Tag: ಕೊಲ್ಲಂ

  • ದಸರಾ 2025 | ಹುಬ್ಬಳ್ಳಿ-ಕೊಲ್ಲಂ ನಡುವೆ ವಿಶೇಷ ರೈಲು

    ದಸರಾ 2025 | ಹುಬ್ಬಳ್ಳಿ-ಕೊಲ್ಲಂ ನಡುವೆ ವಿಶೇಷ ರೈಲು

    ಬೆಂಗಳೂರು: ದಸರಾ ಹಬ್ಬ ಮತ್ತು ಶಬರಿಮಲೆ ಯಾತ್ರೆಯ ಪ್ರಯುಕ್ತ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿವಾರಿಸಲು ನೈಋತ್ಯ ರೈಲ್ವೆಯು ಹುಬ್ಬಳ್ಳಿ (Hubballi) ಮತ್ತು ಕೊಲ್ಲಂ (Kollam) ನಡುವೆ 14 ಟ್ರಿಪ್ ವಿಶೇಷ ಎಕ್ಸ್‌ಪ್ರೆಸ್‌ ರೈಲು ಸಂಚರಿಸಲಿದೆ.

    ರೈಲು ಸಂಖ್ಯೆ 07313 ಎಸ್‌ಎಸ್‌ಎಸ್ ಹುಬ್ಬಳ್ಳಿ-ಕೊಲ್ಲಂ ವಿಶೇಷ ಎಕ್ಸ್‌ಪ್ರೆಸ್‌ ರೈಲು ಇದೇ ಸೆ.28ರಿಂದ ಡಿ.28ರವರೆಗೆ ಪ್ರತಿ ಭಾನುವಾರ ಸಂಜೆ 3:15ಕ್ಕೆ ಹುಬ್ಬಳ್ಳಿಯಿಂದ ಹೊರಟು ಮರುದಿನ ಮಧ್ಯಾಹ್ನ 12:55ಕ್ಕೆ ಕೊಲ್ಲಂ ತಲುಪಲಿದೆ. ಇನ್ನೂ ರೈಲು ಸಂಖ್ಯೆ 07314 ಕೊಲ್ಲಂ-ಎಸ್‌ಎಸ್‌ಎಸ್ ಹುಬ್ಬಳ್ಳಿಗೆ ವಿಶೇಷ ಎಕ್ಸ್‌ಪ್ರೆಸ್‌ ರೈಲು ಸೆ.29ರಿಂದ ಡಿ.29ರವರೆಗೆ ಪ್ರತಿ ಸೋಮವಾರ ಸಂಜೆ 5:00ಕ್ಕೆ ಕೊಲ್ಲಂನಿಂದ ಹೊರಟು ಮರುದಿನ ಸಂಜೆ 6:30ಕ್ಕೆ ಹುಬ್ಬಳ್ಳಿ ತಲುಪಲಿದೆ.ಇದನ್ನೂ ಓದಿ: ನಿವೃತ್ತ ಬ್ಯಾಂಕ್‌ ಅಧಿಕಾರಿಗೆ ಬರೋಬ್ಬರಿ 1 ತಿಂಗಳು ಡಿಜಿಟಲ್‌ ಅರೆಸ್ಟ್‌ – 23 ಕೋಟಿ ವಂಚನೆ

    ಈ ವಿಶೇಷ ರೈಲು ಒಟ್ಟು 22 ಬೋಗಿಗಳನ್ನು ಒಳಗೊಂಡಿದ್ದು, ಇದರಲ್ಲಿ 01 ಎಸಿ 2-ಟೈರ್, 02 ಎಸಿ 3-ಟೈರ್, 12 ಸ್ಲೀಪರ್ ಕ್ಲಾಸ್, 05 ಜನರಲ್ ಸೆಕೆಂಡ್ ಕ್ಲಾಸ್ ಮತ್ತು 02 ಸೆಕೆಂಡ್ ಕ್ಲಾಸ್ ಲಗೇಜ್-ಕಮ್-ಬ್ರೇಕ್ ವ್ಯಾನ್‌ಗಳು ಇರಲಿವೆ. ಮಾರ್ಗಮಧ್ಯೆ ಈ ವಿಶೇಷ ರೈಲು, ಹಾವೇರಿ, ದಾವಣಗೆರೆ, ಬೀರೂರು, ಅರಸೀಕೆರೆ, ತುಮಕೂರು, ಎಸ್‌ಎಂವಿಟಿ ಬೆಂಗಳೂರು, ಕೃಷ್ಣರಾಜಪುರಂ, ಬಂಗಾರಪೇಟೆ, ಸೇಲಂ, ಈರೋಡ್, ತಿರುಪ್ಪೂರು, ಪೊದನೂರು, ಪಾಲಕ್ಕಾಡ್, ತ್ರಿಶೂರ್, ಆಲುವಾ, ಎರ್ನಾಕುಲಂ ಟೌನ್, ಕೊಟ್ಟಾಯಂ, ಚಂಗನಸ್ಸೇರಿ, ತಿರುವಲ್ಲ, ಚೆಂಗನ್ನೂರು, ಮಾವೆಲಿಕರ, ಕಾಯಂಕುಲಂ, ಕರುನಾಗಪಳ್ಳಿ ಮತ್ತು ಸಂಸ್ಥಾನಕೋಟ ನಿಲ್ದಾಣಗಳಲ್ಲಿ ನಿಲುಗಡೆ ಇರುತ್ತದೆ.

    ದಸರಾ ಹಬ್ಬ ಮತ್ತು ಶಬರಿಮಲೆ ಯಾತ್ರಾ ಅವಧಿಯಲ್ಲಿ ಪ್ರಯಾಣಿಕರಿಗೆ ಅನುಕೂಲಕರ ಪ್ರಯಾಣ ಸೌಲಭ್ಯ ಒದಗಿಸುವ ಉದ್ದೇಶದಿಂದ ಈ ವಿಶೇಷ ರೈಲು ಸೇವೆ ಆರಂಭಿಸಲಾಗಿದೆ.ಇದನ್ನೂ ಓದಿ: ಗುಜರಾತ್‌ ಕಡಲ ತೀರದಲ್ಲಿ ಸೋಮಾಲಿಯಕ್ಕೆ ಹೊರಡಬೇಕಿದ್ದ ಹಡಗಿಗೆ ಬೆಂಕಿ – ಭಯಾನಕ ದೃಶ್ಯ ಕ್ಯಾಮೆರಾದಲ್ಲಿ ಸೆರೆ

  • ಯುಎಇ ಅಪಾರ್ಟ್‌ಮೆಂಟ್‌ನಲ್ಲಿ ಕೇರಳದ ಮಹಿಳೆ ಶವವಾಗಿ ಪತ್ತೆ – ವರದಕ್ಷಿಣೆ ಕಿರುಕುಳ ಆರೋಪ

    ಯುಎಇ ಅಪಾರ್ಟ್‌ಮೆಂಟ್‌ನಲ್ಲಿ ಕೇರಳದ ಮಹಿಳೆ ಶವವಾಗಿ ಪತ್ತೆ – ವರದಕ್ಷಿಣೆ ಕಿರುಕುಳ ಆರೋಪ

    ಅಬು ಧಾಬಿ: ಕೇರಳದ ಮಹಿಳೆಯೊಬ್ಬರು (Kerala Woman) ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ (UAE) ನಡೆದಿದೆ.

    ಕೇರಳದ ಕೊಲ್ಲಂ (Kollam) ಮೂಲದ ಅತುಲ್ಯ ಶೇಖರ್ (29) ಮೃತ ಮಹಿಳೆ. 2014ರಲ್ಲಿ ಅತುಲ್ಯ ಕೊಲ್ಲಂ ನಿವಾಸಿ ಶೇಖರ್ ಎಂಬವರನ್ನು ಮದುವೆಯಾಗಿ ಶಾರ್ಜಾದ ಅಪಾರ್ಟ್‌ಮೆಂಟ್‌ವೊಂದರಲ್ಲಿ ನೆಲೆಸಿದ್ದರು. ಮದುವೆ ವೇಳೆ ಸತೀಶ್‌ಗೆ 320 ಗ್ರಾಂ ಚಿನ್ನ ಹಾಗೂ ಒಂದು ಬೈಕ್ ಅನ್ನು ವರದಕ್ಷಿಣೆ (Dowry) ರೂಪದಲ್ಲಿ ನೀಡಲಾಗಿತ್ತು. ಆದರೆ ಮದುವೆಯಾದಾಗಿನಿಂದ ಪತಿ ಅತುಲ್ಯಗೆ ವರದಕ್ಷಿಣೆ ಕಿರುಕುಳ ನೀಡುತ್ತಿದ್ದ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಇದನ್ನೂ ಓದಿ: ಜಮ್ಮು ಕಾಶ್ಮೀರದ ಪೇದೆಗೆ ಕಸ್ಟಡಿಯಲ್ಲಿ ಚಿತ್ರಹಿಂಸೆ – ಸಿಬಿಐ ತನಿಖೆಗೆ ಆದೇಶಿಸಿದ ಸುಪ್ರೀಂ ಕೋರ್ಟ್

    ಜುಲೈ 18 ಮತ್ತು ಜುಲೈ 19ರ ನಡುವೆ ಸತೀಶ್ ಅತುಲ್ಯಳನ್ನು ಉಸಿರುಗಟ್ಟಿಸಿ, ಹೊಟ್ಟೆಗೆ ಒದ್ದು, ತಲೆಗೆ ತಟ್ಟೆಯಿಂದ ಹೊಡೆದು ಕೊಲೆ ಮಾಡಿದ್ದಾನೆ ಎಂದು ಆಕೆಯ ತಾಯಿ ಆರೋಪಿಸಿದ್ದಾರೆ. ಘಟನೆ ಸಂಬಂಧ ಪತಿ ಸತೀಶ್ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದೆ.  ಇದನ್ನೂ ಓದಿ: ಕಲಬುರಗಿ ಚಿನ್ನದಂಗಡಿ ದರೋಡೆ ಕೇಸ್; ಮೂವರು ಅಂತರರಾಜ್ಯ ದರೋಡೆಕೋರರ ಬಂಧನ

  • ಮಾತಾ ಅಮೃತಾನಂದಮಯಿ ಅಮ್ಮನವರ ಆಶೀರ್ವಾದ ಪಡೆದ ಡಿಸಿಎಂ

    ಮಾತಾ ಅಮೃತಾನಂದಮಯಿ ಅಮ್ಮನವರ ಆಶೀರ್ವಾದ ಪಡೆದ ಡಿಸಿಎಂ

    ಕೊಲ್ಲಂ: ಕೇರಳ ಬಿಜೆಪಿ ಸಹ ಪ್ರಭಾರಿಯೂ ಆಗಿರುವ ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥನಾರಾಯಣ ಅವರು ಬುಧವಾರದಂದು ಅಮೃತಪುರಿಗೆ ತೆರಳಿ ಮಾತಾ ಅಮೃತಾನಂದಮಯಿ ಅವರ ಆಶೀರ್ವಾದ ಪಡೆದರು.

    ಕೊಲ್ಲಂ ಸಮೀಪವಿರುವ ಆಶ್ರಮಕ್ಕೆ ಭೇಟಿ ನೀಡಿದ ಡಿಸಿಎಂ, ಅಮ್ಮ ಅವರ ಅನುಗ್ರಹ ಪಡೆದ ನಂತರ ಪ್ರಚಲಿತ ಸಮಸ್ಯೆಗಳು, ಕರ್ನಾಟಕದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಕೈಗೊಂಡಿರುವ ಸುಧಾರಣೆಗಳ ಬಗ್ಗೆ ಅಮ್ಮನವರ ಜತೆ ಮಾಹಿತಿ ವಿನಿಮಯ ಮಾಡಿಕೊಂಡರು. ಜತೆಗೆ, ಯುವಜನರ ಸಮಸ್ಯೆಗಳು, ಪ್ರಚಲಿತ ಸಾಮಾಜಿಕ ಸಮಸ್ಯೆಗಳ ಬಗ್ಗೆ ಅವರ ಜತೆ ಚರ್ಚೆ ನಡೆಸಿದರು.

    ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ಡಿಸಿಎಂ ಅವರು, ಮಾತಾ ಅಮೃತಾನಂದಮಯಿ ಅವರ ಆಶ್ರಮಕ್ಕೆ ಬರಬೇಕು ಎಂಬುದು ನನ್ನ ಬಹದಿನಗಳ ಕನಸಾಗಿತ್ತು. ಆ ಕನಸು ಇಂದು ನನಸಾಗಿದೆ. ಇಂದು ಆಶ್ರಮಕ್ಕೆ ಭೇಟಿ ನೀಡಿ ಅವರ ಆಶೀರ್ವಾದ ಪಡೆದೆ. ಅಮ್ಮನವರು ಬೆಂಗಳೂರಿಗೆ ಬಂದಾಗಲೆಲ್ಲ ನಾನು ಭೇಟಿಯಾಗಿ ಆಶೀರ್ವಾದ ಪಡೆಯುತ್ತಿದ್ದೆ. ಶಿಕ್ಷಣ, ಸಾಮಾಜಿಕ, ಆಹಾರ, ವಸತಿ, ಆರೋಗ್ಯ ಜೀವನೋಪಾಯ, ಪರಿಸರ ಇತ್ಯಾದಿ ಕ್ಷೇತ್ರಗಳಲ್ಲಿ ಅವರು ಅಮೋಘ ಸೇವೆ ಮಾಡುತ್ತಾ ಸಮಾಜಕ್ಕೆ ಒಳ್ಳೆಯದು ಮಾಡುತ್ತಿದ್ದಾರೆ. ಜತೆಗೆ, ಪ್ರಕೃತಿ ವಿಕೋಪದಂಥ ಕ್ಲಿಷ್ಟ ಸಂದರ್ಭಗಳಲ್ಲೂ ಅಮ್ಮನವರು ಮೊದಲು ನೆರವಿಗೆ ಧಾವಿಸುತ್ತಾರೆ ಎಂದರು.

    ಜನರಿಗೆ ಧರ್ಮಮಾರ್ಗವನ್ನು ತೋರುವುದು ಮಾತ್ರವಲ್ಲದೆ, ಜನರ ಬದುಕನ್ನು ಸಬಲೀಕರಣ ಮಾಡುವಲ್ಲಿಯೂ ಅಮ್ಮ ಮಹತ್ವದ ಕೆಲಸ ಮಾಡುತ್ತಿದ್ದಾರೆ. ಕೇರಳ ಮಾತ್ರವಲ್ಲದೆ, ದೇಶಾದ್ಯಂತ ಮತ್ತು ಜಗತ್ತಿ ಉದ್ದಗಲಕ್ಕೂ ಅವರು ಸೇವೆ ಮಾಡುತ್ತಿದ್ದಾರೆ ಎಂದರು ಡಿಸಿಎಂ.

  • ಆಸ್ತಿಗಾಗಿ ಪತ್ನಿಯನ್ನ ಕೊಂದು ಹಾವಿನ ದ್ವೇಷದ ಕಥೆ ಕಟ್ಟಿದ್ದ ಪತಿ ಅರೆಸ್ಟ್

    ಆಸ್ತಿಗಾಗಿ ಪತ್ನಿಯನ್ನ ಕೊಂದು ಹಾವಿನ ದ್ವೇಷದ ಕಥೆ ಕಟ್ಟಿದ್ದ ಪತಿ ಅರೆಸ್ಟ್

    – ಒಂದಲ್ಲ ಎರಡು ಬಾರಿ ಹಾವಿನಿಂದ ಪತ್ನಿಗೆ ಕಚ್ಚಿಸಿದ್ದ ಪಾಪಿ
    – ಕೃತ್ಯಕ್ಕೆ ಸಹಕರಿಸಿದ್ದ ಹಾವಾಡಿಗನ ಬಂಧನ

    ತಿರುವನಂತಪುರಂ: ಆಸ್ತಿಗಾಗಿ ಪತ್ನಿಯನ್ನ ಕೊಂದು ಹಾವಿನ ದ್ವೇಷದ ಕಥೆ ಕಟ್ಟಿದ್ದ ಪತಿ ಹಾಗೂ ಕೃತ್ಯಕ್ಕೆ ಸಹಕರಿಸಿದ್ದ ಹಾವಾಡಿಗನನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ.

    ಕೊಲ್ಲಂ ಜಿಲ್ಲೆಯ ಅಂಚಲ್ ನಿವಾಸಿ ಸೂರಜ್ (27) ಕೊಲೆಗೈದ ಪತಿ ಹಾಗೂ ಸುರೇಶ್ ಕೊಲೆಗೆ ಸಹಕರಿಸಿದ ಹಾವಾಡಿಗ. ಎಸ್.ಉತ್ತರ (25) ಕೊಲೆಯಾದ ಮಹಿಳೆ. ತಂದೆಯ ಹೇಯ ಕೃತ್ಯಕ್ಕೆ ಒಂದು ವರ್ಷದ ಗಂಡು ಮಗು ತಾಯಿಯನ್ನ ಕಳೆದುಕೊಂಡಿದೆ.

    ಏನಿದು ಪ್ರಕರಣ?:
    ಉತ್ತರಾಗೆ ಫೆಬ್ರವರಿಯಲ್ಲಿ ಹಾವು ಕಚ್ಚಿದ್ದರಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಆಸ್ಪತ್ರೆಯಲ್ಲಿ ಇದ್ದಾಗಲೇ ಅಂದ್ರೆ ಮೇ 7ರಂದು ಎರಡನೇ ಬಾರಿ ಹಾವು ಕಚ್ಚಿತ್ತು. ಆದರೆ ಉತ್ತರಾಳ ಪೋಷಕರು ಅಳಿಯನ ಮೇಲೆ ಶಂಕೆ ವ್ಯಕ್ತಪಡಿಸಿ ಪೊಲೀಸರಿಗೆ ದೂರು ನೀಡಿದ್ದರು. ಅಷ್ಟೇ ಅಲ್ಲದೆ ಸೂರಜ್ ವರದಕ್ಷಿಣೆಗಾಗಿ ನಮ್ಮ ಮಗಳಿಗೆ ಆಗಾಗ್ಗೆ ಕಿರುಕುಳ ನೀಡುತ್ತಿದ್ದ. ಮದುವೆಯ ಸಮಯದಲ್ಲಿ ನೀಡಿದ್ದ ಕೆಲವು ಆಭರಣಗಳು ಲಾಕರ್ ನಿಂದ ಕಾಣೆಯಾಗಿವೆ ಎಂದು ದೂರಿದ್ದರು.

    ಈ ಹಿನ್ನೆಲೆ ತನಿಖೆ ಆರಂಭಿಸಿದ ಪೊಲೀಸರಿಗೆ ಆಘಾತವೇ ಕಾದಿತ್ತು. ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೆಲ ಸತ್ಯಗಳು ಬೆಳಕಿಗೆ ಬಂದಿದ್ದವು. ಖಾಸಗಿ ಬ್ಯಾಂಕಿನಲ್ಲಿ ಕೆಲಸ ಮಾಡುತ್ತಿದ್ದ ಸೂರಜ್ ಕಳೆದ ಐದು ತಿಂಗಳುಗಳಿಂದ ಪತ್ನಿಯ ಕೊಲೆಗೆ ಸಂಚು ರೂಪಿಸಿದ್ದ. ಈ ಕುರಿತು ಇಂಟರ್ನೆಟ್‍ನಲ್ಲಿ ವಿಡಿಯೋ ಕೂಡ ನೋಡಿದ್ದ.

    ಸೂರಜ್ 10 ಸಾವಿರ ರೂ. ಪಾವತಿಸಿ ಕೊಲ್ಲಂ ಜಿಲ್ಲೆಯ ಹಾವಾಡಿಗ ಸುರೇಶ್‍ನಿಂದ ಹಾವನ್ನು ಖರೀದಿಸಿದ್ದ. ಬಳಿಕ ತನ್ನ ರೂಮ್‍ನಲ್ಲಿ ಹಾವನ್ನು ಬಿಟ್ಟು ಪತ್ನಿಗೆ ಕಚ್ಚುವಂತೆ ಮಾಡಿದ್ದ. ಮೊದಲ ಬಾರಿಗೆ ಹಾವು ಕಚ್ಚಿದಾಗಲೇ ಪತ್ನಿ ಸಾಯುತ್ತಾಳೆ ಎಂದು ಸೂರಜ್ ತಿಳಿಸಿದ್ದ. ಆದರೆ ಅದೃಷ್ಟವಶಾತ್ ಉತ್ತರ ಬದುಕುಳಿದಿದ್ದಳು. ಅಳಿಯನ ಮೇಲೆ ಆಗಲೇ ಅನುಮಾನ ವ್ಯಕ್ತಪಡಿಸಿದ್ದ ಉತ್ತರಾಳ ಪೋಷಕರು ಮಗಳನ್ನು ತಮ್ಮ ಊರಿಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸುತ್ತಿದ್ದರು.

    ಆರೋಪಿ ಮೇ 6ರಂದು ಮತ್ತೆ ಹಾವಿನಿಂದ ಪತ್ನಿಗೆ ಕಚ್ಚಿಸಿ ಕೊಲೆಗೈದಿದ್ದ. ಅಷ್ಟೇ ಅಲ್ಲದೆ ಹಾವನ್ನು ಕೊಂದು ಒಳ್ಳೆಯವನಂತೆ ನಾಟಕವಾಡಿದ್ದ. ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದಾಗ ಕೃತ್ಯ ಬೆಳಕಿಗೆ ಬಂದಿದೆ.

    ಪತ್ನಿಯನ್ನ ಕೊಂದರೆ ಆಕೆಯ ಹೆಸರಿನಲ್ಲಿದ್ದ ಆಸ್ತಿ ತನಗೆ ಬರುತ್ತದೆ ಎಂದು ಸೂರಜ್ ಕೃತ್ಯ ಎಸೆಗಿದ್ದಾನೆ. ಅಷ್ಟೇ ಅಲ್ಲದೆ ವರದಕ್ಷಿಣೆಗಾಗಿ ಪದೇ ಪದೇ ಕಿರುಕುಳ ನೀಡುತ್ತಿದ್ದ ಎನ್ನುವುದು ವಿಚಾರಣೆ ವೇಳೆ ಸ್ಪಷ್ಟವಾಗಿದೆ.

  • ಹಾವಿನ ದ್ವೇಷಕ್ಕೆ ಮಹಿಳೆ ಬಲಿ- ಪ್ರಕರಣಕ್ಕೆ ಟ್ವಿಸ್ಟ್

    ಹಾವಿನ ದ್ವೇಷಕ್ಕೆ ಮಹಿಳೆ ಬಲಿ- ಪ್ರಕರಣಕ್ಕೆ ಟ್ವಿಸ್ಟ್

    ತಿರುವನಂತಪುರಂ: ಎರಡು ತಿಂಗಳ ಅವಧಿಯಲ್ಲಿ ಎರಡು ಬಾರಿ ಹಾವು ಕಡಿದು ಕೇರಳದ ಮಹಿಳೆ ಸಾವನ್ನಪ್ಪಿದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಇಂದೊಂದು ಪ್ಲಾನ್ ಮರ್ಡರ್ ಆಗಿದೆ ಎಂಬುದು ಕೇರಳ ಪೊಲೀಸರು ತಿಳಿಸಿದ್ದಾರೆ.

