Tag: ಕೊರೊನಾ ವ್ಯಾಕ್ಸಿನ್

  • ಲಸಿಕೆ ಕೊರತೆ- ಖಾಸಗಿ ಆಸ್ಪತ್ರೆಗಳಿಗೆ ಹೊಸ ನಿಯಮ ಜಾರಿಗೊಳಿಸಿದ ಕೇಂದ್ರ

    ಲಸಿಕೆ ಕೊರತೆ- ಖಾಸಗಿ ಆಸ್ಪತ್ರೆಗಳಿಗೆ ಹೊಸ ನಿಯಮ ಜಾರಿಗೊಳಿಸಿದ ಕೇಂದ್ರ

    ನವದೆಹಲಿ: ದೇಶದ ಬಹುತೇಕ ಭಾಗಗಳಲ್ಲಿ ಕೊರೊನಾ ಲಸಿಕೆ ಅಭಾವ ಕಾಡುತ್ತಿದೆ. ಹೀಗಾಗಿ ಖಾಸಗಿ ಆಸ್ಪತ್ರೆಗಳು ವ್ಯಾಕ್ಸಿನ್ ಕೊಳ್ಳಲು ಕೇಂದ್ರ ಸರ್ಕಾರ ಹೊಸ ನಿಯಮಗಳನ್ನು ಜಾರಿಗೆ ತಂದಿದೆ.

    ಇಷ್ಟು ದಿನ ಖಾಸಗಿ ಆಸ್ಪತ್ರೆಗಳು ಉತ್ಪಾದನಾ ಕಂಪನಿಗಳಿಂದ ನೇರವಾಗಿ ಕೊರೊನಾ ಲಸಿಕೆ ಕೊಳ್ಳಬಹುದಿತ್ತು. ಆದರೆ ಇದೀಗ ಕೇಂದ್ರ ಸರ್ಕಾರ ಹೊಸ ನಿಯಮ ಜಾರಿಗೆ ತಂದಿದ್ದು, ಖಾಸಗಿ ಆಸ್ಪತ್ರೆಗಳು ಸಹ ಕೋ-ವಿನ್ ಆಪ್‍ನಲ್ಲಿಯೇ ಆರ್ಡರ್ ಮಾಡಬೇಕು ಎಂದು ಹೊಸ ನಿಯಮದಲ್ಲಿ ತಿಳಿಸಿದೆ. ಕೊರೊನಾ ಲಸಿಕೆಯ ಸಂಗ್ರಹ ಹಾಗೂ ಲಾಭದ ಕುರಿತು ಪರಿಶೀಲಿಸುವ ದೃಷ್ಟಿಯಿಂದ ಖಾಸಗಿ ಆಸ್ಪತ್ರೆಗಳಿಗೆ ಕೇಂದ್ರ ಸರ್ಕಾರ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.

    ಹೊಸ ಮಾರ್ಗಸೂಚಿಗಳ ಪ್ರಕಾರ ಖಾಸಗಿ ಆಸ್ಪತ್ರೆಗಳು ನೇರವಾಗಿ ಲಸಿಕೆ ಉತ್ಪಾದಕರಿಂದ ಕೊಳ್ಳುವಂತಿಲ್ಲ. ಇನ್ನು ಮುಂದೆ ಖಾಸಗಿ ಆಸ್ಪತ್ರೆಗಳು ಕೋ-ವಿನ್ ಪೋರ್ಟಲ್‍ನಲ್ಲಿ ವ್ಯಾಕ್ಸಿನ್ ಆರ್ಡರ್ ಮಾಡಬೇಕು. ಅಲ್ಲದೆ ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ ಮೂಲಕ ಪೇಮೆಂಟ್ ಮಾಡಬೇಕು. ಜುಲೈ 1 ರಿಂದ ವ್ಯಾಕ್ಸಿನ್ ಖರೀದಿಯ ಹೊಸ ನಿಯಮಗಳು ಜಾರಿಗೆ ಬರಲಿವೆ.

    ಉತ್ಪಾದಕರ ಕಡೆಯಿಂದ ನೇರವಾಗಿ ಖರೀದಿಸಿದ ಲಸಿಕೆಗಳನ್ನು ಖಾಸಗಿ ಆಸ್ಪತ್ರೆಗಳು ಕಡಿಮೆ ಪ್ರಮಾಣದಲ್ಲಿ ಬಳಸುತ್ತಿವೆ. ಪೂರ್ಣ ಪ್ರಮಾಣದಲ್ಲಿ ಲಸಿಕೆ ನೀಡುತ್ತಿಲ್ಲ, ಸ್ಟಾಕ್ ಉಳಿಯುತ್ತಿದೆ ಎಂಬ ಕುರಿತು ಹಲವಾರು ದೂರುಗಳು ಬಂದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈ ಹೊಸ ನಿಯಮಗಳನ್ನು ಜಾರಿಗೆ ತಂದಿದೆ.

    ಹೊಸ ನಿಯಮದ ಪ್ರಕಾರ, ಲಸಿಕೆ ಖರೀದಿಸಿದ ಬಳಿಕ ಸಂಗ್ರಹಣೆ ಹಾಗೂ ಲಸಿಕೆ ಹಾಕಿರುವುದು ಎಲ್ಲದರ ಕುರಿತು ಲೆಕ್ಕ ನೀಡಬೇಕಾಗುತ್ತದೆ. ನಿರ್ದಿಷ್ಟ ತಿಂಗಳಲ್ಲಿ ಅಥವಾ ವಾರದಲ್ಲಿ ಎಷ್ಟು ಲಸಿಕೆ ಖರ್ಚಾಗಿದೆ ಎಂಬುದನ್ನು ಖಾಸಗಿ ಆಸ್ಪತ್ರೆಗಳು ತಿಳಿಸಬೇಕಾಗುತ್ತದೆ. ಇದರಿಂದಾಗಿ ಹೆಚ್ಚು ದಿನಗಳ ಕಾಲ ಸ್ಟಾಕ್ ಇಟ್ಟುಕೊಳ್ಳುವುದು ತಪ್ಪುತ್ತದೆ. ಇದರಿಂದ ಸರ್ಕಾರಕ್ಕೆ ಹೆಚ್ಚು ಲಸಿಕೆ ಸಿಗುತ್ತದೆ.

    ಪ್ರಸ್ತುತ ಖಾಸಗಿ ಆಸ್ಪತ್ರೆಗಳು ಶೇ.25ರಷ್ಟು ಲಸಿಕೆಗಳನ್ನು ನೇರವಾಗಿ ಉತ್ಪಾದಕರಿಂದ ಖರೀದಿಸಬಹುದಾಗಿದೆ. ಖಾಸಗಿ ಆಸ್ಪತ್ರೆಗಳಿಗೆ ಪ್ರತಿ ಡೋಸ್ ಲಸಿಕೆಗೆ ನಿಗದಿಪಡಿಸಿರುವ ಬೆಲೆಯ ಮೇಲೆ 150 ರೂ. ಸೇವಾ ಶುಲ್ಕವನ್ನು ವಿಧಿಸಲಾಗಿದ್ದು, ಇದನ್ನು ಮೇಲ್ವಿಚಾರಣೆ ಮಾಡಲು ರಾಜ್ಯ ಸರ್ಕಾರಗಳಿಗೆ ವಹಿಸಲಾಗಿದೆ.

  • ಅಧಿಕಾರಿ ಸತ್ಯ ಹೇಳಿದ್ದಕ್ಕೆ ಸಚಿವ ಸುಧಾಕರ್​​​ಗೆ ಇರಿಸು ಮುರಿಸು

    ಅಧಿಕಾರಿ ಸತ್ಯ ಹೇಳಿದ್ದಕ್ಕೆ ಸಚಿವ ಸುಧಾಕರ್​​​ಗೆ ಇರಿಸು ಮುರಿಸು

    – ಮಾಧ್ಯಮಗಳಿಗೆ ಹೇಳಿಕೆ ನೀಡದಂತೆ ಅಧಿಕಾರಿಗೆ ಸೂಚನೆ

    ಮೈಸೂರು: ವಾಕ್ಸಿನ್ ಖಾಲಿ ಎಂದು ಅಧಿಕೃತವಾಗಿ ನಿನ್ನೆ ಮೈಸೂರು ಜಿಲ್ಲಾ ಆರೋಗ್ಯಾಧಿಕಾರಿ ಹೇಳುವ ಮೂಲಕ ವಾಸ್ತವ ಒಪ್ಪಿಕೊಂಡಿದ್ದರು. ಡಿಎಚ್‍ಓ ಅವರ ಈ ಮಾತು ಆರೋಗ್ಯ ಸಚಿವರಿಗೆ ಇರಿಸು ಮುರಿಸು ಉಂಟು ಮಾಡಿದೆ.

    ಹೀಗಾಗಿಯೆ ಇಂದು ಮೈಸೂರಿಗೆ ಆಗಮಿಸಿದ ಆರೋಗ್ಯ ಸಚಿವ ಡಾ. ಸುಧಾಕರ್ ಕೋವಿಡ್ ನಿರ್ವಹಣಾ ಸಭೆಯ ಆರಂಭದಲ್ಲೆ ಡಿಎಚ್‍ಓಗೆ ಮೆಲು ದನಿಯಲ್ಲೇ ವಾರ್ನಿಂಗ್ ನೀಡಿದರು. ಡಿಎಚ್‍ಓ ಪ್ರಸಾದ್ ಅವರೇ ಇನ್ಮುಂದೆ ವಾಕ್ಸಿನ್ ಬಗ್ಗೆ ನೀವು ಮಾಧ್ಯಮಗಳಿಗೆ ಮಾಹಿತಿ ನೀಡಬೇಡಿ. ಜಿಲ್ಲಾಧಿಕಾರಿಗಳೇ ಎಲ್ಲಾ ಮಾತಾಡುತ್ತಾರೆ ಎಂದು ಮೆಲು ದನಿಯಲ್ಲೇ ವಾರ್ನಿಂಗ್ ನೀಡಿದರು.

    ಎಲ್ಲೆಡೆ ನೋ ಸ್ಟಾಕ್ ಬೋರ್ಡ್: ಮೈಸೂರಲ್ಲಿ ಲಸಿಕೆ ಇಲ್ಲ ಎಂಬ ಸತ್ಯವನ್ನು ಜಿಲ್ಲಾ ಆರೋಗ್ಯ ಇಲಾಖೆ ಒಪ್ಪಿಕೊಂಡು ಅಧಿಕೃತವಾಗಿಯೆ ವ್ಯಾಕ್ಸಿನ್ ಸ್ಟಾಕ್ ಇಲ್ಲ ಎಂಬ ಬೋರ್ಡ್ ಅನ್ನು ಆರೋಗ್ಯ ಕೇಂದ್ರಗಳ ಮುಂದೆ ಹಾಕಿದೆ. ಜುಲೈ ಒಂದರವರೆಗೆ ಮೈಸೂರಲ್ಲಿ ವಾಕ್ಸಿನ್ ಸಿಗುವುದಿಲ್ಲ. ಕೋವ್ಯಾಕ್ಸಿನ್ ಮತ್ತು ಕೋವಿಶೀಲ್ಡ್ ಎರಡು ವ್ಯಾಕ್ಸಿನ್ ಕೂಡ ಮೈಸೂರಲ್ಲಿ ಲಭ್ಯವಿಲ್ಲ. ಇದನ್ನೂ ಓದಿ: ಮೊದಲು ಲಸಿಕೆ, ನಂತರ ಮನ್ ಕೀ ಬಾತ್: ರಾಹುಲ್ ಕಿಡಿ

    ಬೆಂಗಳೂರಿನಲ್ಲಿ ಮಾತನಾಡಿದ್ದ ಆರೋಗ್ಯ ಸಚಿವರು, ಈ ತಿಂಗಳು ಹೆಚ್ಚಾಗಿ ಲಸಿಕೆ ಬರಬೇಕಿತ್ತು. ಆದ್ರೆ ಲಸಿಕೆ ಬರೋದು ತಡವಾಗಿದೆ. ಲಸಿಕೆ ಪೂರೈಕೆ ಹೆಚ್ಚಳ ಮಾಡುವಂತೆ ಮನವಿ ಮಾಡಲು ಸೋಮವಾರ ಅಥವಾ ಮಂಗಳವಾರ ದೆಹಲಿಗೆ ತೆರಳುತ್ತೇನೆ. ಕೇಂದ್ರ ಆರೋಗ್ಯ ಸಚಿವರನ್ನ ಭೇಟಿಯಾಗಿ ರಾಜ್ಯಕ್ಕೆ ಹೆಚ್ಚು ಲಸಿಕೆ ಪೂರೈಕೆ ಮಾಡುವಂತೆ ಮನವಿ ಮಾಡುತ್ತೇನೆ ಎಂದು ಹೇಳುವ ಲಸಿಕೆ ಕೊರತೆಯನ್ನು ಒಪ್ಪಿಕೊಂಡಿದ್ದರು. ಇದನ್ನೂ ಓದಿ: ಮರದ ಕೆಳಗೆ, ನಡು ರಸ್ತೆಯಲ್ಲಿ, ಬೆಳೆಗಳ ಮಧ್ಯೆ, ಜನ ಎಲ್ಲಿ ಸಿಗುತ್ತಾರೋ ಅಲ್ಲಿ ಲಸಿಕೆ

    ಕೊಡಗಿನಲ್ಲಿಯೂ ಇಲ್ಲ ಸಂಜೀವಿನಿ: ಬುಧವಾರದಿಂದ ಕೊಡಗಿನಲ್ಲಿ ವ್ಯಾಕ್ಸಿನ್ ಅಭಾವ ಹೆಚ್ಚಾಗುವ ಸಾಧ್ಯತೆ ಇದೆ. ವ್ಯಾಕ್ಸಿನ್ ಗಾಗಿ ಸಾರ್ವಜನಿಕರು ಎರಡ್ಮೂರು ದಿನ ಕಾಯಲೇ ಬೇಕು, ಯಾರೂ ಗೊಂದಲಕ್ಕೊಳಗಾಗಬಾರದು ಎಂದು ಕೊಡಗು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಲಸಿಕೆಗಾಗಿ ಭಿಕ್ಷೆ ಬೇಡುವ ಪರಿಸ್ಥಿತಿ ಬಂದಿದೆ: ಬಾಲಕೃಷ್ಣ

  • ಸಿಎಂ ತವರು ಜಿಲ್ಲೆಯಲ್ಲಿ ಲಸಿಕೆ ಅಭಾವ- ಕಾಂಗ್ರೆಸ್ ಪ್ರತಿಭಟನೆ

    ಸಿಎಂ ತವರು ಜಿಲ್ಲೆಯಲ್ಲಿ ಲಸಿಕೆ ಅಭಾವ- ಕಾಂಗ್ರೆಸ್ ಪ್ರತಿಭಟನೆ

    ಶಿವಮೊಗ್ಗ: ಮುಖ್ಯಮಂತ್ರಿ ತವರು ಜಿಲ್ಲೆ ಶಿವಮೊಗ್ಗದಲ್ಲಿ ಲಸಿಕೆ ಅಭಾವ ಉಂಟಾಗಿರುವುದನ್ನು ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

    ನಗರದ ಕುವೆಂಪು ರಸ್ತೆಯ ಜಿಲ್ಲಾ ಆರೋಗ್ಯ ತರಬೇತಿ ಕೇಂದ್ರದ ಲಸಿಕಾ ಕೇಂದ್ರದ ಎದುರು ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

    ಪ್ರತಿಯೊಬ್ಬರು ಲಸಿಕೆ ಹಾಕಿಸಿಕೊಳ್ಳಿ ಎಂದು ಸರ್ಕಾರ ಪ್ರತಿ ದಿನ ಮಾಧ್ಯಮಗಳಲ್ಲಿ ಹೇಳಿದ್ದಷ್ಟೇ ಆಯ್ತು. ಆದರೆ ಲಸಿಕೆಯನ್ನು ಸಮರ್ಪಕವಾಗಿ ನೀಡಲು ವಿಫಲವಾಗಿದೆ. ಕೇಂದ್ರ ಹಾಗೂ ರಾಜ್ಯ ಎರಡೂ ಬಿಕಾರಿ ಸರ್ಕಾರಗಳಾಗಿದ್ದು, ಶೀಘ್ರ ಈ ಸರ್ಕಾರ ತೊಲಗಬೇಕು ಎಂದು ವಿಧಾನ ಪರಿಷತ್ ಸದಸ್ಯ ಪ್ರಸನ್ನ ಕುಮಾರ್ ಆಗ್ರಹಿಸಿದರು.

    ಕಾಂಗ್ರೆಸ್ ನ ಪ್ರತಿಭಟನೆಗೆ ಎಚ್ಚೆತ್ತುಕೊಂಡು ಆರೋಗ್ಯ ಇಲಾಖೆ ಇದೀಗ ಲಸಿಕೆ ನೀಡಲು ಮುಂದಾಗಿದೆ. ಪ್ರತಿಭಟನೆ ಮಾಡಿದರೆಂದು ಇಂದು ಲಸಿಕೆ ನೀಡಿ, ನಾಳೆಯಿಂದ ಮತ್ತೆ ಸ್ಥಗಿತಗೊಂಡರೆ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

  • ಗ್ರಾಮದ 400 ಜನರಿಗೆ ಲಸಿಕೆ ಕೊಡಿಸಿ ಮಾದರಿಯಾದ ಯುವಕರು

    ಗ್ರಾಮದ 400 ಜನರಿಗೆ ಲಸಿಕೆ ಕೊಡಿಸಿ ಮಾದರಿಯಾದ ಯುವಕರು

    ಮಡಿಕೇರಿ: ಗ್ರಾಮದ ಜನರಿಗೆ ಲಸಿಕೆ ಕೊಡಿಸುವ ಮೂಲಕ ಯುವಕ ಮಂಡಲದವರು ಮಾದರಿಯಾಗಿದ್ದಾರೆ. ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಅರ್ವತೋಕ್ಲು ಗ್ರಾಮದ ಬೇಕೋಟ್ ಮಕ್ಕ ಯುವಕ ಮಂಡಲ ಕ್ಲಬ್ ನ ಕಾರ್ಯಾಲಯದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ಇಂದು ಕೋವಿಶೀಲ್ಡ್ ಲಸಿಕಾ ಅಭಿಯಾನ ನಡೆಸಲಾಯಿತು.

    ಕಾರ್ಯಕ್ರಮವನ್ನು ಶಾಸಕ ಕೆ.ಜಿ.ಬೋಪಯ್ಯ ಉದ್ಘಾಟಿಸಿ, ಕೋವಿಡ್ ಹರಡುವಿಕೆಯ ನಿಯಂತ್ರಣ ನಮ್ಮಿಂದಲೇ ಸಾಧ್ಯ. ಪ್ರತಿಯೊಬ್ಬರೂ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಂಡು, ಲಸಿಕೆ ಹಾಕಿಸಿಕೊಂಡಲ್ಲಿ ವೈರಸ್ ಹರಡುವಿಕೆಯನ್ನು ಸಂಪೂರ್ಣವಾಗಿ ತಡೆಗಟ್ಟಬಹುದು. ಅತಿಹೆಚ್ಚು ಪಾಸಿಟಿವ್ ಪ್ರಕರಣವನ್ನು ಹೊಂದಿದ್ದ ಬೆಟ್ಟಗೇರಿ ಪಂಚಾಯಿತಿ ಎಚ್ಚೆತ್ತುಕೊಂಡು ಈಗ ಶೂನ್ಯ ಪಾಸಿಟಿವ್ ಪ್ರಕರಣಗಳನ್ನು ಹೊಂದಿರುವುದು ಸಂತಸದ ವಿಚಾರ ಎಂದರು.

    ಮಡಿಕೇರಿ ತಾಲೂಕು ಅರ್ವತೋಕ್ಲು ಗ್ರಾಮದ ಬೇಕೋಟ್ ಮಕ್ಕ ಯುವಕ ಮಂಡಲದ ಮೂಲಕ ಇಂದು 400ಕ್ಕೂ ಹೆಚ್ಚು ಜನರಿಗೆ ಲಸಿಕೆ ನೀಡಲಾಗಿದೆ. ಈ ಮೂಲಕ ಯುವಕರು ಮಾದರಿಯಾಗಿದ್ದಾರೆ. ಕ್ಲಬ್ ಮುಕಾಂತರ ಈ ಸಮಾಜಮುಖಿ ಕಾರ್ಯ ನಡೆಸುತ್ತಿರುವುದು ಆತ್ಯುತ್ತಮ ವಿಚಾರ ಎಂದು ಸಂತಸ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರಾದ ತಳೂರು ದಿನೇಶ್ ಕರುಂಬಯ್ಯ, ಕ್ಲಬ್ ಅಧ್ಯಕ್ಷರಾದ ಸೂರಿ ಕಾಕೇರಿ, ಕ್ಲಬ್ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

  • ನಾಳೆಯಿಂದ ಉತ್ತರ ಕನ್ನಡದ ಕಾಲೇಜುಗಳಲ್ಲಿ ಉಪನ್ಯಾಸಕರು, ವಿದ್ಯಾರ್ಥಿಗಳಿಗೆ ಲಸಿಕಾಕರಣ

    ನಾಳೆಯಿಂದ ಉತ್ತರ ಕನ್ನಡದ ಕಾಲೇಜುಗಳಲ್ಲಿ ಉಪನ್ಯಾಸಕರು, ವಿದ್ಯಾರ್ಥಿಗಳಿಗೆ ಲಸಿಕಾಕರಣ

    – 33,965 ಫಲಾನುಭವಿಗಳಿಗೆ ಲಸಿಕೆ

    ಕಾರವಾರ: ರಾಜ್ಯ ಸರ್ಕಾರ ಶೀಘ್ರದಲ್ಲಿ ಪದವಿ ಕಾಲೇಜುಗಳನ್ನು ಪ್ರಾರಂಭ ಮಾಡಲು ನಿರ್ಣಯಿಸಿರುವ ಹಿನ್ನಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಸೋಮವಾರದಿಂದ ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಉಪನ್ಯಾಸಕರಿಗೆ ಲಸಿಕೆ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

    ಈಗಾಗಲೇ 33 ಸಾವಿರಕ್ಕೂ ಹೆಚ್ಚು ಫಲಾನುಭವಿಗಳನ್ನು ಗುರುತಿಸಲಾಗಿದ್ದು, ಆಯಾ ಕಾಲೇಜಿನಲ್ಲಿ ಲಸಿಕೆ ನೀಡಲು ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದೆ. ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಬಹುತೇಕ ಇಳಿಮುಖ ಕಂಡಿದೆ. ಜಿಲ್ಲೆಯಲ್ಲಿ ಸದ್ಯ 1.08 ಪಾಸಿಟಿವ್ ರೇಟ್ ಇದ್ದು, ಪಾಸಿಟಿವ್ ರೇಟ್‍ನ್ನು ಶೂನ್ಯಕ್ಕೆ ತರಲು ಜಿಲ್ಲಾಡಳಿತ ಕ್ರಮ ಕೈಗೊಂಡಿದೆ. ಈಗಾಗಲೇ 33,965 ಫಲಾನುಭವಿಗಳನ್ನು ಲಸಿಕಾಕರಣಕ್ಕೆ ಗುರುತಿಸಲಾಗಿದೆ.

    ಜಿಲ್ಲೆಯಲ್ಲಿ ಪಾಲಿಟೆಕ್ನಿಕ್, ಪದವಿ, ಐಟಿಐ ಸೇರಿದಂತೆ 94 ಕಾಲೇಜುಗಳಿವೆ. ಇದರಲ್ಲಿ 18 ವರ್ಷ ಮೇಲ್ಪಟ್ಟ 31,833 ವಿದ್ಯಾರ್ಥಿಗಳಿದ್ದರೆ, 18 ರಿಂದ 44 ವರ್ಷ ವಯಸ್ಸಿನ ಬೋಧಕ, ಬೋಧಕೇತರ ಸಿಬ್ಬಂದಿ 1497, 45 ವರ್ಷ ಮೇಲ್ಪಟ್ಟ ಬೋಧಕ, ಬೋಧಕೇತರ ಸಿಬ್ಬಂದಿ 645 ಜನ ಇದ್ದು, ಒಟ್ಟು 33,965 ಜನರಿಗೆ ಲಸಿಕೆ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

    ಹಂತ ಹಂತವಾಗಿ ಲಸಿಕಾಕರಣ
    ಜಿಲ್ಲೆಯಲ್ಲಿ 4000 ಕೋವ್ಯಾಕ್ಸಿನ್ ಡೋಸ್ ಮಾತ್ರ ಇದ್ದು, ಇಂದು ಹೆಚ್ಚುವರಿಯಾಗಿ 7,000 ಕೋವಿಶೀಲ್ಡ್ ಡೋಸ್ ಬರಲಿದೆ. ಒಟ್ಟು 11 ಸಾವಿರ ನಾಳೆಗೆ ವ್ಯಾಕ್ಸಿನ್ ಇರಲಿದ್ದು, ಇದರಲ್ಲಿ 4000 ಡೋಸ್ ನ್ನು ವಿದ್ಯಾರ್ಥಿಗಳಿಗೆ ಹಾಗೂ 3000 ಡೋಸ್ ನ್ನು ಸಾರ್ವಜನಿಕರಿಗೆ ನೀಡಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ.

    ನಾಳೆ ಕಾರವಾರದ ದಿವೇಕರ್ ಕಾಲೇಜು, ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜು ಕುಮಟಾದ ಎವಿ ಬಾಳಿಗಾ ಕಾಲೇಜ್, ಶಿರಸಿಯ ಎಂಇಎಸ್ ಕಾಲೇಜ್ ಮತ್ತು ಎಂಇಎಸ್ ವಾಣಿಜ್ಯ ಕಾಲೇಜುಗಳಲ್ಲಿ ಲಸಿಕೆ ನೀಡಲಾಗುತ್ತಿದೆ.

  • ವಿದೇಶಕ್ಕೆ ತೆರಳುವ ಎನ್‍ಆರ್‍ಐ ಪ್ರಯಾಣಿಕರಿಗೆ ಆದ್ಯತೆ ಮೇರೆಗೆ ಲಸಿಕೆ- ವೇದವ್ಯಾಸ ಕಾಮತ್ ಪರಿಶೀಲನೆ

    ವಿದೇಶಕ್ಕೆ ತೆರಳುವ ಎನ್‍ಆರ್‍ಐ ಪ್ರಯಾಣಿಕರಿಗೆ ಆದ್ಯತೆ ಮೇರೆಗೆ ಲಸಿಕೆ- ವೇದವ್ಯಾಸ ಕಾಮತ್ ಪರಿಶೀಲನೆ

    ಮಂಗಳೂರು: ಉದ್ಯೋಗ, ಶಿಕ್ಷಣಕ್ಕಾಗಿ ವಿದೇಶಗಳಿಗೆ ತೆರಳುವವರಿಗೆ ಲಸಿಕೆ ವಿತರಣೆಯು ಡೊಂಗರಕೇರಿ ಕೆನರಾ ಗಲ್ರ್ಸ್ ಹೈಸ್ಕೂಲಿನಲ್ಲಿ ನಡೆಯುತಿದ್ದು, ಶಾಸಕ ವೇದವ್ಯಾಸ್ ಕಾಮತ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

    ಈ ವೇಳೆ ಮಾತನಾಡಿದ ಅವರು, ದಕ್ಷಿಣ ಕನ್ನಡ ಜಿಲ್ಲಾಡಳಿತದ ವತಿಯಿಂದ ಉದ್ಯೋಗಕ್ಕಾಗಿ, ವಿದ್ಯಾಭ್ಯಾಸಕ್ಕಾಗಿ ವಿದೇಶ ಪ್ರಯಾಣ ಕೈಗೊಳ್ಳುವವರಿಗೆ ವಾರಾಂತ್ಯದ ದಿನಗಳಲ್ಲಿ ಲಸಿಕೆ ವಿತರಿಸಲಾಗುತ್ತಿದ್ದು, ಇಂದು ಡೊಂಗರಕೇರಿ ಕೆನರಾ ಗಲ್ರ್ಸ್ ಹೈಸ್ಕೂಲ್ ನಲ್ಲಿ ನಡೆಯುವ ಲಸಿಕಾ ಶಿಬಿರಕ್ಕೆ ಭೇಟಿ ನೀಡಿ ವ್ಯವಸ್ಥೆಗಳನ್ನು ಪರಿಶೀಲಿಸಿದೆ. ಜಿಲ್ಲೆಯ ಅರ್ಹ ಪ್ರತಿಯೊಬ್ಬರಿಗೂ ಲಸಿಕೆ ನೀಡಲು ನಮ್ಮ ಸರ್ಕಾರ, ಜಿಲ್ಲಾಡಳಿತ ಕ್ರಮ ಕೈಗೊಂಡಿದೆ. ಈಗಾಗಲೇ ಜಿಲ್ಲಾಡಳಿತ, ರೆಡ್ ಕ್ರಾಸ್ ಹಾಗೂ ರೋಟರಿ ಸಂಸ್ಥೆಗಳ ಸಹಕಾರದೊಂದಿಗೆ ಅಶಕ್ತರಿಗಾಗಿ ಸಂಚಾರಿ ವಾಹನವನ್ನು ಕೂಡ ವ್ಯವಸ್ಥೆ ಮಾಡಲಾಗಿದೆ. ಕೋವಿಡ್ ನಿಯಂತ್ರಣದಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತ ಸಮರ್ಥವಾಗಿ ಕಾರ್ಯ ನಿರ್ವಹಿಸುತಿದ್ದು, ಜಿಲ್ಲೆಯ ಜನರಿಗೆ ಸಹಾಯವಾಗುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದರು.

    ಈ ಸಂದರ್ಭದಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ನಾಮನಿರ್ದೇಶಿತ ಸದಸ್ಯರಾದ ಭಾಸ್ಕರ್ ಚಂದ್ರ ಶೆಟ್ಟಿ, ರೆಡ್‍ಕ್ರಾಸ್ ಸಂಸ್ಥೆಯ ಅಧ್ಯಕ್ಷ ಶಾಂತರಾಮ್ ಶೆಟ್ಟಿ, ಗೌರವ ಕಾರ್ಯದರ್ಶಿ ಪ್ರಭಾಕರ್ ಶರ್ಮ, ರೋಟರಿ ಸಂಸ್ಥೆಯ ಪ್ರಮುಖರಾದ ಯತೀಶ್ ಬೈಕಾಂಪಾಡಿ, ಆರೋಗ್ಯ ಇಲಾಖೆಯ ಅಧಿಕಾರಿಗಳು ಹಾಗೂ ಇನ್ನಿತರರು ಉಪಸ್ಥಿತರಿದ್ದರು.

  • ಮಳೆ ಹೆಚ್ಚಾದ್ರೆ ಸೂಕ್ಷ್ಮ ಪ್ರದೇಶದ ಸಾವಿರಾರು ಜನ ಕಾಳಜಿ ಕೇಂದ್ರಕ್ಕೆ ಶಿಫ್ಟ್- ಎಲ್ಲರಿಗೂ ವ್ಯಾಕ್ಸಿನ್

    ಮಳೆ ಹೆಚ್ಚಾದ್ರೆ ಸೂಕ್ಷ್ಮ ಪ್ರದೇಶದ ಸಾವಿರಾರು ಜನ ಕಾಳಜಿ ಕೇಂದ್ರಕ್ಕೆ ಶಿಫ್ಟ್- ಎಲ್ಲರಿಗೂ ವ್ಯಾಕ್ಸಿನ್

    ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಎಡಬಿಡದೆ ಮಳೆ ಸುರಿಯುತ್ತಿದೆ. ಮಳೆ ಹೀಗೆ ಮುಂದುವರಿದಲ್ಲಿ ಜಿಲ್ಲೆಯಲ್ಲಿ ಅಪಾಯ ಎದುರಾಗುವ ಸಾಧ್ಯತೆ ಇದೆ. ಒಂದೆಡೆ ಪ್ರವಾಹ, ಮತ್ತೊಂದೆಡೆ ಭೂಕುಸಿತದಂತಹ ಘಟನೆಗಳು ನಡೆಯಬಹುದು. ಹೀಗಾಗಿ ಜಿಲ್ಲಾಡಳಿತ ಪ್ರವಾಹ ಮತ್ತು ಭೂಕುಸಿತ ಎದುರಾಗುವಂತಹ ಪ್ರದೇಶಗಳ ಜನರನ್ನು ಸ್ಥಳಾಂತರ ಮಾಡುವುದಕ್ಕೆ ನಿರ್ಧರಿಸಿದೆ. ಅಷ್ಟೇ ಅಲ್ಲದೇ ಕಾಳಜಿ ಕೇಂದ್ರಗಳನ್ನು ತೆರೆದಿದ್ದು, ಸೂಕ್ಷ್ಮ ಪ್ರದೇಶದ ಸಾವಿರಾರು ಜನರಿಗೆ ವ್ಯಾಕ್ಸಿನ್ ಸಹ ಹಾಕಿಸಲು ತಯಾರಿ ನಡೆಸಿದೆ.

    ಕೊಡಗು ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಿಂದ ಪ್ರವಾಹ ಮತ್ತು ಭೂಕುಸಿತಕ್ಕೆ ತುತ್ತಾಗುತ್ತಿದ್ದ ಪ್ರದೇಶಗಳು ಸೇರಿದಂತೆ ಈ ಬಾರಿ ಜಿಲ್ಲೆಯಲ್ಲಿ 77 ಗ್ರಾಮಗಳು ಪ್ರವಾಹ ಮತ್ತು ಭೂಕುಸಿತಕ್ಕೆ ನಲುಗುವ ಸಾಧ್ಯತೆ ಇದೆಯಂತೆ. ಇಷ್ಟು ಗ್ರಾಮಗಳ 2,800 ಮನೆಗಳಿಗೆ ತೊಂದರೆಯಾಗುವ ಸಾಧ್ಯತೆ ಇದೆ ಎಂದು ಜಿಲ್ಲಾಡಳಿತ ಈಗಾಗಲೇ ಅಂದಾಜಿಸಿದೆ. ಹೀಗಾಗಿ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಗೊಳ್ಳಬೇಕು ಎಂದು ಅಷ್ಟೂ ಕುಟುಂಬಗಳಿಗೆ ಜಿಲ್ಲಾಡಳಿತ ಈಗಾಗಲೇ ನೋಟಿಸ್ ಜಾರಿ ಮಾಡಿದೆ. ದೂರದ ಸ್ಥಳಗಳಲ್ಲಿ ಕಾಳಜಿ ಕೇಂದ್ರಗಳನ್ನು ತೆರೆದರೆ ಜನರು ಹೋಗಲು ಹಿಂದೇಟು ಹಾಕುತ್ತಾರೆ. ಜೊತೆಗೆ ಸ್ಥಳಾಂತರದ ಕೆಲಸವೂ ಕಷ್ಟಕರವಾಗುತ್ತದೆ. ಈ ಎಲ್ಲ ದೃಷ್ಟಿಯಿಂದ ಆಯಾ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಕಾಳಜಿ ಕೇಂದ್ರ ತೆರೆಯಲಾಗುವುದು ಎಂದು ಜಿಲ್ಲಾಡಳಿತ ಹೇಳಿದೆ.

    ಈ ಹಿನ್ನೆಲೆಯಲ್ಲಿ ವಿರಾಜಪೇಟೆ ಪಟ್ಟಣದ ಅಯ್ಯಪ್ಪ ಬೆಟ್ಟ ಮತ್ತು ನೆಹರು ನಗರದ ಒಟ್ಟು 66 ಕುಟುಂಬಗಳ ಜನರನ್ನು ಸ್ಥಳಾಂತರ ಮಾಡಬೇಕಾಗಿದ್ದು, ಅವರಿಗೂ ವಿರಾಜಪೇಟೆ ಪಟ್ಟಣ ಪಂಚಾಯಿತಿಯಿಂದ ವ್ಯಾಕ್ಸಿನ್ ವಿತರಣೆ ಮಾಡಲಾಗುತ್ತಿದೆ. ಮಳೆ ಅರ್ಭಟ ಹೆಚ್ಚಾದರೆ ಸ್ಥಳೀಯ ಶಾಲೆಗಳಲ್ಲಿ ಕಾಳಜಿ ಕೇಂದ್ರ ತೆಗೆಯಲು ಪಟ್ಟಣ ಪಂಚಾಯತಿಯ ಅಧಿಕಾರಿಗಳು ಅಗತ್ಯ ಸಿದ್ಧತೆ ಮಾಡಿಕೊಂಡಿದ್ದಾರೆ.

    ಮಡಿಕೇರಿ ನಗರಸಭೆ ಸಹ ಕಾಳಜಿ ಕೇಂದ್ರ ತೆರೆಯಲು ಈಗಾಗಲೇ ಸ್ಥಳ ಗುರುತು ಮಾಡಿದೆ. ನಗರದ ಇಂದಿರಾ ನಗರ, ಚಾಮುಂಡೇಶ್ವರಿ ನಗರ, ಮಂಗಳಾದೇವಿ ನಗರ ಮತ್ತು ಮಲ್ಲಿಕಾರ್ಜುನ ನಗರ ಸೇರಿದಂತೆ ಒಂದು ಸಾವಿರಕ್ಕೂ ಹೆಚ್ಚು ಜನರಿಗೆ ಈ ಬಾರಿ ಮಳೆಯಿಂದ ಸಾಕಷ್ಟು ಸಮಸ್ಯೆ ಅಗಬಹುದು ಎಂದು ಅಂದಾಜಿಸಲಾಗಿದೆ. ಹೀಗಾಗಿ ಈಗಾಗಲೇ ಕಾಳಜಿ ಕೇಂದ್ರಗಳನ್ನು ತೆರೆಯಲು ನಗರದ ಅಂಬೇಡ್ಕರ್ ಭವನ ನಗರದ ಸಭೆಯ ಶಾಲೆ ಕಾಲೇಜಿನ ಹಾಸ್ಟೆಲ್ ಗಳನ್ನು ಗುರುತು ಮಾಡಿದೆ. ಕಾಳಜಿ ಕೇಂದ್ರಕ್ಕೆ ಬರುವವರಿಗೆ ವ್ಯಾಕ್ಸಿನ್ ನೀಡಲಾಗುತ್ತಿದೆ.

  • ಭಾನುವಾರವೂ ಡಿಸಿಎಂ ಲಸಿಕೆ ರೌಂಡ್ಸ್ – ಡಾ.ಸಿ.ಎನ್.ಅಶ್ವತ್ಥನಾರಾಯಣ್ ಫೌಂಡೇಶನ್‍ನಿಂದ 1,400 ಜನರಿಗೆ ಉಚಿತ ಲಸಿಕೆ

    ಭಾನುವಾರವೂ ಡಿಸಿಎಂ ಲಸಿಕೆ ರೌಂಡ್ಸ್ – ಡಾ.ಸಿ.ಎನ್.ಅಶ್ವತ್ಥನಾರಾಯಣ್ ಫೌಂಡೇಶನ್‍ನಿಂದ 1,400 ಜನರಿಗೆ ಉಚಿತ ಲಸಿಕೆ

    ಬೆಂಗಳೂರು: ಆದಷ್ಟು ಬೇಗ ಮಲ್ಲೇಶ್ವರ ಕ್ಷೇತ್ರದ ಪ್ರತಿಯೊಬ್ಬರಿಗೂ ವ್ಯಾಕ್ಷಿನೇಷನ್ ಮಾಡಿಸಬೇಕೆಂದು ಸಂಕಲ್ಪ ತೊಟ್ಟಿರುವ ಕ್ಷೇತ್ರದ ಶಾಸಕರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ, ಭಾನುವಾರವೂ ಬೆಳಗ್ಗೆಯಿಂದ ಇಡೀ ದಿನ ಕ್ಷೇತ್ರದ ವಿವಿಧೆಡೆ ನಡೆದ ಲಸಿಕೆ ಅಭಿಯಾನದಲ್ಲಿ ಪಾಲ್ಗೊಂಡರು.

    ಇಂದು ಮೂರು ಕಡೆಗಳಲ್ಲಿ ಲಸಿಕೆ ಶಿಬಿರಗಳು ನಡೆದಿದ್ದು, ಡಾ.ಸಿ.ಎನ್.ಅಶ್ವತ್ಥನಾರಾಯಣ್ ಫೌಂಡೇಶನ್ ವತಿಯಿಂದ ಲಸಿಕೆ ಖರೀದಿ ಮಾಡಿ ಉಚಿತವಾಗಿ ಜನರಿಗೆ ನೀಡಲಾಗಿಯಿತು.

    ಅಶ್ವತ್ಥನಗರದಲ್ಲಿ 400, ನೇತಾಜಿ ವೃತ್ತದ ಶ್ರೀನಿವಾಸ ಕಲ್ಯಾಣ ಮಂಟಪದಲ್ಲಿ 500 ಹಾಗೂ ಗಾಯತ್ರಿ ದೇವಿ ಪಾರ್ಕ್‍ನಲ್ಲಿ 500 ಲಸಿಕೆಗಳನ್ನು ಬಿಪಿಎಲ್ ಕಾರ್ಡ್‍ದಾರರು, ಬಡವರು ಮತ್ತಿತರೆ ಜನರಿಗೆ ಕೊಡಲಾಯಿತು. ಈ ಮೂರು ಕಡೆ ಒಟ್ಟು 1,400 ಲಸಿಕೆಗಳನ್ನು ನೀಡಲಾಗಿದೆ ಎಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಡಿಸಿಎಂ ಡಾ.ಅಶ್ವತ್ಥನಾರಾಯಣ ತಿಳಿಸಿದರು.

    ಜತೆಗೆ, ಗುಟ್ಟಹಳ್ಳಿಯಲ್ಲೂ ಸಾರ್ವಜನಿಕರಿಗೆ ಬಿಬಿಎಂಪಿ ಕಡೆಯಿಂದ ವ್ಯಾಕ್ಸಿನ್ ಶಿಬಿರವನ್ನು ಆಯೋಜಿಸಲಾಗಿತ್ತು. ಇಲ್ಲಿಗೂ ಡಿಸಿಎಂ ಭೇಟಿ ನೀಡಿ ಪರಿಶೀಲನೆ ಮಾಡಿದರು.

    ಎಲ್ಲ ಕಡೆಗೂ ಭೇಟಿ ನೀಡಿದ್ದ ವೇಳೆ ವ್ಯಾಕ್ಸಿನ್ ನೀಡುತ್ತಿದ್ದ ಮುಂಚೂಣಿ ಕಾರ್ಯಕರ್ತರ ಯೋಗ ಕ್ಷೇಮ ವಿಚಾರಿಸುವುದರ ಜತೆಗೆ, ಲಸಿಕೆ ಪಡೆಯುತ್ತಿದ್ದ ಜನರನ್ನು ಮಾತನಾಡಿಸಿದರು. ಯಾವುದೇ ಸಮಸ್ಯೆ ಇದ್ದರೂ ತಕ್ಷಣವೇ ಕರೆ ಮಾಡುವಂತೆ ತಿಳಿಸಿದರು.

    ಲಸಿಕೆ ಪಡೆದವರು ಇದುವರೆಗೆ ಲಸಿಕೆ ಪಡೆಯದವರಿಗೆ ತಿಳಿ ಹೇಳಿ. ಪ್ರತಿಯೊಬ್ಬರೂ ತಪ್ಪದೇ ಲಸಿಕೆ ಪಡೆಯಬೇಕು. ಮಾರಕ ಕಾಯಿಲೆಯಿಂದ ಪಾರಾಗಲು ಇದೊಂದೇ ಪರಿಹಾರ ಎಂದು ಡಿಸಿಎಂ ಹೇಳಿದರು.

  • ಕಾರಲ್ಲಿ ಕೂತ್ಕೊಂಡೇ ಕೋವಿಡ್ ಲಸಿಕೆ ಹಾಕಿಸ್ಕೊಳ್ಳಿ..!

    ಕಾರಲ್ಲಿ ಕೂತ್ಕೊಂಡೇ ಕೋವಿಡ್ ಲಸಿಕೆ ಹಾಕಿಸ್ಕೊಳ್ಳಿ..!

    – ಬೆಂಗಳೂರಿಗೂ ಬಂತು ಡ್ರೈವ್ ಥ್ರೂ ವ್ಯಾಕ್ಸಿನೇಷನ್

    – ಪವಿತ್ರ ಕಡ್ತಲ

    ಬೆಂಗಳೂರು: ಗುಂಪಿನ ಮಧ್ಯೆ ಹೋಗಿ ಕೋವಿಡ್ ವ್ಯಾಕ್ಸಿನ್ ಹಾಕಿಸಿಕೊಳ್ಳಬೇಕಲ್ಲ ಎಂದು ಚಿಂತೆಯಲ್ಲಿರುವ ಸಿಲಿಕಾನ್ ಸಿಟಿ ಜನತೆಗೆ ಗುಡ್ ನ್ಯೂಸ್ ಸಿಕ್ಕಿದ್ದು, ಮುಂಬೈ, ದೆಹಲಿ ಮಾದರಿಯಲ್ಲಿ ನಗರಕ್ಕೂ ಈಗ ಡ್ರೈವ್ ಥ್ರೂ ವ್ಯಾಕ್ಸಿನೇಷನ್ ಬಂದಿದೆ. ಇದರಿಂದಾಗಿ ನೀವು ಕಾರಲ್ಲೇ ಕೂತು ವ್ಯಾಕ್ಸಿನ್ ಪಡೆದುಕೊಳ್ಳಬಹುದು.

    ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿರುವ ವೇಗಾ ಸಿಟಿ ಮಾಲ್‍ನಲ್ಲಿ ಜೂನ್ 17ರ ವರೆಗೆ ಡ್ರೈವ್ ಥ್ರೂ ವ್ಯಾಕ್ಸಿನೇಷನ್ ಅಭಿಯಾನ ನಡೆಯಲಿದೆ. ಬೆಂಗಳೂರಿನ ಎರಡು ಖಾಸಗಿ ಆಸ್ಪತ್ರೆಗಳು ಹಾಗೂ ವೇಗಾ ಮಾಲ್ ಸಹಯೋಗದಲ್ಲಿ ಈ ಅಭಿಯಾನ ನಡೆಯುತ್ತಿದೆ.

    ಕೋವಿನ್ ಆ್ಯಪ್ ಮೂಲಕ ನೋಂದಣಿ ಮಾಡಿಕೊಂಡು ಸಹ ಈ ಡ್ರೈವ್ ಥ್ರೂ ವ್ಯಾಕ್ಸಿನೇಷನ್ ಪಡೆದುಕೊಳ್ಳಬಹುದು. ವಾಕ್ ಇನ್ ಬಂದವರಿಗೆ ವ್ಯಾಕ್ಸಿನ್ ಸಿಗೋದು ಕೊಂಚ ತಡವಾಗಬಹುದು. ಸದ್ಯ ಈ ಹೊಸ ವ್ಯಾಕ್ಸಿನೇಷನ್ ಅಭಿಯಾನಕ್ಕೆ ಬೊಂಬಾಟ್ ರೆಸ್ಪಾನ್ಸ್ ವ್ಯಕ್ತವಾಗಿದೆ. ಇದನ್ನೂ ಓದಿ: ಮಕ್ಕಳ ಮೇಲೆ ಕೊರೊನಾ ಲಸಿಕೆ ಪ್ರಯೋಗ- ಮೈಸೂರಲ್ಲಿ 30 ಚಿಣ್ಣರರಿಗೆ ಕೋವ್ಯಾಕ್ಸಿನ್

    ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ವ್ಯಾಕ್ಸಿನ್ ಹಾಕಿಸಿಕೊಂಡವರು, ಡ್ರೈವ್ ಥ್ರೂ ವ್ಯಾಕ್ಸಿನೇಷನ್‍ನಿಂದ ನಮಗೆ ಖುಷಿಯಾಗಿದೆ, ತುಂಬಾ ಸುಲಭವಾದಿದೆ. ಎಲ್ಲ ಕಡೆ ತುಂಬಾ ಜನ ಇರುತ್ತಾರೆ. ಇದರಿಂದಾಗಿ ಸರತಿ ನೋಡಿ ಭಯಾನೂ ಇತ್ತು. ಆದರೆ ಇದರಲ್ಲಿ ಅಂತಹ ಯಾವುದೇ ಸಮಸ್ಯೆಗಳಿಲ್ಲ ಎಂದು ತಮ್ಮ ಅನುಭವ ಹಂಚಿಕೊಂಡರು. ಕಾರಲ್ಲಿಯೇ ಬಂದು ಕಾರಲ್ಲಿ ಕೂತು ವ್ಯಾಕ್ಸಿನ್ ಹಾಕಿಸಿಕೊಂಡು, ಕೆಲವು ಫಲಾನುಭವಿಗಳು ಖುಷಿಪಟ್ಟು, ನರ್ಸ್‍ಗಳಿಗೆ ಕೈ ಮುಗಿದ ಘಟನೆಯೂ ಇಂದು ನಡೆಯಿತು. ಇದನ್ನೂ ಓದಿ: ಕೊರೊನಾ ಸೋಂಕಿತರಿಗೆ ಪುಸ್ತಕ ನೀಡಿ ಆತ್ಮಸ್ಥೈರ್ಯ ತುಂಬಿದ ಲ್ಯಾಬ್ ಟೆಕ್ನಿಷಿಯನ್

    ಈ ಬಗ್ಗೆ ಮಾತನಾಡಿದ ವೇಗಾ ಸಿಟಿ ಮಾಲ್ ನಿರ್ದೇಶಕ ಸಚಿನ್ ರಾಜು, ನಿನ್ನೆಯಿಂದ ನಾವು ಈ ಅಭಿಯಾನ ಶುರು ಮಾಡಿದ್ದೇವೆ. ನಿನ್ನೆ ಸುಮಾರು 200ಕ್ಕೂ ಹೆಚ್ಚು ಜನ ನೋಂದಣಿ ಮಾಡಿದ್ದರು. ಇದರಲ್ಲಿ 156 ಮಂದಿ ಬಂದು ಲಸಿಕೆ ಹಾಕಿಸಿಕೊಂಡರು. ಇವತ್ತು 300 ಮಂದಿ ನೋಂದಣಿ ಮಾಡಿಸಿಕೊಂಡಿದ್ದಾರೆ ಎಂದರು.

    ಏನಿದು ಡ್ರೈವ್ ಥ್ರೂ ವ್ಯಾಕ್ಸಿನೇಷನ್?
    ಬೆಂಗಳೂರಿನಲ್ಲಿ ಈ ಯೋಜನೆ ಶುರು ಮಾಡಿದ್ದು ನಾವೇ, ಇಂಥಹ ಕಾನ್ಸೆಪ್ಟ್ ಮುಂಬೈ ಹಾಗೂ ದೆಹಲಿಯ ಮಾಲ್‍ಗಳಲ್ಲಿ ಶುರುವಾಗಿತ್ತು. ಅಲ್ಲಿ ಅವರು ಜಾರಿಗೊಳಿಸಿದ ಮಾರ್ಗಸೂಚಿಗಳನ್ನೇ ನಾವು ಇಲ್ಲಿ ಅನುಸರಿಸುತ್ತಿದ್ದೇವೆ. ಆಸ್ಟರ್ ಹಾಸ್ಪಿಟಲ್ ಹಾಗೂ ವಾಸವಿ ಆಸ್ಪತ್ರೆಯ ಸಹಕಾರದಿಂದ ಲಸಿಕೆ ಹಾಕುವ ಅಭಿಯಾನ ಶುರು ಮಾಡಿದ್ದೇವೆ. ಇದಕ್ಕೆ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಸಹ ಸಹಕಾರ ನೀಡಿದ್ದಾರೆ. ಬಿಬಿಎಂಪಿ ಆರೋಗ್ಯಾಧಿಕಾರಿಗಳಿಂದಲೂ ನಾವು ಅನುಮತಿ ಪಡೆದಿದ್ದೇವೆ ಎಂದರು.

    ಲಸಿಕೆ ಬೇಕಾದರೆ ನೀವೇನು ಮಾಡಬೇಕು?
    ಕೋವಿನ್ ಪೋರ್ಟಲ್ ನಲ್ಲಿ ನೋಂದಣಿಯಾಗಿರಲೇ ಬೇಕು. ವೇಗಾ ಸಿಟಿ ಮಾಲ್‍ಗೆ ಬಂದರೆ ನೀವು 3 ಹಂತದಲ್ಲಿ ಲಸಿಕೆ ಹಾಕುವ ಪ್ರಕ್ರಿಯೆ ನಡೆಯುತ್ತದೆ. ಮೊದಲ ಹಂತದಲ್ಲಿ ಜನರು ತಮ್ಮ ಮಾಹಿತಿಯನ್ನು ನೀಡಬೇಕು ಹಾಗೂ ಆಧಾರ್ ಕಾರ್ಡ್ ಇತ್ಯಾದಿ ಅಗತ್ಯ ವಿವರಗಳನ್ನು ನೀಡಬೇಕು. ಎರಡನೇ ಹಂತದಲ್ಲಿ ಲಸಿಕೆ ಹಾಕುತ್ತಾರೆ. ಮೂರನೇ ಹಾಗೂ ಕೊನೆಯ ಹಂತದಲ್ಲಿ ನೀವು ಬಂದಿರುವ ಕಾರ್‍ಗೆ ವಿಶೇಷ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಲಸಿಕೆ ಹಾಕಿದ ನಂತರ ನಿಮಗೆ ನಿಗದಿಪಡಿಸಿದ ಪಾರ್ಕಿಂಗ್ ಲಾಟ್‍ನಲ್ಲಿ ನಿಲ್ಲಿಸಿದ್ದ ಕಾರ್‍ನಲ್ಲಿ ಅರ್ಧ ಗಂಟೆ ಅವಧಿಯ ವಿಶ್ರಾಂತಿ ಪಡೆದುಕೊಳ್ಳಬೇಕು. ಈ ಅವಧಿಯಲ್ಲಿ ಯಾವುದೇ ಅಡ್ಡಪರಿಣಾಮ ಕಾಣಿಸದಿದ್ದಲ್ಲಿ, ಮರಳಿ ಮನೆಗೆ ತೆರಳಬಹುದು. ಒಂದು ವೇಳೆ ಅಡ್ಡ ಪರಿಣಾಮ ಕಾಣಿಸಿದರೆ ತಕ್ಷಣ ಚಿಕಿತ್ಸೆ ನೀಡಲಾಗುತ್ತದೆ. ಜೊತೆಗೆ ಅಂಬುಲೆನ್ಸ್ ವ್ಯವಸ್ಥೆಯನ್ನೂ ಮಾಡಿದ್ದೇವೆ ಎಂದು ಸಚಿನ್ ರಾಜು ಹೇಳಿದರು.

    ಇನ್ನೂ ನಾಲ್ಕೈದು ದಿನ ಈ ವ್ಯಾಕ್ಸಿನೇಷನ್ ಡ್ರೈವ್ ನಡೆಯಲಿದೆ. ಬಳಿಕ ಅಗತ್ಯ ಪ್ರಮಾಣದಲ್ಲಿ ವ್ಯಾಕ್ಸಿನ್ ಲಭಿಸಿದರೆ ನಿತ್ಯ ಈ ಕಾರ್ಯಕ್ರಮ ಮುಂದುವರಿಸುವುದಾಗಿ ಸಚಿನ್ ರಾಜು ಹೇಳಿದರು.

    18 ವರ್ಷ ಮೇಲ್ಪಟ್ಟವರಿಗೆ ಸಹ ಕೋವ್ಯಾಕ್ಸಿನ್ ಹಾಗೂ ಕೋವಿಶೀಲ್ಡ್ ನೀಡಲಾಗುತ್ತಿದೆ. ಬೇರೆ ರಾಜ್ಯದಲ್ಲಿ ಫೇಮಸ್ ಆಗಿದ್ದ ಈ ಡ್ರೈವ್ ಈಗ ಬೆಂಗಳೂರಿನಲ್ಲಿಯೂ ಹವಾ ಎಬ್ಬಿಸಿದೆ.

  • ಮಕ್ಕಳ ಮೇಲೆ ಕೊರೊನಾ ಲಸಿಕೆ ಪ್ರಯೋಗ- ಮೈಸೂರಲ್ಲಿ 30 ಚಿಣ್ಣರರಿಗೆ ಕೋವ್ಯಾಕ್ಸಿನ್

    ಮಕ್ಕಳ ಮೇಲೆ ಕೊರೊನಾ ಲಸಿಕೆ ಪ್ರಯೋಗ- ಮೈಸೂರಲ್ಲಿ 30 ಚಿಣ್ಣರರಿಗೆ ಕೋವ್ಯಾಕ್ಸಿನ್

    ಮೈಸೂರು: ನಗರದ ಚೆಲುವಾಂಬ ಆಸ್ಪತ್ರೆಯಲ್ಲಿ ಮಕ್ಕಳ ಮೇಲೆ ಕೋವ್ಯಾಕ್ಸಿನ್ ಮೊದಲ ಡೋಸ್ ಪ್ರಯೋಗವಾಗಿದ್ದು, ಮೊದಲ ಹಂತದಲ್ಲಿ 30 ಮಕ್ಕಳ ಮೇಲೆ ಪ್ರಯೋಗ ಮಾಡಲಾಗಿದೆ.

    ವ್ಯಾಕ್ಸಿನ್ ಪಡೆದು 6 ದಿನಗಳಿಂದ ಮಕ್ಕಳು ಆರೋಗ್ಯವಾಗಿದ್ದಾರೆ. 30 ಮಕ್ಕಳಲ್ಲಿ ಇಬ್ಬರಿಗೆ ಜ್ವರ ಬಂದಿದ್ದು, ಕೆಲವರಿಗೆ ಸೂಜಿ ಚುಚ್ಚಿದ ಜಾಗದಲ್ಲಿ ಮಾತ್ರ ಸ್ವಲ್ಪ ನೋವಾಗಿದೆ. ವಯಸ್ಕರಿಗೆ ಕೊಟ್ಟ ಪ್ರಮಾಣದಲ್ಲಿಯೇ ಮಕ್ಕಳಿಗೂ ಡೋಸ್ ನೀಡಲಾಗಿದೆ. ವೈದ್ಯರು ಪ್ರತಿ ದಿನ ಫೋನ್ ಮಾಡಿ ಮಕ್ಕಳ ಆರೋಗ್ಯ ವಿಚಾರಿಸುತ್ತಿದ್ದಾರೆ. ಒಂದು ತಿಂಗಳ ನಂತರ ವ್ಯಾಕ್ಸಿನ್ ಪಡೆದ ಮಕ್ಕಳ ರಕ್ತದ ಮಾದರಿ ಸಂಗ್ರಹ ಮಾಡಿ, ಮಕ್ಕಳ ದೇಹದ ಮೇಲೆ ವ್ಯಾಕ್ಸಿನ್ ಪರಿಣಾಮದ ಬಗ್ಗೆ ಟೆಸ್ಟ್ ಮಾಡಲಾಗುತ್ತದೆ.

    ಈ ವರದಿ ಬಂದ ಬಳಿಕ ಎರಡನೇ ಡೋಸ್ ಲಸಿಕೆ ನೀಡಲಾಗುತ್ತದೆ. ರಾಜ್ಯದಲ್ಲಿ 175 ಮಕ್ಕಳ ಮೇಲೆ ಪ್ರಯೋಗ ನಡೆದಿದೆ. ನಂತರದ ದಿನಗಳಲ್ಲಿ 6 ರಿಂದ 12 ಹಾಗೂ 2 ರಿಂದ 6 ವಯಸ್ಸಿನ ಮಕ್ಕಳ ಮೇಲೆ ಪ್ರಯೋಗವಾಗಲಿದೆ. ಸುಮಾರು 7 ತಿಂಗಳ ಕಾಲ ಪ್ರಯೋಗ ನಡೆಯಲಿದ್ದು, ನಂತರ ಎಲ್ಲ ಮಕ್ಕಳಿಗೆ ವ್ಯಾಕ್ಸಿನ್ ನೀಡಲು ಆರಂಭಿಸುವ ಸಾಧ್ಯತೆ ಇದೆ. ಚೆಲುವಾಂಬ ಆಸ್ಪತ್ರೆಯ ಡಾ.ಪ್ರದೀಪ್ ಹಾಗೂ ಡಾ.ಪ್ರಶಾಂತ್ ರಿಂದ ಮಕ್ಕಳ ವ್ಯಾಕ್ಸಿನ್ ಬಳಕೆಯಾಗಿದೆ. ರಾಜ್ಯದಲ್ಲಿ ಏಕೈಕ ಆಸ್ಪತ್ರೆಯಲ್ಲಿ ಮಕ್ಕಳ ಮೇಲೆ ವಾಕ್ಸಿನ್ ಪ್ರಯೋಗವಾಗಿದ್ದು, ದೇಶದಲ್ಲಿ ಒಟ್ಟು 10 ಆಸ್ಪತ್ರೆಯಲ್ಲಿ ಮಕ್ಕಳ ಮೇಲೆ ಪ್ರಯೋಗವಾಗಿದೆ.