Tag: ಕೋಚ್ ರವಿಶಾಸ್ತ್ರಿ

  • ಟೀಂ ಇಂಡಿಯಾಗೂ ಬಹು ನಾಯಕತ್ವ – ರೋಹಿತ್‍ಗೆ ಏಕದಿನ ನಾಯಕತ್ವ ಪಟ್ಟ?

    ಟೀಂ ಇಂಡಿಯಾಗೂ ಬಹು ನಾಯಕತ್ವ – ರೋಹಿತ್‍ಗೆ ಏಕದಿನ ನಾಯಕತ್ವ ಪಟ್ಟ?

    ಲಂಡನ್: 2019ರ ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ಸೋಲುಂಡು ಟೂರ್ನಿಯಿಂದ ಹೊರ ನಡೆದ ಬಳಿಕ ತಂಡದ ಗೊಂದಲ ನಿವಾರಣೆಗೆ ಬಿಸಿಸಿಐ ಮುಂದಾಗಿದೆ.

    ಕೆಲ ಸದಸ್ಯರು ಟೀಂ ಇಂಡಿಯಾ ನಾಯಕತ್ವದಲ್ಲಿ ಬಲಾವಣೆ ಮಾಡಲು ಕೂಡ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಸದ್ಯ ಬಿಸಿಸಿಐ ಕೂಡ ಇತ್ತ ಮನಸ್ಸು ಮಾಡಿದೆ ಎನ್ನಲಾಗಿದ್ದು, ಉಪ ನಾಯಕ ರೋಹಿತ್‍ಗೆ ಏಕದಿನ ನಾಯಕತ್ವ ನೀಡಿ, ಕೊಹ್ಲಿ ಅವರನ್ನ ಟಿ20, ಟೆಸ್ಟ್ ನಾಯಕನಾಗಿ ಮುಂದುವರಿಸಲು ಚಿಂತನೆ ನಡೆಸಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

    ಬಿಸಿಸಿಐ ವಕ್ತಾರರೊಬ್ಬರು ಈ ಕುರಿತು ಮಾಧ್ಯಮವೊಂದಕ್ಕೆ ಮಾಹಿತಿ ನೀಡಿದ್ದು, ವಿಶ್ವಕಪ್ ಟೂರ್ನಿಯ ಬಳಿಕ ತಂಡದ ಭವಿಷ್ಯದ ಬಗ್ಗೆ ಚಿಂತನೆಗಳನ್ನು ನಡೆಸಲಾಗುತ್ತಿದೆ. ಈ ದೃಷ್ಟಿಯಿಂದ ಟೀಂ ಇಂಡಿಯಾ ತಂಡದ ನಾಯಕತ್ವದಲ್ಲಿ ಕೆಲ ಬದಲಾವಣೆಗಳನ್ನು ಮಾಡಲು ಚಿಂತನೆ ನಡೆಸಲಾಗಿದೆ. ರೋಹಿತ್ ಗೆ ಸಿಮೀತ ಓವರ್ ಪಂದ್ಯಗಳ ನಾಯಕತ್ವ ನೀಡಿ ಟಿ20, ಟೆಸ್ಟ್ ಕ್ರಿಕೆಟ್‍ಗೆ ಕೊಹ್ಲಿ ನಾಯಕತ್ವ ಮುಂದುವರಿಸುವ ಚಿಂತನೆ ಇದೆ ಎಂದರು.

    ಈ ಸಮಯ ರೋಹಿತ್‍ಗೆ ಏಕದಿನ ಕ್ರಿಕೆಟ್ ನಾಯಕತ್ವ ನೀಡುವುದು ಸೂಕ್ತವಾಗಿದೆ. ಅಲ್ಲದೇ ಕೊಹ್ಲಿಯಿಂದ ಇದಕ್ಕೆ ಬೆಂಬಲ ವ್ಯಕ್ತವಾಗುವ ಅವಕಾಶ ಇದೆ. ಮುಂದಿನ ವಿಶ್ವಕಪ್ ಟೂರ್ನಿಯ ದೃಷ್ಟಿಯ ಹಿನ್ನೆಲೆಯಲ್ಲಿ ಈ ಬದಲಾವಣೆಗಳನ್ನು ಕೈಗೊಳ್ಳುವ ಚಿಂತನೆ ಇದೆ ಎಂದಿದ್ದಾರೆ.

    ತಂಡದ ಯಾವ ಅಂಶಗಳಲ್ಲಿ ಹಿನ್ನಡೆ ಆನುಭವಿಸಿತು ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಇರುವುದಿಂದ ರೋಹಿತ್ ಈ ಕೆಲಸ ಮಾಡಲು ಸೂಕ್ತ ಎಂಬ ಅಭಿಪ್ರಾಯ ಇದೆ ಎಂದಿದ್ದಾರೆ. ಇತ್ತ ಬಿಸಿಸಿಐ ಸುಪ್ರೀಂ ನೇಮಿಸಿರುವ ಆಡಳಿತ ಸಮಿತಿ ಕೂಡ ವಿಶ್ವಕಪ್ ಹಿನ್ನೆಲೆಯಲ್ಲಿ ತಂಡದ ಪ್ರದರ್ಶನದ ಬಗ್ಗೆ ಚರ್ಚೆ ನಡೆಸಲಿದೆ. ಈ ಸಂದರ್ಭದಲ್ಲಿ ನಾಯಕ ಕೊಹ್ಲಿ, ಕೋಚ್ ರವಿಶಾಸ್ತ್ರಿ ಅವರ ಪ್ರದರ್ಶನ ಸೇರಿದಂತೆ ಇತರೇ ಅಂಶಗಳ ಕುರಿತು ಚರ್ಚೆ ನಡೆಸಲಿದೆ.

  • ಧೋನಿಯನ್ನು ಯಾವ ಕ್ರಮಾಂಕದಲ್ಲಿ ಕಳುಹಿಸಬೇಕು – ಕೊಹ್ಲಿ, ರವಿಶಾಸ್ತ್ರಿ ಚರ್ಚೆ ವಿಡಿಯೋ ವೈರಲ್

    ಧೋನಿಯನ್ನು ಯಾವ ಕ್ರಮಾಂಕದಲ್ಲಿ ಕಳುಹಿಸಬೇಕು – ಕೊಹ್ಲಿ, ರವಿಶಾಸ್ತ್ರಿ ಚರ್ಚೆ ವಿಡಿಯೋ ವೈರಲ್

    ಲಂಡನ್: ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ಸೋತು ಟೂರ್ನಿಯಿಂದ ಹೊರ ನಡೆದಿದ್ದು ಎಲ್ಲರಿಗೂ ತಿಳಿದ ಸಂಗತಿ. ಆದರೆ ಟೀಂ ಇಂಡಿಯಾ ಪಂದ್ಯದಲ್ಲಿ ಎಡವಿದ್ದು ಎಲ್ಲಿ ಎಂಬ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ನಡೆದಿದೆ. ಇದೇ ಸಂದರ್ಭದಲ್ಲಿ ಕೊಹ್ಲಿ ಹಾಗೂ ಕೋಚ್ ರವಿಶಾಸ್ತ್ರಿ ನಡುವಿನ ಚರ್ಚೆಯ ವಿಡಿಯೋ ಕೂಡ ಸಾಕಷ್ಟು ವೈರಲ್ ಆಗುತ್ತಿದೆ.

    ಪಂದ್ಯದಲ್ಲಿ ಕೊಹ್ಲಿ ಹಾಗೂ ರವಿಶಾಸ್ತ್ರಿ ನಡುವೆ ನಿರ್ಧಾರ ಕೈಗೊಳ್ಳುವಲ್ಲಿ ಭಿನ್ನಭಿಪ್ರಾಯ ವ್ಯಕ್ತಪಡಿಸುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ. ಪ್ರಮುಖವಾಗಿ ಧೋನಿ ಅವರ ಬ್ಯಾಟಿಂಗ್ ಕ್ರಮಾಂಕದ ಬಗ್ಗೆ ಇಬ್ಬರ ನಡುವೆ ಚರ್ಚೆ ನಡೆದಿದೆ.

    ಪಂದ್ಯದಲ್ಲಿ ಧೋನಿ ಅವರನ್ನು ನಂ.7 ಕ್ರಮಾಂಕದಲ್ಲಿ ಕಳುಹಿಸಿಕೊಡಲಾಗಿತ್ತು. ಇದಕ್ಕೂ ಮುನ್ನ ದಿನೇಶ್ ಕಾರ್ತಿಕ್ ಔಟಾಗುತ್ತಿದಂತೆ 5ನೇ ಸ್ಥಾನದಲ್ಲಿ ರಿಷಬ್ ಪಂತ್ ಬ್ಯಾಟಿಂಗ್ ನಡೆಸಿದ್ದರು. ಆದರೆ 33 ರನ್ ಗಳಿಸಿ ರಿಷಬ್ ಔಟಾಗುತ್ತಿದಂತೆ ಕೋಚ್ ಬಳಿ ಬಂದ ಕೊಹ್ಲಿ ಅಸಮಾಧಾನ ವ್ಯಕ್ತಪಡಿಸಿದ ಘಟನೆ ನಡೆದಿದೆ. ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ, ಪಂತ್, ಜಡೇಜಾ ಮತ್ತು ಧೋನಿ ಮಾತ್ರ ಎರಡಂಕ್ಕಿ ತಲುಪಿದ್ದರು.

    ಇತ್ತ ರೋಚಕ ಹಂತದಲ್ಲಿ ಧೋನಿ ಔಟಾಗುತ್ತಿದಂತೆ ತಂಡ ಸೋಲುಂಡಿತ್ತು. ಇದರೊಂದಿಗೆ ಮೊದಲ ಬಾರಿಗೆ ವಿಶ್ವಕಪ್ ಗೆಲ್ಲುವ ಅವಕಾಶ ಪಡೆದುಕೊಂಡಿತು. ನಿನ್ನೆ ನಡೆದ ಆಸ್ಟ್ರೇಲಿಯಾ, ಇಂಗ್ಲೆಂಡ್ ನಡುವಿನ ಪಂದ್ಯದಲ್ಲಿ ಇಂಗ್ಲೆಂಡ್ ಫೈನಲ್ ಪ್ರವೇಶಿಸಿದೆ.

    ಈ ಬಾರಿ ಇತ್ತಂಡಗಳಲ್ಲಿ ಯಾವುದೇ ತಂಡ ವಿಶ್ವಕಪ್ ಗೆದ್ದರೂ ಕೂಡ ಇತಿಹಾಸ ಸೃಷ್ಟಿಯಾಗಲಿದೆ. 27 ವರ್ಷ ಅಂದರೆ 27 ವರ್ಷದ ಬಳಿಕ ಇಂಗ್ಲೆಂಡ್ ಫೈನಲ್ ಪ್ರವೇಶ ಮಾಡಿದೆ. ಇತ್ತ 2015 ರಲ್ಲಿ ಕಿವೀಸ್ ಫೈನಲ್ ತಲುಪಿತ್ತು. ಇದುವರೆಗೂ ವಿಶ್ವಕಪ್‍ನಲ್ಲಿ ಆಸ್ಟ್ರೇಲಿಯಾ 5 ಬಾರಿ ವಿಶ್ವಕಪ್ ಗೆಲುವು ಪಡೆದಿದ್ದು, ವೆಸ್ಟ್ ಇಂಡೀಸ್ ಮತ್ತು ಭಾರತ ತಲಾ 2 ಬಾರಿ, ಶ್ರೀಲಂಕಾ, ಪಾಕಿಸ್ತಾನ 1 ಬಾರಿ ವಿಶ್ವಕಪ್ ಗೆಲುವು ಪಡೆದಿದೆ. ಜುಲೈ 14 ರಂದು ವಿಶ್ವಕಪ್ ಫೈನಲ್ ನಡೆಯಲಿದ್ದು, ಇತ್ತಂಡಗಳು ಕಪ್ ಗೆಲ್ಲುವ ಆತ್ಮವಿಶ್ವಾಸದಲ್ಲಿ ಇದೆ.

  • ಕೋಚ್ ರವಿಶಾಸ್ತ್ರಿ ಅವಧಿ ವಿಸ್ತರಣೆ

    ಕೋಚ್ ರವಿಶಾಸ್ತ್ರಿ ಅವಧಿ ವಿಸ್ತರಣೆ

    ಮುಂಬೈ: ಟೀಂ ಇಂಡಿಯಾ ಮುಖ್ಯ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿರುವ ರವಿಶಾಸ್ತ್ರಿ ಸೇರಿದಂತೆ ಸಹಾಯಕ ಕೋಚ್‍ಗಳ ಅವಧಿಯನ್ನು ಬಿಸಿಸಿಐ 45 ದಿನಗಳ ಕಾಲ ವಿಸ್ತರಣೆ ಮಾಡಿದೆ.

    ಟೀಂ ಇಂಡಿಯಾ ವಿಶ್ವಕಪ್ ಟೂರ್ನಿಯಲ್ಲಿ ಬ್ಯುಸಿಯಾಗಿದ್ದು, ಈ ವೇಳೆಯೇ ಬಿಸಿಸಿಐ ಕೋಚ್‍ಗಳ ಅವಧಿಯನ್ನು ವಿಸ್ತರಣೆ ಮಾಡಿದೆ. ವಿಶ್ವಕಪ್ ಬಳಿಕ ಟೀಂ ಇಂಡಿಯಾ ಕೋಚ್ ಸ್ಥಾನ ಬದಲಾಗುವ ಸಾಧ್ಯತೆಗಳಿದ್ದು, ಇದರ ನಡುವೆಯೇ ಅವಧಿಯನ್ನು ವಿಸ್ತರಿಸಲಾಗಿದೆ.

    ಟೀಂ ಇಂಡಿಯಾಗೆ ರವಿಶಾಸ್ತ್ರಿ ಅವರೊಂದಿಗೆ ಸಹಾಯಕ ಕೋಚ್ ಆಗಿ ಸಂಜಯ್ ಬಂಗಾರ್, ಬೌಲಿಂಗ್ ಕೋಚ್ ಆಗಿ ಭರತ್ ಅರುಣ್ ಹಾಗೂ ಫೀಲ್ಡಿಂಗ್ ಕೋಚ್ ಆಗಿ ಆರ್ ಶ್ರೀಧರ್ ಅವರು ಕಾರ್ಯನಿರ್ವಹಿಸುತ್ತಿದ್ದಾರೆ. ಸುಪ್ರೀಂ ಕೋರ್ಟ್ ನೇಮಕ ಮಾಡಿರುವ ಆಡಳಿತ ಮಂಡಳಿಯೊಂದಿಗೆ ಚರ್ಚೆ ನಡೆಸಿದ ಬಳಿಕ ಕೋಚ್‍ಗಳ ಅವಧಿಯನ್ನ ವಿಸ್ತರಣೆ ಮಾಡುವ ತೀರ್ಮಾನ ಪ್ರಕಟಿಸಲಾಗಿದೆ.

    ಸದ್ಯ ಇರುವ ಕೋಚ್‍ಗಳ ಅವಧಿ ವಿಶ್ವಕಪ್ ಬಳಿಕ ಮುಕ್ತಾಯ ಆಗಲಿದ್ದು, ಸದ್ಯ ಅವಧಿ ವಿಸ್ತರಣೆ ಮಾಡಿರುವುದರಿಂದ ವೆಸ್ಟ್ ಇಂಡೀಸ್ ಟೂರ್ನಿಯ ಮುಕ್ತಾಯದ ವರೆಗೂ ಕಾರ್ಯನಿರ್ವಹಿಸಲು ಅವಕಾಶವಿದೆ. ವೆಸ್ಟ್ ಇಂಡೀಸ್ ವಿರುದ್ಧದ ಟೂರ್ನಿಯಲ್ಲಿ ಟೀಂ ಇಂಡಿಯಾ ತಲಾ 3 ಟಿ20 ಹಾಗೂ ಏಕದಿನ ಪಂದ್ಯ ಸೇರಿದಂತೆ 2 ಟೆಸ್ಟ್ ಪಂದ್ಯಗಳನ್ನು ಆಡಲಿದೆ. ಆಗಸ್ಟ್ 3 ರಿಂದ ಸೆಪ್ಟೆಂಬರ್ 3ರವರೆಗೂ ಟೂರ್ನಿ ನಡೆಯಲಿದೆ.

    ಸದ್ಯ ವಿಶ್ವಕಪ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಟೀಂ ಇಂಡಿಯಾ ಆಡಿರುವ 2 ಪಂದ್ಯಗಳಲ್ಲಿ ಗೆಲುವು ಪಡೆದಿದೆ. ಇಂದು ನಡೆಯಬೇಕಿದ್ದ ಪಂದ್ಯಕ್ಕೆ ಮಳೆ ಅಡ್ಡಿ ಪಡಿಸಿದ್ದು, ಪಂದ್ಯ ಆರಂಭವಾಗುವುದೇ ಅನುಮಾನವಾಗಿದೆ.

  • ಕೋಚ್ ರವಿಶಾಸ್ತ್ರಿಯನ್ನು ಟ್ರೋಲ್ ಮಾಡಿದ ಆಸೀಸ್ ಪತ್ರಕರ್ತ

    ಕೋಚ್ ರವಿಶಾಸ್ತ್ರಿಯನ್ನು ಟ್ರೋಲ್ ಮಾಡಿದ ಆಸೀಸ್ ಪತ್ರಕರ್ತ

    ಸೌತಾಂಪ್ಟನ್: ಟೀಂ ಇಂಡಿಯಾ ಮುಖ್ಯ ಕೋಚ್ ರವಿಶಾಸ್ತ್ರಿ ಅವರು ಇಬ್ಬರು ಮಹಿಳಾ ಅಭಿಮಾನಿಗಳೊಂದಿಗೆ ತೆಗೆದುಕೊಂಡಿರುವ ಫೋಟೋವನ್ನು ಟ್ವೀಟ್ ಮಾಡಿ ಆಸೀಸ್ ಪತ್ರಕರ್ತರೊಬ್ಬರು ಟ್ರೋಲ್ ಮಾಡಿದ್ದಾರೆ.

    ವಿಶ್ವಕಪ್ ಭಾಗವಾಗಿ ಇಂದು ಟೀಂ ಇಂಡಿಯಾ, ದಕ್ಷಿಣ ಆಫ್ರಿಕಾ ವಿರುದ್ಧ ಪಂದ್ಯದಲ್ಲಿ ಕಣಕ್ಕೆ ಇಳಿದಿದೆ. ಈ ಪಂದ್ಯದ ಹಿನ್ನೆಲೆಯಲ್ಲಿಯೇ ಫೋಟೋ ಟ್ರೋಲ್ ಆಗಿದ್ದು, ಪತ್ರಕರ್ತ ಡೆನ್ನಿಸ್ ಫ್ರಿಡ್‍ಮನ್ ತಮ್ಮ ಟ್ವಿಟ್ಟರ್ ನಲ್ಲಿ ಕೋಚ್ ರವಿಶಾಸ್ತ್ರಿ ಕಾಲೆಳೆದಿದ್ದಾರೆ. ಫೋಟೋದಲ್ಲಿ ರವಿಶಾಸ್ತ್ರಿ ಅವರೊಂದಿಗೆ ಇಬ್ಬರು ಮಹಿಳಾ ಅಭಿಮಾನಿಗಳು ಇದ್ದು, ಅವರೊಂದಿಗೆ ಟೀಂ ಇಂಡಿಯಾಗೆ ಸಂಬಂಧಿಸದ ವ್ಯಕ್ತಿಯೊಬ್ಬರು ಕಾಣಿಸಿಕೊಂಡಿದ್ದಾರೆ.

    https://twitter.com/DennisCricket_/status/1135879980473233408

    ಅಂದಹಾಗೇ ಡೆನ್ನಿಸ್ ಫ್ರಿಡ್‍ಮನ್ ತಾವು ಪಾಕಿಸ್ತಾನ ಅಭಿಮಾನಿ ಎಂದು ಈ ಹಿಂದೆ ತಿಳಿಸಿದ್ದರು. ಸದ್ಯ ಟ್ವೀಟ್‍ನಲ್ಲಿ “ಟೀಂ ಇಂಡಿಯಾ ಪಂದ್ಯಕ್ಕೆ ಉತ್ತಮ ತರಬೇತಿಯನ್ನ ಪಡೆಯುತ್ತಿದೆ” ಎಂದು ವ್ಯಂಗ್ಯವಾಗಿ ಟೀಕೆ ಮಾಡಿದ್ದಾರೆ. ಇತ್ತ ಪತ್ರಕರ್ತರ ಟ್ವೀಟ್‍ಗೆ ಪ್ರತಿಕ್ರಿಯೆ ನೀಡಿರುವ ಅಭಿಮಾನಿಯೊಬ್ಬರು, “ನಾವು ಆನ್ ಅಂಡ್ ಆಫ್ ಫೀಲ್ಡ್ ನಲ್ಲೂ ಆಡುತ್ತೇವೆ” ಎಂದಿದ್ದಾರೆ.

    ಮತ್ತೊಬ್ಬ ಅಭಿಮಾನಿ, ಟೀಂ ಇಂಡಿಯಾ ಅದಕ್ಕಾಗಿಯೇ ಪತ್ರಿಕಾಗೋಷ್ಠಿಗೆ ಆಗಮಿಸಿಲ್ಲ ಎಂದು ಕಮೆಂಟ್ ಮಾಡಿದ್ದಾರೆ. ಅಲ್ಲದೇ ಶೇನ್ ವಾರ್ನ್ ಗಿಂತ ರವಿಶಾಸ್ತ್ರಿ ಉತ್ತಮ ಪ್ಲೇಬಾಯ್. ನಿಮಗೇ ರವಿಶಾಸ್ತ್ರಿ ಯಾರು ಎಂದು ತಿಳಿಯದಿದ್ದರೆ ‘ಅಝರ್’ ಸಿನಿಮಾ ನೋಡಿ ಎಂದಿದ್ದಾರೆ.

  • ಸಚಿನ್ ಕೋಪ ಮಾಡ್ಕೊಂಡಿದ್ದು ನೋಡಿದ್ದೇನೆ, ಆದ್ರೆ ಧೋನಿಯನ್ನ ನೋಡಿಲ್ಲ: ರವಿಶಾಸ್ತ್ರಿ

    ಸಚಿನ್ ಕೋಪ ಮಾಡ್ಕೊಂಡಿದ್ದು ನೋಡಿದ್ದೇನೆ, ಆದ್ರೆ ಧೋನಿಯನ್ನ ನೋಡಿಲ್ಲ: ರವಿಶಾಸ್ತ್ರಿ

    ಮೆಲ್ಬರ್ನ್: 40 ವರ್ಷದ ಕ್ರಿಕೆಟ್ ವೃತ್ತಿ ಬದುಕಿನಲ್ಲಿ ಸಚಿನ್ ಕೋಪ ಮಾಡಿಕೊಂಡಿದ್ದನ್ನು ಹಲವು ಬಾರಿ ನೋಡಿದ್ದು, ಆದರೆ ಧೋನಿ ಕೋಪಗೊಂಡಿದ್ದನ್ನು ಒಮ್ಮೆಯೂ ನೋಡಿಲ್ಲ ಎಂದು ಟೀಂ ಇಂಡಿಯಾ ಮುಖ್ಯ ಕೋಚ್ ರವಿಶಾಸ್ತ್ರಿ ಹೇಳಿದ್ದಾರೆ.

    37 ವರ್ಷದ ಧೋನಿ ಕ್ರಿಕೆಟ್ ಲೆಜೆಂಡ್ ಆಟಗಾರ. ವೈಯಕ್ತಿಕವಾಗಿ ನಾನು ಧೋನಿ ಕೋಪಗೊಂಡಿದನ್ನು ನೋಡಿಲ್ಲ. ಆದರೆ ಸಚಿನ್ ಅವರು ಕೋಪಗೊಂಡ ಸಂದರ್ಭಗಳನ್ನು ನೋಡಿದ್ದೇನೆ ಎಂದು ಮಾಧ್ಯಮ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

    ಧೋನಿರಂತಹ ಮತ್ತೊಬ್ಬ ಆಟಗಾರರನ್ನು ತಂಡಕ್ಕೆ ತರಲು ಆಗುವುದಿಲ್ಲ. ಅಂತಹ ಆಟಗಾರರು 30, 40 ವರ್ಷಕ್ಕೆ ಒಮ್ಮೆ ಮಾತ್ರ ಬರುತ್ತಾರೆ. ಒಂದೊಮ್ಮೆ ಧೋನಿ ನಿವೃತ್ತಿ ಹೊಂದಿದರೆ ಆಗ ನಿಮಗೇ ಇದರ ಅರಿವಾಗುತ್ತದೆ ಎಂದರು. ಇದೇ ವೇಳೆ ರಿಷಬ್ ಪಂತ್ ಕುರಿತ ಪ್ರಶ್ನೆಗೆ ಉತ್ತರಿಸಿ, ರಿಷಬ್ ಉತ್ತಮ ಸಾಮಥ್ರ್ಯವನ್ನು ಹೊಂದಿದ್ದು, ಆತ ಮುಂದಿನ 20 ವರ್ಷಗಳಲ್ಲಿ ಧೋನಿ ಸ್ಥಾನವನ್ನು ತುಂಬಿದರೆ ಸಂತಸ ಪಡುತ್ತೇನೆ. ರಿಷಬ್ ಹೀರೋ ಧೋನಿ ಆಗಿದ್ದು, ಟೆಸ್ಟ್ ಸರಣಿಯಲ್ಲಿ ಎಲ್ಲರಿಗಿಂತ ಹೆಚ್ಚು ಸಮಯ ಧೋನಿ ಅವರಿಗೆ ಫೋನ್ ಮಾಡಿ ಮಾತನಾಡಿದ್ದಾನೆ ಎಂದು ಹೇಳಿದರು. ಇದನ್ನು ಓದಿ:  ಬಾಲ್ ಹಿಡ್ಕೊಂಡ್ರೆ ನಿವೃತ್ತಿ ಅಂತಾರೆ : ಹಾಸ್ಯ ಚಟಾಕಿ ಹಾರಿಸಿ ಧೋನಿ ಟಾಂಗ್ – ವಿಡಿಯೋ

    ಧೋನಿ ಕಳೆದ 10 ವರ್ಷಗಳಿಂದ ತಂಡದ ನಾಯಕರಾಗಿದ್ದು ಟೀಂ ಇಂಡಿಯಾ ಇಂದು ಇಷ್ಟೊಂದು ಬಲಿಷ್ಠವಾಗಿ ರೂಪುಗೊಳ್ಳಲು ಕಾರಣ. ಆತ ತಂಡದಲ್ಲಿದ್ದರೆ ನಾಯಕ ಕೊಹ್ಲಿ ಅವರ ಜವಾಬ್ದಾರಿಯನ್ನು ಅರ್ಧದಷ್ಟು ನಿರ್ವಹಿಸುತ್ತಾರೆ. ಧೋನಿಯ ಅನುಭವ ಡ್ರೆಸಿಂಗ್ ರೂಮ್‍ನಲ್ಲಿ ಉತ್ತಮ ವಾತಾವರಣ ರೂಪಿಸುತ್ತದೆ. 2011 ರಿಂದ ಧೋನಿ ಏನೆ ಸಾಧನೆ ಮಾಡಿದ್ದರು, ಕಳಪೆ ಪ್ರದರ್ಶನ ತೋರಿದ್ದರು ಕೂಡ ಇದುವರೆಗೂ ಒಂದೇ ಒಂದು ಟಿವಿ ಸಂದರ್ಶನವನ್ನು ನೀಡಿಲ್ಲ. ಇದು ಧೋನಿ ಸರಳತೆಗೆ ಸಾಕ್ಷಿ ಎಂದು ಹಾಡಿ ಹೊಗಳಿದರು. ಇದನ್ನು ಓದಿ: ಆನ್‌ಫೀಲ್ಡ್‌ ನಲ್ಲೇ ಖಲೀಲ್ ಅಹ್ಮದ್ ವಿರುದ್ಧ ಗರಂ ಆದ ಧೋನಿ – ವೈರಲ್ ವಿಡಿಯೋ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬಾಲಿವುಡ್ ನಟಿಯೊಂದಿಗೆ ರವಿಶಾಸ್ತ್ರಿ ಡೇಟಿಂಗ್! ನಟಿ ಹೇಳಿದ್ದು ಏನು?

    ಬಾಲಿವುಡ್ ನಟಿಯೊಂದಿಗೆ ರವಿಶಾಸ್ತ್ರಿ ಡೇಟಿಂಗ್! ನಟಿ ಹೇಳಿದ್ದು ಏನು?

    ಮುಂಬೈ: ಬಾಲಿವುಡ್ ನಟಿಯರೊಂದಿಗೆ ಕ್ರಿಕೆಟ್ ಆಟಗಾರರು ಡೇಟಿಂಗ್ ನಡೆಸುವುದು ಸಾಮಾನ್ಯ. ಈ ಹಿಂದೆ ಟೀಂ ಇಂಡಿಯಾ ಆಟಗಾರರಾದ ಯುವರಾಜ್ ಸಿಂಗ್, ಧೋನಿ, ಹಭರ್ಜನ್ ಸಿಂಗ್, ಜಹೀರ್ ಖಾನ್ ಸೇರಿದಂತೆ ಹಲವು ಆಟಗಾರರು ಡೇಟಿಂಗ್ ನಡೆಸಿ ಸುದ್ದಿಯಾಗಿದ್ದರು. ಆದರೆ ಸದ್ಯ ಟೀಂ ಇಂಡಿಯಾ ಮುಖ್ಯಕೋಚ್ ರವಿಶಾಸ್ತ್ರಿ ಬಾಲಿವುಡ್ ನಟಿ ನಿಮೃತ್ ಕೌರ್ ರೊಂದಿಗೆ ಡೇಟಿಂಗ್ ನಡೆಸುತ್ತಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

    `ತೇರಾ ಮೇರಾ ಪ್ಯಾರ್’ ಎಂಬ ಸಂಗೀತ ವೀಡಿಯೋ ಮೂಲಕ ಬಾಲಿವುಡ್‍ಗೆ ಪ್ರವೇಶ ಪಡೆದ ನಟಿ ನಿಮೃತ್ ಕೌರ್ ಬಳಿಕ ಒನ್ ನೈಟ್ ವಿಥ್ ದಿ ಕಿಂಗ್, ಲಂಚ್ ಬಾಕ್ಸ್, ಹೋಮ್ ಲ್ಯಾಂಡ್, ಲವ್ ಶವ್ ತೇ ಚಿಕನ್ ಖುರಾನ, ಏರ್‍ಲಿಫ್ಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಲ್ಲದೇ ಚಾಕಲೇಟ್ ಜಾಹೀರಾತಿನಲ್ಲಿ ನಟಿಸಿ ಪಡ್ಡೆ ಹುಡುಗರ ಮನಸ್ಸು ಕದ್ದಿದ್ದರು. ಆದರೆ 36 ವರ್ಷದಿಂದ ಏಕಾಂಗಿಯಾಗಿಯೇ ಇದ್ದ ನಟಿ, ಕಳೆದ 2 ವರ್ಷಗಳಿಂದ ಗೌಪ್ಯವಾಗಿ ರವಿಶಾಸ್ತ್ರಿ ಅವರೊಂದಿಗೆ ಡೇಟಿಂಗ್ ನಡೆಸುತ್ತಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

