Tag: ಕೊರೊನಾ ವಾರಿಯರ್ಸ್

  • ಸೀಲ್‍ಡೌನ್‍ಗೆ ಒಪ್ಪದೇ ಕೊರೊನಾ ವಾರಿಯರ್ ಗಳನ್ನ ನಿಂದಿಸಿದ ಕುಟುಂಬ

    ಸೀಲ್‍ಡೌನ್‍ಗೆ ಒಪ್ಪದೇ ಕೊರೊನಾ ವಾರಿಯರ್ ಗಳನ್ನ ನಿಂದಿಸಿದ ಕುಟುಂಬ

    ಹಾಸನ: ಕೊರೊನಾ ವಾರಿಯರ್ ಗಳನ್ನ ಅಶ್ಲೀಲ ಪದಗಳಿಂದ ನಿಂದಿಸಿದ ಘಟನೆ ಜಿಲ್ಲೆಯ ಆಲೂರು ತಾಲೂಕಿನ ಗ್ರಾಮವೊಂದರಲ್ಲಿ ನಡೆದಿದೆ.

    ಅಶ್ಲೀಲವಾಗಿ ತಮ್ಮನ್ನು ನಿಂದಿಸಿದ ಕುಟುಂಬಸ್ಥರ ವಿರುದ್ಧ ವೈದ್ಯಕೀಯ ಸಿಬ್ಬಂದಿ ಆಕ್ರೋಶ ಹೊರ ಹಾಕಿದ್ದಾರೆ. ಆಲೂರು ತಾಲೂಕಿನ ಹಳ್ಳಿಯೊಂದರಲ್ಲಿ ವ್ಯಕ್ತಿಯೊಬ್ಬರಿಗೆ ಕೊರೊನ ಸೋಂಕು ದೃಢಪಟ್ಟಿತ್ತು. ಹೀಗಾಗಿ ಅವರ ಮನೆ ಸೀಲ್‍ಡೌನ್ ಮಾಡಲು ಅಧಿಕಾರಿಗಳು ತೆರಳಿದ್ದರು. ಆದ್ರೆ ಮನೆಯವರು ಒಂದು ವರದಿಯಲ್ಲಿ ನೆಗೆಟಿವ್ ಎಂದಿದೆ. ಮತ್ತೊಂದು ವರದಿಯಲ್ಲಿ ಪಾಸಿಟಿವ್ ಎಂದು ಬಂದಿದೆ ಎಂದು ವರದಿಯ ಬಗ್ಗೆಯೇ ಅನುಮಾನ ವ್ಯಕ್ತಪಡಿಸಿ ಸೀಲ್‍ಡೌನ್ ಮಾಡಲು ಒಪ್ಪಿಗೆ ನೀಡಲಿಲ್ಲ. ನಮ್ಮದು ರೈತಾಪಿ ಕುಟುಂಬ. ನೀವು ಸೀಲ್‍ಡೌನ್ ಮಾಡಿದ್ರೆ ದನಕರುಗಳ ಗತಿಯೇನು. ನಮ್ಮ ಜೀವನ ಹೇಗೆ ನಡೆಯಬೇಕು ಎಂದು ಆಕ್ರೋಶ ಹೊರಹಾಕಿದ್ದಾರೆ

    ತಹಶಿಲ್ದಾರ್, ಪೊಲೀಸ್, ವೈದ್ಯಾಧಿಕಾರಿಗಳು ಬಂದು ತಿಳಿ ಹೇಳಿದರೂ ಕುಟುಂಬಸ್ಥರು ಮಾತು ಕೇಳಿರಲಿಲ್ಲ. ನಿಮ್ಮ ನಡೆ ನುಡಿಯಲ್ಲಿ ಸಂಸ್ಕಾರ ಇರಬೇಕು. ನೀವು ನಮ್ಮನ್ನು ಅಶ್ಲೀಲವಾಗಿ ಬೈದಿರುವುದು ರೆಕಾರ್ಡ್ ಇದೆ. ನಿಮ್ಮ ವಿರುದ್ಧ ದೂರು ಕೊಟ್ಟರೆ ಏನಾಗುತ್ತೆ ಗೊತ್ತಾ. ಅಶ್ಲೀಲವಾಗಿ ಬೈದವನ ಕರೆತನ್ನಿ. ಅವನ ವಿರುದ್ಧ ದೂರು ದಾಖಲಿಸುತ್ತೇವೆ ಎಂದು ಎಚ್ಚರಿಸಿದ್ದಾರೆ.

    ವೈದ್ಯಾಧಿಕಾರಿಗಳು ತಿಳಿ ಹೇಳುವುದು, ಮನೆಯವರು ಆಕ್ರೋಶ ಹೊರಹಾಕುವ ವಿಡಿಯೋ ಸ್ಥಳೀಯರ ಮೊಬೈಲ್‍ನಲ್ಲಿ ಸೆರೆಯಾಗಿದ್ದು, ವೈರಲ್ ಆಗಿದೆ.

  • 74ನೇ ಸ್ವಾತಂತ್ರ್ಯೋತ್ಸವ – ಕೊರೊನಾ ವಾರಿಯರ್ಸ್‌ಗೆ ಸನ್ಮಾನ

    74ನೇ ಸ್ವಾತಂತ್ರ್ಯೋತ್ಸವ – ಕೊರೊನಾ ವಾರಿಯರ್ಸ್‌ಗೆ ಸನ್ಮಾನ

    ಉಡುಪಿ: 74ನೇ ಸ್ವಾತಂತ್ರ್ಯೋತ್ಸವನ್ನು ಜಿಲ್ಲೆಯಲ್ಲಿ ಸರಳವಾಗಿ ಆಚರಿಸಲಾಯಿತು. ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಗೈರಾಗಿದ್ದರಿಂದ ಜಿಲ್ಲಾಧಿಕಾರಿ ಜಿ.ಜಗದೀಶ್ ಜಿಲ್ಲಾ ಕ್ರೀಡಾಂಗಣದಲ್ಲಿ ತಿರಂಗವನ್ನು ಹಾರಿಸಿದರು.

    ಕೊರೊನಾ ಇರುವುದರಿಂದ ಪೊಲೀಸ್ ಅಧಿಕಾರಿಗಳ, ಅಗ್ನಿಶಾಮಕ ದಳದ ಪಥಸಂಚಲನ ಮಾತ್ರ ಇತ್ತು. ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮಗಳು, ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನ ಇರಲಿಲ್ಲ. ಸ್ವಾತಂತ್ರೋತ್ಸವದ ವೇದಿಕೆಯಲ್ಲಿ ಕೊರೊನಾ ವಾರಿಯರ್ಸ್‌ಗಳನ್ನು ಸನ್ಮಾನಿಸಲಾಯಿತು.

    ವೈದ್ಯರು, ನರ್ಸ್ , ಆಶಾ ಕಾರ್ಯಕರ್ತೆಯರನ್ನ ಉಡುಪಿ ಜಿಲ್ಲಾ ಆಡಳಿತದ ವತಿಯಿಂದ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಜಿ.ಜಗದೀಶ್, ಜಿಲ್ಲೆಯಲ್ಲಿ ಕೊರೊನಾ ತಡೆಹಿಡಿಯುವುದು ಇಂದಿಗೂ ಸವಾಲಾಗಿಯೇ ಇದೆ. ನಮ್ಮ ಜಿಲ್ಲೆಯ ಕೊರೊನಾ ವಾರಿಯರ್ಸ್‌ಗಳು ಹಗಲು ರಾತ್ರಿ ಎನ್ನದೆ ನಿರಂತರ ಕರ್ತವ್ಯ ನಿರ್ವಹಿಸಿದ್ದಾರೆ. ಹಲವಾರು ಬೇಡಿಕೆಗಳ ನಡುವೆಯೂ ಕೆಲಸ ಮಾಡಿದ್ದಾರೆ ಎಂದರು.

    ಕಾರ್ಯಕ್ರಮದಲ್ಲಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಉಡುಪಿ ಶಾಸಕ ಕೆ.ರಘುಪತಿ ಭಟ್, ಉಡುಪಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಘವೇಂದ್ರ ಕಿಣಿ, ತಾ.ಪಂ. ಅಧ್ಯಕ್ಷೆ ಸಂಧ್ಯಾ ಕಾಮತ್, ಜಿ.ಪಂ. ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪ್ರೀತಿ ಗೆಹ್ಲೋಟ್, ಎಸ್‍ಪಿ ಎನ್.ವಿಷ್ಣುವರ್ಧನ್, ಕರಾವಳಿ ಕಾವಲು ಪೊಲೀಸ್ ಎಸ್‍ಪಿ ಚೇತನ್ ವೇದಿಕೆಯಲ್ಲಿದ್ದರು.

  • 4 ಸಾವಿರ ಕೆಜಿ ಉಪ್ಪು, 250 ಕೆಜಿ ಬಣ್ಣ, 400 ಕೆಜಿ ಹೂವಿನಲ್ಲಿ ಅರಳಿತು ಧ್ವಜ

    4 ಸಾವಿರ ಕೆಜಿ ಉಪ್ಪು, 250 ಕೆಜಿ ಬಣ್ಣ, 400 ಕೆಜಿ ಹೂವಿನಲ್ಲಿ ಅರಳಿತು ಧ್ವಜ

    ಬೆಂಗಳೂರು: ಸಿಲಿಕಾನ್ ಸಿಟಿಯ ಹೆಸರಘಟ್ಟ ರಸ್ತೆಯಲ್ಲಿರುವ ಸಪ್ತಗಿರಿ ತಾಂತ್ರಿಕ ಮಹಾವಿದ್ಯಾಲಯ 74ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ “ತ್ರಿವರ್ಣೋತ್ಸವ” ವನ್ನು ಹಮ್ಮಿಕೊಂಡಿತ್ತು.

    ಸುಮಾರು 4,000 ಕೆ.ಜಿ. ಉಪ್ಪು, 250 ಕೆ.ಜಿ. ಬಣ್ಣ ಹಾಗೂ 400 ಕೆ.ಜಿ ಹೂಗಳನ್ನು ಬಳಸಿ ಮನೋಹರವಾದ ತ್ರಿವರ್ಣ ಧ್ವಜವನ್ನು ನಿರ್ಮಿಸಿದ್ದರು. ವಿಶೇಷ ಕಾರ್ಯಕ್ರಮವೊಂದನ್ನು ಆಯೋಜಿಸಿ ಕೊರೊನಾ ಸಂಕಷ್ಟಕ್ಕೆ ಸ್ಪಂದಿಸುತ್ತಿರುವ, ವೈದ್ಯರಾದ ಡಾ.ಉದಯಶಂಕರ್, ಡಾ.ಕಾರ್ತಿಕ್, ಡಾ.ಅನೂಷ, ಸ್ಟಾಫ್ ನರ್ಸ್ ನಾಗರಾಜ್, ಪೊಲೀಸರಾದ ಅರುಣ್ ಕುಮಾರ್ ಮತ್ತು ಲಕ್ಷಣ್ ಆಶಾ ಕಾರ್ಯಕರ್ತೆ ಮಂಜುಳಾ, ಬಿ.ಬಿ.ಎಂ.ಪಿ ನೌಕರರಾದ ರಮೇಶ್, ಅಂಬುಲೆನ್ಸ್ ಚಾಲಕರಾದ ಲೋಕೇಶ, ಶಿಕ್ಷಕರಾದ ಡಾ. ಎಂ ಧನಲಕ್ಷ್ಮೀ, ಪೌರಕಾರ್ಮಿಕರಾದ ಮಲ್ಲಪ್ಪ ಹಾಗೂ ಮಾಧ್ಯಮ ಮಿತ್ರರನ್ನು ಸನ್ಮಾನಿಸಲಾಯಿತು.

    ಸಾಮಾಜಿಕ ಅಂತರ ಹಾಗೂ ಕೊರೊನಾ ಸೋಂಕು ಹರಡದಂತೆ ಮುಂಜಾಗೃತಾ ಕ್ರಮ ಕೈಗೊಂಡು ಈ ಅದ್ಧೂರಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ವಿಶಿಷ್ಟ ಹಾಗೂ ವಿಶೇಷ ಕಾರ್ಯಕ್ರಮದಲ್ಲಿ ಸಿಬ್ಬಂದಿ ಹಾಗೂ ಕೆಲವು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಪ್ರತಿ ವರ್ಷದಂತೆ ಈ ವರ್ಷವೂ ವಿನೂತನ ಧ್ವಜವನ್ನು ನಿರ್ಮಿಸಿ ರಾಷ್ಟ್ರಪ್ರೇಮ ಮೆರೆದಿದ್ದಾರೆ. ಜೊತೆಗೆ ಮಾನವೀಯತೆಯ ಪ್ರತೀಕವಾಗಿ ಕೊರೊನಾ ವಾರಿಯರ್ಸ್‍ಗೆ ಸನ್ಮಾನಿಸಿದ್ದಾರೆ.

    ಕಾರ್ಯಕ್ರಮದಲ್ಲಿ ಸಂಸ್ಥೆಯ ಮುಖ್ಯಸ್ಥ ಜಿ. ದಯಾನಂದರವರು, ಕಾರ್ಯಕಾರಿ ನಿರ್ದೇಶಕ ಜಿ.ಡಿ ಮನೋಜ್, ಪ್ರಾಂಶುಪಾಲ ಡಾ.ಹೆಚ್ ರಾಮಕೃಷ್ಣ ಹಾಗೂ ಉಪಪ್ರಾಂಶುಪಾಲ ಡಾ.ಎಂ.ಹೆಚ್ ಅಣ್ಣಯ್ಯ ಉಪಸ್ಥಿತರಿದ್ದರು.

  • ಸುರಕ್ಷತೆಗೆ ಆಗ್ರಹಿಸಿ ರಾಯಚೂರಿನ ರಿಮ್ಸ್ ಕೋವಿಡ್ ವಾರಿಯರ್ಸ್ ಪ್ರತಿಭಟನೆ

    ಸುರಕ್ಷತೆಗೆ ಆಗ್ರಹಿಸಿ ರಾಯಚೂರಿನ ರಿಮ್ಸ್ ಕೋವಿಡ್ ವಾರಿಯರ್ಸ್ ಪ್ರತಿಭಟನೆ

    ರಾಯಚೂರು: ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ರಾಯಚೂರಿನ ರಿಮ್ಸ್ ಆಸ್ಪತ್ರೆ ಸಿಬ್ಬಂದಿ ಕಪ್ಪು ಬಟ್ಟೆ ಧರಸಿ ಪ್ರತಿಭಟನೆ ನಡೆಸಿದರು.

    ಕೊರೊನಾ ವಾರಿಯರ್ಸ್ ಗಳಾಗಿ ಕೆಲಸ ಮಾಡುತ್ತಿದ್ದೇವೆ. ಆದ್ರೆ ಯಾವುದೇ ಸುರಕ್ಷತೆಗಳನ್ನ ನೀಡುತ್ತಿಲ್ಲ. ನಮಗೆ ತೊಂದರೆಗಳಾದ್ರೆ ನಮ್ಮನ್ನ ನೋಡಿಕೊಳ್ಳುವವರ್ಯಾರು. ಕೋವಿಡ್ ಸೋಂಕಿತರನ್ನ ಆಸ್ಪತ್ರೆಯಲ್ಲಿ ಸೇರಿಸಿಕೊಳ್ಳುವುದೇ ಕಷ್ಟವಾಗಿದೆ. ಯಾಕಂದ್ರೆ ನಮಗೇ ಯಾವುದೇ ರೀತಿಯ ಸುರಕ್ಷತೆಗಳು ಇಲ್ಲ ಅಂತ ರಿಮ್ಸ್ ಸಿಬ್ಬಂದಿ ಅಳಲು ತೋಡಿಕೊಂಡಿದ್ದಾರೆ.

    ಆಸ್ಪತ್ರೆಗೆ ಬರುವ ರೋಗಿಗಳನ್ನ ನೊಂದಾಯಿಸಿಕೊಳ್ಳದೆ ಇರಲು ಆಗಲ್ಲ. ಆದ್ರೆ ಆಸ್ಪತ್ರೆಯಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಮೊದಲು ಆಡಳಿತ ಮಂಡಳಿ ರಕ್ಷಣೆ ನೀಡಬೇಕು ಅಂತ ಆಗ್ರಹಿಸಿದ್ದಾರೆ. 2006 ರಿಂದ ನೂತನ ಪಿಂಚಣಿ ಯೋಜನೆ ಸಹ ನಮಗೆ ಅನ್ವಯಿಸಿಲ್ಲ. ಸರ್ಕಾರ ನಮ್ಮ ಬೇಡಿಕೆಗಳನ್ನು ಪರಿಗಣಿಸದಿದ್ದರೆ, ಹೋರಾಟವನ್ನು ಚುರುಕುಗೊಳಿಸಬೇಕಾಗುತ್ತದೆ ಅಂತ ಪ್ರತಿಭಟನಾ ನಿರತರು ಎಚ್ಚರಿಕೆ ನೀಡಿದ್ದಾರೆ.

  • ಸೋಂಕಿಗೆ ಒಳಗಾಗಿ ಗುಣಮುಖ- ಮತ್ತೆ ಕರ್ತವ್ಯಕ್ಕೆ ಹಾಜರಾದ ಕೊರೊನಾ ವಾರಿಯರ್ಸ್

    ಸೋಂಕಿಗೆ ಒಳಗಾಗಿ ಗುಣಮುಖ- ಮತ್ತೆ ಕರ್ತವ್ಯಕ್ಕೆ ಹಾಜರಾದ ಕೊರೊನಾ ವಾರಿಯರ್ಸ್

    ಚಾಮರಾಜನಗರ: ಜಿಲ್ಲೆಯಲ್ಲಿ ಕೋವಿಡ್-19 ತಡೆ ಕರ್ತವ್ಯ ಸಂದರ್ಭದಲ್ಲಿ 100ಕ್ಕೂ ಹೆಚ್ಚು ಮಂದಿ ಕೊರೊನಾ ವಾರಿಯರ್ಸ್ ಗಳು ಕೋವಿಡ್ ಸೋಂಕಿಗೆ ಒಳಗಾಗಿ ಚಿಕಿತ್ಸೆ ಪಡೆದು ಗುಣಮುಖರಾದ ಬಳಿಕ ಇದೀಗ ಮತ್ತೆ ಕರ್ತವ್ಯಕ್ಕೆ ತೊಡಗಿಕೊಳ್ಳುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.

    ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣಕ್ಕಾಗಿ ಹಗಲಿರುಳು ಎನ್ನದೇ ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಪೌರಕಾರ್ಮಿಕರು, ವೈದ್ಯರು, ಆರೋಗ್ಯ, ಪೊಲೀಸ್, ಚೆಸ್ಕಾಂ ಹಾಗೂ ಕೆ.ಎಸ್.ಆರ್.ಟಿ.ಸಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿ, ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

    ಕೆಲಸದ ಸಂದರ್ಭದಲ್ಲಿ ಸಾರ್ವಜನಿಕವಾಗಿ ತೊಡಗಿಕೊಳ್ಳಬೇಕಾದ ಅನಿವಾರ್ಯತೆ ಅಧಿಕಾರಿ, ಸಿಬ್ಬಂದಿಗಿದೆ. ಪ್ರಸ್ತುತ ಎದುರಾಗಿರುವ ಕೋವಿಡ್-19 ಪರಿಸ್ಥಿತಿಯಲ್ಲೂ ಅಧಿಕಾರಿ, ಸಿಬ್ಬಂದಿ ಕರ್ತವ್ಯ ಪ್ರಜ್ಞೆ ಮರೆತಿಲ್ಲ. ಎಂದಿನಂತೆ ಸಾರ್ವಜನಿಕರೊಂದಿಗೆ ಮುಂಜಾಗ್ರತಾ ಕ್ರಮಗಳನ್ನು ವಹಿಸಿ ಜನಪರ ಕಾರ್ಯ ಯೋಜನೆಗಳ ಅನುಷ್ಠಾನ ಕೆಲಸ ನಿರ್ವಹಣೆಗೆ ಮುಂದಾಗಿದ್ದಾರೆ.

    ಕೋವಿಡ್ ಪರಿಸ್ಥಿತಿಯನ್ನು ಲೆಕ್ಕಿಸದೇ ವಿವಿಧ ಹಂತಗಳಲ್ಲಿ ಕೆಲಸದಲ್ಲಿ ತೊಡಗಿರುವ ಜಿಲ್ಲೆಯ 109 ಅಧಿಕಾರಿ, ಸಿಬ್ಬಂದಿ ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ. ಇವರಲ್ಲಿ ಆರೋಗ್ಯ ಇಲಾಖೆಯ 34 ಮಂದಿ ಸೇರಿದ್ದಾರೆ. ಈ ಪೈಕಿ ಐವರು ವೈದ್ಯರಾಗಿದ್ದು ಇವರಿಗೂ ಸೋಂಕು ತಗುಲಿತ್ತು. ಪೊಲೀಸ್ ಇಲಾಖೆಯಲ್ಲಿ ನಾಲ್ವರು ಇನ್ಸ್ ಪೆಕ್ಟರ್, ಸಬ್‍ಇನ್ಸ್ ಪೆಕ್ಟರ್ ಸೇರಿದಂತೆ ಇತರೆ 26 ಮಂದಿ, ಕೆ.ಎಸ್.ಆರ್.ಟಿ.ಸಿಯ 24, ವಿದ್ಯುತ್ ಸರಬರಾಜು ನಿಗಮದ 5, ಕಂದಾಯ, ಶಿಕ್ಷಣ ಇಲಾಖೆ, ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿ, ಸಿಬ್ಬಂದಿ, ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಪೌರಕಾರ್ಮಿಕರು, ಬ್ಯಾಂಕುಗಳ ನೌಕರರು ಸೇರಿ 20 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿತ್ತು.

    ಈಗಾಗಲೇ 89 ಮಂದಿ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆ, ಕೋವಿಡ್ ಕೇರ್ ಕೇಂದ್ರಗಳಿಂದ ಬಿಡುಗಡೆಯಾಗಿದ್ದಾರೆ. ಮನೆಯ ನಿಗಾವಣೆ ಅವಧಿಯನ್ನು ಪೂರ್ಣಗೊಳಿಸಿ ಬಹುತೇಕ ಅಧಿಕಾರಿ, ಸಿಬ್ಬಂದಿ ಕರ್ತವ್ಯಕ್ಕೆ ಮರಳಿ ಎಂದಿನಂತೆ ತೊಡಗಿಕೊಂಡಿದ್ದಾರೆ. ಈ ಮೂಲಕ ಇತರರಿಗೂ ಕೋವಿಡ್-19 ಬಗೆಗಿನ ಅನಗತ್ಯ ಭೀತಿ ದೂರಮಾಡಿ ಆತ್ಮಸ್ಥೈರ್ಯ ಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಪ್ರಸ್ತುತ 20 ಮಂದಿ ಕೊರೊನಾ ವಾರಿಯರ್ಸ್ ಗಳು ಅಸ್ಪತ್ರೆ, ಕೋವಿಡ್ ಕೇರ್ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೊರೊನಾ ವಾರಿಯರ್ಸ್‍ಗಳು ಸಹ ಕರ್ತವ್ಯ ಸಂದರ್ಭದಲ್ಲಿ ಸೋಂಕಿಗೆ ಒಳಗಾಗುತ್ತಿರುವುದನ್ನು ಮನಗಂಡ ಜಿಲ್ಲಾಡಳಿತ ಕೊರೊನಾ ವಾರಿಯರ್ಸ್‍ಗಳ ಆತ್ಮಸ್ಥೈರ್ಯ ಹೆಚ್ಚಿಸುವ ಮಹತ್ತರ ಉದ್ದೇಶದೊಂದಿಗೆ ಕೋವಿಡ್ ಕೇರ್ ಕೇಂದ್ರಗಳಲ್ಲಿ ಪುರುಷ ಹಾಗೂ ಮಹಿಳಾ ಕೊರೊನಾ ವಾರಿಯರ್ಸ್‍ಗಳಿಗಾಗಿಯೇ ಪ್ರತ್ಯೇಕ ವಾರ್ಡ್‍ಗಳನ್ನು ಮೀಸಲಿರಿಸಿದೆ. ಈ ಮೂಲಕ ಕೊರೊನಾ ವಿರುದ್ದದ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಅಧಿಕಾರಿ, ಸೇವಾ ಸಿಬ್ಬಂದಿ ಜತೆ ಇದ್ದೇವೆ ಎಂಬ ವಿಶ್ವಾಸ ಮೂಡಿಸಿದೆ.

  • ಕೊರೊನಾ ನಿರ್ವಹಣೆಗೆ ಬಾರದ ನೌಕರರಿಗೆ ನೋಟಿಸ್ ಜಾರಿ

    ಕೊರೊನಾ ನಿರ್ವಹಣೆಗೆ ಬಾರದ ನೌಕರರಿಗೆ ನೋಟಿಸ್ ಜಾರಿ

    – ನೆರೆ ನಿರ್ವಹಣೆ, ಜನರ ರಕ್ಷಣೆಗೆ ಸರ್ಕಾರ ಸಿದ್ಧ

    ಬೆಂಗಳೂರು: ಕೋವಿಡ್ 19 ನಿರ್ವಹಣಾ ಕಾರ್ಯಕ್ಕೆ ಬರದೇ ಇರುವ ನೌಕರರಿಗೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ್ ತಿಳಿಸಿದ್ದಾರೆ.

    ಈ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಕೊರೊನಾಗೆ ಭಯಪಟ್ಟು ಕೆಲವರು ಬರುತ್ತಿಲ್ಲ. ಅಂಥವರಿಗೆಲ್ಲ ನೋಟಿಸ್ ಕೊಡಲಾಗಿದೆ. ನೋಟಿಸ್‍ಗೆ ಏನು ಉತ್ತರ ಕೊಡುತ್ತಾರೆ ಅನ್ನೋದನ್ನು ನೋಡಿಕೊಂಡು ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

    ಕೊರೊನಾ ನಿರ್ವಹಣೆ ಕರ್ತವ್ಯ ಮಾಡದವರ ವಿರುದ್ಧ ಕಾನೂನಾತ್ಮಕ ಕ್ರಮ ತೆಗೆದುಕೊಳ್ಳಲಾಗುತ್ತದೆ. ಕೊರೊನಾಗೆ ಭಯ ಪಡುವ ಅಗತ್ಯ ಇಲ್ಲ. ವೈರಸ್‍ಗೆ ಆತಂಕ ಪಡಬೇಕಾಗಿಲ್ಲ. ಕೆಲ ಕೊರೊನಾ ವಾರಿಯರ್ಸ್ ಭಯದಿಂದ ಬರುತ್ತಿಲ್ಲ. ಅವರು ಕರ್ತವ್ಯದಿಂದ ದೂರ ಹೋದರೆ ಖಂಡಿತಾ ಕ್ರಮ ತೆಗೆದುಕೊಳ್ಳುವುದಾಗಿ ಡಿಸಿಎಂ ಹೇಳಿದ್ದಾರೆ.

    ಇದೇ ವೇಳೆ ರಾಜ್ಯದಲ್ಲಿ ಹಲವು ಜಿಲ್ಲೆಗಳಲ್ಲಿ ಮಳೆ, ನೆರೆ ವಿಚಾರ ಸಂಬಂಧ ಪ್ರತಿಕ್ರಿಯಿಸಿ, ಈ ಬಾರಿ ಮಳೆ ಅನಾಹುತ ಎದುರಿಸಲು ಸರ್ಕಾರ ಎಲ್ಲ ಸಿದ್ಧತೆ ಮಾಡಿಕೊಂಡಿದೆ. ಭೀತಿ ಇರೋ ಕಡೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗ್ತಿದೆ. ನೆರೆ ನಿರ್ವಹಣೆ, ಜನರ ರಕ್ಷಣೆಗೆ ಸರ್ಕಾರ ಸಿದ್ಧವಾಗಿದೆ ಎಂದರು.

    ಅಗತ್ಯವಿರುವಷ್ಟು ಹಣ ಬಿಡುಗಡೆ ಮಾಡಲಾಗಿದೆ. ಕೇಂದ್ರದಿಂದಲೂ ಸಹಕಾರ ಸಿಗ್ತಿದೆ. ಪ್ರಕೃತಿ ವಿಕೋಪಗಳ ವೇಳೆ ಸಿಗಬೇಕಾದ ಅನುದಾನ ಸಿಗುತ್ತೆ. ಕೇಂದ್ರ ಪ್ರಕೃತಿ ವಿಕೋಪ ಬಂದಾಗಲೆಲ್ಲ ನೆರವು ಕೊಟ್ಟಿದೆ ಎಂದು ತಿಳಿಸಿದರು.

  • ಹರಿದ ಪಿಪಿಇ ಕಿಟ್ ಧರಿಸಿ ಕರ್ತವ್ಯ ನಿರ್ವಹಿಸಬೇಕಿದೆ ಕಿಮ್ಸ್ ಸಿಬ್ಬಂದಿ

    ಹರಿದ ಪಿಪಿಇ ಕಿಟ್ ಧರಿಸಿ ಕರ್ತವ್ಯ ನಿರ್ವಹಿಸಬೇಕಿದೆ ಕಿಮ್ಸ್ ಸಿಬ್ಬಂದಿ

    ಧಾರವಾಡ/ಹುಬ್ಬಳ್ಳಿ: ಕೋವಿಡ್ ವಿರುದ್ಧದ ಹೋರಾಟದಲ್ಲಿ ಜೀವದ ಹಂಗು ತೊರೆದು ಸೇವೆ ಸಲ್ಲಿಸುತ್ತಿರುವ ಕೊರೊನಾ ವಾರಿಯರ್ಸ್ ಜೀವಕ್ಕೆ ದಕ್ಕೆಯನ್ನುಂಟು ಮಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಕಿಮ್ಸ್ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯಕೀಯ ಸಿಬ್ಬಂದಿಗೆ ದೋಷಪೂರಿತ ಸುರಕ್ಷತಾ ಕಿಟ್ ನೀಡಲಾಗಿದೆ ಎನ್ನುವ ಆರೋಪ ಕೇಳಿಬಂದಿದೆ.

    ಸೋಂಕಿತರಿಗೆ ಚಿಕಿತ್ಸೆ ನೀಡುವ ವೈದ್ಯರು ಗುಣಮಟ್ಟದ ವೈಯಕ್ತಿಕ ಸುರಕ್ಷಾ ಸಾಧನ (ಪಿಪಿಇ ಕಿಟ್), ಎನ್ 95 ಮಾಸ್ಕ್ ಧರಿಸಬೇಕಾಗುತ್ತದೆ. ಆದರೆ ಕಿಮ್ಸ್ ನ ಕೆಲ ಸಿಬ್ಬಂದಿಗೆ ನೀಡಲಾದ ಪಿಪಿಇ ಕಿಟ್‍ಗಳು ಹರಿದು ಹೋಗಿದ್ದು, ಯಾವ ಧೈರ್ಯದ ಮೇಲೆ ವೈದ್ಯಕೀಯ ಸಿಬ್ಬಂದಿ ಸೇವೆಗೆ ಮುಂದಾಗಿದ್ದಾರೆ ಎಂಬುವುದು ಯಕ್ಷ ಪ್ರಶ್ನೆಯಾಗಿದೆ.

    ಕೋವಿಡ್ ವಾರ್ಡ್‍ನ ಐಸಿಯು ಘಟಕದಲ್ಲಿ ಕೆಲಸ ನಿರ್ವಹಿಸುತ್ತಿರುವ ಸಿಬ್ಬಂದಿಗೆ ಮಾತ್ರ ಗುಣಮಟ್ಟದ ಕಿಟ್‍ಗಳನ್ನು ನೀಡಲಾಗಿದೆ. ಸೋಂಕಿತರ ಸಾಮಾನ್ಯ ವಾರ್ಡ್ ಗಳಲ್ಲಿ ಕೆಲಸ ಮಾಡುತ್ತಿರುವ ವೈದ್ಯರಿಗೆ, ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಮತ್ತು ಶುಶ್ರೂಷಕರಿಗೆ ಎರಡು, ಮೂರನೇ ದರ್ಜೆಯ ಸುರಕ್ಷತಾ ಕಿಟ್‍ಗಳನ್ನು ನೀಡಲಾಗಿದೆ. ಹರಿದ ಪಿಪಿಇ ಕಿಟ್‍ಗಳು, ಮಧ್ಯದಲ್ಲಿ ಕಿಂಡಿ ಬಿದ್ದಿರುವ ಮಾಸ್ಕ್ ಗಳ ಚಿತ್ರಗಳನ್ನು ಕಿಮ್ಸ್ ವೈದ್ಯಕೀಯ ವಿದ್ಯಾರ್ಥಿಗಳ ಸಂಘದ ಸದಸ್ಯರೇ ಬಹಿರಂಗಪಡಿಸಿದ್ದಾರೆ.

  • ಕೊರೊನಾ ವಾರಿಯರ್ಸ್‍ಗೆ ಕೊಲೆ ಬೆದರಿಕೆ- ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮಕ್ಕೆ ಡಿಸಿ ಸೂಚನೆ

    ಕೊರೊನಾ ವಾರಿಯರ್ಸ್‍ಗೆ ಕೊಲೆ ಬೆದರಿಕೆ- ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮಕ್ಕೆ ಡಿಸಿ ಸೂಚನೆ

    ಚಾಮರಾಜನಗರ: ಕಂಟೈನ್ಮೆಂಟ್ ಝೋನ್‍ಗೆ ಬಂದರೆ ಮಚ್ಚು, ಲಾಂಗ್ ತರುತ್ತೇವೆ ಎಂದು ಕೊರೊನಾ ವಾರಿಯರ್ಸ್ ಗೆ ಜೀವ ಬೆದರಿಕೆ ಹಾಕಿರುವ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಚಾಮರಾಜನಗರ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಜಿಲ್ಲಾಪೊಲೀಸ್ ವರಿಷ್ಠಾಧಿಕಾರಿಗೆ ನಿರ್ದೇಶನ ನೀಡಿದ್ದಾರೆ.

    ಕೊಲೆ ಬೆದರಿಕೆ ಹಾಕುಲಾಗುತ್ತಿದೆ ರಕ್ಷಣೆ ಬೇಕು ಎಂದು ನರ್ಸ್ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಗುಂಡ್ಲುಪೇಟೆಯಲ್ಲಿ ನಡೆದ ಪುನಶ್ಚೇತನ ಕಾರ್ಯಕ್ರಮದಲ್ಲಿ ಕಣ್ಣೀರು ಹಾಕಿದ್ದರು. ಈ ಬಗ್ಗೆ ಮಾಧ್ಯಮಗಳಲ್ಲಿ ವರದಿ ಪ್ರಸಾರವಾಗುತ್ತಿದ್ದಂತೆ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ದುಷ್ಕರ್ಮಿಗಳ ವಿರುದ್ಧ ಕ್ರಮಕ್ಕೆ ಮುಂದಾಗಿದ್ದಾರೆ. ಕೊರೊನಾ ವಾರಿಯರ್ಸ್ ಗೆ ತೊಂದರೆಯಾದರೆ ಜಿಲ್ಲಾಡಳಿತ ಸುಮ್ಮನೆ ಕೂರುವುದಿಲ್ಲ, ಜೀವದ ಹಂತು ತೊರೆದು ಕರ್ತವ್ಯ ನಿರ್ವಹಿಸುತ್ತಿರುವ ಅವರಗೆ ಬೆದರಿಕೆ ಹಾಕಿದರೆ ಸಹಿಸುವುದಿಲ್ಲ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.

    ವಿಪತ್ತು ನಿರ್ವಹಣೆ ಸೆಕ್ಷನ್ 51ರ ಅಡಿ ಕಿಡಿಗೇಡಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ. ಈ ಮೂಲಕ ಕೊರೊನಾ ವಾರಿಯರ್ಸ್ ರಕ್ಷಣೆಗೆ ಮುಂದಾಗಿದ್ದಾರೆ. ಕೊರೊನಾ ವಾರಿಯರ್ಸ್‍ಗಳ ಮೇಲೆ ಹಲ್ಲೆ ಹಾಗೂ ಜೀವ ಬೆದರಿಕೆ ಕರೆಗಳು ಬರುತ್ತಿರುವ ಹಿನ್ನೆಲೆ ಈ ಕ್ರಮ ಕೈಗೊಂಡಿದ್ದಾರೆ.

  • ಆ.15ರಂದು ಕೊರೊನಾ ವಾರಿಯರ್ಸ್‍ಗೆ ವಿಶೇಷ ಗೌರವ

    ಆ.15ರಂದು ಕೊರೊನಾ ವಾರಿಯರ್ಸ್‍ಗೆ ವಿಶೇಷ ಗೌರವ

    – ಈ ಬಾರಿ ವಿದ್ಯಾರ್ಥಿಗಳ ಪೆರೇಡ್ ಇಲ್ಲ

    ನವದೆಹಲಿ: ಮಹಾಮಾರಿ ಕೋವಿಡ್-19 ವಿರುದ್ಧ ಮೊದಲ ಸಾಲಿನಲ್ಲಿ ನಿಂತು ಹೋರಾಟ ನಡೆಸಿದ್ದ ಕೊರೊನಾ ವಾರಿಯರ್ಸ್‍ಗೆ ಈ ಬಾರಿಯ ಆಗಸ್ಟ್ 15 ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮಾಚರಣೆ ಭಾಗವಹಿಸಲು ಅಹ್ವಾನ ನೀಡಲಾಗಿದ್ದು, ಆ ಮೂಲಕ ವೈದ್ಯರು, ಪೌರಕಾರ್ಮಿಕರು, ಪೊಲೀಸರು, ಇತರ ಅಧಿಕಾರಿಗಳಿಗೆ ವಿಶೇಷ ಗೌರವ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

    ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳುತ್ತಿದ್ದು, ಕೋವಿಡ್ ಸಂದರ್ಭದಲ್ಲಿ ವಿಶೇಷ ಸೇವೆ ಮಾಡಿದ್ದ ವಾರಿಯರ್ಸ್‍ಗೆ ಕಾರ್ಯಕ್ರಮಕ್ಕೆ ಆಹ್ವಾನ ನೀಡಲು ಕೇಂದ್ರ ಸೂಚನೆ ನೀಡಿದೆ. ಅಲ್ಲದೇ ಕೊರೊನಾದಿಂದ ಗುಣಮುಖರಾದವರಿಗೂ ವಿಶೇಷ ಆಹ್ವಾನ ನೀಡುವಂತೆ ತಿಳಿಸಲಾಗಿದೆ.

    ಕೊರೊನಾ ಕಾರಣದಿಂದ ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮಾಚರಣೆಗೆ ಕೇಂದ್ರ ಸರ್ಕಾರ ಮಾರ್ಗದರ್ಶನಗಳನ್ನು ಬಿಡುಗಡೆ ಮಾಡಿದೆ. ರಾಜ್ಯಗಳ ರಾಜಧಾನಿಗಳಲ್ಲಿ ಬೆಳಗ್ಗೆ 9 ಗಂಟೆಗೆ ಸಮಾರಂಭ ನಡೆಸಲು ಸೂಚಿಸಲಾಗಿದೆ. ವೈರಸ್ ಕಾರಣದಿಂದ ಭಾರೀ ಸಂಖ್ಯೆಯಲ್ಲಿ ಜನರನ್ನು ಸಮಾರಂಭಕ್ಕೆ ಆಹ್ವಾನ ನೀಡಬಾರದು. ಭಾರೀ ಸಂಖ್ಯೆಯಲ್ಲಿ ಜನರು ಸೇರುವುದನ್ನು ತಡೆಯುವಂತೆ ಸೂಚನೆ ನೀಡಲಾಗಿದೆ. ಉಳಿದಂತೆ ಕಾರ್ಯಕ್ರಮದಲ್ಲಿ ಸ್ಯಾನಿಟೈಸರ್ ಬಳಕೆ, ಥರ್ಮಲ್ ಸ್ಕ್ರೀನಿಂಗ್ ಮಾಡುವುದನ್ನು ಕಡ್ಡಾಯ ಮಾಡಲಾಗಿದೆ.

    ಜಿಲ್ಲಾ ಕೇಂದ್ರಗಳಲ್ಲಿ ಹಾಗೂ ಗ್ರಾಮ ಪಂಚಾಯಿತಿಗಳು ಇದೇ ನಿಯಮಗಳನ್ನು ಪಾಲನೆ ಮಾಡಲು ಸೂಚಿಸಲಾಗಿದೆ. ಉಳಿದಂತೆ ರಾಜಭವನದಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ನಿರ್ಧಾರ ಕೈಗೊಳ್ಳಲು ಗವರ್ನರ್ ಗಳಿಗೆ ಅವಕಾಶ ನೀಡಲಾಗಿದೆ. ಈ ಹಿಂದೆಯೇ ಕೊರೊನಾ ಯೋಧರಿಗೆ ಭಾರತ ಮೂರು ಸೇನೆಗಳು ಗೌರವ ಸೂಚಿಸಿ ವಾರಿಯರ್ಸ್ ಮೇಲೆ ಹೂ ಮಳೆ ಸುರಿಸಿತ್ತು. ನೇವಿ ಯುದ್ಧ ನೌಕೆಗಳ ಮೇಲೆ ದೀಪಗಳನ್ನು ಬೆಳಗಿಸಿ ಗೌರವ ಸೂಚಿಸಿತ್ತು.

  • ಕೋವಿಡ್ ಆಸ್ಪತ್ರೆಯಲ್ಲೇ ಡೆಡ್ಲಿ ತಾಂಡವ- ಕೆ.ಸಿ ಜನರಲ್‍ನಲ್ಲಿ 20 ಪಾಸಿಟಿವ್ ಪ್ರಕರಣ

    ಕೋವಿಡ್ ಆಸ್ಪತ್ರೆಯಲ್ಲೇ ಡೆಡ್ಲಿ ತಾಂಡವ- ಕೆ.ಸಿ ಜನರಲ್‍ನಲ್ಲಿ 20 ಪಾಸಿಟಿವ್ ಪ್ರಕರಣ

    – ಒಂದೇ ದಿನ 72 ಪೊಲೀಸರಿಗೆ ಸೋಂಕು

    ಬೆಂಗಳೂರು: ಚೀನಾ ವೈರಸ್ ರಾಜ್ಯದಲ್ಲಿ ರಣರಣಿಸುತ್ತಿದೆ. ದಿನದಿನವೂ ಉಗ್ರರೂಪ ತಾಳಿ ಅಬ್ಬರಿಸಿ ಬೊಬ್ಬಿರಿಯುತ್ತಿದೆ. ರಾಜ್ಯದಲ್ಲಿ ಶುಕ್ರವಾರ ದಾಖಲೆಯ 2300ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿವೆ. ಬೆಂಗಳೂರಲ್ಲಂತೂ ಪರಿಸ್ಥಿತಿ ತುಂಬಾ ಕೆಟ್ಟದಾಗಿದೆ. ಕೇವಲ ರಾಜಧಾನಿಯೊಂದರಲ್ಲೇ 1400ಕ್ಕೂ ಹೆಚ್ಚು ಸೋಂಕು ಪ್ರಕರಣಗಳು ಬೆಳಕಿಗೆ ಬಂದಿವೆ.

    ರಾಜ್ಯದಲ್ಲಿ ಎರಡನೇ ಬಾರಿಗೆ ದಿನದಲ್ಲಿ 50ಕ್ಕೂ ಹೆಚ್ಚು ಸಾವುಗಳು ಸಂಭವಿಸಿವೆ. ಇದರಲ್ಲಿ ಬೆಂಗಳೂರಿನಲ್ಲೇ 29 ಮಂದಿ ಮೃತಪಟ್ಟಿದ್ದಾರೆ. ದಕ್ಷಿಣ ಕನ್ನಡದಲ್ಲಿ 8 ಮಂದಿ, ಮೈಸೂರಲ್ಲಿ ನಾಲ್ವರು, ಬೀದರ್‍ನಲ್ಲಿ ಮೂವರು, ಕಲಬುರಗಿ, ಮೈಸೂರು, ಚಿಕ್ಕಬಳ್ಳಾಪುರ, ಗದಗದಲ್ಲಿ ತಲಾ ಇಬ್ಬರು, ಬಳ್ಳಾರಿ, ರಾಯಚೂರು, ಉತ್ತರ ಕನ್ನಡ, ಹಾವೇರಿಯಲ್ಲಿ ತಲಾ ಒಬ್ಬರು ಬಲಿ ಆಗಿದ್ದಾರೆ. ಇದರೊಂದಿಗೆ ಮೃತರ ಸಂಖ್ಯೆ 500 ದಾಟಿದೆ. ಇನ್ನೂ ಚೇತರಿಕೆ ಪ್ರಮಾಣದಲ್ಲಿಯೂ ಇವತ್ತು ದಾಖಲೆ ಸೃಷ್ಟಿಯಾಗಿದೆ.

    25ಕ್ಕೂ ಹೆಚ್ಚು ವಾರಿಯರ್ಸ್‌ಗೆ ಸೋಂಕು ದೃಢ
    ಬೆಂಗಳೂರಿನ ಕೆಸಿ ಜನರಲ್‍ನಲ್ಲಿ ಕೊರೊನಾ ಬ್ಲಾಸ್ಟ್ ಆಗಿದೆ. ಕೊರೊನಾ ವಾರಿಯರ್ಸ್‌ಗೆ ಹೆಮ್ಮಾರಿ ಡೆಡ್ಲಿ ಅಟ್ಯಾಕ್ ಮಾಡಿದೆ. ಆಸ್ಪತ್ರೆಯ 20 ಮಂದಿ ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಬಂದಿದೆ. ಮೂರು ಜನ ಡಾಕ್ಟರ್, 13 ಮಂದಿ ನರ್ಸ್, ಒಬ್ಬ ಲ್ಯಾಬ್ ಟೆಕ್ನಿಶಿಯನ್, ಮೂವರು ವಾರ್ಡ್ ಬಾಯ್ಸ್, ಒಬ್ಬ ಕಂಪ್ಯೂಟರ್ ಆಪರೇಟರ್‌ಗೆ ಸೋಂಕು ವಕ್ಕರಿಸಿದೆ. ಮತ್ತಷ್ಟು ಮಂದಿಗೆ ಸೋಂಕು ತಗುಲಿರುವ ಆತಂಕ ಕೂಡ ಇದೆ.

    ಪೊಲೀಸರನ್ನ ಬಿಟ್ಟು ಬಿಡದೇ ಕಾಡ್ತಿದೆ ಕಿಲ್ಲರ್
    ಒಂದೇ ದಿನ 26 ಜನ ಪೊಲೀಸರಿಗೆ ಪಾಸಿಟಿವ್ ಕಂಡು ಬಂದಿದ್ದು, ಸೋಂಕಿತ ಪೊಲೀಸರ ಸಂಖೆ 470ಕ್ಕೆ ಏರಿದೆ. ಪೊಲೀಸ್ ಕಮಿಷನರ್ ಕಚೇರಿಯ 12 ಮಂದಿ ಸಿಬ್ಬಂದಿಗೆ ಸೋಂಕು ತಗುಲಿದ್ದು, ಮತ್ತೊಮ್ಮೆ ಪೊಲೀಸ್ ಕಮಿಷನರ್ ಕಚೇರಿ ಸೀಲ್‍ಡೌನ್ ಆಗಿದೆ. ವಿಧಾನಸೌಧ ಪೊಲೀಸ್ ಠಾಣೆ ಕೂಡ ಸೀಲ್ ಆಗಿದೆ.

    ಕೊರೊನಾ ಸುಳಿಯಲ್ಲಿ ನಲುಗುತ್ತಿರುವ ಕರುನಾಡಿಗೆ ಬಿಗ್ ರಿಲೀಫ್ ಸಿಗುತ್ತಿದೆ. ಫಟಾಫಟ್ ಟೆಸ್ಟ್, ಫಟಾಫಟ್ ರಿಸಲ್ಟ್ ಕೊಡುವ ಆಂಟಿಜೆನ್ ಟೆಸ್ಟ್ ಕಿಟ್ ಬೆಂಗಳೂರಿಗೆ ಬಂದಿದೆ. 1 ಲಕ್ಷ ಟೆಸ್ಟ್ ಕಿಟ್‍ಗಳು ಈಗಾಗಲೇ ರೆಡಿಯಿದ್ದು, ಸೋಮವಾರದಿಂದ ಇದರಿಂದಲೇ ಪರೀಕ್ಷೆ ನಡೆಯಲಿದೆ. ಬೆಂಗಳೂರಿನಲ್ಲಿ 20 ಸಾವಿರ ಹಾಗೂ ರಾಜ್ಯದ ಇತರೆಡೆ 80 ಸಾವಿರ ಕಿಟ್‍ಗಳ ಬಳಕೆಗೆ ಸರ್ಕಾರ ತೀರ್ಮಾನಿಸಿದೆ.