Tag: ಕೋಟಾ ಶ್ರೀನಿವಾಸ ಪೂಜಾರಿ

  • ಮೊದಲ ದಲಿತ, ಮುಸ್ಲಿಂ ವ್ಯಕ್ತಿಯನ್ನು ರಾಷ್ಟ್ರಪತಿ ಮಾಡಿದ್ದು ಬಿಜೆಪಿ- ಟ್ವೀಟ್ ಮಾಡಿ ಮುಜುಗರಕ್ಕೀಡಾದ ಕೋಟಾ

    ಮೊದಲ ದಲಿತ, ಮುಸ್ಲಿಂ ವ್ಯಕ್ತಿಯನ್ನು ರಾಷ್ಟ್ರಪತಿ ಮಾಡಿದ್ದು ಬಿಜೆಪಿ- ಟ್ವೀಟ್ ಮಾಡಿ ಮುಜುಗರಕ್ಕೀಡಾದ ಕೋಟಾ

    ಬೆಂಗಳೂರು: ವಾಟ್ಸಾಪ್‌ನಲ್ಲಿ ಬಂದ ಸುಳ್ಳು ಸುದ್ದಿಗಳನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ತೀವ್ರ ಮುಜುಗರಕ್ಕೀಡಾಗಿದ್ದಾರೆ. ಬಳಿಕ ಟ್ವೀಟ್ ಅನ್ನು ಡಿಲೀಟ್ ಮಾಡಿದ್ದಾರೆ.

    ಯಾವ್ಯಾವ ಸಮುದಾಯದವರನ್ನು ಬಿಜೆಪಿ ರಾಷ್ಟ್ರಪತಿ ಮಾಡಿದೆ ಎಂಬ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಟ್ವೀಟ್ ಮಾಡಿದ್ದಾರೆ. ಮೊದಲ ಮುಸ್ಲಿಂ ರಾಷ್ಟ್ರಪತಿಯನ್ನು ಮಾಡಿದ್ದು ನಾವೇ.. ಮೊದಲ ದಲಿತ ವ್ಯಕ್ತಿಯನ್ನು ರಾಷ್ಟ್ರಪತಿ ಮಾಡಿದ್ದು ನಾವೇ.. ಮೊದಲ ಮಹಿಳೆಯನ್ನು ರಾಷ್ಟ್ರಪತಿ ಮಾಡಿದ್ದು ನಾವೇ.. ನಾವು ಜಾತಿವಾದಿಗಳಲ್ಲ.. ರಾಷ್ಟ್ರವಾದಿಗಳು.. ವಾಟ್ಸಾಪ್‌ನಲ್ಲಿ ಬಂದ ಸಂದೇಶ ಎಂದು ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ. ಇದಕ್ಕೆ ಸಾರ್ವಜನಿಕ ವಲಯದಲ್ಲೂ ಸಾಕಷ್ಟು ಆಕ್ಷೇಪ, ಟೀಕೆಗಳು ವ್ಯಕ್ತವಾಗಿವೆ. ಇದನ್ನೂ ಓದಿ: ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 15 ವರ್ಷ ಪೂರೈಸಿದ ಹಿಟ್‌ಮ್ಯಾನ್ – ಭಾವುಕ ಪತ್ರ ಬರೆದ ರೋಹಿತ್ ಶರ್ಮಾ

    ಇದಕ್ಕೆ ವಾಟ್ಸಾಪ್ ವಿಶ್ವವಿದ್ಯಾನಿಲಯದವರ ಜ್ಞಾನದ ಮಟ್ಟ ಇದು ಎಂದು ದಿನೇಶ್ ಗುಂಡೂರಾವ್ ತಿರುಗೇಟು ನೀಡಿದ್ದಾರೆ. ಕೋಟಾ ಶ್ರೀನಿವಾಸ ಪೂಜಾರಿ ಸಚಿವರಾಗಿದ್ದುಕೊಂಡು ವಾಟ್ಸಾಪ್‌ನಲ್ಲಿ ಬಂದಿದ್ದನ್ನು ಯಥಾವತ್ತಾಗಿ ಪೋಸ್ಟ್ ಮಾಡುತ್ತಾರೆ ಎಂದರೆ ಅವರ ಬುದ್ದಿಗೆ ಎಷ್ಟು ಮಂಕು ಕವಿದಿರಬಹುದು? ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಶ್ರೀಲಂಕಾ ಬಿಕ್ಕಟ್ಟು; ಡೀಸೆಲ್‌ಗಾಗಿ ಬಂಕ್‌ನಲ್ಲಿ 5 ದಿನ ಕ್ಯೂನಲ್ಲಿ ನಿಂತಿದ್ದ ಟ್ರಕ್‌ ಡ್ರೈವರ್‌ ಸಾವು

    ಪೂಜಾರಿಯವರೇ ವಾಟ್ಸ್ಅಪ್‌ನಲ್ಲಿ ಬಂದಿರುವುದನ್ನು ಪೋಸ್ಟ್ ಮಾಡುವ ಮುನ್ನ ಇತಿಹಾಸ ಓದಿಕೊಳ್ಳಿ. ಮೊದಲ ಮುಸ್ಲಿಂ ರಾಷ್ಟ್ರಪತಿ ಕಾಂಗ್ರೆಸ್‌ನ ಕೊಡುಗೆ, ಮೊದಲ ಸಿಖ್ಖ್ ರಾಷ್ಟ್ರಪತಿ ಕಾಂಗ್ರೆಸ್‌ನ ಕೊಡುಗೆ, ಮೊದಲ ದಲಿತ ರಾಷ್ಟ್ರಪತಿಯೂ ಕಾಂಗ್ರೆಸ್‌ನ ಕೊಡುಗೆ, ಅಷ್ಟೆ ಏಕೆ? ಮೊದಲ ಮಹಿಳಾ ರಾಷ್ಟ್ರಪತಿಯ ಕೊಡುಗೆಯೂ ಕಾಂಗ್ರೆಸ್‌ನದ್ದೆ ಎಂದು ಸ್ಪಷ್ಟಪಡಿಸಿದ್ದಾರೆ.

    ನೀವು ರಾಷ್ಟ್ರವ್ಯಾದಿಗಳು: ಕಾಂಗ್ರೆಸ್ ಯಾವತ್ತೂ ರಾಷ್ಟ್ರಪತಿ ಮಾಡಿದ್ದನ್ನು ಪ್ರಚಾರಕ್ಕೆ ಬಳಸಲಿಲ್ಲ. ಇದೇ ಕಾಂಗ್ರೆಸ್‌ಗೂ ಬಿಜೆಪಿಗೂ ಇರುವ ವ್ಯತ್ಯಾಸ. ನೀವು ರಾಷ್ಟ್ರವಾದಿಗಳಲ್ಲ. ರಾಷ್ಟ್ರವ್ಯಾದಿಗಳು ಎಂದು ದಿನೇಶ್ ಗುಂಡೂರಾವ್ ಕುಟುಕಿದ್ದಾರೆ.

    Live Tv

  • ಸಮಾಜ ಕಲ್ಯಾಣ ಇಲಾಖೆಯಿಂದ ಕಲ್ಯಾಣ ಮಿತ್ರ ಸಹಾಯವಾಣಿ ಪ್ರಾರಂಭ

    ಸಮಾಜ ಕಲ್ಯಾಣ ಇಲಾಖೆಯಿಂದ ಕಲ್ಯಾಣ ಮಿತ್ರ ಸಹಾಯವಾಣಿ ಪ್ರಾರಂಭ

    ಬೆಂಗಳೂರು: ಸಮಾಜ ಕಲ್ಯಾಣ ಇಲಾಖೆ ಜನರಿಗೆ ಮತ್ತಷ್ಟು ಹತ್ತಿರವಾಗಲು ವಿನೂತನ ಪ್ರಯತ್ನಕ್ಕೆ ಕೈಹಾಕಿದೆ. ಜನರ ಸಮಸ್ಯೆಗೆ ಶೀಘ್ರವೇ ಪರಿಹಾರ ನೀಡಲು ವಿಶೇಷವಾಗಿ ಕಲ್ಯಾಣ ಮಿತ್ರ ಎಂಬ ಸಹಾಯವಾಣಿ ಪ್ರಾರಂಭ ಮಾಡಿದೆ.

    ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ನೂತನ ಸಹಾಯವಾಣಿ ಕೇಂದ್ರವನ್ನು ಲೋಕಾರ್ಪಣೆ ಮಾಡಿದರು. ಕಾರ್ಯಕ್ರಮದಲ್ಲಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು. ಇದನ್ನೂ ಓದಿ: ಶ್ರೀರಾಮಚಂದ್ರನಿಗೂ ಟೀಕೆಗಳು ತಪ್ಪಲಿಲ್ಲ: ಬೊಮ್ಮಾಯಿ

    ಕಲ್ಯಾಣ ಮಿತ್ರ ಸಹಾಯವಾಣಿ ದಿನದ 24 ಗಂಟೆ ವಾರದ ಏಳು ದಿನಗಳು ಕಾರ್ಯ ನಿರ್ವಹಿಸಲಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡ ಇಲಾಖೆಗಳು ಒಳಗೊಂಡ ಸಹಾಯವಾಣಿ ಇದಾಗಿದೆ. ಈ ಸಹಾಯವಾಣಿಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಅಧೀನದಲ್ಲಿರುವ ಎಲ್ಲಾ ನಿಗಮ-ಮಂಡಳಿಗಳ ಮಾಹಿತಿ ಲಭ್ಯವಾಗಲಿದೆ. ಇಲಾಖೆಯ ಕಾರ್ಯಕ್ರಮಗಳ ಸಂಪೂರ್ಣ ಮಾಹಿತಿ ಪಡೆಯಬಹುದು. ಇಲಾಖೆಯ ವಿವಿಧ ಯೋಜನೆಗಳಿಗೆ ಅರ್ಜಿ ಸಲ್ಲಿಕೆಯ ಮಾಹಿತಿ ಪಡೆಯಬಹುದಾಗಿದೆ. ಇಲಾಖೆಯ ವಿವಿಧ ಸೌಲಭ್ಯಗಳನ್ನು ಪಡೆಯೋ ರೀತಿ ಬಗ್ಗೆ ಮಾಹಿತಿ ಸಿಗಲಿದೆ. ಇಲಾಖೆಯ ಯಾವುದೇ ಸಮಸ್ಯೆಗಳಿಗೆ ಸಹಾಯವಾಣಿಗೆ ಕರೆ ಮಾಡಿ ಪರಿಹಾರ ಮಾಡಿಕೊಳ್ಳಬಹುದಾಗಿದೆ. ಇದನ್ನೂ ಓದಿ: ಬಿಜೆಪಿ ಪಕ್ಷಕ್ಕೆ ಬೂತ್ ಮಟ್ಟದಲ್ಲೇ ರೀಚಾರ್ಜ್: ಸುನಿಲ್ ಕುಮಾರ್

    ಸಹಾಯವಾಣಿಯ ನಂಬರ್
    9482300400
    080-22634300
    Twitter-@SWDGok
    Facebook-@socialWelfareDeprtment
    Wts up- 9482300400

  • ಒಂದೇ ರೆಸಾರ್ಟ್‌ನಲ್ಲಿ 30ಕ್ಕೂ ಹೆಚ್ಚು ಕೋವಿಡ್ ಪ್ರಕರಣ ದೃಢ – ರೆಸಾರ್ಟ್ ಮುಚ್ಚದೆ ಎಂದಿನಂತೆ ಕಾರ್ಯ

    ಒಂದೇ ರೆಸಾರ್ಟ್‌ನಲ್ಲಿ 30ಕ್ಕೂ ಹೆಚ್ಚು ಕೋವಿಡ್ ಪ್ರಕರಣ ದೃಢ – ರೆಸಾರ್ಟ್ ಮುಚ್ಚದೆ ಎಂದಿನಂತೆ ಕಾರ್ಯ

    ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಹೊಸ ವರ್ಷಾಚರಣೆ ಬಳಿಕ ರೆಸಾರ್ಟ್ ಸಿಬ್ಬಂದಿಗೆ ಕೋವಿಡ್ ವಕ್ಕರಿಸುತ್ತಿದೆ. ರೆಸಾರ್ಟ್ ಸಿಬ್ಬಂದಿಗೆ ಕೋವಿಡ್ ಬಂದರೂ ರೆಸಾರ್ಟ್‍ಗಳನ್ನು ಮಾತ್ರ ಸೀಲ್‍ಡೌನ್ ಮಾಡುತ್ತಿಲ್ಲ. ಈ ಕುರಿತು ಕೊಡಗು ಕೋವಿಡ್ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಶುಕ್ರವಾರವಷ್ಟೇ ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಿದ್ದರು. ಅವರ ಮಾತಿಗೂ ರೆಸಾರ್ಟ್‍ನಲ್ಲಿ ಬೆಲೆಯಿಲ್ಲದಂತಾಗಿದೆ.

    ಮಡಿಕೇರಿ ತಾಲೂಕಿನ ಮೇಕೇರಿ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಕೂರ್ಗ್ ವೈಲ್ಡರ್ಸ್ ರೆಸಾರ್ಟ್ ನ 31 ಸಿಬ್ಬಂದಿಗೆ ಕೋವಿಡ್ ದೃಢಪಟ್ಟಿದ್ದರೂ, ರೆಸಾರ್ಟ್ ಸೀಲ್‌ಡೌನ್‌ ಮಾಡಿಲ್ಲ. ಬದಲಾಗಿ ಸೋಂಕು ದೃಢಪಟ್ಟಿರುವ ಸಿಬ್ಬಂದಿಯನ್ನು ಪ್ರತ್ಯೇಕವಾಗಿರಿಸಿ ರೆಸಾರ್ಟ್ ಎಂದಿನಂತೆ ಕಾರ್ಯನಿರ್ವಹಿಸುತ್ತಿದೆ. ಸ್ಥಳಕ್ಕೆ ಭೇಟಿ ನೀಡಿದ ಕೊಡಗು ಡಿಹೆಚ್‍ಓ ವೆಂಕಟೇಶ್ ರೆಸಾರ್ಟ್ ಸೀಲ್‌ಡೌನ್‌ ಮಾಡುವಂತೆ ವ್ಯವಸ್ಥಾಪಕರಿಗೆ ತಿಳಿಸಿದ್ದರು. ಇದನ್ನೂ ಓದಿ: ಪೊಲೀಸರನ್ನು ನೋಡಿ ಮಾಸ್ಕ್ ಹಾಕಬೇಡಿ – ಬೈಕ್ ಸವಾರನಿಗೆ ಮನವಿ ಮಾಡಿದ ಪೇದೆ 

    ಸ್ಥಳಕ್ಕೆ ಬಂದ ಮಡಿಕೇರಿ ತಹಶೀಲ್ದಾರ್ ಮಹೇಶ್, ಸೋಂಕಿತ ರೆಸಾರ್ಟ್ ಸಿಬ್ಬಂದಿಯನ್ನು ಕ್ವಾರಂಟೈನ್ ಮಾಡಲಾಗಿರುವ ಸ್ಥಳಕ್ಕಷ್ಟೇ ಹೋಗಿ ಪರಿಶೀಲನೆ ನಡೆಸಿದರು. ಆದರೆ ರೆಸಾರ್ಟ್ ಏಳು ದಿನಗಳವರೆಗೆ ಸೀಲ್ ಡೌನ್ ಮಾಡುವ ಬಗ್ಗೆ ಯಾವುದೇ ಮಾತಾಡಲಿಲ್ಲ.

    ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ತಹಶೀಲ್ದಾರ್ ಮಹೇಶ್, ಕೋವಿಡ್ ಸೋಂಕಿತ ಸಿಬ್ಬಂದಿಯನ್ನು ಪ್ರತ್ಯೇಕವಾಗಿರಿಸಲಾಗಿದೆ. ರೆಸಾರ್ಟ್‍ಗೆ ಇದರಿಂದ ಯಾವುದೇ ಸಮಸ್ಯೆ ಇಲ್ಲ ಎಂದು ಬೇಜವಾಬ್ದಾರಿಯ ಉತ್ತರ ನೀಡಿದ್ದಾರೆ. ಸೋಂಕಿತರನ್ನು ಏಳು ದಿನಗಳ ಕಾಲ ಪ್ರತ್ಯೇಕವಾಗಿ ಇರಿಸಲಾಗುವುದು. ಅವರಿಗೆ ಏಳು ದಿನಗಳ ಬಳಿಕ ಮತ್ತೊಮ್ಮೆ ಕೋವಿಡ್ ಪರೀಕ್ಷೆ ಮಾಡಲಾಗುವುದು. ಆಗಲೂ ಪಾಸಿಟಿವ್ ಬಂದರೆ ನಿಯಮದಂತೆ ಕ್ರಮಕೈಗೊಳ್ಳಲಾಗುವುದು ಎಂದಿದ್ದಾರೆ.

    ತಹಶೀಲ್ದಾರ್ ಅವರ ಈ ನಡೆ ಹಲವು ಅನುಮಾನಗಳಿಗೆ ಎಡೆಮಾಡಿದೆ. ಶುಕ್ರವಾರವಷ್ಟೇ ಕೊಡಗು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸಭೆ ನಡೆಸಿದ್ದ ಕೊಡಗು ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರು, ಯಾವುದೇ ರೆಸಾರ್ಟ್ ನಲ್ಲಿ ಕೋವಿಡ್ ಪ್ರಕರಣಗಳು ಪತ್ತೆಯಾದಲ್ಲಿ ಅಂತಹ ರೆಸಾರ್ಟ್ ಅನ್ನು ಸೀಲ್ ಡೌನ್ ಮಾಡುವಂತೆ ಸೂಚಿದ್ದರು. ಆದರೆ ಮಡಿಕೇರಿ ಅಧಿಕಾರಿಗಳ ನಡೆ ಸಚಿವರ ನಿರ್ದೇಶನಕ್ಕೂ ಕವಡೆ ಮಾತಿನ ಕಿಮ್ಮತ್ತಿಲ್ವಾ ಎನ್ನೋ ಪ್ರಶ್ನೆ ಮೂಡುವಂತೆ ಮಾಡಿದೆ. ಇದನ್ನೂ ಓದಿ:  50 ಕೋಟಿ ರೂ. ಜಾಗತಿಕ ಕ್ರೆಡಿಟ್ ಕಾರ್ಡ್ ಹಗರಣ ಭೇದಿಸಿದ ಪೊಲೀಸರು – 7 ಜನ ಅರೆಸ್ಟ್ 

  • ದೇಗುಲಗಳನ್ನು ಭಕ್ತರ ಕೈಗೆ ನೀಡಬೇಕೆಂಬ ಚಿಂತನೆ ಇದೆ: ಕೋಟ

    ದೇಗುಲಗಳನ್ನು ಭಕ್ತರ ಕೈಗೆ ನೀಡಬೇಕೆಂಬ ಚಿಂತನೆ ಇದೆ: ಕೋಟ

    ಬೆಂಗಳೂರು: ಹಿಂದೂ ದೇವಾಲಯಗಳನ್ನ ಸರ್ಕಾರದ ಹಿಡಿತದಿಂದ ತಪ್ಪಿಸಿ ಭಕ್ತರ ಕೈಗೆ ನೀಡಬೇಕು ಎಂಬ ಚಿಂತನೆ ಇದೆ ಅಂತ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

    ಸರ್ಕಾರದ ವ್ಯಾಪ್ತಿಯಲ್ಲಿರುವ ದೇವಸ್ಥಾನಗಳ ಹಸ್ತಾಂತರ ವಿಚಾರ ಸಂಬಂಧ ಮಾಧ್ಯಮಗಳ ಜೊತೆ ಮಾತನಾಡಿದರು. ಬಿಜೆಪಿ, ಆರ್ ಎಸ್.ಎಸ್ ಕಾರ್ಯಕರ್ತರಿಗೆ ನೂರಾರು ಕೋಟಿ ಬೆಲೆ ಬಾಳುವ ದೇವಸ್ಥಾನಗಳನ್ನ ಹಸ್ತಾಂತರಿಸುವ ಅಜೆಂಡಾ ಎಂಬ ಡಿಕೆಶಿ ಆರೋಪಕ್ಕೆ ತಿರುಗೇಟು ನೀಡಿದರು.

    ಹಿಂದೂ ದೇವಾಲಯಗಳನ್ನ ಸರ್ಕಾರದ ಹಿಡಿತದಿಂದ ತಪ್ಪಿಸಿ ಭಕ್ತರ ಕೈಗೆ ನೀಡಬೇಕು ಎಂಬ ಚಿಂತನೆ ಇದೆ. ಭಕ್ತರು ಅಂದ್ರೆ ಬಿಜೆಪಿ, ಆರ್.ಎಸ್.ಎಸ್ ಕಾರ್ಯಕರ್ತರು ಆಗಿರಬಹುದು. ಡಿಕೆಶಿ ಶಿವಕುಮಾರ್ ಕೂಡ ಆಗಿರಬಹುದು. ಭಕ್ತರು ಅಂದ್ರೆ ಎಲ್ಲರು ಬರುತ್ತಾರೆ. ನಾವು ಭಕ್ತರಿಗೆ ಕೊಡಬೇಕು ಅಂತ ಆಲೋಚಿಸಿದ್ದೇವೆ. ಇನ್ನೂ ಮಾರ್ಗಸೂಚಿ ಸಿದ್ಧಪಡಿಸಿಲ್ಲ ಎಂದರು. ಇದನ್ನೂ ಓದಿ: ಸರ್ಕಾರಿ ನಿಯಂತ್ರಣದ ದೇಗುಲಗಳಿಗೆ ಶೀಘ್ರ ಸ್ವಾತಂತ್ರ್ಯ- ಆದಾಯ ದೇವಾಲಯಗಳ ಅಭಿವೃದ್ಧಿಗೆ ಮೀಸಲು

    ಇದೇ ವೇಳೆ ಉಡುಪಿ ಜಿಲ್ಲೆಯ ಕೋಟಾದಲ್ಲಿ ಗಿರಿಜನರ ಮೇಲೆ ಪೋಲಿಸರು ವಿನಾಕಾರಣ ಹಲ್ಲೆ ಮಾಡಲಾಗಿತ್ತು. ಒಬ್ಬ ಪಿಎಸ್‍ಐ, ಸಸ್ಪೆಂಡ್ ಆರು ಜನರ ವರ್ಗಾವಣೆ ಕೂಡ ಮಾಡಲಾಗಿದೆ. ನಾನು ಸ್ಥಳಕ್ಕೆ ಭೇಟಿ ನೀಡಿದ್ದೆ. ಎಸ್‍ಪಿ ಮತ್ತು ಜಿಲ್ಲಾಧಿಕಾರಿಗಳ ಜೊತೆ ಚರ್ಚೆ ನಡೆಸಿದ್ದೆ. ಈ ಮಧ್ಯೆ ಪ್ರಕರಣ ಹೊಸ ತಿರುವು ಪಡೆದುಕೊಂಡಿತ್ತು. ಒಬ್ಬ ಕಾನ್ಸ್‍ಟೇಬಲ್ ನನ್ನ ಮೇಲೆ ಹಲ್ಲೆಯಾಗಿದೆ ಎಂದು ಆಸ್ಪತ್ರೆಗೆ ದಾಖಲಾಗಿದ್ದರು. ಇದರಿಂದ ಆದಿವಾಸಿ ಕೇರಿಯಲ್ಲಿ ಆತಂಕ ಸೃಷ್ಟಿಯಾಗಿತ್ತು. ಪ್ರಕರಣದ ಸಂಬಂಧ ಗೃಹ ಸಚಿವ ಆರಗ ಜ್ಞಾನೇಂದ್ರ ಭೇಟಿ ಮಾಡಿದ್ದೆ. ಅಲ್ಲಿರುವ ಪರಿಸ್ಥಿತಿಯನ್ನು ಗೃಹಸಚಿವರಿಗೆ ವಿವರಿಸಿದ್ದೆ ಎಂದರು.

    ಯಾವುದೇ ಕಾರಣಕ್ಕೂ ಅಲ್ಲಿರುವವರಿಗೆ ತೊಂದರೆಯಾಗದಂತೆ ನೋಡಿಕೊಳ್ಳುತ್ತೇವೆ. ಎಸ್‍ಪಿ ಅವರಿಗೆ ಕರೆ ಮಾಡಿ ಪ್ರಕರಣದ ವಿಚಾರ ಕಾನೂನುಪ್ರಕಾರ ದೂರು ದಾಖಲಿಸಲು ಸೂಚಿಸಿದ್ದಾರೆ. ದಲಿತರಿಗೆ ಯಾವುದೇ ತೊಂದರೆಯಾಗದಂತೆ ಗೃಹಸಚಿವರು ಸೂಚಿಸಿದ್ದಾರೆ. ಕೊರಗರ, ಗಿರಿಜನರ, ದಲಿತ ಬಂಧುಗಳಿಗೆ ಭಯಪಡುವ ಅವಶ್ಯಕತೆ ಇಲ್ಲ. ನಾನು, ಗೃಹ ಸಚಿವರು ಹಾಗೂ ಸರ್ಕಾರ ನಿಮ್ಮ ಜೊತೆ ಇದೆ. ಏನಾದರೂ ಇದ್ರೆ ಸಿಎಂಗೂ ಮಾಹಿತಿ ನೀಡಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.

  • ಆರ್‌ಎಸ್‌ಎಸ್‌ ರಾಷ್ಟ್ರಪ್ರೇಮಿ ಸಂಘಟನೆ ಎಂದು ನೆಹರೂ ಹೊಗಳಿದ್ದರು: ಕೋಟಾ ಶ್ರೀನಿವಾಸ ಪೂಜಾರಿ

    ಆರ್‌ಎಸ್‌ಎಸ್‌ ರಾಷ್ಟ್ರಪ್ರೇಮಿ ಸಂಘಟನೆ ಎಂದು ನೆಹರೂ ಹೊಗಳಿದ್ದರು: ಕೋಟಾ ಶ್ರೀನಿವಾಸ ಪೂಜಾರಿ

    ಉಡುಪಿ: ಕಾಂಗ್ರೆಸ್ ಅನ್ನೇ ಆರಾಧಿಸಿದ್ದ ಜವಾಹರಲಾಲ್ ನೆಹರೂ ಅವರು ಆರ್‌ಎಸ್‌ಎಸ್‌ ಸಂಘಟನೆಯನ್ನು ಹೊಗಳಿದ್ದರು ಎಂದು ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

    ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಆರ್‌ಎಸ್‌ಎಸ್‌ ರಾಷ್ಟ್ರಪ್ರೇಮಿ ಸಂಘಟನೆ ಎಂದು ನೆಹರೂ ಅವರು ಬಣ್ಣಿಸಿದ್ದರು. ಅಲ್ಲದೇ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಆರ್‌ಎಸ್‌ಎಸ್‌ಗೆ ಅವಕಾಶ ಕೊಟ್ಟಿದ್ದರು. ಆರ್‌ಎಸ್‌ಎಸ್‌ ಅನ್ನು ಟೀಕಿಸುವ ಕಾಂಗ್ರೆಸ್ ನಾಯಕರು ನೆಹರೂಗಿಂತ ಮೇಲಿನವರಾ ಎಂದು ಸಚಿವರು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಹೇಗೆ ಬದುಕ್ಬೇಕು, ಹೇಗೆ ಸಾಮಾಜಿಕ ಕಾರ್ಯಗಳನ್ನು ಮಾಡ್ಬೇಕು ಅನ್ನೋದಕ್ಕೆ ಪುನೀತ್ ಮಾದರಿ: ರಾಜಮೌಳಿ

    ಸಂವಿಧಾನ ದಿನಾಚರಣೆ ಬಹಿಷ್ಕರಿಸಿರುವ ಕಾಂಗ್ರೆಸ್ ನಡೆ ಬಗ್ಗೆ ಟೀಕಿಸಿದ ಸಚಿವರು, ಕಾಂಗ್ರೆಸ್ಸಿನವರು ನಮ್ಮನ್ನು ಹೊಗಳಬೇಕು ಎಂದು ಆಸೆ ಪಡೋದಕ್ಕಾಗುತ್ತಾ? ಬಿಜೆಪಿಯನ್ನು ಬೈಯ್ಯೋದೆ ಕಾಂಗ್ರೆಸ್ ಅಜೆಂಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಬಗ್ಗೆ ನಮಗೆ ಭಾವುಕತೆಯಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕುಟುಂಬದಿಂದಲೇ ಪಕ್ಷ, ಕುಟುಂಬಕ್ಕಾಗಿಯೇ ಪಕ್ಷ: ಕಾಂಗ್ರೆಸ್‌ ವಿರುದ್ಧ ಮೋದಿ ವಾಗ್ದಾಳಿ

    ಪರಿಷತ್ ಚುನಾವಣೆ ಟಿಕೆಟ್ ಹಂಚಿಕೆಯಲ್ಲಿ ಬಿಜೆಪಿ ಸಾಮಾಜಿಕ ನ್ಯಾಯಕ್ಕೆ ಅನುಗುಣವಾಗಿ ಪಟ್ಟಿ ಸಿದ್ಧಪಡಿಸಿದೆ. ಅಸ್ಪೃಶ್ಯತೆ ತೊಡೆದು ಹಾಕುವ ಸವಾಲು ನಮ್ಮ ಮುಂದೆ ಇದೆ. ಪ್ರತಿಯೊಬ್ಬರನ್ನೂ ಅಸ್ಪೃಶ್ಯತೆ ನಿವಾರಣೆಗೆ ಸಿದ್ಧಪಡಿಸುತ್ತೇವೆ. ಚುನಾವಣೆಯ ಬಳಿಕ ಈ ಕುರಿತು ಸರ್ಕಾರಿ ಕಾರ್ಯಕ್ರಮ ರೂಪಿಸುತ್ತೇವೆ. ಪೇಜಾವರ ಶ್ರೀಗಳನ್ನು ಕೂಡಿಕೊಂಡು ಕಾರ್ಯಕ್ರಮ ಹಮ್ಮಿಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.

  • ಅಸ್ಪೃಶ್ಯತೆ ಆಚರಣೆ ಘಟನೆ ಬೆಳಕಿಗೆ ಬಂದರೆ ನಿರ್ದಾಕ್ಷಿಣ್ಯ ಕ್ರಮ: ಕೋಟಾ ಶ್ರೀನಿವಾಸ ಪೂಜಾರಿ

    ಅಸ್ಪೃಶ್ಯತೆ ಆಚರಣೆ ಘಟನೆ ಬೆಳಕಿಗೆ ಬಂದರೆ ನಿರ್ದಾಕ್ಷಿಣ್ಯ ಕ್ರಮ: ಕೋಟಾ ಶ್ರೀನಿವಾಸ ಪೂಜಾರಿ

    ಮಡಿಕೇರಿ: ರಾಜ್ಯದ ಅಲ್ಲಲ್ಲಿ ಅಸ್ಪೃಶ್ಯತೆ ಆಚರಣೆಯಂತಹ ಘಟನೆಗಳ ಬಗ್ಗೆ ಮಾಹಿತಿ ಇದೆ. ಮುಂದೆ ಇಂತಹ ಪ್ರಕರಣಗಳು ಮತ್ತೆ ಬೆಳಕಿಗೆ ಬಂದರೆ ನಿರ್ದಾಕ್ಷಿಣ್ಯ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಎಚ್ಚರಿಸಿದರು‌.

    ಸೋಮವಾರ ಮಡಿಕೇರಿಯ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾದ ಬಳಿಕ ಮಾತಾನಾಡಿದ ಅವರು, ರಾಜ್ಯದ ಹಲವೆಡೆ ಅಸ್ಪೃಶ್ಯತೆ ಆಚರಣೆ ಈ ಹಿಂದಿನಿಂದಲೂ ಅಗುತ್ತಿದೆ. ಅಸ್ಪೃಶ್ಯತೆ ಆಚರಣೆ ಕಂಡು ಬಂದರೆ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು. ರಾಜ್ಯದಲ್ಲಿ ಅಸ್ಪೃಶ್ಯತೆ ನಿವಾರಣೆಗಾಗಿ ದೊಡ್ಡ ಆಂದೋಲನ ನಡೆಸಲಾಗುವುದು. ಅದಕ್ಕಾಗಿ ಪೂರ್ವಭಾವಿ ತಯಾರಿ ಮಾಡಲಾಗುತ್ತಿದೆ. ಎಸ್ಸಿ/ಎಸ್ಟಿಗಳ ಅಭಿವೃದ್ಧಿಗಾಗಿ ಕ್ರಮ ಕೈಗೊಳ್ಳಲಾಗುತ್ತಿದೆ. ಈ ಸಮುದಾಯದ ಅಭಿವೃದ್ಧಿಗೆ ಸಮಾಜ ಕಲ್ಯಾಣ ಇಲಾಖೆಯಲ್ಲಿ ಮೀಸಲಿರುವ ಶೇ. 24ರಷ್ಟು ಅನುದಾನವನ್ನು ಸಂಪೂರ್ಣವಾಗಿ ಬಳಸಲಾಗುವುದು ಎಂದು ಭರವಸೆ ನೀಡಿದರು. ಇದನ್ನೂ ಓದಿ: ಕೋಟೆನಾಡಲ್ಲಿ ಅಸ್ಪೃಶ್ಯತೆ, ಕೋಮುವಾದ ವಿರೋಧಿಸಿ 101 ಜನ ಬೌದ್ಧ ಧರ್ಮಕ್ಕೆ ಮತಾಂತರ

    ಸಮಾಜದ ಕಟ್ಟಕಡೆಯ ಮನುಷ್ಯನಿಗೆ ಅರ್ಥಿಕ ಮತ್ತು ಸಾಮಾಜಿಕ ಶಕ್ತಿಯನ್ನು ತುಂಬಿಸುವುದು ಸೇರಿದಂತೆ ಅಸ್ಪೃಶ್ಯತೆಯನ್ನು ನಿವಾರಣೆ ಮಾಡುವುದು ಹಾಗೂ ಕಡುಬಡವರಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವುದು ಸಮಾಜ ಕಲ್ಯಾಣ ಇಲಾಖೆಯ ಮೂಲ ಉದ್ದೇಶ. ಕರ್ನಾಟಕ ರಾಜ್ಯದಲ್ಲಿ 1.27 ಕೋಟಿ ಜನ ಪರಿಶಿಷ್ಟ ಜಾತಿ ಸಮುದಾಯದವರಿದ್ದಾರೆ. ಸುಮಾರು 28 ಲಕ್ಷ ಕುಟುಂಬಗಳು ಇವೆ. ಅವುಗಳ ಪೈಕಿ ಕೆಲವರಿಗೆ ಸ್ವಂತ ಮನೆ, ನೆಲೆ ಇಲ್ಲ. ಕೆಲವರು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಕುಡಿಯುವ ನೀರು, ಶೌಚಾಲಯದ ಸಮಸ್ಯೆ ಕೂಡ ಇದೆ. ಅವುಗಳ ಬಗ್ಗೆ ಸಮೀಕ್ಷೆ ನಡೆಸಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಇದನ್ನೂ ಓದಿ: ಕರ್ನಾಟಕವು ಯಶಸ್ಸಿನ ಹೊಸ ಎತ್ತರವನ್ನು ಏರಲಿ: ಮೋದಿ ಶುಭಾಶಯ

    kota srinivas poojary

    ಶೋಷಿತ ಸಮುದಾಯಗಳಿಗೆ ಬೇಕಾಗಿರುವ ಮನೆ, ಕುಡಿಯುವ ನೀರು ಮತ್ತು ವಿದ್ಯಾಭ್ಯಾಸ ಸೇರಿದಂತೆ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಇಲಾಖೆಯಿಂದ ಒದಗಿಸಲಾಗುತ್ತದೆ ಎಂದು ಸಚಿವರು ಹೇಳಿದರು.

  • ಗೊಂದಲಕ್ಕೆ ತೆರೆ – ಕಾವೇರಿ ತೀರ್ಥೋದ್ಭವ ವೀಕ್ಷಣೆಗೆ ಎಲ್ಲ ಭಕ್ತರಿಗೆ ಅವಕಾಶ

    ಗೊಂದಲಕ್ಕೆ ತೆರೆ – ಕಾವೇರಿ ತೀರ್ಥೋದ್ಭವ ವೀಕ್ಷಣೆಗೆ ಎಲ್ಲ ಭಕ್ತರಿಗೆ ಅವಕಾಶ

    – ಕೋವಿಡ್‌ ನಿಯಮ ಪಾಲನೆ ಕಡ್ಡಾಯ
    – ಪುಣ್ಯ ಸ್ನಾನ ಮಾಡಲು ಅವಕಾಶ ಇಲ್ಲ‌

    ಮಡಿಕೇರಿ: ಪವಿತ್ರ ಕಾವೇರಿ ತೀರ್ಥೋದ್ಭವ ವೀಕ್ಷಣೆಗೆ ತಲಕಾವೇರಿ ಕ್ಷೇತ್ರಕ್ಕೆ ಎಲ್ಲ ಭಕ್ತರಿಗೆ ಮುಕ್ತ ಅವಕಾಶ ಕಲ್ಪಿಸಲಾಗುವುದೆಂದು ಕೊಡಗು ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

    ಕಳೆದ ಶನಿವಾರ ತೀರ್ಥೋದ್ಭವಕ್ಕೆ ತಲಕಾವೇರಿಗೆ ಬರುವ ಭಕ್ತರು ಭಗಮಂಡಲದಿಂದ ಕಾಲ್ನನಡಿಗೆಯಲ್ಲಿ ಬರಬೇಕು. ವಾಹನಗಳನ್ನು ಭಾಗಮಂಡಲದಲ್ಲಿ ನಿಲ್ಲಿಸಬೇಕು, ಕೋವಿಡ್ ವರದಿ ಮತ್ತು ವ್ಯಾಕ್ಸಿನೇಷನ್‌ ಕಡ್ಡಾಯ ಮಾಡಲಾಗಿತ್ತು.

    ಈ ನಿಯಮದ ವಿರುದ್ಧ ಕೊಡಗಿನ ಮೂಲ ನಿವಾಸಿಗಳು ತಿರುಗಿ ಬಿದ್ದಿದ್ದರು. ಮುಖ್ಯಮಂತ್ರಿ ಬೊಮ್ಮಾಯಿ ಅವರ ಗಮನಕ್ಕೆ ತಂದ ಬಳಿಕ ಜಿಲ್ಲಾಡಳಿತ ಎಚ್ಚೆತ್ತುಗೊಂಡಿದ್ದು ಕೊಡಗಿನ ನಿವಾಸಿಗಳ ಜೊತೆ ಪ್ರವಾಸಿಗರಿಗೆ ಅವಕಾಶ ಮಾಡಿಕೊಡಲಾಗಿದೆ.

    ಭಕ್ತರು ಕೋವಿಡ್ ನಿಯಮ ಪಾಲನೆ‌ಮಾಡಬೇಕು. ತೀರ್ಥೋದ್ಬವ ಅಗುವ ಸಮಯದಲ್ಲಿ ಕಾವೇರಿ ಭಕ್ತರಿಗೆ ಮುಕ್ತ ಅವಕಾಶ ಇದೆ ಇರುತ್ತದೆ ಎಂದು ಹೇಳುವ ಮೂಲಕ ಎದ್ದಿದ್ದ ಗೊಂದಲಕ್ಕೆ ಶ್ರೀನಿವಾಸ್ ಪೂಜಾರಿ ತೆರೆ ಎಳೆದಿದ್ದಾರೆ. ಇದನ್ನೂ ಓದಿ: RSS ಇಲ್ಲವೆಂದಿದ್ದರೆ ಭಾರತ, ಪಾಕಿಸ್ತಾನ ಆಗ್ತಿತ್ತು: ಪ್ರಭು ಚವ್ಹಾಣ್ 

    ಕೊಡಗಿನ ಭಕ್ತರ ಭಾವನೆಗೆ ಸರ್ಕಾರ ಗೌರವ ನೀಡಿದ್ದು, ಪವಿತ್ರ ತೀರ್ಥ ಕೊಂಡೊಯ್ಯಲು ಮುಕ್ತ ಅವಕಾಶ ನೀಡಲಾಗಿದೆ. ಆದರೆ ಈ ಬಾರಿ ತಲಕಾವೇರಿಯ ಕುಂಡಿಕೆ ಬಳಿ ಇರುವ ಕೊಳದಲ್ಲಿ ಪುಣ್ಯ ಸ್ನಾನ ಮಾಡಲು ಅವಕಾಶ ಇಲ್ಲ‌ ಎಂದು ಸಚಿವರು ಹೇಳಿದ್ದಾರೆ. ಅ.17 ರಂದು ಮಧ್ಯಾಹ್ನ 1 ಗಂಟೆ 11 ನಿಮಿಷಕ್ಕೆ ಪವಿತ್ರ ಕಾವೇರಿ ತೀರ್ಥರೂಪಿಣಿಯಾಗಿ ಭಕ್ತರಿಗೆ ದರ್ಶನ ನೀಡಲಿದ್ದಾಳೆ.

  • ಸಭೆಗೆ ಕೋಟಾ ಶ್ರೀನಿವಾಸ ಪೂಜಾರಿ ಗೈರು- ಕಾದು ಸುಸ್ತಾದ ಅಧಿಕಾರಿಗಳು

    ಸಭೆಗೆ ಕೋಟಾ ಶ್ರೀನಿವಾಸ ಪೂಜಾರಿ ಗೈರು- ಕಾದು ಸುಸ್ತಾದ ಅಧಿಕಾರಿಗಳು

    ಮಡಿಕೇರಿ: ದಸರಾ ಹಾಗೂ ತಲಕಾವೇರಿ ಜಾತ್ರಾ ಮಹೋತ್ಸವ ಸಭೆಗೆ ಹಾಜರಾಗದ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರಿಗಾಗಿ ಸಭೆಯಲ್ಲಿ ಕಾದು ಅಧಿಕಾರಿಗಳು ಸುಸ್ತಾಗಿ ಆಕ್ರೋಶ ವ್ಯಕ್ತಪಡಿಸಿದರು.

    ನಾಡಹಬ್ಬ ದಸರಾ ಕಾರ್ಯಕ್ರಮದ ಬಗ್ಗೆ ಈಗಾಗಲೇ ಮೈಸೂರಿನಲ್ಲಿ ತಯಾರಿ ನಡೆಸುಲಾಗುತ್ತಿದೆ. ಇತ್ತ ಮಡಿಕೇರಿ ದಸರಾ ಆಚರಣೆಗೆ ಮೂಡಿರುವ ಗೊಂದಲದ ಬಗ್ಗೆ ಹಾಗೂ ದಸರಾ ಅಚರಣೆ ಈ ಬಾರಿ ಸರಳ ರೀತಿ ಅಥವಾ ವಿಜೃಂಭಣೆಯಿಂದ ಮಾಡಬೇಕಾ ಎಂದು ಚರ್ಚೆ ನಡೆಸಲು ಸಭೆ ಕರೆಯಲಾಗಿತ್ತು. ಇದನ್ನೂ ಓದಿ: ಸುಳ್ವಾಡಿ ವಿಷ ಪ್ರಸಾದ ದುರಂತ ಪ್ರಕರಣ – ಜಾಮೀನು ಅರ್ಜಿ ಸಲ್ಲಿಸಿದ ಎರಡನೇ ಆರೋಪಿ ಅಂಬಿಕಾ

    ಈ ಸಂಬಂಧ ಇಂದು ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಅಧ್ಯಕ್ಷತೆಯಲ್ಲಿ, ಮಡಿಕೇರಿ ನಗರದ ಜಿಲ್ಲಾ ಪಂಚಾಯತ್ ಸಂಭಾಗಣದಲ್ಲಿ ದಸರಾ ಹಬ್ಬ ಅಚರಣೆ ಬಗ್ಗೆ ಮತ್ತು ಅದರ ರೂಪುರೇಷೆಗಳ ಚರ್ಚೆ ಮಾಡಲು ಇಂದು ಮಧ್ಯಾಹ್ನ ಮೂರು ಗಂಟೆಗೆ ಸಭೆ ಆಯೋಜಿಸಲಾಗಿತ್ತು.

    ಈ ಹಿನ್ನೆಲೆ ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಸಮಿತಿ ಸದಸ್ಯರೊಂದಿಗೆ ಸಭೆ ನಡೆಸಬೇಕಾದ ಸಚಿವ ಶ್ರೀನಿವಾಸ ಪೂಜಾರಿ ನಾಲ್ಕು ಗಂಟೆ ಆದ್ರೂ ಸಭೆಗೆ ಆಗಮಿಸಲ್ಲೇ ಇಲ್ಲ. ಇದರಿಂದಾಗಿ ಇಲಾಖೆಯ ಅಧಿಕಾರಿಗಳು ಹಾಗೂ ಸಮಿತಿಯ ಸದಸ್ಯರುಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಕೊಲೆ ಮಾಡಿ ಪೀಸ್ ಪೀಸ್ ಮಾಡಿ ನದಿಗೆ ಎಸೆಯಬೇಕು ಅನ್ನೋ ಆಡಿಯೋ ಬಯಲು

     

  • ಕನಸು ಕಾಣುವ ಹಕ್ಕಿದೆ ಕಾಣಲಿ: ಕಾಂಗ್ರೆಸ್ಸಿಗರಿಗೆ ಸಚಿವ ಕೋಟ ಟಾಂಗ್

    ಕನಸು ಕಾಣುವ ಹಕ್ಕಿದೆ ಕಾಣಲಿ: ಕಾಂಗ್ರೆಸ್ಸಿಗರಿಗೆ ಸಚಿವ ಕೋಟ ಟಾಂಗ್

    ಚಿಕ್ಕಮಗಳೂರು: ಈ ಸರ್ಕಾರ ಬಹಳ ದಿನ ಇರಲ್ಲ. ಆರು ತಿಂಗಳಲ್ಲಿ ಬೀಳುತ್ತೆ ಎಂದು ಹೇಳುತ್ತಿರೋ ಕಾಂಗ್ರೆಸ್ಸಿಗರಿಗೆ ಮುಜರಾಯಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಟಾಂಗ್ ನೀಡಿದ್ದಾರೆ.

    ನಗರದ ಬಿಜೆಪಿ ಕಚೇರಿ ಪಾಂಚಜನ್ಯದಲ್ಲಿ ನಡೆದ ಜನಾಶೀರ್ವಾದ ಯಾತ್ರೆಯಲ್ಲಿ ಭಾಗವಹಿಸಿದ ಅವರು ಮಾಧ್ಯಮಗಳ ಜೊತೆ ಮಾತನಾಡಿದರು. ಯಾರೂ ಬೇಕಾದರೂ ಕನಸು ಕಾಣಬಹುದು. ಯಾರೇ ಕನಸು ಕಂಡರೂ ತಪ್ಪಿಲ್ಲ. ಎಲ್ಲರಿಗೂ ಕನಸು ಕಾಣುವ ಹಕ್ಕಿದೆ ಎಂದು ಕಾಂಗ್ರೆಸ್ಸಿಗರ ವಿರುದ್ಧ ವ್ಯಂಗ್ಯವಾಡಿದ್ದಾರೆ.

    ಬಿಜೆಪಿ ಸರ್ಕಾರದ ವಿಷಯದಲ್ಲಿ ಯಾರ ಕನಸೂ ನನಸಾಗುವುದಿಲ್ಲ, ಬಿಜೆಪಿ ಸರ್ಕಾರ ಸುಭದ್ರ ಹಾಗೂ ಸ್ಥಿರವಾಗಿದೆ. ಮಂಗಳೂರಿನಲ್ಲಿ ಸ್ವಾತಂತ್ರ್ಯ ದಿನಾಚರಣೆಯಂದು ರಥಯಾತ್ರೆಗೆ ಅಡ್ಡಿಪಡಿಸಿದ ಸಂಘಟನೆಗಳ ಮೇಲೂ ಕಿಡಿಕಾರಿದ್ದಾರೆ. ವ್ಯಕ್ತಿ, ಶಕ್ತಿ, ಪಾರ್ಟಿ ಹಾಗೂ ಸಂಸ್ಥೆ ಯಾವುದೂ ಮುಖ್ಯವಲ್ಲ. ದೇಶದ ಸಂವಿಧಾನಕ್ಕೆ ಅಗೌರವ ತೋರುವ, ರಾಷ್ಟ್ರದ ರಾಷ್ಟ್ರಧ್ವಕ್ಕೆ ಅಗೌರವ ತೋರುವುದನ್ನ ಸಹಿಸಲ್ಲ, ನಮ್ಮ ಬಿಜೆಪಿ ಸರ್ಕಾರ ಅಂತವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ಸ್ಪಷ್ಟಪಡಿದಿದ್ದಾರೆ. ಇದನ್ನೂ ಓದಿ:ಮಂಡ್ಯದಲ್ಲಿ ಮತ್ತೆ ಸುಮಲತಾ Vs ಎಂಎಲ್‍ಎ ಫೈಟ್ – ದಿಶಾ ಸಭೆಯಲ್ಲಿ ಪ್ರತಿಷ್ಠೆಗೆ ಬಿದ್ದ ಜನಪ್ರತಿನಿಧಿಗಳು

    ದತ್ತಪೀಠದಲ್ಲಿ ತ್ರಿಕಾಲ ಪೂಜೆ ನಡೆಯಬೇಕು. ಹಿಂದೂ ಅರ್ಚಕರ ನೇಮಕ ಮಾಡಬೇಕು ಎಂಬ ಸುದ್ದಿ ಚರ್ಚೆಯಲ್ಲಿದೆ. ಈಗಾಗಲೇ ಹೈಕೋರ್ಟಿನಲ್ಲಿ ದತ್ತಪೀಠ ಸಂಬಂಧದ ವಾದ-ವಿವಾದ ಮುಗಿದು ಅಂತಿಮ ತೀರ್ಪು ಬಾಕಿ ಇದೆ ಎಂಬ ಸುದ್ದಿ ಹರಿದಾಡುತ್ತಿದೆ. ದತ್ತಪೀಠದ ವಿಚಾರದಲ್ಲಿ ನ್ಯಾಯಾಲಯದ ತೀರ್ಪೀನ ಬಳಿಕ ಸರ್ಕಾರ ಮುಂದಿನ ಹೆಜ್ಜೆ ಇಡಲಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ದಶಪಥದ ರಸ್ತೆ ಇರೋದು ಮೈಸೂರಿಗಾಗಿ, ಇದಕ್ಕಾಗಿ ಹೆಚ್ಚು ಆಸಕ್ತಿವಹಿಸಿದ್ದೇನೆ: ಪ್ರತಾಪ್ ಸಿಂಹ

  • ಪ್ರಕರಣಗಳ ಸಂಖ್ಯೆ ಮುಂದುವರಿದ್ರೆ ವ್ಯವಸ್ಥೆಯನ್ನು ಕಠಿಣಗೊಳಿಸಬೇಕಾಗ್ತದೆ: ಕೋಟಾ

    ಪ್ರಕರಣಗಳ ಸಂಖ್ಯೆ ಮುಂದುವರಿದ್ರೆ ವ್ಯವಸ್ಥೆಯನ್ನು ಕಠಿಣಗೊಳಿಸಬೇಕಾಗ್ತದೆ: ಕೋಟಾ

    ಉಡುಪಿ: ಇದೇ ರೀತಿ ಕೊರೊನಾ ಪ್ರಕರಣಗಳು ಜಾಸ್ತಿಯಾಗುತ್ತಾ ಹೋದರೆ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಾಕ್ ಡೌನ್ ವಿಫಲ ಆಗಬಾರದು ಅನ್ನೋದು ನಮ್ಮ ಬಯಕೆ. ಲಾಕ್‍ಡೌನ್ ಯಶಸ್ವಿಗೊಳಿಸಲು ಎಲ್ಲರೂ ಜೊತೆಯಾಗಿ ಕೆಲಸ ಮಾಡ್ತಿದ್ದೇವೆ. ಎಲ್ಲಾ ಶಾಸಕರು ಮಂತ್ರಿಗಳು ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ. ಪ್ರಕರಣಗಳ ಸಂಖ್ಯೆ ಮುಂದುವರಿದರೆ ವ್ಯವಸ್ಥೆಯನ್ನು ಕಠಿಣ ಗಳಿಸಬೇಕಾಗುತ್ತದೆ. ಹಾಗೆ ಆಗದಿರಲಿ ಅನ್ನೋದು ನಮ್ಮ ಆಶಯ ಎಂದರು.

    ಕೊರೊನಾ ನಿಯಂತ್ರಣಕ್ಕೆ ಸಿಎಂ ಕಠಿಣ ಕ್ರಮ ಕೈಗೊಂಡಿದ್ದಾರೆ. ಎಲ್ಲಾ ಉಸ್ತುವಾರಿ ಸಚಿವರಿಗೆ ಸೂಚನೆ ಕೊಟ್ಟಿದ್ದಾರೆ. ಜಿಲ್ಲೆಯಲ್ಲಿ ಲಾಕ್ ಡೌನ್ ಪಾಲನೆ ಕುರಿತು ಕಠಿಣ ಕ್ರಮಕ್ಕೆ ಸೂಚಿಸಿದ್ದಾರೆ. ಸಮಯ ನಿಗದಿ, ಅಧಿಕಾರಿಗಳ ಬಳಕೆ, ಪಾಸಿಟಿವ್ ರೋಗಿಗಳ ಆಸ್ಪತ್ರೆ ಸೇರ್ಪಡೆ ಗೆ ಸೂಚನೆ ನೀಡಿದ್ದಾರೆ. ಜನತೆ ಮನೆಯೊಳಗೆ ಇದ್ದುಕೊಂಡೇ ಕಫ್ರ್ಯೂ ಪಾಲಿಸಿ ಎಂದು ಮನವಿ ಮಾಡಿಕೊಂಡರು.

    ಅಗತ್ಯ ವಸ್ತು ಖರೀದಿಗೆ 10 ಗಂಟೆಯವರೆಗೆ ಮಾತ್ರ ಸಮಯವಕಾಶ ಇದೆ. ಜನ ಹತ್ತು ಗಂಟೆಯ ನಂತರ ಓಡಾಟ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸುಧಾಕರ್ ಹೇಳಿಕೆ ನೀಡಿದ್ದಾರೆ. ಹತ್ತು ಗಂಟೆಯ ನಂತರ ಓಡಾಟ ಸರಿಯಲ್ಲ. ತಜ್ಞರು ಈ ಬಗ್ಗೆ ಸರಕಾರಕ್ಕೆ ಸಲಹೆ ನೀಡಿದ್ದಾರೆ . ಸಮಯ ಸೀಮಿತಗೊಳಿಸುವ ಬಗ್ಗೆ ಸಿಎಂ ಮತ್ತು ಆರೋಗ್ಯ ಮಂತ್ರಿ ಜೊತೆ ಮಾತನಾಡುವೆ ಎಂದು ತಿಳಿಸಿದರು.

    ಪಾಸಿಟಿವ್ ಬಂದ ವ್ಯಕ್ತಿಗೆ ಅಗತ್ಯವಿದ್ದರೆ ಆಸ್ಪತ್ರೆಗೆ ಕಳುಹಿಸುತ್ತೇವೆ. ಮನೆಯಲ್ಲಿ ವ್ಯವಸ್ಥೆ ಇಲ್ಲದ ವ್ಯಕ್ತಿಗಳನ್ನು ಆಸ್ಪತ್ರೆಗೆ ಶಿಫ್ಟ್ ಮಾಡುತ್ತೇವೆ. ಲಾಕ್ ಡೌನ್ ಕಟ್ಟುನಿಟ್ಟಿನ ಪಾಲನೆಗೆ ಸೂಕ್ತ ಕ್ರಮ ಕೈಗೊಳ್ತೇವೆ. ಜನರ ಓಡಾಟ ಹೆಚ್ಚಾದರೆ ಕೊರೋನ ನಿಯಂತ್ರಣ ಸಾಧ್ಯವಿಲ್ಲ. 10 ಗಂಟೆಯ ಒಳಗಾಗಿ ಜನರು ಮನೆ ಸೇರಬೇಕು. ಮನೆಯೊಳಗಿದ್ದುಕೊಂಡೇ ಕೊರೊನಾ ನಿಯಂತ್ರಣಕ್ಕೆ ಸಹಕರಿಸಿ ಎಂದು ಸಚಿವರು ನುಡಿದರು.