    ಅಂದಹಾಗೇ ರವಿಶಾಸ್ತ್ರಿಗೆ ಈಗಾಗಲೇ ಮದುವೆಯಾಗಿದ್ದು, ಆದರೆ ಪತ್ನಿ ರಿತೂ ಸಿಂಗ್ ರಿಂದ 1990ರಲ್ಲೇ ದೂರವಾಗಿದ್ದಾರೆ. ಇಬ್ಬರಿಗೂ ಒಂದು ಹೆಣ್ಣು ಮಗು ಕೂಡ ಇದೆ. ಇನ್ನು ನಟಿ ನಿಮೃತ್ ಕೌರ್ ಖಾಸಗಿ ಕಾರು ಕಂಪೆನಿಯೊಂದರ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವೇಳೆ ರವಿಶಾಸ್ತ್ರಿರೊಂದಿಗೆ ಪರಿಚಯವಾಗಿದೆ. ಸದ್ಯ ರವಿಶಾಸ್ತ್ರಿಗೆ 56 ವರ್ಷ ವಯಸ್ಸಾಗಿದ್ದು, ಇಬ್ಬರ ನಡುವೆ 20 ವರ್ಷ ವಯಸ್ಸಿನ ವ್ಯತ್ಯಾಸವಿದೆ.

    ರವಿಶಾಸ್ತ್ರಿಯೊಂದಿನ ಡೇಟಿಂಗ್ ಸುದ್ದಿಯ ಕುರಿತು ನಟಿ ನಿಮೃತ್ ಕೌರ್ ಪ್ರತಿಕ್ರಿಯೆ ಕೂಡ ನೀಡಿದ್ದು, ಇಂತಹ ಸುದ್ದಿಗಳಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಟ್ವೀಟ್ ಮಾಡಿ ಸ್ಪಷ್ಟನೆ ನೀಡಿದ್ದಾರೆ. ಇನ್ನು ರವಿಶಾಸ್ತ್ರಿ ಅವರಿಗೆ ಬಾಲಿವುಡ್ ನಟಿಯೊಂದಿಗೆ ಈ ಹಿಂದೆಯೂ ಡೇಟಿಂಗ್ ನಡೆಸಿದ್ದು, 30 ವರ್ಷದ ಹಿಂದೆ ನಟಿ ಅಮೃತಾ ಸಿಂಗ್‍ರೊಂದಿಗೆ ಡೇಟಿಂಗ್ ನಡೆಸಿ ಸುದ್ದಿಯಾಗಿದ್ದರು. ಬಳಿಕ ಇಬ್ಬರ ನಡುವೆ ಮನಸ್ತಾಪ ಉಂಟಾಗಿ ಬೇರೆಯಾಗಿದ್ದರು.

    ಸದ್ಯ ಇಂಗ್ಲೆಂಡ್ ಪ್ರವಾಸದಲ್ಲಿರುವ ರವಿಶಾಸ್ತ್ರಿ ಡೇಟಿಂಗ್ ಸುದ್ದಿಯ ಕುರಿತು ಇದುವರೆಗೂ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ. ಇನ್ನು ಟೀಂ ಇಂಡಿಯಾ ಇಂಗ್ಲೆಂಡ್ ವಿರುದ್ಧದ 4ನೇ ಟೆಸ್ಟ್ ಪಂದ್ಯದಲ್ಲಿ ಸೋಲುಂಡು ಸರಣಿ ಗೆಲ್ಲುವ ಅವಕಾಶವನ್ನು ಕೈಚೆಲ್ಲಿದೆ. ಇದೇ ವೇಳೆ ಕೋಚ್ ರವಿಶಾಸ್ತ್ರಿ ಡೇಟಿಂಗ್ ಸುದ್ದಿ ಭಾರೀ ಚರ್ಚೆಗೆ ಕಾರಣವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv