Tag: ಕೊಲ್ಲೂರು

  • ಮೋದಿ ಮತ್ತೆ ಪ್ರಧಾನಿಯಾಗ್ತಾರೆ- ಅಮೇರಿಕನ್ ಸಂಶೋಧಕ ಭವಿಷ್ಯ

    ಮೋದಿ ಮತ್ತೆ ಪ್ರಧಾನಿಯಾಗ್ತಾರೆ- ಅಮೇರಿಕನ್ ಸಂಶೋಧಕ ಭವಿಷ್ಯ

    ಉಡುಪಿ: ನರೇಂದ್ರ ಮೋದಿ ಮತ್ತೆ ಪ್ರಧಾನಿ ಆಗುತ್ತಾರೆ. ಮೋದಿ 2019 ರಲ್ಲಿ ಮತ್ತೆ ಅಧಿಕಾರ ಹಿಡಿಯುತ್ತಾರೆ ಅಂತ ಅಮೇರಿಕಾದ ಹಿಂದೂ ಧರ್ಮಗುರು, ಸಂಶೋಧಕ ಡೇವಿಡ್ ಫ್ರಾವ್ಲೇ ಹೇಳಿದ್ದಾರೆ.

    ಉಡುಪಿ ಜಿಲ್ಲೆ ಬೈಂದೂರು ತಾಲೂಕಿನ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿಕೊಟ್ಟ ಸಂದರ್ಭ ಮಾಧ್ಯಮಗಳ ಜೊತೆ ಮಾತನಾಡಿದರು. ಪ್ರಧಾನಿ ಮೋದಿ ಭಾರತದ ಪುರಾತನ ಸಂಸ್ಕೃತಿ ಎತ್ತಿ ಹಿಡಿದಿದ್ದಾರೆ. ಮೋದಿ ಆಡಳಿತಾತ್ಮಕ ಮತ್ತು ಭಾರತೀಯ ನಾಗರೀಕತೆ ಪ್ರತಿಪಾದಕ ಎಂದ ಅವರು, ವಿಶ್ವದಲ್ಲಿ ಭಾರತದ ಧ್ವನಿಯನ್ನು ಮೋದಿ ಮೊಳಗಿಸಿದ್ದಾರೆ ಎಂದು ಸರ್ಟಿಫಿಕೇಟ್ ನೀಡಿದರು.

     

     

    ಪಟೇಲರು ದೇಶವ ಒಗ್ಗೂಡಿಸಿದರು:
    ಯೂನಿಟಿ ಆಫ್ ಸ್ಟ್ಯಾಚು ಬಗ್ಗೆ ವಿರೋಧಿಸುತ್ತಿರುವುದು ಸರಿಯಲ್ಲ. ಸರ್ದಾರ್ ವಲ್ಲಭ ಭಾಯ್ ಪಟೇಲರು ಭಾರತವನ್ನು ಒಗ್ಗೂಡಿಸಿದವರು. ದೇಶದಲ್ಲಿ ಅವರಿಗೆ ಪುತ್ಥಳಿ ಮೂಲಕ ದೊಡ್ಡ ಗೌರವ ಸಿಕ್ಕಿದೆ. ಇದಕ್ಕೆ ಯಾರಾದರೂ ವಿರೋಧ ಮಾಡುವುದರಲ್ಲಿ ಅರ್ಥವಿಲ್ಲ. ಮೋದಿ ಭಾರತದ ಸಾಮಥ್ರ್ಯ ವಿಶ್ವದ ಮುಂದೆ ಪ್ರದರ್ಶಿಸಿದ್ದಾರೆ. ಪುತ್ಥಳಿಗೆ ತಗಲಿರುವ ವೆಚ್ಚದ ಬಗ್ಗೆ ಲೆಕ್ಕ ಹಾಕುವುದಕ್ಕಿಂತ ಮುಂದೆ ಅದರಿಂದ ದೇಶಕ್ಕೆ ಸಿಗುವ ಗೌರವ, ಲಾಭದ ಬಗ್ಗೆ ಆಲೋಚಿಸಿ. ನರೇಂದ್ರ ಮೋದಿ ಒಂದು ಕುಟುಂಬ- ಪಕ್ಷವಾಗಿ ಉಳಿದಿಲ್ಲ ಎಂದರು.

    ಕಮ್ಯುನಿಸ್ಟ್ ಸರ್ಕಾರಕ್ಕೆ ದೇವರ ಮೇಲೆ ನಂಬಿಕೆಯಿಲ್ಲ:
    ಶಬರಿಮಲೆಗೆ ಮಹಿಳೆಯರ ಪ್ರವೇಶ ವಿಚಾರ ಭಾರತದಲ್ಲಿ ಬಹಳ ಚರ್ಚೆಯಾಗುತ್ತಿದೆ. ಕೇರಳದಲ್ಲಿ ಕಮ್ಯೂನಿಸ್ಟ್ ಪಾರ್ಟಿ ಅಧಿಕಾರದಲ್ಲಿ ಇರುವುದರಿಂದ ಕಮ್ಯೂನಿಸ್ಟರಿಗೆ ಹಿಂದೂ ಧರ್ಮದ ಬಗ್ಗೆ ಗೊತ್ತಿಲ್ಲ. ಆತ್ಮ, ಈಶ್ವರ- ಭಗವಂತನ ಮೇಲೆ ಅವರಿಗೆ ನಂಬಿಕೆಯಿಲ್ಲ. ಹಿಂದೂ ದೇವಸ್ಥಾನದ ಆದಾಯ ಅಲ್ಲಿನ ಸರಕಾರಕ್ಕೆ ಬೇಕು. ಅಲ್ಲಿನ ಸಂಪ್ರದಾಯ, ನಂಬಿಕೆ ಬೇಕಾಗಿಲ್ಲ. ದೇವಸ್ಥಾನದ ವಿಚಾರದಲ್ಲಿ ಕೇರಳ ಸರ್ಕಾರ ಮೂಗು ತೂರಿಸಬಾರದು. ಶಬರಿಮಲೆ ದೇವಸ್ಥಾನಕ್ಕೆ ಅದರದ್ದೇ ಆದ ಪದ್ಧತಿ ಇದೆ. ಅಯ್ಯಪ್ಪ ಭಕ್ತರ ನಂಬಿಕೆಗೆ ಸರಕಾರ ಬೆಲೆ ಕೊಡಬೇಕು ಕೊಲ್ಲೂರಿನಲ್ಲಿ ಡೇವಿಡ್ ಫ್ರಾವ್ಲೇ ಒತ್ತಾಯಿಸಿದರು.

    ವೇದ, ಜ್ಯೋತಿಷ್ಯ, ಆಯುರ್ವೇದ ವಿಚಾರದಲ್ಲಿ ಸಂಶೋಧಕನಾಗಿರುವ ಡೇವಿಡ್, ಭಾರತೀಯ ಸಂಸ್ಕೃತಿ ಬಗ್ಗೆ 30 ಪುಸ್ತಕ ಬರೆದಿದ್ದಾರೆ. ಅಮೇರಿಕಾದ ಪ್ರಜೆಯಾಗಿರುವ ಅವರು ಭಾರತವನ್ನು ಸಂಪೂರ್ಣವಾಗಿ ಅರ್ಥಮಾಡಿಕೊಂಡಿರುವುದಾಗಿ ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಇಂದು ಸಿಎಂ ಭೇಟಿ

    ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಇಂದು ಸಿಎಂ ಭೇಟಿ

    ಉಡುಪಿ: ಇಂದು ಸಿಎಂ ಹೆಚ್.ಡಿ.ಕುಮಾರಸ್ವಾಮಿ ಕೊಲ್ಲೂರಿಗೆ ಭೇಟಿ ನೀಡಿ ದೇವಿಗೆ ವಿಶೇಷ ಪೂಜೆ ಸಲ್ಲಿಸಲಿದ್ದಾರೆ.

    ಶಿವಮೊಗ್ಗ ಲೋಕಸಭಾ ಉಪಸಮರ ಹಿನ್ನೆಲೆಯಲ್ಲಿ ಸಿಎಂ ಕುಮಾರಸ್ವಾಮಿ ಉಡುಪಿಗೆ ಆಗಮಿಸಲಿದ್ದಾರೆ. ಅರೆಶೀರೂರು ಹೆಲಿಪ್ಯಾಡ್ ನಲ್ಲಿ ಇಳಿದು ರಸ್ತೆ ಮಾರ್ಗ ಮೂಲಕ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ.

    ಇಂದು ಬೆಳಗ್ಗೆ 11 ಗಂಟೆ ಸುಮಾರಿಗೆ ಕೊಲ್ಲೂರು ಸಿಎಂ ದೇವಸ್ಥಾನ ಆಗಮನ ಸಾಧ್ಯತೆಯಿದೆ. ಚುನಾವಣೆ ಹಿನ್ನೆಲೆಯಲ್ಲಿ ಸಿಎಂ ದೇವಸ್ಥಾನ ಭೇಟಿ ಮಹತ್ವ ಪಡೆದಿದೆ. ಮೂಕಾಂಬಿಕಾ ದೇವಿಗೆ ವಿಶೇಷ ಪೂಜೆ ಸಲ್ಲಿಸಲಿರುವ ಸಿಎಂ, ನಂತರ ಬೈಂದೂರು ತಾಲೂಕಿನ ಶಿವಮೊಗ್ಗ ಲೋಕಸಭಾ ವ್ಯಾಪ್ತಿಯ ತ್ರಾಸಿಯಲ್ಲಿ ನಡೆಯಲಿರುವ ಪ್ರಚಾರ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಪ್ರಚಾರ ಸಭೆಯ ಬಳಿಕ ಅಲ್ಲೇ ಭೋಜನ ಸ್ವೀಕರಿಸಿ 2 ಗಂಟೆಗೆ ಶಿವಮೊಗ್ಗಕ್ಕೆ ಹೆಲಿಕಾಪ್ಟರ್ ಮೂಲಕವೇ ಸಿಎಂ ವಾಪಾಸ್ ತೆರಳಲಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕೊಲ್ಲೂರಮ್ಮನ ಮೊರೆ ಹೋದ ಡಿಕೆಶಿ ಕುಟುಂಬ

    ಕೊಲ್ಲೂರಮ್ಮನ ಮೊರೆ ಹೋದ ಡಿಕೆಶಿ ಕುಟುಂಬ

    ಉಡುಪಿ: ಜಲಸಂಪನ್ಮೂಲ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಿಕೆ ಶಿವಕುಮಾರ್ ಅವರು ಇಂದು ಕುಟುಂಬ ಸಮೇತರಾಗಿ ಜಿಲ್ಲೆಯ ಕೊಲ್ಲೂರು ಮೂಕಾಂಬಿಕಾ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.

    ಹೌದು, ಸಿಬಿಐ ಹಾಗೂ ಇಡಿ ತನಿಖೆಯಿಂದ ಹೈರಾಣಾಗಿರುವ ಡಿಕೆ ಶಿವಕುಮಾರ್ ರವರು ಇಂದು ಕೊಲ್ಲೂರು ಮೂಕಾಂಬಿಕೆಗೆ ಶರಣಾಗಿದ್ದಾರೆ. ಪತ್ನಿ ಉಷಾ ಶಿವಕುಮಾರ್, ಮಗಳು ಐಶ್ವರ್ಯ ಜೊತೆ ಆಗಮಿಸಿದ ಅವರು, ದೇವಸ್ಥಾನದ ಪ್ರಾಂಗಣಕ್ಕೆ ಪ್ರವೇಶಿಸಿ ಗರುಡಗಂಬಕ್ಕೆ ಮೊದಲು ಪೂಜೆ ಸಲ್ಲಿಸಿದರು.

    ದೇವಸ್ಥಾನದೊಳಗೆ ತೆರಳಿದ ಡಿಕೆಶಿ ಕುಟುಂಬ ಮೂಕಾಂಬಿಕೆಗೆ ಅರ್ಚಕರು ಸಚಿವರ ಪರವಾಗಿ ವಿಶೇಷ ಪೂಜೆ, ಆರತಿ ಸೇವೆಯನ್ನು ಸಲ್ಲಿಕೆ ಮಾಡಿದರು. ಪೂಜೆಯ ವೇಳೆ ಭಕ್ತಿ ಪರವಶರಾಗಿದ್ದ ಡಿಕೆಶಿ ಬಂದಿರುವ ಸಂಕಷ್ಟಗಳೆಲ್ಲ ದೂರವಾಗಿ ನೆಮ್ಮದಿ ಪ್ರಾಪ್ತಿ ಮಾಡುವಂತೆ ಪ್ರಧಾನ ಅರ್ಚಕರಲ್ಲಿ ದೇವಿಗೆ ಆರತಿ ಮಾಡಿಸಿದ್ದಾರೆ. ಅರ್ಚಕರು ರಾಜಕೀಯವಾಗಿ ಶ್ರೇಯೋಭಿವೃದ್ಧಿಯಾಗಲಿ, ಸಂಕಟಗಳೆಲ್ಲಾ ನಿವಾರಣೆಯಾಗಲಿ ಅಂತ ಅರ್ಚನೆ ಮಾಡಿದ್ದಾರೆ.

    ದೇಗುಲ ಭೇಟಿಯ ನಂತರ ದೇವಸ್ಥಾನದ ಪ್ರಾಂಗಣದಲ್ಲಿದ್ದ ಎಲ್ಲಾ ಗುಡಿಗಳ ಬಳಿಗೆ ತೆರಳಿದ ಅವರು ವೀರಭದ್ರ, ದೇವಿ, ಗಣಪತಿ ಗುಡಿಗಳಿಗೆ ಅರ್ಚನೆ ಸಲ್ಲಿಸಿದರು. ದೇವಸ್ಥಾನ ಭೇಟಿಯ ನಂತರ ಬೈಂದೂರು ತಾಲೂಕಿನ ವರಾಹಿ ನೀರಾವರಿ ಯೋಜನೆ ಬಗ್ಗೆ ಅಧಿಕಾರಿಗಳ ಜೊತೆ ಸಭೆಗೆ ತೆರಳಿದರು. ಜಿಲ್ಲಾಮಟ್ಟದ ನಾಯಕರಿಗೆ ಮಾಹಿತಿ ನೀಡಿದ ಡಿಕೆಶಿಯವರು ತಮ್ಮ ಕುಟುಂಬದ ಸದಸ್ಯರು ಮಾತ್ರ ಜೊತೆಗಿರುವಂತೆ ನೋಡಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕೊಲ್ಲೂರಿಗೆ ಮಲಯಾಳಂ ಸೂಪರ್ ಸ್ಟಾರ್- ಮೂಕಾಂಬಿಕೆಯ ದರ್ಶನ ಪಡೆದ ಮೋಹನ್ ಲಾಲ್

    ಕೊಲ್ಲೂರಿಗೆ ಮಲಯಾಳಂ ಸೂಪರ್ ಸ್ಟಾರ್- ಮೂಕಾಂಬಿಕೆಯ ದರ್ಶನ ಪಡೆದ ಮೋಹನ್ ಲಾಲ್

    ಉಡುಪಿ: ಮಲಯಾಳಂ ಸೂಪರ್ ಸ್ಟಾರ್, ನಿರ್ದೇಶಕ ಮೋಹನ್‍ಲಾಲ್ ಇಂದು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ.

    ಉಡುಪಿ ಜಿಲ್ಲೆ ಕುಂದಾಪುರದ ಪ್ರಸಿದ್ಧ ಕ್ಷೇತ್ರ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಬೆಳಗ್ಗೆ ದೇವಸ್ಥಾನಕ್ಕೆ ಭೇಟಿಕೊಟ್ಟು ದೇವಿಯ ಸನ್ನಿಧಿಯಲ್ಲಿ ಕೆಲಕಾಲ ಧ್ಯಾನ ಮಾಡಿದರು. ದೇವಿಗೆ ಮುಂಜಾನೆ ನಡೆಯುವ ಮಹಾಮಂಗಳಾರತಿಯಲ್ಲಿ ಪಾಲ್ಗೊಂಡರು.

    ದೇವಸ್ಥಾನದ ಪ್ರಾಂಗಣದಲ್ಲಿ ಗಣಪತಿ, ವೀರಭದ್ರ ಗುಡಿಗಳಿಗೆ ಭೇಟಿ ಕೊಟ್ಟು ವಿಶೇಷ ಪೂಜೆ ಸಲ್ಲಿಸಿದರು. ದೇವಸ್ಥಾನಕ್ಕೆ ಬಂದಿದ್ದ ಭಕ್ತರು ಮೋಹನ್ ಲಾಲ್ ಅವರ ಜೊತೆ ಫೋಟೋ ತೆಗೆಸಿಕೊಳ್ಳಲು, ವೀಡಿಯೋ ಮಾಡಲು ನೂರಾರು ಜನ ಮುಗಿಬಿದ್ದರು. ಇದನ್ನೂ ಓದಿ: ಸಾಮಾನ್ಯರಂತೆ ಸುಳ್ಯದ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಿದ ಖ್ಯಾತ ಮಲೆಯಾಳಂ ನಟ ಮಮ್ಮುಟ್ಟಿ

    ಸುಬ್ರಹ್ಮಣ್ಯಕ್ಕೆ ಭೇಟಿ: ಇದೇ ತಿಂಗಳ 15ರಂದು ಇವರು ದಕ್ಷಿಣಕನ್ನಡ ಜಿಲ್ಲೆಯ ಪ್ರಸಿದ್ಧ ಕುಕ್ಕೆ ಸುಬ್ರಹ್ಮಣ್ಯ ದೇವಾಲಯಕ್ಕೆ ಭೇಟಿ ನೀಡಿದ್ದರು. ನಟ ಮೋಹನ್ ಲಾಲ್ ಗುರುವಾರ ಮುಂಜಾನೆ ದೇವರ ದರ್ಶನ ಪಡೆದು ಬಳಿಕ ಕುಕ್ಕೆ ಸುಬ್ರಹ್ಮಣ್ಯನಿಗೆ ವಿಶೇಷ ಪೂಜೆ ಸಲ್ಲಿಸಿದ್ದರು. ಮಲಯಾಳಂ ಕಾಯಂಕುಳಂ ಕೊಚ್ಚುನ್ನಿ ಚಿತ್ರದ ಚಿತ್ರೀಕರಣ ಪುತ್ತೂರು ತಾಲೂಕಿನ ಕಡಬದ ಬಲ್ಯ ಹಾಗೂ ಪದವು ನಲ್ಲಿ ನಡೆಯುತ್ತಿತ್ತು. ಕೊಚ್ಚುನ್ನಿ ಸಿನಿಮಾದಲ್ಲಿ ಮೋಹನ್ ಲಾಲ್ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿದ್ದಾರೆ.

    ನಿವಿನ್ ಪೌಲ್, ಪ್ರಿಯಾ ಆನಂದ್ ಸೇರಿದಂತೆ ಇತರ ಸಹ ನಟರು ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಇನ್ನೊಂದೆಡೆ ಬಹುಕೋಟಿ ವೆಚ್ಚದ ಮಮ್ಮುಟ್ಟಿ ನಟನೆಯ ಮಾಮಾಂಗಂ ಚಿತ್ರದ ಚಿತ್ರೀಕರಣ ಕೂಡಾ ಕಡಬದ ಕೊಯಿಲ ಫಾರ್ಮ್‍ನಲ್ಲಿ ನಡೆದಿತ್ತು. ಎರಡೂ ಚಿತ್ರದ ನಟರಿಗೆ ಸುಬ್ರಹ್ಮಣ್ಯದಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು.

  • ಎರಡು ದಿನದ ಹಿಂದೆಯಷ್ಟೇ ಕೊಲ್ಲೂರಿಗೆ ಬಂದಿದ್ದ ಪೇದೆ ಆತ್ಮಹತ್ಯೆಗೆ ಶರಣು!

    ಎರಡು ದಿನದ ಹಿಂದೆಯಷ್ಟೇ ಕೊಲ್ಲೂರಿಗೆ ಬಂದಿದ್ದ ಪೇದೆ ಆತ್ಮಹತ್ಯೆಗೆ ಶರಣು!

    ಉಡುಪಿ: ಪೊಲೀಸ್ ಕಾನ್ಸ್ ಸ್ಟೇಬಲ್ ನೇಣಿಗೆ ಶರಣಾದ ಘಟನೆ ಉಡುಪಿ ಜಿಲ್ಲೆಯ ಕೊಲ್ಲೂರಿನ ಸೌಪರ್ಣಿಕ ಗೆಸ್ಟ್ ಹೌಸ್ ನಲ್ಲಿ ನಡೆದಿದಿರುವ ಬಗ್ಗೆ ಬೆಳಕಿಗೆ ಬಂದಿದೆ.

    27 ವರ್ಷದ ನಾಗರಾಜ್ ಆತ್ಮಹತ್ಯೆಗೆ ಶರಣಾಗಿರೋ ಪೇದೆಯಾಗಿದ್ದು, ಇವರು ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು.

    ನಾಗರಾಜ್ ಜೊತೆ ಕೋಣೆಯಲ್ಲಿ ತಂಗುತ್ತಿದ್ದ ಇನ್ನೋರ್ವ ಪೇದೆ ಸಂದೀಪ್ ಎಂಬವರು ಕೆಲಸ ನಿಮಿತ್ತ ಶನಿವಾರ ಗಂಗೊಳ್ಳಿಗೆ ತೆರಳಿ ರಾತ್ರಿ ಪಾಳಿಯ ಬಳಿಕ ಇಂದು ಬೆಳಿಗ್ಗೆ ಕೋಣೆಗೆ ಮರಳಿದಾಗ ನಾಗರಾಜ್ ಅವರ ದೇಹ ನೇಣು ಬಿಗಿದ ಸ್ಥಿತಿಯಲ್ಲಿ ಕಂಡುಬಂದಿದೆ.

