Tag: ಕೊರೊನಾ ಸೋಂಕಿತರು

  • ಕೋವಿಡ್ ಕೇಂದ್ರದಲ್ಲಿ ಯೋಗ ಟೀಚರ್ ಆದ ರೇಣುಕಾಚಾರ್ಯ

    ಕೋವಿಡ್ ಕೇಂದ್ರದಲ್ಲಿ ಯೋಗ ಟೀಚರ್ ಆದ ರೇಣುಕಾಚಾರ್ಯ

    ದಾವಣಗೆರೆ: ಕೋವಿಡ್ ಕೇರ್ ಸೆಂಟರ್‌ನಲ್ಲಿರುವ ಕೊರೊನಾ ಸೋಂಕಿತರಿಗೆ ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಹೊನ್ನಾಳಿ ಶಾಸಕ ರೇಣುಕಾಚಾರ್ಯರವರು ಯೋಗ ಹೇಳಿಕೊಟ್ಟಿದ್ದಾರೆ.

    ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಎಚ್ ಕಡದಕಟ್ಟೆ ಗ್ರಾಮದಲ್ಲಿರುವ ಕೋವಿಡ್ ಕೇರ್ ಸೆಂಟರ್ ನಲ್ಲಿರುವ ಸೋಂಕಿತರಿಗೆ ರೇಣುಕಾಚಾರ್ಯ ವಿವಿಧ ಯೋಗಾಸನಗಳನ್ನು ಹೇಳಿಕೊಟ್ಟಿದ್ದಾರೆ.

    ಇಂದು ಬೆಳಗ್ಗೆ ಕೋವಿಡ್ ಕೇರ್ ಸೆಂಟರ್‌ಗೆ ಆಗಮಿಸಿದ ಶಾಸಕರು ಸೋಂಕಿತರೊಂದಿಗೆ ಸಾಮಾಜಿಕ ಅಂತರ ಕಾಯ್ದುಕೊಂಡು ಸೂರ್ಯ ನಮಸ್ಕಾರ ಸೇರಿದಂತೆ ವಿವಿಧ ಯೋಗಾಸನ ಹೇಳಿಕೊಟ್ಟರು. ಯೋಗಾಸನದ ಮೂಲಕ ಸೋಂಕಿತರಿಗೆ ಆತ್ಮಸ್ಥೈರ್ಯ ತುಂಬಿದ ರೇಣುಕಾಚಾರ್ಯರವರು ಯೋಗಾಸನದ ವಿವಿಧ ಬಂಗಿಗಳನ್ನು ಸೋಂಕಿತರ ಮುಂದೆ ಮಾಡಿ ತೋರಿಸಿದರು.

    ಕಳೆದ ಹಲವು ದಿನಗಳಿಂದ ಸೋಂಕಿತರ ಜೊತೆ ಸೇರಿ ರೇಣುಕಾಚಾರ್ಯ ಒಂದಲ್ಲ ಒಂದು ಕೆಲಸದಲ್ಲಿ ನಿರತರಾಗಿದ್ದಾರೆ. ಮೃತ ಸೋಂಕಿತನ ಶವ ಹೊತ್ತು ಅಂಬುಲೆನ್ಸ್ ಚಾಲನೆ ಮಾಡುತ್ತ ಅಂತ್ಯಸಂಸ್ಕಾರದಲ್ಲಿ ಭಾಗಿಯಾಗುವ ಮೂಲಕ ಸಮಾಜ ಮುಖಿ ಕಾರ್ಯದಲ್ಲಿ ತೊಡಗಿಕೊಂಡಿದ್ದರು. ಇದೀಗ ಕೋವಿಡ್ ಕೇರ್ ಸೆಂಟರ್ ನಲ್ಲಿರುವ ಸೋಂಕಿತರಿಗೆ ಶಾಸಕ ಎಂಪಿ ರೇಣುಕಾಚಾರ್ಯ ಯೋಗ ಹೇಳಿಕೊಟ್ಟು ಆತ್ಮಸ್ಥೈರ್ಯ ತುಂಬಿದ್ದಾರೆ. ಇದನ್ನು ಓದಿ: ಕೋವಿಡ್ ಕೇರ್ ಸೆಂಟರ್ ಅವ್ಯವಸ್ಥೆ ವಿರುದ್ಧ ಸೋಂಕಿತರ ಆಕ್ರೋಶ

  • ಅಮೇಥಿಗೆ 10,000 ಮೆಡಿಕಲ್ ಕಿಟ್ ಕಳುಹಿಸಿಕೊಟ್ಟ ರಾಹುಲ್ ಗಾಂಧಿ

    ಅಮೇಥಿಗೆ 10,000 ಮೆಡಿಕಲ್ ಕಿಟ್ ಕಳುಹಿಸಿಕೊಟ್ಟ ರಾಹುಲ್ ಗಾಂಧಿ

    ಲಕ್ನೋ: ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಯವರು ತಮ್ಮ ಹಿಂದಿನ ಲೋಕಸಭಾ ಕ್ಷೇತ್ರವಾದ ಅಮೆಥಿಯಲ್ಲಿ ಹೋಂ ಐಸೋಲೇಷನ್‍ನಲ್ಲಿರುವ ಕೋವಿಡ್-19 ಸೋಂಕಿತರಿಗೆ ಅಗತ್ಯವಿರುವ ಮೆಡಿಕಲ್ ಕಿಟ್‍ನನ್ನು ಕಳುಹಿಸಿಕೊಟ್ಟಿದ್ದಾರೆ ಎಂದು ಪಕ್ಷದ ಮುಖಂಡರೊಬ್ಬರು ಶನಿವಾರ ತಿಳಿಸಿದ್ದಾರೆ.

    ಪಕ್ಷದ ಸೇವಾ ಸತ್ಯಾಗ್ರಹ ಕಾರ್ಯಕ್ರಮದಡಿ ಸುಮಾರು 10,000 ಮೆಡಿಕಲ್ ಕಿಟ್‍ಗಳು ಬಂದಿದ್ದು, ಅವುಗಳನ್ನು ಅಗತ್ಯವಿರುವ ಜನರಿಗೆ ನೀಡಲಾಗುತ್ತದೆ ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಮುಖ್ಯಸ್ಥ ಪ್ರದೀಪ್ ಸಿಂಘಾಲ್ ತಿಳಿಸಿದ್ದಾರೆ.

    ಅಮೆಥಿಯ ಮಾಜಿ ಲೋಕಸಭಾ ಸಂಸದರಾಗಿರುವ ರಾಹುಲ್ ಗಾಂಧಿಯವರು ಈ ಮುನ್ನ 20 ಆಮ್ಲಜನಕ ಸಾಂದ್ರಕ ಮತ್ತು ಆಕ್ಸಿಜನ್ ಸಿಲಿಂಡರ್‌ಗಳನ್ನು ಕಳುಹಿಸಿಕೊಟ್ಟಿದ್ದರು. ಸದ್ಯ ರಾಹುಲ್ ಗಾಂಧಿಯವರು ಕೇರಳದ ವಯನಾಡುವಿನ ಲೋಕಸಭಾ ಸಂಸದರಾಗಿದ್ದಾರೆ. ಇದನ್ನು ಓದಿ: ಪತಿಯ ಸಮ್ಮುಖದಲ್ಲಿಯೇ ಪ್ರೇಮಿಯ ಜೊತೆ ಪತ್ನಿಯ ಮದುವೆ

  • ಇದೇ ಮೊದಲ ಬಾರಿಗೆ ಕೋವಿಡ್ ವಾರ್ಡಿನಲ್ಲಿ ಗ್ರಂಥಾಲಯದ ಸೌಲಭ್ಯ

    ಇದೇ ಮೊದಲ ಬಾರಿಗೆ ಕೋವಿಡ್ ವಾರ್ಡಿನಲ್ಲಿ ಗ್ರಂಥಾಲಯದ ಸೌಲಭ್ಯ

    – ಸಾಗರದಲ್ಲಿ ವಿಶಿಷ್ಟ ಪ್ರಯೋಗ

    ಶಿವಮೊಗ್ಗ: ಕೊರೊನಾ ಸೋಂಕಿತರು ಮಾನಸಿಕ ಖಿನ್ನತೆ ಹಾಗೂ ಒಂಟಿತನದಿಂದ ಹೊರ ಬರುವ ಸಲುವಾಗಿ ಶಿವಮೊಗ್ಗ ಜಿಲ್ಲೆ ಸಾಗರದ ಕೋವಿಡ್ ವಾರ್ಡಿನಲ್ಲಿ ಆರೋಗ್ಯ ಸಿಬ್ಬಂದಿ ಸೋಂಕಿತರಿಗಾಗಿ ಗ್ರಂಥಾಲಯ ತೆರೆದಿದ್ದಾರೆ.

    ಕೊರೊನಾ ಸೋಂಕಿಗೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿರುವವರಲ್ಲಿ ಹಲವು ಮಂದಿ ಮಾನಸಿಕ ಖಿನ್ನತೆಗೆ ಒಳಗಾಗುತ್ತಿದ್ದಾರೆ. ಕೊರೊನಾ ತುತ್ತಾಗಿ ಚಿಕಿತ್ಸೆ ಪಡೆಯಬೇಕಾದರೆ ತಮ್ಮವರಿಂದ ದೂರವಿದ್ದು ಚಿಕಿತ್ಸೆ ಪಡೆಯುವ ಅನಿವಾರ್ಯತೆ ಇದೆ. ಹೀಗಾಗಿ ಸೋಂಕಿತರಿಗೆ ಒಂಟಿತನ ಕಾಡುತ್ತಿದೆ.

    ಈ ಮಾನಸಿಕ ಖಿನ್ನತೆ ಹಾಗೂ ಒಂಟಿತನದಿಂದ ಸೋಂಕಿತರು ಹೊರ ಬರುವ ಸಲುವಾಗಿ ಗ್ರಂಥಾಲಯ ತೆರೆಯಲಾಗಿದೆ. ಈ ಗ್ರಂಥಾಲಯದಲ್ಲಿ ದಿನಪತ್ರಿಕೆಗಳು, ಮಾಸಿಕಗಳು ಜೊತೆಗೆ ದೊಡ್ಡ ದೊಡ್ಡ ಲೇಖಕರ ಜನಪ್ರಿಯ ಕಾದಂಬರಿಗಳನ್ನು ಸಹ ಇಡಲಾಗಿದೆ.

    ಸದ್ಯ 500 ಪುಸ್ತಕಗಳನ್ನು ಕೋವಿಡ್ ವಾರ್ಡ್ ನಲ್ಲಿ ಇಟ್ಟಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಪುಸ್ತಕಗಳನ್ನು ಖರೀದಿಸಲಾಗುವುದು ಎಂದಿದ್ದಾರೆ. ಜೊತೆಗೆ ಸಾಹಿತಿಗಳು ಹಾಗೂ ಲೇಖಕರು ಯಾರಾದರೂ ಉಚಿತವಾಗಿ ತಾವು ಬರೆದಿರುವ ಪುಸ್ತಕವನ್ನು ನೀಡುವುದಾದರೆ ನೀಡಬಹುದು ಎಂಬ ಮನವಿಯನ್ನು ಸಹ ಮಾಡಿದ್ದಾರೆ.

    ಅಲ್ಲದೇ ರಾಜ್ಯದಲ್ಲಿಯೇ ಇದೇ ಪ್ರಥಮವಾದ ಕೋವಿಡ್ ವಾರ್ಡ್ ನಲ್ಲಿ ತೆರೆದಿರುವ ಗ್ರಂಥಾಲಯ ಇದಾಗಿದ್ದು, ಜಿಲ್ಲಾ ಕೇಂದ್ರದ ಮೆಗ್ಗಾನ್ ಆಸ್ಪತ್ರೆಯ ಕೋವಿಡ್ ವಾರ್ಡ್ ನಲ್ಲಿ ಸಹ ಗ್ರಂಥಾಲಯ ತೆರೆಯಲು ಆರೋಗ್ಯ ಸಿಬ್ಬಂದಿ ಚಿಂತನೆ ನಡೆಸಿದ್ದಾರೆ.

  • ಸಿಇಟಿ ಪರೀಕ್ಷೆ – ಬಳ್ಳಾರಿಯಲ್ಲಿ 6 ಜನ ಸೋಂಕಿತ ವಿದ್ಯಾರ್ಥಿಗಳಿಗೆ ಪ್ರತ್ಯೇಕ ವ್ಯವಸ್ಥೆ

    ಸಿಇಟಿ ಪರೀಕ್ಷೆ – ಬಳ್ಳಾರಿಯಲ್ಲಿ 6 ಜನ ಸೋಂಕಿತ ವಿದ್ಯಾರ್ಥಿಗಳಿಗೆ ಪ್ರತ್ಯೇಕ ವ್ಯವಸ್ಥೆ

    ಬಳ್ಳಾರಿ: ವೃತ್ತಿಪರ ಕೋರ್ಸುಗಳ ಪ್ರವೇಶಕ್ಕೆ ಸಂಬಂಧಿಸಿದಂತೆ ನಡೆಸಲಾಗುವ ಸಿಇಟಿ ಪರೀಕ್ಷೆ ಇಂದಿನಿಂದ ಎರಡು ನಗಳ ಕಾಲ ನಡೆಯುತ್ತಿದ್ದು, ಗಣಿ ನಾಡು ಬಳ್ಳಾರಿಯಲ್ಲಿ ಅಗತ್ಯ ಸಿದ್ಧತೆಗಳೊಂದಿಗೆ ಪರೀಕ್ಷೆ ಆರಂಭವಾಗಿವೆ.

    ಕೊರೊನಾ ಸೋಂಕಿತ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಿದ್ದು, ಕೊರೊನಾ ವೈರಸ್ ದೃಢಪಟ್ಟಂತಹ ವಿದ್ಯಾರ್ಥಿಗಳಿಗೆ ಸಿ.ಇ.ಟಿ. ಪರೀಕ್ಷೆ ಬರೆಯಲು ಬಳ್ಳಾರಿಯ ಡೆಂಟಲ್ ಕಾಲೇಜ್ ನಲ್ಲಿ ವ್ಯವಸ್ಥೆ ಮಾಡಲಾಗಿದೆ. ಬಳ್ಳಾರಿ ಜಿಲ್ಲಾಧಿಕಾರಿಗಳ ನಿರ್ದೇಶನದ ಮೇರೆಗೆ ಪದವಿಪೂರ್ವ ಶಿಕ್ಷಣ ಇಲಾಖೆ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಈ ವ್ಯವಸ್ಥೆ ಮಾಡಿದೆ.

    ಬಳ್ಳಾರಿ, ಸಿರಗುಪ್ಲ ಹಾಗೂ ಹಡಗಲಿಯ ತಲಾ ಇಬ್ಬರು ಕೊರೊನಾ ಸೋಂಕಿತ ವಿದ್ಯಾರ್ಥಿಗಳು ಸೇರಿದಂತೆ 6 ಜನ ವಿದ್ಯಾರ್ಥಿಗಳನ್ನು ಪರೀಕ್ಷೆ ಬರೆಸಲು ಜಿಲ್ಲಾಡಳಿತವು ವ್ಯವಸ್ಥೆ ಮಾಡಿದೆ. ಪಿಪಿಇ ಕಿಟ್, ಮಾಸ್ಕ್ ಸೇರಿದಂತೆ ಅಗತ್ಯ ಮುಂಜಾಗ್ರತಾ ಕ್ರಮಗಳೊಂದಿಗೆ ಪರೀಕ್ಷಾ ಕೇಂದ್ರಕ್ಕೆ ಕರೆತಂದು ಅತ್ಯಂತ ಸುರಕ್ಷಿತವಾಗಿ ಸೋಂಕಿತ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಸಲು ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದೆ.

  • 60 ವರ್ಷದ ವೃದ್ಧ ಸೇರಿ ಆಸ್ಪತ್ರೆಯಲ್ಲಿ ಸೋಂಕಿತರು ಭರ್ಜರಿ ಡ್ಯಾನ್ಸ್ – ವಿಡಿಯೋ ವೈರಲ್

    60 ವರ್ಷದ ವೃದ್ಧ ಸೇರಿ ಆಸ್ಪತ್ರೆಯಲ್ಲಿ ಸೋಂಕಿತರು ಭರ್ಜರಿ ಡ್ಯಾನ್ಸ್ – ವಿಡಿಯೋ ವೈರಲ್

    ಹಾವೇರಿ: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ ಹಾವೇರಿಯ ಜಿಲ್ಲಾಸ್ಪತ್ರೆಯಲ್ಲಿರುವ ಕೋವಿಡ್-19 ವಾರ್ಡಿನಲ್ಲಿ ಸೋಂಕಿತರು ಭರ್ಜರಿ ಸ್ಟೆಪ್ ಹಾಕಿದ್ದಾರೆ.

    ಐಎಲ್‍ಐ ವಾರ್ಡ್‍ನಲ್ಲಿ ಇರುವ ನಾಲ್ಕೈದು ಸೋಂಕಿತರು ಭರ್ಜರಿಯಾಗಿ ಡ್ಯಾನ್ಸ್ ಮಾಡಿ ಎಂಜಾಯ್ ಮಾಡಿದ್ದಾರೆ. ಈ ಮೂಲಕ ಕೊರೊನಾ ಬಂದರೆ ಆತ್ಮಸ್ಥೈರ್ಯ ಕಳೆದುಕೊಳ್ಳಬೇಡಿ ಧೈರ್ಯದಿಂದ ಇರಿ ಎಂಬ ಸಂದೇಶವನ್ನು ಸೋಂಕಿತರು ರವಾನಿಸಿದ್ದಾರೆ.

    ಚೌಕ ಸಿನಿಮಾದ ಅಲ್ಲಾಡ್ಸ್ ಅಲ್ಲಾಡ್ಸ್ ಎಂಬ ಹಾಡಿಗೆ ಎರಡೂವರೆ ನಿಮಿಷ ಭರ್ಜರಿಯಾಗಿ ಕೊರೊನಾ ಸೋಂಕಿತರು ಡ್ಯಾನ್ಸ್ ಮಾಡಿ ಸಮಯವನ್ನು ಕಳೆದಿದ್ದಾರೆ. 60 ವರ್ಷ ವೃದ್ಧ ಸೇರಿ ನಾಲ್ವರು ರೋಗಿಗಳಿಂದ ಬಿಂದಾಸ್ ಡ್ಯಾನ್ಸ್ ಜಿಲ್ಲೆಯಲ್ಲಿ ಸಖತ್ ವೈರಲ್ ಆಗಿದೆ. ಕೊರೊನಾಗೆ ಹೆದರಬೇಡಿ, ಜಾಗೃತರಾಗಿರಿ ಎಂದು ಸೋಂಕಿತರು ಸ್ಟೆಪ್ ಹಾಕಿದ ವಿಡಿಯೋಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  •  ‘ಎಲ್ಲ ಅವ್ರೆ ಸ್ವಾಮಿ, ಗಿಜಿಗಿಜಿ ಅಂತಾರೆ’- ಕೊರೊನಾ ಸೋಂಕಿತರ ಬಗ್ಗೆ ಸೋಮಣ್ಣ ನಿರ್ಲಕ್ಷ್ಯದ ಮಾತು

     ‘ಎಲ್ಲ ಅವ್ರೆ ಸ್ವಾಮಿ, ಗಿಜಿಗಿಜಿ ಅಂತಾರೆ’- ಕೊರೊನಾ ಸೋಂಕಿತರ ಬಗ್ಗೆ ಸೋಮಣ್ಣ ನಿರ್ಲಕ್ಷ್ಯದ ಮಾತು

    ತುಮಕೂರು: ಬೆಂಗಳೂರು ಕೋವಿಡ್ ಕೇಂದ್ರಗಳಲ್ಲಿ ಎಲ್ಲ ಅವ್ರೆ ಸ್ವಾಮಿ, ಏನ್ ಮಾಡೋದು, ಎಲ್ಲಿ ನೋಡಿದರೂ ಗಿಜಿಗಿಜಿ ಅಂತಾರೆ ಎಂದು ಕೊರೊನಾ ರೋಗಿಗಳ ಕುರಿತು ಸಚಿವ ವಿ.ಸೋಮಣ್ಣ ನಿರ್ಲಕ್ಷ್ಯವಾಗಿ ಮಾತಾಡಿದ್ದಾರೆ. ಇದಕ್ಕೆ ಮಾಜಿ ಸಚಿವ ಸೊಗಡು ಶಿವಣ್ಣ `ಕುರಿಮಂದೆ ಇದ್ದಂಗೆ ಇದ್ದಾರೆ ಸ್ವಾಮೀಜಿ, ಎಲ್ಲಿ ನೋಡಿದರೂ ಅವರೇ’ ಎಂದು ಸಚಿವರ ಮಾತಿಗೆ ದನಿಗೂಡಿಸಿದ್ದಾರೆ.

    ಇಂದು ಬೆಳಗ್ಗೆ ಸಿದ್ದಗಂಗಾ ಮಠಕ್ಕೆ ಸಚಿವ ವಿ.ಸೋಮಣ್ಣ ಭೇಟಿ ನೀಡಿ ಸಿದ್ದಲಿಂಗ ಸ್ವಾಮೀಜಿಯವರ ಜೊತೆ ಮಾತನಾಡಿದ್ದಾರೆ. ಈ ವೇಳೆ ಬೆಂಗಳೂರಿನಲ್ಲಿ ಕೋವಿಡ್ ವಿಚಾರವಾಗಿ ತಾನು ಕೈಗೊಂಡಿರುವ ಕಾರ್ಯಗಳನ್ನು ವಿವರಿಸಿದ್ದಾರೆ. ಆ ಸಂದರ್ಭದಲ್ಲಿ ಈ ಮೇಲಿನ ನಿರ್ಲಕ್ಷ್ಯದ ಮಾತು ಆಡಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

    ಬೆಂಗಳೂರಿನ 53 ವಾರ್ಡ್‍ಗಳಲ್ಲಿ 26 ಕಡೆ ಕೋವಿಡ್ ಆಸ್ಪತ್ರೆಗಳನ್ನು ತೆರೆದಿದ್ದೇನೆ. ದಿನದ 24 ಗಂಟೆ ಸಹಾಯವಾಣಿ, ಅಂಬುಲೆನ್ಸ್, ಒಂದು ಆಕ್ಸಿಜನ್ ಇದ್ದು ಎಲ್ಲಾ ಸೌಲಭ್ಯ ಒದಗಿಸಲಾಗಿದೆ ಎಂದು ಹೇಳಿದ್ದಾರೆ. ಆಗ ಮಾಜಿ ಸಚಿವ ಸೊಗಡು ಶಿವಣ್ಣ ಕುರಿಮಂದೆ ಇದ್ದಂಗೆ ಇದ್ದಾರೆ ಸ್ವಾಮೀಜಿ ಎಂದಿದ್ದಾರೆ. ಇದರಿಂದ ಉತ್ತೇಜನಗೊಂಡ ಸಚಿವ ಸೋಮಣ್ಣ `ಎಲ್ಲಾ ಅವ್ರೆ ಏನ್ ಮಾಡೋದು, ಗಿಜಿಗಿಜಿ ಅಂತಾರೆ ಸ್ವಾಮೀಜಿ’ ಎಂದು ಹೇಳಿದ್ದಾರೆ.

    ಅಂಬುಲೆನ್ಸ್ ನವರು ಕೋವಿಡ್ ಸೋಂಕಿತರನ್ನು ಕರೆತರಲು 3000 ರೂಪಾಯಿ ಕೊಟ್ರೆ ಹೋಗೋದು. ಇಲ್ಲದಿದ್ದರೆ ಹೋಗೋದೇ ಇಲ್ಲ ಎಂದು ಸಚಿವ ಸೋಮಣ್ಣ ಅಸಹಾಯಕತೆ ವ್ಯಕ್ತಪಡಿಡಿದ್ದಾರೆ. ಪ್ರತಿ ವಾರ್ಡ್‍ನಲ್ಲಿರುವ ಕೌಂಟರ್ ಗೆ ಆಶಾ ಕಾರ್ಯಕರ್ತೆಯರನ್ನು ನೇಮಕ ಮಾಡಿದ್ದೇನೆ. ಅವರು ಆಯಾ ವಾರ್ಡ್‍ನಷ್ಟೇ ನೋಡಿಕೊಳ್ಳುತ್ತಾರೆ. ಹೀಗಾಗಿ ಸೋಂಕು ಕಂಟ್ರೋಲ್‍ಗೆ ಬರುತ್ತಿದೆ ಎಂದು ಸ್ವಾಮೀಜಿಗೆ ಸೋಮಣ್ಣ ವಿವರಿಸಿದ್ದಾರೆ.

    ಸೋಮವಾರ ಮಾಜಿ ಸಚಿವ ಜಾರ್ಜ್, ಕಾಂಗ್ರೆಸ್ ಮುಖಂಡ ಹ್ಯಾರಿಸ್ ಮತ್ತು ಶಾಸಕ ರಿಜ್ವನ್ ಅರ್ಷದ್, ಶ್ರೀನಿವಾಸಮೂರ್ತಿ ಅವರ ಜೊತೆ ಮಾತುಕತೆ ನಡೆಸಿದ್ದೇನೆ. ಸೋಂಕು ನಿಯಂತ್ರಣದ ಸಂಬಂಧ ಚರ್ಚೆಸಿದ್ದೇನೆ ಎಂದೂ ಸಹ ಸೋಮಣ್ಣ ಹೇಳಿದ್ದಾರೆ.

  • ಮಾತ್ರೆಗಳ ಕೊರತೆ ಶುರು- ಎರಡು ದಿನದಿಂದ ಆಸ್ಪತ್ರೆ ಸ್ವಚ್ಛತಾ ಕಾರ್ಯವೂ ಸ್ಥಗಿತ

    ಮಾತ್ರೆಗಳ ಕೊರತೆ ಶುರು- ಎರಡು ದಿನದಿಂದ ಆಸ್ಪತ್ರೆ ಸ್ವಚ್ಛತಾ ಕಾರ್ಯವೂ ಸ್ಥಗಿತ

    – ಅವ್ಯವಸ್ಥೆಯ ಆಗರವಾಗಿದೆ ವಿಕ್ಟೋರಿಯಾ ಆಸ್ಪತ್ರೆ
    – ಮಾತ್ರೆಗಳನ್ನು ಕೊಡಿ ಎಂದು ನರ್ಸ್‍ಗೆ ಅವಾಜ್ ಆಕ್ತಿದ್ದಾರೆ ಸೋಂಕಿತರು

    ಬೆಂಗಳೂರು: ಕೊರೊನಾ ನಿಯಂತ್ರಿಸುವಲ್ಲಿ ಸರ್ಕಾರ ದಿವ್ಯ ನಿರ್ಲಕ್ಷ್ಯ ವಹಿಸಿದೆ ಎಂಬುದನ್ನು ರಾಜ್ಯದ ಆಸ್ಪತ್ರೆಗಳ ಸ್ಥಿತಿಗತಿಯೇ ಹೇಳುತ್ತವೆ. ವೈದ್ಯರು, ನರ್ಸ್, ಬೆಡ್ ಕೊರತೆ ಮಧ್ಯೆ ಈಗ ಮೆಡಿಸನ್ ಕೊರತೆ ಎದುರಾಗಿದ್ದು, ಇದರಿಂದಾಗಿ ಸೋಂಕಿತರು ತೀವ್ರ ಆತಂಕಕ್ಕೀಡಾಗಿದ್ದಾರೆ.

    ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮಾತ್ರೆಗಳ ಕೊರತೆ ಉಂಟಾಗಿದ್ದು, ಇನ್ನೂ ಅಚ್ಚರಿಯ ಸಂಗತಿ ಎಂದರೆ ಎರಡು ದಿನದಿಂದ ಹೌಸ್ ಕೀಪಿಂಗ್‍ನವರು ಕೆಲಸಕ್ಕೆ ಬಾರದ್ದಕ್ಕೆ ಆಸ್ಪತ್ರೆ ಗಬ್ಬು ನಾರುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ. ವೈದ್ಯರು, ನರ್ಸ್‍ಗಳ ಕೊರತೆ ಮಧ್ಯೆ ಹೇಗೋ ಮಾತ್ರೆಗಳನ್ನು ನುಂಗಿ ಗುಣಮುಖರಾಗುತ್ತಿದ್ದ ಕೊರೊನಾ ಸೋಂಕಿತರಿಗೆ ಇದೀಗ ಮಾತ್ರೆಗಳ ಸಮಸ್ಯೆಯೂ ಎದುರಾಗಿದ್ದು, ಗುಣಮುಖರಾಗುವುದು ಹೇಗೆ ಎಂಬ ಭಯ ಎದುರಾಗಿದೆ.

    ಕೊರೊನಾಗೆ ವ್ಯಾಕ್ಸಿನ್ ಇಲ್ಲದಿದ್ದರೂ, ಗುಣ ಲಕ್ಷಣಗಳನ್ನು ಆಧರಿಸಿ ಮೆಡಿಸಿನ್ ನೀಡಲಾಗುತ್ತಿತ್ತು. ಆದರೆ ಇದೀಗ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮೆಡಿಸನ್ ಕೊರತೆ ಎದುರಾಗಿದೆ. ಈ ಕುರಿತು ವಿಕ್ಟೋರಿಯಾ ಆಸ್ಪತ್ರೆಯ ನರ್ಸ್‍ಗಳು ಆಡಳಿತ ಮಂಡಳಿಗೆ ಮನವಿ ಮಾಡಿದ್ದು, ಮೆಡಿಸಿನ್ ತುಂಬಾ ಕಡಿಮೆ ಇದೆ. ದಯವಿಟ್ಟು ಪೂರೈಕೆ ಮಾಡಿ ಎಂದು ಮನವಿ ಮಾಡಿದ್ದಾರೆ. ಆದರೂ ಆಡಳಿತ ಮಂಡಳಿ ಹಾಗೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ.

    ಈ ಮಧ್ಯೆಯೇ ಎರಡು ಮೂರು ದಿನದಿಂದ ಆಸ್ಪತ್ರೆ ಸ್ವಚ್ಛಗೊಳಿಸಲು ಹೌಸ್ ಕೀಪಿಂಗ್ ನವರನ್ನೂ ಕಳುಹಿಸಿಲ್ಲ. ಇದರಿಂದಾಗಿ ವಾರ್ಡ್‍ಗಳು ಗಬ್ಬು ವಾಸನೆ ಹೊಡೆಯುತ್ತಿವೆ. ಮಾತ್ರೆಗಳು ಇಲ್ಲದ್ದಕ್ಕೆ ರೋಗಿಗಳು ಸುತ್ತುವರೆದು ನಮಗೆ ಬೆದರಿಕೆ ಹಾಕುತ್ತಿದ್ದಾರೆ, ನಾವೇನು ಮಾಡುವುದು. ನಮ್ಮ ಬಳಿ ಉತ್ತರವಿಲ್ಲ ದಯವಿಟ್ಟು ಮೆಡಿಸಿನ್ ಕಳುಹಿಸಿ ಎಂದು ನರ್ಸ್‍ಗಳು ಗೋಳಿಡುತ್ತಿದ್ದಾರೆ.

    ಆಸ್ಪತ್ರೆಗಳಲ್ಲಿ ಇಷ್ಟೆಲ್ಲ ಅವ್ಯವಸ್ಥೆ ತಾಂಡವಾಡುತ್ತಿದ್ದರೂ ಸರ್ಕಾರ ಮಾತ್ರ ಎಲ್ಲವೂ ಸರಿಯಿದೆ ಎಂದು ತೋರಿಸಿಕೊಳ್ಳುತ್ತಿದೆ. ಸಿಬ್ಬಂದಿ ಕೊರತೆ ಬಗ್ಗೆಯೂ ಆಡಳಿತ ಮಂಡಳಿ ಗಮನಕ್ಕೆ ತರಲಾಗಿದ್ದು, ಈ ಕುರಿತು ಸಹ ಕ್ರಮ ಕೈಗೊಂಡಿಲ್ಲ.

  • ಕಾಫಿನಾಡು ಚಿಕ್ಕಮಗಳೂರಿಗೆ ಶುಭ ಸುದ್ದಿ- ಜಿಲ್ಲೆ ಸದ್ಯ ಕೊರೊನಾ ಮುಕ್ತ

    ಕಾಫಿನಾಡು ಚಿಕ್ಕಮಗಳೂರಿಗೆ ಶುಭ ಸುದ್ದಿ- ಜಿಲ್ಲೆ ಸದ್ಯ ಕೊರೊನಾ ಮುಕ್ತ

    ಚಿಕ್ಕಮಗಳೂರು: ರಾಜ್ಯದಲ್ಲಿ ಕೊರೊನಾ ಅಟ್ಟಹಾಸ ಮುಂದುವರಿದಿದೆ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಏರಿಕೆ ಕಾಣುತ್ತಿದ್ದರೂ ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ಜನರಿಗೆ ಗುಡ್‍ನ್ಯೂಸ್ ಸಿಕ್ಕಿದೆ.

    ಜಿಲ್ಲೆಯು ಸದ್ಯ ಕೊರೊನಾ ಮುಕ್ತ ಜಿಲ್ಲೆಯಾಗಿ ಹೊರಹೊಮ್ಮಿದೆ. ಕಳೆದ ಕೆಲವು ದಿನಗಳಿಂದ ಕೋವಿಡ್-19 ಸೋಂಕಿನಿಂದ ಆಸ್ಪತ್ರೆ ಸೇರಿದ್ದ ಎಲ್ಲಾ 16 ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.

    ಚಿಕ್ಕಮಗಳೂರು ಜಿಲ್ಲೆಯಲ್ಲಿ ಒಟ್ಟು 16 ಮಂದಿಗೆ ಸೋಂಕು ಪತ್ತೆಯಾಗಿತ್ತು. ಅವರೆಲ್ಲರೂ ಇದೀಗ ಸಂಪೂರ್ಣ ಗುಣಮುಖತಾಗಿದ್ದು, ಜಿಲ್ಲಾಡಳಿತವು ಡಿಸ್ಚಾರ್ಜ್ ಗೂ ಮುನ್ನವೇ ಎಲ್ಲರ ವೈದ್ಯಕೀಯ ಪರೀಕ್ಷೆ ಮಾಡಿಸಿದೆ. ರಿಪೋರ್ಟ್ ನಲ್ಲಿ ಕೊರೊನಾ ನೆಗೆಟಿವ್ ಬಂದಿದ್ದರಿಂದ ಬಿಡುಗಡೆ ಮಾಡಲಾಗಿದೆ. ಈ ಮೂಲಕ ಸದ್ಯ ಜಿಲ್ಲೆಯಲ್ಲಿ ಯಾವುದೇ ಸಕ್ರಿಯ ಪ್ರಕರಣಗಳಿಲ್ಲ.

    ಚಾಮರಾಜನಗರ:
    ರಾಜ್ಯದಲ್ಲಿ, ಅದರಲ್ಲೂ ದಕ್ಷಿಣ ಭಾರತದ ಜಿಲ್ಲೆಗಳಲ್ಲಿ ಕೊರೊನಾ ಮುಕ್ತ ಜಿಲ್ಲೆ ಎಂಬ ಹೆಗ್ಗಳಿಕೆಗೆ ಚಾಮರಾಜನಗರ ಜಿಲ್ಲೆ ಪಾತ್ರವಾಗಿದೆ. ವಿಶೇಷವೆಂದರೆ ಜಿಲ್ಲೆಯು ಕೊರೊನಾ ಹಾಟ್‍ಸ್ಪಾಟ್ ಜಿಲ್ಲೆ ಹಾಗೂ ರಾಜ್ಯಗಳೊಂದಿಗೆ ಗಡಿ ಹಂಚಿಕೊಂಡಿದೆ. ತಮಿಳುನಾಡು, ಕೇರಳ ರಾಜ್ಯಗಳು ಒಂದೆಡೆಯಾದರೆ ಮೈಸೂರು, ಮಂಡ್ಯ ಇನ್ನೊಂದೆಡೆ ಇವೆ. ಹೀಗಿದ್ದರೂ ಜಿಲ್ಲೆಯಲ್ಲಿ ಒಂದೇ ಒಂದು ಕೊರೋನಾ ಪ್ರಕರಣ ಪತ್ತೆಯಾಗಿಲ್ಲ.

    ಹಾಟ್‍ಸ್ಪಾಟ್‍ಗಳ ಮಧ್ಯೆ ಇದ್ದರೂ ಚಾಮರಾಜನಗರದಲ್ಲಿ ಜಿಲ್ಲೆಯಲ್ಲಿ ಕೊರೊನಾ ವೈರಸ್ ಪತ್ತೆಯಾಗಿಲ್ಲ. ಈ ಹಿನ್ನಲೆಯಲ್ಲಿ ನಿನ್ನೆಯಷ್ಟೇ ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಅವರು ಚಾಮರಾಜನಗರ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರಿಗೆ ದೂರವಾಣಿ ಕರೆ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದರು.

    ದಕ್ಷಿಣ ಭಾರತದಲ್ಲಿಯೇ ಚಾಮರಾಜನಗರ ಕೊರೊನಾ ಮುಕ್ತ ಜಿಲ್ಲೆಯಾಗಿದೆ. ಇದುವರೆಗೂ ತೆಲಂಗಾಣದ ವಾರಂಗಲ್ ಗ್ರಾಮೀಣ ಹಾಗೂ ಕರ್ನಾಟಕದ ಚಾಮರಾಜನಗರ ಜಿಲ್ಲೆಯಲ್ಲಿ ಮಾತ್ರ ಕೊರೊನಾ ಪತ್ತೆಯಾಗಿರಲಿಲ್ಲ. ಆದರೆ ವಾರಂಗಲ್ ಗ್ರಾಮೀಣ ಭಾಗದಲ್ಲಿ ಮಂಗಳವಾರ ಸೋಂಕು ದೃಢಪಟ್ಟಿದೆ. ಈ ಹಿನ್ನೆಲೆ ದಕ್ಷಿಣ ಭಾರತದಲ್ಲಿ ಕೊರೊನಾ ಮುಕ್ತ ಏಕೈಕ ಜಿಲ್ಲೆ ಎಂಬ ಹೆಗ್ಗಳಿಕೆಗೆ ಚಾಮರಾಜನಗರ ಪಾತ್ರವಾಗಿದೆ.

  • ಗದಗದಲ್ಲಿ ಸೋಂಕಿನಿಂದ 9 ಜನರು ಗುಣಮುಖ – ಆಸ್ಪತ್ರೆಯಿಂದ ಡಿಸ್ಚಾರ್ಜ್

    ಗದಗದಲ್ಲಿ ಸೋಂಕಿನಿಂದ 9 ಜನರು ಗುಣಮುಖ – ಆಸ್ಪತ್ರೆಯಿಂದ ಡಿಸ್ಚಾರ್ಜ್

    ಗದಗ: ಕೊರೊನಾ ಸೋಂಕಿತ 9 ಜನರು ಗುಣಮುಖರಾಗಿ ಗದಗ ಜಿಮ್ಸ್ ನ ಕೋವಿಡ್-19 ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

    ಜಿಲ್ಲಾಡಳಿತ ಹಾಗೂ ವೈದ್ಯಕೀಯ ಸಿಬ್ಬಂದಿಗಳು ಈ 9 ಜನರನ್ನು ಚಪ್ಪಾಳೆ ತಟ್ಟುವ ಮೂಲಕ ಆಸ್ಪತ್ರೆಯಿಂದ ಹೊರ ಕರೆತಂದರು. ಇದರಲ್ಲಿ ಗುಜರಾತನಿಂದ ಬಂದಿದ್ದ 62 ವರ್ಷದ ವೃದ್ಧ ಮೇ 14 ರಂದು ಜಿಮ್ಸ್ ಕೊರೊನಾ ವಿಭಾಗಕ್ಕೆ ದಾಖಲಿಸಿಲಾಗಿತ್ತು. ನಂತರ ಮುಂಬೈನಿಂದ ಬಂದ 32 ವರ್ಷದ ಯುವಕನಿಗೂ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ, ಮೇ 21 ರಂದು ಜಿಮ್ಸ್ ಗೆ ದಾಖಲಿಸಲಾಗಿತ್ತು.

    ಪಿ-913 ಇವರ ದ್ವಿತೀಯ ಸಂಪರ್ಕದಿಂದ ಸೋಂಕು ತಗುಲಿದ್ದ, 50 ವರ್ಷದ ಮಹಿಳೆ ಪಿ-1932, 19 ವರ್ಷದ ಯುವತಿ ಪಿ-1933, 22 ವರ್ಷದ ಯುವತಿ ಪಿ-1934, 18 ವರ್ಷದ ಯುವಕ ಪಿ-1935, 48 ವರ್ಷದ ಯುವಕ ಪಿ-1936, 8 ವರ್ಷದ ಬಾಲಕಿ ಪಿ-1937, 21 ವರ್ಷದ ಯುವಕ ಪಿ-1938, ಇವರೆಲ್ಲಾ ಮೇ 23 ರಂದು ಆಸ್ಪತ್ರೆಗೆ ದಾಖಲಿಸಿಲಾಗಿತ್ತು. ಈ ಎಲ್ಲರೂ ಈಗ ಸೋಂಕಿನಿಂದ ಗುಣಮುಖರಾಗಿದ್ದಾರೆ.

    ಇಂದು 9 ಜನರನ್ನು ಡಿಸ್ಚಾರ್ಜ್ ಮಾಡಲಾಗಿದೆ. 14 ದಿನಗಳ ಕಾಲ ಹೋಂ ಕ್ವಾರಂಟೈನ್ ಆಗುವಂತೆ ವೈದ್ಯರು ಸಲಹೆ ನೀಡಿ ಅಂಬುಲೆನ್ಸ್ ಮೂಲಕ ಮನೆಗೆ ಕಳುಹಿಸಿದ್ದಾರೆ. ಜಿಲ್ಲಾಡಳಿತ, ಆರೋಗ್ಯ ಇಲಾಖೆಯಿಂದ ಗುಣಮುಖರಾದವರಿಗೆ ಮಾಸ್ಕ್, ಸ್ಯಾನಿಟೆಜರ್ ಹಾಗೂ ಆಹಾರ ಕಿಟ್ ನೀಡಿ ಗೌರವಿಸಲಾಯಿತು.

  • ಸೋಂಕಿತರ ಟ್ರಾವೆಲ್ ಹಿಸ್ಟರಿ ಮುಚ್ಚಿಟ್ಟ ಸರ್ಕಾರ- ಪ್ರಶ್ನಿಸಿದಾಗ ನುಣುಚಿಕೊಂಡ ಶ್ರೀರಾಮುಲು

    ಸೋಂಕಿತರ ಟ್ರಾವೆಲ್ ಹಿಸ್ಟರಿ ಮುಚ್ಚಿಟ್ಟ ಸರ್ಕಾರ- ಪ್ರಶ್ನಿಸಿದಾಗ ನುಣುಚಿಕೊಂಡ ಶ್ರೀರಾಮುಲು

    ಬೆಂಗಳೂರು: ಕೊರೊನಾ ಸೋಂಕಿತರ ಟ್ರಾವೆಲ್ ಹಿಸ್ಟರಿಯನ್ನು ರಾಜ್ಯ ಸರ್ಕಾರ ಇಂದು ಬಿಡುಗಡೆ ಮಾಡಿರುವ ಹೆಲ್ತ್ ಬುಲೆಟಿನ್ ಅಲ್ಲಿ ನಮೂದಿಸದೇ ಇರುವುದು ಹಲವಾರು ಅನುಮಾನಗಳಿಗೆ ಕಾರಣವಾಗಿದೆ.

    ಇಷ್ಟು ದಿನ ಕೊರೊನಾ ವಿಚಾರವಾಗಿ ದಿನಕ್ಕೆ ಎರಡು ಬುಲೆಟಿನ್ ಬಿಡುಗಡೆ ಮಾಡುತ್ತಿದ್ದ ರಾಜ್ಯ ಆರೋಗ್ಯ ಇಲಾಖೆ, ಅದರಲ್ಲಿ ಸೋಂಕಿತರ ಜಿಲ್ಲೆ ಮತ್ತು ಅವರು ಪ್ರಯಾಣ ಮಾಡಿದ ಹಿನ್ನೆಲೆ ಮತ್ತು ಯಾವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬ ಮಾಹಿತಿಯನ್ನು ನಮೂದಿಸುತ್ತಿತ್ತು. ಆದರೆ ಇಂದು ಬಿಡುಗಡೆ ಮಾಡಿರುವ ಹೆಲ್ತ್ ಬುಲೆಟಿನ್ ನಲ್ಲಿ ಕೇವಲ ಜಿಲ್ಲಾವಾರು ಪಟ್ಟಿಯನ್ನು ಮಾತ್ರ ಬಿಡುಗಡೆ ಮಾಡಿದೆ. ಈ ಮೂಲಕ ಸೋಂಕಿತರ ಪ್ರಯಾಣದ ಹಿನ್ನೆಲೆಯನ್ನು ಮುಚ್ಚಿಟ್ಟಿದೆ.

    ಸದ್ಯ ಕರುನಾಡಲ್ಲಿ ಮುಂಬೈ ಕೊರೊನಾ ಬಾಂಬ್ ಸ್ಫೋಟಿಸಿದೆ. ಮುಂಬೈನಿಂದ ರಾಜ್ಯಕ್ಕೆ ವಾಪಸ್ ಬಂದ ಹಲವರಲ್ಲಿ ಕೊರೊನಾ ಪಾಸಿಟಿವ್ ಬಂದಿದೆ. ಇದರಲ್ಲಿ ಕೆಲವರನ್ನು ಮಾತ್ರ ಕ್ವಾರಂಟೈನ್ ಮಾಡಿದ್ದು, ದಾಖಲೆ ಸಲ್ಲಿಸದೇ ಕಳ್ಳಮಾರ್ಗದಲ್ಲಿ ರಾಜ್ಯಕ್ಕೆ ಬಂದವರ ಮಾಹಿತಿ ಸರ್ಕಾರದ ಬಳಿ ಇಲ್ಲ. ಜೊತೆಗೆ ಕೊರೊನಾ ಟೆಸ್ಟ್ ಮಾಡದೇ ಮಹಾರಾಷ್ಟ್ರದಿಂದ ಜನರನ್ನು ರಾಜ್ಯಕ್ಕೆ ಕರೆದುಕೊಂಡು ಬಂದು ಸರ್ಕಾರ ಎಡವಟ್ಟು ಮಾಡಿಕೊಂಡಿದೆ.

    ಈ ವಿಚಾರವಾಗಿ ಪಬ್ಲಿಕ್ ಟಿವಿಯ ಜೊತೆ ಮಾತನಾಡಿದ ಆರೋಗ್ಯ ಸಚಿವ ಶ್ರೀರಾಮುಲು, ಹೊರರಾಜ್ಯದಿಂದ ದಾಖಲೆ ನೀಡಿ, ನೋಂದಣಿ ಮಾಡಿಸಿಕೊಂಡು ರಾಜ್ಯಕ್ಕೆ ಬಂದವರ ಟ್ರಾವೆಲ್ ಹಿಸ್ಟರಿ ನಮಗೆ ಸಿಕ್ಕಿದೆ. ಆದರೆ ಯಾವುದೇ ದಾಖಲಾತಿ ಮಾಡಿಕೊಳ್ಳದೆ, ನಮಗೆ ತಿಳಿಸದೇ ರಾಜ್ಯಕ್ಕೆ ಬಂದವರ ಪ್ರಯಾಣದ ಹಿನ್ನೆಲೆ ನಮಗೆ ಸಿಕ್ಕಿಲ್ಲ. ಅದೂ ಸ್ವಲ್ಪ ಕಷ್ಟವಾಗುತ್ತಿದೆ. ನಾವು ಅವರ ಟ್ರಾವೆಲ್ ಹಿಸ್ಟರಿ ಕಂಡುಹಿಡಿಯಲು ಪ್ರಯತ್ನಿಸುತ್ತಿದ್ದೇವೆ ಎಂದು ಹೇಳಿ ನುಣುಚಿಕೊಂಡಿದ್ದಾರೆ.