Tag: ಕೊಳ್ಳೇಗಾಲ

  • ಕಳ್ಳತನ ಮಾಡಿ ಪೊಲೀಸರಿಗೆ ಸಿಕ್ಕಿಬಿದ್ದ ಮಂತ್ರವಾದಿ – ಹಣ, ಚಿನ್ನಾಭರಣ ಮಾಯ ಮಾಡಿದ್ದೇನೆ ಎಂದ!

    ಕಳ್ಳತನ ಮಾಡಿ ಪೊಲೀಸರಿಗೆ ಸಿಕ್ಕಿಬಿದ್ದ ಮಂತ್ರವಾದಿ – ಹಣ, ಚಿನ್ನಾಭರಣ ಮಾಯ ಮಾಡಿದ್ದೇನೆ ಎಂದ!

    ಚಾಮರಾಜನಗರ: ಆರೋಗ್ಯದಲ್ಲಿ ಸಮಸ್ಯೆಯಿದೆ ಎಂದು ತನ್ನ ಅಳಲು ತೋಡಿಕೊಂಡ ಮಹಿಳೆಗೆ ಮಾಟ-ಮಂತ್ರದ ಭಯ ಹುಟ್ಟಿಸಿ ಲಕ್ಷಾಂತರ ರೂ. ದೋಚಿರುವ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದಲ್ಲಿ ನಡೆದಿದೆ.

    ಕೊಳ್ಳೇಗಾಲ ತಾಲೂಕಿನ ಜಿನಕನಹಳ್ಳಿ ಗ್ರಾಮದ ಮಂತ್ರವಾದಿ ಮಹಾದೇವಸ್ವಾಮಿಯಿಂದ ಭವ್ಯ ಮೋಸ ಹೋಗಿದ್ದಾಳೆ. ಪ್ರಸ್ತುತ ಮಹಾದೇವಸ್ವಾಮಿಯನ್ನು ಪೊಲೀಸರು ಬಂಧಿಸಿದ್ದು, 2 ಲಕ್ಷ ರೂ. ಮೌಲ್ಯದ ಚಿನ್ನದ ಒಡವೆ, 2.5 ಲಕ್ಷ ರೂ. ಹಣ ಮಾಯ ಮಾಡಿದ್ದೇನೆ ಎಂದು ಪೊಲೀಸರಿಗೆ ಹೇಳುತ್ತಿದ್ದಾನೆ. ಇದನ್ನೂ ಓದಿ: ಮಹಿಳೆಯರಿಬ್ಬರನ್ನು ಕಟ್ಟಿ ಹಾಕಿ ನಗದು, ಚಿನ್ನ ದೋಚಿದ ಖದೀಮರು

    ಏನಿದು ಮಾಯ-ಮಂತ್ರದ ಕಥೆ: ಭವ್ಯಾ ಅವರಿಗೆ ಇತ್ತೀಚಿಗೆ ಆರೋಗ್ಯದಲ್ಲಿ ಸಮಸ್ಯೆ ಇತ್ತು. ಪರಿಣಾಮ ಮಂತ್ರವಾದಿ ಮಹಾದೇವಸ್ವಾಮಿ ಬಳಿ ತೆರಳಿ ತನ್ನ ಅಳಲು ತೋಡಿಕೊಂಡಿದ್ದಾರೆ. ಅದಕ್ಕೆ ಮಹಾದೇವಸ್ವಾಮಿ ಮಾಟ-ಮಂತ್ರದ ಕಥೆ ಕಟ್ಟಿ ಪೂಜೆ ಮಾಡಿದರೆ ಸರಿ ಹೋಗಲಿದೆ ಎಂದು ನಂಬಿಸಿದ್ದಾನೆ. ಅದರಂತೆ ಕಳೆದ ಆಗಸ್ಟ್ 9 ರ ರಾತ್ರಿ ಮನೆಗೆ ಬಂದು ಕುಡಿಕೆಯೊಂದನ್ನು ಇಟ್ಟು ಒಡವೆ, ನಗದು ಇದರಲ್ಲಿ ಹಾಕಿ ಪೂಜೆ ನಂತರ ಕೊಡುತ್ತೇನೆ ಎಂದಿದ್ದಾನೆ. ಈತನನ್ನು ನಂಬಿದ ಭವ್ಯ ತನ್ನ ಬಳಿ ಇದ್ದ ಸರ, ಓಲೆ, ಹಣ ಎಲ್ಲವನ್ನೂ ಕುಡಿಕೆಯೊಳಗೆ ಹಾಕಿದ್ದಾಳೆ.

    ಬಳಿಕ ಮಹಾದೇವಸ್ವಾಮಿ, ಭವ್ಯಗೆ ಕಪ್ಪು ಬಣ್ಣದ ಚುಕ್ಕೆಯನ್ನು ಹಣೆಗೆ ಇಟ್ಟಿದ್ದಾನೆ. ನಂತರ ಆಕೆ ಮೂರ್ಛೆ ಹೋಗಿದ್ದಾಳೆ. ತಕ್ಷಣ ಅಲ್ಲಿಂದ ಮಹಾದೇವಸ್ವಾಮಿ ಹಣ, ಒಡವೆಯೊಂದಿಗೆ ಪರಾರಿಯಾಗಿದ್ದಾನೆ ಎಂದು ಕಳೆದ ಫೆ.1 ರಂದು ದೂರು ಕೊಟ್ಟಿದ್ದಾಳೆ. ದೂರು ಪಡೆದ ಕೊಳ್ಳೇಗಾಲ ಪಟ್ಟಣ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಈ ಸಂಬಂಧ ಕೊಳ್ಳೇಗಾಲ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಯುಪಿ ಚುನಾವಣೆಯಲ್ಲಿ ಅಖಿಲೇಶ್ ಯಾದವ್‍ರನ್ನು ನಾವು ಬೆಂಬಲಿಸುತ್ತೇವೆ: ಮಮತಾ ಬ್ಯಾನರ್ಜಿ

  • ತೇಗದ ಮರ ಕಡಿದ ಮಾಲೀಕನ ವಿರುದ್ಧ ಕೇಸ್‌ ದಾಖಲು

    ತೇಗದ ಮರ ಕಡಿದ ಮಾಲೀಕನ ವಿರುದ್ಧ ಕೇಸ್‌ ದಾಖಲು

    ಚಾಮರಾಜನಗರ: ಜಮೀನೊಂದರಲ್ಲಿ ಬೆಳೆದಿದ್ದ ತೇಗದ ಮರಗಳನ್ನು ಅರಣ್ಯ ಇಲಾಖೆಯ ಅನುಮತಿ ಪಡೆಯದೆ ಕಟಾವು ಮಾಡಿ, ಮಾರಾಟ ಮಾಡಲು ಮುಂದಾಗಿದ್ದ ಕೊಳ್ಳೇಗಾಲ ತಾಲೂಕಿನ ಸತ್ತೇಗಾಲ ಗ್ರಾಮದ ಮಾಲೀಕನ ವಿರುದ್ಧ ದೂರು ದಾಖಲಾಗಿದೆ.

    ಸತ್ತೇಗಾಲದ ಅಗ್ರಹಾರದ ಸಮೀಪವಿರುವ ಜಮೀನೊಂದರಲ್ಲಿ ಬೆಳೆದಿದ್ದ ತೇಗದ ಮರಗಳನ್ನು ಜಮೀನು ‌ಮಾಲೀಕ ಸಚಿನ್ ಅರಣ್ಯ ಇಲಾಖೆ ಅನುಮತಿ ಪಡೆಯದೆ ಮಾರಾಟ ಮಾಡುವ ಉದ್ದೇಶದಿಂದ ಅಕ್ರಮವಾಗಿ ಕಟಾವು ಮಾಡಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಅರಣ್ಯಾಧಿಕಾರಿಗಳು ದಾಳಿ ನಡೆಸಿದ್ದರು. ಇದನ್ನೂ ಓದಿ: ಜಮ್ಮು ಕಾಶ್ಮೀರ ಅಭಿವೃದ್ಧಿ ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಅಮಿತ್ ಶಾ

    ಈ ಬಗ್ಗೆ ಪ್ರತಿಕ್ರಿಯಿಸಿದ ಮಲೆ ಮಹದೇಶ್ವರ ವನ್ಯ ಜೀವಿಧಾಮದ ಉಪ ಅರಣ್ಯ ಸಂರಕ್ಷಣಾಧಿಕಾರಿ ಏಡುಕೊಂಡಲು‌, ಸಚಿನ್ ಎಂಬುವರ ಜಮೀನಿನಲ್ಲಿ ಅಕ್ರಮವಾಗಿ ತೇಗದ ಮರಗಳನ್ನು ಕಡಿಯಲಾಗಿದೆ ಎಂಬ ಮಾಹಿತಿ ತಿಳಿದು ಬಂದಿತ್ತು. ಈ‌ ಸಂಬಂಧ ಅರಣ್ಯಾಧಿಕಾರಿ ಸಿದ್ದಪ್ಪ ಹಾಗೂ ಗಾರ್ಡ್ ಪ್ರಮೋದ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಸಿದಾಗ ತೇಗದ ಮರ ಕಟಾವು ಮಾಡಿರುವುದು ತಿಳಿದು ಬಂದಿದೆ. ಸದ್ಯ ಮಾಲೀಕನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.

  • ಕೊಳ್ಳೇಗಾಲ ಶಾಸಕ ಎನ್.ಮಹೇಶ್‍ಗೆ ಪತ್ನಿ ವಿಯೋಗ

    ಕೊಳ್ಳೇಗಾಲ ಶಾಸಕ ಎನ್.ಮಹೇಶ್‍ಗೆ ಪತ್ನಿ ವಿಯೋಗ

    ಚಾಮರಾಜನಗರ: ಕೊಳ್ಳೇಗಾಲ ಶಾಸಕ ಎನ್.ಮಹೇಶ್‍ರವರ ಧರ್ಮಪತ್ನಿ ವಿಜಯಾ(64) ಅವರು ಭಾನುವಾರ ರಾತ್ರಿ ನಿಧನರಾಗಿದ್ದಾರೆ.

    ಕೆಲವು ದಿನಗಳಿಂದ ವಿಜಯಾ ಅವರು ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಆದರೆ ಭಾನುವಾರ ರಾತ್ರಿ ತೀವ್ರವಾಗಿ ಉಸಿರಾಟ ಸಮಸ್ಯೆ ಕಾಣಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ಬೆಂಗಳೂರಿನ ಜೆ.ಪಿ ನಗರದ ಆರ್.ವಿ ಆಸ್ಟರ್ ಆಸ್ಪತ್ರೆಯಲ್ಲಿ ರಾತ್ರಿ 11. 30ರ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ. ಇದನ್ನೂ ಓದಿ: ಬೆಲೆ ಏರಿಕೆ, ಜನ ಸಾಮಾನ್ಯರ ದುಸ್ಥಿಗೆ ಸರ್ಕಾರ ಹೊಣೆ: ನಾರಾಯಣಸ್ವಾಮಿ

    ಇವರಿಗೆ ಕ್ಯಾನ್ಸರ್ ನಾಲ್ಕನೇ ಹಂತದಲ್ಲಿತ್ತು. ಹೀಗಾಗಿ ಕಳೆದ ಒಂದೂವರೆ ತಿಂಗಳಿನಿಂದ ವಿಜಯಾ ಅವರು ಆರ್.ವಿ ಆಸ್ಟರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅಲ್ಲದೇ ಕೆಲವು ದಿನಗಳ ಹಿಂದೆಯಷ್ಟೇ ಆರೋಗ್ಯದಲ್ಲಿ ಚೇತರಿಕೆ ಕಂಡಿದ್ದರಿಂದ ವಿಜಯಾ ಅವರನ್ನು ಐಸಿಯುವಿನಿಂದ ಜನರಲ್ ವಾರ್ಡ್‍ಗೆ ಶಿಫ್ಟ್ ಮಾಡಲಾಗಿತ್ತು. ಆದರೆ ಭಾನುವಾರ ರಾತ್ರಿ ಆರೋಗ್ಯದಲ್ಲಿ ಏರು-ಪೇರು ಕಾಣಿಸಕೊಂಡು ಮೃತಪಟ್ಟಿದ್ದಾರೆ.

    ಬೆಂಗಳೂರಿನ ಕನಕಪುರ ರಸ್ತೆಯ ರವಿಶಂಕರ್ ಗುರೂಜಿ ಆಶ್ರಮದ ಬಳಿ ಇರುವ ಕಾನ್ಶ್ ಫೌಂಡೇಶನ್‍ನಲ್ಲಿ ವಿಜಯಾ ಅವರ ಅಂತ್ಯಕ್ರಿಯೆ ನಡೆಸುವುದಾಗಿ ಕುಟುಂಬಸ್ಥರು ತಿಳಿಸಿದ್ದಾರೆ. ಇದನ್ನೂ ಓದಿ: ಹುಬ್ಬಳ್ಳಿಯಿಂದ ಬೆಂಗಳೂರಿಗೆ ಮಧ್ಯಾಹ್ನ ತಡೆರಹಿತ ವೋಲ್ವೊ ಬಸ್ ವ್ಯವಸ್ಥೆ

    ಎನ್.ಮಹೇಶ್ ಮತ್ತು ವಿಜಯಾ ಇಬ್ಬರದ್ದು ಲವ್ ಜೊತೆಗೆ ಅರೇಂಜ್ ಮ್ಯಾರೇಜ್. ಇವರಿಬ್ಬರು ಒಂದೇ ಕಡೆ ವಿದ್ಯಾಭ್ಯಾಸ ಮಾಡುತ್ತಿದ್ದಾಗ ಪ್ರೀತಿ ಹುಟ್ಟಿ ದಾಂಪತ್ಯ ಜೀವನಕ್ಕೆ ಕಾಲಿಟ್ಟವರು. ಸುಮಾರು 37 ವರ್ಷಗಳ ಸುಖಕರ ದಾಂಪತ್ಯ ಜೀವನ ನಡೆಸಿದ್ದಾರೆ. ವಿಜಯ ಮೂಲತಃ ಕನಕಪುರದವರು. ಮೈಸೂರಿನ ಆಕ್ಸಿಸ್ ಬ್ಯಾಂಕ್ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸಿ ನಿವೃತ್ತಿ ಹೊಂದಿದ್ದರು.  ಕಳೆದ ಒಂದು ವರ್ಷದ ಹಿಂದೆಯಷ್ಟೇ ಮಗನಿಗೆ ಮದುವೆ ಮಾಡಲಾಗಿತ್ತು.

  • ಸಿಎಂ ಬಿಎಸ್‍ವೈ ಬದಲಾವಣೆ ಸೂಕ್ತ ತೀರ್ಮಾನವಲ್ಲ: ಶಾಸಕ ಎನ್.ಮಹೇಶ್

    ಸಿಎಂ ಬಿಎಸ್‍ವೈ ಬದಲಾವಣೆ ಸೂಕ್ತ ತೀರ್ಮಾನವಲ್ಲ: ಶಾಸಕ ಎನ್.ಮಹೇಶ್

    ಚಾಮರಾಜನಗರ: ಸಿಎಂ ಯಡಿಯೂರಪ್ಪ ಬದಲಾವಣೆ ಸೂಕ್ತ ತೀರ್ಮಾನವಲ್ಲ. ಯಡಿಯೂರಪ್ಪ ಅವರೇ ಸಿಎಂ ಆಗಿ ಮುಂದುವರಿದರೆ ರಾಜ್ಯ ಅಭಿವೃದ್ಧಿ ಪಥದಲ್ಲಿ ನಡೆಯಲಿದೆ ಎಂದು ಕೊಳ್ಳೇಗಾಲ ಶಾಸಕ ಎನ್.ಮಹೇಶ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಈ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿ.ಎಸ್. ಯಡಿಯೂರಪ್ಪ ಅವರೇ ಸಿಎಂ ಆಗಿ ಮುಂದುವರಿಯಬೇಕು, ಅವರ ಬದಲಾವಣೆ ಸರಿಯಲ್ಲ. ಅನುಭವಿ ರಾಜಕಾರಣಿಯಾಗಿರುವ ಯಡಿಯೂರಪ್ಪ ಅವರನ್ನು ಬದಲಿಸಿ ಬೇರೆಯವರನ್ನು ತಂದು ಕೂರಿಸಿದರೆ ಆಡಳಿತದ, ಕ್ಷೇತ್ರಗಳ ಪರಿಚಯ ಪಡೆದುಕೊಳ್ಳಲು 6-7 ತಿಂಗಳು ಬೇಕಾಗಲಿದೆ. ಉಳಿದ ಕೇವಲ ಎರಡು ವರ್ಷದಲ್ಲಿ ಈ 6-7 ತಿಂಗಳು ವೇಸ್ಟ್ ಆಗಲಿದೆ. ಅನುಭವಿ ಯಡಿಯೂರಪ್ಪ ಅವರೇ ಮುಂದುವರಿದರೆ ರಾಜ್ಯ ಅಭಿವೃದ್ಧಿ ಪಥದಲ್ಲಿ ನಡೆಯಲಿದೆ ಎಂದಿದ್ದಾರೆ.

    ಕೊರೊನಾ, ಪ್ರವಾಹವನ್ನು ಸಮರ್ಥವಾಗಿ ಎದುರಿಸಿದ್ದಾರೆ. ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ಯಡಿಯೂರಪ್ಪ ಅವರನ್ನು ಮುಂದುವರಿಸಬೇಕು. ಒಂದು ವೇಳೆ ಬದಲಾವಣೆಯಾದರೆ ಅಭಿವೃದ್ಧಿ ಕುಂಠಿತವಾಗಲಿದೆ ಎಂದು ಯಡಿಯೂರಪ್ಪ ಪರ ಬ್ಯಾಟಿಂಗ್ ಮಾಡಿದ್ದಾರೆ. ಇದನ್ನೂ ಓದಿ:‘ನನ್ನವರೇ ನನಗೆ ಶತ್ರುವಾದ್ರು..’ – ಆಪ್ತರ ಬಳಿ ಬಿಎಸ್‍ವೈ ಭಾವುಕ..!

  • ವೃದ್ಧೆಯ ಕೊಂದು ಕಾಲಿಗೆ ಕಲ್ಲು ಕಟ್ಟಿ ಬಾವಿಗೆಸೆದ ಪಾಪಿಗಳು!

    ವೃದ್ಧೆಯ ಕೊಂದು ಕಾಲಿಗೆ ಕಲ್ಲು ಕಟ್ಟಿ ಬಾವಿಗೆಸೆದ ಪಾಪಿಗಳು!

    ಚಾಮರಾಜನಗರ: ವೃದ್ಧೆಯೊಬ್ಬರನ್ನು ಕೊಲೆಗೈದು ಬಳಿಕ ಕಾಲಿಗೆ ಕಲ್ಲು ಕಟ್ಟಿ ಬಾವಿಗೆ ಎಸೆದಿರುವ ಘಟನೆಯೊಂದು ಕೊಳ್ಳೇಗಾಲ ತಾಲೂಕಿನ ಮಧುವನಹಳ್ಳಿಯಲ್ಲಿ ನಡೆದಿದೆ.

    ಶಿವಮ್ಮ ಕೊಲೆಯಾದ ದುರ್ದೈವಿ. ಸಾಲ ವಾಪಸ್ ಕೇಳಿದ್ದಕ್ಕೆ ಈಕೆಯನ್ನು ಕೊಲೆ ಮಾಡಲಾಗಿದೆ. ಆರೋಪಿಗಳನ್ನು ನಂಜ ಮಣಿ ಮಗ ಶಿವು (19) ಹಾಗೂ ಸ್ನೇಹಿತ ರಾಜು (18) ಎಂದು ಶಂಕಿಸಲಾಗಿದೆ.

    ಶಿವಮ್ಮ ಪಕ್ಕದ ಮನೆಯ ನಂಜಮಣಿ ಎಂಬ ಮಹಿಳೆಗೆ ಸಾಲ ಕೊಟ್ಟಿದ್ದರು. ಈ ಸಾಲವನ್ನು ವಾಪಸ್ ಮಾಡುವಂತೆ ಶಿವಮ್ಮ ಒತ್ತಾಯಿಸಿದ್ದರು. ಈ ಹಿನ್ನೆಲೆಯಲ್ಲಿ ಸಾಲ ಪಡೆದಿದ್ದ ನಂಜಮಣಿ ಮಗ ಶಿವು ಹಾಗೂ ಸ್ನೇಹಿತ ರಾಜು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

    ಕೊಲೆಯ ಬಳಿಕ ಆರೋಪಿಗಳು ಪಾರಾರಿಯಾಗಿದ್ದು, ಅವರ ಪತ್ತೆಗೆ ಬಲೆ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಕೊಳ್ಳೇಗಾಲ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಅಜ್ಜಿ ಸತ್ತ ದುಃಖ, ಕೊರೊನಾ ಭಯಕ್ಕೆ ಪರೀಕ್ಷೆ ಬರೆಯದಿದ್ದ ವಿದ್ಯಾರ್ಥಿಗಳ ಮನವೊಲಿಕೆ!

    ಅಜ್ಜಿ ಸತ್ತ ದುಃಖ, ಕೊರೊನಾ ಭಯಕ್ಕೆ ಪರೀಕ್ಷೆ ಬರೆಯದಿದ್ದ ವಿದ್ಯಾರ್ಥಿಗಳ ಮನವೊಲಿಕೆ!

    ಚಾಮರಾಜನಗರ: ಅಜ್ಜಿ ಸಾವನ್ನಪ್ಪಿದ್ದ ದುಃಖದಲ್ಲಿದ್ದ ವಿದ್ಯಾರ್ಥಿನಿ ಹಾಗೂ ಕೊರೊನಾ ಭೀತಿಯಲ್ಲಿದ್ದ ಇನ್ನಿಬ್ಬರು ವಿದ್ಯಾರ್ಥಿಗಳನ್ನು ಅಧಿಕಾರಿಗಳು ಮನವೊಲಿಸಿ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬರೆಸುವಲ್ಲಿ ಯಶಸ್ವಿಯಾಗಿದ್ದಾರೆ.

    ಕೊಳ್ಳೇಗಾಲ ತಾಲೂಕಿನ ಮಧುವನಹಳ್ಳಿ ಗ್ರಾಮದ ನಿವಾಸದಲ್ಲಿ ತಿಂಗಳ ಹಿಂದೆ ವಿದ್ಯಾರ್ಥಿನಿ ಪಾರ್ವತಿ ಅವರ ಅಜ್ಜಿ ಗೌರಮ್ಮ ನಿಧನರಾಗಿದ್ದರು. ಈ ದುಃಖದಲ್ಲಿದ್ದಲ್ಲಿದ್ದ ವಿದ್ಯಾರ್ಥಿನಿ ಪಾವರ್ತಿ ಪರೀಕ್ಷೆಯಿಂದ ದೂರ ಉಳಿದಿದ್ದರು. ಅಲ್ಲದೇ ವಿದ್ಯಾರ್ಥಿನಿಯ ಚಿಕ್ಕಪ್ಪನ ಪುತ್ರಿಯರಾದ ಪ್ರೀತಿ ಮತ್ತು ಪುಷ್ಪ ಕೂಡ ಕೊರೊನಾ ಭೀತಿಯಿಂದ ಮನೆಯಲ್ಲಿ ಉಳಿದುಕೊಂಡಿದ್ದರು.

    ಇಂದು ಆರಂಭವಾಗಿದ್ದ ಎಸ್‍ಎಸ್‍ಎಲ್‍ಸಿ ಪರೀಕ್ಷೆಗೆ ಮೂವರು ವಿದ್ಯಾರ್ಥಿಗಳು ಹಾಜರಾಗಿರಲಿಲ್ಲ. ಈ ಮಾಹಿತಿ ತಿಳಿದ ಬಿಇಒ ಚಂದ್ರಪಾಟೀಲ್, ಸಿಂಗಾನಲ್ಲೂರು ಗ್ರಾಮದ ಎಸ್‍ಎಸ್‍ಎಲ್‍ಸಿ ಪರೀಕ್ಷಾ ಕೇಂದ್ರಕ್ಕೆ ಬೆಳಗ್ಗೆ ಭೇಟಿ ನೀಡಿದ್ದ ಶಾಸಕ ಆರ್.ನರೇಂದ್ರ ಅವರಿಗೆ ಮಾಹಿತಿ ನೀಡಿದ್ದರು. ಅಲ್ಲದೇ ತುರ್ತಾಗಿ ಮೂವರು ವಿದ್ಯಾರ್ಥಿನಿಯರನ್ನು ಮನವೊಲಿಸಿ ಪರೀಕ್ಷೆ ಬರೆಸಲು ನಿರ್ದೇಶಿತರಾದರು. ತಕ್ಷಣ ಎಚ್ಚೆತ್ತ ಅಧಿಕಾರಿಗಳು ಮಧುವನಹಳ್ಳಿಗೆ ತೆರಳಿ ವಿದ್ಯಾರ್ಥಿಗಳನ್ನು ಸಿಂಗಾನಲ್ಲೂರು ಗ್ರಾಮದ ಪರೀಕ್ಷಾ ಕೇಂದ್ರಕ್ಕೆ ಕರೆ ತಂದು ಇಂಗ್ಲೀಷ್ ಪರೀಕ್ಷೆ ಬರೆಸುವಲ್ಲಿ ಯಶಸ್ವಿಯಾಗಿದ್ದಾರೆ.

  • ಮಗುವನ್ನು ಕೊಂದು ತಾಯಿ ಆತ್ಮಹತ್ಯೆಗೆ ಶರಣು

    ಮಗುವನ್ನು ಕೊಂದು ತಾಯಿ ಆತ್ಮಹತ್ಯೆಗೆ ಶರಣು

    ಚಾಮರಾಜನಗರ: ಮಗುವನ್ನು ಕೊಂದು ತಾಯಿಯೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೊಳ್ಳೇಗಾಲ ತಾಲೂಕಿನ ಪಾಳ್ಯ ಗ್ರಾಮದಲ್ಲಿ ನಡೆದಿದೆ.

    ಪಾಳ್ಯ ಗ್ರಾಮದ ಸಂಗೀತಾ(23) ಮೃತ ದುರ್ದೈವಿ. ಸಂಗೀತಾ ತನ್ನ ಮೂರು ವರ್ಷದ ಮಗ ಕರಣ್‍ನನ್ನು ಸಾಯಿಸಿ ನೀರಿಗೆ ಬಿದ್ದಿರುವ ಶಂಕೆ ವ್ಯಕ್ತವಾಗಿದೆ. ಸಂಗೀತಾ ಬೆಂಗಳೂರು ನಿವಾಸಿಯಾಗಿದ್ದು, ಕಳೆದ 6 ವರ್ಷದ ಹಿಂದೆ ಮಂಜು ಎಂಬಾತನೊಂದಿಗೆ ಪ್ರೇಮ ವಿವಾಹವಾಗಿದ್ದಳು ಎಂದು ಕುಟುಂಬದ ಮೂಲಗಳು ತಿಳಿಸಿವೆ.

    ಗ್ರಾಮದ ಮಹದೇಶ್ವರ ದೇಗುಲಕ್ಕೆ ತೆರಳುತ್ತೇನೆಂದು ಹೇಳಿ ಬೆಳಗ್ಗೆ ಮನೆಯಿಂದ ಬಂದಿದ್ದಳು ಎನ್ನಲಾಗಿದ್ದು, ಸಾವಿಗೆ ಕಾರಣ ನಿಗೂಢವಾಗಿದೆ. ಸದ್ಯ ಕೊಳ್ಳೇಗಾಲ ಗ್ರಾಮಾಂತರ ಠಾಣೆಯ ಸಿಪಿಐ ಶ್ರೀಕಾಂತ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಮೃತ ಸಂಗೀತಾ ಹಾಗೂ ಮಗುವಿ ದೇಹವನ್ನು ಮರಣೋತ್ತರ ಪರೀಕ್ಷೆಗೆ ಸಾಗಿಸಿದ್ದಾರೆ.

    ಈ ಸಂಬಂಧ ಕೊಳ್ಳೇಗಾಲ ಗ್ರಾಮಾಂತರ ಠಾಣೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

  • ಲಾಕ್‍ಡೌನ್ ಎಫೆಕ್ಟ್: ಮಗುವಿಗೆ ಚಿಕಿತ್ಸೆ ಕೊಡಿಸಲಾಗದೆ ಪೋಷಕರ ಪರದಾಟ

    ಲಾಕ್‍ಡೌನ್ ಎಫೆಕ್ಟ್: ಮಗುವಿಗೆ ಚಿಕಿತ್ಸೆ ಕೊಡಿಸಲಾಗದೆ ಪೋಷಕರ ಪರದಾಟ

    ಚಾಮರಾಜನಗರ: ಲಾಕ್‍ಡೌನ್ ಪರಿಣಾಮ ಮಗುವನ್ನು ಆಸ್ಪತ್ರೆಗೆ ಕರೆದೊಯ್ಯಲಾಗದೆ ಹೆತ್ತವರು ಸಂಕಟ ಪಡುತ್ತಿರುವ ಘಟನೆ ಚಾಮರಾಜನಗರದ ಕೊಳ್ಳೇಗಾಲದಲ್ಲಿ ನಡೆದಿದೆ.

    ಕೂಲಿಗಾಗಿ ಬಂದ ಧಾರವಾಡ ಮೂಲದ 14 ವಲಸೆ ಕಾರ್ಮಿಕರ ಪರಿಸ್ಥಿತಿ ಚಿಂತಾಜನಕವಾಗಿದ್ದು, ಅವರ ಕಷ್ಟ ಹೇಳತೀರದಾಗಿದೆ. ಈ ಪೈಕಿ ಗುರುನಾಥ್ ಮತ್ತು ತುಳಸಮ್ಮನ ಅವರ ಚಿಕ್ಕ ಮಗುವಿನ ಆರೋಗ್ಯ ಹದಗೆಟ್ಟಿದ್ದು, ಆಸ್ಪತ್ರೆಗೆ ಸೇರಿಸಲಾಗಿದೆ ಹೆತ್ತವರು ಒದ್ದಾಡುತ್ತಿದ್ದಾರೆ.

    ಗುರುನಾಥ್ ದಂಪತಿ ಧಾರವಾಡ ಜಿಲ್ಲೆ ಕುಂಬಾರಕೊಪ್ಪ ಗ್ರಾಮದವರಾಗಿದ್ದು, ಕೊಳ್ಳೇಗಾಲದ ಚೆಸ್ಕಾಂ ಕಟ್ಟಡ ನಿರ್ಮಾಣಕ್ಕೆ ಬಂದಿದ್ದಾರೆ. ಆದರೆ ಅವರ ಮಗುವಿಗೆ ಚಿಕ್ಕ ವಯಸ್ಸಿನಿಂದಲೂ ನರ ದೌರ್ಬಲ್ಯ ಸಮಸ್ಯೆ ಇದೆ. 3 ತಿಂಗಳಿಗೊಮ್ಮೆ ಬೆಳಗಾವಿಯ ಕೆ.ಎಲ್.ಇ ಆಸ್ಪತ್ರೆಗೆ ಹೋಗಿ ಮಗುವನ್ನು ಚಿಕಿತ್ಸೆ ಕೊಡಿಸುತ್ತಿದ್ದರು. ಆದರೆ ಲಾಕ್‍ಡೌನ್ ಪರಿಣಾಮ ಬೆಳಗಾವಿಗೆ ತೆರಳಲು ಸಾಧ್ಯವಾಗುತ್ತಿಲ್ಲ.

    ಮಗು ನೋವಿನಿಂದ ದಿನವಿಡೀ ಅಳುತ್ತಿದೆ ಎಂದು ತಂದೆ ಗುರುನಾಥ್ ಸುದ್ದಿಗಾರರ ಜೊತೆ ತಮ್ಮ ಅಳಲು ತೋಡಿಕೊಂಡಿದ್ದಾರೆ. ಜಿಲ್ಲಾಡಳಿತ ಮಗುವಿನ ಆರೋಗ್ಯದ ದೃಷ್ಟಿಯಿಂದ ಚಿಕಿತ್ಸೆಗಾಗಿ ಬೆಳಗಾವಿಗೆ ಆಸ್ಪತ್ರೆಗೆ ಕಳುಹಿಸಿಕೊಡಬೇಕು. ಕುಟುಂಬ ತೊರೆದು ವಲಸೆ ಬಂದಿದ್ದೇವೆ. ದಯಮಾಡಿ ಸಹಾಯ ಮಾಡಬೇಕು ಎಂದು ವಲಸೆ ಕಾರ್ಮಿಕರು ಮನವಿ ಮಾಡಿದ್ದಾರೆ.

  • ನಿಮ್ನೆಲ್ಲಾ ಆಂಧ್ರದಲ್ಲಿ ಮಾಡಿದಂತೆ ಎನ್‍ಕೌಂಟರ್ ಮಾಡ್ಬೇಕು- ಬೈಕ್ ಕಳ್ಳರಿಗೆ ಎಸ್‍ಪಿ ಅವಾಜ್

    ನಿಮ್ನೆಲ್ಲಾ ಆಂಧ್ರದಲ್ಲಿ ಮಾಡಿದಂತೆ ಎನ್‍ಕೌಂಟರ್ ಮಾಡ್ಬೇಕು- ಬೈಕ್ ಕಳ್ಳರಿಗೆ ಎಸ್‍ಪಿ ಅವಾಜ್

    ಚಾಮರಾಜನಗರ: ಹೈದರಾಬಾದ್ ಪಶುವೈದ್ಯೆ ಅತ್ಯಾಚಾರಿಗಳ ಎನ್‍ಕೌಂಟರ್ ವಿಚಾರ ಎಲ್ಲಾ ಕಡೆ ಪ್ರತಿಧ್ವನಿಸುತ್ತಿದ್ದು, ಇದೀಗ ಎಸ್‍ಪಿಯೊಬ್ಬರು ಬೈಕ್ ಕಳ್ಳರಿಗೆ ಎನ್ ಕೌಂಟರ್ ಮಾಡಬೇಕೆಂದು ಅವಾಜ್ ಹಾಕಿರುವ ಘಟನೆಯೊಂದು ಬೆಳಕಿಗೆ ಬಂದಿದೆ.

    ಕೊಳ್ಳೇಗಾಲ ಪೊಲೀಸರು ಮೂವರು ಖದೀಮರನ್ನು ಬಂಧಿಸಿ ಒಂಬತ್ತು ಬೈಕ್ ಗಳನ್ನು ವಶಪಡಿಸಿಕೊಂಡಿದ್ದಾರೆ. ಬೈಕ್ ಕಳ್ಳರ ವಿಚಾರಣೆ ವೇಳೆ ಚಾಮರಾಜನಗರ ಎಸ್‍ಪಿ ಆನಂದ್ ಕುಮಾರ್ ಗರಂ ಆಗಿದ್ದು, ಆಂಧ್ರದಲ್ಲಿ ಎನ್‍ಕೌಂಟರ್ ಮಾಡಿದಂತೆ ನಿಮ್ಮನ್ನೂ ಎನ್‍ಕೌಂಟರ್ ಮಾಡಬೇಕು ಎಂದು  ಅವಾಜ್ ಹಾಕಿದ್ದಾರೆ.

    ಅಪ್ಪ-ಅಮ್ಮನಿಗೂ ಕೆಟ್ಟ ಹೆಸರು ತರ್ತೀರಾ, ಸಾಲಸೋಲ ಮಾಡಿ ಬೈಕ್ ತಗೊಂಡಿರುವವರಿಗೂ ಹಿಂಸೆ ಕೊಡುತ್ತೀರಿ. ಸ್ವಲ್ಪನೂ ಫೀಲಿಂಗ್ಸೆ ಇಲ್ಲ, ಏನ್ ಶಾ….ವ್ಯಾಪಾರ ಮಾಡ್ತೀಯಾ, ಬೋ…ಮಗನೇ ಎಂದು ಬೈಕ್ ಕಳ್ಳರನ್ನು ಎಸ್‍ಪಿ ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ; ನಗ್ತೀಯಾ ತಗೋ – ರೌಡಿಶೀಟರ್‌ಗೆ ಎಸ್‍ಪಿಯಿಂದ ಕಪಾಳಮೋಕ್ಷ

    ಎಸ್ ಪಿ ಆನಂದ್ ಕುಮಾರ್ ಅವರು ಈ ಹಿಂದೆ ರೌಡಿಶೀಟರ್ ಪರೇಡ್ ವೇಳೆ ರೌಡಿಶೀಟರ್ ಗೆ ಕಪಾಳಮೋಕ್ಷ ಮಾಡಿದ್ದರು.

  • ಮಹಿಳೆಗೆ ಚಾಕು ತೋರಿಸಿ 40 ಗ್ರಾಂ ಚಿನ್ನದ ಮಾಂಗಲ್ಯ ಸರ ಎಗರಿಸಿದ ಕಳ್ಳರು

    ಮಹಿಳೆಗೆ ಚಾಕು ತೋರಿಸಿ 40 ಗ್ರಾಂ ಚಿನ್ನದ ಮಾಂಗಲ್ಯ ಸರ ಎಗರಿಸಿದ ಕಳ್ಳರು

    ಚಾಮರಾಜನಗರ: ವಾಕಿಂಗ್ ಮಾಡುತ್ತಿದ್ದ ಮಹಿಳೆಯೊಬ್ಬರಿಗೆ ಮುಸುಕುದಾರಿ ದರೋಡೆಕೋರರಿಬ್ಬರು ಚಾಕು ತೋರಿಸಿ, ಚಿನ್ನದ ಮಾಂಗಲ್ಯ ಸರವನ್ನು ದೋಚಿದ ಘಟನೆ ಕೊಳ್ಳೇಗಾಲ ತಾಲೂಕಿನ ಹೊಸಮಾಲಂಗಿಯಲ್ಲಿ ನಡೆದಿದೆ.

    ಕೊಳ್ಳೇಗಾಲ ತಾಲೂಕಿನ ಸಿಲ್ಕಲ್ ಪುರ ಗ್ರಾಮದ ಕುಮಾರಸ್ವಾಮಿ ಅವರ ಪತ್ನಿ ಕನಕ ಮಾಂಗಲ್ಯ ಸರ ಕಳೆದುಕೊಂಡ ಮಹಿಳೆ. 28 ಗ್ರಾಂ ಸರ, 8 ಗ್ರಾಂ ತಾಳಿ ಹಾಗೂ 4ಗ್ರಾಂ ಗುಂಡು ಮಾಂಗಲ್ಯ ಸರದಲ್ಲಿ ಇತ್ತು ಎಂದು ಕನಕ ಪೊಲೀಸರಿಗೆ ತಿಳಿಸಿದ್ದಾರೆ.

    ಹೊಸಮಾಲಂಗಿ ಗ್ರಾಮದ ಹೊರ ವಲಯದ ಚಾನಲ್ ರಸ್ತೆಯಲ್ಲಿ ಕನಕ ಅವರು ಶನಿವಾರ ಬೆಳಗ್ಗೆ 6:30 ಗಂಟೆ ಸಮಯದಲ್ಲಿ ವಾಕಿಂಗ್ ಮಾಡುತ್ತಿದ್ದರು. ಈ ವೇಳೆ ಟಗರಪುರ ಗ್ರಾಮದ ಕಡೆಯಿಂದ ಕಾರಿನಲ್ಲಿ ಬಂದ ಅಪರಿಚಿತರಿಬ್ಬರು ಚಾಕು ತೋರಿಸಿ, ಚಿನ್ನದ ಮಾಂಗಲ್ಯ ಸರ ಕೊಡುವಂತೆ ಬೆದರಿಸಿದ್ದಾರೆ. ಒಂದು ವೇಳೆ ಕೊಡದಿದ್ದರೆ ಕೊಲೆ ಮಾಡಿ, ಕಿತ್ತುಕೊಂಡು ಹೋಗುತ್ತೇವೆ ಎಂದು ಬೆದರಿಸಿದ್ದಾರೆ. ಇದರಿಂದ ಗಾಬರಿಗೊಂಡ ಕನಕ ಅವರು ಮಾಂಗಲ್ಯ ಸರ ನೀಡಿದ್ದಾರೆ.

    ಮಾಂಗಲ್ಯ ಸರ ಕೈಗೆ ಸಿಗುತ್ತಿದಂತೆ ಕಳ್ಳರು ಸ್ಥಳದಿಂದ ಪರಾರಿಯಾಗಿದ್ದಾರೆ. ಈ ಸಂಬಂಧ ಕನಕ ಅವರು, ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಆರೋಪಿಗಳು ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಬಂದಿದ್ದರು ಎಂದು ದೂರಿನಲ್ಲಿ ತಿಳಿಸಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.