Tag: ಕೊರೊನಾ ಸೋಂಕಿತ

  • ಸೋಂಕಿತ ಸತ್ತಿದ್ದಕ್ಕೆ ಅಂಬುಲೆನ್ಸ್‌ಗೆ ಬೆಂಕಿ, ಕಲ್ಲು ತೂರಾಟ – ವೈದ್ಯರ ಪಿಪಿಇ ಕಿಟ್, ಬಟ್ಟೆ ಹರಿದ ಕಿಡಿಗೇಡಿಗಳು

    ಸೋಂಕಿತ ಸತ್ತಿದ್ದಕ್ಕೆ ಅಂಬುಲೆನ್ಸ್‌ಗೆ ಬೆಂಕಿ, ಕಲ್ಲು ತೂರಾಟ – ವೈದ್ಯರ ಪಿಪಿಇ ಕಿಟ್, ಬಟ್ಟೆ ಹರಿದ ಕಿಡಿಗೇಡಿಗಳು

    – ಇದು ಪೂರ್ವ ನಿಯೋಜಿತ ಕೃತ್ಯ
    – ಚಿಕಿತ್ಸೆ ನೀಡಿದ ವೈದ್ಯರನ್ನು ತೋರಿಸಿ
    – ಪಟ್ಟು ಹಿಡಿದಿದ್ದ ಮೃತನ‌ ಸಂಬಂಧಿಕರು

    ಬೆಳಗಾವಿ: ಜಿಲ್ಲೆಯ ಬಿಮ್ಸ್ ಆಸ್ಪತ್ರೆಯಲ್ಲಿ ಕೊರೊನಾ ರೋಗಿ ಸತ್ತಿದ್ದಕ್ಕೆ ಆತನ ಸಂಬಂಧಿಕರು ಅಂಬುಲೆನ್ಸ್‌ಗೆ ಬೆಂಕಿ ಹಚ್ಚಿ, ಕಲ್ಲು ತೂರಾಟ ಮಾಡಿದ ದೃಶ್ಯ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ಬುಧವಾರ ರಾತ್ರಿ ಬಿಮ್ಸ್ ಆಸ್ಪತ್ರೆಯ ಐಸಿಯು ವಾರ್ಡಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕೊರೊನಾ ಸೋಂಕಿತ ಸಾವನ್ನಪ್ಪಿದ್ದ. ಇದರಿಂದ ರೊಚ್ಚಿಗೆದ್ದ ಆತನ ಸಂಬಂಧಿಕರು ಆಸ್ಪತ್ರೆ ಸಿಬ್ಬಂದಿಯ ಮೇಲೆ ಹಲ್ಲೆ ಮಾಡಿ, ಆಸ್ಪತ್ರೆ ಮುಂದೆ ನಿಂತಿದ್ದ ಅಂಬುಲೆನ್ಸ್ ಗೆ ಬೆಂಕಿ ಹಚ್ಚಿದ್ದರು. ಅಲ್ಲದೇ ಆಸ್ಪತ್ರೆ ಮುಂಭಾಗ ಕಲ್ಲು ತೂರಾಟ ಮಾಡಿದ್ದರು.

    ಈ ಘಟನೆ ಸಂಬಂಧಿಸಿದಂತೆ ಬಿಮ್ಸ್ ಆಸ್ಪತ್ರೆ ವೈದ್ಯರು ದೂರು ನೀಡಿದ್ದು, ಈಗ ಮೃತನ 8 ಸಂಬಂಧಿಕರು ಸೇರಿ ಇತರೆ 15 ಜನರ ವಿರುದ್ಧ ಬೆಳಗಾವಿಯ ಎಪಿಎಂಸಿ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ. ಜೊತೆಗೆ ಘಟನೆಯನ್ನು ಖಂಡಿಸಿ ಆಸ್ಪತ್ರೆ ಸಿಬ್ಬಂದಿ ಪ್ರತಿಭಟನೆ ಮಾಡುತ್ತಿದ್ದು, ನಾವು ನಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಕೆಲಸ ಮಾಡುತ್ತೇವೆ. ಆದರೆ ನಮ್ಮ ಮೇಲೆ ಹಲ್ಲೆ ಮಾಡಲು ಕೆಲವರು ಮುಂದಾಗಿದ್ದಾರೆ. ಅವರಿಗೆ ಶಿಕ್ಷೆ ಆಗಬೇಕು. ಇಲ್ಲವಾದರೆ ನಾವು ಕೆಲಸಕ್ಕೆ ಹಾಜರಾಗುವುದಿಲ್ಲ ಎಂದು ಪಟ್ಟು ಹಿಡಿದ್ದಾರೆ.

    ನಿನ್ನೆ ರಾತ್ರಿ ಸೋಂಕಿತ ಮೃತಪಡುತ್ತಿದಂತೆ ಆಸ್ಪತ್ರೆಗೆ ಬಂದ ಸಂಬಂಧಿಕರು, ನಮಗೆ ಚಿಕಿತ್ಸೆ ಮಾಡಿದ ವೈದ್ಯರನ್ನು ತೋರಿಸಿ, ಆತ ನಮಗೆ ಬೇಕು ಎಂದು ಗಲಾಟೆ ಮಾಡಿದ್ದಾರೆ. ಜೊತೆಗೆ ಮೂವರು ವೈದ್ಯರು, ಇಬ್ಬರು ನರ್ಸ್ ಸೇರಿ ಐದು ಜನರ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ಜೊತೆಗೆ ಪಿಪಿಇ ಕಿಟ್, ಬಟ್ಟೆ ಹರಿದು ವೈದ್ಯರ ಮೇಲೆ ಹಲ್ಲೆ ಮಾಡಿದ್ದಾರೆ. ಜೀವ ಉಳಿಸಿಕೊಳ್ಳಲು ಕೊರೊನಾ ವಾರಿಯರ್ಸ್ ಓಡಿ ಹೋಗಿದ್ದಾರೆ.

    ಈ ವಿಚಾರದ ಬಗ್ಗೆ ಮಾತನಾಡಿರುವ ಜಿಲ್ಲಾಧಿಕಾರಿ ಎಂ.ಜಿ ಹಿರೇಮಠ, ಜುಲೈ 19ರಂದು ರೋಗಿ ಆಸ್ಪತ್ರೆಗೆ ಆಡ್ಮಿಟ್ ಆಗಿದ್ದರು. ನಿನ್ನೆ ಹೆಚ್ಚಿನ ಚಿಕಿತ್ಸೆಗೆಂದು ಐಸಿಯುಗೆ ಶಿಫ್ಟ್ ಮಾಡಿದಾಗ ರೋಗಿ ಸಾವನ್ನಪ್ಪಿದ್ದಾರೆ. ಜೀವದ ಹಂಗು ತೊರೆದು ಡಾಕ್ಟರ್ ಮತ್ತು ನರ್ಸ್ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಈ ರೀತಿ ಕೃತ್ಯಕ್ಕೆ ಯಾರು ಇಳಿಯಬಾರದು. ವೈದ್ಯರು ಹೆದರಿಬಿಟ್ಟಿದ್ದರು ಅವರನ್ನು ಕರೆದು ಮಾತಾಡಿದ್ದೇನೆ. ಡಿಎಚ್‍ಓ ಕೇಸ್ ದಾಖಲಿಸುತ್ತಿದ್ದಾರೆ. ಕೃತ್ಯ ಎಸಗಿದವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ. ಜೊತೆಗೆ ಆಸ್ಪತ್ರೆಯ ಸುತ್ತಮುತ್ತ 144 ಸೆಕ್ಷನ್ ಅನ್ನು ಇನ್ನಷ್ಟು ಹೆಚ್ಚಿನ ರೀತಿಯಲ್ಲಿ ಜಾರಿ ಮಾಡುತ್ತೇವೆ ಎಂದಿದ್ದಾರೆ.

    ನಿನ್ನೆ ರಾತ್ರಿ ನಡೆದ ಕೃತ್ಯ ಪೂರ್ವನಿಯೋಜಿತವಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಮೃತ ರೋಗಿಯ ಸಂಬಂಧಿಕರು ಗಲಾಟೆ ಮಾಡಬೇಕು ಎಂದೇ ಜನರನ್ನು ಕರೆದುಕೊಂಡು ಬಂದಿದ್ದರು ಎನ್ನಲಾಗಿದೆ. ಈ ಘಟನೆಯಲ್ಲಿ ಒಂದು ಕೊರೊನಾ ಅಂಬುಲೆನ್ಸ್ ಸಂಪೂರ್ಣ ಸುಟ್ಟು ಕರಕಲಾಗಿದೆ. ಜೊತೆಗೆ ಜೈಲು ವಾಹನ ಸೇರಿ 5ಕ್ಕೂ ಹೆಚ್ಚು ವಾಹನಗಳ ಮೇಲೆ ಕಲ್ಲು ತೂರಾಟ ಮಾಡಲಾಗಿದೆ.

  • ಕೊರೊನಾ ರೋಗಿ ಸಾವು – ಅಂಬುಲೆನ್ಸ್‌ಗೆ ಸಂಬಂಧಿಕರಿಂದ ಬೆಂಕಿ

    ಕೊರೊನಾ ರೋಗಿ ಸಾವು – ಅಂಬುಲೆನ್ಸ್‌ಗೆ ಸಂಬಂಧಿಕರಿಂದ ಬೆಂಕಿ

    – ಓಡಿ ಹೋಗಿ ಪ್ರಾಣ ಉಳಿಸಿಕೊಂಡ ಚಾಲಕ, ನರ್ಸ್

    ಬೆಳಗಾವಿ: ಕೊರೊನಾ ಸೋಂಕಿಗೆ ತುತ್ತಾಗಿದ್ದ ವ್ಯಕ್ತಿ ಸಾವನ್ನಪ್ಪಿದ್ದಕ್ಕೆ ಅವರ ಸಂಬಂಧಿಕರು ಆಸ್ಪತ್ರೆ ಮುಂದೆ ನಿಂತಿದ್ದ ಅಂಬುಲೆನ್ಸ್ ಗೆ ಬೆಂಕಿ ಹಚ್ಚಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.

    ಬೆಳಗಾವಿಯ ಬೀಮ್ಸ್ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿನಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರು ಐಸಿಯುನಲ್ಲಿ ಸಾವನ್ನಪ್ಪಿದ್ದಾರೆ. ಇದರಿಂದ ರೊಚ್ಚಿಗೆದ್ದ ಮೃತನ ಸಂಬಂಧಿಕರು ಕೊರೊನಾ ವಾರ್ಡಿನ ಮುಂದೆ ನಿಂತಿದ್ದ ಅಂಬುಲೆನ್ಸ್‌ಗೆ ಬೆಂಕಿ ಹಚ್ಚಿ ಆಸ್ಪತ್ರೆ ಮುಂಭಾಗದಲ್ಲಿದ್ದ ಪೊಲೀಸ್ ವಾಹನ ಮತ್ತು ಕಾರುಗಳ ಮೇಲೆ ಕಲ್ಲು ತೂರಾಟ ಮಾಡಿದ್ದಾರೆ.

    ಈ ವೇಳೆ ಹತ್ತಾರು ಜನರಿಂದ ಗುಂಪು ಐಸಿಯೂ ವಾರ್ಡಿಗೆ ನುಗ್ಗಿ ವಾರ್ಡಿನಲ್ಲಿದ್ದ ವೈದ್ಯರು ಮೇಲೆ ಹಲ್ಲೆ ಮಾಡಲು ಪ್ರಯತ್ನಿಸಿದೆ. ಆದರೆ ಸ್ಥಳದಲ್ಲಿದ್ದ ಪೊಲೀಸ್ ಸಿಬ್ಬಂದಿ ಅವರನ್ನು ತಡೆದಿದ್ದಾರೆ. ಆದರೆ ಆಗ ತಾನೇ ಅಥಣಿಯಿಂದ ಕೊರೊನಾ ರೋಗಿಯನ್ನು ಕರೆತಂದ ಆಸ್ಪತ್ರೆ ಮುಂಭಾಗ ನಿಂತಿದ್ದ ಅಂಬುಲೆನ್ಸ್‌ಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ. ಈ ವೇಳೆ ಅಂಬುಲೆನ್ಸ್ ಚಾಲಕ ಮತ್ತು ನರ್ಸ್ ಆಸ್ಪತ್ರೆಯೊಳಗೆ ಓಡಿಹೋಗಿ ಪ್ರಾಣ ಉಳಿಸಿಕೊಂಡಿದ್ದಾರೆ.

    ಸದ್ಯಕ್ಕೆ ಸ್ಥಳಕ್ಕೆ ಪೊಲೀಸರು ಮತ್ತು ಆಗ್ನಿಶಾಮಕ ದಳ ಬಂದು ಬೆಂಕಿಯನ್ನು ನಂದಿಸಿದ್ದಾರೆ. ಘಟನಾ ಸ್ಥಳಕ್ಕೆ ಡಿಸಿ ಎಂ.ಜಿ.ಹಿರೇಮಠ, ಎಸ್ಪಿ ಲಕ್ಷ್ಮಣ ನಿಂಬರಗಿ, ಪೊಲೀಸ್ ಕಮೀಷನರ್ ತ್ಯಾಗರಾಜ್, ಜಿಪಿಂ ಸಿಇಒ ರಾಜೇಂದ್ರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  • ಸೋಂಕಿತನ ಅಂತ್ಯಕ್ರಿಯೆಗೆ ಅಡ್ಡಿ- 100 ಜನರ ಮೇಲೆ ಪ್ರಕರಣ ದಾಖಲು

    ಸೋಂಕಿತನ ಅಂತ್ಯಕ್ರಿಯೆಗೆ ಅಡ್ಡಿ- 100 ಜನರ ಮೇಲೆ ಪ್ರಕರಣ ದಾಖಲು

    ಕಾರವಾರ: ಕೊರೊನಾ ಸೋಂಕಿತನ ಅಂತ್ಯ ಸಂಸ್ಕಾರಕ್ಕೆ ಅಡ್ಡಿ ಪಡಿಸಿದ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಕಾರವಾರ ನಗರ ಠಾಣೆಯಲ್ಲಿ ಜನಪ್ರತಿನಿಧಿಗಳೂ ಸೇರಿ ನೂರು ಜನರ ಮೇಲೆ ಪ್ರಕರಣ ದಾಖಲಾಗಿದೆ.

    ಇದೇ ತಿಂಗಳ ಆರನೇ 6ರಂದು ಶಿರಸಿಯ ವ್ಯಕ್ತಿಯೊಬ್ಬರು ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದರು. ಇವರ ಅಂತ್ಯಕ್ರಿಯೆಯನ್ನು ಕಾರವಾರದ ತಹಶೀಲ್ದಾರ್ ನೇತೃತ್ವದಲ್ಲಿ ಕಾರವಾರದ ಸರ್ವೋದಯ ನಗರದ ಸ್ಮಶಾನದಲ್ಲಿ ಮಾಡಲು ನಗರಸಭೆ ಸಿಬ್ಬಂದಿಗಳು ವ್ಯವಸ್ಥೆ ಮಾಡಿದ್ದರು. ಆದರೆ ಸ್ಥಳೀಯ ನಗರಸಭಾ ಸದಸ್ಯರು ಹಾಗೂ ಜನರು ಇದಕ್ಕೆ ವಿರೋಧ ವ್ಯಕ್ತಪಡಿಸಿ ಸ್ಮಶಾನದಲ್ಲಿ ಗೆರಾವ್ ಹಾಕಿ ಅಧಿಕಾರಿಗಳಿಗೆ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದರು.

    ಈ ಕಾರಣದಿಂದ ಕಾರವಾರ ತಹಶೀಲ್ದಾರ್ ಆರ್.ವಿ ಕಟ್ಟಿ ಅವರು ಇಂದು ಕಾರವಾರ ನಗರ ಠಾಣೆಯಲ್ಲಿ ದೂರು ನೀಡಿದ್ದು, ಈ ದೂರಿನ ಅನ್ವಯ ಕರ್ತವ್ಯಕ್ಕೆ ಅಡ್ಡಿ ಹಿನ್ನೆಲೆಯಲ್ಲಿ ನೂರು ಜನರ ಮೇಲೆ ಪ್ರಕರಣ ದಾಖಲಾಗಿದೆ.

  • ಸೋಂಕಿತನನ್ನು ಹೊತ್ತು ತಂದ ಅಂಬುಲೆನ್ಸ್ ನೋಡಿ ಓಡಿಹೋದ ಜನರು

    ಸೋಂಕಿತನನ್ನು ಹೊತ್ತು ತಂದ ಅಂಬುಲೆನ್ಸ್ ನೋಡಿ ಓಡಿಹೋದ ಜನರು

    ರಾಯಚೂರು: ಕೊರೊನಾ ಸೋಂಕಿತ ಶವವನ್ನು ಹೊತ್ತುತಂದ ಅಂಬುಲೆನ್ಸ್ ನೋಡಿ ಭಯಗೊಂಡ ಜನರು ಓಡಿಹೋಗಿರುವ ಘಟನೆ ರಾಯಚೂರು ತಾಲೂಕಿನ ಪೋತಗಲ್ ಗ್ರಾಮದಲ್ಲಿ ನಡೆದಿದೆ.

    ಇಂದು ಕೊರೊನಾ ಸೋಂಕಿನಿಂದ ಮೃತಪಟ್ಟ ವ್ಯಕ್ತಿಯನ್ನು ಅಂತ್ಯ ಸಂಸ್ಕಾರ ಮಾಡಲು ಸರ್ಕಾರ ಗುರುತು ಮಾಡಿದ್ದ ಸ್ಥಳಕ್ಕೆ ತರಲಾಗಿದೆ. ಈ ವೇಳೆ ಅಲ್ಲೇ ಪಕ್ಕದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ರೈತ ಮಹಿಳೆಯರು ಅಂಬುಲೆನ್ಸ್ ಕಂಡು ಓಡಿ ಹೋಗಿದ್ದಾರೆ.

    ಪೋತಗಲ್ ಗ್ರಾಮದ ಸರ್ವೇ ನಂ.45ರಲ್ಲಿ ಕೋವಿಡ್‍ನಿಂದ ಸಾವನ್ನಪ್ಪಿದವರ ಅಂತ್ಯಕ್ರಿಯೆಗಾಗಿ ಜಿಲ್ಲಾಡಳಿತ ಸ್ಥಳವನ್ನು ಗುರುತು ಮಾಡಿದೆ. ಆದರೆ ಇಲ್ಲಿ ಸೋಂಕಿತರನ್ನು ಅಂತ್ಯಕ್ರಿಯೆ ಮಾಡಬೇಡಿ ಎಂದು ಪೋತಗಲ್ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ. ಆದರೆ ಗ್ರಾಮಸ್ಥರ ವಿರೋಧದ ನಡುವೆಯೂ ಅಧಿಕಾರಿಗಳು ಸೋಂಕಿತ ಅಂತ್ಯಕ್ರಿಯೆಯನ್ನು ಸರ್ಕಾರಿ ಜಾಗದಲ್ಲೇ ಮಾಡಿ ಮುಗಿಸಿದ್ದಾರೆ.

  • ಬಿಬಿಎಂಪಿ ಎಡವಟ್ಟು- ಸೋಂಕಿತನನ್ನು ಪೊಲೀಸ್ ಠಾಣೆಗೆ ಕರೆತಂದ ಕುಟುಂಬಸ್ಥರು

    ಬಿಬಿಎಂಪಿ ಎಡವಟ್ಟು- ಸೋಂಕಿತನನ್ನು ಪೊಲೀಸ್ ಠಾಣೆಗೆ ಕರೆತಂದ ಕುಟುಂಬಸ್ಥರು

    ಬೆಂಗಳೂರು: ಕೊರೊನಾ ಸೋಂಕಿತನನ್ನು ಅವರ ಕುಟುಂಬಸ್ಥರೇ ಪೊಲೀಸ್ ಠಾಣೆಗೆ ಕರೆದುಕೊಂಡು ಬಂದಿರುವ ಘಟನೆ ಸಿಲಿಕಾನ್ ಸಿಟಿಯ ಯಶವಂತಪುರದಲ್ಲಿ ನಡೆದಿದೆ.

    ಕಳೆದ ಎರಡು ದಿನದ ಹಿಂದೆಯೇ ಸೋಂಕಿತನಿಗೆ ಕರೆ ಮಾಡಿದ್ದ ಬಿಬಿಎಂಪಿಯವರು ನಿಮಗೆ ಕೊರೊನಾ ಸೋಂಕು ಧೃಡಪಟ್ಟಿದೆ. ಮನೆಯಲ್ಲೇ ಇರಿ ಅಂಬುಲೆನ್ಸ್ ಬಂದು ಕರೆದುಕೊಂಡು ಬರುತ್ತದೆ ಎಂದಿದ್ದಾರೆ. ಆದರೆ ಎರಡು ದಿನ ಕಳೆದರೂ ಅಂಬುಲೆನ್ಸ್ ಬಾರದ ಕಾರಣ, ಇಂದು ಮನೆಯವರೇ ಸೋಂಕಿತನನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಬಂದಿದ್ದಾರೆ.

    ಯಶವಂತಪುರ ಬಳಿ ಇರುವ ಮೋಹನ್ ಕುಮಾರ್ ನಗರದ 48 ವರ್ಷದ ವ್ಯಕ್ತಿಗೆ ಕೆಮ್ಮು ಜ್ವರ, ಉಸಿರಾಟದ ಸಮಸ್ಯೆ ಇದ್ದ ಕಾರಣ ಕೊರೊನಾ ಪರೀಕ್ಷೆ ಮಾಡಲಾಗಿದೆ. ಈ ವೇಳೆ ಆತನಿಗೆ ಸೋಂಕು ಪಾಸಿಟಿವ್ ಬಂದಿದೆ. ಆಗ ಕರೆ ಮಾಡಿದ ಬಿಬಿಎಂಪಿ ಅಧಿಕಾರಿಗಳು ನಿಮಗೆ ಕೊರೊನಾ ಸೋಂಕು ಪಾಸಿಟಿವ್ ಬಂದಿದೆ. ಮನೆಯ ಬಳಿ ಅಂಬುಲೆನ್ಸ್ ಕಳಿಸುತ್ತೇವೆ ಎಂದು ಹೇಳಿದ್ದಾರೆ. ಆದರೆ ಎರಡು ದಿನ ಕಳೆದರು ಅಂಬುಲೆನ್ಸ್ ಕಳುಹಿಸಿಲ್ಲ.

    ಇಂದು ಸೋಂಕಿತ ಮಾತನಾಡಲು ಆಗದ ಸ್ಥಿತಿಗೆ ತಲುಪಿದ್ದು, ಭಯಭೀತರಾದ ಕುಟುಂಬಸ್ಥರು ತಮ್ಮ ಸ್ವಂತ ಕಾರಿನಲ್ಲೇ ಪೊಲೀಸ್ ಠಾಣೆಗೆ ಕರೆದುಕೊಂಡು ಬಂದಿದ್ದಾರೆ. ಸೋಂಕಿತ ವ್ಯಕ್ತಿಯನ್ನು ಆತನ ಪತ್ನಿ ಮತ್ತು ಬಾವ ಯಶವಂತಪುರ ಠಾಣೆಗೆ ಕರೆತಂದಿದ್ದು, ನಂತರ ಅದೇ ಕಾರಿನಲ್ಲಿ ಕೆಸಿ ಜನರಲ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.

  • ಹೃದಯಾಘಾತದಿಂದ ವ್ಯಕ್ತಿ ಸಾವು- ಕೊರೊನಾ ಪರೀಕ್ಷೆಯಲ್ಲಿ ಸೋಂಕು ದೃಢ

    ಹೃದಯಾಘಾತದಿಂದ ವ್ಯಕ್ತಿ ಸಾವು- ಕೊರೊನಾ ಪರೀಕ್ಷೆಯಲ್ಲಿ ಸೋಂಕು ದೃಢ

    – ಹೊಳೆನರಸೀಪುರದಲ್ಲಿ ಬೇಕರಿ ಇಟ್ಟುಕೊಂಡಿದ್ದ

    ಹಾಸನ: ಜಿಲ್ಲೆಯಲ್ಲಿ ಕೊರೊನಾಗೆ ಮತ್ತೊಂದು ಬಲಿಯಾಗಿದ್ದು, ಈ ಮೂಲಕ ಹಾಸನ ಜಿಲ್ಲೆಯಲ್ಲಿ ಮೃತರ ಸಂಖ್ಯೆ ಏಳಕ್ಕೆ ಏರಿಕೆಯಾಗಿದೆ. ದಿನೇ ದಿನೇ ಜಿಲ್ಲೆಯಲ್ಲಿ ಸಾವಿನ ಸಂಖ್ಯೆ ಹೆಚ್ಚಾಗುತ್ತಿದ್ದು, ಜನರಲ್ಲಿ ಆತಂಕ ಮನೆ ಮಾಡಿದೆ.

    ಬೇಲೂರು ತಾಲೂಕಿನ 38 ವರ್ಷದ ವ್ಯಕ್ತಿ ಹೊಳೆನರಸೀಪುರದಲ್ಲಿ ಬೇಕರಿ ಇಟ್ಟುಕೊಂಡಿದ್ದ. ಇವರು ಶುಕ್ರವಾರ ತಮ್ಮ ಸ್ವಗೃಹದಲ್ಲಿ ತೀವ್ರ ಹೃದಯಾಘಾತದಿಂದ ಸಾವನಪ್ಪಿದ್ದರು. ನಂತರ ಅವರ ಗಂಟಲು ದ್ರವ ಮಾದರಿ ಪರೀಕ್ಷೆ ನಡೆಸಿದ್ದು, ಇಂದು ಬಂದ ವರದಿಯಲ್ಲಿ ಮೃತನಿಗೆ ಕೊರೊನಾ ಸೋಂಕು ಪಾಸಿಟಿವ್ ಎಂದು ಬಂದಿದೆ.

    ತಾಲೂಕು ನೋಡಲ್ ಅಧಿಕಾರಿ ಡಾ. ನರಸೇಗೌಡ ಅವರ ಮಾರ್ಗದರ್ಶನದಲ್ಲಿ ಸರ್ಕಾರಿ ನಿಯಮಾನುಸಾರ ಸುರಕಕ್ಷತಾ ಕ್ರಮಗಳೊಂದಿಗೆ ಮೃತರ ಅಂತ್ಯಕ್ರಿಯೆ ನೆರವೇರಿಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಸತೀಶ್ ತಿಳಿಸಿದ್ದಾರೆ.

  • ಆಸ್ಪತ್ರೆಯಿಂದ ಫೋನ್ ಕದ್ದು ಎಸ್ಕೇಪ್ ಆಗಿ ಬಂಧಿಯಾಗಿದ್ದ ಸೋಂಕಿತ ಕಳ್ಳ ಮತ್ತೆ ಪರಾರಿ

    ಆಸ್ಪತ್ರೆಯಿಂದ ಫೋನ್ ಕದ್ದು ಎಸ್ಕೇಪ್ ಆಗಿ ಬಂಧಿಯಾಗಿದ್ದ ಸೋಂಕಿತ ಕಳ್ಳ ಮತ್ತೆ ಪರಾರಿ

    – ಆರೋಪಿಯ ಪುಂಡಾಟಕ್ಕೆ ಪೊಲೀಸರು ಹೈರಾಣ

    ಕಾರವಾರ: ಎರಡು ದಿನಗಳ ಹಿಂದೆ ಕೊರೊನಾ ವಾರ್ಡಿನಿಂದ ಫೋನ್ ಕದ್ದು ಪರಾರಿಯಾಗಿದ್ದ ಸೋಂಕಿತ ಕಳ್ಳ ಮತ್ತೊಮ್ಮೆ ಆಸ್ಪತ್ರೆಯಿಂದ ಪರಾರಿಯಾಗಿದ್ದು, ಪೊಲೀಸರಿಗೆ ದೊಡ್ಡ ತಲೆನೋವಾಗಿದೆ.

    ಶಿರಸಿಯಲ್ಲಿ ವಾಹನ ಕಳ್ಳತನ ಆರೋಪದಡಿ ಬಂಧಿಯಾಗಿದ್ದ ಕೊರೊನಾ ಸೋಂಕಿತ ಕಾರವಾರದ ಕಿಮ್ಸ್ ಕೋವಿಡ್ ವಾರ್ಡ್‍ನಿಂದ ತಪ್ಪಿಸಿಕೊಂಡು ಪರಾರಿಯಾಗಿ ಕಾರವಾರದ ಕದ್ರಾ ಗ್ರಾಮದಲ್ಲಿ ಪೊಲೀಸರ ಅಥಿತಿಯಾಗಿದ್ದ. ಆತನನ್ನ ಮತ್ತೆ ಕಾರವಾರದ ಕಿಮ್ಸ್ ಆಸ್ಪತ್ರೆಯ ವಿಶೇಷ ಕೊರೊನಾ ವಾರ್ಡಿಗೆ ತಂದು ಆಡ್ಮಿಟ್ ಮಾಡಲಾಗಿತ್ತು. ಈಗ ಮತ್ತೆ ಆಸ್ಪತ್ರೆಯಿಂದ ಆತ ಪರಾರಿಯಾಗಿದ್ದು, ಕಾರವಾರ ಪೊಲೀಸರು ಹುಡುಕಾಟ ನಡೆಸಿದ್ದಾರೆ.

    ಕಳ್ಳತನ ಕೇಸ್‍ನಲ್ಲಿ ಭಾಗಿಯಾಗಿದ್ದ ಧಾರವಾಡ ಮೂಲದ ಆರೋಪಿಗೆ ಜೂನ್ 28ರಂದು ಪಾಸಿಟಿವ್ ಬಂದಿತ್ತು. ಈ ಆರೋಪಿಯನ್ನು ಕಾರವಾರದ ಕಿಮ್ಸ್‍ನಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಆದರೇ ಆತ ಜೂನ್ 29ರ ರಾತ್ರಿ ವೇಳೆ ಕೋವಿಡ್ ವಾರ್ಡಿನ ಗಾಜನ್ನು ಒಡೆದು ಅಲ್ಲಿಂದ ಎರಡು ಮೊಬೈಲ್ ಎಗರಿಸಿ ಎಸ್ಕೇಪ್ ಆಗಿದ್ದ. ಪೊಲೀಸರ ಹರಸಾಹಸದ ನಂತರ ಕಾರವಾರದ ಕದ್ರ ಗ್ರಾಮದ ಬಳಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ಈಗ ಮತ್ತೆ ಆಸ್ಪತ್ರೆಯಿಂದ ಪರಾರಿಯಾಗಿದ್ದು, ಜನರಿಗೆ ಆತಂಕ ಎದುರಾಗಿದೆ.

  • ಕೊರೊನಾಗೆ ಬಲಿಯಾದ ವ್ಯಕ್ತಿಯ ಮೃತದೇಹವನ್ನು ಜೆಸಿಬಿಯಲ್ಲಿ ಸಾಗಣೆ

    ಕೊರೊನಾಗೆ ಬಲಿಯಾದ ವ್ಯಕ್ತಿಯ ಮೃತದೇಹವನ್ನು ಜೆಸಿಬಿಯಲ್ಲಿ ಸಾಗಣೆ

    – ಅಮಾನವೀಯವಾಗಿ ನಡೆದುಕೊಂಡ ಪುರಸಭೆ ಅಧಿಕಾರಿಗಳು

    ಹೈದರಾಬಾದ್: ಕೊರೊನಾಗೆ ಬಲಿಯಾದ ಸೋಂಕಿತನ ಮೃತದೇಹವನ್ನು ಜೆಸಿಬಿ ಯಂತ್ರದ ಮೂಲಕ ಸಾಗಿಸಿ ಅಂತ್ಯ ಸಂಸ್ಕಾರ ಮಾಡಿರುವ ಅಮಾನವೀಯ ಘಟನೆ ಆಂಧ್ರಪ್ರದೇಶದ ಶ್ರೀಕಾಕುಲಂ ಜಿಲ್ಲೆಯಪಾಲಾಸ ಪುರಸಭೆ ವ್ಯಾಪ್ತಿಯಲ್ಲಿ ನಡೆದಿದೆ.

    ಕೊರೊನಾದ ಸಮಯದಲ್ಲಿ ಮನೆ ಮನೆಗೆ ತೆರಳಿ ಆರೋಗ್ಯ ಸಮೀಕ್ಷೆ ನಡೆಸಿದ್ದ ಮಾಜಿ ಪುರಸಭೆಯ ಉದ್ಯೋಗಿ ಕೊರೊನಾ ಸೋಂಕಿಗೆ ತುತ್ತಾಗಿದ್ದರು. ಇವರು ತಮ್ಮ ಪಾಲಾಸ ಪಟ್ಟಣದಲ್ಲಿನ ಮನೆಯಲ್ಲಿ ಮೃತಪಟ್ಟಿದ್ದರು. ಇವರ ಮೃತದೇಹವನ್ನು ಜೆಸಿಬಿ ವಾಹನದಲ್ಲಿ ಎತ್ತಿಕೊಂಡು ಹೋಗಿ ಗುಂಡಿ ಒಳಗೆ ಹಾಕಿ ಮುಚ್ಚಿ ಅಂತ್ಯಕ್ರಿಯೆ ಮಾಡಲಾಗಿದೆ.

    ಮನೆಯಲ್ಲೇ ಕೊರೊನಾ ಸೋಂಕಿತ ವ್ಯಕ್ತಿ ಮೃತಪಟ್ಟಿದ್ದರು. ಆಗ ನೆರೆಹೊರೆಯವರು ಮೃತದೇಹ ಇಲ್ಲೇ ಇದ್ದರೆ ನಮಗೆ ತೊಂದರೆಯಾಗುತ್ತದೆ ಎಂದು ಹೇಳಿದ್ದಾರೆ. ಆಗ ಮೃತನ ಮೊಮ್ಮಗಳು ಮತ್ತು ಸರ್ಕಾರಿ ಸ್ವಯಂ ಸೇವಕರು ಪುರಸಭೆ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಆಗ ಸ್ಥಳಕ್ಕೆ ಬಂದ ಅಧಿಕಾರಿಗಳು ಪಿಪಿಇ ಕಿಟ್ ಧರಿಸಿದ್ದರು, ಮೃತದೇಹವನ್ನು ಮಟ್ಟದೇ ಜೆಸಿಬಿ ಯಂತ್ರದಲ್ಲಿ ಮೃತದೇಹವನ್ನು ಸಾಗಿಸಿ ನಂತರ ಅಂತ್ಯಕ್ರಿಯೆ ಮಾಡಿದ್ದಾರೆ.

    ಈ ವಿಚಾರವನ್ನು ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ.ಎಸ್ ಜಗನ್ ಮೋಹನ್ ರೆಡ್ಡಿ ಖಂಡಿಸಿದ್ದು, ಈ ಘಟನೆಗೆ ಕಾರಣವಾದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ. ಜೊತೆಗೆ ಇದು ಅಮಾನವೀಯ ಘಟನೆ. ಈ ರೀತಿಯ ಪ್ರಕರಣಗಳನ್ನು ಹೇಗೆ ಎದುರಿಸಬೇಕು ಎಂಬುದಕ್ಕೆ ಸರ್ಕಾರವೇ ಪ್ರೋಟೋಕಾಲ್ ಅನ್ನು ಹೊರಡಿಸಿದೆ ಎಂದು ಮುಖ್ಯಮಂತ್ರಿ ಕಚೇರಿ ತಿಳಿಸಿದೆ.

    ಈ ಘಟನೆ ಕುರಿತು ಆಂಧ್ರಪ್ರದೇಶ ಸರ್ಕಾರ ತನಿಖೆಗೆ ಆದೇಶಿಸಿದೆ. ಈ ಘಟನೆಗೆ ಸಂಬಂಧಿಸಿದಂತೆ ಪಾಲಾಸ ಪುರಸಭೆ ಆಯುಕ್ತ ನಾಗೇಂದ್ರ ಕುಮಾರ್ ಮತ್ತು ನೈರ್ಮಲ್ಯ ನಿರೀಕ್ಷಕ ಎನ್ ರಾಜೀವ್ ಅವರನ್ನು ಅಮಾನತುಗೊಳಿ ಶ್ರೀಕಾಕುಲಂ ಜಿಲ್ಲಾಧಿಕಾರಿ ಜೆ.ನಿವಾಸ್ ಆದೇಶಿಸಿದ್ದಾರೆ.

  • ಸೋಂಕಿತ ಮಹಿಳೆಯ ಅಂತ್ಯಕ್ರಿಯೆಗೆ ಸಾಥ್ ಕೊಟ್ಟ ಪಿಎಫ್‍ಐ ಕಾರ್ಯಕರ್ತರು

    ಸೋಂಕಿತ ಮಹಿಳೆಯ ಅಂತ್ಯಕ್ರಿಯೆಗೆ ಸಾಥ್ ಕೊಟ್ಟ ಪಿಎಫ್‍ಐ ಕಾರ್ಯಕರ್ತರು

    ಮಂಗಳೂರು: ಕೊರೊನಾ ಸೋಂಕಿಗೆ ಬಲಿಯಾದ ಮಂಗಳೂರಿನ ಎರಡನೇ ಮೃತ ದೇಹದ ಅಂತ್ಯಕ್ರಿಯೆಯನ್ನು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಕಾರ್ಯಕರ್ತರ ನೇತೃತ್ವದಲ್ಲಿ ನೆರವೇರಿಸಲಾಯಿತು.

    ಇಂದು ಕೊರೊನಾ ಸೋಂಕಿನಿಂದ ಮೃತರಾದ ಉಳ್ಳಾಲ ನಿವಾಸಿ ಮಹಿಳೆಯ ದಫನ್ ಕಾರ್ಯವನ್ನು ರಫೀಕ್ ಉಳ್ಳಾಲರವರ ನೇತೃತ್ವದಲ್ಲಿ ಉಳ್ಳಾಲದ ಮಸೀದಿಯಲ್ಲಿ ನೆರವೇರಿಸಲಾಯಿತು. ಉಳ್ಳಾಲದ ಸ್ಥಳೀಯ ಯುವಕರು ಸ್ವಯಂಪ್ರೇರಿತರಾಗಿ ಸಹಕರಿಸಿದರು. ಈ ಸಂಧರ್ಭದಲ್ಲಿ ಸ್ಥಳೀಯ ಶಾಸಕರು, ಜನಪ್ರತಿನಿಧಿಗಳು, ಧಾರ್ಮಿಕ ಮುಖಂಡರು, ಸ್ಥಳೀಯ ಮಸೀದಿಯ ಆಡಳಿತ ಸಮಿತಿಯ ಸದಸ್ಯರು ಸೇರಿದಂತೆ ಹಲವರು ಉಪಸ್ಥಿತರಿದ್ದರು.

    ಈ ಮೊದಲು ಜೂನ್ 23ರಂದು ಮಂಗಳೂರಿನಲ್ಲಿ ಮೃತರಾದ ವ್ಯಕ್ತಿಯ ದಫನ್ ಕಾರ್ಯವನ್ನೂ ಪಿಎಫ್‍ಐ ಜಿಲ್ಲಾ ಸಮಿತಿ ಸದಸ್ಯ ಮುಝೈರ್ ಕುದ್ರೋಳಿಯವರ ತಂಡ ಮಂಗಳೂರಿನ ಬೋಳಾರದ ಮಸೀದಿಯಲ್ಲಿ ನೆರವೇರಿಸಲಾಯಿತು. ಜಿಲ್ಲೆಯಲ್ಲಿ ಕೋವಿಡ್ ಪ್ರಕರಣ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಇತ್ತೀಚೆಗೆ ಪಿಎಫ್‍ಐ ವತಿಯಿಂದ ಆಯ್ದ 30 ಮಂದಿ ಕಾರ್ಯಕರ್ತರಿಗೆ ಆರೋಗ್ಯ ಇಲಾಖೆಯ ಸಹಕಾರದೊಂದಿಗೆ ಕೊರೊನಾ ಸೋಂಕಿತ ಮೃತದೇಹಗಳ ಅಂತ್ಯಸಂಸ್ಕಾರದ ಮಾಹಿತಿ ಕಾರ್ಯಾಗಾರವನ್ನು ಮಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿತ್ತು.

    ವೆನ್ಲಾಕ್ ಆಸ್ಪತ್ರೆಯ ಚರ್ಮ ರೋಗ ತಜ್ಞ ಡಾ.ನವೀನ್ ಕುಮಾರ್ ಅವರಿಂದ ತರಬೇತಿ ನೀಡಲಾಗಿತ್ತು. ಇಲ್ಲಿ ತರಬೇತಿ ಪಡೆದ ಪಿಎಫ್‍ಐ ಕಾರ್ಯಕರ್ತರ ತಂಡ ಕೊರೊನಾದಿಂದ ಮೃತಪಟ್ಟ ಮುಸ್ಲಿಂ ಸಮುದಾಯದವರ ಅಂತ್ಯಕ್ರಿಯೆಯನ್ನು ಆರೋಗ್ಯ ಇಲಾಖೆಯ ನಿರ್ದೇಶನದಂತೆ ಧಾರ್ಮಿಕ ವಿಧಿ ವಿಧಾನದೊಂದಿಗೆ ನಡೆಸುತ್ತಿದೆ. ಮುಂದೆಯೂ ಈ ತಂಡ ಇಂತಹ ಕೆಲಸಕ್ಕೆ ಸನ್ನದ್ದವಾಗಿದ್ದು, ಜಿಲ್ಲಾಡಳಿತದ ಪ್ರಶಂಸೆಗೆ ಪಾತ್ರವಾಗಿದೆ.

  • ಮಗನಿಗೆ ಕೊರೊನಾ ಸೋಂಕು – ಪೋಷಕರಿಗೆ ಮನೆ ನೀಡದ ಮಾಲೀಕ

    ಮಗನಿಗೆ ಕೊರೊನಾ ಸೋಂಕು – ಪೋಷಕರಿಗೆ ಮನೆ ನೀಡದ ಮಾಲೀಕ

    – ರಸ್ತೆಯಲ್ಲೇ ಪ್ರತಿಭಟನೆಗೆ ಕುಳಿತ ದಂಪತಿ
    – ಮಗನಿಗೆ ಸೋಂಕು ಬಂದರೆ ನಮ್ಮ ತಪ್ಪು ಏನು?

    ಕೋಲ್ಕತ್ತಾ: ಮಗನಿಗೆ ಕೊರೊನಾ ಪಾಸಿಟಿವ್ ಬಂದಿದೆ ಎಂದು ಸೋಂಕಿತನ ತಂದೆ-ತಾಯಿಯನ್ನು ಮನೆ ಮಾಲೀಕನೋರ್ವ ಬಾಡಿಗೆ ಮನೆ ನೀಡದ ಘಟನೆ ಪಶ್ಚಿಮ ಬಂಗಾಳದ ಹೌರ ಜಿಲ್ಲೆಯಲ್ಲಿ ನಡೆದಿದೆ.

    ಹೌರದ ಡೆಮ್ಜೂರ್ ಪ್ರದೇಶದಲ್ಲಿ ವಾಸವಿದ್ದ ಕುಟುಂಬದಲ್ಲಿ ಆತನ ಮಗನಿಗೆ ಕೊರೊನಾ ಪಾಸಿಟಿವ್ ಬಂದಿದೆ. ಈ ವೇಳೆ ಆತನನ್ನು ಕರೆದುಕೊಂಡು ಹೋಗಲು ಮನೆಯ ಬಳಿ ಅಂಬುಲೆನ್ಸ್ ಬಂದಿದೆ. ಈ ವೇಳೆ ಈ ದಂಪತಿಯೂ ಕೂಡ ಮಗ ಚಿಕಿತ್ಸೆ ಪಡೆಯುತ್ತಿದ್ದ ಆಸ್ಪತ್ರೆಗೆ ಹೋಗಿದ್ದಾರೆ. ಆತನ ಮಗನನ್ನು ಸಂಜೀವಿನಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

    ಆಸ್ಪತ್ರೆಯಿಂದ ವಾಪಸ್ ಮನೆಗೆ ಬಂದ ದಂಪತಿಯನ್ನು ಮನೆಯ ಮಾಲೀಕ ತಡೆದಿದ್ದಾನೆ. ಜೊತೆಗೆ ನೀವು ನಮ್ಮ ಮನೆಯಲ್ಲಿ ಇರಬೇಡಿ, ನಿಮ್ಮನ್ನು ಇರಲು ನಾವು ಬಿಡುವುದಿಲ್ಲ ಎಂದು ಹೇಳಿದ್ದಾನೆ. ಈ ವಿಚಾರದಲ್ಲಿ ದಂಪತಿಯ ಪರ ನಿಲ್ಲಬೇಕಾದ ಸ್ಥಳೀಯರು ಮತ್ತು ನೆರೆಹೊರೆಯವರು ವೈರಸ್ ನಮಗೂ ಹರಡುತ್ತೆ ಎಂಬ ಭಯದಿಂದ ಮಾಲೀಕನ ಮಾತಿಗೆ ಧನಿಗೂಡಿಸಿದ್ದಾರೆ. ಇದರಿಂದ ದಂಪತಿ ಇನ್ನೂ ಭಯಭೀತರಾಗಿದ್ದಾರೆ.

    ಇದಾದ ನಂತರ ದಂಪತಿ ಪೊಲೀಸರ ಮೊರೆ ಹೋಗಿದ್ದಾರೆ. ಆಗ ಸ್ಥಳಕ್ಕೆ ಬಂದ ಪೊಲೀಸರು ಅವರಿಗೇ ಕೊರೊನಾ ಲಕ್ಷಣ ಇಲ್ಲದೇ ಇದ್ದರೂ, ಕೊರೊನಾ ಪರೀಕ್ಷೆ ಮಾಡಿಸುವಂತೆ ಸಲಾಪ್ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕಳುಹಿಸಿದ್ದಾರೆ. ಪರೀಕ್ಷೆ ಮಾಡಿಸಿಕೊಂಡು ಬಂದರೂ ಮಾಲೀಕ ಮನೆಯಲ್ಲಿ ಉಳಿಯಲು ಅನುಮತಿ ಕೊಟ್ಟಿಲ್ಲ. ಇದರಿಂದ ನೊಂದು ದಂಪತಿ ಮುಖ್ಯ ರಸ್ತೆಯಲ್ಲಿ ಕುಳಿತು ವಾಹನ ತಡೆದು ಪ್ರತಿಭಟನೆ ಮಾಡಿದ್ದಾರೆ.

    ನಮ್ಮ ಮಗನಿಗೆ ಕೊರೊನಾ ಸೋಂಕು ಬಂದರೆ ಅದರಲ್ಲಿ ನಮ್ಮ ತಪ್ಪು ಏನಿದೆ? ನಮ್ಮ ಮಗನಿಗೆ ಸೋಂಕು ತಗುಲಿದರೆ ಅದೂ ನಮ್ಮ ತಪ್ಪಾ? ಮನೆಯ ಮಾಲೀಕ ಒತ್ತಡ ಹಾಕುತ್ತಿದ್ದಾರೆ. ಜೊತೆಗೆ ನೀವು ಇಲ್ಲಯೇ ಇದ್ದರೆ ಸೋಂಕು ಹರಡುತ್ತದೆ ಎಂದು ಹೇಳುತ್ತಿದ್ದಾರೆ. ಅದಕ್ಕೆ ನಾವು ನಡು ರಸ್ತೆಯಲ್ಲಿ ಕುಳಿತಿದ್ದೇವೆ. ನಮಗೆ ಬೇರೆ ಕಡೆ ಹೋಗಲು ಎಲ್ಲೂ ಜಾಗವಿಲ್ಲ ಎಂದು ಸೋಂಕಿತ ತಂದೆ ಬಸುಡೆಬ್ ಚಟರ್ಜಿ ನೋವನ್ನು ಹೊರಹಾಕಿದ್ದಾರೆ.

    ಇದಾದ ನಂತರ ಸ್ಥಳಕ್ಕೆ ಪೊಲೀಸ್ ಮತ್ತು ಬಿಡಿಒ ಅಧಿಕಾರಿಗಳು ಬಂದು ದಂಪತಿಯನ್ನು ಮನವೊಲಿಸಿ ಕ್ವಾರಂಟೈನ್ ಕೇಂದ್ರಕ್ಕೆ ಕರೆದುಕೊಂಡು ಹೋಗಿದ್ದಾರೆ. ದಂಪತಿಗಳು ಚೆನ್ನಾಗಿದ್ದಾರೆ. ನಾವು ಅವರನ್ನು ಕ್ವಾರಂಟೈನ್ ಕೇಂದ್ರದಲ್ಲಿ ಇರಿಸಿದ್ದೇವೆ. ಅವರನ್ನು ನಾವು ನೋಡಿಕೊಳ್ಳುತ್ತೇವೆ ಎಂದು ಬಿಡಿಒ ರಾಜಾ ಭೂಮಿಕ್ ತಿಳಿಸಿದ್ದಾರೆ.