ಬೆಂಗಳೂರು: ಡಾ.ಸಿ.ಎನ್.ಅಶ್ವತ್ಥನಾರಾಯಣ ಫೌಂಡೇಶನ್ ವತಿಯಿಂದ ಮಲ್ಲೇಶ್ವರ ಕ್ಷೇತ್ರದ ಮೂರು ಕಡೆ ನಡೆಯುತ್ತಿರುವ ಕೋವಿಡ್ ಲಸಿಕೆ ಅಭಿಯಾನ ಶಿಬಿರಗಳಿಗೆ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಫೌಂಡೇಶನ್ ವತಿಯಿಂದಲೇ ಲಸಿಕೆ ಖರೀದಿ ಮಾಡಿ ಬಿಪಿಎಲ್ ಕುಟುಂಬಗಳು, ಬೀದಿಬದಿ ವ್ಯಾಪಾರಿಗಳು, ಸಾರ್ವಜನಿಕರು, ಮುಂಚೂಣಿ ಕಾರ್ಯಕರ್ತರು ಮತ್ತು ಅಶಕ್ತರಿಗೆ ನೀಡಲಾಗುತ್ತಿದೆ. ಮಲ್ಲೇಶ್ವರದ ಗುಟ್ಟಹಳ್ಳಿಯ ರಂಗ ಮಂದಿರ, ಎಂಎಸ್‍ಆರ್ ನಗರದ ವಾರ್ಡ್ ಕಚೇರಿ ಸಮೀಪ ಹಾಗೂ ಯಶವಂತಪುರದ ನೇತಾಜಿ ವೃತ್ತದ ಬಳಿಯ ಶ್ರೀನಿವಾಸ ಕಲ್ಯಾಣ ಮಂಟಪದ ಲಸಿಕೆ ಶಿಬಿರಗಳಿಗೆ ಉಪ ಮುಖ್ಯಮಂತ್ರಿಗಳು ಭೇಟಿ ನೀಡಿದರು.
ಮೂರು ಕಡೆ ಒಟ್ಟು 1,500 ಲಸಿಕೆಗಳನ್ನು ಸಾರ್ವಜನಿಕರಿಗೆ ನೀಡಲಾಗಿದ್ದು, ಇನ್ನೂ ಲಸಿಕೆ ಅಭಿಯಾನವನ್ನು ಮುಂದವರಿಸಲಾಗುವುದು. ಎಲ್ಲರೂ ತಪ್ಪದೇ ಬಂದು ವ್ಯಾಕ್ಸಿನ್ ಪಡೆಯಬೇಕು. ಕೋವಿಡ್ ವಿರುದ್ಧ ನಮಗಿರುವ ಏಕೈಕ ಅಸ್ತ್ರ ಲಸಿಕೆ ಮಾತ್ರ ಎಂದು ಡಿಸಿಎಂ ಹೇಳಿದರು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ಡಾ.ವಾಸು ಅವರೂ ಇದ್ದರು.
ಕೋಲಾರ: ಕೊರೊನಾ ಬ್ರೇಕ್ ಹಾಕಲು ಸರ್ಕಾರ ಇನ್ನಿಲ್ಲದ ಕಸರತ್ತು ಮಾಡ್ತಿದೆ. ನಗರ ಹಾಗೂ ಗ್ರಾಮೀಣ ಭಾಗಗಳಲ್ಲಿ ಲಸಿಕೆ ಪಡೆಯಲು ಜಾಗೃತಿ ಕೂಡ ಮೂಡಿಸಲಾಗ್ತಿದೆ. ಆದರೆ ಕೆಲವರು ವ್ಯಾಕ್ಸಿನ್ ಬಗ್ಗೆ ಸುಳ್ಳು ವದಂತಿ ಹಬ್ಬಿಸುವ ಮೂಲಕ ಗೊಂದಲ ಸೃಷ್ಟಿಸ್ತಿದ್ದಾರೆ. ವ್ಯಾಕ್ಸಿನ್ ಪಡೆದ್ರೆ ಸಾಯ್ತಾರೆ ಅನ್ನೋ ಆತಂಕ ಕೂಡ ಜನರಲ್ಲಿ ಮನೆ ಮಾಡಿದೆ.
ಹೌದು, ಕೋಲಾರ ಜಿಲ್ಲೆಯ ಬಹುತೇಕ ನಗರ ಹಾಗೂ ಗ್ರಾಮಗಳಲ್ಲಿ ವ್ಯಾಕ್ಸಿನ್ ಹಾಕಿಸಿಕೊಳ್ಳದಂತೆ ಒಂದಷ್ಟು ಜನರು ಸುಳ್ಳು ವದಂತಿಗಳನ್ನ ಹಬ್ಬಿಸ್ತಿದ್ದಾರೆ. ಪರಿಣಾಮ ಬಹುತೇಕ ಗ್ರಾಮಗಳಲ್ಲಿ ವ್ಯಾಕ್ಸಿನ್ ಹಾಕಿಸಿಕೊಳ್ಳಲು ಜನರು ಹಿಂಜರಿಯುತ್ತಿದ್ದು, ಲಸಿಕೆ ಕುರಿತು ಗೊಂದಲದಲ್ಲಿದ್ದಾರೆ. 2ನೇ ಅಲೆ ಆರಂಭವಾಗುವ ಮುನ್ನ ನಿರ್ಲಕ್ಷ್ಯ ವಹಿಸುತ್ತಿದ್ದ ಜನರು ಸುಳ್ಳು ವದಂತಿಗಳಿಂದಾಗಿ ಸಾಕಷ್ಟು ಮಂದಿ ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಲಸಿಕೆ ಪಡೆದ್ರೆ ಸಾವು ಬರುತ್ತೆ ಅನ್ನೋ ಆತಂಕದಲ್ಲಿ ವ್ಯಾಕ್ಸಿನ್ ಪಡೆಯಲು ಹೆದರುತ್ತಿದ್ದಾರೆ. ಕೋಲಾರದ ಬಂಗಾರಪೇಟೆಯ ಪಾಕರಹಳ್ಳಿಯಲ್ಲಿ 10 ಮಂದಿ ಕೊರೋನಾಗೆ ಮೃತಪಟ್ಟಿರೋದು ಜನರ ಆತಂಕಕ್ಕೆ ಮತ್ತಷ್ಟು ಪುಷ್ಟಿ ಕೊಟ್ಟಿದೆ.
ಜಿಲ್ಲೆಯಲ್ಲಿ ಲಸಿಕೆ ಹಾಕಿಸಿಕೊಳ್ಳುವಂತೆ ಅಧಿಕಾರಿಗಳು ಜಾಗೃತಿ ಮೂಡಿಸ್ತಿದ್ದಾರೆ. ಆದರೂ ಸಾಕಷ್ಟು ಮಂದಿ ಲಸಿಕೆಗೆ ಹಿಂದೇಟು ಹಾಕ್ತಿದ್ದಾರೆ. ಇದನ್ನು ತಿಳಿಯಲು ನಿಮ್ಮ ಪಬ್ಲಿಕ್ ಟಿವಿ ಹಲವು ಗ್ರಾಮಗಳಿಗೆ ಭೇಟಿ ನೀಡಿದಾಗ ‘ರಿಯಾಲಿಟಿ’ ಬಯಲಾಯ್ತು. ಕೆಲವರು ಜ್ವರ, ಅನಾರೋಗ್ಯ ಅಂದ್ರೆ ಮತ್ತೆ ಕೆಲವರು ಸುಳ್ಳು ವದಂತಿ ನಂಬಿ ಲಸಿಕೆ ಪಡೆಯಲು ಹಿಂದೇಟು ಹಾಕ್ತಿದ್ದಾರೆ. ಈ ಮಧ್ಯೆ ಪಾಕರಹಳ್ಳಿಯ ಶಾರದಮ್ಮ ಅನ್ನೋರು ನಾನು ಕೊರೋನಾ ಗೆದ್ದ ಮಹಿಳೆ, ಲಸಿಕೆ ಪಡೆದು ಆರೋಗ್ಯವಾಗಿದ್ದೀನಿ ಅಂತ ಉತ್ಸಾಹಭರಿತ ಮಾತನ್ನಾಡಿದ್ದಾರೆ.
ಒಟ್ಟಿನಲ್ಲಿ ಲಸಿಕೆ ಪಡೆದ ಅದೆಷ್ಟೋ ಮಂದಿ ಆರೋಗ್ಯವಾಗಿದ್ದಾರೆ. ಆದರೆ ಕೆಲವೆಡೆ ಅಪಪ್ರಚಾರದಿಂದ ವ್ಯಾಕ್ಸಿನೇಷನ್‍ಗೆ ಹಿನ್ನಡೆ ಆಗ್ತಿದೆ. ಇನ್ನಾದ್ರೂ ಜನ ಎಚ್ಚೆತ್ತುಕೊಂಡು ಲಸಿಕೆ ಪಡೆದು ಜೀವ ಉಳಿಸಿಕೊಳ್ಳಿ ಅನ್ನೋ ನಿಮ್ಮ ಪಬ್ಲಿಕ್ ಟಿವಿ ಕಳಕಳಿಯಾಗಿದೆ.
ಮಂಗಳೂರು: ವಿದೇಶಕ್ಕೆ ತೆರಳಲಿರುವ 18 ವರ್ಷದ ಮೇಲ್ಪಟ್ಟ ಎಲ್ಲರಿಗೂ ಮೊದಲ ಡೋಸ್ ಲಸಿಕೆ ಹಾಕಲು ಜಿಲ್ಲಾಡಳಿತ ಆದೇಶಿಸಿದೆ.
ಜೂನ್ 14ರ ಸೋಮವಾರದಿಂದ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ಆರೋಗ್ಯ ಕೇಂದ್ರ, ಪ್ರಾಥಮಿಕ ಆರೋಗ್ಯ, ನಗರ ಆರೋಗ್ಯ ಕೇಂದ್ರ ಸೇರಿದಂತೆ ಎಲ್ಲ ಲಸಿಕಾ ಕೇಂದ್ರಗಳಲ್ಲಿ ವ್ಯಾಕ್ಸಿನ್ ಹಾಕಿಸಿಕೊಳ್ಳಲು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಆದೇಶಿಸಿದ್ದಾರೆ.
ವಿದೇಶಕ್ಕೆ ಹೋಗಲಿರುವವರು ಪಾಸ್ ಪೋರ್ಟ್, ವಿಸಾ ಅಥವಾ ಪ್ರಯಾಣದ ಟಿಕೆಟ್‍ನ್ನು ದಾಖಲೆಯಾಗಿ ತೋರಿಸಿ ಅವರ ಗ್ರಾಮದ ಸ್ಥಳೀಯ ಲಸಿಕಾ ಕೇಂದ್ರದಲ್ಲೇ ಮೊದಲ ಆದ್ಯತೆಯ ಮೇರೆಗೆ ಲಸಿಕೆ ಪಡೆಯಲು ಸೂಚಿಸಲಾಗಿದೆ.
ನವ ದೆಹಲಿ: ನಾನು ಪ್ರಧಾನಿ ನರೇಂದ್ರ ಮೋದಿ ಅವರನ್ನ ಭೇಟಿಯಾಗಿದ್ದೇನೆ, ಹೊರತು ನವಾಜ್ ಶರೀಫ್ ರನಲ್ಲ ಎಂದು ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಹೇಳಿದ್ದಾರೆ.
ಕೊರೊನಾ ಸಂಕಷ್ಟದ ನಡುವೆ ಇಂದು ಪ್ರಧಾನಿಗಳನ್ನು ಸಿಎಂ ಉದ್ಧವ್ ಠಾಕ್ರೆ ಭೇಟಿಯಾದರು. ಭೇಟಿ ವೇಳೆ ಕರೊನಾ ನಿರ್ವಹಣೆ, ಲಸಿಕಾಕರಣ ಮತ್ತು ಮರಾಠ ಆರಕ್ಷಣ ಕುರಿತು ಚರ್ಚೆ ನಡೆದಿದೆ. ಭೇಟಿ ಬಳಿಕ ಮಾಧ್ಯಮಗಳ ಜೊತೆ ಸಿಎಂ ಉದ್ಧವ್ ಠಾಕ್ರೆ ಮಾತನಾಡಿದರು. ಈ ವೇಳೆ ದಿಢೀರ್ ಭೇಟಿಗೆ ಕಾರಣ ಏನು ಪ್ರಶ್ನೆಗೆ ಉತ್ತರಿಸಿದ ಸಿಎಂ ಠಾಕ್ರೆ, ನಾನು ನಮ್ಮ ಪ್ರಧಾನಿಗಳನ್ನ ಭೇಟಿಯಾಗಿದ್ದೇನೆಯೇ ಹೊರತು ಪಾಕಿಸ್ತಾನದ ಮಾಜಿ ಅಧ್ಯಕ್ಷ ನವಾಜ್ ಶರೀಫ್ ಅವರನಲ್ಲ ಎಂದು ಉತ್ತರಿಸಿದರು.
ರಾಜಕೀಯ ಹೊರತಾಗಿಯೂ ಪ್ರಧಾನಿಗಳ ಜೊತೆ ನಮ್ಮ ಸಂಬಂಧ ಚೆನ್ನಾಗಿದೆ. ನಾನು ಖಾಸಗಿಯಾಗಿ ಪ್ರಧಾನಿಗಳನ್ನ ಭೇಟಿಯಾದ್ರೆ ಏನು ತಪ್ಪು? ನಮ್ಮಿಬ್ಬರ ಮಧ್ಯೆ ಪನ್ ಟ ಒನ್ ಮೀಟಿಂಗ್ ನಡೆದಿದೆ ಎಂದು ತಿಳಿಸಿದರು.
ರಾಜ್ಯದ ಎಲ್ಲ ಜನತೆಗೆ ಲಸಿಕೆ ನೀಡುವ ಅಭಿಯಾನಕ್ಕೆ ವೇಗ ನೀಡಬೇಕಿದೆ. ಕೇಂದ್ರವೇ ಉಚಿತ ಲಸಿಕೆ ನೀಡಲು ಮುಂದಾಗಿರೋದನ್ನ ಸ್ವಾಗತಿಸುತ್ತೇವೆ. ಈ ಮೊದಲು ರಾಜ್ಯಗಳಿಗೆ ಈ ಜವಾಬ್ದಾರಿ ನೀಡಿದ್ದಾಗ, ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಮಹಾರಾಷ್ಟ್ರದಲ್ಲಿ 18 ರಿಂದ 44 ವರ್ಷದೊಳಗಿರುವ ಜನರ ಸಂಖ್ಯೆ 6 ಕೋಟಿಗೂ ಹೆಚ್ಚಿದೆ. ನಮಗೆ ಸದ್ಯ 12 ಕೋಟಿ ಡೋಸ್ ಬೇಕಿದ್ದು, ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ ಎಂದು ಹೇಳಿದರು.
We may not be politically together but that doesn't mean our relationship has broken. 'Main koi Nawaz Sharif se nahi milne gaya tha' (I didn't go to meet Nawaz Sharif). So if I meet him (PM) separately in person, there is nothing wrong with it: Maharashtra CM Thackeray in Delhi pic.twitter.com/zQQir5t5ZD
ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಮತ್ತು ಎನ್‍ಸಿಪಿಯ ಬೆಂಬಲದೊಂದಿಗೆ ಶಿವಸೇನೆ ಸರ್ಕಾರ ರಚನೆ ಮಾಡಿದಾಗ ರಾಜ್ಯ ಮತ್ತು ಕೇಂದ್ರ ಸರ್ಕಾರದ ನಡುವಿನ ಸಂಘರ್ಷ ಜಗಜ್ಜಾಹೀರು ಆಗಿತ್ತು. ಕೇಂದ್ರದ ನಡೆ ಪ್ರಶ್ನಿಸಿ ಶಿವಸೇನೆ ತನ್ನ ಮುಖವಾಣಿ ಸಾಮ್ನಾದಲ್ಲಿ ಅನೇಕ ಲೇಖನಗಳನ್ನು ಪ್ರಕಟಿಸಿತ್ತು.
ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಇಲ್ಲಿಯವರೆಗೂ 34,68,463 ಜನರು ಕೊರೊನಾ ಲಸಿಕೆ ಪಡೆದುಕೊಂಡಿದ್ದಾರೆ. ಕಳೆದ 5 ತಿಂಗಳು (ಒಂದು ವಾರ ಕಡಿಮೆ ಅವಧಿಯಲ್ಲಿ) 33,074 ಸೆಷನ್ ಮಾಡಲಾಗಿದೆ. ಕೋವಿಶೀಲ್ಡ್ ಅಥವಾ ಕೋವ್ಯಾಕ್ಸಿನ್ ನ್ನು 28,54,671 ಜನ ಮೊದಲನೇ ಡೋಸ್ ಪಡೆದಿದ್ದಾರೆ. ಹಾಗೆಯೇ ಎರಡನೇ ಡೋಸ್ ನ್ನು 6,13,792 ಜನ ಪಡೆದಿದ್ದಾರೆ.
ಲಸಿಕೆ ಪಡೆದವರ ಮಾಹಿತಿ
* ಆರೋಗ್ಯ ಕಾರ್ಯಕರ್ತರು: 19,347
* ಮುಂಚೂಣಿ ಕಾರ್ಯಕರ್ತರು: 1,63,616
* 18-44 ವರ್ಷದವರು: 9,03,765
* 45+ ವರ್ಷ ಮೇಲ್ಪಟ್ಟವರು (60+ಸೇರಿದಂತೆ): 15,43,617
* 60+ ಮೇಲ್ಪಟ್ಟವರು: 6,75,775
ಹಾಗೆಯೇ ಬಿಬಿಎಂಪಿ ವ್ಯಾಪ್ತಿಯಲ್ಲಿ 53,400 ಡೋಸ್ ಕೋವ್ಯಾಕ್ಸಿನ್,18-44 ವರ್ಷ ಒಳಗಿನವರಿಗೆ ನೀಡಲು ಬೇಕಾದ 25,140 ಡೋಸ್ ಕೋವಿಶೀಲ್ಡ್ ಹಾಗೂ 45 ವರ್ಷ ಮೇಲ್ಪಟ್ಟವರಿಗೆ ನೀಡಲು 45,860 ಡೋಸ್ ಕೋವಿಶೀಲ್ಡ್ ವ್ಯಾಕ್ಸಿನ್ ಬಿಬಿಎಂಪಿಯಲ್ಲಿ ಸಂಗ್ರಹವಿದೆಯೆಂದು ಬಿಬಿಎಂಪಿ ಪ್ರಕಟನೆ ಹೊರಡಿಸಿದ್ದಾರೆ.
ಯಾದಗಿರಿ: ಜಿಲ್ಲೆ ಸಂಪೂರ್ಣ ಲಾಕ್‍ಡೌನ್ ಹಿನ್ನೆಲೆ, ಜಿಲ್ಲಾಡಳಿತ ಮತ್ತು ಕಾರ್ಮಿಕ ಇಲಾಖೆಯಿಂದ ವಿಶೇಷ ಲಸಿಕೆ ಅಭಿಯಾನ ಆರಂಭಿಸಲಾಗಿದೆ. ಅಸಂಘಟಿತ ಮತ್ತು ಸಂಘಟಿತ ಕಾರ್ಮಿಕರಿಗೆ ಮನೆಯ ಬಳಿಗೆ ತೆರಳಿ ಲಸಿಕೆ ವಿತರಣೆ ಮಾಡಲಾಗುತ್ತಿದೆ.
ಹೊಲಿಗೆ ಯಂತ್ರ ನಡೆಸುವವರು, ಮಡಿವಾಳ, ಸವಿತಾ ಸಮಾಜ ಮತ್ತು ಕಟ್ಟಡ ಕಾರ್ಮಿಕರಿಗೆ ಈ ಸೌಲಭ್ಯ ನೀಡಿದ್ದು, ಕಾರ್ಮಿಕರು ಇದ್ದಲ್ಲಿಗೇ ಹೇಳಿದ ಸಮಯಕ್ಕೆ ವ್ಯಾಕ್ಸಿನೇಷನ್ ಮಾಡಲಾಗುತ್ತಿದೆ. ಲಸಿಕೆ ಪಡೆಯಲು ಕಾರ್ಮಿಕರ ವರ್ಗ ಹಿಂದೇಟು ಹಾಕುತ್ತಿರುವ ಹಿನ್ನೆಲೆ ಅವರ ಮನವೊಲಿಸಿ ಅವರು ಇದ್ದ ಸ್ಥಳಕ್ಕೆ ತೆರಳಿ ಲಸಿಕೆ ಹಾಕಿಸಲು ಕಾರ್ಮಿಕ ಇಲಾಖೆ ಅಧಿಕಾರಿಗಳು ಮುಂದಾಗಿದ್ದಾರೆ.
ಕಾರ್ಮಿಕ ಇಲಾಖೆ ಉಪ ನಿರ್ದೇಶಕಿ ಕುಮಾರಿ ಶ್ವೇತ ಮತ್ತು ಇನ್‍ಸ್ಪೆಕ್ಟರ್ ಗಂಗಾಧರ್ ಪ್ರತಿ ತಾಲೂಕು ಮತ್ತು ಗ್ರಾಮಗಳಿಗೆ ತೆರಳಿ ಕಾರ್ಮಿಕರ ಮನವೊಲಿಸಿ ಲಸಿಕೆ ಹಾಕಿಸುತ್ತಿದ್ದಾರೆ.
ಬೆಂಗಳೂರು: ನಗರದ ಮಲ್ಲೇಶ್ವರ ವಿಧಾನಸಭೆ ಕ್ಷೇತ್ರದಲ್ಲಿ ಜಾತಿ ಆಧಾರದ ಮೇಲೆ ಲಸಿಕೆ ನೀಡಲಾಗುತ್ತಿದೆ ಎಂದು ಕಾಂಗ್ರೆಸ್ ನಾಯಕ ಮತ್ತು ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಮಾಡಿರುವ ಆರೋಪವನ್ನು ಕ್ಷೇತ್ರದ ಶಾಸಕರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಸಾರಾಸಗಟಾಗಿ ತಳ್ಳಿಹಾಕಿದ್ದಾರೆ.
ಈ ಬಗ್ಗೆ ಬೆಂಗಳೂರಿನಲ್ಲಿ ಬುಧವಾರ ಮಾಧ್ಯಮಗಳ ಜತೆ ಮಾತನಾಡಿದ ಅವರು, ಇದೊಂದು ಬೇಜವಾಬ್ದಾರಿ ಹೇಳಿಕೆ. ಅವರಿಗೆ ಜಾತಿ- ಧರ್ಮದ ಹೆಸರೇಳದಿದ್ದರೆ ನಿದ್ದೆಯೂ ಬರಲ್ಲ. ರಾಜ್ಯದಲ್ಲಿ ಯಶಸ್ವಿಯಾಗಿ ನಡೆಯುತ್ತಿರುವ ಲಸಿಕೆ ಅಭಿಯಾನವನ್ನು ಹೇಗಾದರೂ ಹಳಿತಪ್ಪಿಸಬೇಕು ಎಂಬ ಷಡ್ಯಂತ್ರ ಅವರು ಇಟ್ಟುಕೊಂಡಿರುವಂತಿದೆ ಎಂದು ತರಾಟೆಗೆ ತೆಗೆದುಕೊಂಡರು.
ಲಸಿಕೆಯ ವಿಚಾರದಲ್ಲಿ ಆರಂಭದಿಂದಲೂ ರಾಜಕೀಯ ಮಾಡುತ್ತಿರುವ ಕಾಂಗ್ರೆಸ್, ಇದೀಗ ಆದ್ಯತೆಯ ಗುಂಪು ಹಾಗೂ ಮುಂಚೂಣಿ ಕಾರ್ಯಕರ್ತರಿಗೆ ನಡೆಸುತ್ತಿರುವ ಲಸಿಕಾಕರಣದಲ್ಲೂ ಜಾತಿಯ ಲೆಕ್ಕಾಚಾರ ಮಾಡುತ್ತಿರುವುದು ವಿಪರ್ಯಾಸ.
ಮಲ್ಲೇಶ್ವರದಲ್ಲಿ 9000ಕ್ಕೂ ಹೆಚ್ಚಿನ ಲಸಿಕಾಕರಣ ನಡೆದಿದ್ದು, ಯಾವುದೇ ವರ್ಗದ ಜಾತಿ, ಧರ್ಮದ ಪ್ರಶ್ನೆಯೇ ಎದ್ದಿಲ್ಲ.
2/4
— Dr. C.N. Ashwath Narayan (@drashwathcn) June 2, 2021
ಲಸಿಕೆಯಲ್ಲಿ ಜಾತಿ ತರುವ ಕೆಲಸವನ್ನು ನಾನಾಗಲಿ ಅಥವಾ ನಮ್ಮ ಪಕ್ಷವಾಗಲಿ ಮಾಡಿಲ್ಲ. ಅಂಥ ಯಾವುದೇ ಘಟನೆ ಕ್ಷೇತ್ರದಲ್ಲಿ ನಡೆದಿಲ್ಲ. ಯಾರಿಗೂ ಲಸಿಕೆ ನಿರಾಕರಿಸಿಲ್ಲ” ಎಂದು ಅವರು ಸ್ಪಷ್ಟ ಮಾತುಗಳಲ್ಲಿ ಹೇಳಿದರು.
ಅಂಕಿ- ಅಂಶ ಕೊಟ್ಟ ಡಿಸಿಎಂ:
ದಾನಿಗಳ ನೆರವಿನಿಂದ ಮುಕ್ತ ಮಾರುಕಟ್ಟೆಯಲ್ಲಿ ಲಸಿಕೆ ಖರೀದಿ ಮಾಡಿ ಕೊಳೆಗೇರಿಗಳಲ್ಲಿ ವಾಸಿಸುವ 1,000ಕ್ಕೂ ಹೆಚ್ಚು ಬಡವರಿಗೆ, ಆರ್ಥಿಕ ದುರ್ಬಲರಿಗೆ ಲಸಿಕೆ ಕೊಡಿಸಿದ್ದೇನೆ. ಅಲ್ಲದೆ 9,000 ಜನರಿಗೆ ಲಸಿಕೆ ನೀಡಲಾಗಿದೆ. ಇದರಲ್ಲಿ ಕ್ಷೇತ್ರದ 7 ಸ್ಲಂಗಳ ಜನರೇ ಹೆಚ್ಚು ಇದ್ದಾರೆ. ಸತ್ಯ ಅರ್ಥ ಮಾಡಿಕೊಳ್ಳದೆ ಸುಳ್ಳು ಆರೋಪ ಮಾಡುವುದು ಎಷ್ಟು ಸರಿ ಎಂದು ಡಾ.ಅಶ್ವತ್ಥನಾರಾಯಣ ಪ್ರಶ್ನೆ ಮಾಡಿದರು.
ಸ್ವತಃ ಸ್ಲಂಗಳಿಗೆ ಭೇಟಿ ನೀಡಿ, ಮುಂಚೂಣಿ ಕಾರ್ಯಕರ್ತರಿಗೆ, ಆದ್ಯತೆಯ ಗುಂಪಿನವರಿಗೆ ಲಸಿಕೆ ನೀಡಲಾಗಿದೆ. ಕಾರ್ಮಿಕರು, ಚಾಲಕರು, ಮೆಡಿಕಲ್ ಸೇವೆಯಲ್ಲಿರುವವರು, ದಿವ್ಯಾಂಗರು, ಬೀದಿ ವ್ಯಾಪಾರಿಗಳು ಹೀಗೆ ಯಾರಿಗೆ ಸೋಂಕು ತಗುಲುವ ಸಾಧ್ಯತೆ ಜಾಸ್ತಿ ಇದೆ, ಅವರಿಗೆ ಲಸಿಕಾಕರಣ ನಡೆಸಿದ್ದೇವೆ. ಅದಕ್ಕೆ ನಮ್ಮ ಕಾರ್ಯಕರ್ತರ ಮೇಲೆ ಹೆಮ್ಮೆಯೂ ಇದೆ.
3/4
— Dr. C.N. Ashwath Narayan (@drashwathcn) June 2, 2021
ಮಲ್ಲೇಶ್ವರದ ಬಾಲಕಿಯರ ಪ್ರೌಢಶಾಲೆಯಲ್ಲಿ ಮಂಗಳವಾರ ದಲಿತರಿಗೆ ಲಸಿಕೆ ನಿರಾಕರಿಸಲಾಗಿದೆ ಎಂದು ಹರಿಪ್ರಸಾದ್ ದೂರಿದ್ದಾರೆ. ಇದು ಶುದ್ಧ ಸುಳ್ಳು. ಅಂದು, ಮುಂಚೂಣಿ ಕಾರ್ಯಕರ್ತರು ಹಾಗೂ ಆದ್ಯತಾ ಗುಂಪಿನ ಜನರೂ, ಅವರ ಆರೈಕೆ ಮಾಡುವವರಿಗೆ ಲಸಿಕೆ ನೀಡಲಾಗುತ್ತಿತ್ತು. ಸರ್ಕಾರ ಹೊರಡಿಸಿರುವ ಈ ಮಾರ್ಗಸೂಚಿ ಪ್ರಕಾರ ಯಾರೇ ಬಂದರೂ ಲಸಿಕೆ ಹಾಕಿ ಕಳಿಸಲಾಗುತ್ತಿದೆ. ಪ್ರತಿಯೊಬ್ಬರ ಆಧಾರ್ ಸಂಖ್ಯೆ ದಾಖಲಿಸಿಕೊಂಡು ವ್ಯಾಕ್ಸಿನ್ ನೀಡಲಾಗುತ್ತಿದೆ. ಇಷ್ಟಕ್ಕೂ ಆಧಾರ್ ಕಾರ್ಡ್ ಮೇಲೆ ಜಾತಿ ನಮೂದಾಗಿರುವುದಿಲ್ಲ ಎಂಬ ಅಂಶವನ್ನು ಹರಿಪ್ರಸಾದ್ ಗಮನಿಸಬೇಕು ಎಂದು ಉಪ ಮುಖ್ಯಮಂತ್ರಿ ತಿರುಗೇಟು ಕೊಟ್ಟರು.
ವೈರಸ್‍ಗೆ ಜಾತಿ- ಧರ್ಮದ ಹಂಗಿಲ್ಲ. ಅದೇ ರೀತಿ ವ್ಯಾಕ್ಸಿನ್‍ಗೆ ಇರುವುದಿಲ್ಲ. ಇದನ್ನು ಹರಿಪ್ರಸಾದ್ ಅವರು ಅರ್ಥ ಮಾಡಿಕೊಳ್ಳಬೇಕು. ಸಂಕಷ್ಟದ ಸಮಯದಲ್ಲಿ ಅವರು ಸರಕಾರಕ್ಕೆ ಸಲಹೆಗಳನ್ನು ನೀಡಿ ಉತ್ತೇಜಿಸಬೇಕೆ ಹೊರತು ಆಗುತ್ತಿರುವ ಕೆಲಸದಲ್ಲಿ ಕಲ್ಲು ಹುಡುಕಿ ನೈತಿಕ ಸ್ಥೈರ್ಯ ಕುಗ್ಗಿಸಬಾರದು. ಇಂಥ ಸೂಕ್ಷ್ಮ ವಿಷಯಗಳಲ್ಲಿ ಜಾತಿ-ಧರ್ಮದಂಥ ಸೂಕ್ಷ್ಮ ಸಂಗತಿಗಳನ್ನು ತರಬಾರದು. ಇವರಿಗೆ ನಾಚಿಕೆಯಾಗಬೇಕು. ಜನ ಪಾಠ ಕಲಿಸಿದ್ದರೂ ಇವರಿಗೆ ಬುದ್ಧಿ ಬಂದಿಲ್ಲ. ಹಾಗಾದರೆ ಇವರ ಪ್ರಕಾರ ಅರ್ಚಕರಿಗೆ ಲಸಿಕೆ ಕೊಡುವ ಹಾಗಿಲ್ಲವೆ? ಎಂದು ಡಿಸಿಎಂ ತರಾಟೆಗೆ ತೆಗೆದುಕೊಂಡರು.
ನವದೆಹಲಿ: ಡಿಸೆಂಬರ್ ಹೊತ್ತಿಗೆ ದೇಶದ ಎಲ್ಲರಿಗೂ ವ್ಯಾಕ್ಸಿನ್ ಸಿಗಲಿದೆ ಅಂತ ಕೇಂದ್ರ ಸರ್ಕಾರ ಹೇಳಿಕೊಳ್ತಲೇ ಇದೆ. ಇದರ ಮಧ್ಯೆ ಲಸಿಕೆ ಕುರಿತು ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಕಿವಿ ಹಿಂಡಿದೆ. ವ್ಯಾಕ್ಸಿನ್ ಖರೀದಿಗೆ ಮೀಸಲಿಟ್ಟ ಅನುದಾನ ಏನಾಯಿತು ಅಂತ ಲೆಕ್ಕ ಪರಿಶೋಧನೆಗೆ ಸೂಚಿಸಿದೆ.
ಬಜೆಟ್‍ನಲ್ಲಿ ಮೀಸಲಿಟ್ಟಿದ್ದ 35 ಸಾವಿರ ಕೋಟಿ ರೂ. ಏನಾಯಿತು? ಇದುವರೆಗೂ ಎಷ್ಟು ಮೊತ್ತದ ವ್ಯಾಕ್ಸಿನ್ ಖರೀದಿಗೆ ಆದೇಶ ನೀಡಲಾಗಿದೆ. 3 ಲಸಿಕೆಗಳ ಖರೀದಿಗೆ ಯಾವಾಗ ಆದೇಶ ಕೊಡಲಾಯಿತು ಮತ್ತು ಎಷ್ಟು ಬೆಲೆ? ಕೋವಿಶೀಲ್ಡ್, ಕೋವ್ಯಾಕ್ಸಿನ್, ಸ್ಪುಟ್ನಿಕ್-ವಿ ಖರೀದಿಯ ದಾಖಲೆ ನೀಡಿ ಎಂದು ಆದೇಶಿಸಿದೆ.
ಲಸಿಕೆ ಖಾಸಗಿ ಪಾಲಾಗ್ತಿರೋದು ತರ್ಕಬದ್ಧವಲ್ಲ. ಜನರ ಹಕ್ಕು ಉಲ್ಲಂಘನೆಯಾದಾಗ ಕಣ್ಮುಚ್ಚಿ ಕೂರಲು ಸಾಧ್ಯವಿಲ್ಲ. ಮೊದಲ ಡೋಸ್ ಲಸಿಕಾಕರಣದ ಮಾಹಿತಿ ಕೊಡಿ. ಎರಡನೇ ಅಲೆಯಲ್ಲಿ 18 ರಿಂದ 44 ವರ್ಷದೊಳಗಿನ ಜನರೇ ಸೋಂಕಿಗೆ ಒಳಗಾಗುತ್ತಿದ್ದಾರೆ. ಅಷ್ಟು ಮಾತ್ರ ಅಲ್ಲದೇ ಆಸ್ಪತ್ರೆಗೆ ವಾರಗಳವರೆಗೆ ಆಸ್ಪತ್ರೆಯಲ್ಲಿ ದಾಖಲಾಗುವ ಸನ್ನಿವೇಶ ಉಂಟಾಗಿದೆ. ಆದ್ರೆ 18-44 ವರ್ಷದವರಿಗೆ ಇನ್ನು ಲಸಿಕೆ ನೀಡಿಲ್ಲ ಯಾಕೆ ಎಂದು ಪ್ರಶ್ನೆ ಮಾಡಿದೆ.
ಲಸಿಕೆ ಹಂಚಿಕೆಗೆ ಡೆಡ್‍ಲೈನ್ ನಿಗದಿಪಡಿಸಬೇಕು. 2 ವಾರಗಳಲ್ಲಿ ವ್ಯಾಕ್ಸಿನ್ ಪಾಲಿಸಿ ದಾಖಲೆ ಸಲ್ಲಿಸಬೇಕು ಎಂದು ಸುಪ್ರೀಂಕೋರ್ಟ್ ಆದೇಶ ನೀಡಿದೆ.
ತುಮಕೂರು: ಕೊರೊನಾ ಎರಡನೇ ಅಲೆ ಬರುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್‍ಓ) ಎಚ್ಚರಿಕೆ ನೀಡಿತ್ತು. ಆದರೂ ಕೂಡ ರಾಜ್ಯ ಹಾಗೂ ಕೇಂದ್ರ ಸರ್ಕಾರ ನಿರ್ಲಕ್ಷಿಸಿದರ ಪರಿಣಾಮ ಇದೀಗ ಜನ ಸಂಕಷ್ಟ ಎದುರಿಸುತ್ತಿದ್ದಾರೆ. ಜನರ ಈ ಸ್ಥಿತಿಗೆ ಬಿಜೆಪಿ ಸರ್ಕಾರ ನೇರ ಹೊಣೆ ಎಂದು ಮಾಜಿ ಡಿಸಿಎಂ ಡಾ.ಜಿ ಪರಮೇಶ್ವರ್ ವಾಗ್ದಾಳಿ ನಡೆಸಿದ್ದಾರೆ.
ತುಮಕೂರು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಡಾ.ಜಿ ಪರಮೇಶ್ವರ್, ಕೊರೊನಾ ಮೊದಲನೇ ಅಲೆಯಲ್ಲಿ ಸ್ವಲ್ಪಮಟ್ಟಿಗೆ ಸಾವು ನೋವು ಆಯ್ತು. ಜನರು ಅದನ್ನು ಹೇಗೋ ತಡೆದುಕೊಂಡರು. ಆದರೆ ಎರಡನೇ ಅಲೆ ಗಂಭೀರವಾಗಿ ಅಪ್ಪಳಿಸುತ್ತದೆ ಎಂದು ಡಬ್ಲ್ಯೂಎಚ್‍ಓ ಎಚ್ಚರಿಕೆ ನೀಡಿತ್ತು. ಆದರೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಅವರ ಎಚ್ಚರಿಕೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ. ಹಾಗಾಗಿ ರಾಜ್ಯ ಹಾಗೂ ದೇಶದ ಜನ ಈಗ ಸಂಕಷ್ಟ ಅನುಭವಿಸುವಂತಾಗಿದೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ:ಆಸ್ಪತ್ರೆಯಲ್ಲಿ ಕುಡುಕನ ರಂಪಾಟ- ಅಮಲಿನಲ್ಲಿ ಶರ್ಟ್ ಬಿಚ್ಚಿದ
ಭಾರತ ಔಷಧ ತಯಾರಿಕೆಯಲ್ಲಿ ಉಳಿದ ದೇಶಕ್ಕಿಂತ ಅಗ್ರ ಸ್ಥಾನದಲ್ಲಿದೆ. ಹಾಗಾಗಿ ಎಲ್ಲಾ ಔಷಧಾ ತಾಯಾರಿಕಾ ಕಂಪನಿಗಳೂ ಚೆನ್ನಾಗಿ ಸಪೋರ್ಟ್ ಮಾಡಿದ್ದರಿಂದ ಫಾರ್ಮುಲಾ ಪಡೆದು ಕೋಟಿಗಟ್ಟಲೆ ಲಸಿಕೆಯನ್ನು ತಯಾರು ಮಾಡಿತ್ತು. ಆದರೆ ನಮ್ಮ ಪ್ರಧಾನಿ ಮೊದಲು ದೇಶದ ಪ್ರಜೆಗಳಿಗೆ ಲಸಿಕೆ ಕೊಡುವುದನ್ನು ಬಿಟ್ಟು ವಿದೇಶಕ್ಕೆ 6.63 ಕೋಟಿ ಲಸಿಕೆ ರವಾನೆ ಮಾಡಿದರು. ಈಗ ನಮ್ಮಲ್ಲಿ ವ್ಯಾಕ್ಸಿನ್ ಗಾಗಿ ಹಾಹಾಕಾರ ಶುರುವಾಗಿದೆ ಎಂದು ಕಿಡಿಕಾರಿದರು.
ವಿದೇಶಕ್ಕೆ ಕಳುಹಿಸಿದ ವ್ಯಾಕ್ಸಿನ್ ನಮ್ಮ ದೇಶದ ಪ್ರಜೆಗಳಿಗೆ ಕೊಟ್ಟರೆ ಕೋವಿಡ್ ಚೈನ್ ಬ್ರೇಕ್ ಆಗುತಿತ್ತು. ಆದರೆ ಪ್ರಧಾನಿ ಲಸಿಕೆ ರಫ್ತು ಮಾಡಿದ್ದರಿಂದಾಗಿ ನಮ್ಮ ಪ್ರಜೆಗಳಿಗೆ ಫಸ್ಟ್ ಡೋಸ್ ಸಿಕ್ಕಲ್ಲ. ಸೆಕೆಂಡ್ ಡೋಸ್ ಕೂಡ ಸಿಗಲಿಲ್ಲ. ಇಲ್ಲಿಯವರೆಗೆ ದೇಶದ 21 ಕೋಟಿ ಜನರಿಗೆ ಮಾತ್ರ ವ್ಯಾಕ್ಸಿನೇಷನ್ ಕೊಡಲಾಗಿದೆ. ಈ ಮೂಲಕ ನಮ್ಮ ದೇಶದ ಒಟ್ಟು ಜನಸಂಖ್ಯೆಯ ಕೇವಲ ಶೇ.3.2 ರಷ್ಟು ಮಾತ್ರ ಲಸಿಕೆ ನೀಡಲಾಗಿದೆ. ಹಾಗೆ ಕೇಂದ್ರ ರಾಜ್ಯಕ್ಕೆ ಸಾಕಷ್ಟು ವೆಂಟಿಲೇಟರ್ ಕೊಟ್ಟಿದೆ ಎಂದು ಹೇಳುತ್ತಿದೆ ಆದರೆ ಇಲ್ಲಿ ಮಾತ್ರ ವೆಂಟಿಲೇಟರ್ ಇಲ್ಲ ಎಂದು ಕೂಗು ಕೇಳಿಸುತ್ತಿದೆ. ಹಾಗಾದರೆ ಕೇಂದ್ರ, ರಾಜ್ಯಕ್ಕೆ ಕೊಟ್ಟಿರುವ ವೆಂಟಿಲೇಟರ್ ಏನಾಯ್ತು ಎಂದು ರಾಜ್ಯ ಸರ್ಕಾರಕ್ಕೆ ಪ್ರಶ್ನಿಸಿದ್ದಾರೆ.
ಬೆಂಗಳೂರು: ಕೊರೊನಾ ಓಡಿಸುವ ಸಂಜೀವಿನಿ ಆಗಿರುವ ವ್ಯಾಕ್ಸಿನ್ ವಿಷಯದಲ್ಲೂ ರಾಜಕೀಯ ನಡೀತಿದೆ. ಕಾಸ್ ಇದ್ದೋನೇ ಬಾಸ್ ಅನ್ನೋ ಹಾಗೆ ವ್ಯಾಕ್ಸಿನ್ ಹಂಚಿಕೆ ಆಗ್ತಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ದಿನಕ್ಕೆ ನೂರೋ ಅಥವಾ ಗರಿಷ್ಠ ಅಂದರೆ 300 ಜನಕ್ಕೋ ವ್ಯಾಕ್ಸಿನ್ ಕೊಡೋದು ಅನ್ನುತ್ತಿದ್ದಾರೆ. ಅದರಲ್ಲೂ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆಯೇ ಸಿಗುತ್ತಿಲ್ಲ.
ಖಾಸಗಿ ಆಸ್ಪತ್ರೆಯಲ್ಲಿ 18 ವರ್ಷದಿಂದ ಮೇಲ್ಪಟ್ಟವರಿಗೂ ಲಸಿಕೆ ಸಿಗುತ್ತಿದೆ. ದಿನವೊಂದಕ್ಕೆ 1000 ದಿಂದ 2,000ಕ್ಕೂ ಅಧಿಕ ಮಂದಿಗೆ ಲಸಿಕೆ ವಿತರಣೆ ಆಗುತ್ತಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಸಿಗದ ಲಸಿಕೆ, ಖಾಸಗಿ ಆಸ್ಪತ್ರೆಗಳಿಗೆ ಹೇಗೆ ಸಿಗುತ್ತಿದೆ ಅನ್ನೋದು ಪ್ರಶ್ನೆಯಾಗಿದೆ.
ಬೆಂಗಳೂರಿನ ಸಿವಿ ರಾಮನ್ ನಗರದ ಬಿಜೆಪಿ ಶಾಸಕ ರಘು, ಸರ್ಕಾರದಿಂದ ಉಚಿತವಾಗಿ ನೀಡುತ್ತಿರೋ ಲಸಿಕೆಯನ್ನ ಪಿಎಚ್‍ಸಿ& ಸಾರ್ವಜನಿಕ ಆಸ್ಪತ್ರೆಯಲ್ಲಿ ವಿತರಣೆಗೆ ಬ್ರೇಕ್ ಹಾಕಿಸಿ, ನ್ಯೂ ತಿಪ್ಪಸಂದ್ರದ ಕಲ್ಯಾಣ ಮಂಟಪಕ್ಕೆ ಶಿಫ್ಟ್ ಮಾಡಿಸಿಕೊಂಡಿದ್ದಾರೆ. ಕ್ಷೇತ್ರಕ್ಕೆ ನಿತ್ಯ 400 ಡೋಸ್ ಬರ್ತಿದೆ. ಇದನ್ನು ಜನ ಸಾಮಾನ್ಯರಿಗೆ ಕೊಡೋ ಬದಲಿಗೆ ತಮಗೆ ಬೇಕಾದವರಿಗೆ ಕೊಡಿಸುತ್ತಿದ್ದಾರೆ ಅನ್ನೋ ಆರೋಪವೂ ಎದುರಾಗಿದೆ. ಕಲ್ಯಾಣ ಮಂಟಪ ಎದುರು ದೊಡ್ಡದಾದ ಫ್ಲೆಕ್ಸ್ ಹಾಕಿಸಿಕೊಂಡಿದ್ದಾರೆ. ಸ್ಥಳೀಯರು ಶಾಸಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೇಶದಲ್ಲಿ ವ್ಯಾಕ್ಸಿನ್ ಕೊರತೆ ಇಲ್ಲ. ವರ್ಷಾಂತ್ಯಕ್ಕೆ ಪ್ರತಿಯೊಬ್ಬರಿಗೂ ವ್ಯಾಕ್ಸಿನ್ ಸಿಗಲಿದೆ. ರಾಜ್ಯ, ಕೇಂದ್ರಾಡಳಿತ ಪ್ರದೇಶಗಳಿಗೆ ಇದುವರೆಗೆ ಕೇಂದ್ರ ಸರ್ಕಾರ 23 ಕೋಟಿಗೂ ಅಧಿಕ ಲಸಿಕೆ ಪೂರೈಸಲಾಗಿದೆ. ರಾಜ್ಯ & ಕೇಂದ್ರಾಡಳಿತ ಪ್ರದೇಶಗಳಲ್ಲಿ ಇನ್ನೂ 1.57 ಕೋಟಿ ಲಸಿಕೆ ಸ್ಟಾಕ್ ಇದೆ. ವ್ಯರ್ಥವಾಗಿರುವ ಲಸಿಕೆ ಸೇರಿಸಿ 21 ಕೋಟಿ 51 ಲಕ್ಷದ 48 ಸಾವಿರದ 659 ಡೋಸ್ ಬಳಕೆಯಾಗಿದೆ ಅಂತ ಕೇಂದ್ರ ಆರೋಗ್ಯ ಇಲಾಖೆ ಹೇಳಿದೆ. ರಾಜ್ಯದಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಸ್ಟಾಕೇ ಇಲ್ಲ. ಇವತ್ತು 5.67 ಲಕ್ಷ ಕೋವಿಶೀಲ್ಡ್ ಸೇರಿ ರಾಜ್ಯಕ್ಕೆ ಒಟ್ಟು 1,45,79,010 ಡೋಸ್ ಬಂದಿದೆ.
ರಾಜ್ಯಗಳಿಗೆ ಶೇ.50ರಷ್ಟು ವ್ಯಾಕ್ಸಿನ್ ಖರೀದಿಯ ಅಧಿಕಾರ ಇದೆ. ಆದರೆ ಖಾಸಗಿ ಆಸ್ಪತ್ರೆಗಳಿಗೆ ಶೇ.25ರಷ್ಟು ಮಾತ್ರ ಖರೀದಿಗೆ ಅವಕಾಶ ಇದೆ. ಆದಾಗ್ಯೂ ಸರ್ಕಾರಿ ಆಸ್ಪತ್ರೆಗಳಲ್ಲಿ ವ್ಯಾಕ್ಸಿನ್ ಸಿಗ್ತಿಲ್ಲ.
ಖಾಸಗಿ ಆಸ್ಪತ್ರೆಗಳಲ್ಲಿ ಯಾಕೆ ಲಸಿಕೆ ಸಿಗ್ತಿದೆ? 1. ಶ್ರೀಘ್ರಗತಿ ವ್ಯಾಕ್ಸಿನ್ ಖರೀದಿ ಪ್ರಕ್ರಿಯೆ, ಸರಬರಾಜು, ವಿತರಣೆ
(ಬೆಂಗಳೂರಿನ ಪ್ರತಿಷ್ಟಿತ ಆಸ್ಪತ್ರೆಯ ಒಂದೇ ಸೆಂಟರ್‍ನಲ್ಲಿ 5 ಸಾವಿರ ವ್ಯಾಕ್ಸಿನ್ ಕೊಡ್ತಾರೆ + ರಾಜಕೀಯ ನಾಯಕರ ಅಧೀನದಲ್ಲಿ ಖಾಸಗಿ ಆಸ್ಪತ್ರೆಗಳು ) 2. ಸ್ಟಾಕ್ ಬಂದ ತಕ್ಷಣ ಶೆಡ್ಯೂಲ್ಡ್ ಮಾಡಿ ಕೋಲ್ಡ್ ಚೈನ್ ವ್ಯವಸ್ಥೆ ಮೂಲಕ ವಿತರಣೆ 3. ಲಸಿಕಾ ಉತ್ಪಾದನಾ ಕೇಂದ್ರಗಳಿಂದಲೇ ನೇರವಾಗಿ ಖರೀದಿ 4. ಉತ್ಪಾದನಾ ಕಂಪನಿಗಳಿಗೆ ಡೆಪಾಸಿಟ್ ಹಣ ನೀಡಿ, ಸಾಮರ್ಥ್ಯಕ್ಕೆ ತಕ್ಕಂತೆ ಲಸಿಕೆ ಖರೀದಿ 5. ವ್ಯವಹಾರದ ಮನಸ್ಥಿತಿಯ ಮೇಲೆ ಖಾಸಗಿ ಆಸ್ಪತ್ರೆಗಳಲ್ಲಿ ಹೆಚ್ಚೆಚ್ಚು ವ್ಯಾಕ್ಸಿನ್
ಸರ್ಕಾರಿ ಆಸ್ಪತ್ರೆಗಳಲ್ಲಿ ಯಾಕೆ ಸಿಗ್ತಿಲ್ಲ ಲಸಿಕೆ? 1. ಸರ್ಕಾರಕ್ಕೆ ಲಸಿಕೆ ಖರೀದಿಸುವ ಮನಸ್ಸಿಲ್ಲ 2. ಡೆಪಾಸಿಟ್ ಹಣ ನೀಡುವ ಸಾಮರ್ಥ್ಯ ಇದ್ರೂ ಜನರ ಕಾಳಜಿ ಇಲ್ಲ 3. ನಿಧಾನವಾಗಿ ಹಂತ ಹಂತವಾಗಿ ಕೊಡೋಣ ಅನ್ನೋ ಮನಸ್ಥಿತಿ