Tag: ಕೊರೊನಾ ವಾರ್ಡ್

  • ವರನಿಗೆ ಕೊರೊನಾ ಸೋಂಕು- ಆಸ್ಪತ್ರೆ ವಾರ್ಡ್‍ನಲ್ಲೇ ವಿವಾಹವಾದ ಜೋಡಿ

    ವರನಿಗೆ ಕೊರೊನಾ ಸೋಂಕು- ಆಸ್ಪತ್ರೆ ವಾರ್ಡ್‍ನಲ್ಲೇ ವಿವಾಹವಾದ ಜೋಡಿ

    – ರಂಗು ರಂಗಿನ ಸೀರೆ, ಆಭರಣಗಳ ಬದಲು ಪಿಪಿಇ ಕಿಟ್ ಧರಿಸಿದ ವಧು
    – ಸೋಂಕಿತರು, ಆಸ್ಪತ್ರೆ ಸಿಬ್ಬಂದಿಗೆ ವಿವಾಹ ಭೋಜನ

    ತಿರುವನಂತಪುರಂ: ದೇಶಾದ್ಯಂತ ಕೊರೊನಾ ಪ್ರಕರಣಗಳು ಭಾರೀ ಪ್ರಮಾಣದಲ್ಲಿ ಹೆಚ್ಚುತ್ತಿದ್ದು, ಇದರ ನಡುವೆಯೇ ಹಲವರು ಸರಳವಾಗಿ ವಿವಾಹವಾಗುತ್ತಿದ್ದಾರೆ. ಆದರೆ ಕೇರಳದಲ್ಲಿ ಜೋಡಿಯೊಂದು ಕೊರೊನಾ ವಾರ್ಡ್ ನಲ್ಲೇ ಮದುವೆಯಾಗುವ ಮೂಲಕ ಗಮನಸೆಳೆದಿದೆ.

    ಕೇರಳದ ಆಲಪ್ಪುಳ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆ ವಿಭಿನ್ನ ವಿವಾಹಕ್ಕೆ ಸಾಕ್ಷಿಯಾಗಿದ್ದು, ಜೋಡಿಯೊಂದು ಕೊರೊನಾ ಸೋಂಕಿತರು ಹಾಗೂ ಆಸ್ಪತ್ರೆ ಸಿಬ್ಬಂದಿ ಮಧ್ಯೆ ಕೊರೊನಾ ವಾರ್ಡ್‍ನಲ್ಲೇ ವಿವಾಹವಾಗಿದೆ. ವಧು ವಿವಾಹದ ಸಂಭ್ರದಲ್ಲಿ ರಂಗು ರಂಗಿನ ಸೀರೆ, ಒಡವೆ ಸೇರಿದಂತೆ ವಿವಿಧ ರೀತಿಯ ಅಲಂಕಾರದ ಬದಲು ಪಿಪಿಇ ಕಿಟ್ ಧರಿಸಿ ವಿವಾಹ ಜೀವನಕ್ಕೆ ಕಾಲಿಸಿದ್ದಾರೆ.

    ಶರತ್ ಮೋನ್ ಎಸ್ ಹಾಗೂ ಅಭಿರಾಮಿ ಅವರ ವಿವಾಹ ಏಪ್ರಿಲ್ 25ಕ್ಕೆ ಫಿಕ್ಸ್ ಆಗಿತ್ತು. ಎರಡೂ ಕಡೆಯ ಕುಟುಂಬಸ್ಥರು ವಿವಾಹದ ಸಿದ್ಧತೆಯಲ್ಲಿ ಫುಲ್ ಬ್ಯುಸಿಯಾಗಿದ್ದರು. ಈ ಸಂದರ್ಭದಲ್ಲಿ ಆಲಪ್ಪುಳ ಜಿಲ್ಲೆಯ ಓಣಂಪಲ್ಲಿಯ ವರ ಶರತ್ ಹಾಗೂ ಅವರ ತಾಯಿ ಜಿಜಿ ಶಶಿಧರನ್ ಅವರಿಗೆ ಕೊರೊನಾ ಸೋಂಕು ತಗುಲಿತು. ಆದ್ದರಿಂದ ಶರತ್ ಅವರೊಂದಿಗೆ ತಾಯಿ ಸಹ ಆಸ್ಪತ್ರೆಗೆ ದಾಖಲಾದರು. ಇಂತಹ ಕಠಿಣ ಪರಿಸ್ಥಿತಿಯಲ್ಲಿ ನಿಶ್ಚಯವಾದ ದಿನಾಂಕದಂದೇ ವಿವಾಹವಾಗಲು ಜೋಡಿ ನಿರ್ಧರಿಸಿದ್ದು, ಏಪ್ರಿಲ್ 25ರಂದು ಎಲ್ಲ ಕೊರೊನಾ ನಿಯಮಗಳನ್ನು ಪಾಲಿಸುವ ಮೂಲಕವೇ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

