Tag: ಕೊರೊನಾ ಸೋಂಕಿತ

  • ಕೊರೊನಾ ಸೋಂಕಿತನ ಮೊಬೈಲ್ ಕದ್ದು ಕ್ವಾರಂಟೈನ್ ಆದ ಕಳ್ಳ

    ಕೊರೊನಾ ಸೋಂಕಿತನ ಮೊಬೈಲ್ ಕದ್ದು ಕ್ವಾರಂಟೈನ್ ಆದ ಕಳ್ಳ

    -ಐಸೋಲೇಷನ್ ವಾರ್ಡಿಗೆ ನುಗ್ಗಿ ಕಳ್ಳತನ

    ದಿಸ್ಪುರ್: ಆಸ್ಪತ್ರೆಯ ಐಸೋಲೇಷನ್‍ವಾರ್ಡ್‍ನಲ್ಲಿದ್ದ ಕೊರೊನಾ ಸೋಂಕಿತನ ಮೊಬೈಲ್ ಕದ್ದು ಕಳ್ಳನೋರ್ವ ಕ್ವಾರಂಟೈನ್ ಆಗಿರುವ ಘಟನೆ ಅಸ್ಸಾಂನ ಚಿರಾಂಗ್ ಜಿಲ್ಲೆಯ ಕಾಜಲ್‍ಗಾಂವ್‍ನ ಜೆಎಸ್‍ಎಸ್‍ಬಿ ಸಿವಿಲ್ ಆಸ್ಪತ್ರೆಯಲ್ಲಿ ನಡೆದಿದೆ.

    ಸೋಂಕಿತನ ಮೊಬೈಲ್ ಕದ್ದ ಕಳ್ಳನನ್ನು ಪಪ್ಪು ಬರ್ಮನ್ (22) ಎಂದು ಗುರುತಿಸಲಾಗಿದೆ. ಈತ ಆಸ್ಪತ್ರೆಯಲ್ಲಿ ಸೋಂಕಿತ ಮಲಗಿದ ನಂತರ ಸುಮಾರು ರಾತ್ರಿ ಒಂದು ಗಂಟೆಗೆ ಐಸೋಲೇಷನ್ ವಾರ್ಡಿಗೆ ನುಗ್ಗಿ ಫೋನ್ ಕದ್ದು ಸಿಕ್ಕಿಬಿದ್ದಿದ್ದಾನೆ. ಈ ವೇಳೆ ಆತನನ್ನು ಅದೇ ಆಸ್ಪತ್ರೆಯಲ್ಲಿ ಕ್ವಾರಂಟೈನ್ ಮಾಡಲಾಗಿದೆ.

    ಪಪ್ಪು ಬರ್ಮನ್ ಫೋನ್ ಕದ್ದು ಆಸ್ಪತ್ರೆಯಿಂದ 15 ಕಿಮೀ ದೂರದಲ್ಲಿರುವ ತನ್ನ ಮನೆಯಲ್ಲಿ ಇದ್ದ. ಆಸ್ಪತ್ರೆಯಲ್ಲಿ ಸಿಕ್ಕ ಸಿಸಿಟಿವಿ ದೃಶ್ಯವನ್ನು ಆಧರಿಸಿ ಪೊಲೀಸರು ಆತನನ್ನು ಪತ್ತೆಹಚ್ಚಿದ್ದಾರೆ. ನಂತರ ವೈದ್ಯರ ಸಮೇತ ಆತನ ಮನೆಗೆ ಹೋಗಿ ಬಂಧಿಸಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ಸದ್ಯ ಆತನ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಿದ್ದು, ವರದಿಗಾಗಿ ಕಾಯುತ್ತಿದ್ದಾರೆ.

    ಐಸೋಲೇಷನ್ ವಾರ್ಡ್ ಒಳಗೆ ಹೋಗಲು ಈತ ಹೇಗೆ ಧೈರ್ಯ ಮಾಡಿದ ಎಂದು ನಮಗೆ ಈಗಲೂ ಗೊತ್ತಾಗುತ್ತಿಲ್ಲ. ಈತ ಮೊಬೈಲ್ ಕದ್ದ ವ್ಯಕ್ತಿ ಕೊರೊನಾ ಸೋಂಕಿತನಾಗಿದ್ದು, ಆತ ಇನ್ನೂ ಸಕ್ರಿಯ ಹಂತದಲ್ಲಿ ಇದ್ದಾನೆ. ಹೀಗಾಗಿ ಮೊಬೈಲ್‍ಗೆ ಕೂಡ ವೈರಸ್ ಅಂಟಿರಬಹುದು. ಹಾಗಾಗಿ ಪಪ್ಪು ಬರ್ಮನ್ ವರದಿ ಬರುವವರೆಗೂ ಆತನ ಮೇಲೆ ನಿಗಾವಹಿಸಿದ್ದೇವೆ ಎಂದು ವೈದ್ಯ ಮನೋಜ್ ದಾಸ್ ಹೇಳಿದ್ದಾರೆ.

