Tag: ಕೊರೊನಾ ಹೆಲ್ಮೆಟ್

  • ಲಾಠಿ ರುಚಿಗೆ ಡೋಂಟ್ ಕೇರ್ ಅಂದೋರು ‘ಕೊರೊನಾ ಹೆಲ್ಮೆಟ್’ಗೆ ಗಢ ಗಢ

    ಲಾಠಿ ರುಚಿಗೆ ಡೋಂಟ್ ಕೇರ್ ಅಂದೋರು ‘ಕೊರೊನಾ ಹೆಲ್ಮೆಟ್’ಗೆ ಗಢ ಗಢ

    -ಕೊರೊನಾ ಹೆಲ್ಮೆಟ್ ಮೂಲಕ ಪೊಲೀಸರಿಂದ ಜನರಲ್ಲಿ ಅರಿವು

    ಚೆನ್ನೈ: ಮಹಾಮಾರಿ ಕೊರೊನಾ ತಡೆಗಟ್ಟಲು ದೇಶಾದ್ಯಂತ ಲಾಕ್‍ಡೌನ್ ಘೋಷಿಸಲಾಗಿದೆ. ಆದರೂ ಹಲವರು ಈ ನಿಯಮ ಪಾಲಿಸುತ್ತಿಲ್ಲ. ಬೇಕಾಬಿಟ್ಟಿಯಾಗಿ ಸಂಚಿರಿಸುತ್ತಿದ್ದಾರೆ. ಇದನ್ನು ತಡೆಯಲು ಪೊಲೀಸರು ವಿವಿಧ ಉಪಾಯಗಳನ್ನು ಹುಡುಕುತ್ತಿದ್ದು, ಇದರ ಭಾಗವಾಗಿ ಕೊರೊನಾ ವೈರಸ್ ಆಕೃತಿಯ ಹೆಲ್ಮೆಟ್ ಧರಿಸಿ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ.

    ಚೆನ್ನೈ ಪೊಲೀಸರು ಈ ವಿಭಿನ್ನ ಪ್ರಯತ್ನಕ್ಕೆ ಮುಂದಾಗಿದ್ದು, ಸ್ಥಳೀಯ ಕಲಾವಿದರ ಸಹಾಯದೊಂದಿಗೆ ಕೊರೊನಾ ಹೆಲ್ಮೆಟ್ ತಯಾರಿಸಿ, ಅದನ್ನು ಧರಿಸುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಸರ್ಕಾರ ಲಾಕ್‍ಡೌನ್ ಮಾಡಿ ಇಷ್ಟೆಲ್ಲಾ ಕ್ರಮ ಕೈಗೊಂಡರೂ ಸಾರ್ವಜನಿಕರು ಮಾತ್ರ ಇದಕ್ಕೆ ಕ್ಯಾರೆ ಎಂದಿಲ್ಲ. ಜನರನ್ನು ಮನೆಯಲ್ಲಿರುವಂತೆ ಕೇಳಿಕೊಂಡರೂ ಹೊರಗಡೆ ಬರುತ್ತಿದ್ದಾರೆ. ಪೊಲೀಸರು ದಿನದ 24ಗಂಟೆ ಕೆಲಸ ಮಾಡುತ್ತಿದ್ದು, ಕೆಲವರಿಂದಾಗಿ ಪರಿಸ್ಥಿತಿ ಹದಗೆಡುತ್ತಿದೆ.

    ಹಾಳಾದ ಹೆಲ್ಮೆಟ್ ಹಾಗೂ ಪೇಪರ್ ಬಳಸಿ ಕೊರೊನಾ ಹೆಲ್ಮೆಟ್ ತಯಾರಿಸಿದ್ದೇನೆ. ಮಾತ್ರವಲ್ಲದೆ ಜನರಲ್ಲಿ ಜಾಗೃತಿ ಮೂಡಿಸಲು ಹಲವು ಪ್ಲೇಕಾರ್ಡ್‍ಗಳನ್ನೂ ತಯಾರಿಸಿದ್ದೇನೆ. ಇವುಗಳನ್ನು ಸಹ ಪೊಲೀಸರಿಗೆ ನೀಡಿದ್ದೇನೆ. ಸಾರ್ವಜನಿಕರು ಮನೆಯಲ್ಲೇ ಇದ್ದು ಕೊರೊನಾ ಹರಡುವುದನ್ನು ತಡೆಗಟ್ಟಬೇಕು ಎಂದು ಹೆಲ್ಮೆಟ್ ಡಿಸೈನ್ ಮಾಡಿದ ಗೌತಮ್ ಅಭಿಪ್ರಾಯಪಟ್ಟಿದ್ದಾರೆ.

    ಜನರಲ್ಲಿ ಜಾಗೃತಿ ಮೂಡಿಸಲು ಈ ಹೆಲ್ಮೆಟ್ ತುಂಬಾ ಸಹಕಾರಿಯಾಗಿದೆ. ಇದರಿಂದಾಗಿ ಜನರಲ್ಲಿ ಅರಿವು ಮೂಡುತ್ತಿದೆ. ಹೊರಗಡೆ ಬರಬೇಡಿ ಎಂದು ಎಷ್ಟೇ ಹೇಳಿದರೂ ಜನ ಕೇಳುತ್ತಿರಲಿಲ್ಲ. ಆದರೆ ಈ ಕೊರೊನಾ ಹೆಲ್ಮೆಟ್‍ನಿಂದಾಗಿ ಜನ ಜಾಗೃತರಾಗುತ್ತಿದ್ದಾರೆ. ಅದರ ಗಂಭೀರತೆ ಅರ್ಥವಾಗುತ್ತಿದೆ. ಈ ಹೆಲ್ಮೆಟ್ ತುಂಬಾ ವಿಭಿನ್ನವಾಗಿರುವುದರಿಂದ ಜನ ಭಯಪಡುತ್ತಿದ್ದಾರೆ. ವಿಶೇಷವಾಗಿ ಮಕ್ಕಳು ಭಯಪಟ್ಟುಕೊಂಡು ಮನೆ ಕಡೆಗೆ ಓಡುತ್ತಿದ್ದಾರೆ ಎಂದು ಹೆಲ್ಮೆಟ್ ಧರಿಸಿ ಜಾಗೃತಿ ಮೂಡಿಸುತ್ತಿರುವ ಪೊಲೀಸ್ ಇನ್ಸ್ ಪೆಕ್ಟರ್ ರಾಜೇಶ್ ಬಾಬು ತಿಳಿಸಿದ್ದಾರೆ.