Tag: ಕೊಳಗೇರಿ

  • ಮಸೀದಿಯಲ್ಲಿ ಎಲ್ಲ ಧರ್ಮದವರಿಗೂ ಚಿಕಿತ್ಸೆ!

    ಮಸೀದಿಯಲ್ಲಿ ಎಲ್ಲ ಧರ್ಮದವರಿಗೂ ಚಿಕಿತ್ಸೆ!

    ಹೈದರಾಬಾದ್: ಇದೇ ಮೊದಲ ಬಾರಿಗೆ ಹೈದರಾಬಾದ್‍ನ ಮಸೀದಿಯೊಂದು ಆರೋಗ್ಯ ಕೇಂದ್ರವಾಗಿ ಮಾರ್ಪಟ್ಟಿದ್ದು, ಎಲ್ಲ ಧರ್ಮದ ಜನರಿಗೂ ಚಿಕಿತ್ಸೆ ನೀಡುವ ಮೂಲಕ ಭಾರೀ ಮೆಚ್ಚುಗೆ ಗಿಟ್ಟಿಸಿಕೊಂಡಿದೆ.

    ಹೈದರಾಬಾದ್‍ನ ಮಸೀದ್-ಇ-ಇಷ್ಕ್ ಪ್ರಾರ್ಥನಾ ಮಂದಿರದಲ್ಲಿ ಇಂತಹ ಸೌಲಭ್ಯ ಸಿಗುತ್ತಿದ್ದು, ಒಂದು ದಿನಕ್ಕೆ ಸುಮಾರು 40 ರಿಂದ 50 ಜನರಿಗೆ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ. ಈ ಸೇವೆಯನ್ನು ಹೆಲಿಂಗ್ ಹ್ಯಾಂಡ್ ಫೌಂಡೇಶನ್ (ಎಚ್‍ಎಚ್‍ಎಫ್) ಹೆಸರಿನ ಸರ್ಕಾರೇತರ ಸ್ವಯಂ ಸೇವಾ ಸಂಸ್ಥೆ ಒದಗಿಸುತ್ತಿದ್ದು, ಇದಕ್ಕೆ ಮಸೀದಿಯ ಆಡಳಿತ ಮಂಡಳಿ ಸಾಥ್ ನೀಡಿದೆ. ಇದರಿಂದಾಗಿ ಕೊಳಗೇರಿ ಪ್ರದೇಶದ ಬಡ ಜನರಿಗೆ ಆರೋಗ್ಯ ಭದ್ರತೆ ಸಿಕ್ಕಂತಾಗಿದೆ.

    ಹೆಚ್ಚು ಬಡ ಜನರಿಗೆ ಚಿಕಿತ್ಸೆಯ ಸೌಲಭ್ಯ ಒದಗಿಸುವ ಉದ್ದೇಶದಿಂದ ಸೂಕ್ತ ಸ್ಥಳಕ್ಕಾಗಿ ಹುಡುಕಾಟ ನಡೆಸಿದ್ದೆವು. ಈ ವೇಳೆ ನಗರದ ಕೇಂದ್ರ ಭಾಗವಾದ ಹಾಗೂ ಕೊಳಗೇರಿಯನ್ನು ಸುತ್ತುವರಿದಿದ್ದ ಮಸೀದಿಯಲ್ಲಿ ಅವಕಾಶ ಸಿಕ್ಕಿತ್ತು ಎಂದು ಹೆಲಿಂಗ್ ಹ್ಯಾಂಡ್ ಫೌಂಡೇಶನ್‍ನ ವ್ಯವಸ್ಥಾಪಕ ಮಜ್ತಾಬಾ ಆಸ್ಕರಿ ತಿಳಿಸಿದ್ದಾರೆ.

    ಮಸೀದಿಯ ಸುತ್ತಮುತ್ತ 9 ಕೊಳಗೇರಿ ಪ್ರದೇಶಗಳಿದ್ದು, ಸುಮಾರು 1.5 ಲಕ್ಷ ಜನರು ವಾಸವಾಗಿದ್ದಾರೆ. ಮಸೀದಿ ಮೂಲಕ ನಮ್ಮ ಉದ್ದೇಶಕ್ಕೆ ಸೂಕ್ತವಾಗಿದ್ದ ಜಾಗ ಸಿಕ್ಕಂತಾಗಿದ್ದು, ಒಂದು ದಿನದಲ್ಲಿ ಸುಮಾರು 40ರಿಂದ 50 ಮಂದಿಗೆ ಚಿಕಿತ್ಸೆ ನೀಡುತ್ತಿದ್ದೇವೆ. ಚಿಕಿತ್ಸೆ ಪಡೆದ ಜನರಿಂದಲೂ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಕೆಲವು ರೋಗಿಗಳಿಗೆ ಸಾರಿಗೆ ಸೌಲಭ್ಯವನ್ನೂ ಒದಗಿಸುತ್ತಿದ್ದೇವೆ ಎಂದು ಮಜ್ತಾಬಾ ಆಸ್ಕರಿ ಹೇಳಿದ್ದಾರೆ.

    ಇಂತಹ ಸೇವೆಯನ್ನು 30 ಆಸ್ಪತ್ರೆಗಳ ಮೂಲಕ ಕಳೆದ 13 ವರ್ಷಗಳಿಂದ ಒದಗಿಸುತ್ತಾ ಬಂದಿದ್ದೇವೆ. ನಮ್ಮ ಸಂಸ್ಥೆಯಲ್ಲಿ ಅನೇಕರು ಸ್ವಯಂ ಸೇವಕರಾಗಿ ಕೆಲಸ ಮಾಡುತ್ತಿದ್ದಾರೆ. ರೋಗಿಗಳ ಬಗ್ಗೆ ಅಧ್ಯಯನ ಮಾಡಿ, ಅವರಿಗೆ ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದಲ್ಲಿ ಅವರನ್ನು ಆಸ್ಪತ್ರೆಗೆ ಕಳುಹಿಸುತ್ತೇವೆ. ಬಡ ರೋಗಿಗಳ ಸಾರಿಗೆ ಹಾಗೂ ಸ್ವಲ್ಪ ಮಟ್ಟದ ಸಹಾಯ ಧನ ನೀಡುತ್ತೇವೆ ಎಂದು ಎಚ್‍ಎಚ್‍ಎಫ್ ನಿರ್ದೇಶಕ ಫರೀದ್ ಅವರು ವಿವರಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews