ಕಲಬುರಗಿ: ಕಳೆದ ಒಂದು ತಿಂಗಳಿನಿಂದ ಇಂದಿನವರೆಗೂ ವಿದೇಶದಿಂದ ಜಿಲ್ಲೆಗೆ ವಾಪಸ್ಸಾದ ನಾಗರಿಕರು ಸ್ವಯಂಪ್ರೇರಿತರಾಗಿ ಕಲಬುರಗಿ ಇ.ಎಸ್.ಐ.ಸಿ. ಆಸ್ಪತ್ರೆಗೆ ಬಂದು ಕೊರೋನಾ ವೈರಸ್ ತಪಾಸಣೆಗೆ ಒಳಪಡಬೇಕು ಎಂದು ಜಿಲ್ಲಾಧಿಕಾರಿ ಶರತ್ ಬಿ. ತಿಳಿಸಿದ್ದಾರೆ.
ಕೊರೊನಾ ವೈರಸ್ ಸೊಂಕು ಹೆಚ್ಚಾಗಿ ಹೊರದೇಶದಿಂದ ಬಂದವರಿಂದಲೆ ಕಂಡು ಬರುತ್ತಿದೆ. ಹೊರದೇಶದಿಂದ ಬಂದವರು ಮನೆಯಲ್ಲಿ ಗೌಪ್ಯವಾಗಿರಬಾರದು. ಕೂಡಲೇ ತಮ್ಮ ಪ್ರವಾಸದ ಇತಿಹಾಸದೊಂದಿಗೆ ಆಸ್ಪತ್ರೆಗೆ ತೆರಳಿ ತಪಾಸಣೆಗೊಳಪಡುವ ಮೂಲಕ ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕು. ಇಲ್ಲದಿದಲ್ಲಿ ಸರ್ಕಾರದಿಂದಲೇ ಹೊರದೇಶದಿಂದ ಮರಳಿದವರ ಪತ್ತೆ ಹಚ್ಚಿ ಸೂಕ್ತ ಕಾನೂನು ಕ್ರಮ ಕೈಗೊಳ್ಳವುದು ಅನಿವಾರ್ಯವಾಗುತ್ತದೆ ಎಂದು ಡಿ.ಸಿ ಶರತ್ ಬಿ. ಅವರು ಎಚ್ಚರಿಕೆ ನೀಡಿದ್ದಾರೆ.
ನೆರೆಯ ಮಹಾರಾಷ್ಟ್ರದಲ್ಲಿಯೂ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹಾಗಾಗಿ ಕಲಬುರಗಿಯಿಂದ ಮಹಾರಾಷ್ಟ್ರದ ವಿವಿಧ ಭಾಗಗಳಿಗೆ ಸಂಚರಿಸುತ್ತಿದ್ದ ಬಸ್ ಗಳನ್ನ ನಿಲ್ಲಿಸಲಾಗಿದೆ. ಇತ್ತ ಮಹಾರಾಷ್ಟ್ರದಿಂದ ಬರುವ ಬಸ್ ಸೇವೆಯನ್ನು ಸಹ ತಡೆಹಿಡಿಯಲಾಗಿದೆ. ಜಿಲ್ಲೆಯ ಬಾರ್, ಮಾಲ್, ಚಿತ್ರಮಂದಿರ ಸೇರಿದಂತೆ ಕಲ್ಯಾಣ ಮಂಟಪ ಬಂದ್ ಮಾಡಲು ಜಿಲ್ಲಾಡಳಿತ ಸೂಚಿಸಿದೆ.
ಬೆಂಗಳೂರು: ಕೊರೊನಾ ವೈರಸ್ ತನ್ನ ಕಬಂದ ಬಾಹುಗಳನ್ನ ಇಡೀ ವಿಶ್ವಕ್ಕೆ ಚಾಚುತ್ತಿದೆ. ಕ್ಷಣ ಕ್ಷಣಕ್ಕೂ ಈ ಮಾರಕ ವೈರಸ್ ಎಲ್ಲರನ್ನೂ ಆವರಿಸುತ್ತಿದೆ. ಇದರಿಂದ ತಮಗೂ ಅಪಾಯವಿದ್ದರೂ ಎಲ್ಲವನ್ನೂ ಮೀರಿ ವೈದ್ಯರು ಹಾಗೂ ಶುಶ್ರೂಶಕಿಯರು ಕೊರೊನಾ ವಿರುದ್ಧ ವಾರಿಯರ್ಸ್ ರೀತಿ ಫೈಟ್ ಮಾಡುತ್ತಿದ್ದಾರೆ. ಇವರುಗಳು ಇಂದಿನ ಪಬ್ಲಿಕ್ ಹೀರೋಗಳು.
ಬೌರಿಂಗ್ ಆಸ್ಪತ್ರೆಯಲ್ಲಿರುವ ಶುಶ್ರೂಶಕಿ ಜಯಶ್ರೀ ಇವತ್ತಿನ ನಮ್ಮ ರಿಯಲ್ ಹೀರೋ. ನರ್ಸಿಂಗ್ ಸೂಪರಿಡೆಂಟ್ ಆಗಿರುವ ಜಯಶ್ರೀಯವರು ಬೌರಿಂಗ್ ಆಸ್ಪತ್ರೆಯಲ್ಲಿ ಶಂಕಿತ ಕೊರೊನಾ ರೋಗಿಗಳ ಚಿಕಿತ್ಸೆಯಲ್ಲಿ ತೊಡಗಿದ್ದಾರೆ. ಮಾರ್ಚ್ 5 ನೇ ತಾರೀಖು ಕೊರೊನಾ ಶಂಕಿತರು ಮೊದಲು ಬಂದಿದ್ದು, ಎರಡು ದಿನಗಳಿಂದ ಶಂಕಿತ ರೋಗಿಗಳ ಸಂಖ್ಯೆ ಹೆಚ್ಚಿದೆ. ಇದರಿಂದ ವೈದ್ಯಕೀಯ ಸಿಬ್ಬಂದಿ ಕೆಲಸದ ಸಮಯ ಹೆಚ್ಚಾಗಿದೆ. ನರ್ಸಿಂಗ್ ಸೂಪರಿಡೆಂಟ್ ಜಯಶ್ರೀಯವರು ಬೌರಿಂಗ್ ಆಸ್ಪತ್ರೆಯಲ್ಲಿ ಸತತ 36 ವರ್ಷಗಳಿಂದ ಶುಶ್ರೂಶಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಹಿಂದೆ ಈ ಕೊರೊನಾ ತರಹದ ಡೇಂಜರಸ್ ಕಾಯಿಲೆ ಬಂದಿದ್ದ ಎಚ್1 ಎನ್1 ಸ್ವಲ್ಪ ಮಟ್ಟಿಗೆ ತೀವ್ರತೆ ಇತ್ತು. ಅದರೆ ಈ ಕೊರೊನಾದ ತೀವ್ರತೆ ತುಂಬಾ ಹೆಚ್ಚಾಗಿದೆ ಎಂದು ಜಯಶ್ರೀ ಅವರು ಹೇಳುತ್ತಾರೆ.
ಕೊರೊನಾ ಬಂತು ಅಂತ ಪೇಷೆಂಟ್ ನ ಬಿಡೋಕೆ ಆಗಲ್ಲ. ನಮಗೆ ಕೊರೊನಾ ಅಂತ ನೋಡೋಕ್ಕಿಂತ ರೋಗಿ ಎಂಬ ದೃಷ್ಟಿಯಲ್ಲಿ ನೋಡುತ್ತೇವೆ. ನಮ್ಮ ಉದ್ದೇಶ ಗುಣಪಡಿಸೋದಷ್ಟೇ ಆಗಿರುತ್ತೆ. ಬೇರೆ ರೋಗಿಗಳಾದರೆ ಓಡಾಡಬಹುದು. ಅದರೆ ಈ ಕೊರೊನಾ ಶಂಕಿತರು ಒಂದೇ ಕೊಠಡಿಯಲ್ಲಿ, ಐಸೋಲೇಷನ್ ಅಲ್ಲೇ ಇರಬೇಕು. ಈ ಕೊರೊನಾ ಎಲ್ಲರಿಗೂ ಹರಡುತ್ತೆ, ನಮ್ಮ ಸುರಕ್ಷತೆಯಲ್ಲಿ ನಾವು ಇರಬೇಕು. ಜೊತೆಗೆ ನಮ್ಮ ರೋಗಿಯ ಸುರಕ್ಷತೆಯೂ ಮುಖ್ಯ ಎಂಬುವುದು ಜಯಶ್ರೀಯವರ ಮಾತು.
ಒಟ್ಟಾರೆ ತಮ್ಮನ್ನು ತಾವು ರಕ್ಷಿಸಿಕೊಳ್ಳುತ್ತಾ, ಕೊರೊನಾ ಸೋಂಕಿತರನ್ನ ಹಗಲು ರಾತ್ರಿಯೆನ್ನದೇ ರಕ್ಷಣೆಯಲ್ಲಿ ತೊಡಗಿರುವ ಶುಶ್ರೂಶಕಿ ಜಯಶ್ರೀಯವರು ಇಂದಿನ ನಮ್ಮ ರಿಯಲ್ ಹೀರೋ.
ನವದೆಹಲಿ: ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಯೋಧನಿಗೆ ಕೊರೊನಾ ವೈರಸ್ ತಗುಲಿರೋದು ದೃಢಪಟ್ಟಿದೆ. ಲೇಹ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಯೋಧನಲ್ಲಿ ಕೊರೊನಾ ಲಕ್ಷಣಗಳು ಕಾಣಿಸಿಕೊಂಡಿದ್ದವು.
ಕೂಡಲೇ ಯೋಧನನ್ನು ಪರೀಕ್ಷೆಗೆ ಒಳಪಡಿಸಿ ಗಂಟಲಿನ ದ್ರವವನ್ನು ಪ್ರಯೋಗಾಲಯಕ್ಕೆ ಕಳಿಸಲಾಗಿತ್ತು. ಪ್ರಯೋಗಾಲಯದ ವರದಿ ಪಾಸಿಟಿವ್ ಬಂದಿದೆ. ಸೈನಿಕನ ತಂದೆ ಫೆಬ್ರವರಿ 25 ರಿಂದ ಮಾರ್ಚ್ 1ರವರೆಗೆ ಇರಾನ್ ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡಿ ಹಿಂದಿರುಗಿದ್ದರು. ತಂದೆಯಿಂದಲೇ ಯೋಧನಿಗೆ ಕೊರೊನಾ ತಗುಲಿದರ ಬಗ್ಗೆ ವರದಿಯಾಗಿವೆ.
ದೇಶದಲ್ಲಿ ಈಗಾಗಲೇ ಕೊರೊನಾದಿಂದಾಗಿ ಮೂವರು ಸಾವನ್ನಪ್ಪಿದ್ದಾರೆ. 137 ಮಂದಿಗೆ ಕೊರೊನಾ ಸೋಂಕು ತಗುಲಿರೋದು ದೃಢಪಟ್ಟಿದೆ. ಭಾರತ ಕೊರೊನಾ ಎರಡನೇ ಸ್ಟೇಜ್ ನಲ್ಲಿದೆ ಎಂದು ಐಸಿಎಂಆರ್ ಸ್ಪಷ್ಟಪಡಿಸಿದೆ. ಕೊರೊನಾ ತಡೆಗಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರ ಟೊಂಕ ಕಟ್ಟಿ ನಿಂತು ಕೆಲಸ ಮಾಡುತ್ತಿವೆ.
ಬೆಂಗಳೂರು: ರಾಜ್ಯದಲ್ಲಿ ಮತ್ತೆರಡು ಕೊರೊನಾ ಸೋಂಕು ಪ್ರಕರಣಗಳು ಪತ್ತೆಯಾಗಿವೆ. ಇಬ್ಬರು ಸೇರಿದಂತೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 10ಕ್ಕೆ ಏರಿಕೆಯಾಗಿದೆ. ಈ ಕುರಿತು ಟ್ವೀಟ್ ಮೂಲಕ ಆರೋಗ್ಯ ಸಚಿವ ಶ್ರೀರಾಮುಲು ಮಾಹಿತಿ ನೀಡಿದ್ದಾರೆ.
ರಾಜ್ಯದಲ್ಲಿ ಮತ್ತೆರಡು ಕೋವಿಡ್- 19 ಪ್ರಕರಣಗಳು ದೃಢಪಟ್ಟಿದ್ದು, ಒಟ್ಟಾರೆಯಾಗಿ ಸೋಂಕಿತರ ಸಂಖ್ಯೆ ಹತ್ತಕ್ಕೆರಿದೆ. ಬೆಂಗಳೂರಿನಲ್ಲಿ ಯುಕೆ ಪ್ರವಾಸದಿಂದ ಹಿಂದಿರುಗಿದ ವ್ಯಕ್ತಿಯೊಬ್ಬರಿಗೆ ಹಾಗೂ ಕಲಬುರಗಿಯಲ್ಲಿ (ಈ ಮೊದಲೇ ಸೋಂಕಿನಿಂದ ಮೃತಪಟ್ಟ ವ್ಯಕ್ತಿಯ ಸಂಪರ್ಕದಲ್ಲಿದ) 60 ವರ್ಷದ ವ್ಯಕ್ತಿಯೊಬ್ಬರಿಗೆ ಸೋಂಕು ದೃಢಪಟ್ಟಿದೆ. ಇವರಿಬ್ಬರು ಈಗಾಗಲೇ ಪ್ರತ್ಯೇಕಿಸಲ್ಪಟ್ಟ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದರಿಂದ, ಶೀಘ್ರ ಗುಣಮುಖರಾಗಲಿದ್ದಾರೆ ಎಂದು ವಿಶ್ವಾಸ ಹೊಂದಿದ್ದೇನೆ ಎಂದು ಶ್ರೀರಾಮುಲು ತಿಳಿಸಿದ್ದಾರೆ.
ರಾಜ್ಯದಲ್ಲಿ ಮತ್ತೆರಡು #COVID19 ಪ್ರಕರಣಗಳು ದೃಢಪಟ್ಟಿದ್ದು, ಒಟ್ಟಾರೆಯಾಗಿ ಸೋಂಕಿತರ ಸಂಖ್ಯೆ ಹತ್ತಕ್ಕೆರಿದೆ. ಬೆಂಗಳೂರಿನಲ್ಲಿ UK ಪ್ರವಾಸದಿಂದ ಹಿಂದಿರುಗಿದ ವ್ಯಕ್ತಿಯೊಬ್ಬರಿಗೆ ಹಾಗೂ ಗುಲ್ಬರ್ಗದಲ್ಲಿ (ಈ ಮೊದಲೇ ಸೋಂಕಿನಿಂದ ಮೃತಪಟ್ಟ ವ್ಯಕ್ತಿಯ ಸಂಪರ್ಕದಲ್ಲಿದ) 60 ವರ್ಷದ ವ್ಯಕ್ತಿಯೊಬ್ಬರಿಗೆ ಸೋಂಕು ದೃಢಪಟ್ಟಿದೆ.
ಸೋಮವಾರ ಸುದ್ದಿಗೋಷ್ಠಿ ನಡೆಸಿದ್ದ ವೈದ್ಯಕೀಯ ಸಚಿವ ಕೆ.ಸುಧಾಕರ್, ಅಮೆರಿಕದಿಂದ ಆಗಮಿಸಿದ ಟೆಕ್ಕಿಯ ಸಹೋದ್ಯೋಗಿಯಲ್ಲಿ ಕೊರೊನಾ ಇರುವುದು ಪತ್ತೆಯಾಗಿದೆ. ಶಂಕಿತ 244 ಮಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಹೆಚ್ಚಿನ ಮಾಹಿತಿಯನ್ನು ಮಂಗಳವಾರ ನೀಡಲಾಗುವುದು ಎಂದು ಹೇಳಿದ್ದರು.
ಇವರಿಬ್ಬರು ಈಗಾಗಲೇ ಪ್ರತ್ಯೇಕಿಸಲ್ಪಟ್ಟ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದರಿಂದ, ಶೀಘ್ರ ಗುಣಮುಖರಾಗಲಿದ್ದಾರೆ ಎಂದು ವಿಶ್ವಾಸ ಹೊಂದಿದ್ದೇನೆ.
10 ಮಂದಿ ಯಾರೆಲ್ಲ? 1. ಡೆಲ್ ಕಂಪನಿಯ ಟೆಕ್ಕಿ, ಆತನ ಪತ್ನಿ, ಮಗಳು 2. ಮೈಂಡ್ ಟ್ರೀ ಕಂಪನಿಯ ಟೆಕ್ಕಿ 3. ಕಲಬುರಗಿ ವ್ಯಕ್ತಿ(ಕೊರೊನಾದಿಂದ ನಿಧನ) 4. ಗೂಗಲ್ ಕಂಪನಿಯ ಟೆಕ್ಕಿ 5. ಕೊರೊನಾದಿಂದ ಮೃತಪಟ್ಟ ಕಲಬುರಗಿ ವ್ಯಕ್ತಿಯ ಮಗಳು 6. ಮೈಂಡ್ ಟ್ರೀ ಕಂಪನಿಯ ಟೆಕ್ಕಿ ಜೊತೆ ಪ್ರಯಾಣಿಸಿದ ಸಹೋದ್ಯೋಗಿ 7. ಯುಕೆ ಪ್ರವಾಸದಿಂದ ಹಿಂದಿರುಗಿದ ವ್ಯಕ್ತಿ 8. ಕೊರೊನಾದಿಂದ ಮೃತಪಟ್ಟ ಕಲಬುರಗಿ ವ್ಯಕ್ತಿಯ ಜೊತೆ ಸಂಪರ್ಕದಲ್ಲಿದ್ದ ವ್ಯಕ್ತಿ
Regret to confirm two more cases of COVID-19 in Karnataka. Two persons, one in Kalburgi and another in Bengaluru tested positive. Both patients are quarantined and treated at isolation facilities. Details will follow.
ಬೆಂಗಳೂರು: ವಿಶ್ವದಾದ್ಯಂತ ಹರಡಿರುವ ಡೆಡ್ಲಿ ಕೊರೊನಾ ನಿಯಂತ್ರಣಕ್ಕೆ ಅಗತ್ಯ ಕ್ರಮ ಸರ್ಕಾರ ತೆಗೆದುಕೊಂಡಿದೆ. ಇಡೀ ಕರುನಾಡಿನಲ್ಲಿ ಕೊರೊನಾಗೆ ನಿಯಂತ್ರಣಕ್ಕೆ ಅಗತ್ಯ ಕ್ರಮ ತೆಗೆದುಕೊಳ್ಳಲಾಗಿದೆ. ಯಾರು ಆತಂಕಕ್ಕೆ ಒಳಗಾಗೋದು ಬೇಡ ಅಂತ ಆರೋಗ್ಯ ಸಚಿವ ಶ್ರೀರಾಮುಲು ಜನರಲ್ಲಿ ಮನವಿ ಮಾಡಿದ್ದಾರೆ.
ನಿಯಮ 68 ರ ಅಡಿ ಸಾರ್ವಜನಿಕ ಮಹತ್ವದ ವಿಷಯಗಳ ಚರ್ಚೆಗೆ ವಿಧಾನ ಪರಿಷತ್ ನಲ್ಲಿ ಅವಕಾಶ ಕೊಡಲಾಗಿತ್ತು. ಮೇಲ್ಮನೆಯಲ್ಲಿ ಕೊರೊನಾ ಬಗ್ಗೆ ವಿಪಕ್ಷಗಳು ಸರ್ಕಾರವನ್ನ ತರಾಟೆಗೆ ತೆಗೆದುಕೊಂಡರು. ಸರ್ಕಾರ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳೊದರಲ್ಲಿ ವಿಫಲವಾಗಿದೆ. ಮಾಸ್ಕ್ ದರ ದುಪ್ಪಟ್ಟು ಆಗಿವೆ. ರಾಜ್ಯದಲ್ಲಿ ಲ್ಯಾಬ್ ಗಳ ಸಮಸ್ಯೆ ಇದೆ. ಮಾಲ್, ಸಿನಿಮಾ ನಿಲ್ಲಿಸಿದ ಕೂಡಲೇ ಕೊರೊನಾ ಕಡಿಮೆ ಆಗಲ್ಲ. ಅಗತ್ಯ ಮುಂಜಾಗ್ರತಾ ಕ್ರಮವನ್ನು ಸರ್ಕಾರ ತೆಗೆದುಕೊಳ್ಳಬೇಕು ಅಂತ ವಿಪಕ್ಷ ನಾಯಕ ಎಸ್.ಆರ್.ಪಾಟೀಲ್ ಹಾದಿಯಾಗಿ ವಿಪಕ್ಷ ಸದಸ್ಯರು ಸರ್ಕಾರವನ್ನ ತರಾಟೆಗೆ ತೆಗೆದುಕೊಂಡರು.
ವಿಪಕ್ಷಗಳ ಆರೋಪಕ್ಕೆ ಉತ್ತರ ನೀಡಿದ ಆರೋಗ್ಯ ಸಚಿವ ಶ್ರೀರಾಮುಲು, ಕೊರೊನಾ ನಿಯಂತ್ರಣಕ್ಕೆ ಅಗತ್ಯ ಕ್ರಮ ಸರ್ಕಾರ ಕೈಗೊಂಡಿದೆ. ಜನರು ಆತಂಕಕ್ಕೆ ಒಳಗಾಗೋದು ಬೇಡ ಅಂತ ಸಚಿವರು ಅಭಯ ನೀಡಿದ್ರು. ಏರ್ ಪೋರ್ಟ್, ಬಂದರು ಸೇರಿದಂತೆ ಅನೇಕ ಕಡೆ ವಿದೇಶದಿಂದ ಬಂದ 1.85 ಲಕ್ಷ ಜನರನ್ನ ಈಗಾಗಲೇ ತಪಾಸಣೆ ಮಾಡಲಾಗಿದೆ. ಎಲ್ಲರಿಗೂ ಥರ್ಮಲ್ ಸ್ಕ್ಯಾನ್ ಮೂಲಕ ತಪಾಸಣೆ ಮಾಡಲಾಗಿದೆ ಅಂತ ಸಚಿವರು ತಿಳಿಸಿದರು.
ಈಗಾಗಲೇ ಸುಮಾರು 600-700 ಜನರ ತಪಾಸಣೆ ಮಾಡಲಾಗಿದೆ. ಇದ್ರಲ್ಲಿ 609 ಜನರ ಮಾದರಿ ನೆಗೆಟಿವ್ ಬಂದಿದೆ ಅಂತ ತಿಳಿಸಿದರು. ಕಲಬುರಗಿಯಲ್ಲಿ ವ್ಯಕ್ತಿಯ ಸಾವು ನಮಗೂ ನೋವಾಗಿದೆ. ಮತ್ತೆ ಇಂತಹ ಪ್ರಕರಣ ಕರ್ನಾಟಕದಲ್ಲಿ ನಡೆಯದ ರೀತಿ ಅಗತ್ಯ ಕ್ರಮವಹಿಸೋದಾಗಿ ಸಚಿವರು ತಿಳಿಸಿದರು. ರಾಜ್ಯದಲ್ಲಿ ಕೊರೊನಾ ನಿಯಂತ್ರಣಕ್ಕಾಗಿ ನಿಗಾ ವಹಿಸುವ ದೃಷ್ಟಿಯಿಂದ 3 ಸಾವಿರ ಬೆಡ್ ಈಗಾಗಲೇ ಸಿದ್ಧತೆ ಮಾಡಿಕೊಳ್ಳಲಾಗಿದೆ. ನಾಳೆ ಮಂಗಳೂರು ಮತ್ತು ಬೆಳಗಾವಿಗೆ ತೆರಳಿ ಮುಂಜಾಗ್ರತಾ ಕ್ರಮದ ಬಗ್ಗೆ ಪರಿಶೀಲನೆ ಮಾಡೋದಾಗಿ ತಿಳಿಸಿದರು. ಸರ್ಕಾರಕ್ಕೆ ಯಾವುದೇ ಹಣಕಾಸಿನ ತೊಂದರೆಯಿಲ್ಲ. ಈಗಾಗಲೇ ಸಿಎಂ ಯಡಿಯೂರಪ್ಪ 36 ಕೋಟಿ ರೂ. ಹಣ ಬಿಡುಗಡೆ ಮಾಡಿದ್ದಾರೆ ಅಂತ ತಿಳಿಸಿದರು.
ಕೊರೊನಾ ವೈರಸ್ ಹರಡದಂತೆ ಎಚ್ಚರವಹಿಸಲಾಗಿದೆ. ಈಗಾಗಲೇ ಕೆಲ ಜಿಲ್ಲೆಗಳಲ್ಲಿ ಲ್ಯಾಬ್ ನಿರ್ಮಾಣ ಮಾಡಲಾಗಿದೆ. ಆದಷ್ಟು ಬೇಗ ಎಲ್ಲಾ ಜಿಲ್ಲೆಯಲ್ಲೂ ಲ್ಯಾಬ್ ನಿರ್ಮಾಣ ಮಾಡೋದಾಗಿ ತಿಳಿಸಿದರು. ಇನ್ನು ದುಬಾರಿ ಮಾಸ್ಕ್ ಬಗ್ಗೆ ಮಾತನಾಡಿದ ಅವ್ರು, 3 ತಿಂಗಳಿಗೆ ಆಗುವಷ್ಟು ಮಾಸ್ಕ್ ನಮ್ಮ ಬಳಿ ಇವೆ. ಜನರಿಕ್ ಔಷಧ ಮಳಿಗೆಯಲ್ಲಿ ಮಾಸ್ಕ್ ಲಭ್ಯವಿದೆ. ದುಬಾರಿ ಶುಲ್ಕ ತೆಗೆದುಕೊಂಡ್ರೆ ಕ್ರಮ ತೆಗೆದುಕೊಳ್ಳೋದಾಗಿ ತಿಳಿಸಿದರು. ಇನ್ನು ವಿದೇಶದಲ್ಲಿ ಇರುವ ವಿದ್ಯಾರ್ಥಿಗಳನ್ನ ವಾಪಸ್ ಕರೆಸಲು ಸರ್ಕಾರ ಕ್ರಮ ಕೈಗೊಂಡಿದೆ ಅಂತ ತಿಳಿಸಿದರು.