Tag: ಕೊಹ್ಲಿ ದಾಖಲೆ

  • ಐಪಿಎಲ್‌ನಲ್ಲಿ 200ನೇ ಸಿಕ್ಸ್‌ ಸಿಡಿಸಿ ದಾಖಲೆ ಬರೆದ ಕೊಹ್ಲಿ

    ಐಪಿಎಲ್‌ನಲ್ಲಿ 200ನೇ ಸಿಕ್ಸ್‌ ಸಿಡಿಸಿ ದಾಖಲೆ ಬರೆದ ಕೊಹ್ಲಿ

    ಬೆಂಗಳೂರು: ಚೆನ್ನೈ ವಿರುದ್ಧ ನಡೆದ ಪಂದ್ಯದಲ್ಲಿ ಆರ್‌ಸಿಬಿ ನಾಯಕ ವಿರಾಟ್‌ ಕೊಹ್ಲಿ ಸಿಕ್ಸ್‌ ಸಿಡಿಸುವ ಮೂಲಕ ಐಪಿಎಲ್‌ನಲ್ಲಿ ದಾಖಲೆ ಬರೆದಿದ್ದಾರೆ.

    ಕೊಹ್ಲಿ ಹೊಡೆದಿದ್ದು 200ನೇ ಸಿಕ್ಸ್‌. ಈ ಮೂಲಕ ಐಪಿಎಲ್‌ ಇತಿಹಾಸದಲ್ಲಿ ಒಂದೇ ತಂಡದ ಪರವಾಗಿ ಆಡಿ 200 ಸಿಕ್ಸ್‌ ಸಿಡಿಸಿದ ಏಕೈಕ ಆಟಗಾರ ಎಂಬ ಹೆಗ್ಗಳಿಕೆಗೆ ಕೊಹ್ಲಿ ಪಾತ್ರವಾಗಿದ್ದಾರೆ. ವಿರಾಟ್‌ ಕೊಹ್ಲಿ 2008ರಿಂದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. 2011ರಿಂದ ಬೆಂಗಳೂರು ತಂಡವನ್ನು ಕೊಹ್ಲಿ ಮುನ್ನಡೆಸುತ್ತಿದ್ದಾರೆ.

    ಸಿಕ್ಸ್‌ ದಾಖಲೆಯ ಜೊತೆಗೆ ವಿರಾಟ್‌ ಕೊಹ್ಲಿ ಹೆಸರಿನಲ್ಲಿ ಮತ್ತೊಂದು ದಾಖಲೆಯೂ ಇದೆ. ಕೊನೆಯ ಮೂರು ಓವರ್‌ಗಳಲ್ಲಿ ಅತಿ ಹೆಚ್ಚು ರನ್‌ ಹೊಡೆದ ಆಟಗಾರರ ಪಟ್ಟಿಯಲ್ಲಿ ಕೊಹ್ಲಿಗೆ ಮೊದಲ ಸ್ಥಾನವಿದೆ. 2016ರಲ್ಲಿ ಗುಜರಾತ್‌ ಲಯನ್ಸ್‌ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ 14 ಎಸೆತದಲ್ಲಿ 57 ರನ್‌ ಹೊಡೆದಿದ್ದರು.

    ಐಪಿಎಲ್‌ನಲ್ಲಿ ಅತಿ ಹೆಚ್ಚು ಸಿಕ್ಸ್‌ ಹೊಡೆದ ಆಟಗಾರರ ಪಟ್ಟಿಯಲ್ಲಿ ವಿಂಡೀಸ್‌ ಆಟಗಾರ ಕ್ರಿಸ್‌ ಗೇಲ್‌ ಮೊದಲ ಸ್ಥಾನದಲ್ಲಿದ್ದರೆ ಆಫ್ರಿಕಾದ ಎಬಿ ಡಿವಿಲಿಯರ್ಸ್‌ ಎರಡನೇ ಸ್ಥಾನದಲ್ಲಿದ್ದಾರೆ. ಕ್ರಿಸ್‌ ಗೇಲ್‌ 336, ಎಬಿಡಿ 231, ಧೋನಿ 216, ರೋಹಿತ್‌ ಶರ್ಮಾ 209 ಸಿಕ್ಸ್‌ ಹೊಡೆದಿದ್ದಾರೆ. ಈ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿರುವ ಕೊಹ್ಲಿ 200 ಸಿಕ್ಸ್‌ ಹೊಡೆದಿದ್ದಾರೆ.

    ಐಪಿಎಲ್‌ನಲ್ಲಿ ಅತಿ ಹೆಚ್ಚು ಶತಕ ಹೊಡೆದ ಆಟಗಾರರ ಪಟ್ಟಿಯಲ್ಲೂ ಕೊಹ್ಲಿ ಎರಡನೇ ಸ್ಥಾನ ಪಡೆದಿದ್ದಾರೆ. ಕೊಹ್ಲಿ ಇಲ್ಲಿಯವರೆಗೆ 5 ಶತಕ ಹೊಡೆದಿದ್ದಾರೆ. 2016ರಲ್ಲಿ ಕಿಂಗ್ಸ್‌ ಇಲೆವನ್‌ ಪಂಜಾಬ್‌ ವಿರುದ್ಧ ಬೆಂಗಳೂರಿನಲ್ಲಿ 113 ರನ್‌ ಹೊಡೆದಿದ್ದರು. ಇದು ಐಪಿಎಲ್‌ನಲ್ಲಿ ಕೊಹ್ಲಿ ಬಾರಿಸಿದ ವೈಯಕ್ತಿಕ ಗರಿಷ್ಠ ರನ್‌ ಆಗಿದೆ. ಈ ಪಂದ್ಯದಲ್ಲಿ 28 ಎಸೆತದಲ್ಲಿ ಅರ್ಧಶತಕ ಹೊಡೆದಿದ್ದ ಕೊಹ್ಲಿ 47 ಎಸೆತದಲ್ಲಿ ಶತಕ ಬಾರಿಸಿದ್ದರು. ಅಂತಿಮವಾಗಿ 50 ಎಸೆತದಲ್ಲಿ 12 ಬೌಂಡರಿ, 8 ಸಿಕ್ಸರ್‌ ನೆರವಿನಿಂದ 113 ರನ್‌ ಹೊಡೆದು ಔಟಾಗಿದ್ದರು.

    ಐಪಿಎಲ್‌ನಲ್ಲಿ ಅತಿ ಹೆಚ್ಚು ಶತಕ ಹೊಡೆದ ಆಟಗಾರರ ಪಟ್ಟಿಯಲ್ಲಿ ಕ್ರಿಸ್‌ ಗೇಲ್‌ ಮೊದಲ ಸ್ಥಾನದಲ್ಲಿದ್ದಾರೆ. ಇಲ್ಲಿಯವರೆಗೆ ಒಟ್ಟು 6 ಶತಕ ಹೊಡೆದಿದ್ದು ಸದ್ಯ ಪಂಜಾಬ್‌ ತಂಡದ ಪರ ಆಡುತ್ತಿದ್ದಾರೆ.