Tag: ಕೊಲಂಬಿಯಾ ವಿಶ್ವವಿದ್ಯಾಲಯ

  • ಹಮಾಸ್‌ ಬೆಂಬಲಿಸಿದ್ದ ಭಾರತೀಯ ವಿದ್ಯಾರ್ಥಿನಿಯನ್ನು ಹೊರದಬ್ಬಿದ ಅಮೆರಿಕ

    ಹಮಾಸ್‌ ಬೆಂಬಲಿಸಿದ್ದ ಭಾರತೀಯ ವಿದ್ಯಾರ್ಥಿನಿಯನ್ನು ಹೊರದಬ್ಬಿದ ಅಮೆರಿಕ

    ವಾಷಿಂಗ್ಟನ್: ಪ್ಯಾಲೆಸ್ತೀನ್‌ ಪರ ಪ್ರತಿಭಟನೆಯಲ್ಲಿ ಭಾಗವಹಿಸಿ ಹಮಾಸ್‌ (Hamas) ಉಗ್ರ ಸಂಘಟನೆಯನ್ನು ಬೆಂಬಲಿಸಿದ್ದಕ್ಕೆ ಭಾರತೀಯ ವಿದ್ಯಾರ್ಥಿನಿಯ ವೀಸಾವನ್ನು (Visa) ಅಮೆರಿಕ ರದ್ದುಗೊಳಿಸಿ ಗಡೀಪಾರು ಮಾಡಿದೆ.

    ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ (Columbia University) ಓದುತ್ತಿದ್ದ ರಂಜನಿ ಶ್ರೀನಿವಾಸನ್ (Ranjani Srinivasan) ಸ್ವಯಂ ಗಡೀಪಾರಾದ ವಿದ್ಯಾರ್ಥಿನಿ. ಎಫ್-1 ವಿದ್ಯಾರ್ಥಿ ಕಲಿಕಾ ವೀಸಾದಲ್ಲಿ ಅಮೆರಿಕಕ್ಕೆ (USA) ತೆರಳಿದ್ದ ರಂಜನಿ ಭಯೋತ್ಪಾದಕ ಸಂಘಟನೆ ಹಮಾಸ್ ಅನ್ನು ಬೆಂಬಲಿಸುವ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಳು ಎಂದು ಹೋಮ್‌ಲ್ಯಾಂಡ್ ಸೆಕ್ಯೂರಿಟಿ ಹೇಳಿದೆ.

    ಹಿಂಸೆ ಮತ್ತು ಭಯೋತ್ಪಾದನೆಯನ್ನು ಪ್ರತಿಪಾದಿಸಿದ್ದಕ್ಕಾಗಿ ಮಾರ್ಚ್ 5 ರಂದು ಅಮೆರಿಕದ ವಿದೇಶಾಂಗ ಇಲಾಖೆ ರಂಜನಿ ಶ್ರೀನಿವಾಸನ್ ವೀಸಾವನ್ನು ರದ್ದುಗೊಳಿಸಿತ್ತು.

     

    ಅಮೆರಿಕ ಎರಡು ವಿಧಾನ ಬಳಸಿ ವಿದೇಶಿ ಪ್ರಜೆಗಳನ್ನು ಗಡೀಪಾರು ಮಾಡುತ್ತದೆ. ಒಂದನೇಯದ್ದು ಅಮೆರಿಕದ ಭದ್ರತಾ ಸಿಬ್ಬಂದಿಯೇ ವಿದೇಶಿ ಪ್ರಜೆಗಳನ್ನು ಬಂಧಿಸಿ ಗಡೀಪಾರು ಮಾಡುತ್ತದೆ. ಸ್ವಯಂ ಗಡೀಪಾರಿನಲ್ಲಿ ಅಮೆರಿಕ ವಿದೇಶಿ ಪ್ರಜೆಗಳನ್ನು ಹೊರಗೆ ದಬ್ಬುವುದಿಲ್ಲ. ಬದಲಾಗಿ ಆ ಪ್ರಜೆಗಳೇ ಅಮೆರಿಕವನ್ನು ತೊರೆಯಬೇಕಾಗುತ್ತದೆ.

    ರಂಜನಿ ಶ್ರೀನಿವಾಸನ್ ವಿಮಾನ ನಿಲ್ದಾಣದ ಮೂಲಕ ದೇಶ ತೊರೆಯುತ್ತಿರುವ ವಿಡಿಯೋವನ್ನು ಅಮೆರಿಕದ ಗೃಹ ಕಾರ್ಯದರ್ಶಿ ಕ್ರಿಸ್ಟಿ ನೋಯೆಮ್ ಎಕ್ಸ್‌ನಲ್ಲಿ ಹಂಚಿಕೊಂಡು, ಹಿಂಸೆ ಮತ್ತು ಭಯೋತ್ಪಾದನೆಯನ್ನು ಪ್ರತಿಪಾದಿಸುವ ಯಾರಾದರೂ ದೇಶದಲ್ಲಿ ಇರಬಾರದು ಎಂದು ಪೋಸ್ಟ್‌ ಮಾಡಿದ್ದಾರೆ.

    ಅಮೆರಿಕದಲ್ಲಿ ವಾಸ ಮಾಡಲು ಮತ್ತು ಅಧ್ಯಯನ ಮಾಡಲು ವೀಸಾ ನೀಡುವುದು ಒಂದು ಸವಲತ್ತು. ಹಿಂಸೆ ಮತ್ತು ಭಯೋತ್ಪಾದನೆಯನ್ನು ಪ್ರತಿಪಾದಿಸಿದಾಗ, ಆ ಸವಲತ್ತನ್ನು ರದ್ದುಗೊಳಿಸಬೇಕಾಗುತ್ತದೆ ಮತ್ತು ನೀವು ಈ ದೇಶದಲ್ಲಿ ಇರಬಾರದು. ಕೊಲಂಬಿಯಾ ವಿಶ್ವವಿದ್ಯಾಲಯದ ಭಯೋತ್ಪಾದಕರ ಪರ ಸಹಾನುಭೂತಿ ಹೊಂದಿದ್ದ ಒಬ್ಬರು ಸ್ವಯಂ ಗಡೀಪಾರು ಮಾಡಲು CBP ಹೋಮ್ ಅಪ್ಲಿಕೇಶನ್ ಅನ್ನು ಬಳಸುವುದನ್ನು ನೋಡಲು ನನಗೆ ಸಂತೋಷವಾಗಿದೆ ಎಂದು ಬರೆದುಕೊಂಡಿದ್ದಾರೆ.  ಇದನ್ನೂ ಓದಿ: ರೈಲು ಹೈಜಾಕ್‌ನಲ್ಲಿ ಸೆರೆಯಾಗಿದ್ದ ಎಲ್ಲಾ 214 ಒತ್ತೆಯಾಳುಗಳ ಸಾಮೂಹಿಕ ಹತ್ಯೆ: ಬಿಎಲ್‌ಎ ಹೇಳಿಕೆ

    ಶ್ರೀನಿವಾಸನ್ ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ನಗರ ಯೋಜನೆಯಲ್ಲಿ ಡಾಕ್ಟರೇಟ್ ವಿದ್ಯಾರ್ಥಿಯಾಗಿದ್ದಳು. ಗ್ರಾಜುಯೇಟ್ ಸ್ಕೂಲ್ ಆಫ್ ಆರ್ಕಿಟೆಕ್ಚರ್, ಪ್ಲಾನಿಂಗ್ ಅಂಡ್ ಪ್ರಿಸರ್ವೇಶನ್‌ನಲ್ಲಿ ಸಂಶೋಧನೆ ನಡೆಸುತ್ತಿದ್ದರು. ಅಹಮದಾಬಾದ್‌ನ CEPT ವಿಶ್ವವಿದ್ಯಾಲಯದಿಂದ ಪದವಿ ಮತ್ತು ಫುಲ್‌ಬ್ರೈಟ್ ನೆಹರು ಮತ್ತು ಇನ್‌ಲ್ಯಾಕ್ಸ್ ವಿದ್ಯಾರ್ಥಿವೇತನಗಳೊಂದಿಗೆ ಹಾರ್ವರ್ಡ್‌ನಿಂದ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಳು.

    ಇಸ್ರೇಲ್-ಹಮಾಸ್ ಯುದ್ಧ ನಡೆಯುತ್ತಿದ್ದಾಗ ಪ್ಯಾಲೆಸ್ತೀನ್‌ ಪರವಾಗಿ ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಭಾರೀ ಪ್ರತಿಭಟನೆ ನಡೆದಿತ್ತು. ಕಳೆದ ಪರ ಪ್ರತಿಭಟನೆಯಲ್ಲಿ ಮುಂಚೂಣಿಯಲ್ಲಿದ್ದ ಪ್ಯಾಲೆಸ್ತೀನ್‌ ಮೂಲದ ಮಾಜಿ ಕೊಲಂಬಿಯಾ ವಿದ್ಯಾರ್ಥಿ ಮಹಮೂದ್ ಖಲೀಲ್‌ನನ್ನು ಅಮೆರಿಕ ಅಧಿಕಾರಿಗಳು ಬಂಧಿಸಿದ್ದರು. ಖಲೀಲ್‌ ಗ್ರೀನ್‌ ಕಾರ್ಡ್‌ ರದ್ದಾಗಿದ್ದರೂ ಫೆಡರಲ್ ನ್ಯಾಯಾಧೀಶರು ಖಲೀಲ್ ಗಡೀಪಾರು ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ತಡೆಹಿಡಿದಿದ್ದಾರೆ.