Tag: ಕೊಲೆ ಪ್ರಕರಣ

  • ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಭಾಸ್ಕರ ಶೆಟ್ಟಿ ಕೊಲೆ ಆರೋಪಿಗಳು ಕೋರ್ಟ್ ಗೆ ಹಾಜರ್

    ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಭಾಸ್ಕರ ಶೆಟ್ಟಿ ಕೊಲೆ ಆರೋಪಿಗಳು ಕೋರ್ಟ್ ಗೆ ಹಾಜರ್

    ಉಡುಪಿ: ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಉಡುಪಿಯ ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣ ವಿಚಾರಣೆ ನಡೆದಿದ್ದು, ಕೊಲೆ ಮತ್ತು ಹೋಮಕುಂಡದಲ್ಲಿ ಸುಟ್ಟ ಪ್ರಕರಣದ ಪ್ರಮುಖ ಆರೋಪಿಗಳನ್ನು ಇಂದು ಉಡುಪಿ ಜಿಲ್ಲಾ ಕೋರ್ಟ್ ಗೆ ಹಾಜರುಪಡಿಸಲಾಯಿತು.

    ಕೊಲೆಯಾದ ಉದ್ಯಮಿ ಭಾಸ್ಕರ ಶೆಟ್ಟಿ ಪತ್ನಿ ರಾಜೇಶ್ವರಿ ಶೆಟ್ಟಿ, ಪುತ್ರ ನವನೀತ್ ಶೆಟ್ಟಿ ಮತ್ತು ರಾಜೇಶ್ವರಿಯ ಪ್ರಿಯಕರ ನಿರಂಜನ್ ಭಟ್ ನನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಯಿತು. ಪ್ರಕರಣದ ವಿಚಾರಣೆ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾ ನ್ಯಾಯಾಲಯಕ್ಕೆ ಭಾರೀ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು. ಕೋರ್ಟ್ ಆವರಣದ ಮುಂಭಾಗ ಸಶಸ್ತ್ರ ಮೀಸಲು ಪಡೆ ಪೊಲೀಸರನ್ನು ನಿಯೋಜಿಸಲಾಗಿತ್ತು.

    ಪ್ರತಿಯೊಬ್ಬರನ್ನು ತಪಾಸಣೆ ಮಾಡಿ ಕೋರ್ಟ್ ಒಳಗಡೆ ಪ್ರವೇಶಕ್ಕೆ ಅನುಮತಿ ನೀಡಲಾಯಿತು. ನ್ಯಾಯಾಲಯ ಒಳಗಡೆ ಲೋಹ ಶೋಧಕ ಅಳವಡಿಕೆ ಜೊತೆ ವರದಿಗಾರರಿಗೂ ಕೋರ್ಟ್ ಹಾಲ್ ಒಳಗೆ ನಿರ್ಬಂಧ ಹೇರಲಾಗಿತ್ತು. ಆರೋಪಿಗಳ ವಿಚಾರಣೆ ಇರುವುದರಿಂದ ನ್ಯಾಯಾಲಯಕ್ಕೆ ಭಾಸ್ಕರ ಶೆಟ್ಟಿ ತಾಯಿ ಗುಲಾಬಿ ಶೆಟ್ಟಿ ಆಗಮಿಸಿದರು.

    ಏನಿದು ಪ್ರಕರಣ: ಹಣಕಾಸಿನ ವಿಚಾರದಲ್ಲಿ ನಡೆದ ಜಗಳದಲ್ಲಿ 2016 ಜುಲೈ 28 ಉದ್ಯಮಿ ಭಾಸ್ಕರ ಶೆಟ್ಟಿ ಕೊಲೆಯಾಗಿತ್ತು. ಪತ್ನಿ ಹಾಗೂ ಪುತ್ರ ಇಬ್ಬರು ಸೇರಿ ಭಾಸ್ಕರ ಶೆಟ್ಟಿಯನ್ನು ಕೊಲೆಗೈದಿದ್ದರು. ಈ ಕೃತ್ಯಕ್ಕೆ ಪ್ರಿಯತಮ ನಿರಂಜನ ಭಟ್ ಸಾಥ್ ನೀಡಿ ನಂದಳಿಕೆಯ ತನ್ನ ಹೋಮಕುಂಡದಲ್ಲಿ ಭಾಸ್ಕರ ಶೆಟ್ಟಿ ಹೆಣವನ್ನು ಸುಟ್ಟಿದ್ದರು.

    ಆರೋಪಿಗಳ ಪರ ನಾರಾಯಣ ಪೂಜಾರಿ ಹಾಗೂ ವಿಕ್ರಂ ಹೆಗ್ಡೆ ವಕಾಲತ್ತು ಮಾಡಲಿದ್ದಾರೆ. ಭಾಸ್ಕರ ಶೆಟ್ಟಿ ತಾಯಿ ಪರ ಹಿರಿಯ ಕ್ರಿಮಿನಲ್ ವಕೀಲ ಶಾಂತಾರಾಮ್ ಶೆಟ್ಟಿ ವಾದ ಮಾಡಲಿದ್ದಾರೆ. ಇನ್ನು ಮೂರು ದಿನಗಳ ಕಾಲ ಉಡುಪಿ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಲಿದೆ.

  • ಕೊಲೆ ಪ್ರಕರಣದ ನಾಲ್ವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ- 50 ಸಾವಿರ ರೂ. ದಂಡ

    ಕೊಲೆ ಪ್ರಕರಣದ ನಾಲ್ವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ- 50 ಸಾವಿರ ರೂ. ದಂಡ

    ರಾಮನಗರ: ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ವ್ಯಕ್ತಿಯೋರ್ವನನ್ನು ಕೊಲೆ ಮಾಡಿದ್ದ ನಾಲ್ವರಿಗೆ ರಾಮನಗರದ ಮೂರನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶರು ಕಠಿಣ ಜೀವಾವಧಿ ಶಿಕ್ಷೆ ಹಾಗೂ ದಂಡ ವಿಧಿಸಿ ಆದೇಶ ನೀಡಿದ್ದಾರೆ.

    ದೊಡ್ಡಮಳೂರು ಗ್ರಾಮದ ಕುಮಾರ್, ರಾಮು, ತೀರ್ಥ, ಹಾಗೂ ಮರಿಸ್ವಾಮಿ ಜೀವಾವಧಿ ಶಿಕ್ಷೆಗೆ ಒಳಗಾದವರು. 2016ರ ಫೆಬ್ರವರಿ 15 ರಂದು ಚನ್ನಪಟ್ಟಣ ತಾಲೂಕಿನ ದೊಡ್ಡ ಮಳೂರು ಗ್ರಾಮದಲ್ಲಿ ಕಲ್ಲಾಪುರ ಗ್ರಾಮದ ನಿವಾಸಿ ರವಿ ಎಂಬ ವ್ಯಕ್ತಿಯ ಮೇಲೆ ನಾಲ್ವರು ಆರೋಪಿಗಳು ಬಡಿಗೆಗಳಿಂದ ಹೊಡೆದು ಕೊಲೆ ಮಾಡಿದ್ರು.

    ಘಟನೆ ಸಂಬಂಧ ನಾಲ್ವರನ್ನ ಚನ್ನಪಟ್ಟಣ ಗ್ರಾಮಾಂತರ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಗೋಪಾಲಕೃಷ್ಣ ರೈ ಅವರು ಕೊಲೆ ಆರೋಪಿಗಳಿಗೆ ಕಠಿಣ ಜೀವಾವಧಿ ಶಿಕ್ಷೆ ಹಾಗೂ ತಲಾ 50 ಸಾವಿರ ರೂಪಾಯಿಗಳ ದಂಡ ವಿಧಿಸಿದ್ದಾರೆ. ಜೀವಾವಧಿ ಶಿಕ್ಷೆಗೆ ಒಳಗಾದವರ ಸಂಬಂಧಿಕರು ಕಣ್ಣೀರಿಟ್ರೆ, ಕೊಲೆಯಾದ ವ್ಯಕ್ತಿಯ ತಂದೆ ತಮ್ಮ ಮಗನ ಕೊಲೆಗೆ ಇದೀಗ ನ್ಯಾಯಾಲಯದಲ್ಲಿ ನ್ಯಾಯ ಸಿಕ್ಕಿದೆ ಅಂತಾ ಸಂತೋಷ ವ್ಯಕ್ತಪಡಿಸಿದ್ರು.