    ನಾವು ಆರೋಪಿಯನ್ನು ಹಿಡಿದು ಕ್ವಾರಂಟೈನ್‍ಗೆ ಒಪ್ಪಿಸಿದ್ದೇವೆ. ಈ ವಿಚಾರವನ್ನು ಜಿಲ್ಲಾ ಆರೋಗ್ಯ ಇಲಾಖೆಗೆ ನೀಡಿದ್ದೇವೆ. ಇನ್ನೂ ಮುಂದೆ ಅವರು ಆತನ ಪ್ರಾಥಮಿಕ ಮತ್ತು ದ್ವೀತಿಯ ಹಂತದ ಸಂಪರ್ಕಿತರನ್ನು ಗುರುತಿಸಬೇಕು ಎಂದು ಎಸ್‍ಪಿ ಸುಧಾಕರ್ ಸಿಂಗ್ ಅವರು ತಿಳಿಸಿದ್ದಾರೆ.

  • ಸಿಡಿಪಿಒರಿಂದ ಚಾಮರಾಜನಗರಕ್ಕೂ ಸೋಂಕು ಶಂಕೆ- ಜಿಲ್ಲಾಧಿಕಾರಿ ಸ್ಪಷ್ಟನೆ

    ಸಿಡಿಪಿಒರಿಂದ ಚಾಮರಾಜನಗರಕ್ಕೂ ಸೋಂಕು ಶಂಕೆ- ಜಿಲ್ಲಾಧಿಕಾರಿ ಸ್ಪಷ್ಟನೆ

    ಚಾಮರಾಜನಗರ: ಕೊರೊನಾ ಸೋಂಕಿತ ಸಿಡಿಪಿಒ ಅಧಿಕಾರಿ ನಂಜನಗೂಡು ತಾಲೂಕು ಹೆಳವರಹುಂಡಿಯಲ್ಲಿ ನಡೆದ ಮದುವೆಯಲ್ಲಿ ಭಾಗವಹಿಸಿರಲಿಲ್ಲ ಹಾಗೂ ಚಾಮರಾಜನಗರ ಜಿಲ್ಲೆಯ ಸೋಮವಾರಪೇಟೆಯ ಯಾರು ಸಹ ಆತನ ಸಂಪರ್ಕಕ್ಕೆ ಬಂದಿಲ್ಲ ಎಂದು ಚಾಮರಾಜನಗರ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಸ್ಪಷ್ಟಪಡಿಸಿದ್ದಾರೆ.

    ಸೋಂಕಿತ ಅಧಿಕಾರಿ ಹೆಳವರಹುಂಡಿಯ ತಮ್ಮ ಅಜ್ಜಿಯ ಮನೆಗೆ ಬಂದಿದ್ದರು ಅಷ್ಟೇ. ಅವರು ಹೆಳವರಹುಂಡಿಯಲ್ಲಿ ನಿನ್ನೆ ನಡೆದ ಮದುವೆಯಲ್ಲಿ ಪಾಲ್ಗೊಂಡಿರಲಿಲ್ಲ. ಹಾಗಾಗಿ ಮದುವೆಯಲ್ಲಿ ಭಾಗವಹಿಸಿದ್ದ ಚಾಮರಾಜನಗರ ಜಿಲ್ಲೆಯ ಸೋಮವಾರಪೇಟೆ ನಿವಾಸಿಗಳು ಅವರ ಪ್ರಾಥಮಿಕ ಸಂಪರ್ಕ ಹೊಂದಿಲ್ಲ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

    ಕೆರೆಹಳ್ಳಿಯಲ್ಲಿ ಮೀನು ಖರೀದಿಸಿದ್ದು ಸೋಂಕಿತ ಅಧಿಕಾರಿಯಲ್ಲ. ಬದಲಾಗಿ ಅವರದ್ದೇ ಹೆಸರಿನ ಅವರ ಸಂಬಂಧಿ. ಯಾರು ಆತಂಕಕ್ಕೆ ಒಳಗಾಗಬಾರದು. ಮದುವೆಯಲ್ಲಿ ಪಾಲ್ಗೊಂಡಿದ್ದ ಚಾಮರಾಜನಗರದ ಸೋಮವಾರಪೇಟೆಯ ನಿವಾಸಿಗಳು ಕ್ಷೇಮವಾಗಿದ್ದು, ಯಾರು ಸಹ ಆತಂಕಕ್ಕೆ ಒಳಗಾಗಬಾರದು ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಮನವಿ ಮಾಡಿದ್ದಾರೆ.

  • ಕೊರೊನಾ ಸೋಂಕಿತನಿಗೆ ವೈದ್ಯನಿಂದ ಲೈಂಗಿಕ ಕಿರುಕುಳ

    ಕೊರೊನಾ ಸೋಂಕಿತನಿಗೆ ವೈದ್ಯನಿಂದ ಲೈಂಗಿಕ ಕಿರುಕುಳ

    -ಚಿಕಿತ್ಸೆ ವೇಳೆ ಅಸಭ್ಯ ವರ್ತನೆ
    -ವೈದ್ಯನನ್ನ ಕ್ವಾರಂಟೈನ್ ನಲ್ಲಿರಿಸಿದ ಪೊಲೀಸರು

    ಮುಂಬೈ: ಕೊರೊನಾ ಸೋಂಕಿತನಿಗೆ 34 ವರ್ಷದ ವೈದ್ಯನೊಬ್ಬ ಲೈಂಗಿಕ ಕಿರುಕುಳ ನೀಡಿರುವ ಘಟನೆ ಮಹಾರಾಷ್ಟ್ರದ ಮುಂಬೈನಲ್ಲಿ ನಡೆದಿದೆ.

    44 ವರ್ಷದ ಪುರುಷನಿಗೆ ಕೊರೊನಾ ಸೋಂಕು ತಗುಲಿದ್ದು, ನಗರದ ಖಾಸಗಿ ಆಸ್ಪತ್ರೆಯ ಕೋವಿಡ್-19 ಘಟಕದ ಐಸಿಯು ವಾರ್ಡಿನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಚಿಕಿತ್ಸೆ ವೇಳೆ ವೈದ್ಯ ಅಸಹಜವಾಗಿ ಸ್ವರ್ಶಿಸುತ್ತಿದ್ದ ಎಂದು ಸೋಂಕಿತ ಆರೋಪಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

    ವೈದ್ಯ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿದ್ದರಿಂದ ಆತನನ್ನು ಬಂಧಿಸಿಲ್ಲ. ಹಾಗಾಗಿ ವೈದ್ಯನನ್ನು ಆತನ ಮನೆಯಲ್ಲಿಯೇ ಪೊಲೀಸ್ ಬಂದೋಬಸ್ತನಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಕ್ವಾರಂಟೈನ್ ಅವಧಿ ಮುಗಿದ ಬಳಿಕ ವೈದ್ಯನನ್ನು ಪೊಲೀಸರು ವಶಕ್ಕೆ ಪಡೆದುಕೊಳ್ಳಲಿದ್ದಾರೆ.

  • ನಮಗಾಗಿ ವೈದ್ಯರು ದೇವರಲ್ಲಿ ಪ್ರಾರ್ಥನೆ ಮಾಡಿದ್ರು: ಕೊರೊನಾ ಗೆದ್ದವರ ಮಾತು

    ನಮಗಾಗಿ ವೈದ್ಯರು ದೇವರಲ್ಲಿ ಪ್ರಾರ್ಥನೆ ಮಾಡಿದ್ರು: ಕೊರೊನಾ ಗೆದ್ದವರ ಮಾತು

    -ಬರುವಾಗ ಅವರೇ ಬಟ್ಟೆ, ಚಪ್ಪಲಿ ತಂದುಕೊಟ್ರು

    ಕಾರವಾರ: ಮಹಾಮಾರಿ ಕೊರೊನಾ ಸೋಂಕಿನಿಂದ ಗುಣಮುಖಗೊಂಡು ಮತ್ತೆ ಹೊಸ ಜೀವನ ಪಡೆದುಕೊಂಡ ಉತ್ತರಕನ್ನಡ ಜಿಲ್ಲೆಯ ಭಟ್ಕಳದ ಇಬ್ಬರು ನಿವಾಸಿಗಳು ತಮ್ಮ ಸಂತೋಷ ಹಂಚಿಕೊಂಡಿದ್ದಾರೆ.

    ಕೆಲವು ದಿನಗಳ ಹಿಂದೆಯೇ ಕಾರವಾರದ ನೌಕಾನೆಲೆಯಲ್ಲಿರುವ ಪತಂಜಲಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದ ಸೋಂಕಿತ ರೋಗಿ ಸಂಖ್ಯೆ 36 ಹಾಗೂ ಇಂದು ಡಿಸ್ಚಾರ್ಜ್ ಆಗಿರುವ ಸೋಂಕಿತ ರೋಗಿ ಸಂಖ್ಯೆ 98 ಮತ್ತೆ ಆರೋಗ್ಯವಂತರಾಗಿ ಮರಳಿರುವುದಕ್ಕೆ ದೇವರು, ಜಿಲ್ಲಾಡಳಿತ, ವೈದ್ಯರು ಹಾಗೂ ಪೊಲೀಸರಿಗೆ ಧನ್ಯವಾದ ಅರ್ಪಿಸಿದ್ದಾರೆ.

    ದೇವರ ದಯೆಯಿಂದ ಗುಣಮುಖರಾಗಿದ್ದೇವೆ. ಆಸ್ಪತ್ರೆಯಿಂದ ಬಿಡುಗಡೆಗೊಂಡ ಬಳಿಕ ಸಂತೋಷದ ಅನುಭವವಾಗುತ್ತಿದೆ. ಆಸ್ಪತ್ರೆಯಲ್ಲೂ ನಮಗೆ ಯಾವುದೇ ತೊಂದರೆಯಾಗಿಲ್ಲ. ಆರೋಗ್ಯಾಧಿಕಾರಿ, ಡಿಸಿ, ಪೊಲೀಸ್ ಅಧಿಕಾರಿಗಳು ನಮಗೆ ಸಾಕಷ್ಟು ಸಹಕಾರ ನೀಡಿದ್ದಾರೆ. ಬಹಳ ಉತ್ತಮವಾಗಿ ನಮಗೆ ಚಿಕಿತ್ಸೆ ನೀಡಿದ್ದಾರೆ. ಸರ್ಕಾರವೂ ನಮ್ಮನ್ನು ಉತ್ತಮವಾಗಿ ನೋಡಿಕೊಂಡಿದ್ದು, ಒಳ್ಳೆಯ ಸೌಲಭ್ಯಗಳನ್ನೂ ಒದಗಿಸಿದೆ.

    ತೊಟ್ಟ ಬಟ್ಟೆಯಲ್ಲೇ ಕಾರವಾರದ ಪತಂಜಲಿ ಆಸ್ಪತ್ರೆಗೆ ತೆರಳಿದ್ದವು, ಬರುವಾಗ ಅವರ ಬಟ್ಟೆ ಹಾಕಿಕೊಂಡು ಬಂದಿದ್ದೆವು. ಅವರೇ ಚಪ್ಪಲಿಯನ್ನೂ ಕೊಟ್ಟಿದ್ದರು, ಮಹಿಳೆಯರಿಗೂ ಬಟ್ಟೆ ನೀಡಿದ್ದಾರೆ. ವೈದ್ಯಾಧಿಕಾರಿಗಳು ನಮ್ಮಲ್ಲಿ ಬಹಳಷ್ಟು ಚೆನ್ನಾಗಿದ್ದರು. ಉತ್ತಮ ಚಿಕಿತ್ಸೆ ನೀಡಿದರು. ನಮಗಾಗಿ ವೈದ್ಯಾಧಿಕಾರಿಗಳು ದೇವರಲ್ಲಿ ಪ್ರಾರ್ಥನೆ ಕೂಡಾ ಮಾಡಿದ್ದಾರೆ. ಅತ್ಯುತ್ತಮವಾಗಿ ನಮ್ಮ ಜತೆ ಬೆರೆತುಕೊಂಡು ಗುಣಮುಖಗೊಳಿಸಿದರು ಎಂದು ಡಿಸ್ಟಾರ್ಜ್ ಗೊಂಡ ಸೋಂಕಿತ ಸಂಖ್ಯೆ 98 ಹಾಗೂ ಸೋಂಕಿತ 36 ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

    ಇಂದು ಕಾರವಾರದ ನೌಕಾನೆಲೆಯ ಪತಂಜಲಿ ಆಸ್ಪತ್ರೆಯಿಂದ ಬಿಡುಗಡೆಗೊಂಡ ಸೋಂಕಿತ ರೋಗಿ ಸಂಖ್ಯೆ 98, ಭಟ್ಕಳದ 26 ವರ್ಷದ ಯವಕನಾಗಿದ್ದು, ದುಬೈನಿಂದ ಮಾರ್ಚ್ 20 ರಂದು ಭಟ್ಕಳಕ್ಕೆ ಆಗಮಿಸಿದ್ದ. ದುಬೈನಿಂದ ಗೋವಾ ವಿಮಾನ ನಿಲ್ದಾಣಕ್ಕೆ ಆಗಮಿಸಿ ಕಾರವಾರದ ಮೂಲಕ ಭಟ್ಕಳಕ್ಕೆ ತೆರಳಿದ್ದ ಯುವಕನಲ್ಲಿ ಸೋಂಕಿನ ಯಾವುದೇ ಗುಣಲಕ್ಷಣಗಳಿಲ್ಲದಿದ್ದರೂ ಮುಂಜಾಗ್ರತಾ ಕ್ರಮವಾಗಿ ನಡೆಸಿದ ಪರೀಕ್ಷೆಯಲ್ಲಿ ಸೋಂಕು ಪತ್ತೆಯಾಗಿತ್ತು.

    ಅಲ್ಲದೇ ಈ ಯುವಕನಲ್ಲಿ ಸೋಂಕು ಪತ್ತೆಯಾಗುವ ಮುನ್ನ ಮೂರು ದಿನಗಳ ಹಿಂದೆ ಆತನ ಸಹೋದರನಲ್ಲೂ ಸೋಂಕು ಪತ್ತೆಯಾಗಿತ್ತು. ಈ ಯುವಕನಲ್ಲಿ ಸೋಂಕು ದೃಢಪಟ್ಟ ಬಳಿಕ ಯುವಕನನ್ನು ಮಾರ್ಚ್ 31ರಂದು ಕಾರವಾರದ ನೌಕಾ ನೆಲೆಯ ಪತಂಜಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. 19 ದಿನಗಳ ಬಳಿಕ ಕೊರೊನಾ ವೈರಸ್ ಕಾಟದಿಂದ ಯುವಕ ಗುಣಮುಖನಾಗಿದ್ದಾನೆ.

    ಈ ಹಿಂದೆಯೇ ಆಸ್ಪತ್ರೆಯಿಂದ ಡಿಸ್ಚಾರ್ಚ್ ಆಗಿದ್ದ ಸೋಂಕಿತ ಸಂಖ್ಯೆ 36 ದುಬೈನಿಂದ ಮಾ. 19ಕ್ಕೆ ಮುಂಬೈಗೆ ತಲುಪಿದ್ದರು. ರೈಲಿನ ಮೂಲಕ ಮಾ. 20ಕ್ಕೆ ಭಟ್ಕಳಕ್ಕೆ ಬಂದಿದ್ದ 65 ವರ್ಷದ ಸೋಂಕಿತ ಸಂಖ್ಯೆ 36 ರಿಗೆ, ಸೋಂಕು ಲಕ್ಷಣ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮಾ. 21ರಂದೇ ಆಸ್ಪತ್ರೆಯಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಪರೀಕ್ಷೆ ವರದಿಯಲ್ಲೂ ಕೊರೊನಾ ಸೋಂಕು ಪತ್ತೆಯಾಗಿತ್ತು. ಚಿಕಿತ್ಸೆ ಬಳಿಕ ಈ ಹಿಂದೆಯೇ ಪತಂಜಲಿ ಆಸ್ಪತ್ರೆಯಿಂದ ಸೋಂಕಿತ ಸಂಖ್ಯೆ 36 ಬಿಡುಗಡೆಯಾಗಿದ್ದರು.

  • ಎಲ್ಲ ರಾಜ್ಯಗಳ ಸಿಎಂಗಳ ಜೊತೆ ಮೋದಿ ಸಭೆ- ನಿರ್ಧಾರವಾಗಲಿದೆ ಲಾಕ್‍ಡೌನ್ ಭವಿಷ್ಯ

    ಎಲ್ಲ ರಾಜ್ಯಗಳ ಸಿಎಂಗಳ ಜೊತೆ ಮೋದಿ ಸಭೆ- ನಿರ್ಧಾರವಾಗಲಿದೆ ಲಾಕ್‍ಡೌನ್ ಭವಿಷ್ಯ

    – ಪ್ರಧಾನಿ ಕೈ ಸೇರಿದ ಟಾಸ್ಟ್ ಫೋರ್ಸ್ ವರದಿ

    ನವದೆಹಲಿ: ಕೊರೊನಾ ಸಂಕಷ್ಟಕ್ಕೆ ಸಿಲುಕಿ ದೇಶ ಬಡವ ಆಗಿದೆ. ಲಾಕ್ ಡೌನ್ ಇರುತ್ತೊ ತೆರವಾಗತ್ತೊ ಅನ್ನೊ ಗೊಂದಲದಲ್ಲಿ ಜನರಿದ್ದಾರೆ. ಇದೇ ವಿಚಾರ ಸಂಬಂಧ ಇಂದು ಪ್ರಧಾನಿ ಮೋದಿ ಎಲ್ಲ ರಾಜ್ಯಗಳ ಸಿಎಂಗಳ ಜೊತೆ ಚರ್ಚೆ ನಡೆಲಿದ್ದು ಇಂದಿನ ಸಭೆ ನಿರ್ಣಾಯಕವಾಗಿದ್ದು, ಈ ನಡುವೆ ಲಾಕ್ ಡೌನ್ ವಿಸ್ತರಣೆ ಅಧಿಕೃತ ಘೋಷಣೆ ನಾಳೆ ಆಗಬಹದು ಎನ್ನಲಾಗುತ್ತಿದೆ.

    ಕಳೆದೆರಡು ದಿನಗಳಿಂದ ದೇಶದಲ್ಲಿ ಕೊರೊನಾಗಿಂತ ಹೆಚ್ಚು ಚರ್ಚೆ ಆಗ್ತಿರೋದು ಲಾಕ್ ಡೌನ್ ಬಗ್ಗೆ. ಇನ್ನೇನು ಜಸ್ಟ್ ನಾಲ್ಕು ದಿನಗಳ ಕಳೆದು ಬಿಟ್ರೆ ಹೋಂ ಕ್ವಾರಂಟೈನ್ ಅವಧಿ ಮುಗಿದೆ ಹೋಯ್ತು ಅಂತಾ ಎಲ್ಲರೂ ಯೋಚಿಸಿದ್ರು. ಆದರೆ ಅದು ಸುಳ್ಳಾಗುವ ಎಲ್ಲ ಲಕ್ಷಣಗಳು ಕಂಡು ಬರ್ತಿದೆ.

    ಲಾಕ್ ಡೌನ್ ವಿಸ್ತರಣೆ ಬಗ್ಗೆ ಚರ್ಚೆ ಗಳು ಆರಂಭವಾಗಿದ್ದು ಇದೇ ವಿಚಾರ ಸಂಬಂಧ ಇಂದು ಪ್ರಧಾನಿ ನರೇಂದ್ರ ಮೋದಿ ಎಲ್ಲ ರಾಜ್ಯಗಳ ಸಿಎಂಗಳ ಜೊತೆ ಚರ್ಚೆ ನಡೆಸಲಿದ್ದಾರೆ. ಬೆಳಗ್ಗೆ ಹನ್ನೊಂದು ಗಂಟೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ಆರಂಭವಾಗಲಿದ್ದು ಎಲ್ಲ ಸಿಎಂಗಳು ಪಿಎಂ ಜೊತೆ ಸೇರಿ ಲಾಕ್ ಡೌನ್ ವಿಸ್ತರಣೆ ಭವಿಷ್ಯ ನಿರ್ಧರಿಸಲಿದ್ದಾರೆ.

    ಈ ನಡುವೆ ಒಡಿಶಾ ಮತ್ತು ಪಂಜಾಬ್ ರಾಜ್ಯದ ಸಿಎಂ ಗಳು ಎಪ್ರಿಲ್ ಅಂತ್ಯದವರೆಗೂ ಲಾಕ್‍ಡೌನ್ ವಿಸ್ತರಿಸಿ ಆದೇಶ ಹೊರಡಿಸಿದೆ. ಇದಲ್ಲದೆ ಹಲವು ರಾಜ್ಯಗಳು ಲಾಕ್‍ಡೌನ್ ಸಂಬಂಧಿಸಿದಂತೆ ಈ ರೀತಿಯಾಗಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದೆ.

    * ತೆಲಂಗಾಣ ಸಿಎಂ ಕೆ.ಸಿ ಚಂದ್ರಶೇಖರ್ ರಾವ್, ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾನ್ ಆರ್ಥಿಕತೆಯನ್ನು ಆಮೇಲೆ ಪರಿಶೀಲನೆ ಮಾಡಬಹುದು. ಜೀವಗಳನ್ನು ಲೆಕ್ಕ ಹಾಕಲು ಸಾಧ್ಯವಿಲ್ಲ ಲಾಕ್ ಡೌನ್ ಮುಂದುವರಿಸುವುದು ಸೂಕ್ತ ಎಂದಿದ್ದರು
    * ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಲಾಕ್‍ಡೌನ್ ವಿಸ್ತರಣೆ ಅವಶ್ಯಕ. ಜನರು ಸರ್ಕಾರದ ಜೊತೆ ಹೆಜ್ಜೆ ಹಾಕಬೇಕು ಅಂತಾ ಅಭಿಪ್ರಾಯಪಟ್ಟಿದ್ದಾರೆ.
    * ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಕೊರೊನಾ ವಿರುದ್ಧ ಮೂರು ಹೆಜ್ಜೆ ಮುಂದೆ ಇಡಬೇಕಿದ್ದು, ಲಾಕ್‍ಡೌನ್ ಮತ್ತಷ್ಟು ದಿನ ಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.


    * ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಲಾಕ್‍ಡೌನ್ ಮುಂದುವರಿಸುವ ಅಧಿಕಾರ ರಾಜ್ಯಗಳಿಗೆ ಕೇಂದ್ರ ಬಿಟ್ಟುಕೊಡಬೇಕು ಪರಿಸ್ಥಿತಿ ಮೇಲೆ ರಾಜ್ಯಗಳ ನಿರ್ಧಾರ ತೆಗೆದುಕೊಳ್ಳಲಿದೆ ಎಂದಿದ್ದಾರೆ
    * ಈ ನಡುವೆ ಛತ್ತೀಸಗಢ, ಜಾರ್ಖಂಡ್ ರಾಜ್ಯಗಳು ಲಾಕ್‍ಡೌನ್ ವಿಸ್ತರಣೆ ಬಹು ಪರಾಕ್ ಎಂದಿವೆ.

    ಇದೇ ಅಭಿಪ್ರಾಯ ಬಹುತೇಕ ಪ್ರಧಾನಿ ಮೋದಿ ನೇತೃತ್ವದ ಸಭೆಯಲ್ಲಿ ಚರ್ಚೆಯಾಗುವ ಸಾಧ್ಯತೆ ಇದೆ. ಈ ಮಧ್ಯೆ ಕರ್ನಾಟಕವೂ ಸೇರಿ ಹಲವು ರಾಜ್ಯಗಳು ಲಾಕ್‍ಡೌನ್ ತೆರವು ಮಾಡಬೇಕಾ ಮುಂದುವರಿಸಬೇಕಾ ಅನ್ನೊ ಗೊಂದಲದಲ್ಲಿವೆ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಸಿಎಂಗಳ ಸಭೆ ಬಳಿಕ ಏನು ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎನ್ನುವುದು ಕುತೂಹಲ.

    ಮೋದಿಗೆ ಟಾಸ್ಕ್ ಫೊರ್ಸ್ ವರದಿ: ಈ ಎಲ್ಲ ಬೆಳವಣಿಗೆ ನಡುವೆ ಆರೋಗ್ಯ, ಹಣಕಾಸು, ಗೃಹ ಇಲಾಖೆಗಳ, ಸೋಶಿಯಲ್ ಇಂಪ್ಯಾಕ್ಟ್ ಟಾಸ್ಕ್ ಫೋರ್ಸ್ ಗಳಿಂದ ಪ್ರಧಾನಿ ಕಚೇರಿ ವರದಿಗಳನ್ನು ತರಸಿಕೊಂಡಿದೆ. ವರದಿಗಳನ್ನು ಆಧರಿಸಿ ಪಿಎಂಗೆ ವಿವರಣೆ ನಡೆಯಲಿದೆ. ಈ ಟಾಸ್ಕ್ ಫೋರ್ಸ್ ಗಳು ನೀಡುವ ಶಿಫಾರಸ್ಸನ್ನು ಮೋದಿ ಗಂಭೀರವಾಗಿ ಪರಿಗಣಿಸಿಲಿದ್ದಾರೆ.

    ಮೋದಿ ಭಾಷಣ? ಇಷ್ಟೆಲ್ಲ ಬೆಳವಣಿಗೆ ಆಗ್ತಿದ್ದಂತೆ ದೆಹಲಿ ವಲಯದಿಂದ ಮತ್ತೊಂದು ಮಹತ್ವದ ಮಾಹಿತಿ ಹೊರ ಬಂದಿದೆ. ಭಾನುವಾರ ರಾತ್ರಿ ಎಂಟು ಗಂಟೆಗೆ ಪ್ರಧಾನಿ ಮೋದಿ ಭಾಷಣ ಮಾಡಲಿದ್ದಾರೆ ಎನ್ನಲಾಗಿದೆ. ಈ ವೇಳೆ ಎಲ್ಲ ವರದಿಗಳನ್ನು ಆಧರಿಸಿ ಲಾಕ್‍ಡೌನ್ ಮುಂದುವರಿಸಬೇಕಾ? ಸೀಲ್‍ಡೌನ್ ಮಾಡಬೇಕಾ ಅಥಾವ ರಾಜ್ಯಗಳಿಗೆ ಲಾಕ್ ಡೌನ್ ಮುಂದುವರಿಸುವ ಅವಕಾಶ ನೀಡ್ತಾರಾ ಅನ್ನೊದರ ಬಗ್ಗೆ ದೇಶದ ಜನರನ್ನು ಉದ್ದೇಶಿಸಿ ಮಾತನಾಡಲಿದ್ದು. ಒಟ್ಟಾರೆ ನಾಳೆ 130 ಕೋಟಿ ಜನರಿಗೆ ಮಹತ್ವದ ದಿನ ಎಂದರೆ ತಪ್ಪಾಗಲಾರದು.

  • ಸೋಂಕಿತನ ಸಹೋದರ ಸಭೆಯಲ್ಲಿ ಭಾಗಿ – ಗ್ರಾ.ಪಂ ಅಧ್ಯಕ್ಷೆ ಸೇರಿ 44 ಮಂದಿ ಕ್ವಾರಂಟೈನ್

    ಸೋಂಕಿತನ ಸಹೋದರ ಸಭೆಯಲ್ಲಿ ಭಾಗಿ – ಗ್ರಾ.ಪಂ ಅಧ್ಯಕ್ಷೆ ಸೇರಿ 44 ಮಂದಿ ಕ್ವಾರಂಟೈನ್

    ಮಂಗಳೂರು: ಕೊರೊನಾ ಸೋಂಕಿತನ ಸಹೋದರ ಗ್ರಾಮ ಪಂಚಾಯತ್ ಸಭೆಯಲ್ಲಿ ಭಾಗಿಯಾಗಿದ್ದ ಹಿನ್ನೆಲೆ ಗ್ರಾ.ಪಂ. ಅಧ್ಯಕ್ಷೆ ಮತ್ತು ಪಿ.ಡಿ.ಒ ಸಹಿತ ಒಟ್ಟು 44 ಮಂದಿಗೆ ಹೋಂ ಕ್ವಾರಂಟೈನ್ ಮಾಡಲಾಗಿದೆ.

    ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಅಜ್ಜಾವರ ಗ್ರಾಮ ಪಂಚಾಯತ್‍ನಲ್ಲಿ ಕೊರೊನಾ ರಕ್ಷಣಾ ಕಾರ್ಯಪಡೆಯ ಮೀಟಿಂಗ್ ನಡೆದಿತ್ತು. ಈ ಸಭೆಯಲ್ಲಿ ದುಬೈನಿಂದ ಬಂದು ಕೊರೊನಾ ಸೋಂಕಿಗೆ ತುತ್ತಾಗಿರುವ ವ್ಯಕ್ತಿಯ ಸಹೋದರ ಕೂಡ ಭಾಗಿಯಾಗಿದ್ದ ಹಿನ್ನೆಲೆಯಲ್ಲಿ ಸಭೆಯಲ್ಲಿದ್ದ ಎಲ್ಲರನ್ನೂ ಹೋಂ ಕ್ವಾರಂಟೈನ್ ಮಾಡಲಾಗಿದೆ.

    ಮಾರ್ಚ್ 18ರಂದು ದುಬೈನಿಂದ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನದಲ್ಲಿ ಮಂಗಳೂರಿಗೆ ಬಂದಿದ್ದ ವ್ಯಕ್ತಿ, ಅಜ್ಜಾವರದ ಮನೆಯಲ್ಲೇ ಕ್ವಾರಂಟೈನ್ ಆಗಿದ್ದ. ನಂತರ ಮಾರ್ಚ್ 28 ರಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಮಾರ್ಚ್ 31ರಂದು ಸೋಂಕು ಇರುವುದು ದೃಢಪಟ್ಟಿತ್ತು. ಇದಕ್ಕೂ ಮೊದಲು ಸೋಂಕಿತ ವ್ಯಕ್ತಿಯ ಸಹೋದರ ಸಭೆಯಲ್ಲಿ ಭಾಗಿಯಾಗಿದ್ದರು.

    ಈ ಸೋಂಕಿತ ವ್ಯಕ್ತಿಯ ಜೊತೆ ಪ್ರಾಥಮಿಕ ಸಂಪರ್ಕ ಹೊಂದಿದ್ದ 13 ಮಂದಿ ಈಗಾಗಲೇ ಪ್ರತ್ಯೇಕ ಕ್ವಾರಂಟೈನ್ ಮಾಡಲಾಗಿತ್ತು. ಇದರ ಜೊತೆಗೆ ಈಗ ಗ್ರಾ.ಪಂ. ಅಧ್ಯಕ್ಷೆ, ಪಿ.ಡಿ.ಒ ಮತ್ತು ಎಂಟು ಮಂದಿ ಸದಸ್ಯರು ಸೇರಿ ಒಟ್ಟು 44 ಮಂದಿ ಹೋಂ ಕ್ವಾರಂಟೈನ್ ಮಾಡಲಾಗಿದೆ. ಈ ಮೂಲಕ ಸೋಂಕಿತ ಸಂಪರ್ಕದಲ್ಲಿದ್ದ 57 ಮಂದಿಯನ್ನು ಕ್ವಾರಂಟೈನ್ ನಲ್ಲಿ ಇಡಲಾಗಿದೆ.