    ನಾಗರಾಜ್ ಅವರು ಮೂರು ವರ್ಷಗಳಿಂದ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ದಾವಣಗೆರೆಯ ಮಲೆಬೆನ್ನೂರು ಮೂಲದ ನಾಗರಾಜ್ ಅವರು 2014ರಲ್ಲಿ ಪೊಲೀಸ್ ಪೇದೆಯಾಗಿದ್ದು, ಅವರು ಜೋಯ್ಡಾಗೆ ವರ್ಗಾವಣೆಗೊಂಡಿದ್ದರು ಎನ್ನಲಾಗಿದೆ. ಎರಡು ದಿನಗಳ ಹಿಂದೆ ಕೊಲ್ಲೂರಿಗೆ ಬಂದಿದ್ದ ಅವರು ಇದೀಗ ದಿಢೀರ್ ಆತ್ಮಹತ್ಯೆಗೆ ಶರಣಾಗಿರುವುದು ನಿಗೂಢವಾಗಿದೆ.

    ನಾಗರಾಜ್ ಅವರ ಮದುವೆ ನಿಗದಿಯಾಗಿತ್ತು ಎಂದು ಪೊಲೀಸ್ ಮೂಲಗಳಿಂದ ಮಾಹಿತಿ ಸಿಕ್ಕಿದೆ. ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.

  • ಕೊಲ್ಲೂರಮ್ಮನ ಸನ್ನಿಧಿಯಲ್ಲಿ ಯೇಸುದಾಸ್ 78 ನೇ ಹುಟ್ಟಹಬ್ಬ ಆಚರಣೆ

    ಕೊಲ್ಲೂರಮ್ಮನ ಸನ್ನಿಧಿಯಲ್ಲಿ ಯೇಸುದಾಸ್ 78 ನೇ ಹುಟ್ಟಹಬ್ಬ ಆಚರಣೆ

    ಉಡುಪಿ: ಕೊಲ್ಲೂರಮ್ಮನ ಮುಂದೆ ಸಂಗೀತ ಸೇವೆ ನೀಡಿ ಗಾನ ಗಂಧರ್ವ -ಸಂಗೀತ ಮಾಂತ್ರಿಕ ಕೆ.ಜೆ.ಯೇಸುದಾಸ್ ತನ್ನ 78 ನೇ ಹುಟ್ಟುಹಬ್ಬವನ್ನು ಧಾರ್ಮಿಕವಾಗಿ ಆಚರಿಸಿಕೊಂಡರು.

    ಎಪ್ಪತ್ತೆಂಟನೇ ವಸಂತಕ್ಕೆ ಕಾಲಿಟ್ಟ ಯೇಸುದಾಸ್, ಪ್ರತಿ ವರ್ಷ ತನ್ನ ಹುಟ್ಟುಹಬ್ಬವನ್ನು ಉಡುಪಿ ಜಿಲ್ಲೆಯ ಕೊಲ್ಲೂರಿನಲ್ಲಿ ಆಚರಿಸುತ್ತಾರೆ. ತಾಯಿ ಮೂಕಾಂಬಿಕೆಯ ದರ್ಶನ ಮಾಡಿದ ಅವರು, ಕುಟುಂಬ ಸಮೇತರಾಗಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.

    ದೇವಸ್ಥಾನದ ಪ್ರಾಂಗಣದಲ್ಲಿರುವ ಎಲ್ಲಾ ಗುಡಿಗಳಿಗೆ ಭೇಟಿಕೊಟ್ಟು ಅರ್ಚನೆಯನ್ನು ನೆರವೇರಿಸಿದರು. ಬಳಿಕ ಯಜ್ಞ ಶಾಲೆಯಲ್ಲಿ ಚಂಡಿಕಾ ಹೋಮದಲ್ಲಿ ಭಾಗಿಯಾದರು. ದೇವಿ ಮೂಕಾಂಬಿಕೆಯ ಸನ್ನಿಧಿಯ ಒಳ ಭಾಗದಲ್ಲಿ ಯೇಸುದಾಸ್ ಸಂಗೀತ ಸೇವೆಯನ್ನು ದೇವಿಗೆ ಅರ್ಪಿಸಿದರು. ಪ್ರತಿ ವರ್ಷದಂತೆ ದೇವಸ್ಥಾನದ ಪ್ರಾಂಗಣದಲ್ಲಿ ಸಂಗೀತ ಸೇವೆ ನೀಡುವ ಮೂಲಕ ದೇವರ ನಾಮ ಹಾಡಿದರು.

    ಕೊಲ್ಲೂರು ಮೂಕಾಂಬಿಕೆಯ ಕ್ಷೇತ್ರಕ್ಕೆ ಬಂದಿದ್ದ ಸಾವಿರಾರು ಮಂದಿ ದೇವರ ದರ್ಶನದ ಜೊತೆ ಸಂಗೀತ ಕ್ಷೇತ್ರದ ಮಹಾನ್ ಕಲಾವಿದರ ಹುಟ್ಟುಹಬ್ಬದಲ್ಲಿ ಭಾಗಿಯಾದರು. ನೆಚ್ಚಿನ ಕಲಾವಿದನಿಗೆ ಶುಭಾಶಯಗಳನ್ನು ಕೋರಿದರು.

  • ಸರ್ಕಾರಿ ದುಡ್ಡಿನಲ್ಲಿ ಕೈ ಸಮಾವೇಶ ಟೀಕೆಗೆ ಮೋದಿ ಉದಾಹರಣೆ ಕೊಟ್ಟು ತಿರುಗೇಟು ಕೊಟ್ಟ ಸಿಎಂ

    ಸರ್ಕಾರಿ ದುಡ್ಡಿನಲ್ಲಿ ಕೈ ಸಮಾವೇಶ ಟೀಕೆಗೆ ಮೋದಿ ಉದಾಹರಣೆ ಕೊಟ್ಟು ತಿರುಗೇಟು ಕೊಟ್ಟ ಸಿಎಂ

    ಉಡುಪಿ: ಸರ್ಕಾರಿ ದುಡ್ಡಿನಲ್ಲಿ ಸಾಧನಾ ಸಮಾವೇಶದ ಹೆಸರಿನಲ್ಲಿ ಕಾಂಗ್ರೆಸ್ ಸಮಾವೇಶ ಮಾಡುತ್ತಿದ್ದಾರೆ ಎನ್ನುವ ಬಿಜೆಪಿ ಆರೋಪಕ್ಕೆ ಸಿಎಂ ಸಿದ್ದರಾಮಯ್ಯ, ಪ್ರಧಾನಿ ನರೇಂದ್ರ ಮೋದಿ ವಿದೇಶದಲ್ಲಿ ಯಾರ ದುಡ್ಡಲ್ಲಿ ಸುತ್ತುತ್ತಾರೆ ಎಂದು ಪ್ರಶ್ನಿಸುವ ಮೂಲಕ ತಿರುಗೇಟು ನೀಡಿದ್ದಾರೆ.

    ಸರ್ಕಾರಿ ಕಾರ್ಯಕ್ರಮದ ಹೆಸರಲ್ಲಿ ಕಾಂಗ್ರೆಸ್ ಸಮಾವೇಶ ಮಾಡುತ್ತಿದ್ದೀರಿ ಎನ್ನುವ ಆರೋಪ ನಿಮ್ಮ ಮೇಲೆ ಬಂದಿದೆ ಎಂದು ಮಾಧ್ಯಮಗಳು ಉಪ್ಪೂರಿನಲ್ಲಿ ಪ್ರಶ್ನೆ ಮಾಡಿದ್ದಕ್ಕೆ, ನರೇಂದ್ರ ಮೋದಿ ವಿದೇಶದಲ್ಲಿ ಯಾರ ದುಡ್ಡಲ್ಲಿ ಸುತ್ತುತ್ತಾರೆ? ಮೋದಿ ಸ್ವಂತ ದುಡ್ಡಲ್ಲಿ ಓಡಾಡ್ತಾರಾ? ನಾವು ಸರ್ಕಾರಿ ಕಾರ್ಯಕ್ರಮಕ್ಕೆ ಓಡಾಟ ಮಾಡ್ತೇವೆ ಎಂದು ಹೇಳಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಬೂಟಾಟಿಕೆಗೆ ಖಾವಿ ಹಾಕ್ತಾನೆ, ಯೋಗಿ ಯಾವತ್ತಾದ್ರೂ ಸಗಣಿ ಹೊತ್ತಿದ್ದಾನಾ: ಸಿಎಂ ಸಿದ್ದರಾಮಯ್ಯ

    ಅಮಿತ್ ಶಾಗೆ ಗಢಗಢ: ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾಗೆ ಸೋಲಿನ ಭಯ ಶುರುವಾಗಿದೆ. ಉಪಚುನಾವಣೆಯಲ್ಲೇ ರಾಜ್ಯದ ದಿಕ್ಸೂಚಿ ಬಗ್ಗೆ ಅವರಿಗೆ ಅರಿವಾಗಿದೆ. ನಮ್ಮ ರಾಜ್ಯದಲ್ಲಿ ಅಮಿತ್ ಶಾ ಯಾವ ತಂತ್ರವೂ- ರಣತಂತ್ರವೂ ನಡೆಯಲ್ಲ. ಅಮಿತ್ ಶಾ ಎಷ್ಟು ಬೇಕಾದ್ರು ಗೌಪ್ಯ ಸಭೆ ಮಾಡಲಿ. ಅಭ್ಯರ್ಥಿಗಳ ಬಗ್ಗೆ ಚರ್ಚೆ ನಡೆಸಲಿ. ಸೂಕ್ತ ಸಮಯದಲ್ಲಿ ನಮ್ಮ ಅಭ್ಯರ್ಥಿ ಪಟ್ಟಿ ಬಿಡುಗಡೆ ಮಾಡುತ್ತೇವೆ. ಕರ್ನಾಟಕದ ಮತದಾರ ಕಾಂಗ್ರೆಸ್ ಪಕ್ಷ ಗೆಲ್ಲಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಆಪ್ತರ ಮೇಲೆ ಐಟಿ ದಾಳಿ: ನನ್ನ ಆತ್ಮೀಯರನ್ನು, ಆಪ್ತರನ್ನು ಹುಡುಕಿ ಹುಡುಕಿ ಆದಾಯ ತೆರಿಗೆ ಇಲಾಖೆಯವರು ದಾಳಿ ಮಾಡ್ತಿದ್ದಾರೆ. ಮೊನ್ನೆ ಲೋಹಿಯಾ ಸಂಘದ ಮುಖಂಡ ಶಿವಣ್ಣ ಮನೆಗೆ ಕೂಡಾ ದುರುದ್ದೇಶದಿಂದ ಐಟಿ ದಾಳಿಯಾಗಿದೆ. ಜನ ಎಲ್ಲವನ್ನು ನೋಡಿಕೊಳ್ತಾರೆ ಎಂದರು.   ಇದನ್ನೂ ಓದಿ:ಮೋದಿಯ ಒಂದು ಫೋನ್ ಕರೆಗೆ ಬಾಂಬ್ ದಾಳಿ ನಿಲ್ಲಿಸಿದ್ದ ಸೌದಿ ದೊರೆ!

    ದೇವೇಗೌಡರಿಗೂ ಟಾಂಗ್: ಇದೇ ವೇಳೆ 2018 ವಿಧಾನಸಭಾ ಚುನಾವಣೆಯಲ್ಲಿ ನಾವೇನು ಮಾಡ್ತೇವೆ ನೋಡಿ ಅಂತ ಸಿಎಂಗೆ ಟಾಂಗ್ ಕೊಟ್ಟಿದ್ದ ಮಾಜಿ ಪ್ರಧಾನಿ ದೇವೇಗೌಡರಿಗೆ ತಿರುಗೇಟು ಕೊಟ್ಟ ಅವರು, ದೇವೇಗೌಡರನ್ನು ಬಹಳ ವರ್ಷದಿಂದ ನೋಡಿಕೊಂಡು ಬಂದಿದ್ದೇನೆ. ದೇವೇಗೌಡರು ಚುನಾವಣೆಯಲ್ಲಿ ನೋಡಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ. ಪದೇ ಪದೇ ಅವರು ತೋರಿಸೋದಕ್ಕೆ ಏನಿದೆ? ಅವರ ಜೊತೆಗಿದ್ದೂ ಬಹಳ ನೋಡಿದ್ದೇನೆ. ವಿರೋಧ ಪಕ್ಷದಲ್ಲಿದ್ದೂ ಎಲ್ಲಾ ನೋಡಿದ್ದೇನೆ. ಇನ್ನು ಗೌಡರದ್ದು ನೋಡುವಂತಹದ್ದು ಏನಿಲ್ಲ. ಜೆಡಿಸ್ ಎಲ್ಲೂ ಗೆಲ್ಲಲ್ಲ ಎಂದು ಹೇಳಿದರು.   ಇದನ್ನೂ ಓದಿ: 3 ವರ್ಷ, 27 ವಿದೇಶ ಪ್ರವಾಸ, 44 ದೇಶ: ಮೋದಿಯ ವಿದೇಶ ಪ್ರಯಾಣಕ್ಕೆ ಎಷ್ಟು ವೆಚ್ಚವಾಗಿದೆ? ಇಲ್ಲಿದೆ ಪೂರ್ಣ ಮಾಹಿತಿ

    ಸುರೇಶ್ ಕುಮಾರ್ ಟೀಕೆ: ಸರ್ಕಾರಿ ಖರ್ಚಿನಲ್ಲಿ ರಾಜ್ಯದ ಮುಖ್ಯಮಂತ್ರಿಗಳು ನಡೆಸುತ್ತಿರುವ “ಸಾಧನಾ ಸಮಾವೇಶ” ಕೇವಲ ರಾಜಕೀಯ ವಿರೋಧಿಗಳನ್ನು ಯದ್ವಾತದ್ವಾ ಬೈಯುವ ಅಸಹ್ಯ ಸಮಾವೇಶಗಳಾಗಿಬಿಟ್ಟಿದೆ ಎಂದು ಮಾಜಿ ಮುಖಂಡ, ಬೆಂಗಳೂರಿನ ರಾಜಾಜಿನಗರದ ಶಾಸಕ ಸುರೇಶ್ ಕುಮಾರ್ ಫೇಸ್‍ಬುಕ್ ನಲ್ಲಿ ಜನವರಿ 5 ರಂದು ಬರೆದುಕೊಂಡಿದ್ದರು.

    ಹಾಸನ ಜಿಲ್ಲೆಯ ಅರಸೀಕೆರೆ ಮತ್ತು ಬೇಲೂರು ಪಟ್ಟಣಗಳಲ್ಲಿ ನಡೆಸಿದ ಸರಕಾರಿ ಖರ್ಚಿನ ಸಾಧನಾ ಸಮಾವೇಶ ಗಳಲ್ಲಿ ತಮ್ಮ ಭಾಷಣದುದ್ದಕ್ಕೂ ಬಿಜೆಪಿ ನಾಯಕರನ್ನು ಹಿಗ್ಗಾಮುಗ್ಗಾ ಟೀಕಿಸಿದ ಸಿದ್ದರಾಮಯ್ಯನವರ ಭಾಷಣದಲ್ಲಿ ವಿರೋಧಿಗಳ ಬಗ್ಗೆ ಕೇವಲ ಏಕವಚನದ ಅಟ್ಟಹಾಸದ ಮಾತುಗಳೇ ಎದ್ದು ಕಾಣುತ್ತಿತ್ತು. ವಿಧಾನಸಭೆಯ ಅಧಿವೇಶನದಲ್ಲಿ ಸದಸ್ಯರಿಗೆ ಕನ್ನಡದ ವ್ಯಾಕರಣದ ಪಾಠ ಹೇಳುವ `ಸಂಧಿ’ ಎಂದರೆ ಏನು ಎಂದು ವಿವರವಾಗಿ ತಿಳಿಸುವ ಈ ಮೇಸ್ಟ್ರಿಗೆ ಪಾಪ “ಏಕವಚನ, ಬಹುವಚನ” ಗಳ ನಡುವಿನ ವ್ಯತ್ಯಾಸವೇ ಗೊತ್ತಿಲ್ಲ. ಅಷ್ಟೇ ಅಲ್ಲ. ಜೆಡಿಎಸ್ ನಾಯಕರ ವಿರುದ್ಧವೂ ಸರ್ಕಾರಿ ಖರ್ಚಿನಲ್ಲಿ ಬೈದಿದ್ದಾರೆ. ಅದಕ್ಕೋಸ್ಕರ ಬೇಲೂರಿನಲ್ಲಿ ಜೆಡಿಎಸ್ ಜನಪ್ರತಿನಿಧಿಗಳು ಈ ಉದ್ಧಟತನದ ವಿರುದ್ಧ ಪ್ರತಿಭಟಿಸಿ, ಧಿಕ್ಕಾರ ಕೂಗಿ ಸಮಾವೇಶದಿಂದ ಹೊರಬಂದಿದ್ದಾರೆ. ಅಂದ ಹಾಗೆ ಬಿಜೆಪಿ ಅಧ್ಯಕ್ಷ ಅಮಿತ್ ಶಾಗೆ `ಮಾನ ಮರ್ಯಾದೆ’ ಇಲ್ಲ. ಎಂದಿರುವ ಸಿದ್ದರಾಮಯ್ಯನವರಿಗೆ ಸರ್ಕಾರಿ ಕಾರ್ಯಕ್ರಮಗಳನ್ನು ಈ ರೀತಿ ಏಕ ವಚನದ ಮೂಲಕ ದುರುಪಯೋಗ ಪಡಿಸಿಕೊಂಡ ಮೇಲೂ “ಮಾನ ಮರ್ಯಾದೆ ಇದೆ” ಎಂದು ನಾವು ಭಾವಿಸಬೇಕೆ ಎಂದು ಬರೆದುಕೊಂಡಿದ್ದರು.

    ಉಡುಪಿಯ ಬೈಂದೂರಿನಲ್ಲಿ ಸೋಮವಾರ ಕಾಂಗ್ರೆಸ್ ವತಿಯಿಂದ ಸಾಧನಾ ಸಮಾವೇಶ ನಡೆದಿತ್ತು. ಈ ಸಮಾವೇಶಕ್ಕೆ ಕೊಲ್ಲೂರು ದೇವಸ್ಥಾನದಿಂದ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಲಾಗಿತ್ತು. ಈ ವಾಚಾರ ಮಾಧ್ಯಮದಲ್ಲಿ ಬಿತ್ತರವಾಗುತ್ತಿದ್ದಂತೆಯೇ ಕಲ್ಲಡ್ಕ ಶಾಲೆಗೆ ದೇವಸ್ಥಾನದ ಊಟ ರದ್ದು ಮಾಡಿದ್ದಾರೆ. ಆದ್ರೆ ಸಿಎಂ ಕಾರ್ಯಕ್ರಮಕ್ಕೆ ದೇವಸ್ಥಾನದಿಂದ ಊಟ ತರಿಸಿದ್ದಾರೆಂದು ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಆದ್ರೆ ಈ ಕುರಿತು ದೇವಸ್ಥಾನದ ಆಡಳಿತ ಮಂಡಳಿ, “ದೇವಸ್ಥಾನದ ಊಟವನ್ನು ಸಮಾವೇಶಕ್ಕೆ ನೀಡಬಹುದು. ಇದು ದೇವಸ್ಥಾನದ ಪ್ರಸಾದ. ಸರ್ಕಾರಿ ಕಾರ್ಯಕ್ರಮಕ್ಕೆ ನೀಡಲು ಅವಕಾಶ ಇದೆ. ಆದಾಗ್ಯೂ ಹೊರೆಯಾಗಬಾರದೆಂದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು ಎರಡು ದಿನದ ಹಿಂದೆಯೇ 1 ಲಕ್ಷ ರೂಪಾಯಿ ಚೆಕ್ ನೀಡಿದ್ದಾರೆ” ಎಂದು ಸ್ಪಷ್ಟಪಡಿಸಿತ್ತು.ಇದನ್ನೂ ಓದಿ:ಬಿಜೆಪಿಯವರನ್ನ ಅಣಕಿಸಲು ಮೋದಿ ಸ್ಟೈಲಲ್ಲಿ ಭಾಷಣ ಮಾಡಿದ ಸಿಎಂ

    ಈ ಕುರಿತು ಸಚಿವ ಡಿವಿ ಸದಾನಂದ ಗೌಡರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಕಿಡಿಕಾರಿದ್ದು, ಭಕ್ತಾದಿಗಳು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಹುಂಡಿಗೆ ಹಾಕಿದ ಹಣದಿಂದ ಕಲ್ಲಡ್ಕದ ಶ್ರೀರಾಮ ವಿದ್ಯಾಲಯದ ಬಡ ಮಕ್ಕಳಿಗೆ ಬರುತ್ತಿದ್ದ ಮಧ್ಯಾಹ್ನದ ಬಿಸಿಯೂಟ ಕಿತ್ತುಕೊಂಡ ಕಾಂಗ್ರೆಸ್ ಸರ್ಕಾರ, ಅದೇ ದುಡ್ಡಲ್ಲಿ ರಾಜಕೀಯ ಕಾರ್ಯಕ್ರಮದ ಊಟಕ್ಕೆ ಉಪಯೋಗಿಸಿದ್ದು ವಿಪರ್ಯಾಸ. ಅದಕ್ಕೆ ಸಮರ್ಥನೆ ಬೇರೆ ಕೇಡು ಅಂತ ಖಾರವಾಗಿ ಪ್ರತಿಕ್ರಿಯಿಸಿದ್ದರು.

  • ಸಾಧನಾ ಸಮಾವೇಶಕ್ಕೆ ಕೊಲ್ಲೂರಿನಿಂದ ಊಟ- ಆಡಳಿತ ಮಂಡಳಿ ವಿರುದ್ಧ ಡಿವಿಎಸ್ ಕಿಡಿ

    ಸಾಧನಾ ಸಮಾವೇಶಕ್ಕೆ ಕೊಲ್ಲೂರಿನಿಂದ ಊಟ- ಆಡಳಿತ ಮಂಡಳಿ ವಿರುದ್ಧ ಡಿವಿಎಸ್ ಕಿಡಿ

    ಉಡುಪಿ: ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಆಡಳಿತ ಮಂಡಳಿ ವಿರುದ್ಧ ಕೇಂದ್ರ ಸಚಿವ ಡಿವಿ ಸದಾನಂದ ಗೌಡ ಕಿಡಿಕಾರಿದ್ದಾರೆ.

    ಈ ಬಗ್ಗೆ ಟ್ವಟ್ಟರ್ ನಲ್ಲಿ ಪ್ರತಿಕ್ರಿಯಿಸಿರೋ ಅವರು, ಭಕ್ತಾದಿಗಳು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಹುಂಡಿಗೆ ಹಾಕಿದ ಹಣದಿಂದ ಕಲ್ಲಡ್ಕದ ಶ್ರೀರಾಮ ವಿದ್ಯಾಲಯದ ಬಡ ಮಕ್ಕಳಿಗೆ ಬರುತ್ತಿದ್ದ ಮಧ್ಯಾಹ್ನದ ಬಿಸಿಯೂಟ ಕಿತ್ತುಕೊಂಡ ಕಾಂಗ್ರೆಸ್ ಸರ್ಕಾರ, ಅದೇ ದುಡ್ಡಲ್ಲಿ ರಾಜಕೀಯ ಕಾರ್ಯಕ್ರಮದ ಊಟಕ್ಕೆ ಉಪಯೋಗಿಸಿದ್ದು ವಿಪರ್ಯಾಸ. ಅದಕ್ಕೆ ಸಮರ್ಥನೆ ಬೇರೆ ಕೇಡು ಅಂತ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ: ಅಂದು ಕಲ್ಲಡ್ಕ ಶಾಲೆ ಮಕ್ಕಳಿಗೆ ಬಿಸಿಯೂಟ ಕಟ್- ಈಗ ಕಾಂಗ್ರೆಸ್ ಸಮಾವೇಶಕ್ಕೆ ಕೊಲ್ಲೂರು ದೇಗುಲದ ಆಹಾರ, ಜನರ ಆಕ್ರೋಶ

    ಜಿಲ್ಲೆಯ ಬೈಂದೂರಿನಲ್ಲಿ ಸೋಮವಾರ ನಡೆದಿದ್ದ ಸಾಧನಾ ಸಮಾವೇಶಕ್ಕೆ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಿಂದ ಊಟದ ವ್ಯವಸ್ಥೆ ಮಾಡಲಾಗಿತ್ತು. ಇದಕ್ಕೆ ರಾಜ್ಯಾದ್ಯಂತ ಭಾರೀ ವಿವಾದ ವ್ಯಕ್ತವಾಗಿದ್ದು, ಈ ಸಂಬಂಧ ದೇವಸ್ಥಾನದ ಆಡಳಿತ ಮಂಡಳಿ ಸ್ಪಷ್ಟನೆ ನೀಡಿತ್ತು. ಇದನ್ನೂ ಓದಿ: ಊಟ ಎಲ್ಲಿಂದ ಬಂದ್ರೂ ಊಟನೇ ಅಲ್ವಾ: ಸಿಎಂ ಸಮರ್ಥನೆ

    ದೇವಸ್ಥಾನದ ಊಟವನ್ನು ಸಮಾವೇಶಕ್ಕೆ ನೀಡಬಹುದು. ಇದು ದೇವಸ್ಥಾನದ ಪ್ರಸಾದ. ಸರ್ಕಾರಿ ಕಾರ್ಯಕ್ರಮಕ್ಕೆ ನೀಡಲು ಅವಕಾಶ ಇದೆ. ಆದಾಗ್ಯೂ ಹೊರೆಯಾಗಬಾರದೆಂದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು ಎರಡು ದಿನದ ಹಿಂದೆಯೇ 1 ಲಕ್ಷ ರೂಪಾಯಿ ಚೆಕ್ ನೀಡಿದ್ದಾರೆ ಎಂದು ಸ್ಪಷ್ಟಪಡಿಸಿತ್ತು. ಇದನ್ನೂ ಓದಿ: ಬೂಟಾಟಿಕೆಗೆ ಖಾವಿ ಹಾಕ್ತಾನೆ, ಯೋಗಿ ಯಾವತ್ತಾದ್ರೂ ಸಗಣಿ ಹೊತ್ತಿದ್ದಾನಾ: ಸಿಎಂ ಸಿದ್ದರಾಮಯ್ಯ

     

     

     

     

  • ಶ್ರೀಲಂಕಾ ಪ್ರಧಾನಿ ದಿಢೀರ್ ಕೊಲ್ಲೂರಿಗೆ ಭೇಟಿ ನೀಡಿದ್ದು ಯಾಕೆ?

    ಶ್ರೀಲಂಕಾ ಪ್ರಧಾನಿ ದಿಢೀರ್ ಕೊಲ್ಲೂರಿಗೆ ಭೇಟಿ ನೀಡಿದ್ದು ಯಾಕೆ?

    ಉಡುಪಿ: ಇಲ್ಲಿನ ಕೊಲ್ಲೂರು ಮೂಕಾಂಬಿಕಾ ಸನ್ನಿಧಿಗೆ ಶ್ರೀಲಂಕಾ ಪ್ರಧಾನಿ ಕುಟುಂಬ ಸಮೇತರಾಗಿ ಭೇಟಿಕೊಟ್ಟು ವಿಶೇಷ ಪೂಜೆ ಸಲ್ಲಿಸಿದರು. ಈ ಮೂಲಕ ತನ್ನ ಪತ್ನಿಯ ಬಹು ವರ್ಷದ ಹರಕೆ ತೀರಿಸಿದ್ದಾರೆ.

    ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕೊಲ್ಲೂರಿಗೆ ಶ್ರೀಲಂಕಾ ಪ್ರಧಾನಿ ರೆನಿಲ್ ವಿಕ್ರಮ ಸಿಂಘೆ ಪತ್ನಿ ಡಾ. ಮೈತ್ರಿ ಜೊತೆ ಆಗಮಿಸಿದರು. ಎರಡು ತಿಂಗಳಿಂದ ಕೊಲ್ಲೂರಿಗೆ ಬರಲು ಪ್ರಯತ್ನಿಸುತ್ತಿದ್ದ ಲಂಕಾ ಪ್ರಧಾನಿಗೆ ಇಂದು ಮೂಕಾಂಬಿಕೆಯ ಸನ್ನಿಧಿಗೆ ಬರಲು ಕಾಲ ಕೂಡಿ ಬಂದಿದೆ.

    ಶ್ರೀಲಂಕಾದಿಂದ ಬೆಂಗಳೂರಿಗೆ ಆಗಮಿಸಿದ ಪ್ರಧಾನಿ ಅಲ್ಲಿಂದ ಮಂಗಳೂರು ಮೂಲಕ ಅರೆಶೀರೂರಿಗೆ ಹೆಲಿಕಾಪ್ಟರ್ ನಲ್ಲಿ ಬಂದಿಳಿದರು. ಬಳಿಕ ರಸ್ತೆ ಮಾರ್ಗವಾಗಿ ಆಗಮಿಸಿದ ಪ್ರಧಾನಿ ವಿಕ್ರಮಸಿಂಘೆಯವರನ್ನು ಕೊಲ್ಲೂರು ಆಡಳಿತ ಮಂಡಳಿ ಅದ್ಧೂರಿಯಾಗಿ ಸ್ವಾಗತಿಸಿತು. ದೇವಸ್ಥಾನದ ಮುಂಭಾಗದಲ್ಲಿ ಕಾಲು ತೊಳೆದು ದೇವಸ್ಥಾನ ಮುಖ್ಯದ್ವಾರದ ಮೂಲಕ ಬಲಗಾಲಿಟ್ಟು ಪ್ರವೇಶಿಸಿದರು.

    ಇದನ್ನೂ ಓದಿ: ಶ್ರೀಲಂಕಾ ಪ್ರಧಾನಿಯ ಕೊಲ್ಲೂರು ಭೇಟಿ ರದ್ದಾಗಿದ್ದು ಯಾಕೆ?

    ಮಂತ್ರ ಪಠಣೆ ಮೂಲಕ ದೇವಾಲಯದ ಪ್ರಮುಖ ಅರ್ಚಕರು ಪ್ರಧಾನಿ ಮತ್ತು ಪತ್ನಿಯನ್ನು ಒಳಗೆ ಕರೆಸಿಕೊಂಡರು. ಗರುಡಗಂಭಕ್ಕೆ ನಮಸ್ಕರಿಸಿ – ಮೂಕಾಂಬಿಕೆಯ ದರ್ಶನ ಮಾಡಿದ ಪ್ರಧಾನಿ, ಚಂಡಿಕಾ ಹೋಮ ಸೇರಿದಂತೆ ದೇವಸ್ಥಾನದ ಪ್ರಾಂಗಣದಲ್ಲಿರುವ ಎಲ್ಲಾ ಗುಡಿಗಳಿಗೆ ಭೇಟಿಕೊಟ್ಟು ಅರ್ಚನೆ ಸಲ್ಲಿಕೆ ಮಾಡಿದರು.

    ಪ್ರಧಾನಿ ಪತ್ನಿ ಡಾ. ಮೈತ್ರಿ ಕೇರಳ ಮೂಲದವರು. ಕೊಲ್ಲೂರಿನಲ್ಲಿ ಡಾ. ಮೈತ್ರಿಯ ಹಿಂದಿನ ಹರಕೆ ತೀರಿಸಲು ಬಾಕಿಯಿತ್ತು. ಹೀಗಾಗಿ ಆಗಸ್ಟ್ 26 ಮತ್ತು 27ರಂದು ಕೊಲ್ಲೂರಿಗೆ ಬರಲು ಯತ್ನಿಸಿದ್ದರು. ಆದ್ರೆ ಸಿಕ್ಕಾಪಟ್ಟೆ ಮಳೆ ಮತ್ತು ಮೋಡ ಕವಿದ ಕಾರಣ ಕೊಲ್ಲೂರು ಭೇಟಿ ರದ್ಧಾಗಿತ್ತು. ಇದೀಗ ಕೊಲ್ಲೂರು ಬಂದು ದೇವಿ ದರ್ಶನ ಮಾಡಿ ಹರಕೆ ತೀರಿಸುವ ಬಯಕೆ ಪೂರ್ಣಗೊಂಡಿದೆ.

  • ಕೊಲ್ಲೂರು ಮೂಕಾಂಬಿಕೆಯ ಕ್ಷೇತ್ರಕ್ಕೆ ರಾಜಸ್ಥಾನ ಸಿಎಂ ವಸುಂಧರಾ ರಾಜೆ ಭೇಟಿ- ಮೂರೂವೆರೆ ಗಂಟೆ ಭಕ್ತರಿಗಿಲ್ಲ ಪ್ರವೇಶ

    ಕೊಲ್ಲೂರು ಮೂಕಾಂಬಿಕೆಯ ಕ್ಷೇತ್ರಕ್ಕೆ ರಾಜಸ್ಥಾನ ಸಿಎಂ ವಸುಂಧರಾ ರಾಜೆ ಭೇಟಿ- ಮೂರೂವೆರೆ ಗಂಟೆ ಭಕ್ತರಿಗಿಲ್ಲ ಪ್ರವೇಶ

    ಉಡುಪಿ: ಕೊಲ್ಲೂರು ಮೂಕಾಂಬಿಕೆಯ ಕ್ಷೇತ್ರಕ್ಕೆ ಇಂದು ಬೆಳಗ್ಗೆ ಭೇಟಿಕೊಡುವ ಆಲೋಚನೆ ನಿಮ್ಮದಾಗಿದ್ದರೆ ಪ್ಲ್ಯಾನ್ ನಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಳ್ಳೋದು ಒಳ್ಳೆಯದು. ಯಾಕಂದ್ರೆ ಕೊಲ್ಲೂರಿಗೆ ರಾಜಸ್ಥಾನ ಮುಖ್ಯಮಂತ್ರಿ ವಸುಂಧರಾ ರಾಜೆ ಬರುತ್ತಿದ್ದಾರೆ. ರಾಜಸ್ಥಾನ ಸಿಎಂ ಆಗಮನ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಮೂರೂವರೆ ಗಂಟೆ ದೇವಸ್ಥಾನ ಪ್ರವೇಶ ನಿರ್ಬಂಧಿಸಲಾಗಿದೆ.

    ಬೆಳಗ್ಗೆ 10 ರಿಂದ ಮಧ್ಯಾಹ್ನ 1.30 ರವರೆಗೆ ಭಕ್ತರಿಗೆ ದೇವಸ್ಥಾನದ ಪ್ರವೇಶ ನಿರ್ಬಂಧಿಸಿದೆ. ಕುಂದಾಪುರದ ಕೊಲ್ಲೂರು ಮೂಕಾಂಬಿಕ ದೇವಸ್ಥಾನಕ್ಕೆ ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ ರಾಜಸ್ಥಾನ ಸಿಎಂ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿದ್ದಾರೆ. ಬಳಿಕ ಅರೆ ಶೀರೂರಿಗೆ ಹೆಲಿಕಾಪ್ಟರ್ ಮೂಲಕ ಆಗಮಿಸ್ತಾರೆ. ಅಲ್ಲಿಂದ ರಸ್ತೆ ಮೂಲಕ ದೇವಸ್ಥಾನಕ್ಕೆ ತೆರಳಲಿದ್ದಾರೆ. ನಂತ್ರ ಮೂಕಾಂಬಿಕೆಗೆ ವಿಶೇಷ ಪೂಜೆ ಸಲ್ಲಿಸಲಿರುವ ವಸುಂಧರಾ ರಾಜೆ, ದೇವಿಗೆ ವಿಶೇಷ ಸೇವೆ, ಹೋಮ ಮಾಡಿಸಲಿದ್ದಾರೆ ಎನ್ನಲಾಗಿದೆ.

    ರಾಜಸ್ಥಾನ ಸಿಎಂ ಭೇಟಿಯ ಹಿನ್ನೆಲೆಯಲ್ಲಿ ಭದ್ರತಾ ದೃಷ್ಟಿಯಿಂದ ಸಾರ್ವಜನಿಕರಿಗೆ ದೇವಸ್ಥಾನದ ಪ್ರವೇಶ ನಿರ್ಬಂಧಿಸಲಾಗಿದೆ ಎಂದು ಪೊಲೀಸರು ಮತ್ತು ದೇವಾಲಯದ ಆಡಳಿತ ಮಂಡಳಿ ತಿಳಿಸಿದೆ.