಟಕದಲ್ಲಿ 22ಕ್ಕೂ ಅಧಿಕ ಸ್ಥಾನ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಮೈತ್ರಿ ಕೂಟದಲ್ಲಿ ಚುನಾವಣೆ ಸಂದರ್ಭದಲ್ಲೇ ಬಿರುಕಾಗಿದೆ. ಆಂತರಿಕ ಭಿನ್ನಾಭಿಪ್ರಾಯ ಪರಾಕಾಷ್ಟೆಗೆ ಮುಟ್ಟುತ್ತದೆ. ರಾಜ್ಯದಲ್ಲಿ ಮೈತ್ರಿಕೂಟ ಛಿದ್ರವಾಗಲಿದೆ. ಜೆಡಿಎಸ್ ಮುಖಂಡ ಬಸವರಾಜ್ ಹೊರಟ್ಟಿಯವರು ರಾಜಕೀಯದಲ್ಲಿ ಹಿರಿಯರಾಗಿದ್ದಾರೆ. ಮೈತ್ರಿ ಕೂಟ ಬದುಕಲ್ಲ ಅನ್ನೋದು ಅವರಿಗೆ ಅರ್ಥ ಆಗಿದೆ. ಜನರ ಅಭಿಪ್ರಾಯ ಹೊರಟ್ಟಿಯವರ ಬಾಯಲ್ಲಿ ಬಂದಿದೆ. ಬಿಜೆಪಿ ಸ್ವಂತ ಶಕ್ತಿಯ ಮೇಲೆ 300 ಕ್ಕೂ ಅಧಿಕ ಸ್ಥಾನ ಗೆಲ್ಲಲಿದೆ ಎಂದರು.

    ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರಿಗೆ ಈ ದೇಶದ ಮತದಾರರ ಮೇಲೆಯೇ ನಂಬಿಕೆ ಇಲ್ಲ. ದೀದಿಗೆ ಮತಯಂತ್ರದ ಮೇಲೂ ನಂಬಿಕೆ ಇಲ್ಲ. ಅವರು ಗೆದ್ದರೆ ಎಲ್ಲವೂ ಸರಿ ಇದೆ ಎಂದು ಹೇಳುತ್ತಾರೆ. ಸೋಲಿನ ಭೀತಿಯಿಂದ ಮಮತಾ ಬ್ಯಾನರ್ಜಿಗೆ ಈ ಅಪನಂಬಿಕೆ ಮೂಡಿದೆ. ಇದು ಪ್ರಜಾಪ್ರಭುತ್ವಕ್ಕೆ ಶೋಭೆಯಲ್ಲ ಎಂದು ಕಿಡಿಕಾರಿದರು.

  • ಹುದ್ದೆಗೆ ತಕ್ಕುದಾದ ಮಾತನಾಡಿ, ಕರಾವಳಿಯನ್ನು ನೀವು ಉದ್ಧಾರ ಮಾಡಿಲ್ಲ- ಸಿಎಂ ವಿರುದ್ಧ ಕೋಟಾ ಕಿಡಿ

    ಹುದ್ದೆಗೆ ತಕ್ಕುದಾದ ಮಾತನಾಡಿ, ಕರಾವಳಿಯನ್ನು ನೀವು ಉದ್ಧಾರ ಮಾಡಿಲ್ಲ- ಸಿಎಂ ವಿರುದ್ಧ ಕೋಟಾ ಕಿಡಿ

    ಉಡುಪಿ: ಮುಖ್ಯಮಂತ್ರಿ ಹುದ್ದೆಗೆ ತಕ್ಕುದಾದ ಮಾತುಗಳನ್ನಾಡಿ. ಕರಾವಳಿಯನ್ನು ನೀವು ಉದ್ಧಾರ ಮಾಡಿಲ್ಲ. ನಿಮ್ಮ ಕುಟುಂಬ ರಾಜಕಾರಣಕ್ಕೆ ಕರಾವಳಿ ಜನ ಬೆಂಬಲ ನೀಡಲ್ಲ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ವಿರುದ್ಧ ಗರಂ ಆಗಿದ್ದಾರೆ.

    ಕರಾವಳಿ ಜನರಿಗೆ ತಿಳುವಳಿಕೆ ಇಲ್ಲ. ಅವರು ಮೋದಿಗೆ ವೋಟ್ ಹಾಕ್ತಾರೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಕರಾವಳಿಗೆ ನಿಮ್ಮ ಕೊಡುಗೆ ಏನು ಎಂದು ಮೊದಲು ಹೇಳಿ. ಉಡುಪಿ ಜನ ನಿಮ್ಮ ಮುಂದೆ ತಿರುಗಿ ಬಿದ್ದಿದ್ದಾರೆ. ನಿಮಗೆ ಮತ ಹಾಕಿಲ್ಲ ಅಂತ ಕರಾವಳಿ ಜನರ ಅವಹೇಳನ ಮಾಡ್ತೀರಾ. ಹೇಳಿಕೆ ವಾಪಸ್ ಪಡೆದು ಕ್ಷಮೆ ಕೇಳಿ ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಉಡುಪಿ, ಕಾಪು, ಕಾರ್ಕಳ ಜನಕ್ಕೆ ತಿಳುವಳಿಕೆ ಇಲ್ಲ- ಸಿಎಂ ಹೇಳಿಕೆ ವಿರುದ್ಧ ಕರಾವಳಿ ಗರಂ

    ಕುಟುಂಬ ರಾಜಕಾರಣ ಕರಾವಳಿಯಲ್ಲಿ ನಡೆಯಲ್ಲ. ನೀವೇನು ಕರಾವಳಿಯನ್ನು ಉದ್ಧಾರ ಮಾಡಿಲ್ಲ. ಮುಖ್ಯಮಂತ್ರಿ ಹುದ್ದೆಗೆ ತಕ್ಕುದಾದ ಮಾತನ್ನು ಆಡಿ. ಬಜೆಟ್ ನಲ್ಲಿ ಕರಾವಳಿ ಗೆ ಅನ್ಯಾಯ ಮಾಡಿದ್ದೀರಿ. ವಿಧಾನಸೌಧದ ಎದುರು ಕರಾವಳಿ ಶಾಸಕರು ಧರಣಿ ಕೂತಿದ್ದನ್ನು ಮರೆತು ಬಿಟ್ರಾ ಎಂದು ಪ್ರಶ್ನಿಸಿ, ಯಾವ ಸಿಎಂ ಕೂಡ ನಿಮ್ಮಷ್ಟು ಕರಾವಳಿಯನ್ನು ಅವಹೇಳನ ಮಾಡಿಲ್ಲ ಎಂದು ಸಿಎಂ ವಿರುದ್ಧ ಗರಂ ಆದ್ರು. ಇದನ್ನೂ ಓದಿ: ಲೋಕಾಯುಕ್ತ ಮುಗಿಸಿದಂತೆ ಲೋಕಪಾಲ್ ಮುಗಿಸ್ತೀರಾ: ಖರ್ಗೆಗೆ ಶ್ರೀನಿವಾಸ ಪೂಜಾರಿ ಪ್ರಶ್ನೆ

    ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ದೇಶದಲ್ಲೇ ಉಡುಪಿ ಮುಂಚೂಣಿಯಲ್ಲಿದೆ. ಕರಾವಳಿಯ ಅಭಿವೃದ್ಧಿಗೆ ದೇವೇಗೌಡರ ಕುಟುಂಬ ಕಾರಣ ಅಲ್ಲ. ರೇವಣ್ಣ ಲೋಕೋಪಯೋಗಿ ಇಲಾಖೆಯಿಂದ ಕರಾವಳಿಗೆ ಏನು ಕೊಟ್ಟಿದ್ದೀರಿ. ಬಂದರು ಅಭಿವೃದ್ಧಿಗೆ ಸಿಎಂ ಏನು ಕೊಟ್ಟಿದ್ದೀರಿ. ನಿಮ್ಮ ಕುಟುಂಬ ರಾಜಕಾರಣಕ್ಕೆ ಕರಾವಳಿಗರು ಬೆಲೆ ನೀಡಲ್ಲ. ನಿಮ್ಮ ಪಕ್ಷಕ್ಕೆ ವಿದ್ಯಾವಂತ ಜನರು ವೋಟ್ ಹಾಕಲ್ಲ. ಮುಂದಿನ ಚುನಾವಣೆಯಲ್ಲಿ ಜಿಡಿಎಸ್ ಅಭ್ಯರ್ಥಿಗೆ ತಕ್ಕಪಾಠ ಕಲಿಸುತ್ತಾರೆ. ನಿಮ್ಮ ಮಾತಿನಿಂದ ಬಿಜೆಪಿಗೆ ಬಹುಮತ ಬರಲು ಅನುಕೂಲವಾಗಿದೆ ಅಂದ್ರು.