Tag: ಕೋಚ್

  • ಪಾಕ್ ಆಟಗಾರರಿಗೆ ಬಿರಿಯಾನಿ ನೀಡಲ್ಲವೆಂದ ನೂತನ ಕೋಚ್

    ಪಾಕ್ ಆಟಗಾರರಿಗೆ ಬಿರಿಯಾನಿ ನೀಡಲ್ಲವೆಂದ ನೂತನ ಕೋಚ್

    ಕರಾಚಿ: ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದ ಪಾಕಿಸ್ತಾನ ಕ್ರಿಕೆಟ್ ಆಟಗಾರರ ಫಿಟ್ನೆಸ್ ಬಗ್ಗೆ ತಂಡದ ಆಡಳಿತ ಮಂಡಳಿ ಎಚ್ಚೆತ್ತು ಕೊಂಡಿದ್ದು, ಆಟಗಾರರ ಮೆನುವಿನಲ್ಲಿ ಬಿರಿಯಾನಿ ನೀಡಲ್ಲ ಎಂದು ಹೇಳಿದೆ.

    ತಂಡದ ನೂತನ ಕೋಚ್ ಆಗಿ ಆಯ್ಕೆಯಾಗಿರುವ ಮಿಸ್ಬಾ ಉಲ್ ಹಕ್ ಈ ವಿಚಾರವನ್ನು ತಿಳಿಸಿದ್ದು, ಆಟಗಾರರ ಕಳಪೆ ಡಯಟ್ ನಿಂದ ಪ್ರದರ್ಶನ ಮೇಲೆ ಪ್ರಭಾವ ಉಂಟಾಗುತ್ತಿದೆ. ಆದ್ದರಿಂದ ಅವರಿಗೆ ಕಟ್ಟುನಿಟ್ಟಿನ ಡಯಟ್ ಪಾಲನೆ ಮಾಡಲು ಸೂಚನೆ ನೀಡಿದ್ದಾರೆ.

    ವಿಶ್ವಕಪ್ ಟೂರ್ನಿಯ ಸಂದರ್ಭದಲ್ಲಿ ಪಾಕ್ ತಂಡದ ಆಟಗಾರರ ಫೋಟೋಗಳು ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸದ್ದು ಮಾಡಿದ್ದವು. ಪಾಕ್ ಕ್ರಿಕೆಟ್ ಅಭಿಮಾನಿಗಳೇ ತಂಡದ ಆಟಗಾರರ ಫಿಟ್ನೆಸ್ ಕುರಿತು ಟೀಕೆ ಮಾಡಿ ಕಿಡಿಕಾರಿದ್ದರು. ಇದರಿಂದ ಆಟಗಾರರಿಗೆ ಸ್ಪಷ್ಟ ಸಂದೇಶ ರವಾನಿಸಿರುವ ಮಿಸ್ಬಾ, ರಾಷ್ಟ್ರೀಯ ತಂಡದ ಆಯ್ಕೆ ಸಂದರ್ಭದಲ್ಲಿ ಆಟಗಾರರ ಫಿಟ್ನೆಸ್ ಅಂಶವನ್ನು ಪರಿಗಣಿಸಲಾಗುತ್ತದೆ ಎಂದು ಹೇಳಿದ್ದಾರೆ. ಅಲ್ಲದೇ ಬಿರಿಯಾನಿ ಸೇರಿದಂತೆ ಸಿಹಿ ತಿನಿಸುಗಳನ್ನು ಆಟಗಾರರ ಮೆನುವಿನಿಂದ ದೂರ ಮಾಡಿ, ಬದಲಿಯಾಗಿ ಹಣ್ಣು ಹಾಗೂ ತರಕಾರಿಗಳ ಸೇವನೆ ಮಾಡಲು ಸಲಹೆ ನೀಡಿದ್ದಾರೆ.

    ಮಿಸ್ಬಾ ತಂಡದ ಕೋಚ್ ಆಗಿ ಆಯ್ಕೆಯಾದ ಬಳಿಕ ಶ್ರೀಲಂಕಾ ವಿರುದ್ಧ ಸರಣಿಯಲ್ಲಿ ಪಾಕ್ ತಂಡ ಭಾಗವಹಿಸುತ್ತಿದೆ. ತಲಾ ಮೂರು ಏಕದಿನ ಹಾಗೂ ಟಿ20 ಪಂದ್ಯಗಳ ಟೂರ್ನಿ ಇದಾಗಿದ್ದು, ಆ ಬಳಿಕ 2 ಟೆಸ್ಟ್ ಪಂದ್ಯಗಳ ಟೂರ್ನಿ ನಡೆಯಲಿದೆ.

  • ಟೀಂ ಇಂಡಿಯಾ ಕೋಚ್ ಆಗಿ ರವಿಶಾಸ್ತ್ರಿ ಮರು ಆಯ್ಕೆ

    ಟೀಂ ಇಂಡಿಯಾ ಕೋಚ್ ಆಗಿ ರವಿಶಾಸ್ತ್ರಿ ಮರು ಆಯ್ಕೆ

    ಮುಂಬೈ: ಟೀಂ ಇಂಡಿಯಾದ ಕೋಚ್ ಆಗಿ ರವಿಶಾಸ್ತ್ರಿ ಮುಂದುವರಿದಿದ್ದಾರೆ. ಕಪಿಲ್ ದೇವ್ ನೇತೃತ್ವದ ಕ್ರಿಕೆಟ್ ಸಲಹಾ ಸಮಿತಿ ಅಂತಿಮವಾಗಿ ರವಿಶಾಸ್ತ್ರಿ ಅವರನ್ನೇ ಮರು ಆಯ್ಕೆ ಮಾಡಿದೆ.

    ರವಿಶಾಸ್ತ್ರಿ ಜೊತೆ ನ್ಯೂಜಿಲೆಂಡಿನ ಮೈಕ್ ಹೆಸ್ಸನ್, ವೆಸ್ಟ್ ಇಂಡೀಸಿನ ಫಿಲ್ ಸಿಮನ್ಸ್, ಆಸ್ಟ್ರೇಲಿಯಾದ ಟಾಮ್ ಮೂಡಿ, ರಾಬಿನ್ ಸಿಂಗ್, ಲಾಲ್‍ಚಂದ್ ರಜಪೂತ್ ಕೋಚ್ ರೇಸ್‍ನಲ್ಲಿದ್ದರು.

    ಇಂದು ಸಂಜೆ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಕಪಿಲ್ ದೇವ್, ಅಂಶುಮನ್ ಗಾಯಕ್‍ವಾಡ್, ಶಾಂತ ರಂಗಸ್ವಾಮಿ ಅವರು ರವಿಶಾಸ್ತ್ರಿ ಕೋಚ್ ಆಗಿದ್ದ ವೇಳೆ ಭಾರತ ತಂಡ ನೀಡಿದ ಪ್ರದರ್ಶನ ಮತ್ತು ಬಿಸಿಸಿಐ ನಿಗದಿ ಪಡಿಸಿದ ಮಾನದಂಡಕ್ಕೆ ಅನುಗುಣವಾಗಿ ಅವರು ನೀಡಿದ ಉತ್ತರವನ್ನು ಪರಿಗಣಿಸಿ ಮರು ಆಯ್ಕೆ ಮಾಡಿರುವುದಾಗಿ ತಿಳಿಸಿದರು.

    6 ಮಂದಿ ಪೈಕಿ ಸಮಿತಿ ಮೂವರನ್ನು ಆರಿಸಿ ಅದರಲ್ಲಿ ರವಿಶಾಸ್ತ್ರಿ ಅವರಿಗೆ ಮೊದಲ ಸ್ಥಾನ ನೀಡಿದೆ. ಮೈಕ್ ಹೆಸ್ಸನ್ ಮತ್ತು ಟಾಮ್ ಮೂಡಿ ನಂತರದ ಸ್ಥಾನ ನೀಡಿದೆ.

    2021ರ ಟ್ವೆಂಟಿ-20 ವಿಶ್ವಕಪ್ ವರೆಗೂ ರವಿ ಶಾಸ್ತ್ರಿ ಕೋಚ್ ಆಗಿ ಮುಂದುವರಿಯಲಿದ್ದಾರೆ. ವಿಂಡೀಸ್ ಪ್ರವಾಸಕ್ಕೆ ತೆರಳುವ ಮುನ್ನ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ರವಿಶಾಸ್ತ್ರಿ ಅವರೇ ಕೋಚ್ ಆಗಿ ಮುಂದುವರಿಯಬೇಕು ಎಂದು ಹೇಳಿಕೆ ನೀಡಿದ್ದರು. ತಂಡದ ನಾಯಕನೇ ಬಹಿರಂಗವಾಗಿ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ರವಿಶಾಸ್ತ್ರಿ ಅವರೇ ಮುಂದುವರಿಯಲಿದ್ದಾರೆ ಎನ್ನುವ ಮಾತು ಅಂದೇ ಕೇಳಿಬಂದಿತ್ತು.

    ಸೌರವ್ ಗಂಗೂಲಿ, ಸಚಿನ್ ತೆಂಡೂಲ್ಕರ್, ವಿವಿಎಸ್ ಲಕ್ಷ್ಮಣ್ ನೇತೃತ್ವದ ಸಮಿತಿ 2017 ರಲ್ಲಿ ರವಿಶಾಸ್ತ್ರಿ ಅವರನ್ನು ಕೋಚ್ ಆಗಿ ಆಯ್ಕೆ ಮಾಡಿತ್ತು. ಇದಕ್ಕೂ ಮುನ್ನ 2015ರ ವಿಶ್ವಕಪ್ ವೇಳೆ ರವಿಶಾಸ್ತ್ರಿ ಟೀಂ ಇಂಡಿಯಾದ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದರು.

  • ಟೀಂ ಇಂಡಿಯಾ ಕೋಚ್ ಆಗ್ತೇನೆ: ಸೌರವ್ ಗಂಗೂಲಿ

    ಟೀಂ ಇಂಡಿಯಾ ಕೋಚ್ ಆಗ್ತೇನೆ: ಸೌರವ್ ಗಂಗೂಲಿ

    ನವದೆಹಲಿ: ಟೀಂ ಇಂಡಿಯಾ ಮುಖ್ಯ ಕೋಚ್ ಹಾಗೂ ಸಹಾಯಕ ಕೋಚ್‍ಗಳ ಆಯ್ಕೆಗೆ ಬಿಸಿಸಿಐ ಸಿದ್ಧತೆ ನಡೆಸಿದೆ. ಇತ್ತೀಚೆಗಷ್ಟೇ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸುವ ಪ್ರತಿಕ್ರಿಯೆ ಕೂಡ ಮುಕ್ತಾಯವಾಗಿದೆ. ಇದುವರೆಗೂ ಭಾರತ, ನ್ಯೂಜಿಲೆಂಡ್, ಶ್ರೀಲಂಕಾ ಸೇರಿದಂತೆ ವಿವಿಧ ದೇಶದ ಮಾಜಿ ಆಟಗಾರರು ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಭಾರತದಿಂದ ರಾಬಿನ್ ಸಿಂಗ್, ಲಾಲ್ ಚಂದ್ ರಾಜಪೂತ್ ಅವರು ಈ ಪಟ್ಟಿಯಲ್ಲಿದ್ದಾರೆ.

    ಇದೇ ಸಂದರ್ಭದಲ್ಲಿ ಟೀಂ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ತಾವು ಖಂಡಿತಾ ತಂಡದ ಕೋಚ್ ಆಗಲು ಬಯಸುತ್ತೇನೆ ಎಂದಿದ್ದಾರೆ. ಸದ್ಯ ಕೋಚ್ ಪದವಿ ಪಡೆಯಲು ಸಾಧ್ಯವಿಲ್ಲ, ಆದರೆ ಮುಂದಿನ ಅವಧಿಯಲ್ಲಿ ತಂಡ ಕೋಚ್ ಆಗಲು ಇಷ್ಟಪಡುತ್ತೇನೆ ಎಂದು ಮಾಧ್ಯಮ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

    ನನಗೆ ಟೀಂ ಇಂಡಿಯಾ ಕೋಚ್ ಕರ್ತವ್ಯವನ್ನು ನಿರ್ವಹಿಸಲು ಆಸಕ್ತಿ ಇದೆ. ಆದರೆ ಈ ಸಮಯ ಕೋಚ್ ಆಗಲು ಸೂಕ್ತವಲ್ಲ. ನಾನು ಬೇರೆ ಬೇರೆ ಕಾರ್ಯಕ್ರಮಗಳಲ್ಲಿ ಬ್ಯುಸಿಯಾಗಿದ್ದು, ಭವಿಷ್ಯದಲ್ಲಿ ಕೋಚ್ ಆಗುತ್ತೇನೆ ಎಂದಿದ್ದಾರೆ. ಆದರೆ ತಂಡದ ಕೋಚ್ ಆಗಿರುವ ರವಿಶಾಸ್ತ್ರಿ ಅವರನ್ನು ಮುಂದುವರಿಸುವ ಬಗ್ಗೆ ಕಾಮೆಂಟ್ ಮಾಡಲು ನಿರಾಕರಿಸಿದ್ದಾರೆ.

    ಬಂಗಾಳ ಕ್ರಿಕೆಟ್ ಆಸೋಸಿಯೇಷನ್, ಐಪಿಎಲ್, ಕ್ರಿಕೆಟ್ ವಿಶ್ಲೇಷಣೆಯಲ್ಲಿ ಸೌರವ್ ಗಂಗೂಲಿ ಬ್ಯುಸಿಯಾಗಿದ್ದಾರೆ. ಈ ಎಲ್ಲ ಕೆಲಸಗಳನ್ನು ಪೂರ್ಣಗೊಳಿಸಿದ ಬಳಿಕ ನಾನು ಕೂಡ ಕೋಚ್ ರೇಸ್‍ನಲ್ಲಿ ಇರುತ್ತೇನೆ. ಮುಂದಿನ ಸಮಯದಲ್ಲಿ ಟೀಂ ಇಂಡಿಯಾ ತಂಡದ ಕೋಚ್ ಆಗುವುದು ಖಂಡಿತಾ ಎಂದು ಹೇಳಿದ್ದಾರೆ.

  • ಟೀಂ ಇಂಡಿಯಾ ಕೋಚ್ ಆಯ್ಕೆ – ಕೊಹ್ಲಿ ನಡೆಗೆ ಹರ್ಷ ಭೋಗ್ಲೆ ಕಿಡಿ

    ಟೀಂ ಇಂಡಿಯಾ ಕೋಚ್ ಆಯ್ಕೆ – ಕೊಹ್ಲಿ ನಡೆಗೆ ಹರ್ಷ ಭೋಗ್ಲೆ ಕಿಡಿ

    ಮುಂಬೈ: ಟೀಂ ಇಂಡಿಯಾ ಕ್ರಿಕೆಟ್ ಪ್ರಧಾನ ಕೋಚ್ ಆಯ್ಕೆ ಪ್ರಕ್ರಿಯೆ ನಡೆಯುತ್ತಿರುವಾಗಲೇ ತಂಡದ ನಾಯಕ ವಿರಾಟ್ ಕೊಹ್ಲಿ ತಮ್ಮ ಬೆಂಬಲ ರವಿಶಾಸ್ತ್ರಿ ಅವರಿಗೆ ಎಂದು ಹೇಳುವ ಬಗ್ಗೆ ಕ್ರಿಕೆಟ್ ವಿಶ್ಲೇಷಕ ಹರ್ಷ ಬೋಗ್ಲೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಬಿಸಿಸಿಐ ಕೋಚ್ ಆಯ್ಕೆ ಮಾಡುವ ಕುರಿತ ಕಾರ್ಯಕ್ಕೆ ಚಾಲನೆ ನೀಡುವ ಸಿದ್ಧತೆಯಲ್ಲಿದೆ. ಈ ಸಂದರ್ಭದಲ್ಲಿ ಈ ರೀತಿ ಬಹಿರಂಗವಾಗಿ ಮಾತನಾಡುವುದು ಎಷ್ಟು ಸರಿ? ಈ ಪ್ರತಿಕ್ರಿಯೆ ಇನ್ನು ನಡೆಯುತ್ತಿರುವುದರಿಂದ ಕೋಚ್ ಆಯ್ಕೆಯಲ್ಲಿ ಮುಖ್ಯ ಪಾತ್ರವಹಿಸುವ ವ್ಯಕ್ತಿಗಳು ಇಂತಹ ಹೇಳಿಕೆ ನೀಡುವುದು ಸರಿಯಲ್ಲ ಎದು ಭೋಗ್ಲೆ ಕಿಡಿಕಾರಿದ್ದಾರೆ.

    ಕಳೆದ ವಾರ ಕೋಚ್ ಆಯ್ಕೆ ಮಾಡುವ ಸಮಿತಿಯಲ್ಲಿದ್ದ ಸದಸ್ಯರಾದ ಅಂಶುಮಾನ್ ಗಾಯಕ್ವಾಡ್ ಕೂಡ ಕೋಚ್ ರವಿಶಾಸ್ತ್ರಿ ಪರವೇ ಹೇಳಿಕೆ ನೀಡಿದ್ದರು. ರವಿಶಾಸ್ತ್ರಿ ಕೋಚಿಂಗ್ ಅವಧಿಯಲ್ಲಿ ಟೀಂ ಇಂಡಿಯಾ ಉತ್ತಮ ಪ್ರದರ್ಶನವನ್ನು ನೀಡಿದೆ ಎಂದಿದ್ದರು. ಇಬ್ಬರ ಹೇಳಿಕೆಯನ್ನು ಗಮನಿಸಿರುವ ಭೋಗ್ಲೆ ಈ ಕುರಿತು ಟ್ವೀಟ್ ಮಾಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ವೆಸ್ಟ್ ಇಂಡೀಸ್ ಟೂರ್ನಿಗೆ ತೆರಳುವ ಮುನ್ನ ಪತ್ರಿಕಾಗೋಷ್ಠಿ ನಡೆಸಿದ್ದ ವಿರಾಟ್ ಕೊಹ್ಲಿ, ರೋಹಿತ್‍ರೊಂದಿಗೆ ತನಗೆ ಯಾವುದೇ ಅಸಮಾಧಾನವಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಈ ಸಂದರ್ಭದಲ್ಲಿ ಕೋಚ್ ಆಯ್ಕೆ ಕುರಿತ ಪ್ರಶ್ನೆಗೆ ಉತ್ತರಿಸಿ, ರವಿಶಾಸ್ತ್ರಿ ಅವರನ್ನ ಮುಂದುವರಿಸಿದರೆ ತಮಗೆ ಯಾವುದೇ ಸಮಸ್ಯೆ ಇಲ್ಲ ಎಂದಿದ್ದರು. ಅಲ್ಲದೇ ಇದುವರೆಗೂ ಆಯ್ಕೆ ಸಮಿತಿ ಕೋಚ್ ನೇಮಕ ಬಗ್ಗೆ ಯಾವುದೇ ಅಭಿಪ್ರಾಯವನ್ನು ಕೇಳಿಲ್ಲ. ನನಗೂ ರವಿಶಾಸ್ತ್ರಿ ಅವರ ನಡುವೆ ಉತ್ತಮ ಸಮನ್ವಯ ಇದ್ದು, ಅವರೆ ಕೋಚ್ ಆಗಿ ಮುಂದುವರಿಯಬೇಕೆಂದು ಕೇಳಿಕೊಳ್ಳುತ್ತೇನೆ. ನನ್ನ ಅಭಿಪ್ರಾಯವನ್ನು ಸಮಿತಿ ಮುಂದೆ ಹೇಳುತ್ತೇನೆ ಎಂದಿದ್ದರು.

  • ಕೋಚ್ ಬದಲಾವಣೆ ಭಾರತ ತಂಡಕ್ಕೆ ಒಳ್ಳೆಯದು – ರಾಬಿನ್ ಸಿಂಗ್

    ಕೋಚ್ ಬದಲಾವಣೆ ಭಾರತ ತಂಡಕ್ಕೆ ಒಳ್ಳೆಯದು – ರಾಬಿನ್ ಸಿಂಗ್

    ನವದೆಹಲಿ: ಭಾರತದ ಕ್ರಿಕೆಟ್ ತಂಡದ ಒಳಿತಿಗೆ ಕೋಚ್ ಬದಲಾವಣೆ ಒಳ್ಳೆಯದು ಎಂದು ಟೀಂ ಇಂಡಿಯಾದ ಮಾಜಿ ಆಲ್‍ರೌಂಡರ್ ರಾಬಿನ್ ಸಿಂಗ್ ಅಭಿಪ್ರಾಯ ಪಟ್ಟಿದ್ದಾರೆ.

    ಕಳೆದ 15 ವರ್ಷಗಳಲ್ಲಿ ವಿವಿಧ ತಂಡಗಳಿಗೆ ಕೋಚ್ ಆಗಿ ಕಾರ್ಯನಿರ್ವಹಿಸಿರುವ ರಾಬಿನ್ ಸಿಂಗ್ ಅವರು, ಕಳೆದ ಎರಡು ಪ್ರಮುಖ ಐಸಿಸಿ ಟೂರ್ನಿಗಳಲ್ಲಿ ನಾಕೌಟ್ ಹಂತದಲ್ಲಿ ಹೊರಬಿದ್ದ ಭಾರತ ತಂಡಕ್ಕೆ ಕೋಚ್ ಬದಲಾವಣೆ ಅವಶ್ಯಕತೆ ಇದೆ ಎಂದು ಹೇಳಿದ್ದಾರೆ.