    ವಧು ಅಭಿರಾಮಿ ಅವರು ಆಲಪ್ಪುಳದ ವಡಕ್ಕನಾರ್ಯಡ್ ನವರಾಗಿದ್ದು, ವಿವಾಹವಾಗಲು ರಂಗು ರಂಗಿನ ಸೀರೆ, ಒಡವೆಯ ಬದಲು ಕೇವಲ ಒಂದು ಜೊತೆ ಲಿವಿಯೊಲೆ ಮಾತ್ರ ಹಾಕಿಕೊಂಡು, ಪಿಪಿಇ ಕಿಟ್ ಧರಿಸಿ ಫುಲ್ ಪ್ಯಾಕ್ ಆಗಿ ಆಸ್ಪತ್ರೆಗೆ ತೆರಳಿದ್ದು, ವರ ಶರತ್ ಸಹ ಒಂದು ನೀಲಿ ಅಂಗಿ ಹಾಗೂ ಬಿಳಿ ಲುಂಗಿ ಮೇಲೆಯೇ ವಿವಾಹವಾಗಿದ್ದಾರೆ. ಶರತ್ ಅವರ ತಾಯಿಯ ಸಮ್ಮುಖದಲ್ಲಿ ಹಾರ ಬದಲಿಸಿಕೊಂಡು ವಿವಾಹ ಜೀವನಕ್ಕೆ ಕಾಲಿಟ್ಟಿದ್ದಾರೆ.

    ಶರತ್ ಕತಾರ್‍ನಲ್ಲಿ ಕೆಲಸ ಮಾಡುತ್ತಿದ್ದು, ಕಳೆದ ವರ್ಷ ಸಹ ಅವರು ಕತಾರ್‍ನಿಂದ ಸಮಯಕ್ಕೆ ಸರಿಯಾಗಿ ಮರಳದ ಕಾರಣ ವಿವಾಹವನ್ನು ಮುಂದೂಡಲಾಗಿತ್ತು. ಹೀಗಾಗಿ ಎರಡನೇ ಬಾರಿಯೂ ವಿವಾಹವನ್ನು ಮುಂದೂಡುವುದು ಬೇಡ ಎಂದು ಕುಟುಂಬದವರು ನಿರ್ಧರಿಸಿ ವರನಿಗೆ ಕೊರೊನಾ ಸೋಂಕು ತಗಲಿದರೂ ಆಸ್ಪತ್ರೆಯಲ್ಲೇ ಮದುವೆ ಮಾಡಿಸಿದ್ದಾರೆ. ಹಿಂದೆಯೇ ಗುರುತಿಸಿದಂತೆ ಭಾನುವಾರ ಒಳ್ಳೆಯ ಮುಹೂರ್ತಕ್ಕೆ ತಾಳಿ ಕಟ್ಟಿಸಿದ್ದಾರೆ. ಮತ್ತೆ ಮುಂದೂಡಿದರೆ ತಡವಾಗುತ್ತದೆ ಎಂಬ ಆತಂಕದಿಂದ ಇದೇ ಮುಹೂರ್ತದಲ್ಲಿ ವಿವಾಹ ಮಾಡಲು ನಿರ್ಧರಿಸಿದೆವು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

    ಶರತ್ ಅವರು ಮಾರ್ಚ್ 22ರಂದು ಕತಾರ್‍ನಿಂದ ಕೇರಳಕ್ಕೆ ಹಿಂದಿರುಗಿದ್ದು, 10 ದಿನಗಳ ಹೋಮ್ ಕ್ವಾರಂಟೈನ್ ಬಳಿಕ ಸಹ ಅವರ ವರದಿ ನೆಗೆಟಿವ್ ಬಂದಿತ್ತು. ಬಳಿಕ ಏಪ್ರಿಲ್ 21ರಂದು ವಿವಾಹಕ್ಕಾಗಿ ಎಲ್ಲ ತಯಾರಿ ಮಾಡಿಕೊಂಡ ಬಳಿಕ ಶರತ್ ಹಾಗೂ ಅವರ ತಾಯಿ ಜಿಜಿಯವರಿಗೆ ಉಸಿರಾಟದ ಸಮಸ್ಯೆ ಕಾಡಿದೆ. ಬಳಿಕ ಟೆಸ್ಟ್ ಮಾಡಿಸಿದಾಗ ಕೊರೊನಾ ಪಾಸಿಟಿವ್ ಬಂದಿದೆ. ಹೀಗಾಗಿ ಆಲಪ್ಪುಳ ಮೆಡಿಕಲ್ ಕಾಲೇಜ್ ಹಾಗೂ ಆಸ್ಪತ್ರೆಗೆ ದಾಖಲಿಸಲಾಗಿದೆ. ವರದಿಗಳ ಪ್ರಕಾರ ಶರತ್ ಅವರಿಗೆ ಬೇರೆ ಯಾವುದೇ ತೊಂದರೆ ಇಲ್ಲ, ಗುಣಮುಖರಾದ ಬಳಿಕ ಒಂದು ವಾರದ ನಂತರ ಡಿಸ್ಚಾರ್ಜ್ ಆಗಲಿದ್ದಾರೆ ಎನ್ನಲಾಗಿದೆ.

    ವರ, ವಧುವಿನ ಜೊತೆಗೆ ಜಿಜಿ ಹಾಗೂ ಅಭಿರಾಮಿ ಅವರ ಚಿಕ್ಕಪ್ಪ ಆಸ್ಪತ್ರೆ ವಾರ್ಡ್‍ನಲ್ಲಿ ನಡೆದ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಶರತ್ ಅವರ ತಂದೆ ಶಶಿಧರನ್ ಹಾಗೂ ಇಬ್ಬರು ಸಹೋದರಿಯರು ಹೋಮ್ ಕ್ವಾರಂಟೈನ್‍ನಲ್ಲಿದ್ದಾರೆ.

    ಈ ಕುರಿತು ಕುಟುಂಬಸ್ಥರು ಪ್ರತಿಕ್ರಿಯಿಸಿದ್ದು, ನಿಗದಿತ ದಿನಾಂಕದಂದು ವಿವಾಹ ನಡೆಸಲು ಎನ್‍ಸಿಪಿ ನಾಯಕ ಥಾಮಸ್ ಕೆ, ಆಲಪ್ಪುಳ ಡಿಸಿ ಎ ಎಲೆಕ್ಸಾಂಡರ್, ಎಂಸಿಎಚ್ ಸುಪರಿಂಟೆಂಡೆಂಟ್ ಹಾಗೂ ಇತರರು ಸಹಾಯ ಮಾಡಿದ್ದಾರೆ ಎಂದು ತಿಳಿಸಿದರು.

    ಕುಟುಂಬಸ್ಥರು ವಾರ್ಡ್‍ನಲ್ಲಿನ ಎಲ್ಲ ಕೊರೊನಾ ಸೋಂಕಿತರು ಹಾಗೂ ಆಸ್ಪತ್ರೆ ಸಿಬ್ಬಂದಿಗೆ ವಿವಾಹದ ಭೋಜನವನ್ನು ಸಹ ಹಾಕಿಸಿದ್ದಾರೆ. ವಿವಾಹದ ಬಳಿಕ ವಧು ಅಭಿರಾಮಿ ಮನೆಗೆ ಹಿಂದಿರುಗಿದ್ದು, ಕುಟುಂಬದ ಯಾವುದೇ ಸದಸ್ಯರು ವಿವಾಹದಲ್ಲಿ ಭಾಗವಹಿಸದ ಕಾರಣ ಸ್ವಲ್ಪ ದುಃಖವಾಯಿತು, ಆದರೆ ಅದಕ್ಕಿಂತ ಹೆಚ್ಚಾಗಿ ಖುಷಿಯಾಗಿದ್ದೇನೆ ಎಂದು ತಿಳಿಸಿದ್ದಾರೆ.

  • ಮೆಗ್ಗಾನ್ ಆಸ್ಪತ್ರೆಯ ಕೊರೊನಾ ವಾರ್ಡ್‌ನಲ್ಲಿ ಕಾಣಿಸಿಕೊಂಡ ಹೊಗೆ

    ಮೆಗ್ಗಾನ್ ಆಸ್ಪತ್ರೆಯ ಕೊರೊನಾ ವಾರ್ಡ್‌ನಲ್ಲಿ ಕಾಣಿಸಿಕೊಂಡ ಹೊಗೆ

    – ರೋಗಿಗಳು ಇಲ್ಲದ್ದರಿಂದ ತಪ್ಪಿತು ಅನಾಹುತ

    ಶಿವಮೊಗ್ಗ: ನಗರದ ಮೆಗ್ಗಾನ್ ಭೋಧನಾ ಆಸ್ಪತ್ರೆಯ ಕೋವಿಡ್-19 ವಾರ್ಡ್ ನಲ್ಲಿ ಹೊಗೆ ಕಾಣಿಸಿಕೊಂಡ ಪರಿಣಾಮ ಕೆಲ ಕಾಲ ಆಸ್ಪತ್ರೆ ಆವರಣದಲ್ಲಿ ಆತಂಕ ಉಂಟಾಗಿತ್ತು.

    ಕೋವಿಡ್ ವಾರ್ಡ್ ಗೆ ಆಕ್ಸಿಜನ್ ಪೂರೈಕೆ ಮಾಡುವ ಹೆಚ್‍ಎಫ್‍ಎನ್‍ಸಿ ಯಂತ್ರ 24 ಗಂಟೆಗಳ ಕಾಲ ಸತತವಾಗಿ ಕಾರ್ಯ ನಿರ್ವಹಿಸುತ್ತದೆ. ಹೀಗಾಗಿ ಯಂತ್ರದಲ್ಲಿ ಹೆಚ್ಚು ಶಾಖ ಉಂಟಾದ ಪರಿಣಾಮ ಹೊಗೆ ಕಾಣಿಸಿಕೊಂಡಿದೆ ಎಂದು ಅಂದಾಜಿಸಲಾಗಿದೆ. ಆದರೆ ಈ ವೇಳೆ ವಾರ್ಡ್ ನಲ್ಲಿ ಯಾವುದೇ ರೋಗಿಗಳು ಇಲ್ಲದಿದ್ದ ಕಾರಣ ಯಾವುದೇ ಅನಾಹುತ ಸಂಭವಿಸಿಲ್ಲ.

    ಆತಂಕಪಡುವ ಅಗತ್ಯವಿಲ್ಲ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. ಇನ್ನು ಆಸ್ಪತ್ರೆಯಲ್ಲಿ ಹೊಗೆ ಕಾಣಿಸಿಕೊಂಡ ವಿಷಯ ತಿಳಿಯುತ್ತಿದ್ದಂತೆ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ವಾರ್ಡ್ ನಲ್ಲಿ ಆವರಿಸಿಕೊಂಡಿದ್ದ ಹೊಗೆಯನ್ನು ಮುಕ್ತಗೊಳಿಸಿದರು. ಇದೀಗ ಪರಿಣಿತರ ತಂಡ ಈ ಕುರಿತು ಪರಿಶೀಲನೆ ನಡೆಸುತ್ತಿದೆ.

  • ಆಸ್ಪತ್ರೆಯಿಂದ ಪರಾರಿಯಾದ ಸೋಂಕಿತ ಕಳ್ಳನನ್ನು 2ನೇ ಬಾರಿ ಬಂಧಿಸಿದ ಪೊಲೀಸರು

    ಆಸ್ಪತ್ರೆಯಿಂದ ಪರಾರಿಯಾದ ಸೋಂಕಿತ ಕಳ್ಳನನ್ನು 2ನೇ ಬಾರಿ ಬಂಧಿಸಿದ ಪೊಲೀಸರು

    ಕಾರವಾರ: ಕಾರವಾರ ನಗರದ ಮೆಡಿಕಲ್ ಕಾಲೇಜಿನ ಕೋವಿಡ್-19 ವಾರ್ಡಿನಿಂದ ತಪ್ಪಿಸಿಕೊಂಡಿದ್ದ ಕೊರೊನಾ ಸೋಂಕಿತ ಕಳ್ಳನನ್ನು ಕೊನೆಗೂ ಪೊಲೀಸರು 2ನೇ ಬಾರಿ ಬಂಧಿಸಿದ್ದಾರೆ.

    ಕಾರವಾರ ತಾಲೂಕಿನ ಶಿರವಾಡ ಬಳಿಯ ನಾರಗೇರಿ ಬಳಿ ಈತನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಶಿರಸಿಯಲ್ಲಿ ಬೈಕ್ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಧಾರವಾಡದಲ್ಲಿ ಕಳ್ಳನೋರ್ವನನ್ನು ಬಂಧಿಸಿದ್ದರು. ಅನಾರೋಗ್ಯ ಹಿನ್ನೆಲೆಯಲ್ಲಿ ಆತನ ಪರೀಕ್ಷೆ ನಡೆಸಿದಾಗ ಕೊರೊನಾ ಇರುವುದು ದೃಢಪಟ್ಟಿತ್ತು.

    ಕಳ್ಳನನ್ನ ಕೋವಿಡ್-19 ವಾರ್ಡಿಗೆ ದಾಖಲು ಮಾಡಲಾಗಿತ್ತು. ಕಳೆದ ಸೋಮವಾರ ವಾರ್ಡ್‍ನಲ್ಲಿದ್ದ ಸೋಂಕಿತರ ಇಬ್ಬರ ಮೊಬೈಲ್ ಕದ್ದು ಪರಾರಿಯಾಗಿದ್ದ ಕಳ್ಳನನ್ನು ತಾಲೂಕಿನ ಕದ್ರಾ ಬಳಿ ಬಂಧಿಸಿ ಮತ್ತೆ ಆಸ್ಪತ್ರೆಗೆ ದಾಖಲು ಮಾಡಿದ್ದರು. ಆದರೆ ನಿನ್ನೆ ರಾತ್ರಿ ಕಳ್ಳ ಮತ್ತೆ ಬಾಗಿಲು ಮುರಿದು ವಾರ್ಡಿನಿಂದ ತಪ್ಪಿಸಿಕೊಂಡು ನಗರದ ಜನತೆಯಲ್ಲಿ ಆತಂಕ ಸೃಷ್ಟಿಸಿದ್ದ. ಇದೀಗ ಪೊಲೀಸರು ಆತನನ್ನು ಬಂಧಿಸಿ ಕಾರವಾರದ ಮೆಡಿಕಲ್ ಕಾಲೇಜಿನ ಕೋವಿಡ್ ವಾರ್ಡಿಗೆ ಮರಳಿ ಕರೆತಂದಿದ್ದು ಹೆಚ್ಚಿನ ನಿಗಾ ವಹಿಸಿದ್ದಾರೆ.

  • ಉತ್ತರ ಕನ್ನಡ ಕೊರೊನಾ ಮುಕ್ತವಾದ ಕಥೆ ತಿಳಿಸಿದ ವೈದ್ಯಾಧಿಕಾರಿ ಶರತ್

    ಉತ್ತರ ಕನ್ನಡ ಕೊರೊನಾ ಮುಕ್ತವಾದ ಕಥೆ ತಿಳಿಸಿದ ವೈದ್ಯಾಧಿಕಾರಿ ಶರತ್

    ಕಾರವಾರ: ರೆಡ್ ಝೋನ್‍ನಲ್ಲಿ ಇದ್ದ ಉತ್ತರ ಕನ್ನಡ ಜಿಲ್ಲೆ ವೈದ್ಯಾಧಿಕಾರಿಗಳ ಹಾಗೂ ಜಿಲ್ಲಾಡಳಿತದ ಕಠಿಣ ಶ್ರಮದಿಂದ ಹಳದಿ ವಲಯಕ್ಕೆ ಬಂದಿದೆ.

    ಜೊತೆಗೆ ಸೋಂಕಿತ 11 ಜನರೂ ಗುಣಮುಖರಾಗುವಂತೆ ಶ್ರಮವಹಿಸಿ ಕಾರ್ಯನಿರ್ವಹಿದ ಕೊರೊನಾ ವಾರಿಯರ್ಸ್ ಉತ್ತರ ಕನ್ನಡ ಜಿಲ್ಲೆಯನ್ನು ಕೊರೊನಾ ಮುಕ್ತ ಜಿಲ್ಲೆಯನ್ನಾಗಿ ಮಾಡಿದ್ದಾರೆ. ಹಗಲಿರುಳೂ ಈ ಕಾಯಕದಲ್ಲಿ ಇರುವ ವೈದ್ಯಕೀಯ ಸಿಬ್ಬಂದಿಗಳು ಹೇಗೆ ಕಾರ್ಯ ನಿರ್ವಹಿಸುತ್ತಾರೆ ಮತ್ತು ಕೊರೊನಾ ಸೋಂಕಿತರ ಚಿಕಿತ್ಸೆ ಕುರಿತು ಕಾರವಾರದ ಕೊರೊನಾ ವಿಶೇಷ ವಾರ್ಡ್ ನಲ್ಲಿ ಕಾರ್ಯ ನಿರ್ವಹಿಸುವ ವೈದ್ಯಾಧಿಕಾರಿ ಶರತ್ ಅವರು ಪಬ್ಲಿಕ್ ಟಿ.ವಿಗೆ ವಿವರ ನೀಡಿದರು.

    ಶರತ್ ಅವರು ಹೇಳುವಂತೆ ಸೋಂಕಿತರನ್ನು ಮೂರು ವಿಭಾಗ ಮಾಡಿ ಚಿಕಿತ್ಸೆ ನೀಡಲಾಗುತ್ತದೆ. ತುಂಬ ಕ್ರಿಟಿಕಲ್ ಇರುವವರಿಗೆ ವೆಂಟಿಲೇಷನ್ ವ್ಯವಸ್ಥೆ ಕಲ್ಪಿಸಿ ತೀರ್ವ ನಿಗಾ ವಹಿಸಲಾಗುತ್ತದೆ. ಇಲ್ಲಿಗೆ ಬರುವ ಸೋಂಕಿತರ ಬಟ್ಟೆ ಸಹಿತ ಎಲ್ಲ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಚಿಕಿತ್ಸೆ ನೀಡುವ ವೈದ್ಯಕೀಯ ತಂಡ ಪಿಪಿಇ ಕಿಟ್ ಹಾಕಿಕೊಂಡು ಹೋಗುವುದು ಕಡ್ಡಾಯವಾಗಿದ್ದು, ಬರುವಾಗ ಪಿ.ಪಿ.ಇ ಕಿಟ್ ಅನ್ನು ಅಲ್ಲಿಯೇ ಬಿಟ್ಟು ಪ್ರತ್ಯೇಕ ಕೊಠಡಿಯಲ್ಲಿ ಸ್ನಾನ ಮಾಡಿ ಹೊರಬರಬೇಕು ಎಂದು ತಿಳಿಸಿದ್ದಾರೆ.

    ಪಿಪಿಇ ಕಿಟ್ ಇಲ್ಲದೇ ಯಾರೊಬ್ಬರಿಗೂ ಒಳ ಪ್ರವೇಶವಿರುವುದಿಲ್ಲ ಹಾಗೂ ವೈದ್ಯರನ್ನು ಸಹ ತಪಾಸಣೆ ಮಾಡಲಾಗುತ್ತದೆ ಎಂದು ತಮ್ಮ ಕಾರ್ಯದ ಬಗ್ಗೆ ಕೆಲವು ವಿಚಾರಗಳನ್ನು ಶರತ್ ಅವರು ಹಂಚಿಕೊಂಡಿದ್ದಾರೆ.

    ಈ ಕುರಿತು ಪಬ್ಲಿಕ್ ಟಿ.ವಿಯೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಡಾ.ಹರೀಶ್ ಕುಮಾರ್ ರವರು ಲಾಕ್ ಡೌನ್ ನಂತರ ವಿದೇಶದಿಂದ ಜಿಲ್ಲೆಗೆ ಬರುವ ಜನರನ್ನು ಕೊರಂಟೈನ್ ಮಾಡುವ ಜೊತೆ ಇವರ ಮೇಲೆ ನಿಗಾ ಇಡಲು ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಸಮುದಾಯ ಕಾರ್ಯಪಡೆ ಸ್ಥಾಪನೆ ಮಾಡಲಾಗುವುದು. ಇನ್ನು ಜಿಲ್ಲೆಯಲ್ಲಿ ಕೊರೊಟಿಂ ವಾರ್ಡ್ ಸಹ ನಿರ್ಮಿಸಲಾಗಿದ್ದು ಪ್ರಯೋಗಾಲಯ ಸಹ ಇನ್ನು 15 ದಿನದಲ್ಲಿ ನಿರ್ಮಾಣ ಮಾಡಲಾಗುವುದು. ಮುಂದಿನ ದಿನಗಳಲ್ಲಿ ಸಹ ಕೊರೊನಾ ವಿರುದ್ಧ ಹೋರಾಟಲು ಜಿಲ್ಲೆ ಸಮರ್ಥವಾಗಿದ್ದು ನುರಿತ ವೈದ್ಯರ ತಂಡ, ಪ್ರತ್ಯೇಕ ಆಸ್ಪತ್ರೆ, ಹೆಚ್ಚಿನ ಮೆಡಿಸಿನ್ಸ್ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದರು.

    ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜ್ ಮಾತನಾಡಿ, ಮೇ4 ರ ನಂತರ ಭಟ್ಕಳ ಹೊರತುಪಡಿಸಿ ಎಲ್ಲೆಡೆ ಲಾಕ್ ಡೌನ್ ಸಡಿಲಿಕೆ ಮಾಡಲಿದ್ದು ಭಟ್ಕಳದಲ್ಲಿ ಮೇ.15 ರ ವರೆಗೂ ಲಾಕ್‍ಡೌನ್ ಮುಂದುವರಿಯಲಿದ್ದು ಹಂತ ಹಂತವಾಗಿ ಸಡಿಲಿಕೆ ಮಾಡಲಾಗುವುದು. ಜಿಲ್ಲೆಯ ಗಡಿಭಾಗದಲ್ಲಿ ಚೆಕ್ ಪೋಸ್ಟ್ ನಿರ್ಮಿಸಲಾಗಿದ್ದು ಸೂಕ್ಷ್ಮ ಪ್ರದೇಶವಾದ ಭಟ್ಕಳದಲ್ಲಿ ಯಾರೂ ಹೊರ ಹೋಗದಂತೆ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದರು.