ಉಡುಪಿ: ಸ್ಯಾಂಡಲ್‍ವುಡ್ ನಟಿ ಗುಳಿಕೆನ್ನೆ ಚೆಲುವೆ ರಚಿತಾ ರಾಮ್ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿ, ದೇವಿಯ ಮುಂದೆ ನಿಂತು ವರವೊಂದನ್ನು ಬೇಡಿಕೊಂಡಿದ್ದಾರಂತೆ.
ಶೃಂಗೇರಿ ಶಾರದಾಂಬೆಯ ದರ್ಶನ ಪಡೆದ ಬಳಿಕ ರಚಿತಾ ರಾಮ್ ಕೊಲ್ಲೂರು ಕ್ಷೇತ್ರಕ್ಕೆ ಭೇಟಿ ನೀಡಿದರು. ಮೂಕಾಂಬಿಕೆಗೆ ವಿಶೇಷ ಸೇವೆ ಸಲ್ಲಿಸಿದರು. ಈ ವೇಳೆ ದೇವಸ್ಥಾನದ ಆಡಳಿತ ಮಂಡಳಿ ರಚಿತಾ ರಾಮ್ ಅವರಿಗೆ ಫಲ ಪ್ರಸಾದಗಳನ್ನು ನೀಡಿ ಗೌರವ ಸಲ್ಲಿಸಿತು.
ರಚಿತಾ ರಾಮ್ ಅವರು ಗರ್ಭಗುಡಿಯ ಮುಂದೆ ದೇವಿಯಲ್ಲಿ ಕೆಲಕಾಲ ನಿಂತು ಬೇಡಿಕೊಂಡಿದ್ದಾರಂತೆ. ಅದೇನು ಬೇಡಿಕೆ ಅಂತ ಅರ್ಚಕರಲ್ಲೂ ಹೇಳದ ರಚಿತಾ, ನನ್ನ ಮನಸ್ಸಿನ ಇಚ್ಛೆ ಪೂರೈಸಮ್ಮಾ ಕೊಲ್ಲೂರಮ್ಮಾ ಅಂತ ಕೋರಿಕೊಂಡಿದ್ದಾರೆ. ನಿಮ್ಮ ಆಕಾಂಕ್ಷೆ ಈಡೇರಲಿ ಎಂದು ಕೊಲ್ಲೂರಿನ ಅರ್ಚಕರು ಪ್ರಸಾದ ಕೊಟ್ಟಿದ್ದಾರೆ. ಇದನ್ನೂ ಓದಿ: ಟಿ ರಚಿತಾ ರಾಮ್ ಶೃಂಗೇರಿಗೆ ಭೇಟಿ
ಉಡುಪಿ: ಗಾನ ಗಂಧರ್ವ, ಪದ್ಮಭೂಷಣ ಡಾ.ಜೇಸುದಾಸ್ ಅವರು ತಮ್ಮ ಹುಟ್ಟುಹಬ್ಬವನ್ನು ಉಡುಪಿಯಲ್ಲಿ ಆಚರಿಸಿಕೊಂಡರು. ಕೊಲ್ಲೂರು ಮೂಕಾಂಬಿಕೆಯ ಸನ್ನಿಧಿಯಲ್ಲಿ ದೇವಿಗೆ ವರ್ಷದ ಹರಕೆ ಸಲ್ಲಿಸಿ 81ನೇ ವರ್ಷಕ್ಕೆ ಪದಾರ್ಪಣೆ ಮಾಡಿದರು. ಈ ಬಾರಿ ಕುಟುಂಬದ ಎಲ್ಲಾ ಸದಸ್ಯರನ್ನು ಕರೆತಂದು ದೇವರ ಪೂಜೆ ಹೋಮದಲ್ಲಿ ಸಂಗೀತ ಮಾಂತ್ರಿಕ ಭಾಗಿಯಾದರು.
ಜೇಸುದಾಸ್ ಉಡುಪಿಯ ಕೊಲ್ಲೂರು ಮೂಕಾಂಬಿಕೆಯ ಸನ್ನಿಧಿಯಲ್ಲಿ 80ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ದೇವಸ್ಥಾನಕ್ಕೆ ಆಗಮಿಸಿದ ಅವರು, ಮೊದಲು ಮೂಕಾಂಬಿಕೆಗೆ ಪೂಜೆ ಸಲ್ಲಿಸಿದರು. ನಂತರ ಯಜ್ಞಶಾಲೆಯಲ್ಲಿ ಚಂಡಿಕಾಹೋಮ ನೆರವೇರಿಸಿದರು.
ಜೇಸುದಾಸ್ ಕೊಲ್ಲೂರಿನಲ್ಲಿ ಕಳೆದ 30 ವರ್ಷಗಳಿಂದ ಹುಟ್ಟುಹಬ್ಬ ಆಚರಿಸಿಕೊಂಡು ಬರುತ್ತಿದ್ದಾರೆ. ತಮಗೆ ಮಕ್ಕಳಾಗದ ಸಂಕಟವನ್ನು ಮೂಕಾಂಬಿಕೆಯ ಸನ್ನಿಧಿಯಲ್ಲಿ ಹೇಳಿಕೊಂಡಿದ್ದರು. ನಂತರ ಜೇಸುದಾಸ್ ಅವರಿಗೆ ಮಕ್ಕಳಾದವು. ಹೀಗಾಗಿ ಅವರು ಪ್ರತಿ ವರ್ಷ ಕೊಲ್ಲೂರಿಗೆ ಬಂದು ದೇವರ ಸೇವೆಯೊಂದಿಗೆ ಸಂಗೀತ ಸೇವೆ ನೀಡುತ್ತಾ ಬಂದಿದ್ದಾರೆ. ಸಂಗೀತ ಮಾಂತ್ರಿಕ ಬರುವ ಹಿನ್ನೆಲೆಯಲ್ಲಿ ಭಕ್ತರ, ಸಂಗೀತ ಪ್ರೇಮಿಗಳ ಸಂಖ್ಯೆಯೂ ಕೊಲ್ಲೂರಿನಲ್ಲಿ ಜಾಸ್ತಿಯಾಗಿತ್ತು.
ದೇವಸ್ಥಾನದ ಪ್ರಾಂಗಣ ಸಂಗೀತ ರಸಿಕರಿಂದ ತುಂಬಿಕೊಂಡಿತ್ತು. ಪ್ರತಿ ವರ್ಷ ಕೊಲ್ಲೂರು ಮೂಕಾಂಬಿಕೆಯ ಸನ್ನಿಧಿಯಲ್ಲಿ ಜೇಸುದಾಸ್ ಅಭಿಮಾನಿಗಳು ಸಂಗೀತ ಕಾರ್ಯಕ್ರಮ ಏರ್ಪಡಿಸುತ್ತಾರೆ. ದೇಶಾದ್ಯಂತ ಅಸಂಖ್ಯ ಅಭಿಮಾನಿಗಳನ್ನು ಹೊಂದಿರುವ ಜೇಸುದಾಸ್ ಅವರ ಹುಟ್ಟುಹಬ್ಬವನ್ನು ಅಭಿಮಾನಿಗಳು ಸಂಭ್ರಮದಿಂದ ಆಚರಿಸಿದರು. ಪ್ರತಿ ವರ್ಷ ಸಂಗೀತ ಸೇವೆ ಸಲ್ಲಿಸುತ್ತಿದ್ದ ಜೇಸುದಾಸ್ ಅವರು ಅನಾರೋಗ್ಯದ ಕಾರಣ ದೇವಿಯ ಸನ್ನಿಧಾನದಲ್ಲಿ ಹಾಡಲಿಲ್ಲ. ಎಂದಿನಂತೆ ದೇವಿಗೆ ಪ್ರಾರ್ಥನೆ ಮತ್ತು ಚಂಡಿಕಾಹೋಮ ಸಲ್ಲಿಸಿದರು.
ಗೋವಿಂದ ಅಡಿಗ ಮತ್ತು ಜಯರಾಮ ಮಾತನಾಡಿ, ಜೇಸುದಾಸ್ ಮೂಕಾಂಬಿಕಾ ದೇವಿಯ ಪರಮ ಭಕ್ತ. ಎಷ್ಟೇ ಒತ್ತಡ ಇದ್ದರೂ ಅವರ ಹುಟ್ಟುಹಬ್ಬದ ದಿನ ಕೊಲ್ಲೂರಿಗೆ ಬಂದೇ ಬರುತ್ತಾರೆ. ಅವರ ಲವಲವಿಕೆ, ಈ ವಯಸ್ಸಿಗೂ ಅವರ ಸ್ವರ ಮಾಧುರ್ಯ ದೇವರ ಸಿದ್ಧಿಯಿಂದ ಸಾಧ್ಯವಾಗಿದೆ ಎಂದು ಹೇಳಿದರು.
ಉಡುಪಿ: ಕಂದಾಯ ಸಚಿವ ಆರ್.ಅಶೋಕ್ ಅವರು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಪತ್ನಿ, ಪುತ್ರನ ಜೊತೆ ದೇವಸ್ಥಾನಕ್ಕೆ ಆಗಮಿಸಿದ ಸಚಿವ ಆರ.ಅಶೋಕ್ ದೇವಿ ಮೂಕಾಂಬಿಕೆಯ ದರ್ಶನ ಪಡೆದರು. ಉಡುಪಿ ಜಿಲ್ಲೆ ಬೈಂದೂರು ತಾಲೂಕಿನ ಕೊಲ್ಲೂರು ದೇವಸ್ಥಾನದಲ್ಲಿ ವಿಶೇಷ ಚಂಡಿಕಾಹೋಮ ದಲ್ಲಿ ಭಾಗಿಯಾದರು.
ಕಳೆದ ಎರಡು ದಿನಗಳಿಂದ ಆರ್.ಅಶೋಕ್ ಅವರು ಉಡುಪಿ ಜಿಲ್ಲಾ ಪ್ರವಾಸದಲ್ಲಿದ್ದಾರೆ. ಬುಧವಾರ ಕೃಷ್ಣಮಠಕ್ಕೆ ಭೇಟಿ ನೀಡಿ, ವಿಶೇಷ ಪೂಜೆ ಸೇವೆ ನೆರವೇರಿಸಿದರು. ಪರ್ಯಾಯ ಪಲಿಮಾರು ಸ್ವಾಮೀಜಿಯನ್ನು ಭೇಟಿಯಾಗಿ ಸಮಾಲೋಚನೆ ನಡೆಸಿದರು.
ಚಂಡಿಕಾಹೋಮದ ಪೂರ್ಣಾಹುತಿಯಲ್ಲಿ ಪಾಲ್ಗೊಂಡ ಸಚಿವರ ಕುಟುಂಬಕ್ಕೆ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಆಡಳಿತ ಮಂಡಳಿ ಗೌರವಿಸಿದೆ. ಆರ್.ಅಶೊಕ್ ಭೇಟಿ ಹಿನ್ನೆಲೆಯಲ್ಲಿ ಸ್ಥಳೀಯ ಬಿಜೆಪಿ ನಾಯಕರು ದೇವಸ್ಥಾನಕ್ಕೆ ಭೇಟಿ ನೀಡಿದರು.
ಉಡುಪಿ: ಜಿಲ್ಲೆಯ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ವೆಬ್‍ಸೈಟ್ ನಕಲಿ ಮಾಡಿ ಭಕ್ತರಿಗೆ ಸೇವಾರೂಪದ ಹಣದಲ್ಲಿ ಮೋಸ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲ್ಲೂರಿನ ಹಿರಿಯ ಅರ್ಚಕ ನರಸಿಂಹ ಅಡಿಗ ಸ್ಪಷ್ಟನೆ ಕೊಟ್ಟಿದ್ದಾರೆ.
ಮುಜರಾಯಿ ಇಲಾಖೆಗೆ ದೇವಸ್ಥಾನ ಒಳಪಡುವ ಮೊದಲು ಮತ್ತು ನಂತರ ಅರ್ಚಕ ಮನೆತನ ಶ್ರದ್ಧೆಯಿಂದ ಭಕ್ತಿಯಿಂದ ಮೂಕಾಂಬಿಕೆಯ ಸೇವೆ ಮಾಡುತ್ತಿದ್ದೇವೆ. ನಾವು ಯಾವುದೇ ಕರ್ತವ್ಯ ಲೋಪ ಮಾಡಿಲ್ಲ. ಎಲ್ಲಾ ಅರ್ಚಕರು ಈ ಬೆಳವಣಿಗೆಯನ್ನು ಖಂಡಿಸುತ್ತೇವೆ ಎಂದಿದ್ದಾರೆ. ಇದು ಮಿಥ್ಯಾರೋಪ. ನಮ್ಮ ಚೌಕಟ್ಟಿನಲ್ಲಿ ನಾವು ಪೂಜೆ ಪುನಸ್ಕಾರ ಮಾಡುತ್ತಿದ್ದೇವೆ ಎಂದರು.
ಸಿಬ್ಬಂದಿ ಹಾಗೂ ಸಾರ್ವಜನಿಕರಿಂದ ಲೋಪವಾಗಿದ್ದರೆ ಅವರಿಗೆ ಶಿಕ್ಷೆಯಾಗಲಿ ಎಂದು ಹೇಳಿದ್ದಾರೆ. ಕೊಲ್ಲೂರು ದೇವಾಲಯದ ಅಧಿಕೃತ ವೆಬ್ ಸೈಟ್‍ಅನ್ನು ನಕಲಿ ಮಾಡಿ ಭಕ್ತರಿಂದ ಸೇವೆಯ ಹಣವನ್ನು ಆನ್‍ಲೈನ್ ಮೂಲಕ ಹಾಕಿಸಿಕೊಂಡು ದೇವಸ್ಥಾನಕ್ಕೆ ಸಂಬಧಿಸಿದವರು ಅಕ್ರಮ ಎಸಗಿದ್ದರು. ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ನಡೆಯುತ್ತಿದೆ.
ಉಡುಪಿ: ರಾಜ್ಯ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ರಾಜು ಕುಟುಂಬ ಸಮೇತರಾಗಿ ಕೊಲ್ಲೂರಿಗೆ ಆಗಮಿಸಿ ಚಂಡಿಕಾಹೋಮ ನಡೆಸಿದ್ದಾರೆ. ಪತಿ ನಿವೃತ್ತ ಐಎಎಸ್ ಅಧಿಕಾರಿ ನರಸಿಂಹ ರಾಜು ಜೊತೆಗಿದ್ದರು.
ಬೈಂದೂರು ತಾಲೂಕಿನಲ್ಲಿರುವ ಕೊಲ್ಲೂರು ಮೂಕಾಂಬಿಕಾ ಸನ್ನಿಧಿಗೆ ಪತಿ ಡಿ.ಎನ್ ನರಸಿಂಹರಾಜು ಅವರೊಂದಿಗೆ ಸೋಮವಾರ ಸಂಜೆಯೇ ಬಂದು ತಂಗಿದ್ದರು. ಇಂದು ಮುಂಜಾನೆ ಕೊಲ್ಲೂರು ದೇವಸ್ಥಾನಕ್ಕೆ ಕುಟುಂಬ ಸಮೇತರಾಗಿ ಬಂದು ದೇವರ ದರ್ಶನ, ಪೂಜೆ ಮಾಡಿಸಿದ್ದಾರೆ.
ಬೆಳಗ್ಗೆ ಏಳು ಗಂಟೆಗೆ ಚಂಡಿಕಾ ಹೋಮದ ಸಂಕಲ್ಪದಲ್ಲಿ ಸ್ವತಃ ಡಿಜಿಪಿ ಪಾಲ್ಗೊಂಡರು. ಸಂಪೂರ್ಣ ಚಂಡಿಕಾ ಹೋಮ ನಡೆಯುವವರೆಗೆ ಪತಿ ಪತ್ನಿ ಯಜ್ಞಶಾಲೆಯಲ್ಲೇ ಎಲ್ಲಾ ವಿಧಿ ವಿಧಾನಗಳಲ್ಲಿ ಭಾಗಿಯಾದರು.
ಡಿಜಿಪಿ ನೀಲಮಣಿ ರಾಜು ದಂಪತಿಗೆ ಕೊಲ್ಲೂರು ದೇವಾಲಯದ ಆಡಳಿತ ಮಂಡಳಿ ಕಡೆಯಿಂದ ಗೌರವ ಸಮರದಪಿಸಲಾಯ್ತು. ನೀಲಮಣಿ ರಾಜು ಈ ಹಿಂದೆಯೇ ಕೊಲ್ಲೂರಿನಲ್ಲಿ ಚಂಡಿಕಾಹೋಮ ನಡೆಸುವ ಹರಕೆ ಹೊತ್ತಿದ್ದರು ಎಂದು ಆಡಳಿತ ಮಂಡಳಿ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದೆ.
ಉಡುಪಿ: ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ಚಂಡಿಕಾ ಹೋಮ ಮಾಡಿ ಪ್ರಧಾನಿ ಮೋದಿಗೆ ಪ್ರಸಾದ ತಲುಪಿಸಲಾಗಿದೆ.
ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕೊಲ್ಲೂರು ಮೂಕಾಂಬಿಕಾ ದೇವಿ ಸನ್ನಿಧಾನದಲ್ಲಿ ಅಗಸ್ಟ್ ತಿಂಗಳ ಮೊದಲ ವಾರದಲ್ಲಿ ನರಸಿಂಹ ಅಡಿಗರ ನೇತೃತ್ವದಲ್ಲಿ ಚಂಡಿಕಾ ಹೋಮ ನೆರವೇರಿಸಲಾಗಿತ್ತು. ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಸರ್ಕಾರದ ಪರವಾಗಿ ಹೋಮ ಮಾಡಲು ಹೇಳಿಕೊಂಡಿದ್ದರು ಎಂದು ಅರ್ಚಕ ಅಡಿಗರು ಮಾಹಿತಿ ನೀಡಿದ್ದಾರೆ.
ಕೊಲ್ಲೂರು ಮೂಕಾಂಬಿಕಾ ಸನ್ನಿಧಾನದ ಹಿರಿಯ ಅರ್ಚಕ ನರಸಿಂಹ ಅಡಿಗ ಚಂಡಿಕಾ ಹೋಮ ಮಾಡಿ, ದೇವಿಗೆ ವಿಶೇಷ ಪೂಜೆ ನೆರವೇರಿಸಿ ಪ್ರಸಾದವನ್ನು ದೆಹಲಿಗೆ ತೆಗೆದುಕೊಂಡು ಹೋಗಿದ್ದರು. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಪ್ರಸಾದ ನೀಡಿದ್ದಾರೆ. ಈ ಸಂದರ್ಭದಲ್ಲಿ ಅಡಿಗರು ಅವರ ಜೊತೆ ಫೋಟೊವನ್ನು ಕ್ಲಿಕ್ಕಿಸಿಕೊಂಡಿದ್ದಾರೆ.
ಈ ವಿಶೇಷ ಪೂಜೆ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಆಡಳಿತ ಮಂಡಳಿ ಗಮನಕ್ಕೆ ಬಂದಿಲ್ಲ. ಇದು ನರಸಿಂಹ ಅಡಿಗ ಅವರು ಮಾಡಿಸಿದ ವೈಯಕ್ತಿಕ ಪೂಜೆ. ಅವರೇ ಪೂಜೆ ಮಾಡಿಸಿ ಪ್ರಸಾದವನ್ನು ದೆಹಲಿಗೆ ತೆಗೆದುಕೊಂಡು ಹೋಗಿದ್ದಾರೆ. ಕಾಶ್ಮೀರದ ಬೆಳವಣಿಗೆ ಮತ್ತು ಇಲ್ಲಿ ನಡೆದ ಪೂಜೆಗೂ ಸಂಬಂಧವಿದೆಯೇ ಎಂಬ ಬಗ್ಗೆ ಮಾಹಿತಿಯಿಲ್ಲ ಎಂದು ದೇವಸ್ಥಾನದ ಅಧ್ಯಕ್ಷ ಹರೀಶ್ ಕುಮಾರ್ ಶೆಟ್ಟಿ ಮಾಹಿತಿ ನೀಡಿದ್ದಾರೆ.
ಉಡುಪಿ: ಶ್ರೀಲಂಕಾ ಪ್ರಧಾನಿ ರನಿಲ್ ವಿಕ್ರಮ ಸಿಂಘೆ ಇಂದು ಕೊಲ್ಲೂರಿಗೆ ಭೇಟಿ ನೀಡಿದ್ದಾರೆ.
ಬೆಳಗ್ಗೆಯೇ ನೂರಾರು ಭಕ್ತರು ದೇವರ ದರ್ಶನ ಪೂಜೆ ಕೈಗೊಂಡರು. ಪ್ರಧಾನಿ ರನಿಲ್ ವಿಕ್ರಮ ಸಿಂಘೆ ಆಗಮನ ಹಿನ್ನೆಲೆಯಲ್ಲಿ ಕೊಲ್ಲೂರು ದೇವಳದ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಭಾರತೀಯ ಸೇನೆ ಲಂಕಾ ಪ್ರಧಾನಿಗೆ ಭದ್ರತೆ ಕೊಟ್ಟಿದೆ. ದೇವಸ್ಥಾನ ಭದ್ರತೆಯ ಮೇಲೂ ನಿಗಾ ವಹಿಸಿದೆ. ಲಂಕಾ ಪ್ರಧಾನಿ ದೇವಳ ಭೇಟಿ ಹಿನ್ನೆಲೆಯಲ್ಲಿ ಭಕ್ತರಿಗೆ ದರ್ಶನ ವ್ಯವಸ್ಥೆಯನ್ನು ಬಂದ್ ಮಾಡಲಾಗಿದೆ.
ಕೊಲಂಬೋ ಟು ಕೊಲ್ಲೂರು:
ಕೊಲಂಬೋದಿಂದ ಬೆಂಗಳೂರಿಗೆ ಬಂದಿರುವ ಸಿಂಘೆ, ಅಲ್ಲಿಂದ ಮಂಗಳೂರಿಗೆ ವಿಮಾನದಲ್ಲಿ ಬಂದಿದ್ದಾರೆ. ಹೆಲಿಕಾಪ್ಟರ್ ಮೂಲಕ ಲಂಕಾ ಪ್ರಧಾನಿ ಬೈಂದೂರು ತಾಲೂಕಿನ ಅರೆ ಶೀರೂರಿಗೆ ಬಂದಿಳಿಯಬೇಕಿತ್ತು. ಉಡುಪಿಯಲ್ಲಿ ಬೆಳಗ್ಗೆಯಿಂದ ಧಾರಾಕಾರ ಮಳೆ. ಮೋಡ ಮುಸುಕಿದ ವಾತಾವರಣವಿದ್ದ ಹಿನ್ನೆಲೆಯಲ್ಲಿ ಹೆಲಿಕಾಪ್ಟರ್ ಹಾರಾಟಕ್ಕೆ ಅಧಿಕಾರಿಗಳು ನಿರಾಕರಿಸಿದ್ದಾರೆ.
ಹೀಗಾಗಿ ರಸ್ತೆ ಮೂಲಕ ಕೊಲ್ಲೂರಿಗೆ ತೆರಳುವಂತೆ ಸೂಚಿಸಿದ್ದಾರೆ. ಮಂಗಳೂರಿಂದ ಕೊಲ್ಲೂರು ವರೆಗೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಸುಮಾರು 130 ಕೀ.ಮಿ. ರಸ್ತೆ ಮಾರ್ಗದ ಮೂಲಕ ಪ್ರಯಾಣ ಮಾಡಲಿದ್ದಾರೆ.
ಈ ನಡುವೆ ಮೂಕಾಂಬಿಕಾ ದೇವಿ ಸನ್ನಿಧಿಯಲ್ಲಿ ನವಚಂಡಿಕಾ ಯಾಗ ಆರಂಭವಾಗಿದ್ದು, ದೇವಸ್ಥಾನದ ಋತ್ವಿಜರಿಂದ ಹೋಮದ ವಿಧಿ ವಿಧಾನ ನಡೆದಿದೆ. ವಿಶೇಷ ಪೂಜೆಯ ಜೊತೆ ಯಜ್ಞಶಾಲೆಯಲ್ಲಿ ಹೋಮ ಆರಂಭವಾಗಿದೆ. ಪ್ರಧಾನಿ ರನಿಲ್ ವಿಕ್ರಮ ಸಿಂಘೆ ಮಧ್ಯಾಹ್ನ 12.30 ರ ಸುಮಾರಿಗೆ ನಡೆಯಲಿರುವ ಪೂರ್ಣಾಹುತಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ಲಂಕಾ ಪ್ರಧಾನಿ ನವಚಂಡಿಕಾಯಾಗದ ಹರಕೆಯನ್ನು ಈ ಹಿಂದೆಯೇ ಹೇಳಿದ್ದರು.
ಉಡುಪಿ: ದಕ್ಷಿಣ ಭಾರತದ ಪ್ರಸಿದ್ಧ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವ ನಡೆಯುತ್ತಿದೆ. ವಿಜ್ರಂಭಣೆಯ ಉತ್ಸವದಲ್ಲಿ ದೇಶದ ನಾನಾ ಭಾಗದಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದಾರೆ. ಬ್ರಹ್ಮ ರಥೋತ್ಸವ ನಡೆಯುವ ಮುನ್ನ ದೇವಸ್ಥಾನದ ಪ್ರಾಂಗಣದಲ್ಲಿ ಬಲಿ ಉತ್ಸವ ಸಂದರ್ಭ ಡ್ರಮ್ಮರ್ ಶಿವಮಣಿ ಕಲಾಸೇವೆ ನೀಡಿದರು.
ಡ್ರಮ್ ಮಾಂತ್ರಿಕ ಶಿವಮಣಿ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವದಲ್ಲಿ ಪಾಲ್ಗೊಂಡು ತಮ್ಮ ಸೇವೆಯನ್ನು ನೀಡಿದರು. ವಾಲಗದವರ ಜೊತೆ ಸೇರಿಕೊಂಡು ಡ್ರಮ್ಸ್ ನುಡಿಸಿದರು. ಪ್ರತಿ ವರ್ಷ ಶಿವಮಣಿ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಬಂದು ಕಲಾ ಸೇವೆ ನೀಡುತ್ತಾರೆ. ಈ ಬಾರಿ ಬಲಿ ಉತ್ಸವ ಸಂದರ್ಭ ನಾದಸ್ವರ, ಸಮ್ಮೇಳ, ಡೋಲಿನ ಜೊತೆ ಡ್ರಮ್ಸ್ ಬೀಟ್ ಹಾಕಿದ್ದು ವಿಶೇಷವಾಗಿತ್ತು.
ಎಲ್ಲೂ ಸಾಂಪ್ರದಾಯಿಕ ಲಯಕ್ಕೆ ಚ್ಯುತಿ ಬಾರದ ರೀತಿಯಲ್ಲಿ ಆಧುನಿಕ ಪರಿಕರಗಳೊಂದಿಗೆ ಶಿವಮಣಿ ಕಲಾಶಕ್ತಿಯನ್ನು ಮೆರೆದಿದ್ದಾರೆ. ಉತ್ಸವ ಸಂದರ್ಭ ಶಿವಮಣಿಯನ್ನು, ಅವರ ಕಲಾಸೇವೆಯನ್ನು ನೋಡಲು ಜನ ಜಮಾಯಿಸಿದ್ದರು.
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ದೇವಳದ ಗಂಗಾಧರ ಬಿಡೆ ಶಿವಮಣಿಯವರು ಪ್ರತೀ ವರ್ಷ ಅಮ್ಮನಲ್ಲಿ ಬಂದು ಸೇವೆ ನೀಡುತ್ತಿದ್ದಾರೆ. ಈ ಬಾರಿಯೂ ಬಂದಿದ್ದಾರೆ. ಮಹಾನ್ ಕಲಾವಿದನಾದರೂ ಸಾಮಾನ್ಯನಂತೆ ಜನಗಳ ಜೊತೆ ಬೆರೆಯುತ್ತಾರೆ. ಸರಸ್ವತಿ ಮಂಟಪದಲ್ಲಿ ತಾಯಿಯ ಮುಂಭಾಗ ನಡೆದ ಸಂಗೀತ ಕಾರ್ಯಕ್ರಮವನ್ನೂ ಬಹಳ ಜನ ಆಸ್ವಾದಿಸಿದ್ದಾರೆ ಎಂದು ಹೇಳಿದರು.
ಉಡುಪಿ: ಗಾನ ಗಂಧರ್ವ ಜೇಸುದಾಸ್ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ತಮ್ಮ 79ನೇ ಹುಟ್ಟುಹಬ್ಬ ಆಚರಿಸಿಕೊಂಡರು. ಬೆಳಗ್ಗೆ ಪತ್ನಿ ಪ್ರಭಾ ಜೇಸುದಾಸ್ ಅವರೊಂದಿಗೆ ದೇವಸ್ಥಾನಕ್ಕೆ ಆಗಮಿಸಿದ ಅವರು, ದೇವರ ದರ್ಶನ ಪಡೆದರು.
ಪ್ರತಿ ವರ್ಷ ಕೊಲ್ಲೂರಲ್ಲಿ ಹುಟ್ಟುಹಬ್ಬ ಆಚರಿಸುತ್ತಾ ಬಂದಿರುವ ಜೇಸುದಾಸ್, ಸಂಕಲ್ಪದಂತೆ ಚಂಡಿಕಾ ಹೋಮ ನೆರವೇರಿಸಿ ಪೂರ್ಣಾಹುತಿ ಸಲ್ಲಿಸಿದರು. ಅರ್ಚಕ ಗೋವಿಂದ ಅಡಿಗ ಧಾರ್ಮಿಕ ವಿಧಿ ನೆರವೇರಿಸಿದರು. ಬಳಿಕ ಶ್ರೀ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಕ್ಷೇತ್ರದಲ್ಲಿ ಅಕ್ಷರಾಭ್ಯಾಸ ಸೇವೆ ನಡೆಸಿದರು.
ದೇವಸ್ಥಾನದ ಪ್ರಾಂಗಣದಲ್ಲಿ ನೆರೆದಿದ್ದ ನೂರಾರು ಅಭಿಮಾನಿಗಳು, ಭಕ್ತರು ಜೇಸುದಾಸ್ ಮೂಲಕ ತಮ್ಮ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಿಕೊಂಡರು. ಭಕ್ತಿಯಲ್ಲಿ ಮಿಂದೆದ್ದ ಜೇಸುದಾಸ್ ಇದೇ ಸಂದರ್ಭ ಸ್ವರ್ಣಮುಖಿ ಸಭಾಭವನದಲ್ಲಿ ಭಕ್ತರ ಸಮ್ಮುಖದಲ್ಲಿ ಭಕ್ತಿಗೀತೆಯನ್ನು ಹಾಡಿದರು.
ಸಾವಿರಾರು ಭಕ್ತರು ಜೇಸುದಾಸ್ ಗಾಯನದಿಂದ ಭಾವಪರವಶರಾದರು. ಜೇಸುದಾಸ್ ಹುಟ್ಟುಹಬ್ಬದ ನಿಮಿತ್ತ ಗಾಯಕ ಕಾಂಞಗಾಡ್ ರಾಮಚಂದ್ರನ್ ಆಯೋಜಿಸಿದ್ದ ಸಂಗೀತೋತ್ಸವಕ್ಕೆ ಸ್ವತಃ ಜೇಸುದಾಸ್ ಗಾಯನದ ಮೂಲಕ ಚಾಲನೆ ನೀಡಿದರು. ಧಾರ್ಮಿಕ ವಿಧಿ, ಹುಟ್ಟುಹಬ್ಬ ಪೂರೈಸಿ ಮಧ್ಯಾಹ್ನ ಅನ್ನಪ್ರಸಾದ ಸ್ವೀಕರಿಸಿ ನಿರ್ಗಮಿಸಿದರು.
ಉಡುಪಿ: ಈ ವಾರ ಬಹುನಿರೀಕ್ಷಿತ `ಕೆಜಿಎಫ್’ ಸಿನಿಮಾ ರಿಲೀಸ್ ಹಿನ್ನೆಲೆಯಲ್ಲಿ ರಾಕಿಂಗ್ ಸ್ಟಾರ್ ಯಶ್ ಚಿತ್ರತಂಡದ ಜೊತೆ ಸೇರಿ ಟೆಂಪಲ್ ವಿಸಿಟ್ ಮಾಡುತ್ತಿದ್ದಾರೆ.
ನಟ ಯಶ್ ಮತ್ತು ಚಿತ್ರತಂಡ ಬೆಂಗಳೂರಿನಿಂದ ಹೊರಟು ಮೊದಲು ಕೊಲ್ಲೂರು ದೇವಸ್ಥಾನ, ನಂತರ ಧರ್ಮಸ್ಥಳ ಹಾಗೂ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ. ಈಗಾಗಲೇ ನಟ ಯಶ್ ಹೆಲಿಕಾಫ್ಟರ್ ನಿಂದ ಕೊಲ್ಲೂರಿಗೆ ಬಂದಿಳಿದು. ನೇರವಾಗಿ ಕೊಲ್ಲೂರು ದೇವಸ್ಥಾನಕ್ಕೆ ಭೇಟಿ ನೀಡಿದ್ದು, ಮೂಕಾಂಬಿಕೆಗೆ ಯಶ್ ವಿಶೇಷ ಪೂಜೆ ಸಲ್ಲಿಸಿ ತೆರಳಿದ್ದಾರೆ.
ಬಹು ನಿರೀಕ್ಷಿತ ಚಿತ್ರ ಕೆಜಿಎಫ್ ಬಿಡುಗಡೆ ಹಿನ್ನೆಲೆಯಲ್ಲಿ ಪೂಜೆ ಸಲ್ಲಿಸಿದ್ದು, ನಟ ಯಶ್, ನಿರ್ಮಾಪಕ ವಿಜಯ್ ಕಿರಗಂದೂರ್ ಸ್ನೇಹಿತರ ಜೊತೆ ಸೇರಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಇದೇ ವಾರ 21ರಂದು ಕೆಜಿಎಫ್ ಸಿನಿಮಾ ರಿಲೀಸ್ ಆಗಲಿದೆ. ಹೀಗಾಗಿ ಚಿತ್ರದ ಒಳಿತಿಗಾಗಿ ಕೆಜಿಎಫ್ ಟೀಮ್ ದೇವಸ್ಥಾನಕ್ಕೆ ಭೇಟಿ ನೀಡುತ್ತಿದೆ ಎಂದು ಹೇಳಲಾಗುತ್ತಿದೆ.
‘ಕೆಜಿಎಫ್’ ಸಿನಿಮಾದ ಹಿಂದಿಯ ಸ್ಪೆಷಲ್ ಹಾಡೊಂದು ಈಗಾಗಲೇ ರಿಲೀಸ್ ಆಗಿದ್ದು, ಮೌನಿ ರಾಯ್ ಹಾಗೂ ಯಶ್ ‘ಗಲಿ ಗಲಿ’ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಸದ್ಯ ಹಾಡು ಹೊಸ ದಾಖಲೆಯನ್ನು ನಿರ್ಮಿಸಿದೆ. ಕಳೆದ ಬುಧವಾರ ಕೆಜಿಎಫ್ ಸಿನಿಮಾದ ‘ಗಲಿ ಗಲಿ’ ಹಾಡು ಬಿಡುಗಡೆಯಾಗಿತ್ತು.
ಬಿಡುಗಡೆಯಾದ ಮೊದಲ ದಿನವೇ ಈ ಹಾಡು 13 ಮಿಲಿಯನ್ ವ್ಯೂ ಪಡೆದುಕೊಂಡಿದೆ. ವಿಶ್ವದ ಯಾವ ಸಿನಿಮಾ ಹಾಡು ಕೂಡ ಒಂದು ದಿನಕ್ಕೆ ಈ ಮಟ್ಟಿನ ಹಿಟ್ಸ್ ಪಡೆದುಕೊಂಡಿಲ್ಲ. ಈಗ ಕೆಜಿಎಫ್ ಚಿತ್ರದ ಈ ಹಾಡು ಬಿಡುಗಡೆಯಾಗಿ ಹೊಸ ದಾಖಲೆ ಸೃಷ್ಟಿಸಿದೆ.