Tag: ಕೊರೊನಾ ಲಸಿಕೆ

  • ಕೊರೊನಾ ಲಸಿಕೆ ಹಾಕುವ ಪ್ರಕ್ರಿಯೆ ಹೇಗೆ ನಡೆಯುತ್ತದೆ?

    ಕೊರೊನಾ ಲಸಿಕೆ ಹಾಕುವ ಪ್ರಕ್ರಿಯೆ ಹೇಗೆ ನಡೆಯುತ್ತದೆ?

    ಬೆಂಗಳೂರು: ಕೊರೋನಾ ಲಸಿಕೆ ನೀಡಿಕೆ ಸಮೀಪ ಹಿನ್ನೆಲೆಯಲ್ಲಿ ಮತ್ತೊಮ್ಮೆ ಪರಿಶೀಲನೆಗೆ ಡೆಡ್‌ಲೈನ್‌ ನೀಡಲಾಗಿದೆ. ಇಂದಿನಿಂದ ಮುಂದಿನ 3 ದಿನ ಪಕ್ಕಾ ಟಾರ್ಗೆಟ್ ನೀಡಲಾಗಿದೆ. ಪಾಲಿಕೆ ವತಿಯಿಂದ ಬೇರೆ ಇಲಾಖೆಯ ಸಿಬ್ಬಂದಿ ಸಹ ಕೋವಿಡ್ ಲಸಿಕೆ ಕೆಲಸ ಮಾಡಬೇಕು ಎಂದು ಚರ್ಚೆ ನಡೆದಿದೆ.

    ಇದೇ ವೇಳೆ ಈ ಮೇಲುಸ್ತುವಾರಿ ಕಾಯಲು ಎಲ್ಲ ವಲಯಗಳ ವಿಶೇಷ ಆಯುಕ್ತರಿಗೂ ಜವಾಬ್ದಾರಿ ವಹಿಸಲಾಗಿದೆ. ಹೀಗಾಗಿ ಲಸಿಕೆ ಹಂಚಿಕೆ,ನೀಡಿಕೆ ವಲಯವಾರು ವಿಶೇಷ ಆಯುಕ್ತರ ಮೇಲ್ವಿಚಾರಣೆಯಲ್ಲಿ ನಡೆಯಲಿದೆ. ಸದ್ಯಕ್ಕೆ 1038 ಕೇಂದ್ರಗಳನ್ನು ಮತ್ತೊಮ್ಮೆ ಅಧಿಕಾರಿಗಳು ಪರಿಶೀಲನೆ ಮಾಡಿ ಅಂತಿಮ ಪಟ್ಟಿ ಆರೋಗ್ಯ ಇಲಾಖೆಗೆ ತಲುಪಿಸಬೇಕಾಗಿದೆ.

    ಕೊರೋನಾ ವ್ಯಾಕ್ಸಿನ್ ನೀಡುವ ಸೆಂಟರ್ ಗಳಲ್ಲಿ ಅಂತಿಮ ಕಸರತ್ತು ನಡೆಯುತ್ತಿದೆ. ಮೂರು ಪ್ರತ್ಯೇಕ ಕೊಠಡಿಗಳಲ್ಲಿ ಲಸಿಕೆ ಹಂಚಿಕೆ ಪ್ರಕ್ರಿಯೆ ನಡೆಯಲಿದೆ

    ಯಾವ ಕೊಠಡಿಯಲ್ಲಿ ಏನು?
    ಕಾಯುವ ಕೊಠಡಿ – ಲಸಿಕೆ ಹಾಕುವುದಕ್ಕೂ ಮುನ್ನ ವ್ಯಕ್ತಿ ಇಲ್ಲಿ ಕುಳಿತು ತಮ್ಮ ಸರದಿಗಾಗಿ ಕಾಯಬೇಕು..
    ಲಸಿಕೆ ಕೊಠಡಿ – ಇಲ್ಲಿ ವ್ಯಕ್ತಿಗೆ ವೈದ್ಯರು ಅಥವಾ ವೈದ್ಯಾಧಿಕಾರಿ ಲಸಿಕೆ ಹಾಕುತ್ತಾರೆ
    ಮೇಲ್ವಿಚಾರಣಾ ಕೊಠಡಿ – ಲಸಿಕೆ ಪಡೆದ ಬಳಿಕ ವ್ಯಕ್ತಿ 30 ನಿಮಿಷಗಳ ಕಾಲ ಕೊಠಡಿಯಲ್ಲಿ ಕುಳಿತುಕೊಳ್ಳಬೇಕು. ವ್ಯಕ್ತಿಯ ಮೇಲೆ ಲಸಿಕೆ ಪ್ರತಿಕ್ರಿಯೆಯನ್ನು ಮೇಲ್ವಿಚಾರಣೆ ಮಾಡಲೇಬೇಕು. ಒಂದು ವೇಳೆ ಆರೋಗ್ಯದಲ್ಲಿ ಏರುಪೇರಾದರೆ ಕೂಡಲೇ ಆಸ್ಪತ್ರೆಗೆ ದಾಖಲಿಸಬೇಕು.

  • 8 ವಿಮಾನಗಳ ಮೂಲಕ ಪುಣೆಯಿಂದ 1.1 ಕೋಟಿ ಲಸಿಕೆ ಸಾಗಾಟ

    8 ವಿಮಾನಗಳ ಮೂಲಕ ಪುಣೆಯಿಂದ 1.1 ಕೋಟಿ ಲಸಿಕೆ ಸಾಗಾಟ

    ಪುಣೆ: ಕಳೆದ ಒಂದು ವರ್ಷದಿಂದ ಕೊರೋನಾ ಹೆಮ್ಮಾರಿ ದಾಳಿಯಿಂದ ತತ್ತರಿಸಿ ಹೋಗಿರುವ ದೇಶ, ಇನ್ನು ಕೆಲವೇ ಕೆಲವು ದಿನಗಳಲ್ಲಿ ನಿಟ್ಟುಸಿರು ಬಿಡಲಿದೆ. ಮನುಕುಲವನ್ನು ಕಾಡಿದ ಭೀಕರ ವೈರಸ್ ಅನ್ನು ಎದುರಿಸಲು ಲಸಿಕೆ ಬಂದಾಗಿದೆ.

    ನಾಲ್ಕು ದಿನಗಳಲ್ಲಿ ದೇಶಾದ್ಯಂತ ಲಸಿಕೆ ಹಾಕುವ ಪ್ರಕ್ರಿಯೆ ಆರಂಭವಾಗಲಿದೆ. ಇದಕ್ಕೆ ಶರಗವೇಗದಲ್ಲಿ ಸಿದ್ಧತೆಗಳು ನಡೆದಿವೆ. ಇದರ ಭಾಗವಾಗಿ ಇಂದು ಮೊದಲ ಕಂತಿನ ಲಸಿಕೆಗಳನ್ನು ಬೆಂಗಳೂರು ಸೇರಿದಂತೆ ದೇಶದ 13 ಪ್ರಮುಖ ನಗರಗಳಿಗೆ 8 ವಿಮಾನಗಳ ಮೂಲಕ ಸಾಗಣೆ ಮಾಡಲಾಗಿದೆ.

    ಬೆಳಗಿನ ಜಾವ 4.30ಕ್ಕೆ ಪುಣೆಯ ಸೆರಂ ಸಂಸ್ಥೆ, ಮೂರು ಟ್ರಕ್‍ಗಳಲ್ಲಿ ಮೊದಲ ಕಂತಿನ ಕೋವಿಶೀಲ್ಡ್ ಲಸಿಕೆಗಳನ್ನು ವಿಮಾನ ನಿಲ್ದಾಣಕ್ಕೆ ಸಾಗಿಸಿತು. ಅಲ್ಲಿಂದ ವಿಮಾನಗಳ ಮೂಲಕ ವಿವಿಧೆಡೆಗಳಿಗೆ ಲಸಿಕೆಗಳನ್ನು ಸುರಕ್ಷಿತವಾಗಿ ಸಾಗಣೆ ಮಾಡಲಾಯಿತು.

    ಒಂದೆರಡು ದಿನಗಳಲ್ಲಿ ಪ್ರಮುಖ ನಗರಗಳ ಪ್ರಧಾನ ಲಸಿಕಾ ಕೇಂದ್ರದಿಂದ ಈಗಾಗಲೇ ಗುರುತಿಸಲಾದ ಆರೋಗ್ಯ ಕೇಂದ್ರಗಳಿಗೆ ಲಸಿಕೆಗಳನ್ನು ಪೂರೈಕೆ ಮಾಡಲಾಗುತ್ತದೆ. ಜನವರಿ 16ರಿಂದ ಮೊದಲ ಹಂತದ ವ್ಯಾಕ್ಸಿನೇಷನ್ ಕಾರ್ಯ ಶುರುವಾಗಲಿದ್ದು, 3 ಕೋಟಿ ಕೊರೋನಾ ವಾರಿಯರ್ಸ್‍ಗೆ ಲಸಿಕೆ ನೀಡಲಾಗುತ್ತದೆ.

    ಲಸಿಕೆ ಪೂರೈಕೆಯನ್ನು ಐತಿಹಾಸಿಕ ಕ್ಷಣ ಎಂದು ಸೆರಂ ಸಿಇಓ ಆದಾರ್ ಪೂನಾವಾಲಾ ಬಣ್ಣಿಸಿದ್ದಾರೆ. ಮುಂದಿನ ದಿನಗಳಲ್ಲಿ 1000 ರೂಪಾಯಿಗೆ ಓಪನ್ ಮಾರ್ಕೆಟ್‍ನಲ್ಲಿ ಲಸಿಕೆ ಮಾರಾಟ ಮಾಡಲಿದ್ದೇವೆ ಎಂದು ತಿಳಿಸಿದ್ದಾರೆ.

    ಸಾಗಾಟ ಹೇಗಾಯ್ತು?
    ಪುಣೆಯ ಸೆರಂನಿಂದ 1.1ಕೋಟಿ ಕೋವಿಶೀಲ್ಡ್ ಲಸಿಕೆಗಳನ್ನು 478 ಬಾಕ್ಸ್‍ಗಳ ಮೂಲಕ ಕೋವಿಶೀಲ್ಡ್ ಲಸಿಕೆ ರವಾನೆ ಮಾಡಲಾಗಿದೆ. ಕೋವಿಶೀಲ್ಡ್ ಲಸಿಕೆಗಳ ಒಂದೊಂದು ಬಾಕ್ಸ್ 32 ಕೆಜಿ ತೂಕವನ್ನು ಹೊಂದಿದ್ದು, ಪ್ರತಿಯೊಂದು ಬಾಕ್ಸ್‌ನಲ್ಲಿ  5 ಎಂಎಲ್‍ನ 1200 ಲಸಿಕೆ ಬಾಟಲ್ ಇರಲಿದೆ.

    ಫಲಾನುಭವಿಗಳಿಗೆ 0.5 ಎಂಎಲ್ ಡೋಸ್ ಮಾತ್ರ ನೀಡಬೇಕಾಗುತ್ತದೆ. ದೇಶದ ವಿವಿಧೆಡೆಗಳಿಗೆ ಒಟ್ಟು 15.296 ಟನ್ ತೂಕದ ಲಸಿಕೆ ರವಾನೆಯಾಗಿದೆ. ಅಕ್ಟೋಬರ್ 20 ರಂದು ಲಸಿಕೆಗಳನ್ನು ಉತ್ಪಾದನೆ ಮಾಡಲಾಗಿದ್ದು, ಏಪ್ರಿಲ್ 20ರವರೆಗೆ ಬಳಸಬಹುದಾಗಿದೆ.

    ಏರ್ ಇಂಡಿಯಾ, ಗೋ ಏರ್, ಸ್ಪೈಸ್ ಜೆಟ್ ವಿಮಾನಗಳ ಮೂಲಕ ದೆಹಲಿ, ಬೆಂಗಳೂರು, ಅಹ್ಮದಾಬಾದ್, ಕೊಲ್ಕೊತಾ, ಚೆನ್ನೈ, ಲಕ್ನೋ, ಕರ್ನಾಲ್, ಪಾಟ್ನಾ, ಹೈದರಾಬಾದ್, ವಿಜಯವಾಡ, ಗುವಾಹಟಿ, ಚಂಡೀಘಡ, ಭುವನೇಶ್ವರಕ್ಕೆ ಲಸಿಕೆ ಸಾಗಣೆ ಮಾಡಲಾಗಿದೆ. ಮುಂಬೈಯಿಂದ ಬೆಳಗಾವಿಗೆ 1.47 ಲಕ್ಷ ಡೋಸ್ ಲಸಿಕೆ ರಸ್ತೆ ಮಾರ್ಗದ ಮೂಲಕ ಬರಲಿದೆ.

  • ಚೀನಾ, ಇಟಲಿಯಿಂದ ಬಂದ್ರೆ ಒಳ್ಳೆದು ಅಂತಾರೆ, ದೇಶದ ಲಸಿಕೆ ಬಗ್ಗೆ ಅಪಪ್ರಚಾರ ಮಾಡ್ತಾರೆ: ಸಿಟಿ ರವಿ

    ಚೀನಾ, ಇಟಲಿಯಿಂದ ಬಂದ್ರೆ ಒಳ್ಳೆದು ಅಂತಾರೆ, ದೇಶದ ಲಸಿಕೆ ಬಗ್ಗೆ ಅಪಪ್ರಚಾರ ಮಾಡ್ತಾರೆ: ಸಿಟಿ ರವಿ

    – ಭಾರತದ ವ್ಯಾಕ್ಸಿನ್ ಬಗ್ಗೆ ತಾತ್ಸಾರ ಯಾಕೆ?

    ಉಡುಪಿ: ಮಹಾಮಾರಿ ಕೊರೊನಾ ವಿರುದ್ಧ ಹೋರಾಡಲು ಲಸಿಕೆ ರಾಜ್ಯಕ್ಕೆ ತಲುಪಿದ್ದು, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಸ್ವಾಗತ ಮಾಡಿದ್ದಾರೆ.

    ಈ ಕುರಿತು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಸಿಕೆ ಬಗ್ಗೆ ಅಪಪ್ರಚಾರ ಮಾಡುತ್ತಿರುವುದು ದುರ್ದೈವ. ನಮ್ಮ ದೇಶದಲ್ಲಿ ತಯಾರಾದ ಔಷಧಿಯ ಬಗ್ಗೆ ಅಪಪ್ರಚಾರ ಮಾಡುವುದು ಒಂದು ಷಡ್ಯಂತ್ರ ಎಂದರು.

    ಕೆಲ ಪಕ್ಷಗಳು ಅಪಪ್ರಚಾರದಲ್ಲಿ ತೊಡಗಿಸಿಕೊಂಡಿರುವುದು ದುರ್ದೈವ. ತಾವು ಮಾಡೋದಿಲ್ಲ, ಮಾಡುವವರಿಗೂ ಬಿಡುವುದಿಲ್ಲ ಎಂಬ ಮನಸ್ಥಿತಿ ಬದಲಾಯಿಸಿಕೊಳ್ಳಿ. ಹೀಗೆ ಮಾಡುವ ಪಕ್ಷವನ್ನು ಜನ ದೇಶದ ರಾಜಕಾರಣದಿಂದ ಅಳಿಸಿ ಹಾಕುತ್ತಾರೆ ಎಂದು ವಿಪಕ್ಷಗಳ ವಿರುದ್ಧ ಕಿಡಿಕಾರಿದರು.

    ಇಟಲಿ ಅಥವಾ ಚೀನಾದಿಂದ ಬಂದರೆ ಮಾತ್ರ ಒಳ್ಳೆದು ಅಂತಾರೆ, ಜನರು ನಮ್ಮ ಮೇಲೆ ವಿಶ್ವಾಸ ಇಟ್ಟಿದ್ದಾರೆ. ನಮ್ಮ ದೇಶದಲ್ಲಿ ತಯಾರಾದ ಲಸಿಕೆಯ ಬಗ್ಗೆ ಅವರಿಗೆ ನಂಬಿಕೆ ಇಲ್ಲ. ಆದರೆ ಈ ದೇಶದ ಜನರ ಓಟು ಬೇಕು. ನಮ್ಮ ದೇಶದ ವಿಜ್ಞಾನಿಗಳ ಬಗ್ಗೆಯೂ ಅವರಿಗೆ ಗೌರವ ಇದ್ದಂತಿಲ್ಲ ಎಂದು ಚಾಟಿ ಬೀಸಿದರು.

    ಇದೇ ಸಂದರ್ಭದಲ್ಲಿ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಮಾತನಾಡಿ, ನನಗಿರೋ ಮಾಹಿತಿ ಪ್ರಕಾರ ನಾಳೆ ಸಚಿವ ಸಂಪುಟ ವಿಸ್ತರಣೆ ಆಗುತ್ತದೆ. ಅಧಿಕೃತವಾಗಿ ಮುಖ್ಯಮಂತ್ರಿಗಳು ಇನ್ನಷ್ಟೇ ಹೇಳಬೇಕು. ಯೋಗ್ಯತೆ ಇರುವವರು ನಮ್ಮ ಪಕ್ಷದಲ್ಲಿ ಬಹಳ ಜನ ಇದ್ದಾರೆ. ಆದರೆ ಮಂತ್ರಿಯಾಗುವ ಯೋಗ ಯಾರಿಗಿದೆ ನಾಳೆ ನೋಡೋಣ ಎಂದರು.

  • ಬೆಂಗಳೂರು ತಲುಪಿದ ಕೊರೊನಾ ಲಸಿಕೆ

    ಬೆಂಗಳೂರು ತಲುಪಿದ ಕೊರೊನಾ ಲಸಿಕೆ

    ಬೆಂಗಳೂರು: ಪುಣೆಯಿಂದ ಹೊರಟ ಕೊರೊನಾ ಸಂಜೀವಿನಿ ಕೋವಿಶೀಲ್ಡ್ ಲಸಿಕೆ ಬೆಂಗಳೂರು ತಲುಪಿದೆ.

    ಕೋವಿಡ್-19 ವಿರುದ್ಧ ಭಾರತದ ಲಸಿಕಾ ಅಭಿಯಾನದ ಮೊದಲ ಭಾಗವಾಗಿ 30 ಕೋಟಿ ಜನರಿಗೆ ಲಸಿಕೆ ಪೊರೈಕೆ ಮಾಡಲು 3 ಟ್ರಕ್‍ಗಳಲ್ಲಿ ಲಸಿಕೆ ಸಾಗಾಟಕ್ಕೆ ಇಂದು ಬೆಳಗಿನ ಜಾವ ಚಾಲನೆ ನೀಡಲಾಗಿತ್ತು. ಪುಣೆಯ ಸೆರಂ ಇನ್‍ಸ್ಟಿಟ್ಯೂಟ್‍ನಿಂದ 3 ಟ್ರಕ್ ಗಳಲ್ಲಿ ಹೊರಟ ಲಸಿಕೆ ದೇಶದ 13 ಸ್ಥಳಗಳಿಗೆ ವಿಮಾನದ ಮೂಲಕ ತಲುಪಲಿದೆ.

    ಲಸಿಕೆ ಹೊಂದಿರುವ ಎಲ್ಲಾ ಮೂರು ಟ್ರಕ್‍ಗಳು ತಾಪಮಾನ ನಿಯಂತ್ರಿತವಾಗಿದ್ದು. ಪುಣೆ ವಿಮಾನ ನಿಲ್ದಾಣಕ್ಕೆ ತೆರಳಿ ಅಲ್ಲಿಂದ ವಿಶೇಷ ಸರಕು ಸಾಗಾಟ ವಿಮಾನದ ಮೂಲಕ ದೇಶದ ವಿವಿಧ ಲಸಿಕಾ ಕೇಂದ್ರಕ್ಕೆ ರವಾನೆಯಾಗಲಿದೆ. ಪುಣೆಯ ಸೆರಂ ಇನ್‍ಸ್ಟಿಟ್ಯೂಟ್‍ನಿಂದ ಬೆಳಗ್ಗೆ 5 ಗಂಟೆಗೆ ಹೊರಟ ಟ್ರಕ್‍ಗಳಿಗೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ಕೊಡಲಾಯಿತು.

    ಬೆಂಗಳೂರಲ್ಲಿ 11 ಲಕ್ಷದ 34 ಸಾವಿರ ಕೋವಿಶೀಲ್ಡ್ ಲಸಿಕೆ ಸಂಗ್ರಹವನ್ನು ಮಾಡಲಾಗುತ್ತದೆ. ಬೆಳಗಾವಿಯಲ್ಲಿ 2.5 ಲಕ್ಷದಷ್ಟು ಕೋವಿಶೀಲ್ಡ್ ಲಸಿಕೆ ಸಂಗ್ರಹ ಮಾಡಲಾಗುತ್ತದೆ. ಬೆಳಗಾವಿಯಿಂದ ಬಾಗಲಕೋಟೆ, ಗದಗ, ಕೊಪ್ಪಳ, ವಿಜಯಪುರ, ಧಾರವಾಡ, ಹಾವೇರಿ, ಉತ್ತರಕನ್ನಡಕ್ಕೆ ಲಸಿಕೆ ಪೊರೈಸಲಾಗುತ್ತದೆ. ಉಳಿದ 22 ಜಿಲ್ಲೆಗಳಿಗೆ ಬೆಂಗಳೂರಿನಿಂದಲೇ ಲಸಿಕೆ ಪೊರೈಕೆ ಹಂಚಿಕೆ ಮಾಡುವ ಯೋಜನೆಯನ್ನು ರೂಪಿಸಿಕೊಂಡಿದೆ.

  • ಭಾರತದಲ್ಲಿ ಜ.16ರಿಂದ ಲಸಿಕೆ ಹಂಚಿಕೆ – ಪ್ರಧಾನಿ ಮೋದಿ ಘೋಷಣೆ

    ಭಾರತದಲ್ಲಿ ಜ.16ರಿಂದ ಲಸಿಕೆ ಹಂಚಿಕೆ – ಪ್ರಧಾನಿ ಮೋದಿ ಘೋಷಣೆ

    ನವದೆಹಲಿ: ಭಾರತದಲ್ಲಿ ಕೊರೊನಾ ಲಸಿಕೆಯನ್ನು ಜ. 16 ರಿಂದ ವಿತರಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

    ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆಗಿನ ಸಭೆಯ ಬಳಿಕ ದೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ಮೊದಲ ಹಂತದಲ್ಲಿ ಕೊರೊನಾ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಲಾಗುವುದು ಎಂದು ತಿಳಿಸಿದರು. ಎರಡನೇ ಹಂತದಲ್ಲಿ ಕೊರೊನಾ ವಾರಿಯರ್ಸ್‌ಗೆ ಲಸಿಕೆ ನೀಡಲಾಗುವುದು. ಮೊದಲ 3 ಕೋಟಿಯ ಲಸಿಕೆಯೆ ಖರ್ಚನ್ನು ಕೇಂದ್ರ ಸರ್ಕಾರ ಭರಿಸಲಿದೆ ಎಂದು ಪ್ರಕಟಿಸಿದರು.

    ಕೊರೊನಾ ವಿರುದ್ಧ ನಾವೆಲ್ಲ ಒಂದಾಗಿ ಹೋರಾಡಿದ್ದೇವೆ. ಈಗ ಎರಡು ಸ್ವದೇಶಿ ಲಸಿಕೆ ಬಳಕೆಗೆ ಸಿದ್ಧವಾಗಿದೆ. 4 ಲಸಿಕೆಗಳು ಪ್ರಯೋಗದ ಹಂತದಲ್ಲಿದೆ. ಕೊರೊನಾ ಲಸಿಕೆಗೆ ನಾವು ವಿದೇಶವನ್ನು ನಂಬಿಕೊಂಡಿಲ್ಲ. ನಮ್ಮ ವ್ಯಾಕ್ಸಿನ್‌ ಪರಿಣಾಮಕಾರಿ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಮೋದಿ ಭಾಷಣದ ಮುಖ್ಯಾಂಶಗಳು:
    ಜನವರಿ 16ರಿಂದ ವಿಶ್ವದ ಅತಿದೊಡ್ಡ ಲಸಿಕೆ ಹಂಚಿಕೆ ಪ್ರಕ್ರಿಯೆಗೆ ಚಾಲನೆ ಸಿಗಲಿದೆ. 2 ಸ್ವದೇಶಿ ಲಸಿಕೆ ಬಳಕೆಗೆ ತುರ್ತು ಅನುಮೋದನೆ ನೀಡಲಾಗಿದೆ . ಕೋವಿಡ್‌ 19 ಸಂದರ್ಭದಲ್ಲಿ ನಾವು ಮಾಡಿದ ಕೆಲಸ ನನಗೆ ತೃಪ್ತಿ ನೀಡಿದೆ. ಎಲ್ಲರೂ ನೀಡಿದ ಸಹಕಾರದಿಂದ ಭಾರತದಲ್ಲಿ ಕೊರೊನಾ ನಿಯತ್ರಣದಲ್ಲಿದೆ

    ಬಳಕೆಗೆ ಅನುಮೋದನೆ ನೀಡಲಾಗಿರುವ ಎರಡು ಸ್ವದೇಶಿ ಲಸಿಕೆಗೆ ಬಹಳ ಅಗ್ಗವಾಗಿದ್ದು, ಪರಿಣಾಮಕಾರಿಯಾಗಿದೆ. ಮೊದಲ ಹಂತರ 3 ಕೋಟಿ ಲಸಿಕೆಯ ವೆಚ್ಚವನ್ನು ಕೇಂದ್ರ ಸರ್ಕಾರವೇ ಭರಿಸಲಿದೆ. ಕೊರೊನಾ ವಾರಿಯರ್ಸ್‌ ಮತ್ತು ಫ್ರಂಟ್‌ಲೈನ್‌ ಕೆಲಸಗಾರರಿಗೆ ಲಸಿಕೆ ಸಿಗಲಿದೆ. ಸರ್ಕಾರಿ ಮತ್ತು ಖಾಸಗಿ, ನೈರ್ಮಲ್ಯ ಕೆಲಸಗಾರರು, ರಕ್ಷಣೆ, ಪೊಲೀಸ್‌ ಮತ್ತು ಇತರೇ ಪ್ಯಾರಾ ಮಿಲಿಟರಿ ಸಿಬ್ಬಂದಿ ಮೊದಲ ಹಂತದಲ್ಲಿ ಲಸಿಕೆಯನ್ನು ಪಡೆದುಕೊಳ್ಳಲಿದ್ದಾರೆ.

    ಮುಂದಿನ ಹಂತದಲ್ಲಿ 30 ಕೋಟಿ ಮಂದಿಗೆ ಲಸಿಕೆ ನೀಡುವ ಉದ್ದೇಶವನ್ನು ಹೊಂದಿದ್ದೇವೆ. ಎರಡನೇ ಹಂತದಲ್ಲಿ 50 ವರ್ಷ ಮೇಲ್ಪಟ್ಟ ಮತ್ತು ವಿವಿಧ ರೋಗಗಳಿಂದ ಬಳಲುತ್ತಿರುವ ಮಂದಿಗೆ ಲಸಿಕೆ ನೀಡಲಾಗುವುದು.  ಮೊದಲ ಡೋಸ್‌ ಪಡೆದವರಿಗೆ ಇ ಸರ್ಟಿಫಿಕೇಟ್‌ ಸಿಗಲಿದೆ.

  • ಕೊರೊನಾ ಲಸಿಕೆ- ಜ.11ರಂದು ಎಲ್ಲ ರಾಜ್ಯಗಳ ಸಿಎಂ ಜೊತೆ ಪ್ರಧಾನಿ ಮೋದಿ ವಿಡಿಯೋ ಕಾನ್ಫರೆನ್ಸ್

    ಕೊರೊನಾ ಲಸಿಕೆ- ಜ.11ರಂದು ಎಲ್ಲ ರಾಜ್ಯಗಳ ಸಿಎಂ ಜೊತೆ ಪ್ರಧಾನಿ ಮೋದಿ ವಿಡಿಯೋ ಕಾನ್ಫರೆನ್ಸ್

    ನವದೆಹಲಿ: ಕೊರೊನಾ ಲಸಿಕೆಗೆ ಹಂಚಿಕೆ ಕುರಿತು ಎಲ್ಲ ಸಿದ್ಧತೆ ಮಾಡಿಕೊಳ್ಳುತ್ತಿರುವ ಬೆನ್ನಲ್ಲೇ ಇದೀಗ ಪ್ರಧಾನಿ ನರೇಂದ್ರ ಮೋದಿ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಸಭೆ ನಡೆಸಲು ನಿರ್ಧರಿಸಿದ್ದಾರೆ.

    ಜನವರಿ 11ರಂದು ಎಲ್ಲ ರಾಜ್ಯಗಳ ಸಿಎಂ ಜೊತೆ ಪ್ರಧಾನಿ ಮೋದಿ ವಿಡಿಯೋ ಕಾನ್ಪರೆನ್ಸ್ ನಡೆಸಲಿದ್ದಾರೆ. ಅಂದೇ ವ್ಯಾಕ್ಸಿನ್ ಹಂಚಿಕೆ ಸಹ ಆರಂಭವಾಗಲಿದೆ. ಹೀಗಾಗಿ ಪ್ರಧಾನಿ ಮೋದಿ ನಡೆಸುತ್ತಿರುವ ವಿಡಿಯೋ ಸಂವಾದದ ಕುರಿತು ಕುತೂಹಲ ಹೆಚ್ಚಿದೆ. ಕೊರೊನಾ ಲಸಿಕೆ ಹಂಚಿಕೆ ಕುರಿತು ಈಗಾಗಲೇ ದೇಶಾದ್ಯಂತ ಎರಡನೇ ಹಂತದ ಡ್ರೈ ರನ್ ನಡೆಸಲಾಗಿದ್ದು, 33 ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ 736 ಜಿಲ್ಲೆಗಳಲ್ಲಿ ಡ್ರೈ ರನ್ ನಡೆಸಲಾಗಿದೆ.

    ಲಸಿಕೆ ವಿತರಣೆ ಪ್ರಕ್ರಿಯೆ ಸರಾಗವಾಗಿ ನಡೆಯಬೇಕೆಂಬ ಉದ್ದೇಶದಿಂದ ಹಾಗೂ ಈ ಕುರಿತು ಖಚಿತಪಡಿಸಿಕೊಳ್ಳುವ ಸಲುವಾಗಿ ಡ್ರೈ ರನ್ ನಡೆಸಲಾಗಿದೆ. ಇದೆಲ್ಲದ ಮಧ್ಯೆ ಲಸಿಕೆ ನೀಡುವ ಪ್ರಕ್ರಿಯೆ ಸಹ ಶೀಘ್ರದಲ್ಲೇ ಆರಂಭವಾಗಲಿದೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಮಾಹಿತಿ ನೀಡಿದ್ದಾರೆ.

    ಭಾರತದ ಎರಡು ಕೊರೊನಾ ಲಸಿಕೆಗಳಿಗೆ ಅನುಮತಿ ನೀಡಲಾಗಿದ್ದು, ತುರ್ತು ಬಳಕೆಗೆ ಅವಕಾಶ ನೀಡಲಾಗಿದೆ. ಆರಂಭದಲ್ಲಿ ಆರೋಗ್ಯ ಸಿಬ್ಬಂದಿ ಹಾಗೂ ಪ್ರಥಮ ದರ್ಜೆ ಕಲಸಗಾರರಿಗೆ ಲಸಿಕೆ ನೀಡಲಾಗುತ್ತಿದೆ.

  • ಸೋಮವಾರದಿಂದ ರಾಜ್ಯದಲ್ಲಿ ಲಸಿಕೆ ವಿತರಣೆ: ಸುಧಾಕರ್

    ಸೋಮವಾರದಿಂದ ರಾಜ್ಯದಲ್ಲಿ ಲಸಿಕೆ ವಿತರಣೆ: ಸುಧಾಕರ್

    ಚಿಕ್ಕಬಳ್ಳಾಪುರ : ಸೋಮವಾರದಿಂದ ರಾಜ್ಯದಲ್ಲಿ ಕೊರೊನಾ ಲಸಿಕೆ ವಿತರಣೆ ಮಾಡಲಾಗುವುದು ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.

    ಇಂದು ಚಿಕ್ಕಬಳ್ಳಾಪುರದಲ್ಲಿ ಮಾತನಾಡಿದ ಸಚಿವರು, ಶನಿವಾರ ಕೇಂದ್ರದಿಂದಡ ರಾಜ್ಯಕ್ಕೆ 13 ಲಕ್ಷದ 90 ಸಾವಿರ ಕೋವಿಡ್-19 ಲಸಿಕೆ ಬರಲಿದ್ದು, ಸೋಮವಾರದಿಂದ ಲಸಿಕೆ ಹಾಕಲಿದ್ದೇವೆ. ಎಲ್ಲಾ ಜಿಲ್ಲೆಗಳಿಗೂ ಸರಬರಾಜು ಮಾಡಲಿದ್ದೇವೆ ಎಂದರು.

    ಕೋವಿಡ್-19 ಕಂಟ್ರೋಲ್ ಮಾಡೋದ್ರಲ್ಲಿ ಭಾರತ ಯಶಸ್ವಿಯಾಗಿದೆ. ಇಡೀ ದೇಶದಲ್ಲಿ 9000 ಸಕ್ರಿಯ ಪ್ರಕರಣಗಳಿದ್ದು, ಶೇ.98ರಷ್ಟು ಜನ ಗುಣಮುಖರಾಗುತ್ತಿದ್ದಾರೆ. ಶೇ.1.2 ರಿಂದ ಶೇ.1.3 ರಷ್ಡು ಸಾವಿನ ಪ್ರಮಾಣ ಆಗಿದೆ. ಈ ಅಂಕಿ ಅಂಶಗಳೇ ರಾಜ್ಯಸರ್ಕಾರ ಯಶಸ್ವಿಯಾಗಿ ಕೊರೊನಾ ನಿರ್ವಹಣೆ ಮಾಡಿದೆ ಅನ್ನೋದಕ್ಕೆ ನಿದರ್ಶನ. ಲಸಿಕೆಯ ವಿವರಗಳನ್ನ ಸಂಜೆಯೊಳಗೆ ತಿಳಿಸುತ್ತೇನೆ ಎಂದು ಮಾಹಿತಿ ನೀಡಿದರು.

  • ರಾಜ್ಯದಲ್ಲಿ 6.30 ಲಕ್ಷ ಆರೋಗ್ಯ ಕಾರ್ಯಕರ್ತರಿಗೆ ಕೊರೊನಾ ಲಸಿಕೆ: ಸಚಿವ ಸುಧಾಕರ್

    ರಾಜ್ಯದಲ್ಲಿ 6.30 ಲಕ್ಷ ಆರೋಗ್ಯ ಕಾರ್ಯಕರ್ತರಿಗೆ ಕೊರೊನಾ ಲಸಿಕೆ: ಸಚಿವ ಸುಧಾಕರ್

    – ಲಸಿಕೆ ನೀಡಲು 9,807 ಅನುಭವಿ ವ್ಯಾಕ್ಸಿನೇಟರ್ ಸಿಬ್ಬಂದಿ
    – ರಾಜ್ಯಾದ್ಯಂತ 28,427 ಲಸಿಕಾ ಕೇಂದ್ರಗಳು

    ಬೆಂಗಳೂರು: ಇತ್ತೀಚೆಗಷ್ಟೇ ಕೊರೊನಾ ಲಸಿಕೆಗೆ ಅನುಮತಿ ಸಿಕ್ಕಿದೆ. ಅಲ್ಲದೆ ಜನವರಿ 13ರಿಂದ ಲಸಿಕೆ ವಿತರಿಸಲಾಗುವುದು ಎಂದು ಕೇಂದ್ರ ಆರೋಗ್ಯ ಸಚಿವಾಲಯ ಸಹ ತಿಳಿಸಿದೆ. ಇದರ ಬೆನ್ನಲ್ಲೇ ಇದೀಗ ರಾಜ್ಯದಲ್ಲಿ ಸಹ ಸಿದ್ಧತೆ ಮಾಡಲಾಗಿದ್ದು, ಒಟ್ಟು 6.30 ಲಕ್ಷ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಲು ತಯಾರಿ ಮಾಡಿಕೊಳ್ಳಲಾಗಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಮಾಹಿತಿ ನೀಡಿದ್ದಾರೆ.

    ಈ ಕುರಿತು ಟ್ವೀಟ್ ಮಾಡಿ ತಿಳಿಸಿರುವ ಅವರು, ಭಾರತದಲ್ಲಿ ಕೊರೊನಾ ಲಸಿಕೆ ವಿತರಣೆ ಪ್ರಕ್ರಿಯೆ ಶೀಘ್ರವೇ ಆರಂಭವಾಗಲಿದ್ದು, ರಾಜ್ಯ ಸರ್ಕಾರ ಸುವ್ಯವಸ್ಥಿತ ಲಸಿಕೆ ವಿತರಣೆಗೆ ಸಕಲ ಸಿದ್ಧತೆ ನಡೆಸಿದೆ. ಮೊದಲನೇ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಲಿದ್ದು, 2,73,211 ಸರ್ಕಾರಿ ಹಾಗೂ 3,57,313 ಖಾಸಗಿ ಸೇರಿ ಒಟ್ಟು 6,30,524 ಅರೋಗ್ಯ ಕಾರ್ಯಕರ್ತರನ್ನು ಗುರುತಿಸಲಾಗಿದೆ ಎಂದು ವಿವರಿಸಿದ್ದಾರೆ.

    ಲಸಿಕೆ ನೀಡಲು ತರಬೇತಿ ಪಡೆದ 9,807 ಅನುಭವಿ ವ್ಯಾಕ್ಸಿನೇಟರ್ ಸಿಬ್ಬಂದಿ ಮತ್ತು ರಾಜ್ಯಾದ್ಯಂತ 28,427 ಲಸಿಕಾ ಕೇಂದ್ರಗಳನ್ನು ಗುರುತಿಸಲಾಗಿದೆ. ಇನ್ನೂ ಹೆಚ್ಚಿನ ಕೇಂದ್ರಗಳನ್ನು ಗುರುತಿಸಲಾಗುವುದು. ಈ ಎಲ್ಲ ದತ್ತಾಂಶವನ್ನು ಕೇಂದ್ರ ಸರ್ಕಾರ ಸಿದ್ಧಪಡಿಸಿರುವ ಕೊವಿನ್ ತಂತ್ರಾಂಶದಲ್ಲಿ ನಮೂದಿಸಲಾಗಿದೆ ಎಂದು ತಿಳಿಸಿದ್ದಾರೆ.

    ರಾಜ್ಯಕ್ಕೆ ಅವಶ್ಯಕತೆ ಇರುವ ಹೆಚ್ಚಿನ ಮೂಲಭೂತ ಸೌಕರ್ಯವನ್ನು ಕೇಂದ್ರ ಸರ್ಕಾರ ಪೂರೈಸುತ್ತಿದ್ದು, ಈವರೆಗೂ 64 ಬೃಹತ್ ಐಸ್ ಲೈನ್ಡ್ ರೆಫ್ರಿಜರೇಟರ್ (ILR), 24 ಲಕ್ಷ ಸಿರಿಂಜುಗಳು ರಾಜ್ಯಕ್ಕೆ ಬಂದಿವೆ. ಎಲ್ಲವನ್ನೂ ಜಿಲ್ಲೆಗಳಿಗೆ ರವಾನಿಸಲಾಗಿದೆ. ಇನ್ನುಳಿದ 31 ಲಕ್ಷ ಸಿರಿಂಜುಗಳು ಸೇರಿದಂತೆ ಹೆಚ್ಚುವರಿ ಉಪಕರಣಗಳು ಶೀಘ್ರದಲ್ಲೇ ತಲುಪಲಿವೆ ಎಂದು ವಿವರಿಸಿದ್ದಾರೆ.

  • ದೇಶಾದ್ಯಂತ ಎಲ್ಲರಿಗೂ ಕೊರೊನಾ ಲಸಿಕೆ ಉಚಿತ: ಹರ್ಷವರ್ಧನ್

    ದೇಶಾದ್ಯಂತ ಎಲ್ಲರಿಗೂ ಕೊರೊನಾ ಲಸಿಕೆ ಉಚಿತ: ಹರ್ಷವರ್ಧನ್

    ನವದೆಹಲಿ: ದೇಶಾದ್ಯಂತ ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಕೊರೊನಾ ವ್ಯಾಕ್ಸಿನ್ ಹಂಚಿಕೆ ಕುರಿತು ಡ್ರೈ ರನ್ ನಡೆಯುತ್ತಿದ್ದು, ದೇಶಾದ್ಯಂತ ಪ್ರತಿಯೊಬ್ಬರಿಗೂ ಕೊರೊನಾ ಲಸಿಕೆಯನ್ನು ಉಚಿತವಾಗಿ ನೀಡಲಾಗುವುದು ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಘೋಷಿಸಿದ್ದಾರೆ.

    ನಗರದ ಗುರು ತೇಗ್ ಬಹದ್ದೂರ್ ಆಸ್ಪತ್ರೆಯಲ್ಲಿನ ಡ್ರೈ ರನ್ ವೀಕ್ಷಿಸಿದ ಸಚಿವರು, ಲಸಿಕೆ ಪರಿಣಾಮ ಹಾಗೂ ಸುರಕ್ಷತೆ ಬಗ್ಗೆ ಭರವಸೆ ನೀಡಿದರು. ಅಲ್ಲದೆ ಲಸಿಕೆ ವಿರೋಧಿ ವದಂತಿಗಳಿಗೆ ಕಿವಿಗೊಡಬೇಡಿ ಎಂದು ಮನವಿ ಮಾಡಿದರು.

    ಲಸಿಕೆ ದೆಹಲಿಯಲ್ಲಿ ಉಚಿತವಾಗಿ ಸಿಗಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಕೇವಲ ದೆಹಲಿಯಲ್ಲಿ ಮಾತ್ರವಲ್ಲ, ಇಡೀ ದೇಶದಲ್ಲಿ ಕೊರೊನಾ ಲಸಿಕೆ ಉಚಿತವಾಗಿ ಸಿಗಲಿದೆ ಎಂದು ತಿಳಿಸಿದರು.

    ಟ್ವೀಟ್‍ನಲ್ಲಿ ಈ ವಿಡಿಯೋವನ್ನು ಹರ್ಷವರ್ಧನ್ ಅವರು ಹಂಚಿಕೊಂಡಿದ್ದು, ದೇಶಾದ್ಯಂತ ಪ್ರತಿಯೊಬ್ಬರಿಗೂ ಉಚಿತ ಲಸಿಕೆ ನೀಡಲಾಗುವುದು. ಆರಂಭದಲ್ಲಿ 1 ಕೋಟಿ ಆರೋಗ್ಯ ಸಿಬ್ಬಂದಿ, 2 ಕೋಟಿ ಫ್ರಂಟ್‍ಲೈನ್ ವರ್ಕರ್ಸ್ ಗೆ ಲಸಿಕೆ ನೀಡಲಾಗುವುದು. ಜುಲೈ ವೇಳೆಗೆ ಅಗತ್ಯವಿರುವ 27 ಕೋಟಿ ಜನರಿಗೆ ಲಸಿಕೆ ನೀಡುವ ಕುರಿತ ನಿರ್ಧಾರವನ್ನು ಅಂತಿಮಗೊಳಿಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.

    ಇದೀಗ ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಡ್ರೈ ರನ್ ನಡೆಯುತ್ತಿದ್ದು, ಯೋಜನೆ ಹಾಗೂ ಅನುಷ್ಠಾನದ ನಡುವಿನ ಸಂಪರ್ಕಗಳನ್ನು ಪರೀಕ್ಷಿಸಿ ಸವಾಲುಗಳನ್ನು ಗುರುತಿಸಲಾಗುತ್ತಿದೆ. ಈ ಹಿಂದೆ ನಾಲ್ಕು ರಾಜ್ಯಗಳಲ್ಲಿ ಪ್ರಾಯೋಗಿಕವಾಗಿ ಡ್ರೈ ರನ್ ನಡೆಸಲಾಗಿತ್ತು. ಬಳಿಕ ತಜ್ಞರ ವರದಿಯನ್ನು ಆಧರಿಸಿ ಇದೀಗ ಎಲ್ಲ ರಾಜ್ಯಗಳಲ್ಲಿ ಡ್ರೈ ರನ್ ನಡೆಸಲಾಗುತ್ತಿದೆ ಎಂದು ಹರ್ಷವರ್ಧನ್ ತಿಳಿಸಿದರು.

  • ಕೋವಿಶೀಲ್ಡ್ ಲಸಿಕೆಯ‌ ವಿಶೇಷತೆ ಏನು? ಎಷ್ಟು ಅಗ್ಗ?

    ಕೋವಿಶೀಲ್ಡ್ ಲಸಿಕೆಯ‌ ವಿಶೇಷತೆ ಏನು? ಎಷ್ಟು ಅಗ್ಗ?

    ನವದೆಹಲಿ: ಹೊಸ ವರ್ಷದ ಮೊದಲನೇ ದಿನವೇ ಭಾರತಕ್ಕೆ ಸಿಹಿಸುದ್ದಿ ಸಿಕ್ಕಿದೆ. ಹೆಮ್ಮಾರಿ ಕೊರೋನಾ ಹೊಡೆದೋಡಿಸಲು ಕೋವಿಶೀಲ್ಡ್ ಲಸಿಕೆಯ ತುರ್ತು ಬಳಕೆಗೆ ಕೇಂದ್ರ ಗ್ರೀನ್ ಸಿಗ್ನಲ್ ನೀಡುವ ಕ್ಷಣಗಳು ಹತ್ತಿರವಾಗಿವೆ. ಇಂದು ದೆಹಲಿಯಲ್ಲಿ ಸಭೆ ಸೇರಿದ್ದ ಡಿಸಿಜಿಐನ ವಿಷಯ ತಜ್ಞರ ಸಮಿತಿ ಕೋವಿಶೀಲ್ಡ್ ತುರ್ತು ಬಳಕೆಗೆ ಶಿಫಾರಸು ಮಾಡಿದೆ.

    ಇದಕ್ಕೆ ಈಗ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ (ಡಿಸಿಜಿಐ) ಒಪ್ಪಿಗೆ ನೀಡುವುದು ಮಾತ್ರ ಬಾಕಿ ಉಳಿದಿದೆ. ಡಿಸಿಜಿಐ ಒಪ್ಪಿಗೆ ನೀಡಿದರೆ ಕೋವಿಶೀಲ್ಡ್ ಭಾರತದಲ್ಲಿ ಅನುಮೋದನೆ ಪಡೆದ ಮೊದಲ ಲಸಿಕೆ ಆಗಲಿದೆ.

    ಪುಣೆಯ ಸಿರಂ ಸಂಸ್ಥೆ ಸಲ್ಲಿಸಿದ್ದ ಹೆಚ್ಚುವರಿ ದಾಖಲೆಗಳನ್ನು ಪರಿಶೀಲಿಸಿದ ಡಿಸಿಜಿಐ ವಿಷಯ ತಜ್ಞರ ಸಮಿತಿ, ಆಸ್ಟ್ರಾಜೆನಿಕಾ ವ್ಯಾಕ್ಸಿನ್ ತುರ್ತು ಬಳಕೆಗೆ ಅಸ್ತು ಅಂದಿದೆ. ಕೋವಿಶೀಲ್ಡ್ ಲಸಿಕೆಯನ್ನು ಆಕ್ಸ್‌ಫರ್ಡ್ ವಿವಿ ಮತ್ತು ಆಸ್ಟ್ರಾಜೆನಿಕಾ ಸಂಸ್ಥೆಗಳು ಅಭಿವೃದ್ಧಿಪಡಿಸಿದ್ದು, ಇದನ್ನು ಪುಣೆಯ ಸಿರಂ ಸಂಸ್ಥೆ ಉತ್ಪಾದಿಸುತ್ತಿದೆ.

    ಮೂರು ದಿನಗಳ ಹಿಂದಷ್ಟೇ ಕೋವಿಶೀಲ್ಡ್ ಲಸಿಕೆಯ ತುರ್ತು ಬಳಕೆಗೆ ಬ್ರಿಟನ್ ಸರ್ಕಾರ ಸಮ್ಮತಿ ನೀಡಿತ್ತು. ಆಸ್ಟ್ರಾಜೆನಿಕಾ ವ್ಯಾಕ್ಸಿನ್‍ಗೆ ಡಿಸಿಜಿಐನ ತಜ್ಞರ ಸಮಿತಿ ಸಮ್ಮತಿ ಸೂಚಿಸಿರುವ ಹಿನ್ನೆಲೆಯಲ್ಲಿ ಒಂದೆರಡು ವಾರದಲ್ಲಿ ದೇಶದಲ್ಲಿ ಲಸಿಕೆ ಹಂಚಿಕೆ ಆಗೋದು ಬಹುತೇಕ ಖಚಿತವಾಗಿದೆ.

    ಈ ಬಗ್ಗೆ ನಾಳೆ ನಾಡಿದ್ದರಲ್ಲಿ ಖುದ್ದು ಪ್ರಧಾನಿ ಮೋದಿ ಅಧಿಕೃತ ಘೋಷಣೆ ಮಾಡುವ ಸಾಧ್ಯತೆ ಇದೆ. ಈಗಾಗಲೇ ಐದು ಕೋಟಿ ಕೋವಿಶೀಲ್ಡ್ ಲಸಿಕೆಗಳನ್ನು ಸಿರಂ ಸಂಸ್ಥೆ ಅಭಿವೃದ್ಧಿಪಡಿಸಿದೆ. ಕೇಂದ್ರ ಸರ್ಕಾರ ಆರಂಭಿಕ ಹಂತದಲ್ಲಿ 2 ಕೋಟಿ ಲಸಿಕೆ ಖರೀದಿಗೆ ಮುಂದಾಗಿದೆ.

    ಇದೇ ವೇಳೆ, ದೇಶಿಯ ಕೊರೋನೌಷಧ ಭಾರತ್ ಬಯೋಟೆಕ್‍ನ ಕೋವ್ಯಾಕ್ಸಿನ್ ಲಸಿಕೆಗೆ ಇಂದು ಡಿಸಿಜಿಐ ವಿಷಯ ತಜ್ಞರ ಸಮಿತಿ ಅನುಮೋದನೆ ನೀಡಲಿಲ್ಲ. ಇದಕ್ಕೂ ಕೂಡ ಜನವರಿ 2ನೇ ವಾರದಲ್ಲಿ ಅನುಮೋದನೆ ನೀಡುವ ಸಾಧ್ಯತೆ ಇದೆ. ಸದ್ಯ ಕೋವ್ಯಾಕ್ಸಿನ್‍ನ 3ನೇ ಹಂತದ ಕ್ಲಿನಿಕಲ್ ಟ್ರಯಲ್ಸ್ ನಡೆಯುತ್ತಿದೆ.

    ಕೋವಿಶೀಲ್ಡ್ ವಿಶೇಷತೆ
    ಕೋವಿಶೀಲ್ಡ್ ಲಸಿಕೆ ಶೇ.70ರಷ್ಟು ಪರಿಣಾಮಕಾರಿಯಾಗಿದ್ದು 2 ರಿಂದ 8 ಡಿಗ್ರಿ ಉಷ್ಣಾಂಶದಲ್ಲಿ ಸಂಗ್ರಹ ಮಾಡಬಹುದು. 6 ತಿಂಗಳು ಸಂಗ್ರಹಿಸಿಡಬಹುದಾಗಿದ್ದು, ಫೈಝರ್‌ಗಿಂ ಕೋವಿಶೀಲ್ಡ್ ಸಂಗ್ರಹ, ಸಾಗಣೆ ಸುಲಭ.

    ಫೈಝರ್‌ಗಿಂತ ಶೇ.18 ಪಟ್ಟು ಕೋವಿಶೀಲ್ಡ್ ಅಗ್ಗವಾಗಿದ್ದು ಒಂದು ಡೋಸ್‍ಗೆ 3 ಡಾಲರ್(219 ರೂ.) ಇರಲಿದೆ. ಹಳೆಯ ತಂತ್ರಜ್ಞಾನ ಬಳಸಿ ಕೋವಿಶೀಲ್ಡ್ ಲಸಿಕೆ ಅಭಿವೃದ್ಧಿ ಮಾಡಲಾಗಿದೆ. ಭಾರತದಲ್ಲಿಯೇ ಸುಮಾರು 65 ಸಾವಿರ ಮಂದಿಗೆ ಕ್ಲಿನಿಕಲ್ ಟ್ರಯಲ್ಸ್ ನಡೆಸಲಾಗಿದೆ. ಮೊದಲ ಡೋಸ್ ನೀಡಿದ 4ರಿಂದ 12 ವಾರದಲ್ಲಿ 2ನೇ ಡೋಸ್ ಕೊಡಬೇಕು

    ಕೊರೋನಾ ಲಸಿಕೆ ನಂತರ ಏನು?
    ವ್ಯಾಕ್ಸಿನ್ ತೆಗೆದುಕೊಂಡ ತಕ್ಷಣ ರೋಗ ನಿರೋಧಕ ಶಕ್ತಿ ಬರಲ್ಲ. ವ್ಯಾಕ್ಸಿನ್ ತೆಗೆದುಕೊಂಡ 14 ದಿನಗಳಲ್ಲಿ ದೇಹದ ಮೇಲೆ ಔಷಧಿ ಪ್ರಭಾವ. ಕೇವಲ ಶೇ.50ರಷ್ಟು ಮಾತ್ರ ದೇಹದಲ್ಲಿ ಪ್ರತಿಕಾಯಗಳು ಸೃಷ್ಟಿ. 2ನೇ ಡೋಸ್ ಬಳಿಕ ಪೂರ್ಣ ಪ್ರಮಾಣದ ರೋಗ ನಿರೋಧಕ ಶಕ್ತಿ. ಹೀಗಾಗಿ ಅಮೆರಿಕಾ ನರ್ಸ್‍ಗೆ ಫೈಝರ್ ಲಸಿಕೆ ತೆಗೆದುಕೊಂಡ 6 ದಿನದಲ್ಲಿ ಸೋಂಕು ಬಂದಿದೆ.