    ಮೃತ ಮಹಿಳೆಯ ತಂದೆ ಏರಂ ವೆಳ್ಳಾಶೇರಿಯ ವಿಜಯಸೇನ ನೀಡಿದ್ದ ದೂರಿನ ಆಧಾರದ ಮೇಲೆ ಪ್ರಕರಣದ ತನಿಖೆ ನಡೆಯುತ್ತಿದೆ. ಈ ಪ್ರಕರಣವು ಅನೇಕ ರೋಚಕ ಟ್ವಿಸ್ಟ್ ಪಡೆದುಕೊಂಡಿದೆ ಎಂದು ತನಿಖಾ ತಂಡದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಕೊಲ್ಲಂ ಜಿಲ್ಲೆಯ ಅಂಚಲ್ ನಿವಾಸಿ ಎಸ್.ಉತ್ತರ (25) ಕೊಲೆಯಾದ ಮಹಿಳೆ. ಈ ಕೃತ್ಯಕ್ಕೆ ಸಂಬಂಧಿಸಿದಂತೆ ಮಹಿಳೆಯ ಪತಿ, ಸ್ಥಳೀಯ ಹಾವಾಡಿಗ ಮತ್ತು ಇನ್ನೊಬ್ಬ ಸಹಚರನನ್ನು ಬಂಧಿಸಲಾಗಿದೆ.

    ಏನಿದು ಪ್ರಕರಣ?:
    ಮೂರು ತಿಂಗಳ ಹಿಂದೆ ಉತ್ತರಾಗೆ ಹಾವು ಕಚ್ಚಿದ್ದರಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಆಸ್ಪತ್ರೆಯಲ್ಲಿ ಇಗ್ದಾಗಲೇ ಅಂದ್ರೆ ಮೇ 7ರಂದು ಎರಡನೇ ಬಾರಿ ಹಾವು ಕಚ್ಚಿತ್ತು ಎಂದು ಹೇಳಲಾಗಿತ್ತು. ಆದರೆ ಉತ್ತರಾಳ ಪೋಷಕರು ಆಕೆಯ ಅಳಿಯನ ಮೇಲೆ ಶಂಕೆ ವ್ಯಕ್ತಪಡಿಸಿ ಪೊಲೀಸರಿಗೆ ದೂರು ನೀಡಿದ್ದರು. ಅಷ್ಟೇ ಅಲ್ಲದೆ ಸೂರಜ್ ವರದಕ್ಷಿಣೆಗಾಗಿ ನಮ್ಮ ಮಗಳಿಗೆ ಆಗಾಗ್ಗೆ ಕಿರುಕುಳ ನೀಡುತ್ತಿದ್ದ. ಮದುವೆಯ ಸಮಯದಲ್ಲಿ ನೀಡಿದ್ದ ಕೆಲವು ಆಭರಣಗಳು ಲಾಕರ್ ನಿಂದ ಕಾಣೆಯಾಗಿವೆ ಎಂದು ದೂರಿದ್ದರು.

    ಈ ಹಿನ್ನೆಲೆ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೆಲ ಸತ್ಯಗಳು ಬೆಳಕಿಗೆ ಬಂದಿವೆ ಎನ್ನಲಾಗಿದೆ. ಆರೋಪಿ ಸೂರಜ್ ಕಳೆದ ಐದು ತಿಂಗಳುಗಳಿಂದ ಪತ್ನಿಯ ಕೊಲೆಗೆ ಸಂಚು ರೂಪಿಸಿದ್ದ. ಖಾಸಗಿ ಬ್ಯಾಂಕಿನಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯ ಪತಿ ಸೂರಜ್ 10 ಸಾವಿರ ರೂ. ಪಾವತಿಸಿ ಆ ಪ್ರದೇಶದ ಹಾವಾಡಿಗ ಸುರೇಶ್‍ನಿಂದ ಹಾವನ್ನು ತಂದಿದ್ದ. ಬಳಿಕ ತನ್ನ ರೂಮ್‍ನಲ್ಲಿ ಹಾವನ್ನು ಪತ್ನಿ ಬಿಟ್ಟು ಪತ್ನಿಗೆ ಕಚ್ಚುವಂತೆ ಮಾಡಿದ್ದ. ಮೊದಲ ಬಾರಿಗೆ ಹಾವು ಕಚ್ಚಿದಾಗಲೇ ಪತ್ನಿ ಸಾಯುತ್ತಾಳೆ ಎಂದು ಸೂರಜ್ ತಿಳಿಸಿದ್ದ. ಆದರೆ ಅದೃಷ್ಟವಶಾತ್ ಉತ್ತರ ಬದುಕುಳಿದಿದ್ದಳು.

    “ಇದೊಂದು ವಿಚಿತ್ರ ಪ್ರಕರಣವಾಗಿದೆ. ಮೂವರು ಆರೋಪಿಗಳು ನಮ್ಮ ವಶದಲ್ಲಿದ್ದಾರೆ. ತನಿಖೆ ನಡೆಯುತ್ತಿರುವುದರಿಂದ ಯಾವುದೇ ಮಾಹಿತಿ ಬಹಿರಂಗಪಡಿಸಲು ಸಾಧ್ಯವಿಲ್ಲ” ಎಂದು ಕೊಲ್ಲಂ ಗ್ರಾಮೀಣ ಪೊಲೀಸ್ ಅಧೀಕ್ಷಕ ಎಸ್.ಹರಿಶಂಕರ್ ಹೇಳಿದ್ದಾರೆ.

  • ಹಾವು ಕಚ್ಚಿದ್ದಕ್ಕೆ ಚಿಕಿತ್ಸೆಯಲ್ಲಿರಬೇಕಾದರೆ ಮತ್ತೊಂದು ಹಾವು ಕಚ್ಚಿ ಯುವತಿ ಸಾವು!

    ಹಾವು ಕಚ್ಚಿದ್ದಕ್ಕೆ ಚಿಕಿತ್ಸೆಯಲ್ಲಿರಬೇಕಾದರೆ ಮತ್ತೊಂದು ಹಾವು ಕಚ್ಚಿ ಯುವತಿ ಸಾವು!

    ಕೊಲ್ಲಂ: ಹಾವಿನ ದ್ವೇಷ ಹನ್ನೆರಡು ವರ್ಷ ಎಂಬ ಒಂದು ಮಾತಿದೆ. ಈ ಮಾತು ನಿಜಾನೋ ಸುಳ್ಳೋ ಗೊತ್ತಿಲ್ಲ. ಆದರೆ ಕೇರಳದ ಈ ಯುವತಿಯ ಪಾಲಿಗೆ ಮಾತ್ರ ಹಾವೇ ದಾರುಣ ಯಮಪಾಶವಾಗಿದೆ.

    ಹೌದು, ಕೇರಳದ ಕೊಲ್ಲಂ ಜಿಲ್ಲೆಯ ಅಂಚಲ್ ಎಂಬಲ್ಲಿ ಹಾವು ಕಡಿದು ಚಿಕಿತ್ಸೆ ಪಡೆಯುತ್ತಿದ್ದ ಯುವತಿಯೊಬ್ಬರು 2ನೇ ಬಾರಿ ಹಾವು ಕಚ್ಚಿ ಸಾವನ್ನಪ್ಪಿದ್ದಾರೆ. ಏರಂ ವೆಳ್ಳಾಶೇರಿಯ ವಿಜಯಸೇನ ಹಾಗೂ ಮಣಿಮೇಘಲ ದಂಪತಿಯ ಪುತ್ರಿ 25 ವರ್ಷ ಉತ್ತರ ಸಾವನ್ನಪ್ಪಿದ್ದಾರೆ. ಮೂರು ತಿಂಗಳ ಹಿಂದೆ ಉತ್ತರಾಗೆ ಪತಿಯ ಮನೆಯಲ್ಲಿ ಹಾವು ಕಚ್ಚಿತ್ತು. ಇದಕ್ಕೆ ಅವರು ಚಿಕಿತ್ಸೆಯನ್ನೂ ಪಡೆಯುತ್ತಿದ್ದರು.

    ಅಡೂರು ಪರಕೋಡ್ ಸೂರಜ್ ಭವನ್‍ನ ಸೂರಜ್‍ನನ್ನು ಮದುವೆಯಾಗಿದ್ದ ಉತ್ತರಾಗೆ ಮೂರು ತಿಂಗಳ ಹಿಂದೆ ಹಾವು ಕಚ್ಚಿತ್ತು. ಈ ಹಿನ್ನೆಲೆಯಲ್ಲಿ ಆಕೆ ತನ್ನ ತವರು ಮನೆಗೆ ಬಂದು ಚಿಕಿತ್ಸೆ ಪಡೆಯುತ್ತಿದ್ದರು.

    ನಿನ್ನೆ ಬೆಳಗ್ಗೆ ಉತ್ತರ ನಿದ್ದೆಯಿಂದ ಎದ್ದಿರಲಿಲ್ಲ. ಹೀಗಾಗಿ ಪೋಷಕರು ಹೋಗಿ ಆಕೆಯನ್ನು ಎಚ್ಚರಿಸಲು ಪ್ರಯತ್ನಿಸಿದಾಗ ಪ್ರಜ್ಞಾಹೀನ ಸ್ಥಿತಿಯಲ್ಲಿರುವುದು ಗೊತ್ತಾಗಿದೆ. ತಕ್ಷಣ ಅಂಚಲ್‍ನಲ್ಲಿರುವ ಆಸ್ಪತ್ರೆಗೆ ಸೇರಿಸಲು ಯತ್ನಿಸಿದರೂ ಅಷ್ಟರಲ್ಲಾಗಲೇ ಉತ್ತರಾ ಪ್ರಾಣಪಕ್ಷಿ ಹಾರಿ ಹೋಗಿತ್ತು. ಇದೇ ವೇಳೆ ಆಕೆಯ ಕೊಠಡಿಯನ್ನು ಪರಿಶೋಧಿಸಿದಾಗ ಅಲ್ಲಿ ಹಾವು ಕಾಣಿಸಿಕೊಂಡಿದೆ. ಹಾವು ಕಡಿತದಿಂದಲೇ ಸಾವು ಸಂಭವಿಸಿರುವುದು ಖಚಿತವಾಗಿದೆ.

  • ಪತಿ-ಅತ್ತೆ ಚಿತ್ರಹಿಂಸೆ ನೀಡಿ ಹತ್ಯೆ – ಎರಡು ಮಕ್ಕಳ ತಾಯಿ ಮೃತಪಟ್ಟಾಗ ಇದ್ದಿದ್ದು 20ಕೆಜಿ ಮಾತ್ರ!

    ಪತಿ-ಅತ್ತೆ ಚಿತ್ರಹಿಂಸೆ ನೀಡಿ ಹತ್ಯೆ – ಎರಡು ಮಕ್ಕಳ ತಾಯಿ ಮೃತಪಟ್ಟಾಗ ಇದ್ದಿದ್ದು 20ಕೆಜಿ ಮಾತ್ರ!

    ತಿರುವನಂತಪುರಂ: ವರದಕ್ಷಿಣೆಗಾಗಿ ಮಹಿಳೆಗೆ ಚಿತ್ರ ಹಿಂಸೆ ನೀಡಿದ್ದ ಪತಿ, ಆತನ ಕುಟುಂಬಸ್ಥರು ಊಟ ನೀಡದೆಯೇ ಸಾವನ್ನಪ್ಪುವಂತೆ ಮಾಡಿರುವ ಘಟನೆ ಕೇರಳದ ಕೊಲ್ಲಂ ಜಿಲ್ಲೆಯಲ್ಲಿ ನಡೆದಿದೆ.

    ಮಾರ್ಚ್ 21 ರಂದು ತುಷಾರಾ (27) ಎಂಬ ಮಹಿಳೆಯನ್ನು ಅನಾರೋಗ್ಯದ ಕಾರಣ ಆಸ್ಪತ್ರೆಗೆ ಕರೆತರಲಾಗಿತ್ತು. ಚಿಕಿತ್ಸೆ ನೀಡಲು ಮುಂದಾದ ವೈದ್ಯರು ಮಹಿಳೆ ಆಸ್ಪತ್ರೆಗೆ ಕರೆತರುವ ಮುನ್ನವೇ ಸಾವನ್ನಪ್ಪಿದ್ದಾರೆ ಎಂದು ದೃಢಪಡಿಸಿದ್ದರು. ಬಳಿಕ ತುಷಾರಾ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲು ಮೃತ ದೇಹವನ್ನು ತಿರುವನಂತಪುರಂ ಮೆಡಿಕಲ್ ಕಾಲೇಜಿಗೆ ಶಿಫ್ಟ್ ಮಾಡಲಾಗಿತ್ತು.

    ಊಟ ನೀಡದೇ ಚಿತ್ರಹಿಂಸೆ:
    ಈ ಘಟನೆ ನಡೆದ 1 ವಾರದ ಬಳಿಕ ತುಷಾರಾ ಸಾವಿನ ಹಿಂದಿನ ರಹಸ್ಯ ಬಯಲಾಗಿದೆ. ಪೊಲೀಸರು ನೀಡಿರುವ ಮಾಹಿತಿ ಅನ್ವಯ ತುಷಾರಾ ಸಾವನ್ನಪ್ಪಿದ ವೇಳೆ ಆಕೆಯ ದೇಹದ ತೂಕ ಕೇವಲ 20 ಕೆಜಿ ಮಾತ್ರ ಇತ್ತು. ಅಲ್ಲದೇ ಆಕೆಯ ದೇಹದ ಮೇಲೆ ಹಲವು ಗಾಯದ ಗುರುತುಗಳು ಪತ್ತೆಯಾಗಿತ್ತು. ಪರಿಣಾಮ ತುಷಾರಾ ಅವರಿಗೆ ಹಲವು ದಿನಗಳಿಂದ ಊಟ ನೀಡದೇ ಉಪವಾಸ ಇಡಲಾಗಿತ್ತು ಎಂದು ತಿಳಿಸಿದ್ದಾರೆ.

    ಘಟನೆಯ ಸಂಬಂಧ ಪೊಲೀಸರು ಶುಕ್ರವಾರ ತುಷಾರಾ ಪತಿ ಚಂತೂ ಲಾಲ್ (30), ಅತ್ತೆ ಗೀತಾ (55) ಬಂಧಿಸಿದ್ದಾರೆ. ಸಂತ್ರಸ್ತ ಮಹಿಳೆಯ ಇಬ್ಬರು ಮಕ್ಕಳನ್ನು ಮಕ್ಕಳ ರಕ್ಷಣಾ ಕೇಂದ್ರದಲ್ಲಿ ಇರಿಸಲಾಗಿದೆ. ಐಪಿಸಿ ಸೆಕ್ಷನ್ 304 (ಬಿ) ಅಡಿ ಪೊಲೀಸರು ದೂರು ದಾಖಲಿಸಿದ್ದಾರೆ.

    ತುಷಾರಾ ಅವರಿಗೆ ವರದಕ್ಷಿಣೆ ಕಿರುಕಳ ನೀಡುತ್ತಿದ್ದ ಪತಿ ಮತ್ತು ಆತನ ಕುಟುಂಬಸ್ಥರು ಆಕೆಯನ್ನು ಒಂದು ಕೊಠಡಿಯಲ್ಲಿ ಕೂಡಿ ಹಾಕಿ ಕುಡಿಯಲು ಸಕ್ಕರೆ ನೀರು, ಮತ್ತು ಗಂಜಿ ಮಾತ್ರ ನೀಡುತ್ತಿದ್ದರು. ಅಲ್ಲದೇ ಆಕೆಯ ಪೋಷಕರು ಮನೆಗೆ ಬಾರದಂತೆ ನಿರ್ಬಂಧ ವಿಧಿಸಿದ್ದರು. ಪರಿಣಾಮ ಕಳೆದ ಒಂದೂವರೆ ವರ್ಷದಿಂದ ಆಕೆಯನ್ನು ಯಾರು ಭೇಟಿಯೇ ಮಾಡಿರಲಿಲ್ಲ. ಅಲ್ಲದೇ ಫೋನ್ ಕೂಡ ನೀಡುತ್ತಿರಲಿಲ್ಲ ಎಂದು ತುಷಾರಾ ಕುಟುಂಬಸ್ಥರು ತಿಳಿಸಿದ್ದಾರೆ.

    6 ವರ್ಷಗಳ ಹಿಂದೆ ತುಷಾರ ಅವರನ್ನು ಮದುವೆ ಮಾಡಿಕೊಡಲಾಗಿತ್ತು. ಆ ಬಳಿಕ 3 ಬಾರಿ ಮಾತ್ರ ಅವರು ತಮ್ಮ ತವರು ಮನೆಗೆ ತೆರಳಿದ್ದರು. ಅಲ್ಲದೇ ತುಷಾರಾ ಗರ್ಭಿಣಿ ಆಗಿದ್ದ ಸಮಯದಲ್ಲೂ ತವರಿಗೆ ಕಳುಹಿಸಿರಲಿಲ್ಲ. ಮದುವೆ ಸಮಯದಲ್ಲಿ ಚಿನ್ನಾಭರಣ ಸಮೇತ 2 ಲಕ್ಷ ರೂ. ವರದಕ್ಷಿಣೆಯನ್ನು ನೀಡಲಾಗಿತ್ತು.

    27 ದೂರು: ತುಷಾರಾ ಪತಿಯ ಮನೆ ದೇವಾಲಯದ ಸಮೀಪವೇ ಇತ್ತು. ಪರಿಣಾಮ ಹೆಚ್ಚು ಮಂದಿ ಮನೆಯ ಬಳಿ ಓಡಾಡುತ್ತಿದ್ದರು. ಈ ವೇಳೆ ಅವರಿಗೆ ಮನೆಯಿಂದ ಮಹಿಳೆಯೊಬ್ಬರು ಚೀರಾಟ ನಡೆಸುತ್ತಿದ್ದ ಶಬ್ದ ಕೂಡ ಕೇಳಿಸಿತ್ತು. ಈ ಹಿನ್ನೆಲೆಯಲ್ಲಿ ಸ್ಥಳೀಯರು ಪೊಲೀಸರಿಗೆ 27 ದೂರು ನೀಡಿದ್ದ ವಿಚಾರ ಬೆಳಕಿಗೆ ಬಂದಿದೆ. ಅಲ್ಲದೇ ಮನೆಯಲ್ಲಿ ಕೆಲ ನಿಗೂಢ ಚಟುವಟಿಕೆಗಳನ್ನು ಕೂಡ ಕುಟುಂಬಸ್ಥರು ನಡೆಸುತ್ತಿದ್ದರು ಎಂದು ದೂರಿನಲ್ಲೇ ಸ್ಥಳೀಯರು ಉಲ್ಲೇಖಿಸಿದ್ದಾರೆ.

  • ಎಕ್ಸಾಂನಲ್ಲಿ ಕಾಪಿ ಹೊಡೆದು ಸಿಕ್ಕಿದ್ದರಿಂದ ಚಲಿಸುತ್ತಿರುವ ರೈಲಿಗೆ ಹಾರಿದ ವಿದ್ಯಾರ್ಥಿನಿ

    ಎಕ್ಸಾಂನಲ್ಲಿ ಕಾಪಿ ಹೊಡೆದು ಸಿಕ್ಕಿದ್ದರಿಂದ ಚಲಿಸುತ್ತಿರುವ ರೈಲಿಗೆ ಹಾರಿದ ವಿದ್ಯಾರ್ಥಿನಿ

    ತಿರುವನಂತಪುರಂ: ಪರೀಕ್ಷೆಯಲ್ಲಿ ನಕಲು ಮಾಡುತ್ತಾ ಸಿಕ್ಕಿಬಿದ್ದ ಯುವತಿಯೊಬ್ಬಳು, ಚಲಿಸುತ್ತಿರುವ ರೈಲಿನ ಮುಂದೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೇರಳದ ಕೊಲ್ಲಂ ಜಿಲ್ಲೆಯಲ್ಲಿ ನಡೆದಿದೆ.

    ರಾಖಿ ಕೃಷ್ಣ (19) ಆತ್ಮಹತ್ಯೆ ಮಾಡಿಕೊಂಡ ಯುವತಿ. ಕೊಲ್ಲಂ ಜಿಲ್ಲೆಯ ಫಾತಿಮಾ ಮಾತಾ ನ್ಯಾಷನಲ್ ಕಾಲೇಜಿನ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಯಾಗಿದ್ದ ರಾಖಿ ಸೆಮಿಸ್ಟರ್ ಪರೀಕ್ಷೆಯಲ್ಲಿ ನಕಲು ಮಾಡುತ್ತಿರುವಾಗ ಪ್ರಾಧ್ಯಾಪಕರ ಕೈಗೆ ಸಿಕ್ಕಿಬಿದ್ದಿದ್ದಳು. ಕೂಡಲೇ ಪ್ರಾಧ್ಯಾಪಕರು ರಾಖಿಯನ್ನು ನಕಲು ನಿಗ್ರಹ ದಳದ ಅಧಿಕಾರಿಗಳಿಗೆ ಒಪ್ಪಿಸಿದ್ದರು. ಯುವತಿಯನ್ನು ವಶಕ್ಕೆ ಪಡೆದ ಅಧಿಕಾರಿಗಳು, ಪೋಷಕರನ್ನು ಕರೆತರುವಂತೆ ಆಗ್ರಹಿಸಿದ್ದರು.

    ಈ ವೇಳೆ 12 ಗಂಟೆಗೆ ಪೋಷಕರನ್ನು ಕರೆತರುವುದಾಗಿ ಕಾಲೇಜಿನಿಂದ ರಾಖಿ ಹೊರಟಿದ್ದಳು. ಆದರೆ ಮನೆಗೆ ರಾಖಿ ಹೋಗದಿರುವುದನ್ನು ಅರಿತ ಕಾಲೇಜು ಪ್ರಾಧ್ಯಾಪಕರು ಆಕೆಯನ್ನು ಎಲ್ಲೆಡೆ ಹುಡುಕಾಡಿದ್ದರು. ಕೆಲ ಸಮಯದ ನಂತರ ಯುವತಿಯ ಶವ ರೈಲ್ವೇ ಹಳಿ ಬಳಿ ದೊರತಿದೆ. ಎಚ್ಚೆತ್ತ ಕಾಲೇಜು ಸಿಬ್ಬಂದಿ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದರು.

    ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೃತ ಯುವತಿಯ ಶವವನ್ನು ತಿರುವನಂತಪುರಂ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ರವಾನಿಸಿದ್ದಾರೆ. ಘಟನಾ ಸಂಬಂಧ ಕೊಲ್ಲಂನ ಪೂರ್ವ ವಿಭಾಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಈ ಕುರಿತು ಪ್ರತಿಕ್ರಿಯಿಸಿರುವ ಜಿಲ್ಲಾ ಪೊಲೀಸ್ ಆಯುಕ್ತ ಪಿ.ಕೆ.ಮಧು, ಪ್ರಾಥಮಿಕ ತನಿಖೆಗಳ ಪ್ರಕಾರ ಅಸಹಜ ಸಾವು ಎಂಬುದಾಗಿ ಪ್ರಕರಣ ದಾಖಲಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಕಾನೂನು ರೀತಿ ಕ್ರಮ ಕೈಗೊಳ್ಳುತ್ತೇನೆ. ಅಲ್ಲದೇ ಯುವತಿಯ ಕುಟುಂಬಸ್ಥರು ಅಥವಾ ಆಕೆಯ ಸ್ನೇಹಿತರಿಂದ ದೂರು ಬಂದಲ್ಲಿ ತನಿಖೆ ನಡೆಸಲಾಗುತ್ತದೆ ಎಂದು ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv