ಮಡಿಕೇರಿ: ಕೋವಿಡ್ ವ್ಯಾಕ್ಸಿನ್ ಪಡೆಯಲು ಜಿಲ್ಲೆಯ ಜನ ಸಮರೋಪಾದಿಯಲ್ಲಿ ಆಗಮಿಸುತ್ತಿದ್ದು, ಲಸಿಕಾ ಕೇಂದ್ರದ ಬಳಿ ಜನಜಂಗುಳಿ ಉಂಟಾಗುತ್ತಿದೆ.
ಇಂದು ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಶನಿವಾರಸಂತೆಯಲ್ಲಿ ವ್ಯಾಕ್ಸಿನ್ ಗಾಗಿ ನೂಕು ನುಗ್ಗಲು ಉಂಟಾಗಿದೆ. ಅಂತರ ಕಾಯ್ದುಕೊಳ್ಳದೆ ಜನ ಸೋಂಕು ವ್ಯಾಪಿಸುವ ಆತಂಕ ಸೃಷ್ಟಿಸಿದರು. ಜನರನ್ನು ನಿಯಂತ್ರಿಸಲು ಆಸ್ಪತ್ರೆ ಸಿಬ್ಬಂದಿ, ಪೊಲೀಸರು ಹರಸಾಹಸಪಡುವಂತಾಯಿತು. ಕೆಲವರು ಬೆಳಗ್ಗೆ 7.30ಕ್ಕೆ ಲಸಿಕೆ ನೀಡುವ ಸ್ಥಳೀಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಎದುರು ಸಾಲುಗಟ್ಟಿ ನಿಂತಿದ್ದರು. ಇದನ್ನೂ ಓದಿ: ಅನ್‍ಲಾಕ್ ಬಳಿಕ ಸಹಜ ಸ್ಥಿತಿಯತ್ತ ಸಾರಿಗೆ
ಇಂದು ಎರಡನೇ ಡೋಸ್ ಲಸಿಕೆ ಮಾತ್ರ ನೀಡಲಾಗುವುದು ಎಂದು ವೈದ್ಯರು ತಿಳಿಸಿದ ನಂತರ ಹಲವರು ನಿರಾಶೆಯಿಂದ ಮರಳಿದರು. ಅಲ್ಪ ಪ್ರಮಾಣದ ವ್ಯಾಕ್ಸಿನ್ ಬಂದಿದೆ ಎನ್ನುವ ವಿಚಾರ ತಿಳಿದು ಜನಜಂಗುಳಿ ಉಂಟಾಯಿತು ಎಂದು ಹೇಳಲಾಗಿದೆ. ವ್ಯಾಕ್ಸಿನ್ ವಿತರಣೆ ಕಾರ್ಯಕ್ರಮ ವ್ಯವಸ್ಥಿತವಾಗಿ ನಡೆಯುತ್ತಿಲ್ಲವೆಂದು ಸ್ಥಳೀಯರು ದೂರಿಕೊಂಡಿದ್ದಾರೆ. ಸೋಂಕು ವ್ಯಾಪಿಸುವುದನ್ನು ನಿಯಂತ್ರಿಸಲು ಮತ್ತು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಲಸಿಕೆ ನೀಡಲಾಗುತ್ತಿದೆ. ಆದರೆ ಇದನ್ನು ಪಡೆಯಲು ಬರುತ್ತಿರುವವರು ಕೋವಿಡ್ ಮಾರ್ಗಸೂಚಿಯನ್ನು ಗಾಳಿಗೆ ತೂರಿ ನೂಕು ನುಗ್ಗಲು ಉಂಟು ಮಾಡುತ್ತಿದ್ದಾರೆ.
ಈ ಬಗ್ಗೆ ಅಧಿಕಾರಿಗಳು ಗಮನ ಹರಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಲಸಿಕೆ ಪಡೆಯಲು ಬಂದವರು ರಸ್ತೆಯುದ್ದಕ್ಕೂ ಎರಡೂ ಬದಿ ವಾಹನಗಳನ್ನು ನಿಲ್ಲಿಸಿದ್ದರಿಂದ ಇತರ ವಾಹನಗಳ ಸಂಚಾರಕ್ಕೆ ಅಡಚಣೆ ಸಹ ಉಂಟಾಯಿತು.
ಬೆಂಗಳೂರು: ಮಲ್ಲೇಶ್ವರಂ ಕ್ಷೇತ್ರ ವ್ಯಾಪ್ತಿಯಲ್ಲಿ ಕೋವಿಡ್ ಲಸಿಕೆಯ ಮೊದಲನೇ ಡೋಸ್ ಇನ್ನೂ ಯಾರಿಗೆ ಆಗಿಲ್ಲವೋ ಅಂಥವರ ಹೆಸರುಗಳ ಪಟ್ಟಿಯನ್ನು ತಮ್ಮ ಕಚೇರಿಗೆ ಸಲ್ಲಿಸುವಂತೆ ಕ್ಷೇತ್ರದ ಶಾಸಕರೂ ಆದ ಉಪ ಮುಖ್ಯಮಂತ್ರಿ ಹಾಗೂ ರಾಜ್ಯ ಕೋವಿಡ್ ಕಾರ್ಯಪಡೆ ಮುಖ್ಯಸ್ಥರಾದ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಅವರು ಮನವಿ ಮಾಡಿದ್ದಾರೆ.
ಈ ಕುರಿತು ಕ್ಷೇತ್ರ ವ್ಯಾಪ್ತಿಯ ಸಂಘ ಸಂಸ್ಥೆಗಳಿಗೆ ಅವರು ಪತ್ರ ಬರೆದಿದ್ದಾರೆ. ಕೋವಿಡ್ ಲಸಿಕೆಯ ಒಂದನೇ ಡೋಸ್ ಹಾಕಿಸಿಕೊಳ್ಳಬೇಕಾಗಿರುವವರ 18 ವರ್ಷವಾದವರ ಪಟ್ಟಿಯನ್ನು ತಮ್ಮ ಕ್ಷೇತ್ರ ಕಚೇರಿಗೆ ಸಲ್ಲಿಸಲು ಅಥವಾ +91 80 23563944 ಸಂಖ್ಯೆಯನ್ನು ಬೆಳಿಗ್ಗೆ 9ರಿಂದ- ಸಂಜೆ 5ರೊಳಗೆ ಸಂಪರ್ಕಿಸಿ ಮಾಹಿತಿ ಕೊಡಲು ಕೋರಿದ್ದಾರೆ.
ಮೇ ತಿಂಗಳಿಂದ ಇಲ್ಲಿಯವರೆಗೆ ಕ್ಷೇತ್ರದ ಎಲ್ಲಾ ವಾರ್ಡ್ ಗಳಲ್ಲಿ 81 ಲಸಿಕಾ ಶಿಬಿರಗಳನ್ನು ನಡೆಸಲಾಗಿದ್ದು, 18ರಿಂದ 45 ವಯೋಮಾನದೊಳಗಿನ 40,043 ನಾಗರಿಕರು ಪ್ರಯೋಜನ ಪಡೆದಿದ್ದಾರೆ. 45 ವರ್ಷವಾದವರನ್ನು ಸರ್ಕಾರಿ ಲಸಿಕಾ ಕೇಂದ್ರಗಳಿಗೆ ತೆರಳಲು ಉತ್ತೇಜಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಮಲ್ಲೇಶ್ವರಂ ಕ್ಷೇತ್ರವು 18 ವರ್ಷ ಮೇಲ್ಪಟ್ಟವರಿಗೆ ಶೇ 100ರಷ್ಟು ಲಸಿಕೆ ಪೂರೈಸಿದ ಮೊದಲ ಕ್ಷೇತ್ರವಾಗಬೇಕೆಂಬ ಗುರಿಯೊಂದಿಗೆ ಕೆಲಸ ಮಾಡಲಾಗುತ್ತಿದೆ, ಲಸಿಕಾ ವ್ಯಾಪ್ತಿಗೆ ಎಲ್ಲರನ್ನೂ ಒಳಪಡಿಸಲು ಅಗತ್ಯ ಸಹಕಾರ ನೀಡಬೇಕು. ಈ ಸಂಬಂಧ ಯಾವುದೇ ಮಾಹಿತಿಯನ್ನು ashwathcn@gmail.com ಗೆ ಇ-ಮೇಲ್ ಕೂಡ ಮಾಡಬಹುದು ಎಂದು ತಿಳಿಸಿದ್ದಾರೆ.
I seek your wholehearted support to make Malleshwara the first constituency to vaccinate 100% of its citizens above 18 yrs.
I urge all Apartment Associations, Linguistic Forums, Religious Associations & NGOs in Malleshwara to provide list of those yet to take a single dose. pic.twitter.com/eVaZM6SgsD
— Dr. C.N. Ashwath Narayan (@drashwathcn) July 1, 2021
ಉಡುಪಿ: ಜಿಲ್ಲೆಗೆ ಪ್ರತಿದಿನ 10 ಸಾವಿರ ಡೋಸ್ ಲಸಿಕೆಯನ್ನು ರವಾನಿಸುವುದಾಗಿ ಗೃಹ ಸಚಿವ ಉಡುಪಿ ಉಸ್ತುವಾರಿ ಸಚಿವ ಬಸವರಾಜ್ ಬೊಮ್ಮಾಯಿ ಭರವಸೆ ನೀಡಿದ್ದಾರೆ. ಆದ್ರೆ ಲಸಿಕೆ ಪೂರೈಕೆ ಸಮರ್ಪಕವಾಗಿ ಆಗುತ್ತಿದೆ. ಜಿಲ್ಲೆ ಈ ವಾರ ಸುಮಾರು 30 ಸಾವಿರ ಡೋಸೇಜ್ ನ ಕೊರತೆ ಅನುಭವಿಸುತ್ತಿದೆ.
ಜಿಲ್ಲೆಗೆ ಪ್ರತಿದಿನ 10 ಸಾವಿರ ಲಸಿಕೆ ಬಂದರೂ ಅದನ್ನ ಒಂದೇ ದಿನದಲ್ಲಿ ಸಾರ್ವಜನಿಕರಿಗೆ ನೀಡಲು ಜಿಲ್ಲಾ ಆರೋಗ್ಯ ಇಲಾಖೆ ಸಿದ್ಧವಾಗಿದೆ. ಜಿಲ್ಲೆಯ ಏಳು ತಾಲೂಕಿನಲ್ಲಿ ಲಸಿಕೆ ಅಭಿಯಾನವನ್ನು ಇನ್ನೂ ಪರಿಣಾಮಕಾರಿಯಾಗಿ ಮಾಡಲು ಉಡುಪಿ ಜಿಲ್ಲಾ ಆರೋಗ್ಯ ಇಲಾಖೆ ಸಿದ್ಧವಾಗಿದೆ. ಆದ್ರೆ ಬೇಡಿಕೆ ಪೂರೈಸುವಲ್ಲಿ ಸರ್ಕಾರ ಹಿನ್ನಡೆ ಅನುಭವಿಸಿದೆ.
ಉಡುಪಿ ಜಿಲ್ಲೆಯಲ್ಲಿ ಮೈನಸ್ 5 ಲಸಿಕೆ ನಷ್ಟ
ಉಡುಪಿ ಜಿಲ್ಲೆಯಲ್ಲಿ ವೇಸ್ಟೇಜ್ -5 ಇದೆ. ಅಂದರೆ ಜಿಲ್ಲೆಯಲ್ಲಿ ಶೇಕಡಾ ಐದರಷ್ಟು ನಾವು ಲಸಿಕೆ ಹಂಚಿಕೆಯಲ್ಲಿ ಲಾಭ ಮಾಡಿದ್ದೇವೆ. ಒಂದು ವಯಲಿನ್ ಅಲ್ಲಾ ಡೋಸೇಜನ್ನು ಸಾರ್ವಜನಿಕರಿಗೆ ನೀಡಲು ನಾವು ಯಶಸ್ವಿಯಾಗಿದ್ದೇವೆ. ಯಾವುದೇ ವಯಲ್ ನಲ್ಲಿ ಲಸಿಕೆ ವೇಸ್ಟ್ ಮಾಡುತ್ತಿಲ್ಲ. 10 ಜನ ಸಿದ್ಧವಾಗಿದ್ದರೆ ಮಾತ್ರ ವಯಲ್ ಓಪನ್ ಮಾಡುತ್ತೇವೆ. ವೇಸ್ಟೇಜ್ ಕಡಿಮೆ ಮಾಡಿರುವ ಪೈಕಿ ರಾಜ್ಯದಲ್ಲೇ ನಾವು ಎರಡನೇ ಸ್ಥಾನದಲ್ಲಿದ್ದೇವೆ ವ್ಯಾಕ್ಸಿನೇಷನ್ ಮಾಡುವ ಎಲ್ಲಾ ವೈದ್ಯಕೀಯ ಸಿಬ್ಬಂದಿಗಳ ಕಾಳಜಿಯಿಂದ ಇದು ಸಾಧ್ಯವಾಗಿದೆ ಎಂದು ಉಡುಪಿ ಜಿಲ್ಲಾ ಲಸಿಕಾಧಿಕಾರಿ ಡಾ.ರಾಮ್ ಹೇಳಿದರು.
ಜಿಲ್ಲೆಯಲ್ಲಿ 10 ಲಕ್ಷ ಜನರಿಗೆ ವ್ಯಾಕ್ಸಿನೇಷನ್ ಮಾಡುವ ಗುರಿಯನ್ನು ಉಡುಪಿ ಜಿಲ್ಲಾಡಳಿತ ಹೊಂದಿದೆ. ಈಗಾಗಲೇ ಉಡುಪಿ ಜಿಲ್ಲೆಯಲ್ಲಿ 5,34,160 ಡೋಸ್ ವ್ಯಾಕ್ಸಿನೇಶನ್ ಆಗಿದೆ. 18ರ ಮೇಲ್ಪಟ್ಟ ಕಾಲೇಜು ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ಮೊದಲ ಡೋಸ್ ಪಡೆಯದ, ಎರಡನೇ ಡೋಸ್ ಡ್ಯೂ ಇರುವ ಎಲ್ಲಾ ಲೆಕ್ಕಾಚಾರವನ್ನು ತೆಗೆದುಕೊಂಡರೆ 2 ಲಕ್ಷ ಕೊರತೆ ಇದೆ ಎಂದರು. ಇದನ್ನೂ ಓದಿ:15 ವರ್ಷದ ದಾಂಪತ್ಯ ಅಂತ್ಯ – ವಿಚ್ಛೇದನಕ್ಕೆ ಮುಂದಾದ ಆಮಿರ್ ಖಾನ್, ಕಿರಣ್ ರಾವ್
ಮೂರು ತಿಂಗಳಲ್ಲಿ 15 ಲಕ್ಷ ಲಸಿಕೆ ಬೇಡಿಕೆ
ಮುಂದಿನ ಮೂರುವರೆ ತಿಂಗಳ ಒಳಗೆ 15 ಲಕ್ಷ ಡೋಸೇಜ್ ವ್ಯಾಕ್ಸಿನ್ ಜಿಲ್ಲೆಗೆ ಅಗತ್ಯವಿದೆ. ಕೊರೊನಾದ ಮೂರನೇಯ ಅಲೆ ಅಪ್ಪಳಿಸುವ ಮೊದಲು ಲಸಿಕೆ ಬಂದರೆ ಎಲ್ಲರನ್ನೂ ತಲುಪಲು ಸಾಧ್ಯವಿದೆ. ಇದನ್ನೂ ಓದಿ: ‘ಅ’ ಕಾರಕ್ಕೂ, ‘ಹ’ ಕಾರಕ್ಕೂ ವ್ಯತ್ಯಾಸ ತಿಳಿದುಕೊಳ್ಳಿ: ಅನಿತಾ ಭಟ್
ಬೆಂಗಳೂರು: ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳ ವ್ಯಾಪ್ತಿಯಲ್ಲಿ ವಿದ್ಯಾರ್ಥಿಗಳು ಮತ್ತು ಶೈಕ್ಷಣಿಕ ಸಿಬ್ಬಂದಿಯ ಲಸಿಕೀಕರಣ ಕಾರ್ಯಕ್ರಮವನ್ನು ಚುರುಕುಗೊಳಿಸಬೇಕು. ಸಾಧ್ಯವಾದಷ್ಟು ಇದೇ 7ರೊಳಗೆ ಮುಗಿಸಲು ಆದ್ಯತೆ ನೀಡಬೇಕು ಎಂದು ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಎಲ್ಲ ವಿವಿಗಳ ಕುಲಪತಿಗಳಿಗೆ ನಿರ್ದೇಶನ ನೀಡಿದರು.
ಕೋವಿಡ್ ಲಸಿಕೆಯನ್ನು ಹೆಚ್ಚು ತ್ವರಿತವಾಗಿ ಕೊಡಿಸುವ ಸಂಬಂಧ ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳ ಕುಲಪತಿಗಳ ಜತೆ ಗುರುವಾರ ವೀಡಿಯೋ ಸಂವಾದ ನಡೆಸಿದ ನಂತರ ಅವರು ಸುದ್ದಿಗಾರರ ಜತೆ ಮಾತನಾಡಿದರು. ರಾಜ್ಯದಲ್ಲಿ ಇನ್ನೆರಡು ತಿಂಗಳ ಒಳಗಾಗಿ ಒಟ್ಟು ಜನಸಂಖ್ಯೆಯಲ್ಲಿ ಶೇ.50ರಷ್ಟು ಜನರಿಗೆ ಲಸಿಕೆ ಲಭ್ಯವಾಗಲಿದೆ. ಈ ನಿಟ್ಟಿನಲ್ಲಿ ಭೌತಿಕ ತರಗತಿಗಳು ಆರಂಭಕ್ಕೆ ಮುನ್ನವೇ ಎಲ್ಲ ವಿದ್ಯಾರ್ಥಿಗಳಿಗೆ ಲಸಿಕೆ ನೀಡಬೇಕು ಹಾಗೂ ನಿತ್ಯವೂ ಪೂರೈಕೆಯಾಗುವ ಲಸಿಕೆಯನ್ನು ಸಂಬಂಧಿಸಿದ ಅಧಿಕಾರಿಗಳ ಜತೆ ಸಮನ್ವಯ ಸಾಧಿಸಿಕೊಂಡು ಪಡೆದುಕೊಳ್ಳಬೇಕು ಎಂದರು.
ಯಾವುದೇ ಕಾರಣಕ್ಕೂ ಶೈಕ್ಷಣಿಕ ಚಟುವಟಿಕೆ ನಿಲ್ಲಬಾರದು, ವಿದ್ಯಾರ್ಥಿಗಳ ಭವಿಷ್ಯಕ್ಕೆ ತೊಂದರೆ ಆಗಬಾರದು. ಈ ಹಿನ್ನೆಲೆಯಲ್ಲಿ ಲಸಿಕೆಯೇ ಪರಿಹಾರ. ಇದನ್ನು ಎಲ್ಲ ಕುಲಪತಿಗಳು ಗಂಭೀರವಾಗಿ ಪರಿಗಣಿಸಬೇಕು ಎಂದು ಡಿಸಿಎಂ ಹೇಳಿದರು. ಎಲ್ಲ ವಿವಿಗಳಲ್ಲಿ ಲಸಿಕೀಕರಣ ಮುಗಿದ ನಂತರ ನೇರ ತರಗತಿಗಳನ್ನು ಆರಂಭ ಮಾಡುವ ಕುರಿತು ನಿರ್ದರಿಸಲಾಗುವುದು., ಈಗ ನಡೆಯುತ್ತಿರುವ ಆನ್‍ಲೈನ್ ತರಗತಿಗಳು ಅಬಾಧಿತ ಎಂದರು.
ಪದವಿ ವಿದ್ಯಾರ್ಥಿಗಳಿಗೆ ಹೆಲ್ಪ್ ಲೈನ್
ವಿದ್ಯಾರ್ಥಿಗಳಿಗೆ ಈಗಾಗಲೇ ಡಿಜಿಟಲ್ ವೇದಿಕೆಗಳ ಮೂಲಕ ಎಲ್ಲ ಮಾಹಿತಿ ಸಿಗುತ್ತಿದ್ದಾಗ್ಯೂ ಅವರ ಮತ್ತಷ್ಟು ಅನುಕೂಲಕ್ಕಾಗಿ ಹೆಲ್ಪ್ ಲೈನ್ ವ್ಯವಸ್ಥೆಯನ್ನು ರೂಪಿಸಲಾಗುವುದು ಎಂದು ಈ ಸಂದರ್ಭದಲ್ಲಿ ಡಿಸಿಎಂ ಹೇಳಿದರು. ಇದನ್ನೂ ಓದಿ: ಗಾಜಿಪುರ ಗಡಿಯಲ್ಲಿ ಧರಣಿ ನಿರತ ರೈತರು, ಬಿಜೆಪಿ ಕಾರ್ಯಕರ್ತ ನಡುವೆ ಸಂಘರ್ಷ
ಹೆಲ್ಪ್‍ಲೈನ್ ವ್ಯವಸ್ಥೆಯನ್ನು ಆಯಾ ವಿವಿ ವ್ಯಾಪ್ತಿಯಲ್ಲಿ ಮಾಡಿಕೊಳ್ಳಬೇಕು. ಅದಕ್ಕೆ ಬೇಕಾದ ಸಂಪೂರ್ಣ ಸಹಕಾರವನ್ನು ಸರ್ಕಾರ ನೀಡುತ್ತದೆ. ಕಾಲ್ ಸೆಂಟರ್ ಮಾಡುವುದರಿಂದ ವಿದ್ಯಾರ್ಥಿಗಳಿಗೆ ಸಾಕಷ್ಟು ಸಹಾಯ ಆಗಲಿದೆ. ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಆಗುತ್ತಿರುವ ಹಿನ್ನೆಲೆಯಲ್ಲಿ ಇದೊಂದು ಅತ್ಯುತ್ತಮ ಉಪಕ್ರಮ ಆಗಲಿದೆ ಎಂದು ಡಾ.ಅಶ್ವತ್ಥನಾರಾಯಣ ತಿಳಿಸಿದರು. ಇದನ್ನೂ ಓದಿ: ಲಸಿಕೆ ವಿಚಾರದಲ್ಲಿ ಕಾಂಗ್ರೆಸ್ ರಾಜಕೀಯ ಮಾಡಬಾರದು: ಸುಧಾಕರ್ ಕಿಡಿ
ಉನ್ನತ ಶಿಕ್ಷಣ ಪರಿಷತ್ ಉಪಾಧ್ಯಕ್ಷ ಡಾ.ತಿಮ್ಮೇಗೌಡ, ಕಾರ್ಯನಿರ್ವಾಹಕ ನಿರ್ದೇಶಕ ಗೋಪಾಲಕೃಷ್ಣ ಜೋಶಿ, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತ ಪಿ.ಪ್ರದೀಪ್, ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ಕುಲಪತಿ ಪ್ರೊ.ಕರಿಸಿದ್ದಪ್ಪ ಸೇರಿದಂತೆ ಮೈಸೂರು, ಮಂಗಳೂರು, ಬೆಳಗಾವಿ, ಶಿವಮೊಗ್ಗ ಮುಂತಾದ ವಿವಿಗಳ ಕುಲಪತಿಗಳು ಸಭೆಯಲ್ಲಿ ಭಾಗಿಯಾಗಿದ್ದರು. ಇದನ್ನೂ ಓದಿ: ಬಿಸಿಯೂಟ ಆಹಾರ ಧಾನ್ಯಕ್ಕೆ ಕಳ್ಳರ ಕಾಟ – ಶಾಲೆಯಲ್ಲಿಯೇ ವಾಸ್ತವ್ಯ ಮಾಡಿ ರೇಷನ್ ಕಾಪಾಡಿದ ಹೆಡ್ ಮಾಸ್ಟರ್
ಬೆಂಗಳೂರು: ಲಸಿಕೆ ವಿಚಾರದಲ್ಲಿ ಕಾಂಗ್ರೆಸ್ ರಾಜಕೀಯ ಮಾಡಬಾರದು ಅಂತ ಕಾಂಗ್ರೆಸ್ ವಿರುದ್ಧ ಆರೋಗ್ಯ ಸಚಿವ ಸುಧಾಕರ್ ಆಕ್ರೋಶ ಹೊರ ಹಾಕಿದ್ದಾರೆ. ಲಸಿಕೆ ಕೊರತೆ ಬಗ್ಗೆ ಆರೋಗ್ಯ ಸಚಿವರು ಸುಳ್ಳು ಹೇಳ್ತಿದ್ದಾರೆ ಅನ್ನೋ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಚಿವ ಸುಧಾಕರ್, ಕಾಂಗ್ರೆಸ್ ಮೊದಲಿನಿಂದಲೂ ರಾಜಕೀಯ ಮಾಡ್ತಾ ಇದೆ. ಈಗ ಲಸಿಕೆ ವಿಚಾರದಲ್ಲೂ ಇದನ್ನೆ ಮಾಡುತ್ತಿದೆ ಅಂತ ಕಿಡಿಕಾರಿದರು.
ರಾಜ್ಯದಲ್ಲಿ ಈವರೆಗೂ 2 ಕೋಟಿ 28 ಲಕ್ಷ ಲಸಿಕೆ ನೀಡಲಾಗಿದೆ. ಲಸಿಕೆ ಕೊರತೆ ಇದ್ದರೆ ಇಷ್ಟು ಲಸಿಕೆ ಕೊಡಲು ಆಗುತ್ತಿತ್ತಾ? ಇದರಲ್ಲಿ ನಾವು ಸುಳ್ಳು ಹೇಳೋಕೆ ಆಗುತ್ತಾ? ಅಂತ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ರು. ಕಾಂಗ್ರೆಸ್ ನವರು ಮೊದಲಿನಿಂದಲೂ ಅನಗತ್ಯ ಗೊಂದಲ ಸೃಷ್ಟಿ ಮಾಡುವ ಕೆಲಸ ಮಾಡ್ತಿದ್ದಾರೆ. ಕಾಂಗ್ರೆಸ್ ಅವರು ಲಸಿಕೆಯಲ್ಲಿ ರಾಜಕೀಯ ಮಾಡಬಾರದು ಅಂತ ತಿರುಗೇಟು ಕೊಟ್ರು. ಇದನ್ನೂ ಓದಿ: ಅಧಿಕಾರಿ ಸತ್ಯ ಹೇಳಿದ್ದಕ್ಕೆ ಸಚಿವ ಸುಧಾಕರ್ಗೆ ಇರಿಸು ಮುರಿಸು
ಒಂದೆರೆಡು ದಿನ ರಾಜ್ಯಕ್ಕೆ ಕಡಿಮೆ ಲಸಿಕೆ ಬಂದಿರಬಹುದು. ಆದ್ರೆ ಲಸಿಕೆ ಇಲ್ಲ ಅಂತ ಹೇಳೋದು ಸರಿಯಲ್ಲ. ವಿಶ್ವದಲ್ಲಿ ಅತಿ ಹೆಚ್ಚು ಲಸಿಕೆ ಕೊಟ್ಟಿರೋದು ಭಾರತ ದೇಶ. ಇದನ್ನ ಎಲ್ಲರೂ ಅರ್ಥ ಮಾಡಿಕೊಳ್ಳಬೇಕು ಅಂತ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ರು. ನಾನು ಸೋಮವಾರ ದೆಹಲಿಗೆ ತೆರಳುತ್ತಿದ್ದೇನೆ. ಲಸಿಕೆ ಹೆಚ್ಚಳ ಮಾಡಲು ಕೇಂದ್ರಕ್ಕೆ ಮನವಿ ಮಾಡ್ತೀವಿ ಅಂತ ಇದೇ ವೇಳೆ ಸಚಿವರು ತಿಳಿಸಿದರು.
ಯಾದಗಿರಿ: 18 ವರ್ಷ ಮೇಲ್ಪಟ್ಟ ಪಿಯುಸಿ ಮತ್ತು ಪದವಿ ವಿದ್ಯಾರ್ಥಿಗಳು ಕಡ್ಡಾಯವಾಗಿ ಕೊರೊನಾ ಲಸಿಕೆ ಪಡೆಯಲೇಬೇಕು. ಇಲ್ಲವಾದರೆ ಮುಂದಿನ ವರ್ಷಕ್ಕೆ ಪ್ರವೇಶಾತಿ ನೀಡಬೇಡಿ ಎಂದು ಕಾಲೇಜುಗಳ ಪ್ರಾಂಶುಪಾಲರಿಗೆ ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ.ಆರ್ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಈ ಬಗ್ಗೆ ಜಿಲ್ಲಾಡಳಿತ ಭವನದಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಸರ್ಕಾರಿ ಮತ್ತು ಖಾಸಗಿ ಪದವಿ ಕಾಲೇಜುಗಳಲ್ಲಿ 21,342 ವಿದ್ಯಾರ್ಥಿಗಳು, 1,153 ಬೋಧಕ, 505 ಬೋಧಕೇತರ ಸಿಬ್ಬಂದಿ ಇದ್ದು, ಪ್ರತಿ ಕಾಲೇಜಿನಲ್ಲಿ ಶೇಕಡಾ ನೂರರಷ್ಟು ಲಸಿಕೆಯಲ್ಲಿ ಪ್ರಗತಿ ಸಾಧಿಸಬೇಕು. ಪ್ರತಿಯೊಬ್ಬ ವಿದ್ಯಾರ್ಥಿಗೆ ವಾಟ್ಸಪ್ ಸೇರಿದಂತೆ ಇನ್ನಿತರ ವಿಧಾನದಿಂದ ಸಂಪರ್ಕಿಸಿ ಲಸಿಕೆ ಪಡೆಯಲು ತಿಳಿಸಿಬೇಕು ಎಂದು ಕಾಲೇಜು ಆಡಳಿತ ಮಂಡಳಿಗಳಿಗೆ ಡಿಸಿ ತಿಳಿಸಿದ್ದಾರೆ.
ಮುಂದಿನ ಮೂರು ದಿನದೊಳಗೆ ಲಸಿಕಾರಣದಲ್ಲಿ ಶೇ.100ರಷ್ಟು ಪ್ರಗತಿ ಸಾಧಿಸಲು ನೆರವಾಗಬೇಕು. ಈ ಹಿಂದೆ ಶಿಕ್ಷಣ ಇಲಾಖೆಯವರು ಹಲವಾರು ಬಾರಿ ನಮಗೆ ನೆರವಾಗಿದ್ದು, ಅದೇ ರೀತಿಯಾಗಿ ಲಸಿಕಕಾರಣದಲ್ಲಿಯೂ ಸಹ ಸಹಕರಿಸಬೇಕು. ಹಳ್ಳಿಯ ವಿದ್ಯಾರ್ಥಿಗಳು ಲಸಿಕೆ ಪಡೆಯಲು ಸಾರಿಗೆ ವ್ಯವಸ್ಥೆಯನ್ನು ಸಹ ಆಯಾ ತಾಲೂಕು ತಹಶೀಲ್ದಾರ್ ಮೂಲಕ ಜಿಲ್ಲಾಡಳಿತದ ವತಿಯಿಂದ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ.ಆರ್ ಇದೇ ವೇಳೆ ಭರವಸೆ ನೀಡಿದರು.
ಧಾರವಾಡ: ಕೊರೊನಾ ಲಸಿಕಾ ಕೇಂದ್ರದಲ್ಲಿ ಬೆಳಗ್ಗೆಯಿಂದ ಸರದಿಯಲ್ಲಿ ನಿಂತು ಸುಸ್ತಾಗಿದ್ದ ವಿದ್ಯಾರ್ಥಿನಿ ಕಣ್ಣೀರಿಟ್ಟ ಪ್ರಸಂಗ ಧಾರವಾಡದಲ್ಲಿ ನಡೆದಿದೆ.
ಧಾರವಾಡ ಜಿಲ್ಲಾ ಆಸ್ಪತ್ರೆಗೆ ವ್ಯಾಕ್ಸಿನ್ ಹಾಕಿಸಿಕೊಳ್ಳಲು ಬಂದಿದ್ದ ವಿದ್ಯಾರ್ಥಿನಿ ವಿದ್ಯಾ ಬೆಳಗ್ಗೆಯಿಂದ ನಿಂತರೂ ವ್ಯಾಕ್ಸಿನ್ ಆರಂಭಿಸದ ಹಿನ್ನೆಲೆ ಕಣ್ಣಿರು ಹಾಕಿದ್ದಾಳೆ. ವ್ಯಾಕ್ಸಿನ್ ಬೇಗ ಆರಂಭ ಮಾಡದ ಹಿನ್ನೆಲೆ ಸ್ಥಳದಲ್ಲಿದ್ದ ಜನರು ಆರೋಗ್ಯ ಇಲಾಖೆ ಸಿಬ್ಬಂದಿ ಜೊತೆ ವಾಗ್ವಾದಕ್ಕೆ ಇಳಿದರು. ಈ ವೇಳೆ ವಿದ್ಯಾ ಗಳಗಳನೇ ಅಳಲು ಆರಂಭಿಸಿದಳು.
ಬಿಎ ಪದವಿ ಮುಗಿಸಿ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ಮಾಡುತ್ತಿರುವ ಈ ವಿದ್ಯಾರ್ಥಿನಿ, ಮಂಗಳವಾರದ ಸಹ ವ್ಯಾಕ್ಸಿನ್ ಗಾಗಿ ಬಂದು ಹೋಗಿದ್ದಳು. ಆದರೆ ಇವತ್ತೂ ವ್ಯಾಕ್ಸಿನ್ ಸಿಗಲ್ಲ ಎಂಬ ಭಯದಿಂದ ಆಕೆ ಕಣ್ಣೀರು ಹಾಕಿದ್ದಾಗಿ ವಿದ್ಯಾ ಜೊತೆ ಇದ್ದ ಗೆಳತಿಯರು ಹೇಳಿದ್ದಾರೆ.
ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಬೆಳಗ್ಗೆ 6 ಗಂಟೆಯಿಂದಲೇ ಲಸಿಕೆಗಾಗಿ ಸರದಿಯಲ್ಲಿ ನಿಂತಿದ್ದರು. ಆದರೆ ವ್ಯಾಕ್ಸಿನ್ ಕೊಡಬೇಕಾದ ಸಿಬ್ಬಂದಿ ತಮಗೆ ಬೇಕಾದವರಿಗೆ ಆಸ್ಪತ್ರೆ ಒಳಗೆ ಕರೆದುಕೊಂಡು ಹೋಗುತ್ತಿದ್ದಾರೆ ಎಂದು ಕೆಲವರು ಆರೋಪಿಸಿದರು. ಅಲ್ಲದೇ ಆಸ್ಪತ್ರೆ ಸಿಬ್ಬಂದಿ ಜೊತೆ ಗಲಾಟೆಗೆ ಇಳಿದ ಜನ, ಆಸ್ಪತ್ರೆ ಒಳಗೆ ಕೂಡಾ ನುಗ್ಗಿದರು. ಕೆಲವರು ನಿನ್ನೆ ಕೂಡಾ ವ್ಯಾಕ್ಸಿನ್ ಗಾಗಿ ಬಂದು ವಾಪಸ್ ಆಗಿದ್ದಾರೆ. ಆದರೆ ನಿನ್ನೆ ವ್ಯಾಕ್ಸಿನ್ ಸಿಗದ ಹಿನ್ನೆಲೆ ಇವತ್ತು ಬಂದು ಸಾಲಿನಲ್ಲಿ ನಿಂತಿದ್ದರು. ಇದನ್ನೂ ಓದಿ: ಡ್ರಿಂಕ್ಸ್ ಮಾಡ್ತೀನಿ, ಸತ್ರೆ ಇಲ್ಲೇ ಸಾಯ್ತೀನಿ – ಲಸಿಕೆ ಪಡೆಯಲು ಕುಡುಕನ ಹಿಂದೇಟು
ಇತ್ತ ಬೆಂಗಳೂರಿನಲ್ಲಿಯೂ ಕೊರೊನಾ ಲಸಿಕೆಗೆ ಹಾಹಾಕಾರ ಶುರುವಾಗಿದೆ. ನಗರದ ಬಹುತೇಕ ಲಸಿಕಾ ಕೇಂದ್ರಗಳ ಮುಂದೆ ನೋ ಸ್ಟಾಕ್ ಬೋರ್ಡ್ ಕಂಡು ಬಂದಿದೆ. ಇತ್ತ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿ ಇರಲಿಲ್ಲ. ಇದನ್ನೂ ಓದಿ: ವ್ಯಾಕ್ಸಿನ್ ಸೆಂಟರ್ ಮುಂದೆ No Stock ಬೋರ್ಡ್- ಮತ್ತೆ ಲಸಿಕೆಗಾಗಿ ಹಾಹಾಕಾರ
ಯಾದಗಿರಿ: ಒಂದು ಕಡೆ ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳಲು ಭಯಪಡುತ್ತಿರುವ ಪ್ರಯಾಣಿಕರು ಮತ್ತೊಂದೆಡೆ ಕೋವಿಡ್ ಲಸಿಕೆ ಪಡೆಯಲು ಜನರು ಹಿಂದೇಟು ಹಾಕುತ್ತಿದ್ದಾರೆ. ಇದು ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆಗೆ ತಲೆನೋವಾಗಿದೆ. ಯಾದಗಿರಿ ನಗರದಲ್ಲಿ ಕೋವಿಡ್ ಲಸಿಕೆ ಹಾಕಿಸಿಕೊಳ್ಳಿ ಅಂದ್ರೆ ಸಾರ್ ನಾವು ಕುಡಿಯುತ್ತೇವೆ. ಸತ್ತರೆ ನಾವು ಹೀಗೆ ಸಾಯುತ್ತೇವೆ. ಸರ್ ಲಸಿಕೆಗಾಗಿಯೇ ನಾನು ಕೆಲಸ ಬಿಟ್ಟಿದ್ದೇನೆ. ನಾನು ಮಾತ್ರ ಯಾವುದೇ ಕಾರಣಕ್ಕೂ ಲಸಿಕೆ ಪಡೆಯಲ್ಲ ಎಂದು ಕುಡುಕರು ಉದ್ಧಟತನ ತೊರುತ್ತಿದ್ದಾರೆ.
ಈ ನಡುವೆ ಮಹಿಳೆಯೊಬ್ಬಳು ರೇಷನ್ ಕೊಡಿಸಿ ನಾನು ಲಸಿಕೆ ಹಾಕಿಸಿಕೊಳ್ಳುತ್ತೇನೆ. ರೇಷನ್ ನೀಡುವ ಭರವಸೆ ಕೊಟ್ಟನಂತರ ಮಹಿಳೆ ಲಸಿಕೆ ಹಾಕಿಸಿಕೊಂಡಿದ್ದಾರೆ. ಯಾದಗಿರಿ ನಗರದಲ್ಲಿ ಹೀಗೆ ಲಸಿಕೆ ನೀಡಲು ಆರೋಗ್ಯ ಇಲಾಖೆಯ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ.
ಖುದ್ದು ಯಾದಗಿರಿ ನಗರಸಭೆ ಅಧ್ಯಕ್ಷ ವಿಲಾಸ್ ಪಾಟೀಲ್ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಕೋವಿಡ್ ಲಸಿಕೆ ನೀಡುವ ಬಗ್ಗೆ ಜಾಗೃತಿ ಮೂಡಿಸಲು ನಗರದ ಹನುಮಾನ ನಗರಕ್ಕೆ ಹೋದ್ರೆ ಜನರು ಶಾಕ್ ಕೊಟ್ಟಿದ್ದಾರೆ. ಮಹಿಳೆಯರು ಲಸಿಕೆ ಹಾಕಿಸಿಕೊಳ್ಳಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕೊರೊನಾ ಮೂರನೇ ಅಲೆ ಎದುರಿಸಲು ಯಾದಗಿರಿ ಜಿಲ್ಲಾಡಳಿತದ ವಿಭಿನ್ನ ಹೆಜ್ಜೆ
ನಗರಸಭೆ ಅಧ್ಯಕ್ಷ ವಿಲಾಸ್ ಪಾಟೀಲ ಎಷ್ಟೇ ಬುದ್ದಿ ಮಾತು ಹೇಳಿದ್ರೂ ಲಸಿಕೆ ಹಾಕಿಸಿಕೊಳ್ಳದೇ ಯುವಕ ನಿಷ್ಕಾಳಜಿ ತೋರಿದ್ದಾನೆ. ಬಹುತೇಕ ಮಹಿಳೆಯರು ಲಸಿಕೆ ಪಡೆಯಲು ವಿವಿಧ ನೆಪ ಹೇಳಿ ಹಿಂದೇಟು ಹಾಕಿದರು. ಆದರೂ ಕೆಲವರಿಗೆ ತಿಳಿ ಹೇಳಿ ನಗರಸಭೆ ಅಧ್ಯಕ್ಷ ವಿಲಾಸ್ ಪಾಟೀಲ್ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಲಸಿಕೆ ಹಾಕಿಸುವ ಕೆಲಸ ಮಾಡುತ್ತಿದ್ದಾರೆ. ಇದನ್ನೂ ಓದಿ: ಯಾದಗಿರಿಯ ತಿಂಥಣಿ ರಾಜ್ಯದ ಮೊದಲ ಕೊರೊನಾ ಲಸಿಕೆ ಮುಕ್ತ ಗ್ರಾಮ ಪಂಚಾಯ್ತಿ
ಬೆಂಗಳೂರು: ವ್ಯಾಕ್ಸಿನ್ ಸೆಂಟರ್ ಮುಂದೆ ನೋ ಸ್ಟಾಕ್ ಬೋರ್ಡ್ ಹಾಕಲಾಗಿದ್ದು, ಲಸಿಕೆಗಾಗಿ ಮತ್ತೆ ಹಾಹಾಕಾರ ಶುರುವಾಗಿದೆ.
ಬೆಂಗಳೂರಿನ ಕೆ.ಸಿ.ಜನರಲ್ ಆಸ್ಪತ್ರೆಯಲ್ಲೇ ವ್ಯಾಕ್ಸಿನ್ ಕೊರತೆ ಉಂಟಾಗಿದೆ. ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ಜನ ದಟ್ಟಣೆ ಹೆಚ್ಚಾಗುವ ಹಿನ್ನೆಲೆ ಆಸ್ಪತ್ರೆಯ ಮುಂಭಾಗದ ಸರ್ಕಾರಿ ಶಾಲಾ ಮೈದಾನದಲ್ಲಿ ವ್ಯಾಕ್ಸಿನ್ ಸೆಂಟರ್ ತೆರೆಯಲಾಗಿತ್ತು. ಇದನ್ನೂ ಓದಿ:ಅರವಿಂದ್ ವರ್ಸಸ್ ನಿಧಿ – ಯಾರು ಸರಿ? ಯಾರು ತಪ್ಪು?
ಮಂಗಳವಾರ ಕೇವಲ 200 ಜನರಿಗೆ ಡೋಸ್ ನೀಡಿದ್ದು, ಇಂದು ಸ್ಟಾಕ್ ಬಂದಿಲ್ಲ. ಗೇಟ್ ಮುಂಭಾಗದಲ್ಲಿ ನೋ ಸ್ಟಾಕ್ ಅನ್ನೋ ಬೋರ್ಡ್ ಹಾಕಿದ್ದಾರೆ. ಇಂದು ಬೆಳಗ್ಗೆಯೇ ಲಸಿಕೆಗಾಗಿ ಸಾಲುಗಟ್ಟಿ ನಿಂತಿದ್ದ ಜನ 9 ಗಂಟೆಗೆ ನೋ ಸ್ಟಾಕ್ ಬೋರ್ಡ್ ಹಾಕಿದ್ದಕ್ಕೆ ಆಕ್ರೋಶ ಹೊರ ಹಾಕಿದರು. ನಿನ್ನೆಯೇ ನೋ ಸ್ಟಾಕ್ ಬೋರ್ಡ್ ಹಾಕಬೇಕು ಅಥವಾ ಯಾರಾದ್ರು ಸಿಬ್ಬಂದಿ ಇವತ್ತು ಸ್ಟಾಕ್ ಇಲ್ಲ ಅಂತ ಹೇಳಲು ನಿಯೋಜಿಸಬೇಕು. ನಾವೆಲ್ಲ ಬೆಳಗ್ಗೆ 5 ಗಂಟೆಯಿಂದ ಕಾಯುತ್ತಿದ್ದೇವೆ ಈಗ ನೋ ಸ್ಟಾಕ್ ನಾಳೆ ಬನ್ನಿ ಅಂದ್ರೆ ಹೇಗೆ ಅಂತಾ ಆಕ್ರೋಶ ಹೊರಹಾಕಿದರು. ಇದನ್ನೂ ಓದಿ: ಒಂದೇ ಡೈಲಾಗಿನಿಂದ ನಿಧಿ, ದಿವ್ಯಾ, ಮಂಜುಗೆ ತಿವಿದ ಅರವಿಂದ್
ಮಂಗಳವಾರ ಬೆಳಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ್ದ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ವ್ಯಾಕ್ಸಿನ್ ಕೊರತೆಯನ್ನು ಒಪ್ಪಿಕೊಂಡಿದ್ದರು. ಆದ್ರೆ ಮಧ್ಯಾಹ್ನ ಉಲ್ಟಾ ಹೊಡೆದ ಸಚಿವರು ವ್ಯಾಕ್ಸಿನ್ ಇರೋದಾಗಿ ಹೇಳಿಕೆ ನೀಡಿದ್ದರು.
– ಆಮ್ಲಜನಕ ಟ್ಯಾಂಕ್ ಗೆ ಜಾಗತಿಕ ಟೆಂಡರ್ – ಆಮ್ಲಜನಕ, ಲಸಿಕೆ ವ್ಯವಸ್ಥೆ ಪರಿಶೀಲನೆ ನಡೆಸಿದ ಡಿಸಿಎಂ
ಬೆಂಗಳೂರು: ಇನ್ನು 10 ದಿನಗಳಲ್ಲಿ 18 ವರ್ಷ ಮೇಲ್ಪಟ್ಟ ಎಲ್ಲ ಕಾಲೇಜು ವಿದ್ಯಾರ್ಥಿಗಳಿಗೂ ಕೋವಿಡ್ ಲಸಿಕೆ ನೀಡುವುದು ಹಾಗೂ ಅಗಸ್ಟ್ ಒಳಗೆ 360 ಘಟಕಗಳಿಂದ ಆಮ್ಲಜನಕ ಉತ್ಪಾದನೆ ಸೇರಿ 2,800 ಟನ್ ಆಕ್ಸಿಜನ್ ಸಂಗ್ರಹ ಸಾಮರ್ಥ್ಯವನ್ನು ಹೆಚ್ಚಿಸಲಾಗುವುದು ಎಂದು ರಾಜ್ಯ ಕೋವಿಡ್ ಕಾರ್ಯಪಡೆ ಅಧ್ಯಕ್ಷರಾದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್ ನಾರಾಯಣ ಹೇಳಿದರು.
ರಾಜ್ಯದಲ್ಲಿನ ಆಮ್ಲಜನಕ ವ್ಯವಸ್ಥೆ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಲಸಿಕೆ ಹಾಕಿಸುವ ಸಂಬಂಧ ಆರೋಗ್ಯ, ವೈದ್ಯಕೀಯ ಶಿಕ್ಷಣ ಇಲಾಖೆ ಅಧಿಕಾರಿಗಳ ಸಭೆ ನಡೆಸಿದ ನಂತರ ಮಾಧ್ಯಮಗಳ ಜತೆ ಮಾತನಾಡಿದ ಡಿಸಿಎಂ, ವಿದ್ಯಾರ್ಥಿಗಳು ಈ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಕೋರಿದರು. ಇದನ್ನೂ ಓದಿ: ತೆಂಗಿನಮರದ ಕಾಯಿ ಬಿದ್ದು 11 ತಿಂಗಳ ಹಸುಗೂಸು ಸಾವು
ಸೋಮವಾರ 94,000 ವಿದ್ಯಾರ್ಥಿಗಳಿಗೆ ಲಸಿಕೆ ಕೊಡಲಾಯಿತು. ರಾಜ್ಯದೆಲ್ಲೆಡೆ ಆಯಾ ಕಾಲೇಜುಗಳ ಪ್ರಾಂಶುಪಾಲರಿಗೆ ಜವಾಬ್ದಾರಿ ವಹಿಸಲಾಗಿದ್ದು, ಇನ್ನು ಹತ್ತು ದಿನದಲ್ಲಿ ಎಂಜಿನಿಯರಿಂಗ್, ಮೆಡಿಕಲ್, ಪ್ಯಾರಾ ಮೆಡಿಕಲ್, ಡಿಪ್ಲೋಮಾ, ಜಿಸಿಐಟಿ, ಐಟಿಐ, ಪಾಲಿಟೆಕ್ನಿಕ್ ಮತ್ತು ಪದವಿ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಚುರುಕಾಗಿ ಲಸಿಕೆ ಕೊಡಲಾಗುವುದು. ಅಲ್ಲದೆ, ಮುಖ್ಯಮಂತ್ರಿಗಳ ಕೌಶಲ್ಯ ಯೋಜನೆ ಅಡಿ ನೋಂದಾಯಿಸಿಕೊಂಡಿರುವ ಪ್ರತಿಯೊಬ್ಬರಿಗೂ ಲಸಿಕೆ ಲಭ್ಯವಾಗಲಿದೆ ಎಂದು ಡಿಸಿಎಂ ಮಾಹಿತಿ ನೀಡಿದರು.
ಜೂನ್ ತಿಂಗಳಲ್ಲಿ 60 ಲಕ್ಷ ಲಸಿಕೆ ನೀಡಲಾಗಿದ್ದು, ಜುಲೈನಲ್ಲಿ ಇನ್ನೂ ಹೆಚ್ಚು ಕೊಡಲಾಗುವುದು. ಈಗಾಗಲೇ ಕೇಂದ್ರದಿಂದ ಉತ್ತಮವಾಗಿ ಲಸಿಕೆ ಪೂರೈಕೆ ಆಗುತ್ತಿದ್ದು, ಖಾಸಗಿ ಕ್ಷೇತ್ರದಿಂದಲೂ ವ್ಯಾಕ್ಸಿನ್ ಪಡೆದು ಜನರಿಗೆ ಕೊಡಲಾಗುವುದು. ಲಸಿಕೆ ಅಭಿಯಾನದಲ್ಲಿ ಇಡೀ ದೇಶದಲ್ಲೇ ರಾಜ್ಯವೂ 3ನೇ ಸ್ಥಾನದಲ್ಲಿದೆ ಎಂದು ಡಾ.ಅಶ್ವಥ್ ನಾರಾಯಣ ತಿಳಿಸಿದರು.
ಆಕ್ಸಿಜನ್ ಉತ್ಪಾದನೆ ಮತ್ತು ಸಂಗ್ರಹ:
ಎರಡನೇ ಅಲೆಯ ಸಂಕಷ್ಟ ದೃಷ್ಟಿಯಲ್ಲಿ ಇಟ್ಟುಕೊಂಡು ಮೂರನೇ ಅಲೆಗೆ ಸರ್ವ ಸನ್ನದ್ಧವಾಗಿದೆ ಸರ್ಕಾರ. ಆಮ್ಲಜನಕ ಕೊರತೆ ಆಗದಂತೆ ಕಟ್ಟೆಚ್ಚರ ವಹಿಸಿದೆ. ಈ ಹಿನ್ನೆಲೆಯಲ್ಲಿ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಆಮ್ಲಜನಕ ಸಂಗ್ರಹ ಸಾಮಥ್ರ್ಯ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ. ಸದ್ಯಕ್ಕೆ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ (ಸರ್ಕಾರಿ ಮತ್ತು ಖಾಸಗಿ) ಇಲಾಖೆಗಳ ವ್ಯಾಪ್ತಿಯಲ್ಲಿ 400 ಮೆಟ್ರಿಕ್ ಟನ್ ಆಮ್ಲಜನಕ ಉತ್ಪಾದನೆ ಆಗುವುದಿದೆ. ಕೆಲವೆಡೆ ಈಗಾಗಲೇ ಉತ್ಪಾದನೆ ಆಗುತ್ತಿದ್ದರೆ, ಇನ್ನು ಕೆಲವೆಡೆ ಘಟಕಗಳನ್ನು ಅಳವಡಿಸಲಾಗುತ್ತಿದೆ. ಇನ್ನು ಕೇಂದ್ರ ಸರ್ಕಾರ, ಪಿಎಂ ಕೇರ್, ಸಿಎಸ್‍ಆರ್ ಹಾಗೂ ರಾಜ್ಯ ಸರಕಾರ ಖರೀದಿ ಮಾಡಿರುವ 40 ಸೇರಿ 187 ಆಮ್ಲಜನಕ ಘಟಕಗಳನ್ನು ಆರೋಗ್ಯ ಇಲಾಖೆಗೆ ನೀಡಲಾಗಿದೆ. ಇವುಗಳ ಅಳವಡಿಕೆ ಕಾರ್ಯ ವಿವಿಧ ಹಂತಗಳಲ್ಲಿದೆ ಎಂದು ಉಪ ಮುಖ್ಯಮಂತ್ರಿ ಹೇಳಿದರು.
ಕೆಲ ಘಟಕಗಳು ಈ ತಿಂಗಳ ಒಳಗಾಗಿ ಉತ್ಪಾದನೆ ಆರಂಭಿಸುವುದಿದ್ದು, ಉಳಿದವು ಆಗಸ್ಟ್ ನಲ್ಲಿ ಪೂರ್ಣ ಉತ್ಪಾದನೆ ಶುರು ಮಾಡಲಿವೆ. ವೈದ್ಯಕೀಯ ಶಿಕ್ಷಣ ಇಲಾಖೆಗೆ ಕೇಂದ್ರವು ನೀಡಿರುವ 17 ಸೇರಿ ಸಿ ಎಸ್ ಆರ್ ನಿಂದ ಬಂದಿರುವವು ಸೇರಿ 40 ಆಕ್ಸಿಜನ್ ಜನರೇಟರ್ ಗಳಿವೆ. ಇದಲ್ಲದೆ, ರಾಜ್ಯ ಸರ್ಕಾರ 35 ಖಾಸಗಿ ಮೆಡಿಕಲ್ ಕಾಲೇಜುಗಳಿಗೆ ಆಕ್ಸಿಜನ್ ಜನರೇಟರ್ ಗಳ ಅಳವಡಿಕೆ ಮತ್ತು ಸಂಗ್ರಹಕ್ಕೆ ಆರ್ಥಿಕ ನೆರವು ನೀಡಲಾಗಿದೆ. ಇಲ್ಲಿಯೂ ಕೂಡ ಅಗಸ್ಟ್ ನಿಂದಲೇ ಆಮ್ಲಜನಕ ಉತ್ಪಾದನೆಯಾಗಲಿದೆ. ಒಟ್ಟು 360 ಘಟಕಗಳಿಂದ ಆಮ್ಲಜನಕ ಲಭ್ಯವಾಗಲಿದೆ. ಜತೆಗೆ, ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ವಿಪತ್ತು ಪರಿಹಾರ ನಿಧಿ, ಸಿಎಸ್ಆರ್ ನೆರವು ಇತ್ಯಾದಿಗಳಿಂದ ಘಟಕಗಳನ್ನು ಹಾಕಲಾಗಿದೆ. ಬುಧವಾರದ ಹೊತ್ತಿಗೆ ಆ ಮಾಹಿತಿ ಸಿಗುತ್ತದೆ. ರಾಜ್ಯದಲ್ಲಿ ನಿಖರವಾಗಿ ಎಷ್ಟು ಪ್ರಮಾಣದಲ್ಲಿ ಆಮ್ಲಜನಕ ಉತ್ಪಾದನೆ ಆಗುತ್ತದೆ ಎಂಬುದನ್ನು ತಿಳಿದುಕೊಂಡು ಮತ್ತಷ್ಟು ಕ್ರಮ ವಹಿಸಲಾಗುವುದು ಎಂದು ಉಪ ಮುಖ್ಯಮಂತ್ರಿಗಳು ಮಾಹಿತಿ ನೀಡಿದರು.
ಆಮ್ಲಜನಕ ಸಂಗ್ರಹಕ್ಕೂ ಕ್ರಮ:
ಆಮ್ಲಜಕನ ಉತ್ಪಾದನೆ ಜತೆಗೆ ಅದರ ಅತ್ಯುತ್ತಮ ಸಂಗ್ರಹಣಾ ವ್ಯವಸ್ಥೆಗೂ ಆದ್ಯತೆ ನೀಡಲಾಗಿದೆ ಎಂದ ಡಿಸಿಎಂ, ಆರೋಗ್ಯ ಇಲಾಖೆ ವ್ಯಾಪ್ತಿಯಲ್ಲೇ 1806 ಮೆಟ್ರಿಕ್ ಟನ್ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ 500 ಮೆಟ್ರಿಕ್ ಟನ್ ಆಮ್ಲಜನಕವನ್ನು ಹೆಚ್ಚುವರಿ ಸಂಗ್ರಹ ಮಾಡುವ ಗುರಿ ಇದ್ದು, ಅದಕ್ಕೆ ಬೇಕಾದ ಎಲ್ಲ ಕ್ರಮವನ್ನು ಈಗಾಗಲೇ ವಹಿಸಲಾಗಿದೆ. ಅಗಸ್ಟ್ ತಿಂಗಳ ಒಳಗೆ ಇದೆಲ್ಲ ಪೂರ್ಣವಾಗಿ ಅನುಷ್ಠಾನಕ್ಕೆ ಬರಲಿದೆ ಎಂದರು.
ಜಾಗತಿಕ ಟೆಂಡರ್
ಆರೋಗ್ಯ ಇಲಾಖೆಯಲ್ಲಿ 1806 ಟನ್ ಸಂಗ್ರಹ ಸಾಮರ್ಥ್ಯದ ಯೋಜನೆಗೆ ಹಣಕಾಸು ಇಲಾಖೆಯ ಒಪ್ಪಿಗೆ ಸಿಕ್ಕ ಕೂಡಲೇ ಜಾಗತಿಕ ಟೆಂಡರ್ ಕರೆಯಲಾಗುವುದು. ನಮ್ಮ ದೇಶದಲ್ಲಿ ಲಿಕ್ವಿಡ್ ಆಕ್ಸಿಜನ್ ಟ್ಯಾಂಕರ್ ಗಳನ್ನು ತಯಾರಿಸುವ ಎರಡೇ ಕಂಪೆನಿಗಳಿರುವ ಕಾರಣಕ್ಕೆ ಗ್ಲೋಬಲ್ ಟೆಂಡರ್ ಕರೆಯಲಾಗುವುದು ಎಂದು ಡಿಸಿಎಂ ಹೇಳಿದರು.
ಪ್ರತಿ ತಾಲೂಕು ಆಸ್ಪತ್ರೆಯಲ್ಲಿ ತಲಾ 6 ಮೆ.ಟನ್ ಹಾಗೂ ಪ್ರತಿ ಜಿಲ್ಲಾಸ್ಪತ್ರೆಯಲ್ಲಿ ತಲಾ 20 ಮೆ.ಟನ್ ಸಂಗ್ರಹ ಮಾಡುವ ಗುರಿ ಇದೆ. ಕೆಲ ಮೆಡಿಕಲ್ ಕಾಲೇಜ್ ಗಳಲ್ಲಿ 40-50 ಮೆ.ಟನ್ ಸಂಗ್ರಹ ಸಾಮರ್ಥ್ಯವುಳ್ಳ ಆಕ್ಸಿಜನ್ ಟ್ಯಾಂಕರ್ ಗಳಿವೆ. ಇಂಥ ಟ್ಯಾಂಕರ್ ಗಳನ್ನು ತಯಾರಿಸಲು ಈ ಟೆಂಡರ್ ಕರೆಯಲಾಗುತ್ತಿದೆ. ಈ ಎಲ್ಲ ಲೆಕ್ಕದಂತೆ 2,500-2,800 ಟನ್ ಆಕ್ಸಿಜನ್ ಸಂಗ್ರಹ ಮಾಡುವ ವ್ಯವಸ್ಥೆ ರಾಜ್ಯದಲ್ಲಿ ಆಗಲಿದೆ. ಜತೆಗೆ ಜಂಬೋ ಮತ್ತು ಡ್ಯೂರಾ ಸಿಲಿಂಡರ್ ಗಳ ಮೂಲಕ 45 ಟನ್ ಆಕ್ಸಿಜನ್ ಸಂಗ್ರಹ ಸಾಮರ್ಥ್ಯ ಮಾಡಿಕೊಳ್ಳಲು ಕ್ರಮ ವಹಿಸಲಾಗಿದೆ. ಅಲ್ಲದೆ, 9 ಜಿಲ್ಲೆಗಳಲ್ಲಿ ಆಕ್ಸಿಜನ್ ರೀ ಫಿಲ್ಲಿಂಗ್ ಸೌಲಭ್ಯ ಇಲ್ಲ, ಅದನ್ನೂ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದರು.
ಜತೆಗೆ, ದೊಡ್ಡ ದೊಡ್ಡ ಆಸ್ಪತ್ರೆಗಳಲ್ಲೇ ಆಕ್ಸಿಜನ್ ಸಂಗ್ರಹ ಘಟಕಗಳಿಲ್ಲ. ಕೂಡಲೇ ಅಳವಡಿಸಿಕೊಳ್ಳಬೇಕು ಎಂದು ಸರ್ಕಾರ ನೋಟಿಸ್ ಜಾರಿ ಮಾಡಿದೆ ಎಂದು ಡಿಸಿಎಂ ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.
ಆಕ್ಸಿಜನ್ ಬೆಡ್ ಸಂಖ್ಯೆಯೂ ಹೆಚ್ಚಳ:
ರಾಜ್ಯದಲ್ಲಿ ಈಗ 58,000 ಆಕ್ಸಿಜನ್ ಬೆಡ್ ಗಳಿದ್ದು, ಈ ಪ್ರಮಾಣವನ್ನು 84,000ಕ್ಕೆ ಹೆಚ್ಚಿಸಲು ಕ್ರಮ ವಹಿಸಲಾಗಿದೆ. ಜತೆಗೆ, ಎಲ್ಲ ತಾಲೂಕು ಮತ್ತು ಜಿಲ್ಲಾಸ್ಪತ್ರೆಗಳಲ್ಲಿ ಐಸಿಯು ಘಟಕಗಳನ್ನು ಆದ್ಯತೆಯ ಮೇರೆಗೆ ಅಳವಡಿಸಲಾಗುತ್ತಿದೆ ಎಂದರು.
ಅರಿವಳಿಕೆ ತಜ್ಞ ಡಾ.ರಾಘವೇಂದ್ರ ನೇತೃತ್ವದ ಆಮ್ಲಜನಕ ನಿರ್ವಹಣೆ ಸಮಿತಿ ವರದಿ ನೀಡಿದ್ದು ಆ ಪ್ರಕಾರ ಮೂಲಸೌಕರ್ಯ ಕಲ್ಪಿಸಲು ಕ್ರಮ ಜರುಗಿಸಲಾಗಿದೆ ಎಂದರು.
ಆರೋಗ್ಯ ಇಲಾಖೆ ಹೆಚ್ವುವರಿ ಮುಖ್ಯ ಕಾರ್ಯದರ್ಶಿ ಜಾವೇದ್ ಅಕ್ತರ್, ಲಸಿಕೆ ಉಸ್ತುವಾರಿ ಅಧಿಕಾರಿ ವಂದಿತಾ ಶರ್ಮಾ, ವೈದ್ಯಕೀಯ ಶಿಕ್ಷಣ ಇಲಾಖೆ ಕಾರ್ಯದರ್ಶಿ ಅನಿಲ ಕುಮಾರ್, ವೈದ್ಯಕೀಯ ಶಿಕ್ಷಣ ಇಲಾಖೆ ನಿರ್ದೇಶಕ ಡಾ.ಗಿರೀಶ, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತ ಪಿ.ಪ್ರದೀಪ ಸೇರಿದಂತೆ ಇತರ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಇದ್ದರು.