Tag: ಕೊಳವೆ ಬಾವಿ

  • 73 ಕೋಟಿ ರೂ. ಮೌಲ್ಯದ ನೀರು ಕಳ್ಳತನ

    73 ಕೋಟಿ ರೂ. ಮೌಲ್ಯದ ನೀರು ಕಳ್ಳತನ

    ಮುಂಬೈ: 73 ಕೋಟಿ ರೂ. ಮೌಲ್ಯದ ಅಂತರ್ಜಲ ಕಳ್ಳತನದ ಪ್ರಕರಣವೊಂದು ಮುಂಬೈನಲ್ಲಿ ಬೆಳಕಿಗೆ ಬಂದಿದೆ. ಈ ಸಂಬಂಧ ಕಳ್ಳತನ ಆರೋಪದಡಿಯಲ್ಲಿ ಕಾಲಬಾದೇವಿಯಲ್ಲಿರುವ ಬೋಮಾನಜಿ ಮಾಸ್ಟರ್ ಲೈನ್, ಪಾಂಡ್ಯ ಮೇಂಶನ್ ಮಾಲೀಕನ ವಿರುದ್ಧ ಎಫ್‍ಐಆರ್ ದಾಖಲಾಗಿದೆ. ಕಳೆದ 11 ವರ್ಷಗಳಲ್ಲಿ ಆರೋಪಿ ನೀರು ಸರಬರಾಜು ವ್ಯಕ್ತಿಗಳ ಜೊತೆ ಸೇರಿ 73.19 ಕೋಟಿ ರೂ. ಮೌಲ್ಯದ ನೀರು ಕಳ್ಳತನ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.

    ಆರ್‍ಟಿಐ ಕಾರ್ಯಕರ್ತ ಸುರೇಶ್‍ಕುಮಾರ್ ಎಂಬವರು ಪಾಂಡ್ಯ ಮೇಂಶನ್ ಕಂಪನಿ ವಿರುದ್ಧ ಸಾಕ್ಷಿ ಸಮೇತವಾಗಿ ದೂರು ದಾಖಲಿಸಿದ್ದಾರೆ. ಪಾಂಡ್ಯ ಮೇಂಶನ್ ಕಂಪನಿ ಮಾಲೀಕರಾಗಿರುವ ತ್ರಿಪುರಪ್ರಸಾದ್ ಪಾಂಡ್ಯ ಮತ್ತು ಸಹಭಾಗಿತ್ವದ ಕಂಪನಿಯ ನಿರ್ದೇಶಕರಾದ ಪ್ರಕಾಶ್ ಪಾಂಡ್ಯ ಹಾಗೂ ಮನೋಜ್ ಪಾಂಡ್ಯ ತಮ್ಮ ನಿವೇಶನದಲ್ಲಿ ಅಕ್ರಮವಾಗಿ ಕೊಳವೆ ಬಾವಿ ತೆರೆದು ನೀರು ಕಳ್ಳತನ ಮಾಡಿದ್ದಾರೆ ಎಂದು ಸುರೇಶ್ ಕುಮಾರ್ ಆರೋಪಿಸಿದ್ದಾರೆ.

    6.10 ಲಕ್ಷ ಟ್ಯಾಂಕರ್ ನೀರು ಮಾರಾಟ:
    ಪಾಂಡ್ಯ ಈ ಕೊಳವೆಬಾವಿಗಳಿಗೆ ಪಂಪ್ ಜೋಡಿಸಿ, ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದುಕೊಂಡು ನೀರು ಎತ್ತಿದ್ದಾರೆ. ಮೇಲ್ಕೆತ್ತಿದ್ದ ನೀರನ್ನು ಟ್ಯಾಂಕರ್ ಮಾಲೀಕರಾದ ಅರುಣ್ ಮಿಶ್ರಾ, ಶ್ರವಣ್ ಮಿಶ್ರಾ ಮತ್ತು ಧೀರಜ್ ಮಿಶ್ರಾ ಎಂಬವರ ಮುಖಾಂತರ ಮಾರಾಟ ಮಾಡಿದ್ದಾರೆ. 2006ರಿಂದ 2017ರ ನಡುವೆ ಒಟ್ಟು 6.10 ಲಕ್ಷ ಲೀ. ಟ್ಯಾಂಕರ್ ನೀರು ಮಾರಿದ್ದಾರೆ ಎಂದು ಎಫ್‍ಐಆರ್ ದಾಖಲಾಗಿದೆ.

    ಒಂದು ಟ್ಯಾಂಕರ್ 10 ಸಾವಿರ ಲೀಟರ್ ಸಾಮರ್ಥ್ಯ ಹೊಂದಿದೆ. ಮಾರುಕಟ್ಟೆಯಲ್ಲಿ ಗ್ರಾಹಕರು ಒಂದು ಟ್ಯಾಂಕರ್ ಅಂದಾಜು 12 ಸಾವಿರ ರೂ. ನೀಡಿ ಖರೀದಿಸುತ್ತಾರೆ. ಈ ಬಾವಿಗಳನ್ನು ಶಾಶ್ವತವಾಗಿ ಮುಚ್ಚುವಂತೆ ಹಸಿರು ನ್ಯಾಯಮಂಡಳಿ ಆದೇಶಿಸಿದೆ.

  • ಮಲೆನಾಡಿಯಲ್ಲಿ ಮಳೆ- ಬಯಲುಸೀಮೆ ಕೊಳವೆ ಬಾವಿಯಲ್ಲಿ ಉಕ್ಕಿ ಹರಿಯುತ್ತಿದೆ ನೀರು

    ಮಲೆನಾಡಿಯಲ್ಲಿ ಮಳೆ- ಬಯಲುಸೀಮೆ ಕೊಳವೆ ಬಾವಿಯಲ್ಲಿ ಉಕ್ಕಿ ಹರಿಯುತ್ತಿದೆ ನೀರು

    ಚಿಕ್ಕಮಗಳೂರು: ಮಲೆನಾಡಿನಲ್ಲಿ ಸುರಿದ ಭಾರೀ ಮಳೆಗೆ ಬಯಲುಸೀಮೆಯ ಕೊಳವೆ ಬಾವಿಯೊಂದು ಉಕ್ಕಿ ಹರಿಯುತ್ತಿರುವ ಪ್ರಕೃತಿಯ ವೈಚಿತ್ರ್ಯಕ್ಕೆ ಕಾಫಿನಾಡು ಸಾಕ್ಷಿಯಾಗಿದೆ.

    ಕಡೂರು ತಾಲೂಕಿನ ಎಮ್ಮೆದೊಡ್ಡಿ ಗ್ರಾಮದ ರಮೇಶ್ ಅವರ ತೋಟದ ಕೊಳವೆ ಬಾವಿಯಲ್ಲಿ ಮೋಟರ್ ಆನ್ ಮಾಡದಿದ್ದರೂ ನೀರು ಚಿಮ್ಮುತ್ತಿದೆ. ಇದನ್ನು ನೋಡಲು ಗ್ರಾಮಸ್ಥರು ತೋಟಕ್ಕೆ ಭೇಟಿ ನೀಡುತ್ತಿದ್ದಾರೆ. ಕೊಳವೆ ಬಾವಿಯಿಂದ ನೀರು ಉಕ್ಕುತ್ತಿರುವುದನ್ನು ಕಂಡು ಸ್ಥಳೀಯರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

    ಮಲೆನಾಡಿಗೆ ಹೋಲಿಸಿದರೆ ಬಯಲುಸೀಮೆಯಲ್ಲಿ ಮಳೆ ಕಡಿಮೆಯಾಗಿದೆ. ಅಷ್ಟೇ ಅಲ್ಲದೆ ಕಡೂರು ತಾಲೂಕು 2 ದಶಕಗಳಿಂದ ಶಾಶ್ವತ ಬರಗಾಲಕ್ಕೆ ತುತ್ತಾಗಿತ್ತು. ಆದರೆ ಈ ಬಾರಿ ಸುರಿದ ಕಡಿಮೆ ಪ್ರಮಾಣದ ಮಳೆಗೆ ಕೊಳವೆ ಬಾವಿ ತುಂಬಿ ಹರಿಯುತ್ತಿರುವುದನ್ನು ಜನರು ಕುತೂಹಲದಿಂದ ವೀಕ್ಷಿಸಿದ್ದಾರೆ.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ಎಮ್ಮೆದೊಡ್ಡಿ ಗ್ರಾಮಸ್ಥರೊಬ್ಬರು, ಮಲೆನಾಡಿಯಲ್ಲಿ ಆಕಾಶದಿಂದ ಮಳೆಯಾದರೆ, ಬಯಲುಸೀಮೆಯಲ್ಲಿ ಭೂಮಿಯಿಂದ ಜಲ ಉಕ್ಕುತ್ತಿದೆ. ಇಂತಹ ಪ್ರಕೃತಿ ವೈಚಿತ್ರ್ಯಕ್ಕೆ ಕಾಫಿನಾಡು ಸಾಕ್ಷಿಯಾಗಿದೆ ಎಂದು ತಿಳಿಸಿದ್ದಾರೆ.

  • ಐದಾರು ಅಡಿ ಅಗೆದ್ರೆ ಜಿನುಗುತ್ತೆ ನೀರು – ಬರದ ನಾಡು ಚಿಕ್ಕಬಳ್ಳಾಪುರದಲ್ಲಿ ವಿಸ್ಮಯ

    ಐದಾರು ಅಡಿ ಅಗೆದ್ರೆ ಜಿನುಗುತ್ತೆ ನೀರು – ಬರದ ನಾಡು ಚಿಕ್ಕಬಳ್ಳಾಪುರದಲ್ಲಿ ವಿಸ್ಮಯ

    ಚಿಕ್ಕಬಳ್ಳಾಪುರ: ಗ್ರಾಮದಲ್ಲಿ ಎರಡು ಸಾವಿರ ಅಡಿ ಕೊಳವೆಬಾಬಿ ಕೊರೆದರೂ ಹನಿ ನೀರು ಸಿಗೋದು ಅನುಮಾನ, ಆದರೆ ಗ್ರಾಮದ ಹೊರವಲಯದ ಗುಡ್ಡವೊಂದರ ಬಳಿ ಅಚ್ಚರಿ ಎಂಬಂತೆ 5 ಅಡಿ ಅಗೆದರೆ ಸಾಕು ನೀರು ಸಿಗುತ್ತೆ. ಇಂತಹದೊಂದು ಅಪರೂಪದ ನೀರಿನ ಸೆಲೆ ಆಂಧ್ರದ ಗಡಿಲ್ಲಿರುವ ಬಾಗೇಪಲ್ಲಿ ತಾಲೂಕಿನ ಮಿಟ್ಟೇಮರಿ ಗ್ರಾಮಪಂಚಾಯತಿ ವ್ಯಾಪ್ತಿಯಲ್ಲಿ ಗುಬ್ಬೋಲಪಲ್ಲಿ ಗ್ರಾಮದ ಬಳಿ ಇದೆ.

    ಇಡೀ ಜಿಲ್ಲೆಯ ಹಲವೆಡೆ ಸೇರಿದಂತೆ ಮಿಟ್ಟೇಮರಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸಾವಿರದಿಂದ ಎರಡು ಸಾವಿರ ಅಡಿ ಕೊಳವೆಬಾವಿ ಕೊರೆದರೂ ನೀರು ಸಿಗುವುದು ಅಪರೂಪ. ಆದರೆ ಮಿಟ್ಟೇಮರಿ ಗ್ರಾಮದಿಂದ ಮೂರು ಕಿಲೋಮೀಟರ್ ದೂರದಲ್ಲಿರುವ ಗುಬ್ಬೋಲ್ಲಪಲ್ಲಿ ಗ್ರಾಮಕ್ಕೆ ಹೊಂದಿಕೊಂಡಂತೆ ಇರುವ ಬೆಟ್ಟದ ತಪ್ಪಲಿನಲ್ಲಿ ಕೇವಲ ಐದಾರು ಅಡಿಗೆ ನೀರು ಸಿಗುತ್ತಿದೆ. ಬೆಟ್ಟದ ತಪ್ಪಲಿನಲ್ಲಿ ಜೌಗು ಪ್ರದೇಶವೊಂದಿದ್ದು ಸರಿ ಸುಮಾರು 10 ಅಡಿ ಆಳದ ಹಳ್ಳವೊಂದನ್ನು ಗ್ರಾಮಸ್ಥರೇ ತೆಗೆದಿದ್ದಾರೆ. ಮರುಭೂಮಿಯಲ್ಲಿ ಓಯಸಿಸ್ ಎಂಬಂತೆ ಹತ್ತಾರು ಹಳ್ಳಿಗಳ ಜನರಿಗೆ ಅಲ್ಲಿ ಜಿನುಗುವ ನೀರೇ ಜೀವಜಲವಾಗಿ ಪ್ರಾಣ ಉಳಿಸುತ್ತಿದೆ.

    ಗ್ರಾಮಸ್ಥರು ತೆರೆದಿರುವ ಹಳ್ಳದಲ್ಲಿ ವರ್ಷದ 365 ದಿನವೂ ನೀರು ಜಿನುಗುತ್ತಲೇ ಇರುತ್ತದೆ ಎಂಬುದು ವಿಶೇಷ. ಹೀಗಾಗಿ ಈ ಹಳ್ಳದ ನೀರೇ ಹತ್ತಾರು ಹಳ್ಳಿಯ ಜನರಿಗೆ ಜೀವಉಳಿಸುವ ಜೀವಜಲವಾಗಿದೆ. ಪ್ರಸ್ತುತ ನಿರಂತರ ಬರ ಎದುರಾಗಿ ಸಾವಿರಾರು ಅಡಿ ಆಳ ಕೊರೆದರೂ ನೀರು ಸಿಗುವುದು ದುಸ್ಸಾಹಸ ಎಂಬಂತಾಗಿದೆ ಈ ಭಾಗದಲ್ಲಿ. ಆದರೆ ಇಲ್ಲಿ ಮಾತ್ರ 10 ಅಡಿ ಆಳದ ಹಳ್ಳದಲ್ಲಿಯೇ ನೀರು ಜಿನುಗುತ್ತಿರುವ ಪವಾಡವಾಗಿದೆ.

    ರಾತ್ರಿ ವೇಳೆ ಗ್ರಾಮಸ್ಥರೇ ಕೆಲವೆಡೆ ಗುಂಡಿ ನಿರ್ಮಿಸಿ ಬರುತ್ತಿದ್ದು, ಬೆಳಗಾಗುವಷ್ಟರಲ್ಲಿ ಆ ಗುಂಡಿ ತುಂಬ ನೀರು ತುಂಬಿಕೊಂಡಿರುತ್ತದೆ. ಜಿನುಗುವ ಈ ನೀರಿಗಾಗಿ ಸುತ್ತಮುತ್ತಲ ಐದಾರು ಗ್ರಾಮಗಳ ಜನರು ಪ್ರತಿನಿತ್ಯ ಬಂದು ಬಿಂದಿಗೆಗಳ ಮೂಲಕ ಮನೆಗೆ ತುಂಬಿಸಿಕೊಂಡು ಹೋಗುತ್ತಿದ್ದಾರೆ. ರಾತ್ರಿಯಿಡೀ ಕಾದು ಕೆಲವರು ನೀರು ತುಂಬಿಕೊಂಡು ಹೋಗುವುದುಂಟು. ಸಾವಿರ ಅಡಿ ಕೊಳವೆ ಬಾವಿ ಕೊರೆದರು ಸಿಗುವ ನೀರು ಫ್ಲೋರೈಡ್ ಮಯವಾಗಿದೆ. ಹೀಗಾಗಿ ಹಲವು ಹಳ್ಳಿಗಳ ಜನ ಹಲವು ವರ್ಷಗಳಿಂದಲೂ ಕುಡಿಯಲು ಸಹ ಚಿಲುಮೆಯಲ್ಲಿ ಜಿನುಗುವ ನೀರನ್ನೆ ಬಳಕೆ ಮಾಡುತ್ತಿದ್ದಾರೆ. ಇದನ್ನು ಓದಿ: ಗುಮ್ಮಟ ನಗರಿಯಲ್ಲಿ ಗಂಗೆಯ ಪವಾಡ- ಬರಗಾಲದಲ್ಲೂ ಉಕ್ಕಿ ಬಂದ ಜೀವಜಲ

  • ವಿದ್ಯುತ್ ಸ್ಪರ್ಶ: ಸ್ಥಳದಲ್ಲೇ ಇಬ್ಬರು ಸಾವು, ಓರ್ವ ಗಂಭೀರ

    ವಿದ್ಯುತ್ ಸ್ಪರ್ಶ: ಸ್ಥಳದಲ್ಲೇ ಇಬ್ಬರು ಸಾವು, ಓರ್ವ ಗಂಭೀರ

    ಚಿಕ್ಕಬಳ್ಳಾಪುರ: ಕೊಳವೆ ಬಾವಿ ದುರಸ್ತಿ ವೇಳೆ ವಿದ್ಯುತ್ ಸ್ಪರ್ಶಿಸಿ ಇಬ್ಬರು ಸ್ಥಳದಲ್ಲೇ ಮೃತಪಟ್ಟು, ಓರ್ವ ರೈತರ ಸ್ಥಿತಿ ಗಂಭೀರವಾಗಿರುವ ಘಟನೆ ಜಿಲ್ಲೆಯ ಚಿಂತಾಮಣಿ ತಾಲೂಕಿನ ವಡ್ಡಹಳ್ಳಿ ಗ್ರಾಮದಲ್ಲಿ ನಡೆದಿದೆ.

    ವಿನೋದ್ (28) ಮತ್ತು ವೆಂಕಟರೆಡ್ಡಿ (40) ಸ್ಥಳದಲ್ಲೇ ಮೃತಪಟ್ಟಿದ್ದು, ಗೋಪಾಲಪ್ಪ ಎಂಬವರು ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

    ರೈತ ಗೋಪಾಲಪ್ಪ ಅವರ ಹೊಲದಲ್ಲಿ ಕೊಳವೆ ಬಾವಿಯ ಮೋಟಾರ್ ಕೆಟ್ಟು ಹೋಗಿತ್ತು. ಹೀಗಾಗಿ ಟ್ರ್ಯಾಕ್ಟರ್ ಯಂತ್ರದ ಮೂಲಕ ಕೊಳವೆ ಬಾವಿಯಿಂದ ಮೋಟಾರ್ ಹೊರ ತೆಗೆಯಲಾಗುತ್ತಿತ್ತು. ಆದರೆ ಮೇಲೆ ಇದ್ದ ವಿದ್ಯುತ್ ತಂತಿಯ ಬಗ್ಗೆ ಯಾರೊಬ್ಬರು ಗಮನಿಸರಿಲ್ಲ. ಯಂತ್ರವು ಎತ್ತರಕ್ಕೆ ಹೋಗುತ್ತಿದ್ದಂತೆ 11 ಕೆ.ವಿ ವಿದ್ಯುತ್ ತಂತಿಗೆ ತಗುಲಿದ್ದು, ಸಂಪೂರ್ಣ ಟ್ರಾಕ್ಟರ್ ಗೆ ವಿದ್ಯುತ್ ಪ್ರವಹಿಸಿ ಟ್ರಾಕ್ಟರ್ ಮಾಲೀಕ ವೆಂಕಟರೆಡ್ಡಿ, ಕೆಲಸಕ್ಕೆ ಬಂದಿದ್ದ ವಿನೋದ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

    ಅಲ್ಲಿಯೇ ಇದ್ದ ರೈತ ಗೋಪಾಲಪ್ಪ ಅವರಿಗೂ ವಿದ್ಯುತ್ ತಗುಲಿದ್ದು, ಅವರ ಸ್ಥಿತಿ ಗಂಭೀರವಾಗಿದೆ. ಮಾಹಿತಿ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಚಿಂತಾಮಣಿ ಗ್ರಾಮಾಂತರ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸರ್ಕಾರ ನಿರ್ಲಕ್ಷಿಸಿದ್ರೂ 14 ವರ್ಷಗಳಿಂದ ಗ್ರಾಮಕ್ಕೆ ಜೀವಜಲ ಪೂರೈಸುತ್ತಿದ್ದಾರೆ ಚಿಕ್ಕಮಗ್ಳೂರಿನ ಹುಸೇನ್

    ಸರ್ಕಾರ ನಿರ್ಲಕ್ಷಿಸಿದ್ರೂ 14 ವರ್ಷಗಳಿಂದ ಗ್ರಾಮಕ್ಕೆ ಜೀವಜಲ ಪೂರೈಸುತ್ತಿದ್ದಾರೆ ಚಿಕ್ಕಮಗ್ಳೂರಿನ ಹುಸೇನ್

    ಚಿಕ್ಕಮಗಳೂರು: ನೀರು ಪೂರೈಸಲು ಸರ್ಕಾರ ನಿರ್ಲಕ್ಷಿಸಿದರೂ, ಕಳೆದ 14 ವರ್ಷಗಳಿಂದ ವ್ಯಕ್ತಿಯೊಬ್ಬರು ಗ್ರಾಮಕ್ಕೆ ಜೀವಜಲ ಪೂರೈಕೆ ಮಾಡುವ ಮೂಲಕ ಪಬ್ಲಿಕ್ ಹೀರೋ ಆಗಿದ್ದಾರೆ.

    ಚಿಕ್ಕಮಗಳೂರು ತಾಲೂಕಿನ ಗಡಬನಹಳ್ಳಿ ಔರಂಗ್ ಹತಿಕ್ ಹುಸೇನ್ ಅವರೇ ಆಧುನಿಕ ಭಗೀರಥ. ಮೋಡಿಗೆರಿ ವಿಧಾನಸಭೆ ಮತಕ್ಷೇತ್ರದ ಶಾಸಕ ಬಿ.ಬಿ.ನಿಂಗಯ್ಯ ಅವರು ಗ್ರಾಮದಲ್ಲಿ ಎರಡು ಬೋರ್ ಕೊರೆಸಿದ್ದರು. ಆದರೆ ಒಂದರಲ್ಲಿ ಕೆಸರು ಬಂದರೆ, ಮತ್ತೊಂದರಲ್ಲಿ ನೀರು ಬರಲಿಲ್ಲ. ಇದರಿಂದಾಗಿ ಸರ್ಕಾರ ಸುಸ್ತಾಗಿತ್ತು. ಸರ್ಕಾರದಿಂದ ಆಗದಿರುವ ಕೆಲಸವನ್ನು ಹುಸೇನ್ ಅವರು ಮಾಡಿ ತೋರಿಸಿದ್ದಾರೆ.

    ಗಡಬನಹಳ್ಳಿ ಗ್ರಾಮದಲ್ಲಿ 20ಕ್ಕೂ ಹೆಚ್ಚು ಮನೆಗಳಿದ್ದು, 200ಕ್ಕೂ ಅಧಿಕ ಜನ ವಾಸವಿದ್ದಾರೆ. ಎಲ್ಲರೂ ಕೂಲಿ ಕಾರ್ಮಿಕರು. ಆದರೆ ಇಲ್ಲಿ ಕುಡಿಯುವ ನೀರಿನ ಕೊರತೆ ಕಾಡುತ್ತಿದೆ. ಹೀಗಾಗಿ ಹುಸೇನ್ ಅವರು 14 ವರ್ಷಗಳಿಂದ ವಾರಕ್ಕೆ ಎರಡು ದಿನದಂತೆ (ಮಂಗಳವಾರ ಮತ್ತು ಶುಕ್ರವಾರ) ಕುಡಿಯುವ ನೀರು ಪೂರೈಕೆ ಮಾಡುತ್ತಿದ್ದಾರೆ.

    ಹುಸೇನ್ ಅವರು ಗ್ರಾಮಸ್ಥರಿಗಾಗಿಯೇ 2 ವರ್ಷದ ಹಿಂದೆ ಕೊಳವೆ ಬಾವಿ ಕೊರೆಸಿದ್ದು, ಅದರಲ್ಲಿ 4 ಇಂಚು ನೀರು ಸಿಗುತ್ತಿದೆ. ಗ್ರಾಮದಲ್ಲಿ ವಿದ್ಯುತ್ ಸಮಸ್ಯೆ ಇರುವುದರಿಂದ 5 ಸಾವಿರ ಲೀಟರ್‍ನ ಸಿಂಟೆಕ್ಸ್ ತಂದಿಟ್ಟು, ವಿದ್ಯುತ್ ಲಭ್ಯವಿದ್ದಾಗ ನೀರು ತುಂಬಿ, ಬೇಕಾದಾಗ ಜನರಿಗೆ ಬಿಡುತ್ತಿದ್ದಾರೆ. ಗ್ರಾಮ ಪಂಚಾಯಿತಿ ಅಧಿಕಾರಿಗಳು ನಿಮ್ಮ ನೀರಿಗೆ ಹಣ ನೀಡುತ್ತೇವೆ, ವಿದ್ಯುತ್ ಬಿಲ್ ಕೊಡುತ್ತೇವೆ ಅಂತಾ ಬೆಲೆಕಟ್ಟಲು ಮುಂದಾಗಿದ್ದರು. ಆದರೆ ಹುಸೇನ್ ಅವರು, ನಾನು ನೀರನ್ನ ಮಾರುತ್ತಿಲ್ಲ. ನೀರನ್ನು ಮಾರಿ ದುಡಿಯುವ ಸ್ಥಿತಿ ಇನ್ನು ನನಗೆ ಬಂದಿಲ್ಲ ಅಂತ ತಿರುಗೇಟು ನೀಡಿದ್ದಾರೆ.

    https://youtu.be/gQbYOWvPxe0

  • 900 ಅಡಿ ಕೊಳವೆ ಬಾವಿಯಲ್ಲಿ ಸಿಕ್ಕ ಕಿರೀಟದಿಂದ ನಿರಾಸೆ!

    900 ಅಡಿ ಕೊಳವೆ ಬಾವಿಯಲ್ಲಿ ಸಿಕ್ಕ ಕಿರೀಟದಿಂದ ನಿರಾಸೆ!

    ಕೋಲಾರ: ಎರಡು ದಿನದ ಹಿಂದೆ ಜಿಲ್ಲೆಯ ಮಾಲೂರು ತಾಲೂಕು ತೊತಹಳ್ಳಿ ಗ್ರಾಮದ ಕೊಳವೆ ಬಾವಿಯೊಂದರಲ್ಲಿ ನೀರು ಪರೀಕ್ಷೆ ವೇಳೆ 900 ಅಡಿ ಆಳದಲ್ಲಿ ದೇವರ ಕಿರೀಟವೊಂದು ಪತ್ತೆಯಾಗಿತ್ತು. ಆದರೆ ಅದರಿಂದ ಜನರಿಗೆ ಈಗ ನಿರಾಸೆಯಾಗಿದೆ.

    ತೊತಹಳ್ಳಿ ಗ್ರಾಮದ ಚಿಕ್ಕವೆಂಕಟರಮಣಪ್ಪ ಎಂಬವರ ಕೊಳವೆ ಬಾವಿಯಲ್ಲಿ ಪುರಾತನ ಕಿರೀಟ ಪತ್ತೆಯಾಗಿತ್ತು. ಒಂದು ವರ್ಷದಿಂದ ಕೆಟ್ಟು ಹೋಗಿದ್ದ ಕೊಳವೆ ಬಾವಿಯಲ್ಲಿ ನೀರಿಗಾಗಿ ಸ್ಕ್ಯಾನಿಂಗ್ ಮಷೀನ್ ಅಳವಡಿಸಿ ಪರೀಕ್ಷೆ ಮಾಡುವ ವೇಳೆ ಕಿರೀಟ ಪತ್ತೆಯಾಗಿದೆ. ಸ್ಕ್ಯಾನರ್ ನಲ್ಲಿ ದೇವರ ಕಿರೀಟ ಕಂಡ ಸ್ಥಳೀಯರು ಆಶ್ಚರ್ಯ ಚಕಿತರಾಗಿದ್ದು, ಪುರಾತನ ಚಿನ್ನದ ಕಿರೀಟ ಪತ್ತೆಯಾಗಿದೆ ಎಂದು ಸಾಕಷ್ಟು ಕುತೂಹಲ ಮೂಡಿಸಿತ್ತು.

    ಚಿಕ್ಕವೆಂಕಟರಮಣಪ್ಪ ಎರಡು ವರ್ಷದ ಹಿಂದೆ ಕೊಳವೆ ಬಾವಿಯನ್ನ 900 ಅಡಿ ಕೊರೆಸಿದ್ದರು. ಒಂದು ವರ್ಷದಿಂದ ನೀರಿಲ್ಲದ ಕಾರಣ ಕೊಳವೆ ಬಾವಿ ಬಂದ್ ಮಾಡಲಾಗಿತ್ತು. ಇತ್ತೀಚೆಗೆ ಜೋರು ಮಳೆ ಬಂದ ಹಿನ್ನೆಲೆ ರೀ ಬೋರ್ ಮಾಡಲು ರೈತ ಚಿಕ್ಕವೆಂಕರಮಣಪ್ಪ ಸ್ಕ್ಯಾನ್ ಮಾಡಲು ಮುಂದಾದಾಗ ಕಿರೀಟ ಕಾಣಿಸಿಕೊಂಡಿತ್ತು. ಕಿರೀಟ ನೋಡಿದವರಂತೂ ದೊಡ್ಡ ವಿಗ್ರಹ, ಅದರ ಮತ್ತಷ್ಟು ಭಾಗಗಳು ಒಳಗಡೆ ಮಣ್ಣಿನಲ್ಲಿ ಸೇರಿದೆ ಎಂದು ಮಾತಾಡಿಕೊಳ್ಳುತ್ತಿದ್ದರು. ಪೊಲೀಸರು ಬೋರ್ ವೆಲ್ ಬಳಿ ಬಂದೋಬಸ್ತ್ ಹಾಕಬೇಕಾಗುತ್ತೆ. ಮೇಲಕ್ಕೆ ಎತ್ತೋದು ಹೇಗೆ ಅನ್ನೋ ಲೆಕ್ಕಾಚಾರದಲ್ಲಿ ಇದ್ದರು.

    ಆದರೆ ಪತ್ತೆಯಾಗಿರುವ ಕಿರೀಟ ಚಿನ್ನದ್ದೋ ಅಥವಾ ನಕಲಿಯೋ ಎಂದು ತಿಳಿದು ಬಂದಿರಲಿಲ್ಲ. ಈ ಸಂದರ್ಭದಲ್ಲಿ ಸ್ಕ್ಯಾನಿಂಗ್ ಮಾಡುತ್ತಿದ್ದ ವೆಂಕಟೇಶ್ ಮೆಷೀನನ್ನು ಸ್ವಲ್ಪ ಒಳಗೆ ಬಿಟ್ಟು ಮೇಲೆತ್ತುತ್ತಿದ್ದಂತೆ ಅಲ್ಲಿದ್ದ ಕಿರೀಟ ಉಲ್ಟಾ ಹೊಡೆದಿದೆ. ಆಗ ಅದು ಸುವರ್ಣ ಲೇಪಿತ ಪಿಓಪಿಯ ಅಥವಾ ಫೈಬರ್ ನ  ಕಿರೀಟ ಎಂದು ತಿಳಿದು ಬಂದಿದೆ.

    ಇದರಿಂದ ಅಲ್ಲಿದ್ದ ಜನರಿಗೆ ನಿರಾಸೆ ಉಂಟಾಗಿದೆ ಎಂದು ಸ್ಥಳೀಯರಾದ ಮಂಜುನಾಥ್ ತಿಳಿಸಿದ್ದಾರೆ.

  • ಕಾವೇರಿಯನ್ನು ಬಲಿ ಪಡೆದ ಕೊಳವೆ ಬಾವಿ – ಜಮೀನು ಮಾಲೀಕನ ಮಗ ಅರೆಸ್ಟ್

    ಕಾವೇರಿಯನ್ನು ಬಲಿ ಪಡೆದ ಕೊಳವೆ ಬಾವಿ – ಜಮೀನು ಮಾಲೀಕನ ಮಗ ಅರೆಸ್ಟ್

    ಬೆಳಗಾವಿ: ಜಿಲ್ಲೆಯ ಅಥಣಿ ತಾಲೂಕಿನ ಝುಂಜರವಾಡ ಗ್ರಾಮದಲ್ಲಿ ತೆರೆದ ಕೊಳುವೆ ಬಾವಿಯನ್ನು ಮುಚ್ಚಿಸದೆ 6 ವರ್ಷದ ಕಂದಮ್ಮ ಕಾವೇರಿ ಸಾವಿಗೆ ಕಾರಣವಾಗಿದ್ದ ಜಮೀನಿನ ಮಾಲೀಕನ ಮಗನನ್ನ ಬೆಳಗಾವಿ ಪೊಲೀಸರು ಬಂಧಿಸಿದ್ದಾರೆ.

    ಬಾಗಲಕೋಟೆಯಲ್ಲಿ ತಲೆ ಮರಿಸಿಕೊಂಡಿದ್ದ ಶಂಕರ ಹಿಪ್ಪರಗಿಯ ಮಗ ಮುತ್ತಪ್ಪ ಶಂಕರ ಹಿಪ್ಪರಗಿಯನ್ನು ಐಗಳಿ ಪೆÇಲೀಸರು ಬಂಧಿಸಿದ್ದಾರೆ. ಇನ್ನು ಈತನ ತಂದೆ ಶಂಕರ ಹಿಪ್ಪರಗಿ ಇನ್ನೂ ತಲೆಮರೆಸಿಕೊಂಡಿದ್ದು ಪೊಲೀಸರು ತೀವ್ರ ಶೋಧ ನಡೆಸಿದ್ದಾರೆ. ತನ್ನ ಜಮೀನಿನ ಕೊಳವೆ ಬಾವಿಯಲ್ಲಿ ಕಾವೇರಿ ಬಿದ್ದ ಸುದ್ದಿ ತಿಳಿದ ತಕ್ಷಣವೇ ಶಂಕರ ಹಿಪ್ಪರಗಿ ಹಾಗೂ ಕುಟುಂಬ ಸದಸ್ಯರು ಪರಾರಿಯಾಗಿದ್ದರು.

    ಸತತ 53 ಗಂಟೆಗಳ ಕಾಲ ಕಾವೇರಿಯ ರಕ್ಷಣೆಗಾಗಿ ಎನ್‍ಆರ್‍ಡಿಎಫ್ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ನಡೆಸಿದ ರಕ್ಷಣಾ ಕಾರ್ಯಚರಣೆ ಫಲಿಸದ ಪರಿಣಾಮ ಕಾವೇರಿ ಶವವನ್ನು ಹೊರ ತೆಗೆಯಲಾಗಿತ್ತು. ಕಾವೇರಿಗಾಗಿ ರಾಜ್ಯದ ಜನತೆ ನಡೆಸಿದ ಪ್ರಾರ್ಥನೆ ಈಡೇರಿರಲಿಲ್ಲ.

  • ತೆರೆದ ಕೊಳವಿ ಬಾವಿ ಮುಚ್ಚಿಸಿ ಫೋಟೋ ಕಳಿಸಿದ್ರೆ ಖಾತೆಗೆ ಹಣ

    ತೆರೆದ ಕೊಳವಿ ಬಾವಿ ಮುಚ್ಚಿಸಿ ಫೋಟೋ ಕಳಿಸಿದ್ರೆ ಖಾತೆಗೆ ಹಣ

    ಕೊಪ್ಪಳ: ನೀವು ಕೊಪ್ಪಳ ಜಿಲ್ಲೆಯಲ್ಲಿ ವಾಸವಾಗಿದ್ದೀರಾ? ನಿಮ್ಮ ಸುತ್ತಮುತ್ತಲು ತೆರೆದ ಕೊಳವೆ ಬಾವಿ ಇದೆಯೇ? ಹಾಗಾದ್ರೆ ತಡಮಾಡದೇ ಸ್ಥಳದ ಮಾಹಿತಿಯ ಜೊತೆಗೆ ಫೋಟೋವನ್ನು ವಾಟ್ಸಪ್ ಮಾಡಿದ್ರೆ ನಿಮ್ಮ ಖಾತೆಗೆ ಹಣ ಜಮೆಯಾಗಲಿದೆ.

    ಆರಂಭದ ಪೀಠಿಕೆ ಓದಿ ಖಾತೆಗೆ ಹಣ ನೀಡುವ ಯೋಜನೆಯನ್ನು ಸರ್ಕಾರ ಪ್ರಕಟಿಸಿದೆ ಎಂದು ನೀವು ಭಾವಿಸಿದರೆ ತಪ್ಪಾದಿತು. ತೆರೆದ ಕೊಳವೆ ಬಾವಿ ದುರಂತಕ್ಕೆ ಮನಮಿಡಿದ ಪ್ರಗತಿಪರ ರೈತರೊಬ್ಬರು ಬಹುಮಾನವನ್ನು ಘೋಷಣೆ ಮಾಡಿದ್ದಾರೆ.

    ಜಿಲ್ಲೆಯ ಗಂಗಾವತಿ ಪಟ್ಟಣದ ಪ್ರಗತಿಪರ ರೈತ ಶಿವಪ್ಪ ಚಳ್ಳಕೇರಿ ಅವರು 500 ರೂಪಾಯಿ ಬಹುಮಾನ ಘೋಷಣೆ ಮಾಡಿದ್ದಾರೆ. ಇಂದು ತೆರೆದ ಕೊಳವೆ ಬಾವಿ ಮುಚ್ಚಿಸೋದಕ್ಕಾಗಿ ಒಂದು ಲಕ್ಷ ರೂಪಾಯಿ ಬ್ಯಾಂಕ್ ನಲ್ಲಿ ಡಿಪಾಸಿಟ್ ಮಾಡಿದ್ದಾರೆ.

    ಕೊಪ್ಪಳ ಜಿಲ್ಲೆಯಲ್ಲಿ ಈಗಾಗ್ಲೇ 338 ವಿಫಲ ಕೊಳವೆ ಬಾವಿಗಳಿವೆ ಅಲ್ದೆ ಕೊಪ್ಪಳ ನಗರದಲ್ಲಿ 21 ವಿಫಲ ಕೊಳವೆ ಬಾವಿಗಳಿವೆ. ತೆರೆದ ಕೊಳವೆ ಬಾವಿ ಮುಚ್ಚಬೇಕಂತ ಮಾತನಾಡೋವ್ರೆ ಹೆಚ್ಚು ಆದ್ರೆ ಯಾರು ಮುಚ್ಚೋಕೆ ಮುಂದಾಗೊಲ್ಲ. ಆದ್ರೆ ಇಂತಹ ಬಹುಮಾನ ಘೋಷಣೆ ಮಾಡೋದ್ರಿಂದ ಮುಚ್ಚುತ್ತಾರೆ ಅನ್ನೋ ನಿರೀಕ್ಷೆಯಿದೆ ಎಂದು ಶಿವಪ್ಪ ಅವರು ತಿಳಿಸಿದ್ದಾರೆ.

    ಬಹುಮಾನ ಪಡೆಯಲು ಹೀಗೆ ಮಾಡ್ಬೇಕು: ಕೊಪ್ಪಳ ಜಿಲ್ಲೆಯಲ್ಲಿ ತೆರೆದ ಕೊಳವೆ ಬಾವಿ ಇರೋ ಫೋಟೋ ಹಾಗೂ ಮುಚ್ಚಿದ ಬಳಿಕ ಫೋಟೋ ಮತ್ತು ಗ್ರಾಮ ಪಂಚಾಯತ್‍ನಿಂದ ದೃಢೀಕರಣ ಪತ್ರದ ಜೊತೆಗೆ ಬ್ಯಾಂಕ್ ಖಾತೆಯ ಮಾಹಿತಿಯನ್ನು 8861318934 ನಂಬರ್ ಗೆ ವಾಟ್ಸಾಪ್ ಮಾಡಿದ್ರೆ 500 ರೂ. ಬಹುಮಾನ ಬ್ಯಾಂಕ್ ಖಾತೆಗೆ ಜಮಾ ಆಗಲಿದೆ. ಈ ಬಹುಮಾನದ ನೀಡುವ ಅವಧಿ 6 ತಿಂಗಳು ಆಗಿದ್ದು, ಜನರು ಫೋಟೋಗಳನ್ನು ಕಳುಹಿಸಬಹುದು.

    ರಾಜ್ಯದಲ್ಲಿ ತೆರೆದ ಕೊಳವೆ ಬಾವಿ ಮುಚ್ಚೋ ಅಭಿಯಾನವಾಗ್ತಿದೆ. ಆದ್ರೆ ಕೊಪ್ಪಳದ ಪ್ರಗತಿಪರ ರೈತ ಬಹುಮಾನ ಘೋಷಣೆ ಮಾಡೋ ಮೂಲಕ ಗಮನಸೆಳೆದಿದ್ದಾರೆ. ಇನ್ಮೇಲಾದ್ರೂ ತೆರೆದ ಕೊಳವೆ ಬಾವಿ ಮುಚ್ಚಿ ಮುಂದೆ ಇಂಥ ದುರಂತ ಆಗದಿರಲಿ ಅನ್ನೋದೆ ಎಲ್ಲರ ಆಶಯ.

  • ಕೊಳವೆ ಬಾವಿ ದುರಂತ: ರಾಯಚೂರಿನ ಸಂದೀಪ್ ಸಾವನ್ನಪ್ಪಿ ಇಂದಿಗೆ 10 ವರ್ಷ

    ಕೊಳವೆ ಬಾವಿ ದುರಂತ: ರಾಯಚೂರಿನ ಸಂದೀಪ್ ಸಾವನ್ನಪ್ಪಿ ಇಂದಿಗೆ 10 ವರ್ಷ

    ರಾಯಚೂರು: ಇಡೀ ರಾಜ್ಯದ ಜನರೆಲ್ಲಾ `ಕಾವೇರಿ ಬದುಕಿ ಬಾ’ ಅಂತ ಹೇಗೆ ಪ್ರಾರ್ಥನೆ ಮಾಡಿದ್ದಾರೋ, 2007ರ ಏಪ್ರಿಲ್ 24 ರಂದು ಕೂಡ `ಸಂದೀಪ್ ಬದುಕಿ ಬಾ’ ಅಂತ ಪ್ರಾರ್ಥಿಸಿದ್ದರು.

    ಹೌದು. ರಾಯಚೂರಿನ ಮಾನ್ವಿ ತಾಲೂಕಿನ ನೀರಮಾನ್ವಿಯಲ್ಲಿ ಯಮಸ್ಪರೂಪಿಯಾಗಿ ಬಾಯಿ ತೆರೆದ ಕೊಳವೆ ಬಾವಿ ಬಾಲಕ ಸಂದೀಪ್‍ನನ್ನ ಬಲಿ ಪಡೆದಿತ್ತು. ಆ ಘಟನೆ ನಡೆದು ಇಂದಿಗೆ ಬರೊಬ್ಬರಿ ಹತ್ತು ವರ್ಷಗಳೇ ಕಳೆದಿದೆ. ನತದೃಷ್ಠ ಬಾಲಕ ಸಂದೀಪ್ ಈಗ ನೆನಪು ಮಾತ್ರ.

    ಅಂದು ನಡೆದಿದ್ದೇನು?: ಗ್ರಾಮದ ಗೋಪಾಲ ಎಂಬುವವರ ಜಮೀನಿನಲ್ಲಿ ಟಿಲ್ಲರ್ ಹೊಡೆಯುತ್ತಿದ್ದಾಗ, ಆಟವಾಡಲು ಹೋಗಿ ನೀರು ಬಾರದೆ ಬಿಟ್ಟಿದ್ದ ತೆರೆದ ಕೊಳವೆ ಬಾವಿಗೆ ಬಿದ್ದಿದ್ದ. ಎರಡನೇ ತರಗತಿ ಪಾಸಾಗಿದ್ದ 9 ವರ್ಷದ ಸಂದೀಪ್‍ನ ಸಾವು ಇಡೀ ರಾಜ್ಯವನ್ನೇ ತಲ್ಲಣಗೊಳಿಸಿತ್ತು. ಅನಾರೋಗ್ಯಕ್ಕೆ ತುತ್ತಾಗಿ ಹಾಸಿಗೆ ಹಿಡಿದಿದ್ದ ಸಂದೀಪನ ತಂದೆ ನಾಗರಾಜ್ ಹಾಗೂ ತಾಯಿ ಲಕ್ಷ್ಮಿಗೆ ಈ ಘಟನೆಯಿಂದ ಬರಸಿಡಿಲು ಬಡಿದಂತಾಗಿತ್ತು.

    ಅಂದು ಕೊಳವೆ ಬಾವಿಗೆ ಬಿದ್ದ ಸಂದೀಪನನ್ನ ಕಾಪಾಡಲು ಅಗ್ನಿ ಶಾಮಕ ದಳ, ಹಟ್ಟಿ ಚಿನ್ನದ ಗಣಿ ಕಂಪನಿ ರಕ್ಷಣಾ ತಂಡ ಇನ್ನಿಲ್ಲದ ಪ್ರಯತ್ನ ಮಾಡಿದ್ದರು. ಸತತ ಮೂರು ದಿನಗಳ ಪ್ರಯತ್ನದ ಬಳಿಕ ಏಪ್ರಿಲ್ 26 ರಂದು ಸಂದೀಪನ ಶವವನ್ನ ಹೊರತೆಗೆಯಲಾಗಿತ್ತು. ಸಂದೀಪ್ ಪ್ರಕರಣ ನಡೆದು ಇಂದಿಗೆ ಬರೋಬ್ಬರಿ ಹತ್ತು ವರ್ಷ ಕಳೆದಿದೆ. ಸಂದೀಪನನ್ನ ನೆನೆದು ಈಗಲೂ ಕಣ್ಣಲ್ಲಿ ನೀರನ್ನ ತುಂಬಿಕೊಳ್ಳುವ ಬಾಲಕನ ತಂದೆತಾಯಿಯಾದ ನಾಗರಾಜ್ ಲಕ್ಷ್ಮಿ ದಂಪತಿ ಕಾವೇರಿ ಘಟನೆಗೆ ವಿಷಾದ ವ್ಯಕ್ತಪಡಿಸಿದ್ದಾರೆ.

    ಒಟ್ಟಿನಲ್ಲಿ ಸಂದೀಪನ ದುರಂತ ಸಾವಿನ ಘಟನೆ ನಡೆದು ಹತ್ತು ವರ್ಷ ಕಳೆದರು ತೆರೆದ ಕೊಳವೆ ಬಾವಿಗಳು ಈಗಲೂ ಯಮಸ್ವರೂಪಿಗಳಾಗಿ ಜೀವವಂತವಾಗಿರುವುದು ನಿಜಕ್ಕೂ ದುರಂತವೇ ಸರಿ.

  • ನಾನೇನು ದೇವರಾ.. ನಾ ಬಂದು ಏನ್ ಮಾಡ್ಬೇಕು?: ರಮೇಶ್ ಜಾರಕಿಹೊಳಿ

    ನಾನೇನು ದೇವರಾ.. ನಾ ಬಂದು ಏನ್ ಮಾಡ್ಬೇಕು?: ರಮೇಶ್ ಜಾರಕಿಹೊಳಿ

    ಬೆಳಗಾವಿ: ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಅವರಿಗೆ ನೀವು ಬೇಗ ಬರಬಹುದಿತ್ತಲ್ಲಾ ಎಂಬ ಮಾಧ್ಯಮಗಳ ಪ್ರಶ್ನೆಗೆ ನಾನೇನು ದೇವರಾ, ನಾ ಬೇಗ ಬಂದು ಏನ್ ಮಾಡ್ಬೇಕು ಎಂದು ಉಡಾಫೆ ಉತ್ತರ ನೀಡಿದ್ದಾರೆ.

    ಜಿಲ್ಲೆಯ ಅಥಣಿ ತಾಲೂಕಿನ ಝುಂಜರವಾಡ ಗ್ರಾಮದಲ್ಲಿ ಕೊಳವೆಗೆ ಕಾವೇರಿ ಎಂಬ ಬಾಲಕಿ ಬಿದ್ದಿದ್ದು, ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಅವರು ಇಂದು ವಿಳಂಬವಾಗಿ ಸ್ಥಳಕ್ಕೆ ಆಗಮಿಸಿದ್ದರು. ಈ ಸಂಬಂಧ ಮಾಧ್ಯಮ ಪ್ರತಿನಿಧಿಗಳು ಸ್ವಲ್ಪ ಬೇಗ ಬರಬಹುದಿತ್ತಲವೇ ಎಂದು ಪ್ರಶ್ನೆ ಕೇಳಿದ್ದಕ್ಕೆ, ನಾನೇನು ದೇವರಾ.. ಬೇಗ ಬಂದು ನಾನ್ ಏನ್ ಮಾಡ್ಬೇಕು? ಎಷ್ಟು ಕೋಟಿ ಹಣ ವ್ಯಯ ಮಾಡಿದ್ರೂ ಬಾಲಕಿ ಬದುಕಿ ಬರಲ್ಲಾ. ಬದುಕಿ ಬಂದರೆ ಸಂತೋಷ ಎಂದು ಉತ್ತರಿಸಿದ್ದಾರೆ.

    ನನಗೆ ನಮ್ಮ ಜಿಲ್ಲಾಡಳಿತದ ಅಧಿಕಾರಿಗಳ ಮೇಲೆ ನಂಬಿಕೆಯಿದೆ. ಅವರು ಕ್ಷಮತೆಯಿಂದ ಕಾರ್ಯ ನಿರ್ವಹಿಸುತ್ತಾರೆ. ನಾನು ದೂರದಿಂದಲೇ ಎಲ್ಲ ಮಾಹಿತಿಯನ್ನು ಪಡೆದುಕೊಂಡಿದ್ದೇನೆ ಎಂದು ರಮೇಶ್ ಜಾರಕಿಹೊಳಿ ತಿಳಿಸಿದರು.

    ಉಡಾಫೆಯ ಮಂತ್ರಿಗಳು: ಈ ಸರ್ಕಾರದಲ್ಲಿ ಎಲ್ಲಾ ಉಡಾಫೆ ಮಂತ್ರಿಗಳೇ ಇರೋದು. ಸಿಎಂ ಕೂಡಾ ಉಡಾಫೆ ವರ್ತನೆ ತೋರಿಸ್ತಾರೆ. ಮುಖ್ಯಮಂತ್ರಿಗಳ ಹಾಗೆ ಮಂತ್ರಿಗಳು ಅನುಸರಿಸುತ್ತಾರೆ. ಸಿಎಂ ಎಸ್‍ಪಿ ಗೆ ಸಾರ್ವಜನಿಕವಾಗಿ ಬೈಯ್ತಾರೆ. ರಾಜ್ಯದಲ್ಲಿ ಅಧಿಕಾರಿಗಳಿಗೆ ರಕ್ಷಣೆಯಿಲ್ಲ. ಚುನಾವಣೆ ನಂತರ ಕಾಂಗ್ರೆಸ್‍ನ ಅಡ್ರೆಸ್ ಇರೋದಿಲ್ಲ ಎಂದು ರಾಜ್ಯ ಸರ್ಕಾರದ ವಿರುದ್ಧ ರಾಜ್ಯ ಪರಿಷತ್ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಕಿಡಿ ಕಾರಿದ್ದಾರೆ.

    ಕೊಳವೆಬಾವಿ ದುರಂತ ಪ್ರಕರಣಗಳು ನಡೆಯುತ್ತಾನೆ ಇರುತ್ತದೆ. ದುರ್ಘಟನೆ ನಡೆದಿದೆ ಆ ಬಗ್ಗೆ ಸ್ಥಳೀಯ ಅಧಿಕಾರಿಗಳು ತನಿಖೆ ನಡೆಸಿ ಕ್ರಮಕೈಗೊಳ್ಳುತ್ತಾರೆ. ಸರ್ಕಾರದಲ್ಲಿ ಈಗಾಗಲೇ ಇಂತಹ ಪ್ರಕರಣಗಳಿಗೆ ಸಂಬಂಧಿಸಿದ ಆದೇಶಗಳಿವೆ. ಜಮೀನಿನಲ್ಲಿ ತೆರೆದ ಕೊಳವೆ ಬಾವಿ ಮುಚ್ಚಲು ಆದೇಶವಿದೆ. ಇದನ್ನು ಬಿಟ್ಟು ಮಾಧ್ಯಮಗಳು ಬೇರೆ ವಿಚಾರಗಳನ್ನ ಹೈಲೈಟ್ ಮಾಡಿ ಎಂದು ಸಚಿವ ಕಾಗೋಡು ತಿಮ್ಮಪ್ಪ ಪ್ರತಿಕ್ರಿಯೆ ನೀಡಿದ್ದಾರೆ.

    https://youtu.be/9-J2kwfP51M