    ಬಿಸಿಸಿಐ ಕೋಚ್ ಹುದ್ದೆಗೆ ಆಹ್ವಾನ ಕರೆದಿರುವ ಹಿನ್ನೆಲೆ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿರುವ ರಾಬಿನ್ ಸಿಂಗ್, ಭಾರತದ ತಂಡಕ್ಕೆ ಕೋಚ್ ಬದಲಾವಣೆಯ ಅಗತ್ಯವಿದೆ. ಭಾರತ ತಂಡ ಪ್ರಮುಖ ಹಂತದಲ್ಲಿ ಸರಿಯಾದ ಪ್ರದರ್ಶನ ತೋರುತ್ತಿಲ್ಲ. ಅದ್ದರಿಂದ ಮುಂದಿನ ವಿಶ್ವಕಪ್‍ನ್ನು ಗಮನದಲ್ಲಿಟ್ಟುಕೊಂಡು ಭಾರತ ತಂಡ ತಯಾರಿ ಆರಂಭ ಮಾಡಬೇಕು ಎಂದು ಹೇಳಿದ್ದಾರೆ.

    ಪ್ರಸ್ತುತ ಕೋಚ್ ಅವರ ನೇತೃತ್ವದಲ್ಲಿ, ಭಾರತ ಸತತ ಎರಡು ಏಕದಿನ, ವಿಶ್ವಕಪ್‍ಗಳ ಸೆಮಿಫೈನಲ್‍ನಲ್ಲಿ ಮತ್ತು ವಿಶ್ವ ಟ್ವೆಂಟಿ -20 ಚಾಂಪಿಯನ್‍ಶಿಪ್‍ನ ಕೊನೆಯ ನಾಲ್ಕು ಹಂತಗಳಲ್ಲಿ ಸೋತಿದೆ. ಈಗ ಭಾರತ 2023 ರ ವಿಶ್ವಕಪ್‍ಗೆ ತಯಾರಿ ನಡೆಸುವ ಸಮಯ ಮತ್ತು ಬದಲಾವಣೆಯು ತಂಡಕ್ಕೆ ಒಳ್ಳೆಯದು ಎಂದು ರಾಬಿನ್ ಸಿಂಗ್ ಹೇಳಿದ್ದಾರೆ.

    ಈ ವೇಳೆ 2019ರ ವಿಶ್ವಕಪ್‍ನಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ವಿರುದ್ಧ ಸೆಮಿಫೈನಲ್ ಪಂದ್ಯದ ವೇಳೆ ನಾನು ಭಾರತ ತಂಡದ ಕೋಚ್ ಆಗಿದ್ದರೆ ಯಾವ ರೀತಿಯಲ್ಲಿ ತೀರ್ಮಾನ ಮಾಡುತ್ತಿದ್ದೆ ಎಂಬುದನ್ನು ಹೇಳಿರುವ ಅವರು, ನಾವು ಒಂದು ಪಂದ್ಯವನ್ನು ಗೆಲ್ಲಬೇಕು ಎಂದರೆ ಆಟವನ್ನು ತಾಂತ್ರಿಕಾವಾಗಿ ಅರ್ಥ ಮಾಡಿಕೊಳ್ಳಬೇಕು ಎಂದಿದ್ದಾರೆ.

    ನ್ಯೂಜಿಲೆಂಡ್ ವಿರುದ್ಧ ಪಂದ್ಯದಲ್ಲಿ ನಾನು ಕೋಚ್ ಆಗಿದ್ದರೆ, ಮಳೆಯಾದ ಕಾರಣ ಬಾಲ್ ಸ್ವಿಂಗ್ ಆಗುತ್ತಿದ್ದ ಕಾರಣ ಭಾರತವು ರೋಹಿತ್ ಶರ್ಮಾ ಅವರನ್ನು ಮೊದಲೇ ಕಳೆದುಕೊಂಡಿತ್ತು. ಆಗ ನಾನು ಇದ್ದರೆ ವಿರಾಟ್ ಕೊಹ್ಲಿಯನ್ನು 4 ನೇ ಕ್ರಮಾಂಕದಲ್ಲಿ ಆಡಿಸುತ್ತಿದೆ. ಆ ಆಟಕ್ಕಾಗಿ ನಾನು ಮೊದಲೇ ಮತ್ತೊಬ್ಬ ಉನ್ನತ ಕ್ರಮಾಂಕದ ಬ್ಯಾಟ್ಸ್ ಮನ್ ಮಾಯಾಂಕ್ ಅಗರ್‍ ವಾಲ್ ಅವರನ್ನು ಆಯ್ಕೆ ಮಾಡಿ ನಂ.3 ರಲ್ಲಿ ಆಡಿಸುತ್ತಿದೆ.

    ಧೋನಿ ಅವರನ್ನು 5 ನೇ ಕ್ರಮಾಂಕದಲ್ಲಿ ಆಡಿಸುತ್ತಿದ್ದೆ ಆಗ ಅವರಿಗೆ ಬ್ಯಾಟ್ ಬೀಸಲು ಹೆಚ್ಚಿನ ಸಮಯ ಸಿಗುತ್ತಿತ್ತು. ಇದರ ನಡುವೆ ಕೊಹ್ಲಿ ಮತ್ತು ಧೋನಿ ಒಟ್ಟಿಗೆ ಬ್ಯಾಟಿಂಗ್ ಮಾಡಬಹುದಿತ್ತು. ಆಗ ಹಾರ್ದಿಕ್ ಪಾಂಡ್ಯ, ರಿಷಭ್ ಪಂತ್ ಮತ್ತು ರವೀಂದ್ರ ಜಡೇಜಾ ಎಂಬ ಮೂರು ಪವರ್ ಹಿಟ್ಟರ್‍ ಗಳನ್ನು ನಾವು ಕೆಳ ಕ್ರಮಾಂಕದಲ್ಲಿ ಆಡಿಸಿ ಪಂದ್ಯವನ್ನು ಗೆಲ್ಲಬಹುದಿತ್ತು ಎಂದು ಹೇಳಿದ್ದಾರೆ.

    2007ರಿಂದ 2009ರ ವರೆಗೆ ಭಾರತದ ತಂಡದ ಫೀಲ್ಡಿಂಗ್ ಕೋಚ್ ಆಗಿ ಕಾರ್ಯನಿರ್ವಹಿಸಿದ್ದ ರಾಬಿನ್ ಸಿಂಗ್ ಭಾರತದ ಅಂಡರ್-19 ಎ ತಂಡಕ್ಕೂ ತರಬೇತುಗಾರನಾಗಿ ಕೆಲಸ ಮಾಡಿದ್ದಾರೆ. ಇದರ ಜೊತೆಗೆ ಐಪಿಎಲ್‍ನಲ್ಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡಕ್ಕೆ ಸಹಾಯಕ ಕೋಚ್ ಆಗಿ ಕೆಲಸ ಮಾಡಿ ಯಶಸ್ವಿಯಾಗಿದ್ದಾರೆ.

    ಭಾರತ ತಂಡದ ಎಲ್ಲಾ ವಿಭಾಗದ ಕೋಚ್‍ಗಳಿಗೂ ಅರ್ಜಿ ಹಾಕಲು ಬಿಸಿಸಿಐ ಆಹ್ವಾನ ನೀಡಿದೆ. ಅದರಂತೆ ದಿಗ್ಗಜ ಆಟಗಾರರಾದ ಟಾಮ್ ಮೂಡಿ, ಮಹೇಲಾ ಜಯವರ್ಧನೆ ಮತ್ತು ಮೈಕ್ ಹೆಸ್ಸೆನ್‍ನಂತವರು ಅರ್ಜಿ ಹಾಕಿದ್ದು, ಬಿಸಿಸಿಐ ಯಾರನ್ನು ದೃಢೀಕರಣ ಪಡಿಸಿಲ್ಲ.

  • ನೀಶಮ್ ಸಿಕ್ಸರ್ ಹೊಡೆಯುತ್ತಿದ್ದಂತೆ ಮ್ಯಾಚ್ ವೀಕ್ಷಿಸುತ್ತಿದ್ದ ಬಾಲ್ಯದ ಕೋಚ್ ಸಾವು

    ನೀಶಮ್ ಸಿಕ್ಸರ್ ಹೊಡೆಯುತ್ತಿದ್ದಂತೆ ಮ್ಯಾಚ್ ವೀಕ್ಷಿಸುತ್ತಿದ್ದ ಬಾಲ್ಯದ ಕೋಚ್ ಸಾವು

    ಲಂಡನ್: 2019ರ ವಿಶ್ವಕಪ್ ಟೂರ್ನಿಯಲ್ಲಿ ಈ ಬಾರಿಯ ಸೂಪರ್ ಓವರ್ ಕ್ರಿಕೆಟ್ ಅಭಿಮಾನಿಗಳ ಗಮನ ಸೆಳೆದಿತ್ತು. ಈ ಸಂದರ್ಭದಲ್ಲಿ ಕಿವೀಸ್ ಪರ ಪ್ರಮುಖ ಪಾತ್ರವಹಿಸಿದ ಆಲ್‍ರೌಂಡರ್ ಜಿಮ್ಮಿ ನೀಶಮ್ ಬಾಲ್ಯದ ಕೋಚ್ ಸೂಪರ್ ಓವರ್ ವೇಳೆಯೇ ಸಾವನ್ನಪ್ಪಿದ್ದರು. ಈ ಕುರಿತು ಅವರ ಪುತ್ರಿ ಮಾಹಿತಿ ನೀಡಿದ್ದಾರೆ.

    ಆಕ್ಲೆಂಡ್ ಗ್ರಾಮರ್ ಸ್ಕೂಲ್ ಮಾಜಿ ಶಿಕ್ಷಕರಾಗಿರುವ ಕೋಚ್ ಡೇವಿಡ್ ಜೇಮ್ಸ್ ಸಾವನ್ನಪ್ಪಿದ್ದು, ಮ್ಯಾಚ್ ಫಲಿತಾಂಶವನ್ನು ವೀಕ್ಷಿಸುತ್ತಿದ್ದ ಅವರು ನೀಶಮ್ ಬ್ಯಾಟಿಂಗ್‍ಗೆ ವೇಳೆ ಹೆಚ್ಚು ಉತ್ಸಾಹದಲ್ಲಿದ್ದರು. ಸೂಪರ್ ಓವರಿನ 2ನೇ ಎಸೆತದಲ್ಲಿ ನೀಶಮ್ ಸಿಕ್ಸರ್ ಸಿಡಿಸಿದ್ದರು. ಈ ಸಂದರ್ಭದಲ್ಲೇ ಜೇಮ್ಸ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಸೂಪರ್ ಓವರ್ ಆಡುತ್ತಿದ್ದ ಸಂದರ್ಭದಲ್ಲಿ ಅವರು ಸಾವನ್ನಪ್ಪಿದ ಮಾಹಿತಿ ನಮಗೆ ಲಭಿಸಿತ್ತು. ನಮ್ಮ ತಂದೆ ಹಾಸ್ಯ ಪ್ರಿಯರಾಗಿದ್ದು, ಉತ್ತಮ ವ್ಯಕ್ತಿತ್ವವನ್ನು ಹೊಂದಿದ್ದರು. ಎಲ್ಲರೊಂದಿಗೂ ಪ್ರೀತಿಯಿಂದ ಬೇರೆಯುತ್ತಿದ್ದ ಅವರನ್ನು ಕಾಳೆದುಕೊಂಡಿದ್ದೇವೆ ಎಂದು ಕೋಚ್ ಪುತ್ರಿ ಲಿಯೋನಿ ಹೇಳಿದ್ದಾರೆ.

    ತಮ್ಮ ಬಾಲ್ಯದ ಕೋಚ್ ಮೃತಪಟ್ಟ ಕುರಿತು ನೀಶಮ್ ಕೂಡ ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ. ಡೇವಿಡ್ ಜೇಮ್ಸ್.. ನನ್ನ ಸ್ಕೂಲ್ ಟೀಚರ್, ಕೋಚ್, ಸ್ನೇಹಿತರು. ಕ್ರಿಕೆಟ್ ಎಂದರೆ ಅವರಿಗೆ ಇಷ್ಟ. ಅವರಿಂದ ಕೋಚಿಂಗ್ ಪಡೆದಿದ್ದು ನನ್ನ ಅದೃಷ್ಟವಾಗಿದ್ದು, ನಮ್ಮದೇ ರೀತಿಯಲ್ಲಿ ಬೆಳೆಯಲು ಅವಕಾಶ ನೀಡಿದ ಅವರಿಗೆ ಧನ್ಯವಾದ ಎಂದು ಸಂತಾಪ ಸೂಚಿಸಿದ್ದಾರೆ. ಆಕ್ಲೆಂಡ್ ಗ್ರಾಮರ್ ಸ್ಕೂಲಿನಲ್ಲಿ 25 ವರ್ಷ ಶಿಕ್ಷಕರಾಗಿ ಕಾರ್ಯನಿರ್ವಹಿಸಿದ್ದ ಅವರು ಹಲವು ವಿದ್ಯಾರ್ಥಿಗಳಿಗೆ ಕ್ರಿಕೆಟ್ ಹಾಗೂ ಹಾಕಿ ಕೋಚಿಂಗ್ ನೀಡಿದ್ದರು. ನೀಶಮ್, ಫಾರ್ಗೂಸನ್ ಸೇರಿದಂತೆ ನ್ಯೂಜಿಲೆಂಡ್ ಪರ ಹಲವರು ಇವರ ಗರಡಿಯಲ್ಲೇ ಬೆಳೆದಿದ್ದಾರೆ.

  • ಮತ್ತೆ ಬ್ಲೂ ಜೆರ್ಸಿಯಲ್ಲಿ ಧೋನಿಯನ್ನ ನೋಡಲು ಪೋಷಕರೇ ಇಷ್ಟಪಡುತ್ತಿಲ್ಲ: ಬಾಲ್ಯದ ಕೋಚ್

    ಮತ್ತೆ ಬ್ಲೂ ಜೆರ್ಸಿಯಲ್ಲಿ ಧೋನಿಯನ್ನ ನೋಡಲು ಪೋಷಕರೇ ಇಷ್ಟಪಡುತ್ತಿಲ್ಲ: ಬಾಲ್ಯದ ಕೋಚ್

    ಮುಂಬೈ: ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ನಿವೃತ್ತಿ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರ ಬಾಲ್ಯದ ಕೋಚ್ ಕೇಶವ್ ಬ್ಯಾನರ್ಜಿ ಅವರು, ಧೋನಿ ಅವರ ಪೋಷಕರೇ ಆತನನ್ನು ಮತ್ತೆ ಬ್ಲೂ ಜೆರ್ಸಿಯಲ್ಲಿ ನೋಡಲು ಇಷ್ಟ ಪಡುವುದಿಲ್ಲ ಎಂದಿದ್ದಾರೆ.

    ವಿಶ್ವಕಪ್ ಸೆಮಿಫೈನಲ್ ಪಂದ್ಯದ ಸೋಲಿನ ಬಳಿಕ ಧೋನಿ ನಿವೃತ್ತಿಯ ಬಗ್ಗೆ ಸಾಕಷ್ಟು ರೂಮರ್ ಗಳು ಹರಿದಾಡುತ್ತಿದೆ. ಆದರೆ ಬಿಸಿಸಿಐ ಅಧಿಕಾರಿಗಳು ಮಾತ್ರ ಧೋನಿ ಈ ಬಗ್ಗೆ ತಮ್ಮ ಬಳಿ ಯಾವುದೇ ಚರ್ಚೆ ನಡೆಸಿಲ್ಲ. ಈಗಲೂ ಧೋನಿ ಆಡುವ ಸಾಮಥ್ರ್ಯವನ್ನ ಹೊಂದಿದ್ದು, ಅವರು ಮುಂದುವರಿಯಲಿದ್ದಾರೆ ಎಂದು ಹೇಳಿದ್ದರು.

    ಇದೇ ಸಂದರ್ಭದಲ್ಲಿ ಪ್ರತಿಕ್ರಿಯೆ ನೀಡಿರುವ ಕೇಶವ್ ಬ್ಯಾನರ್ಜಿ ಅವರು, ಧೋನಿಯ ಪೋಷಕರು ತಮ್ಮ ಬಳಿ ಮಾತನಾಡಿದ್ದಾರೆ. ದೇಶದ ಎಲ್ಲಾ ಮಾಧ್ಯಮಗಳು ಕೂಡ ಇದನ್ನೇ ಹೇಳುತ್ತಿವೆ. ಭಾನುವಾರಷ್ಟೇ ಅವರ ಮನೆಗೆ ಭೇಟಿ ನೀಡಿದ್ದೆ. ಅವರು ಕೂಡ ಧೋನಿ ನಿವೃತ್ತಿಗೆ ಇದು ಉತ್ತಮ ಸಮಯ ಎಂಬ ಅಭಿಪ್ರಾಯ ಹೊಂದಿದ್ದಾರೆ ಎಂದು ಹೇಳಿದ್ದಾರೆ.

    ಒಂದು ವರ್ಷದ ಹಿಂದೆಯೇ ಧೋನಿ ಪೋಷಕರು ಈ ಬಗ್ಗೆ ಅವರೊಂದಿಗೆ ಮಾತನಾಡಿದ್ದು, ನಿವೃತ್ತಿಯ ಸಮಯವನ್ನು ಒಂದು ವರ್ಷದ ಬಳಿಕ ನಿರ್ಧಾರ ಮಾಡಲು ಹೇಳಿದ್ದರು. ಆದರೆ ನಾನು ಅವರಲ್ಲಿ ಮನವಿ ಮಾಡಿದ್ದು, ಧೋನಿ 38 ವರ್ಷ ಆಗುವವರೆಗೂ ಆಟದಲ್ಲಿ ಮುಂದುವರಿಸಲು ಹೇಳಿದ್ದೇನೆ. 2020ರ ಟಿ20 ಟೂರ್ನಿಯ ಬಳಿಕ ಅವರು ತಮ್ಮ ನಿರ್ಧಾರವನ್ನ ಕೈಗೊಳ್ಳಬಹುದು ಎಂದಿದ್ದಾರೆ.

    ಇತ್ತ ವಿಶ್ವಕಪ್ ಬಳಿಕ ಟೀಂ ಇಂಡಿಯಾ ವೆಸ್ಟ್ ಇಂಡೀಸ್ ಪ್ರವಾಸ ಕೈಗೊಳ್ಳಲಿದ್ದು, 3 ಟಿ20, 3 ಏಕದಿನ ಪಂದ್ಯಗಳ ಸರಣಿಯಲ್ಲಿ ಭಾಗವಹಿಸಲಿದೆ. ಈ ಸರಣಿಯಲ್ಲಿ ಧೋನಿ ಭಾಗವಹಿಸುವುದಿಲ್ಲ ಎನ್ನಲಾಗಿದ್ದು, ಆದರೆ ವೆಸ್ಟ್ ಇಂಡೀಸ್ ಮಾತ್ರವಲ್ಲದೇ ಇತರ ಟೂರ್ನಿಗಳಲ್ಲೂ ಧೋನಿ ತಂಡದ ಜೊತೆ ಇರುವುದು ಬಹುತೇಕ ಅನುಮಾನ ಎನ್ನಲಾಗಿದೆ.

    ಧೋನಿ ಸ್ಥಾನವನ್ನು ಯುವ ಆಟಗಾರ ರಿಷಬ್ ಪಂತ್ ತುಂಬಲಿದ್ದು, ಮತ್ತೊಬ್ಬ ಅನುಭವಿ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ತಂಡದಲ್ಲಿದ್ದಾರೆ. ಆದರೆ ಧೋನಿ ಅವರನ್ನು ಮುಂದಿನ ಟೂರ್ನಿಗಳಿಗೆ ಆಯ್ಕೆ ಸಮಿತಿ ಪರಿಗಣಿಸುತ್ತಾ ಎಂಬ ಕುತೂಹಲವೂ ಅಭಿಮಾನಿಗಳಲ್ಲಿದೆ.

  • ಭಾರತದ ವಿರುದ್ಧ ಸೋಲು – ಆತ್ಮಹತ್ಯೆಗೆ ಚಿಂತಿಸಿದ್ದ ಪಾಕ್ ಕೋಚ್

    ಭಾರತದ ವಿರುದ್ಧ ಸೋಲು – ಆತ್ಮಹತ್ಯೆಗೆ ಚಿಂತಿಸಿದ್ದ ಪಾಕ್ ಕೋಚ್

    ಲಂಡನ್: ಪಾಕಿಸ್ತಾನ ಕ್ರಿಕೆಟ್ ತಂಡದ ಕೋಚ್ ಮಿಕ್ಕಿ ಅರ್ಥರ್ ವಿಶ್ವಕಪ್ ಟೂರ್ನಿಯ ಟೀಂ ಇಂಡಿಯಾ ವಿರುದ್ಧದ ಪಂದ್ಯದ ಸೋಲಿನ ಬಳಿಕ ಆತ್ಮಹತ್ಯೆಗೆ ಚಿಂತನೆ ನಡೆಸಿದ್ದೆ ಎಂಬ ಸಂಗತಿಯನ್ನು ಬಿಚ್ಚಿಟ್ಟಿದ್ದಾರೆ.

    ಜೂನ್ 16 ರಂದು ನಡೆದ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾ 89 ರನ್ ಗಳ ಜಯ ಪಡೆದಿತ್ತು. ಅಲ್ಲದೇ ವಿಶ್ವಕಪ್ ಟೂರ್ನಿಯಲ್ಲಿ ಪಾಕ್ ವಿರುದ್ಧದ ತನ್ನ ಅಮೋಘ ಜಯದ ದಾಖಲೆಯನ್ನು ಮುಂದುವರಿಸಿತ್ತು. ಭಾರತ ವಿರುದ್ಧದ ಸೋಲು ಪಾಕಿಸ್ತಾನ ತಂಡಕ್ಕೆ ವಿಶ್ವಕಪ್ ಟೂರ್ನಿಯಲ್ಲಿ ಸೆಮಿಫೈನಲ್‍ಗೆ ಹೋಗುವ ಹಾದಿಯನ್ನು ಮತ್ತಷ್ಟು ಕಠಿಣಗೊಳಿಸಿತ್ತು. ಆದರೆ ದಕ್ಷಿಣ ಆಫ್ರಿಕಾ ವಿರುದ್ಧ ನಿರ್ಣಯಕ ಪಂದ್ಯದಲ್ಲಿ ಭಾನುವಾರ ಗೆಲುವು ಪಡೆಯುವ ಮೂಲಕ ತನ್ನ ಸೆಮಿ ಫೈನಲ್ ಆಸೆಯನ್ನು ಜೀವಂತವಾಗಿರಿಸಿದೆ.

    ಪಂದ್ಯದ ಬಳಿಕ ಮಾತನಾಡಿರುವ ಮಿಕ್ಕಿ, ಕಳೆದ ಭಾನುವಾರ ನಾನು ಆತ್ಮಹತ್ಯೆ ಮಾಡಿಕೊಳ್ಳುವ ಚಿಂತನೆ ಮಾಡಿದ್ದೆ. ಭಾರತ ವಿರುದ್ಧ ಪಂದ್ಯ ನಮಗೆ ಬಹಳ ಮುಖ್ಯವಾಗಿತ್ತು. ವಿಶ್ವಕಪ್ ಟೂರ್ನಿಯಲ್ಲಿ ಸೋಲಿನ ಮೇಲೆ ಸೋಲು ಸ್ವೀಕರಿಸುವುದು ಕಷ್ಟಸಾಧ್ಯವಾಗುತ್ತದೆ. ಜನರು ನಿರೀಕ್ಷೆ ಹಾಗೂ ಮಾಧ್ಯಮಗಳ ಒತ್ತಡದಿಂದ ಇಕ್ಕಟ್ಟಿಗೆ ಸಿಲುಕಿದ್ದೆ. ಈ ವೇಳೆ ಆತ್ಮಹತ್ಯೆ ಚಿಂತನೆ ಬಂದಿತ್ತು ಎಂದಿದ್ದಾರೆ.

    ಭಾರತದ ವಿರುದ್ಧ ಸೋಲಿನ ಬಳಿಕ ಪಾಕಿಸ್ತಾನ ತಂಡದ ವಿರುದ್ಧ ಕಟು ಟೀಕೆಗಳು ಕೇಳಿ ಬಂದಿದ್ದವು. ಸದ್ಯ ಮಿಕ್ಕಿ ಇಂದಿನ ಹೇಳಿಕೆಗಳಿಗೂ ಅಭಿಮಾನಿಗಳು ಮಿಶ್ರ ಪ್ರತಿಕ್ರಿಯೆ ನೀಡಿದ್ದು, ಕೋಚ್‍ರ ಮಾತುಗಳು ಕೆಟ್ಟ ಅಭಿರುಚಿಯನ್ನು ತೋರುತ್ತದೆ ಎಂದಿದ್ದಾರೆ.

    ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ತಂಡ ಸೆಮಿ ಫೈನಲ್ ಹಂತ ತಲುಪಬೇಕಾದರೆ ಉಳಿರುವ 3 ಪಂದ್ಯಗಳಲ್ಲಿ ಗೆಲುವು ಪಡೆಯುವುದು ಅನಿವಾರ್ಯವಾಗಿದೆ. ಅಲ್ಲದೇ ಪಾಕ್ ರನ್ ರೇಟ್ ಕೂಡ ಇದರ ಮೇಲೆ ಪ್ರಾಮುಖ್ಯತೆ ಪಡೆದಿದೆ. ಪಾಕಿಸ್ತಾನ ತಂಡ ನಾಳಿನ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದೆ.

  • ಕ್ರೀಡಾಂಗಣದಲ್ಲೇ ಬಿಕ್ಕಿ ಬಿಕ್ಕಿ ಅತ್ತ ಎಸ್‌ಆರ್‌ಎಚ್ ಕೋಚ್ -ವಿಡಿಯೋ

    ಕ್ರೀಡಾಂಗಣದಲ್ಲೇ ಬಿಕ್ಕಿ ಬಿಕ್ಕಿ ಅತ್ತ ಎಸ್‌ಆರ್‌ಎಚ್ ಕೋಚ್ -ವಿಡಿಯೋ

    ಹೈದರಾಬಾದ್: ಈ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡುತ್ತ ಬಂದಿದ್ದ ಸನ್ ರೈಸರ್ಸ್ ಹೈದರಬಾದ್ ತಂಡ ಡೆಲ್ಲಿ ವಿರುದ್ಧದ ಎಲಿಮಿನೇಟರ್ ಪಂದ್ಯದಲ್ಲಿ ಸೋಲುಂಡು ಟೂರ್ನಿಯಿಂದ ಹೊರ ನಡೆದಿತ್ತು. ಪಂದ್ಯದಲ್ಲಿ ತಂಡದ ಸೋಲುತ್ತಿದಂತೆ ತಂಡದ ಕೋಚ್ ಟಾಮ್ ಮೂಡಿ ಕ್ರೀಡಾಂಗಣದಲ್ಲೇ ದುಃಖದಿಂದ ಅತ್ತಿದ್ದಾರೆ.

    ಟಾಸ್ ಸೋತು ಬ್ಯಾಟಿಂಗ್ ನಡೆಸಿದ ಹೈದರಾಬಾದ್ ತಂಡ ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 162 ರನ್ ಗಳನ್ನು ಗಳಿಸಿತ್ತು. ಇದಕ್ಕುತ್ತರವಾಗಿ ಬ್ಯಾಟಿಂಗ್ ಆರಂಭಿಸಿದ ಡೆಲ್ಲಿ ಬಳಗ ರಿಷಬ್ ಪಂತ್, ಪೃಥ್ವಿ ಶಾರ ಅಬ್ಬರ ಬ್ಯಾಟಿಂಗ್ ನಿಂದ 2 ವಿಕೆಟ್ ಅಂತರದಲ್ಲಿ ಗೆಲುವು ಪಡೆದಿತ್ತು. ಆ ಮೂಲಕ ಟೂರ್ನಿಯಲ್ಲಿ ತಮ್ಮ ಮುಂದಿನ ಜರ್ನಿಯನ್ನು ಜೀವಂತವಾಗಿರಿಸಿ ಕ್ವಾಲಿಫೈಯರ್ ಪಂದ್ಯಕ್ಕೆ ಅರ್ಹತೆ ಪಡೆಯಿತು.

    2016ರ ಟೈಟಲ್ ಗೆದ್ದಿದ್ದ ಸನ್ ರೈಸರ್ಸ್ ಹೈದರಬಾದ್ ತಂಡ 2ನೇ ಬಾರಿಗೆ ಕಪ್ ಗೆಲ್ಲುವ ಅವಕಾಶವನ್ನು ಕಳೆದುಕೊಂಡಿದ್ದು, 2017ರಲ್ಲೂ ಪ್ಲೇ ಆಪ್ ಹಂತದಲ್ಲಿ ಚೆನ್ನೈ ವಿರುದ್ಧ ಸೋತು ತಂಡ ಟೂರ್ನಿಯಿಂದ ನಿರ್ಗಮಿಸಿತ್ತು. ಪಂದ್ಯ ಗೆದ್ದ ಸಂಭ್ರಮದಲ್ಲಿದ್ದ ಡೆಲ್ಲಿ ಆಟಗಾರರು ಕ್ರೀಡಾಂಗಣದಲ್ಲಿ ಸಂತಸದಿಂದ ಸಂಭ್ರಮಿಸುತ್ತಿದ್ದರೆ, ಇತ್ತ ಡಗೌಟ್ ನಲ್ಲಿ ಕುಳಿತ್ತಿದ್ದ ಟಾಮ್ ಮೂಡಿ ಮಾತ್ರ ಭಾವುಕರಾಗಿ ಬಿಕ್ಕಿ ಬಿಕ್ಕಿ ಅತ್ತಿದ್ದರು.

  • ಪಾಕಿಸ್ತಾನಕ್ಕೂ ಪ್ರೇರಣೆಯಾದ ರಾಹುಲ್ ದ್ರಾವಿಡ್!

    ಪಾಕಿಸ್ತಾನಕ್ಕೂ ಪ್ರೇರಣೆಯಾದ ರಾಹುಲ್ ದ್ರಾವಿಡ್!

    ಇಸ್ಲಾಮಾಬಾದ್: ಟೀಂ ಇಂಡಿಯಾ ಅಂಡರ್ 19 ಹಾಗೂ ಎ ತಂಡದ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿರುವ ರಾಹುಲ್ ದ್ರಾವಿಡ್ ಅವರು ಪಾಕಿಸ್ತಾನದ ಕ್ರಿಕೆಟ್ ಮಂಡಳಿಗೂ ಪ್ರೇರಣೆಯಾಗಿದ್ದು, ಅವರ ಹಾದಿಯಲ್ಲೇ ಪಿಸಿಬಿ ಕೂಡ ನಡೆಯಲು ನಿರ್ಧರಿಸಿದೆ.

    ದ್ರಾವಿಡ್ ಯುವ ತಂಡದ ಆಟಗಾರರಿಗೆ ಕೇವಲ ಕೋಚ್ ಆಗಿ ಮಾತ್ರವಲ್ಲದೇ ಜೀವನದ ಮಾರ್ಗದರ್ಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಯುವ ಆಟಗಾರರು ಕ್ರಿಕೆಟ್ ಹೊರತುಪಡಿಸಿ ಇತರೇ ಕ್ಷೇತ್ರಗಳ ಕೌಶಲ್ಯಗಳಲ್ಲಿ ಪರಿಣಿತಿ ಪಡೆಯಬೇಕು ಎಂದು ದ್ರಾವಿಡ್ ಮನವಿ ಮಾಡಿದ್ದರು.

    ಒಬ್ಬ ರಾಷ್ಟ್ರೀಯ ತಂಡದ ಹಿರಿಯ ಆಟಗಾರ ತಂಡದ ಕೋಚ್ ಆದರೆ ಹೇಗೆ ಯುವ ಆಟಗಾರರಿಗೆ ಪ್ರೇರಣೆ ಆಗಬಲ್ಲರು ಎಂದು ಪಿಸಿಬಿಗೆ ರಾಹುಲ್ ಸಾಕ್ಷಿಯಾಗಿದ್ದಾರೆ. ರಾಹುಲ್ ಅವರ ಗರಡಿಯಲ್ಲಿ ಪಳಗಿದ ಕುಲ್ದೀಪ್ ಯಾದವ್, ಹಾರ್ದಿಕ್ ಪಾಂಡ್ಯ, ಮಯಾಂಕ್ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದಿದ್ದರು. ಅಲ್ಲದೇ ಅಂಡರ್ 19 ವಿಶ್ವಕಪ್ ಟೂರ್ನಿಯನ್ನು ಪೃಥ್ವಿ ಶಾ ನಾಯಕತ್ವ ತಂಡ ಗೆದ್ದು ಬಂದಿದ್ದನ್ನು ಇಲ್ಲಿ ಗಮನಿಸಬಹುದಾಗಿದೆ.

    ಸದ್ಯದ ಒಂದು ವರದಿಯ ಪ್ರಕಾರ ಪಿಸಿಬಿ ಕೂಡ ರಾಹುಲ್ ಅವರ ಪ್ರೇರಣೆಯಂತೆ ತಮ್ಮ ಅಂಡರ್ 19 ತಂಡಗಳಿಗೆ ಯೂನಿಸ್ ಖಾನ್ ಅವರನ್ನು ಕೋಚ್ ಆಗಿ ಆಯ್ಕೆ ಮಾಡಲು ತೀರ್ಮಾನಿಸಿದೆ. ಈ ಬಗ್ಗೆ ಪಿಸಿಬಿ ಅಧ್ಯಕ್ಷ ಈಶನ್ ಮನಿ ಪ್ರತಿಕ್ರಿಯೆ ಕೂಡ ನೀಡಿದ್ದು, ಅಂಡರ್ 19 ತಂಡದ ಕೋಚ್ ಆಗಿ ಭಾರತದಲ್ಲಿ ರಾಹುಲ್ ದ್ರಾವಿಡ್ ಅವರು ಯಶಸ್ವಿಯಾಗಿದ್ದಾರೆ ಎಂದು ಹೇಳಿದ್ದಾರೆ.

    ವಿದೇಶಿ ಕೋಚ್‍ಗಳಿಗೆ ಹೆಚ್ಚಿನ ಅವಕಾಶವನ್ನು ನೀಡುವ ಬದಲು ದೇಶದ ಸ್ವತಃ ಕೋಚ್‍ಗಳಿಗೆ ಭಾರತ ನೀಡುತ್ತಿರುವ ಅವಕಾಶದಂತೆ ನಮ್ಮಲ್ಲೂ ಪ್ರಾಮುಖ್ಯತೆ ನೀಡಲು ಚಿಂತನೆ ನಡೆದಿದೆ. ತಂಡದ ಆಟಗಾರರು ದೇಶದ ರಾಯಭಾರಿಗಳಬೇಕು ಎಂದು ಅಭಿಪ್ರಾಯ ಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಪಿಸಿಬಿ ಮೊಹಮ್ಮದ್ ಯೂಸುಫ್ ರನ್ನು ಬ್ಯಾಟಿಂಗ್ ಕೋಚ್ ಆಗಿ ನೇಮಕ ಮಾಡಲು ಕೂಡ ನಿರ್ಧರಿಸಿದೆ ಎನ್ನಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv