Tag: ಕೊರೊನಾ 2ನೇ ಅಲೆ

  • ಕೊರೊನಾ 2ನೇ ಅಲೆ ಮುಗಿದಿಲ್ಲ, ಮೈ ಮರೆಯುವಂತಿಲ್ಲ: ಹರ್ಷವರ್ಧನ್

    ಕೊರೊನಾ 2ನೇ ಅಲೆ ಮುಗಿದಿಲ್ಲ, ಮೈ ಮರೆಯುವಂತಿಲ್ಲ: ಹರ್ಷವರ್ಧನ್

    ನವದೆಹಲಿ: ಕೊರೊನಾ 2ನೇ ಅಲೆ ಇನ್ನೂ ಮುಗಿದಿಲ್ಲ, ನಿರಾಳರಾಗಬಾರದು. ವೈಯಕ್ತಿಕ ಸುರಕ್ಷತೆಯನ್ನು ಯಾವುದೇ ಸಂದರ್ಭದಲ್ಲೂ ಮರೆಯಬಾರದು ಎಂದು ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಎಚ್ಚರಿಸಿದ್ದಾರೆ.

    ದೆಹಲಿ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಲ್, ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಹಾಗೂ ಇತರರೊಂದಿಗೆ ವೀಡಿಯೋ ಕಾನ್ಫರೆನ್ಸ್ ನಲ್ಲಿ ಮಾತನಾಡಿದರು. ರಾಷ್ಟ್ರ ರಾಜಧಾನಿಯಲ್ಲಿ ಕೊರೊನಾ ನಿಯಂತ್ರಣಕ್ಕೆ ಕೈಗೊಂಡಿರುವ ಮುನ್ನೆಚ್ಚರಿಕಾ ಕ್ರಮಗಳನ್ನು ಮರೆಯಬಾರದು ಎಂದು ತಿಳಿಸಿದರು.

    ಕೊರೊನಾ 2ನೇ ಅಲೆ ಇನ್ನೂ ಮುಗಿದಿಲ್ಲ. ದೆಹಲಿಯಲ್ಲಿ ಕೊರೊನಾ ಸೋಂಕಿನ ಪ್ರಮಾಣದಲ್ಲಿ ಭಾರೀ ಇಳಿಕೆಯಾಗಿರಬಹುದು. ಆದರೆ ನಮ್ಮ ಒಂದೂವರೆ ವರ್ಷದ ಅನುಭವವನ್ನು ಗಮನದಲ್ಲಿರಿಸಿಕೊಂಡು ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವುದನ್ನು ಯಾವುದೇ ಸಂದರ್ಭದಲ್ಲಿಯೂ ಮರೆಯಬಾರದು. ಸಾರ್ವಜನಿಕರು ಹಾಗೂ ಸಮುದಾಯವನ್ನು ಸಹ ವಿಶ್ರಾಂತಿಯಿಂದ ಇರಲು ಬಿಡಬೇಡಿ, ಎಲ್ಲ ಸಂದರ್ಭಗಳಲ್ಲಿಯೂ ನಾವು ಎಚ್ಚರಿಕೆಯಿಂದ ಇರಬೇಕು ಎಂದು ತಿಳಿಸಿದ್ದಾರೆ.

    ಅದೃಷ್ಟವಶಾತ್ ಕಳೆದ 6 ತಿಂಗಳಿಂದ ಲಸಿಕೆ ಲಭ್ಯವಿದೆ. ಆದ್ದರಿಂದ ಮುನ್ನೆಚ್ಚರಿಕಾ ಕ್ರಮಗಳು ಹಾಗೂ ಹೆಚ್ಚು ಜನರಿಗೆ ಲಸಿಕೆ ನೀಡಿದ್ದರಿಂದ ಕೊರೊನಾ ವಿರುದ್ಧದ ಹೋರಾಟದಲ್ಲಿ ನಾವು ಯಶಸ್ವಿಯಾಗಿದ್ದೇವೆ. ಈಗಲೂ ನಾವು ಮೈ ಮರೆಯಬಾರದು ಸದಾ ಎಚ್ಚರಿಕೆಯಿಂದ ಇರಬೇಕು ಎಂದು ಅವರು ಕರೆ ನೀಡಿದ್ದಾರೆ.

  • ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ಸಾಧ್ಯತೆ- ಸುಧಾಕರ್

    ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ಸಾಧ್ಯತೆ- ಸುಧಾಕರ್

    – ಮಾಸ್ಕ್, ಸಾಮಾಜಿಕ ಅಂತರ ಮರೆತು ಜನರಿಂದ ಉದಾಸೀನ
    – ಗಡಿಭಾಗಗಳಲ್ಲಿ ಹೈ ಅಲರ್ಟ್ ಗೆ ಗೃಹಸಚಿವರಿಗೆ ಪತ್ರ

    ಚಿಕ್ಕಬಳ್ಳಾಪುರ: ಕೊರೊನಾ ವೈರಸ್ ನಿರ್ನಾಮವಾಗಿದೆ ಎಂದು ಜನ ಉದಾಸೀನ ಮಾಡುತ್ತಿದ್ದಾರೆ. ಆದರೆ ರಾಜ್ಯಕ್ಕೆ ಕೊರೊನಾ ಎರಡನೇ ಅಲೆ ಬರುವ ಸಾಧ್ಯತೆ ಇದೆ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ಎಚ್ಚರಿಕೆ ನೀಡಿದ್ದಾರೆ.

    ಈ ಕುರಿತು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಗಡಿಭಾಗಗಳಲ್ಲಿ ಹೈ ಅಲರ್ಟ್ ಘೋಷಿಸಲು ಗೃಹ ಸಚಿವರಿಗೆ ಪತ್ರ ಬರೆಯಲಾಗಿದೆ. ಈಗಾಗಲೇ ಕೇರಳ, ಮಹಾರಾಷ್ಟ್ರದಲ್ಲಿ ಕೊರೊನಾ ಎರಡನೇ ಅಲೆ ಅರಂಭವಾಗಿದ್ದು, ಕೇರಳ-ಮಹಾರಾಷ್ಟ್ರದಿಂದ ರಾಜ್ಯಕ್ಕೆ ಬರುವವರಿಗೆ ಕೋವಿಡ್ 19 ನೆಗಟಿವ್ ರಿಪೋರ್ಟ್ ಕಡ್ಡಾಯ ಮಾಡಲಾಗಿದೆ ಎಂದು ತಿಳಿಸಿದರು.

    ಈ ಬಗ್ಗೆ ಮಹಾರಾಷ್ಟ್ರ ಹಾಗೂ ಕೇರಳ ಗಡಿ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೂ ಪತ್ರ ಬರೆದಿದ್ದು, ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ. ಅಲ್ಲದೇ ಸಿಎಂ ನೇತೃತ್ವದಲ್ಲಿ ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳ ಜೊತೆ ನಾಳೆ ಸಭೆ ನಡೆಸಿ, ಎರಡನೇ ಅಲೆ ಆರಂಭವಾಗದಂತೆ ಕ್ರಮ ಕೈಗೊಳ್ಳಲಾಗುವುದು. ರಾಜ್ಯದ ಜನ ಕೊರೊನಾ ಮಾಯವಾಗಿದೆ ಎಂದು ಮಾಸ್ಕ್ ಹಾಕದೆ ಸಾಮಾಜಿಕ ಅಂತರ ಕಾಪಾಡಿಕೊಳ್ಳದೆ ಉದಾಸೀನ ಮಾಡುತ್ತಿದ್ದಾರೆ ಎಂದು ಸಚಿವರು ಅಸಮಾಧಾನ ಹೊರಹಾಕಿದರು.