Tag: ಕೊವ್ಯಾಕ್ಸಿನ್

  • 2 ಡೋಸ್‌ ಪಡೆದವರಿಗೆ ಭಾರತದಲ್ಲೂ ಬೂಸ್ಟರ್‌ ಡೋಸ್‌?

    2 ಡೋಸ್‌ ಪಡೆದವರಿಗೆ ಭಾರತದಲ್ಲೂ ಬೂಸ್ಟರ್‌ ಡೋಸ್‌?

    ನವದೆಹಲಿ: ಬೂಸ್ಟರ್ ಡೋಸ್ ಅಗತ್ಯ ಎಂದು ವಿಶ್ವ ಆರೋಗ್ಯ ಸಂಸ್ಥೆ ಶಿಫಾರಸು ಮಾಡುತ್ತಲೇ, ಭಾರತದಲ್ಲೂ ಬೂಸ್ಟರ್ ಡೋಸ್ ತರುವ ಪ್ರಯತ್ನ ಶುರುವಾಗಿದೆ.

    ಕೊವ್ಯಾಕ್ಸಿನ್ ಮತ್ತು ಕೋವಿಶೀಲ್ಡ್ ಲಸಿಕೆ ಪಡೆದವರಿಗೆ ಬೂಸ್ಟರ್ ಡೋಸ್ ರೂಪದಲ್ಲಿ ಕಾರ್ಬಿವ್ಯಾಕ್ಸ್ ಲಸಿಕೆ ಹಂಚಿಕೆ ಮಾಡಲು ಹೈದ್ರಾಬಾದ್ ಮೂಲದ ಬಯಲಾಜಿಕಲ್ ಇ ಸಂಸ್ಥೆ ಪ್ಲಾನ್ ಮಾಡುತ್ತಿದೆ. ಇದಕ್ಕೆ ಸಂಬಂಧಿಸಿ 3ನೇ ಹಂತದ ಕ್ಲಿನಿಕಲ್ ಟ್ರಯಲ್ಸ್‌ಗೆ ಅನುಮತಿ ನೀಡಬೇಕೆಂದು ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾಗೆ(ಡಿಸಿಜಿಐ) ಅರ್ಜಿ ಸಲ್ಲಿಸಿದೆ. ಇದನ್ನೂ ಓದಿ: ಲಸಿಕೆ ಪಡೆಯಲು ಹೇಳಿದ್ದಕ್ಕೆ ಪೊಲೀಸರಿಗೆ ಬೆದರಿಕೆ ಹಾಕಿದ ವೃದ್ಧೆ

     

    ಸದ್ಯ ಕಾರ್ಬಿವ್ಯಾಕ್ಸ್ ಲಸಿಕೆಯ ಎರಡು ಹಂತದ ಕ್ಲಿನಿಕಲ್ ಟ್ರಯಲ್ಸ್ ನಡೆಯುತ್ತಿದ್ದು, ಈ ತಿಂಗಳಾಂತ್ಯದ ಹೊತ್ತಿಗೆ ಕ್ಲಿನಿಕಲ್ ಟ್ರಯಲ್ಸ್ ಫಲಿತಾಂಶ ಪ್ರಕಟವಾಗಲಿದೆ. ಡಿಸಿಜಿಐ ಅನುಮತಿ ನೀಡಿದಲ್ಲಿ ಕೋವ್ಯಾಕ್ಸಿನ್, ಕೋವಿಶೀಲ್ಡ್ ಡಬಲ್ ಡೋಸ್ ಲಸಿಕೆ ಪಡೆದವರ ಮೇಲೆ ಮತ್ತು ಕೋವಿಡ್ ನೆಗೆಟೀವ್ ಇರುವವರ ಮೇಲೆ ಪ್ರಯೋಗ ನಡೆಸಲು ಬಯಲಾಜಿಕಲ್ ಇ ಸಂಸ್ಥೆ ಪ್ಲಾನ್ ಮಾಡಿದೆ. ಇದನ್ನೂ ಓದಿ: ಎರಡು ರಾಷ್ಟ್ರೀಯ ಪಕ್ಷಗಳು ಪ್ರಾದೇಶಿಕ ಪಕ್ಷಗಳನ್ನು ಮುಗಿಸಲು ಯತ್ನಿಸುತ್ತಿವೆ: ದೇವೇಗೌಡ

  • ಡೆಲ್ಟಾ ಪ್ಲಸ್ ವಿರುದ್ಧ ಕೊವ್ಯಾಕ್ಸಿನ್ ಪರಿಣಾಮಕಾರಿ: ಐಸಿಎಂಆರ್

    ಡೆಲ್ಟಾ ಪ್ಲಸ್ ವಿರುದ್ಧ ಕೊವ್ಯಾಕ್ಸಿನ್ ಪರಿಣಾಮಕಾರಿ: ಐಸಿಎಂಆರ್

    ನವದೆಹಲಿ: ಭಾರತ್ ಬಯೋಟೆಕ್ ಸಂಸ್ಥೆಯ ಕೊವ್ಯಾಕ್ಸಿನ್ ಲಸಿಕೆ, ಡೆಲ್ಟಾ ಪ್ಲಸ್ ರೂಪಾಂತರಿ ವೈರಾಣು ವಿರುದ್ಧ ಪರಿಣಾಮಕಾರಿ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ(ಐಸಿಎಂಆರ್)ಯ ಇತ್ತೀಚಿನ ಅಧ್ಯಯನ ತಿಳಿಸಿದೆ.

    ಕೊವ್ಯಾಕ್ಸಿನ್ ಲಸಿಕೆಯನ್ನು ಐಸಿಎಂಆರ್ ಮತ್ತು ರಾಷ್ಟ್ರೀಯ ವೈರಾಲಜಿ ಇನ್‍ಸ್ಟಿಟ್ಯೂಟ್ ಸಹಯೋಗದಲ್ಲಿ ಅಭಿವೃದ್ಧಿಪಡಿಸಲಾಗಿದ್ದು, ಇದು ಕೋವಿಡ್-19 ವೈರಸ್ ವಿರುದ್ಧ ಶೇ.77.8ರಷ್ಟು ಮತ್ತು ಡೆಲ್ಟಾ ವೈರಾಣು ವಿರುದ್ಧ ಶೇ.65.2ರಷ್ಟು ಪರಿಣಾಮಕಾರಿ ಎಂದು ಹೇಳಲಾಗಿತ್ತು. ಆದರೆ ಕೊವೀಡ್-19 ರೂಪಾಂತರಿ ತಳಿಯಾದ, ಹೆಚ್ಚು ಅಪಾಯಕಾರಿ ಎಂದು ಪರಿಗಣಿಸಲ್ಪಟ್ಟಿರುವ ಡೆಲ್ಟಾ ಪ್ಲಸ್ ವೈರಾಣು ವಿರುದ್ಧವೂ ಇದು ಪರಿಣಾಮಕಾರಿಯಾಗಿ ಹೋರಾಡಬಲ್ಲದು ಎಂದು ಐಸಿಎಂಆರ್‍ ನ ಸದ್ಯದ ಅಧ್ಯಯನದಿಂದ ತಿಳಿದುಬಂದಿದೆ. ಇದನ್ನೂ ಓದಿ: ವುಹಾನ್‌ ಲ್ಯಾಬ್‌ನಿಂದ ಕೊರೊನಾ ವೈರಸ್‌ ಸೋರಿಕೆಯಾಗಿಲ್ಲ – ಡಬ್ಲ್ಯುಎಚ್‌ಒ ನಿಯೋಗ

    ಕೊವ್ಯಾಕ್ಸಿನ್ ಮೂರು ಹಂತದ ಕ್ಲಿನಿಕಲ್ ಪ್ರಯೋಗ ಆಗದಿದ್ದರೂ ಭಾರತದಲ್ಲಿ ತುರ್ತು ಬಳಕೆಗೆ ಅವಕಾಶ ನೀಡಲಾಗಿತ್ತು. ಇತ್ತೀಚೆಗಷ್ಟೇ ಭಾರತ್ ಬಯೋಟೆಕ್ ಸಂಸ್ಥೆ, ಕೊವ್ಯಾಕ್ಸಿನ್ ಲಸಿಕೆಯ ಮೂರನೇ ಹಂತದ ಪ್ರಯೋಗದ ಫಲಿತಾಂಶ ಘೋಷಿಸಿತ್ತು. ಅದರ ಅನ್ವಯ ಈ ಲಸಿಕೆ ಲಕ್ಷಣ ಸಹಿತ ಕೊವೀಡ್-19 ಸೋಂಕಿನ ವಿರುದ್ಧ ಶೇ.77.8ರಷ್ಟು ಪರಿಣಾಮಕಾರಿ ಎಂದು ತಿಳಿಸಿತ್ತು. ಇದೀಗ ಡೆಲ್ಟಾ ಪ್ಲಸ್ ವಿರುದ್ಧವು ಪರಿಣಾಮಕಾರಿ ಎಂದು ವರದಿಯಾಗಿದೆ.

  • ಬ್ರೆಜಿಲ್, ಇಂಗ್ಲೆಂಡ್, ಭಾರತದ ರೂಪಾಂತರಿ ವೈರಸ್‍ಗೆ ಕೊವ್ಯಾಕ್ಸಿನ್ ಪರಿಣಾಮಕಾರಿ

    ಬ್ರೆಜಿಲ್, ಇಂಗ್ಲೆಂಡ್, ಭಾರತದ ರೂಪಾಂತರಿ ವೈರಸ್‍ಗೆ ಕೊವ್ಯಾಕ್ಸಿನ್ ಪರಿಣಾಮಕಾರಿ

    ನವದೆಹಲಿ: ಭಾರತ್ ಬಯೋಟೆಕ್ ಕಂಪನಿಯ ಕೊವ್ಯಾಕ್ಸಿನ್ ಬ್ರೆಜಿಲ್, ಇಂಗ್ಲೆಂಡ್, ಭಾರತದ ರೂಪಾಂತರಿ ಕೊರೋನಾ ವೈರಸ್‍ಗೂ ಪರಿಣಾಮಕಾರಿ ಎಂದು ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಅಧ್ಯಯನದಲ್ಲಿ ದೃಢಪಟ್ಟಿದೆ.

    ನ್ಯಾಷನಲ್ ಇನ್‍ಸ್ಟುಟ್ಯೂಟ್ ಆಫ್ ವೈರಾಲಜಿ ಸಹಯೋಗದಲ್ಲಿ ಐಸಿಎಂಆರ್ ಈ ಅಧ್ಯಯನ ನಡೆಸಿದೆ. ಮಹಾರಾಷ್ಟ್ರದಲ್ಲಿ ಹುಟ್ಟಿದ ಡಬಲ್ ವೈರಸ್ (ಬಿ.1.617) ಕೊರೊನಾ ರೂಪಾಂತರಿ ಮೇಲೂ ಕೊವ್ಯಾಕ್ಸಿನ್ ಪರಿಣಾಮಕಾರಿ ಎಂದು ಅಧ್ಯಯನದಿಂದ ದೃಢಪಟ್ಟಿತ್ತು.

    ದೇಶಿ ಲಸಿಕೆ ಕೊವ್ಯಾಕ್ಸಿನ್ ಶೇ.81ರಷ್ಟು ಪರಿಣಾಮಕಾರಿ ಎಂದು ಹೈದರಾಬಾದಿನ ಭಾರತ್ ಬಯೋಟೆಕ್ ಕಂಪನಿ ಈ ಹಿಂದೆ ತಿಳಿಸಿತ್ತು. ಒಟ್ಟು 25,800 ಸ್ವಯಂ ಸೇವಕರ ಮೇಲೆ ಪ್ರಯೋಗ ಮಾಡಿದ್ದು, ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ ಜೊತೆ ನಡೆಸಿದ ಅತ್ಯಂತ ದೊಡ್ಡ ಪ್ರಯೋಗ ಎಂಬುದಾಗಿ ಹೇಳಿತ್ತು.

    ಭಾರತ್ ಬಯೋಟೆಕ್ ಕಂಪನಿ ಮೂಗಿನ ಮೂಲಕ ಲಸಿಕೆಯ (ಇಂಟ್ರಾನಾಸಲ್ ವ್ಯಾಕ್ಸಿನ್) ಮೊದಲ ಕ್ಲಿನಿಕಲ್ ಪ್ರಯೋಗ ಆರಂಭಿಸಿದೆ.

    ಇಂಟ್ರಾನಾಸಲ್ ವ್ಯಾಕ್ಸಿನ್ ಪ್ರಯೋಗ ಯಶಸ್ವಿಯಾದರೆ ಕೊರೊನಾ ವಿರುದ್ಧದ ಹೋರಾಟದಲ್ಲಿ ಇದು ಗೇಮ್ ಚೇಂಜರ್ ಆಗಲಿದೆ. ಬಹುತೇಕ ಲಸಿಕೆಗಳನ್ನು ಸ್ನಾಯುಗಳ ಮೂಲಕ ನೀಡಲಾಗುತ್ತದೆ. ಈಗ ನೀಡಲಾಗುತ್ತಿರುವ ಕೊರೊನಾ ಲಸಿಕೆಯನ್ನು ಸೂಜಿಯ ಮೂಲಕ ದೇಹಕ್ಕೆ ಕಳುಹಿಸಲಾಗುತ್ತದೆ. ಆದರೆ ಈ ಲಸಿಕೆಯನ್ನು ಮೂಗಿನ ಹೊಳ್ಳೆಗಳ ಒಳಗಡೆ ಸಿಂಪಡಿಸಲಾಗುತ್ತದೆ. ಹೀಗಾಗಿ ಇದರಲ್ಲಿ ಸೂಜಿಯ ಬಳಕೆಯ ಅಗತ್ಯವೇ ಇರುವುದಿಲ್ಲ.

  • ಭಾರತಕ್ಕೆ ಲಸಿಕೆ ಕಚ್ಚಾ ವಸ್ತುಗಳ ರಫ್ತಿಗೆ ನಿಷೇಧ – ನಮಗೆ ಅಮೆರಿಕವೇ ಫಸ್ಟ್, ಬೈಡನ್ ಸರ್ಕಾರದ ಸಮರ್ಥನೆ

    ಭಾರತಕ್ಕೆ ಲಸಿಕೆ ಕಚ್ಚಾ ವಸ್ತುಗಳ ರಫ್ತಿಗೆ ನಿಷೇಧ – ನಮಗೆ ಅಮೆರಿಕವೇ ಫಸ್ಟ್, ಬೈಡನ್ ಸರ್ಕಾರದ ಸಮರ್ಥನೆ

    ನವದೆಹಲಿ:“ಅಮೆರಿಕನ್ನರ ಆರೋಗ್ಯ ರಕ್ಷಣೆಯೇ ಬೈಡೆನ್ ಸರಕಾರದ ಮೊದಲ ಆದ್ಯತೆ” ಎಂದು ಹೇಳುವ ಮೂಲಕ ಕೊರೊನಾ ಲಸಿಕೆ ನಿರ್ಮಾಣಕ್ಕೆ ಬೇಕಾದ ಕಚ್ಚಾ ವಸ್ತುಗಳ ರಫ್ತಿಗೆ ತಾನು ವಿಧಿಸಿರುವ ನಿಷೇಧ ಕ್ರಮವನ್ನು ಅಮೆರಿಕ ಬಲವಾಗಿ ಸಮರ್ಥಿಸಿಕೊಂಡಿದೆ.

    ಲಸಿಕೆಗೆ ಬೇಕಾದ ಅಗತ್ಯ ಕಚ್ಚಾ ವಸ್ತುಗಳ ರಫ್ತಿಗೆ ಅಮೆರಿಕ ಸರ್ಕಾರ ನಿಷೇಧ ಹೇರಿದೆ. ಇದರಿಂದಾಗಿ ಲಸಿಕೆ ಉತ್ಪಾದನೆಗೆ ಸಮಸ್ಯೆಯಾಗಿದೆ. ಈ ಕೂಡಲೇ ಭಾರತ ಸರ್ಕಾರ ಮಧ್ಯಪ್ರವೇಶಿಸಬೇಕೆಂದು ಸೀರಂ ಇನ್‍ಸ್ಟಿಟ್ಯೂಟ್ ಮುಖ್ಯಸ್ಥ ಆಧಾರ್ ಪೂನಾವಾಲಾ ಮನವಿ ಮಾಡಿಕೊಂಡಿದ್ದರು. ಈ ಮನವಿಗೆ ಸ್ಪಂದಿಸಿದ ಭಾರತ ಅಮೆರಿಕ ಸರ್ಕಾರಕ್ಕೆ ರಫ್ತು ಮೇಲಿನ ನಿಷೇಧವನ್ನು ತೆರವುಗೊಳಿಸಲು ಮನವಿ ಮಾಡಿತ್ತು.

    ಭಾರತದ ಮನವಿಗೆ ಅಮೆರಿಕದಿಂದ ಸರಿಯಾದ ಪ್ರತಿಕ್ರಿಯೆ ಬಂದಿಲ್ಲ. ವಿದೇಶಾಂಗ ಸಚಿವ ಜೈಶಂಕರ್ ಅವರು ಮಾತುಕತೆ ನಡೆಸಿದರೂ ಯಾವುದೇ ಫಲ ಸಿಕ್ಕಿಲ್ಲ.

    ಈ ಬಗ್ಗೆ ಮಾಧ್ಯಮಗಳು ಅಮೆರಿಕ ಸರ್ಕಾರದ ವಕ್ತಾರರ ಜೊತೆ ಪ್ರಶ್ನೆ ಕೇಳಿದ್ದಕ್ಕೆ, ಜಗತ್ತಿನ ಯಾವುದೇ ದೇಶಕ್ಕಿಂತ ಅತಿ ಹೆಚ್ಚು ಕೋವಿಡ್ 19 ಸೋಂಕಿಗೆ ಅಮೆರಿಕ ಜನತೆ ತುತ್ತಾಗಿದ್ದು, ಇಲ್ಲಿಯವರೆಗೆ 5.5 ಲಕ್ಷ ಮಂದಿ ಮೃತಪಟ್ಟಿದ್ದಾರೆ. ಹೀಗಾಗಿ ಬೈಡನ್ ಸರ್ಕಾರ ಅಮೆರಿಕ ಪ್ರಜೆಗಳ ರಕ್ಷಣೆಗೆ ಬದ್ಧವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಕೋವಿಡ್-19 ಲಸಿಕೆ ಉತ್ಪಾದನೆಗೆ ಬೇಕಾಗುವ ಕಚ್ಚಾ ವಸ್ತುಗಳನ್ನು ಅಮೆರಿಕದ ಕಂಪನಿಗಳು ರಫ್ತು ಮಾಡದಂತೆ ಕಳೆದ ಫೆಬ್ರವರಿಯಲ್ಲಿ ಅಧ್ಯಕ್ಷ ಬೈಡೆನ್ ನಿಷೇಧ ಹೇರಿದ್ದಾರೆ. ಇದರಿಂದಾಗಿ ಭಾರತದಲ್ಲಿ ಕೋವಿಶೀಲ್ಡ್ ಉತ್ಪಾದನೆ ಮಾಡುವ ಸೀರಂ ಮತ್ತು ಕೊವ್ಯಾಕ್ಸಿನ್ ಉತ್ಪಾದನೆ ಮಾಡುವ ಭಾರತ್ ಬಯೋಟೆಕ್ ಕಂಪನಿಗೆ ಸಮಸ್ಯೆಯಾಗಿದೆ.

    ವಿದೇಶಗಳ ಲಾಬಿ ಏನು?
    ವಿಶ್ವದ 60 ಪ್ರತಿಶತ ಲಸಿಕೆಗಳು ಭಾರತದಲ್ಲಿ ತಯಾರಾಗಿ ರಫ್ತು ಆಗುತ್ತಿದ್ದವು. ಭಾರತದ ಕೊರೊನಾ ಲಸಿಕೆಗೆಳು ವಿಶ್ವದಲ್ಲೇ ಕಡಿಮೆ ಬೆಲೆಯಲ್ಲಿ ತಯಾರಾಗಿದ್ದ ಕಾರಣ ಬೇಡಿಕೆಯೂ ಹೆಚ್ಚಿತ್ತು. ಕೊರೊನಾ ಲಸಿಕೆಯನ್ನು ವಿಶ್ವ ವಾಣಿಜ್ಯ ಒಪ್ಪಂದದಿಂದ ಹೊರಗಿಟ್ಟು ಕಡಿಮೆ ಬೆಲೆಯಲ್ಲಿ ಜನರಿಗೆ ನೀಡಬೇಕು ಎಂದು ಭಾರತ ವಾದಿಸಿತ್ತು. ಆದರೆ ಅಮೆರಿಕ ಮತ್ತು ಯುರೋಪ್ ದೇಶಗಳು ಕಡಿಮೆ ಬೆಲೆಯಲ್ಲಿ ಲಸಿಕೆ ನೀಡಿದರೆ ಸಂಶೋಧನೆ, ಉತ್ಪಾದನೆಗೆ ಬಂಡವಾಳ ಹೂಡುವ ಕಂಪನಿಗಳಿಗೆ ತೊಂದರೆ ಆಗುತ್ತದೆ ಎಂದು ಹೇಳಿ ವಿರೋಧ ವ್ಯಕ್ತಪಡಿಸಿದ್ದವು.

    ಭಾರತದಿಂದ ಸೀರಂ ಕಂಪನಿ ತಯಾರಿಸಿದ ಲಸಿಕೆಗಳು 80ಕ್ಕೂ ಅಧಿಕ ಬಡ ರಾಷ್ಟ್ರಗಳಿಗೆ ರಫ್ತು ಆಗತೊಡಗಿದಾಗ ಅಮೆರಿಕದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಬೈಡನ್ ಲಸಿಕೆ ತಯಾರಿಸಲು ಬೇಕಾದ ಕಚ್ಚಾ ವಸ್ತುವಿನ ಅಮದಿನ ಮೇಲೆ ನಿರ್ಬಂಧ  ಹೇರಿದರು. ಈ ನಡುವೆ ಭಾರತದಲ್ಲೂ ಕೊರೊನಾ ಎರಡನೇ ಅಲೆ ಅಬ್ಬರ ದಿನೇ ದಿನೇ ಜಾಸ್ತಿಯಾಗುತ್ತಿದೆ. ಪರಿಣಾಮ ಭಾರತದಲ್ಲಿ ಅಮೆರಿಕ ಸೇರಿದಂತೆ ವಿದೇಶಿ ಕಂಪನಿಗಳ ಲಸಿಕೆಗಳಿಗೆ ಅನುಮತಿ ನೀಡುವ ಅನಿವಾರ್ಯತೆ ಸೃಷ್ಟಿಯಾಗಿದೆ. ಭಾರತದ ಮೇಲೆ ಒತ್ತಡ ಹಾಕಿಸಿ ಲಸಿಕೆಗೆ ಅನುಮತಿ ನೀಡುವಲ್ಲಿ ವಿದೇಶಿ ಕಂಪನಿಗಳ ಲಾಬಿ ಕೊನೆಗೂ ಯಶಸ್ವಿಯಾಗಿದೆ ಎಂಬ ಅಭಿಪ್ರಾಯ ಈಗ ವ್ಯಕ್ತವಾಗುತ್ತಿದೆ.

  • ಭಾರತದ ಕೋವ್ಯಾಕ್ಸಿನ್ ಸುರಕ್ಷಿತ, ಯಾವುದೇ ಗಂಭೀರ ಅಡ್ಡ ಪರಿಣಾಮಗಳಿಲ್ಲ: ಲ್ಯಾನ್ಸೆಟ್

    ಭಾರತದ ಕೋವ್ಯಾಕ್ಸಿನ್ ಸುರಕ್ಷಿತ, ಯಾವುದೇ ಗಂಭೀರ ಅಡ್ಡ ಪರಿಣಾಮಗಳಿಲ್ಲ: ಲ್ಯಾನ್ಸೆಟ್

    ನವದೆಹಲಿ: ಭಾರತದ ಎರಡು ಕೊರೊನಾ ಲಸಿಕೆಗಳು ಇದೀಗ ಹಂಚಿಕೆಯಾಗುತ್ತಿದ್ದು, ಕೊರೊನಾ ವಾರಿಯರ್ಸ್‍ಗಳಿಗೆ ನೀಡಲಾಗುತ್ತಿದೆ. ಎರಡೂ ವ್ಯಾಕ್ಸಿನ್‍ಗಳು ಸುರಕ್ಷಿತ ಎಂದು ತಜ್ಞರು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಇದೇ ವೇಳೆ ಸಂಪೂರ್ಣ ಸ್ವದೇಶಿ ಆಗಿರುವ ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಸಂಸ್ಥೆಯ ಕೋವ್ಯಾಕ್ಸಿನ್ ಬಗ್ಗೆ ಲ್ಯಾನ್ಸೆಟ್ ವರದಿಯಲ್ಲಿ ಪ್ರಕಟಿಸಲಾಗಿದ್ದು, ಸಂಪೂರ್ಣ ಸುರಕ್ಷಿತವಾಗಿದೆ ಎಂದು ಬ್ರಿಟಿಷ್ ಜರ್ನಲ್ ಹೇಳಿದೆ.

    ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿದ ‘ದಿ ಲ್ಯಾನ್ಸೆಟ್ ಮೆಡಿಕಲ್ ಜರ್ನಲ್’ ನಲ್ಲಿ ಸಂಶೋಧನಾ ವರದಿಯನ್ನು ಪ್ರಕಟಿಸಲಾಗಿದೆ. ಭಾರತ್ ಬಯೋಟೆಕ್ ನಡೆಸಿದ ಮೊದಲ ಹಂತದ ಟ್ರಯಲ್‍ನ ದತ್ತಾಂಶಗಳನ್ನು ಆಧರಿಸಿ ಜರ್ನಲ್ ಲಸಿಕೆಯ ಕುರಿತು ಅಧ್ಯಯನ ವರದಿ ಬಿತ್ತರಿಸಿದೆ. ಲ್ಯಾನ್ಸೆಟ್ ಬ್ರಿಟಿಷ್ ಜರ್ನಲ್ ಆಗಿದ್ದು, ಕೊವ್ಯಾಕ್ಸಿನ್ ಎಫೆಕ್ಟ್ ಕುರಿತು ಅಧ್ಯಯನ ವರದಿ ಪ್ರಕಟಿಸಿದೆ. ವ್ಯಾಕ್ಸಿನ್ ಡೋಸ್‍ಗಳು ಸುರಕ್ಷಿತವಾಗಿದ್ದು, ಲಸಿಕೆಗೆ ಸಂಬಂಧಿಸಿದ ಗಂಭೀರ ಪ್ರತಿಕೂಲ ಪ್ರಕರಣಗಳು ಕಂಡುಬಂದಿಲ್ಲ ಎಂದು ಸ್ಪಷ್ಟಪಡಿಸಿದೆ.

    ಭಾರತ್ ಬಯೋಟೆಕ್ ನಡೆಸಿದ ಮೊದಲ ಹಂತದ ಟ್ರಯಲ್ ಡಾಟಾವನ್ನು ಆಧರಿಸಿ ಲ್ಯಾನ್ಸೆಟ್ ಈ ಅಧ್ಯಯನ ವರದಿಯನ್ನು ಪ್ರಕಟಿಸಿದೆ. ಭಾರತ್ ಬಯೋಟೆಕ್ ಲಾಕ್‍ಡೌನ್ ವೇಳೆ ಜುಲೈ 13 ಹಾಗೂ 30ರಲ್ಲಿ ಮೊದಲ ಹಂತದ ಟ್ರಯಲ್ ನಡೆಸಿದ್ದು, ಸುಮಾರು 375 ಸ್ವಯಂಸೇವಕರು ಭಾಗಿಯಾಗಿದ್ದರು. ಮೊದಲ ಹಂತದ ಟ್ರಯಲ್ ಅನ್ನು ದೇಶಾದ್ಯಂತ 11 ಆಸ್ಪತ್ರೆಗಳಲ್ಲಿ ನಡೆಸಲಾಗಿದ್ದು, 28 ದಿನಗಳ ಬದಲಿಗೆ 14 ದಿನಗಳ ಅಂತರದಲ್ಲಿ ಡೋಸೇಜ್‍ಗಳನ್ನು ನೀಡಲಾಗಿತ್ತು.

    ಟ್ರಯಲ್‍ನಲ್ಲಿ ಭಾಗವಹಿಸಿದವರನ್ನು ಪ್ರತ್ಯೇಕ ಗುಂಪುಗಳನ್ನಾಗಿ ಮಾಡಲಾಗಿತ್ತು. ರೋಗನಿರೋಧ ಶಕ್ತಿಯನ್ನು ವೃದ್ಧಿಸುವಲ್ಲಿ ವ್ಯಾಕ್ಸಿನ್ ಕಾರ್ಯನಿರ್ವಹಿಸಿದೆ. ಅಲ್ಲದೆ ಟ್ರಯಲ್ ನಡೆಸಿದ ಬಳಿಕ ಎರಡು ಗಂಟೆಗಳ ಕಾಲ ವೀಕ್ಷಣೆಗೊಳಪಡಿಸಲಾಗಿತ್ತು. ಈ ವೇಳೆ ಯಾವುದೇ ಸೈಡ್ ಎಫೆಕ್ಟ್ ಕಂಡುಬಂದಿಲ್ಲ. ಪ್ರತಿ ಡೋಸ್ ಪಡೆದ ಬಳಿಕ 7 ದಿನಗಳಲ್ಲಿ ಪ್ರತಿಕ್ರಿಯೆ ನೀಡುವಂತೆ ಲಸಿಕೆ ಪಡೆದವರಿಗೆ ಸೂಚಿಸಲಾಗಿತ್ತು ಎಂದು ಲ್ಯಾನ್ಸೆಟ್ ಅಧ್ಯಯನ ವರದಿಯಲ್ಲಿ ತಿಳಿಸಿದೆ.

    ಈಗಾಗಲೇ ಭಾರತದಲ್ಲಿ ಕೊವ್ಯಾಕ್ಸಿನ್ ಹಾಗೂ ಕೊವಿಶೀಲ್ಡ್ ಲಸಿಕೆಗಳನ್ನು ನೀಡಲಾಗುತ್ತಿದ್ದು, ಯವುದೇ ರೀತಿಯ ಗಂಭೀರ ಸೈಡ್ ಎಫೆಕ್ಟ್ ಕಂಡು ಬಂದಿಲ್ಲ. ಈ ಕುರಿತು ಐಸಿಎಂಆರ್ ಸಹ ಸ್ಪಷ್ಟಪಡಿಸಿದೆ.

  • ಕೊರೊನಾ ಲಸಿಕೆ ದಿನ ರಂಗೋಲಿ ಮೂಲಕ ಸ್ವಾಗತಿಸಿದ ಆಸ್ಪತ್ರೆ ಸಿಬ್ಬಂದಿ

    ಕೊರೊನಾ ಲಸಿಕೆ ದಿನ ರಂಗೋಲಿ ಮೂಲಕ ಸ್ವಾಗತಿಸಿದ ಆಸ್ಪತ್ರೆ ಸಿಬ್ಬಂದಿ

    ಪುಣೆ: ಕೊರೊನಾ ಲಸಿಕೆ ವಿತರಣೆಗೆ ಸಜ್ಜಾದ ಆಸ್ಪತ್ರೆಯ ಸಿಬ್ಬಂದಿ ರಂಗೋಲಿ ಹಾಕಿ ಜನರನ್ನು ಸ್ವಾಗತಿಸಿದ್ದಾರೆ. ಈ ಮೂಲಕ ಹಬ್ಬದ ವಾತಾವರಣ ಸೃಷ್ಟಿಸಿ ಲಸಿಕೆಗಾಗಿ ಬರುವ ಜನರನ್ನು ಆತ್ಮೀಯವಾಗಿ ಬರಮಾಡಿಕೊಂಡಿದ್ದಾರೆ.

    ಭಾರತವು ಅತೀ ದೊಡ್ಡ ಲಸಿಕಾ ದಿನವನ್ನು ಆಚರಿಸಲು ಮುಂದಾಗುತ್ತಿದ್ದಂತೆ ಪುಣೆಯ ಆಸ್ಪತ್ರೆಯ ಸಿಬ್ಬಂದಿ ಆಸ್ಪತ್ರೆಯ ಮುಂಭಾಗ ನೀಲಿ ಮತ್ತು ಬಿಳಿ ಬಣ್ಣದ ಹೂವಿನ ರಂಗೋಲಿ ಬಿಡಿಸಿ ಮಧ್ಯದಲ್ಲಿ ಸ್ವಾಗತ ಎಂದು ಬರೆದು ಲಸಿಕೆ ಹಾಕಿಸಿಕೊಳ್ಳಲು ಬರುವ ಎಲ್ಲರನ್ನು ಆತ್ಮೀಯವಾಗಿ ಬರಮಾಡಿಕೊಂಡಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ಆಸ್ಪತ್ರೆ ಸಿಬ್ಬಂದಿ ಲಸಿಕೆ ಅಂತಿಮವಾಗಿ ನಮ್ಮ ಕೈ ಸೇರಿರುವುದು ತುಂಬಾ ಸಂತೋಷವಾಗಿದೆ, ನಾವು ಲಸಿಕೆ ಕೊಡಲು ಸಿದ್ಧರಾಗಿದ್ದೇವೆ ಎಂದು ಸಂತೋಷ ಹಚ್ಚಿಕೊಂಡರು.

    ದೇಶದ ಪ್ರಧಾನಿ ಮೋದಿ ಲಸಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿ ಇದು ದೇಶಕ್ಕೆ ಸಿಕ್ಕಿರುವ ನಿರ್ಣಾಯಕ ಗೆಲುವು ಎಂದು ಬಣ್ಣಿಸಿದರು. ನಂತರ ಮಾತಾನಾಡಿದ ಮೋದಿ ಕೊರೊನಾ ವಿರುದ್ಧ ಲಸಿಕೆ ಬಂದರು ಕೂಡ ಯಾರು ಈ ಸಾಂಕ್ರಾಮಿಕ ರೋಗವನ್ನು ಲಘುವಾಗಿ ಪರಿಗಣಿಸಬೇಡಿ. ಮಾಸ್ಕ್ ಮತ್ತು ಸಾಮಾಜಿಕ ಅಂತರವನ್ನು ಪಾಲಿಸುವುದು ಮರೆಯದಿರಿ ‘ದವಾಯಿ ಭಿ ಕಡೈ ಭಿ’ ಎಂದು ಜನರಿಗೆ ಎಚ್ಚರಿಕೆ ನೀಡಿದರು.

    ಈ ಲಸಿಕಾ ಕಾರ್ಯ ದೇಶದ ಸಂಪೂರ್ಣ ಉದ್ದಗಲಕ್ಕೂ ಮುಂದುವರಿಯಲಿದ್ದು ವಿಶ್ವದ ಅತೀ ದೊಡ್ಡ ವ್ಯಾಕ್ಸಿನೇಷನ್ ಕಾರ್ಯಕ್ರಮವಾಗಲಿದೆ. ಸರ್ಕಾರ ತಿಳಿಸಿರುವಂತೆ ಮೊದಲು ಒಂದು ಕೋಟಿ ಆರೋಗ್ಯ ಕಾರ್ಯಕರ್ತರಿಗೆ ಮತ್ತು ಎರಡು ಕೋಟಿ ಮುಂಚೂಣಿ ಕೆಲಸಗಾರರಿಗೆ ಲಸಿಕೆ ನೀಡಲಾಗುತ್ತದೆ. ನಂತರ ಮುಂದಿನ ಭಾಗದಲ್ಲಿ 50 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲು ತಯಾರಿ ನಡೆಸಿದೆ. ಇದಾದ ನಂತರ 50 ವರ್ಷ ಕೆಳಗಿನ ವಯಸ್ಸಿನವರಿಗೆ ನೀಡುವ ಗುರಿ ಹೊಂದಿದೆ.

  • ಲಸಿಕೆ ಪಡೆದ ನಂತರ ಕೊರೊನಾ ನಿಯಮಗಳನ್ನ ಮರೀಯಬೇಡಿ: ಪ್ರಧಾನಿ ಮೋದಿ

    ಲಸಿಕೆ ಪಡೆದ ನಂತರ ಕೊರೊನಾ ನಿಯಮಗಳನ್ನ ಮರೀಯಬೇಡಿ: ಪ್ರಧಾನಿ ಮೋದಿ

    – ಕೊರೊನಾ ವಾರಿಯರ್ಸ್ ನೆನೆದು ಮೋದಿ ಭಾವುಕ
    – ನಮ್ಮ ಲಸಿಕೆ ಸುರಕ್ಷಿತ, ಕಡಿಮೆ ಬೆಲೆ

    ನವದೆಹಲಿ: ಕೊರೊನಾ ಲಸಿಕೆ ಕಂಡು ಹಿಡಿಯಲು ನಮ್ಮ ವಿಜ್ಞಾನಿಗಳು ಸತತ ಪರಿಶ್ರಮ ಪಟ್ಟಿದ್ದಾರೆ. ವಿಜ್ಞಾನಿಗಳು ಹಬ್ಬ, ಸಂತೋಷಕೂಟದಲ್ಲಿ ಭಾಗಿಯಾಗದೇ ಲಸಿಕೆಗಾಗಿ ಶ್ರಮ ವಹಿಸಿದ್ದರು ಎಂದು ಲಸಿಕೆ ಸಂಶೋಧಕರಿಗೆ ಪ್ರಧಾನಿ ನರೇಂದ್ರ ಮೋದಿ ಧನ್ಯವಾದ ಸಲ್ಲಿಸಿದರು.

    ಮೊದಲ ಡೋಸ್ ತೆಗೆದುಕೊಂಡವರು ಎರಡನೇ ಡೋಸ್ ಪಡೆದುಕೊಳ್ಳುವದನ್ನ ಮರೀಯಬೇಡಿ. ಎರಡನೇ ಡೋಸ್ ಪಡೆದ ನಂತರವೇ ನಿಮ್ಮ ದೇಹದಲ್ಲಿ ಕೊರೊನಾ ವಿರುದ್ಧದ ಶಕ್ತಿ ಹೆಚ್ಚಾಗಲಿದೆ. ಕೊರೊನಾ ಪಡೆದು ನಂತರ ಮಾಸ್ಕ್ ಧರಿಸುವಿಕೆ, ಸಾಮಾಜಿಕ ಅಂತರ ಸೇರಿದಂತೆ ಇನ್ನಿತರ ಕೊರೊನಾ ನಿಯಮಗಳನ್ನ ಮರೆಯಬೇಡಿ. ಭಾರತ ಸರ್ಕಾರ ಮೊದಲ ಹಂತದಲ್ಲಿ ಮೂರು ಕೋಟಿ ಜನರಿಗೆ ಲಸಿಕೆ ನೀಡಲಾಗುತ್ತಿದೆ. ಎರಡನೇ ಹಂತದಲ್ಲಿ ಈ ಸಂಖ್ಯೆ 30ಕೋಟಿ ತಲುಪುವ ಗುರಿಯನ್ನ ಭಾರತ ಹೊಂದಿದೆ. ಎರಡನೇ ಹಂತದಲ್ಲಿ ವೃದ್ಧರು, ರೋಗಿಗಳಿಗೆ ಆದ್ಯತೆ ನೀಡಲಾಗುವುದು.

    ಆತ್ಮನಿರ್ಭರ ಭಾರತದಡಿಯಲ್ಲಿ ಲಸಿಕೆ: ಈ ದೊಡ್ಡ ಅಭಿಯಾನ ಇಡೀ ವಿಶ್ವದ ಗಮನ ಸೆಳೆಯುವ ಮೂಲಕ ನಮ್ಮ ಶಕ್ತಿ ಪ್ರದರ್ಶನವಾಗುತ್ತಿದೆ. ಲಸಿಕೆಗೆ ಸಂಬಂಧಿಸಿದ ಸುಳ್ಳು ಸುದ್ದಿಗಳಿಂದ ದೂರ ಉಳಿದುಕೊಳ್ಳಿ. ನಮ್ಮ ಲಸಿಕೆಯ ವಿಶ್ವಾಸದಿಂದಲೇ ಇತರೆ ದೇಶಗಳು ನಮಗೆ ಬೇಡಿಕೆ ಇಡುತ್ತಿವೆ. ಎರಡು ಲಸಿಕೆಗಳು ಸದ್ಯಕ್ಕೆ ಲಭ್ಯವಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಲಸಿಕೆಗಳನ್ನ ನಮ್ಮ ವಿಕ್ಞಾನಿಗಳು ಕಂಡು ಹಿಡಿಯಲಿದ್ದಾರೆ. ಆತ್ಮನಿರ್ಭರ ಭಾರತದಡಿಯಲ್ಲಿ ಸಂಶೋಧನೆ ಆಗುತ್ತಿರುವ ಲಸಿಕೆಗಳ ಕ್ಷಮತೆ ಗುಣಮಟ್ಟವಾದಗಿದ್ದು, ಕಡಿಮೆ ಬೆಲೆಯನ್ನ ಹೊಂದಿವೆ ಎಂದರು.

    ಕೊರೊನಾ ವಿರುದ್ಧ ಹೋರಾಟದಲ್ಲಿ ಆತ್ಮವಿಶ್ವಾಸ ಕಡಿಮೆಯಾಗದಂತೆ ನೋಡಿಕೊಳ್ಳಲಾಗುತ್ತದೆ. ಕೊರೊನಾ ಬಂದಾಗ ದೇಶದಲ್ಲಿ ಒಂದೇ ಟೆಸ್ಟಿಂಗ್ ಲ್ಯಾಬ್ ಇತ್ತು. ಇಂದು 23 ಸಾವಿರಕ್ಕೂ ಅಧಿಕ ಲ್ಯಾಬ್ ಗಳಿವೆ. ಪಿಪಿಇ ಕಿಟ್, ಮಾಸ್ಕ್ ಸೇರಿದಂತೆ ಇನ್ನಿತರ ವೈದ್ಯಕೀಯ ವಸ್ತುಗಳಿಗಾಗಿ ವಿದೇಶದಿಂದ ಆಮದು ಮಾಡಿಕೊಳ್ಳಲಾಗುತ್ತಿತ್ತು. ಆದ್ರೆ ಇಂದು ಆತ್ಮನಿರ್ಭರ ಭಾರತದಡಿಯಲ್ಲಿ ಸ್ವಾವಲಂಬನೆ ಹೊಂದಿದ್ದು, ನಿರ್ಯಾತ ಸಹ ಮಾಡಲಾಗುತ್ತಿದೆ. ಇದಕ್ಕೆಲ್ಲ ಭಾರತೀಯರ ಆತ್ಮನಿರ್ಭರದ ಆತ್ಮವಿಶ್ವಾಸ ಕಾರಣ.

    ಭಾವುಕರಾದ ಪ್ರಧಾನಿ ಮೋದಿ: ಕೊರೊನಾ ಲಸಿಕೆ ಕಾರ್ಯಕ್ರಮ ಮಾನವೀಯ ಮತ್ತು ಮಹತ್ವದ ಸಿದ್ಧಾಂತಗಳಡಿಯಲ್ಲಿದೆ. ಈ ಕೊರೊನಾ ಎಷ್ಟೋ ಜನರನ್ನ ಏಕಾಂಗಿಯನ್ನಾಗಿ ಮಾಡಿತು. ಮಗುವನ್ನ ತಾಯಿಯಿಂದ ದೂರು ಮಾಡಿತು. ವೃದ್ಧರು ಒಂಟಿಯಾಗಿ ಆಸ್ಪತ್ರೆಯಲ್ಲಿ ಹೋರಾಟ ನಡೆಸಿದರು. ಈ ವೈರಸ್ ನಿಂದ ಅಗಲಿದೆ ಜನರಿಗೆ ಸಂಪ್ರದಾಯಬದ್ಧವಾಗಿ ಕಳುಹಿಸಿಕೊಡಲು ಸಾಧ್ಯವಾಗಲಿಲ್ಲ. ಇದನ್ನೆಲ್ಲ ನೋಡಿದ ಮನಸ್ಸು ಭಾರವಾಗುತ್ತೆ ಎಂದು ಭಾವುಕರಾದರು.

    ಸರಿಯಾದ ಸಮಯಲ್ಲಿ ತೆಗೆದುಕೊಂಡ ಸೂಕ್ತ ನಿರ್ಧಾರಗಳನ್ನ ತೆಗೆದುಕೊಂಡಿತು. ಜನತಾ ಕಫ್ರ್ಯೂ ಜನರನ್ನ ಲಾಕ್‍ಡೌನ್ ಗೆ ಸಿದ್ಧಗೊಳಿಸಿತು. ಕೊರೊನಾ ಆಕ್ರಮಣ ತಡೆಯಲು ದೊಡ್ಡ ಅಸ್ತ್ರವೇ ಲಾಕ್‍ಡೌನ್ ಆಗಿತ್ತು. ಈ ನಿರ್ಧಾರ ಅಷ್ಟು ಸರಳವಾಗಿರಲಿಲ್ಲ. ಆದರೂ ಭಾರತ ಸರ್ಕಾರ ಕೊರೊನಾ ತಡೆಗಾಗಿ ಲಾಕ್‍ಡೌನ್ ಸೇರಿದಂತೆ ಕಟ್ಟು ನಿಟ್ಟಿನ ಕ್ರಮಗಳನ್ನ ತೆಗೆದುಕೊಂಡಿತು. ಮೂಲಭೂತ ಸೇವೆಗಳು, ರೇಷನ್, ಔಷಧಿ, ಗ್ಯಾಸ್ ನೀಡುವ ಕೆಲಸ ಮಾಡಲಾಯ್ತು. ವಿದೇಶದಲ್ಲಿ ಸಿಲುಕಿದ ಭಾರತೀಯರನ್ನ ನಾವು ಕರೆ ತಂದಿದ್ದೇವೆ. ವಂದೇ ಭಾರತ್ ಮಿಷನ್ ಅಡಿ ಸುಮಾರು 35 ಲಕ್ಷ ಭಾರತೀಯರು ತಾಯ್ನಾಡಿಗೆ ಮರಳಿದರು. ಭಾರತ ತೆಗೆದುಕೊಂಡ ನಿರ್ಧಾರಗಳನ್ನ ಇಂದು ಇಡೀ ವಿಶ್ವ ಪಾಲನೆ ಮಾಡುತ್ತಿದೆ.

    ಮಾನವ ಸಂಕುಲಕ್ಕೆ ಒಳ್ಳೆಯದಾಗಲಿದೆ: ಕೊರೊನಾ ತಡೆಗಾಗಿ ದೇಶ ಹೇಗೆ ಒಗ್ಗಟ್ಟಾಗಿ ನಿಂತಿತು ಅನ್ನೋದನ್ನ ಇಡೀ ವಿಶ್ವ ಆಶ್ಚರ್ಯಚಕಿತದಿಂದ ನೋಡುತ್ತಿದ್ದೇವೆ. ಕೊರೊನಾ ಮರಣ ಪ್ರಮಾಣ ದರ ಸಹ ಕಡಿಮೆಯಾಗಿದ್ದು, ಸೋಂಕಿತರು ಗುಣಮುಖರಾಗಿ ಮನೆ ಸೇರುತ್ತಿದ್ದಾರೆ. ಭಾರತ 150ಕ್ಕೂ ಹೆಚ್ಚು ದೇಶಗಳಿಗೆ ವೈದ್ಯಕೀಯ ನೆರೆವು ನೀಡಿದೆ. ಇಂದು ನಾವು ನನ್ನ ಲಸಿಕೆಯನ್ನ ಕಂಡು ಹಿಡಿದಿದ್ದೇವೆ. ನಮ್ಮ ಲಸಿಕೆ ಇಡೀ ಮಾನವ ಕುಲಕ್ಕೆ ಒಳ್ಳೆಯದಾಗಲಿದೆ ಎಂದು ಹೇಳಿದರು.

  • ಕೊವ್ಯಾಕ್ಸಿನ್‍ಗೆ 6 ತಿಂಗಳು ಕಾಲಮಿತಿ ನಿಗದಿ – ತಜ್ಞರು ಹೇಳೋದು ಏನು?

    ಕೊವ್ಯಾಕ್ಸಿನ್‍ಗೆ 6 ತಿಂಗಳು ಕಾಲಮಿತಿ ನಿಗದಿ – ತಜ್ಞರು ಹೇಳೋದು ಏನು?

    ಬೆಂಗಳೂರು: ಹೈದರಾಬಾದ್‍ನ ಭಾರತ್ ಬಯೋಟೆಕ್ ಕಂಪನಿ ಅಭಿವೃದ್ಧಿ ಪಡಿಸಿರುವ ಕೊರೊನಾ ಲಸಿಕೆ ಕೊವ್ಯಾಕ್ಸಿನ್ ಉತ್ಪಾದನಾ ದಿನಾಂಕ ಮತ್ತು ಅವಧಿ ಮುಗಿಯುವ ದಿನಾಂಕ(ಎಕ್ಸ್‍ಪೈರಿ ಡೇಟ್)ಲೆಕ್ಕಚಾರದ ಮೇಲೆ ಭಾರೀ ಚರ್ಚೆ ನಡೆಯುತ್ತಿದೆ.

    ಕಡಿಮೆ ಸಮಯದಲ್ಲಿ ಕೊವ್ಯಾಕ್ಸಿನ್ ಬಳಸಬೇಕು. ಲಸಿಕೆ ತಯಾರಾದ ದಿನದಿಂದ 6 ತಿಂಗಳಷ್ಟೇ ಸಮಯಾವಕಾಶ ಇರುತ್ತದೆ. ಹೀಗೆ ಲಸಿಕೆ ಉಪಯೋಗಕ್ಕೆ ಕಡಿಮೆ ಪ್ರಮಾಣದ ಕಾಲವಾಕಾಶ ನೀಡಿದ ಹಿನ್ನೆಲೆ ತಜ್ಞರು ತಮ್ಮದೇ ಅಭಿಪ್ರಾಯ ಮಂಡಿಸಿದ್ದಾರೆ.

    ವ್ಯಾಕ್ಸಿನ್ ಬಳಕೆ ಅವಕಾಶ ಕೇವಲ 6 ತಿಂಗಳಾಗಲು ಇರಲು ಪ್ರಮುಖ ಕಾರಣ ಲಸಿಕೆಯ ಶೀತಲತೆ ಕಾಯುವುದು. ಲಸಿಕೆ ಆವಿಷ್ಕಾರವಾದ ನಂತರ 6 ತಿಂಗಳು ಸ್ಟೇಬಿಟಿಲಿ ಚೆಕ್‍ಗಾಗಿ ಇಡಬೇಕು. ಆದರೆ ಕೊವ್ಯಾಕ್ಸಿನ್ ಸ್ಟೆಬಿಲಿಟಿ ಚೆಕ್‍ಗೆ 6 ತಿಂಗಳು ಕಾಲವಾಕಾಶ ಸಿಕ್ಕಿಲ್ಲ. ಕೊವ್ಯಾಕ್ಸಿನ್‍ಗೆ ಆಕ್ಸಿಲರಿ ಕಿಟ್ ಸ್ಟೇವಿಲಿಟಿ ಅಂತ ಒಂದು ತಿಂಗಳು ಕಾಲವಾಕಾಶ ಚೆಕ್ ಮಾಡಲಾಗಿದೆ ಈ ಹಿನ್ನೆಲೆಯಲ್ಲಿ ಮುನ್ನಚ್ಚರಿಕೆಯನ್ನು ಆಧರಿಸಿ ಕೊವ್ಯಾಕ್ಸಿನ್ ಬಳಕೆ ಕಾಲವಾಕಾಶ 6 ತಿಂಗಳು ಅಂತ ಹಾಕಿರುವ ಸಾಧ್ಯತೆ ಇದೆ ಎಂದು ತಜ್ಞರು ತಿಳಿಸಿದ್ದಾರೆ.

    ಆಕ್ಸಿಲರಿ ಕಿಟ್ ಸ್ಟೇಬಿಲಿಟಿ ಅಂತ ಒಂದರಿಂದ ಎರಡು ತಿಂಗಳು ಮಾತ್ರ ಚೆಕ್ ಮಾಡಿರುವ ಸಾಧ್ಯತೆಗಳಿದ್ದು, ಕೊವ್ಯಾಕ್ಸಿನ್ ಹೊಸ ಪ್ರಯೋಗ ಹಿನ್ನೆಲೆಯಲ್ಲಿ ಅಲ್ಪವಾಧಿ ಉಪಯೋಗಕ್ಕೆ ಅವಕಾಶದ ಕೊಟ್ಟಿರುವ ಸಾಧ್ಯತೆ ಇದೆ. ಇದೂ ಉತ್ತಮ ಆಯ್ಕೆಯಾಗಿದ್ದು, ವರ್ಷಗಟ್ಟಲೆ ಅವಕಾಶ ಕೊಟ್ಟಿದ್ದರೆ ಪರಿಣಾಮ ತಿಳಿಯಲು ಕಷ್ಟವಾಗುತ್ತಿತ್ತು. ಲಸಿಕೆ ಸಂಗ್ರಹಕ್ಕೆ ಬೇಕಾದ ಶೀತಲೀಕರಣ ಕೇಂದ್ರ ಕಡಿಮೆ ಇರುವುದರಿಂದ ಕೂಡ ಈ ರೀತಿ ಮಾಡಿರಬಹುದು ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಕರ್ನಾಟಕ ರಾಜ್ಯಕ್ಕೆ 20 ಸಾವಿರ ಡೋಸ್ ಕೊವ್ಯಾಕ್ಸಿನ್ ಲಸಿಕೆ ತಲುಪಿದೆ. ಬೆಂಗಳೂರು ನಗರದಲ್ಲಿ 1 ಲಕ್ಷ 78 ಸಾವಿರ ಫಲಾನುಭವಿಗಳಿಗೆ ಕೊರೊನಾ ಲಸಿಕೆ ನೀಡುವ ಪಟ್ಟಿಯೂ ಸಿದ್ಧವಾಗಿದೆ ಎಂದು ಮೂಲಗಳ ಪ್ರಕಾರ ತಿಳಿದುಬಂದಿದೆ.

  • ಬೂತ್ ಮಾದರಿಯಲ್ಲಿ ವ್ಯಾಕ್ಸಿನ್ ವಿತರಣೆಗೆ ಪ್ಲಾನ್ – ಸಚಿವರು, ಶಾಸಕರಿಗೆ ಸಿಎಂ ವಾರ್ನಿಂಗ್

    ಬೂತ್ ಮಾದರಿಯಲ್ಲಿ ವ್ಯಾಕ್ಸಿನ್ ವಿತರಣೆಗೆ ಪ್ಲಾನ್ – ಸಚಿವರು, ಶಾಸಕರಿಗೆ ಸಿಎಂ ವಾರ್ನಿಂಗ್

    ಬೆಂಗಳೂರು: ಕೊರೊನಾ ಲಸಿಕೆಗೆ ದಿನಗಣನೆ ಶುರುವಾಗಿದೆ. ಲಸಿಕೆ ವಿತರಣೆ ವ್ಯವಸ್ಥೆ ಬಗ್ಗೆ ಸಿಎಂ ಬಿ.ಎಸ್ ಯಡಿಯೂರಪ್ಪ ಅಲರ್ಟ್ ಆಗಿದ್ದಾರೆ. ಲಸಿಕೆ ಹಂಚಿಕೆ ಪ್ರಕ್ರಿಯೆ ಯಶಸ್ವಿಯಾಗಲು ಸಿಎಂ ಪಣತೊಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಅಷ್ಟ ದಿಕ್ಪಾಲಕರು, ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರಿಗೆ ಸಿಎಂ ಸೂಚನೆ ನೀಡಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಈ ತಿಂಗಳಾಂತ್ಯಕ್ಕೆ ಕೊವಿಡ್ ಲಸಿಕೆ ಲಭ್ಯವಾಗುವ ಸಾಧ್ಯತೆಗಳಿವೆ. ರಾಜ್ಯದಲ್ಲಿ ಕೊರೊನಾ ಲಸಿಕೆ ಹಂಚಿಕೆ ವ್ಯವಸ್ಥೆ ಯಶಸ್ಸಿಗೆ ಸಿಎಂ ಕಸರತ್ತು ನಡೆಸುತ್ತಿದ್ದು, ಈ ನಿಟ್ಟಿನಲ್ಲಿ ಸಚಿವರು ಶಾಸಕರಿಗೆ ಸಿಎಂ ಅಲರ್ಟ್ ಮೆಸೇಜ್ ಪಾಸ್ ಮಾಡಿದ್ದಾರೆ. ಲಸಿಕೆ ವಿತರಣೆ, ನಿರ್ವಹಣೆ ಹೇಗಿರಬೇಕು, ಹೇಗಿರಬಾರದೆಂದು ಸಿಎಂ ಸೂಚನೆ ನೀಡಿದ್ದಾರೆ. ಬೆಂಗಳೂರಿನ ಎಂಟು ವಲಯಗಳ ದಿಕ್ಪಾಲಕರಿಗೂ ಸಿಎಂ ಸೂಚನೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರಿಗೂ ಸಿಎಂ ನಿರ್ದೇಶನ ನೀಡಿದ್ದಾರೆ.

    ಸಿಎಂ ‘ವ್ಯಾಕ್ಸಿನ್ ವಾರ್ನಿಂಗ್’ ಏನು..?
    ಲಸಿಕೆ ವಿತರಣೆಯಲ್ಲಿ ರಾಜಕೀಯ ಸಲ್ಲದು. ಲಸಿಕೆ ಹಂಚಿಕೆ, ನಿರ್ವಹಣೆ ಪ್ರಕ್ರಿಯೆಯಲ್ಲಿ ಎಡವಟ್ಟಾಗಬಾರದು. ಹಂತ ಹಂತವಾಗಿ ನಿಗದಿಪಡಿಸಿದ ವರ್ಗಗಳಿಗೆ ಲಸಿಕೆ ವಿತರಣೆ ನಡೆಯಬೇಕು. ಡಿಸಿಗಳು, ಡಿಎಚ್‍ಒಗಳ ಜೊತೆ ಸಮನ್ವಯತೆ ಕಾಪಾಡಿಕೊಂಡು ವಿತರಿಸಿ ಎಂದು ಹೇಳಿದ್ದಾರೆ.

    ಬಿಬಿಎಂಪಿ ವ್ಯಾಪ್ತಿಯಲ್ಲಿ ಹೆಚ್ಚು ಗಮನ ಕೊಡಬೇಕು. ಬೆಂಗಳೂರು ನಗರದ 1.65 ಲಕ್ಷ ಹೆಲ್ತ್ ವರ್ಕರ್ಸ್‍ಗೆ ಮೊದಲ ಆದ್ಯತೆ ನೀಡಿ. ಲಸಿಕೆ ಕೇಂದ್ರ, ಶೇಖರಣೆ ಕೇಂದ್ರಗಳ ಮೇಲೆ ತೀವ್ರ ನಿಗಾ ಇರಿಸಿ. ಆರೋಗ್ಯಾಧಿಕಾರಿಗಳ ಜತೆ ಕಿರಿಕ್ ಬೇಡ. ವ್ಯಾಕ್ಸಿನೇಷನ್ ಪ್ರಕ್ರಿಯೆಗೂ ಮುನ್ನ ಕ್ಷೇತ್ರವಾರು ಫಲಾನುಭವಿಗಳ ಲಿಸ್ಟ್ ರೆಡಿ ಇರಲಿ. ವ್ಯಾಕ್ಸಿನೇಷನ್ ಸಿದ್ಧತೆಯಲ್ಲಿ ಏನೇ ಸಮಸ್ಯೆ, ತೊಡಕು ಎದುರಾದ್ರೂ ಕೂಡಲೇ ಗಮನಕ್ಕೆ ತನ್ನಿ. ವ್ಯಾಕ್ಸಿನೇಷನ್ ಪ್ರಕ್ರಿಯೆಗೂ ಮುನ್ನ ಕ್ಷೇತ್ರವಾರು ಫಲಾನುಭವಿಗಳ ಲಿಸ್ಟ್ ರೆಡಿ ಮಾಡಿ ಎಂದು ಸಿಎಂ ಸೂಚನೆ ನೀಡಿದ್ದಾರೆ.