  • ಮಾಜಿ ಸಚಿವ ಗಣಿಧಣಿ ಜನಾರ್ದನ ರೆಡ್ಡಿ ವಿರುದ್ಧ ದೂರು ದಾಖಲು!

    ಮಾಜಿ ಸಚಿವ ಗಣಿಧಣಿ ಜನಾರ್ದನ ರೆಡ್ಡಿ ವಿರುದ್ಧ ದೂರು ದಾಖಲು!

    ಬಳ್ಳಾರಿ: ಚುನಾವಣೆ ಹೊಸ್ತಿಲ್ಲೇ ಹೈಕಮಾಂಡ್ ಸೂಚನೆಯ ಹಿನ್ನೆಲೆಯಲ್ಲಿ ಪ್ರಚಾರದಿಂದ ಹಿಂದೆ ಸರಿದಿದ್ದ ಮಾಜಿ ಸಚಿವ ಗಣಿಧಣಿ ಜನಾರ್ದನ ರೆಡ್ಡಿ ವಿರುದ್ಧ ಹೊಸ ದೂರು ದಾಖಲಾಗಿದೆ. ಇದನ್ನೂ ಓದಿ: ಸ್ನೇಹಿತರ ಗೆಲುವಿಗಾಗಿ ಫೀಲ್ಡ್ ಗಿಳಿದ ಜನಾರ್ದನ ರೆಡ್ಡಿಗೆ ಬ್ರೇಕ್!

    ಮಾಜಿ ಕಾರ್ಪೋರೇಟರ್ ಪದ್ಮಾವತಿ ಯಾದವ್ ಕೊಲೆ ಪ್ರಕರಣದಲ್ಲಿ ಜನಾರ್ದನರೆಡ್ಡಿ ಹೆಸರು ತಳಕು ಹಾಕಿಕೊಂಡಿದ್ದು, ಕೊಲೆ ಪ್ರಕರಣದಲ್ಲಿ ರೆಡ್ಡಿ ಕೈವಾಡವಿದೆ. ಸಾಕ್ಷಿ ತಿದ್ದುಪಡಿ ಮಾಡಿರುವ ಅನುಮಾನವಿದೆ. ಅಂದಿನ ಕೆಲ ಪೊಲೀಸ್ ಅಧಿಕಾರಿಗಳು ಕೂಡ ಕೊಲೆ ಪ್ರಕರಣ ಸಿ ರಿಪೋರ್ಟ್ ಹಾಕಲು ಕುಮ್ಮಕ್ಕು ನೀಡಿದ್ದಾರೆ. ಅಂದಿನ ಡಿಜಿ ಶಂಕರ್ ಬಿದರಿ ಮತ್ತು ತಂಡ ಸಿ ರಿಪೋರ್ಟ್ ಹಾಕುವಲ್ಲಿ ಯಶಸ್ವಿಯಾಗಿದ್ದಾರೆ ಅನ್ನೋ ಆರೋಪಗಳು ಕೇಳಿಬಂದಿದೆ. ಇದನ್ನೂ ಓದಿ: ಚುನಾವಣಾ ಆಯೋಗದಿಂದ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿಗೆ ಸಂಕಷ್ಟ!

    ಈ ಕುರಿತು ಪದ್ಮಾವತಿ ಯಾದವ್ ಸಹೋದರ ಸುಬ್ಬರಾಯುಡು ಏ.30 ರಂದು ಬಳ್ಳಾರಿ ಎಸ್ಪಿ ಅರುಣ್ ರಂಗರಾಜನ್ ಅವರಿಗೆ ದೂರು ಸಲ್ಲಿಸಿದ್ದಾರೆ. 2010 ಫೆ.4 ರಂದು ಪದ್ಮಾವತಿ ಯಾದವ್ ಕೊಲೆ ನಡೆದಿತ್ತು. ಪ್ರಕರಣ ಸಂಬಂಧ ಮಾಜಿ ಶಾಸಕ ಸೋಮಶೇಖರ್ ರೆಡ್ಡಿ ವಿರುದ್ಧ ಕೊಲೆ ಆರೋಪ ಕೇಳಿ ಬಂದಿತ್ತು. 2016 ಸೆಪ್ಟೆಂಬರ್ ನಲ್ಲಿ ಬಳ್ಳಾರಿ ನ್ಯಾಯಾಲಯಕ್ಕೆ ಸಿಐಡಿ ಅಧಿಕಾರಿಗಳು ಸಿ ರಿಪೋರ್ಟ್ ಸಲ್ಲಿಸಿದ್ದರು. ಇದನ್ನೂ ಓದಿ: ಹೈಕಮಾಂಡ್ ಸೂಚನೆ ಬೆನ್ನಲ್ಲೇ ಚುನಾವಣಾ ಪ್ರಚಾರದಿಂದ ಹಿಂದೆ ಸರಿದ ರೆಡ್ಡಿ!

    ಒಟ್ಟಿನಲ್ಲಿ ಇದೇ ಮೊದಲ ಬಾರಿಗೆ ಈ ಪ್ರಕರಣಕ್ಕೆ ರೆಡ್ಡಿ ಹೆಸರು ತಳಕು ಹಾಕಿಕೊಂಡಿದ್ದು, ಇದೀಗ ಈ ಹೊಸ ಪತ್ರ ತೀವ್ರ ಕುತೂಹಲ ಕೆರಳಿಸಿದೆ.

  • ಕೊಪ್ಪಳ ಉಪವಿಭಾಗಾಧಿಕಾರಿಯಿಂದ ಶಾಸಕ ಇಕ್ಬಾಲ್ ಅನ್ಸಾರಿ ಬೆಂಬಲಿಗನ ಗಡಿಪಾರು

    ಕೊಪ್ಪಳ ಉಪವಿಭಾಗಾಧಿಕಾರಿಯಿಂದ ಶಾಸಕ ಇಕ್ಬಾಲ್ ಅನ್ಸಾರಿ ಬೆಂಬಲಿಗನ ಗಡಿಪಾರು

    ಕೊಪ್ಪಳ: ಕೊಲೆ ಪ್ರಕರಣದಲ್ಲಿ ಭಾಗಿ ಹಾಗೂ ಸಮಾಜದಲ್ಲಿ ಅಶಾಂತಿ ಸೃಷ್ಟಿಸಿದ ಆರೋಪದ ಮೇಲೆ ಗಂಗಾವತಿ ಶಾಸಕ ಇಕ್ಬಾಲ್ ಅನ್ಸಾರಿ ಬೆಂಬಲಿಗನನ್ನ ಗಡಿಪಾರು ಮಾಡಲಾಗಿದೆ.

    ಜುಬೇರ ಖಲೀಲಸಾಬ್ ಎಂಬಾತನನ್ನು ಗಡಿಪಾರು ಮಾಡಲಾಗಿದ್ದು, ಶಾಸಕ ಇಕ್ಬಾಲ್ ಅನ್ಸಾರಿಗೆ ಶಾಕ್ ಆಗಿದಂತಾಗಿದೆ. ಈ ಕುರಿತು ಪಬ್ಲಿಕ್ ಟಿವಿ ವರದಿ ಪ್ರಸಾರ ಮಾಡಿತ್ತು. ಈಚೆಗೆ ಗಂಗಾವತಿಯಲ್ಲಿ ನಡೆದ ಸಿಎಂ ಸಾಧನಾ ಸಮಾವೇಶ ದಲ್ಲೂ ಜುಬೇರ್ ವೇದಿಕೆಯಲ್ಲೆ ಓಡಾಡಿದ್ದ ಈ ಬಗ್ಗೆ ಪಬ್ಲಿಕ್ ಟಿವಿ ವರದಿ ಮಾಡಿ ಗಮನ ಸೆಳೆದಿತ್ತು. ಇದನ್ನೂ ಓದಿ: ಸಿಎಂ ಕಾರ್ಯಕ್ರಮದಲ್ಲಿ ರೌಡಿಶೀಟರ್ ಗಳಿಗೆ ಏನ್ ಕೆಲ್ಸ?

    ಕೊಪ್ಪಳ ಉಪವಿಭಾಗಾಧಿಕಾರಿ ಗುರುದತ್ ಹೆಗಡೆಯವರು ಜುಬೇರನನ್ನ ಚಾಮರಾಜನಗರ ಉಪವಿಭಾಗಕ್ಕೆ ಗಡಿಪಾರು ಮಾಡಿದ್ದಾರೆ. ಅಲ್ಲದೇ ಇನ್ನೊಬ್ಬ ಆರೋಪಿ ಶ್ರೀಕಾಂತ ಹೊಸಕೇರಾ ಎಂಬಾತನನ್ನು ಬೀದರ್ ಜಿಲ್ಲೆಗೆ ಗಡಿಪಾರು ಮಾಡಲಾಗಿದೆ. ಇವರಿಬ್ಬರ ಗಡಿಪಾರು ಈಗ ಜಿಲ್ಲೆಯಲ್ಲಿ ಸಂಚಲನ ಮೂಡಿಸಿದೆ. ಕೊಲೆ, ಸಮಾಜದಲ್ಲಿ ಅಶಾಂತಿ ಸೃಷ್ಟಿಸ್ತಿರೋರಿಗೆ ಈಗ ನಡುಕ ಹುಟ್ಟಿದೆ.

  • ಯೋಗೀಶ ಗೌಡ ಕೊಲೆ ಪ್ರಕರಣ: ಸಿಬಿಐಗೆ ವಹಿಸುವಂತೆ ಬಿಜೆಪಿ ಪ್ರತಿಭಟನೆ

    ಯೋಗೀಶ ಗೌಡ ಕೊಲೆ ಪ್ರಕರಣ: ಸಿಬಿಐಗೆ ವಹಿಸುವಂತೆ ಬಿಜೆಪಿ ಪ್ರತಿಭಟನೆ

    ಧಾರವಾಡ: ಕಳೆದ ಜೂನ್ 15 ರಂದು ದುಷ್ಕರ್ಮಿಗಳಿಂದ ಬರ್ಬರವಾಗಿ ಕೊಲೆಯಾದ ಧಾರವಾಡದ ಹೆಬ್ಬಳ್ಳಿ ಕ್ಷೇತ್ರದ ಜಿಲ್ಲಾ ಪಂಚಾಯ್ತಿ ಸದಸ್ಯ ಯೋಗೀಶ ಗೌಡನ ಕೊಲೆ ಪ್ರಕರಣದ ಸಿಬಿಐ ತನಿಖೆಗೆ ಆಗ್ರಹಿಸಿ ಧಾರವಾಡದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

    ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ ಬಿಜೆಪಿ ಕಾರ್ಯಕರ್ತರು, ಈ ಪ್ರಕರಣವನ್ನ ಸಿಬಿಐಗೆ ವಹಿಸಬೇಕೆಂದು ಆಗ್ರಹಿಸಿದರು.

    ಈ ವೇಳೆ ಧಾರವಾಡ ಜಿಲ್ಲಾ ಉಸ್ತವಾರಿ ಸಚಿವರೇ ಈ ಕೊಲೆಗೆ ಕಾರಣ ಎಂದು ಆರೋಪ ಮಾಡಿದ ಕೊಲೆಯಾದ ಯೋಗೀಶಗೌಡ ಪತ್ನಿ ಮಲ್ಲಮ್ಮ, ಕೊಲೆಗೆ ರಾಜಕೀಯ ದ್ವೇಷವೇ ಕಾರಣ ಎಂದು ಆರೋಪಿಸಿದರು. ಕೊಲೆಯ ಹಿಂದೆ ಜಮೀನು ವಿವಾದ ಎಂದು ಹೇಳಲಾಗುತ್ತಿದೆ. ಆದರೆ ಇದರಲ್ಲಿ ಯಾವುದೇ ಹುರುಳಿಲ್ಲ. ಈ ಕೊಲೆಹೆ ರಾಜಕೀಯ ಕಾರಣವಿದೆ ಹಾಗೂ ನಮಗೆ ಬೆದರಿಕೆ ಪತ್ರ ಬರುತ್ತಿದ್ದು, ನಮ್ಮ ಕುಟುಂಬಕ್ಕೆ ರಕ್ಷಣೆ ನೀಡಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿದರು. ಇನ್ನು ಪ್ರತಿಭಟನೆ ವೇಳೆ ಯೋಗೀಶ ಗೌಡ ಪತ್ನಿ ಮಲ್ಲಮ್ಮ ಅಸ್ವಸ್ಥರಾಗಿ ಕುಸಿದು ಬಿದ್ದ ಘಟನೆಯೂ ನಡೆಯಿತು.